ಅಧ್ಯಾಯ 4
ಯೇಸುವು ಪ್ರೋತ್ಸಾಹನೆಯೊಂದಿಗೆ ಬರುತ್ತಾನೆ
1. ಈಗ ಯೋಹಾನನು ಯಾರಿಗೆ ಬರೆಯುತ್ತಾನೆ, ಮತ್ತು ಇಂದು ಯಾರು ಅವನ ಸಂದೇಶವನ್ನು ಒಂದು ಮಗ್ನಗೊಳಿಸುವ ಆಸಕ್ತಿಯದ್ದಾಗಿ ಕಂಡುಕೊಳ್ಳತಕ್ಕದ್ದು?
ಹಿಂಬಾಲಿಸಿಕೊಂಡು ಬರುವ ವಿಷಯಗಳು, ಇಂದು ದೇವ ಜನರ ಸಭೆಗಳೊಂದಿಗೆ ಸಹವಾಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಮಗ್ನಗೊಳಿಸುವ ಆಸಕ್ತಿಯದ್ದಾಗಿರತಕ್ಕದ್ದು. ಸಂದೇಶಗಳ ಒಂದು ಶ್ರೇಣಿಯು ಇಲ್ಲಿದೆ. “ನೇಮಿತ ಸಮಯವು” ಹತ್ತರಿಸುವಂತೆ, ಅವುಗಳಿಗೆ ಒಂದು ನಿರ್ದಿಷ್ಟ ಅನ್ವಯಿಸುವಿಕೆಯು ಇದೆ. (ಪ್ರಕಟನೆ 1:3) ಈ ಘೋಷಣೆಗಳನ್ನು ನಾವು ಆಲಿಸುವುದು ನಮ್ಮ ನಿತ್ಯ ಪ್ರಯೋಜನಾರ್ಥವಾಗಿ ಇರುತ್ತದೆ. ದಾಖಲೆಯು ಹೇಳುವುದು: “ಯೋಹಾನನು ಆಸ್ಯ ಸೀಮೆಯಲ್ಲಿರುವ ಏಳು ಸಭೆಗಳಿಗೆ: ವರ್ತಮಾನ, ಮತ್ತು ಭೂತ ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.”—ಪ್ರಕಟನೆ 1:4, 5ಎ.
2. (ಎ) ಸಂಖ್ಯೆ “ಏಳು” ಏನನ್ನು ಸೂಚಿಸುತ್ತದೆ? (ಬಿ) ಕರ್ತನ ದಿನದಲ್ಲಿ “ಏಳು ಸಭೆಗಳಿಗೆ” ಕೊಡಲ್ಪಟ್ಟ ಸಂದೇಶಗಳು ಯಾರಿಗೆ ಅನ್ವಯಿಸುತ್ತವೆ?
2 ಇಲ್ಲಿ ಯೋಹಾನನು “ಏಳು ಸಭೆ” ಗಳನ್ನು ಸಂಬೋಧಿಸುತ್ತಿದ್ದಾನೆ ಮತ್ತು ಇವುಗಳ ಹೆಸರನ್ನು ನಮಗೋಸ್ಕರ ಮುಂದೆ ಪ್ರವಾದನೆಯಲ್ಲಿ ತಿಳಿಸಲಾಗಿದೆ. ಆ ಸಂಖ್ಯೆ “ಏಳು” ಪ್ರಕಟನೆಯಲ್ಲಿ ಆಗಾಗ್ಯೆ ಪುನರುಚ್ಚರಿಸಲ್ಪಡುತ್ತದೆ. ಇದು ವಿಶೇಷವಾಗಿ ದೇವರ ಮತ್ತು ಆತನ ಅಭಿಷಿಕ್ತ ಸಭೆಯ ಸಂಗತಿಗಳ ಸಂಬಂಧದಲ್ಲಿ, ಪೂರ್ಣತೆಯನ್ನು ಸೂಚಿಸುತ್ತದೆ. ಕರ್ತನ ದಿನದಲ್ಲಿ ದೇವ ಜನರ ಸಭೆಗಳು ಲೋಕವ್ಯಾಪಕವಾಗಿ ಹತ್ತಾರು ಸಾವಿರಾರು ಸಂಖ್ಯೆಯಲ್ಲಿ ಬೆಳೆದಿರುವುದರಿಂದ, ಅಭಿಷಿಕ್ತರ “ಏಳು ಸಭೆಗಳಿಗೆ” ಪ್ರಧಾನವಾಗಿ ಏನು ಹೇಳಲ್ಪಟ್ಟಿದೆಯೋ, ಅದು ಇಂದಿನ ಎಲ್ಲಾ ದೇವ ಜನರಿಗೆ ಅನ್ವಯಿಸುತ್ತದೆ ಎಂಬ ವಿಷಯದಲ್ಲಿ ನಾವು ನಿಶ್ಚಯತೆಯಿಂದಿರಬಲ್ಲೆವು. (ಪ್ರಕಟನೆ 1:10) ಹೌದು, ಈ ಭೂಮಿಯ ಮೇಲಿರುವ ಯೆಹೋವನ ಸಾಕ್ಷಿಗಳ ಎಲ್ಲಾ ಸಭೆಗಳಿಗೆ ಮತ್ತು ಅವರೊಂದಿಗೆ ಒಡನಾಟ ಮಾಡುತ್ತಿರುವ ಎಲ್ಲರಿಗೆ ಯೋಹಾನನ ಹತ್ತಿರ ಒಂದು ಅತಿ ಪ್ರಾಮುಖ್ಯ ಸಂದೇಶವು ಇದೆ.
3. (ಎ) ಯೋಹಾನನ ಅಭಿವಂದನೆಯಲ್ಲಿ “ಕೃಪೆಯು [ಅಪಾತ್ರ ದಯೆ, NW] ಮತ್ತು ಶಾಂತಿ”ಯು ಎಲ್ಲಿಂದ ಬರುತ್ತದೆ? (ಬಿ) ಅಪೊಸ್ತಲ ಪೌಲನ ಯಾವ ಮಾತುಗಳು ಯೋಹಾನನ ಅಭಿವಂದನೆಯಂತೆ ಇವೆ?
3 “ಕೃಪೆಯು [ಅಪಾತ್ರ ದಯೆ, NW] ಮತ್ತು ಶಾಂತಿ”—ಇವು ಎಷ್ಟೊಂದು ಅಪೇಕ್ಷಣೀಯವಾಗಿವೆ ಮತ್ತು ವಿಶೇಷವಾಗಿ ನಾವು ಅವುಗಳ ಉಗಮವನ್ನು ಗಣ್ಯಮಾಡುವಾಗ! “ಆತನಿಂದ” ಎಂದರೆ “ಸರ್ವಯುಗಗಳ ಅರಸನೂ,” “ಯುಗಯುಗಾಂತರಗಳಲ್ಲಿ” ಜೀವಿಸುವವನೂ ಆದ ಸಾರ್ವಭೌಮ ಕರ್ತನಾದ ಯೆಹೋವನಿಂದ ತಾನೇ ಅವು ಪ್ರವಹಿಸಿ ಬರುತ್ತವೆ. (1 ತಿಮೊಥೆಯ 1:17; ಕೀರ್ತನೆ 90:2) ಇಲ್ಲಿ “ಏಳು ಆತ್ಮಗಳು” ಕೂಡ ಒಳಗೂಡಿರುತ್ತವೆ, ಇದು ದೇವರ ಕಾರ್ಯಕಾರೀ ಶಕ್ತಿಯ, ಯಾ ಪವಿತ್ರಾತ್ಮನ ಕಾರ್ಯವ್ಯಾಪ್ತಿಯ ಪೂರ್ಣತೆಯನ್ನು ಸೂಚಿಸುತ್ತಾ, ಪ್ರವಾದನೆಗೆ ಗಮನ ಕೊಡುವವರೆಲ್ಲರಿಗೆ ತಿಳಿವಳಿಕೆಯನ್ನು ಮತ್ತು ಆಶೀರ್ವಾದವನ್ನು ತರುತ್ತದೆ. ಒಂದು ಪ್ರಮುಖ ಪಾತ್ರವನ್ನು “ಯೇಸು ಕ್ರಿಸ್ತನು” ಸಹ ವಹಿಸುತ್ತಾನೆ ಮತ್ತು ಇವನ ಕುರಿತು ಅನಂತರ ಯೋಹಾನನು ಬರೆದದ್ದು: “ಆತನು ಕೃಪೆಯಿಂದಲೂ [ಅಪಾತ್ರ ದಯೆ, NW] ಸತ್ಯದಿಂದಲೂ ತುಂಬಿದವನಾಗಿದ್ದನು.” (ಯೋಹಾನ 1:14) ಈ ರೀತಿಯಲ್ಲಿ, ಅಪೊಸ್ತಲ ಪೌಲನು ಕೊರಿಂಥದ ಸಭೆಗೆ ಬರೆದ ಎರಡನೆಯ ಪತ್ರದ ಮುಕ್ತಾಯದಲ್ಲಿರುವ ಅದೇ ವಿಚಾರಗಳು ಯೋಹಾನನ ಅಭಿವಂದನೆಯಲ್ಲಿಯೂ ಇವೆ: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ [ಅಪಾತ್ರ ದಯೆ, NW] ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ.” (2 ಕೊರಿಂಥ 13:14) ಇಂದು ಸಹ ಸತ್ಯವನ್ನು ಪ್ರೀತಿಸುವ ನಮ್ಮಲ್ಲಿ ಪ್ರತಿಯೊಬ್ಬನಿಗೂ ಈ ಮಾತುಗಳು ಅನ್ವಯವಾಗಲಿ!—ಕೀರ್ತನೆ 119:97.
“ನಂಬತಕ್ಕ ಸಾಕ್ಷಿ”
4. ಯೇಸು ಕ್ರಿಸ್ತನ ಕುರಿತಾಗಿ ಯೋಹಾನನು ಹೇಗೆ ವರ್ಣಿಸುತ್ತಾ ಮುಂದುವರಿಯುತ್ತಾನೆ, ಮತ್ತು ಈ ವರ್ಣನಾತ್ಮಕ ಪದಗಳು ಯಾಕೆ ಅಷ್ಟು ಸಮಂಜಸತೆಯದ್ದಾಗಿವೆ?
4 ಯೆಹೋವನ ಅನಂತರ, ವಿಶ್ವದಲ್ಲಿ ಯೇಸುವು ಅತಿ ಮಹಿಮಾಭರಿತ ವ್ಯಕ್ತಿಯಾಗಿದ್ದಾನೆ, ಯೋಹಾನನು ಇದನ್ನು ಒಪ್ಪುತ್ತಾ ಅವನನ್ನು, “‘ನಂಬತಕ್ಕ ಸಾಕ್ಷಿ’ ‘ಸತ್ತವರೊಳಗಿಂದ ಮೊದಲು ಎದ್ದುಬಂದವನು’ ಮತ್ತು ‘ಭೂರಾಜರುಗಳ ಒಡೆಯನು [ಅಧಿಪತಿ, NW]’” ಎಂದು ವರ್ಣಿಸುತ್ತಾನೆ. (ಪ್ರಕಟನೆ 1:5ಬಿ) ಆಕಾಶಗಳಲ್ಲಿರುವ ಚಂದ್ರನಂತೆ, ಯೆಹೋವನ ದೇವತ್ವದ ಅತಿ ಶ್ರೇಷ್ಠ ಸಾಕ್ಷಿಯೋಪಾದಿ ಅವನು ಸ್ಥಿರವಾಗಿ ಸ್ಥಾಪಿಸಲ್ಪಟ್ಟಿದ್ದಾನೆ. (ಕೀರ್ತನೆ 89:37) ಯಜ್ಞಾರ್ಪಿತ ಮರಣದ ತನಕ ಅವನು ಸಮಗ್ರತೆಯನ್ನು ಕಾಪಾಡಿಕೊಂಡ ಅನಂತರ, ಅವನು ಮಾನವ ಕುಲದಲ್ಲಿ ಅಮರತ್ವದ ಆತ್ಮ ಜೀವಿತಕ್ಕೆ ಎಬ್ಬಿಸಲ್ಪಡುವವರಲ್ಲಿ ಪ್ರಥಮನಾದನು. (ಕೊಲೊಸ್ಸೆ 1:18) ಈಗ ಯೆಹೋವನ ಸಾನ್ನಿಧ್ಯದಲ್ಲಿ, ಎಲ್ಲಾ ಭೂರಾಜರುಗಳಿಗಿಂತಲೂ ಉನ್ನತಕ್ಕೆ ಅವನು ಏರಿಸಲ್ಪಟ್ಟಿದ್ದಾನೆ, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು . . . ” ಅವನಿಗೆ ಕೊಡಲಾಗಿದೆ. (ಮತ್ತಾಯ 28:18; ಕೀರ್ತನೆ 89:27; 1 ತಿಮೊಥೆಯ 6:15) ಭೂಮಿಯ ಜನಾಂಗಗಳ ನಡುವೆ ಆಳಲು ಅವನನ್ನು ರಾಜನಾಗಿ 1914 ರಲ್ಲಿ ಸ್ಥಾಪಿಸಲಾಯಿತು.—ಕೀರ್ತನೆ 2:6-9; ಮತ್ತಾಯ 25:31-33.
5. (ಎ) ಕರ್ತನಾದ ಯೇಸು ಕ್ರಿಸ್ತನಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುವುದನ್ನು ಯೋಹಾನನು ಮುಂದರಿಸಿದ್ದು ಹೇಗೆ? (ಬಿ) ಯೇಸುವಿನ ಪರಿಪೂರ್ಣ ಮಾನವ ಜೀವದ ದಾನದ ಮೂಲಕ ಯಾರು ಪ್ರಯೋಜನ ಪಡೆಯುವರು, ಮತ್ತು ವಿಶೇಷ ಆಶೀರ್ವಾದವೊಂದರಲ್ಲಿ ಅಭಿಷಿಕ್ತ ಕ್ರೈಸ್ತರು ಹೇಗೆ ಪಾಲಿಗರಾಗಿದ್ದಾರೆ?
5 ಕರ್ತನಾದ ಯೇಸು ಕ್ರಿಸ್ತನಿಗೆ ಈ ಉಜ್ವಲ ಮಾತುಗಳಿಂದ ಗಣ್ಯತೆಯನ್ನು ವ್ಯಕ್ತ ಪಡಿಸುವುದನ್ನು ಯೋಹಾನನು ಮುಂದುವರಿಸುತ್ತಾನೆ: “ನಮ್ಮನ್ನು ಪ್ರೀತಿಸುವವನೂ ತನ್ನ ಸ್ವಂತ ರಕ್ತದ ಮೂಲಕ ನಮ್ಮನ್ನು ನಮ್ಮ ಪಾಪಗಳಿಂದ ಬಿಡಿಸಿದವನೂ—ಮತ್ತು ಅವನು ನಮ್ಮನ್ನು ರಾಜ್ಯವನ್ನಾಗಿ, ತನ್ನ ದೇವರು ಮತ್ತು ತಂದೆಗೆ ಯಾಜಕರನ್ನಾಗಿ ಮಾಡಿದನು—ಹೌದು, ಆತನಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆ ಮತ್ತು ಅಧಿಕಬಲಗಳಿರಲಿ. ಆಮೆನ್.” (ಪ್ರಕಟನೆ 1:5ಸಿ, 6, NW) ಮಾನವ ಕುಲದ ಲೋಕದಲ್ಲಿ ಯಾರು ಅವನಲ್ಲಿ ನಂಬಿಕೆಯನ್ನು ಪ್ರದರ್ಶಿಸುತ್ತಾರೋ, ಅವರಿಗೆ ಪರಿಪೂರ್ಣ ಜೀವವನ್ನು ಪುನಃ ನೀಡಲು ಯೇಸುವು ತನ್ನ ಪರಿಪೂರ್ಣ ಮಾನವ ಜೀವವನ್ನು ಕೊಟ್ಟನು. ಪ್ರಿಯ ವಾಚಕರೇ, ನೀವು ಇದರಲ್ಲಿ ಸೇರಿರಲು ಸಾಧ್ಯವಿದೆ! (ಯೋಹಾನ 3:16) ಆದರೆ ಯೇಸುವಿನ ಯಜ್ಞಾರ್ಪಿತ ಮರಣವು ಯೋಹಾನನಂಥ ಅಭಿಷಿಕ್ತ ಕ್ರೈಸ್ತರಾಗುವವರಿಗೆ ವಿಶೇಷ ಆಶೀರ್ವಾದವೊಂದಕ್ಕಾಗಿ ದಾರಿಯನ್ನು ತೆರೆಯಿತು. ಯೇಸುವಿನ ವಿಮೋಚನಾ ಯಜ್ಞದ ಆಧಾರದ ಮೇಲೆ ಇವರು ನೀತಿವಂತರೆಂದು ಘೋಷಿಸಲ್ಪಟ್ಟರು. ಯೇಸುವಿನಂತೆ, ಐಹಿಕವಾದ ಎಲ್ಲಾ ಪ್ರತೀಕ್ಷೆಗಳನ್ನು ತ್ಯಜಿಸಿ, ದೇವರ ಆತ್ಮದಿಂದ ಜನಿತರಾಗುವ ಈ ಚಿಕ್ಕ ಹಿಂಡಿನವರು ಅವನ ರಾಜ್ಯದಲ್ಲಿ ಯೇಸು ಕ್ರಿಸ್ತನೊಂದಿಗೆ ರಾಜರೋಪಾದಿ ಮತ್ತು ಯಾಜಕರೋಪಾದಿ ಸೇವೆ ಸಲ್ಲಿಸಲು ಪುನರುತ್ಥಾನಗೊಳಿಸಲ್ಪಡುವ ನಿರೀಕ್ಷೆಯುಳ್ಳವರಾಗಿರುತ್ತಾರೆ. (ಲೂಕ 12:32; ರೋಮಾಪುರ 8:18; 1 ಪೇತ್ರ 2:5; ಪ್ರಕಟನೆ 20:6) ಎಂತಹ ಒಂದು ಮಹಾ ಸುಯೋಗವು! ಯೇಸುವಿಗೆ ಮಹಿಮೆ, ಅಧಿಕ ಶಕ್ತಿಗಳಿವೆ ಎಂದು ಯೋಹಾನನು ಸಕಾರಾತ್ಮಕವಾಗಿ ಘೋಷಿಸಿದರ್ದಲ್ಲಿ ಅಚ್ಚರಿಯೇನೂ ಇಲ್ಲ!
“ಮೇಘಗಳೊಂದಿಗೆ ಬರುತ್ತಿದ್ದಾನೆ”
6. (ಎ) ಯೇಸುವಿನ ‘ಮೇಘಗಳೊಂದಿಗೆ ಬರೋಣದ’ ಕುರಿತಾಗಿ ಯೋಹಾನನು ಏನನ್ನು ಪ್ರಕಟಿಸಿದನು, ಮತ್ತು ಯೇಸುವಿನ ಯಾವ ಪ್ರವಾದನೆಯ ಕುರಿತಾಗಿ ಯೋಹಾನನು ನೆನಪಿಸಲ್ಪಟ್ಟಿರಬಹುದು? (ಬಿ) ಯೇಸುವು ‘ಬರುವುದು’ ಹೇಗೆ, ಮತ್ತು ಭೂಮಿಯ ಮೇಲೆ ಯಾರು ಉಗ್ರವ್ಯಥೆಯನ್ನು ಅನುಭವಿಸುವರು?
6 ಅನಂತರ, ಹರ್ಷಭರಿತನಾಗಿ ಯೋಹಾನನು ಪ್ರಕಟಿಸುವುದು: “ಇಗೋ! ಅವನು ಮೇಘಗಳೊಂದಿಗೆ ಬರುತ್ತಿದ್ದಾನೆ, ಮತ್ತು ಪ್ರತಿಯೊಂದು ಕಣ್ಣು ಅವನನ್ನು ಕಾಣುವುದು, ಮತ್ತು ಅವನನ್ನು ಇರಿದವರು ಸಹ; ಮತ್ತು ಭೂಮಿಯ ಸಕಲ ಕುಲಗಳು ಅವನಿಂದಾಗಿ ಉಗ್ರವ್ಯಥೆಯಿಂದ ಎದೆಬಡಿದುಕೊಳ್ಳುವರು. ಹೌದು, ಆಮೆನ್.” (ಪ್ರಕಟನೆ 1:7, NW) ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾಗಿ ಯೇಸುವಿನ ಈ ಮುಂಚಿನ ಪ್ರವಾದನೆಯನ್ನು ಇಲ್ಲಿ ಯೋಹಾನನ ನೆನಪಿಗೆ ತರಲಾಯಿತು ಎಂಬುದರಲ್ಲಿ ಸಂದೇಹವಿಲ್ಲ. ಯೇಸುವು ಅಲ್ಲಿ ಅಂದದ್ದು: “ತದನಂತರ ಮನುಷ್ಯಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ತೋರಿಬರುವುದು, ಆಗ ಭೂಲೋಕದಲ್ಲಿರುವ ಎಲ್ಲರೂ ಪ್ರಲಾಪಿಸಿ ಸ್ವತಃ ತಮ್ಮ ಎದೆಬಡಿದುಕೊಳ್ಳುವರು, ಮತ್ತು ಮನುಷ್ಯ ಕುಮಾರನು ಬಲದಿಂದ ಮತ್ತು ಮಹಾ ಮಹಿಮೆಯಿಂದ ಆಕಾಶದ ಮೇಘಗಳ ಮೇಲೆ ಬರುವುದನ್ನು ಕಾಣುವರು.” (ಮತ್ತಾಯ 24:3, 30, NW) ಈ ರೀತಿಯಲ್ಲಿ, ಜನಾಂಗಗಳ ಮೇಲೆ ಯೆಹೋವನ ನ್ಯಾಯತೀರ್ಪುಗಳನ್ನು ಜಾರಿಗೊಳಿಸಲು ತನ್ನ ಗಮನವನ್ನು ತಿರುಗಿಸುವುದರ ಮೂಲಕ ಯೇಸುವು ‘ಬರುತ್ತಾನೆ.’ ಇದರಿಂದ ಭೂಮಿಯ ಮೇಲೆ ಬಹು ಪರಿಣಾಮಕಾರಿಯಾದ ಬದಲಾವಣೆಗಳು ಪರಿಣಮಿಸುವುವು, ಮತ್ತು “ಭೂಮಿಯ ಎಲ್ಲಾ ಕುಲಗಳು” ಯೇಸುವಿನ ಅರಸುತನದ ವಾಸ್ತವಿಕತೆಯನ್ನು ಅಲಕ್ಷಿಸಿರುವುದರಿಂದ, ಅವರು ನಿಶ್ಚಯವಾಗಿಯೂ “ಸರ್ವಶಕ್ತನಾದ ದೇವರ ಉಗ್ರ ಕೋಪವನ್ನು” ಅನುಭವಿಸುವರು.—ಪ್ರಕಟನೆ 19:11-21; ಕೀರ್ತನೆ 2:2, 3, 8, 9.
7. ಅವಿಧೇಯರಾಗಿರುವವರ ಸಹಿತ “ಪ್ರತಿಯೊಂದು ಕಣ್ಣು” ಯೇಸುವನ್ನು “ಕಾಣುವುದು” ಹೇಗೆ?
7 ತನ್ನ ಶಿಷ್ಯರೊಂದಿಗಿನ ಕೊನೆಯ ಸಂಜೆಯಲ್ಲಿ, ಯೇಸು ಅವರಿಗೆ ಹೇಳಿದ್ದು: “ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ನೋಡುವುದಿಲ್ಲ.” (ಯೋಹಾನ 14:19) ಹಾಗಾದರೆ, “ಪ್ರತಿಯೊಂದು ಕಣ್ಣು ಅವನನ್ನು ಕಾಣುವುದು” ಹೇಗೆ? ಯೇಸುವಿನ ಶತ್ರುಗಳು ತಮ್ಮ ದೈಹಿಕ ಕಣ್ಣುಗಳಿಂದ ಅವನನ್ನು ಕಾಣುವರು ಎಂದು ನಾವು ನಿರೀಕ್ಷಿಸಕೂಡದು, ಯಾಕಂದರೆ ಪರಲೋಕಕ್ಕೆ ಯೇಸುವಿನ ಆರೋಹಣದ ಅನಂತರ, ಯೇಸುವು ಈಗ “ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನು,” ಮತ್ತು “ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು” ಎಂದು ಅಪೊಸ್ತಲ ಪೌಲನು ಹೇಳಿದ್ದಾನೆ. (1 ತಿಮೊಥೆಯ 6:16) ಹೇಗೆ ದೇವರ ಸೃಷ್ಟಿಕ್ರಿಯೆಗಳ ಮೂಲಕ ಆತನ ಅದೃಶ್ಯ ಗುಣಲಕ್ಷಣಗಳನ್ನು ನಾವು ನೋಡಲು ಯಾ ವಿವೇಚಿಸಸಾಧ್ಯವಿದೆಯೋ ಹಾಗೆಯೇ ಎಂದು ಯೋಹಾನನು ಅರ್ಥಮಾಡಿಕೊಂಡನೆಂಬುದು ವ್ಯಕ್ತ. (ರೋಮಾಪುರ 1:20) ಯೇಸುವು “ಮೇಘಗಳೊಂದಿಗೆ ಬರುವುದು” ಹೇಗಂದರೆ ಅವನು ನಗ್ನ ಕಣ್ಣುಗಳಿಗೆ, ಸೂರ್ಯನು ಮೇಘಗಳ ಹಿಂದಿರುವಾಗ ಎಷ್ಟು ಅದೃಶ್ಯನಾಗಿರುತ್ತಾನೋ ಅಷ್ಟೇ ಅದೃಶ್ಯನಾಗಿರುವನು. ಹಗಲು ಹೊತ್ತಿನಲ್ಲಿ ಸೂರ್ಯನು ಮೇಘಗಳಿಂದ ಮರೆಯಾಗಿರುವಾಗಲೂ, ಅವನು ಅಲ್ಲಿ ಇದ್ದಾನೆ ಎಂದು ನಮ್ಮ ಸುತ್ತಲೂ ಆವರಿಸಿರುವ ಬೆಳಕಿನಿಂದ ನಾವು ತಿಳಿದುಕೊಳ್ಳುತ್ತೇವೆ. ತದ್ರೀತಿಯಲ್ಲಿ, ಕರ್ತನಾದ ಯೇಸುವು ಅದೃಶ್ಯನಾಗಿರುವದಾದರೂ, ‘ಅವನು ತನ್ನ ಸುವಾರ್ತೆಗೆ ವಿಧೇಯರಾಗದವರಿಗೆ ಪ್ರತೀಕಾರವನ್ನು ಸಲ್ಲಿಸುವಾಗ ಉರಿಯುವ ಬೆಂಕಿ’ ಯಂತೆ ತೋರ್ಪಡಿಸಲ್ಪಡುವನು. ಇವರೂ ಅವನನ್ನು “ನೋಡುವಂತೆ” ಬಲಾತ್ಕರಿಸಲ್ಪಡುವರು.—2 ಥೆಸಲೊನೀಕ 1:6-8; 2:8.
8. (ಎ) ಸಾ.ಶ. 33 ರಲ್ಲಿ “ಅವನನ್ನು ಇರಿದವರು” ಯಾರಾಗಿದ್ದರು, ಮತ್ತು ಅಂಥವರು ಇಂದು ಯಾರಾಗಿದ್ದಾರೆ? (ಬಿ) ಯೇಸುವು ಈಗ ಇಲ್ಲಿ ಭೂಮಿಯ ಮೇಲೆ ಇಲ್ಲದಿರುವುದರಿಂದ, ಜನರು ಹೇಗೆ ‘ಅವನನ್ನು ಇರಿಯಬಲ್ಲರು’?
8 “ಅವನನ್ನು ಇರಿದವರು ಸಹ” ಯೇಸುವನ್ನು “ಕಾಣುವರು.” ಇವರು ಯಾರಾಗಿರಬಹುದು? ಸಾ. ಶ. 33 ರಲ್ಲಿ ಯೇಸುವು ಹತಿಸಲ್ಪಟ್ಟಾಗ, ರೋಮನ್ ಸೈನಿಕರು ಅವನನ್ನು ಅಕ್ಷರಶಃ ಇರಿದರು. ಆ ಕೊಲೆಯ ದೋಷದಲ್ಲಿ ಯೆಹೂದ್ಯರೂ ಪಾಲಿಗರಾಗಿದ್ದರು, ಯಾಕಂದರೆ ಪೇತ್ರನು ಪಂಚಾಶತ್ತಮ ದಿನದಲ್ಲಿ ಇವರಲ್ಲಿ ಕೆಲವರಿಗೆ ಹೇಳಿದ್ದು: “ನೀವು ಶೂಲಕ್ಕೆ ಹಾಕಿದ ಈ ಯೇಸುವನ್ನೇ ದೇವರು ಒಡೆಯನನ್ನಾಗಿ ಮತ್ತು ಕ್ರಿಸ್ತನನ್ನಾಗಿ ಮಾಡಿದ್ದಾನೆ.” (ಅ. ಕೃತ್ಯಗಳು 2:5-11, 36, NW; ಹೋಲಿಸಿರಿ ಜೆಕರ್ಯ 12:10; ಯೋಹಾನ 19:37.) ಈ ರೋಮನರು ಮತ್ತು ಯೆಹೂದ್ಯರು ಸತ್ತು ಹೋಗಿ ಈಗ ಸುಮಾರು 2,000 ವರ್ಷಗಳು ಗತಿಸಿವೆ. ಆದುದರಿಂದ ಇಂದು ಈ ‘ಇರಿದವರು’ ಯೇಸುವನ್ನು ಶೂಲಕ್ಕೆ ಹಾಕಿದಾಗ ತೋರಿಸಿದ ಅದೇ ರೀತಿಯ ದ್ವೇಷಭರಿತ ಮನೋಭಾವವನ್ನು ಪ್ರದರ್ಶಿಸುವ ಜನಾಂಗಗಳನ್ನು ಮತ್ತು ಜನರನ್ನು ಪ್ರತಿನಿಧಿಸಬೇಕು. ಯೇಸುವು ಇಂದು ಇಲ್ಲಿ ಭೂಮಿಯ ಮೇಲೆ ಇಲ್ಲ. ಆದರೆ, ಯೇಸುವಿನ ಕುರಿತಾದ ಸಾಕ್ಷಿಯನ್ನು ಕೊಡುವ ಯೆಹೋವನ ಸಾಕ್ಷಿಗಳನ್ನು ವಿರೋಧಿಗಳು ಕ್ರಿಯಾತ್ಮಕವಾಗಿ ಹಿಂಸಿಸುತ್ತಿರುವಾಗ ಇಲ್ಲವೆ, ಅಂತಹ ಅಪವರ್ತನೆಗಳಿಗೆ ನಿವೃತ್ತಿಭಾವದಿಂದ ಒಪ್ಪಿಗೆ ಕೊಡುವಾಗ, ಅಂತಹ ವಿರೋಧಿಗಳು ಸ್ವತಃ ಯೇಸುವಿಗೆ ‘ಇರಿಯುವಂತೆ’ ಇರುತ್ತದೆ.—ಮತ್ತಾಯ 25:33, 41-46.
“ಆದಿಯೂ ಅಂತವೂ”
9. (ಎ) ಈಗ ಯಾರು ಮಾತಾಡುತ್ತಾನೆ, ಮತ್ತು ಪ್ರಕಟನೆಯಲ್ಲಿ ಅವನು ಹಾಗೆ ಮಾಡುವುದು ಎಷ್ಟು ಬಾರಿ? (ಬಿ) “ಆದಿಯೂ, ಅಂತವೂ [ಆ್ಯಲ್ಫ ಮತ್ತು ಓಮೆಗ]” ಮತ್ತು “ಸರ್ವಶಕ್ತನು” ಎಂದು ಸ್ವತಃ ತನ್ನನ್ನು ಯೆಹೋವನು ಕರೆದುಕೊಳ್ಳುವಾಗ, ಅದರ ಅರ್ಥವೇನು?
9 ಈಗ ಆದ್ಭುತಗಳಲ್ಲಿ ಅದ್ಭುತ! ಸಾರ್ವಭೌಮ ಕರ್ತನಾದ ಯೆಹೋವನು ಸ್ವತಃ ಮಾತಾಡುತ್ತಾನೆ. ಈಗಲೇ ತೆರೆಯಲ್ಪಡಲಿರುವ ದರ್ಶನಗಳ ಪ್ರಸ್ತಾಪನೆಯೋಪಾದಿ ಇದು ಎಷ್ಟೊಂದು ತಕ್ಕದ್ದಾಗಿರುತ್ತದೆ, ಯಾಕಂದರೆ ಅವನು ನಮ್ಮ ಮಹಾ ಉಪದೇಶಕನು ಮತ್ತು ಪ್ರಕಟನೆಯ ಅಂತಿಮ ಮೂಲನು ಆಗಿರುತ್ತಾನೆ! (ಯೆಶಾಯ 30:20) ನಮ್ಮ ದೇವರು ಘೋಷಿಸುವುದು: “ನಾನು ಆದಿಯೂ ಅಂತವೂ [ಆ್ಯಲ್ಫ ಮತ್ತು ಓಮೆಗ, NW] ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿರುವವನೂ ಸರ್ವಶಕ್ತನೂ ಆಗಿದ್ದೇನೆ.” (ಪ್ರಕಟನೆ 1:8) ಪರಲೋಕದಿಂದ ಯೆಹೋವನು ಸ್ವತಃ ಮಾತಾಡಿದ ಪ್ರಕಟನೆಯ ಮೂರು ಉಲ್ಲೇಖಗಳಲ್ಲಿ ಇದು ಮೊದಲನೆಯದ್ದಾಗಿರುತ್ತದೆ. (ಪ್ರಕಟನೆ 21:5-8; 22:12-15 ಸಹ ನೋಡಿರಿ.) ಪ್ರಥಮ ಶತಮಾನದ ಕ್ರೈಸ್ತರು ಆ್ಯಲ್ಫ ಮತ್ತು ಓಮೆಗವನ್ನು ಗ್ರೀಕ್ ಅಕ್ಷರಮಾಲೆಯ ಮೊದಲ ಮತ್ತು ಕೊನೆಯ ಅಕ್ಷರಗಳೆಂದು ತಕ್ಷಣವೇ ತಿಳಿದು ಕೊಳ್ಳುತ್ತಿದ್ದರು. ಈ ಎರಡು ಅಕ್ಷರಗಳಿಂದ ಯೆಹೋವನು ಸ್ವತಃ ತನ್ನನ್ನು ಕರೆದುಕೊಳ್ಳುವುದು, ಅವನ ಮೊದಲು ಯಾವನೇ ಸರ್ವಶಕ್ತ ದೇವರು ಇರಲಿಲ್ಲ, ಮತ್ತು ಅವನ ಅನಂತರವೂ ಯಾವನೇ ಒಬ್ಬನು ಇರುವುದಿಲ್ಲ ಎಂಬುದನ್ನು ಒತ್ತಿಹೇಳುತ್ತದೆ. ದೇವತ್ವದ ಕುರಿತಾದ ವಿವಾದವನ್ನು ಎಲ್ಲಾ ನಿತ್ಯತೆಗಾಗಿ ಅವನು ಯಶಸ್ವಿಯಾಗಿ ಮುಕ್ತಾಯಗೊಳಿಸುವನು. ಅವನು ಒಬ್ಬನೇ ಮತ್ತು ಏಕಮಾತ್ರ ಸರ್ವಶಕ್ತ ದೇವರು, ಅವನ ಎಲ್ಲಾ ಸೃಷ್ಟಿಯ ಮೇಲೆ ಪರಮ ಶ್ರೇಷ್ಠ ಸಾರ್ವಭೌಮನೆಂದು ಅವನು ಸದಾಕಾಲಕ್ಕೂ ನಿರ್ದೋಷಿಕರಿಸಲ್ಪಡುವನು.—ಹೋಲಿಸಿರಿ ಯೆಶಾಯ 46:10; 55:10, 11.
10. (ಎ) ಅನಂತರ ಯೋಹಾನನು ತನ್ನನ್ನು ಹೇಗೆ ವರ್ಣಿಸಿಕೊಳ್ಳುತ್ತಾನೆ, ಮತ್ತು ಅವನನ್ನು ಎಲ್ಲಿ ಬಂದಿವಾಸದಲ್ಲಿ ಇಡಲಾಗಿತ್ತು? (ಬಿ) ಯೋಹಾನನಿಂದ ಬರೆಯಲ್ಪಟ್ಟ ಸುರುಳಿಯು ಯಾರ ಸಹಕಾರದಿಂದ ಸಭೆಗಳಿಗೆ ತಲುಪಿಸಲ್ಪಟ್ಟಿರಬೇಕು? (ಸಿ) ಇಂದು ಆತ್ಮಿಕ ಆಹಾರವು ಆಗ್ಗಾಗೆ ಹೇಗೆ ಒದಗಿಸಲ್ಪಡುತ್ತದೆ?
10 ವಿಷಯಗಳ ಪರಿಣಾಮಗಳನ್ನು ಯೆಹೋವನು ಮಾರ್ಗದರ್ಶಿಸುವನು ಎಂಬ ಭರವಸೆಯಿಂದ, ಯೋಹಾನನು ತನ್ನ ಜತೆ ದಾಸರಿಗೆ ಹೇಳುವುದು: “ನಿಮ್ಮ ಸಹೋದರನು ಮತ್ತು ಯೇಸುವಿನ ಸಂಗಡ ಸಂಕಟದಲ್ಲಿಯೂ ರಾಜ್ಯದಲ್ಲಿಯೂ ಮತ್ತು ತಾಳ್ಮೆಯಲ್ಲಿಯೂ ನಿಮ್ಮೊಂದಿಗೆ ಪಾಲುಗಾರನಾಗಿರುವ ಯೋಹಾನನೆಂಬ ನಾನು, ದೇವರ ಕುರಿತು ಮಾತಾಡಿದ್ದಕ್ಕಾಗಿಯೂ ಮತ್ತು ಯೇಸುವಿನ ವಿಷಯವಾಗಿ ಸಾಕ್ಷಿ ಕೊಟ್ಟದ್ದಕ್ಕಾಗಿಯೂ ಪ್ಯಾಟ್ಮಸ್ ದ್ವೀಪದಲ್ಲಿ ಇರುವವನಾದೆನು.” (ಪ್ರಕಟನೆ 1:9, NW) ಸುವಾರ್ತೆಗೋಸ್ಕರ ಪ್ಯಾಟ್ಮಸ್ನಲ್ಲಿ ಒಬ್ಬ ಸೆರೆವಾಸಿಯಾಗಿದ್ದು, ತನ್ನ ಸಹೋದರರೊಂದಿಗೆ ಸಂಕಟವನ್ನು ತಾಳಿಕೊಳ್ಳುತ್ತಾ, ಬರಲಿರುವ ರಾಜ್ಯದಲ್ಲಿ ಪಾಲಿಗನಾಗುವ ಸ್ಥಿರವಾದ ನಿರೀಕ್ಷೆಯೊಂದಿಗೆ, ವೃದ್ಧನಾದ ಯೋಹಾನನು ಪ್ರಕಟನೆಯ ದರ್ಶನಗಳಲ್ಲಿ ಈಗ ಮೊದಲನೆಯದ್ದನ್ನು ನೋಡುತ್ತಾನೆ. ಇಂದು ಯೋಹಾನ ವರ್ಗದವರು ಆ ದರ್ಶನಗಳ ನೆರವೇರಿಕೆಯನ್ನು ನೋಡುವುದರಲ್ಲಿ ಉತ್ತೇಜಿಸಲ್ಪಡುವಂತೆಯೇ ಅವನು ಅವುಗಳಿಂದ ಮಹತ್ತಾಗಿ ಪ್ರೋತ್ಸಾಹಿಸಲ್ಪಟ್ಟನೆಂಬುದರಲ್ಲಿ ಸಂದೇಹವಿಲ್ಲ. ಆ ಸಮಯದಲ್ಲಿ ಅವನು ಬಂದಿಯಾಗಿದ್ದುದರಿಂದ, ಸಭೆಗಳಿಗೆ ಪ್ರಕಟನೆಯ ಸುರುಳಿಗಳನ್ನು ಯೋಹಾನನು ಹೇಗೆ ಕಳುಹಿಸಿದನು ಎಂಬದು ನಮಗೆ ತಿಳಿದಿರುವುದಿಲ್ಲ. (ಪ್ರಕಟನೆ 1:11; 22:18, 19) ನಿಷೇಧ ಮತ್ತು ನಿರ್ಬಂಧಗಳ ಕೆಳಗೆ ಇಂದು ಸೇವೆ ಮಾಡುತ್ತಿರುವ ನಂಬಿಗಸ್ತ ಯೆಹೋವನ ಸಾಕ್ಷಿಗಳು ಸಮಯೋಚಿತ ಆತ್ಮಿಕಾಹಾರವನ್ನು ತಮ್ಮ ಸತ್ಯಕ್ಕೆ ಹಸಿದ ಸಹೋದರರಿಗೆ ಕೊಡಶಕ್ತರಾಗುವಂತೆ ಯೆಹೋವನ ದೂತರು ಅದೆಷ್ಟೋ ಬಾರಿ ಮಾಡಿರುವಂತೆಯೇ ಇದನ್ನು ಮಾಡುವುದರಲ್ಲಿಯೂ ಸಹಕರಿಸಿದ್ದಿರಬೇಕು.—ಕೀರ್ತನೆ 34:6, 7.
11. ಯೋಹಾನನಿಂದ ಗಣ್ಯಮಾಡಲ್ಪಟ್ಟಂತಹ ತದ್ರೀತಿಯ ಯಾವ ಸುಯೋಗವು ಯೋಹಾನ ವರ್ಗದಿಂದ ಇಂದು ಮಹಾ ನಿಧಿಯೋಪಾದಿ ಎಣಿಸಲ್ಪಡುತ್ತದೆ?
11 ಸಭೆಗಳಿಗೆ ಯೆಹೋವನ ಒಬ್ಬ ಸಂಪರ್ಕ ಸಾಧನವಾಗಿ ಅವನಿಂದ ಉಪಯೋಗಿಸಲ್ಪಟ್ಟಿರುವ ತನ್ನ ಸುಯೋಗಕ್ಕಾಗಿ ಯೋಹಾನನು ಎಷ್ಟೊಂದು ಗಣ್ಯತೆಯುಳ್ಳವನಾಗಿದ್ದಿರಬೇಕು! ತದ್ರೀತಿಯಲ್ಲಿ, ಇಂದು ದೇವರ ಮನೆವಾರ್ತೆಯವರಿಗೆ ಆತ್ಮಿಕ “ಆಹಾರವನ್ನು ಹೊತ್ತು ಹೊತ್ತಿಗೆ ಒದಗಿಸುವ” ತನ್ನ ಸುಯೋಗವನ್ನು ಯೋಹಾನ ವರ್ಗವು ಮಹಾ ನಿಧಿಯೋಪಾದಿ ಎಣಿಸುತ್ತದೆ. (ಮತ್ತಾಯ 24:45) ಅನಂತ ಜೀವದ ಮಹಿಮಾಭರಿತ ಗುರಿಯನ್ನು ಎಟಕಿಸಿಕೊಳ್ಳಲಾಗುವಂತೆ, ಈ ಆತ್ಮಿಕ ಒದಗಿಸುವಿಕೆಯಿಂದ ಬಲಗೊಳಿಸಲ್ಪಡುವವರಲ್ಲಿ ನೀವೊಬ್ಬರಾಗಿರುವಂತಾಗಲಿ!—ಜ್ಞಾನೋಕ್ತಿ 3:13-18; ಯೋಹಾನ 17:3.
[ಪುಟ 32 ರಲ್ಲಿರುವ ಚೌಕ]
ಕಷ್ಟದ ಸಮಯಗಳಲ್ಲಿ ಆತ್ಮಿಕ ಆಹಾರವನ್ನು ಪಡೆದುಕೊಳ್ಳುವುದು
ಈ ಕಡೇ ದಿವಸಗಳಲ್ಲಿ, ಯೆಹೋವನ ಸಾಕ್ಷಿಗಳು ಬಹಳಷ್ಟು ಹಿಂಸೆ ಮತ್ತು ಕಠಿಣ ಪರಿಸ್ಥಿತಿಗಳನ್ನು ಅನುಭವಿಸಿರುವಾಗ, ನಂಬಿಕೆಯಲ್ಲಿ ದೃಢರಾಗಿ ನಿಲ್ಲಲು ಆತ್ಮಿಕ ಆಹಾರವನ್ನು ಪಡೆಯುವುದು ಅವರಿಗೆ ಅತ್ಯಾವಶ್ಯಕವಾಗಿತ್ತು. ಅಧಿಕಾಂಶ ಸಂದರ್ಭಗಳಲ್ಲಿ, ಬೇಕಾಗುವಷ್ಟು ಪೋಷಕ ಆಹಾರವನ್ನು ಒದಗಿಸಲಾಯಿತು, ಅನೇಕ ವೇಳೆ ಯೆಹೋವನ ಶಕ್ತಿಯ ಕೆಲವು ಗಮನಾರ್ಹ ಪ್ರದರ್ಶನಗಳ ಫಲವಾಗಿ.
ಉದಾಹರಣೆಗೆ, ಹಿಟ್ಲರನ ಅಧೀನತ್ವದ ಜರ್ಮನಿಯಲ್ಲಿ, ಕ್ರೂರ ನಾಜಿ ಅಧಿಕಾರಿಗಳಿಂದ ಅಧಿಕೃತವಾಗಿ ನಿಷೇಧಿಸಲ್ಪಟ್ಟ ದ ವಾಚ್ಟವರ್ನ್ನು, ಸಾಕ್ಷಿಗಳು ತೆಳು ಫಲಕದ ಪ್ರತಿಯೆತ್ತುವ ಸಲಕರಣೆಯಿಂದ (ಮಿಮಿಯೊಗ್ರಾಫ್) ಪ್ರತಿಗಳನ್ನು ಮಾಡಿ, ಹಂಚಿದರು. ಹ್ಯಾಂಬರ್ಗಿನಲ್ಲಿ, ನಕಲು ಪ್ರತಿಗಳನ್ನು ಮಾಡಲಾಗುತ್ತಿದ್ದ ಮನೆಗೆ ಗೆಸ್ಟಾಪೊ ದಾಳಿಮಾಡಿದರು. ಮನೆಯು ಬಹಳ ಚಿಕ್ಕದಾಗಿತ್ತು, ಮತ್ತು ಯಾವುದನ್ನೂ ಸುಭದ್ರವಾಗಿ ಅಡಗಿಸಿಡಲು ಅಲ್ಲಿ ಸ್ಥಳವಿರಲಿಲ್ಲ. ಟೈಪ್ರೈಟರನ್ನು ಒಂದು ಆಲಮಾರಿನಲ್ಲಿ ಇಡಲಾಗಿತ್ತು, ಮತ್ತು ದೊಡ್ಡದಾದ ಪ್ರತಿಯೆತ್ತುವ ಸಲಕರಣೆಯನ್ನು ನೆಲಮಾಳಿಗೆಯಲ್ಲಿ ಬಟಾಟೆಗಳ ತೊಟ್ಟಿಯಲ್ಲಿ ಇಡಲಾಗಿತ್ತು. ಅದಲ್ಲದೆ, ಈ ತೊಟ್ಟಿಯ ಹಿಂದುಗಡೆ ಪತ್ರಿಕೆಗಳನ್ನು ಪೂರ್ಣವಾಗಿ ತುಂಬಿಟ್ಟ ಒಂದು ಪೆಟ್ಟಿಗೆ ಇತ್ತು! ಕಂಡು ಹಿಡಿಯಲ್ಪಡುವುದು ಅನಿವಾರ್ಯವೆಂದು ತೋರಿತು. ಆದರೆ ಏನು ಸಂಭವಿಸಿತು? ಆಲಮಾರನ್ನು ತೆರೆದ ಅಧಿಕಾರಿಯು ಅದನ್ನು ತೆರೆದ ರೀತಿಯಿಂದ ಅಲ್ಲಿ ಇದ್ದ ಟೈಪ್ರೈಟರನ್ನು ನೋಡಲಿಲ್ಲ. ನೆಲಮಾಳಿಗೆಯ ಕುರಿತಾಗಿ, ಮನೆಯವರು ಹೇಳುವುದು: “ಮೂವರು ಅಧಿಕಾರಿಗಳು ಆ ಕೋಣೆಯ ಮಧ್ಯದಲ್ಲಿ ನಿಂತರು, ನೆನಪಿನಲ್ಲಿಡಿರಿ, ವಾಚ್ಟವರ್ ತುಂಬಿರುವ ಪೆಟ್ಟಿಗೆಯು ಹಿಂದೆ ಇರುವ ತೊಟ್ಟಿಯು ಇರುವಲ್ಲಿಯೇ ನಿಂತರು. ಆದರೆ ಅವರಲ್ಲಿ ಯಾವನೂ ಗಮನಿಸಿದಂತೆ ತೋರಲಿಲ್ಲ; ಅವರೆಲ್ಲರೂ ಕುರುಡರಾಗಿ ಮಾಡಲ್ಪಟ್ಟಿದ್ದರೋ ಎಂಬಂತೆ ಇತ್ತು.” ಈ ಗಮನಾರ್ಹ ದೈವಾನುಗ್ರಹದ ಫಲವಾಗಿ ಕಷ್ಟಕರ ಮತ್ತು ಅಪಾಯಕರ ಸಮಯಗಳಲ್ಲಿ ಮನೆಯವರು ಆತ್ಮಿಕ ಆಹಾರವನ್ನು ಒದಗಿಸುವುದನ್ನು ಮುಂದರಿಸಲು ಶಕ್ತರಾದರು.
ಆಂತರಿಕ ಯುದ್ಧವೊಂದು, 1960 ಗಳಲ್ಲಿ ನೈಜೀರಿಯಾ ಮತ್ತು ಬೇರ್ಪಡಿಸಲ್ಪಟ್ಟ ಬೀಆ್ಯಫ್ರ ಪ್ರಾಂತ್ಯದ ನಡುವೆ ನಡೆಯುತ್ತಾ ಇತ್ತು. ಬೀಆ್ಯಫ್ರವು ಸಂಪೂರ್ಣವಾಗಿ ನೈಜೀರಿಯಾದ ಕ್ಷೇತ್ರದಿಂದ ಆವೃತಗೊಂಡಿರುವುದರಿಂದ, ಅದರ ಮತ್ತು ಬಾಹ್ಯ ಪ್ರಪಂಚದೊಂದಿಗಿನ ಸಂಬಂಧವು ಕೇವಲ ಒಂದು ವಿಮಾನಪಟ್ಟೆಯಾಗಿತ್ತು. ಬೀಆ್ಯಫ್ರದಲ್ಲಿರುವ ಸಾಕ್ಷಿಗಳು ಅವರ ಆತ್ಮಿಕ ಆಹಾರದ ಒದಗಿಸುವಿಕೆಯಿಂದ ಕಡಿಯಲ್ಪಡುವ ಅಪಾಯದಲ್ಲಿದ್ದರೆಂದು ಇದರ ಅರ್ಥ. ಅನಂತರ, 1968ರ ಆರಂಭದಲ್ಲಿ, ಬೀಆ್ಯಫ್ರದ ಅಧಿಕಾರಿಗಳು ತಮ್ಮ ನಾಗರಿಕ ಸೇವಾ ಸಿಬ್ಬಂದಿಯೊಬ್ಬನನ್ನು ಒಂದು ಪ್ರಾಮುಖ್ಯವಾದ ಹುದ್ದೆಯಲ್ಲಿ ಯೂರೋಪಿನಲ್ಲಿ ನೇಮಕ ಮಾಡಿದರು ಮತ್ತು ಇನ್ನೊಬ್ಬನನ್ನು ಬೀಆ್ಯಫ್ರದ ವಿಮಾನಪಟ್ಟೆಗೆ ನೇಮಿಸಿದರು. ಇವರಿಬ್ಬರು ಯೆಹೋವನ ಸಾಕ್ಷಿಗಳಾಗಿದ್ದರು, ಮತ್ತು ಈಗ ಅವರಿಬ್ಬರು ಬೀಆ್ಯಫ್ರ ಮತ್ತು ಬಾಹ್ಯ ಜಗತ್ತಿನ ಏಕಮಾತ್ರ ಸಂಬಂಧದ ಇಬ್ಬದಿಗಳಲ್ಲಿದ್ದರು. ಈ ಏರ್ಪಾಡು ಯೆಹೋವನಿಂದಲೇ ಆಗಿರಬೇಕು ಎಂದು ಅವರಿಬ್ಬರೂ ಅರಿತುಕೊಂಡರು. ಆದುದರಿಂದ, ಬೀಆ್ಯಫ್ರದೊಳಗೆ ಆತ್ಮಿಕ ಆಹಾರವನ್ನು ಹರಿಯಿಸುವ ಸಂಪರ್ಕ ಸಾಧನವಾಗಿ ಈ ಅತಿ ಸೂಕ್ಷ್ಮವಾದ ಮತ್ತು ಅಪಾಯವಿರುವ ಕೆಲಸ ಮಾಡಲು ಅವರು ತಾವಾಗಿಯೇ ಮುಂದೆ ಬಂದರು. ಮತ್ತು ಯುದ್ಧದ ಸಮಯದಲ್ಲಿಲ್ಲಾ ಇದನ್ನು ಮಾಡಲು ಅವರು ಶಕ್ತರಾದರು. ಅವರಲ್ಲೊಬ್ಬನು ಹೇಳಿಕೆ ನೀಡಿದ್ದು: “ಮಾನವರು ಯೋಜಿಸಲು ಅಸಾಧ್ಯವಾದ ಒಂದು ಏರ್ಪಾಡು ಇದಾಗಿತ್ತು.”
[ಪುಟ 20 ರಲ್ಲಿರುವ ಚಿತ್ರ]
ಪ್ರಕಟನೆಯಲ್ಲಿ ಸಾಂಕೇತಿಕ ಸಂಖ್ಯೆಗಳು
ಸಂಖ್ಯೆ ಸಾಂಕೇತಿಕ ಅರ್ಥ
2 ಒಂದು ವಿಷಯವನ್ನು ದೃಢವಾಗಿ ಸ್ಥಿರೀಕರಿಸುವುದನ್ನು
ಸೂಚಿಸುತ್ತದೆ. (ಪ್ರಕಟನೆ 11:3, 4; ಹೋಲಿಸಿರಿ
3 ಒತ್ತನ್ನು ನಿರ್ದೇಶಿಸುತ್ತದೆ. ತೀವ್ರತೆಯನ್ನು
ಕೂಡ ಸೂಚಿಸುತ್ತದೆ. (ಪ್ರಕಟನೆ 4:8; 8:13; 16:13, 19)
4 ಸಾರ್ವತ್ರಿಕತೆಯನ್ನು ಯಾ ಸಮತೆಯಲ್ಲಿ ಚಚ್ಚೌಕದ
ಸ್ಥಿರತೆಯನ್ನು ಸೂಚಿಸುತ್ತದೆ. (ಪ್ರಕಟನೆ 4:6; 7:1, 2;
9:14; 20:8; 21:16)
6 ಅಪರಿಪೂರ್ಣತೆಯನ್ನು, ಸಾಧಾರಣವಾಗಿರದ,
ವಿಲಕ್ಷಣವಾದ ಒಂದು ಸಂಗತಿಯನ್ನು ಸೂಚಿಸುತ್ತದೆ.
(ಪ್ರಕಟನೆ 13:18; ಹೋಲಿಸಿರಿ 2 ಸಮುವೇಲ 21:20.)
7 ಯೆಹೋವನ ಯಾ ಸೈತಾನನ ಉದ್ದೇಶಗಳ ಸಂಬಂಧದಲ್ಲಿ,
ದೈವಿಕವಾಗಿ ನಿರ್ಧರಿಸಲ್ಪಟ್ಟ ಸಂಪೂರ್ಣತೆಯನ್ನು ಸೂಚಿಸುತ್ತದೆ.
10 ಐಹಿಕ ಸಂಗತಿಗಳ ಕುರಿತಾಗಿ, ಭೌತಿಕ ರೀತಿಯಲ್ಲಿ ಎಲ್ಲವನ್ನು
ಯಾ ಪೂರ್ಣತೆಯನ್ನು ಸೂಚಿಸುತ್ತದೆ. (ಪ್ರಕಟನೆ 2:10;
12:3; 13:1; 17:3, 12, 16)
12 ಸ್ವರ್ಗದಲ್ಲಾಗಲಿ ಭೂಮಿಯ ಮೇಲಾಗಲಿ ದೈವಿಕವಾಗಿ
ರೂಪಿಸಲ್ಪಟ್ಟ ಒಂದು ಸಂಸ್ಥೆಯನ್ನು ಸೂಚಿಸುತ್ತದೆ.
24 ಯೆಹೋವನ ಸಮೃದ್ಧಿಯ (ದ್ವಿಗುಣದಷ್ಟು) ಸಂಸ್ಥೆಯ
ಏರ್ಪಾಡನ್ನು ಸೂಚಿಸುತ್ತದೆ. (ಪ್ರಕಟನೆ 4:4)
ಪ್ರಕಟನೆಯಲ್ಲಿ ಉಲ್ಲೇಖಿಸಲ್ಪಟ್ಟ ಕೆಲವು ಸಂಖ್ಯೆಗಳನ್ನು ಅಕ್ಷರಶಃವಾಗಿ ಅರ್ಥೈಸಿಕೊಳ್ಳಬೇಕು. ಆಗಾಗ್ಯೆ ಪೂರ್ವಾಪರ ಸನ್ನಿವೇಶವು ಇದನ್ನು ಖಚಿತ ಪಡಿಸಿಕೊಳ್ಳಲು ನಮಗೆ ಸಹಾಯವನ್ನೀಯುತ್ತದೆ. (ನೋಡಿರಿ ಪ್ರಕಟನೆ 7:4, 9; 11:2, 3; 12:6, 14; 17:3, 9-11; 20:3-5.)