ಇಂದು ನಮ್ಮ ಕ್ರಿಯಾಶೀಲ ನಾಯಕ
“ಅವನು ಜಯಿಸುತ್ತಾ ತನ್ನ ವಿಜಯವನ್ನು ಪೂರ್ಣಗೊಳಿಸಲು ಹೋದನು.”—ಪ್ರಕ. 6:2.
1, 2. (ಎ) ಇಸವಿ 1914ರಿಂದ ರಾಜ ಕ್ರಿಸ್ತನು ಮಾಡಿದ ಚಟುವಟಿಕೆಗಳನ್ನು ಬೈಬಲ್ ಹೇಗೆ ವರ್ಣಿಸುತ್ತದೆ? (ಬಿ) ಸಿಂಹಾಸನಕ್ಕೇರಿಸಲ್ಪಟ್ಟ ನಂತರ ಕ್ರಿಸ್ತನು ಯಾವ ಕ್ರಿಯೆಗಳನ್ನು ಕೈಗೊಂಡನು?
ಕ್ರಿಸ್ತನು ಯೆಹೋವನ ಮೆಸ್ಸೀಯ ರಾಜ್ಯದ ರಾಜನಾಗಿ 1914ರಲ್ಲಿ ಸಿಂಹಾಸನಕ್ಕೇರಿಸಲ್ಪಟ್ಟನು. ನಾವಿಂದು ನಮ್ಮ ಮನೋನೇತ್ರಗಳಲ್ಲಿ ಅವನನ್ನು ಹೇಗೆ ಚಿತ್ರಿಸಿಕೊಳ್ಳುತ್ತೇವೆ? ತನ್ನ ಸಭೆಯು ಹೇಗೆ ನಡೆಯುತ್ತಿದೆ ಎಂದು ನೋಡಲು ಆಗಿಂದಾಗ್ಗೆ ಭೂಮಿಯ ಕಡೆಗೆ ದೃಷ್ಟಿಹರಿಸುತ್ತಾ ತನ್ನ ಸಿಂಹಾಸನದ ಮೇಲೆ ಆಲೋಚನಾಪರನಾಗಿ ಕೂತಿರುವ ರಾಜನಂತೆಯೊ? ಹಾಗಿದ್ದಲ್ಲಿ ನಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬೇಕು. ಏಕೆಂದರೆ ಕೀರ್ತನೆಗಳು ಮತ್ತು ಪ್ರಕಟನೆ ಪುಸ್ತಕವು ಅವನನ್ನು ಅಶ್ವಾರೂಢನಾದ ಶಕ್ತಿಶಾಲಿ ರಾಜನಾಗಿ ಚಿತ್ರಿಸುತ್ತವೆ. ಅವನು “ಜಯಿಸುತ್ತಾ ತನ್ನ ವಿಜಯವನ್ನು ಪೂರ್ಣಗೊಳಿಸಲು” ಅಂದರೆ ‘ವಿಜಯೋತ್ಸವಕ್ಕಾಗಿ’ ಮುಂದುವರಿಯುತ್ತಿದ್ದಾನೆ.—ಪ್ರಕ. 6:2; ಕೀರ್ತ. 2:6-9; 45:1-4.
2 ಸಿಂಹಾಸನಕ್ಕೇರಿಸಲ್ಪಟ್ಟ ನಂತರ ರಾಜ ಕ್ರಿಸ್ತನು ಕೈಗೊಂಡ ಮೊದಲ ಕ್ರಿಯೆಯು ‘ಘಟಸರ್ಪ ಮತ್ತು ಅದರ ದೂತರ’ ಮೇಲೆ ಜಯಸಾಧಿಸಿದ್ದೇ. ಪ್ರಧಾನ ದೇವದೂತ ಮೀಕಾಯೇಲನು ತನ್ನ ದೂತರ ನಾಯಕನಾಗಿ ಸೈತಾನನನ್ನೂ ಅವನ ದೆವ್ವಗಳನ್ನೂ ಪವಿತ್ರ ಸ್ವರ್ಗದಿಂದ ಹೊರದೊಬ್ಬಿ ಭೂಕ್ಷೇತ್ರಕ್ಕೆ ನಿರ್ಬಂಧಿಸಿದನು. (ಪ್ರಕ. 12:7-9) ತದನಂತರ ಯೇಸು ಯೆಹೋವನ ‘ಒಡಂಬಡಿಕೆಯ ದೂತನ’ ಪಾತ್ರದಲ್ಲಿ ಆಧ್ಯಾತ್ಮಿಕ ಆಲಯವನ್ನು ಪರೀಕ್ಷಿಸಲು ತನ್ನ ತಂದೆಯೊಂದಿಗೆ ಬಂದನು. (ಮಲಾ. 3:1) ಮತ್ತು ‘ಮಹಾ ಬಾಬೆಲಿನ’ ಅತಿ ಹೆಚ್ಚು ನಿಂದಾರ್ಹ ಭಾಗವಾಗಿರುವ ಕ್ರೈಸ್ತಪ್ರಪಂಚವು ರಕ್ತಪಾತಕ್ಕೆ ಹಾಗೂ ಲೋಕದ ರಾಜಕೀಯ ವ್ಯವಸ್ಥೆಯೊಂದಿಗಿನ ಆಧ್ಯಾತ್ಮಿಕ ವ್ಯಭಿಚಾರಕ್ಕೆ ದೋಷಿಯೆಂದು ಅವನು ತೀರ್ಪುಮಾಡಿದನು.—ಪ್ರಕ. 18:2, 3, 24.
ಭೌಮಿಕ ಆಳಿನ ಶುದ್ಧೀಕರಣ
3, 4. (ಎ) ಯೆಹೋವನ ‘ದೂತನಾಗಿ’ ಕ್ರಿಸ್ತನು ಯಾವ ಕೆಲಸವನ್ನು ಪೂರೈಸಿದನು? (ಬಿ) ಆಲಯದ ಪರೀಕ್ಷೆಯು ಏನನ್ನು ಪ್ರಕಟಪಡಿಸಿತು? ಸಭೆಯ ಶಿರಸ್ಸಾದ ಯೇಸು ಯಾವ ನೇಮಕಾತಿ ಮಾಡಿದನು?
3 ಯೆಹೋವನು ಮತ್ತು ಆತನ ‘ದೂತನಿಂದ’ ನಡೆಸಲ್ಪಟ್ಟ ಆ ಪರೀಕ್ಷೆಯು, ಆಧ್ಯಾತ್ಮಿಕ ಆಲಯದ ಭೂಅಂಗಣದಲ್ಲಿ ನಿಜ ಕ್ರೈಸ್ತರ ಒಂದು ಗುಂಪು ಇದೆಯೆಂದು ಸಹ ಪ್ರಕಟಿಸಿತು. ಅವರು ಕ್ರೈಸ್ತಪ್ರಪಂಚದ ಚರ್ಚ್ಗಳ ಭಾಗವಾಗಿರಲಿಲ್ಲ. ಹಾಗಿದ್ದರೂ ಈ ಅಭಿಷಿಕ್ತ ಕ್ರೈಸ್ತರನ್ನು ಅಥವಾ “ಲೇವಿ ವಂಶದವರನ್ನು” ಕೂಡ ಶುದ್ಧೀಕರಿಸುವ ಅಗತ್ಯವಿತ್ತು. ಇದನ್ನೇ ಪ್ರವಾದಿ ಮಲಾಕಿಯನು ಮುಂತಿಳಿಸಿದ್ದನು: “[ಯೆಹೋವನು] ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.” (ಮಲಾ. 3:3) ಹೀಗೆ ಆಧ್ಯಾತ್ಮಿಕ ಇಸ್ರಾಯೇಲ್ಯರನ್ನು ಶುದ್ಧೀಕರಿಸಲಿಕ್ಕಾಗಿ ಯೆಹೋವನು ತನ್ನ ‘ಒಡಂಬಡಿಕೆಯ ದೂತನಾದ’ ಕ್ರಿಸ್ತ ಯೇಸುವನ್ನು ಉಪಯೋಗಿಸಿದನು.
4 ಆದರೆ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಾದ ಅವರು ನಂಬಿಕೆಯುಳ್ಳ ಮನೆವಾರ್ತೆಗೆ ಸಮಯಕ್ಕೆ ಸರಿಯಾಗಿ ಆಧ್ಯಾತ್ಮಿಕ ಆಹಾರವನ್ನು ಕೊಡಲು ಕೈಲಾದದ್ದೆಲ್ಲವನ್ನು ಮಾಡುತ್ತಿರುವುದನ್ನು ಕ್ರಿಸ್ತನು ಕಂಡನು. ಪರಿಸ್ಥಿತಿಯು ಒಳ್ಳೇದಿರಲಿ ಕೆಟ್ಟದ್ದಿರಲಿ ಅವರು 1879ರಿಂದಲೂ ಈ ಪತ್ರಿಕೆಯ ಮೂಲಕ ದೇವರ ರಾಜ್ಯದ ಕುರಿತ ಬೈಬಲ್ ಸತ್ಯಗಳನ್ನು ಪ್ರಕಟಿಸುತ್ತಿದ್ದರು. ಯೇಸು ತಾನು ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ’ ತನ್ನ ಮನೆಯವರನ್ನು ಪರೀಕ್ಷಿಸಲು ‘ಬರುವಾಗ’ ಅವರಿಗೆ “ತಕ್ಕ ಸಮಯಕ್ಕೆ ಆಹಾರವನ್ನು” ಕೊಡುವ ಆಳನ್ನು ಕಂಡುಕೊಳ್ಳುವೆನೆಂದು ಮುಂತಿಳಿಸಿದ್ದನು. ಮಾತ್ರವಲ್ಲ ಆ ಆಳನ್ನು ಸಂತೋಷಿತನು ಎಂದು ಪ್ರಶಂಸಿಸಿ ಅವನನ್ನು ‘ತನ್ನ ಎಲ್ಲ ಆಸ್ತಿಯ ಮೇಲೆ ನೇಮಿಸಲಿದ್ದನು.’ (ಮತ್ತಾ. 24:3, 45-47) ಕ್ರೈಸ್ತ ಸಭೆಯ ಶಿರಸ್ಸಾದ ಕ್ರಿಸ್ತನು ಈ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಭೂಮಿಯಲ್ಲಿ ತನ್ನ ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ಆಸ್ತಿಯನ್ನು ನೋಡಿಕೊಳ್ಳಲು ಉಪಯೋಗಿಸಿದ್ದಾನೆ. ಅವನು ಒಂದು ಆಡಳಿತ ಮಂಡಲಿಯ ಮೂಲಕ ತನ್ನ ಅಭಿಷಿಕ್ತ ‘ಮನೆಯವರಿಗೆ’ ಹಾಗೂ ಅವರ ಸಂಗಡಿಗರಾದ ‘ಬೇರೆ ಕುರಿಗಳಿಗೆ’ ಮಾರ್ಗದರ್ಶನ ಕೊಟ್ಟಿದ್ದಾನೆ.—ಯೋಹಾ. 10:16.
ಭೂಮಿಯ ಬೆಳೆಯ ಕೊಯ್ಲು
5. ಕ್ರಿಸ್ತನು ರಾಜನಾದ ಬಳಿಕ ಮಾಡಲಿದ್ದ ಯಾವ ಕೆಲಸವನ್ನು ಅಪೊಸ್ತಲ ಯೋಹಾನನು ದರ್ಶನದಲ್ಲಿ ಕಂಡನು?
5 ಮೆಸ್ಸೀಯ ರಾಜನು 1914ರಲ್ಲಿ ಸಿಂಹಾಸನಾರೂಢನಾದ ನಂತರ ಅಂದರೆ “ಕರ್ತನ ದಿನದಲ್ಲಿ” ಮಾಡಲಿದ್ದ ಇನ್ನೊಂದು ವಿಷಯವನ್ನು ಅಪೊಸ್ತಲ ಯೋಹಾನನು ದರ್ಶನದಲ್ಲಿ ಕಂಡನು. ಅವನು ಬರೆದದ್ದು: “ನಾನು ನೋಡಲಾಗಿ ಒಂದು ಬಿಳೀ ಮೇಘವು ನನಗೆ ಕಾಣಿಸಿತು. ತಲೆಯ ಮೇಲೆ ಚಿನ್ನದ ಕಿರೀಟವೂ ಕೈಯಲ್ಲಿ ಹರಿತವಾದ ಕುಡುಗೋಲೂ ಇರುವ ಮನುಷ್ಯಕುಮಾರನಂತಿರುವ ಯಾವನೋ ಒಬ್ಬನು ಆ ಮೇಘದ ಮೇಲೆ ಕುಳಿತುಕೊಂಡಿದ್ದನು.” (ಪ್ರಕ. 1:10; 14:14) ಯೆಹೋವನ ದೂತನೊಬ್ಬನು ಈ ಕೊಯ್ಲುಗಾರನಾದ ಕ್ರಿಸ್ತನಿಗೆ ತನ್ನ ಕುಡುಗೋಲನ್ನು ಚಾಚಲು ಹೇಳುವುದನ್ನು ಯೋಹಾನನು ಕೇಳಿಸಿಕೊಂಡನು. ಏಕೆಂದರೆ ‘ಭೂಮಿಯ ಬೆಳೆಯು ಪೂರ್ಣವಾಗಿ ಮಾಗಿತ್ತು.’—ಪ್ರಕ. 14:15, 16.
6. ರಾತ್ರಿ ವೇಳೆಯಲ್ಲಿ ಹೊಲದಲ್ಲಿ ಏನು ನಡೆಯಿತೆಂದು ಯೇಸು ಹೇಳಿದನು?
6 ‘ಭೂಮಿಯ ಬೆಳೆಯ ಈ ಕೊಯ್ಲು’ ನಮಗೆ ಯೇಸು ಹೇಳಿದ ಗೋದಿ ಮತ್ತು ಕಳೆಗಳ ದೃಷ್ಟಾಂತವನ್ನು ನೆನಪಿಗೆ ತರುತ್ತದೆ. ಹೊಲದಲ್ಲಿ ಗೋದಿಯನ್ನು ಬಿತ್ತಿ ಒಳ್ಳೆಯ ಗೋದಿಯ ಪೂರ್ಣ ಫಸಲನ್ನು ಕೊಯ್ಯಲು ಬಯಸಿದ ಒಬ್ಬ ಮನುಷ್ಯನಿಗೆ ಯೇಸು ತನ್ನನ್ನು ಹೋಲಿಸಿದನು. ಒಳ್ಳೆಯ ಗೋದಿಯು ‘ರಾಜ್ಯದ ಪುತ್ರರನ್ನು’ ಅಂದರೆ ಕ್ರಿಸ್ತನ ರಾಜ್ಯದಲ್ಲಿ ಅವನೊಂದಿಗಿರಲು ಅಭಿಷೇಕಿಸಲ್ಪಟ್ಟ ನಿಜ ಕ್ರೈಸ್ತರನ್ನು ಸೂಚಿಸುತ್ತದೆ. ಆದರೆ ರಾತ್ರಿವೇಳೆಯಲ್ಲಿ ಒಬ್ಬ “ವೈರಿ” ಅಂದರೆ “ಪಿಶಾಚನು” ಹೊಲದಲ್ಲಿ ಗೋದಿಯ ಮಧ್ಯೆ ಕಳೆಗಳನ್ನು ಬಿತ್ತಿಹೋದನು. ಈ ಕಳೆಗಳು ‘ಕೆಡುಕನ ಪುತ್ರರನ್ನು’ ಸೂಚಿಸುತ್ತವೆ. ಗೋದಿಯ ಬಿತ್ತನೆಗಾರನು ತನ್ನ ಕೆಲಸಗಾರರಿಗೆ ಗೋದಿ ಹಾಗೂ ಕಳೆಗಳು ಕೊಯ್ಲಿನ ಕಾಲದ ವರೆಗೆ ಅಂದರೆ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ವರೆಗೆ ಒಟ್ಟಾಗಿ ಬೆಳೆಯಲು ಬಿಡುವಂತೆ ಹೇಳಿದನು. ಆ ಸಮಯದಲ್ಲಿ ಅವನು ತನ್ನ ದೂತರನ್ನು ಕಳುಹಿಸಿ ಗೋದಿ ಮತ್ತು ಕಳೆಗಳನ್ನು ಬೇರ್ಪಡಿಸುವನು.—ಮತ್ತಾ. 13:24-30, 36-41.
7. ಕ್ರಿಸ್ತನು ‘ಭೂಮಿಯ ಬೆಳೆಯ ಕೊಯ್ಲನ್ನು’ ಹೇಗೆ ನಿರ್ವಹಿಸುತ್ತಿದ್ದಾನೆ?
7 ಯೋಹಾನನು ಕಂಡ ದರ್ಶನದ ನೆರವೇರಿಕೆಯಲ್ಲಿ ಯೇಸು ಈಗ ಲೋಕವ್ಯಾಪಕ ಕೊಯ್ಲಿನ ಕೆಲಸವನ್ನು ನಿರ್ವಹಿಸುತ್ತಾ ಇದ್ದಾನೆ. ‘ಭೂಮಿಯ ಬೆಳೆಯ ಈ ಕೊಯ್ಲು’ ಆರಂಭಗೊಂಡದ್ದು, ಯೇಸುವಿನ ದೃಷ್ಟಾಂತದಲ್ಲಿ ಗೋದಿಯಿಂದ ಸೂಚಿತರಾದ 1,44,000 ಮಂದಿ ‘ರಾಜ್ಯದ ಪುತ್ರರಲ್ಲಿ’ ಉಳಿದವರ ಒಟ್ಟುಗೂಡಿಸುವಿಕೆಯೊಂದಿಗೆ. ನಿಜ ಕ್ರೈಸ್ತರ ಹಾಗೂ ಸುಳ್ಳು ಕ್ರೈಸ್ತರ ನಡುವಣ ವ್ಯತ್ಯಾಸವು ಒಂದನೇ ಮಹಾಯುದ್ಧದ ನಂತರ ಎಂದಿಗಿಂತ ಹೆಚ್ಚು ಸ್ಪಷ್ಟವಾಯಿತು. ಎಷ್ಟರ ಮಟ್ಟಿಗೆಂದರೆ ‘ಭೂಮಿಯ ಬೆಳೆಯ ಕೊಯ್ಲಿನ’ ಎರಡನೇ ಭಾಗವಾದ ಬೇರೆ ಕುರಿಗಳ ಒಟ್ಟುಗೂಡಿಸುವಿಕೆಗೆ ಇದು ನಡೆಸಿದೆ. ಇವರು ‘ರಾಜ್ಯದ ಪುತ್ರರಲ್ಲ’ ಬದಲಿಗೆ ಆ ರಾಜ್ಯದ ಪ್ರಜೆಗಳಾಗಲು ಇಷ್ಟಪಡುವ ‘ಮಹಾ ಸಮೂಹವಾಗಿದ್ದಾರೆ.’ ಈ ಕೊಯ್ಲು ಸಿಕ್ಕಿರುವುದು ಎಲ್ಲ ‘ಜನಾಂಗಕುಲಭಾಷೆಗಳವರಿಂದಲೇ.’ ಇವರು ಮೆಸ್ಸೀಯ ರಾಜ್ಯಕ್ಕೆ ಅಧೀನರಾಗುತ್ತಾರೆ. ಈ ರಾಜ್ಯವು ಕ್ರಿಸ್ತ ಯೇಸು ಮತ್ತು ಅವನೊಂದಿಗೆ ಸ್ವರ್ಗೀಯ ಸರ್ಕಾರದಲ್ಲಿ ಜೊತೆಗೂಡುವ 1,44,000 ‘ಭಕ್ತರಿಂದ’ ರಚಿತವಾಗಿದೆ.—ಪ್ರಕ. 7:9, 10; ದಾನಿ. 7:13, 14, 18.
ಸಭೆಗಳ ಮೇಲೆ ನಾಯಕತ್ವ
8, 9. (ಎ) ಕ್ರಿಸ್ತನು ಇಡೀ ಸಭೆಯ ನಡವಳಿಕೆಯನ್ನು ಮಾತ್ರವಲ್ಲ ಒಬ್ಬೊಬ್ಬ ಸದಸ್ಯನ ಜೀವನಶೈಲಿಯನ್ನೂ ಗಮನಿಸುತ್ತಾನೆಂದು ಯಾವುದು ತೋರಿಸುತ್ತದೆ? (ಬಿ) ಪುಟ 26ರಲ್ಲಿರುವ ಚಿತ್ರದಲ್ಲಿ ತೋರಿಸಿರುವಂತೆ ‘ಸೈತಾನನ ಯಾವ ಅಗಾಧ ವಿಷಯಗಳನ್ನು’ ನಾವು ವರ್ಜಿಸಬೇಕು?
8 ಕ್ರಿ.ಶ. ಒಂದನೇ ಶತಮಾನದ ಪ್ರತಿಯೊಂದು ಸಭೆಗಳ ಆಧ್ಯಾತ್ಮಿಕ ಸ್ಥಿತಿಗತಿಯನ್ನು ಕ್ರಿಸ್ತನು ಎಷ್ಟೊಂದು ನಿಕಟವಾಗಿ ಗಮನಿಸಿದನು ಎಂಬುದನ್ನು ನಾವು ಹಿಂದಿನ ಲೇಖನದಲ್ಲಿ ನೋಡಿದೆವು. ನಮ್ಮ ದಿನಗಳಲ್ಲೂ ನಮ್ಮ ನಾಯಕ ಕ್ರಿಸ್ತನು ‘ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವಿರುವ’ ಆಳುವ ರಾಜನಾಗಿ ಲೋಕವ್ಯಾಪಕ ಸಭೆಗಳ ಮೇಲೆ ಹಾಗೂ ಅವುಗಳ ಮೇಲ್ವಿಚಾರಕರ ಮೇಲೆ ಕ್ರಿಯಾಶೀಲವಾಗಿ ಶಿರಸ್ಸುತನವನ್ನು ನಿರ್ವಹಿಸುತ್ತಿದ್ದಾನೆ. (ಮತ್ತಾ. 28:18; ಕೊಲೊ. 1:18) ಯೆಹೋವನು ಅಭಿಷಿಕ್ತರ “ಸಭೆಯ ಒಳಿತಿಗಾಗಿ ಅವನನ್ನು ಎಲ್ಲವುಗಳ ಮೇಲೆ ಶಿರಸ್ಸಾಗಿ” ನೇಮಿಸಿದ್ದಾನೆ. (ಎಫೆ. 1:22) ಹೀಗಿರುವುದರಿಂದ ಯೆಹೋವನ ಸಾಕ್ಷಿಗಳ 1,00,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಪ್ರತಿಯೊಂದರಲ್ಲಿ ನಡೆಯುವ ಒಂದೇ ಒಂದು ವಿಷಯವೂ ಅವನ ಕಣ್ಣಿಗೆ ಮರೆಯಾಗಿರುವುದಿಲ್ಲ.
9 ಥುವತೈರದ ಪ್ರಾಚೀನ ಸಭೆಗೆ ಯೇಸು ಈ ಸಂದೇಶವನ್ನು ಕಳುಹಿಸಿದನು: ‘ಅಗ್ನಿಜ್ವಾಲೆಯಂಥ ಕಣ್ಣುಗಳನ್ನು ಹೊಂದಿರುವ ದೇವರ ಮಗನು ಹೇಳುವುದೇನೆಂದರೆ, “ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು.”’ (ಪ್ರಕ. 2:18, 19) ಆ ಸಭೆಯ ಸದಸ್ಯರ ಅನೈತಿಕ ಮತ್ತು ಭೋಗಾಸಕ್ತ ಜೀವನಶೈಲಿಯನ್ನು ಗಮನಿಸಿ ಅವನು ಅವರಿಗೆ, “ಆಳವಾದ ಭಾವನೆಗಳನ್ನೂ ಆಲೋಚನೆಗಳನ್ನೂ ಪರಿಶೋಧಿಸುವವನು ನಾನೇ ಆಗಿದ್ದೇನೆ. . . . ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಅವನವನ ಕ್ರಿಯೆಗಳಿಗನುಸಾರ ಪ್ರತಿಫಲ ಕೊಡುವೆನು” ಎಂದು ಗದರಿಸಿದನು. (ಪ್ರಕ. 2:23) ಈ ಹೇಳಿಕೆಯು ತೋರಿಸುವುದೇನೆಂದರೆ ಕ್ರಿಸ್ತನು ಪ್ರತಿಯೊಂದು ಸಭೆಯ ಒಟ್ಟಿನ ನಡವಳಿಕೆಯನ್ನು ಗಮನಿಸುತ್ತಾನೆ ಮಾತ್ರವಲ್ಲ ಸಭೆಯಲ್ಲಿನ ಒಬ್ಬೊಬ್ಬ ಸದಸ್ಯನ ಜೀವನಶೈಲಿಯನ್ನೂ ಗಮನಿಸುತ್ತಾನೆ. ಥುವತೈರದ ಕ್ರೈಸ್ತರು ‘ಸೈತಾನನ ಅಗಾಧ ವಿಷಯಗಳನ್ನು ತಿಳಿಯದೇ’ ಇದ್ದದಕ್ಕಾಗಿ ಯೇಸು ಅವರನ್ನು ಪ್ರಶಂಸಿಸಿದನು. (ಪ್ರಕ. 2:24) ಅದೇರೀತಿ ಇಂದು ಸಹ ಇಂಟರ್ನೆಟ್, ಹಿಂಸಾತ್ಮಕ ವಿಡಿಯೊ ಗೇಮ್ ಮತ್ತು ಸ್ವಚ್ಛಂದ ಮಾನವ ತರ್ಕಗಳ ಮೂಲಕ ‘ಸೈತಾನನ ಅಗಾಧ ವಿಷಯಗಳನ್ನು’ ತಿಳಿದುಕೊಳ್ಳಲು ತಿರಸ್ಕರಿಸುವ ಹಿರಿಕಿರಿಯರೆಲ್ಲರನ್ನೂ ಅವನು ಮೆಚ್ಚುತ್ತಾನೆ. ಇಂದು ತಮ್ಮ ಜೀವಿತದ ಎಲ್ಲ ಕ್ಷೇತ್ರಗಳಲ್ಲಿ ಯೇಸುವಿನ ನಾಯಕತ್ವವನ್ನು ಅನುಕರಿಸಲು ತಮ್ಮ ಕೈಲಾದದ್ದನ್ನು ಮಾಡುತ್ತಿರುವ ಕ್ರೈಸ್ತರ ಪ್ರಯತ್ನಗಳನ್ನು ಮತ್ತು ತ್ಯಾಗಗಳನ್ನು ನೋಡುವಾಗ ಅವನಿಗೆ ಎಷ್ಟೊಂದು ಸಂತೋಷ!
10. ಕ್ರಿಸ್ತನು ಸಭೆಯ ಹಿರಿಯರನ್ನು ಮಾರ್ಗದರ್ಶಿಸುವುದನ್ನು ಹೇಗೆ ಚಿತ್ರಿಸಲಾಗಿದೆ? ಹಿರಿಯರು ಯಾವ ಏರ್ಪಾಡನ್ನು ಅಂಗೀಕರಿಸಬೇಕು?
10 ಕ್ರಿಸ್ತನು ಭೂಮಿಯಲ್ಲಿರುವ ತನ್ನ ಸಭೆಗಳ ಮೇಲೆ ನೇಮಿತ ಹಿರಿಯರ ಮೂಲಕ ಪ್ರೀತಿಯಿಂದ ಮೇಲ್ವಿಚಾರಣೆ ಮಾಡುತ್ತಾನೆ. (ಎಫೆ. 4:8, 11, 12) ಪ್ರಥಮ ಶತಮಾನದಲ್ಲಿದ್ದ ಎಲ್ಲ ಮೇಲ್ವಿಚಾರಕರು ಆತ್ಮಜನಿತರಾಗಿದ್ದರು. ಅವರನ್ನು ಪ್ರಕಟನೆ ಪುಸ್ತಕದಲ್ಲಿ ಕ್ರಿಸ್ತನ ಬಲಗೈಯಲ್ಲಿರುವ ಏಳು ನಕ್ಷತ್ರಗಳಾಗಿ ಚಿತ್ರಿಸಲಾಗಿದೆ. (ಪ್ರಕ. 1:16, 20) ಇಂದು ಹೆಚ್ಚಿನ ಸಭಾ ಹಿರಿಯರು ಬೇರೆ ಕುರಿ ವರ್ಗದವರು. ಅವರನ್ನು ಬಹಳಷ್ಟು ಪ್ರಾರ್ಥನೆಗಳ ನಂತರ ಹಾಗೂ ಪವಿತ್ರಾತ್ಮದ ಮಾರ್ಗದರ್ಶನದಿಂದ ನೇಮಿಸಲಾಗುತ್ತದೆ. ಆದುದರಿಂದ ಅವರು ಸಹ ಕ್ರಿಸ್ತನ ಮಾರ್ಗದರ್ಶನದ ಕೆಳಗೆ ಅಥವಾ ಮಾರ್ಗದರ್ಶಕ ಕೈಕೆಳಗೆ ಇರುವವರೆಂದು ಪರಿಗಣಿಸಸಾಧ್ಯವಿದೆ. (ಅ. ಕಾ. 20:28) ಹಾಗಿದ್ದರೂ ಕ್ರಿಸ್ತನು ಭೂಮಿಯಲ್ಲಿರುವ ತನ್ನ ಶಿಷ್ಯರನ್ನು ಮಾರ್ಗದರ್ಶಿಸಲು ಅಭಿಷಿಕ್ತ ಕ್ರೈಸ್ತ ಪುರುಷರ ಚಿಕ್ಕ ಗುಂಪಾದ ಆಡಳಿತ ಮಂಡಲಿಯನ್ನು ಉಪಯೋಗಿಸುತ್ತಿದ್ದಾನೆ ಎಂಬುದನ್ನು ಅವರು ಅಂಗೀಕರಿಸುತ್ತಾರೆ.—ಅ. ಕಾರ್ಯಗಳು 15:6, 28-30 ಓದಿ.
“ಕರ್ತನಾದ ಯೇಸುವೇ, ಬಾ!”
11. ನಮ್ಮ ನಾಯಕನು ಬೇಗನೆ ಬರುವುದನ್ನು ನೋಡಲು ನಾವೇಕೆ ಹಾತೊರೆಯುತ್ತೇವೆ?
11 ಅಪೊಸ್ತಲ ಯೋಹಾನನಿಗೆ ಕೊಡಲಾದ ಪ್ರಕಟನೆಯಲ್ಲಿ ಅನೇಕ ಬಾರಿ ಯೇಸು ತಾನು ಬೇಗನೆ ಬರುವೆನೆಂದು ಹೇಳಿದನು. (ಪ್ರಕ. 2:16; 3:11; 22:7, 20) ಮಹಾ ಬಾಬೆಲಿನ ಮೇಲೆ ಮತ್ತು ಸೈತಾನನ ದುಷ್ಟ ಲೋಕದ ಉಳಿದ ವಿಷಯಗಳ ಮೇಲೆ ತಾನು ನ್ಯಾಯತೀರ್ಪನ್ನು ಜಾರಿಗೊಳಿಸಲು ಬರುವುದರ ಕುರಿತು ಯೇಸು ಹೇಳುತ್ತಿದ್ದನೆಂಬುದು ನಿಶ್ಚಯ. (2 ಥೆಸ. 1:7, 8) ಮುಂತಿಳಿಸಲಾದ ಎಲ್ಲ ಅದ್ಭುತಕರ ಸಂಗತಿಗಳು ನೆರವೇರುವುದನ್ನು ನೋಡಲು ಆತುರದಿಂದಿದ್ದ ವೃದ್ಧ ಅಪೊಸ್ತಲ ಯೋಹಾನನು, “ಆಮೆನ್! ಕರ್ತನಾದ ಯೇಸುವೇ, ಬಾ!” ಎಂದು ಉದ್ಗರಿಸಿದನು. ಈ ದುಷ್ಟ ಲೋಕದ ಅಂತ್ಯದ ಸಮಯದಲ್ಲಿ ಜೀವಿಸುತ್ತಿರುವ ನಾವು ಸಹ ನಮ್ಮ ನಾಯಕನೂ ರಾಜನೂ ಆಗಿರುವ ಕ್ರಿಸ್ತನು ತನ್ನ ತಂದೆಯ ನಾಮವನ್ನು ಪವಿತ್ರೀಕರಿಸಲು ಹಾಗೂ ಆತನ ಪರಮಾಧಿಕಾರವನ್ನು ನಿರ್ದೋಷೀಕರಿಸಲು ರಾಜ್ಯಾಧಿಕಾರದಲ್ಲಿ ಬರುವುದನ್ನು ನೋಡಲು ಹಾತೊರೆಯುತ್ತೇವೆ.
12. ವಿನಾಶದ ಗಾಳಿಗಳನ್ನು ಬೀಸುವಂತೆ ಬಿಡುವ ಮೊದಲು ಕ್ರಿಸ್ತನು ಯಾವ ಕೆಲಸವನ್ನು ಪೂರ್ಣಗೊಳಿಸುವನು?
12 ಸೈತಾನನ ದೃಶ್ಯ ಸಂಘಟನೆಯ ಮೇಲೆ ಯೇಸು ನಾಶನವನ್ನು ತರುವ ಮೊದಲು ಆಧ್ಯಾತ್ಮಿಕ ಇಸ್ರಾಯೇಲಿನ 1,44,000 ಮಂದಿ ಸದಸ್ಯರಲ್ಲಿ ಉಳಿದವರ ಮೇಲೆ ಕೊನೆಯ ಮುದ್ರೆಯನ್ನು ಒತ್ತಲಾಗುವುದು. 1,44,000 ಮಂದಿಯ ಈ ಮುದ್ರೆ ಒತ್ತುವಿಕೆಯು ಪೂರ್ಣಗೊಳ್ಳುವ ವರೆಗೂ ಸೈತಾನನ ಲೋಕವನ್ನು ನಾಶಮಾಡುವ ವಿನಾಶದ ಗಾಳಿಗಳನ್ನು ಬೀಸದಂತೆ ತಡೆದು ಹಿಡಿಯಲಾಗುವುದು ಎಂದು ಬೈಬಲ್ ಸ್ಪಷ್ಟಪಡಿಸುತ್ತದೆ.—ಪ್ರಕ. 7:1-4.
13. ‘ಮಹಾ ಸಂಕಟದ’ ಆರಂಭ ಘಟ್ಟದಲ್ಲಿ ಕ್ರಿಸ್ತನು ತನ್ನ ಸಾನ್ನಿಧ್ಯವನ್ನು ಹೇಗೆ ಸುವ್ಯಕ್ತಗೊಳಿಸುವನು?
13 ಇಸವಿ 1914ರಲ್ಲಿ ಆರಂಭಿಸಿದ ಕ್ರಿಸ್ತನ ‘ಸಾನ್ನಿಧ್ಯವನ್ನು’ ಭೂನಿವಾಸಿಗಳಲ್ಲಿ ಅನೇಕರು ನಿರ್ಲಕ್ಷಿಸಿದ್ದಾರೆ. (2 ಪೇತ್ರ 3:3, 4) ಆದರೆ ಅತಿ ಬೇಗನೆ ಕ್ರಿಸ್ತನು ಸೈತಾನನ ವ್ಯವಸ್ಥೆಯ ವಿವಿಧ ಭಾಗಗಳ ಮೇಲೆ ಯೆಹೋವನ ನ್ಯಾಯತೀರ್ಪುಗಳನ್ನು ಜಾರಿಗೊಳಿಸುವ ಮೂಲಕ ತನ್ನ ಸಾನ್ನಿಧ್ಯವನ್ನು ಪ್ರಕಟಗೊಳಿಸುವನು. ‘ನಿಯಮರಾಹಿತ್ಯದ ಪುರುಷನ’ ನಾಶನ ಅಂದರೆ ಕ್ರೈಸ್ತಪ್ರಪಂಚದ ಪಾದ್ರಿಗಳ ಮೇಲೆ ಬರುವ ನಾಶನದಿಂದ ‘ಅವನ ಸಾನಿಧ್ಯವು ಸುವ್ಯಕ್ತವಾಗುವುದು’ ಖಂಡಿತ. (2 ಥೆಸಲೊನೀಕ 2:3, 8 ಓದಿ.) ಕ್ರಿಸ್ತನು ಯೆಹೋವನ ನೇಮಿತ ನ್ಯಾಯಾಧಿಪತಿಯಾಗಿ ಕಾರ್ಯೋನ್ಮುಖನಾಗಿದ್ದಾನೆ ಎಂಬುದಕ್ಕೆ ಇದು ದೃಢ ಪುರಾವೆಯನ್ನು ಕೊಡುವುದು. (2 ತಿಮೊಥೆಯ 4:1 ಓದಿ.) ಮಹಾ ಬಾಬೆಲಿನ ಅತ್ಯಂತ ನಿಂದನೀಯ ಭಾಗವಾದ ಕ್ರೈಸ್ತಪ್ರಪಂಚದ ನಾಶನವು ಸುಳ್ಳು ಧರ್ಮದ ದುಷ್ಟ ಲೋಕ ಸಾಮ್ರಾಜ್ಯದ ಸಂಪೂರ್ಣ ವಿನಾಶಕ್ಕೆ ಮುನ್ಸೂಚನೆ! ಈ ಆಧ್ಯಾತ್ಮಿಕ ವೇಶ್ಯೆಯನ್ನು ನಾಶಗೊಳಿಸುವ ಯೋಚನೆಯನ್ನು ಯೆಹೋವನೇ ರಾಜಕೀಯ ಮುಖಂಡರ ಹೃದಯಗಳಲ್ಲಿ ಹಾಕುವನು. (ಪ್ರಕ. 17:15-18) ಇದೇ ‘ಮಹಾ ಸಂಕಟದ’ ಆರಂಭ ಘಟ್ಟ!—ಮತ್ತಾ. 24:21.
14. (ಎ) ಮಹಾ ಸಂಕಟದ ಆರಂಭ ಘಟ್ಟವನ್ನು ಏಕೆ ಕಡಿಮೆಗೊಳಿಸಲಾಗುವುದು? (ಬಿ) “ಮನುಷ್ಯಕುಮಾರನ ಸೂಚನೆ” ಯೆಹೋವನ ಜನರ ಮೇಲೆ ಯಾವ ಪರಿಣಾಮಬೀರುವುದು?
14 ಆ ಮಹಾ ಸಂಕಟದ ದಿನಗಳನ್ನು “ಆಯ್ದುಕೊಳ್ಳಲ್ಪಟ್ಟವರ ನಿಮಿತ್ತವಾಗಿ” ಅಂದರೆ ಇನ್ನೂ ಭೂಮಿಯಲ್ಲಿರುವ ಅಭಿಷಿಕ್ತ ಕ್ರೈಸ್ತ ಉಳಿಕೆಯವರ ನಿಮಿತ್ತವಾಗಿ ಕಡಿಮೆಗೊಳಿಸಲಾಗುವುದು ಎಂದು ಯೇಸು ಹೇಳಿದನು. (ಮತ್ತಾ. 24:22) ಸುಳ್ಳು ಧರ್ಮದ ಮೇಲೆ ಬರಲಿರುವ ಈ ವಿನಾಶಕಾರಿ ಆಕ್ರಮಣದಲ್ಲಿ ಅಭಿಷಿಕ್ತ ಕ್ರೈಸ್ತರು ಹಾಗೂ ಅವರ ಸಂಗಡಿಗರಾದ ಬೇರೆ ಕುರಿಗಳು ನಾಶವಾಗುವಂತೆ ಯೆಹೋವನು ಬಿಡಲಾರನು. ಯೇಸು ಮತ್ತೂ ಹೇಳಿದ್ದೇನಂದರೆ, “ಆ ದಿನಗಳ ಸಂಕಟವು ತೀರಿದ ಕೂಡಲೆ” ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಸೂಚನೆಗಳು ತೋರಿಬರುವವು; “ಆಗ ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು.” ಇದರಿಂದಾಗಿ ಭೂಮಿಯ ಜನರು “ಗೋಳಾಡುತ್ತಾ ಎದೆಬಡಿದುಕೊಳ್ಳುವರು.” ಆದರೆ ಸ್ವರ್ಗೀಯ ನಿರೀಕ್ಷೆಯಿರುವ ಅಭಿಷಿಕ್ತರು ಮತ್ತು ಭೂನಿರೀಕ್ಷೆಯಿರುವ ಅವರ ಸಂಗಡಿಗರು ಹಾಗೆ ಮಾಡರು. ಅವರು ‘ತಮ್ಮನ್ನು ನೆಟ್ಟಗಾಗಿಸಿಕೊಂಡು ತಮ್ಮ ತಲೆಯನ್ನು ಮೇಲಕ್ಕೆತ್ತುವರು. ಏಕೆಂದರೆ ಅವರ ಬಿಡುಗಡೆಯು ಸಮೀಪವಾಗುತ್ತಿದೆ.’—ಮತ್ತಾ. 24:29, 30; ಲೂಕ 21:25-28.
15. ಕ್ರಿಸ್ತನು ಬರುವಾಗ ಯಾವ ಕೆಲಸವನ್ನು ಮಾಡಲಿರುವನು?
15 ಮನುಷ್ಯಕುಮಾರನು ತನ್ನ ವಿಜಯವನ್ನು ಪೂರ್ಣಗೊಳಿಸುವ ಮುಂಚೆ ಮತ್ತೊಂದು ವಿಧದಲ್ಲಿಯೂ ಬರುತ್ತಾನೆ. ಅವನು ಪ್ರವಾದಿಸಿದ್ದು: “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲ ದೂತರೊಡನೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು. ಆಗ ಎಲ್ಲ ಜನಾಂಗಗಳವರು ಅವನ ಮುಂದೆ ಒಟ್ಟುಗೂಡಿಸಲ್ಪಡುವರು ಮತ್ತು ಒಬ್ಬ ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ಅವನು ಜನರನ್ನು ಪ್ರತ್ಯೇಕಿಸುವನು. ಅವನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಆಡುಗಳನ್ನು ಎಡಗಡೆಯಲ್ಲಿಯೂ ನಿಲ್ಲಿಸುವನು.” (ಮತ್ತಾ. 25:31-33) ಇದು, ಕ್ರಿಸ್ತನು “ಎಲ್ಲ ಜನಾಂಗಗಳ” ಜನರನ್ನು ಎರಡು ಗುಂಪುಗಳಾಗಿ ಪ್ರತ್ಯೇಕಿಸಲು ನ್ಯಾಯಾಧಿಪತಿಯಾಗಿ ಬರುವುದನ್ನು ಸೂಚಿಸುತ್ತದೆ. “ಕುರಿಗಳು” ಅಂದರೆ ಯೇಸುವಿನ ಆಧ್ಯಾತ್ಮಿಕ ಸಹೋದರರನ್ನು (ಭೂಮಿಯಲ್ಲಿರುವ ಅಭಿಷಿಕ್ತ ಕ್ರೈಸ್ತರನ್ನು) ಕ್ರಿಯಾಶೀಲವಾಗಿ ಬೆಂಬಲಿಸುತ್ತಿರುವವರು. “ಆಡುಗಳು” ಅಂದರೆ ‘ನಮ್ಮ ಕರ್ತನಾದ ಯೇಸುವಿನ ಕುರಿತಾದ ಸುವಾರ್ತೆಗೆ ವಿಧೇಯರಾಗದವರು.’ (2 ಥೆಸ. 1:7, 8) “ನೀತಿವಂತರು” ಎಂದು ವರ್ಣಿಸಲಾದ ಕುರಿಗಳು ಭೂಮಿಯ ಮೇಲೆ ‘ನಿತ್ಯಜೀವವನ್ನು’ ಪಡೆಯುವರು. ಆದರೆ ಆಡುಗಳು “ನಿತ್ಯಛೇದನಕ್ಕೆ” ಅಂದರೆ ನಾಶನಕ್ಕೆ ಹೋಗುವರು.—ಮತ್ತಾ. 25:34, 40, 41, 45, 46.
ಯೇಸುವಿನ ವಿಜಯದ ಪೂರ್ಣತೆ
16. ನಮ್ಮ ನಾಯಕನಾದ ಕ್ರಿಸ್ತನು ತನ್ನ ವಿಜಯವನ್ನು ಹೇಗೆ ಪೂರ್ಣಗೊಳಿಸುವನು?
16 ರಾಜ-ಯಾಜಕ ಸಂಗಡಿಗರ ಇಡೀ ಸಂಖ್ಯೆಯು ಮುದ್ರೆಯೊತ್ತಲ್ಪಟ್ಟ ಬಳಿಕ ಮತ್ತು ಕುರಿಗಳಾಗಿ ಕಂಡುಬಂದವರನ್ನು ರಕ್ಷಣೆಗಾಗಿ ತನ್ನ ಬಲಗಡೆಯಲ್ಲಿಟ್ಟ ನಂತರ ಕ್ರಿಸ್ತನು ‘ವಿಜಯವನ್ನು ಪೂರ್ಣಗೊಳಿಸಲು’ ಮುಂದುವರಿಯುವನು. (ಪ್ರಕ. 5:9, 10; 6:2) ಬಲಾಢ್ಯ ದೇವದೂತ ಸೇನೆಯ ನಾಯಕನಾಗಿ ಹಾಗೂ ನಿಶ್ಚಯವಾಗಿ ತನ್ನ ಪುನರುತ್ಥಿತ ಸಹೋದರರೊಂದಿಗೆ ಜೊತೆಗೂಡಿ ಅವನು ಸೈತಾನನ ಲೋಕದ ಇಡೀ ರಾಜಕೀಯ, ಮಿಲಿಟರಿ, ವಾಣಿಜ್ಯ ವ್ಯವಸ್ಥೆಯನ್ನು ನಾಶಗೊಳಿಸುವನು. (ಪ್ರಕ. 2:26, 27; 19:11-21) ಸೈತಾನನ ಲೋಕವನ್ನು ಕ್ರಿಸ್ತನು ನಾಶಗೊಳಿಸುವಾಗ ಅವನ ವಿಜಯವು ಪೂರ್ಣಗೊಳ್ಳುವುದು. ಆಗ ಅವನು ಸೈತಾನನನ್ನು ಮತ್ತು ದೆವ್ವಗಳನ್ನು ಸಾವಿರ ವರ್ಷಗಳ ತನಕ ಅಗಾಧ ಸ್ಥಳದಲ್ಲಿ ಬಂಧಿಸುವನು.—ಪ್ರಕ. 20:1-3.
17. ಸಾವಿರ ವರ್ಷದ ಆಳ್ವಿಕೆಯಲ್ಲಿ ಕ್ರಿಸ್ತನು ತನ್ನ ಬೇರೆ ಕುರಿಗಳನ್ನು ಎಲ್ಲಿಗೆ ನಡೆಸುವನು? ನಮ್ಮ ದೃಢಸಂಕಲ್ಪವು ಏನಾಗಿರಬೇಕು?
17 ಮಹಾ ಸಂಕಟವನ್ನು ಪಾರಾಗಲಿರುವ ಬೇರೆ ಕುರಿಗಳ ‘ಮಹಾ ಸಮೂಹದ’ ಕುರಿತು ಮಾತಾಡುತ್ತಾ ಅಪೊಸ್ತಲ ಯೋಹಾನನು ಪ್ರವಾದಿಸಿದ್ದು: “ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದವನು ಅವರನ್ನು ಪಾಲಿಸಿ ಜೀವಜಲದ ಒರತೆಗಳ ಬಳಿಗೆ ನಡಿಸುವನು.” (ಪ್ರಕ. 7:9, 17) ಹೌದು, ತನ್ನ ಸ್ವರಕ್ಕೆ ನಿಜವಾಗಿ ಕಿವಿಗೊಡುವ ಬೇರೆ ಕುರಿಗಳನ್ನು ತನ್ನ ಸಹಸ್ರ ವರ್ಷದಾಳ್ವಿಕೆಯಲ್ಲೆಲ್ಲಾ ಕ್ರಿಸ್ತನು ಮಾರ್ಗದರ್ಶಿಸುತ್ತಾ ಅವರನ್ನು ನಿತ್ಯಜೀವಕ್ಕೆ ನಡಿಸುವನು. (ಯೋಹಾನ 10:16, 26-28 ಓದಿ.) ಆದ್ದರಿಂದ ರಾಜ್ಯಾಧಿಕಾರ ವಹಿಸಿದ ನಮ್ಮ ನಾಯಕನನ್ನು ಈಗಲೂ ಯೆಹೋವನ ವಾಗ್ದತ್ತ ಹೊಸ ಲೋಕದಲ್ಲಿಯೂ ನಂಬಿಗಸ್ತಿಕೆಯಿಂದ ಅನುಸರಿಸುತ್ತಿರೋಣ!
ಪುನರ್ವಿಮರ್ಶೆಗಾಗಿ
• ಸಿಂಹಾಸನಕ್ಕೇರಿಸಲ್ಪಟ್ಟ ಬಳಿಕ ಕ್ರಿಸ್ತನು ಯಾವ ಕ್ರಿಯೆಕೈಗೊಂಡನು?
• ಸಭೆಗಳನ್ನು ಮಾರ್ಗದರ್ಶಿಸಲು ಕ್ರಿಸ್ತನು ಯಾವ ದೃಶ್ಯ ಸಾಧನವನ್ನು ಬಳಸುತ್ತಿದ್ದಾನೆ?
• ನಮ್ಮ ನಾಯಕನಾದ ಕ್ರಿಸ್ತನು ಯಾವ ವಿಧಗಳಲ್ಲಿ ಇನ್ನೂ ಬರಲಿದ್ದಾನೆ?
• ಕ್ರಿಸ್ತನು ನಮ್ಮನ್ನು ಹೊಸ ಲೋಕದೊಳಗೆ ಹೇಗೆ ಮುನ್ನಡಿಸುವನು?
[ಪುಟ 29ರಲ್ಲಿರುವ ಚಿತ್ರ]
ಸೈತಾನನ ದುಷ್ಟ ಲೋಕದ ನಾಶನವು ಕ್ರಿಸ್ತನ ಸಾನ್ನಿಧ್ಯವನ್ನು ಸ್ಪಷ್ಟವಾಗಿ ತೋರ್ಪಡಿಸುವುದು