ನಮ್ಮ ನೆರೆಯವರನ್ನು ಪ್ರೀತಿಸುವುದರ ಅರ್ಥವೇನು?
“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.”—ಮತ್ತಾಯ 22:39.
1. ನಾವು ದೇವರನ್ನು ಪ್ರೀತಿಸುತ್ತೇವೆಂದು ಹೇಗೆ ತೋರಿಸುವೆವು?
ಯೆಹೋವನು ತನ್ನ ಆರಾಧಕರಿಂದ ಏನನ್ನು ಕೇಳಿಕೊಳ್ಳುತ್ತಾನೆ? ಇದರ ಉತ್ತರವನ್ನು ಯೇಸು ಸರಳ ಹಾಗೂ ಗಹನವಾದ ಕೆಲವೇ ಮಾತುಗಳಲ್ಲಿ ಸಾರಾಂಶಿಸಿದನು. ಯೆಹೋವನನ್ನು ನಮ್ಮ ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಶಕ್ತಿಯಿಂದ ಪ್ರೀತಿಸುವುದೇ ಅತಿ ಪ್ರಾಮುಖ್ಯ ಆಜ್ಞೆಯಾಗಿದೆ ಎಂದು ಅವನು ಹೇಳಿದನು. (ಮತ್ತಾಯ 22:37, 38; ಮಾರ್ಕ 12:30) ಹಿಂದಿನ ಲೇಖನದಲ್ಲಿ ನಾವು ನೋಡಿದಂತೆ, ದೇವರ ಮೇಲಣ ಪ್ರೀತಿಯಲ್ಲಿ, ಆತನಿಗೆ ವಿಧೇಯರಾಗುವುದು ಮತ್ತು ಆತನು ನಮಗೆ ತೋರಿಸಿರುವ ಪ್ರೀತಿಗೆ ಪ್ರತಿಯಾಗಿ ಆತನ ಆಜ್ಞೆಗಳನ್ನು ಪಾಲಿಸುವುದು ಒಳಗೂಡಿದೆ. ದೇವರನ್ನು ಪ್ರೀತಿಸುವವರಿಗೆ, ಆತನ ಚಿತ್ತವನ್ನು ಮಾಡುವುದು ಒಂದು ಹೊರೆಯಾಗಿರುವುದಿಲ್ಲ; ಬದಲಿಗೆ ಅದು ಅವರಿಗೆ ಹರ್ಷವನ್ನು ತರುತ್ತದೆ.—ಕೀರ್ತನೆ 40:8; 1 ಯೋಹಾನ 5:2, 3.
2, 3. ನಮ್ಮ ನೆರೆಯವನನ್ನು ಪ್ರೀತಿಸಬೇಕೆಂಬ ಆಜ್ಞೆಗೆ ನಾವೇಕೆ ಗಮನಕೊಡತಕ್ಕದು, ಮತ್ತು ಇದರ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ?
2 “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಎರಡನೇ ಅತಿ ಪ್ರಾಮುಖ್ಯ ಆಜ್ಞೆಯು ಮೊದಲನೆಯ ಆಜ್ಞೆಗೆ ಸಂಬಂಧಿಸಿದೆಯೆಂದು ಯೇಸು ಹೇಳಿದನು. (ಮತ್ತಾಯ 22:39) ನಾವೀಗ ಈ ಎರಡನೇ ಆಜ್ಞೆಗೆ ಗಮನಕೊಡುವೆವು, ಮತ್ತು ಹೀಗೆ ಮಾಡಲು ನಮಗೆ ಸಕಾರಣವಿದೆ. ಏಕೆಂದರೆ, ನಾವೀಗ ಜೀವಿಸುತ್ತಿರುವ ಸಮಯಗಳಲ್ಲಿ, ಸ್ವಾರ್ಥಪರ ಹಾಗೂ ತಪ್ಪಾದ ರೀತಿಯ ಪ್ರೀತಿಯು ಸರ್ವಸಾಮಾನ್ಯವಾಗಿದೆ. “ಕಡೇ ದಿವಸಗಳ” ಕುರಿತಾಗಿ ಅಪೊಸ್ತಲ ಪೌಲನು ಕೊಟ್ಟ ಪ್ರೇರಿತ ವರ್ಣನೆಯಲ್ಲಿ, ಜನರು ಇತರರನ್ನಲ್ಲ ಬದಲಾಗಿ ಸ್ವತಃ ತಮ್ಮನ್ನು, ಹಣವನ್ನು ಮತ್ತು ಭೋಗಗಳನ್ನು ಪ್ರೀತಿಸುವರೆಂದು ಅವನು ಹೇಳಿದನು. ಅನೇಕರಲ್ಲಿ ‘ಮಮತೆಯಿಲ್ಲದಿರುವುದು,’ ಇಲ್ಲವೆ ಒಂದು ಬೈಬಲ್ ಭಾಷಾಂತರವು ಹೇಳುವಂತೆ “ಅವರ ಕುಟುಂಬಗಳಿಗಾಗಿ ಸ್ವಾಭಾವಿಕವಾದ ವಾತ್ಸಲ್ಯದ ಕೊರತೆ” ಇರುವುದು. (2 ತಿಮೊಥೆಯ 3:1-4) ಯೇಸು ಕ್ರಿಸ್ತನು ಮುಂತಿಳಿಸಿದ್ದು: “ಅನೇಕರು . . . ಒಬ್ಬರನ್ನೊಬ್ಬರು ಹಿಡುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷಮಾಡುವರು. . . . ಬಹುಜನರ ಪ್ರೀತಿಯು ತಣ್ಣಗಾಗಿಹೋಗುವದು.”—ಮತ್ತಾಯ 24:10, 12.
3 ಆದರೆ ಯೇಸು, ಎಲ್ಲರ ಪ್ರೀತಿ ತಣ್ಣಗಾಗುವುದೆಂದು ಹೇಳಲಿಲ್ಲ ಎಂಬುದನ್ನು ಗಮನಿಸಿರಿ. ಏಕೆಂದರೆ, ಯೆಹೋವನು ಕೇಳಿಕೊಳ್ಳುವಂಥ ಮತ್ತು ಆತನು ಪಡೆಯಲರ್ಹನಾಗಿರುವ ಪ್ರೀತಿಯನ್ನು ತೋರಿಸುವವರು ಹಿಂದೆಯೂ ಇದ್ದರು ಮತ್ತು ಮುಂದಕ್ಕೂ ಇರುವರು. ಯೆಹೋವನನ್ನು ನಿಜವಾಗಿಯೂ ಪ್ರೀತಿಸುವವರು, ಜನರ ಬಗ್ಗೆ ಯೆಹೋವನಿಗಿರುವ ನೋಟವನ್ನು ಹೊಂದಲು ಪ್ರಯಾಸಪಡುವರು. ಆದರೆ ನಾವು ಪ್ರೀತಿಸತಕ್ಕ ನೆರೆಯವನು ಯಾರು? ನಮ್ಮ ನೆರೆಯವನ ಕಡೆಗೆ ನಾವು ಹೇಗೆ ಪ್ರೀತಿ ತೋರಿಸಬೇಕು? ಈ ಪ್ರಾಮುಖ್ಯ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ ಶಾಸ್ತ್ರವಚನಗಳು ನಮಗೆ ಸಹಾಯಮಾಡಬಲ್ಲವು.
ನನ್ನ ನೆರೆಯವನು ಯಾರು?
4. ಯಾಜಕಕಾಂಡ 19ನೇ ಅಧ್ಯಾಯಕ್ಕನುಸಾರ, ಯೆಹೂದ್ಯರು ಯಾರಿಗೆ ಪ್ರೀತಿಯನ್ನು ತೋರಿಸಬೇಕಾಗಿತ್ತು?
4 ಎರಡನೇ ಅತಿ ಪ್ರಾಮುಖ್ಯ ಆಜ್ಞೆಯು, ಒಬ್ಬ ವ್ಯಕ್ತಿಯು ತನ್ನಂತೆಯೇ ತನ್ನ ನೆರೆಯವನನ್ನು ಪ್ರೀತಿಸುವುದಾಗಿದೆ ಎಂದು ಯೇಸು ಆ ಫರಿಸಾಯನಿಗೆ ಹೇಳಿದಾಗ, ಹಿಂದೆ ಇಸ್ರಾಯೇಲಿಗೆ ಕೊಡಲ್ಪಟ್ಟಿದ್ದ ಒಂದು ನಿರ್ದಿಷ್ಟ ಆಜ್ಞೆಗೆ ಅವನು ಸೂಚಿಸಿದನು. ಅದನ್ನು ಯಾಜಕಕಾಂಡ 19:18ರಲ್ಲಿ ದಾಖಲಿಸಲಾಗಿದೆ. ಅದೇ ಅಧ್ಯಾಯದಲ್ಲಿ, ಯೆಹೂದ್ಯರು ತಮ್ಮ ಜೊತೆ ಇಸ್ರಾಯೇಲ್ಯರನ್ನು ಮಾತ್ರವಲ್ಲ ಇತರರನ್ನೂ ತಮ್ಮ ನೆರೆಯವರನ್ನಾಗಿ ವೀಕ್ಷಿಸಬೇಕೆಂದು ಅವರಿಗೆ ಹೇಳಲಾಗಿತ್ತು. 34ನೇ ವಚನ ಹೇಳುವುದು: “ಅವರು [ಪರದೇಶದವರು] ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ.” ಹೀಗೆ ಯೆಹೂದ್ಯರಲ್ಲದವರನ್ನು, ವಿಶೇಷವಾಗಿ ಯೆಹೂದಿ ಮತಾವಲಂಬಿಗಳನ್ನು ಸಹ ಪ್ರೀತಿಯಿಂದ ಉಪಚರಿಸಬೇಕಾಗಿತ್ತು.
5. ನೆರೆಯವನ ಪ್ರೀತಿಯನ್ನು ಯೆಹೂದ್ಯರು ಏನೆಂದು ಅರ್ಥಮಾಡಿಕೊಂಡಿದ್ದರು?
5 ಯೇಸುವಿನ ದಿನದ ಯೆಹೂದಿ ಮುಖಂಡರಿಗಾದರೊ ಒಂದು ಭಿನ್ನ ಅಭಿಪ್ರಾಯವಿತ್ತು. ಇವರಲ್ಲಿ ಕೆಲವರು, “ಸ್ನೇಹಿತ” ಮತ್ತು “ನೆರೆಯವ” ಎಂಬ ಪದಗಳನ್ನು ಯೆಹೂದ್ಯರಿಗೆ ಮಾತ್ರ ಅನ್ವಯಿಸಬೇಕೆಂದು ಮತ್ತು ಯೆಹೂದ್ಯರಲ್ಲದವರನ್ನು ದ್ವೇಷಿಸಬೇಕೆಂದು ಕಲಿಸಿದರು. ದೇವಭಕ್ತಿಯುಳ್ಳವರು, ದೇವಭಕ್ತಿಯಿಲ್ಲದವರನ್ನು ತುಚ್ಛೀಕರಿಸಬೇಕೆಂದು ಆ ಬೋಧಕರು ತರ್ಕಿಸಿದರು. “ಇಂಥ ಪರಿಸರದಲ್ಲಿ ದ್ವೇಷವು ಹಸನಾಗಿ ಬೆಳೆಯುವುದು ಅನಿವಾರ್ಯವಾಗಿತ್ತು. ಆ ದ್ವೇಷವನ್ನು ಪೋಷಿಸಲಿಕ್ಕಾಗಿ ಬೇಕಾದಂಥ ಬಹಳಷ್ಟು ವಿಷಯಗಳಿದ್ದವು” ಎಂದು ಒಂದು ಪರಾಮರ್ಶೆ ಕೃತಿ ಹೇಳುತ್ತದೆ.
6. ನೆರೆಯವನ ಪ್ರೀತಿಯ ಕುರಿತಾಗಿ ಮಾತಾಡುವಾಗ ಯೇಸು ಯಾವ ಎರಡು ಪ್ರಮುಖ ವಿಚಾರಗಳನ್ನು ಹೇಳಿದನು?
6 ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಈ ವಿವಾದಾಂಶವನ್ನು ಸಂಬೋಧಿಸುತ್ತಾ, ಯಾರನ್ನು ಪ್ರೀತಿಯಿಂದ ಉಪಚರಿಸಬೇಕೆಂಬುದನ್ನು ತೋರಿಸಿದನು. ಅವನಂದದ್ದು: “ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕೆಂದು ಹೇಳಿದೆ ಎಂಬದಾಗಿ ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾಯ 5:43-45) ಇಲ್ಲಿ ಯೇಸು ಎರಡು ಪ್ರಮುಖ ವಿಚಾರಗಳನ್ನು ತಿಳಿಸಿದನು. ಒಂದನೆಯದು, ಯೆಹೋವನು ಒಳ್ಳೆಯವರಿಗೂ ಕೆಟ್ಟವರಿಗೂ ಉದಾರತೆ ಮತ್ತು ದಯೆಯನ್ನು ತೋರಿಸುತ್ತಾನೆ. ಎರಡನೆಯದು, ನಾವು ಆತನ ಮಾದರಿಯನ್ನು ಅನುಸರಿಸಬೇಕು.
7. ಸ್ನೇಹಭಾವದ ಸಮಾರ್ಯದವನ ಸಾಮ್ಯದಿಂದ ನಾವು ಕಲಿಯುವ ಪಾಠವೇನು?
7 ಇನ್ನೊಂದು ಸಂದರ್ಭದಲ್ಲಿ ಯೇಸುವಿಗೆ, ಧರ್ಮಶಾಸ್ತ್ರದಲ್ಲಿ ಪರಾಂಗತನಾಗಿದ್ದ ಒಬ್ಬ ಯೆಹೂದ್ಯನು “ನನ್ನ ನೆರೆಯವನು ಯಾರು”? ಎಂದು ಕೇಳಿದಾಗ ಅವನು ಉತ್ತರಿಸುತ್ತಾ ಒಂದು ಸಾಮ್ಯವನ್ನು ಹೇಳಿದನು. ಆ ಸಾಮ್ಯದಲ್ಲಿ, ಯೆಹೂದ್ಯನೊಬ್ಬನ ಮೇಲೆ ಕಳ್ಳರು ಹಲ್ಲೆನಡೆಸಿ ಅವನ ಎಲ್ಲ ಸ್ವತ್ತುಗಳನ್ನು ದೋಚಿಕೊಂಡು ಹೋದರು. ಇಂಥ ದುಸ್ಥಿತಿಯಲ್ಲಿ ಬಿದ್ದಿದ್ದ ಯೆಹೂದ್ಯನನ್ನು ಆ ದಾರಿಯಾಗಿ ಹೋಗುತ್ತಿದ್ದ ಸಮಾರ್ಯದವನೊಬ್ಬನು ನೋಡಿದನು. ಯೆಹೂದ್ಯರು ಸಾಮಾನ್ಯವಾಗಿ ಸಮಾರ್ಯದವರನ್ನು ತುಚ್ಛವಾಗಿ ಕಾಣುತ್ತಿದ್ದರು. ಆದರೂ ಈ ಸಮಾರ್ಯದವನು ಆ ವ್ಯಕ್ತಿಯ ಗಾಯಗಳಿಗೆ ಪಟ್ಟೆಕಟ್ಟಿ, ಅವನು ಸುರಕ್ಷಿತನಾಗಿದ್ದು ಚೇತರಿಸಿಕೊಳ್ಳುವಂತೆ ಒಂದು ಛತ್ರಕ್ಕೆ ಕರಕೊಂಡು ಹೋದನು. ಈ ಸಾಮ್ಯದ ಪಾಠವೇನು? ನಮ್ಮ ನೆರೆಯವನಿಗಾಗಿರುವ ಪ್ರೀತಿಯು ನಮ್ಮ ಸ್ವಂತ ಜಾತಿ, ರಾಷ್ಟ್ರ ಇಲ್ಲವೆ ಧರ್ಮಕ್ಕೆ ಸೇರಿಲ್ಲದ ಜನರಿಗೂ ಪಸರಿಸಬೇಕು.—ಲೂಕ 10:25, 29, 30, 33-37.
ನಮ್ಮ ನೆರೆಯವನನ್ನು ಪ್ರೀತಿಸುವುದರ ಅರ್ಥವೇನು?
8. ಪ್ರೀತಿಯನ್ನು ಹೇಗೆ ತೋರಿಸಬೇಕೆಂಬುದರ ಕುರಿತಾಗಿ ಯಾಜಕಕಾಂಡ 19ನೇ ಅಧ್ಯಾಯವು ಏನು ಹೇಳುತ್ತದೆ?
8 ದೇವರ ಮೇಲಣ ಪ್ರೀತಿಯಂತೆಯೇ, ನೆರೆಯವರಿಗಾಗಿರುವ ಪ್ರೀತಿ ಸಹ ಕೇವಲ ನಮ್ಮೊಳಗೆ ಇರುವ ಒಂದು ಭಾವನೆ ಮಾತ್ರವಲ್ಲ; ಅದು ಕ್ರಿಯೆಯಲ್ಲಿಯೂ ತೋರಿಬರಬೇಕು. ತಮ್ಮ ನೆರೆಯವರನ್ನು ತಮ್ಮಂತೆಯೇ ಪ್ರೀತಿಸಬೇಕೆಂದು ದೇವಜನರನ್ನು ಪ್ರೇರೇಪಿಸುವ ಆಜ್ಞೆಯು ದಾಖಲಾಗಿರುವ ಯಾಜಕಕಾಂಡ 19ನೇ ಅಧ್ಯಾಯದಲ್ಲಿ ಪೂರ್ವಾಪರ ವಚನಗಳನ್ನು ಇನ್ನೂ ಹೆಚ್ಚಾಗಿ ಪರಿಗಣಿಸುವುದು ಸಹಾಯಕಾರಿ. ಕಷ್ಟದಿಂದ ಬಾಧಿತರಾದವರು ಮತ್ತು ಪರದೇಶಿಯರು ಕೊಯ್ಲಿನಲ್ಲಿ ಪಾಲ್ಗೊಳ್ಳುವಂತೆ ಇಸ್ರಾಯೇಲ್ಯರು ಅನುಮತಿಸಬೇಕಾಗಿತ್ತು ಎಂಬ ವಿಷಯವನ್ನು ಅಲ್ಲಿ ಓದುತ್ತೇವೆ. ಕದಿಯಲು, ಮೋಸಮಾಡಲು ಇಲ್ಲವೆ ಸುಳ್ಳಾಡಲು ಯಾವುದೇ ಎಡೆಯಿರಲಿಲ್ಲ. ನ್ಯಾಯವಿಧಾಯಕ ವಿಷಯಗಳಲ್ಲೂ ಇಸ್ರಾಯೇಲ್ಯರು ಯಾವುದೇ ಬೇಧಭಾವವನ್ನು ತೋರಿಸಬಾರದಿತ್ತು. ಅಗತ್ಯಬಿದ್ದಾಗ ಅವರಿಗೆ ತಿದ್ದುಪಾಟನ್ನು ಕೊಡಬೇಕಾಗಿದ್ದರೂ, “ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು” ಎಂದು ಇಸ್ರಾಯೇಲ್ಯರಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ಈ ಆಜ್ಞೆಗಳು ಮತ್ತು ಅನೇಕ ಇತರ ಆಜ್ಞೆಗಳು, “ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂಬ ಮಾತುಗಳಲ್ಲಿ ಸಾರಾಂಶಿಸಲ್ಪಟ್ಟಿದ್ದವು.—ಯಾಜಕಕಾಂಡ 19:9-11, 15, 17, 18.
9. ಇಸ್ರಾಯೇಲ್ಯರು ಇತರ ಜನಾಂಗಗಳಿಂದ ಪ್ರತ್ಯೇಕವಾಗಿರುವಂತೆ ಯೆಹೋವನು ಏಕೆ ಆಜ್ಞಾಪಿಸಿದನು?
9 ಇಸ್ರಾಯೇಲ್ಯರು ಇತರರಿಗೆ ಪ್ರೀತಿಯನ್ನು ತೋರಿಸಬೇಕಾಗಿತ್ತುಆದರೂ, ಅದೇ ಸಮಯದಲ್ಲಿ ಅವರು ಸುಳ್ಳು ದೇವರುಗಳ ಆರಾಧಕರಿಂದ ತಮ್ಮನ್ನೇ ಪ್ರತ್ಯೇಕವಾಗಿರಿಸಿಕೊಳ್ಳಬೇಕಿತ್ತು. ಅಂಥ ದುಸ್ಸಹವಾಸದ ಅಪಾಯಗಳು ಹಾಗೂ ಪರಿಣಾಮಗಳ ಕುರಿತಾಗಿ ಯೆಹೋವನು ಎಚ್ಚರಿಸಿದ್ದನು. ಉದಾಹರಣೆಗೆ, ಇಸ್ರಾಯೇಲ್ಯರು ವಾಗ್ದತ್ತ ದೇಶದಿಂದ ಹೊರಡಿಸಬೇಕಾಗಿದ್ದ ಜನಾಂಗಗಳ ಬಗ್ಗೆ ಯೆಹೋವನು ಅಪ್ಪಣೆಕೊಟ್ಟದ್ದು: “ಅವರೊಡನೆ ಬೀಗತನಮಾಡಬಾರದು; ಅವರ ಮಕ್ಕಳಿಗೆ ಹೆಣ್ಣುಗಳನ್ನು ಕೊಡಲೂ ಬಾರದು, ಅವರಿಂದ ತರಲೂ ಬಾರದು. ಹಾಗೆ ಮಾಡಿದರೆ ಅವರು ನಿಮ್ಮ ಮಕ್ಕಳನ್ನು ಯೆಹೋವನ ಸೇವೆಯಿಂದ ತಪ್ಪಿಸಿ ಇತರ ದೇವರುಗಳನ್ನು ಪೂಜಿಸುವದಕ್ಕೆ ತಿರುಗಿಸಾರು; ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವನು.”—ಧರ್ಮೋಪದೇಶಕಾಂಡ 7:3, 4.
10. ನಾವು ಯಾವುದರ ವಿರುದ್ಧ ಎಚ್ಚರಿಕೆಯಿಂದಿರಬೇಕು?
10 ಅದೇ ರೀತಿಯಲ್ಲಿ ಕ್ರೈಸ್ತರು, ತಮ್ಮ ನಂಬಿಕೆಯನ್ನು ದುರ್ಬಲಗೊಳಿಸುವ ಸಾಧ್ಯತೆಯುಳ್ಳವರೊಂದಿಗೆ ಸಂಬಂಧವನ್ನು ಬೆಸೆಯುವುದರ ವಿರುದ್ಧ ಎಚ್ಚರಿಕೆಯಿಂದಿರುತ್ತಾರೆ. (1 ಕೊರಿಂಥ 15:33) ನಮಗೆ ಈ ಬುದ್ಧಿವಾದವನ್ನು ಕೊಡಲಾಗಿದೆ: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ” ಅಂದರೆ ಕ್ರೈಸ್ತ ಸಭೆಯ ಭಾಗವಾಗಿಲ್ಲದವರೊಂದಿಗೆ “ಸೇರಿ ಇಜ್ಜೋಡಾಗಬೇಡಿರಿ.” (2 ಕೊರಿಂಥ 6:14) ಅಲ್ಲದೆ “ಕರ್ತನಲ್ಲಿ ಮಾತ್ರ” ವಿವಾಹವಾಗುವಂತೆ ಕ್ರೈಸ್ತರಿಗೆ ಸಲಹೆಕೊಡಲಾಗಿದೆ. (1 ಕೊರಿಂಥ 7:39, NW) ಹೀಗಿದ್ದರೂ, ಯೆಹೋವನನ್ನು ನಂಬದೇ ಇರುವವರನ್ನು ನಾವೆಂದಿಗೂ ಕೀಳಾಗಿ ಕಾಣಬಾರದು. ಏಕೆಂದರೆ ಕ್ರಿಸ್ತನು ಸತ್ತದ್ದು ಪಾಪಿಗಳಿಗೋಸ್ಕರವೇ, ಮತ್ತು ಒಂದು ಕಾಲದಲ್ಲಿ ಅಸಹ್ಯ ಕೆಲಸಗಳನ್ನು ಮಾಡುತ್ತಿದ್ದ ಅನೇಕರು ತಮ್ಮ ಮಾರ್ಗಗಳನ್ನು ಬದಲಾಯಿಸಿ, ದೇವರೊಂದಿಗೆ ಸಮಾಧಾನಮಾಡಿಕೊಂಡಿದ್ದಾರೆ.—ರೋಮಾಪುರ 5:8; 1 ಕೊರಿಂಥ 6:9-11.
11. ಯಾರು ಯೆಹೋವನ ಸೇವೆಮಾಡುವುದಿಲ್ಲವೊ ಅವರಿಗೆ ಪ್ರೀತಿತೋರಿಸುವ ಅತ್ಯುತ್ತಮ ಮಾರ್ಗ ಯಾವುದು, ಮತ್ತು ಏಕೆ?
11 ಯಾರು ದೇವರ ಸೇವೆಮಾಡುವುದಿಲ್ಲವೊ ಅಂಥವರಿಗೆ ನಾವು ಪ್ರೀತಿತೋರಿಸುವ ಅತ್ಯುತ್ತಮ ಮಾರ್ಗವು ಯೆಹೋವನನ್ನು ಅನುಕರಿಸುವ ಮೂಲಕವೇ ಆಗಿದೆ. ಯೆಹೋವನು ದುಷ್ಟತನವನ್ನು ಹಗೆಮಾಡುತ್ತಾನಾದರೂ, ದುಷ್ಟರು ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ ನಿತ್ಯಜೀವವನ್ನು ಪಡೆಯುವ ಅವಕಾಶವನ್ನು ನೀಡುವ ಮೂಲಕ ಅವರೆಲ್ಲರಿಗೆ ಪ್ರೀತಿಪೂರ್ವಕದಯೆಯನ್ನು ತೋರಿಸುತ್ತಾನೆ. (ಯೆಹೆಜ್ಕೇಲ 18:23) ‘ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂಬ ಅಪೇಕ್ಷೆ’ ಯೆಹೋವನದ್ದು. (2 ಪೇತ್ರ 3:9) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” (1 ತಿಮೊಥೆಯ 2:4) ಆದುದರಿಂದಲೇ ಯೇಸು ತನ್ನ ಹಿಂಬಾಲಕರಿಗೆ ಸಾರುವ, ಕಲಿಸುವ ಮತ್ತು ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವ’ ನೇಮಕವನ್ನು ಕೊಟ್ಟನು. (ಮತ್ತಾಯ 28:19, 20) ಈ ಕೆಲಸದಲ್ಲಿ ಪಾಲ್ಗೊಳ್ಳುವುದರ ಮೂಲಕ ನಾವು ದೇವರಿಗೂ ನೆರೆಯವನಿಗೂ ಪ್ರೀತಿಯನ್ನು ತೋರಿಸುತ್ತೇವೆ. ಹೌದು, ಈ ನೆರೆಯವರಲ್ಲಿ ನಮ್ಮ ವೈರಿಗಳೂ ಒಳಗೂಡಿದ್ದಾರೆ!
ನಮ್ಮ ಕ್ರೈಸ್ತ ಸಹೋದರರಿಗಾಗಿ ಪ್ರೀತಿ
12. ನಮ್ಮ ಸಹೋದರನನ್ನು ಪ್ರೀತಿಸುವುದರ ಬಗ್ಗೆ ಅಪೊಸ್ತಲ ಯೋಹಾನನು ಏನು ಬರೆದನು?
12 ಅಪೊಸ್ತಲ ಪೌಲನು ಬರೆದುದು: “ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10) ಕ್ರೈಸ್ತರಾಗಿರುವ ನಮಗೆ, ಕ್ರಿಸ್ತನಂಬಿಕೆಯಿಂದಾಗಿ ಒಂದೇ ಮನೆಯವರಂತಿರುವ ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರಿಗಾಗಿ ಪ್ರೀತಿತೋರಿಸುವ ಹಂಗು ಇದೆ. ಈ ಪ್ರೀತಿ ಎಷ್ಟು ಪ್ರಾಮುಖ್ಯ? ಈ ಪ್ರಬಲವಾದ ಅಂಶವನ್ನು ತಿಳಿಸುತ್ತಾ, ಅಪೊಸ್ತಲ ಯೋಹಾನನು ಬರೆದುದು: “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, . . . ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.” (1 ಯೋಹಾನ 3:15; 4:20) ಇವು ತುಂಬ ತೀಕ್ಷ್ಣವಾದ ಮಾತುಗಳಾಗಿವೆ. “ಕೊಲೆಗಾರ” ಮತ್ತು “ಸುಳ್ಳುಗಾರ” ಎಂಬ ಪದಗಳನ್ನು ಯೇಸು ಕ್ರಿಸ್ತನು ಪಿಶಾಚನಾದ ಸೈತಾನನಿಗೆ ಉಪಯೋಗಿಸಿದ್ದನು. (ಯೋಹಾನ 8:44) ಆ ಪದಗಳು ಎಂದಿಗೂ ನಮಗೆ ಉಪಯೋಗಿಸಲ್ಪಡದಿರಲಿ!
13. ನಾವು ಜೊತೆ ವಿಶ್ವಾಸಿಗಳಿಗೆ ಯಾವ ವಿಧಗಳಲ್ಲಿ ಪ್ರೀತಿ ತೋರಿಸಬಲ್ಲೆವು?
13 ‘ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು’ ಸತ್ಕ್ರೈಸ್ತರಿಗೆ ಕಲಿಸಲಾಗಿದೆ. (1 ಥೆಸಲೊನೀಕ 4:9) ನಾವು “ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು.” (1 ಯೋಹಾನ 3:18) ನಮ್ಮ “ಪ್ರೀತಿಯು ನಿಷ್ಕಪಟವಾಗಿ”ರಬೇಕು. (ರೋಮಾಪುರ 12:9) ಪ್ರೀತಿಯು ನಾವು ದಯಾಪರರು, ಕರುಣಾಶೀಲರು, ಕ್ಷಮಿಸುವವರು, ದೀರ್ಘಶಾಂತರು ಆಗಿರುವಂತೆ ಪ್ರಚೋದಿಸುತ್ತದೆ ಮತ್ತು ಹೊಟ್ಟೆಕಿಚ್ಚುಪಡದಂತೆ, ಕೊಚ್ಚಿಕೊಳ್ಳದಂತೆ, ಅಹಂಕಾರಿಗಳಾಗದಂತೆ ಇಲ್ಲವೆ ಸ್ವಾರ್ಥಿಗಳಾಗದಂತೆ ಪ್ರಚೋದಿಸುತ್ತದೆ. (1 ಕೊರಿಂಥ 13:4, 5; ಎಫೆಸ 4:32) ಪ್ರೀತಿಯು, ನಾವು ‘ಒಬ್ಬರಿಗೊಬ್ಬರು ಸೇವೆಮಾಡುವಂತೆ’ ಪ್ರೇರಿಸುತ್ತದೆ. (ಗಲಾತ್ಯ 5:13) ಯೇಸು ತನ್ನ ಶಿಷ್ಯರನ್ನು ಪ್ರೀತಿಸಿದ ರೀತಿಯಲ್ಲೇ ಅವರು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಹೇಳಿದನು. (ಯೋಹಾನ 13:34) ಈ ಕಾರಣದಿಂದ ಒಬ್ಬ ಕ್ರೈಸ್ತನು, ಅವಶ್ಯಬಿದ್ದಲ್ಲಿ ಜೊತೆ ವಿಶ್ವಾಸಿಗಳಿಗೋಸ್ಕರ ತನ್ನ ಪ್ರಾಣವನ್ನೂ ಕೊಡಲು ಸಿದ್ಧನಿರಬೇಕು.
14. ನಾವು ಕುಟುಂಬದಲ್ಲಿ ಹೇಗೆ ಪ್ರೀತಿ ತೋರಿಸಬಲ್ಲೆವು?
14 ವಿಶೇಷವಾಗಿ ಕ್ರೈಸ್ತ ಕುಟುಂಬದಲ್ಲಿ ಮತ್ತು ನಿರ್ದಿಷ್ಟವಾಗಿ ಗಂಡಹೆಂಡತಿಯರ ನಡುವೆ ಪ್ರೀತಿ ತೋರಿಸಲ್ಪಡಬೇಕು. ವಿವಾಹಬಂಧವು ಎಷ್ಟು ಆಪ್ತವಾಗಿದೆಯೆಂದರೆ ಪೌಲನು ಹೇಳಿದ್ದು: “ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ.” ಅವನು ಕೂಡಿಸಿ ಹೇಳಿದ್ದು: “ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.” (ಎಫೆಸ 5:28) ಪೌಲನು ಇದೇ ಬುದ್ಧಿವಾದವನ್ನು ಮುಂದಕ್ಕೆ ಐದು ವಚನಗಳ ನಂತರ ಪುನರಾವರ್ತಿಸುವುದನ್ನು ನೋಡುತ್ತೇವೆ. ಒಬ್ಬ ಗಂಡನು ತನ್ನ ಹೆಂಡತಿಯನ್ನು ಪ್ರೀತಿಸುವುದಾದರೆ ಅವನು, ಮಲಾಕಿಯನ ದಿನದ ಇಸ್ರಾಯೇಲ್ಯರಂತೆ ತನ್ನ ಸಂಗಾತಿಗೆ ದ್ರೋಹಮಾಡುವುದಿಲ್ಲ. (ಮಲಾಕಿಯ 2:14) ಅದರ ಬದಲು ಅವನು ಅವಳನ್ನು ನೆಚ್ಚಿಕೊಂಡಿರುವನು. ಕ್ರಿಸ್ತನು ಸಭೆಯನ್ನು ಪ್ರೀತಿಸಿದಂತೆ ಗಂಡನು ತನ್ನ ಹೆಂಡತಿಯನ್ನು ಪ್ರೀತಿಸುವನು. ಅದೇ ರೀತಿ, ಹೆಂಡತಿಗೆ ಗಂಡನ ಮೇಲಿರುವ ಪ್ರೀತಿಯು ಆಕೆ ಅವನನ್ನು ಗೌರವಿಸುವಂತೆ ಮಾಡುವುದು.—ಎಫೆಸ 5:25, 29-33.
15. ಕ್ರಿಯೆಯಲ್ಲಿ ತೋರಿಸಲ್ಪಟ್ಟ ಸಹೋದರ ಪ್ರೀತಿಯನ್ನು ನೋಡಿ, ಕೆಲವರು ಏನನ್ನು ಹೇಳುವಂತೆ ಮತ್ತು ಮಾಡುವಂತೆ ಪ್ರಚೋದಿಸಲ್ಪಟ್ಟರು?
15 ಸ್ಪಷ್ಟವಾಗಿ, ಈ ರೀತಿಯ ಪ್ರೀತಿಯು ಸತ್ಯ ಕ್ರೈಸ್ತರ ಗುರುತು ಚಿಹ್ನೆಯಾಗಿದೆ. ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಪರಸ್ಪರರಿಗಾಗಿರುವ ನಮ್ಮ ಪ್ರೀತಿಯಿಂದಾಗಿ ಜನರು, ನಾವು ಪ್ರೀತಿಸುವ ಮತ್ತು ಪ್ರತಿನಿಧಿಸುವ ದೇವರ ಕಡೆಗೆ ಆಕರ್ಷಿತರಾಗುತ್ತಾರೆ. ಉದಾಹರಣೆಗಾಗಿ, ಮೊಸಾಂಬೀಕ್ನಿಂದ ಒಂದು ಸಾಕ್ಷಿ ಕುಟುಂಬದ ಬಗ್ಗೆ ಈ ವರದಿಯಿದೆ. “ಹಿಂದೆಂದೂ ಹೀಗಾದದ್ದನ್ನು ನಾವು ನೋಡಿದ್ದಿಲ್ಲ. ಮಧ್ಯಾಹ್ನದ ಹೊತ್ತಿನಲ್ಲಿ, ಭಯಂಕರವಾದ ಗಾಳಿ ಬೀಸಿ, ಜೋರಾದ ಮಳೆ ಹಾಗೂ ಆನೆಕಲ್ಲುಗಳು ಬೀಳಲಾರಂಭಿಸಿದವು. ಆ ಬಿರುಸಾದ ಗಾಳಿಯಿಂದಾಗಿ, ಜೊಂಡಿನಿಂದ ಕಟ್ಟಲ್ಪಟ್ಟಿರುವ ನಮ್ಮ ಮನೆ ಧ್ವಂಸವಾಗಿ, ಛಾವಣಿಯ ತಗಡಿನ ಷೀಟ್ಗಳು ಹಾರಿಹೋದವು. ಸುತ್ತಮುತ್ತಲಿನ ಸಭೆಗಳಿಂದ ನಮ್ಮ ಸಹೋದರರು ಬಂದು ನಮ್ಮ ಮನೆಯನ್ನು ಪುನಃ ಕಟ್ಟಲು ಸಹಾಯಮಾಡಿದಾಗ ಚಕಿತರಾದ ನಮ್ಮ ನೆರೆಹೊರೆಯವರು, ‘ನಿಮ್ಮ ಧರ್ಮ ತುಂಬ ಒಳ್ಳೇದು. ನಮ್ಮ ಚರ್ಚಿನಿಂದ ನಮಗೆಂದೂ ಇಂಥ ಸಹಾಯ ಸಿಕ್ಕಿದ್ದೇ ಇಲ್ಲ’ ಎಂದು ಹೇಳಿದರು. ನಾವು ಬೈಬಲಿನಿಂದ ಅವರಿಗೆ ಯೋಹಾನ 13:34, 35ನ್ನು ತೋರಿಸಿದೆವು. ಈಗ ನಮ್ಮ ನೆರೆಹೊರೆಯವರಲ್ಲಿ ಅನೇಕರು ಬೈಬಲನ್ನು ಅಧ್ಯಯನಮಾಡುತ್ತಿದ್ದಾರೆ.”
ಒಬ್ಬೊಬ್ಬರಿಗಾಗಿ ಪ್ರೀತಿ
16. ಒಂದು ಗುಂಪನ್ನು ಪ್ರೀತಿಸುವುದಕ್ಕೂ, ವ್ಯಕ್ತಿಗಳನ್ನು ಒಬ್ಬೊಬ್ಬರಾಗಿ ಪ್ರೀತಿಸುವುದಕ್ಕೂ ವ್ಯತ್ಯಾಸವೇನು?
16 ನಮ್ಮ ನೆರೆಹೊರೆಯವರನ್ನು ಸಾಮೂಹಿಕವಾಗಿ, ಒಂದು ಗುಂಪಾಗಿ ಪ್ರೀತಿಸುವುದು ಕಷ್ಟಕರವಲ್ಲ. ಆದರೆ ಅವರನ್ನು ಒಬ್ಬೊಬ್ಬರಾಗಿ ಪ್ರೀತಿಸುವುದು ಕಷ್ಟಕರವಾಗಿರಬಲ್ಲದು. ಉದಾಹರಣೆಗಾಗಿ ನೆರೆಯವರ ಪ್ರೀತಿ ಅಂದರೆ, ಒಂದು ಧರ್ಮಾರ್ಥ ಸಂಸ್ಥೆಗೆ ದಾನಮಾಡುವುದು ಅಷ್ಟೇ, ಎಂದು ಕೆಲವರು ನೆನಸುತ್ತಾರೆ. ನಾವು ನಮ್ಮ ನೆರೆಯವರನ್ನು ಪ್ರೀತಿಸುತ್ತೇವೆ ಎಂದು ಹೇಳುವುದು ತುಂಬ ಸುಲಭ. ಆದರೆ, ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದಿರುವಂತೆ ತೋರುವ ಒಬ್ಬ ಜೊತೆ ಕೆಲಸಗಾರನನ್ನು, ಜುಗುಪ್ಸೆ ಹುಟ್ಟಿಸುವ ಪಕ್ಕದ ಮನೆಯವನನ್ನು, ಇಲ್ಲವೆ ನಮ್ಮನ್ನು ನಿರಾಶೆಗೊಳಿಸುವ ಒಬ್ಬ ಸ್ನೇಹಿತನನ್ನು ಪ್ರೀತಿಸುವುದು ತುಂಬ ಕಷ್ಟ.
17, 18. ಯೇಸು ಒಬ್ಬೊಬ್ಬ ವ್ಯಕ್ತಿಗೂ ಪ್ರೀತಿಯನ್ನು ಹೇಗೆ ತೋರಿಸಿದನು, ಮತ್ತು ಇದನ್ನು ಯಾವ ಉದ್ದೇಶದಿಂದ ಮಾಡಿದನು?
17 ವ್ಯಕ್ತಿಗಳನ್ನು ಒಬ್ಬೊಬ್ಬರಾಗಿ ಪ್ರೀತಿಸುವ ವಿಷಯದಲ್ಲಿ, ದೇವರ ಗುಣಗಳನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದ ಯೇಸುವಿನಿಂದ ನಾವು ಬಹಳಷ್ಟನ್ನು ಕಲಿಯಬಲ್ಲೆವು. ಅವನು ಲೋಕದ ಪಾಪವನ್ನು ತೆಗೆಯಲಿಕ್ಕಾಗಿ ಭೂಮಿಗೆ ಬಂದಿದ್ದರೂ ಅವನು ಜನರಲ್ಲಿ ಒಬ್ಬೊಬ್ಬರಿಗಾಗಿಯೂ, ಉದಾಹರಣೆಗೆ ಅಸ್ವಸ್ಥಳಾಗಿದ್ದ ಮಹಿಳೆಯೊಬ್ಬಳಿಗೆ, ಒಬ್ಬ ಕುಷ್ಠರೋಗಿಗೆ ಮತ್ತು ಒಬ್ಬ ಮಗುವಿಗೆ ಪ್ರೀತಿ ತೋರಿಸಿದನು. (ಮತ್ತಾಯ 9:20-22; ಮಾರ್ಕ 1:40-42; 7:26, 29, 30; ಯೋಹಾನ 1:29) ಅದೇ ರೀತಿಯಲ್ಲಿ, ನಮ್ಮ ದೈನಂದಿನ ಚಟುವಟಿಕೆಯಲ್ಲಿ ನಾವು ಒಬ್ಬೊಬ್ಬ ವ್ಯಕ್ತಿಯೊಂದಿಗೂ ವ್ಯವಹರಿಸುವ ವಿಧದಿಂದ ನಮ್ಮ ನೆರೆಯವರಿಗಾಗಿ ಪ್ರೀತಿಯನ್ನು ತೋರಿಸುವೆವು.
18 ಆದರೆ ನೆರೆಯವರಿಗಾಗಿರುವ ಪ್ರೀತಿಗೂ, ದೇವರ ಮೇಲಣ ಪ್ರೀತಿಗೂ ನಿಕಟ ಸಂಬಂಧವಿದೆ ಎಂಬುದನ್ನು ನಾವೆಂದಿಗೂ ಮರೆಯಬಾರದು. ಯೇಸು ಬಡವರಿಗೆ ಸಹಾಯಮಾಡಿದನು, ಅಸ್ವಸ್ಥರನ್ನು ಗುಣಪಡಿಸಿದನು, ಹಸಿದಿದ್ದವರನ್ನು ಉಣಿಸಿದನು. ಆದರೆ ಇದೆಲ್ಲವನ್ನು ಮಾಡುವುದರ ಮತ್ತು ಜನಸಮೂಹಗಳಿಗೆ ಬೋಧಿಸುವ ಅವನ ಉದ್ದೇಶವು, ಜನರನ್ನು ಯೆಹೋವನೊಂದಿಗೆ ಸಮಾಧಾನಪಡಿಸಿಕೊಳ್ಳುವುದೇ ಆಗಿತ್ತು. (2 ಕೊರಿಂಥ 5:19) ಯೇಸು, ತಾನು ಪ್ರೀತಿಸುತ್ತಿರುವ ದೇವರ ಪ್ರತಿನಿಧಿ ಹಾಗೂ ಪ್ರತಿಬಿಂಬ ಆಗಿದ್ದೇನೆಂಬುದನ್ನು ಎಂದೂ ಮರೆಯದೇ, ಎಲ್ಲವನ್ನೂ ದೇವರ ಘನತೆಗಾಗಿ ಮಾಡಿದನು. (1 ಕೊರಿಂಥ 10:31) ಯೇಸುವಿನ ಮಾದರಿಯನ್ನು ಅನುಕರಿಸುವ ಮೂಲಕ, ನಾವು ಸಹ ನೆರೆಯವರಿಗಾಗಿ ನಿಜ ಪ್ರೀತಿಯನ್ನು ತೋರಿಸಬಲ್ಲೆವು ಮತ್ತು ಅದೇ ಸಮಯದಲ್ಲಿ ದುಷ್ಟ ಮಾನವಕುಲದಿಂದ ಕೂಡಿರುವ ಈ ಲೋಕದ ಭಾಗವಾಗಿರದೆ ಇರಬಲ್ಲೆವು.
ನಮ್ಮಂತೆಯೇ ನಮ್ಮ ನೆರೆಯವರನ್ನು ಪ್ರೀತಿಸುವುದು ಹೇಗೆ?
19, 20. ನಮ್ಮ ನೆರೆಯವರನ್ನು ನಮ್ಮಂತೆಯೇ ಪ್ರೀತಿಸುವುದರ ಅರ್ಥವೇನು?
19 ಯೇಸು ಹೇಳಿದ್ದು: “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” ನಾವು ನಮ್ಮ ಸ್ವಂತ ಆರೈಕೆ ಮಾಡುವುದು ಮತ್ತು ತಕ್ಕಮಟ್ಟಿಗೆ ನಮ್ಮಲ್ಲಿ ಸ್ವಗೌರವವಿರುವುದು ಸ್ವಾಭಾವಿಕ ಸಂಗತಿ. ಒಂದುವೇಳೆ ನಾವು ಹಾಗೆ ಮಾಡದಿದ್ದರೆ, ಯೇಸು ಕೊಟ್ಟ ಆ ಆಜ್ಞೆಗೆ ಏನೂ ಅರ್ಥವಿರುತ್ತಿರಲಿಲ್ಲ. ಆದರೆ ಈ ಯೋಗ್ಯ ರೀತಿಯ ಸ್ವಪ್ರೀತಿಯನ್ನು, ಅಪೊಸ್ತಲ ಪೌಲನು 2 ತಿಮೊಥೆಯ 3:2ರಲ್ಲಿ ತಿಳಿಸಿರುವಂಥ ರೀತಿಯ ಸ್ವಾರ್ಥಪರ ಪ್ರೀತಿಯೆಂದು ಅಪಾರ್ಥಮಾಡಿಕೊಳ್ಳಬಾರದು. ಈ ಯೋಗ್ಯವಾದ ಸ್ವಪ್ರೀತಿಯು, ನ್ಯಾಯಸಮ್ಮತವಾದ ಸ್ವಾಭಿಮಾನವಾಗಿದೆ. ಒಬ್ಬ ಬೈಬಲ್ ವಿದ್ವಾಂಸನು ಇದನ್ನು, “ಸಮತೋಲನದ ಸ್ವಪ್ರೀತಿ” ಎಂದು ವರ್ಣಿಸಿದನು. “ಈ ಪ್ರೀತಿಯಿರುವ ಒಬ್ಬ ವ್ಯಕ್ತಿಯು ತನ್ನನ್ನೇ ಆರಾಧಿಸಿ, ‘ನಾನೇ ಶ್ರೇಷ್ಠನು’ ಎಂಬ ಭಾವನೆ ಹೊಂದಿರುವುದಿಲ್ಲ, ಅಥವಾ ಇನ್ನೊಂದು ಬದಿಯಲ್ಲಿ ತನ್ನನ್ನೇ ಪೀಡಿಸುವವನಾಗಿದ್ದು ‘ನಾನು ಯಾವುದೇ ಪ್ರಯೋಜನಕ್ಕೆಬಾರದವನು’ ಎಂಬ ಭಾವನೆಯನ್ನು ಹೊಂದಿರುವುದಿಲ್ಲ.”
20 ಬೇರೆಯವರನ್ನು ನಮ್ಮಂತೆಯೇ ಪ್ರೀತಿಸುವುದರ ಅರ್ಥವೇನೆಂದರೆ, ಬೇರೆಯವರು ನಮ್ಮನ್ನು ಹೇಗೆ ವೀಕ್ಷಿಸಬೇಕೆಂದು ನಾವು ಬಯಸುತ್ತೇವೊ ಹಾಗೆಯೇ ನಾವು ಅವರನ್ನು ವೀಕ್ಷಿಸಬೇಕು ಮತ್ತು ಅವರು ನಮ್ಮನ್ನು ಹೇಗೆ ಉಪಚರಿಸಬೇಕೆಂದು ನಾವು ಬಯಸುತ್ತೇವೊ ಅದೇ ರೀತಿಯಲ್ಲಿ ನಾವು ಸಹ ಅವರನ್ನು ಉಪಚರಿಸಬೇಕು. ಯೇಸು ಹೇಳಿದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಬೇರೆಯವರು ನಮಗೆ ಹಿಂದೆ ಏನೇನು ಮಾಡಿದ್ದಾರೊ ಅದರ ಕುರಿತಾಗಿಯೇ ಯೋಚಿಸುತ್ತಾ ಇದ್ದು, ನಂತರ ಅವರಿಗೆ ಅದೇ ರೀತಿಯಲ್ಲಿ ಪ್ರತೀಕಾರ ಸಲ್ಲಿಸಬೇಕೆಂದು ಯೇಸು ಹೇಳಲಿಲ್ಲ ಎಂಬುದನ್ನು ಗಮನಿಸಿರಿ. ಅದಕ್ಕೆ ಬದಲಾಗಿ, ಇತರರು ನಮ್ಮನ್ನು ಹೇಗೆ ಉಪಚರಿಸಬೇಕೆಂದು ನಾವು ಇಷ್ಟಪಡುವೆವೊ ಅದರ ಕುರಿತಾಗಿ ಯೋಚಿಸಿ, ನಾವು ಅದೇ ರೀತಿಯಲ್ಲಿ ವರ್ತಿಸಬೇಕು. ಯೇಸು ತನ್ನ ಮಾತುಗಳ ಅನ್ವಯವನ್ನು ಸ್ನೇಹಿತರು ಮತ್ತು ಸಹೋದರರಿಗೆ ಮಾತ್ರ ಸೀಮಿತಗೊಳಿಸಲಿಲ್ಲ ಎಂಬುದನ್ನೂ ಗಮನಿಸಿರಿ. ಅವನು “ಜನರು” ಎಂಬ ಪದವನ್ನು ಬಳಸಿದನು. ಬಹುಶಃ ಇದನ್ನು, ನಾವು ಎಲ್ಲ ಜನರೊಂದಿಗೆ, ಅಂದರೆ ನಾವು ಭೇಟಿಯಾಗುವ ಎಲ್ಲರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಸೂಚಿಸಲಿಕ್ಕಾಗಿ ಮಾಡಿದನು.
21. ಬೇರೆಯವರಿಗೆ ಪ್ರೀತಿಯನ್ನು ತೋರಿಸುವ ಮೂಲಕ, ನಾವೇನನ್ನು ತೋರಿಸಿಕೊಡುವೆವು?
21 ನಮಗೆ ನೆರೆಯವರ ಪ್ರೀತಿ ಇರುವುದಾದರೆ, ಅದು ನಾವು ಯಾವುದೇ ಕೆಟ್ಟ ಕೆಲಸವನ್ನು ಮಾಡುವುದರಿಂದ ನಮ್ಮನ್ನು ತಡೆಯುವುದು. ಅಪೊಸ್ತಲ ಪೌಲನು ಬರೆದುದು: “ವ್ಯಭಿಚಾರ ಮಾಡಬಾರದು, ನರಹತ್ಯೆಮಾಡಬಾರದು, ಕದಿಯಬಾರದು, ಪರರ ಸೊತ್ತನ್ನು ಆಶಿಸಬಾರದು ಈ ಮೊದಲಾದ ಎಲ್ಲಾ ಕಟ್ಟಳೆಗಳು—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬ ಒಂದೇ ಮಾತಿನಲ್ಲಿ ಅಡಕವಾಗಿವೆ. ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವದಿಲ್ಲ.” (ರೋಮಾಪುರ 13:9, 10) ನಮಗೆ ಪ್ರೀತಿಯಿರುವಲ್ಲಿ ಅದು, ನಾವು ಬೇರೆಯವರಿಗಾಗಿ ಒಳ್ಳೇದನ್ನು ಮಾಡಲು ಅವಕಾಶಗಳಿಗಾಗಿ ಹುಡುಕುವಂತೆ ಪ್ರಚೋದಿಸುವುದು. ನಾವು ಜೊತೆ ಮಾನವರನ್ನು ಪ್ರೀತಿಸುವ ಮೂಲಕ, ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದ ಯೆಹೋವ ದೇವರನ್ನು ಸಹ ಪ್ರೀತಿಸುತ್ತೇವೆಂದು ತೋರಿಸಿಕೊಡುತ್ತೇವೆ.—ಆದಿಕಾಂಡ 1:26. (w06 12/01)
ನೀವೇನು ಉತ್ತರಕೊಡುವಿರಿ?
• ನಾವು ಯಾರಿಗೆ ಪ್ರೀತಿ ತೋರಿಸಬೇಕು, ಮತ್ತು ಏಕೆ?
• ಯೆಹೋವನ ಸೇವೆಮಾಡದವರಿಗೂ ನಾವು ಹೇಗೆ ಪ್ರೀತಿತೋರಿಸಬಲ್ಲೆವು?
• ನಮ್ಮ ಸಹೋದರರಿಗಾಗಿ ನಮಗೆಂಥ ಪ್ರೀತಿ ಇರಬೇಕೆಂದು ಬೈಬಲ್ ವರ್ಣಿಸುತ್ತದೆ?
• ನಮ್ಮ ನೆರೆಯವನನ್ನು ನಮ್ಮಂತೆಯೇ ಪ್ರೀತಿಸಬೇಕೆಂಬುದರ ಅರ್ಥವೇನು?
[ಪುಟ 28ರಲ್ಲಿರುವ ಚಿತ್ರ]
“ನನ್ನ ನೆರೆಯವನು ಯಾರು”?
[ಪುಟ 30ರಲ್ಲಿರುವ ಚಿತ್ರ]
ಯೇಸು ಒಬ್ಬೊಬ್ಬರಿಗೂ ಪ್ರೀತಿ ತೋರಿಸುತ್ತಾನೆ