ಪರಿಶಿಷ್ಟ
‘ಮಹಾ ಬಾಬೆಲ್’ ಯಾರೆಂಬುದನ್ನು ಗುರುತಿಸುವುದು
ಪ್ರಕಟನೆ ಪುಸ್ತಕದಲ್ಲಿ ಅಕ್ಷರಾರ್ಥವಾಗಿ ತೆಗೆದುಕೊಳ್ಳಬಾರದಂಥ ಅಭಿವ್ಯಕ್ತಿಗಳಿವೆ. (ಪ್ರಕಟನೆ 1:1) ದೃಷ್ಟಾಂತಕ್ಕೆ, ಹಣೆಯ ಮೇಲೆ “ಬಾಬೆಲೆಂಬ ಮಹಾ ನಗರಿ” ಎಂಬ ಹೆಸರಿರುವ ಒಬ್ಬ ಸ್ತ್ರೀಯ ಕುರಿತು ಅದು ಮಾತಾಡುತ್ತದೆ. ಆಕೆ “ಸಮೂಹ ಜನ”ಗಳ ಮೇಲೆ ಕುಳಿತಿರುವುದಾಗಿ ಹೇಳಲ್ಪಟ್ಟಿದೆ. (ಪ್ರಕಟನೆ 17:1, 5, 15) ಅಕ್ಷರಾರ್ಥವಾದ ಸ್ತ್ರೀಯೊಬ್ಬಳು ಇದನ್ನು ಮಾಡುವುದು ಅಸಾಧ್ಯವಾಗಿರುವುದರಿಂದ, ಈ ‘ಮಹಾ ಬಾಬೆಲ್’ ಸಾಂಕೇತಿಕ ಸ್ತ್ರೀಯಾಗಿರಲೇಬೇಕು. ಹಾಗಾದರೆ, ಈ ಸಾಂಕೇತಿಕ ವೇಶ್ಯೆಯು ಏನನ್ನು ಪ್ರತಿನಿಧಿಸುತ್ತಾಳೆ?
ಪ್ರಕಟನೆ 17:18 ರಲ್ಲಿ ಇದೇ ಸಾಂಕೇತಿಕ ಸ್ತ್ರೀಯನ್ನು, “ಭೂರಾಜರ ಮೇಲೆ ಅಧಿಕಾರ ಹೊಂದಿರುವ ಮಹಾನಗರಿ” ಎಂದು ವರ್ಣಿಸಲಾಗಿದೆ. “ನಗರಿ” ಎಂಬ ಪದವು ಜನರ ಒಂದು ಸಂಘಟಿತ ಸಮುದಾಯವನ್ನು ಸೂಚಿಸುತ್ತದೆ. ಈ ‘ಮಹಾನಗರಿಗೆ’ “ಭೂರಾಜರ ಮೇಲೆ” ನಿಯಂತ್ರಣವಿರುವುದರಿಂದ, ಮಹಾ ಬಾಬೆಲೆಂಬ ಈ ಸ್ತ್ರೀಯು ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯವಾಗಿರುವ ಪ್ರಭಾವಶಾಲಿಯಾದ ಒಂದು ಸಂಘಟನೆಯಾಗಿರಲೇಬೇಕು. ಇದನ್ನು ಸರಿಯಾಗಿಯೇ ಒಂದು ಜಾಗತಿಕ ಸಾಮ್ರಾಜ್ಯವಾಗಿ ಕರೆಯಸಾಧ್ಯವಿದೆ. ಆದರೆ ಯಾವ ರೀತಿಯ ಸಾಮ್ರಾಜ್ಯ? ಅದು ಒಂದು ಧಾರ್ಮಿಕ ಸಾಮ್ರಾಜ್ಯವೇ. ಪ್ರಕಟನೆ ಪುಸ್ತಕದಲ್ಲಿ ಇದಕ್ಕೆ ಸಂಬಂಧಪಟ್ಟ ಕೆಲವು ಭಾಗಗಳು ನಾವು ಹೇಗೆ ಈ ತೀರ್ಮಾನಕ್ಕೆ ಬರುವಂತೆ ಮಾಡುತ್ತವೆಂಬುದನ್ನು ಗಮನಿಸಿರಿ.
ಒಂದು ಸಾಮ್ರಾಜ್ಯವು ರಾಜಕೀಯ, ವಾಣಿಜ್ಯ ಇಲ್ಲವೆ ಧಾರ್ಮಿಕ ಸಾಮ್ರಾಜ್ಯವಾಗಿರಬಲ್ಲದು. ಮಹಾ ಬಾಬೆಲೆಂಬ ಆ ಸ್ತ್ರೀಯು ರಾಜಕೀಯ ಸಾಮ್ರಾಜ್ಯವಾಗಿರುವುದಿಲ್ಲ, ಏಕೆಂದರೆ “ಭೂರಾಜರು” ಅಂದರೆ ಈ ಲೋಕದ ರಾಜಕೀಯ ಘಟಕಗಳು ಆಕೆಯೊಂದಿಗೆ “ಜಾರತ್ವ ಮಾಡಿದರು” ಎಂದು ದೇವರ ವಾಕ್ಯ ಹೇಳುತ್ತದೆ. ಆಕೆಯ ಜಾರತ್ವವು ಆಕೆ ಭೂಪ್ರಭುಗಳ ಜೊತೆಯಲ್ಲಿ ಮಾಡಿರುವ ಮೈತ್ರಿಗಳನ್ನು ಸೂಚಿಸುತ್ತದೆ ಮತ್ತು ಈ ಕಾರಣದಿಂದಲೇ ಆಕೆಯನ್ನು “ಮಹಾ ಜಾರಸ್ತ್ರೀ” ಎಂದು ಕರೆಯಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.—ಪ್ರಕಟನೆ 17:1, 2; ಯಾಕೋಬ 4:4.
ಈ ಮಹಾ ಬಾಬೆಲ್ ಒಂದು ವಾಣಿಜ್ಯ ಸಾಮ್ರಾಜ್ಯವಾಗಿರುವುದೂ ಅಸಾಧ್ಯ, ಏಕೆಂದರೆ ಆ ವಾಣಿಜ್ಯ ಘಟಕಗಳನ್ನು ಪ್ರತಿನಿಧಿಸುವ “ಭೂಲೋಕದ ವರ್ತಕರು” ಆಕೆಯ ನಾಶನದ ಸಮಯದಲ್ಲಿ ಗೋಳಾಡುತ್ತಿರುವರು. ವಾಸ್ತವದಲ್ಲಿ, ರಾಜರು ಮತ್ತು ವರ್ತಕರು—ಹೀಗೆ ಈ ಎರಡೂ ಗುಂಪುಗಳು “ದೂರದಲ್ಲಿ” ನಿಂತಿರುವುದಾಗಿ ವರ್ಣಿಸಲಾಗಿದೆ. (ಪ್ರಕಟನೆ 18:3, 9, 10, 15-17) ಆದಕಾರಣ, ಈ ಮಹಾ ಬಾಬೆಲ್ ರಾಜಕೀಯ ಅಥವಾ ವಾಣಿಜ್ಯ ಸಾಮ್ರಾಜ್ಯವಲ್ಲ, ಅದು ಧಾರ್ಮಿಕ ಸಾಮ್ರಾಜ್ಯವೆಂದು ತೀರ್ಮಾನಿಸುವುದು ನ್ಯಾಯಸಮ್ಮತವಾಗಿದೆ.
ಮಹಾ ಬಾಬೆಲಿನ ಧಾರ್ಮಿಕ ಗುರುತು, ಆಕೆಯು “ಮಾಟ [“ಪ್ರೇತವ್ಯವಹಾರದ ಆಚಾರಗಳು,” NW]ದಿಂದ” ಎಲ್ಲ ಜನಾಂಗಗಳನ್ನು ದಾರಿತಪ್ಪಿಸುತ್ತಾಳೆಂಬ ಹೇಳಿಕೆಯಿಂದ ಇನ್ನೂ ಹೆಚ್ಚು ದೃಢೀಕರಿಸಲ್ಪಟ್ಟಿದೆ. (ಪ್ರಕಟನೆ 18:23) ಪ್ರೇತವ್ಯವಹಾರದ ಸಕಲ ರೂಪಗಳು ಧಾರ್ಮಿಕವೂ, ದೆವ್ವಪ್ರೇರಿತವೂ ಆಗಿರುವುದರಿಂದ, ಬೈಬಲು ಮಹಾ ಬಾಬೆಲನ್ನು “ದೆವ್ವಗಳ ವಾಸಸ್ಥಾನ”ವೆಂದು ಕರೆದಿರುವುದರಲ್ಲಿ ಆಶ್ಚರ್ಯವೇನಿಲ್ಲ. (ಪ್ರಕಟನೆ 18:2; ಧರ್ಮೋಪದೇಶಕಾಂಡ 18:10-12) ಈ ಸಾಮ್ರಾಜ್ಯವು ಕ್ರಿಯಾಶೀಲವಾಗಿ ಸತ್ಯಧರ್ಮವನ್ನು ವಿರೋಧಿಸುತ್ತಾ ‘ಪ್ರವಾದಿಗಳನ್ನು ಮತ್ತು ದೇವಜನರನ್ನು’ ಹಿಂಸಿಸುತ್ತದೆಂದೂ ವರ್ಣಿಸಲಾಗಿದೆ. (ಪ್ರಕಟನೆ 18:24) ವಾಸ್ತವದಲ್ಲಿ, ಸತ್ಯಧರ್ಮವನ್ನು ಮಹಾ ಬಾಬೆಲ್ ಎಷ್ಟು ಕಟುವಾಗಿ ದ್ವೇಷಿಸುತ್ತಾಳೆಂದರೆ, ಆಕೆ ‘ಯೇಸುವಿಗೋಸ್ಕರ ಸಾಕ್ಷಿಕೊಡುವ’ ಜನರನ್ನು ತೀವ್ರವಾಗಿ ಹಿಂಸಿಸುವುದು ಮಾತ್ರವಲ್ಲ, ಅವರನ್ನು ಕೊಲ್ಲುತ್ತಾಳೆ ಸಹ. (ಪ್ರಕಟನೆ 17:6) ಈ ಕಾರಣದಿಂದ, ಮಹಾ ಬಾಬೆಲೆಂಬ ಹೆಸರುಳ್ಳ ಈ ಸ್ತ್ರೀಯು, ಯೆಹೋವ ದೇವರಿಗೆ ವಿರೋಧವಾಗಿ ನಿಂತಿರುವ ಸಮಸ್ತ ಧರ್ಮಗಳನ್ನು ಒಳಗೊಂಡ ಸುಳ್ಳುಧರ್ಮದ ಲೋಕ ಸಾಮ್ರಾಜ್ಯವನ್ನು ಪ್ರತಿನಿಧಿಸುತ್ತಾಳೆಂಬುದು ಸುವ್ಯಕ್ತ.