ದೇವರು ಎಂಥವನು?
ಒಬ್ಬ ವ್ಯಕ್ತಿಯ ಗುಣಗಳನ್ನು ತಿಳಿಯುತ್ತಾ ಹೋದಂತೆ ನಾವು ಆತನನ್ನು ಚೆನ್ನಾಗಿ ತಿಳಿದುಕೊಳ್ಳುತ್ತೇವೆ. ಹೀಗೆ ನಮ್ಮ ಸ್ನೇಹ ಇನ್ನಷ್ಟು ಗಾಢವಾಗುತ್ತದೆ. ಅದೇ ರೀತಿ, ನಾವು ಯೆಹೋವನ ಗುಣಗಳ ಬಗ್ಗೆ ಹೆಚ್ಚೆಚ್ಚು ತಿಳಿದಂತೆ ಆತನು ಎಂಥವನೆಂದು ಚೆನ್ನಾಗಿ ಗೊತ್ತಾಗುತ್ತದೆ. ಇದರಿಂದ ಆತನೊಂದಿಗಿನ ನಮ್ಮ ಸ್ನೇಹವೂ ಬಲಗೊಳ್ಳುತ್ತದೆ. ದೇವರ ಎಲ್ಲಾ ಸುಂದರ ಗುಣಗಳಲ್ಲಿ ಶಕ್ತಿ, ವಿವೇಕ, ನ್ಯಾಯ, ಮತ್ತು ಪ್ರೀತಿ ಎಂಬ ನಾಲ್ಕು ಗುಣಗಳು ಬಹುಮುಖ್ಯವಾಗಿವೆ.
ದೇವರು ಶಕ್ತಿಶಾಲಿ
“ಕರ್ತನಾದ ಯೆಹೋವನೇ! ಆಹಾ, ನೀನು . . . ನಿನ್ನ ಮಹಾ ಶಕ್ತಿಯಿಂದ ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದೀ.”—ಯೆರೆಮೀಯ 32:17.
ದೇವರ ಶಕ್ತಿಯ ಕುರಿತು ಸೃಷ್ಟಿಯಿಂದ ತಿಳಿದುಕೊಳ್ಳಬಹುದು. ಉದಾಹರಣೆಗೆ, ಬೇಸಗೆಯ ಬಿಸಿಲಿನಲ್ಲಿ ನಿಂತರೆ ನಿಮಗೆ ಯಾವುದರ ಅನುಭವವಾಗುತ್ತದೆ? ಬಿಸಿಯ ಅನುಭವ ಅಲ್ಲವೇ. ಇದಕ್ಕೆ ಕಾರಣ, ಯೆಹೋವನ ಶಕ್ತಿಯೇ. ಯಾಕೆಂದರೆ ಆತನೇ ಸೂರ್ಯನನ್ನು ಸೃಷ್ಟಿ ಮಾಡಿದ್ದಾನೆ. ಸೂರ್ಯನಿಗೆ ಎಷ್ಟು ಶಕ್ತಿ ಇದೆ? ಅದರ ಅತಿ ಹೆಚ್ಚು ತಾಪವು ಸುಮಾರು 2,70,00,000 ಡಿಗ್ರಿ ಫ್ಯಾರನ್ಹೈಟ್ (1,50,00,000°C) ಇರುತ್ತದಂತೆ. ಸೂರ್ಯನಿಂದ ಪ್ರತಿ ಸೆಕೆಂಡಿಗೆ ನೂರಾರು ಲಕ್ಷ ನ್ಯೂಕ್ಲಿಯರ್ ಬಾಂಬುಗಳು ಸ್ಫೋಟಿಸಿದಷ್ಟು ಶಕ್ತಿ ಬಿಡುಗಡೆಯಾಗುತ್ತದೆ.
ವಿಶ್ವದಲ್ಲಿ ಅಸಂಖ್ಯಾತ, ಕೋಟ್ಯಾನುಕೋಟಿ ನಕ್ಷತ್ರಗಳಿವೆ. ಅವುಗಳಲ್ಲಿ ಅನೇಕ ನಕ್ಷತ್ರಗಳಿಗಿಂತ ಸೂರ್ಯ ಚಿಕ್ಕದ್ದು. ಯು.ವೈ. ಸ್ಕುಟಿ ಎಂಬ ಒಂದು ಅತಿದೊಡ್ಡ ನಕ್ಷತ್ರದ ವ್ಯಾಸವು ಸೂರ್ಯನ ವ್ಯಾಸದ 1,700 ಪಟ್ಟು ದೊಡ್ಡದಿದೆ ಎನ್ನುತ್ತಾರೆ ವಿಜ್ಞಾನಿಗಳು. ಯು.ವೈ. ಸ್ಕುಟಿ ನಕ್ಷತ್ರವನ್ನು ಸೂರ್ಯನ ಸ್ಥಾನದಲ್ಲಿಟ್ಟರೆ ಭೂಮಿಯನ್ನೂ ಮೀರಿ ಗುರುಗ್ರಹದ ಪಥದವರೆಗೆ ಬರುವಷ್ಟು ದೊಡ್ಡ ಗಾತ್ರ ಅದಕ್ಕಿದೆ. ಇದನ್ನೆಲ್ಲಾ ನೋಡುವಾಗ ಯೆಹೋವನು ಮಹಾ ಶಕ್ತಿಯಿಂದ ಭೂಮಿ ಆಕಾಶಗಳನ್ನು ಸೃಷ್ಟಿ ಮಾಡಿದ್ದಾನೆ ಎಂಬ ಯೆರೆಮೀಯನ ಮಾತು ನಿಜವೆಂದು ರುಜುವಾಗುತ್ತದೆ.
ದೇವರ ಶಕ್ತಿಯಿಂದ ನಮಗೇನು ಪ್ರಯೋಜನ? ನಮ್ಮ ಜೀವನವು ದೇವರ ಸೃಷ್ಟಿಯಾದ ಸೂರ್ಯ ಮತ್ತು ಭೂಮಿಯಲ್ಲಿರುವ ಎಲ್ಲಾ ಸಂಪನ್ಮೂಲಗಳ ಮೇಲೆ ಹೊಂದಿಕೊಂಡಿದೆ. ಅಷ್ಟೇ ಅಲ್ಲದೆ, ನಮ್ಮಲ್ಲಿ ಪ್ರತಿಯೊಬ್ಬರಿಗೆ ಸಹಾಯ ಮಾಡಲಿಕ್ಕಾಗಿ ದೇವರು ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ. ಉದಾಹರಣೆಗೆ, ಒಂದನೇ ಶತಮಾನದಲ್ಲಿ ದೇವರು ಯೇಸುವಿಗೆ ಅದ್ಭುತಗಳನ್ನು ಮಾಡಲು ಶಕ್ತಿ ಕೊಟ್ಟನು. ಇದರ ಬಗ್ಗೆ ಹೀಗೆ ತಿಳಿಸಲಾಗಿದೆ: “ಕುರುಡರಿಗೆ ಕಣ್ಣು ಕಾಣುತ್ತಿದೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರಿಗೆ ಕಿವಿ ಕೇಳಿಸುತ್ತಿದೆ, ಸತ್ತವರು ಎಬ್ಬಿಸಲ್ಪಡುತ್ತಿದ್ದಾರೆ.” (ಮತ್ತಾಯ 11:5) ಆದರೆ ಈಗಲೂ ದೇವರು ಸಹಾಯ ಮಾಡುತ್ತಾನಾ? ‘ಆತನು ಸೋತವನಿಗೆ ತ್ರಾಣವನ್ನು ಅನುಗ್ರಹಿಸುತ್ತಾನೆ’, “ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು” ಎಂದು ಬೈಬಲ್ ತಿಳಿಸುತ್ತದೆ. (ಯೆಶಾಯ 40:29, 31) ದೇವರು ನಮಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ನೀಡಿ ಜೀವನದಲ್ಲಿ ಬರುವ ಕಷ್ಟ-ಪರೀಕ್ಷೆಗಳನ್ನು ತಾಳಿಕೊಳ್ಳಲು ಸಹಾಯ ಮಾಡುತ್ತಾನೆ. (2 ಕೊರಿಂಥ 4:7) ತನ್ನ ಅಪರಿಮಿತ ಶಕ್ತಿಯನ್ನು ನಮಗೋಸ್ಕರ, ಪ್ರೀತಿಯಿಂದ ಉಪಯೋಗಿಸುವ ದೇವರಿಗೆ ಹತ್ತಿರವಾಗಬೇಕೆಂದು ನಿಮಗೆ ಅನಿಸುವುದಿಲ್ಲವೇ?
ದೇವರು ವಿವೇಕಿ
“ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ (ವಿವೇಕದಿಂದಲೇ, NW) ಮಾಡಿದ್ದೀ.”—ಕೀರ್ತನೆ 104:24.
ದೇವರು ಸೃಷ್ಟಿಸಿದ ವಿಷಯಗಳ ಬಗ್ಗೆ ನಾವು ಎಷ್ಟು ಹೆಚ್ಚು ಕಲಿಯುತ್ತೇವೋ ಅದರಿಂದ ಆತನ ವಿವೇಕದ ಬಗ್ಗೆ ತಿಳಿದು ನಮಗೆ ಅಷ್ಟೇ ಹೆಚ್ಚು ಆಶ್ಚರ್ಯವಾಗುತ್ತದೆ. ಇಂದು ವಿಜ್ಞಾನಿಗಳು ಯೆಹೋವನ ಸೃಷ್ಟಿಯನ್ನು ಪರೀಕ್ಷಿಸುತ್ತಿದ್ದಾರೆ ಮತ್ತು ತಾವು ನಿರ್ಮಿಸಿರುವ ವಸ್ತುಗಳ ಗುಣಮಟ್ಟಗಳನ್ನು ಉತ್ತಮಗೊಳಿಸಲು ಸೃಷ್ಟಿಯಲ್ಲಿರುವ ಕೆಲವು ವಿನ್ಯಾಸಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದನ್ನು ಬಯೋಮಿಮೆಟಿಕ್ಸ್ ಅಥವಾ ಬಯೋಮಿಮಿಕ್ರಿ ಎನ್ನುತ್ತಾರೆ. ಸಾಧಾರಣವಾದ ಅಂಟಿನಿಂದ ಹಿಡಿದು ವಿಮಾನಗಳಂಥ ದೊಡ್ಡ ನಿರ್ಮಾಣಗಳಲ್ಲಿ ಈ ರೀತಿ ಸೃಷ್ಟಿಯ ವಿನ್ಯಾಸಗಳನ್ನು ಅಳವಡಿಸಿದ್ದಾರೆ.
ದೇವರ ವಿವೇಕವನ್ನು ಎಲ್ಲದಕ್ಕಿಂತ ಹೆಚ್ಚಾಗಿ ಮಾನವ ಶರೀರದ ರಚನೆಯಲ್ಲಿ ನೋಡಬಹುದು. ಉದಾಹರಣೆಗೆ, ಮಾನವ ಶರೀರ ಹೇಗೆ ಬೆಳೆಯುತ್ತದೆ ಎಂದು ಗಮನಿಸಿ. ಇದು ಕೇವಲ ಒಂದು ಫಲೀಕರಿಸಿದ ಜೀವಕೋಶದಿಂದ ಆರಂಭವಾಗುತ್ತದೆ. ಆ ಜೀವಕೋಶದಲ್ಲಿ ಅದರ ವಂಶಾವಳಿಯ ಕುರಿತು ಪೂರ್ತಿ ಮಾಹಿತಿ ಇರುತ್ತದೆ. ಆ ಜೀವಕೋಶ ವಿಭಜನೆಗೊಂಡು ಒಂದೇ ರೀತಿಯ ಅನೇಕ ಜೀವಕೋಶಗಳಾಗುತ್ತವೆ. ಆದರೆ, ಒಂದು ಹಂತದಲ್ಲಿ, ಜೀವಕೋಶಗಳು ಬೇರೆ ಬೇರೆ ರೀತಿಯಾಗಿ ವಿನ್ಯಾಸಗೊಳ್ಳುತ್ತವೆ. ರಕ್ತದ ಜೀವಕೋಶಗಳು, ನರ ಜೀವಕೋಶಗಳು, ಮೂಳೆಯ ಜೀವಕೋಶಗಳು ಹೀಗೆ ನೂರಾರು ವಿಧಗಳಾಗುತ್ತವೆ. ಬಲುಬೇಗನೆ ನರವ್ಯೂಹ ರಚನೆಯಾಗಿ ಕೆಲಸ ಮಾಡಲು ಆರಂಭಿಸುತ್ತದೆ. ಹೀಗೆ ಕೇವಲ 9 ತಿಂಗಳಲ್ಲಿ ಒಂದು ಜೀವಕೋಶವು ಕೋಟ್ಯಾಂತರ ಜೀವಕೋಶಗಳಿರುವ ಒಂದು ಮಗುವಾಗುತ್ತದೆ. ಈ ವಿನ್ಯಾಸದ ಬಗ್ಗೆ ಕಲಿತಾಗ ಅನೇಕರು ಬೈಬಲಿನ ಒಬ್ಬ ಬರಹಗಾರನ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.”—ಕೀರ್ತನೆ 139:14.
ದೇವರ ವಿವೇಕದಿಂದ ನಮಗೇನು ಪ್ರಯೋಜನ? ನಾವು ಸಂತೋಷವಾಗಿರಬೇಕಾದರೆ ಏನು ಅಗತ್ಯ ಅಂತ ನಮ್ಮ ಸೃಷ್ಟಿಕರ್ತನಿಗೆ ಗೊತ್ತಿದೆ. ಆತನು ತನ್ನ ಅಪಾರ ಜ್ಞಾನ ಮತ್ತು ತಿಳಿವಳಿಕೆಯಿಂದ ತನ್ನ ವಾಕ್ಯವಾದ ಬೈಬಲಿನಲ್ಲಿ ವಿವೇಕಯುತ ಸಲಹೆಗಳನ್ನು ಕೊಟ್ಟಿದ್ದಾನೆ. ಉದಾಹರಣೆಗೆ, “ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ” ಎನ್ನುತ್ತದೆ ಬೈಬಲ್. (ಕೊಲೊಸ್ಸೆ 3:13) ಈ ಸಲಹೆ ವಿವೇಕಯುತವಾಗಿದೆಯಾ? ಹೌದು. ಒಬ್ಬನಿಗೆ ಕ್ಷಮಿಸುವ ಗುಣ ಇದ್ದರೆ ಅವನು ಹಾಯಾಗಿ ನಿದ್ರಿಸುತ್ತಾನೆ, ಅವನ ರಕ್ತದೊತ್ತಡ ಸರಿಯಾಗಿರುತ್ತದೆ. ಮಾತ್ರವಲ್ಲ, ಖಿನ್ನತೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳೂ ಕಡಿಮೆಯಾಗಬಹುದು ಎಂದು ವೈದ್ಯರು ಸಂಶೋಧನೆಯಿಂದ ತಿಳಿದುಕೊಂಡಿದ್ದಾರೆ. ನಮ್ಮನ್ನು ಪ್ರೀತಿಸುವ, ವಿವೇಕವಿರುವ ಒಬ್ಬ ಒಳ್ಳೇ ಸ್ನೇಹಿತನಂತೆ ದೇವರು ನಮಗೆ ಯಾವಾಗಲೂ ಪ್ರಯೋಜನಕರ ಸಲಹೆಯನ್ನು ನೀಡುತ್ತಾನೆ. (2 ತಿಮೊಥೆಯ 3:16, 17) ಅಂಥ ಸ್ನೇಹಿತನು ನನಗಿರಬೇಕು ಅಂತ ನಿಮಗನಿಸುವುದಿಲ್ಲವೇ?
ದೇವರು ನ್ಯಾಯವಂತನು
“ಯೆಹೋವನು ನ್ಯಾಯವನ್ನು ಮೆಚ್ಚುವವನು.”—ಕೀರ್ತನೆ 37:28.
ದೇವರು ಯಾವಾಗಲೂ ನ್ಯಾಯವಾಗಿರುವುದನ್ನೇ ಮಾಡುತ್ತಾನೆ. ‘ಕೆಟ್ಟದ್ದನ್ನು ಮಾಡಬೇಕು, ಅನ್ಯಾಯವನ್ನು ನಡಿಸಬೇಕೆಂಬ’ ಯೋಚನೆ ಸಹ ದೇವರಿಗೆ ಬರುವುದಿಲ್ಲ. (ಯೋಬ 34:10) ಆತನು ಕೊಡುವ ತೀರ್ಪು ನ್ಯಾಯವಾಗಿರುತ್ತದೆ. ಆದ್ದರಿಂದಲೇ ಯೆಹೋವನು ‘ನೀತಿಯಿಂದ ಆಳುತ್ತಾನೆ’ ಎಂದು ಕೀರ್ತನೆಗಾರನು ಹೇಳಿದ್ದಾನೆ. (ಕೀರ್ತನೆ 67:4) “ಯೆಹೋವನು . . . ಹೃದಯವನ್ನೇ ನೋಡುವವನಾಗಿದ್ದಾನೆ.” ಹಾಗಾಗಿ, ಆತನು ಜನರ ಕಪಟತನದಿಂದ ಮೋಸಹೋಗುವುದಿಲ್ಲ, ಯಾವಾಗಲೂ ಸತ್ಯವನ್ನು ತಿಳಿದುಕೊಂಡು ಸರಿಯಾದ ತೀರ್ಪು ನೀಡಬಲ್ಲನು. (1 ಸಮುವೇಲ 16:7) ಅಷ್ಟೇ ಅಲ್ಲ, ದೇವರು ಭೂಮಿಯಲ್ಲಿ ನಡೆಯುವ ಪ್ರತಿಯೊಂದು ಅನ್ಯಾಯ, ಭ್ರಷ್ಟಾಚಾರವನ್ನು ಗಮನಿಸುತ್ತಿದ್ದಾನೆ ಮತ್ತು ‘ದುಷ್ಟರು ದೇಶದೊಳಗಿಂದ ಕೀಳಲ್ಪಡುವರು’ ಎಂದು ಮಾತುಕೊಟ್ಟಿದ್ದಾನೆ.—ಜ್ಞಾನೋಕ್ತಿ 2:22.
ಆದರೂ, ದೇವರು ಶಿಕ್ಷೆ ನೀಡಲು ತುದಿಗಾಲಲ್ಲಿ ನಿಲ್ಲುವ ಕಠೋರ ನ್ಯಾಯಾಧೀಶನಲ್ಲ. ಸೂಕ್ತವಾಗಿರುವಾಗೆಲ್ಲಾ ಆತನು ಕರುಣೆ ತೋರಿಸುತ್ತಾನೆ. ದುಷ್ಟರು ನಿಜವಾಗಿಯೂತಮ್ಮ ತಪ್ಪಿಗಾಗಿ ಪಶ್ಚಾತ್ತಾಪಪಟ್ಟರೆ ‘ಯೆಹೋವನು ಕನಿಕರ, ದಯೆ’ ತೋರಿಸುತ್ತಾನೆ ಎಂದು ಬೈಬಲ್ ಹೇಳುತ್ತದೆ. ಇದೇ ನಿಜವಾದ ನ್ಯಾಯವಲ್ಲವೇ?—ಕೀರ್ತನೆ 103:8; 2 ಪೇತ್ರ 3:9.
ದೇವರ ನ್ಯಾಯದಿಂದ ನಮಗೇನು ಪ್ರಯೋಜನ? ಅಪೊಸ್ತಲ ಪೇತ್ರನು ಹೀಗೆ ಹೇಳಿದನು: “ದೇವರು ಪಕ್ಷಪಾತಿಯಲ್ಲ . . . ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.” (ಅಪೊಸ್ತಲರ ಕಾರ್ಯಗಳು 10:34, 35) ದೇವರು ಯಾವತ್ತೂ ಪಕ್ಷಪಾತ ಮಾಡುವುದಿಲ್ಲ. ನಾವು ಯಾವುದೇ ಜಾತಿ, ದೇಶದವರಾಗಿರಲಿ, ಸಮಾಜದಲ್ಲಿ ನಮಗೆ ಯಾವುದೇ ಸ್ಥಾನವಿರಲಿ, ಶಿಕ್ಷಣ ಎಷ್ಟೇ ಇರಲಿ ಆತನು ನಮ್ಮನ್ನು ಸ್ವೀಕರಿಸುತ್ತಾನೆ ಮತ್ತು ನಾವಾತನ ಆರಾಧಕರಾಗಬಹುದು. ಇದೇ ಆತನ ನ್ಯಾಯದಿಂದ ನಮಗೆ ಸಿಗುವ ಪ್ರಯೋಜನ.
ನಾವು ಆತನ ನ್ಯಾಯವನ್ನು ಅರ್ಥಮಾಡಿಕೊಳ್ಳಬೇಕು ಅದರಿಂದ ಪ್ರಯೋಜನ ಪಡೆಯಬೇಕು ಎಂದು ದೇವರು ಬಯಸುವುದರಿಂದಲೇ ಆತನು ನಮಗೆ ಮನಸ್ಸಾಕ್ಷಿಯನ್ನು ನೀಡಿದ್ದಾನೆ. ಮನಸ್ಸಾಕ್ಷಿಯನ್ನು ‘ಹೃದಯದಲ್ಲಿ ಬರೆಯಲಾಗಿರುವ’ ಧರ್ಮಶಾಸ್ತ್ರ ಎಂದು ಬೈಬಲ್ ವರ್ಣಿಸುತ್ತದೆ. ಇದು ನಮ್ಮ ನಡತೆ ಸರಿಯೋ ತಪ್ಪೋ ಎಂದು ತಿಳಿಸುತ್ತದೆ. (ರೋಮನ್ನರಿಗೆ 2:15) ಇದರಿಂದ ನಮಗೇನು ಪ್ರಯೋಜನ? ಸರಿಯಾಗಿ ತರಬೇತಿ ಪಡೆದ ಮನಸ್ಸಾಕ್ಷಿಯು ನಮ್ಮನ್ನು ಹಾನಿಕರ ಮತ್ತು ಅನ್ಯಾಯದ ಕೆಲಸಗಳಿಂದ ದೂರವಿರಲು ಪ್ರೇರೇಪಿಸುತ್ತದೆ. ನಾವು ತಪ್ಪು ಮಾಡಿದಾಗ ಪಶ್ಚಾತ್ತಾಪಪಟ್ಟು ತಿದ್ದಿಕೊಳ್ಳಲು ಈ ಮನಸ್ಸಾಕ್ಷಿ ಸಹಾಯ ಮಾಡುತ್ತದೆ. ದೇವರ ನ್ಯಾಯದ ಮಟ್ಟಗಳನ್ನು ಅರ್ಥಮಾಡಿಕೊಳ್ಳುವುದರಿಂದ ನಮಗೆ ಸಹಾಯವಾಗುತ್ತದೆ ಮತ್ತು ಆತನಿಗೆ ಹತ್ತಿರವಾಗುವಂತೆ ಮಾಡುತ್ತದೆ.
ದೇವರು ಪ್ರೀತಿಯಾಗಿದ್ದಾನೆ
“ದೇವರು ಪ್ರೀತಿಯಾಗಿದ್ದಾನೆ.”—1 ಯೋಹಾನ 4:8.
ದೇವರು ಶಕ್ತಿ, ವಿವೇಕ ಮತ್ತು ನ್ಯಾಯ ಎಂಬ ಗುಣಗಳನ್ನು ತೋರಿಸುತ್ತಾನೆ ಎಂದು ಬೈಬಲಿನಲ್ಲಿದೆಯೇ ಹೊರತು ದೇವರು ಶಕ್ತಿಯಾಗಿದ್ದಾನೆ, ವಿವೇಕವಾಗಿದ್ದಾನೆ ಅಥವಾ ನ್ಯಾಯವಾಗಿದ್ದಾನೆ ಎಂದಲ್ಲ. ಆದರೆ ಆತನು ಪ್ರೀತಿಯಾಗಿದ್ದಾನೆ ಎಂದು ಅದರಲ್ಲಿದೆ. ಯಾಕೆಂದರೆ, ದೇವರಿಗೆ ತನ್ನ ಶಕ್ತಿಯಿಂದ ಕ್ರಿಯೆಗೈಯಲು ಸಾಧ್ಯವಾಗುತ್ತದೆ, ವಿವೇಕ ಮತ್ತು ನ್ಯಾಯ ಆತನು ಹೇಗೆ ಕ್ರಿಯೆಗೈಯಬೇಕೆಂದು ಮಾರ್ಗದರ್ಶಿಸುತ್ತದೆ. ಆದರೆ ಪ್ರೀತಿ ಆತನಿಗೆ ಕ್ರಿಯೆಗೈಯುವಂತೆ ಪ್ರೇರೇಪಿಸುತ್ತದೆ. ಪ್ರೀತಿಯು ಆತನ ಪ್ರತಿಯೊಂದು ಕ್ರಿಯೆಗಳನ್ನು ಪ್ರಭಾವಿಸುತ್ತದೆ.
ಯೆಹೋವನಿಗೆ ಯಾವುದೇ ಕೊರತೆ ಇಲ್ಲದಿದ್ದರೂ ಆತನು ಸ್ವರ್ಗದಲ್ಲೂ, ಭೂಮಿಯಲ್ಲೂ ಬುದ್ಧಿಶಕ್ತಿಯುಳ್ಳ ಜೀವಿಗಳನ್ನು ಸೃಷ್ಟಿಮಾಡಿದನು. ಅವರು ಆತನ ಪ್ರೀತಿ ಮತ್ತು ಕಾಳಜಿಯಿಂದ ಪ್ರಯೋಜನ ಪಡೆದು ಸಂತೋಷವಾಗಿರುವಂತೆ ಮಾಡಿದನು. ಹೀಗೆ ಮಾಡುವಂತೆ ಆತನನ್ನು ಪ್ರೇರೇಪಿಸಿದ್ದು ಪ್ರೀತಿಯೇ. ಆತನು ನಿಸ್ವಾರ್ಥದಿಂದ ಭೂಮಿಯನ್ನು ಮಾನವರು ಬದುಕಲು ಸಾಧ್ಯವಾಗುವ ರೀತಿಯಲ್ಲಿ ಮಾಡಿದನು. ಆತನು ಈಗಲೂ ಎಲ್ಲಾ ಮಾನವರಿಗೆ ಪ್ರೀತಿ ತೋರಿಸುತ್ತಲೇ ಇದ್ದಾನೆ. ಹೇಗೆಂದರೆ, “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.”—ಮತ್ತಾಯ 5:45.
ಅಷ್ಟೇ ಅಲ್ಲದೆ, “ಯೆಹೋವನು ಕೋಮಲವಾದ ಮಮತೆಯುಳ್ಳವನೂ ಕರುಣಾಳುವೂ ಆಗಿದ್ದಾನೆ.” (ಯಾಕೋಬ 5:11) ಆತನನ್ನು ತಿಳಿದುಕೊಳ್ಳಲು ಮತ್ತು ಆತನಿಗೆ ಹತ್ತಿರವಾಗಲು ಯಾರು ನಿಜವಾಗಿಯೂ ಬಯಸುತ್ತಾರೋ ಅವರಿಗೆ ಆತನು ಪ್ರೀತಿ ತೋರಿಸುತ್ತಾನೆ. ಅಂಥ ಒಬ್ಬೊಬ್ಬ ವ್ಯಕ್ತಿಯನ್ನೂ ದೇವರು ಗಮನಿಸುತ್ತಾನೆ. “ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ.”—ಅಪೊಸ್ತಲರ ಕಾರ್ಯಗಳು 17:27.
ದೇವರ ಪ್ರೀತಿಯಿಂದ ನಮಗೇನು ಪ್ರಯೋಜನ? ಸೂರ್ಯಾಸ್ತಮಾನದ ಸೌಂದರ್ಯ ನೋಡಿ ನಾವು ಆನಂದಿಸುತ್ತೇವೆ. ಮಗು ನಗುವುದನ್ನು ಕೇಳುವಾಗ ಸಂತೋಷಿಸುತ್ತೇವೆ. ಕುಟುಂಬದವರ ಪ್ರೀತಿಯನ್ನು ಅಮೂಲ್ಯವಾಗಿ ನೋಡುತ್ತೇವೆ. ಇವು ನಮಗೆ ಬದುಕಲು ಅತ್ಯಗತ್ಯ ಅಲ್ಲದಿದ್ದರೂ ನಮ್ಮ ಬದುಕಿಗೆ ಅಂದ ನೀಡುತ್ತವೆ.
ದೇವರು ನಮಗೆ ಪ್ರೀತಿ ತೋರಿಸುತ್ತಿರುವ ಇನ್ನೊಂದು ವಿಧ ಪ್ರಾರ್ಥನೆ ಮಾಡುವ ಅವಕಾಶವಾಗಿದೆ. ಇದರಿಂದಲೂ ನಾವು ಪ್ರಯೋಜನ ಪಡೆಯುತ್ತೇವೆ. ಬೈಬಲ್ ನಮಗೆ ಹೀಗೆ ಉತ್ತೇಜಿಸುತ್ತದೆ: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ.” ಪ್ರೀತಿಯ ತಂದೆಯಂತೆ ಯೆಹೋವನು, ನಮ್ಮ ವೈಯಕ್ತಿಕ ಚಿಂತೆಗಳ ವಿಷಯದಲ್ಲಿ ನಾವಾತನ ಸಹಾಯ ಪಡೆಯಬೇಕೆಂದು ಬಯಸುತ್ತಾನೆ. ನಾವು ಹಾಗೆ ಮಾಡಿದರೆ, ಆತನು ನಿಸ್ವಾರ್ಥ ಪ್ರೀತಿಯಿಂದ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ” ಕೊಡುತ್ತೇನೆಂದು ಮಾತುಕೊಟ್ಟಿದ್ದಾನೆ.—ಫಿಲಿಪ್ಪಿ 4:6, 7.
ದೇವರ ಮುಖ್ಯ ಗುಣಗಳಾದ ಶಕ್ತಿ, ವಿವೇಕ, ನ್ಯಾಯ ಮತ್ತು ಪ್ರೀತಿಯ ಕುರಿತು ತಿಳಿದುಕೊಂಡಿದ್ದರಿಂದ ದೇವರು ಎಂಥವನು ಎಂದು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಲು ನಿಮಗೆ ಸಾಧ್ಯವಾಯಿತಲ್ಲವೇ? ಆತನ ಬಗ್ಗೆ ಇನ್ನೂ ಹೆಚ್ಚನ್ನು ತಿಳಿದುಕೊಳ್ಳಲು ದಯವಿಟ್ಟು, ಆತನು ನಿಮ್ಮ ಪ್ರಯೋಜನಕ್ಕಾಗಿ ಏನೆಲ್ಲಾ ಮಾಡಿದ್ದಾನೆ ಮತ್ತು ಏನೆಲ್ಲಾ ಮಾಡುತ್ತಾನೆ ಎಂದು ತಿಳಿಯಿರಿ.
ದೇವರು ಎಂಥವನು? ಯೆಹೋವನು ಎಲ್ಲರಿಗಿಂತ ಹೆಚ್ಚು ಶಕ್ತಿಶಾಲಿ, ವಿವೇಕಿ ಮತ್ತು ನ್ಯಾಯವಂತನು. ಆದರೆ ಆತನಲ್ಲಿ ನಮಗೆ ತುಂಬ ಇಷ್ಟವಾಗುವ ಗುಣ ಪ್ರೀತಿ