ದೇವರನ್ನು ಪ್ರೀತಿಸುವುದು ಏನನ್ನು ಅರ್ಥೈಸುತ್ತದೆ?
ಸುಮಾರು ಆರು ಸಾವಿರ ವರ್ಷಗಳ ಹಿಂದೆ, ಪ್ರಥಮ ಮಾನವ ಶಿಶುವು ಜನಿಸಿತು. ಅವನ ಜನನದ ನಂತರ, ಅವನ ತಾಯಿಯಾದ ಹವ್ವಳು ಹೇಳಿದ್ದು: “ಯೆಹೋವನ ಅನುಗ್ರಹದಿಂದ ಗಂಡುಮಗುವನ್ನು ಪಡೆದಿದ್ದೇನೆ.” (ಆದಿಕಾಂಡ 4:1) ಆಕೆಯ ಹೇಳಿಕೆಯು ಪ್ರಕಟಿಸುವುದೇನೆಂದರೆ, ತಮ್ಮ ದಂಗೆಗಾಗಿ ಈಗಾಗಲೇ ಮರಣದಂಡನೆಗೆ ಗುರಿಮಾಡಲ್ಪಟ್ಟಿದ್ದರೂ, ಹವ್ವ ಮತ್ತು ಆಕೆಯ ಗಂಡನಾದ ಆದಾಮನು, ಯೆಹೋವನ ದೇವತ್ವದ ಕುರಿತು ಇನ್ನೂ ಅರಿವುಳ್ಳವರಾಗಿದ್ದರು. ತದನಂತರ ಅವರು ಎರಡನೆಯ ಮಗನನ್ನು ಪಡೆದರು. ಹುಡುಗರು ಕಾಯಿನ ಮತ್ತು ಹೇಬೆಲರೆಂದು ಹೆಸರಿಸಲ್ಪಟ್ಟರು.
ಗಂಡುಮಕ್ಕಳು ಬೆಳೆದಂತೆ, ಕೇವಲ ಯೆಹೋವನ ಸೃಷ್ಟಿಯನ್ನು ಪರೀಕ್ಷಿಸುವ ಮೂಲಕ ಅವರು ಆತನ ಪ್ರೀತಿಯ ಕುರಿತು ಹೆಚ್ಚಿನ ವಿಷಯವನ್ನು ನಿಸ್ಸಂದೇಹವಾಗಿ ಕಲಿತರು. ನಿಸರ್ಗದಲ್ಲಿರುವ ಸುಂದರವಾದ ಬಣ್ಣಗಳನ್ನು ಮತ್ತು ವೈವಿಧ್ಯಮಯವಾದ ಪ್ರಾಣಿ ಹಾಗೂ ಸಸ್ಯಗಳಲ್ಲಿ ಅವರು ಆನಂದಿಸಿದರು. ದೇವರು ಅವರಿಗೆ ಜೀವವನ್ನು ಮಾತ್ರವಲ್ಲ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನೂ ಆತನು ಕೊಟ್ಟನು.
ತಮ್ಮ ಹೆತ್ತವರು ಪರಿಪೂರ್ಣರಾಗಿ ಸೃಷ್ಟಿಸಲ್ಪಟ್ಟಿದ್ದರೆಂದು ಮತ್ತು ಮಾನವರು ಸದಾಕಾಲ ಜೀವಿಸಬೇಕೆಂಬುದು ಯೆಹೋವನ ಮೂಲ ಉದ್ದೇಶವಾಗಿತ್ತೆಂದು ಅವರು ಕಲಿತರು. ಬಹುಶಃ ಆದಾಮ ಹವ್ವರು ಅವರಿಗೆ ಸುಂದರವಾದ ಏದೆನ್ ತೋಟವನ್ನು ವರ್ಣಿಸಿದರು, ಮತ್ತು ಇಂತಹ ಒಂದು ಪ್ರಮೋದವನ್ಯ ಮನೆಯಿಂದ ಅವರೇಕೆ ಹೊರಹಾಕಲ್ಪಟ್ಟಿದ್ದರೆಂಬುದನ್ನು ತಾವು ಹೇಗಾದರೂ ವಿವರಿಸಬೇಕಾಗಿತ್ತು. ಕಾಯಿನ ಮತ್ತು ಹೇಬೆಲರು ಆದಿಕಾಂಡ 3:15ರಲ್ಲಿ ದಾಖಲಿಸಲ್ಪಟ್ಟಿರುವ ದೈವಿಕ ಪ್ರವಾದನೆಯ ಕುರಿತೂ ಅರಿವುಳ್ಳವರಾಗಿದ್ದಿರಬಹುದು. ಆ ಪ್ರವಾದನೆಯ ಮೂಲಕ ಯೆಹೋವನು, ತನ್ನನ್ನು ಪ್ರೀತಿಸುವ ಮತ್ತು ತನಗೆ ನಿಷ್ಠಾವಂತರಾಗಿ ಪರಿಣಮಿಸುವವರ ಪ್ರಯೋಜನಕ್ಕಾಗಿ, ಸಕಾಲದಲ್ಲಿ ವಿಷಯಗಳನ್ನು ನೇರ್ಪಡಿಸುವ ಆತನ ಉದ್ದೇಶವನ್ನು ವ್ಯಕ್ತಪಡಿಸಿದನು.
ಯೆಹೋವ ಮತ್ತು ಆತನ ಗುಣಗಳ ಕುರಿತು ಕಲಿಯುವುದು, ಕಾಯಿನ ಮತ್ತು ಹೇಬೆಲರಲ್ಲಿ ದೇವರ ಅನುಗ್ರಹಕ್ಕಾಗಿ ಒಂದು ಬಯಕೆಯನ್ನು ಹುಟ್ಟಿಸಿದ್ದಿರಬೇಕು. ಆದುದರಿಂದ ಅವರು ಯೆಹೋವನಿಗೆ ಕಾಣಿಕೆಗಳನ್ನು ಅರ್ಪಿಸುವ ಮೂಲಕ ಆತನನ್ನು ಸಮೀಪಿಸಿದರು. ಬೈಬಲ್ ವೃತ್ತಾಂತವು ಹೇಳುವುದು: “ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮಮಾಡಿದನು.”—ಆದಿಕಾಂಡ 4:3, 4.
ದೇವರ ಅನುಗ್ರಹಕ್ಕಾಗಿದ್ದ ಅವರ ಬಯಕೆಯು, ಆತನೊಂದಿಗೆ ಒಂದು ಸಂಬಂಧಕ್ಕಾಗಿ ಆಧಾರವನ್ನು ಸ್ಥಾಪಿಸಿತು. ಕಾಯಿನನು ದೇವರ ವಿರುದ್ಧ ದಂಗೆಯೇಳುವ ಮಟ್ಟವನ್ನು ತಲಪಿದನಾದರೂ, ಹೇಬೆಲನು ದೇವರ ಯಥಾರ್ಥ ಪ್ರೀತಿಯಿಂದ ಪ್ರಚೋದಿಸಲ್ಪಡುತ್ತಾ ಇದ್ದನು. ಪ್ರಥಮವಾಗಿ ಯೆಹೋವನ ವ್ಯಕ್ತಿತ್ವ ಹಾಗೂ ಆತನ ಉದ್ದೇಶಗಳ ಕುರಿತು ಜ್ಞಾನವನ್ನು ಗಳಿಸಿದ್ದಿರದ ಹೊರತು, ಹೇಬೆಲನು ದೇವರೊಂದಿಗೆ ಇಂತಹ ಒಂದು ಸಂಬಂಧವನ್ನು ಎಂದಿಗೂ ವಿಕಸಿಸಿಕೊಳ್ಳುತ್ತಿರಲಿಲ್ಲ.
ನೀವು ಸಹ ಯೆಹೋವನನ್ನು ಅರಿಯಬಲ್ಲಿರಿ. ದೃಷ್ಟಾಂತಕ್ಕೆ ಬೈಬಲಿನಲ್ಲಿ, ದೇವರು ಆಕಸ್ಮಿಕವಾಗಿ ವಿಷಯಗಳನ್ನು ಸೃಷ್ಟಿಸುವ ಕೇವಲ ಒಂದು ನಿರ್ಜೀವ ಶಕ್ತಿಯಲ್ಲ, ಒಬ್ಬ ನಿಜವಾದ ವ್ಯಕ್ತಿಯೆಂದು ನೀವು ಕಲಿಯಬಲ್ಲಿರಿ. (ಹೋಲಿಸಿ ಯೋಹಾನ 7:28; ಇಬ್ರಿಯ 9:24; ಪ್ರಕಟನೆ 4:11.) ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು,” ಎಂದು ಸಹ ಬೈಬಲು ಕಲಿಸುತ್ತದೆ.—ವಿಮೋಚನಕಾಂಡ 34:6.
“ಯಜ್ಞವನ್ನರ್ಪಿಸುವದಕ್ಕಿಂತ ವಿಧೇಯರಾಗುವುದು ಉತ್ತಮವಾಗಿದೆ”
ಕಾಯಿನ ಮತ್ತು ಹೇಬೆಲರ ವೃತ್ತಾಂತದಿಂದ ದೃಷ್ಟಾಂತಿಸಲ್ಪಟ್ಟಂತೆ, ದೇವರ ಕುರಿತಾದ ಜ್ಞಾನವನ್ನು ಮತ್ತು ಆತನೊಂದಿಗೆ ಒಂದು ಆಪ್ತ ಸಂಬಂಧಕ್ಕಾಗಿ ಬಯಕೆಯನ್ನು ಪಡೆದಿರುವುದು ಮಾತ್ರ ಸಾಲದು. ಇಬ್ಬರೂ ಸಹೋದರರು ದೇವರನ್ನು ಕಾಣಿಕೆಗಳೊಂದಿಗೆ ಸಮೀಪಿಸಿದರು, ನಿಜ. ಆದರೂ, “ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಇದರಿಂದ ಕಾಯಿನನು ಬಹು ಕೋಪಗೊಂಡನು; ಅವನ ಮುಖವು ಕಳೆಗುಂದಿತು.”—ಆದಿಕಾಂಡ 4:3-5.
ಯೆಹೋವನು ಕಾಯಿನನ ಯಜ್ಞಾರ್ಪಣೆಯನ್ನು ಏಕೆ ತಿರಸ್ಕರಿಸಿದನು? ಅವನ ಕಾಣಿಕೆಯ ಗುಣಮಟ್ಟದಲ್ಲಿ ಯಾವ ಕೊರತೆಯಾದರೂ ಇತ್ತೊ? ಕಾಯಿನನು ಪ್ರಾಣಿಯ ಯಜ್ಞಾರ್ಪಣೆಯ ಬದಲು “ಹೊಲದ ಬೆಳೆ”ಯನ್ನು ಅರ್ಪಿಸಿದುದರಿಂದ, ಯೆಹೋವನು ರೇಗಿಸಲ್ಪಟ್ಟನೊ? ಕಾರಣವು ಅದಾಗಿರದೆ ಇರಬಹುದು. ತದನಂತರ, ದೇವರು ತನ್ನ ಆರಾಧಕರಲ್ಲಿ ಅನೇಕರಿಂದ ಧಾನ್ಯ ಹಾಗೂ ಭೂಮಿಯ ಇತರ ಫಲಗಳ ಕಾಣಿಕೆಗಳನ್ನು ಸಂತೋಷದಿಂದ ಸ್ವೀಕರಿಸಿದನು. (ಯಾಜಕಕಾಂಡ 2:1-16) ಸ್ಪಷ್ಟವಾಗಿಯೇ ಹಾಗಾದರೆ, ಕಾಯಿನನ ಹೃದಯದಲ್ಲಿ ಯಾವುದೊ ವಿಷಯವು ತಪ್ಪಾಗಿತ್ತು. ಯೆಹೋವನು ಕಾಯಿನನ ಹೃದಯವನ್ನು ಓದಸಾಧ್ಯವಿತ್ತು ಮತ್ತು ಆತನು ಅವನನ್ನು ಎಚ್ಚರಿಸಿದ್ದು: “ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು.”—ಆದಿಕಾಂಡ 4:6, 7.
ದೇವರ ಯಥಾರ್ಥವಾದ ಪ್ರೀತಿಯು, ಕೇವಲ ಯಜ್ಞಾರ್ಪಣೆಗಳನ್ನು ಅರ್ಪಿಸುವುದಕ್ಕಿಂತ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಆದುದರಿಂದಲೇ “ಒಳ್ಳೇ ಕೆಲಸ ಮಾಡು”ವಂತೆ ಯೆಹೋವನು ಕಾಯಿನನನ್ನು ಉತ್ತೇಜಿಸಿದನು. ದೇವರು ವಿಧೇಯತೆಯನ್ನು ಬಯಸಿದನು. ದೇವರಿಗೆ ತೋರಿಸುವ ಇಂತಹ ವಿಧೇಯತೆಯು, ಸೃಷ್ಟಿಕರ್ತನೊಂದಿಗೆ ಒಂದು ಪ್ರೀತಿಯ ಸಂಬಂಧಕ್ಕಾಗಿ ಒಳ್ಳೆಯ ಆಧಾರವನ್ನು ರೂಪಿಸುವಂತೆ ಕಾಯಿನನಿಗೆ ಸಹಾಯ ಮಾಡಿರುತ್ತಿತ್ತು. ಬೈಬಲು ವಿಧೇಯತೆಯ ಮೌಲ್ಯವನ್ನು ಈ ಮಾತುಗಳಿಂದ ಒತ್ತಿಹೇಳುತ್ತದೆ: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು [“ವಿಧೇಯರಾಗುವುದು,” NW] ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.”—1 ಸಮುವೇಲ 15:22.
ವಿಧೇಯತೆಯ ಪ್ರಮುಖತೆಯು ತದನಂತರ 1 ಯೋಹಾನ 5:3ರ ಮಾತುಗಳಿಂದ ಚೆನ್ನಾಗಿ ಸ್ಥಾಪಿಸಲ್ಪಟ್ಟಿತು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” ಯೆಹೋವನಿಗಾಗಿ ನಮ್ಮ ಪ್ರೀತಿಯನ್ನು ತೋರಿಸುವ ಅತ್ಯುತ್ತಮವಾದ ವಿಧವು, ನಮ್ಮನ್ನು ಆತನ ಅಧಿಕಾರಕ್ಕೆ ಅಧೀನಪಡಿಸಿಕೊಳ್ಳುವುದೇ ಆಗಿದೆ. ಇದರ ಅರ್ಥ ಬೈಬಲಿನ ನೈತಿಕ ಸೂತ್ರಗಳಿಗೆ ವಿಧೇಯತೆ. (1 ಕೊರಿಂಥ 6:9, 10) ಇದರ ಅರ್ಥ, ಒಳ್ಳೆಯದನ್ನು ಪ್ರೀತಿಸುವುದು ಮತ್ತು ಕೆಟ್ಟದ್ದನ್ನು ದ್ವೇಷಿಸುವುದಾಗಿದೆ.—ಕೀರ್ತನೆ 97:10; 101:3; ಜ್ಞಾನೋಕ್ತಿ 8:13.
ದೇವರಿಗಾಗಿ ನಮ್ಮ ಪ್ರೀತಿಯ ಒಂದು ಪ್ರಾಮುಖ್ಯ ಪ್ರದರ್ಶನವು, ನೆರೆಯವರಿಗಾಗಿ ತೋರಿಸುವ ನಮ್ಮ ಪ್ರೀತಿಯೇ ಆಗಿದೆ. ಬೈಬಲು ನಮಗೆ ಹೇಳುವುದು: “ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.”—1 ಯೋಹಾನ 4:20.
ದೇವರೊಂದಿಗೆ ಆಪ್ತತೆಯು ಶಕ್ಯವು
ಕೆಲವರು ಹೇಳಬಹುದು, ‘ನಾನು ಯೆಹೋವನನ್ನು ಆರಾಧಿಸುತ್ತೇನೆ. ಆತನ ನಿಯಮಗಳಿಗೆ ನಾನು ವಿಧೇಯನಾಗುತ್ತೇನೆ. ನನ್ನ ಒಡನಾಡಿಗಳನ್ನು ನ್ಯಾಯವಾಗಿ ಉಪಚರಿಸುತ್ತೇನೆ. ಅದೆಲ್ಲವನ್ನು ನಾನು ಮಾಡುತ್ತೇನೆ. ಆದರೂ, ದೇವರಿಗೆ ನಿಜವಾಗಿಯೂ ಸಮೀಪವಿರುವ ಅನಿಸಿಕೆ ನನಗಾಗುವುದಿಲ್ಲ. ಆತನಿಗಾಗಿ ಬಲವಾದ ಪ್ರೀತಿಯ ಅನಿಸಿಕೆ ನನಗಾಗುವುದಿಲ್ಲ, ಮತ್ತು ಅದು ನನ್ನನ್ನು ದೋಷಿಯೆಂದು ಭಾವಿಸುವಂತೆ ಮಾಡುತ್ತದೆ.’ ಯೆಹೋವನೊಂದಿಗೆ ಅಂತಹ ಒಂದು ಆಪ್ತವಾದ ಸಂಬಂಧವನ್ನು ಸಾಧಿಸಲು ತಾವು ಅರ್ಹರಲ್ಲವೆಂದು ಕೆಲವರು ಯೋಚಿಸಬಹುದು.
ಯೆಹೋವನಿಗೆ ಬಹುಮಟ್ಟಿಗೆ 37 ವರ್ಷಗಳ ಸಮರ್ಪಿತ ಸೇವೆಯ ನಂತರ, ಒಬ್ಬ ಕ್ರೈಸ್ತನು ಬರೆದುದು: “ನನ್ನ ಜೀವನದಲ್ಲಿ, ಯೆಹೋವನಿಗೆ ಮಾಡಿದ ನನ್ನ ಸೇವೆಯಲ್ಲಿ ನಾನು ಔಪಚಾರಿಕವಾಗಿದ್ದೆ ಎಂದೂ, ಬಹುಶಃ ಅದರಲ್ಲಿ ನನ್ನ ಹೃದಯವೂ ಇರಲಿಲ್ಲವೆಂದೂ ನನಗೆ ಅನೇಕ ವೇಳೆ ಅನಿಸಿದೆ. ಆದರೆ ಯೆಹೋವನಿಗೆ ಸೇವೆ ಸಲ್ಲಿಸುವುದು ಮಾಡಬೇಕಾದ ಸರಿಯಾದ ವಿಷಯವೆಂದು ನನಗೆ ಗೊತ್ತಿತ್ತು, ಮತ್ತು ಅದನ್ನು ನಿಲ್ಲಿಸಲು ನಾನು ನನ್ನನ್ನು ಅನುಮತಿಸುತ್ತಿರಲಿಲ್ಲ. ಹಾಗಿದ್ದರೂ, ಪ್ರತಿ ಬಾರಿ ಯಾರಾದರೂ, ಅವನ ಇಲ್ಲವೆ ಅವಳ ‘ಹೃದಯವು ಯೆಹೋವನಿಗಾಗಿ ಪ್ರೀತಿಯಿಂದ ಉಕ್ಕಿತು’ ಎಂಬುದಾಗಿ ಹೇಳುವುದರ ಕುರಿತು ಓದುವಾಗ, ‘ಆ ರೀತಿ ನನಗೆ ಎಂದೂ ಅನಿಸದ ಕಾರಣ, ನನ್ನಲ್ಲಿ ಯಾವ ದೋಷವಿದೆ?’ ಎಂದು ನಾನು ಕುತೂಹಲಪಡುತ್ತಿದ್ದೆ.” ನಾವು ದೇವರೊಂದಿಗೆ ಆಪ್ತತೆಯನ್ನು ಹೇಗೆ ಕಂಡುಕೊಳ್ಳಬಲ್ಲೆವು?
ನೀವು ಯಾರಾದರೊಬ್ಬರನ್ನು ನಿಜವಾಗಿಯೂ ಪ್ರೀತಿಸುವಾಗ, ಆ ವ್ಯಕ್ತಿಯ ಕುರಿತು ನೀವು ಅನೇಕ ಬಾರಿ ಯೋಚಿಸುತ್ತೀರಿ. ನೀವು ಅವನನ್ನು ಇಷ್ಟಪಡುತ್ತೀರಾದ ಕಾರಣ ಅವನಿಗೆ ಆಪ್ತರಾಗಿರುವ ಬಲವಾದ ಬಯಕೆಯು ನಿಮಗಿದೆ. ಅವನನ್ನು ಹೆಚ್ಚಾಗಿ ನೋಡಿದಷ್ಟು, ಅವನೊಂದಿಗೆ ಮಾತಾಡಿದಷ್ಟು, ಮತ್ತು ಅವನ ಕುರಿತು ಯೋಚಿಸಿದಷ್ಟು, ಅವನಿಗಾಗಿರುವ ನಿಮ್ಮ ಪ್ರೀತಿಯು ಹೆಚ್ಚಾಗಿ ಬೆಳೆಯುತ್ತದೆ. ದೇವರಿಗಾಗಿ ಪ್ರೀತಿಯನ್ನು ನೀವು ಬೆಳಸಿಕೊಳ್ಳುವ ವಿಷಯಕ್ಕೂ ಈ ಮೂಲತತ್ವವು ಅನ್ವಯಿಸುತ್ತದೆ.
ಕೀರ್ತನೆ 77:12ರಲ್ಲಿ, ಪ್ರೇರಿತ ಬರಹಗಾರನು ಹೇಳುವುದು: “ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.” ದೇವರಿಗಾಗಿ ಪ್ರೀತಿಯನ್ನು ಬೆಳಸಿಕೊಳ್ಳುವುದರಲ್ಲಿ ಮನನವು ಅತ್ಯಾವಶ್ಯಕವಾಗಿದೆ. ಆತನು ಅದೃಶ್ಯನಾಗಿದ್ದಾನೆಂಬ ನಿಜತ್ವದ ನೋಟದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಆದರೆ ಆತನ ಕುರಿತು ನೀವು ಹೆಚ್ಚು ಯೋಚಿಸಿದಷ್ಟು ಆತನು ನಿಮಗೆ ಹೆಚ್ಚು ನೈಜವಾಗುವನು. ಆಗ ಮಾತ್ರ, ಆತನು ನಿಮಗೆ ನೈಜನಾಗಿರುವ ಕಾರಣ, ಆತನೊಂದಿಗೆ ನೀವು ಒಂದು ಹೃತ್ಪೂರ್ವಕ ಹಾಗೂ ಮಮತೆಯ ಸಂಬಂಧವನ್ನು ವಿಕಸಿಸಿಕೊಳ್ಳಬಲ್ಲಿರಿ.
ಯೆಹೋವನ ಮಾರ್ಗಗಳು ಮತ್ತು ವ್ಯವಹಾರಗಳ ಕುರಿತು ಪದೇ ಪದೇ ಮನನ ಮಾಡುವ ನಿಮ್ಮ ಒಲವು, ನೀವು ಎಷ್ಟು ಬಾರಿ ಆತನಿಗೆ ಕಿವಿಗೊಡುತ್ತೀರಿ ಎಂಬುದರ ಮೇಲೆ ಅವಲಂಬಿಸುವುದು. ಆತನ ವಾಕ್ಯವಾದ ಬೈಬಲಿನ ಕ್ರಮವಾದ ಓದುವಿಕೆ ಹಾಗೂ ಅಧ್ಯಯನದ ಮುಖಾಂತರ ನೀವು ಕಿವಿಗೊಡುತ್ತೀರಿ. ಯಾರು “ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ,” ಆ ವ್ಯಕ್ತಿಯು ಸಂತುಷ್ಟನೆಂದು ಕೀರ್ತನೆಗಾರನು ಹೇಳುತ್ತಾನೆ.—ಕೀರ್ತನೆ 1:1, 2.
ಮತ್ತೊಂದು ಪ್ರಮುಖ ಅಂಶವು ಪ್ರಾರ್ಥನೆಯಾಗಿದೆ. ಆದುದರಿಂದಲೇ ಪ್ರಾರ್ಥಿಸುವಂತೆ ಬೈಬಲು ಸತತವಾಗಿ ನಮ್ಮನ್ನು ಉತ್ತೇಜಿಸುತ್ತದೆ—“ಎಲ್ಲಾ ಸಮಯಗಳಲ್ಲಿ,” ‘ಪ್ರಾರ್ಥನೆಗೆ ಸಮಯ ಕೊಡುವುದು,’ ‘ಪ್ರಾರ್ಥನೆಯಲ್ಲಿ ಪಟ್ಟುಹಿಡಿದಿರುವುದು,’ ಮತ್ತು ‘ಎಡೆಬಿಡದೆ ಪ್ರಾರ್ಥನೆಮಾಡುವುದು.’ (ಎಫೆಸ 6:18; 1 ಕೊರಿಂಥ 7:5; ರೋಮಾಪುರ 12:12; 1 ಥೆಸಲೊನೀಕ 5:17) ಯೆಹೋವನಿಗೆ ನಾವು ಮಾಡುವ ಎಡೆಬಿಡದ ಪ್ರಾರ್ಥನೆಗಳು ಆತನಿಗೆ ನಾವು ಪ್ರೀತಿಪಾತ್ರರಾಗುವಂತೆ ಮಾಡುವವು, ಮತ್ತು ಆತನು ಕಿವಿಗೊಡುತ್ತಾನೆಂಬ ಆಶ್ವಾಸನೆಯು ನಮ್ಮನ್ನು ಆತನ ಸಮೀಪಕ್ಕೆ ಸೆಳೆಯುವುದು. ಕೀರ್ತನೆಗಾರನು ಹೀಗೆ ಪ್ರಕಟಿಸಿದಾಗ, ಇದು ಅವನ ಮೂಲಕ ದೃಢೀಕರಿಸಲ್ಪಟ್ಟಿತು: “ಯೆಹೋವನನ್ನು ಪ್ರೀತಿಸುತ್ತೇನೆ; ಆತನು ನನ್ನ ಮೊರೆಯನ್ನು ಕೇಳುವವನು. ಆತನು ನನ್ನ ವಿಜ್ಞಾಪನೆಗೆ ಕಿವಿಗೊಟ್ಟಿದ್ದಾನೆ; ಜೀವದಿಂದಿರುವ ವರೆಗೂ ಆತನನ್ನೇ ಪ್ರಾರ್ಥಿಸುವೆನು.”—ಕೀರ್ತನೆ 116:1, 2.
ಪ್ರೀತಿಯ ದೇವರನ್ನು ಅನುಕರಿಸುವುದು
ಯೆಹೋವನು ನಮ್ಮ ಕಡೆಗೆ ಒಳ್ಳೆಯವನಾಗಿದ್ದಾನೆ. ವಿಶ್ವದ ಸೃಷ್ಟಿಕರ್ತನಾಗಿರುವುದರಿಂದ, ಆತನಿಗೆ ಖಂಡಿತವಾಗಿಯೂ ಪರಿಗಣಿಸಲು ಮತ್ತು ಕಾಳಜಿ ವಹಿಸಲು ಅನೇಕ ವಿಷಯಗಳಿವೆ. ಆದರೂ, ಆತನು ಮಹೋನ್ನತನಾಗಿದ್ದರೂ, ತನ್ನ ಮಾನವ ಸೃಷ್ಟಿಗಾಗಿ ಆತನು ಕಾಳಜಿ ವಹಿಸುತ್ತಾನೆಂದು ಬೈಬಲು ನಮಗೆ ಹೇಳುತ್ತದೆ. ಆತನು ನಮ್ಮನ್ನು ಪ್ರೀತಿಸುತ್ತಾನೆ. (1 ಪೇತ್ರ 5:6, 7) ಕೀರ್ತನೆಗಾರನು ಇದನ್ನು ತನ್ನ ಮಾತುಗಳಿಂದ ದೃಢೀಕರಿಸುತ್ತಾನೆ: “ನಮ್ಮ ಕರ್ತನಾದ ಯೆಹೋವನೇ, ನಿನ್ನ ನಾಮವು ಭೂಲೋಕದಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದು. ಆಕಾಶಮಂಡಲದಲ್ಲಿ ನಿನ್ನ ವೈಭವವನ್ನು ಪ್ರಕಾಶಪಡಿಸಿದ್ದೀ. ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?”—ಕೀರ್ತನೆ 8:1, 3, 4.
ಮರ್ತ್ಯ ಮನುಷ್ಯನನ್ನು ಯೆಹೋವನು ಮನಸ್ಸಿನಲ್ಲಿ ಹೇಗೆ ಇಟ್ಟಿದ್ದಾನೆ? ಬೈಬಲ್ ಉತ್ತರಿಸುವುದು: “ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯ ನಿಜ ಗುಣವು ತೋರಿಬರುತ್ತದೆ.”—1 ಯೋಹಾನ 4:9, 10.
ಈ ಪಾಪನಿವಾರಣಾರ್ಥ ಬಲಿಯು ದೇವರ ಪ್ರೀತಿಯ ಅತ್ಯಂತ ಮಹಾನ್ ಸಾಕ್ಷ್ಯವಾಗಿದೆ ಹೇಗೆ? ಏದೆನ್ ತೋಟದಲ್ಲಿ ಏನು ಸಂಭವಿಸಿತ್ತೆಂಬುದನ್ನು ನಾವು ಪರಿಗಣಿಸೋಣ. ಆದಾಮ ಮತ್ತು ಹವ್ವರು ಸದಾಕಾಲ ಪರಿಪೂರ್ಣ ಜೀವಿತದ ಪ್ರತೀಕ್ಷೆಯೊಂದಿಗೆ ಯೆಹೋವನ ನಿಯಮಕ್ಕೆ ಅಧೀನರಾಗುವ ಅಥವಾ ಮರಣವನ್ನು ಫಲಿತಾಂಶವಾಗಿ ಪಡೆಯುತ್ತಾ ಯೆಹೋವನ ವಿರುದ್ಧ ದಂಗೆಯೇಳುವ ನಿರ್ಧಾರವನ್ನು ಎದುರಿಸಿದ್ದರು. ಅವರು ದಂಗೆಯೇಳಲು ಆರಿಸಿಕೊಂಡರು. (ಆದಿಕಾಂಡ 3:1-6) ಹಾಗೆ ಮಾಡುವುದರಲ್ಲಿ, ಸಕಲ ಮಾನವಜಾತಿಯನ್ನೂ ಅವರು ಮರಣಶಿಕ್ಷೆಗೆ ಗುರಿಪಡಿಸಿದರು. (ರೋಮಾಪುರ 5:12) ನಾವು ನಮಗಾಗಿ ನಿರ್ಣಯ ಮಾಡಿಕೊಳ್ಳುವ ಅವಕಾಶವನ್ನು ಅವರು ನಮ್ಮಿಂದ ದುರಹಂಕಾರದಿಂದ ಕಸಿದುಕೊಂಡರು. ಆ ವಿಷಯದಲ್ಲಿ ನಮ್ಮ ಸ್ವಂತ ನಿರ್ಣಯವನ್ನು ಮಾಡುವ ಅವಕಾಶ ನಮ್ಮಲ್ಲಿ ಯಾರಿಗೂ ಇರಲಿಲ್ಲ.
ಹಾಗಿದ್ದರೂ, ಯೆಹೋವನು ಮರ್ತ್ಯ ಮನುಷ್ಯನ ಸಂಕಟಕರ ಸ್ಥಿತಿಯನ್ನು ಎಣಿಕೆಗೆ ತಂದುಕೊಳ್ಳುತ್ತಾ, ಅವನನ್ನು ಪ್ರೀತಿಪರವಾಗಿ ಮನಸ್ಸಿನಲ್ಲಿಟ್ಟುಕೊಂಡಿದ್ದಾನೆ. ತನ್ನ ಮಗನಾದ ಯೇಸು ಕ್ರಿಸ್ತನ ಯಜ್ಞಾರ್ಪಿತ ಮರಣದ ಮುಖಾಂತರ, ನಮ್ಮಲ್ಲಿ ಪ್ರತಿಯೊಬ್ಬನಿಗೆ ತನಗಾಗಿ ಜೀವ ಅಥವಾ ಮರಣ, ವಿಧೇಯತೆ ಅಥವಾ ದಂಗೆಯನ್ನು ಆರಿಸಿಕೊಳ್ಳಲು ಯೆಹೋವನು ನ್ಯಾಯಸಮ್ಮತ ಆಧಾರವನ್ನು ಒದಗಿಸಿದ್ದಾನೆ. (ಯೋಹಾನ 3:16) ಅದು ನಾವು ಮಾಡುವ ಆಯ್ಕೆಗನುಸಾರ ತೀರ್ಮಾನಿಸಲ್ಪಡುವ ಒಂದು ಅವಕಾಶವನ್ನು ಯೆಹೋವನು ನಮಗೆ ದಯಪಾಲಿಸಿದಂತಿದೆ—ಸಾಂಕೇತಿಕವಾಗಿ ಹೇಳುವುದಾದರೆ, ತಿರುಗಿ ಏದೆನ್ ತೋಟಕ್ಕೆ ಹೋಗುವ ಮತ್ತು ನಮ್ಮ ಸ್ವಂತ ನಿರ್ಣಯವನ್ನು ಮಾಡುವ ಒಂದು ಅವಕಾಶ. ಇದು ಎಂದಾದರೂ ಮಾಡಲ್ಪಟ್ಟಿರುವ ಪ್ರೀತಿಯ ಅತ್ಯಂತ ಮಹಾನ್ ಪ್ರದರ್ಶನವಾಗಿದೆ.
ತನ್ನ ಜ್ಯೇಷ್ಠಪುತ್ರನು ಅವಮಾನಿಸಲ್ಪಡುವುದನ್ನು, ಹಿಂಸಿಸಲ್ಪಡುವುದನ್ನು ಮತ್ತು ಒಬ್ಬ ಅಪರಾಧಿಯ ಹಾಗೆ ಕಂಬಕ್ಕೇರಿಸಲ್ಪಡುವುದನ್ನು ಆತನು ನೋಡಿದಂತೆ, ಯೆಹೋವನು ತಾಳಿಕೊಂಡ ವೇದನೆಯನ್ನು ಊಹಿಸಿಕೊಳ್ಳಿರಿ. ಮತ್ತು ದೇವರು ಅದನ್ನು ನಮ್ಮ ಸಲುವಾಗಿ ತಾಳಿಕೊಂಡನು. ನಮ್ಮನ್ನು ಪ್ರಥಮವಾಗಿ ಪ್ರೀತಿಸುವುದರಲ್ಲಿ ಯೆಹೋವನ ಮೊದಲ ಹೆಜ್ಜೆಯ ಕುರಿತಾದ ನಮ್ಮ ಅರಿವು, ಅಂತೆಯೇ ನಾವು ಆತನನ್ನು ಪ್ರೀತಿಸುವಂತೆ ನಮ್ಮನ್ನು ಪ್ರಚೋದಿಸಿ, ಆತನಿಗಾಗಿ ಹುಡುಕುವಂತೆ ನಮ್ಮನ್ನು ಪ್ರೇರಿಸಬೇಕು. (ಯಾಕೋಬ 1:17; 1 ಯೋಹಾನ 4:19) ಬೈಬಲು ನಮ್ಮನ್ನು ಹೀಗೆ ಮಾಡಲು ಆಮಂತ್ರಿಸುತ್ತದೆ: “ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ. ಆತನು ಮಾಡಿದ ಅದ್ಭುತಕೃತ್ಯ, ಆತನ ಮಹತ್ಕಾರ್ಯ, ಆತನ ಬಾಯಿಂದ ಹೊರಟ ನ್ಯಾಯನಿರ್ಣಯ ಇವುಗಳನ್ನು ನೆನಪುಮಾಡಿಕೊಳ್ಳಿರಿ.”—ಕೀರ್ತನೆ 105:4, 6.
ದೇವರೊಂದಿಗೆ ಒಂದು ವೈಯಕ್ತಿಕ ಅಂಟಿಕೆ ಹಾಗೂ ಒಂದು ಪ್ರೀತಿಯ ಸಂಬಂಧವನ್ನು ಪಡೆದಿರುವುದು, ಆತನ ಸ್ನೇಹಿತರಾಗಿರುವುದು ಅವಾಸ್ತವಿಕವಾದ ವಿಷಯವಲ್ಲ. ಅದು ಪ್ರಾಪ್ಯವಾಗುವ ಸಂಗತಿ. ದೇವರಿಗಾಗಿರುವ ನಮ್ಮ ಪ್ರೀತಿಯನ್ನು ನಾವು ಮಾನವ ಸಂಬಂಧಗಳೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ ನಿಜ. ನಮ್ಮ ವಿವಾಹಸಂಗಾತಿ, ಹೆತ್ತವರು, ರಕ್ತಸಂಬಂಧಿಕರು, ಮಕ್ಕಳು, ಅಥವಾ ಸ್ನೇಹಿತರಿಗಾಗಿ ನಮಗನಿಸುವ ಪ್ರೀತಿಯು, ದೇವರಿಗಾಗಿ ನಮಲ್ಲಿರುವ ಪ್ರೀತಿಗಿಂತ ಭಿನ್ನವಾಗಿದೆ. (ಮತ್ತಾಯ 10:37; 19:29) ಯೆಹೋವನನ್ನು ಪ್ರೀತಿಸುವುದು, ನಮ್ಮ ಭಕ್ತಿ, ಆರಾಧನೆ, ಮತ್ತು ಆತನಿಗೆ ಮಾಡಲ್ಪಟ್ಟ ಒಂದು ನಿರುಪಾಧಿಕವಾದ ಸಮರ್ಪಣೆಯನ್ನು ಒಳಗೊಳ್ಳುತ್ತದೆ. (ಧರ್ಮೋಪದೇಶಕಾಂಡ 4:24) ಬೇರೆ ಯಾವುದೇ ಸಂಬಂಧವು ನಮ್ಮ ಭಕ್ತಿ, ಆರಾಧನೆ, ಮತ್ತು ನಿರುಪಾಧಿಕವಾದ ಸಮರ್ಪಣೆಯನ್ನು ಒಳಗೊಳ್ಳುವುದಿಲ್ಲ. ಆದರೂ, ನಾವು ದೇವರಿಗಾಗಿ ಒಂದು ಪೂಜ್ಯಭಾವನೆಯ ವಿಧದಲ್ಲಿ, ಆದರದ ಭಯದೊಂದಿಗೆ ಬಲವಾದ ಹಾಗೂ ಆಳವಾದ ಭಾವನೆಗಳನ್ನು ವಿಕಸಿಸಿಕೊಳ್ಳಬಲ್ಲೆವು.—ಕೀರ್ತನೆ 89:7.
ಅಪರಿಪೂರ್ಣರಾಗಿದ್ದರೂ, ಕಾಯಿನ ಹಾಗೂ ಹೇಬೆಲರಂತೆ ನಿಮ್ಮ ಸೃಷ್ಟಿಕರ್ತನನ್ನು ಪ್ರೀತಿಸುವ ಸಾಧ್ಯತೆಯು ನಿಮಗಿದೆ. ಕಾಯಿನನು ತನ್ನ ಆಯ್ಕೆಯನ್ನು ಮಾಡಿ, ಸೈತಾನನನ್ನು ಸೇರಿ, ಪ್ರಥಮ ಮಾನವ ಕೊಲೆಗಾರನಾದನು. (1 ಯೋಹಾನ 3:12) ಪ್ರತಿಕೂಲವಾಗಿ, ಹೇಬೆಲನು ಯೆಹೋವನಿಂದ ನಂಬಿಕೆ ಹಾಗೂ ನೀತಿಯ ಮನುಷ್ಯನೋಪಾದಿ ಜ್ಞಾಪಿಸಿಕೊಳ್ಳಲ್ಪಡುವನು ಮತ್ತು ಬರಲಿರುವ ಪ್ರಮೋದವನದಲ್ಲಿ ಜೀವದಿಂದ ಬಹುಮಾನಿಸಲ್ಪಡುವನು.—ಇಬ್ರಿಯ 11:4.
ನಿಮಗೂ ಒಂದು ಆಯ್ಕೆಯಿದೆ. ದೇವರ ಆತ್ಮ ಹಾಗೂ ಆತನ ವಾಕ್ಯದ ಸಹಾಯದಿಂದ, ನೀವು ನಿಜವಾಗಿಯೂ ದೇವರನ್ನು “ನಿಮ್ಮ . . . ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಶಕ್ತಿಯಿಂದಲೂ” ಪ್ರೀತಿಸಲು ಸಾಧ್ಯವಾಗುವುದು. (ಧರ್ಮೋಪದೇಶಕಾಂಡ 6:5) ಪ್ರತಿಯಾಗಿ ಯೆಹೋವನು ನಿಮ್ಮನ್ನು ಪ್ರೀತಿಸಲು ಮುಂದುವರಿಯುವನು, ಏಕೆಂದರೆ ಆತನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ.”—ಇಬ್ರಿಯ 11:6.
[ಪುಟ 7 ರಲ್ಲಿರುವ ಚಿತ್ರ]
ಹೇಬೆಲನ ಯಜ್ಞಾರ್ಪಣೆಯು ದೇವರಿಗೆ ಸ್ವೀಕಾರಯೋಗ್ಯವಾಗಿತ್ತು