ಅಧ್ಯಾಯ 43
ಬಹಳ ಪ್ರಕಾಶಮಾನವಾದ ಪಟ್ಟಣ
ದರ್ಶನ 16—ಪ್ರಕಟನೆ 21:9—22:5
ವಿಷಯ: ಹೊಸ ಯೆರೂಸಲೇಮಿನ ವರ್ಣನೆ
ನೆರವೇರಿಕೆಯ ಸಮಯ: ಮಹಾ ಸಂಕಟದ ಮತ್ತು ಸೈತಾನನನ್ನು ಅಧೋಲೋಕಕ್ಕೆ ದೊಬ್ಬಿದ ಅನಂತರ
1, 2. (ಎ) ಯೋಹಾನನು ಹೊಸ ಯೆರೂಸಲೇಮನ್ನು ನೋಡಲು ದೇವದೂತನೊಬ್ಬನು ಅವನನ್ನು ಎಲ್ಲಿಗೆ ಕೊಂಡೊಯ್ಯುತ್ತಾನೆ, ಮತ್ತು ನಾವಿಲ್ಲಿ ಯಾವ ವಿಪರ್ಯಸತ್ತೆಯನ್ನು ಕಾಣುತ್ತೇವೆ? (ಬಿ) ಇದು ಪ್ರಕಟನೆಯ ಮಹಾ ಪರಮಾವಧಿಯಾಗಿರುವುದು ಯಾಕೆ?
ಮಹಾ ಬಾಬೆಲನ್ನು ತೋರಿಸಲು ದೇವದೂತನೊಬ್ಬನು ಯೋಹಾನನನ್ನು ಅಡವಿಯೊಳಗೆ ಕರೆದೊಯ್ದಿದ್ದನು. ಈಗ ಅದೇ ದೇವದೂತರ ಗುಂಪಿನಲ್ಲಿ ಒಬ್ಬನು ಯೋಹಾನನನ್ನು ಒಂದು ಎತ್ತರದ ಬೆಟ್ಟಕ್ಕೆ ನಡೆಸುತ್ತಾನೆ. ಅವನು ಎಂತಹ ವ್ಯತ್ಯಾಸವನ್ನು ಕಾಣುತ್ತಾನೆ! ಇಲ್ಲಿ ಬಾಬೆಲಿನ ವೇಶ್ಯಾ ಸ್ತ್ರೀಯಂತಿರುವ ಅಶುದ್ಧತೆಯ, ಅನೈತಿಕವಾದ ನಗರವೊಂದಿಲ್ಲ, ಬದಲಾಗಿ, ನಿರ್ಮಲವೂ, ಆತ್ಮಿಕವೂ, ಪವಿತ್ರವೂ ಆದ ಹೊಸ ಯೆರೂಸಲೇಮ್ ಇದೆ ಮತ್ತು ಅದು ಪರಲೋಕದಿಂದಲೇ ಇಳಿದು ಬರುತ್ತದೆ.—ಪ್ರಕಟನೆ 17:1, 5.
2 ಇದರಂತಹ ಮಹಿಮೆಯು ಐಹಿಕ ಯೆರೂಸಲೇಮಿಗೂ ಎಂದಿಗೂ ಇರಲಿಲ್ಲ. ಯೋಹಾನನು ನಮಗೆ ಹೇಳುವುದು: “ಮತ್ತು ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದನು ಮತ್ತು ಅವನು ನನ್ನ ಸಂಗಡ ಮಾತಾಡಿ, ಅಂದದ್ದು: ‘ಇಲ್ಲಿ ಬಾ, ಕುರಿಮರಿಯ ಹೆಂಡತಿಯನ್ನು, ವಧುವನ್ನು ನಾನು ನಿನಗೆ ತೋರಿಸುವೆನು.’ ಹೀಗೆ ಆತ್ಮನ ಬಲದಲ್ಲಿ ಅವನು ನನ್ನನ್ನು ಒಂದು ಎತ್ತರದ ಮತ್ತು ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋದನು ಮತ್ತು ದೇವರ ತೇಜಸ್ಸುಳ್ಳದ್ದಾಗಿ ಪರಲೋಕದೊಳಗಿಂದ ದೇವರ ಕಡೆಯಿಂದ ಪರಿಶುದ್ಧ ನಗರವಾದ ಯೆರೂಸಲೇಮು ಇಳಿದುಬರುವುದನ್ನು ನನಗೆ ಅವನು ತೋರಿಸಿದನು.” (ಪ್ರಕಟನೆ 21:9-11ಎ, NW) ಆ ಎತ್ತರದ ಬೆಟ್ಟದ ಆಯಕಟ್ಟಿನ ಸ್ಥಾನದಿಂದ, ಯೋಹಾನನು ಅದರ ಎಲ್ಲಾ ಸೊಗಸಾದ ವಿವರಗಳಿಂದ ಆ ಸುಂದರ ನಗರವನ್ನು ಸಮೀಕ್ಷಿಸುತ್ತಾನೆ. ಪಾಪ ಮತ್ತು ಮರಣದೊಳಗೆ ಮಾನವಕುಲವು ಪತನಗೊಂಡಂದಿನಿಂದಲೂ ನಂಬಿಕೆಯ ಮನುಷ್ಯರು ಅತಿ ಕಾತರದಿಂದ ಇದರ ಬರೋಣವನ್ನು ನಿರೀಕ್ಷಿಸಿದ್ದರು. ಕೊನೆಗೆ ಅದು ಇಲ್ಲಿದೆ! (ರೋಮಾಪುರ 8:19; 1 ಕೊರಿಂಥ 15:22, 23; ಇಬ್ರಿಯ 11:39, 40) ಇದು ಭವ್ಯವಾದ ಆತ್ಮಿಕ ನಗರವಾಗಿದೆ, 1,44,000 ನಿಷ್ಠೆಯ ಸಮಗ್ರತೆ ಪಾಲಕರಿಂದ ಉಂಟುಮಾಡಲ್ಪಟ್ಟು, ಅದರ ಪವಿತ್ರತೆಯಲ್ಲಿ ಬಹಳ ಪ್ರಕಾಶಮಾನವಾಗಿದ್ದು, ಯೆಹೋವನ ಮಹಿಮೆಯನ್ನೇ ಅದು ಪ್ರತಿಬಿಂಬಿಸುತ್ತದೆ. ಪ್ರಕಟನೆಯ ಮಹಾ ಪರಾಕಾಷ್ಠೆಯು ಇಲ್ಲಿದೆ!
3. ಹೊಸ ಯೆರೂಸಲೇಮಿನ ಸೊಬಗನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ?
3 ಹೊಸ ಯೆರೂಸಲೇಮ್ ಅದರ ಸೊಬಗಿನಲ್ಲಿ ಉಸಿರುಕಟ್ಟಿಸುವಂತಹದ್ದು: “ಅದರ ತೇಜಸ್ಸು ಅತ್ಯಮೂಲ್ಯ ರತ್ನದಂತೆ, ಸ್ಪಟಿಕದಂತೆ ಸ್ವಚ್ಛವಾಗಿ ಪ್ರಕಾಶಿಸುವ ಸೂರ್ಯಕಾಂತ ಮಣಿಯಂತಿತ್ತು. ಅದಕ್ಕೆ ಒಂದು ಮಹಾ ಮತ್ತು ಎತ್ತರವಾದ ಪ್ರಾಕಾರವೂ ಹನ್ನೆರಡು ಹೆಬ್ಬಾಗಿಲುಗಳೂ ಇದ್ದವು, ಮತ್ತು ಆ ಹೆಬ್ಬಾಗಿಲುಗಳಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು, ಮತ್ತು ಇಸ್ರಾಯೇಲನ ಪುತ್ರರ ಹನ್ನೆರಡು ಕುಲಗಳವರ ಹೆಸರುಗಳು ಕೆತ್ತಲ್ಪಟ್ಟಿದ್ದವು. ಪೂರ್ವದಲ್ಲಿ ಮೂರು ಬಾಗಿಲುಗಳು ಮತ್ತು ಉತ್ತರದಲ್ಲಿ ಮೂರು ಬಾಗಿಲುಗಳು ಮತ್ತು ದಕ್ಷಿಣದಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮದಲ್ಲಿ ಮೂರು ಬಾಗಿಲುಗಳು ಇದ್ದವು. ನಗರದ ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರ ಕಲ್ಲುಗಳೂ ಇದ್ದವು, ಮತ್ತು ಅವುಗಳ ಮೇಲೆ ಕುರಿಮರಿಯ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.” (ಪ್ರಕಟನೆ 21:11ಬಿ-14, NW) ಬೆಳಗುವ ದೇದೀಪ್ಯಮಾನದ ಮೊದಲ ಅಭಿಪ್ರಾಯವನ್ನು ಯೋಹಾನನು ದಾಖಲಿಸುವುದು ಎಷ್ಟೊಂದು ತಕ್ಕದಾಗಿದೆ! ಹೊಸ ವಧುವಿನಂತೆ ಪ್ರಜ್ವಲಿಸುವ ಹೊಸ ಯೆರೂಸಲೇಮ್ ಕ್ರಿಸ್ತನಿಗೆ ಒಬ್ಬ ತಕ್ಕ ರಾಣಿಯಾಗುತ್ತಾಳೆ. “ಸಕಲವಿಧವಾದ ಬೆಳಕಿಗೂ ಮೂಲಕಾರಣನಾದ” ವನ ಒಂದು ಸೃಷ್ಟಿಯೋಪಾದಿ ಅದು ನಿಶ್ಚಯವಾಗಿ ಪ್ರಕಾಶಿಸುವುದು ಯೋಗ್ಯವಾಗಿದೆ.—ಯಾಕೋಬ 1:17.
4. ಹೊಸ ಯೆರೂಸಲೇಮ್ ಮಾಂಸಿಕ ಇಸ್ರಾಯೇಲ್ ಜನಾಂಗವಲ್ಲವೆಂದು ಯಾವುದು ತೋರಿಸುತ್ತದೆ?
4 ಅದರ 12 ಹೆಬ್ಬಾಗಿಲುಗಳ ಮೇಲೆ ಇಸ್ರಾಯೇಲಿನ 12 ಕುಲಗಳ ಹೆಸರುಗಳು ಬರೆಯಲ್ಪಟ್ಟಿವೆ. ಆದಕಾರಣ, ಈ ಸಾಂಕೇತಿಕ ನಗರವು “ಇಸ್ರಾಯೇಲನ ಪುತ್ರರ ಪ್ರತಿಯೊಂದು ಕುಲಕ್ಕೆ ಸೇರಿದ” ವರಿಂದ ಮುದ್ರೆಹೊಂದಿದ 1,44,000 ಮಂದಿಯಿಂದ ಮಾಡಲ್ಪಟ್ಟಿದೆ. (ಪ್ರಕಟನೆ 7:4-8) ಇದಕ್ಕೆ ಸಾಮರಸ್ಯದಲ್ಲಿ, ಅದರ ಅಸ್ತಿವಾರದ ಕಲ್ಲುಗಳ ಮೇಲೆ ಕುರಿಮರಿಯ 12 ಅಪೊಸ್ತಲರ ಹೆಸರುಗಳು ಇವೆ. ಹೌದು, ಹೊಸ ಯೆರೂಸಲೇಮ್ ಯಾಕೋಬನ 12 ಪುತ್ರರಿಂದ ಸ್ಥಾಪಿಸಲ್ಪಟ್ಟ ಮಾಂಸಿಕ ಇಸ್ರಾಯೇಲ್ ಜನಾಂಗವಾಗಿರುವುದಿಲ್ಲ. ಅದು ಆತ್ಮಿಕ ಇಸ್ರಾಯೇಲ್ ಆಗಿದ್ದು, “ಅಪೊಸ್ತಲರೂ ಪ್ರವಾದಿಗಳೂ” ಆಗಿರುವವರ ಮೇಲೆ ಸ್ಥಾಪಿತವಾಗಿದೆ.—ಎಫೆಸ 2:20.
5. “ಮಹಾ ಮತ್ತು ಎತ್ತರವಾದ ಪ್ರಾಕಾರ” ದಿಂದ ಮತ್ತು ಪ್ರತಿ ಪ್ರವೇಶದ್ವಾರದಲ್ಲಿ ದೇವದೂತರನ್ನು ನೇಮಿಸಿರುವ ವಾಸ್ತವಾಂಶದಿಂದ ಏನು ಸೂಚಿತವಾಗುತ್ತದೆ?
5 ಈ ಸಾಂಕೇತಿಕ ನಗರಕ್ಕೆ ದೊಡ್ಡ ಪ್ರಮಾಣದ ಪ್ರಾಕಾರವಿದೆ. ಪುರಾತನ ಸಮಯಗಳಲ್ಲಿ, ಶತ್ರುಗಳನ್ನು ಹೊರಗೆ ಇಡಲು, ಭದ್ರತೆಗಾಗಿ ನಗರದ ಸುತ್ತಲೂ ಗೋಡೆಗಳು ಕಟ್ಟಲ್ಪಡುತ್ತಿದ್ದವು. ಹೊಸ ಯೆರೂಸಲೇಮಿನ “ಮಹಾ ಮತ್ತು ಎತ್ತರವಾದ ದೊಡ್ಡ ಪ್ರಾಕಾರವು” ತೋರಿಸುವುದೇನಂದರೆ ಅವಳು ಆತ್ಮಿಕವಾಗಿ ಭದ್ರವಾಗಿದ್ದಾಳೆ. ನೀತಿಯ ಯಾವ ಶತ್ರುವೂ, ಅಪ್ರಾಮಾಣಿಕತೆಯ ಯಾವನೇ ಅಶುದ್ಧನೂ ಅಲ್ಲಿ ಎಂದಿಗೂ ಪ್ರವೇಶವನ್ನು ಪಡೆಯಲಾರನು. (ಪ್ರಕಟನೆ 21:27) ಆದರೆ ಪ್ರವೇಶ ಅನುಮತಿಸಲಾಗಿರುವವರಿಗೆ ಈ ಸುಂದರವಾದ ನಗರದೊಳಗೆ ಪ್ರವೇಶಿಸುವುದೆಂದರೆ ಪ್ರಮೋದವನದೊಳಗೆ ಪ್ರವೇಶಿಸುವಂತಿರುತ್ತದೆ. (ಪ್ರಕಟನೆ 2:7) ಆದಾಮನನ್ನು ಹೊರಗಟ್ಟಿದ ಅನಂತರ, ಅಶುದ್ಧ ಮಾನವರನ್ನು ಹೊರಗಿಡುವಂತೆ, ಮೂಲ ಪ್ರಮೋದವನದ ಮುಂಭಾಗದಲ್ಲಿ ಕೆರೂಬಿಯರನ್ನು ಇಡಲಾಗಿತ್ತು. (ಆದಿಕಾಂಡ 3:24) ತದ್ರೀತಿಯಲ್ಲಿ, ಪವಿತ್ರ ನಗರ ಯೆರೂಸಲೇಮ್ನ ಪ್ರತಿಯೊಂದು ಪ್ರವೇಶದ್ವಾರದಲ್ಲಿ, ನಗರದ ಆತ್ಮಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ದೇವದೂತರನ್ನು ನೇಮಕಮಾಡಲಾಗಿದೆ. ಖಂಡಿತವಾಗಿಯೂ, ಕಡೆಯ ದಿವಸಗಳಲ್ಲಿಲ್ಲಾ ಹೊಸ ಯೆರೂಸಲೇಮ್ ಆಗಲಿರುವ ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಬಾಬೆಲಿನ ಮೈಲಿಗೆಯಿಂದ ದೇವದೂತರು ಕಾಪಾಡುತ್ತಾ ಬಂದಿದ್ದಾರೆ.—ಮತ್ತಾಯ 13:41.
ನಗರವನ್ನು ಅಳೆಯುವುದು
6. (ಎ) ನಗರದ ಅಳೆಯುವಿಕೆಯನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ, ಮತ್ತು ಈ ಅಳೆಯುವಿಕೆಯು ಏನನ್ನು ಸೂಚಿಸುತ್ತದೆ? (ಬಿ) “ಮನುಷ್ಯನ ಅಳತೆಗನುಸಾರ, ಅದೇ ಸಮಯದಲ್ಲಿ ದೇವರ ದೂತನ ಅಳತೆಗನುಸಾರವಾಗಿ” ಎಂಬ ಅಳತೆಯು ಬಳಸಲ್ಪಟ್ಟದ್ದನ್ನು ಯಾವುದು ವಿವರಿಸಬಹುದು? (ಪಾದಟಿಪ್ಪಣಿ ನೋಡಿರಿ.)
6 ತನ್ನ ದಾಖಲೆಯನ್ನು ಯೋಹಾನನು ಮುಂದರಿಸುತ್ತಾನೆ: “ಈಗ ನನ್ನ ಸಂಗಡ ಮಾತಾಡುತ್ತಿದವ್ದನು ಆ ನಗರವನ್ನೂ ಅದರ ಹೆಬ್ಬಾಗಿಲುಗಳನ್ನೂ ಅದರ ಪ್ರಾಕಾರವನ್ನೂ ಅಳತೆಮಾಡುವುದಕ್ಕಾಗಿ ತನ್ನ ಕೈಯಲ್ಲಿ ಅಳತೇಕೋಲಾಗಿ ಒಂದು ಚಿನ್ನದ ಕೋಲನ್ನು ಹಿಡಿದಿದ್ದನು. ಮತ್ತು ನಗರವು ಚಚ್ಚೌಕವಾಗಿದೆ, ಮತ್ತು ಅದರ ಉದ್ದವು ಅದರ ಅಗಲದಷ್ಟಿದೆ. ಮತ್ತು ಅವನು ಆ ನಗರವನ್ನು ಕೋಲಿನಿಂದ ಅಳತೆಮಾಡಿದನು, ಹನ್ನೆರಡು ಸಾವಿರ ಫರ್ಲಾಂಗುಗಳು; ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿವೆ. ಅವನು ಅದರ ಪ್ರಾಕಾರವನ್ನು ಸಹ ಅಳತೆಮಾಡಿದನು, ಮನುಷ್ಯನ ಅಳತೆಗನುಸಾರ, ಅದೇ ಸಮಯದಲ್ಲಿ ದೇವರ ದೂತನ ಅಳತೆಗನುಸಾರವಾಗಿ ಅವು ನೂರನಲವತ್ತನಾಲ್ಕು ಕ್ಯೂಬಿಟ್ಗಳಾದವು.” (ಪ್ರಕಟನೆ 21:15-17, NW) ದೇವಾಲಯವು ಅಳೆಯಲ್ಪಟ್ಟಾಗ, ಅದರ ಕುರಿತಾದ ಯೆಹೋವನ ಉದ್ದೇಶಗಳ ನೆರವೇರಿಕೆಗೆ ಇದು ಖಾತರಿಯನ್ನಿತಿತ್ತು. (ಪ್ರಕಟನೆ 11:1) ಈಗ, ದೇವದೂತನಿಂದ ಹೊಸ ಯೆರೂಸಲೇಮಿನ ಅಳೆಯುವಿಕೆಯು, ಯೆಹೋವನ ಈ ಮಹಿಮಾಭರಿತ ನಗರದ ಸಂಬಂಧದಲ್ಲಿ ಅವನ ಉದ್ದೇಶಗಳು ಹೇಗೆ ಮಾರ್ಪಡಲಾರವು ಎಂದು ತೋರಿಸುತ್ತದೆ.a
7. ನಗರದ ಅಳತೆಯಲ್ಲಿ ವಿಶೇಷತೆಯೇನು?
7 ಎಂತಹ ಒಂದು ವೈಶಿಷ್ಟ್ಯಮಯ ನಗರ ಇದಾಗಿದೆ! ಸುತ್ತಳತೆಯಲ್ಲಿ ಒಂದು ಪರಿಪೂರ್ಣ ಚಚ್ಚೌಕವು 12,000 ಫರ್ಲಾಂಗುಗಳು (ಸುಮಾರು 2,220 ಕಿಲೊಮೀಟರುಗಳು), ಎತ್ತರದಲ್ಲಿ 144 ಮೊಳಗಳ ಯಾ 64 ಮೀಟರುಗಳ ಪ್ರಾಕಾರದಿಂದ ಸುತ್ತುವರಿಯಲ್ಪಟ್ಟಿದೆ. ಯಾವುದೇ ಅಕ್ಷರಾರ್ಥಕ ನಗರಕ್ಕೆ ಆ ಅಳತೆ ಇರಸಾಧ್ಯವಿಲ್ಲ. ಇದು ಆಧುನಿಕ ಇಸ್ರಾಯೇಲಿನ 14 ಪಟ್ಟು ದೊಡ್ಡ ಕ್ಷೇತ್ರವನ್ನು ಆವರಿಸುವುದು, ಮತ್ತು ಅದು ಹೊರಾಂತರಾಳದಲ್ಲಿ ಬಹುಮಟ್ಟಿಗೆ 560 ಕಿಲೊಮೀಟರುಗಳಷ್ಟು ಹೊರಗೆ ಚಾಚುವುದು! ಪ್ರಕಟನೆಯು ಸಂಕೇತಗಳಲ್ಲಿ ಕೊಡಲಾಗಿದೆ. ಆದುದರಿಂದ, ಸ್ವರ್ಗೀಯ ಹೊಸ ಯೆರೂಸಲೇಮಿನ ಕುರಿತು ಈ ಅಳತೆಗಳು ನಮಗೇನನ್ನು ತಿಳಿಸುತ್ತವೆ?
8. ಇದರಿಂದ ಏನು ಸೂಚಿಸಲ್ಪಟ್ಟಿದೆ (ಎ) ನಗರದ 144-ಮೊಳ ಎತ್ತರದ ಪ್ರಾಕಾರಗಳು? (ಬಿ) ನಗರದ 12,000-ಫರ್ಲಾಂಗು ಅಳತೆಯು? (ಸಿ) ವಿನ್ಯಾಸದಲ್ಲಿ ನಗರವು ಪರಿಪೂರ್ಣ ಚಚ್ಚೌಕವಾಗಿರುವುದು?
8 ನಗರವು ದೇವರ 1,44,000 ಆತ್ಮಿಕ ದತ್ತು ಪುತ್ರರಿಂದ ಮಾಡಲ್ಪಟ್ಟಿದೆ ಎಂದು 144-ಮೊಳ ಎತ್ತರದ ಪ್ರಾಕಾರಗಳು ನಮಗೆ ನೆನಪು ಮಾಡುತ್ತವೆ. ನಗರದ 12,000 ಫರ್ಲಾಂಗುಗಳ ಅಳತೆಯಲ್ಲಿ—ಅದರ ಉದ್ದ, ಅಗಲ, ಮತ್ತು ಎತ್ತರ ಏಕಸಮಾನವಿರುವುದರೊಂದಿಗೆ—ಕಾಣಬರುವ ಅಂಕೆ 12 ಬೈಬಲ್ ಪ್ರವಾದನೆಯಲ್ಲಿ ಸಂಘಟನಾ ಅಳವಡಿಸುವಿಕೆಗಳಲ್ಲಿ ಸಾಂಕೇತಿಕವಾಗಿ ಬಳಸಲ್ಪಟ್ಟಿದೆ. ಆದಕಾರಣ, ಹೊಸ ಯೆರೂಸಲೇಮ್ ದೇವರ ನಿತ್ಯ ಉದ್ದೇಶವನ್ನು ಪೂರೈಸುವುದರಲ್ಲಿ ಅತ್ಯುತ್ಕೃಷ್ಟವಾದ ಸಂಘಟನಾ ಏರ್ಪಾಡು ಆಗಿ ರಚಿಸಲ್ಪಟ್ಟಿದೆ. ಹೊಸ ಯೆರೂಸಲೇಮ್, ರಾಜನಾದ ಯೇಸು ಕ್ರಿಸ್ತನೊಂದಿಗೆ, ಯೆಹೋವನ ರಾಜ್ಯ ಸಂಸ್ಥೆಯಾಗಿದೆ. ಅನಂತರ ನಗರದ ವಿನ್ಯಾಸ ಹೀಗಿದೆ: ಪರಿಪೂರ್ಣ ಚಚ್ಚೌಕ. ಸೊಲೊಮೋನನ ದೇವಾಲಯದಲ್ಲಿ, ಯೆಹೋವನ ಸಾನ್ನಿಧ್ಯದ ಸಾಂಕೇತಿಕ ಪ್ರತಿನಿಧಿತ್ವವು ಇದ್ದ ಮಹಾ ಪವಿತ್ರ ಸ್ಥಾನವು, ಒಂದು ಪರಿಪೂರ್ಣ ಚಚ್ಚೌಕವಾಗಿತ್ತು. (1 ಅರಸುಗಳು 6:19, 20) ಹಾಗಾದರೆ, ಸ್ವತಃ ಯೆಹೋವನ ಮಹಿಮೆಯಿಂದ ಪ್ರಜ್ವಲಿಸುವ ಹೊಸ ಯೆರೂಸಲೇಮ್ ಒಂದು ಪರಿಪೂರ್ಣ, ಮಹಾ ಮಟ್ಟದ ಚಚ್ಚೌಕದಲ್ಲಿ ಕಾಣಲ್ಪಡುವುದು ಎಷ್ಟೊಂದು ತಕ್ಕದಾಗಿದೆ! ಅದರ ಎಲ್ಲಾ ಅಳತೆಗಳು ಪರಿಪೂರ್ಣವಾಗಿ ಸಮತೂಕದಲ್ಲಿವೆ. ಯಾವುದೇ ಅಕ್ರಮಗಳು ಯಾ ನ್ಯೂನತೆಗಳು ಇಲ್ಲದ ಒಂದು ನಗರ ಅದಾಗಿದೆ.—ಪ್ರಕಟನೆ 21:22.
ಅಮೂಲ್ಯ ಕಟ್ಟಡ ಸಾಮಗ್ರಿಗಳು
9. ನಗರದ ಕಟ್ಟಡದ ಸಾಮಗ್ರಿಗಳನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ?
9 ತನ್ನ ವರ್ಣನೆಯನ್ನು ಯೋಹಾನನು ಮುಂದರಿಸುತ್ತಾನೆ: “ಈಗ ಪ್ರಾಕಾರದ ರಚನೆಯು ಸೂರ್ಯಕಾಂತಶಿಲೆಯದ್ದು ಮತ್ತು ನಗರವು ಪಾರದರ್ಶಕ ಗಾಜಿನಂತಿರುವ ಚೊಕ್ಕ ಚಿನ್ನವಾಗಿತ್ತು. ನಗರದ ಪ್ರಾಕಾರದ ಅಸ್ತಿವಾರಗಳು ಸಕಲ ವಿಧದ ಅಮೂಲ್ಯ ರತ್ನದಿಂದ ಅಲಂಕೃತವಾಗಿದ್ದವು: ಮೊದಲನೆಯ ಅಸ್ತಿವಾರವು ಸೂರ್ಯಕಾಂತ ಶಿಲೆ, ಎರಡನೆಯದು ನೀಲಮಣಿ, ಮೂರನೆಯದು ಕ್ಯಾಲ್ಸೆಡನಿ ಪ್ರಶಸ್ತ ಶಿಲೆ, ನಾಲ್ಕನೆಯದು ಪಸುರ್ವಣಿ, ಐದನೆಯದು ಸಾರ್ಡ್ಗೋಮೇಧಿಕ, ಆರನೆಯದು ಹಳದಿ ಪ್ರಶಸ್ತ ಶಿಲೆ, ಏಳನೆಯದು ಕ್ರಿಸೊಲೈಟ್ ಪಚ್ಚೆಮಣಿ, ಎಂಟನೆಯದು ಎಳೆಹಸಿರು ರತ್ನವಿಶೇಷ, ಒಂಬತ್ತನೆಯದು ಗೋಮೋಧಿಕ, ಹತ್ತನೆಯದು ಕ್ರಿಸ್ಪ್ರೇಸ್ ಹಸಿರುಮಣಿ, ಹನ್ನೊಂದನೆಯದು ಹೈಅಸಿಂತ್ ಕಿತ್ತಿಳೆ ಬಣ್ಣದಮಣಿ, ಹನ್ನೆರಡನೆಯದು ಪದ್ಮರಾಗಮಣಿ. ಅಲ್ಲದೆ ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಮತ್ತು ನಗರದ ವಿಶಾಲ ಬೀದಿಯು ಪಾರದರ್ಶಕ ಗಾಜಿನಂತೆ ಚೊಕ್ಕ ಚಿನ್ನವಾಗಿತ್ತು.”—ಪ್ರಕಟನೆ 21:18-21, NW.
10. ಸೂರ್ಯಕಾಂತ ಶಿಲೆ, ಚಿನ್ನ, ಮತ್ತು “ಸಕಲ ವಿಧದ ಅಮೂಲ್ಯ ರತ್ನದಿಂದ” ನಗರವು ಕಟ್ಟಲ್ಪಟ್ಟಿದೆ ಎಂಬ ನಿಜಾಂಶದಿಂದ ಏನು ಸೂಚಿತವಾಗಿದೆ?
10 ನಗರದ ಕಟ್ಟಡ ರಚನೆಯು ನಿಜವಾಗಿಯೂ ಬಹಳ ಪ್ರಕಾಶಮಾನವಾಗಿದೆ. ಜೇಡಿಮಣ್ಣು, ಕಲ್ಲುಗಳಂತಹ ಈ ಪ್ರಪಂಚದ, ಐಹಿಕ ಕಟ್ಟೋಣ ಸಾಮಗ್ರಿಗಳ ಬದಲಾಗಿ, ಸೂರ್ಯಕಾಂತ ಶಿಲೆಯ, ಚೊಕ್ಕ ಚಿನ್ನದ, ಮತ್ತು “ಸಕಲ ವಿಧದ ಅಮೂಲ್ಯ ರತ್ನ” ಗಳ ಕುರಿತು ನಾವು ಓದುತ್ತೇವೆ. ಇವುಗಳು ಸ್ವರ್ಗೀಯ ಕಟ್ಟಡದ ಸಾಮಗ್ರಿಗಳನ್ನು ಎಷ್ಟೊಂದು ತಕ್ಕದಾಗಿ ವರ್ಣಿಸುತ್ತವೆ! ಇದಕ್ಕಿಂತ ಬೇರೆ ಏನೂ ಹೆಚ್ಚು ಭವ್ಯವಾಗಿರಸಾಧ್ಯವಿಲ್ಲ. ಪ್ರಾಚೀನ ಒಡಂಬಡಿಕೆಯ ಮಂಜೂಷವು ಶುದ್ಧ ಬಂಗಾರದ ತಗಡಿನಿಂದ ಹೊದಿಸಲ್ಪಟ್ಟಿತ್ತು, ಮತ್ತು ಬೈಬಲಿನಲ್ಲಿ ಈ ಮೂಲ ಧಾತುವು ಆಗಿಂದಾಗ್ಗೆ ಒಳ್ಳೆಯ ಮತ್ತು ಅಮೂಲ್ಯವಾಗಿರುವ ವಸ್ತುಗಳನ್ನು ಪ್ರತಿನಿಧಿಸುತ್ತದೆ. (ವಿಮೋಚನಕಾಂಡ 25:11; ಜ್ಞಾನೋಕ್ತಿ 25:11; ಯೆಶಾಯ 60:6, 17) ಆದರೆ ಇಡೀ ಹೊಸ ಯೆರೂಸಲೇಮ್, ಮತ್ತು ಅದರ ವಿಶಾಲ ಬೀದಿಯು ಸಹ, “ಪಾರದರ್ಶಕ ಗಾಜಿನಂತೆ ಚೊಕ್ಕ ಚಿನ್ನ” ದಿಂದ ಮಾಡಲ್ಪಟ್ಟಿದ್ದು, ಕಲ್ಪನಾಶಕ್ತಿಯನ್ನು ತತ್ತರಗಟ್ಟಿಸುವ ಸೌಂದರ್ಯವನ್ನು ಮತ್ತು ವಾಸ್ತವಿಕ ಮೌಲ್ಯವನ್ನು ಚಿತ್ರಿಸುತ್ತದೆ.
11. ಹೊಸ ಯೆರೂಸಲೇಮ್ ಆಗುವವರು ಆತ್ಮಿಕ ಪರಿಶುದ್ಧತೆಯ ಅತ್ಯುನ್ನತ ಉತ್ಕೃಷ್ಟತೆಯೊಂದಿಗೆ ಬೆಳಗುವರೆಂಬುದನ್ನು ಯಾವುದು ಖಚಿತಪಡಿಸುತ್ತದೆ?
11 ಅಂತಹ ಚೊಕ್ಕ ಚಿನ್ನವನ್ನು ಯಾವನೇ ಅದುರು ಕರಗಿಸುವವನು ಉತ್ಪಾದಿಸಲು ಸಾಧ್ಯವಿಲ್ಲ. ಆದರೆ ಯೆಹೋವನು ನಿಪುಣ ಶೋಧಕನಾಗಿದ್ದಾನೆ. ಅವನು “ಬೆಳ್ಳಿಯ ಶೋಧಕನೂ, ಶುದ್ಧಮಾಡುವವನೂ ಆಗಿ” ಕುಳಿತುಕೊಳ್ಳುತ್ತಾನೆ ಮತ್ತು ಆತ್ಮಿಕ ಇಸ್ರಾಯೇಲಿನ ವೈಯಕ್ತಿಕ, ನಂಬಿಗಸ್ತ ಸದಸ್ಯರನ್ನು “ಬೆಳ್ಳಿಬಂಗಾರಗಳನ್ನೋ ಎಂಬಂತೆ” ಪರಿಶುದ್ಧಗೊಳಿಸಿ, ಅವರಿಂದ ಎಲ್ಲಾ ರೀತಿಯ ಅಶುದ್ಧತೆಗಳನ್ನು ತೆಗೆಯುತ್ತಾನೆ. ನಿಜವಾಗಿಯೂ ಪರಿಶೋಧಿಸಲ್ಪಟ್ಟ ಮತ್ತು ಶುದ್ಧೀಕರಿಸಲ್ಪಟ್ಟ ವ್ಯಕ್ತಿಗಳು ಮಾತ್ರವೇ ಕಟ್ಟಕಡೆಗೆ ಹೊಸ ಯೆರೂಸಲೇಮಾಗಿ ಉಂಟುಮಾಡಲ್ಪಡುತ್ತಾರೆ, ಮತ್ತು ಈ ರೀತಿಯಲ್ಲಿ ಆತ್ಮಿಕ ಪರಿಶುಭ್ರತೆಯ ಅತ್ಯುನ್ನತ ಉತ್ಕೃಷ್ಟತೆಯೊಂದಿಗೆ ಮಿನುಗುತ್ತಿರುವ ಸಜೀವ ಕಟ್ಟೋಣ ಸಾಮಗ್ರಿಗಳಿಂದ ಯೆಹೋವನು ನಗರವನ್ನು ಕಟ್ಟುತ್ತಾನೆ.—ಮಲಾಕಿಯ 3:3, 4, NW.
12. ಈ ವಾಸ್ತವಾಂಶದಿಂದ ಏನು ಸೂಚಿತವಾಗಿದೆ (ಎ) ನಗರದ ಅಸ್ತಿವಾರಗಳು 12 ಅಮೂಲ್ಯ ರತ್ನಗಳಿಂದ ಶೃಂಗರಿಸಲ್ಪಟ್ಟಿರುವುದು? (ಬಿ) ನಗರದ ಬಾಗಿಲುಗಳು ಮುತ್ತುಗಳು?
12 ನಗರದ ಅಸ್ತಿವಾರಗಳು ಸಹ 12 ರತ್ನಗಳಿಂದ ಶೃಂಗರಿಸಲ್ಪಟ್ಟು ಸುಂದರವಾಗಿವೆ. ಇಲ್ಲಿ ವರ್ಣಿಸಲ್ಪಟ್ಟವುಗಳಿಗೆ ಕೊಂಚಮಟ್ಟಿಗೆ ಸಮಾನವಾಗಿರುವ 12 ಭಿನ್ನವಾದ ಅಮೂಲ್ಯ ರತ್ನಗಳಿಂದಲಂಕೃತವಾದ ಏಫೋದನ್ನು ಉತ್ಸವದ ದಿನಗಳಲ್ಲಿ ಧರಿಸುತ್ತಿದ್ದ ಪುರಾತನ ಯೆಹೂದಿ ಮಹಾ ಯಾಜಕನನ್ನು ಇದು ಮನಸ್ಸಿಗೆ ತರುತ್ತದೆ. (ವಿಮೋಚನಕಾಂಡ 28:15-21) ನಿಶ್ಚಯವಾಗಿ ಇದೊಂದು ಸಹಘಟನೆಯಲ್ಲ! ಬದಲಾಗಿ, ಯಾವುದರಲ್ಲಿ ಅತಿ ಮಹಾ ಯಾಜಕನಾಗಿರುವ ಯೇಸುವು “ದೀಪ” ವಾಗಿರುವನೋ, ಆ ಹೊಸ ಯೆರೂಸಲೇಮಿನ ಯಾಜಕತ್ವದ ಕಾರ್ಯನಿರ್ವಹಣವನ್ನು ಇದು ಒತ್ತಿಹೇಳುತ್ತದೆ. (ಪ್ರಕಟನೆ 20:6; 21:23; ಇಬ್ರಿಯ 8:1) ಅಲ್ಲದೆ, ಹೊಸ ಯೆರೂಸಲೇಮಿನ ಮೂಲಕ ಯೇಸುವಿನ ಮಹಾ ಯಾಜಕತ್ವದ ಶುಶ್ರೂಷೆಯ ಪ್ರಯೋಜನಗಳು ಮಾನವ ಕುಲದೆಡೆಗೆ ಹರಿಸಲ್ಪಡುತ್ತವೆ. (ಪ್ರಕಟನೆ 22:1, 2) ನಗರದ 12 ಹೆಬ್ಬಾಗಿಲುಗಳು, ಪ್ರತಿಯೊಂದು ಅತಿ ಶೋಭಾಯಮಾನದ ಮುತ್ತಿನದ್ದಾಗಿದ್ದು, ಬಹಳ ಬೆಲೆಯಿದ್ದ ಮುತ್ತೊಂದಕ್ಕೆ ರಾಜ್ಯವನ್ನು ಹೋಲಿಸಿದ ಯೇಸುವಿನ ಸಾಮ್ಯವನ್ನು ಮನಸ್ಸಿಗೆ ತರುತ್ತದೆ. ಈ ಹೆಬ್ಬಾಗಿಲುಗಳ ಮೂಲಕ ಪ್ರವೇಶಿಸುವವರೆಲ್ಲರು ಆತ್ಮಿಕ ಮೌಲ್ಯಗಳಿಗೆ ನಿಜ ಗಣ್ಯತೆಯನ್ನು ತೋರಿಸುತ್ತಾರೆ.—ಮತ್ತಾಯ 13:45, 46; ಹೋಲಿಸಿ ಯೋಬ 28:12, 17, 18.
ಬೆಳಕಿನ ಒಂದು ನಗರ
13. ಹೊಸ ಯೆರೂಸಲೇಮಿನ ಸಂಬಂಧದಲ್ಲಿ ತದನಂತರ ಯೋಹಾನನು ಏನು ಹೇಳುತ್ತಾನೆ, ಮತ್ತು ಒಂದು ಅಕ್ಷರಾರ್ಥಕ ದೇವಾಲಯದ ಜರೂರಿಯು ನಗರಕ್ಕೆ ಯಾಕೆ ಇಲ್ಲ?
13 ಸೊಲೊಮೋನನ ಸಮಯದಲ್ಲಿ, ಉತ್ತರದ ಮೊರೀಯ ಬೆಟ್ಟದ ಮೇಲೆ ನಗರದ ಅತಿ ಎತ್ತರ ಮಟ್ಟದಲ್ಲಿ ಕಟ್ಟಲ್ಪಟ್ಟ ದೇವಾಲಯವು ಯೆರೂಸಲೇಮಿನ ಮೇಲೆ ಎದ್ದು ಕಾಣುತ್ತಿತ್ತು. ಹೊಸ ಯೆರೂಸಲೇಮಿನ ಕುರಿತೇನು? ಯೋಹಾನನು ಹೇಳುವುದು: “ಮತ್ತು ನಗರದಲ್ಲಿ ಒಂದು ದೇವಾಲಯವನ್ನು ನಾನು ಕಾಣಲಿಲ್ಲ, ಯಾಕಂದರೆ ಸರ್ವಶಕ್ತನಾದ ಯೆಹೋವ ದೇವರು, ಅದರ ದೇವಾಲಯವಾಗಿದ್ದಾನೆ, ಕುರಿಮರಿಯು ಸಹ. ಮತ್ತು ಅದಕ್ಕೆ ಬೆಳಕನ್ನು ಕೊಡಲು ಸೂರ್ಯನ, ಚಂದ್ರನ ಜರೂರಿ ನಗರಕ್ಕಿಲ್ಲ, ಯಾಕಂದರೆ ದೇವರ ಪ್ರಭಾವವು ಅದನ್ನು ಬೆಳಗಿತು ಮತ್ತು ಅದರ ದೀಪವು ಕುರಿಮರಿಯಾಗಿತ್ತು.” (ಪ್ರಕಟನೆ 21:22, 23, NW) ಸತ್ಯತೆಯಲ್ಲಿ, ಒಂದು ಅಕ್ಷರಾರ್ಥಕ ದೇವಾಲಯವನ್ನು ಇಲ್ಲಿ ಕಟ್ಟುವ ಜರೂರಿ ಇಲ್ಲ. ಪುರಾತನ ಯೆಹೂದಿ ದೇವಾಲಯವು ಕೇವಲ ಒಂದು ನಮೂನೆಯಾಗಿತ್ತು, ಮತ್ತು ಆ ನಮೂನೆಯ ನಿಜತ್ವವಾದ, ಒಂದು ಮಹಾ ಆತ್ಮಿಕ ದೇವಾಲಯವು ಸಾ. ಶ. 29 ರಲ್ಲಿ ಯೇಸು ಕ್ರಿಸ್ತನನ್ನು ಮಹಾ ಯಾಜಕನೋಪಾದಿ ಯೆಹೋವನು ಅಭಿಷೇಕಿಸಿದಂದಿನಿಂದ ಅಸ್ತಿತ್ವದಲ್ಲಿದೆ. (ಮತ್ತಾಯ 3:16, 17; ಇಬ್ರಿಯ 9:11, 12, 23, 24) ಜನರ ಪರವಾಗಿ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸುವ ಒಂದು ಯಾಜಕ ವರ್ಗವನ್ನು ಸಹ ಒಂದು ದೇವಾಲಯ ಮುಂಭಾವಿಸುತ್ತದೆ. ಆದರೆ ಹೊಸ ಯೆರೂಸಲೇಮಿನ ಭಾಗವಾಗಿರುವವರೆಲ್ಲರೂ ಯಾಜಕರಾಗಿದ್ದಾರೆ. (ಪ್ರಕಟನೆ 20:6) ಮತ್ತು ಯೇಸುವಿನ ಪರಿಪೂರ್ಣ ಮಾನವ ಜೀವದ ಮಹಾ ಯಜ್ಞವು ಒಮ್ಮೆಗೆ, ಮತ್ತು ಸಾರ್ವಕಾಲಿಕವಾಗಿ ಅರ್ಪಿಸಲ್ಪಟ್ಟಿದೆ. (ಇಬ್ರಿಯ 9:27, 28) ಇನ್ನೂ ಹೆಚ್ಚಾಗಿ, ನಗರದಲ್ಲಿ ನಿವಾಸಿಸುವ ಪ್ರತಿಯೊಬ್ಬರಿಗೂ ಯೆಹೋವನು ವ್ಯಕ್ತಿಶಃ ಸುಲಭಲಭ್ಯನಾಗಿದ್ದಾನೆ.
14. (ಎ) ಅದರ ಮೇಲೆ ಪ್ರಕಾಶಿಸಲು ಹೊಸ ಯೆರೂಸಲೇಮಿಗೆ ಸೂರ್ಯನೂ, ಚಂದ್ರನೂ ಯಾಕೆ ಆವಶ್ಯವಿಲ್ಲ? (ಬಿ) ಯೆಹೋವನ ಸಾರ್ವತ್ರಿಕ ಸಂಸ್ಥೆಯ ಕುರಿತು ಯೆಶಾಯನ ಪ್ರವಾದನೆಯು ಏನನ್ನು ಮುನ್ನುಡಿಯಿತು, ಮತ್ತು ಇದರಲ್ಲಿ ಹೊಸ ಯೆರೂಸಲೇಮ್ ಒಳಗೂಡಿರುವುದು ಹೇಗೆ?
14 ಸೀನಾಯಿ ಪರ್ವತದ ಮೇಲೆ ಯೆಹೋವನ ಮಹಿಮೆಯು ಮೋಶೆಯನ್ನು ದಾಟಿಹೋದಾಗ, ಅವನ ಮುಖವು ಎಷ್ಟೊಂದು ಪ್ರಕಾಶಮಾನವಾಯಿತೆಂದರೆ, ತನ್ನ ಜೊತೆ ಇಸ್ರಾಯೇಲ್ಯರಿಂದ ತಪ್ಪಿಸಲಿಕ್ಕಾಗಿ ಮುಸುಕುಹಾಕಿಕೊಳ್ಳಬೇಕಾಯಿತು. (ವಿಮೋಚನಕಾಂಡ 34:4-7, 29, 30, 33) ಹಾಗಾದರೆ, ಯೆಹೋವನ ಮಹಿಮೆಯಿಂದ ಶಾಶ್ವತವಾಗಿ ಬೆಳಗಿಸಲ್ಪಟ್ಟ ನಗರದ ಪ್ರಕಾಶವನ್ನು ನೀವು ಊಹಿಸಶಕ್ತರೋ? ಅಂತಹ ನಗರಕ್ಕೆ ರಾತ್ರಿ ಸಮಯವೆಂದೇ ಇರದು. ಅದಕ್ಕೆ ಅಕ್ಷರಾರ್ಥಕ ಸೂರ್ಯ ಯಾ ಚಂದ್ರನ ಆವಶ್ಯಕತೆಯಿಲ್ಲ. ಅದು ನಿತ್ಯಕ್ಕೂ ಬೆಳಕನ್ನು ಪ್ರಕಾಶಿಸುತ್ತದೆ. (ಹೋಲಿಸಿ 1 ತಿಮೊಥೆಯ 6:16.) ಹೊಸ ಯೆರೂಸಲೇಮ್ ಅಂತಹ ಒಂದು ಶೋಭಾಯಮಾನ ಪ್ರಕಾಶದಿಂದ ತೋಯಿಸಲ್ಪಟ್ಟಿದೆ. ಖಂಡಿತವಾಗಿ, ಈ ವಧು ಮತ್ತು ಅವಳ ವರ ಅರಸನು ಯೆಹೋವನ ಸಾರ್ವತ್ರಿಕ ಸಂಸ್ಥೆ—“ಸ್ತ್ರೀ”, “ಮೇಲಣ ಯೆರೂಸಲೇಮ್”—ಯ ರಾಜಧಾನಿಯಾಗುತ್ತಾರೆ. ಅದರ ಕುರಿತು ಯೆಶಾಯನು ಪ್ರವಾದಿಸಿದ್ದು: “ಇನ್ನು ಮೇಲೆ ಹಗಲಿನಲ್ಲಿ ನಿನಗಿರುವ ಪ್ರಕಾಶವು ಸೂರ್ಯನದಲ್ಲ; ಚಂದ್ರನು ನಿನ್ನ ಬೆಳಕಿಗಾಗಿ ಎಂದಿಗೂ ಕಳೆಗೊಳ್ಳನು; ಯೆಹೋವನೇ ನಿನಗೆ ನಿತ್ಯಪ್ರಕಾಶವು, ನಿನ್ನ ದೇವರೇ ನಿನಗೆ ತೇಜಸ್ಸು. ನಿನ್ನ ಸೂರ್ಯನು ಇನ್ನು ಮುಣುಗನು, ನಿನ್ನ ಚಂದ್ರನು ತೊಲಗನು; ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು, ನೀನು ದುಃಖಿಸುವ ದಿನಗಳು ಕೊನೆಗಾಣುವವು.”—ಯೆಶಾಯ 60:1, 19, 20; ಗಲಾತ್ಯ 4:26.
ಜನಾಂಗಗಳಿಗೆ ಒಂದು ಬೆಳಕು
15. ಹೊಸ ಯೆರೂಸಲೇಮಿನ ಕುರಿತ ಪ್ರಕಟನೆಯ ಯಾವ ಮಾತುಗಳು ಯೆಶಾಯನ ಪ್ರವಾದನೆಯಂತೆಯೇ ಇವೆ?
15 ಅದೇ ಪ್ರವಾದನೆಯು ಇದನ್ನು ಕೂಡ ಮುನ್ನುಡಿದಿತ್ತು: “ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು, ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು.” (ಯೆಶಾಯ 60:3) ಈ ಮಾತುಗಳು ಹೊಸ ಯೆರೂಸಲೇಮನ್ನು ಕೂಡ ಸೇರಿಸುವುವು ಎಂದು ಪ್ರಕಟನೆಯು ತೋರಿಸುತ್ತದೆ: “ಮತ್ತು ಅದರ ಬೆಳಕಿನಿಂದ ಸರ್ವಜನಾಂಗಗಳು ನಡೆಯುವರು, ಮತ್ತು ಭೂರಾಜರು ತಮ್ಮ ವೈಭವವನ್ನು ಅದರೊಳಗೆ ತರುವರು. ಮತ್ತು ಅದರ ಬಾಗಿಲುಗಳನ್ನು ಹಗಲಿನಲ್ಲಿ ಮುಚ್ಚುವುದೇ ಇಲ್ಲ, ರಾತ್ರಿಯಂತೂ ಅಲ್ಲಿಲ್ಲ. ಮತ್ತು ಅವರು ಜನಾಂಗಗಳ ವೈಭವ ಮತ್ತು ಘನವನ್ನು ಅದರೊಳಕ್ಕೆ ತರುವರು.”—ಪ್ರಕಟನೆ 21:24-26, NW.
16. ಹೊಸ ಯೆರೂಸಲೇಮಿನ ಬೆಳಕಿನಿಂದ ನಡೆಯುವ “ಜನಾಂಗಗಳು” ಯಾರು?
16 ಹೊಸ ಯೆರೂಸಲೇಮಿನ ಬೆಳಕಿನಿಂದ ನಡೆಯುವ ಈ “ಜನಾಂಗಗಳು” ಯಾವುವು? ಅವು, ಒಮ್ಮೆ ಈ ದುಷ್ಟ ಲೋಕದ ಜನಾಂಗಗಳ ಭಾಗವಾಗಿದ್ದು, ಈ ಮಹಿಮಾಭರಿತ ಸ್ವರ್ಗೀಯ ನಗರದಿಂದ ಪ್ರಕಾಶಿಸಲ್ಪಟ್ಟ ಬೆಳಕಿಗೆ ಪ್ರತಿವರ್ತನೆ ತೋರಿಸಿದ ಜನರಾಗಿದ್ದಾರೆ. ಅವರಲ್ಲಿ ಅಗ್ರಭಾಗದಲ್ಲಿ “ಸಕಲ ಕುಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ” ಆದವರಿಂದ ಈಗಾಗಲೇ ಹೊರಬಂದಿರುವ ಮತ್ತು ಯೋಹಾನ ವರ್ಗದೊಂದಿಗೆ ಜತೆಗೂಡಿ ದೇವರನ್ನು ಹಗಲಿರುಳು ಸೇವಿಸುವ ಮಹಾ ಸಮೂಹದವರು ಇದ್ದಾರೆ. (ಪ್ರಕಟನೆ 7:9, 15) ಪರಲೋಕದಿಂದ ಹೊಸ ಯೆರೂಸಲೇಮ್ ಇಳಿದುಬಂದಾದ ಮೇಲೆ ಮತ್ತು ಮೃತರನ್ನು ಪುನರುತ್ಥಾನಗೊಳಿಸಲು ಯೇಸುವು ಮರಣದ ಮತ್ತು ಪಾತಾಳದ ಬೀಗದಕೈಗಳನ್ನು ಉಪಯೋಗಿಸಿದ ಅನಂತರ, ಮೂಲತಃ “ಜನಾಂಗಗಳಿಂದ” ಬಂದ, ಯೆಹೋವನನ್ನು ಮತ್ತು ಹೊಸ ಯೆರೂಸಲೇಮಿನ ಕುರಿಮರಿಯಂತಿರುವ ಗಂಡನು ಆಗಿರುವ ಆತನ ಪುತ್ರನನ್ನು ಪ್ರೀತಿಸಲು ತೊಡಗಿದ ಲಕ್ಷಾಂತರ ಮಂದಿ ಅವರನ್ನು ಸೇರಿಕೊಳ್ಳುವರು.—ಪ್ರಕಟನೆ 1:18.
17. ಹೊಸ ಯೆರೂಸಲೇಮಿನೊಳಗೆ “ತಮ್ಮ ವೈಭವವನ್ನು” ತರುವ “ಭೂರಾಜರು” ಯಾರು?
17 ಹಾಗಾದರೆ, “ತಮ್ಮ ವೈಭವವನ್ನು ಅದರೊಳಗೆ ತರುವ” “ಭೂರಾಜರು” ಯಾರು? ಅವರು ಒಂದು ಗುಂಪಿನೋಪಾದಿ ಭೂಮಿಯ ಅಕ್ಷರಾರ್ಥಕ ರಾಜರಲ್ಲ ಯಾಕಂದರೆ ಅವರು ಅರ್ಮಗೆದೋನಿನಲ್ಲಿ ದೇವರ ರಾಜ್ಯದ ವಿರೋಧವಾಗಿ ಹೋರಾಡಿ ನಾಶನದೊಳಗೆ ಹೋಗಿದ್ದಾರೆ. (ಪ್ರಕಟನೆ 16:14, 16; 19:17, 18) ಮಹಾ ಸಮೂಹದ ಭಾಗವಾದ ಜನಾಂಗಗಳ ಉನ್ನತ ದರ್ಜೆಯ ಕೆಲವು ಅಧಿಕಾರಿಗಳು ಈ ರಾಜರಾಗಿರಬಹುದೇ, ಯಾ ಅವರು ಹೊಸ ಲೋಕದಲ್ಲಿ ದೇವರ ರಾಜ್ಯಕ್ಕೆ ಅಧೀನರಾಗುವ ಪುನರುತಿತ್ಥ ಅರಸರೋ? (ಮತ್ತಾಯ 12:42) ಆಗಿರಲಿಕ್ಕೆ ಸಾಧ್ಯವಿಲ್ಲ, ಯಾಕಂದರೆ ಅಂಥ ಅಧಿಕಾಂಶ ರಾಜರ ವೈಭವವು ಲೌಕಿಕವಾದದ್ದು ಮತ್ತು ಎಂದೋ ಅದು ಮಾಸಿಹೋಗಿದೆ. ಹಾಗಾದರೆ ಹೊಸ ಯೆರೂಸಲೇಮಿನೊಳಗೆ ತಮ್ಮ ವೈಭವಗಳನ್ನು ತರುವ “ಭೂರಾಜರು”, ಕುರಿಮರಿಯಾದ ಯೇಸು ಕ್ರಿಸ್ತನೊಂದಿಗೆ ರಾಜರಾಗಿ ಆಳಲು “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ . . . ಕೊಂಡುಕೊಂಡ” 1,44,000 ಮಂದಿಯಾಗಿರಬೇಕು. (ಪ್ರಕಟನೆ 5:9, 10; 22:5) ಅದರ ಶೋಭಾಯಮಾನಕ್ಕೆ ಕೂಡಿಸಲು ನಗರದೊಳಗೆ ಅವರು ತಮ್ಮ ದೇವ-ದತ್ತ ವೈಭವವನ್ನು ತರುತ್ತಾರೆ.
18. (ಎ) ಹೊಸ ಯೆರೂಸಲೇಮಿನಿಂದ ಹೊರಗೆ ಇಡಲ್ಪಡುವವರು ಯಾರು? (ಬಿ) ನಗರದೊಳಗೆ ಪ್ರವೇಶಿಸಲು ಯಾರು ಮಾತ್ರ ಅನುಮತಿಸಲ್ಪಡುವರು?
18 ಯೋಹಾನನು ಮುಂದರಿಸುವುದು: “ಆದರೆ ಪವಿತ್ರವಾಗಿರದ ಯಾವುದೂ ಮತ್ತು ಅಸಹ್ಯವಾದ ಸಂಗತಿಯನ್ನು ಮತ್ತು ಸುಳ್ಳನ್ನು ನಡಿಸುತ್ತಾ ಹೋಗುವ ಯಾವನೊಬ್ಬನೂ ಅದರೊಳಗೆ ಯಾವ ರೀತಿಯಲ್ಲೂ ಪ್ರವೇಶಿಸುವುದಿಲ್ಲ. ಕುರಿಮರಿಯ ಜೀವದ ಸುರುಳಿಯಲ್ಲಿ ಯಾರಾರ ಹೆಸರುಗಳು ಬರೆಯಲ್ಪಟ್ಟಿವೆಯೋ ಅವರು ಮಾತ್ರ ಪ್ರವೇಶಿಸುವರು.” (ಪ್ರಕಟನೆ 21:27, NW) ಸೈತಾನನ ವಿಷಯಗಳ ವ್ಯವಸ್ಥೆಯಿಂದ ಕಳಂಕಿತಗೊಳಿಸಲ್ಪಟ್ಟ ಯಾವುದೂ ಹೊಸ ಯೆರೂಸಲೇಮಿನ ಭಾಗವಾಗಿರಸಾಧ್ಯವಿಲ್ಲ. ಬಾಗಿಲುಗಳು ಶಾಶ್ವತವಾಗಿ ತೆರೆದುಕೊಂಡೇ ಇರುವುದಾದರೂ ಕೂಡ “ಅಸಹ್ಯವಾದ ಸಂಗತಿಯನ್ನು ಮತ್ತು ಸುಳ್ಳನ್ನು ನಡಿಸುತ್ತಾ ಹೋಗುವ ಯಾವನೊಬ್ಬನೂ” ಅದರಲ್ಲಿ ಪ್ರವೇಶಿಸಲಿಕ್ಕೆ ಅನುಮತಿಸಲ್ಪಡನು. ಆ ನಗರದಲ್ಲಿ ಯಾವ ಧರ್ಮಭ್ರಷ್ಟರಾಗಲಿ ಯಾ ಮಹಾ ಬಾಬೆಲಿನ ಸದಸ್ಯರಾಗಲಿ ಇರುವುದಿಲ್ಲ. ಅದರ ಭಾವೀ ಸದಸ್ಯರು ಇನ್ನೂ ಈ ಭೂಮಿಯ ಮೇಲೆ ಇರುವಾಗ, ಆ ನಗರವನ್ನು ಭ್ರಷ್ಟಗೊಳಿಸಲು ಯಾರಾದರೂ ಪ್ರಯತ್ನಿಸುವಲ್ಲಿ, ಅವರ ಪ್ರಯತ್ನಗಳನ್ನು ನಿಷ್ಫಲಗೊಳಿಸಲಾಗುವುದು. (ಮತ್ತಾಯ 13:41-43) “ಕುರಿಮರಿಯ ಜೀವದ ಸುರುಳಿಯಲ್ಲಿ ಯಾರಾರ ಹೆಸರುಗಳು ಬರೆಯಲ್ಪಟ್ಟಿವೆಯೋ” ಆ 1,44,000 ಮಂದಿ ಮಾತ್ರವೇ ಕಟ್ಟಕಡೆಗೆ ಹೊಸ ಯೆರೂಸಲೇಮಿನಲ್ಲಿ ಪ್ರವೇಶಿಸುವರು.b—ಪ್ರಕಟನೆ 13:8; ದಾನಿಯೇಲ 12:3.
ಜೀವಜಲದ ನದಿ
19. (ಎ) ಮಾನವಕುಲಕ್ಕೆ ಆಶೀರ್ವಾದಗಳನ್ನು ಹರಿಸುವುದರಲ್ಲಿ ಹೊಸ ಯೆರೂಸಲೇಮನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ? (ಬಿ) “ಜೀವಜಲದ ನದಿಯು” ಯಾವಾಗ ಹರಿಯುತ್ತದೆ, ಮತ್ತು ನಾವದನ್ನು ತಿಳಿದಿರುವುದು ಹೇಗೆ?
19 ಬಹಳ ಪ್ರಕಾಶಮಾನವಾದ ಹೊಸ ಯೆರೂಸಲೇಮ್ ಭೂಮಿಯ ಮೇಲಿರುವ ಮಾನವಕುಲಕ್ಕೆ ಮಹತ್ತಾದ ಆಶೀರ್ವಾದಗಳನ್ನು ಹರಿಸುವುದು. ಇದನ್ನು ತಾನೇ ಯೋಹಾನನು ತದನಂತರ ಅರಿಯುತ್ತಾನೆ: “ಮತ್ತು ಅವನು ದೇವರ ಮತ್ತು ಕುರಿಮರಿಯ ಸಿಂಹಾಸನದಿಂದ ಹೊರಟು ಅದರ ವಿಶಾಲ ಬೀದಿಯ ಮಧ್ಯದಲ್ಲಿ ಹರಿಯುವ, ಸ್ಫಟಿಕದಂತೆ ಸ್ವಚ್ಛವಾದ ಜೀವಜಲದ ನದಿಯನ್ನು ನನಗೆ ತೋರಿಸಿದನು.” (ಪ್ರಕಟನೆ 22:1, 2ಎ, NW) ಈ ನದಿಯು ಹರಿಯಲು ಆರಂಭಿಸಿದ್ದು ಯಾವಾಗ? ಅದರ ಹರಿಯುವಿಕೆಯು “ದೇವರ ಮತ್ತು ಕುರಿಮರಿಯ ಸಿಂಹಾಸನದಿಂದ ಹೊರಟು” ಬರುವುದರಿಂದ, 1914 ರಲ್ಲಿ ಆರಂಭಗೊಂಡ ಕರ್ತನ ದಿನದ ಅನಂತರವೇ ಇದಾಗಿರಬಲ್ಲದು. ಏಳನೆಯ ತುತೂರಿಯ ಊದುವಿಕೆಯಿಂದ ಮತ್ತು ಈ ಮಹಾ ಘೋಷಣೆಯಿಂದ ಪ್ರಕಟಿಸಲ್ಪಟ್ಟ ಘಟನೆಗೆ ಸಮಯ ಅದಾಗಿತ್ತು: ‘ಈಗ ರಕ್ಷಣೆ ಮತ್ತು ಶಕ್ತಿ ಮತ್ತು ನಮ್ಮ ದೇವರ ರಾಜ್ಯವು ಮತ್ತು ಅವನ ಕ್ರಿಸ್ತನ ಅಧಿಕಾರವು ಉಂಟಾದವು.’ (ಪ್ರಕಟನೆ 11:15; 12:10) ಆ ತೇದಿಯ ಮೊದಲು, “ಕುರಿಮರಿಯು” ಮೆಸ್ಸೀಯ ಸಂಬಂಧಿತ ಅರಸನಾಗಿ ಸಿಂಹಾಸನಾರೂಢನಾಗಿರಲಿಲ್ಲ. ಇದಕ್ಕೆ ಕೂಡಿಸಿ, ಹೊಸ ಯೆರೂಸಲೇಮಿನ ವಿಶಾಲ ಬೀದಿಯ ಮೂಲಕ ನದಿಯು ಪ್ರವಹಿಸುವುದರಿಂದ, ಸೈತಾನನ ಲೋಕದ ನಾಶನದ ಅನಂತರ, ಹೊಸ ಯೆರೂಸಲೇಮ್ ‘ದೇವರಿಂದ ಪರಲೋಕದಿಂದ ಇಳಿದು ಬರುವಾಗ’ ಈ ದರ್ಶನವು ನೆರವೇರುವ ಸಮಯವಾಗಿರತಕ್ಕದ್ದು.—ಪ್ರಕಟನೆ 21:2.
20. ತುಸು ಪ್ರಮಾಣದಲ್ಲಿ ಜೀವಜಲವು ಈಗಾಗಲೇ ದೊರಕುತ್ತದೆ ಎಂದು ಯಾವುದು ಸೂಚಿಸುತ್ತದೆ?
20 ಮಾನವ ಕುಲಕ್ಕೆ ಜೀವಜಲದ ನೀರು ನೀಡಲ್ಪಡುವುದು ಇದು ಮೊದಲ ಬಾರಿಯಲ್ಲ. ಯೇಸುವು ಭೂಮಿಯ ಮೇಲೆ ಇದ್ದಾಗ, ನಿತ್ಯ ಜೀವವನ್ನು ನೀಡುವ ಜಲದ ಕುರಿತು ಮಾತಾಡಿದನು. (ಯೋಹಾನ 4:10-14; 7:37, 38) ಮುಂದಕ್ಕೆ, ಯೋಹಾನನು ಪ್ರೀತಿಯ ಆಮಂತ್ರಣದ ಕುರಿತು ಆಲಿಸಲಿಕ್ಕಿದ್ದನು: “ಆತ್ಮನೂ ವಧುವೂ ‘ಬಾ!’ ಎಂದು ಹೇಳುತ್ತಾ ಇದ್ದಾರೆ; ಕೇಳುತ್ತಿರುವ ಯಾವನಾದರೂ ‘ಬಾ!’ ಅನ್ನಲಿ; ದಾಹಪಡುತ್ತಿರುವ ಯಾವನಾದರೂ ಬರಲಿ; ಇಷ್ಟವುಳ್ಳ ಯಾವನಾದರೂ ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.” (ಪ್ರಕಟನೆ 22:17, NW) ಈ ಆಮಂತ್ರಣವು ಈಗಲೂ ಕೂಡ ನೀಡಲ್ಪಡುತ್ತಿದೆ, ಈ ಮೂಲಕ ಜೀವಜಲದ ನೀರಿನ ಕೆಲವೊಂದು ಪ್ರಮಾಣವು ಈಗಾಗಲೇ ದೊರಕುತ್ತದೆ ಎಂದು ಸೂಚಿಸಲ್ಪಟ್ಟಿದೆ. ಆದರೆ ಹೊಸ ಲೋಕದಲ್ಲಿ ಸಾಕ್ಷಾತ್ತಾದ ನದಿಯೋಪಾದಿ ದೇವರ ಸಿಂಹಾಸನದಿಂದಲೂ, ಹೊಸ ಯೆರೂಸಲೇಮಿನ ಮೂಲಕವೂ ಆ ನೀರುಗಳು ಹರಿಯುವವು.
21. “ಜೀವಜಲದ ನದಿ” ಯಿಂದ ಏನು ಪ್ರತಿನಿಧಿಸಲ್ಪಟ್ಟಿದೆ, ಮತ್ತು ನಾವು ತಿಳಿದುಕೊಳ್ಳಲು ಯೆಹೆಜ್ಕೇಲನ ಈ ನದಿಯ ದರ್ಶನ ಹೇಗೆ ಸಹಾಯಮಾಡುತ್ತದೆ?
21 ಈ “ಜೀವಜಲದ ನದಿ” ಏನಾಗಿದೆ? ಅಕ್ಷರಾರ್ಥಕ ನೀರು ಜೀವದ ಅತ್ಯಾವಶ್ಯಕ ಧಾತುವಾಗಿದೆ. ಕೆಲವು ವಾರಗಳ ತನಕ ಆಹಾರವಿಲ್ಲದೆ ಮನುಷ್ಯನು ಜೀವಿಸಶಕ್ತನು, ಆದರೆ ನೀರಿಲ್ಲದಿದ್ದರೆ ಸುಮಾರು ಒಂದು ವಾರದೊಳಗೆ ಅವನು ಸಾಯುವನು. ನೀರು ಒಂದು ಸ್ವಚ್ಛಕವೂ ಆರೋಗ್ಯಕ್ಕೆ ಅತ್ಯಾವಶ್ಯಕವೂ ಆಗಿದೆ. ಹೀಗೆ, ಜೀವಜಲವು ಮಾನವ ಕುಲದ ಜೀವ ಮತ್ತು ಆರೋಗ್ಯಕ್ಕೆ ಅತ್ಯಾವಶ್ಯಕವಾದ ವಿಷಯವನ್ನು ಪ್ರತಿನಿಧಿಸತಕ್ಕದ್ದು. ಈ “ಜೀವಜಲದ ನದಿ”ಯ ದರ್ಶನವನ್ನು ಪ್ರವಾದಿ ಯೆಹೆಜ್ಕೇಲನಿಗೂ ಕೊಡಲಾಯಿತು, ಮತ್ತು ಅವನ ದರ್ಶನದಲ್ಲಿ, ನದಿಯು ಯೆರೂಸಲೇಮಿನಲ್ಲಿನ ದೇವಾಲಯದಿಂದ ಹೊರಟುಬಂದು, ಕೆಳಗಡೆ ಲವಣ ಸಮುದ್ರಕ್ಕೆ ಹರಿಯಿತು. ಆಗ ಅದ್ಭುತಗಳಲ್ಲಿ ಅದ್ಭುತ! ಆ ನಿರ್ಜೀವವಾಗಿದ್ದ, ರಾಸಾಯನಿಕವಾಗಿ ಪೂರಣವಾಗಿದ್ದ ಜಲಸಮೂಹವು ತಂಡೋಪತಂಡವಾಗಿರುವ ಮೀನುಗಳಿರುವ ಸಿಹಿನೀರುಗಳಾಗಿ ಪರಿವರ್ತಿತವಾಯಿತು! (ಯೆಹೆಜ್ಕೇಲ 47:1-12) ಹೌದು, ಆ ದಾರ್ಶನಿಕ ನದಿಯು ಈ ಹಿಂದೆ ಸತ್ತಿರುವುದನ್ನು ಜೀವಂತಗೊಳಿಸುತ್ತದೆ, ಹೀಗೆ, ಆ ಜೀವಜಲದ ನದಿಯು “ಸತ್ತ” ಮಾನವ ಕುಲಕ್ಕೆ ಪರಿಪೂರ್ಣ ಮಾನವ ಜೀವವನ್ನು ಭರ್ತಿಮಾಡುವ, ಯೇಸು ಕ್ರಿಸ್ತನ ಮೂಲಕವಾಗಿರುವ ದೇವರ ಒದಗಿಸುವಿಕೆಯನ್ನು ಚಿತ್ರಿಸುತ್ತದೆಂಬುದನ್ನು ಸ್ಥಿರೀಕರಿಸುತ್ತದೆ. ಈ ನದಿಯು “ಸ್ಫಟಿಕದಂತೆ ಸ್ವಚ್ಛ” ವಾಗಿದೆ, ಹೀಗೆ ದೇವರ ಒದಗಿಸುವಿಕೆಗಳ ಪರಿಶುದ್ಧತೆಯನ್ನೂ, ಪವಿತ್ರತೆಯನ್ನೂ ತೋರಿಸುತ್ತದೆ. ಇದು ಕ್ರೈಸ್ತ ಪ್ರಪಂಚದ ರಕ್ತ-ಕಲುಷಿತ, ಮಾರಕವಾಗಿರುವ “ನೀರು” ಗಳಂತೆ ಇರುವುದಿಲ್ಲ.—ಪ್ರಕಟನೆ 8:10, 11.
22. (ಎ) ನದಿಯು ಉಗಮಿಸುವುದೆಲ್ಲಿ, ಮತ್ತು ಇದು ಯುಕ್ತವಾಗಿದೆಯೇಕೆ? (ಬಿ) ಜೀವಜಲದಲ್ಲಿ ಏನು ಒಳಗೂಡಿದೆ, ಮತ್ತು ಈ ಸಾಂಕೇತಿಕ ನದಿಯಲ್ಲಿ ಏನು ಒಳಗೂಡಿದೆ?
22 ನದಿಯು “ದೇವರ ಮತ್ತು ಕುರಿಮರಿಯ ಸಿಂಹಾಸನದಿಂದ” ಉಗಮಿಸುತ್ತದೆ. ಯೆಹೋವನ ಜೀವ ಕೊಡುವ ಒದಗಿಸುವಿಕೆಗಳ ಆಧಾರವು ಪ್ರಾಯಶ್ಚಿತ್ತ ಯಜ್ಞವಾಗಿರುವುದರಿಂದ ಇದು ಯುಕ್ತವಾಗಿದೆ, ಮತ್ತು ಇದು ಒದಗಿಸಲ್ಪಟ್ಟ ಕಾರಣವೇನಂದರೆ, ಯೆಹೋವನು “ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಜೀವಜಲದಲ್ಲಿ ದೇವರ ವಾಕ್ಯವು ಕೂಡ ಒಳಗೂಡಿದೆ, ಬೈಬಲಿನಲ್ಲಿ ಅದನ್ನು ಜಲವೆಂದು ಮಾತಾಡಲಾಗಿದೆ. (ಎಫೆಸ 5:26) ಆದಾಗ್ಯೂ, ಜೀವಜಲದ ನದಿಯಲ್ಲಿ ಸತ್ಯ ಒಳಗೂಡಿರುವುದು ಮಾತ್ರವಲ್ಲ, ಬದಲಿಗೆ ಪಾಪ ಮತ್ತು ಮರಣದಿಂದ ವಿಧೇಯ ಮಾನವರನ್ನು ಮರಳಿ ಪಡೆಯುವುದಕ್ಕಾಗಿ ಮತ್ತು ಅವರಿಗೆ ನಿತ್ಯ ಜೀವವನ್ನು ನೀಡುವುದಕ್ಕೆ ಯೇಸುವಿನ ಯಜ್ಞಾಧಾರಿತವಾದ ಯೆಹೋವನ ಪ್ರತಿಯೊಂದು ಇತರ ಒದಗಿಸುವಿಕೆಯು ಕೂಡ ಸೇರಿರುತ್ತದೆ.—ಯೋಹಾನ 1:29; 1 ಯೋಹಾನ 2:1, 2.
23. (ಎ) ಹೊಸ ಯೆರೂಸಲೇಮಿನ ವಿಶಾಲ ಬೀದಿಯ ಮಧ್ಯದಲ್ಲಿ ಜೀವಜಲದ ನದಿಯು ಪ್ರವಹಿಸುವುದು ಯಾಕೆ ತಕ್ಕದಾಗಿದೆ? (ಬಿ) ವಿಪುಲವಾಗಿ ಜೀವಜಲವು ಹರಿಯುವಾಗ, ಅಬ್ರಹಾಮನಿಗೆ ಕೊಟ್ಟ ಯಾವ ವಾಗ್ದಾನವು ನೆರವೇರುವುದು?
23 ಸಾವಿರ ವರ್ಷದ ಆಳಿಕೆಯಲ್ಲಿ, ಪ್ರಾಯಶ್ಚಿತ್ತದ ಪ್ರಯೋಜನಗಳು ಯೇಸು ಮತ್ತು ಅವನ 1,44,000 ಮಂದಿ ಉಪಯಾಜಕರ ಯಾಜಕತ್ವದ ಮೂಲಕ ಪೂರ್ಣವಾಗಿ ಅನ್ವಯಿಸಲ್ಪಡುತ್ತವೆ. ಯುಕ್ತವಾಗಿಯೇ, ಹಾಗಾದರೆ ಜೀವಜಲದ ನದಿಯು ಹೊಸ ಯೆರೂಸಲೇಮಿನ ವಿಶಾಲ ಬೀದಿಯ ಮಧ್ಯದಲ್ಲಿ ಹರಿಯುತ್ತದೆ. ಇದರಲ್ಲಿ ಯೇಸುವಿನೊಂದಿಗೆ ಅಬ್ರಹಾಮನ ನಿಜ ಸಂತತಿಯನ್ನು ಉಂಟುಮಾಡುವ ಆತ್ಮಿಕ ಇಸ್ರಾಯೇಲ್ ಕೂಡಿರುತ್ತದೆ. (ಗಲಾತ್ಯ 3:16, 29) ಆದಕಾರಣ, ವಿಪುಲವಾಗಿ ಜೀವಜಲವು ಸಾಂಕೇತಿಕ ನಗರದ ಬೀದಿಯ ಮಧ್ಯದಲ್ಲಿ ಹರಿಯುವಾಗ, “ಭೂಮಿಯ ಎಲ್ಲಾ ಜನಾಂಗ” ಗಳಿಗೆ ಅಬ್ರಹಾಮನ ಸಂತತಿಯ ಮೂಲಕ ತಮ್ಮನ್ನು ಆಶೀರ್ವದಿಸಿಕೊಳ್ಳುವ ಒಂದು ಪೂರ್ಣ ಅವಕಾಶವಿರುವುದು. ಅಬ್ರಹಾಮನಿಗೆ ಕೊಟ್ಟ ಯೆಹೋವನ ವಾಗ್ದಾನವು ಪೂರ್ಣವಾಗಿ ನೆರವೇರುವುದು.—ಆದಿಕಾಂಡ 22:17, 18.
ಜೀವವೃಕ್ಷಗಳು
24. ಜೀವಜಲದ ನದಿಯ ಎರಡೂ ಪಾರ್ಶ್ವಗಳಲ್ಲಿ ಯೋಹಾನನು ಏನನ್ನು ಕಾಣುತ್ತಾನೆ, ಮತ್ತು ಅವು ಏನನ್ನು ಚಿತ್ರಿಸುತ್ತವೆ?
24 ಯೆಹೆಜ್ಕೇಲನ ದರ್ಶನದಲ್ಲಿ ನದಿಯು ಒಂದು ಪ್ರವಾಹವಾಯಿತು, ಮತ್ತು ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುದನ್ನು ಪ್ರವಾದಿಯು ಕಂಡನು. (ಯೆಹೆಜ್ಕೇಲ 47:12) ಆದರೆ ಯೋಹಾನನು ಏನನ್ನು ಕಾಣುತ್ತಾನೆ? ಇದನ್ನು: “ಮತ್ತು ಆ ನದಿಯ ಉಭಯ ಪಾರ್ಶ್ವಗಳಲ್ಲಿ ಪ್ರತಿ ತಿಂಗಳು ತಮ್ಮ ಫಲಗಳನ್ನು ಬಿಟ್ಟು ಫಲದ ಹನ್ನೆರಡು ಬೆಳೆಗಳನ್ನು ಉತ್ಪಾದಿಸುವ ಜೀವವೃಕ್ಷಗಳಿದ್ದವು. ಮತ್ತು ಆ ಮರಗಳ ಎಲೆಗಳು ಜನಾಂಗಗಳನ್ನು ವಾಸಿಮಾಡುವುದಕ್ಕಾಗಿದ್ದವು.” (ಪ್ರಕಟನೆ 22:2ಬಿ, NW) ಈ “ಜೀವವೃಕ್ಷಗಳು” ವಿಧೇಯ ಮಾನವ ಕುಲಕ್ಕೆ ನಿತ್ಯ ಜೀವವನ್ನು ಕೊಡುವುದಕ್ಕಾಗಿರುವ ಯೆಹೋವನ ಒದಗಿಸುವಿಕೆಯ ಭಾಗವನ್ನು ಸಹ ಚಿತ್ರಿಸತಕ್ಕದ್ದು.
25. ಭೌಗೋಳಿಕ ಪ್ರಮೋದವನದಲ್ಲಿ ಪ್ರತಿವರ್ತಿಸುವ ಮಾನವರಿಗೆ ಯೆಹೋವನು ಯಾವ ಸಮೃದ್ಧ ಒದಗಿಸುವಿಕೆಯನ್ನು ಮಾಡುತ್ತಾನೆ?
25 ಪ್ರತಿವರ್ತಿಸುವ ಮಾನವರಿಗೆ ಯೆಹೋವನು ಎಷ್ಟು ಸಮೃದ್ಧದ ಒದಗಿಸುವಿಕೆಯನ್ನು ಮಾಡುತ್ತಾನೆ! ಆ ಚೇತೋಹಾರಿ ನೀರುಗಳಲ್ಲಿ ಅವರು ಪಾಲಿಗರಾಗಬಹುದು ಮಾತ್ರವಲ್ಲದೆ, ಆ ಮರಗಳಿಂದ ಸತತ ವಿವಿಧತೆಯ ಜೀವಪೋಷಕ ಫಲಗಳನ್ನು ಅವರು ಕೀಳಬಹುದು. ಓ, ನಮ್ಮ ಮೂಲ ಹೆತ್ತವರು ಏದೆನಿನ ಪ್ರಮೋದವನದಲ್ಲಿ ತದ್ರೀತಿಯ “ರಮ್ಯ” ವಾಗಿದ್ದ ಒದಗಿಸುವಿಕೆಯಲ್ಲಿ ತೃಪ್ತಿಗೊಂಡಿರುತ್ತಿದ್ದರೆ! (ಆದಿಕಾಂಡ 2:9) ಆದರೆ ಈಗ ಇಲ್ಲಿ ಭೌಗೋಳಿಕ ಪ್ರಮೋದವನವೊಂದಿದೆ, ಮತ್ತು “ಜನಾಂಗಗಳನ್ನು ವಾಸಿಮಾಡುವುದಕ್ಕಾಗಿ” ಆ ಸಾಂಕೇತಿಕ ಮರಗಳ ಎಲೆಗಳ ಮೂಲಕ ಕೂಡ ಒದಗಿಸುವಿಕೆಯನ್ನು ಯೆಹೋವನು ಮಾಡುತ್ತಾನೆ.c ಇಂದು ನೀಡಲ್ಪಡುತ್ತಿರುವ ಬೇರೆ ಯಾವುದೇ ಗಿಡಮೂಲಿಕೆಗಳ ಯಾ ಇತರ ಔಷಧಕ್ಕಿಂತಲೂ ಎಷ್ಟೋ ಉತ್ಕೃಷ್ಟವಾಗಿದ್ದು, ಈ ಸಾಂಕೇತಿಕ ಎಲೆಗಳ ಉಪಶಮನಗೊಳಿಸುವ ಅನ್ವಯವು ನಂಬುವ ಮಾನವಕುಲವನ್ನು ಆತ್ಮಿಕ ಮತ್ತು ಶಾರೀರಿಕ ಪರಿಪೂರ್ಣತೆಗೆ ಮೇಲಕ್ಕೆತ್ತುವುದು.
26. ಜೀವವೃಕ್ಷಗಳು ಏನನ್ನು ಕೂಡ ಚಿತ್ರಿಸಬಹುದು, ಮತ್ತು ಯಾಕೆ?
26 ನದಿಯಿಂದ ಉತ್ತಮವಾಗಿ ನೀರುಣಿಸಲ್ಪಟ್ಟ ಈ ವೃಕ್ಷಗಳು ಕುರಿಮರಿಯ ಪತ್ನಿಯ 1,44,000 ಮಂದಿ ಸದಸ್ಯರನ್ನು ಕೂಡ ಚಿತ್ರಿಸಬಲ್ಲವು. ಭೂಮಿಯಲ್ಲಿರುವಾಗ ಇವರು ಕೂಡ ಯೇಸುವಿನ ಮೂಲಕ ಜೀವಕ್ಕಾಗಿರುವ ದೇವರ ಒದಗಿಸುವಿಕೆಯಿಂದ ಕುಡಿದರು ಮತ್ತು “ನೀತಿವೃಕ್ಷಗಳು” ಎಂದು ಕರೆಯಲ್ಪಡುತ್ತಾರೆ. (ಯೆಶಾಯ 61:1-3; ಪ್ರಕಟನೆ 21:6) ಯೆಹೋವನ ಸ್ತುತಿಗಾಗಿ ಅವರು ಈಗಾಗಲೇ ಬಹಳಷ್ಟು ಆತ್ಮಿಕ ಫಲಗಳನ್ನು ಉತ್ಪಾದಿಸಿದ್ದಾರೆ. (ಮತ್ತಾಯ 21:43) ಮತ್ತು ಸಾವಿರ ವರ್ಷದ ಆಳಿಕೆಯಲ್ಲಿ, ಪಾಪ ಮತ್ತು ಮರಣದಿಂದ “ಜನಾಂಗಗಳನ್ನು ವಾಸಿಮಾಡುವುದಕ್ಕಾಗಿ” ಇರುವ ಪ್ರಾಯಶ್ಚಿತ್ತದ ಒದಗಿಸುವಿಕೆಗಳನ್ನು ನೀಡುವುದರಲ್ಲಿ ಅವರಿಗೆ ಪಾಲು ಇರುವುದು.—ಹೋಲಿಸಿ 1 ಯೋಹಾನ 1:7.
ಇನ್ನು ರಾತ್ರಿಯಿಲ್ಲ
27. ಹೊಸ ಯೆರೂಸಲೇಮಿನೊಳಗೆ ಪ್ರವೇಶಿಸಲು ಸುಯೋಗ ಪಡೆದವರಿಗೆ ಇರುವ ಹೆಚ್ಚಿನ ಯಾವ ಆಶೀರ್ವಾದಗಳನ್ನು ಯೋಹಾನನು ತಿಳಿಸುತ್ತಾನೆ, ಮತ್ತು “ಇನ್ನು ಮುಂದೆ ಯಾವುದೇ ಶಾಪವೂ ಅಲ್ಲಿ ಇಲ್ಲ” ಎಂದು ಯಾಕೆ ಹೇಳಲ್ಪಟ್ಟಿದೆ?
27 ಹೊಸ ಯೆರೂಸಲೇಮಿನೊಳಗೆ ಪ್ರವೇಶ—ನಿಶ್ಚಯವಾಗಿಯೂ, ಅಂತಹ ಆಶ್ಚರ್ಯಕರ ಸುಯೋಗ ಬೇರೊಂದಿರಸಾಧ್ಯವಿಲ್ಲ! ತುಸು ಯೋಚಿಸಿರಿ—ಒಮ್ಮೆ ಕನಿಷ್ಠರೂ, ಅಪರಿಪೂರ್ಣರೂ ಆದ ಆ ಮಾನವರು ಅಂತಹ ಮಹಿಮಾಭರಿತ ಏರ್ಪಾಡಿನಲ್ಲಿ ಭಾಗವಾಗಲು ಪರಲೋಕದೊಳಗೆ ಯೇಸುವನ್ನು ಹಿಂಬಾಲಿಸುವರು! (ಯೋಹಾನ 14:2) ಇವರಿಂದ ಅನುಭವಿಸಲ್ಪಡುವ ಆಶೀರ್ವಾದಗಳ ಕೊಂಚ ಕಲ್ಪನೆಯನ್ನು ಯೋಹಾನನು ನಮಗೆ ಹೀಗನ್ನುತ್ತಾ, ಕೊಡುತ್ತಾನೆ: “ಮತ್ತು ಇನ್ನು ಮುಂದೆ ಯಾವುದೇ ಶಾಪವೂ ಅಲ್ಲಿ ಇಲ್ಲ. ಆದರೆ ಆ ನಗರದಲ್ಲಿ ದೇವರ ಮತ್ತು ಕುರಿಮರಿಯ ಸಿಂಹಾಸನವಿರುವುದು, ಮತ್ತು ಆತನ ದಾಸರು ಆತನಿಗೆ ಪವಿತ್ರ ಸೇವೆ ಸಲ್ಲಿಸುವರು; ಮತ್ತು ಅವರು ಆತನ ಮುಖವನ್ನು ನೋಡುವರು; ಮತ್ತು ಆವರ ಹಣೆಗಳ ಮೇಲೆ ಆತನ ಹೆಸರು ಇರುವುದು.” (ಪ್ರಕಟನೆ 22:3, 4, NW) ಇಸ್ರಾಯೇಲ್ಯ ಯಾಜಕತ್ವವು ಭ್ರಷ್ಟಗೊಂಡಾಗ, ಯೆಹೋವನ ಶಾಪದಿಂದ ಅದು ಬಾಧಿಸಲ್ಪಟ್ಟಿತು. (ಮಲಾಕಿಯ 2:2) ಯೆರೂಸಲೇಮಿನ ಅಪನಂಬಿಕೆಯ “ಆಲಯ”ವು ತ್ಯಜಿಸಲ್ಪಟ್ಟಿದೆಯೆಂದು ಯೇಸುವು ಹೇಳಿದನು. (ಮತ್ತಾಯ 23:37-39) ಆದರೆ ಹೊಸ ಯೆರೂಸಲೇಮಿನಲ್ಲಿ, “ಇನ್ನು ಮುಂದೆ ಯಾವುದೇ ಶಾಪವೂ ಅಲ್ಲಿ ಇಲ್ಲ.” (ಹೋಲಿಸಿ ಜೆಕರ್ಯ 14:11.) ಅದರ ಎಲ್ಲಾ ನಿವಾಸಿಗಳು ಭೂಮಿಯಲ್ಲಿರುವಾಗ ಶೋಧನೆಯ ಬೆಂಕಿಯಿಂದ ಪರೀಕ್ಷಿಸಲ್ಪಟ್ಟಿರುತ್ತಾರೆ, ಮತ್ತು ಜಯವನ್ನು ಗಳಿಸಿದ್ದರಿಂದ ಅವರು ‘ನಿರ್ಲಯತ್ವವನ್ನೂ ಅಮರತ್ವವನ್ನೂ’ ಧರಿಸಿರುವರು. ಅವರ ವಿಷಯದಲ್ಲಿ, ಯೇಸುವಿನ ಕುರಿತು ಯೆಹೋವನಿಗೆ ಗೊತ್ತಿದ್ದಂತೆಯೇ, ಅವರು ಎಂದಿಗೂ ಬಿದ್ದುಹೋಗುವುದಿಲ್ಲವೆಂದು ಅವನಿಗೆ ತಿಳಿದದೆ. (1 ಕೊರಿಂಥ 15:53, 57) ಇನ್ನೂ ಹೆಚ್ಚಾಗಿ, “ದೇವರ ಮತ್ತು ಕುರಿಮರಿಯ ಸಿಂಹಾಸನ” ಅಲ್ಲಿದ್ದು, ಎಲ್ಲಾ ನಿತ್ಯತೆಗೂ ನಗರದ ಸ್ಥಾನವನ್ನು ಭದ್ರಗೊಳಿಸುತ್ತದೆ.
28. ಹೊಸ ಯೆರೂಸಲೇಮಿನ ಸದಸ್ಯರುಗಳಿಗೆ ಅವರ ಹಣೆಗಳ ಮೇಲೆ ದೇವರ ಹೆಸರು ಯಾಕೆ ಬರೆಯಲ್ಪಡುತ್ತದೆ, ಮತ್ತು ಅವರ ಮುಂದೆ ಯಾವ ರೋಮಾಂಚಗೊಳಿಸುವ ಪ್ರತೀಕ್ಷೆಯು ಇದೆ?
28 ಸ್ವತಃ ಯೋಹಾನನಂತೆ, ಆ ಪರಲೋಕ ನಗರದ ಎಲ್ಲಾ ಭಾವಿ ಸದಸ್ಯರು ದೇವರ “ದಾಸರು” ಆಗಿದ್ದಾರೆ. ಹಾಗಿರುವುದರಿಂದ, ಅವರಿಗೆ ದೇವರ ಹೆಸರು ಎದ್ದುಕಾಣುವ ರೀತಿಯಲ್ಲಿ ಅವರ ಹಣೆಗಳ ಮೇಲೆ ಬರೆಯಲ್ಪಟ್ಟಿದ್ದು, ಅವನು ಅವರ ಧಣಿಯೆಂದು ಗುರುತಿಸುತ್ತದೆ. (ಪ್ರಕಟನೆ 1:1; 3:12) ಹೊಸ ಯೆರೂಸಲೇಮಿನ ಭಾಗವಾಗಿ ಅವನಿಗೆ ಪವಿತ್ರ ಸೇವೆ ಸಲ್ಲವುದು ಒಂದು ಅಪಾರ ಸುಯೋಗವೆಂದು ಅವರು ಪರಿಗಣಿಸುವರು. ಯೇಸುವು ಭೂಮಿಯ ಮೇಲೆ ಇರುವಾಗ, ಅಂತಹ ಭಾವೀ ಅಧಿಪತಿಗಳಿಗೆ ಒಂದು ರೋಮಾಂಚಕಾರಿ ವಾಗ್ದಾನವನ್ನು ಮಾಡುತ್ತಾ, ಹೀಗಂದನು: “ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು.” (ಮತ್ತಾಯ 5:8) ಯೆಹೋವನನ್ನು ಸಾಕ್ಷಾತ್ ಸಮ್ಮುಖದಲ್ಲಿ ನೋಡಲು ಮತ್ತು ಆರಾಧಿಸಲು ಈ ದಾಸರು ಎಷ್ಟೊಂದು ಆನಂದಿತರು!
29. “ಇನ್ನು ಮುಂದೆ ರಾತ್ರಿ ಇಲ್ಲ” ಎಂದು ಸ್ವರ್ಗೀಯ ಹೊಸ ಯೆರೂಸಲೇಮಿನ ಕುರಿತು ಯೋಹಾನನು ಹೇಳಿದ್ದು ಯಾಕೆ?
29 ಯೋಹಾನನು ಮುಂದರಿಸುವುದು: “ಅಲ್ಲದೆ ಇನ್ನು ಮುಂದೆ ರಾತ್ರಿ ಇಲ್ಲ, ಮತ್ತು ಅವರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಅವಶ್ಯವಿಲ್ಲ; ಏಕೆಂದರೆ ಯೆಹೋವ ದೇವರು, ಅವರ ಮೇಲೆ ಪ್ರಕಾಶಿಸುವನು.” (ಪ್ರಕಟನೆ 22:5ಎ, NW) ಭೂಮಿಯ ಇತರ ಯಾವುದೇ ನಗರದಂತೆ, ಪುರಾತನ ಯೆರೂಸಲೇಮ್ ಹಗಲಿನಲ್ಲಿ ಬೆಳಕಿಗಾಗಿ ಸೂರ್ಯನ ಮೇಲೆ ಮತ್ತು ರಾತ್ರಿಯಲ್ಲಿ ಚಂದ್ರಪ್ರಕಾಶ ಮತ್ತು ಕೃತಕ ಬೆಳಕಿನ ಮೇಲೆ ಆಧಾರಿಸಿತ್ತು. ಆದರೆ ಸ್ವರ್ಗೀಯ ಹೊಸ ಯೆರೂಸಲೇಮ್ನಲ್ಲಿ ಅಂತಹ ಬೆಳಕುಕ್ರಮ ಅನಾವಶ್ಯಕವಾಗಿರುವುದು. ಸ್ವತಃ ಯೆಹೋವನಿಂದ ನಗರವು ಬೆಳಗಿಸಲ್ಪಡುವುದು. ಮತ್ತು “ರಾತ್ರಿ” ಲಾಕ್ಷಣಿಕ ಅರ್ಥವೊಂದರಲ್ಲಿ, ಕೇಡು ಯಾ ಯೆಹೋವನಿಂದ ಪ್ರತ್ಯೇಕತೆಯನ್ನು ಸೂಚಿಸಲು ಕೂಡ ಬಳಸಲ್ಪಡಬಹುದು. (ಮೀಕ 3:6; ಯೋಹಾನ 9:4; ರೋಮಾಪುರ 13:11, 12) ಪರಾತ್ಪರ ದೇವರ ಮಹಿಮಾಭರಿತ, ದೇದೀಪ್ಯಮಾನದ ಸಾನ್ನಿಧ್ಯದಲ್ಲಿ ಅಂತಹ ರಾತ್ರಿ ಎಂದಿಗೂ ಇರಸಾಧ್ಯವಿಲ್ಲ.
30. ಭವ್ಯವಾದ ದರ್ಶನವನ್ನು ಯೋಹಾನನು ಹೇಗೆ ಮುಕ್ತಾಯಗೊಳಿಸುತ್ತಾನೆ, ಮತ್ತು ಪ್ರಕಟನೆಯು ನಮಗೆ ಯಾವ ಆಶ್ವಾಸನೆಯನ್ನೀಯುತ್ತದೆ?
30 ಈ ಭವ್ಯವಾದ ದರ್ಶನವನ್ನು ದೇವರ ಈ ದಾಸರ ಕುರಿತು ಹೀಗನ್ನುವುದರ ಮೂಲಕ ಯೋಹಾನನು ಮುಕ್ತಾಯಗೊಳಿಸುತ್ತಾನೆ: “ಮತ್ತು ಅವರು ಸದಾ ಸರ್ವದಾ ರಾಜರಾಗಿ ಆಳುವರು.” (ಪ್ರಕಟನೆ 22:5ಬಿ, NW) ನಿಜ, ಸಾವಿರ ವರುಷಗಳ ಅಂತ್ಯದಲ್ಲಿ ಪ್ರಾಯಶ್ಚಿತ್ತದ ಪ್ರಯೋಜನಗಳು ಸಮಗ್ರವಾಗಿ ಅನ್ವಯಿಸಲ್ಪಟ್ಟಿರುವುದು, ಮತ್ತು ಯೇಸುವು ತನ್ನ ತಂದೆಗೆ ಪರಿಪೂರ್ಣಗೊಂಡ ಮಾನವ ಕುಲವನ್ನು ನೀಡುವನು. (1 ಕೊರಿಂಥ 15:25-28) ಅನಂತರ ಯೇಸು ಮತ್ತು 1,44,000 ಮಂದಿಗಾಗಿ ಯೆಹೋವನ ಮನಸ್ಸಿನಲ್ಲಿ ಏನಿದೆ ಎಂದು ನಾವು ಅರಿತಿಲ್ಲ. ಆದರೆ ಎಲ್ಲಾ ನಿತ್ಯತೆಗೂ ಯೆಹೋವನಿಗೆ ಅವರ ಸುಯೋಗದ ಪವಿತ್ರ ಸೇವೆಯು ಮುಂದರಿಯುವುದು ಎಂದು ನಮಗೆ ಪ್ರಕಟನೆಯು ಆಶ್ವಾಸನೆಯನ್ನೀಯುತ್ತದೆ.
ಪ್ರಕಟನೆಯ ಸಂತುಷ್ಟ ಪರಾಕಾಷ್ಠೆ
31. (ಎ) ಹೊಸ ಯೆರೂಸಲೇಮಿನ ದರ್ಶನವನ್ನು ಯಾವ ತುತ್ತತುದಿಗೇರುವಿಕೆಯೊಂದಿಗೆ ಗುರುತಿಸಲಾಗಿದೆ? (ಬಿ) ಮಾನವ ಕುಲದ ಇತರ ನಂಬಿಗಸ್ತರಿಗಾಗಿ ಹೊಸ ಯೆರೂಸಲೇಮ್ ಏನನ್ನು ಪೂರೈಸುತ್ತದೆ?
31 ಕುರಿಮರಿಯ ವಧುವಾದ ಹೊಸ ಯೆರೂಸಲೇಮಿನ ಈ ದರ್ಶನದ ಕೈಗೂಡುವಿಕೆಯು, ಪ್ರಕಟನೆಯು ನಿರ್ದೇಶಿಸುವ ಸಂತುಷ್ಟಿಯ ಪರಮಾವಧಿಯಾಗಿದೆ, ಮತ್ತು ತಕ್ಕದಾಗಿಯೆ ಅದು ಹಾಗಿರುತ್ತದೆ. ಆರಂಭದಲ್ಲಿ ಈ ಪುಸ್ತಕವನ್ನು ಯಾರಿಗೆ ಸಂಬೋಧಿಸಲಾಗಿತ್ತೋ ಆ ಮೊದಲನೆಯ ಶತಕದ ಯೋಹಾನನ ಆ ಎಲ್ಲಾ ಜತೆ ಕ್ರೈಸ್ತರು, ಯೇಸು ಕ್ರಿಸ್ತನೊಂದಿಗೆ ಅಮರ ಆತ್ಮ ಸಹರಾಜರಾಗಿ ಆ ನಗರದೊಳಗೆ ಪ್ರವೇಶಿಸುವುದನ್ನು ಮುನ್ನೋಡಿದರು. ಇಂದು ಭೂಮಿಯ ಮೇಲೆ ಇನ್ನೂ ಜೀವಿಸಿರುವ ಅಭಿಷಿಕ್ತ ಕ್ರೈಸ್ತರ ಉಳಿಕೆಯವರಿಗೂ ಅದೇ ನಿರೀಕ್ಷೆಯು ಇದೆ. ಹೀಗೆ ಪೂರ್ಣಗೊಂಡ ವಧುವು ಕುರಿಮರಿಯೊಂದಿಗೆ ಐಕ್ಯಗೊಳ್ಳುವಾಗ, ಪ್ರಕಟನೆಯು ಅದರ ಮಹಾ ಪರಮಾವಧಿಗೆ ಮುಂದುವರಿಯುತ್ತದೆ. ಅನಂತರ, ಹೊಸ ಯೆರೂಸಲೇಮಿನ ಮೂಲಕ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು ಮಾನವ ಕುಲಕ್ಕೆ ಅನ್ವಯಿಸಲ್ಪಡುತ್ತವೆ, ಆದುದರಿಂದ ಕ್ರಮೇಣ ಎಲ್ಲಾ ನಂಬಿಗಸ್ತರು ನಿತ್ಯ ಜೀವದೊಳಗೆ ಪ್ರವೇಶಿಸುತ್ತಾರೆ. ಈ ರೀತಿಯಲ್ಲಿ ವಧುವಾದ ಹೊಸ ಯೆರೂಸಲೇಮ್, ಅವಳ ವರನಾದ ಅರಸನ ನಿಷ್ಠೆಯ ಸಹಕಾರಿಣಿಯೋಪಾದಿ, ನಿತ್ಯತೆಗೋಸ್ಕರ ಒಂದು ನೀತಿಯ ನೂತನ ಭೂಮಿಯನ್ನು—ಎಲ್ಲವೂ ನಮ್ಮ ಸಾರ್ವಭೌಮ ಕರ್ತನಾದ ಯೆಹೋವನ ಮಹಿಮೆಗೋಸ್ಕರ—ನಿರ್ಮಿಸುವುದರಲ್ಲಿ ಸಹಭಾಗಿಯಾಗುವಳು.—ಮತ್ತಾಯ 20:28; ಯೋಹಾನ 10:10, 16; ರೋಮಾಪುರ 16:27.
32, 33. ಪ್ರಕಟನೆ ಪುಸ್ತಕದಿಂದ ನಾವೇನನ್ನು ಕಲಿತೆವು, ಮತ್ತು ನಮ್ಮ ಹೃತ್ಪೂರ್ವಕ ಪ್ರತಿವರ್ತನೆ ಏನಾಗಿರತಕ್ಕದ್ದು?
32 ಹಾಗಾದರೆ, ಪ್ರಕಟನೆ ಪುಸ್ತಕದ ನಮ್ಮ ಪರಿಗಣನೆಯ ಅಂತ್ಯಕ್ಕೆ ನಾವು ಸಮೀಪಿಸುತ್ತಿರುವಂತೆಯೇ, ನಾವು ಎಂಥ ಆನಂದವನ್ನು ಅನುಭವಿಸುತ್ತೇವೆ! ಸೈತಾನನ ಮತ್ತು ಅವನ ಸಂತಾನದ ಕೊನೆಯ ಪ್ರಯತ್ನಗಳ ಸಂಪೂರ್ಣ ಭಗ್ನತೆಯನ್ನೂ, ಯೆಹೋವನ ನೀತಿಯ ತೀರ್ಪುಗಳ ಪೂರ್ಣವಾದ ಸಾಧಿಸುವಿಕೆಯನ್ನೂ ನಾವು ನೋಡಿದ್ದೇವೆ. ಮಹಾ ಬಾಬೆಲ್, ಅದನ್ನು ಹಿಂಬಾಲಿಸಿ ಸೈತಾನನ ಲೋಕದ ನಿರೀಕ್ಷಾಹೀನ ಭ್ರಷ್ಟತೆಯ ಇತರ ಎಲ್ಲಾ ಘಟಕಾಂಶಗಳು ಅಸ್ತಿತ್ವದಿಂದ ಸದಾಕಾಲಕ್ಕೂ ಅಳಿಸಿಹೋಗಲೇ ಬೇಕು. ಸ್ವತಃ ಸೈತಾನನು ಮತ್ತು ಅವನ ದೆವ್ವಗಳು ಅಧೋಲೋಕಕ್ಕೆ ದೊಬ್ಬಲ್ಪಡುತ್ತವೆ ಮತ್ತು ತದನಂತರ ನಾಶಗೊಳಿಸಲ್ಪಡುತ್ತವೆ. ಪುನರುತ್ಥಾನ ಮತ್ತು ತೀರ್ಪು ಮುಂದರಿಯುತ್ತಿರುವಷ್ಟಕ್ಕೆ, ಕ್ರಿಸ್ತನೊಂದಿಗೆ ಹೊಸ ಯೆರೂಸಲೇಮ್ ಪರಲೋಕದಿಂದ ಆಳುವುದು, ಮತ್ತು ಪರಿಪೂರ್ಣಗೊಳಿಸಲ್ಪಟ್ಟ ಮಾನವ ಕುಲವು ಕೊನೆಗೂ ಪ್ರಮೋದವನ ಭೂಮಿಯಲ್ಲಿ ನಿತ್ಯ ಜೀವವನ್ನು ಅನುಭವಿಸುವುದು. ಇವೆಲ್ಲಾ ಸಂಗತಿಗಳನ್ನು ಪ್ರಕಟನೆಯು ಎಷ್ಟೊಂದು ವಿಶದವಾಗಿ ಚಿತ್ರಿಸುತ್ತದೆ! ಇಂದು ಭೂಮಿಯಲ್ಲಿ ‘ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಈ ನಿತ್ಯವಾದ ಶುಭವರ್ತಮಾನವನ್ನು’ ಸಾರಿಹೇಳಲು ಅದು ನಮ್ಮ ದೃಢಸಂಕಲ್ಪವನ್ನು ಎಷ್ಟು ಬಲಗೊಳಿಸುತ್ತದೆ! (ಪ್ರಕಟನೆ 14:6, 7) ಈ ಮಹಾ ಕಾರ್ಯದಲ್ಲಿ ನೀವು ನಿಮ್ಮನ್ನೇ ಪೂರ್ಣವಾಗಿ ವ್ಯಯಿಸಿಕೊಳ್ಳುತ್ತಾ ಇದ್ದೀರೋ?
33 ಕೃತಜ್ಞತೆಯಿಂದ ತುಂಬಿರುವ ನಮ್ಮ ಹೃದಯಗಳೊಂದಿಗೆ, ಪ್ರಕಟನೆಯ ಮುಕ್ತಾಯದ ಮಾತುಗಳಿಗೆ ನಾವೀಗ ಗಮನಕೊಡೋಣ.
[ಅಧ್ಯಯನ ಪ್ರಶ್ನೆಗಳು]
a ಇಲ್ಲಿ ಉಪಯೋಗಿಸಲ್ಪಟ್ಟ ಅಳತೆಯು “ಮನುಷ್ಯನ ಅಳತೆಗನುಸಾರ, ಅದೇ ಸಮಯದಲ್ಲಿ ದೇವರ ದೂತನ ಅಳತೆಗನುಸಾರವಾಗಿ” ಎಂಬ ವಾಸ್ತವಾಂಶವು ನಗರವು, ಮೂಲತಃ ಮಾನವರಾಗಿದ್ದ ಆದರೆ ದೇವದೂತರ ನಡುವೆ ಆತ್ಮ ಜೀವಿಗಳಾಗುವ 1,44,000 ಮಂದಿಯಿಂದ ಮಾಡಲ್ಪಟ್ಟಿದೆ ಎಂಬ ವಾಸ್ತವಾಂಶದೊಂದಿಗೆ ಸೇರಿರಬಹುದು.
b “ಕುರಿಮರಿಯ ಜೀವದ ಸುರುಳಿಯಲ್ಲಿ” ಕೇವಲ 1,44,000 ಮಂದಿ ಆತ್ಮಿಕ ಇಸ್ರಾಯೇಲಿನ ಹೆಸರುಗಳು ಬರೆಯಲ್ಪಟ್ಟಿರುವುದನ್ನು ಗಮನಿಸಿರಿ. ಹೀಗೆ ಅದು ಭೂಮಿಯಲ್ಲಿ ಜೀವವನ್ನು ಪಡೆಯುವವರನ್ನೂ ಸೇರಿಸಿರುವ “ಜೀವದ ಸುರುಳಿ” ಯಿಂದ ಭಿನ್ನವಾಗಿದೆ.—ಪ್ರಕಟನೆ 20:12.
c “ಜನಾಂಗಗಳು” ಎಂಬ ವಾಕ್ಸರಣಿಯು ಆಗಿಂದಾಗ್ಗೆ ಆತ್ಮಿಕ ಇಸ್ರಾಯೇಲಿಗೆ ಸೇರಿರದವರಿಗೆ ಸೂಚಿಸುತ್ತದೆ ಎಂಬುದನ್ನು ಗಮನಿಸಿರಿ. (ಪ್ರಕಟನೆ 7:9; 15:4; 20:3; 21:24, 26) ಸಾವಿರ ವರ್ಷ ಆಳಿಕೆಯಲ್ಲಿ ಪ್ರತ್ಯೇಕವಾದ ರಾಷ್ಟ್ರೀಯ ಸಮೂಹಗಳಾಗಿ ಮಾನವ ಕುಲವು ಸಂಘಟಿಸಲ್ಪಡುವುದು ಮುಂದರಿಯುತ್ತದೆ ಎಂದು ಇಲ್ಲಿ ಬಳಸಲ್ಪಟ್ಟ ವಾಕ್ಸರಣಿಯು ಸೂಚಿಸುವುದಿಲ್ಲ.