ನಮ್ಮ ಅಮೂಲ್ಯವಾದ ನಂಬಿಕೆಯನ್ನು ಬಿಗಿಯಾಗಿ ಹಿಡಿದುಕೊಂಡಿರೋಣ!
“ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಸಮಾನ ಸುಯೋಗದಲ್ಲಿ ಹಿಡಿದುಕೊಂಡಿರುವವರಿಗೆ.”—2 ಪೇತ್ರ 1:1, NW.
1. ಯೇಸು ತನ್ನ ಅಪೊಸ್ತಲರಿಗೆ ಎಚ್ಚರಿಕೆಯಾಗಿ ಏನು ಹೇಳಿದನು, ಆದರೂ ಪೇತ್ರನ ಜಂಬದ ಮಾತು ಏನಾಗಿತ್ತು?
ಯೇಸುವಿನ ಮರಣಕ್ಕೆ ಮುಂಚಿನ ಸಾಯಂಕಾಲ, ಅಪೊಸ್ತಲರೆಲ್ಲರೂ ತನ್ನನ್ನು ತ್ಯಜಿಸುವರೆಂದು ಯೇಸು ಹೇಳಿದನು. ಅವರಲ್ಲಿ ಒಬ್ಬನಾಗಿದ್ದ ಪೇತ್ರನು ಜಂಬಹೊಡೆದುದು: “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಎಂದಿಗೂ ಹಿಂಜರಿಯುವದಿಲ್ಲ.” (ಓರೆಅಕ್ಷರಗಳು ನಮ್ಮವು.) (ಮತ್ತಾಯ 26:33) ಆದರೆ ಏನಾಗಲಿತ್ತೆಂಬುದು ಯೇಸುವಿಗೆ ತಿಳಿದಿತ್ತು. ಆದಕಾರಣವೇ, ಅದೇ ಸಂದರ್ಭದಲ್ಲಿ ಅವನು ಪೇತ್ರನಿಗೆ ಹೇಳಿದ್ದು: “ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು.”—ಲೂಕ 22:32.
2. ಪೇತ್ರನ ವಿಪರೀತ ಆತ್ಮವಿಶ್ವಾಸದ ಹೊರತೂ, ಅವನ ನಂಬಿಕೆ ಬಲಹೀನವಾಗಿತ್ತೆಂದು ಅವನ ಯಾವ ವರ್ತನೆಗಳು ಹೊರಗೆಡಹಿದವು?
2 ತನ್ನ ನಂಬಿಕೆಯ ಕುರಿತು ಮಿತಿಮೀರಿದ ಆತ್ಮವಿಶ್ವಾಸವಿದ್ದ ಪೇತ್ರನು, ಅದೇ ರಾತ್ರಿ ಯೇಸುವನ್ನು ನಿರಾಕರಿಸಿದನು. ಮೂರು ಬಾರಿ ಕ್ರಿಸ್ತನ ಪರಿಚಯವನ್ನು ಕೂಡ ಅವನು ಅಲ್ಲಗಳೆದನು! (ಮತ್ತಾಯ 26:69-75) ಅವನು “ತಿರುಗಿಕೊಂಡ ಮೇಲೆ” ಅವನ ಸ್ವಾಮಿಯ, “ನಿನ್ನ ಸಹೋದರರನ್ನು ದೃಢಪಡಿಸು” ಎಂಬ ಮಾತುಗಳು ಅವನ ಕಿವಿಗಳಲ್ಲಿ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಧ್ವನಿಸಿದ್ದಿರಬೇಕು. ಆ ಬುದ್ಧಿವಾದದಿಂದ ಪೇತ್ರನ ಬಾಕಿ ಉಳಿದ ಜೀವನವು ಗಾಢವಾಗಿ ಪ್ರಭಾವಿಸಲ್ಪಟ್ಟಿತು. ಅವನು ಬರೆದ ಮತ್ತು ಬೈಬಲಿನಲ್ಲಿ ಸಂರಕ್ಷಿಸಲ್ಪಟ್ಟಿರುವ ಎರಡು ಪತ್ರಗಳಿಂದ ಇದು ರುಜುವಾಗುತ್ತದೆ.
ಪೇತ್ರನು ತನ್ನ ಪತ್ರಗಳನ್ನು ಬರೆದ ಕಾರಣ
3. ಪೇತ್ರನು ತನ್ನ ಪ್ರಥಮ ಪತ್ರವನ್ನು ಏಕೆ ಬರೆದನು?
3 ಯೇಸು ಸತ್ತು ಸುಮಾರು 30 ವರ್ಷಗಳ ನಂತರ, ಪೇತ್ರನು ತನ್ನ ಪ್ರಥಮ ಪತ್ರವನ್ನು, ಈಗ ಟರ್ಕಿ ದೇಶದ ಉತ್ತರ ಮತ್ತು ಪಶ್ಚಿಮ ಭಾಗವಾಗಿರುವ ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ ಮತ್ತು ಬಿಥೂನ್ಯ ಪ್ರದೇಶದಲ್ಲಿದ್ದ ತನ್ನ ಸಹೋದರರನ್ನು ಸಂಬೋಧಿಸಿ ಬರೆದನು. (1 ಪೇತ್ರ 1:1) ಸಾ.ಶ. 33ರಲ್ಲಿ, ಯಾರಲ್ಲಿ ಕೆಲವರು ಕ್ರೈಸ್ತರಾಗಿದ್ದಿರಬಹುದೊ ಅಂತಹ ಯೆಹೂದ್ಯರು ಪೇತ್ರನು ಯಾರಿಗೆ ಬರೆದನೊ ಅವರ ಮಧ್ಯೆ ಇದ್ದುದು ನಿಸ್ಸಂದೇಹ. (ಅ. ಕೃತ್ಯಗಳು 2:1, 7-9) ಅನೇಕರು, ವಿರೋಧಿಗಳ ಮಧ್ಯೆ ಭಯಂಕರ ಪರೀಕ್ಷೆಗಳನ್ನು ಅನುಭವಿಸುತ್ತಿದ್ದ ಅನ್ಯರಾಗಿದ್ದರು. (1 ಪೇತ್ರ 1:6, 7; 2:12, 19, 20; 3:13-17; 4:12-14) ಆದಕಾರಣ ಪೇತ್ರನು ಈ ಸಹೋದರರನ್ನು ಪ್ರೋತ್ಸಾಹಿಸುವರೆ ಬರೆದನು. ಅವರ “ನಂಬಿಕೆಯ ಅಂತ್ಯಫಲವಾಗಿರುವ ಆತ್ಮ [“ಪ್ರಾಣ,” NW]ರಕ್ಷಣೆಯನ್ನು” ಹೊಂದುವಂತೆ ಸಹಾಯಮಾಡುವುದು ಅವನ ಗುರಿಯಾಗಿತ್ತು. ಹೀಗೆ, ತನ್ನ ಅಗಲಿಕೆಯ ಬುದ್ಧಿವಾದದಲ್ಲಿ, “ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು [ಸೈತಾನನನ್ನು] ಎದುರಿಸಿರಿ,” ಎಂದು ಅವರನ್ನು ಪ್ರೋತ್ಸಾಹಿಸಿದನು.—1 ಪೇತ್ರ 1:9; 5:8-10.
4. ಪೇತ್ರನು ತನ್ನ ದ್ವಿತೀಯ ಪತ್ರವನ್ನು ಏಕೆ ಬರೆದನು?
4 ಆ ಬಳಿಕ, ಪೇತ್ರನು ಈ ಕ್ರೈಸ್ತರಿಗೆ ಎರಡನೆಯ ಪತ್ರವನ್ನು ಬರೆದನು. (2 ಪೇತ್ರ 3:1) ಏಕೆ? ಇನ್ನೂ ಹೆಚ್ಚು ದೊಡ್ಡದಾದ ಅಪಾಯವು ಕಾದಿತ್ತು. ಅನೈತಿಕ ಜನರು ವಿಶ್ವಾಸಿಗಳ ಮಧ್ಯೆ ತಮ್ಮ ಮಲಿನಗೊಳಿಸುವ ನಡತೆಯನ್ನು ಉತ್ತೇಜಿಸಿ ಕೆಲವರನ್ನು ತಪ್ಪುಮಾರ್ಗಕ್ಕೆ ನಡೆಸಲಿದ್ದರು! (2 ಪೇತ್ರ 2:1-3) ಇದಲ್ಲದೆ, ಪೇತ್ರನು ಕುಚೋದ್ಯಗಾರರ ಬಗ್ಗೆ ಎಚ್ಚರಿಸಿದನು. ಅವನು ಒಂದನೆಯ ಪತ್ರದಲ್ಲಿ, “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ” ಎಂದು ಬರೆದಿದ್ದನು, ಆದರೆ ಈಗ ಕೆಲವರು ಅಂತಹ ವಿಚಾರದ ಕುರಿತು ಅಣಕಿಸಿ ಮಾತಾಡುತ್ತಿದ್ದರೆಂಬುದು ವ್ಯಕ್ತ. (1 ಪೇತ್ರ 4:7; 2 ಪೇತ್ರ 3:3, 4) ನಾವು ಪೇತ್ರನ ಎರಡನೆಯ ಪತ್ರವನ್ನು ಪರೀಕ್ಷಿಸಿ, ನಂಬಿಕೆಯಲ್ಲಿ ಸ್ಥಿರವಾಗಿ ಉಳಿಯುವಂತೆ ಅದು ಸಹೋದರರನ್ನು ಹೇಗೆ ಬಲಪಡಿಸಿತೆಂದು ನೋಡೋಣ. ಈ ಪ್ರಥಮ ಲೇಖನದಲ್ಲಿ, ನಾವು 2 ಪೇತ್ರ 1ನೆಯ ಅಧ್ಯಾಯವನ್ನು ಪರ್ಯಾಲೋಚಿಸುವೆವು.
ಅಧ್ಯಾಯ 1ರ ಉದ್ದೇಶ
5. ಪೇತ್ರನು ಸಮಸ್ಯೆಗಳ ಚರ್ಚೆಗಾಗಿ ತನ್ನ ವಾಚಕರನ್ನು ಹೇಗೆ ಸಿದ್ಧಪಡಿಸುತ್ತಾನೆ?
5 ಪೇತ್ರನು ಗಂಭೀರ ಸಮಸ್ಯೆಗಳನ್ನು ಒಡನೆ ಸಂಬೋಧಿಸುವುದಿಲ್ಲ. ಬದಲಾಗಿ, ತನ್ನ ವಾಚಕರು ಕ್ರೈಸ್ತರಾದಾಗ ಅವರು ಏನನ್ನು ಪಡೆದರೊ ಅದಕ್ಕೆ ಮಾನ್ಯತೆಯನ್ನು ಬೆಳೆಸುವ ಮೂಲಕ ಅವನು ಈ ಸಮಸ್ಯೆಗಳ ಚರ್ಚೆಗೆ ದಾರಿಯನ್ನು ಸಿದ್ಧಮಾಡುತ್ತಾನೆ. ದೇವರ ಅದ್ಭುತಕರವಾದ ವಾಗ್ದಾನಗಳು ಮತ್ತು ಬೈಬಲಿನ ಪ್ರವಾದನೆಗಳ ಭರವಸಾರ್ಹತೆಯನ್ನು ಅವನು ಅವರಿಗೆ ಜ್ಞಾಪಕಹುಟ್ಟಿಸುತ್ತಾನೆ. ಕ್ರಿಸ್ತನು ರಾಜ್ಯಾಧಿಕಾರದಲ್ಲಿ ಬಂದ ವಿಷಯದಲ್ಲಿ ತನಗೆ ವೈಯಕ್ತಿಕವಾಗಿ ಆದ ದರ್ಶನದ, ರೂಪಾಂತರದ ಕುರಿತು ಹೇಳುತ್ತ ಅವನು ಇದನ್ನು ಮಾಡುತ್ತಾನೆ.—ಮತ್ತಾಯ 17:1-8; 2 ಪೇತ್ರ 1:3, 4, 11, 16-21.
6, 7. (ಎ) ಪೇತ್ರನ ಪತ್ರದ ಪೀಠಿಕೆಯಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಬಲ್ಲೆವು? (ಬಿ) ನಾವು ಸಲಹೆ ಕೊಡುವಲ್ಲಿ, ಯಾವ ರೀತಿಯ ಒಪ್ಪಿಕೊಳ್ಳುವಿಕೆಯನ್ನು ಮಾಡುವುದು ಕೆಲವು ಬಾರಿ ಸಹಾಯಕಾರಿಯಾಗಬಹುದು?
6 ಪೇತ್ರನ ಪೀಠಿಕೆಯಿಂದ ನಾವೊಂದು ಪಾಠವನ್ನು ಕಲಿತುಕೊಳ್ಳಬಲ್ಲೆವೊ? ನಾವು ಮೊದಲಾಗಿ ಕೇಳುಗರೊಂದಿಗೆ, ನಾವು ಸಾಮಾನ್ಯವಾಗಿ ನಮ್ಮ ಮಧ್ಯೆ ಅಮೂಲ್ಯವೆಂದೆಣಿಸುವ ರಾಜ್ಯದ ಮಹಾ ನಿರೀಕ್ಷೆಯ ಅಂಶಗಳನ್ನು ಪುನರ್ವಿಮರ್ಶಿಸುವಲ್ಲಿ ಸಲಹೆಯು ಹೆಚ್ಚು ಸ್ವೀಕಾರಯೋಗ್ಯವಾಗುವುದಿಲ್ಲವೊ? ಮತ್ತು ನಿಮ್ಮ ಸ್ವಂತ ಅನುಭವವನ್ನು ಬಳಸುವ ವಿಷಯದಲ್ಲೇನು? ಯೇಸುವಿನ ಮರಣಾನಂತರ ಪೇತ್ರನು ಅನೇಕ ವೇಳೆ, ಕ್ರಿಸ್ತನನ್ನು ರಾಜ್ಯ ಮಹಿಮೆಯಲ್ಲಿ ಕಂಡ ಆ ದರ್ಶನದ ಕುರಿತು ಹೇಳಿರುವುದು ಸಂಭವನೀಯ.—ಮತ್ತಾಯ 17:9.
7 ಅಲ್ಲದೆ, ಬಹುಮಟ್ಟಿಗೆ, ಪೇತ್ರನು ತನ್ನ ಎರಡನೆಯ ಪತ್ರವನ್ನು ಬರೆಯುವುದರೊಳಗೆ, ಮತ್ತಾಯನ ಸುವಾರ್ತೆಯೂ ಗಲಾತ್ಯದವರಿಗೆ ಅಪೊಸ್ತಲ ಪೌಲನು ಬರೆದ ಪತ್ರವೂ ವ್ಯಾಪಕವಾಗಿ ಹಂಚಲ್ಪಟ್ಟಿದ್ದಿರಬೇಕೆಂಬುದೂ ಜ್ಞಾಪಕದಲ್ಲಿರಲಿ. ಆದುದರಿಂದ ಪೇತ್ರನ ಮಾನುಷ ಸೋಲುಗಳು ಹಾಗೂ ಅವನ ನಂಬಿಗಸ್ತಿಕೆಯ ದಾಖಲೆಯು ಅವನ ಸಮಕಾಲೀನರಿಗೆ ಸುವಿದಿತವಾಗಿದ್ದಿರಬಹುದು. (ಮತ್ತಾಯ 16:21-23; ಗಲಾತ್ಯ 2:11-14) ಆದರೂ, ಇದು ಅವನ ವಾಕ್ ಸರಳತೆಯನ್ನು ನಷ್ಟಗೊಳಿಸಲಿಲ್ಲ. ನಿಜವಾಗಿಯೂ ಇದು, ತಮ್ಮ ಸ್ವಂತ ಬಲಹೀನತೆಗಳ ಪ್ರಜ್ಞೆಯಿದ್ದವರಿಗೆ ಅವನ ಪತ್ರವನ್ನು ಹೆಚ್ಚು ಆಕರ್ಷಣೀಯವಾಗುವಂತೆ ಮಾಡಿದ್ದಿರಬಹುದು. ಆದುದರಿಂದ, ಸಮಸ್ಯೆಗಳಿದ್ದವರಿಗೆ ಸಹಾಯಮಾಡುವಾಗ, ನಾವೂ ಪಾಪಪ್ರವೃತ್ತರೆಂದು ಒಪ್ಪಿಕೊಳ್ಳುವುದು ಪರಿಣಾಮಕಾರಿಯಾಗಿರಲಿಕ್ಕಿಲ್ಲವೊ?—ರೋಮಾಪುರ 3:23; ಗಲಾತ್ಯ 6:1.
ಬಲಪಡಿಸುವ ಶುಭಾಶಯ
8. ಪೇತ್ರನು ಪ್ರಾಯಶಃ ಯಾವ ಅರ್ಥದಲ್ಲಿ “ನಂಬಿಕೆ” ಪದವನ್ನು ಉಪಯೋಗಿಸಿದನು?
8 ಈಗ ಪೇತ್ರನ ಶುಭಾಶಯವನ್ನು ಪರಿಗಣಿಸಿರಿ. ಅವನು ಒಡನೆ ನಂಬಿಕೆಯ ವಿಷಯವನ್ನು ಎತ್ತಿ, “ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಸಮಾನ ಸುಯೋಗದಲ್ಲಿ ಹಿಡಿದುಕೊಂಡಿರುವವರಿಗೆ” ಎಂಬುದಾಗಿ ಅವನು ತನ್ನ ವಾಚಕರನ್ನು ಸಂಬೋಧಿಸುತ್ತಾನೆ. (2 ಪೇತ್ರ 1:1, NW) ಇಲ್ಲಿ “ನಂಬಿಕೆ” ಎಂಬ ಪದದ ಅರ್ಥವು ಪ್ರಾಯಶಃ “ದೃಢವಾದ ಮನಗಾಣಿಕೆ” ಎಂದಾಗಿದ್ದು, ಅದು, ಶಾಸ್ತ್ರಗಳಲ್ಲಿ ಕೆಲವೊಮ್ಮೆ “ಸತ್ಯ” ಎಂದು ಕರೆಯಲ್ಪಡುವ ಕ್ರೈಸ್ತ ವಿಶ್ವಾಸಗಳ ಅಥವಾ ಬೋಧನೆಗಳ ಸಂಗ್ರಹವನ್ನು ಸೂಚಿಸುತ್ತದೆ. (ಗಲಾತ್ಯ 5:7; 2 ಪೇತ್ರ 2:2; 2 ಯೋಹಾನ 1) “ನಂಬಿಕೆ” ಎಂಬ ಪದವನ್ನು ಅನೇಕ ವೇಳೆ, ಒಬ್ಬ ವ್ಯಕ್ತಿ ಅಥವಾ ವಸ್ತುವಿನ ಮೇಲಿಡುವ ವಿಶ್ವಾಸ ಅಥವಾ ನೆಚ್ಚಿಕೆಯ ಸಾಮಾನ್ಯ ಅರ್ಥದಲ್ಲಿ ಉಪಯೋಗಿಸುವ ಬದಲಿಗೆ ಮೇಲಿನ ಅರ್ಥದಲ್ಲಿ ಉಪಯೋಗಿಸಲಾಗಿದೆ.—ಅ. ಕೃತ್ಯಗಳು 6:7; 2 ಕೊರಿಂಥ 13:5; ಗಲಾತ್ಯ 6:10; ಎಫೆಸ 4:5; ಯೂದ 3.
9. ಪೇತ್ರನ ಶುಭಾಶಯವು ಅನ್ಯರಿಗೆ ಏಕೆ ವಿಶೇಷವಾಗಿ ಹಾರ್ದಿಕವಾಗಿ ಧ್ವನಿಸಿದ್ದಿರಬೇಕು?
9 ಪೇತ್ರನ ಶುಭಾಶಯಗಳು ಯೆಹೂದ್ಯೇತರ ಓದುಗರಿಗೆ ವಿಶೇಷವಾಗಿ ಹಾರ್ದಿಕವಾಗಿ ಧ್ವನಿಸಿದ್ದಿರಬೇಕು. ಯೆಹೂದ್ಯರಿಗೆ ಅನ್ಯರೊಂದಿಗೆ ಯಾವ ವ್ಯವಹಾರವೂ ಇದ್ದಿರಲಿಲ್ಲ. ಅವರು ಅನ್ಯರನ್ನು ತುಚ್ಫವಾಗಿಯೂ ನೋಡುತ್ತಿದ್ದರು. ಮತ್ತು ಕ್ರೈಸ್ತರಾಗಿ ಪರಿಣಮಿಸಿದ್ದ ಯೆಹೂದ್ಯರಲ್ಲಿಯೂ ಅನ್ಯರ ವಿಷಯದಲ್ಲಿ ಅವಿಚಾರಾಭಿಪ್ರಾಯವು ಮುಂದುವರಿಯುತ್ತಿತ್ತು. (ಲೂಕ 10:29-37; ಯೋಹಾನ 4:9; ಅ. ಕೃತ್ಯಗಳು 10:28) ಆದರೂ, ಹುಟ್ಟು ಯೆಹೂದ್ಯನೂ ಯೇಸು ಕ್ರಿಸ್ತನ ಅಪೊಸ್ತಲನೂ ಆದ ಪೇತ್ರನು, ತನ್ನ ಓದುಗರಾದ ಯೆಹೂದ್ಯರೂ ಅನ್ಯರೂ ಒಂದೇ ನಂಬಿಕೆಯಲ್ಲಿ ಪಾಲಿಗರೆಂದೂ ತನ್ನೊಂದಿಗೆ ಸುಯೋಗಭಾಗಿಗಳೆಂದೂ ಹೇಳಿದನು.
10. ಪೇತ್ರನ ಶುಭಾಶಯದಿಂದ ನಾವು ಯಾವ ಪಾಠಗಳನ್ನು ಕಲಿತುಕೊಳ್ಳಬಲ್ಲೆವು?
10 ಪೇತ್ರನ ಶುಭಾಶಯಗಳು ಇಂದು ನಮಗೆ ಕಲಿಸುವ ಉತ್ತಮ ಪಾಠಗಳ ಕುರಿತು ಯೋಚಿಸಿರಿ. ದೇವರು ಪಕ್ಷಪಾತಿಯಲ್ಲ; ಒಂದು ಕುಲವನ್ನೊ ಜನಾಂಗವನ್ನೊ ಆತನು ಇನ್ನೊಂದಕ್ಕಿಂತ ಹೆಚ್ಚಾಗಿ ಮೆಚ್ಚುವುದಿಲ್ಲ. (ಅ. ಕೃತ್ಯಗಳು 10:34, 35; 11:1, 17; 15:3-9) ಯೇಸು ತಾನೇ ಕಲಿಸಿದಂತೆ, ಕ್ರೈಸ್ತರೆಲ್ಲರೂ ಸಹೋದರರು. ನಮ್ಮಲ್ಲಿ ಯಾರೂ ತಾವು ಶ್ರೇಷ್ಠರೆಂದು ಎಣಿಸಬಾರದು. ಅಲ್ಲದೆ, ಪೇತ್ರನ ಶುಭಾಶಯವು, ನಾವು ನಿಶ್ಚಯವಾಗಿಯೂ, ಪೇತ್ರನಲ್ಲಿ ಮತ್ತು ಅವನ ಜೊತೆ ಅಪೊಸ್ತಲರಲ್ಲಿದ್ದ ನಂಬಿಕೆಯನ್ನು “ಸಮಾನ ಸುಯೋಗದಲ್ಲಿ” ಹಿಡಿದಿರುವ ಲೋಕವ್ಯಾಪಕವಾದ ಒಂದು ಭ್ರಾತೃತ್ವವಾಗಿರುತ್ತೇವೆಂಬುದನ್ನು ಒತ್ತಿಹೇಳುತ್ತದೆ.—ಮತ್ತಾಯ 23:8; 1 ಪೇತ್ರ 5:9.
ಜ್ಞಾನ ಮತ್ತು ದೇವರ ವಾಗ್ದಾನಗಳು
11. ತನ್ನ ಶುಭಾಶಯಗಳ ಬಳಿಕ ಪೇತ್ರನು ಮಹತ್ತ್ವದ ಯಾವ ವಿಷಯಗಳನ್ನು ಒತ್ತಿಹೇಳುತ್ತಾನೆ?
11 ತನ್ನ ಶುಭಾಶಯಗಳ ಬಳಿಕ ಪೇತ್ರನು ಬರೆಯುವುದು: “ಅಪಾತ್ರ ದಯೆಯೂ ಶಾಂತಿಯೂ ನಿಮಗೆ ವೃದ್ಧಿಯಾಗುವಂತಾಗಲಿ.” ಅಪಾತ್ರ ದಯೆ ಮತ್ತು ಶಾಂತಿ ನಮಗೆ ಹೇಗೆ ವೃದ್ದಿಯಾಗಲಿಕ್ಕಿದ್ದವು? “ದೇವರ ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನದ ಮೂಲಕ,” ಎಂದು ಪೇತ್ರನು ಉತ್ತರಿಸುತ್ತಾನೆ. ಬಳಿಕ ಅವನು ಹೇಳುವುದು: “ದೈವಿಕ ಶಕ್ತಿಯು ನಮಗೆ ಜೀವ ಮತ್ತು ದಿವ್ಯ ಭಕ್ತಿಗೆ ಸಂಬಂಧ ಪಟ್ಟ ಸಕಲ ವಿಷಯಗಳನ್ನು ನಮಗೆ ಮುಕ್ತವಾಗಿ ಕೊಟ್ಟಿದೆ.” ಆದರೆ ನಾವು ಈ ಮಹತ್ತಾದ ವಿಷಯಗಳನ್ನು ಹೇಗೆ ಪಡೆದುಕೊಳ್ಳುತ್ತೇವೆ? “ನಮ್ಮನ್ನು ಮಹಿಮೆ ಮತ್ತು ಗುಣಾತಿಶಯದ ಮೂಲಕ ಕರೆದಾತನ ನಿಷ್ಕೃಷ್ಟ ಜ್ಞಾನದ ಮುಖಾಂತರ.” ಹೀಗೆ, ದೇವರ ಮತ್ತು ಆತನ ಮಗನ ನಿಷ್ಕೃಷ್ಟ ಜ್ಞಾನವು ಅವಶ್ಯವೆಂದು ಪೇತ್ರನು ಎರಡಾವರ್ತಿ ಒತ್ತಿಹೇಳುತ್ತಾನೆ.—2 ಪೇತ್ರ 1:2, 3, NW; ಯೋಹಾನ 17:3.
12. (ಎ) ಪೇತ್ರನು ನಿಷ್ಕೃಷ್ಟ ಜ್ಞಾನದ ಪ್ರಾಧಾನ್ಯವನ್ನು ಏಕೆ ಒತ್ತಿ ಹೇಳುತ್ತಾನೆ? (ಬಿ) ದೇವರ ವಾಗ್ದಾನಗಳನ್ನು ಅನುಭವಿಸಬೇಕಾದರೆ, ನಾವು ಪ್ರಥಮವಾಗಿ ಏನನ್ನು ಮಾಡಿದ್ದಿರಬೇಕು?
12 ಪೇತ್ರನು 2ನೆಯ ಅಧ್ಯಾಯದಲ್ಲಿ ಯಾರ ಕುರಿತು ಎಚ್ಚರಿಸುತ್ತಾನೊ ಆ “ಸುಳ್ಳು ಬೋಧಕರು” ಕ್ರೈಸ್ತರನ್ನು ವಂಚಿಸಲು “ನಕಲಿ ಮಾತುಗಳನ್ನು” ಉಪಯೋಗಿಸುತ್ತಾರೆ. ಈ ರೀತಿಯಲ್ಲಿ ಸುಳ್ಳು ಬೋಧಕರು ಅವರನ್ನು, ಅವರು ವಿಮೋಚನೆ ಹೊಂದಿದ್ದ ಅನೈತಿಕತೆಗೆ ಹಿಂದೆ ಹೋಗುವಂತೆ ಪ್ರೇರಿಸಲು ಪ್ರಯತ್ನಿಸುತ್ತಾರೆ. ಯಾರು “ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನ [“ನಿಷ್ಕೃಷ್ಟ ಜ್ಞಾನ” NW]”ದಿಂದ ರಕ್ಷಿಸಲ್ಪಟ್ಟಿದ್ದು, ತದನಂತರ ಅಂತಹ ವಂಚನೆಗೆ ಬಲಿಬೀಳುತ್ತಾರೋ ಅವರಿಗೆ, ಅದರ ಪರಿಣಾಮಗಳು ವಿಪತ್ಕಾರಕವಾಗಿವೆ. (2 ಪೇತ್ರ 2:1-3, 20) ಈ ಸಮಸ್ಯೆಯನ್ನು ಕೊನೆಗೆ ಚರ್ಚಿಸುವ ಮುಂಭಾವನೆಯಿಂದ, ಪೇತ್ರನು ತನ್ನ ಪತ್ರದ ಮೊದಲಲ್ಲಿಯೇ, ದೇವರ ದೃಷ್ಟಿಯಲ್ಲಿ ನಿರ್ಮಲವಾದ ನಿಲುವನ್ನು ಕಾಪಾಡಿಕೊಳ್ಳುವುದರಲ್ಲಿ ನಿಷ್ಕೃಷ್ಟ ಜ್ಞಾನದ ಪಾತ್ರವನ್ನು ಒತ್ತಿಹೇಳುತ್ತಾನೆಂಬುದು ಸುಸ್ಪಷ್ಟವಾಗುತ್ತದೆ. “ನಾವು ಅಮೂಲ್ಯವಾದ ಮತ್ತು ಅತಿ ಮಹತ್ತ್ವದ ವಾಗ್ದಾನಗಳ ಮೂಲಕ ದೈವಿಕ ಸ್ವಭಾವದವರಾಗುವಂತೆ, ಆತನು ಇವುಗಳನ್ನು ನಮಗೆ ಮುಕ್ತವಾಗಿ ಕೊಟ್ಟಿದ್ದಾನೆ” ಎಂದು ಪೇತ್ರನು ಗಮನಿಸುತ್ತಾನೆ. ಆದರೂ ನಮ್ಮ ನಂಬಿಕೆಯ ಅವಿಭಾಜ್ಯ ಭಾಗವಾದ ಈ ವಾಗ್ದಾನಗಳನ್ನು ಅನುಭವಿಸುವರೆ, ನಾವು ಪ್ರಥಮವಾಗಿ “ಭೋಗಾಪೇಕ್ಷೆಯ ಮೂಲಕ ಈ ಜಗತ್ತಿನಲ್ಲಿರುವ ಭ್ರಷ್ಟತೆಯಿಂದ ಪಲಾಯನ” ಮಾಡಬೇಕೆಂದು ಪೇತ್ರನು ಹೇಳುತ್ತಾನೆ.—2 ಪೇತ್ರ 1:4, NW.
13. ಅಭಿಷಿಕ್ತ ಕ್ರೈಸ್ತರೂ “ಬೇರೆ ಕುರಿಗಳೂ” ಏನನ್ನು ಬಿಗಿಯಾಗಿ ಹಿಡಿದುಕೊಳ್ಳಲು ನಿಶ್ಚಯಿಸಿದ್ದಾರೆ?
13 ದೇವರ ವಾಗ್ದಾನಗಳನ್ನು ನೀವು ಹೇಗೆ ವೀಕ್ಷಿಸುತ್ತೀರಿ? ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರು ವೀಕ್ಷಿಸುವಂತೆಯೊ? 1991ರಲ್ಲಿ, ಎಪ್ಪತ್ತೈದಕ್ಕೂ ಹೆಚ್ಚು ವರ್ಷಕಾಲ ಪೂರ್ಣ ಸಮಯದ ಶುಶ್ರೂಷೆಯನ್ನು ಬೆನ್ನಟ್ಟಿದ್ದ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಫ್ರೆಡ್ರಿಕ್ ಫ್ರಾನ್ಸ್, ಕ್ರಿಸ್ತನೊಂದಿಗೆ ಆಳುವ ನಿರೀಕ್ಷೆಯಿರುವವರ ಅನಿಸಿಕೆಗಳ ಒಟ್ಟು ಅಭಿಪ್ರಾಯಗಳನ್ನು ಹೇಳಿದರು: “ನಾವು ಈ ಗಳಿಗೆಯ ತನಕವೂ ಬಿಗಿಯಾಗಿ ಹಿಡಿದಿರುತ್ತೇವೆ ಮತ್ತು ದೇವರು ವಾಸ್ತವವಾಗಿ ತನ್ನ ‘ಅಮೂಲ್ಯವಾದ ಮತ್ತು ಅತಿ ಮಹತ್ವದ ವಾಗ್ದಾನಗಳಿಗೆ’ ನಂಬಿಗಸ್ತನಾಗಿದ್ದಾನೆಂದು ರುಜುಪಡಿಸುವ ತನಕ ನಾವು ಬಿಗಿಯಾಗಿ ಹಿಡಿದುಕೊಂಡಿರುವೆವು.” ಸಹೋದರ ಫ್ರಾನ್ಸ್, ಸ್ವರ್ಗೀಯ ಪುನರುತ್ಥಾನದ ವಿಷಯದ ದೇವರ ವಾಗ್ದಾನದಲ್ಲಿ ಭರವಸೆಯುಳ್ಳವರಾಗಿದ್ದರು ಮತ್ತು 99 ವರ್ಷಪ್ರಾಯದಲ್ಲಿ ಅವರು ಸಾಯುವ ತನಕ ಅವರು ತಮ್ಮ ನಂಬಿಕೆಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು. (1 ಕೊರಿಂಥ 15:42-44; ಫಿಲಿಪ್ಪಿ 3:13, 14; 2 ತಿಮೊಥೆಯ 2:10-12) ತದ್ರೀತಿ, ಲಕ್ಷಾಂತರ ಮಂದಿ, ಜನರು ಸಂತೋಷದಿಂದ ನಿತ್ಯವಾಗಿ ಬದುಕಲಿರುವ ಭೂಪ್ರಮೋದವನದ ಕುರಿತ ದೇವರ ವಾಗ್ದಾನದ ಮೇಲೆ ಕೇಂದ್ರೀಕರಿಸುತ್ತ, ನಂಬಿಕೆಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ನೀವು ಇವರಲ್ಲಿ ಒಬ್ಬರೊ?—ಲೂಕ 23:43; 2 ಪೇತ್ರ 3:13; ಪ್ರಕಟನೆ 21:3, 4.
ದೇವರ ವಾಗ್ದಾನಗಳಿಗೆ ಪ್ರತಿವರ್ತನೆ
14. ನಂಬಿಕೆಗೆ ಭರ್ತಿಮಾಡುವಂತೆ ಸದ್ಗುಣವನ್ನು ಪ್ರಥಮ ಗುಣವಾಗಿ ಪೇತ್ರನು ಏಕೆ ಹೇಳಿದ್ದಾನೆ?
14 ದೇವರು ವಾಗ್ದಾನ ಮಾಡಿರುವುವುಗಳಿಗಾಗಿ ನಾವು ಕೃತಜ್ಞರಾಗಿದ್ದೇವೊ? ಹಾಗಿರುವಲ್ಲಿ, ನಾವು ಅದನ್ನು ತೋರಿಸಬೇಕೆಂದು ಪೇತ್ರನು ವಾದಿಸುತ್ತಾನೆ. “ಹೌದು, ಈ ಕಾರಣಕ್ಕಾಗಿಯೇ” (ಅತಿ ಅಮೂಲ್ಯ ವಾಗ್ದಾನಗಳನ್ನು ದೇವರು ಕೊಟ್ಟದ್ದಕ್ಕಾಗಿ), ನಾವು ಕ್ರಿಯಾಶೀಲರಾಗಿರಲು ನಿಜವಾದ ಪ್ರಯತ್ನವನ್ನು ಮಾಡಬೇಕು. ನಾವು ಬರಿಯ ನಂಬಿಕೆಯಲ್ಲಿರುವುದರಲ್ಲಿ ಅಥವಾ ಬೈಬಲ್ ಸತ್ಯದ ಬರಿಯ ಪರಿಚಯ ಮಾಡಿಕೊಳ್ಳುವುದರಲ್ಲಿ ತೃಪ್ತರಾಗಿರಸಾಧ್ಯವಿಲ್ಲ. ಅದು ಸಾಲದು! ಪ್ರಾಯಶಃ ಪೇತ್ರನ ದಿನಗಳಲ್ಲಿ ಸಭೆಗಳಲ್ಲಿದ್ದ ಕೆಲವರು ನಂಬಿಕೆಯ ಕುರಿತು ತುಂಬ ಮಾತನಾಡಿದರೂ ಅನೈತಿಕ ನಡತೆಯಲ್ಲಿ ಸಿಕ್ಕಿಕೊಂಡರು. ಅವರ ವರ್ತನೆ ಗುಣವಂತಿಕೆಯದ್ದಾಗಿರುವ ಆವಶ್ಯಕತೆಯಿತ್ತು. ಆದಕಾರಣ ಪೇತ್ರನು ಉತ್ತೇಜಿಸುವುದು: “ನಿಮ್ಮ ನಂಬಿಕೆಗೆ ಸದ್ಗುಣವನ್ನು ಭರ್ತಿಮಾಡಿರಿ.”—2 ಪೇತ್ರ 1:5, NW; ಯಾಕೋಬ 2:14-17.
15. (ಎ) ಜ್ಞಾನವು, ನಂಬಿಕೆಗೆ ಭರ್ತಿಮಾಡುವ ಗುಣವಾದ ಸದ್ಗುಣದ ಬಳಿಕ ಏಕೆ ತಿಳಿಸಲ್ಪಟ್ಟಿದೆ? (ಬಿ) ನಂಬಿಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳಲು ಬೇರೆ ಯಾವ ಗುಣಗಳು ನಮ್ಮನ್ನು ಸಜ್ಜುಗೊಳಿಸುವವು?
15 ಸದ್ಗುಣದ ಕುರಿತು ಹೇಳಿದ ಮೇಲೆ, ನಮ್ಮ ನಂಬಿಕೆಗೆ ಭರ್ತಿಮಾಡಬೇಕಾದ ಅಥವಾ ಕೂಡಿಸಬೇಕಾದ ಇನ್ನೂ ಆರು ಗುಣಗಳನ್ನು ಪೇತ್ರನು ಪಟ್ಟಿಮಾಡುತ್ತಾನೆ. ನಾವು “ನಂಬಿಕೆಯಲ್ಲಿ ದೃಢವಾಗಿ ನಿಲ್ಲ”ಬೇಕಾದರೆ ಇವುಗಳಲ್ಲಿ ಪ್ರತಿಯೊಂದೂ ಅಗತ್ಯ. (1 ಕೊರಿಂಥ 16:13) ಧರ್ಮಭ್ರಷ್ಟರು ‘ಶಾಸ್ತ್ರಗಳಿಗೆ ತಪ್ಪಾದ ಅರ್ಥವನ್ನು ಕೊಟ್ಟು,’ ‘ವಂಚನೆಯ ಬೋಧನೆಗಳನ್ನು’ ಹರಡಿಸುವುದರಿಂದ, ಪೇತ್ರನು ಮುಂದಕ್ಕೆ ಜ್ಞಾನವನ್ನು ಮಹತ್ತ್ವವುಳ್ಳದ್ದಾಗಿ ಪಟ್ಟಿಮಾಡುತ್ತ, “ನಿಮ್ಮ ಸದ್ಗುಣಕ್ಕೆ ಜ್ಞಾನವನ್ನು [ಭರ್ತಿಮಾಡಿರಿ]” ಎಂದು ಹೇಳುತ್ತಾನೆ. ಆಮೇಲೆ ಅವನು ಮುಂದುವರಿಸುವುದು: “ನಿಮ್ಮ ಜ್ಞಾನಕ್ಕೆ ಆತ್ಮನಿಯಂತ್ರಣವನ್ನು, ನಿಮ್ಮ ಆತ್ಮನಿಯಂತ್ರಣಕ್ಕೆ ತಾಳ್ಮೆಯನ್ನು, ನಿಮ್ಮ ತಾಳ್ಮೆಗೆ ದಿವ್ಯ ಭಕ್ತಿಯನ್ನು, ನಿಮ್ಮ ದಿವ್ಯ ಭಕ್ತಿಗೆ ಸೋದರ ಮಮತೆಯನ್ನು, ಮತ್ತು ನಿಮ್ಮ ಸೋದರ ಮಮತೆಗೆ ಪ್ರೀತಿಯನ್ನು [ಕೂಡಿಸಿರಿ].”—2 ಪೇತ್ರ 1:5-7, NW; 2:12, 13; 3:16.
16. ಪೇತ್ರನು ಕೊಟ್ಟಿರುವ ಗುಣಗಳನ್ನು ನಂಬಿಕೆಗೆ ಭರ್ತಿಮಾಡುವುದರಿಂದ ಏನು ಸಂಭವಿಸುವುದು, ಹಾಗೆ ಮಾಡದಿದ್ದರೆ ಏನಾಗುವುದು?
16 ಈ ಏಳು ಗುಣಗಳನ್ನು ನಮ್ಮ ನಂಬಿಕೆಗೆ ಭರ್ತಿಮಾಡಿದಾಗ ಏನಾಗುವುದು? ಪೇತ್ರನು ಉತ್ತರ ಕೊಡುವುದು: “ಈ ವಿಷಯಗಳು ನಿಮ್ಮಲ್ಲಿದ್ದು ಉಕ್ಕಿ ಹರಿಯುವಲ್ಲಿ, ಅವು ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನದ ಸಂಬಂಧದಲ್ಲಿ ನೀವು ಒಂದೋ ನಿಷ್ಕ್ರಿಯರಾಗಿರುವುದನ್ನು ಇಲ್ಲವೆ ನಿಷ್ಫಲರಾಗಿರುವುದನ್ನು ತಡೆಯುವುವು.” (2 ಪೇತ್ರ 1:8, NW) ಇನ್ನೊಂದು ಕಡೆಯಲ್ಲಿ, ಪೇತ್ರನು ಹೇಳುವುದು: “ಈ ವಿಷಯಗಳು ಯಾವನಲ್ಲಿಯಾದರೂ ಇಲ್ಲದಿರುವಲ್ಲಿ, ಅವನು ಕುರುಡನಾಗಿರುತ್ತ, ತನ್ನ ಕಣ್ಣುಗಳನ್ನು ಬೆಳಕಿಗೆ ಮುಚ್ಚಿಕೊಂಡು, ತನ್ನ ಹಿಂದಿನ ಪಾಪಗಳಿಂದ ತನಗಾಗಿದ್ದ ಶುದ್ಧಿಯನ್ನು ಮರೆತಿರುತ್ತಾನೆ.” (2 ಪೇತ್ರ 1:9, NW) ಪೇತ್ರನು “ನಿಮ್ಮ” ಮತ್ತು “ನಮ್ಮ” ಎಂಬುದರ ಉಪಯೋಗದಿಂದ, “ಯಾವನಲ್ಲಿಯಾದರೂ,” “ಅವನು,” ಮತ್ತು “ತನ್ನ” ಎಂಬುದಾಗಿ ಬದಲಿಸುತ್ತಾನೆಂಬುದನ್ನು ಗಮನಿಸಿ. ದುಃಖಕರವಾಗಿ, ಕೆಲವರು ಕುರುಡರು, ಮರೆಯುವ ಸ್ವಭಾವದವರು ಮತ್ತು ಅಶುದ್ಧರು ಆಗಿರುವುದಾದರೂ, ಓದುಗನು ಅವರಲ್ಲಿ ಒಬ್ಬನೆಂಬುದನ್ನು ಪೇತ್ರನು ದಯಾಭಾವದಿಂದ ಸೂಚಿಸುವುದಿಲ್ಲ.—2 ಪೇತ್ರ 2:2.
ತನ್ನ ಸಹೋದರರನ್ನು ಬಲಪಡಿಸುವುದು
17. “ಈ ವಿಷಯಗಳನ್ನು” ಆಚರಿಸಲು ಪೇತ್ರನು ಮಾಡಿದ ಕೋಮಲವಾದ ಬೇಡಿಕೆಯನ್ನು ಯಾವುದು ಪ್ರೇರಿಸಿದ್ದಿರಬಹುದು?
17 ವಿಶೇಷವಾಗಿ ಹೊಸಬರು ಸುಲಭವಾಗಿ ವಂಚಿತರಾಗಬಹುದೆಂದು ಪ್ರಾಯಶಃ ಗುರುತಿಸುತ್ತ, ಪೇತ್ರನು ಕೋಮಲತೆಯಿಂದ ಅವರನ್ನು ಪ್ರೋತ್ಸಾಹಿಸುತ್ತಾನೆ: “ಸಹೋದರರೇ, ನಿಮ್ಮ ದೈವಪ್ರೇರಣೆಯ ಕರೆಯನ್ನು ಮತ್ತು ಆಯ್ಕೆಯನ್ನು ನಿಮ್ಮೊಳಗೆ ಖಾತರಿ ಮಾಡಿಕೊಳ್ಳಲು ಇನ್ನೂ ಹೆಚ್ಚಿನ ಕಾರಣವಾಗಿ ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ; ಏಕೆಂದರೆ ನೀವು ಈ ವಿಷಯಗಳನ್ನು ಮಾಡುತ್ತ ಹೋಗುವಲ್ಲಿ, ಎಂದಿಗೂ ವಿಫಲಗೊಳ್ಳಲಾರಿರಿ” (NW). (2 ಪೇತ್ರ 1:10; 2:18) ತಮ್ಮ ನಂಬಿಕೆಗೆ ಈ ಏಳು ವಿಷಯಗಳನ್ನು ಭರ್ತಿಮಾಡುವ ಅಭಿಷಿಕ್ತ ಕ್ರೈಸ್ತರು ಒಂದು ಮಹಾ ಪ್ರತಿಫಲವನ್ನು ಪಡೆಯುವರು. ಪೇತ್ರನು ಹೇಳುವುದು: “ನಿಮಗೆ, ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ಶಾಶ್ವತ ರಾಜ್ಯದೊಳಕ್ಕೆ ಪ್ರವೇಶವು ಧಾರಾಳವಾಗಿ ಭರ್ತಿಮಾಡಲ್ಪಡುವುದು.” (2 ಪೇತ್ರ 1:11, NW) “ಬೇರೆ ಕುರಿಗಳು” ದೇವರ ರಾಜ್ಯದ ಭೂಕ್ಷೇತ್ರದಲ್ಲಿ ನಿತ್ಯ ಬಾಧ್ಯತೆಯನ್ನು ಪಡೆಯುವರು.—ಯೋಹಾನ 10:16; ಮತ್ತಾಯ 25:33, 34.
18. ಪೇತ್ರನು ತನ್ನ ಸಹೋದರರಿಗೆ “ಜ್ಞಾಪಕಹುಟ್ಟಿಸಲು ಸದಾ” ಪ್ರವೃತ್ತನಾಗಿರುವುದೇಕೆ?
18 ಪೇತ್ರನು ತನ್ನ ಸಹೋದರರಿಗೆ ಅಂತಹ ಮಹಾ ಪ್ರತಿಫಲವನ್ನು ಯಥಾರ್ಥವಾಗಿ ಬಯಸುತ್ತಾನೆ. ಅವನು ಬರೆಯುವುದು: “ಈ ಕಾರಣಕ್ಕಾಗಿ, ನೀವು ಈ ವಿಷಯಗಳನ್ನು ತಿಳಿದಿದ್ದು ಸತ್ಯದಲ್ಲಿ ಸ್ಥಿರವಾಗಿ ನೆಲೆಗೊಂಡದ್ದರಿಂದ, ನಿಮಗೆ ಇವುಗಳನ್ನು ಜ್ಞಾಪಕ ಹುಟ್ಟಿಸಲು ಸದಾ ಪ್ರವೃತ್ತನಾಗಿರುವೆನು.” (2 ಪೇತ್ರ 1:12, NW) ಪೇತ್ರನು ಸ್ಟೆರಿಸೊ ಎಂಬ ಗ್ರೀಕ್ ಪದವನ್ನು ಉಪಯೋಗಿಸುತ್ತಾನೆ. ಅದನ್ನು ಇಲ್ಲಿ “ಸ್ಥಿರವಾಗಿ ನೆಲೆ”ಯೂರು ಎಂದು ಭಾಷಾಂತರಿಸಿದೆ, ಆದರೆ ಯೇಸು ಪೇತ್ರನಿಗೆ ಹಿಂದೆ ಕೊಟ್ಟ ಬುದ್ಧಿವಾದವಾದ, “ನಿನ್ನ ಸಹೋದರರನ್ನು ದೃಢಪಡಿಸು” ಎಂಬುದರಲ್ಲಿ “ದೃಢಪಡಿಸು” ಎಂಬುದಾಗಿ ಭಾಷಾಂತರಿಸಿದೆ. (ಲೂಕ 22:32) ಆ ಪದದ ಉಪಯೋಗವು, ಪೇತ್ರನು ಅವನ ಯಾಜಮಾನನಿಂದ ಪಡೆದುಕೊಂಡ ಆ ಪ್ರಬಲವಾದ ಬುದ್ಧಿವಾದವನ್ನು ಜ್ಞಾಪಿಸಿಕೊಳ್ಳುತ್ತಾನೆ ಎಂಬುದನ್ನು ಸೂಚಿಸಬಹುದು. ಪೇತ್ರನು ಈಗ ಹೇಳುವುದು: “ನಾನು ಈ ಗುಡಾರ [ಮಾನವ ದೇಹ]ದಲ್ಲಿ ಇರುವಷ್ಟು ಕಾಲ, ನಿಮಗೆ ಜ್ಞಾಪಕ ಹುಟ್ಟಿಸುವ ಮೂಲಕ ನಿಮ್ಮನ್ನು ಹುರಿದುಂಬಿಸುವುದು ಯೋಗ್ಯವೆಂದು ಎಣಿಸುತ್ತೇನೆ. ನನ್ನ ಗುಡಾರವನ್ನು ಕಳಚಿಹಾಕುವುದು ಬೇಗನೆ ಬರಲಿದೆಯೆಂಬುದು ನನಗೆ ತಿಳಿದಿದೆ.”—2 ಪೇತ್ರ 1:13, 14, NW.
19. ನಮಗೆ ಇಂದು ಯಾವ ಸಹಾಯಗಳು ಅಗತ್ಯ?
19 ತನ್ನ ಓದುಗರು “ಸತ್ಯದಲ್ಲಿ ಸ್ಥಿರವಾಗಿ ನೆಲೆ”ಗೊಂಡವರೆಂದು ಪೇತ್ರನು ಹಿತಕರವಾಗಿ ಹೇಳಿದರೂ, ಅವರ ನಂಬಿಕೆ ಹಡಗೊಡೆತವನ್ನು ಹೊಂದಬಹುದೆಂದು ಅವನು ಗ್ರಹಿಸಿಕೊಳ್ಳುತ್ತಾನೆ. (1 ತಿಮೊಥೆಯ 1:19) ತಾನು ಬೇಗನೆ ಸಾಯಲಿರುವೆನೆಂದು ಅವನು ತಿಳಿದಿದ್ದರೂ, ತನ್ನ ಸಹೋದರರು ತಮ್ಮನ್ನು ಆತ್ಮಿಕವಾಗಿ ಬಲಪಡಿಸಿಕೊಳ್ಳಲು ತರುವಾಯ ಜ್ಞಾಪಿಸಿಕೊಳ್ಳಬಹುದಾದ ವಿಷಯಗಳನ್ನು ಹೇಳುವ ಮೂಲಕ ಅವರನ್ನು ದೃಢಗೊಳಿಸುತ್ತಾನೆ. (2 ಪೇತ್ರ 1:15; 3:12, 13) ತದ್ರೀತಿ, ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲಬೇಕಾದರೆ ನಮಗೆ ಸತತವಾದ ಜ್ಞಾಪನಗಳು ಅಗತ್ಯ. ನಾವು ಯಾರೇ ಆಗಿರಲಿ, ಸತ್ಯದಲ್ಲಿ ಎಷ್ಟೇ ಸಮಯ ಇದ್ದಿರಲಿ, ಕ್ರಮದ ಬೈಬಲ್ ವಾಚನ, ವೈಯಕ್ತಿಕ ಅಧ್ಯಯನ ಮತ್ತು ಸಭಾ ಕೂಟಗಳಲ್ಲಿ ಉಪಸ್ಥಿತಿಯನ್ನು ಅಸಡ್ಡೆಮಾಡಸಾಧ್ಯವಿಲ್ಲ. ಕೆಲವರು ಹಾಜರಾಗದಿರುವಿಕೆಗೆ, ತಾವು ತೀರ ದಣಿದಿದ್ದೇವೆಂದೊ, ಕೂಟಗಳು ಪುನರಾವರ್ತಿಸಿ ಬರುತ್ತವೆಯೆಂದೊ ಅಥವಾ ಅವು ಆಸಕ್ತಿಭರಿತವಾಗಿ ನಡೆಸಲ್ಪಡುವುದಿಲ್ಲವೆಂದೊ ನೆಪಗಳನ್ನು ಕೊಡುತ್ತಾರೆ. ಆದರೆ ನಮ್ಮಲ್ಲಿ ಯಾವನಾದರೂ ವಿಪರೀತ ಆತ್ಮವಿಶ್ವಾಸವುಳ್ಳವನಾಗಿರುವಲ್ಲಿ ಎಷ್ಟು ಬೇಗನೆ ನಾವು ನಂಬಿಕೆಯನ್ನು ಕಳೆದುಕೊಳ್ಳಬಲ್ಲವೆಂಬುದು ಪೇತ್ರನಿಗೆ ತಿಳಿದಿತ್ತು.—ಮಾರ್ಕ 14:66-72; 1 ಕೊರಿಂಥ 10:12; ಇಬ್ರಿಯ 10:25.
ನಮ್ಮ ನಂಬಿಕೆಗೆ ಸ್ಥಿರವಾದ ಆಧಾರ
20, 21. ರೂಪಾಂತರವು ಪೇತ್ರನ ಮತ್ತು ನಮ್ಮನ್ನೊಳಗೊಂಡಿರುವ ಆತನ ಪತ್ರಗಳ ವಾಚಕರ ನಂಬಿಕೆಯನ್ನು ಹೇಗೆ ದೃಢಪಡಿಸಿತು?
20 ನಮ್ಮ ನಂಬಿಕೆಯು ಜಾಣತನದಿಂದ ಕಂಡುಹಿಡಿಯಲ್ಪಟ್ಟ ಕೇವಲ ಮಿಥ್ಯೆಗಳ ಮೇಲೆ ಆಧಾರಿಸಿದೆಯೆ? ಪೇತ್ರನು ಒತ್ತಿ ಹೇಳುತ್ತ ಉತ್ತರಿಸುವುದು: “ಇಲ್ಲ, ನಾವು ನಿಮಗೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಸಾನ್ನಿಧ್ಯವನ್ನೂ ಪರಿಚಯ ಮಾಡಿಸಿದ್ದು ಚಮತ್ಕಾರದಿಂದ ಕಲ್ಪಿಸಿದ ಸುಳ್ಳು ಕಥೆಗಳನ್ನು ಅನುಸರಿಸಿಯಲ್ಲ, ಅವನ ಭವ್ಯತೆಯ ಪ್ರತ್ಯಕ್ಷ ಸಾಕ್ಷಿಗಳಾಗಿ ಪರಿಣಮಿಸಿದ ಮೂಲಕವೇ.” ಪೇತ್ರ, ಯಾಕೋಬ ಮತ್ತು ಯೋಹಾನರು ಯೇಸುವನ್ನು ರಾಜ್ಯಾಧಿಕಾರದ ದರ್ಶನದಲ್ಲಿ ಕಂಡಾಗ ಅವನ ಸಂಗಡವಿದ್ದರು. ಪೇತ್ರನು ವಿವರಿಸುವುದು: “‘ಇವನು ನನ್ನ ಮಗನು, ನಾನಾಗಿಯೇ ಮೆಚ್ಚಿರುವ ನನ್ನ ಪ್ರಿಯನು,’ ಎಂಬಂತಹ ಮಾತುಗಳು ಭವ್ಯ ಮಹಿಮೆಯ ಮೂಲಕ ಅವನಿಗೆ ನೀಡಲ್ಪಟ್ಟಾಗ ಅವನು ತಂದೆಯಾದ ದೇವರಿಂದ ಗೌರವವನ್ನೂ ಮಹಿಮೆಯನ್ನೂ ಪಡೆದನು. ಹೌದು, ನಾವು ಅವನೊಂದಿಗೆ ಪವಿತ್ರ ಪರ್ವತದಲ್ಲಿದ್ದಾಗ ಸ್ವರ್ಗದಿಂದ ನೀಡಲ್ಪಟ್ಟ ಈ ಮಾತುಗಳನ್ನು ನಾವು ಕೇಳಿದೆವು.”—2 ಪೇತ್ರ 1:16-18, NW.
21 ಪೇತ್ರ, ಯಾಕೋಬ ಮತ್ತು ಯೋಹಾನರು ಆ ದರ್ಶನವನ್ನು ನೋಡಿದಾಗ, ರಾಜ್ಯವು ನಿಶ್ಚಯವಾಗಿಯೂ ಅವರಿಗೆ ವಾಸ್ತವವಾಗಿ ಪರಿಣಮಿಸಿತು! ಪೇತ್ರನು ಗಮನಿಸುವುದು: “ಆದುದರಿಂದ, ಪ್ರವಾದನ ವಾಕ್ಯವು ನಮಗೆ ಹೆಚ್ಚು ನಿಶ್ಚಿತವಾಗಿ ಮಾಡಲ್ಪಟ್ಟಿದೆ; ಮತ್ತು ನೀವು ಅದಕ್ಕೆ ಗಮನ ಕೊಡುವುದನ್ನು ಉತ್ತಮವಾಗಿ ಮಾಡುತ್ತಿದ್ದೀರಿ.” ಹೌದು, ಇಂದು ನಾವು ಸೇರಿರುವ, ಪೇತ್ರನ ಪತ್ರದ ವಾಚಕರಿಗೆ ದೇವರ ರಾಜ್ಯದ ಕುರಿತ ಪ್ರವಾದನೆಗಳಿಗೆ ಗಮನ ಕೊಡಲು ಪ್ರಬಲವಾದ ಕಾರಣವಿದೆ. ನಾವು ಯಾವ ವಿಧದಲ್ಲಿ ಗಮನ ಕೊಡುವುದು ಅಗತ್ಯ? ಪೇತ್ರನು ಉತ್ತರ ಕೊಡುವುದು: “ದಿನವು ಉದಯವಾಗುವ ಮತ್ತು ನಿಮ್ಮ ಹೃದಯದಲ್ಲಿ ಬೆಳ್ಳಿ ಮೂಡುವ ತನಕ, ಕತ್ತಲೆಯ ಸ್ಥಳದಲ್ಲಿ ಉರಿಯುವ ದೀಪಕ್ಕೆ [ಗಮನ] ಕೊಡುವಂತೆ.”—2 ಪೇತ್ರ 1:19, NW; ದಾನಿಯೇಲ 7:13, 14; ಯೆಶಾಯ 9:6, 7.
22. (ಎ) ನಮ್ಮ ಹೃದಯಗಳನ್ನು ಯಾವುದಕ್ಕೆ ಎಚ್ಚರಿಕೆಯಿಂದ ಇರಿಸುವ ಅಗತ್ಯವಿದೆ? (ಬಿ) ನಾವು ಪ್ರವಾದನ ವಾಕ್ಯಕ್ಕೆ ಹೇಗೆ ಗಮನ ಕೊಡುತ್ತೇವೆ?
22 ಪ್ರವಾದನ ವಾಕ್ಯದ ಬೆಳಗುವಿಕೆಯಿಲ್ಲದಿರುವಲ್ಲಿ ನಮ್ಮ ಹೃದಯಗಳು ಕತ್ತಲಾಗಿರುವುವು. ಆದರೆ ಅದಕ್ಕೆ ಗಮನ ಕೊಡುವ ಮೂಲಕ, ಕ್ರೈಸ್ತರ ಹೃದಯಗಳು, ರಾಜ್ಯ ಮಹಿಮೆಯಲ್ಲಿ “ಬೆಳ್ಳಿ”ಯಾದ ಯೇಸು ಕ್ರಿಸ್ತನು ಎದ್ದೇಳುವ ಅರುಣೋದಯಕ್ಕೆ ಎಚ್ಚರವಾಗಿ ಇಡಲ್ಪಟ್ಟಿವೆ. (ಪ್ರಕಟನೆ 22:16) ನಾವು ಇಂದು ಪ್ರವಾದನ ವಾಕ್ಯಕ್ಕೆ ಗಮನ ಕೊಡುವುದು ಹೇಗೆ? ಬೈಬಲ್ ಅಧ್ಯಯನದ ಮೂಲಕ, ಕೂಟಗಳಿಗಾಗಿ ತಯಾರಿಸಿ ಭಾಗವಹಿಸುವ ಮೂಲಕ ಮತ್ತು ‘ಈ ವಿಷಯಗಳ ಕುರಿತು ಮನನ ಮಾಡಿ ಅವುಗಳಲ್ಲಿ ಮಗ್ನರಾಗಿರುವ’ ಮೂಲಕ. (1 ತಿಮೊಥೆಯ 4:15) ಪ್ರವಾದನ ವಾಕ್ಯವು ಕತ್ತಲೆಯ ಸ್ಥಳ (ನಮ್ಮ ಹೃದಯಗಳು)ದಲ್ಲಿ ಉರಿಯುತ್ತಿರುವ ದೀಪದೋಪಾದಿ ಇರಬೇಕಾದರೆ, ಅದು ನಮ್ಮನ್ನು—ನಮ್ಮ ಬಯಕೆಗಳು, ಭಾವನೆಗಳು, ಪ್ರಚೋದನೆಗಳು ಮತ್ತು ಗುರಿಗಳನ್ನು ಗಾಢವಾಗಿ ಪ್ರಭಾವಿಸುವಂತೆ ನಾವು ಬಿಡಬೇಕು. ನಾವು ಬೈಬಲ್ ವಿದ್ಯಾರ್ಥಿಗಳಾಗಿರುವುದು ಆವಶ್ಯಕ, ಏಕೆಂದರೆ 1ನೆಯ ಅಧ್ಯಾಯವನ್ನು ಪೇತ್ರನು ಮುಕ್ತಾಯಗೊಳಿಸುವುದು: “ಶಾಸ್ತ್ರದ ಯಾವ ಪ್ರವಾದನೆಯೂ ಖಾಸಗಿ ಅರ್ಥವಿವರಣೆಯಿಂದ ಉದ್ಭವಿಸುವುದಿಲ್ಲ. ಏಕೆಂದರೆ ಪ್ರವಾದನೆಯು ಎಂದೂ ಮನುಷ್ಯನ ಚಿತ್ತದಿಂದ ಬರಲಿಲ್ಲ, ಬದಲಾಗಿ ಮನುಷ್ಯರು ದೇವರಿಂದ ಪವಿತ್ರಾತ್ಮ ಪ್ರೇರಿತರಾಗಿ ಮಾತಾಡಿದರು.”—2 ಪೇತ್ರ 1:20, 21, NW.
23. 2 ಪೇತ್ರ ಪುಸ್ತಕದ ಮೊದಲನೆಯ ಅಧ್ಯಾಯವು, ವಾಚಕರನ್ನು ಯಾವುದಕ್ಕಾಗಿ ಸಿದ್ಧಗೊಳಿಸಿದೆ?
23 ತನ್ನ ಎರಡನೆಯ ಪತ್ರದ ಆರಂಭದ ಅಧ್ಯಾಯದಲ್ಲಿ, ನಮ್ಮ ಅಮೂಲ್ಯ ನಂಬಿಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳಲು ಬೇಕಾದ ಪ್ರಬಲವಾದ ಪ್ರಚೋದನೆಯನ್ನು ಪೇತ್ರನು ಒದಗಿಸಿದನು. ನಾವೀಗ ಅನುಸರಿಸಿ ಬರುವ ಗಂಭೀರವಾದ ವಿಷಯಗಳ ಪರ್ಯಾಲೋಚನೆಗೆ ಸಿದ್ಧರಾಗಿದ್ದೇವೆ. ಮುಂದಿನ ಲೇಖನವು 2 ಪೇತ್ರ 2ನೆಯ ಅಧ್ಯಾಯವನ್ನು ಚರ್ಚಿಸುವುದು. ಇಲ್ಲಿ ಅಪೊಸ್ತಲನು ಸಭೆಗಳೊಳಗೆ ನುಸುಳಿದ್ದ ಅನೈತಿಕ ಪ್ರಭಾವಗಳ ಪಂಥಾಹ್ವಾನದ ಕುರಿತು ಚರ್ಚಿಸುತ್ತಾನೆ.
ನೆನಪಿದೆಯೆ?
◻ ಪೇತ್ರನು ನಿಷ್ಕೃಷ್ಟ ಜ್ಞಾನದ ಪ್ರಾಧಾನ್ಯವನ್ನು ಏಕೆ ಒತ್ತಿಹೇಳುತ್ತಾನೆ?
◻ ನಂಬಿಕೆಗೆ ಭರ್ತಿಮಾಡಬೇಕಾಗಿದ್ದ ಪ್ರಥಮ ಗುಣವು ಸದ್ಗುಣವಾಗಿರಲು ಕಾರಣವೇನಾಗಿರಬಹುದು?
◻ ಪೇತ್ರನು ತನ್ನ ಸಹೋದರರಿಗೆ ಸದಾ ಜ್ಞಾಪಕಹುಟ್ಟಿಸಲು ಪ್ರವೃತ್ತನಾಗಿರುವುದೇಕೆ?
◻ ಪೇತ್ರನು ನಮ್ಮ ನಂಬಿಕೆಗೆ ಯಾವ ಸ್ಥಿರವಾದ ಆಧಾರವನ್ನು ಒದಗಿಸುತ್ತಾನೆ?
[ಪುಟ 9 ರಲ್ಲಿರುವ ಚಿತ್ರ]
ಪೇತ್ರನ ನ್ಯೂನತೆಗಳು ಅವನು ತನ್ನ ನಂಬಿಕೆಯನ್ನು ತ್ಯಜಿಸುವಂತೆ ಮಾಡಲಿಲ್ಲ