ಗಿಲ್ಯಡ್ ಶಾಲೆಯು “ಭೂಲೋಕದ ಕಟ್ಟಕಡೆಯ ವರೆಗೂ” ಮಿಷನೆರಿಗಳನ್ನು ಕಳುಹಿಸುತ್ತದೆ
ಈಗ ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಸಮಯದಿಂದ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್, ಮಿಷನೆರಿಗಳನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸುತ್ತಾ ಇದೆ. ಸೆಪ್ಟೆಂಬರ್ 11, 1999ರಂದು, ಗಿಲ್ಯಡ್ನ 107ನೇ ತರಗತಿಯು ಪದವಿಯನ್ನು ಪಡೆಯಿತು. ಅದರಲ್ಲಿ 11 ದೇಶಗಳಿಂದ ಬಂದಿದ್ದ 48 ವಿದ್ಯಾರ್ಥಿಗಳಿದ್ದರು ಮತ್ತು ಸೇವೆಮಾಡಲು ಅವರನ್ನು 24 ವಿಭಿನ್ನ ದೇಶಗಳಿಗೆ ಕಳುಹಿಸಲಾಯಿತು. ಸ್ವರ್ಗಾರೋಹಣಕ್ಕೆ ಮುಂಚೆ ಯೇಸು ನುಡಿದ ಕೊನೆಯ ಮಾತುಗಳನ್ನು ನೆರವೇರಿಸುವುದರಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿರುವ ಇತರ ಸಾವಿರಾರು ಮಿಷನೆರಿಗಳೊಂದಿಗೆ ಇವರೂ ಸೇರಿಕೊಳ್ಳುವರು. ಶಿಷ್ಯರು “ಭೂಮಿಯ ಕಟ್ಟಕಡೆಯ ವರೆಗೂ [ತನ್ನ] ಸಾಕ್ಷಿಗಳಾಗಿ” ಇರುವರೆಂದು ಯೇಸು ಮುಂತಿಳಿಸಿದನು.—ಅ. ಕೃತ್ಯಗಳು 1:8.
ನ್ಯೂ ಯಾರ್ಕಿನ ಪ್ಯಾಟರ್ಸನ್ನಲ್ಲಿರುವ ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನ ಸುಂದರವಾದ ಪರಿಸರಗಳಲ್ಲಿ ಈ ಪದವಿಪ್ರಾಪ್ತಿಯ ದೊಡ್ಡ ಕಾರ್ಯಕ್ರಮವು ನಡೆಸಲ್ಪಟ್ಟಿತು. ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಅವರ ಸಂಬಂಧಿಕರು, ಆಪ್ತ ಮಿತ್ರರು ಮತ್ತು ಅತಿಥಿಗಳಿರುವುದು ಅವರಿಗೆ ಅತ್ಯಾನಂದದ ಸಂಗತಿಯಾಗಿತ್ತು. ಬ್ರೂಕ್ಲಿನ್ ಮತ್ತು ವಾಲ್ಕಿಲ್ ಕಟ್ಟಡಗಳಿಂದ ಆಡಿಯೊ ಮತ್ತು ವಿಡಿಯೊಗಳ ಮೂಲಕ ಈ ಕಾರ್ಯಕ್ರಮಕ್ಕೆ ಕಿವಿಗೊಟ್ಟು ವೀಕ್ಷಿಸಿದವರ ಒಟ್ಟು ಸಂಖ್ಯೆ 4,992 ಆಗಿತ್ತು.
ಯೆಹೋವನಿಗೂ ನೆರೆಯವರಿಗೂ ನಂಬಿಗಸ್ತರಾಗಿ ಸೇವೆಸಲ್ಲಿಸಿರಿ
“ಯಾರು ಯೆಹೋವನ ಪಕ್ಷದಲ್ಲಿ ಇದ್ದಾರೆ?” ಇದು ಆಡಳಿತ ಮಂಡಲಿಯ ಸದಸ್ಯರೂ ಈ ಪದವಿಪ್ರಾಪ್ತಿ ಕಾರ್ಯಕ್ರಮದ ಅಧ್ಯಕ್ಷರೂ ಆಗಿದ್ದ ಕ್ಯಾರಿ ಬಾರ್ಬರ್ ಅವರ ಭಾಷಣದ ಶೀರ್ಷಿಕೆಯಾಗಿತ್ತು. ಇದೇ ವಾದಾಂಶವನ್ನು ಮೋಶೆಯ ದಿನದ ಇಸ್ರಾಯೇಲ್ಯರು ಎದುರಿಸಿದರೆಂದು ಅವರು ವಿವರಿಸಿದರು. ಇಸ್ರಾಯೇಲ್ಯರಲ್ಲಿ ಅನೇಕರು ನಿಷ್ಠೆಯಿಂದ ಯೆಹೋವನ ಪಕ್ಷದಲ್ಲಿ ಉಳಿಯದಿದ್ದ ಕಾರಣ ಅರಣ್ಯದಲ್ಲಿ ಸತ್ತುಹೋದರೆಂಬ ವಿಷಯವನ್ನು, ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಹಾಜರಾಗಿದ್ದವರಿಗೆ ಜ್ಞಾಪಿಸಲಾಯಿತು. ಮೂರ್ತಿಪೂಜೆಯೆಂಬ ಪಾಶಕ್ಕೆ ಬಲಿಬಿದ್ದ ತರುವಾಯ ಅವರು “ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು; ಆ ಮೇಲೆ ಎದ್ದು ಕುಣಿದಾಡಿದರು.” (ವಿಮೋಚನಕಾಂಡ 32:1-29) ತದ್ರೀತಿಯ ಅಪಾಯದ ಕುರಿತು ಯೇಸು ಕ್ರೈಸ್ತರಿಗೆ ಎಚ್ಚರಿಕೆಯಿತ್ತನು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು.”—ಲೂಕ 21:34-36.
ರೈಟಿಂಗ್ ವಿಭಾಗದ ಜೀನ್ ಸ್ಮಾಲೀ ಎಂಬ ಮುಂದಿನ ಭಾಷಣಕಾರರು, “ನೀವು ಒಂದು ವೇದನಾಹಾರಿಯಾಗಿ ಪರಿಣಮಿಸುವಿರೊ?” ಎಂಬ ಪ್ರಶ್ನೆಯನ್ನು ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕೇಳಿದರು. ಪಾರೀಗೋರೀಅ ಎಂಬ ಗ್ರೀಕ್ ಪದವನ್ನು ಇಂಗ್ಲಿಷ್ ಭಾಷೆಗೆ ಸೇರಿಸಿ, ಅಸ್ವಸ್ಥತೆಗೆ ಉಪಶಮನ ನೀಡುವ ಔಷಧದ ಹೆಸರಾಗಿ ಬಳಸಲಾಗಿದೆ ಎಂದು ಅವರು ವಿವರಿಸಿದರು. ಆದರೆ, ಅರ್ಥಗರ್ಭಿತವಾದ ಈ ಗ್ರೀಕ್ ಪದವನ್ನು ಅಪೊಸ್ತಲ ಪೌಲನು ತನ್ನ ಜೊತೆ ಕೆಲಸಗಾರರನ್ನು ವರ್ಣಿಸಲಿಕ್ಕಾಗಿ ಕೊಲೊಸ್ಸೆ 4:11ರಲ್ಲಿ ಉಪಯೋಗಿಸಿದನು. ಕನ್ನಡ ಬೈಬಲ್ನಲ್ಲಿ ಈ ಪದವನ್ನು “ಉಪಶಮನ” ಎಂದು ಭಾಷಾಂತರಿಸಲಾಗಿದೆ.
ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಗಳು ಸಹ ತಮ್ಮ ನೇಮಕಗಳಲ್ಲಿ ಆಧುನಿಕ ದಿನದ ವೇದನಾಹಾರಿಗಳಾಗಿ ಇರಸಾಧ್ಯವಿದೆ. ಸ್ಥಳಿಕ ಸಹೋದರ ಸಹೋದರಿಯರಿಗೆ ಉಪಶಮನ ನೀಡುವ ಮೂಲಕ ಹಾಗೂ ಜೊತೆ ಮಿಷನೆರಿಗಳೊಂದಿಗೆ ಸಹಕಾರದ ಮತ್ತು ಪ್ರೀತಿಯ ಮನೋಭಾವವನ್ನು ತೋರಿಸುವ ಮೂಲಕ ಇದನ್ನು ಅವರು ಪ್ರಾಯೋಗಿಕವಾದ ರೀತಿಯಲ್ಲಿ ಮಾಡಸಾಧ್ಯವಿದೆ.
ತದನಂತರ “ಜೀವಿತದಲ್ಲಿ ಅನುಸರಿಸಬೇಕಾದ ಸುವರ್ಣ ನಿಯಮ” ಎಂಬ ವಿಷಯದ ಕುರಿತು ಆಡಳಿತ ಮಂಡಲಿಯ ಸದಸ್ಯರಾದ ಡ್ಯಾನಿಯಲ್ ಸಿಡ್ಲಿಕ್ ಮಾತಾಡಿದರು. “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ” ಎಂದು ಯೇಸು ಮತ್ತಾಯ 7:12ರಲ್ಲಿ ನೀಡಿದ ಅತ್ಯಂತ ಶ್ರೇಷ್ಠ ತತ್ವದಲ್ಲಿ, ಇತರರಿಗೆ ಹಾನಿಯನ್ನು ಮಾಡುವುದರಿಂದ ದೂರವಿರುವುದು ಮಾತ್ರವಲ್ಲ ಅವರ ಪರವಾಗಿ ಸಕಾರಾತ್ಮಕ ವಿಷಯಗಳನ್ನು ಮಾಡುವುದೂ ಇದರಲ್ಲಿ ಸೇರಿದೆ.
ಇದರಲ್ಲಿ ಸಾಫಲ್ಯವನ್ನು ಕಂಡುಕೊಳ್ಳಲು, ನೋಡಿ ಅರ್ಥಮಾಡಿಕೊಳ್ಳುವ ಕಣ್ಣು, ಸಹಾನುಭೂತಿಯುಳ್ಳ ಹೃದಯ, ಮತ್ತು ಸಹಾಯಹಸ್ತ ಎಂಬ ಮೂರು ವಿಷಯಗಳು ಅತ್ಯಾವಶ್ಯಕವಾಗಿವೆ. ವಿಷಯವನ್ನು ಸಾರಾಂಶಿಸುತ್ತಾ ಅವರು ಹೇಳಿದ್ದು: “ಸಹಾಯ ಮಾಡಬೇಕೆಂಬ ವಿಚಾರವು ಮನಸ್ಸಿಗೆ ಬಂದ ಕೂಡಲೇ ನಾವು ಸಹಾಯ ಮಾಡಬೇಕು. ಇತರರು ನಮಗೆ ಏನು ಮಾಡಬೇಕೆಂದು ನಾವು ಬಯಸುತ್ತೇವೊ ಅದನ್ನೇ ಅವರಿಗೆ ಮಾಡಲು ನಾವು ಪ್ರಯಾಸಪಡಬೇಕು.” ಬೇರೆ ದೇಶಗಳಿಗೆ ಹೋಗಿ ಅಲ್ಲಿರುವ ಜನರು ಸತ್ಯ ಕ್ರೈಸ್ತತ್ವವನ್ನು ಅನುಸರಿಸುವಂತೆ ಸಹಾಯ ಮಾಡುವ ಮಿಷನೆರಿಗಳ ವಿಷಯದಲ್ಲಿ ಇದು ವಿಶೇಷವಾಗಿ ನಿಜವಾಗಿದೆ.
ಶಿಕ್ಷಕರು ಹೃತ್ಪೂರ್ವಕ ಮರುಜ್ಞಾಪನಗಳನ್ನು ನೀಡುತ್ತಾರೆ
ಗಿಲ್ಯಡ್ ಶಿಕ್ಷಕರಾದ ಕಾರ್ಲ್ ಆ್ಯಡಮ್ಸ್ ಪದವಿ ಪಡೆಯುತ್ತಿದ್ದ ಮಿಷನೆರಿಗಳಿಗೆ “ಬೆಳೆಯುತ್ತಾ ಇರ್ರಿ” ಎಂಬ ಉತ್ತೇಜನವನ್ನು ನೀಡಿದರು. ಯಾವ ವಿಷಯಗಳಲ್ಲಿ ಬೆಳೆಯುತ್ತಾ ಇರಬೇಕು? ಮೊದಲನೆಯದಾಗಿ, ಜ್ಞಾನದಲ್ಲಿ ಮತ್ತು ಅದನ್ನು ಸೂಕ್ತವಾಗಿ ಉಪಯೋಗಿಸುವ ಸಾಮರ್ಥ್ಯದಲ್ಲಿ. ಬೈಬಲ್ ವೃತ್ತಾಂತಗಳ ಹಿನ್ನೆಲೆ ಮತ್ತು ಸನ್ನಿವೇಶವನ್ನು ತಿಳಿದುಕೊಳ್ಳಲು ರಿಸರ್ಚ್ ಅನ್ನು ಹೇಗೆ ಮಾಡಬೇಕೆಂದು ಗಿಲ್ಯಡ್ ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿತಿದ್ದಾರೆ. ಪ್ರತಿಯೊಂದು ವೃತ್ತಾಂತವು ಅವರನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಪರಿಗಣಿಸುವಂತೆ ಅವರಿಗೆ ಉತ್ತೇಜನ ನೀಡಲಾಗಿದೆ. ಇದನ್ನೇ ಮಾಡುತ್ತಾ ಮುಂದುವರಿಯುವಂತೆ ಅವರು ಪ್ರೋತ್ಸಾಹಿಸಲ್ಪಟ್ಟರು.
“ಎರಡನೆಯದಾಗಿ, ಪ್ರೀತಿಯಲ್ಲಿ ಬೆಳೆಯುತ್ತಾ ಇರಿ. ಪ್ರೀತಿ ಎಂಬ ಗುಣಕ್ಕೆ ಪೋಷಣೆಯನ್ನು ನೀಡುತ್ತಾ ಇದ್ದರೆ ಅದು ಬೆಳೆಯುತ್ತದೆ. ಅದನ್ನು ಕಡೆಗಣಿಸಿದಾಗ ಅದು ಬಾಡಿ ಸತ್ತುಹೋಗುತ್ತದೆ” ಎಂದು ಸಹೋದರ ಆ್ಯಡಮ್ಸ್ ಹೇಳಿದರು. (ಫಿಲಿಪ್ಪಿ 1:9) ಈಗ ಅವರು ಮಿಷನೆರಿಗಳೋಪಾದಿ ವಿಭಿನ್ನ ಸನ್ನಿವೇಶಗಳಲ್ಲಿ ಪ್ರೀತಿಯನ್ನು ಬೆಳೆಸುವ ಅಗತ್ಯವಿದೆ. ಮತ್ತು ಮೂರನೆಯದಾಗಿ: ಅವರು “ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ” ಇರಬೇಕಾಗಿದೆ. (2 ಪೇತ್ರ 3:18) “ಯೆಹೋವನು ತನ್ನ ಪುತ್ರನ ಮೂಲಕ ತೋರಿಸಿರುವ ಅದ್ಭುತ ಕೃಪೆಯು ಇದೇ ಆಗಿದೆ” ಎಂದು ಭಾಷಣಕರ್ತರು ಹೇಳಿದರು. “ಆ ಅಪಾತ್ರ ಕೃಪೆಗಾಗಿ ನಾವು ಹೆಚ್ಚೆಚ್ಚು ಗಣ್ಯತೆಯನ್ನು ತೋರಿಸುತ್ತಾ ಮುಂದುವರಿದಂತೆ, ದೇವರ ಚಿತ್ತವನ್ನು ಮಾಡುವುದರಲ್ಲಿ ಮತ್ತು ಆತನು ನಮಗೆ ನೀಡಿರುವ ನೇಮಕವನ್ನು ಪೂರೈಸುವುದರಲ್ಲಿ ನಾವು ಬಹಳಷ್ಟು ಸಂತೋಷವನ್ನು ಕಂಡುಕೊಳ್ಳುವೆವು.”
ಮತ್ತೊಬ್ಬ ಗಿಲ್ಯಡ್ ಶಿಕ್ಷಕರಾದ ಮಾರ್ಕ್ ನೂಮ್ಯಾರ್, “ಕಷ್ಟದ ಸನ್ನಿವೇಶಗಳನ್ನು ಪ್ರೀತಿಯಿಂದ ಎದುರಿಸಿದರೆ, ನೀವು ಅವುಗಳನ್ನು ತಾಳಿಕೊಳ್ಳಬಲ್ಲಿರಿ” ಎಂಬ ಮುಖ್ಯ ವಿಷಯದ ಕುರಿತು ಮಾತಾಡಿದರು. ಅವರು ಬುದ್ಧಿವಾದ ನೀಡಿದ್ದು: “ಮಿಷನೆರಿ ಜೀವಿತದಲ್ಲಿ ಎದುರಾಗುವ ಕಷ್ಟದ ಸನ್ನಿವೇಶಗಳನ್ನು ಪ್ರೀತಿಯಿಂದ ಎದುರಿಸಲು ನೀವು ಕಲಿತುಕೊಂಡರೆ, ನೀವು ಅವುಗಳನ್ನು ತಾಳಿಕೊಳ್ಳಲು ಶಕ್ತರಾಗಿರುವಿರಿ. ಯೆಹೋವನು ಯಾರನ್ನು ಪ್ರೀತಿಸುತ್ತಾನೊ ಅವರನ್ನೇ ಶಿಕ್ಷಿಸುತ್ತಾನೆ. ಒಂದು ನಿರ್ದಿಷ್ಟ ಸಲಹೆಯು ಅನುಚಿತವಾಗಿದೆ, ವಿಮರ್ಶಾತ್ಮಕವಾಗಿದೆ ಇಲ್ಲವೆ ನ್ಯಾಯೋಚಿತವಾಗಿಲ್ಲವೆಂದು ನೀವು ನೆನಸುವಾಗಲೂ, ಯೆಹೋವನಿಗಾಗಿ ಪ್ರೀತಿಯು ಮತ್ತು ಆತನೊಂದಿಗೆ ನಿಮಗಿರುವ ಸಂಬಂಧವು ಆ ಸಲಹೆಯನ್ನು ಸ್ವೀಕರಿಸಲು ನಿಮಗೆ ಸಹಾಯ ಮಾಡುವುದು.”
ಮಿಷನೆರಿ ಸೇವೆಯಲ್ಲಿ ಇನ್ನೂ ಅನೇಕ ಕೆಲಸಗಳಿವೆ ಎಂದು ಸಹೋದರ ನೂಮ್ಯಾರ್ ಸೂಚಿಸಿದರು. “ಆದರೆ ಪ್ರೀತಿರಹಿತ ಕೆಲಸವು ನಿಮ್ಮನ್ನು ಅಸಂತೃಪ್ತರನ್ನಾಗಿ ಮಾಡುವುದು. ಪ್ರೀತಿ ಇಲ್ಲದಿದ್ದರೆ, ಅಡಿಗೆಮಾಡುವುದು, ಮಾರುಕಟ್ಟೆಗೆ ಹೋಗುವುದು, ಹಣ್ಣುಹಂಪಲುಗಳನ್ನು ತೊಳೆಯುವುದು, ನೀರು ಕಾಯಿಸುವಂತಹ ಮನೆಗೆಲಸಗಳನ್ನು ಮಾಡುವುದರಲ್ಲಿ ನೀವು ಉತ್ಸಾಹವನ್ನು ಕಂಡುಕೊಳ್ಳಲಾರಿರಿ. ‘ನಾನು ಈ ಕೆಲಸಗಳನ್ನೆಲ್ಲ ಏಕೆ ಮಾಡುತ್ತಿದ್ದೇನೆ?’ ಎಂದು ಸ್ವತಃ ಕೇಳಿಕೊಳ್ಳಿರಿ. ‘ನನ್ನ ಪ್ರಯತ್ನಗಳಿಂದ ನನ್ನ ಜೊತೆ ಮಿಷನೆರಿಗಳ ಆರೋಗ್ಯ ಹಾಗೂ ಸಂತೋಷವು ಹೆಚ್ಚುತ್ತದೆ’ ಎಂಬ ಉತ್ತರವನ್ನು ನೀವು ಪಡೆದರೆ, ಆ ಕೆಲಸಗಳು ಅಷ್ಟೊಂದು ಕಷ್ಟಕರವಾಗಿರಲಾರವು.” ಕೊನೆಯಲ್ಲಿ ಅವರು ಪ್ರೋತ್ಸಾಹಿಸಿದ್ದು: “ಶಿಕ್ಷೆಯನ್ನು ಸ್ವೀಕರಿಸುವುದಾಗಿರಲಿ, ನಿಮ್ಮ ಮಿಷನೆರಿ ಕೆಲಸಗಳನ್ನು ಪೂರೈಸುವುದಾಗಿರಲಿ, ಇಲ್ಲವೆ ತಪ್ಪಭಿಪ್ರಾಯಗಳನ್ನು ನಿರ್ವಹಿಸುವುದಾಗಿರಲಿ, ಪ್ರೀತಿಯಿಂದ ಅವುಗಳನ್ನು ಪೂರೈಸಿದರೆ ನಿಮ್ಮ ನೇಮಕದಲ್ಲಿ ಉಳಿಯಲು ಇದು ನಿಮಗೆ ಸಹಾಯ ಮಾಡುವುದು. ಏಕೆಂದರೆ ‘ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.’”—1 ಕೊರಿಂಥ 13:8.
ತದನಂತರ ಗಿಲ್ಯಡ್ ಶಿಕ್ಷಕರಾದ ವಾಲಸ್ ಲಿವರನ್ಸ್ ಅವರ ಅಧ್ಯಕ್ಷತೆಯಲ್ಲಿ, ವಿದ್ಯಾರ್ಥಿಗಳು ಸ್ಥಳಿಕ ಸಭೆಗಳೊಂದಿಗೆ ಕೆಲಸಮಾಡಿದಾಗ ಪಡೆದಂತಹ ಹಲವಾರು ಹರ್ಷಕರ ಅನುಭವಗಳನ್ನು ಪುನಃ ಅಭಿನಯಿಸಿದರು. ಮನೆಯಿಂದ ಮನೆಗೆ ಹೋಗುವುದರ ಜೊತೆಗೆ, ಇವರು ತಮ್ಮ ಮಿಷನೆರಿ ತರಬೇತಿಯನ್ನು ಉಪಯೋಗಿಸಿ, ಟ್ರಕ್ಕುಗಳು ನಿಲ್ಲುವ ಸ್ಥಳದಲ್ಲಿ, ಬಟ್ಟೆ ಒಗೆಯುವ ತಾಣಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಜನರನ್ನು ಸಂಧಿಸಿ ಮಾತಾಡಿದರು.
ನುರಿತ ಮಿಷನೆರಿಗಳು ಆಶ್ವಾಸನೆಗಳನ್ನು ನೀಡುತ್ತಾರೆ
ಹೊಸ ಮಿಷನೆರಿಗಳು ವಿದೇಶಕ್ಕೆ ಹೋಗುವಾಗ ಅವರು ಕಳವಳಪಡುವ ಅಗತ್ಯವಿದೆಯೊ? ವಿದೇಶಿ ನೇಮಕದ ಪಂಥಾಹ್ವಾನಗಳನ್ನು ಅವರು ಎದುರಿಸಬಲ್ಲರೊ? ಹೊಸದಾಗಿ ಆಗಮಿಸಿರುವ ಈ ಮಿಷನೆರಿಗಳು ಸಾಫಲ್ಯವನ್ನು ಪಡೆದುಕೊಳ್ಳುವಂತೆ ಬ್ರಾಂಚ್ ಆಫೀಸುಗಳು ಯಾವ ಸಹಾಯವನ್ನು ನೀಡುತ್ತವೆ? ಇಂತಹ ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಲು, ಸೇವಾ ವಿಭಾಗದ ಸ್ಟೀವನ್ ಲೆಟ್ ಮತ್ತು ರೈಟಿಂಗ್ ವಿಭಾಗದ ಡೇವಿಡ್ ಸ್ಪ್ಲೇನ್ ಎಂಬುವವರು ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನಲ್ಲಿ ಬ್ರಾಂಚ್ ಶಾಲೆಗೆ ಹಾಜರಾಗಿದ್ದ ಸಹೋದರರನ್ನು ಇಂಟರ್ವ್ಯೂ ಮಾಡಿದರು. ಇಂಟರ್ವ್ಯೂ ಮಾಡಲ್ಪಟ್ಟ ಸಹೋದರರು ಸ್ಪೆಯ್ನ್, ಹಾಂಗ್ ಕಾಂಗ್, ಲೈಬಿರೀಯ, ಬೆನಿನ್, ಮಡಗಾಸ್ಕರ್, ಬ್ರಸಿಲ್, ಮತ್ತು ಜಪಾನಿನ ಬ್ರಾಂಚ್ ಕಮಿಟಿಯ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಅನೇಕ ದಶಕಗಳ ವರೆಗೆ ಮಿಷನೆರಿಗಳಾಗಿ ಸೇವೆಸಲ್ಲಿಸಿರುವ ಯೆಹೋವನ ಈ ನುರಿತ ಸೇವಕರಲ್ಲಿ ಅನೇಕರು, ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಅಲ್ಲಿ ಹಾಜರಾಗಿದ್ದ ಅವರ ಹೆತ್ತವರಿಗೆ ಹಾಗೂ ಸಂಬಂಧಿಕರಿಗೆ ಪುನರಾಶ್ವಾಸನೆ ನೀಡಿದರು. ತಮ್ಮ ಸ್ವಂತ ಅನುಭವಗಳು ಹಾಗೂ ಜೊತೆ ಮಿಷನೆರಿಗಳ ಅನುಭವಗಳ ಮೇಲೆ ಆಧಾರಿಸಿ, ಸಮಸ್ಯೆಗಳನ್ನು ಹಾಗೂ ಚಿಂತೆಗಳನ್ನು ಸಫಲವಾಗಿ ನಿಭಾಯಿಸಸಾಧ್ಯವಿದೆ ಎಂಬುದನ್ನು ಅವರು ತೋರಿಸಿದರು. ಅವರು ಎದುರಿಸುವಂತಹ ಸಮಸ್ಯೆಯು ದೊಡ್ಡದಾಗಿರಬಹುದು, “ಆದರೆ ಅದನ್ನು ಬಗೆಹರಿಸಬಹುದು ಮತ್ತು ಸೊಸೈಟಿಯು ನಮಗೆ ಸಹಾಯ ನೀಡುತ್ತದೆ” ಎಂದು ಮಡಗಾಸ್ಕರ್ನಲ್ಲಿ ಮಿಷನೆರಿಯಾಗಿರುವ ರೈಮೊ ಕ್ವೋಕಾನೆನ್ ಹೇಳಿದರು. ಈಗ ಬ್ರಸಿಲ್ನಲ್ಲಿ ಸೇವೆಸಲ್ಲಿಸುತ್ತಿರುವ ಆಸ್ಟನ್ ಗಸ್ಟಾವ್ಸನ್ ಹೇಳಿದ್ದು: “ನಾವು ಈ ನೇಮಕವನ್ನು ಆಯ್ದುಕೊಳ್ಳಲಿಲ್ಲ, ಅದು ನಮಗೆ ಕೊಡಲ್ಪಟ್ಟಿತು. ಆದಕಾರಣ ನಮ್ಮ ನೇಮಕಗಳಿಗೆ ಅಂಟಿಕೊಂಡಿರಲು ನಾವು ಬಹಳವಾಗಿ ಪ್ರಯಾಸಪಟ್ಟೆವು.” “ಮಿಷನೆರಿ ನೇಮಕದಲ್ಲಿ ಈಗಾಗಲೇ ಸೇವೆಸಲ್ಲಿಸುತ್ತಿದ್ದ ಸಹೋದರರ ಉಪಸ್ಥಿತಿಯೇ” ತನಗೆ ಸಹಾಯ ಮಾಡಿತೆಂದು ಜಪಾನಿನಲ್ಲಿ ಸೇವೆಮಾಡುತ್ತಿರುವ ಜೇಮ್ಸ್ ಲಿನ್ಟನ್ ಹೇಳಿದರು. ಯೆಹೋವನಿಗೆ ಸೇವೆಸಲ್ಲಿಸುವ ಮತ್ತು ಆತನ ಕುರಿಗಳನ್ನು ಪರಾಮರಿಸುವ ಒಂದು ಸಂತೋಷಕರ ಹಾಗೂ ತೃಪ್ತಿದಾಯಕ ವಿಧವು ಮಿಷನೆರಿ ಸೇವೆಯಾಗಿದೆ.
ಆತ್ಮಿಕತೆಯನ್ನು ಕೊಲ್ಲುವ ವ್ಯಾಧಿಯಿಂದ ದೂರವಿರುವುದು
ಇಸವಿ 1946ರಲ್ಲಿ ಗಿಲ್ಯಡ್ನ ಏಳನೆಯ ತರಗತಿಯಿಂದ ಪದವಿ ಪಡೆದ ಮತ್ತು ಈಗ ಆಡಳಿತ ಮಂಡಲಿಯ ಸದಸ್ಯರಾಗಿರುವ ಥಿಯೊಡರ್ ಜಾರಸ್, “ಆತ್ಮಿಕ ರೀತಿಯಲ್ಲಿ ಜೀವಂತರಾಗಿರುವುದರ ಪಂಥಾಹ್ವಾನ” ಎಂಬ ಶೀರ್ಷಿಕೆಯ ಕೊನೆಯ ಭಾಷಣವನ್ನು ನೀಡಿದರು. ಲೋಕದ ವಿಭಿನ್ನ ಭಾಗಗಳಲ್ಲಿ ನಡೆಯುತ್ತಿರುವ ಘೋರ ಕೃತ್ಯಗಳ ಕಡೆಗೆ ಮೊದಲು ಗಮನಹರಿಸಿ, ಇವು ಮಾನವಕುಲವನ್ನೇ ಬಾಧಿಸುತ್ತಿರುವ ಕೇಡುಗಳೆಂದು ಅವರು ಹೇಳಿದರು.
ಕೀರ್ತನೆ 91ನ್ನು ಉಲ್ಲೇಖಿಸುತ್ತಾ, ನಮ್ಮ ಸುತ್ತಲೂ ಲಕ್ಷಾಂತರ ಜನರನ್ನು ಆತ್ಮಿಕ ರೀತಿಯಲ್ಲಿ ರೋಗಗ್ರಸ್ತರನ್ನಾಗಿ ಮಾಡಿ ಕೊಂದಿರುವ “ಮರಣಕರವ್ಯಾಧಿ” ಮತ್ತು ‘ಕೇಡನ್ನು’ ಸಹೋದರ ಜಾರಸ್ ಗುರುತಿಸಿದರು. ವೈಚಾರಿಕತೆ ಮತ್ತು ಪ್ರಾಪಂಚಿಕತೆಯ ಮೇಲಾಧಾರಿಸಿ, ಪಿಶಾಚನು ಮತ್ತು ಅವನ ದುಷ್ಟ ವ್ಯವಸ್ಥೆಯು ಮರಣಕರವ್ಯಾಧಿಯಂತಹ ಪ್ರಚಾರವನ್ನು ಉಪಯೋಗಿಸುವ ಮೂಲಕ ಆತ್ಮಿಕತೆಯನ್ನು ದುರ್ಬಲಗೊಳಿಸಿ ಅದನ್ನು ಕೊಂದುಹಾಕಿದೆ. ಆದರೆ “ಪರಾತ್ಪರನ ಮರೆಹೊಕ್ಕಿರುವವನ” ಹತ್ತಿರಕ್ಕೆ ಇಂತಹ ವ್ಯಾಧಿಯು ಸುಳಿಯಲಾರದೆಂದು ಯೆಹೋವನು ಆಶ್ವಾಸನೆ ನೀಡುತ್ತಾನೆ.—ಕೀರ್ತನೆ 91:1-7.
ಸಹೋದರ ಜಾರಸ್ ಹೇಳಿದ್ದು: “ನಂಬಿಕೆಯಲ್ಲಿ ಆರೋಗ್ಯವಂತರಾಗಿ ಭದ್ರತೆಯ ತಾಣದಲ್ಲಿ ಉಳಿಯುವುದೇ ಒಂದು ದೊಡ್ಡ ಪಂಥಾಹ್ವಾನವಾಗಿದೆ. ನಾವು ‘ದೇವರಾತ್ಮವಿಲ್ಲದ’ ಕುಚೋದ್ಯಗಾರರಂತೆ ಇರಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಇದೊಂದು ಸಮಸ್ಯೆಯಾಗಿದೆ. ಇದು ಸಂಸ್ಥೆಯಲ್ಲಿರುವ ಎಲ್ಲರನ್ನೂ ಬಾಧಿಸುವಂತಹ ಸಮಸ್ಯೆಯಾಗಿದೆ. ಇದನ್ನು ನೀವು ನಿಮ್ಮ ಮಿಷನೆರಿ ನೇಮಕದಲ್ಲೂ ಎದುರಿಸಬಹುದು.” (ಯೂದ 18, 19) ಆದರೆ ಪದವಿ ಪಡೆಯುತ್ತಿದ್ದ ಮಿಷನೆರಿಗಳು ಸಫಲವಾಗಿ ತಮ್ಮ ನೇಮಕಗಳಲ್ಲಿ ಆತ್ಮಿಕತೆಯನ್ನು ಕಾಪಾಡಿಕೊಳ್ಳಬಲ್ಲರೆಂದು ಅವರಿಗೆ ಹೇಳಲಾಯಿತು. ರಷ್ಯ, ಏಷಿಯ, ಮತ್ತು ಆಫ್ರಿಕದ ದೇಶಗಳಲ್ಲಿರುವ ನಮ್ಮ ಸಹೋದರರು, ನಿಷೇಧಗಳು, ತೀವ್ರವಾದ ವಿರೋಧ, ಅಪಹಾಸ್ಯ, ನಾಸ್ತಿಕ ಪ್ರಚಾರ ಮತ್ತು ಸುಳ್ಳಾರೋಪಗಳ ಎದುರಿನಲ್ಲೂ ಹೇಗೆ ತಾಳಿಕೊಳ್ಳುತ್ತಿದ್ದಾರೆಂಬುದನ್ನು ಪರಿಗಣಿಸುವಂತೆ ಅವರು ಉತ್ತೇಜಿಸಲ್ಪಟ್ಟರು. ಮತ್ತು ಅನೇಕ ಸಂದರ್ಭಗಳಲ್ಲಿ ಕುಲಸಂಬಂಧಿತ ಕ್ಷೋಭೆಗಳು ಮತ್ತು ಆವಶ್ಯಕತೆಗಳ ಕೊರತೆಯಿಂದ ಶಾರೀರಿಕ ತೊಂದರೆಗಳನ್ನು ಸಹ ಇವರು ತಾಳಿಕೊಳ್ಳಬೇಕಾಗುತ್ತದೆ.
ಆತ್ಮಿಕವಾಗಿ ಅವನತಿ ಹೊಂದುತ್ತಿರುವಾಗ, “ಸಮಸ್ಯೆಯ ಮೂಲವು ಏನೆಂದು ಕಂಡುಹಿಡಿದು, ದೇವರ ವಾಕ್ಯದಲ್ಲಿರುವ ಸಲಹೆಯನ್ನು ಉಪಯೋಗಿಸುತ್ತಾ ಅದನ್ನು ಬಗೆಹರಿಸುವುದು ಒಳ್ಳೇದು.” ಬೈಬಲಿನಲ್ಲಿರುವ ಉದಾಹರಣೆಗಳು ಎತ್ತಿತೋರಿಸಲ್ಪಟ್ಟವು. ಯೆಹೋಶುವನು ಧರ್ಮಶಾಸ್ತ್ರದ ಪ್ರತಿಯನ್ನು ಅನುದಿನವೂ ತಗ್ಗಿದ ಧ್ವನಿಯಲ್ಲಿ ಓದುವಂತೆ ಉತ್ತೇಜಿಸಲ್ಪಟ್ಟನು. (ಯೆಹೋಶುವ 1:8) ಯೋಷೀಯನ ದಿನದಲ್ಲಿ ಧರ್ಮಶಾಸ್ತ್ರವು ಸಿಕ್ಕಿದಾಗ, ಅದರಲ್ಲಿದ್ದ ಉಪದೇಶಗಳನ್ನು ಅರಸನು ನಿಷ್ಠೆಯಿಂದ ಅನ್ವಯಿಸಿದ್ದನ್ನು ಯೆಹೋವನು ಆಶೀರ್ವದಿಸಿದನು. (2 ಅರಸು 23:2, 3) ತಿಮೊಥೆಯನಿಗೆ ಚಿಕ್ಕಂದಿನಿಂದಲೂ ಪರಿಶುದ್ಧ ಗ್ರಂಥಗಳ ಪರಿಚಯವಿತ್ತು. (2 ತಿಮೊಥೆಯ 3:14, 15) ಬೆರೋಯದವರು ಕೇವಲ ಒಳ್ಳೆಯ ಕೇಳುಗರಾಗಿದ್ದರು ಮಾತ್ರವಲ್ಲ, ಶಾಸ್ತ್ರವಚನಗಳನ್ನು ಅನುದಿನವೂ ಪರಿಶೀಲಿಸಿದ ಕಾರಣ “ಸದ್ಗುಣವುಳ್ಳ”ವರಾಗಿ ಪರಿಗಣಿಸಲ್ಪಟ್ಟರು. (ಅ. ಕೃತ್ಯಗಳು 17:10, 11) ಮತ್ತು ದೇವರ ವಾಕ್ಯದ ಪರಿಚಯವಿದ್ದು ಅದನ್ನು ಬಳಸಿದ ಅಗ್ರಗಣ್ಯರಲ್ಲಿ ಯೇಸು ಕ್ರಿಸ್ತನು ಪ್ರಪ್ರಥಮನಾಗಿದ್ದನು.—ಮತ್ತಾಯ 4:1-11.
ತಮ್ಮ ಭಾಷಣವನ್ನು ಕೊನೆಗೊಳಿಸುತ್ತಾ ಸಹೋದರ ಜಾರಸ್ ಹೊಸ ಮಿಷನೆರಿಗಳಿಗೆ ಈ ಹೃತ್ಪೂರ್ವಕ ಬುದ್ಧಿವಾದವನ್ನು ನೀಡಿದರು: “ಈಗ ನೀವು ನಿಮ್ಮ ಮಿಷನೆರಿ ನೇಮಕವನ್ನು ಪೂರೈಸಲು ಸಿದ್ಧರಾಗಿದ್ದೀರಿ. ಮತ್ತು ಅಕ್ಷರಾರ್ಥವಾಗಿ ನೀವು ಭೂಮಿಯ ಅನೇಕ ಭಾಗಗಳಿಗೆ ಹೋಗಲಿದ್ದೀರಿ. ಆತ್ಮಿಕ ರೀತಿಯಲ್ಲಿ ಜೀವಂತರಾಗಿರುವುದರ ಪಂಥಾಹ್ವಾನವನ್ನು ನಾವು ಎದುರಿಸುವುದಾದರೆ, ಏನನ್ನು ಮಾಡಲು ನಾವು ನಿರ್ಧರಿಸಿದ್ದೇವೋ ಅದನ್ನು ಮಾಡಿಮುಗಿಸುವುದರಿಂದ ಯಾವುದೂ ನಮ್ಮನ್ನು ಅಪಕರ್ಷಿಸದಂತೆ ಎಚ್ಚರ ವಹಿಸುವೆವು. ನೀವು ಹುರುಪಿನಿಂದ ಸಾರಲಿದ್ದೀರಿ ಮತ್ತು ಇತರರು ನಿಮ್ಮ ನಂಬಿಕೆಯನ್ನು ಅನುಕರಿಸುವಂತೆ ಪ್ರಚೋದಿಸಲಿದ್ದೀರಿ. ಮತ್ತು ಯೆಹೋವನು ನಮ್ಮನ್ನು ಸಜೀವಗೊಳಿಸಿರುವಂತೆಯೇ, ನೀವು ಯಾರಿಗೆ ಕಲಿಸಲಿದ್ದೀರೊ ಅವರನ್ನೂ ಸಜೀವಗೊಳಿಸಬೇಕೆಂದು ನಾವು ನಿಮ್ಮೊಂದಿಗೆ ಸೇರಿ ಪ್ರಾರ್ಥಿಸುವೆವು. ಹೀಗೆ, ಇಂದು ಲೋಕದ ಎಲ್ಲೆಡೆಯೂ ಅತಿರಭಸದಿಂದ ಹರಡುತ್ತಿರುವ ಆತ್ಮಿಕ ಕೇಡಿನಿಂದ ಇನ್ನೂ ಅನೇಕ ಜನರು ಬದುಕಿ ಉಳಿಯಲಿದ್ದಾರೆ. ಇವರು ಮಹಾ ಸಂಖ್ಯೆಯಲ್ಲಿ ನಮ್ಮೊಂದಿಗೆ ಸೇರಿ ಯೆಹೋವನ ಚಿತ್ತವನ್ನು ಮಾಡಲಿದ್ದಾರೆ. ಅಲ್ಲಿಯ ವರೆಗೆ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ.”
ವಿವಿಧ ದೇಶಗಳಿಂದ ಬಂದಿದ್ದ ಶುಭಾಶಯಗಳನ್ನು ಅಧ್ಯಕ್ಷರು ಓದಿ ತಿಳಿಸಿದ ಬಳಿಕ, ಪದವಿ ಪಡೆಯಲಿದ್ದ ವಿದ್ಯಾರ್ಥಿಗಳಿಗೆ ಅವರ ಪ್ರಮಾಣಪತ್ರಗಳನ್ನು ಕೊಡುವ ಸಮಯವು ಬಂತು. ತದನಂತರ ವಿದ್ಯಾರ್ಥಿಗಳು ಬರೆದ ಗಣ್ಯತಾ ಪತ್ರವನ್ನು ಓದಲಾಯಿತು. ತಾವು ಪಡೆದುಕೊಂಡಿದ್ದ ವಿಶೇಷವಾದ ತರಬೇತಿಗೆ ಮತ್ತು “ಭೂಲೋಕದ ಕಟ್ಟಕಡೆಯ ವರೆಗೂ” ಮಿಷನೆರಿಗಳೋಪಾದಿ ತಮಗೆ ಸಿಕ್ಕಿರುವ ನೇಮಕಕ್ಕಾಗಿ ಅವರು ಯೆಹೋವನಿಗೆ ಮತ್ತು ಆತನ ಸಂಸ್ಥೆಗೆ ಎಷ್ಟು ಆಭಾರಿಗಳಾಗಿದ್ದರು!—ಅ. ಕೃತ್ಯಗಳು 1:8.
[ಪುಟ 29 ರಲ್ಲಿರುವ ಚೌಕ]
ತರಗತಿಯ ಸಂಖ್ಯಾಸಂಗ್ರಹಣಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 11
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 24
ವಿದ್ಯಾರ್ಥಿಗಳ ಸಂಖ್ಯೆ: 48
ವಿವಾಹಿತ ದಂಪತಿಗಳ ಸಂಖ್ಯೆ: 24
ಸರಾಸರಿ ಪ್ರಾಯ: 34
ಸತ್ಯದಲ್ಲಿ ಸರಾಸರಿ ವರ್ಷಗಳು: 17
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12
[ಪುಟ 26 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಿಂದ ಪದವಿ ಪಡೆದ 107ನೆಯ ತರಗತಿ
ಕೆಳಗಿನ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು ಪ್ರತಿ ಸಾಲಿನಲ್ಲಿ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
1. ಪೆರಾಲ್ಟಾ, ಸಿ.; ಹಾಲನ್ಬೆಕ್, ಬಿ.; ಶಾ, ಆರ್.; ಹ್ಯಾಸಾನ್, ಎನ್.; ಮಾರ್ಟಿನ್, ಡಿ.; ಹಚಿನ್ಸನ್, ಎ. 2. ಎಡ್ವರ್ಡ್ಸ್, ಎಲ್.; ವೀಸರ್, ಟಿ.; ಸೆರೂಟೀ, ಕ್ಯೂ.; ಎನ್ಟ್ಸ್ಮಿಂಗರ್, ಜಿ.; ಡ್ಯಾಲೊಯೀಸ್, ಎಲ್.; ಬಾಲ್ಯೆರೀ, ಎಲ್. 3. ನೈಟ್, ಪಿ.; ಕ್ರಾವ್ಸ, ಎ.; ಕಸಸ್ಕೀ, ಡಿ.; ರೋಸ್, ಎಮ್.; ಫ್ರೀಡಲ್, ಕೆ.; ನ್ಯೆಟೊ, ಆರ್. 4. ರೋಸ್, ಈ.; ಬ್ಯಾಕಸ್, ಟಿ.; ಟ್ಯಾಲೀ, ಎಸ್.; ಆಯಿನ್ಬೆರ್, ಡಿ.; ಬೆರ್ನ್ಹಾರ್ಟ್, ಎ.; ಪೆರಾಲ್ಟಾ, ಎಮ್. 5. ಡ್ಯಾಲೊಯೀಸ್, ಎ.; ಆಯಿನ್ಬೆರ್, ಡಿ.; ಡನ್, ಏಚ್.; ಗ್ಯಾಟ್ಲಿಂಗ್, ಜಿ.; ಶಾ, ಜೆ.; ಸೆರೂಟೀ, ಎಮ್. 6. ಬಾಲ್ಯೆರೀ, ಎಸ್.; ಕ್ರಾವ್ಸ, ಜೆ.; ಹಾಲನ್ಬೆಕ್, ಟಿ.; ಮಾರ್ಟಿನ್, ಎಮ್. 7. ಬ್ಯಾಕಸ್, ಎ.; ಡನ್, ಓ.; ಗ್ಯಾಟ್ಲಿಂಗ್, ಟಿ.; ವೀಸರ್, ಆರ್.; ನೈಟ್, ಪಿ.; ಹ್ಯಾಸಾನ್, ಓ. 8. ನ್ಯೆಟೊ, ಡಿ.; ಟ್ಯಾಲೀ, ಎಮ್.; ಫ್ರೀಡಲ್, ಡಿ.; ಕಸಸ್ಕೀ, ಎ.; ಎಡ್ವರ್ಡ್ಸ್, ಜೆ.; ಎನ್ಟ್ಸ್ಮಿಂಗರ್, ಎಮ್.