“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
“ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಗಾಗಿ ಕಾಯುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.”—ಯೂದ 21.
1, 2. ನಮ್ಮ ಕಡೆಗೆ ಯೆಹೋವನು ತನ್ನ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆ, ಮತ್ತು ನಾವೇನೇ ಮಾಡಿದರೂ ಯೆಹೋವನು ನಮ್ಮನ್ನು ತನ್ನ ಪ್ರೀತಿಯಲ್ಲಿ ಕಾಪಾಡುವನೆಂದು ನಿರೀಕ್ಷಿಸಸಾಧ್ಯವಿಲ್ಲ ಏಕೆ?
ಯೆಹೋವ ದೇವರು ನಮಗೆ ಅಸಂಖ್ಯಾತ ವಿಧಗಳಲ್ಲಿ ಪ್ರೀತಿ ತೋರಿಸಿದ್ದಾನೆ. ಈ ಪ್ರೀತಿಯ ಅತ್ಯುತ್ಕೃಷ್ಟ ರುಜುವಾತು ವಿಮೋಚನಾ ಮೌಲ್ಯದ ಯಜ್ಞವಾಗಿದೆ ಎನ್ನುವುದರಲ್ಲಿ ಎರಡುಮಾತಿಲ್ಲ. ಮಾನವಕುಲದ ಮೇಲೆ ಆತನಿಗಿರುವ ಪ್ರೀತಿ ಎಷ್ಟು ಆಳವಾದದ್ದೆಂದರೆ, ಆತನು ತನ್ನ ಪ್ರಿಯ ಪುತ್ರನನ್ನು ನಮ್ಮ ಪರವಾಗಿ ಸಾಯಲು ಭೂಮಿಗೆ ಕಳುಹಿಸಿದನು. (ಯೋಹಾ. 3:16) ನಾವು ಸದಾ ಜೀವಿಸಬೇಕು ಮತ್ತು ತನ್ನ ಪ್ರೀತಿಯಿಂದ ನಿತ್ಯವೂ ಪ್ರಯೋಜನ ಪಡೆಯಬೇಕು ಎಂದು ಬಯಸುವುದರಿಂದಲೇ ಯೆಹೋವನು ಇದೆಲ್ಲವನ್ನು ಮಾಡಿದ್ದಾನೆ.
2 ಆದರೆ ನಾವೇನೇ ಮಾಡಿದರೂ ಯೆಹೋವನು ನಮ್ಮನ್ನು ತನ್ನ ಪ್ರೀತಿಯಲ್ಲಿ ಕಾಪಾಡುವನೆಂದು ನಿರೀಕ್ಷಿಸಸಾಧ್ಯವೋ? ಇಲ್ಲ. ಯೂದ 21ನೇ ವಚನದಲ್ಲಿ ನಮಗೆ ಈ ಬುದ್ಧಿವಾದವಿದೆ: “ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಗಾಗಿ ಕಾಯುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂಬ ಅಭಿವ್ಯಕ್ತಿಯು ನಾವೇನೋ ಮಾಡಬೇಕೆಂಬುದನ್ನು ಸೂಚಿಸುತ್ತದೆ. ಹಾಗಾದರೆ ದೇವರ ಪ್ರೀತಿಯಲ್ಲಿ ಉಳಿಯಲು ನಾವೇನು ಮಾಡಬೇಕು?
ದೇವರ ಪ್ರೀತಿಯಲ್ಲಿ ಹೇಗೆ ಉಳಿಯಬಲ್ಲೆವು?
3. ತಂದೆಯ ಪ್ರೀತಿಯಲ್ಲಿ ಉಳಿಯಲು ತಾನು ಏನು ಮಾಡುವ ಅಗತ್ಯವಿದೆಯೆಂದು ಯೇಸು ಹೇಳಿದನು?
3 ಈ ಪ್ರಶ್ನೆಗೆ ಉತ್ತರ ಯೇಸು ತನ್ನ ಮಾನವ ಜೀವಿತದ ಕೊನೆಯ ರಾತ್ರಿಯಂದು ಹೇಳಿದ ಮಾತುಗಳಲ್ಲಿದೆ. ಅವನಂದದ್ದು: “ನಾನು ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ಉಳಿದಿರುವ ಪ್ರಕಾರವೇ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ಉಳಿಯುವಿರಿ.” (ಯೋಹಾ. 15:10) ಈ ವಚನ ಸ್ಪಷ್ಟವಾಗಿ ಹೇಳುವಂತೆ, ತಂದೆಯೊಂದಿಗೆ ತನಗೊಂದು ಉತ್ತಮ ನಿಲುವು ಇರಬೇಕಾದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದು ಅಗತ್ಯವೆಂದು ಯೇಸುವಿಗೆ ತಿಳಿದಿತ್ತು. ದೇವರ ಪರಿಪೂರ್ಣ ಮಗನೇ ಇದನ್ನು ಮಾಡಿರುವಲ್ಲಿ ನಾವೂ ಅದನ್ನು ಮಾಡಬೇಕಲ್ಲವೇ?
4, 5. (ಎ) ಯೆಹೋವನನ್ನು ನಾವು ಪ್ರೀತಿಸುತ್ತೇವೆಂದು ತೋರಿಸುವ ಪ್ರಧಾನ ವಿಧಾನ ಯಾವುದು? (ಬಿ) ಯೆಹೋವನ ಆಜ್ಞೆಗಳಿಗೆ ವಿಧೇಯತೆ ತೋರಿಸುವುದರಿಂದ ಹಿಮ್ಮೆಟ್ಟಲು ನಮಗೆ ಕಾರಣವಿಲ್ಲವೇಕೆ?
4 ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸುವ ಪ್ರಧಾನ ವಿಧಾನ ಆತನಿಗೆ ವಿಧೇಯರಾಗುವುದೇ ಆಗಿದೆ. ಇದನ್ನು ಅಪೊಸ್ತಲ ಯೋಹಾನನು ಹೀಗೆ ವ್ಯಕ್ತಪಡಿಸಿದನು: “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾ. 5:3) ಇಂದಿನ ಲೋಕದಲ್ಲಿ ವಿಧೇಯತೆ ತೋರಿಸುವ ವಿಚಾರ ಹೆಚ್ಚಿನವರಿಗೆ ಹಿಡಿಸುವುದಿಲ್ಲ. ಆದರೆ ಈ ವಾಕ್ಸರಣಿಯನ್ನು ಗಮನಿಸಿ: “ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.” ಅತೀ ಕಷ್ಟಕರವಾದ ಸಂಗತಿಗಳನ್ನು ಮಾಡುವಂತೆ ಯೆಹೋವನು ನಮ್ಮಿಂದ ಕೇಳಿಕೊಳ್ಳುತ್ತಿಲ್ಲ.
5 ದೃಷ್ಟಾಂತಕ್ಕೆ: ತುಂಬ ಭಾರವಾಗಿರುವ ಒಂದು ವಸ್ತುವನ್ನು ನಿಮ್ಮ ಆಪ್ತ ಮಿತ್ರನು ಎತ್ತಲಾರನೆಂದು ನಿಮಗೆ ಗೊತ್ತಿದ್ದೂ ಅವನಿಂದ ಅದನ್ನು ಎತ್ತಿಸುವಿರೋ? ಖಂಡಿತ ಇಲ್ಲ! ಯೆಹೋವನಾದರೋ ನಮಗಿಂತ ಹೆಚ್ಚು ದಯಾಪರನಾಗಿದ್ದಾನೆ ಮತ್ತು ನಮ್ಮ ಇತಿಮಿತಿಗಳ ಬಗ್ಗೆ ಆತನಿಗೆ ಹೆಚ್ಚು ತಿಳಿದಿದೆ. ‘ನಾವು ಧೂಳಿಯಾಗಿದ್ದೇವೆಂಬದನ್ನು ಯೆಹೋವನು ನೆನಪುಮಾಡಿಕೊಳ್ಳುತ್ತಾನೆ’ ಎಂದು ಬೈಬಲ್ ಆಶ್ವಾಸನೆ ಕೊಡುತ್ತದೆ. (ಕೀರ್ತ. 103:14) ನಮ್ಮಿಂದ ಮಾಡಲು ಅಸಾಧ್ಯವಾದದ್ದನ್ನು ಆತನೆಂದೂ ಕೇಳನು. ಹೀಗಿರಲಾಗಿ ಯೆಹೋವನ ಆಜ್ಞೆಗಳಿಗೆ ವಿಧೇಯತೆ ತೋರಿಸುವುದರಿಂದ ಹಿಮ್ಮೆಟ್ಟಲು ನಮಗೆ ಕಾರಣವೇ ಇಲ್ಲ. ಅದಕ್ಕೆ ಬದಲಾಗಿ, ಯೆಹೋವನಿಗೆ ವಿಧೇಯರಾಗುವುದು ನಾವು ನಿಜವಾಗಿಯೂ ನಮ್ಮ ಸ್ವರ್ಗೀಯ ತಂದೆಯನ್ನು ಪ್ರೀತಿಸುತ್ತೇವೆ ಮತ್ತು ಆತನ ಪ್ರೀತಿಯಲ್ಲಿ ಉಳಿಯಲು ಬಯಸುತ್ತೇವೆ ಎಂಬುದನ್ನು ತೋರಿಸುವ ಅಪೂರ್ವ ಅವಕಾಶವನ್ನು ಕೊಡುತ್ತದೆಂದು ನಮಗೆ ತಿಳಿದಿದೆ.
ಯೆಹೋವನ ವಿಶೇಷ ಉಡುಗೊರೆ
6, 7. (ಎ) ಮನಸ್ಸಾಕ್ಷಿ ಎಂದರೇನು? (ಬಿ) ದೇವರ ಪ್ರೀತಿಯಲ್ಲಿ ಉಳಿಯಲು ಮನಸ್ಸಾಕ್ಷಿ ಹೇಗೆ ಸಹಾಯ ಮಾಡುತ್ತದೆಂಬುದನ್ನು ದೃಷ್ಟಾಂತಿಸಿ.
6 ಇಂದು ನಾವು ಜೀವಿಸುತ್ತಿರುವ ತೊಡಕುಭರಿತ ಲೋಕದಲ್ಲಿ, ದೇವರಿಗೆ ತೋರಿಸಬೇಕಾದ ವಿಧೇಯತೆಯ ಸಂಬಂಧದಲ್ಲಿ ಅನೇಕ ನಿರ್ಣಯಗಳನ್ನು ಮಾಡಬೇಕಾಗುತ್ತದೆ. ಈ ನಿರ್ಣಯಗಳು ದೇವರ ಚಿತ್ತದೊಂದಿಗೆ ಹೊಂದಿಕೆಯಲ್ಲಿವೆ ಎಂದು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು? ವಿಧೇಯತೆಯ ಈ ವಿಷಯದಲ್ಲಿ ನಮಗೆ ಬಹಳಷ್ಟು ಸಹಾಯ ಮಾಡಬಲ್ಲ ಉಡುಗೊರೆಯೊಂದನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಅದುವೇ ಮನಸ್ಸಾಕ್ಷಿ! ಮನಸ್ಸಾಕ್ಷಿ ಎಂದರೇನು? ಇದು ನಮ್ಮ ಕ್ರಿಯೆಗಳು, ಮನೋಭಾವಗಳು ಮತ್ತು ಆಯ್ಕೆಗಳನ್ನು ಪರೀಕ್ಷಿಸುವ ವಿಶೇಷ ಸಾಮರ್ಥ್ಯವಾಗಿದೆ. ನಮ್ಮ ಮನಸ್ಸಾಕ್ಷಿಯು ಒಬ್ಬ ಆಂತರಿಕ ತೀರ್ಪುಗಾರನಂತೆ ಕಾರ್ಯವೆಸಗುತ್ತಾ, ಜೀವನದಲ್ಲಿ ನಮ್ಮ ಮುಂದಿರುವ ಆಯ್ಕೆಗಳನ್ನು ಪರಿಶೀಲಿಸಲು ಅಥವಾ ನಾವು ಈಗಾಗಲೇ ಕೈಗೊಂಡಿರುವ ಕ್ರಿಯೆಗಳನ್ನು ಮರುಪರಿಶೀಲಿಸಿ ಅವು ಒಳ್ಳೇದೋ ಕೆಟ್ಟದ್ದೋ, ಸರಿಯೋ ತಪ್ಪೋ ಎಂಬುದನ್ನು ನಿರ್ಧರಿಸಲು ನಮಗೆ ಸಹಾಯ ಮಾಡುತ್ತದೆ.—ರೋಮನ್ನರಿಗೆ 2:14, 15 ಓದಿ.
7 ಮನಸ್ಸಾಕ್ಷಿಯ ಸದ್ಬಳಕೆ ಮಾಡುವುದು ಹೇಗೆ? ಈ ದೃಷ್ಟಾಂತವನ್ನು ಪರಿಗಣಿಸಿ. ಒಬ್ಬ ಪಾದಯಾತ್ರಿಯು ನಿರ್ಜನ ಅರಣ್ಯವನ್ನು ದಾಟುತ್ತಿದ್ದಾನೆ. ಅಲ್ಲಿ ಯಾವುದೇ ಕಾಲುದಾರಿಯಾಗಲಿ, ರಸ್ತೆಯಾಗಲಿ, ಸೂಚನಾಫಲಕವಾಗಲಿ ಇಲ್ಲ. ಆದರೂ ಅವನು ತನ್ನ ಗಮ್ಯಸ್ಥಾನದತ್ತ ಸರಿಯಾಗಿ ಹೆಜ್ಜೆಹಾಕುತ್ತಿದ್ದಾನೆ. ಅದು ಹೇಗೆ ಸಾಧ್ಯ? ಅವನ ಬಳಿ ದಿಕ್ಸೂಚಿಯಿದೆ. ಅದರಲ್ಲಿ ನಾಲ್ಕೂ ದಿಕ್ಕುಗಳನ್ನು ಗುರುತಿಸುವ ಸೂಚೀಫಲಕವಿದ್ದು ಅದರಲ್ಲಿರುವ ಕಾಂತಸೂಜಿಯು ಯಾವಾಗಲೂ ಉತ್ತರ ದಿಕ್ಕನ್ನು ತೋರಿಸುತ್ತದೆ. ಈ ದಿಕ್ಸೂಚಿ ಇಲ್ಲದಿರುವಲ್ಲಿ ಆ ಪಾದಯಾತ್ರಿಯು ಪೂರ್ತಿಯಾಗಿ ದಾರಿತಪ್ಪುವನು. ತದ್ರೀತಿಯಲ್ಲಿ ಮಾನವನಿಗೆ ಮನಸ್ಸಾಕ್ಷಿ ಇಲ್ಲದಿರುತ್ತಿದ್ದಲ್ಲಿ, ಅವನು ಜೀವನದಲ್ಲಿ ನೈತಿಕ ಹಾಗೂ ನೀತಿಯುತ ಆಯ್ಕೆಗಳನ್ನು ಮಾಡಬೇಕಾಗುವ ಸಮಯದಲ್ಲಿ ಪೂರ್ತಿ ದಾರಿತಪ್ಪಿದವನಂತೆ ಇರುತ್ತಿದ್ದನು.
8, 9. (ಎ) ನಮ್ಮ ಮನಸ್ಸಾಕ್ಷಿಯ ಯಾವ ಮಿತಿಗಳನ್ನು ನಾವು ಮನಸ್ಸಿನಲ್ಲಿಡಬೇಕು? (ಬಿ) ಮನಸ್ಸಾಕ್ಷಿಯು ನಿಜಕ್ಕೂ ನಮಗೆ ಪ್ರಯೋಜನಕಾರಿ ಆಗಿರುವಂತೆ ನಾವೇನು ಮಾಡಬಹುದು?
8 ದಿಕ್ಸೂಚಿಗಿರುವಂತೆಯೇ ಮನಸ್ಸಾಕ್ಷಿಗೂ ಕೆಲವೊಂದು ಮಿತಿಗಳಿವೆ. ಪಾದಯಾತ್ರಿಯು ತನ್ನ ದಿಕ್ಸೂಚಿಯ ಪಕ್ಕದಲ್ಲಿ ಆಯಸ್ಕಾಂತವನ್ನು ಹಿಡಿಯುವಲ್ಲಿ ಉತ್ತರ ದಿಕ್ಕನ್ನು ಸೂಚಿಸುತ್ತಿದ್ದ ಸೂಜಿಯು ಬೇರೆ ದಿಕ್ಕನ್ನು ಸೂಚಿಸುವುದು. ಅದೇ ರೀತಿಯಲ್ಲಿ ನಮ್ಮ ಹೃದಯದಾಶೆಗಳಿಗೆ ನಾವು ಹೆಚ್ಚು ಪ್ರಮುಖತೆ ಕೊಡುವಲ್ಲಿ ಏನಾಗಬಲ್ಲದು? ಸ್ವಾರ್ಥ ಪ್ರವೃತ್ತಿಗಳು ನಮ್ಮ ಮನಸ್ಸಾಕ್ಷಿ ತಪ್ಪಾದ ಮಾರ್ಗದರ್ಶನ ಕೊಡುವಂತೆ ಮಾಡಬಲ್ಲವು. ಬೈಬಲ್ ನಮ್ಮನ್ನು ಎಚ್ಚರಿಸುವುದು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ.” (ಯೆರೆ. 17:9; ಜ್ಞಾನೋ. 4:23) ಅಷ್ಟೇ ಅಲ್ಲ, ಆ ಪಾದಯಾತ್ರಿಯ ಬಳಿ ನಿಷ್ಕೃಷ್ಟ ಹಾಗೂ ಭರವಸಾರ್ಹ ಭೂಪಟವಿಲ್ಲದಿದ್ದಲ್ಲಿ ಅವನ ಬಳಿ ದಿಕ್ಸೂಚಿಯಿದ್ದು ಏನೂ ಪ್ರಯೋಜನವಾಗದು. ತದ್ರೀತಿಯಲ್ಲಿ ನಾವು ದೇವರ ವಾಕ್ಯವಾದ ಬೈಬಲ್ನ ನಿಶ್ಚಿತ ಹಾಗೂ ಎಂದೂ ಬದಲಾಗದ ಮಾರ್ಗದರ್ಶನದ ಮೇಲೆ ಆತುಕೊಳ್ಳದಿದ್ದಲ್ಲಿ ನಮಗೆ ಮನಸ್ಸಾಕ್ಷಿಯಿದ್ದು ಏನೂ ಪ್ರಯೋಜನವಾಗದು. (ಕೀರ್ತ. 119:105) ವಿಷಾದಕರವಾಗಿ, ಲೋಕದ ಅನೇಕ ಜನರು ಹೃದಯದಾಶೆಗಳಿಗೆ ಅನುಚಿತ ಮಹತ್ತ್ವವನ್ನು ಕೊಡುತ್ತಿದ್ದು ದೇವರ ವಾಕ್ಯದಲ್ಲಿರುವ ಮಟ್ಟಗಳಿಗೆ ಲಕ್ಷ್ಯಕೊಡುತ್ತಿಲ್ಲ. (ಎಫೆಸ 4:17-19 ಓದಿ.) ಈ ಕಾರಣದಿಂದಲೇ, ಮನಸ್ಸಾಕ್ಷಿಯಿದ್ದರೂ ಹೆಚ್ಚಿನ ಜನರು ಭಯಾನಕ ಕೃತ್ಯಗಳನ್ನು ಎಸಗುತ್ತಿದ್ದಾರೆ.—1 ತಿಮೊ. 4:2.
9 ನಾವೆಂದೂ ಹಾಗಾಗದಿರಲು ದೃಢಸಂಕಲ್ಪ ಮಾಡೋಣ! ದೇವರ ವಾಕ್ಯವು ನಮ್ಮ ಮನಸ್ಸಾಕ್ಷಿಯನ್ನು ಬೋಧಿಸುತ್ತಾ ತರಬೇತುಗೊಳಿಸುತ್ತಾ ಇರುವಂತೆ ಬಿಡೋಣ. ಆಗ ಮನಸ್ಸಾಕ್ಷಿಯು ನಿಜಕ್ಕೂ ನಮಗೆ ಪ್ರಯೋಜನಕಾರಿ ಆಗಿರುವುದು. ನಾವು ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯ ಮಾತನ್ನು ಕೇಳಬೇಕೇ ಹೊರತು ಸ್ವಾರ್ಥ ಪ್ರವೃತ್ತಿಗಳು ಮನಸ್ಸಾಕ್ಷಿಯನ್ನು ನಿಯಂತ್ರಿಸುವಂತೆ ಬಿಡಬಾರದು. ಅದೇ ಸಮಯದಲ್ಲಿ, ನಾವು ನಮ್ಮ ಪ್ರಿಯ ಆಧ್ಯಾತ್ಮಿಕ ಸಹೋದರ ಸಹೋದರಿಯರ ಮನಸ್ಸಾಕ್ಷಿಯನ್ನು ಗೌರವಿಸಲೂ ಪ್ರಯತ್ನಿಸಬೇಕು. ನಮ್ಮ ಸಹೋದರರ ಮನಸ್ಸಾಕ್ಷಿಯು ನಮ್ಮ ಮನಸ್ಸಾಕ್ಷಿಗಿಂತ ಹೆಚ್ಚು ಸೂಕ್ಷ್ಮವಾಗಿರಬಹುದು ಎಂಬುದನ್ನು ಮನಸ್ಸಿನಲ್ಲಿಡುತ್ತಾ ಅವರನ್ನು ಎಡವಿಹಾಕದಂತೆ ಸಕಲ ಪ್ರಯತ್ನಗಳನ್ನು ಮಾಡುವೆವು.—1 ಕೊರಿಂ. 8:12; 2 ಕೊರಿಂ. 4:2; 1 ಪೇತ್ರ 3:16.
10. ಜೀವನದ ಯಾವ ಮೂರು ಕ್ಷೇತ್ರಗಳನ್ನು ನಾವೀಗ ಚರ್ಚಿಸಲಿದ್ದೇವೆ?
10 ನಮ್ಮ ವಿಧೇಯತೆಯ ಮೂಲಕ ಯೆಹೋವನ ಕಡೆಗಿನ ಪ್ರೀತಿಯನ್ನು ತೋರಿಸಬಹುದಾದ ಜೀವನದ ಮೂರು ಕ್ಷೇತ್ರಗಳನ್ನು ಈಗ ಪರಿಗಣಿಸೋಣ. ಅವುಗಳಲ್ಲಿ ಪ್ರತಿಯೊಂದರಲ್ಲಿ ನಮ್ಮ ಮನಸ್ಸಾಕ್ಷಿ ಒಳಗೊಂಡಿದೆ. ಆದರೆ ಮನಸ್ಸಾಕ್ಷಿ ನಮ್ಮನ್ನು ಸರಿಯಾಗಿ ಮಾರ್ಗದರ್ಶಿಸಬೇಕಾದರೆ ಮೊತ್ತಮೊದಲಾಗಿ ಅದು, ನಡತೆಯ ಸಂಬಂಧದಲ್ಲಿ ಬೈಬಲಿನ ದೇವಪ್ರೇರಿತ ಮಟ್ಟಗಳಿಂದ ಮಾರ್ಗದರ್ಶಿಸಲ್ಪಡಬೇಕು. ನಾವು ಪ್ರೀತಿಯಿಂದ ಯೆಹೋವನಿಗೆ ವಿಧೇಯತೆ ತೋರಿಸಬಹುದಾದ ಮೂರು ವಿಧಗಳು ಯಾವುವೆಂದರೆ, (1) ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ನಾವೂ ಪ್ರೀತಿಸುವುದು, (2) ಅಧಿಕಾರಕ್ಕೆ ಗೌರವ ತೋರಿಸುವುದು, ಮತ್ತು (3) ದೇವರ ದೃಷ್ಟಿಯಲ್ಲಿ ಶುದ್ಧರಾಗಿ ಉಳಿಯಲು ಪ್ರಯಾಸಪಡುವುದು.
ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಪ್ರೀತಿಸಿ
11. ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ನಾವೂ ಏಕೆ ಪ್ರೀತಿಸಬೇಕು?
11 ಮೊದಲಾಗಿ, ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ನಾವೂ ಪ್ರೀತಿಸಬೇಕು. ಸಹವಾಸದ ಸಂಬಂಧದಲ್ಲಿ ಜನರು ಒಂದರ್ಥದಲ್ಲಿ ಸ್ಪಂಜಿನಂತಿದ್ದಾರೆ. ನಮ್ಮ ಸುತ್ತಲೂ ಏನೇ ಇರಲಿ ಅದನ್ನು ಹೀರಿಕೊಳ್ಳುವ ಸ್ವಭಾವ ನಮಗಿದೆ. ಸಹವಾಸಗಳು ಅಪರಿಪೂರ್ಣ ಮಾನವರಿಗೆ ಎಷ್ಟು ಅಪಾಯಕಾರಿ ಮತ್ತು ಎಷ್ಟು ಸಹಾಯಕಾರಿ ಎಂಬುದು ನಮ್ಮ ಸೃಷ್ಟಿಕರ್ತನಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಆತನು ನಮಗೆ ಈ ವಿವೇಕಯುತ ಸಲಹೆ ಕೊಡುತ್ತಾನೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋ. 13:20; 1 ಕೊರಿಂ. 15:33) ನಮ್ಮಲ್ಲಿ ಯಾರೂ ‘ಸಂಕಟಪಡಲು’ ಬಯಸುವುದಿಲ್ಲ ಬದಲಾಗಿ ‘ಜ್ಞಾನಿಗಳಾಗಲು’ ಬಯಸುತ್ತೇವೆ. ಯೆಹೋವನನ್ನು ಇನ್ನಷ್ಟು ಜ್ಞಾನಿಯನ್ನಾಗಿ ಮಾಡಲು ಸಾಧ್ಯವಿಲ್ಲ ಮಾತ್ರವಲ್ಲ ಯಾರೂ ಆತನನ್ನು ಭ್ರಷ್ಟಗೊಳಿಸಲೂ ಸಾಧ್ಯವಿಲ್ಲ. ಆದರೂ ಸಹವಾಸದ ವಿಷಯದಲ್ಲಿ ಆತನು ನಮಗೆ ಉತ್ತಮ ಮಾದರಿಯನ್ನಿಟ್ಟಿದ್ದಾನೆ. ಅಪರಿಪೂರ್ಣ ಮಾನವರಲ್ಲಿ ಯೆಹೋವನು ಯಾರನ್ನು ತನ್ನ ಸ್ನೇಹಿತರನ್ನಾಗಿ ಆರಿಸಿಕೊಳ್ಳುತ್ತಾನೆ? ಸ್ವಲ್ಪ ಯೋಚಿಸಿ.
12. ಯೆಹೋವನು ಎಂಥ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಆರಿಸಿಕೊಳ್ಳುತ್ತಾನೆ?
12 ಯೆಹೋವನು ಪೂರ್ವಜನಾದ ಅಬ್ರಹಾಮನನ್ನು “ನನ್ನ ಸ್ನೇಹಿತ” ಎಂದು ಕರೆದನು. (ಯೆಶಾ. 41:8) ಈ ವ್ಯಕ್ತಿ ನಂಬಿಕೆಯ ಪುರುಷನಾಗಿದ್ದನು ಅಂದರೆ ನಂಬಿಗಸ್ತನು, ನೀತಿವಂತನು ಮತ್ತು ವಿಧೇಯನು ಆಗಿದ್ದು ಉತ್ತಮ ಮಾದರಿಯಾಗಿದ್ದನು. (ಯಾಕೋ. 2:21-23) ಯೆಹೋವನು ಸ್ನೇಹಿತರನ್ನಾಗಿ ಆರಿಸಿಕೊಳ್ಳುವುದು ಇಂಥವರನ್ನೇ. ಆತನು ಇಂದು ಕೂಡ ಅಂಥ ವ್ಯಕ್ತಿಗಳನ್ನೇ ಸ್ನೇಹಿತರನ್ನಾಗಿ ಆರಿಸಿಕೊಳ್ಳುತ್ತಾನೆ. ಯೆಹೋವನೇ ಅಂಥವರನ್ನು ಸ್ನೇಹಿತರನ್ನಾಗಿ ಆಯ್ಕೆಮಾಡುವಾಗ ನಾವು ಕೂಡ ಉತ್ತಮ ಸ್ನೇಹಿತರನ್ನು ಆರಿಸಿಕೊಳ್ಳುವುದು ಅವಶ್ಯವಲ್ಲವೇ? ಆಗ ಜ್ಞಾನಿಗಳ ಒಡನಾಟದಿಂದ ನಾವು ಜ್ಞಾನಿಗಳಾಗುವೆವು.
13. ಸ್ನೇಹಿತರ ವಿಷಯದಲ್ಲಿ ನಮಗೆ ಉತ್ತಮ ಆಯ್ಕೆ ಮಾಡಲು ಯಾವುದು ಸಹಾಯ ಮಾಡುವುದು?
13 ಈ ವಿಷಯದಲ್ಲಿ ಉತ್ತಮ ಆಯ್ಕೆ ಮಾಡಲು ನಿಮಗೆ ಯಾವುದು ಸಹಾಯ ಮಾಡುವುದು? ಬೈಬಲ್ ಮಾದರಿಗಳ ಅಧ್ಯಯನ ನಿಮಗೆ ಸ್ಫೂರ್ತಿ ನೀಡುವುದು. ರೂತಳು ಮತ್ತು ಆಕೆಯ ಅತ್ತೆ ನವೋಮಿ, ದಾವೀದ ಮತ್ತು ಯೋನಾತಾನ ಹಾಗೂ ತಿಮೊಥೆಯ ಮತ್ತು ಪೌಲರ ನಡುವೆಯಿದ್ದ ಸ್ನೇಹವನ್ನು ಪರಿಗಣಿಸಿ. (ರೂತ. 1:16, 17; 1 ಸಮು. 23:16-18; ಫಿಲಿ. 2:19-22) ಅವರ ಗೆಳೆತನಗಳು ಬಾಳಲು ಮುಖ್ಯ ಕಾರಣ ಯೆಹೋವನ ಮೇಲೆ ಅವರಿಗಿದ್ದ ಯಥಾರ್ಥ ಪ್ರೀತಿಯೇ. ನಿಮ್ಮಂತೆಯೇ ಯೆಹೋವನನ್ನು ಪ್ರೀತಿಸುವ ಸ್ನೇಹಿತರು ನಿಮಗೆ ಸಿಗಬಲ್ಲರೋ? ಅಂಥ ಸ್ನೇಹಿತರನ್ನು ಕ್ರೈಸ್ತ ಸಭೆಯಲ್ಲಿ ಕಂಡುಕೊಳ್ಳಬಹುದೆಂಬ ಭರವಸೆ ನಿಮಗಿರಲಿ. ಅಂಥ ಸ್ನೇಹಿತರು, ಯೆಹೋವನನ್ನು ಅಪ್ರಸನ್ನಗೊಳಿಸುವಂಥ ವಿಷಯಗಳನ್ನು ಮಾಡುವಂತೆ ನಿಮ್ಮನ್ನೆಂದೂ ಒತ್ತಾಯಿಸರು. ಅದಕ್ಕೆ ಬದಲಾಗಿ, ಯೆಹೋವನಿಗೆ ವಿಧೇಯರಾಗಲು, ಆಧ್ಯಾತ್ಮಿಕವಾಗಿ ಬೆಳೆಯಲು ಮತ್ತು ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತಲು ಅವರು ನಿಮಗೆ ಸಹಾಯ ಮಾಡುವರು. (ಗಲಾತ್ಯ 6:7, 8 ಓದಿ.) ದೇವರ ಪ್ರೀತಿಯಲ್ಲಿ ಉಳಿಯಲು ಅವರು ನಿಮಗೆ ಸಹಾಯ ಮಾಡುವರು.
ಅಧಿಕಾರಕ್ಕೆ ಗೌರವ ತೋರಿಸಿ
14. ಕೆಲವೊಮ್ಮೆ ಅಧಿಕಾರವನ್ನು ಗೌರವಿಸಲು ಕಷ್ಟವೆನಿಸುವುದೇಕೆ?
14 ನಾವು ಅಧಿಕಾರಕ್ಕೆ ಗೌರವ ತೋರಿಸಬೇಕು. ಇದು ನಾವು ಯೆಹೋವನ ಮೇಲಿನ ಪ್ರೀತಿಯನ್ನು ತೋರಿಸುವ ಎರಡನೇ ವಿಧವಾಗಿದೆ. ಆದರೆ ಕೆಲವೊಮ್ಮೆ ಇದನ್ನು ಮಾಡಲು ತುಂಬ ಕಷ್ಟವಾಗುವುದೇಕೆ? ಒಂದು ಕಾರಣ, ಅಧಿಕಾರದಲ್ಲಿರುವ ಮಾನವರು ಅಪರಿಪೂರ್ಣರು ಆಗಿರುವುದರಿಂದಲೇ. ಅಲ್ಲದೇ ಸ್ವತಃ ನಾವು ಕೂಡ ಅಪರಿಪೂರ್ಣರಾಗಿದ್ದೇವೆ. ಹುಟ್ಟಿನಿಂದಲೂ ದಂಗೆಯೇಳುವ ಪ್ರವೃತ್ತಿ ನಮ್ಮಲ್ಲಿದೆ ಮತ್ತು ನಾವು ಅದರೊಂದಿಗೆ ಹೋರಾಡುತ್ತಿದ್ದೇವೆ.
15, 16. (ಎ) ಯೆಹೋವನು ಯಾರಿಗೆ ತನ್ನ ಜನರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಕೊಟ್ಟಿದ್ದಾನೋ ಅವರನ್ನು ನಾವು ಗೌರವಿಸುವುದು ಪ್ರಾಮುಖ್ಯವೇಕೆ? (ಬಿ) ಇಸ್ರಾಯೇಲ್ಯರು ಮೋಶೆಯ ವಿರುದ್ಧ ನಡೆಸಿದ ದಂಗೆಯನ್ನು ಯೆಹೋವನು ಪರಿಗಣಿಸಿದ ವಿಧದಿಂದ ನಾವು ಯಾವ ಅಮೂಲ್ಯ ಪಾಠ ಕಲಿಯಬಲ್ಲೆವು?
15 ‘ಅಧಿಕಾರವನ್ನು ಗೌರವಿಸಲು ನಮಗೆ ಅಷ್ಟೊಂದು ಕಷ್ಟವಾಗುತ್ತಿರುವುದರಿಂದ ಅದನ್ನೇಕೆ ಗೌರವಿಸಬೇಕು?’ ಎಂದು ನೀವು ಯೋಚಿಸುತ್ತಿರಬಹುದು. ಇದಕ್ಕೆ ಉತ್ತರ ಪರಮಾಧಿಕಾರದ ವಿವಾದಾಂಶಕ್ಕೆ ಸಂಬಂಧಿಸಿದೆ. ನೀವು ಯಾರನ್ನು ನಿಮ್ಮ ಪರಮಾಧಿಕಾರಿಯಾಗಿ ಇಲ್ಲವೇ ಅಧಿಪತಿಯಾಗಿ ಆಯ್ಕೆಮಾಡುತ್ತೀರಿ? ನಾವು ಯೆಹೋವನನ್ನು ನಮ್ಮ ಪರಮಾಧಿಕಾರಿಯಾಗಿ ಆಯ್ಕೆಮಾಡುವಲ್ಲಿ ಆತನ ಅಧಿಕಾರವನ್ನು ಗೌರವಿಸಲೇಬೇಕು. ಹಾಗೆ ಮಾಡದಿರುವಲ್ಲಿ ಆತನು ನಮ್ಮ ಅಧಿಪತಿಯೆಂದು ನಾವು ಸತ್ಯವಾಗಿ ಹೇಳಬಹುದೋ? ಅಷ್ಟೇ ಅಲ್ಲ, ಯೆಹೋವನು ತನ್ನ ಅಧಿಕಾರವನ್ನು ಸಾಮಾನ್ಯವಾಗಿ ಅಪರಿಪೂರ್ಣ ಮಾನವರ ಮೂಲಕ ಚಲಾಯಿಸುತ್ತಾ ತನ್ನ ಜನರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಟ್ಟಿದ್ದಾನೆ. ಅಂಥವರ ವಿರುದ್ಧ ನಾವು ದಂಗೆಯೇಳುವಲ್ಲಿ ಯೆಹೋವನು ನಮ್ಮ ಕೃತ್ಯಗಳನ್ನು ಹೇಗೆ ವೀಕ್ಷಿಸುವನು?—1 ಥೆಸಲೊನೀಕ 5:12, 13 ಓದಿ.
16 ಉದಾಹರಣೆಗೆ, ಇಸ್ರಾಯೇಲ್ಯರು ಮೋಶೆಯ ವಿರುದ್ಧ ಗುಣುಗುಟ್ಟಿ ದಂಗೆಯೆದ್ದಾಗ ಅದನ್ನು ಯೆಹೋವನು ಸ್ವತಃ ತನ್ನ ವಿರುದ್ಧ ಮಾಡಲಾದ ದಂಗೆಯಂತೆ ಪರಿಗಣಿಸಿದನು. (ಅರ. 14:26, 27) ದೇವರು ಬದಲಾಗಿಲ್ಲ. ಅಧಿಕಾರದ ಸ್ಥಾನಗಳಲ್ಲಿ ಆತನು ನೇಮಿಸಿರುವವರ ವಿರುದ್ಧ ನಾವು ಒಂದುವೇಳೆ ದಂಗೆಯೇಳುವಲ್ಲಿ ಅದು ಆತನ ವಿರುದ್ಧ ದಂಗೆಯೆದ್ದಂತೆ!
17. ಸಭೆಯಲ್ಲಿ ಅಧಿಕಾರದ ಸ್ಥಾನಗಳಲ್ಲಿರುವವರ ಕಡೆಗೆ ನಾವು ಯಾವ ಯೋಗ್ಯ ಮನೋಭಾವವನ್ನು ಬೆಳೆಸಿಕೊಳ್ಳಲು ಶ್ರಮಿಸಬೇಕು?
17 ಕ್ರೈಸ್ತ ಸಭೆಯಲ್ಲಿ ಅಧಿಕಾರದ ಸ್ಥಾನಗಳಲ್ಲಿರುವವರ ಕಡೆಗೆ ನಾವು ಬೆಳೆಸಿಕೊಳ್ಳಬೇಕಾದ ಯೋಗ್ಯ ಮನೋಭಾವದ ಕುರಿತು ಅಪೊಸ್ತಲ ಪೌಲನು ತಿಳಿಸುತ್ತಾನೆ. ಅವನು ಬರೆದದ್ದು: “ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ; ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನದಿಂದಲ್ಲ ಆನಂದದಿಂದ ಇದನ್ನು ಮಾಡಲಿ, ಏಕೆಂದರೆ ಅವರು ವ್ಯಸನಪಡುವುದು ನಿಮಗೆ ಹಾನಿಕರವಾಗಿರುವುದು.” (ಇಬ್ರಿ. 13:17) ಅಂಥ ವಿಧೇಯ ಹಾಗೂ ಅಧೀನ ಮನೋಭಾವವನ್ನು ಬೆಳೆಸಿಕೊಳ್ಳಲು ನಾವು ಬಹಳ ಶ್ರಮಪಡಬೇಕು ಎಂಬುದೇನೋ ನಿಜ. ಆದರೆ ನಾವು ಅದನ್ನು ಮಾಡುತ್ತಿರುವುದು ದೇವರ ಪ್ರೀತಿಯಲ್ಲಿ ಉಳಿಯಲಿಕ್ಕಾಗಿಯೇ ಎಂಬುದನ್ನು ನೆನಪಿನಲ್ಲಿಡಿ. ಹೀಗಿರುವುದರಿಂದ, ಈ ಗುರಿ ತಲುಪಲು ನಾವು ಪಡುವ ಶ್ರಮ ಸಾರ್ಥಕವಲ್ಲವೋ?
ಯೆಹೋವನ ದೃಷ್ಟಿಯಲ್ಲಿ ಶುದ್ಧರಾಗಿ ಉಳಿಯಿರಿ
18. ನಾವು ಶುದ್ಧರಾಗಿ ಉಳಿಯಬೇಕೆಂದು ಯೆಹೋವನು ಬಯಸುವುದೇಕೆ?
18 ನಾವು ಯೆಹೋವನ ದೃಷ್ಟಿಯಲ್ಲಿ ಶುದ್ಧರಾಗಿ ಉಳಿಯಲು ಪ್ರಯಾಸಪಡುತ್ತೇವೆ. ಇದು ನಾವು ಯೆಹೋವನ ಮೇಲಿನ ಪ್ರೀತಿಯನ್ನು ತೋರಿಸುವ ಮೂರನೇ ವಿಧವಾಗಿದೆ. ಸಾಮಾನ್ಯವಾಗಿ ಹೆತ್ತವರು ತಮ್ಮ ಮಕ್ಕಳನ್ನು ಶುಚಿಯಾಗಿಡಲು ಬಹಳ ಪ್ರಯಾಸಪಡುತ್ತಾರೆ. ಏಕೆ? ಒಂದು ಕಾರಣ, ಮಗುವಿನ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಶುದ್ಧತೆ ಅತ್ಯಗತ್ಯ. ಅಲ್ಲದೇ, ಶುದ್ಧವಾಗಿರುವ ಮಗು ಹೆತ್ತವರ ಪ್ರೀತಿ ಹಾಗೂ ಆರೈಕೆಗೆ ಹಿಡಿದ ಕನ್ನಡಿಯಂತಿದ್ದು, ಕುಟುಂಬದ ಬಗ್ಗೆ ಇತರರಲ್ಲಿ ಸದಭಿಪ್ರಾಯವನ್ನು ಮೂಡಿಸುತ್ತದೆ. ನಾವು ಶುದ್ಧರಾಗಿರುವಂತೆ ಯೆಹೋವನು ಬಯಸಲು ಅಂಥದ್ದೇ ಕಾರಣಗಳಿವೆ. ಶುದ್ಧತೆ ನಮ್ಮ ಯೋಗಕ್ಷೇಮಕ್ಕೆ ಅಗತ್ಯ ಎಂಬುದು ಆತನಿಗೆ ಗೊತ್ತಿದೆ. ನಾವು ಶುದ್ಧರಾಗಿರುವುದು ನಮ್ಮ ಸ್ವರ್ಗೀಯ ತಂದೆಯಾಗಿರುವ ಆತನ ಬಗ್ಗೆ ಸದಭಿಪ್ರಾಯ ಮೂಡಿಸುತ್ತದೆ ಎಂಬುದೂ ಆತನಿಗೆ ತಿಳಿದಿದೆ. ಇದು ಬಹಳ ಪ್ರಾಮುಖ್ಯ. ಏಕೆಂದರೆ ನಾವು ಈ ಕಲುಷಿತ ಲೋಕದ ಜನರಿಂದ ಭಿನ್ನರಾಗಿರುವುದನ್ನು ಇತರರು ನೋಡುವಾಗ ಅವರು ಕೂಡ ನಾವು ಆರಾಧಿಸುವ ದೇವರ ಕಡೆಗೆ ಸೆಳೆಯಲ್ಪಡಬಹುದು.
19. ಶಾರೀರಿಕ ಶುದ್ಧತೆ ಪ್ರಾಮುಖ್ಯವೆಂಬುದು ನಮಗೆ ಹೇಗೆ ಗೊತ್ತು?
19 ನಾವು ಯಾವೆಲ್ಲ ಕ್ಷೇತ್ರಗಳಲ್ಲಿ ಶುದ್ಧರಾಗಿ ಉಳಿಯಬೇಕು? ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ. ಯೆಹೋವನು, ತನ್ನ ಜನರು ಶಾರೀರಿಕವಾಗಿ ಶುದ್ಧರಾಗಿರಬೇಕೆಂದು ಪ್ರಾಚೀನ ಇಸ್ರಾಯೇಲ್ನಲ್ಲಿ ಸ್ಪಷ್ಟವಾಗಿ ಹೇಳಿದನು. (ಯಾಜ. 15:31) ಕಲ್ಮಶವನ್ನು ತೊಲಗಿಸಿಬಿಡುವುದು, ಪಾತ್ರೆಗಳನ್ನು ಶುದ್ಧೀಕರಿಸುವುದು, ಕೈಕಾಲು ಹಾಗೂ ಬಟ್ಟೆಗಳನ್ನು ತೊಳೆಯುವುದರ ಕುರಿತ ನಿಯಮಗಳು ಮೋಶೆಯ ಧರ್ಮಶಾಸ್ತ್ರದಲ್ಲಿದ್ದವು. (ವಿಮೋ. 30:17-21; ಯಾಜ. 11:32; ಅರ. 19:17-20; ಧರ್ಮೋ. 23:13, 14) ಅವರ ದೇವರಾದ ಯೆಹೋವನು ಪರಿಶುದ್ಧನು ಅಂದರೆ ಶುದ್ಧನು, ನಿರ್ಮಲನು ಮತ್ತು ಪವಿತ್ರನು ಎಂಬುದನ್ನು ಇಸ್ರಾಯೇಲ್ಯರಿಗೆ ನೆನಪುಹುಟ್ಟಿಸಲಾಗಿತ್ತು. ಪರಿಶುದ್ಧ ದೇವರ ಆರಾಧಕರು ಕೂಡ ಪರಿಶುದ್ಧರಾಗಿರಬೇಕು.—ಯಾಜಕಕಾಂಡ 11:44, 45 ಓದಿ.
20. ನಾವು ಯಾವೆಲ್ಲ ರೀತಿಯಲ್ಲಿ ಶುದ್ಧರಾಗಿ ಉಳಿಯಬೇಕು?
20 ನಾವು ಹೊರಗೆ ಮಾತ್ರವಲ್ಲ, ಒಳಗೂ ಶುದ್ಧರಾಗಿರಬೇಕು. ನಮ್ಮ ಯೋಚನೆಗಳನ್ನು ಶುದ್ಧವಾಗಿರಿಸುವಂತೆ ನಾವು ಪ್ರಯಾಸಪಡಬೇಕು. ನಮ್ಮ ಸುತ್ತಣ ಲೋಕವು ಲೈಂಗಿಕವಾಗಿ ಅಧಃಪತನಕ್ಕೆ ಇಳಿದಿರುವುದಾದರೂ ನೈತಿಕ ಶುದ್ಧತೆಯ ವಿಷಯದಲ್ಲಿ ನಾವು ಯೆಹೋವನ ಮಟ್ಟಗಳಿಗೆ ನಿಷ್ಠೆಯಿಂದ ಅಂಟಿಕೊಳ್ಳುತ್ತೇವೆ. ಹೆಚ್ಚು ಪ್ರಮುಖವಾಗಿ ನಾವು ನಮ್ಮ ಆರಾಧನೆಯನ್ನು ಶುದ್ಧವಾಗಿಡುತ್ತೇವೆ. ಅದು ಸುಳ್ಳುಧರ್ಮದಿಂದ ಯಾವುದೇ ರೀತಿಯಲ್ಲಿ ಮಲಿನಗೊಳ್ಳದಂತೆ ನೋಡಿಕೊಳ್ಳುತ್ತೇವೆ. ನಾವು ಯೆಶಾಯ 52:11ರಲ್ಲಿರುವ ಈ ದೇವಪ್ರೇರಿತ ಎಚ್ಚರಿಕೆಯನ್ನು ಯಾವಾಗಲೂ ನೆನಪಿನಲ್ಲಿಡುತ್ತೇವೆ: “ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ, ಅದರ ಮಧ್ಯದೊಳಗಿಂದ ತೆರಳಿರಿ, . . . ಶುದ್ಧರಾಗಿರಿ!” ನಮ್ಮ ಸ್ವರ್ಗೀಯ ತಂದೆ ಯಾವುದನ್ನು ಧಾರ್ಮಿಕ ಅರ್ಥದಲ್ಲಿ ಅಶುದ್ಧವೆಂದು ಎಣಿಸುತ್ತಾನೋ ಅವುಗಳನ್ನು ಮುಟ್ಟಲೂ ಹೋಗದಿರುವ ಮೂಲಕ ನಾವಿಂದು ಆಧ್ಯಾತ್ಮಿಕವಾಗಿ ಶುದ್ಧರಾಗಿ ಉಳಿಯುತ್ತೇವೆ. ಆದ್ದರಿಂದಲೇ ಇಂದು ಜನಪ್ರಿಯವಾಗಿರುವ ಸುಳ್ಳು ಧಾರ್ಮಿಕ ಆಚರಣೆಗಳು ಮತ್ತು ಹಬ್ಬಗಳಲ್ಲಿ ಒಳಗೂಡದಂತೆ ಕಟ್ಟೆಚ್ಚರವಹಿಸುತ್ತೇವೆ. ಶುದ್ಧರಾಗಿ ಉಳಿಯುವುದು ಸವಾಲಾಗಿದೆ ನಿಜ. ಆದರೆ ಯೆಹೋವನ ಜನರು ಹಾಗೆ ಮಾಡಲು ಶ್ರಮಿಸುತ್ತಾರೆ ಏಕೆಂದರೆ ಹೀಗೆ ಮಾಡುವುದರಿಂದ ದೇವರ ಪ್ರೀತಿಯಲ್ಲಿ ಉಳಿಯಲು ಅವರಿಗೆ ಸಹಾಯವಾಗುತ್ತದೆ.
21. ದೇವರ ಪ್ರೀತಿಯಲ್ಲಿ ಉಳಿಯಲು ನಾವೇನು ಮಾಡಬೇಕು?
21 ನಾವು ಸದಾಕಾಲಕ್ಕೂ ಆತನ ಪ್ರೀತಿಯಲ್ಲಿ ಉಳಿಯಬೇಕೆಂಬುದು ಯೆಹೋವನ ಬಯಕೆ. ಆದರೆ ದೇವರ ಪ್ರೀತಿಯಲ್ಲಿ ಉಳಿಯಲಿಕ್ಕೋಸ್ಕರ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮಿಂದಾದದ್ದೆಲ್ಲವನ್ನೂ ಮಾಡಬೇಕು. ನಾವಿದನ್ನು, ಯೇಸುವಿನ ಮಾದರಿಯನ್ನು ಅನುಸರಿಸುವ ಮೂಲಕ ಮತ್ತು ಯೆಹೋವನ ಆಜ್ಞೆಗಳಿಗೆ ವಿಧೇಯರಾಗುತ್ತಾ ಆತನ ಕಡೆಗಿನ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಮೂಲಕ ಮಾಡಬಲ್ಲೆವು. ಹೀಗೆ ಮಾಡುವಲ್ಲಿ, ಯಾವುದೂ ‘ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸಲಾರದು’ ಎಂಬ ಖಾತ್ರಿ ನಮಗಿರಬಲ್ಲದು.—ರೋಮ. 8:38, 39.
ನಿಮಗೆ ನೆನಪಿದೆಯೇ?
• ದೇವರ ಪ್ರೀತಿಯಲ್ಲಿ ಉಳಿಯಲು ನಮ್ಮ ಮನಸ್ಸಾಕ್ಷಿ ಹೇಗೆ ಸಹಾಯ ಮಾಡಬಲ್ಲದು?
• ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ನಾವೂ ಏಕೆ ಪ್ರೀತಿಸಬೇಕು?
• ಅಧಿಕಾರಕ್ಕೆ ಗೌರವ ತೋರಿಸುವುದು ಪ್ರಾಮುಖ್ಯವೇಕೆ?
• ದೇವಜನರಿಗೆ ಶುದ್ಧತೆ ಎಷ್ಟು ಪ್ರಾಮುಖ್ಯ?
[ಪುಟ 20ರಲ್ಲಿರುವ ಚೌಕ/ಚಿತ್ರ]
ಒಳ್ಳೇ ನಡತೆಯನ್ನು ಉತ್ತೇಜಿಸುವ ಪ್ರಕಾಶನ
2008/2009ರ ಜಿಲ್ಲಾ ಅಧಿವೇಶನದಲ್ಲಿ, “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂಬ 224 ಪುಟಗಳ ಪುಸ್ತಕ ಬಿಡುಗಡೆಯಾಯಿತು. ಈ ಹೊಸ ಪುಸ್ತಕದ ಉದ್ದೇಶವೇನು? ಈ ಪುಸ್ತಕವು ಪ್ರಧಾನವಾಗಿ ಕ್ರೈಸ್ತ ನಡತೆಯ ಮೇಲೆ ಕೇಂದ್ರೀಕರಿಸುತ್ತಾ, ಯೆಹೋವನ ಮಟ್ಟಗಳನ್ನು ತಿಳಿಯಲು ಮತ್ತು ಪ್ರೀತಿಸಲು ಕ್ರೈಸ್ತರಿಗೆ ಸಹಾಯ ಮಾಡಲಿಕ್ಕಾಗಿ ರಚಿಸಲ್ಪಟ್ಟಿದೆ. “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂಬ ಈ ಪುಸ್ತಕದ ಜಾಗರೂಕ ಅಧ್ಯಯನವು, ಯೆಹೋವನ ಮಟ್ಟಗಳಿಗನುಸಾರ ಜೀವಿಸುವುದು ಈಗ ಅತ್ಯುತ್ತಮ ಜೀವನಮಾರ್ಗವಾಗಿದೆ ಮಾತ್ರವಲ್ಲ ಭವಿಷ್ಯತ್ತಿನಲ್ಲಿ ನಿತ್ಯಜೀವಕ್ಕೂ ನಡೆಸುತ್ತದೆ ಎಂಬುದರ ಬಗ್ಗೆ ನಮಗಿರುವ ನಿಶ್ಚಿತಾಭಿಪ್ರಾಯವನ್ನು ಬಲಪಡಿಸುವುದು.
ಅಷ್ಟುಮಾತ್ರವಲ್ಲ, ಯೆಹೋವನಿಗೆ ವಿಧೇಯರಾಗುವುದು ಹೊರೆಯಲ್ಲ ಬದಲಾಗಿ ನಾವಾತನನ್ನು ಎಷ್ಟು ಪ್ರೀತಿಸುತ್ತೇವೆಂದು ತೋರಿಸುವ ವಿಧವಾಗಿದೆ ಎಂಬುದನ್ನು ಗ್ರಹಿಸಲು ಸಹಾಯ ಮಾಡಲಿಕ್ಕಾಗಿ ಈ ಪುಸ್ತಕವನ್ನು ರಚಿಸಲಾಗಿದೆ. ‘ನಾನು ಯೆಹೋವನಿಗೆ ಏಕೆ ವಿಧೇಯನಾಗುತ್ತಿದ್ದೇನೆ?’ ಎಂಬ ಪ್ರಶ್ನೆಯನ್ನು ಸ್ವತಃ ಕೇಳಿಕೊಳ್ಳುವಂತೆ ಈ ಪುಸ್ತಕ ಪ್ರೇರಿಸುವುದು.
ಕೆಲವರು ಯೆಹೋವನ ಪ್ರೀತಿಯನ್ನು ಬಿಟ್ಟುಬಿಡುವ ತಪ್ಪನ್ನು ಮಾಡುವಾಗ ಅದಕ್ಕೆ ಕಾರಣ, ನಿರ್ದಿಷ್ಟ ಬೋಧನೆಯ ಕುರಿತ ತಿಳಿವಳಿಕೆಯ ಕೊರತೆಯಲ್ಲ ಬದಲಾಗಿ ಅವರ ಸ್ವಂತ ತಪ್ಪು ನಡತೆಯೇ ಆಗಿರುತ್ತದೆ. ಆದ್ದರಿಂದ ದಿನನಿತ್ಯದ ಜೀವನದಲ್ಲಿ ನಮ್ಮನ್ನು ಮಾರ್ಗದರ್ಶಿಸುವ ಯೆಹೋವನ ನಿಯಮಗಳು ಮತ್ತು ಮೂಲತತ್ತ್ವಗಳ ಕಡೆಗಿನ ನಮ್ಮ ಪ್ರೀತಿ ಹಾಗೂ ಗಣ್ಯತೆಯನ್ನು ಹೆಚ್ಚಿಸುವುದು ಎಷ್ಟು ಪ್ರಾಮುಖ್ಯ! ಈ ಹೊಸ ಪ್ರಕಾಶನವು, ಯಾವುದು ಸರಿಯೋ ಅದರ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲಲು, ಸೈತಾನನನ್ನು ಸುಳ್ಳುಗಾರನೆಂದು ರುಜುಪಡಿಸಲು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೇವರ ಪ್ರೀತಿಯಲ್ಲಿ ಉಳಿಯಲು ಲೋಕದಾದ್ಯಂತವಿರುವ ಯೆಹೋವನ ಕುರಿಗಳಿಗೆ ಸಹಾಯ ಮಾಡುವುದೆಂಬ ಭರವಸೆ ನಮಗಿದೆ.—ಯೂದ 21.
[ಪುಟ 18ರಲ್ಲಿರುವ ಚಿತ್ರ]
“ನಾನು ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ಉಳಿದಿರುವ ಪ್ರಕಾರವೇ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ಉಳಿಯುವಿರಿ”