ಯೆಹೋವನ ವಾಕ್ಯವು ಸಜೀವವಾದದ್ದು
ಯೋಹಾನ ಮತ್ತು ಯೂದನ ಪತ್ರಗಳ ಮುಖ್ಯಾಂಶಗಳು
ಅಪೊಸ್ತಲ ಯೋಹಾನನು ಎಫೆಸದಿಂದ ಬಹುಶಃ ಸಾ.ಶ. 98ರಲ್ಲಿ ಬರೆದ ಮೂರು ಪತ್ರಗಳು ಪವಿತ್ರ ಶಾಸ್ತ್ರಗಳ ಕೊನೆಯ ಪುಸ್ತಕಗಳಾಗಿವೆ. ಮೊದಲ ಎರಡು ಪತ್ರಗಳು ಕ್ರೈಸ್ತರನ್ನು, ಬೆಳಕಿನಲ್ಲಿ ನಡೆಯುತ್ತಾ ಇರುವಂತೆ ಮತ್ತು ಸಭೆಯೊಳಗೆ ನುಸುಳುತ್ತಿರುವ ಧರ್ಮಭ್ರಷ್ಟತೆಯ ವಿರುದ್ಧ ಹೋರಾಡುವಂತೆ ಉತ್ತೇಜಿಸುತ್ತವೆ. ಮೂರನೆಯ ಪತ್ರದಲ್ಲಿ ಯೋಹಾನನು, ಕ್ರೈಸ್ತರು ಸತ್ಯದಲ್ಲಿ ನಡೆಯುವಂತೆ ಮಾತ್ರವಲ್ಲ ಪರಸ್ಪರ ಸಹಕರಿಸುವಂತೆಯೂ ಉತ್ತೇಜಿಸುತ್ತಾನೆ.
ಯೇಸುವಿನ ಮಲತಮ್ಮನಾದ ಯೂದನು ಪ್ರಾಯಶಃ ಸಾ.ಶ. 65ರಲ್ಲಿ ಪಲೆಸ್ತೀನದಿಂದ ಪತ್ರ ಬರೆಯುತ್ತಾ ಸಭೆಯಲ್ಲಿ ನುಸುಳಿರುವ ದುಷ್ಟರ ಕುರಿತು ಜೊತೆ ಕ್ರೈಸ್ತರನ್ನು ಎಚ್ಚರಿಸುತ್ತಾನೆ ಮತ್ತು ಕೆಟ್ಟ ಪ್ರಭಾವವನ್ನು ಪ್ರತಿರೋಧಿಸುವುದು ಹೇಗೆಂಬುದರ ಕುರಿತು ಬುದ್ಧಿವಾದವನ್ನು ಕೊಡುತ್ತಾನೆ. ಯೋಹಾನನ ಮೂರು ಪತ್ರಗಳು ಮತ್ತು ಯೂದನ ಪತ್ರಕ್ಕೆ ನಿಕಟ ಗಮನಕೊಡುವುದು ಅಡ್ಡಿತಡೆಗಳ ಹೊರತೂ ನಂಬಿಕೆಯಲ್ಲಿ ದೃಢವಾಗಿ ಉಳಿಯುವಂತೆ ನಮಗೆ ಸಹಾಯ ಮಾಡಬಲ್ಲದು.—ಇಬ್ರಿ. 4:12.
ಬೆಳಕಿನಲ್ಲಿ, ಪ್ರೀತಿಯಲ್ಲಿ ಮತ್ತು ನಂಬಿಕೆಯಲ್ಲಿ ನಡೆಯುತ್ತಿರ್ರಿ
ಯೋಹಾನನು ಪ್ರಥಮ ಪತ್ರವನ್ನು ಕ್ರಿಸ್ತನಲ್ಲಿ ನೆಲೆಗೊಂಡವರ ಇಡೀ ಬಳಗಕ್ಕೆ ಉದ್ದೇಶಿಸಿದನು. ಈ ಪತ್ರವು, ಧರ್ಮಭ್ರಷ್ಟತೆಯ ವಿರುದ್ಧ ತಮ್ಮ ನಿಲುವನ್ನು ತೆಗೆದುಕೊಂಡು ಸತ್ಯ ಮತ್ತು ನೀತಿಯಲ್ಲಿ ಸ್ಥಿರವಾಗಿರಲು ಬೇಕಾದ ಸ್ವಸ್ಥ ಸಲಹೆಯನ್ನು ಕ್ರೈಸ್ತರಿಗೆ ಕೊಡುತ್ತದೆ. ಬೆಳಕಿನಲ್ಲಿ, ಪ್ರೀತಿಯಲ್ಲಿ ಮತ್ತು ನಂಬಿಕೆಯಲ್ಲಿ ನಡೆಯುತ್ತಿರುವುದರ ಅಗತ್ಯವನ್ನು ಯೋಹಾನನು ಒತ್ತಿಹೇಳುತ್ತಾನೆ.
ಅವನು ಬರೆಯುವುದು, “ಆದರೆ ಆತನು [ದೇವರು] ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ.” ದೇವರು ಪ್ರೀತಿಯ ಉಗಮನಾಗಿರುವುದರಿಂದ ಈ ಅಪೊಸ್ತಲನು ಹೇಳುವುದು: “ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ.” “ದೇವರ ಮೇಲಣ ಪ್ರೀತಿ” ನಾವು ‘ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವಂತೆ’ ಪ್ರೇರಿಸುತ್ತದೆ. ಆದರೆ ನಾವು ಲೋಕವನ್ನು ಜಯಿಸುವಂತೆ ಶಕ್ತಗೊಳಿಸುವಂಥದ್ದು, ಯೆಹೋವ ದೇವರಲ್ಲಿ, ಆತನ ವಾಕ್ಯದಲ್ಲಿ ಮತ್ತು ಆತನ ಮಗನಲ್ಲಿನ “ನಮ್ಮ ನಂಬಿಕೆಯೇ.”—1 ಯೋಹಾ. 1:7; 4:7; 5:3, 4.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
2:7, 8—ಯೋಹಾನನು ಯಾವ ಅಪ್ಪಣೆಯನ್ನು, ‘ಹಳೆಯದು’ ಮತ್ತು ‘ಹೊಸದು’ ಎಂದು ಕರೆಯುತ್ತಾನೆ? ಯೋಹಾನನು ಸ್ವತ್ಯಾಗದ ಸಹೋದರ ಪ್ರೀತಿಗೆ ಸಂಬಂಧಪಟ್ಟ ಅಪ್ಪಣೆಯ ಕುರಿತು ಇಲ್ಲಿ ಮಾತಾಡುತ್ತಿದ್ದಾನೆ. (ಯೋಹಾ. 13:34) ಯೇಸು ಇದನ್ನು, ಯೋಹಾನನು ತನ್ನ ಪ್ರಥಮ ಪ್ರೇರಿತ ಪತ್ರವನ್ನು ಬರೆಯುವ 60 ವರ್ಷಗಳ ಮುಂಚೆಯೇ ಕೊಟ್ಟಿದ್ದರಿಂದ ಅದನ್ನು “ಹಳೆಯ” ಅಪ್ಪಣೆ ಎನ್ನಲಾಗಿದೆ. ಹೀಗೆ ವಿಶ್ವಾಸಿಗಳು ಅದನ್ನು “ಮೊದಲಿಂದಲೂ” ಅಂದರೆ ಅವರು ಕ್ರೈಸ್ತರಾದಂದಿನಿಂದಲೂ ಪಡೆದಿದ್ದರು. ಈ ಅಪ್ಪಣೆ ‘ಹೊಸದೂ’ ಆಗಿದೆ ಏಕೆಂದರೆ, ಇದರಲ್ಲಿ ‘ನೆರೆಯವನನ್ನು ನಮ್ಮಂತೆಯೇ ಪ್ರೀತಿಸುವುದು’ ಮಾತ್ರವಲ್ಲ ಅದಕ್ಕೂ ಹೆಚ್ಚಾಗಿ ಸ್ವತ್ಯಾಗದ ಪ್ರೀತಿ ಒಳಗೂಡಿದೆ.—ಯಾಜ. 19:18; ಯೋಹಾ. 15:12, 13.
5:5-8—“ಯೇಸುವು ದೇವರ ಮಗನೆಂದು” ನೀರು, ರಕ್ತ ಮತ್ತು ಆತ್ಮ ಸಾಕ್ಷಿಕೊಟ್ಟದ್ದು ಹೇಗೆ? ನೀರು ಸಾಕ್ಷಿಯಾದದ್ದು ಹೇಗೆಂದರೆ, ಯೇಸು ನೀರಿನಲ್ಲಿ ದೀಕ್ಷಾಸ್ನಾನಗೊಂಡಾಗ ಸ್ವತಃ ಯೆಹೋವನೇ ಈತನು ತನ್ನ ಮಗನೆಂದು ಅಂಗೀಕರಿಸಿದನು. (ಮತ್ತಾ. 3:17) ಯೇಸು “ಎಲ್ಲರ ವಿಮೋಚನಾರ್ಥವಾಗಿ” ಅರ್ಪಿಸಿದ ರಕ್ತ ಅಂದರೆ ಜೀವವು ಅವನು ದೇವರ ಮಗನೆಂಬುದನ್ನು ತೋರಿಸಿತು. (1 ತಿಮೊ. 2:5, 6) ಪವಿತ್ರಾತ್ಮ ಕೂಡ ಯೇಸು ದೇವರ ಮಗನೆಂಬುದನ್ನು ಅವನ ದೀಕ್ಷಾಸ್ನಾನದ ಸಮಯದಲ್ಲಿ ತೋರಿಸಿಕೊಟ್ಟಿತು. ಅವನು ‘ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸುವಂತೆ’ ಅದು ಸಾಧ್ಯಮಾಡಿತು.—ಯೋಹಾ. 1:29-34; ಅ. ಕೃ. 10:38.
ನಮಗಾಗಿರುವ ಪಾಠಗಳು:
2:9-11; 3:15. ಸಹೋದರರಿಗಾಗಿರುವ ತನ್ನ ಪ್ರೀತಿಯನ್ನು ಯಾವುದೇ ವಿಷಯ ಅಥವಾ ವ್ಯಕ್ತಿ ಹಾಳುಮಾಡುವಂತೆ ಒಬ್ಬ ಕ್ರೈಸ್ತನು ಬಿಡುವಲ್ಲಿ ಅವನು ಆಧ್ಯಾತ್ಮಿಕ ಕತ್ತಲೆಯಲ್ಲಿ ನಡೆಯುತ್ತಿದ್ದಾನೆ. ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬುದೂ ಅವನಿಗೆ ತಿಳಿಯದು.
“ಸತ್ಯದಲ್ಲಿ ನಡೆಯುವುದನ್ನು” ಮುಂದುವರಿಸಿ
ಯೋಹಾನನು ತನ್ನ ಎರಡನೆಯ ಪತ್ರವನ್ನು, “ಸಭೆಯ ಹಿರಿಯನು ದೇವರಾದುಕೊಂಡವರಾದ ಅಮ್ಮನವರಿಗೂ ಆಕೆಯ ಮಕ್ಕಳಿಗೂ” ಎಂಬ ಮಾತುಗಳೊಂದಿಗೆ ಆರಂಭಿಸುತ್ತಾನೆ. ‘ಆಕೆಯ ಮಕ್ಕಳಲ್ಲಿ ಕೆಲವರು ಸತ್ಯವಂತರಾಗಿ [“ಸತ್ಯದಲ್ಲಿ,” NIBV] ನಡೆಯುವುದರ’ ವಿಷಯದಲ್ಲಿ ತನಗಾದ ಸಂತೋಷವನ್ನು ಅವನು ವ್ಯಕ್ತಪಡಿಸುತ್ತಾನೆ.—2 ಯೋಹಾ. 1, 4.
ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಕ್ರೈಸ್ತರನ್ನು ಪ್ರಚೋದಿಸಿದ ನಂತರ ಯೋಹಾನನು ಬರೆಯುವುದು: “ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವದೇ ಪ್ರೀತಿ.” “ಮೋಸಗಾರನೂ ಕ್ರಿಸ್ತವಿರೋಧಿಯೂ” ಆಗಿರುವವನ ಬಗ್ಗೆಯೂ ಯೋಹಾನನು ಎಚ್ಚರಿಸುತ್ತಾನೆ.—2 ಯೋಹಾ. 5-7.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
1, 13—‘ದೇವರಾದುಕೊಂಡವರಾದ ಅಮ್ಮನವರು’ ಯಾರು? ಕನ್ನಡ ಬೈಬಲ್ನಲ್ಲಿ ಅಮ್ಮನವರು ಎಂದು ಭಾಷಾಂತರಿಸಲಾಗಿರುವ ಮೂಲ ಗ್ರೀಕ್ಪದ, ‘ಕಿರೀಏ’ ಎಂದಾಗಿದ್ದು “ಮಹಿಳೆ” ಎಂಬರ್ಥವನ್ನು ಹೊಂದಿದೆ. ಯೋಹಾನನು ಇಲ್ಲಿ ‘ಕಿರೀಏ’ ಎಂಬ ಹೆಸರಿನ ಒಬ್ಬಾಕೆ ಮಹಿಳೆಗೆ ಸೂಚಿಸುತ್ತಿದ್ದಿರಬಹುದು. ಅಥವಾ ನಿರ್ದಿಷ್ಟ ಸಭೆಗೆ ಸೂಚಿಸಲು ಈ ಅಲಂಕಾರವನ್ನು ಬಳಸುವ ಮೂಲಕ ಹಿಂಸಕರನ್ನು ತಬ್ಬಿಬ್ಬುಗೊಳಿಸಲು ಪ್ರಯತ್ನಿಸಿದ್ದಿರಬಹುದು. ಇದೊಂದು ಸಭೆಗೆ ಸಂಬೋಧಿಸಲ್ಪಟ್ಟಿರುವಲ್ಲಿ, ಆಕೆಯ ಮಕ್ಕಳು ಎಂಬ ಅಭಿವ್ಯಕ್ತಿಯು ಆ ಸಭೆಯ ಸದಸ್ಯರಿಗೂ ಆಕೆಯ “ಸಹೋದರಿಯ ಮಕ್ಕಳು,” ಇನ್ನೊಂದು ಸಭೆಯ ಸದಸ್ಯರಿಗೂ ಸೂಚಿಸುತ್ತಿದ್ದಿರಬಹುದು.
7—ಯೇಸುವಿನ ಯಾವ ‘ಬರುವಿಕೆಯ’ ಬಗ್ಗೆ ಯೋಹಾನನು ಇಲ್ಲಿ ಮಾತಾಡುತ್ತಿದ್ದಾನೆ, ಮತ್ತು ಮೋಸಗಾರರು ಹೇಗೆ ಇದನ್ನು “ಒಪ್ಪದೆ” ಇದ್ದಾರೆ? ಭವಿಷ್ಯತ್ತಿನಲ್ಲಾಗುವ ಯೇಸುವಿನ ಅದೃಶ್ಯ ‘ಬರುವಿಕೆ’ ಇದಲ್ಲ. ಬದಲಾಗಿ ಅವನು ಮನುಷ್ಯನಾಗಿ ಭೂಮಿಗೆ ಬಂದು ಕ್ರಿಸ್ತನಾಗಿ ಅಭಿಷೇಕಿಸಲ್ಪಡುವುದನ್ನು ಇದು ಸೂಚಿಸುತ್ತದೆ. (1 ಯೋಹಾ. 4:2) ಅವನು ಮನುಷ್ಯನಾಗಿ ಬಂದಿರುವುದನ್ನು ಮೋಸಗಾರರು ಒಪ್ಪುವುದಿಲ್ಲ. ಯೇಸು ಜೀವಿಸಿದ್ದನೆಂಬುದನ್ನು ಅವರು ಅಲ್ಲಗಳೆಯುತ್ತಿರಬಹುದು ಅಥವಾ ಅವನು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟನು ಎಂಬುದನ್ನು ನಿರಾಕರಿಸುತ್ತಿರಬಹುದು.
ನಮಗಾಗಿರುವ ಪಾಠಗಳು:
1, 2, 4. ನಾವು ರಕ್ಷಣೆಯನ್ನು ಪಡೆಯಬೇಕಾದರೆ, ಬೈಬಲ್ನ ಭಾಗವಾಗಿರುವ ಎಲ್ಲ ಕ್ರೈಸ್ತ ಬೋಧನೆಗಳನ್ನು ಅಂದರೆ “ಸತ್ಯವನ್ನು” ತಿಳಿದುಕೊಳ್ಳುವುದು ಮತ್ತು ಅದಕ್ಕೆ ಅಂಟಿಕೊಳ್ಳುವುದು ಅಗತ್ಯ.—3 ಯೋಹಾ. 3, 4.
8-11. ನಾವು ‘ತಂದೆಯಾದ ದೇವರಿಂದಲೂ ಆ ತಂದೆಯ ಮಗನಾದ ಯೇಸು ಕ್ರಿಸ್ತನಿಂದಲೂ ಕೃಪೆ, ಕರುಣೆ ಮತ್ತು ಶಾಂತಿಯನ್ನು’ ಹಾಗೂ ಜೊತೆ ವಿಶ್ವಾಸಿಗಳ ಪ್ರೀತಿಪೂರ್ವಕ ಸಹವಾಸವನ್ನು ಕಳೆದುಕೊಳ್ಳದಿರಲು ಆಧ್ಯಾತ್ಮಿಕವಾಗಿ “ಜಾಗರೂಕರಾಗಿ”ರಬೇಕು ಮತ್ತು “ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ” ಇರುವವರಿಂದ ದೂರವಿರಬೇಕು.—2 ಯೋಹಾ. 3.
‘ಸತ್ಯಕ್ಕೆ ಸಹಕಾರಿಗಳಾಗಿರಿ’
ಯೋಹಾನನ ಮೂರನೇ ಪತ್ರವು ಅವನ ಸ್ನೇಹಿತನಾದ ಗಾಯನಿಗೆ ಸಂಬೋಧಿಸಲ್ಪಟ್ಟಿದೆ. ಅವನು ಬರೆಯುವುದು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.”—3 ಯೋಹಾ. 4.
ಗಾಯನು, ಸಂದರ್ಶಿಸುತ್ತಿದ್ದ ಸಹೋದರರಿಗೆ ನೆರವು ನೀಡುತ್ತಿದ್ದದ್ದರಿಂದ ಯೋಹಾನನು ಅವನನ್ನು “ನಂಬುವವನಿಗೆ ಯೋಗ್ಯನಾಗಿ ನಡೆಯುತ್ತೀ” ಎಂದು ಶ್ಲಾಘಿಸುತ್ತಾನೆ. ಅಪೊಸ್ತಲನು ಹೇಳುವುದು: “ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.”—3 ಯೋಹಾ. 5-8.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
11—ಕೆಲವರು ಕೆಟ್ಟ ನಡತೆಯಲ್ಲಿ ಒಳಗೂಡುವುದೇಕೆ? ಆಧ್ಯಾತ್ಮಿಕತೆಯ ಕೊರತೆಯಿಂದಾಗಿ ಕೆಲವರು ದೇವರನ್ನು ತಿಳುವಳಿಕೆಯ ಕಣ್ಣುಗಳಿಂದ ನೋಡಲು ತಪ್ಪಿಹೋಗುತ್ತಾರೆ. ಅವರು ದೇವರನ್ನು ಅಕ್ಷರಾರ್ಥಕ ಕಣ್ಣುಗಳಿಂದ ನೋಡಸಾಧ್ಯವಿಲ್ಲದ ಕಾರಣ ಆತನು ತಮ್ಮನ್ನು ನೋಡುವುದಿಲ್ಲವೆಂಬಂತೆ ವರ್ತಿಸುತ್ತಾರೆ.—ಯೆಹೆ. 9:9.
14—ಇಲ್ಲಿ ತಿಳಿಸಲಾದ “ಸ್ನೇಹಿತರು” ಯಾರು? ಇಲ್ಲಿ ತಿಳಿಸಲಾದ “ಸ್ನೇಹಿತರು” ಎಂಬ ಪದದಲ್ಲಿ, ಒಬ್ಬರು ಇನ್ನೊಬ್ಬರೊಂದಿಗೆ ಆನಂದಿಸುವ ಆಪ್ತ ಸಂಬಂಧಕ್ಕಿಂತ ಹೆಚ್ಚಿನದ್ದು ಸೇರಿದೆ. ಯೋಹಾನನು ಆ ಪದವನ್ನು ಜೊತೆ ವಿಶ್ವಾಸಿಗಳಿಗೆ ಸೂಚಿಸಲು ಬಳಸುತ್ತಾನೆ.
ನಮಗಾಗಿರುವ ಪಾಠಗಳು:
4. ಕ್ರೈಸ್ತ ಸಭೆಯ ಯುವ ಸದಸ್ಯರು ‘ಸತ್ಯವನ್ನನುಸರಿಸಿ ನಡೆಯುತ್ತಿರುವುದನ್ನು’ ನೋಡುವಾಗ ಆಧ್ಯಾತ್ಮಿಕವಾಗಿ ಪ್ರೌಢರಾದ ಸದಸ್ಯರಿಗೆ ತುಂಬ ಸಂತೋಷವಾಗುತ್ತದೆ. ಅಲ್ಲದೇ, ತಮ್ಮ ಮಕ್ಕಳು ಆಧ್ಯಾತ್ಮಿಕ ಮನಸ್ಸುಳ್ಳವರಾಗುವಂತೆ ಮಾಡುವುದರಲ್ಲಿ ಯಶಸ್ವಿಗಳಾಗುವಾಗ ಹೆತ್ತವರಿಗೂ ಆಗುವ ಸಂತೋಷ ಅತುಲ್ಯ.
5-8. ಸಹೋದರರ ಮತ್ತು ಯೆಹೋವನ ಮೇಲಿನ ಪ್ರೀತಿಯಿಂದಾಗಿ ಸಹೋದರರಿಗೋಸ್ಕರ ಕಷ್ಟಪಟ್ಟು ಸೇವೆ ಸಲ್ಲಿಸುತ್ತಿರುವವರಲ್ಲಿ ಸಂಚರಣ ಮೇಲ್ವಿಚಾರಕರು, ಮಿಷನೆರಿಗಳು, ಬೆತೆಲಿನಲ್ಲಿ ಅಥವಾ ಬ್ರಾಂಚ್ ಆಫೀಸ್ನಲ್ಲಿರುವವರು ಮತ್ತು ಪಯನೀಯರ್ ಸೇವೆ ಮಾಡುತ್ತಿರುವವರು ಕೆಲವರು. ಅವರ ನಂಬಿಕೆ ಅನುಕರಣೆಗೆ ಯೋಗ್ಯವಾಗಿದೆ ಮತ್ತು ನಮ್ಮ ಪ್ರೀತಿಪರ ಬೆಂಬಲ ಪಡೆಯಲು ಅವರು ಅರ್ಹರು.
9-12. ಚಾಡಿಕೋರನೂ ಹರಟೆಕೊಚ್ಚುವವನೂ ಆದ ದಿಯೊತ್ರೇಫನ ಮಾದರಿಯನ್ನಲ್ಲ ಬದಲಾಗಿ ನಂಬಿಗಸ್ತ ದೇಮೇತ್ರಿಯನನ್ನು ನಾವು ಅನುಕರಿಸಬೇಕು.
“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
(ಯೂದ 1-25)
ಸಭೆಯೊಳಗೆ ನುಸುಳಿರುವವರು, “ಗುಣುಗುಟ್ಟುವವರೂ ತಮ್ಮ ಗತಿಯನ್ನು ನಿಂದಿಸುವವರೂ ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ ಆಗಿದ್ದಾರೆ” ಎಂದು ಯೂದನು ವಿವರಿಸುತ್ತಾನೆ. ಅವರು ‘ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಅವರು ಮುಖಸ್ತುತಿ ಮಾಡುತ್ತಾರೆ.’—ಯೂದ 4, 16.
ದುಷ್ಟ ಪ್ರಭಾವಗಳನ್ನು ಕ್ರೈಸ್ತರು ಹೇಗೆ ಪ್ರತಿರೋಧಿಸಬಹುದು? ಯೂದನು ಬರೆಯುವುದು: “ಪ್ರಿಯರೇ, ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ.” ಅವನು ಕೂಡಿಸಿ ಹೇಳಿದ್ದು: “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.”—ಯೂದ 17-21.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
3, 4—‘ನಂಬಿಕೆಯನ್ನು ಕಾಪಾಡಿಕೊಳ್ಳಲು ಹೋರಾಡುವಂತೆ’ ಯೂದನು ಪ್ರೋತ್ಸಾಹಿಸಿದ್ದೇಕೆ? ಏಕೆಂದರೆ ‘ಭಕ್ತಿಹೀನರು ಸಭೆಯೊಳಗೆ ಕಳ್ಳತನದಿಂದ ಹೊಕ್ಕಿದ್ದರು.’ ಅವರು, ‘ದೇವರ ಕೃಪೆಯನ್ನು ನೆವಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರಾಗಿದ್ದರು.’
20, 21—ನಾವು ‘ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳುವುದು’ ಹೇಗೆ? ನಾವಿದನ್ನು ಮೂರು ವಿಧಗಳಲ್ಲಿ ಮಾಡಬಹುದು: (1) ದೇವರ ವಾಕ್ಯದ ಶ್ರದ್ಧಾಪೂರ್ವಕ ಅಧ್ಯಯನ ಮತ್ತು ಸಾರುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವ ಮೂಲಕ ನಮಗಿರುವ “ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು” ಆಧಾರಮಾಡಿಕೊಂಡು ಅಭಿವೃದ್ಧಿಯನ್ನು ಹೊಂದುವುದು; (2) “ಪವಿತ್ರಾತ್ಮಪ್ರೇರಿತರಾಗಿ” ಅಂದರೆ ಪವಿತ್ರಾತ್ಮದ ಪ್ರಭಾವದಡಿ ಪ್ರಾರ್ಥನೆಮಾಡುವುದು; ಮತ್ತು (3) ನಿತ್ಯಜೀವವನ್ನು ಸಾಧ್ಯಗೊಳಿಸುವ ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯಿಡುವುದು.—ಯೋಹಾ. 3:16, 36.
ನಮಗಾಗಿರುವ ಪಾಠಗಳು:
5-7. ದುಷ್ಟಜನರು ಯೆಹೋವನ ನ್ಯಾಯತೀರ್ಪನ್ನು ತಪ್ಪಿಸಿಕೊಳ್ಳಸಾಧ್ಯವೋ? ಯೂದನು ಪಟ್ಟಿಮಾಡಿರುವ ಎಚ್ಚರಿಕೆಯ ಮೂರು ಉದಾಹರಣೆಗಳು ತಿಳಿಸುವಂತೆ ಅದು ಅಸಾಧ್ಯ.
8-10. ನಾವು ಪ್ರಧಾನ ದೇವದೂತನಾದ ಮೀಕಾಯೇಲನ ಮಾದರಿಯನ್ನು ಅನುಸರಿಸುತ್ತಾ ದೈವಿಕ ಅಧಿಕಾರದ ಏರ್ಪಾಡಿಗೆ ಗೌರವ ತೋರಿಸಬೇಕು.
12. ಧರ್ಮಭ್ರಷ್ಟರು ತುಂಬ ಪ್ರೀತಿಪರರಂತೆ ನಟಿಸುವುದಾದರೂ, ಹಡಗುಗಳಿಗೆ ಅಥವಾ ಈಜುಗಾರರಿಗೆ ಅಪಾಯಕಾರಿಯಾಗಿರುವ ಸಮುದ್ರದೊಳಗಿನ ಗುಪ್ತ ಬಂಡೆಗಳಂತಿದ್ದಾರೆ. ಸುಳ್ಳು ಬೋಧಕರು ಉದಾರಿಗಳಂತೆ ಕಂಡುಬರುವುದಾದರೂ, ಅವರು ನೀರಿಲ್ಲದ ಮೇಘಗಳಂತಿದ್ದು ಆಧ್ಯಾತ್ಮಿಕವಾಗಿ ಬರಿದಾಗಿದ್ದಾರೆ. ಎಲೆಗಳುದುರಿ ಹಣ್ಣು ಬಿಡದೆ ಒಣಗಿ, ಬೇರು ಸಹಿತ ಕಿತ್ತು ಬಿದ್ದ ಮರಗಳಂತೆ ಅವರಿಗೆ ನಾಶನವೇ ಗತಿ. ನಾವು ಧರ್ಮಭ್ರಷ್ಟರಿಂದ ದೂರವಿರುವುದೇ ವಿವೇಕಪ್ರದ.
22, 23. ನಿಜ ಕ್ರೈಸ್ತರು ಕೆಟ್ಟದ್ದನ್ನು ಹೇಸುತ್ತಾರೆ. ‘ಸಂದೇಹಪಡುವ ಕೆಲವರನ್ನು’ ನಿತ್ಯನಾಶನದ ಬೆಂಕಿಯಿಂದ ರಕ್ಷಿಸುವ ಪ್ರಯತ್ನದಲ್ಲಿ ಸಭೆಯಲ್ಲಿರುವ ಪ್ರೌಢ ವ್ಯಕ್ತಿಗಳು ಅದರಲ್ಲೂ ವಿಶೇಷವಾಗಿ ನೇಮಿತ ಮೇಲ್ವಿಚಾರಕರು ಅಂಥವರಿಗೆ ಆಧ್ಯಾತ್ಮಿಕ ಸಹಾಯ ಕೊಡುತ್ತಾರೆ.
[ಪುಟ 28ರಲ್ಲಿರುವ ಚಿತ್ರಗಳು]
“ಯೇಸುವು ದೇವರ ಮಗನೆಂದು” ನೀರು, ರಕ್ತ ಮತ್ತು ಆತ್ಮ ಸಾಕ್ಷಿಕೊಟ್ಟವು