“ಪ್ರಥಮ ಪುನರುತ್ಥಾನ” —ಈಗ ಮುಂದುವರಿಯುತ್ತಿದೆ!
“ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು.”—1 ಥೆಸಲೋನೀಕ 4:16.
“ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆ ಉಂಟಷ್ಟೆ.” ಆದಾಮನು ಪಾಪಮಾಡಿದಂದಿನಿಂದ ಇದು ಸತ್ಯವಾಗಿದೆ. ಪ್ರತಿಯೊಬ್ಬ ಮನುಷ್ಯನಿಗೆ ಮುಂದೆ ತಾನು ಸಾಯುವೆನೆಂದು ತಿಳಿದಿದೆ. ಆದುದರಿಂದಲೇ ಇತಿಹಾಸದುದ್ದಕ್ಕೂ ಅನೇಕರು, ‘ಸತ್ತ ಮೇಲೆ ಏನಾಗಲಿದೆ? ಮೃತರ ಅವಸ್ಥೆಯೇನು?’ ಎಂದು ಕುತೂಹಲಪಟ್ಟಿರುತ್ತಾರೆ. ಇದಕ್ಕೆ ಬೈಬಲ್ ಉತ್ತರಿಸುವುದು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.”—ಪ್ರಸಂಗಿ 9:5.
2 ಹಾಗಾದರೆ, ಸತ್ತವರಿಗೆ ಯಾವ ನಿರೀಕ್ಷೆಯಾದರೂ ಇದೆಯೋ? ನಿಶ್ಚಯವಾಗಿಯೂ ಇದೆ. ಮಾನವಕುಲಕ್ಕಾಗಿರುವ ದೇವರ ಮೂಲ ಉದ್ದೇಶವು ನೆರವೇರಬೇಕಾದರೆ ಸತ್ತವರಿಗೆ ನಿರೀಕ್ಷೆ ಇರಲೇಬೇಕು. ಸೈತಾನನನ್ನು ನಾಶಗೊಳಿಸಿ ಅವನು ಮಾಡಿರುವ ಹಾನಿಯನ್ನು ಪರಿಹರಿಸುವ ಒಂದು ಸಂತಾನದ ಕುರಿತು ಯೆಹೋವನು ಮಾಡಿದ ವಾಗ್ದಾನದಲ್ಲಿ ಗತ ಶತಮಾನಗಳಿಂದಲೂ ದೇವರ ನಿಷ್ಠಾವಂತ ಸೇವಕರು ನಂಬಿಕೆಯನ್ನಿಟ್ಟಿದ್ದಾರೆ. (ಆದಿಕಾಂಡ 3:15) ಅವರಲ್ಲಿ ಹೆಚ್ಚಿನವರು ಮೃತರಾಗಿದ್ದಾರೆ. ಅವರು ಯೆಹೋವನು ಮಾಡಿದ ಆ ವಾಗ್ದಾನ ಹಾಗೂ ಇನ್ನಿತ್ತರ ವಾಗ್ದಾನಗಳ ನೆರವೇರಿಕೆಯನ್ನು ನೋಡಬೇಕಾಗಿರುವಲ್ಲಿ ಸತ್ತವರೊಳಗಿಂದ ಎಬ್ಬಿಸಲ್ಪಡುವುದು ಅತ್ಯಗತ್ಯ. (ಇಬ್ರಿಯ 11:13) ಇದು ಸಾಧ್ಯವೊ? ಖಂಡಿತ ಸಾಧ್ಯ. “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು” ಅಪೊಸ್ತಲ ಪೌಲನು ಹೇಳಿದನು. (ಅ. ಕೃತ್ಯಗಳು 24:15) ಒಮ್ಮೆ ಯೂತಿಖನೆಂಬ ಯುವಕನು ಮೂರನೆಯ ಅಂತಸ್ತಿನ ಕಿಟಿಕಿಯಿಂದ ಬಿದ್ದು, “ಎತ್ತಿನೋಡುವಾಗ ಸತ್ತಿದ್ದನು.” ಅವನನ್ನು ಪೌಲನು ಪುನರುತ್ಥಾನಗೊಳಿಸಿದನು. ಬೈಬಲಿನಲ್ಲಿ ದಾಖಲೆಯಾಗಿರುವ ಒಂಬತ್ತು ಪುನರುತ್ಥಾನಗಳಲ್ಲಿ ಇದು ಕೊನೆಯದ್ದಾಗಿದೆ.—ಅ. ಕೃತ್ಯಗಳು 20:7-12.a
3 ಆ ಒಂಬತ್ತು ಪುನರುತ್ಥಾನಗಳು ಪೌಲನ ಹೇಳಿಕೆಯಲ್ಲಿ ನಂಬಿಕೆಯನ್ನಿಡಲು ಆಧಾರವನ್ನು ಒದಗಿಸುತ್ತವೆ. ಅವು ಯೇಸುವಿನ ಈ ಆಶ್ವಾಸನೆಯಲ್ಲಿ ನಮಗಿರುವ ಭರವಸೆಯನ್ನೂ ಬಲಪಡಿಸುತ್ತವೆ: “[ಸ್ಮರಣೆಯ, NW] ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ಎಂತಹ ಹೃದಯೋಲ್ಲಾಸಕರ ನುಡಿಗಳವು! ತಮ್ಮ ಪ್ರಿಯರನ್ನು ಮರಣವೆಂಬ ನಿದ್ರೆಯಲ್ಲಿ ಕಳೆದುಕೊಂಡಿರುವ ಲಕ್ಷಾಂತರ ಜನರಿಗೆ ಅದೆಷ್ಟು ಸಾಂತ್ವನದಾಯಕ!
4 ಪುನರುತ್ಥಾನ ಹೊಂದುವವರಲ್ಲಿ ಅಧಿಕಾಂಶ ಮಂದಿ ದೇವರ ರಾಜ್ಯದ ಕೆಳಗೆ ಶಾಂತಿಭರಿತವಾಗಿರುವ ಭೂಮಿಗೆ ಹಿಂದಿರುಗಿ ಬರುವರು. (ಕೀರ್ತನೆ 37:10, 11, 29; ಯೆಶಾಯ 11:6-9; 35:5, 6; 65:21-23) ಆದರೂ, ಅದು ಸಂಭವಿಸುವ ಮೊದಲು ಬೇರೆ ಪುನರುತ್ಥಾನಗಳು ಆಗಬೇಕಾಗಿದ್ದವು. ಪ್ರಥಮವಾಗಿ, ನಮಗೋಸ್ಕರ ತನ್ನ ಯಜ್ಞದ ಮೌಲ್ಯವನ್ನು ದೇವರಿಗೆ ಅರ್ಪಿಸಲು ಯೇಸು ಕ್ರಿಸ್ತನು ಪುನರುತ್ಥಾನ ಹೊಂದಬೇಕಾಗಿತ್ತು. ಯೇಸು ಸಾ.ಶ. 33ರಲ್ಲಿ ಸತ್ತು ಪುನರುತ್ಥಾನಗೊಳಿಸಲ್ಪಟ್ಟನು.
5 ಅನಂತರ, ‘ದೇವರ ಇಸ್ರಾಯೇಲ್ಯರಾಗಿರುವ’ ಅಭಿಷಿಕ್ತ ಸದಸ್ಯರು ಕರ್ತನಾದ ಯೇಸು ಕ್ರಿಸ್ತನನ್ನು ಸ್ವರ್ಗೀಯ ಮಹಿಮೆಯಲ್ಲಿ ಜೊತೆಗೂಡಬೇಕು. ಅಲ್ಲಿ ಅವರು “ಸದಾಕಾಲವೂ ಕರ್ತನ ಜೊತೆಯಲ್ಲಿ” ಇರುವರು. (ಗಲಾತ್ಯ 6:16; 1 ಥೆಸಲೊನೀಕ 4:17) ಆ ಸಂಭವವನ್ನು “ಆರಂಭದಲ್ಲಿಯೇ ಆಗುವ ಪುನರುತ್ಥಾನ” ಅಥವಾ “ಪ್ರಥಮ ಪುನರುತ್ಥಾನ” ಎಂದು ಕರೆಯಲಾಗುತ್ತದೆ. (ಫಿಲಿಪ್ಪಿ 3:10, 11, NW; ಪ್ರಕಟನೆ 20:6) ಆ ಪುನರುತ್ಥಾನ ಪೂರ್ಣಗೊಂಡಾಗ, ಕೋಟ್ಯಂತರ ಜನರು ಪರದೈಸಿನಲ್ಲಿ ನಿತ್ಯಜೀವದ ಪ್ರತೀಕ್ಷೆಯುಳ್ಳವರಾಗಿ ಪುನರುತ್ಥಾನಗೊಳಿಸಲ್ಪಡುವ ಸಮಯ ಬರುವುದು. ಆದಕಾರಣ, ನಮ್ಮ ನಿರೀಕ್ಷೆ ಸ್ವರ್ಗೀಯವಾದುದಾಗಿರಲಿ ಭೌಮಿಕವಾದುದಾಗಿರಲಿ ನಮಗೆ “ಪ್ರಥಮ ಪುನರುತ್ಥಾನ”ದಲ್ಲಿ ತೀವ್ರಾಸಕ್ತಿ ಇದೆ. ಅದು ಯಾವ ವಿಧದ ಪುನರುತ್ಥಾನ? ಅದು ಯಾವಾಗ ಸಂಭವಿಸುತ್ತದೆ?
‘ಎಂಥ ದೇಹ?’
6 ಕೊರಿಂಥದವರಿಗೆ ಬರೆದ ಮೊದಲ ಪತ್ರದಲ್ಲಿ ಅಪೊಸ್ತಲ ಪೌಲನು ಪ್ರಥಮ ಪುನರುತ್ಥಾನದ ಸಂಬಂಧದಲ್ಲಿ ಒಂದು ಪ್ರಶ್ನೆ ಕೇಳುತ್ತಾನೆ: ‘ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ, ಎಂಥ ದೇಹದಿಂದ ಬರುತ್ತಾರೆ?’ ಬಳಿಕ ಅವನು ಆ ಪ್ರಶ್ನೆಗೆ ಉತ್ತರ ಕೊಡುವುದು: “ನೀನು ಬಿತ್ತುವ ಬೀಜವು ಸಾಯದಿದ್ದರೆ, ಜೀವಿತವಾಗುವದಿಲ್ಲ, ನೋಡು; . . . ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. . . ಆದರೆ ಪರಲೋಕದ ದೇಹಗಳ ಮಹಿಮೆ ಬೇರೆ, ಭೂಲೋಕದ ದೇಹಗಳ ಮಹಿಮೆ ಬೇರೆ.”—1 ಕೊರಿಂಥ 15:35-40.
7 ಪವಿತ್ರಾತ್ಮಾಭಿಷಿಕ್ತರಾದ ಕ್ರೈಸ್ತರು ಅವರ ಸ್ವರ್ಗೀಯ ಪ್ರತಿಫಲವನ್ನು ಪಡೆಯುವ ಮೊದಲು ಸಾಯಬೇಕೆಂದು ಪೌಲನ ಮಾತುಗಳು ತೋರಿಸುತ್ತವೆ. ಅವರು ಮರಣಹೊಂದುವಾಗ ಭೂಸಂಬಂಧವಾದ ಅವರ ದೇಹವು ಮಣ್ಣಿಗೆ ಹಿಂದಿರುಗುತ್ತದೆ. (ಆದಿಕಾಂಡ 3:19) ದೇವರ ನಿಯಮಿತ ಸಮಯದಲ್ಲಿ ಅವರು ಸ್ವರ್ಗದ ಜೀವನಕ್ಕೆ ಯೋಗ್ಯವಾದ ‘ದೇಹದೊಂದಿಗೆ’ ಪುನರುತ್ಥಾನಗೊಳ್ಳುತ್ತಾರೆ. (1 ಯೋಹಾನ 3:2) ದೇವರು ಅವರಿಗೆ ಅಮರತ್ವವನ್ನೂ ಕೊಡುತ್ತಾನೆ. ಇದು ಅವರಿಗೆ ಹುಟ್ಟಿನಿಂದಲೇ ಇರುವಂಥದ್ದೇನಲ್ಲ. ‘ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದು ಅವಶ್ಯ’ ಎಂದು ಪೌಲನು ಹೇಳುತ್ತಾನೆ. ಹೀಗೆ, ಅಮರತ್ವವು ದೇವರ ಕೊಡುಗೆಯಾಗಿದ್ದು, ಪ್ರಥಮ ಪುನರುತ್ಥಾನ ಹೊಂದುವವರು ‘ಧರಿಸುವಂಥದ್ದಾಗಿದೆ.’—1 ಕೊರಿಂಥ 15:50, 53; ಆದಿಕಾಂಡ 2:7; 2 ಕೊರಿಂಥ 5:1, 2, 8.
8 ಪ್ರಥಮ ಪುನರುತ್ಥಾನ ಹೊಂದುವವರು ಕೇವಲ 1,44,000 ಮಂದಿ. ಸಾ.ಶ. ಪಂಚಾಶತ್ತಮದಲ್ಲಿ ಯೇಸುವಿನ ಪುನರುತ್ಥಾನವಾಗಿ ಸ್ವಲ್ಪದರಲ್ಲೇ ಯೆಹೋವನು ಅವರನ್ನು ಆರಿಸಿಕೊಳ್ಳಲಾರಂಭಿಸಿದನು. ಅವರೆಲ್ಲರ “ಹಣೆಯ ಮೇಲೆ [ಯೇಸುವಿನ] ಹೆಸರೂ ಆತನ ತಂದೆಯ ಹೆಸರೂ” ಬರೆಯಲ್ಪಟ್ಟಿವೆ. (ಪ್ರಕಟನೆ 14:1, 3) ಆದಕಾರಣ, ಅವರನ್ನು ವಿವಿಧ ಧರ್ಮಗಳಿಂದ ಆರಿಸಲಾಗುವುದಿಲ್ಲ. ಅವರೆಲ್ಲರೂ ಕ್ರಿಸ್ತನ ಹಿಂಬಾಲಕರು. ತಂದೆಯಾದ ಯೆಹೋವನ ಹೆಸರನ್ನು ಸಹ ಅವರೆಲ್ಲರೂ ಅಭಿಮಾನದಿಂದ ಧರಿಸುತ್ತಾರೆ. ಅವರಿಗೆ ಪುನರುತ್ಥಾನವಾಗುವಾಗ ಸ್ವರ್ಗದಲ್ಲಿ ಕೆಲಸ ಮಾಡುವ ನೇಮಕವೊಂದನ್ನು ಪಡೆಯುತ್ತಾರೆ. ಈ ರೀತಿಯಲ್ಲಿ ನೇರವಾಗಿ ದೇವರನ್ನು ಸೇವಿಸುವ ಪ್ರತೀಕ್ಷೆಯು ಅವರನ್ನು ರೋಮಾಂಚನಗೊಳಿಸುವುದು ನಿಶ್ಚಯ.
ಈಗ ಮುಂದುವರಿಯುತ್ತಿದೆಯೆ?
9 ಪ್ರಥಮ ಪುನರುತ್ಥಾನ ಸಂಭವಿಸುವುದು ಯಾವಾಗ? ಅದು ಈಗ ಮುಂದುವರಿಯುತ್ತಿದೆ ಎಂಬುದಕ್ಕೆ ಸಾಧಾರವಿದೆ. ದೃಷ್ಟಾಂತಕ್ಕೆ, ಪ್ರಕಟನೆ ಪುಸ್ತಕದ ಎರಡು ಅಧ್ಯಾಯಗಳನ್ನು ಸರಿಹೋಲಿಸಿರಿ. ಪ್ರಥಮವಾಗಿ, ಪ್ರಕಟನೆ 12ನೆಯ ಅಧ್ಯಾಯವನ್ನು ನೋಡಿ. ಅಲ್ಲಿ ಹೊಸದಾಗಿ ಸಿಂಹಾಸನಾರೂಢನಾದ ಯೇಸು ಕ್ರಿಸ್ತನು ತನ್ನ ಪವಿತ್ರ ದೂತರೊಂದಿಗೆ ಸೈತಾನನ ಮತ್ತು ಅವನ ದೆವ್ವಗಳ ವಿರುದ್ಧ ಹೋರಾಡುವುದರ ಬಗ್ಗೆ ನಾವು ಓದುತ್ತೇವೆ. (ಪ್ರಕಟನೆ 12:7-9) ಈ ಪತ್ರಿಕೆಯು ಅನೇಕ ಬಾರಿ ತೋರಿಸಿರುವಂತೆ ಆ ಯುದ್ಧವು 1914ರಲ್ಲಿ ಶುರುವಾಯಿತು.b ಆದರೆ ಇದನ್ನು ಗಮನಿಸಿ. ಆ ಸ್ವರ್ಗೀಯ ಯುದ್ಧದಲ್ಲಿ ಕ್ರಿಸ್ತನ ಅಭಿಷಿಕ್ತ ಹಿಂಬಾಲಕರಲ್ಲಿ ಯಾರೂ ಯೇಸುವಿನ ಜೊತೆಯಲ್ಲಿದ್ದಾರೆಂದು ಹೇಳಲಾಗಿಲ್ಲ. ಈಗ ಪ್ರಕಟನೆ 17ನೆಯ ಅಧ್ಯಾಯವನ್ನು ನೋಡಿ. ಅಲ್ಲಿ, “ಮಹಾ ಬಾಬಿಲೋನ್” ನಾಶವಾದ ಬಳಿಕ ಕುರಿಮರಿಯು ಜನಾಂಗಗಳನ್ನು ಜಯಿಸುವುದರ ಕುರಿತು ನಾವು ಓದುತ್ತೇವೆ. ಬಳಿಕ ಅದು ಕೂಡಿಸುವುದು: “ಆತನೊಂದಿಗಿದ್ದವರು ಕರೆಯಲ್ಪಟ್ಟವರೂ ಆಯಲ್ಪಟ್ಟವರೂ ನಂಬಿಗಸ್ತರೂ ಆಗಿರುವರು.” (ಪ್ರಕಟನೆ 17:5, 14, NIBV) ಈ “ಕರೆಯಲ್ಪಟ್ಟವರೂ ಆಯಲ್ಪಟ್ಟವರೂ ನಂಬಿಗಸ್ತರೂ” ಆಗಿರುವವರು ಸೈತಾನನ ಲೋಕದ ಆ ಅಂತಿಮ ಸೋಲಿನಲ್ಲಿ ಯೇಸುವಿನೊಂದಿಗೆ ಇರಬೇಕಾದರೆ ಅವರು ಈಗಾಗಲೇ ಪುನರುತ್ಥಾನ ಹೊಂದಿರಬೇಕಾಗಿದೆ. ಹಾಗಾದರೆ, ಹರ್ಮಗೆದೋನ್ಗಿಂತ ಮೊದಲು ಸಾಯುವ ಅಭಿಷಿಕ್ತರು, 1914 ಮತ್ತು ಹರ್ಮಗೆದೋನ್ನ ನಡುವೆ ಯಾವಾಗಲಾದರೂ ಪುನರುತ್ಥಾನ ಹೊಂದಬೇಕಾಗಿದೆ ಎಂಬುದು ನ್ಯಾಯಸಮ್ಮತವಾಗಿದೆ.
10 ಆದರೆ ಪ್ರಥಮ ಪುನರುತ್ಥಾನ ಯಾವಾಗ ಆರಂಭಿಸಿತೆಂಬುದನ್ನು ನಾವು ಹೆಚ್ಚು ನಿಷ್ಕೃಷ್ಟವಾಗಿ ಹೇಳಬಲ್ಲೆವೊ? ಪ್ರಕಟನೆ 7:9-15ರಲ್ಲಿ ಒಂದು ಆಸಕ್ತಿಕರವಾದ ಸುಳಿವು ನಮಗೆ ಕಂಡುಬರುತ್ತದೆ. ಅಲ್ಲಿ, ‘ಯಾರಿಂದಲೂ ಎಣಿಸಲಾಗದಂಥ ಮಹಾಸಮೂಹದ’ ದರ್ಶನವನ್ನು ಅಪೊಸ್ತಲ ಯೋಹಾನನು ವರ್ಣಿಸುತ್ತಾನೆ. ಆ ಮಹಾಸಮೂಹದ ಗುರುತನ್ನು ಅಲ್ಲಿದ್ದ 24 ಮಂದಿ ಹಿರಿಯರಲ್ಲಿ ಒಬ್ಬನು ಯೋಹಾನನಿಗೆ ತಿಳಿಸುತ್ತಾನೆ. ಈ ಹಿರಿಯರು, ತಮ್ಮ ಸ್ವರ್ಗೀಯ ಮಹಿಮೆಯಲ್ಲಿ ಕ್ರಿಸ್ತನೊಂದಿಗೆ ಸಹಬಾಧ್ಯಸ್ಥರಾಗಿರುವ 1,44,000 ಮಂದಿಯನ್ನು ಪ್ರತಿನಿಧೀಕರಿಸುತ್ತಾರೆ.c (ಲೂಕ 22:28-30; ಪ್ರಕಟನೆ 4:4) ಸ್ವತಃ ಯೋಹಾನನಿಗೆ ಸ್ವರ್ಗೀಯ ನಿರೀಕ್ಷೆಯಿತ್ತು. ಆದರೆ ಆ ಹಿರಿಯನು ಅವನೊಂದಿಗೆ ಮಾತಾಡಿದಾಗ ಅವನು ಭೂಮಿಯ ಮೇಲೆ ಇನ್ನೂ ಮನುಷ್ಯನಾಗಿದ್ದುದರಿಂದ, ಆ ದರ್ಶನದಲ್ಲಿ ಯೋಹಾನನು ತಮ್ಮ ಸ್ವರ್ಗೀಯ ಬಹುಮಾನವನ್ನು ಇನ್ನೂ ಪಡೆಯದಿದ್ದು ಭೂಮಿಯಲ್ಲಿದ್ದ ಅಭಿಷಿಕ್ತರನ್ನು ಪ್ರತಿನಿಧೀಕರಿಸಲೇಬೇಕು.
11 ಆ 24 ಮಂದಿ ಹಿರಿಯರಲ್ಲಿ ಒಬ್ಬನು ಯೋಹಾನನಿಗೆ ಮಹಾ ಸಮೂಹದ ಗುರುತನ್ನು ತಿಳಿಸಿದ್ದರ ನಿಜತ್ವದಿಂದ ನಾವೇನನ್ನು ತೀರ್ಮಾನಿಸಬಲ್ಲೆವು? ಇಂದು ದೈವಿಕ ಸತ್ಯಗಳನ್ನು ತಿಳಿಯಪಡಿಸುವುದರಲ್ಲಿ ಆ 24 ಮಂದಿ ಹಿರಿಯರ ಗುಂಪಿನಲ್ಲಿ ಪುನರುತ್ಥಾನ ಹೊಂದಿರುವವರು ಒಳಗೂಡಿರಬಹುದು ಎಂಬುದೇ. ಅದೇಕೆ ಪ್ರಾಮುಖ್ಯ? ಏಕೆಂದರೆ ಮಹಾ ಸಮೂಹದ ನಿಷ್ಕೃಷ್ಟ ಗುರುತನ್ನು ಭೂಮಿಯಲ್ಲಿದ್ದ ದೇವರ ಅಭಿಷಿಕ್ತ ಸೇವಕರಿಗೆ 1935ರಲ್ಲಿ ತಿಳಿಸಲಾಯಿತು. ಆ 24 ಮಂದಿ ಹಿರಿಯರಲ್ಲಿ ಒಬ್ಬನು ಆ ಪ್ರಾಮುಖ್ಯವಾದ ಸತ್ಯವನ್ನು ತಿಳಿಯಪಡಿಸಲು ಉಪಯೋಗಿಸಲ್ಪಟ್ಟಿದ್ದರೆ, ಅವನು ಕೊನೆಪಕ್ಷ 1935ರೊಳಗೆ ಸ್ವರ್ಗಕ್ಕೆ ಪುನರುತ್ಥಾನವನ್ನು ಹೊಂದಿರಬೇಕಾಗುತ್ತದೆ. ಹೀಗೆ, ಪ್ರಥಮ ಪುನರುತ್ಥಾನವು 1914 ಮತ್ತು 1935ರ ಮಧ್ಯೆ ಯಾವಾಗಲೊ ಆರಂಭಿಸಿರಬೇಕೆಂದು ಅದು ಸೂಚಿಸುತ್ತದೆ. ನಾವು ಇದಕ್ಕೆ ಇನ್ನಷ್ಟೂ ನಿಷ್ಕೃಷ್ಟ ಉತ್ತರವನ್ನು ಕೊಡಸಾಧ್ಯವಿದೆಯೋ?
12 ಈ ಹಂತದಲ್ಲಿ, ಯಾವುದನ್ನು ಒಂದು ಬೈಬಲ್ ಸಾದೃಶ್ಯವೆಂದು ಪರಿಗಣಿಸಬಹುದೊ ಅದನ್ನು ಚರ್ಚಿಸುವುದು ಸಹಾಯಕರವಾಗಿರಬಹುದು. ಯೇಸು ಕ್ರಿಸ್ತನನ್ನು ದೇವರ ರಾಜ್ಯದ ಭಾವೀ ಅರಸನಾಗಿ ಸಾ.ಶ. 29ರ ಶರತ್ಕಾಲದಲ್ಲಿ ಅಭಿಷೇಕಿಸಲಾಯಿತು. ಮೂರೂವರೆ ವರ್ಷಗಳ ಬಳಿಕ ಸಾ.ಶ. 33ರ ವಸಂತಕಾಲದಲ್ಲಿ ಅವನನ್ನು ಬಲಿಷ್ಠ ಆತ್ಮ ವ್ಯಕ್ತಿಯಾಗಿ ಪುನರುತ್ಥಾನಗೊಳಿಸಲಾಯಿತು. ಹಾಗಾದರೆ, 1914ರ ಶರತ್ಕಾಲದಲ್ಲಿ ಯೇಸು ಅರಸನಾದದ್ದರಿಂದ ಅವನ ನಂಬಿಗಸ್ತ ಅಭಿಷಿಕ್ತ ಹಿಂಬಾಲಕರ ಪುನರುತ್ಥಾನವು ಮೂರುವರೆ ವರುಷಗಳ ಬಳಿಕ ಅಂದರೆ 1918ರ ವಸಂತಕಾಲದಲ್ಲಿ ಆರಂಭವಾಯಿತೆನ್ನುವುದು ನ್ಯಾಯಸಮ್ಮತ ಅಲ್ಲವೆ? ಆಸಕ್ತಿಕರವಾಗಿ ಅದು ಸಾಧ್ಯವೆಂಬುದು ನಿಜ. ಇದನ್ನು ಬೈಬಲಿನಿಂದ ನೇರವಾಗಿ ದೃಢೀಕರಿಸುವುದು ಅಸಾಧ್ಯವಾಗಿರುವುದಾದರೂ ಪ್ರಥಮ ಪುನರುತ್ಥಾನವು ಯೇಸುವಿನ ಸಾನ್ನಿಧ್ಯ ಆರಂಭಗೊಂಡ ಬಳಿಕ ಸ್ವಲ್ಪದರಲ್ಲಿ ನಡೆಯಿತೆಂದು ಸೂಚಿಸುವ ಬೇರೆ ಶಾಸ್ತ್ರವಚನಗಳೊಂದಿಗೆ ಇದು ಒಮ್ಮತದಲ್ಲಿದೆ.
13 ಉದಾಹರಣೆಗೆ, ಪೌಲನು ಬರೆದುದು: “ಕರ್ತನು ಪ್ರತ್ಯಕ್ಷನಾಗುವ [“ಕರ್ತನ ಸಾನ್ನಿಧ್ಯದ,” NW] ವರೆಗೂ [ಸಾನ್ನಿಧ್ಯದ ಅಂತ್ಯದ ತನಕವಲ್ಲ] ಜೀವದಿಂದುಳಿದಿರುವ ನಾವು ನಿದ್ರೆಹೋದವರಿಗಿಂತ ಮುಂದಾಗುವದೇ ಇಲ್ಲ. ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನದೂತನ ಶಬ್ದದೊಡನೆಯೂ ದೇವರ ತುತೂರಿಧ್ವನಿಯೊಡನೆಯೂ ಆಕಾಶದಿಂದ ಇಳಿದುಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು; ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.” (1 ಥೆಸಲೊನೀಕ 4:15-17) ಆದಕಾರಣ, ಕ್ರಿಸ್ತನ ಸಾನ್ನಿಧ್ಯಕ್ಕೆ ಮೊದಲು ಸತ್ತ ಅಭಿಷಿಕ್ತ ಕ್ರೈಸ್ತರು, ಕ್ರಿಸ್ತನ ಸಾನ್ನಿಧ್ಯದ ಕಾಲದಲ್ಲಿ ಇನ್ನೂ ಜೀವಿಸುತ್ತಿರುವವರಿಗಿಂತ ಮುಂಚಿತವಾಗಿಯೇ ಸ್ವರ್ಗೀಯ ಜೀವನಕ್ಕೆ ಎಬ್ಬಿಸಲ್ಪಟ್ಟರು. ಇದರ ಅರ್ಥವು, ಪ್ರಥಮ ಪುನರುತ್ಥಾನವು ಕ್ರಿಸ್ತನ ಸಾನ್ನಿಧ್ಯದ ಆರಂಭದಲ್ಲಿ ಸಂಭವಿಸತೊಡಗಿದ್ದಿರಬೇಕು. “ಅವನ ಸಾನ್ನಿಧ್ಯದಲ್ಲಿ” ಅದು ಮುಂದುವರಿಯುತ್ತದೆ. (1 ಕೊರಿಂಥ 15:23, NW) ಈ ಪ್ರಥಮ ಪುನರುತ್ಥಾನವು ಒಂದೇ ಸಮಯದಲ್ಲಿ ಸಂಭವಿಸಿ ಮುಗಿಯುವ ಬದಲು ಒಂದು ಸಮಯಾವಧಿಯಲ್ಲಿ ಸಂಭವಿಸುವುದು.
“ಒಬ್ಬೊಬ್ಬನಿಗೆ ಒಂದೊಂದು ಬಿಳಿ ನಿಲುವಂಗಿಯು ಕೊಡಲ್ಪಟ್ಟಿತು”
14 ಪ್ರಕಟನೆ 6ನೆಯ ಅಧ್ಯಾಯದಲ್ಲಿರುವ ಸಾಕ್ಷ್ಯವನ್ನೂ ಪರಿಗಣಿಸಿರಿ. ಅಲ್ಲಿ ಯೇಸು ಜಯಿಸುತ್ತಿರುವ ಅರಸನಾಗಿ ಸವಾರಿ ಮಾಡುತ್ತಿರುವುದು ಕಾಣಿಸುತ್ತದೆ. (ಪ್ರಕಟನೆ 6:2) ಜನಾಂಗಗಳು ಬೃಹತ್ಪ್ರಮಾಣದ ಯುದ್ಧೋದ್ಯಮದಲ್ಲಿ ಒಳಗೂಡಿರುತ್ತಾರೆ. (ಪ್ರಕಟನೆ 6:4) ಕ್ಷಾಮವು ಅತಿ ವ್ಯಾಪಕವಾಗಿದೆ. (ಪ್ರಕಟನೆ 6:5, 6) ಮಾರಕ ವ್ಯಾಧಿಗಳು ಮಾನವಕುಲವನ್ನು ಹಾಳುಗೆಡವುತ್ತಿವೆ. (ಪ್ರಕಟನೆ 6:8) ಈ ಪ್ರವಾದಿತ ಘಟನೆಗಳೆಲ್ಲ 1914ರಿಂದಿರುವ ಲೋಕ ಪರಿಸ್ಥಿತಿಗಳಿಗೆ ಸ್ಪಷ್ಟವಾಗಿ ಹೊಂದಿಕೊಳ್ಳುತ್ತವೆ. ಆದರೆ ಇನ್ನೇನೊ ಸಂಭವಿಸುತ್ತದೆ. ನಮ್ಮ ಗಮನವನ್ನು ಒಂದು ಯಜ್ಞವೇದಿಗೆ ಸೆಳೆಯಲಾಗುತ್ತದೆ. ಆ ಯಜ್ಞವೇದಿಯ ತಳದಲ್ಲಿ, “ದೇವರ ವಾಕ್ಯದ ನಿಮಿತ್ತವಾಗಿಯೂ ತಾವು ಹೇಳಿದ ಸಾಕ್ಷಿಯ ನಿಮಿತ್ತವಾಗಿಯೂ ಹತವಾದವರ ಆತ್ಮ [ಪ್ರಾಣ]”ಗಳು ಇವೆ. (ಪ್ರಕಟನೆ 6:9) ‘ರಕ್ತವೇ ಪ್ರಾಣಾಧಾರವಾಗಿರುವದರಿಂದ’ ವೇದಿಯ ಬುಡದಲ್ಲಿದೆಯೆಂದು ನಿಜವಾಗಿಯೂ ಪ್ರತಿನಿಧೀಕರಿಸಲಾಗಿರುವುದು, ಯಾರು ತಮ್ಮ ಧೈರ್ಯ ಮತ್ತು ಹುರುಪಿನ ಸಾಕ್ಷಿಯ ದೆಸೆಯಿಂದ ಕೊಲ್ಲಲ್ಪಟ್ಟರೋ ಯೇಸುವಿನ ಆ ನಂಬಿಗಸ್ತ ಸೇವಕರ ರಕ್ತವಾಗಿರುತ್ತದೆ.—ಯಾಜಕಕಾಂಡ 17:11.
15 ನೀತಿವಂತನಾಗಿದ್ದ ಹೇಬೆಲನ ರಕ್ತದಂತೆಯೇ, ಈ ಕ್ರೈಸ್ತ ಹುತಾತ್ಮರ ರಕ್ತವು ನ್ಯಾಯಕ್ಕಾಗಿ ಕೂಗಾಡುತ್ತಿದೆ. (ಆದಿಕಾಂಡ 4:10) “ಅವರು—ಒಡೆಯನೇ, ಪರಿಶುದ್ಧನೂ ಸತ್ಯವಂತನೂ ಆಗಿರುವಾತನೇ, ಭೂನಿವಾಸಿಗಳು ನಮ್ಮನ್ನು ಕೊಂದದ್ದಕ್ಕಾಗಿ ನೀನು ಎಷ್ಟು ಕಾಲದವರೆಗೂ ನ್ಯಾಯವಿಚಾರಿಸದೆಯೂ ಪ್ರತಿದಂಡನೆ ಮಾಡದೆಯೂ ಇರುವಿ? ಎಂದು ಮಹಾ ಶಬ್ದದಿಂದ ಕೂಗಿದರು.” ಆಮೇಲೆ ಏನಾಗುತ್ತದೆ? “ಅವರಲ್ಲಿ ಒಬ್ಬೊಬ್ಬನಿಗೆ ಒಂದೊಂದು ಬಿಳಿ ನಿಲುವಂಗಿಯು ಕೊಡಲ್ಪಟ್ಟಿತು. ಇದಲ್ಲದೆ—ನಿಮ್ಮ ಹಾಗೆ ಕೊಲೆಯಾಗಬೇಕಾಗಿರುವ ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆದಾಸರ ಸಂಖ್ಯೆಯೂ ಪೂರ್ಣವಾಗುವ ತನಕ ಇನ್ನೂ ಸ್ಪಲ್ಪಕಾಲ ವಿಶ್ರಮಿಸಿಕೊಂಡಿರಬೇಕೆಂದು ಅವರಿಗೆ ಉತ್ತರವಾಯಿತು.”—ಪ್ರಕಟನೆ 6:10, 11.
16 ಈ ಬಿಳಿ ನಿಲುವಂಗಿಗಳನ್ನು ವೇದಿಯ ಬುಡದಲ್ಲಿದ್ದ ರಕ್ತದ ರಾಶಿಗೆ ಕೊಡಲಾಯಿತೊ? ಇಲ್ಲವೆಂಬುದು ನಿಶ್ಚಯ! ಯಾರ ರಕ್ತವು ವೇದಿಯ ಮೇಲೆಯೊ ಎಂಬಂತೆ ಸುರಿಸಲ್ಪಟ್ಟಿತ್ತೊ ಆ ವ್ಯಕ್ತಿಗಳಿಗೆ ನಿಲುವಂಗಿಗಳು ಕೊಡಲಾದವು. ಅವರು ತಮ್ಮ ಜೀವಗಳನ್ನು ಯೇಸುವಿನ ಹೆಸರಿನಲ್ಲಿ ಅರ್ಪಿಸಿದ್ದು, ಈಗ ಆತ್ಮಜೀವಿಗಳಾಗಿ ಪುನರುತ್ಥಾನ ಹೊಂದಿದ್ದಾರೆ. ಅದು ನಮಗೆ ಹೇಗೆ ಗೊತ್ತು? ಪ್ರಕಟನೆ ಪುಸ್ತಕದ ಹಿಂದಿನ ಒಂದು ಅಧ್ಯಾಯದಲ್ಲಿ ನಾವು ಓದುವುದು: ‘ಜಯಶಾಲಿಗೆ ಹೀಗೆ ಶುಭ್ರ [“ಬಿಳಿಯ,” NIBV] ವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡೆನು.’ “ಆ ಸಿಂಹಾಸನಗಳ ಮೇಲೆ ಶುಭ್ರವಸ್ತ್ರ [“ಬಿಳಿವಸ್ತ್ರ,” NIBV] ಧರಿಸಿಕೊಂಡಿದ್ದ ಇಪ್ಪತ್ತುನಾಲ್ಕು ಮಂದಿ ಹಿರಿಯರು ಕೂತಿದ್ದರು; ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು” ಎಂಬುದನ್ನೂ ಜ್ಞಾಪಿಸಿಕೊಳ್ಳಿರಿ. (ಪ್ರಕಟನೆ 3:5; 4:4) ಹೀಗೆ, ಯುದ್ಧ, ಕ್ಷಾಮ ಮತ್ತು ವ್ಯಾಧಿ ಈ ಭೂಮಿಯನ್ನು ಧ್ವಂಸಗೊಳಿಸಲು ಆರಂಭಿಸಿದ ಬಳಿಕ, ವೇದಿಯ ಬುಡದಲ್ಲಿದ್ದ ರಕ್ತದಿಂದ ಪ್ರತಿನಿಧೀಕರಿಸಲ್ಪಟ್ಟ ಆ 1,44,000 ಮಂದಿ ಸದಸ್ಯರಲ್ಲಿ ಸತ್ತವರು, ಸ್ವರ್ಗೀಯ ಜೀವನಕ್ಕೆ ಎಬ್ಬಿಸಲ್ಪಟ್ಟು ಸಾಂಕೇತಿಕವಾದ ಬಿಳಿ ನಿಲುವಂಗಿಗಳನ್ನು ಧರಿಸಿರುತ್ತಾರೆ.
17 ಆ ಹೊಸದಾಗಿ ಪುನರುತ್ಥಾನ ಹೊಂದಿದವರು ‘ವಿಶ್ರಮಿಸಿಕೊಂಡಿರಬೇಕು.’ ಅಂದರೆ, ಅವರು ದೇವರ ಸೇಡಿನ ದಿನಕ್ಕಾಗಿ ತಾಳ್ಮೆಯಿಂದ ಕಾಯುತ್ತಿರಬೇಕು. ಭೂಮಿಯ ಮೇಲೆ ಇನ್ನೂ ಇರುವ ಅವರ ಜೊತೆಯ ‘ದಾಸರಾದ’ ಅಭಿಷಿಕ್ತ ಕ್ರೈಸ್ತರು ಪರೀಕ್ಷೆಯಲ್ಲಿ ತಮ್ಮ ಸಮಗ್ರತೆಯನ್ನು ಇನ್ನೂ ರುಜುಪಡಿಸಬೇಕಾಗಿದೆ. ದೈವಿಕ ತೀರ್ಪಿನ ಸಮಯ ಬರುವಾಗ ಅವರ ‘ವಿಶ್ರಮವು’ ಮುಗಿದುಹೋಗುವುದು. (ಪ್ರಕಟನೆ 7:3) ಆ ಸಮಯದಲ್ಲಿ, ನಿರ್ದೋಷಿ ಕ್ರೈಸ್ತರ ರಕ್ತವನ್ನು ಸುರಿಸಿದವರ ಮತ್ತು ದುಷ್ಟರ ಮೇಲೆ ನಾಶನವನ್ನು ತರುವುದರಲ್ಲಿ ಆ ಪುನರುತ್ಥಿತರು ಕರ್ತನಾದ ಯೇಸು ಕ್ರಿಸ್ತನನ್ನು ಜೊತೆಗೂಡುವರು.—2 ಥೆಸಲೊನೀಕ 1:7-10.
ಇದರಲ್ಲಿ ನಮಗಿರುವ ಪಾಠ
18 ದೇವರ ವಾಕ್ಯವು ಪ್ರಥಮ ಪುನರುತ್ಥಾನದ ನಿಷ್ಕೃಷ್ಟ ಸಮಯವನ್ನು ತಿಳಿಸುವುದಿಲ್ಲ ನಿಜ. ಆದರೆ, ಆ ಪುನರುತ್ಥಾನವು ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಒಂದು ಕಾಲಾವಧಿಯೊಳಗೆ ನಡೆಯುತ್ತದೆ ಎಂಬುದನ್ನು ಅದು ತಿಳಿಯಪಡಿಸುತ್ತದೆ. ಪುನರುತ್ಥಾನ ಹೊಂದುವವರಲ್ಲಿ ಪ್ರಥಮರು ಕ್ರಿಸ್ತನ ಸಾನ್ನಿಧ್ಯವು ಪ್ರಾರಂಭಿಸುವುದಕ್ಕೆ ಮೊದಲು ಸತ್ತಿರುವ ಅಭಿಷಿಕ್ತ ಕ್ರೈಸ್ತರು. ಆ ಸಾನ್ನಿಧ್ಯವು ಪ್ರಗತಿಹೊಂದುತ್ತಿರುವಾಗ, ನಂಬಿಗಸ್ತಿಕೆಯಿಂದ ತಮ್ಮ ಭೂಯಾತ್ರೆಯನ್ನು ತೀರಿಸುವ ಅಭಿಷಿಕ್ತ ಕ್ರೈಸ್ತರು “ರೆಪ್ಪೆಬಡಿಯುವಷ್ಟರೊಳಗಾಗಿ” ಬಲಿಷ್ಠರಾದ ಆತ್ಮಜೀವಿಗಳಾಗಿ ಮಾರ್ಪಡುವರು. (1 ಕೊರಿಂಥ 15:52) ಹರ್ಮಗೆದೋನ್ ಯುದ್ಧಕ್ಕೆ ಮುಂಚೆ ಅಭಿಷಿಕ್ತರೆಲ್ಲರೂ ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆಯುವರೋ? ಅದು ನಮಗೆ ಗೊತ್ತಿಲ್ಲ. ಆದರೂ, ದೇವರ ತಕ್ಕ ಸಮಯದಲ್ಲಿ 1,44,000 ಮಂದಿಯಲ್ಲಿ ಎಲ್ಲರೂ ಸ್ವರ್ಗೀಯ ಚಿಯೋನ್ ಬೆಟ್ಟದ ಮೇಲೆ ನಿಲ್ಲುವರೆಂಬುದು ನಮಗೆ ಗೊತ್ತಿದೆ.
19 ಈ 1,44,000 ಮಂದಿಯಲ್ಲಿ ಹೆಚ್ಚಿನವರು ಈಗಾಗಲೇ ಕ್ರಿಸ್ತನೊಂದಿಗೆ ಒಂದಾಗಿದ್ದಾರೆಂಬುದೂ ನಮಗೆ ತಿಳಿದದೆ. ಆ ಮಂದಿಯಲ್ಲಿ ಈಗ ಭೂಮಿಯ ಮೇಲೆ ಇರುವವರು ಕೇವಲ ಕೆಲವರೇ. ದೇವರ ನ್ಯಾಯತೀರ್ಪು ಜಾರಿಗೆ ಬರುವ ಸಮಯವು ಧಾವಿಸಿ ಬರುತ್ತಾ ಇದೆ ಎಂಬುದಕ್ಕೆ ಇದೆಷ್ಟು ಶಕ್ತಿಯುತವಾದ ಸೂಚನೆಯಾಗಿದೆ! ಸೈತಾನನ ಜಾಗತಿಕ ವ್ಯವಸ್ಥೆ ಬೇಗನೆ ನಾಶಗೊಳ್ಳುವದು. ಸೈತಾನನು ಅಧೋಲೋಕಕ್ಕೆ ದೊಬ್ಬಲ್ಪಡುವನು. ಆಗ ಸಾರ್ವತ್ರಿಕ ಪುನರುತ್ಥಾನ ಆರಂಭಗೊಳ್ಳಬಲ್ಲದು. ಯೇಸುವಿನ ವಿಮೋಚನಾಮೌಲ್ಯ ಯಜ್ಞದ ಆಧಾರದ ಮೇರೆಗೆ ನಂಬಿಗಸ್ತ ಮಾನವರು ಆದಾಮನು ಕಳೆದುಕೊಂಡಂಥ ಪರಿಪೂರ್ಣತೆಗೆ ಏರಿಸಲ್ಪಡಬಲ್ಲರು. ಆದಿಕಾಂಡ 3:15ರಲ್ಲಿ ದಾಖಲೆಯಾಗಿರುವ ಯೆಹೋವನ ಪ್ರವಾದನೆಯು ಆಶ್ಚರ್ಯಕರವಾಗಿ ನೆರವೇರುತ್ತಿದೆ. ಈ ಸಮಯಗಳಲ್ಲಿ ಜೀವಿಸುವುದು ಅದೆಷ್ಟು ಮಹಾನ್ ಘನತೆಯುಳ್ಳದ್ದು! (w07 1/1)
[ಪಾದಟಿಪ್ಪಣಿಗಳು]
a ಬೇರೆ ಎಂಟು ಸಂಭವಗಳನ್ನು, 1 ಅರಸುಗಳು 17:21-23; 2 ಅರಸುಗಳು 4:32-37; 13:21; ಮಾರ್ಕ 5:35, 41-43; ಲೂಕ 7:11-17; 24:34; ಯೋಹಾನ 11:43-45; ಅ. ಕೃತ್ಯಗಳು 9:36-42ರಲ್ಲಿ ನೋಡಿ.
b ಕ್ರಿಸ್ತನ ಸಾನ್ನಿಧ್ಯ 1914ರಲ್ಲಿ ಆರಂಭವಾಯಿತು ಎಂಬುದಕ್ಕಾಗಿರುವ ಶಾಸ್ತ್ರಧಾರವನ್ನು ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ. 215-18ರಲ್ಲಿ ನೋಡಿ.
c ಆ 24 ಮಂದಿ ಹಿರಿಯರು ತಮ್ಮ ಸ್ವರ್ಗೀಯ ಸ್ಥಾನದಲ್ಲಿರುವ ಅಭಿಷಿಕ್ತ ಕ್ರೈಸ್ತರನ್ನು ಪ್ರತಿನಿಧೀಕರಿಸುತ್ತಾರೆಂದು ನಮಗೆ ತಿಳಿದಿರುವುದು ಹೇಗೆ ಎಂಬ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ ಪುಟ 77ನ್ನು ನೋಡಿ.
ವಿವರಿಸಬಲ್ಲಿರಾ?
‘ಪ್ರಥಮ ಪುನರುತ್ಥಾನದ’ ಕಾಲನಿಯಮವನ್ನು ಗ್ರಹಿಸಲು ಈ ಕೆಳಗಿನ ಶಾಸ್ತ್ರವಚನಗಳು ನಮಗೆ ಹೇಗೆ ಸಹಾಯಮಾಡುತ್ತವೆ?
• 1 ಕೊರಿಂಥ 15:23; 1 ಥೆಸಲೊನೀಕ 4:15-17
[ಅಧ್ಯಯನ ಪ್ರಶ್ನೆಗಳು]
1, 2. (ಎ) ಸತ್ತಿರುವವರಿಗೆ ಯಾವ ನಿರೀಕ್ಷೆಯಿದೆ? (ಬಿ) ನೀವು ಯಾವ ಆಧಾರದ ಮೇರೆಗೆ ಪುನರುತ್ಥಾನವನ್ನು ನಂಬುತ್ತೀರಿ? (ಪಾದಟಿಪ್ಪಣಿ ನೋಡಿ.)
3. ಯೋಹಾನ 5:28ರಲ್ಲಿರುವ ಯೇಸುವಿನ ಮಾತುಗಳಿಂದ ನೀವು ವ್ಯಕ್ತಿಪರವಾಗಿ ಯಾವ ಸಾಂತ್ವನವನ್ನು ಪಡೆದುಕೊಂಡಿರುತ್ತೀರಿ ಮತ್ತು ಏಕೆ?
4, 5. ಯಾವ ವಿಭಿನ್ನ ಪುನರುತ್ಥಾನಗಳನ್ನು ಬೈಬಲ್ ತಿಳಿಯಪಡಿಸುತ್ತದೆ ಮತ್ತು ಈ ಲೇಖನದಲ್ಲಿ ಯಾವ ಪುನರುತ್ಥಾನವನ್ನು ಚರ್ಚಿಸಲಾಗುವುದು?
6, 7. (ಎ) ಅಭಿಷಿಕ್ತ ಕ್ರೈಸ್ತರು ಸ್ವರ್ಗಕ್ಕೆ ಹೋಗುವ ಮೊದಲು ಏನು ಸಂಭವಿಸುವುದು ಅಗತ್ಯ? (ಬಿ) ಅವರು ಯಾವ ವಿಧದ ದೇಹದಿಂದ ಪುನರುತ್ಥಾನ ಹೊಂದುವರು?
8. ದೇವರು 1,44,000 ಮಂದಿಯನ್ನು ವಿವಿಧ ಧರ್ಮಗಳಿಂದ ಆರಿಸಿಕೊಳ್ಳುವುದಿಲ್ಲವೆಂದು ನಮಗೆ ಹೇಗೆ ಗೊತ್ತು?
9. ಪ್ರಥಮ ಪುನರುತ್ಥಾನ ಆರಂಭಗೊಳ್ಳುವ ಸಮಯವನ್ನು ಅಂದಾಜುಮಾಡಲು ಪ್ರಕಟನೆ 12:7 ಮತ್ತು 17:14 ನಮಗೆ ಹೇಗೆ ಸಹಾಯಮಾಡುತ್ತವೆ?
10, 11. (ಎ) ಆ 24 ಮಂದಿ ಹಿರಿಯರು ಯಾರು ಮತ್ತು ಅವರಲ್ಲಿ ಒಬ್ಬನು ಯೋಹಾನನಿಗೆ ಏನು ತಿಳಿಯಪಡಿಸುತ್ತಾನೆ? (ಬಿ) ಇದರಿಂದ ನಾವೇನು ತೀರ್ಮಾನಿಸಬಲ್ಲೆವು?
12. ಇಸವಿ 1918ರ ವಸಂತಕಾಲವು ಪ್ರಥಮ ಪುನರುತ್ಥಾನ ಆರಂಭಗೊಂಡ ಸಮಯವಾಗಿರಸಾಧ್ಯವಿದೆ ಎಂದು ಏಕೆ ವೀಕ್ಷಿಸಬಹುದೆಂಬುದನ್ನು ವಿವರಿಸಿರಿ.
13. ಕ್ರಿಸ್ತನ ಸಾನ್ನಿಧ್ಯದ ಆರಂಭದಲ್ಲಿ ಪ್ರಥಮ ಪುನರುತ್ಥಾನವು ಪ್ರಾರಂಭವಾಯಿತೆಂದು 1 ಥೆಸಲೊನೀಕ 4:15-17 ಯಾವ ವಿಧದಲ್ಲಿ ಸೂಚಿಸುತ್ತದೆ?
14. (ಎ) ಪ್ರಕಟನೆ 6ನೆಯ ಅಧ್ಯಾಯದಲ್ಲಿ ದಾಖಲೆಯಾಗಿರುವ ದರ್ಶನಗಳು ಯಾವಾಗ ನೆರವೇರಿದವು? (ಬಿ) ಪ್ರಕಟನೆ 6:9ರಲ್ಲಿ ಏನನ್ನು ಚಿತ್ರಿಸಲಾಗಿದೆ?
15, 16. ಪ್ರಕಟನೆ 6:10, 11ರ ಮಾತುಗಳು ಪ್ರಥಮ ಪುನರುತ್ಥಾನಕ್ಕೆ ಏಕೆ ಅನ್ವಯಿಸುತ್ತದೆಂದು ವಿವರಿಸಿ.
17. ಬಿಳಿ ನಿಲುವಂಗಿಗಳನ್ನು ಪಡೆಯುವರು ‘ವಿಶ್ರಮಿಸುವುದು’ ಯಾವ ಅರ್ಥದಲ್ಲಿ?
18, 19. (ಎ) ಪ್ರಥಮ ಪುನರುತ್ಥಾನವು ಈಗ ಮುಂದುವರಿಯುತ್ತಿದೆ ಎಂದು ತೀರ್ಮಾನಿಸುವುದಕ್ಕೆ ಯಾವ ಕಾರಣಗಳು ನಿಮಗಿರಬಲ್ಲದು? (ಬಿ) ಪ್ರಥಮ ಪುನರುತ್ಥಾನದ ವಿಷಯದಲ್ಲಿ ನಿಮಗಿರುವ ತಿಳಿವಳಿಕೆಯು ನಿಮಗೆ ಯಾವ ಅನಿಸಿಕೆಯನ್ನು ತರುತ್ತದೆ?
[ಪುಟ 28ರಲ್ಲಿರುವ ಚಿತ್ರಗಳು]
ಮಾನವರನ್ನು ಸತ್ತವರೊಳಗಿಂದ ಸಾರ್ವತ್ರಿಕವಾಗಿ ಎಬ್ಬಿಸುವ ಮೊದಲು ಯಾವ ಪುನರುತ್ಥಾನಗಳು ನಡೆಯುತ್ತವೆ?