“ಅಧರ್ಮ ಸ್ವರೂಪನ” ವಿರುದ್ಧ ದೇವರ ನ್ಯಾಯತೀರ್ಪು
“ಒಳ್ಳೇ ಫಲಗಳನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ.”—ಮತ್ತಾಯ 7:19
1, 2. ಅಧರ್ಮ ಸ್ವರೂಪನೆಂದರೇನು ಮತ್ತು ಅದು ಹೇಗೆ ವಿಕಾಸಗೊಂಡಿತು?
ಅಪೊಸ್ತಲ ಪೌಲನು “ಅಧರ್ಮ ಸ್ವರೂಪ”ನ ತೋರಿಬರುವಿಕೆಯ ಕುರಿತು ಮುಂತಿಳಿಸಲು ದೇವರಿಂದ ಪ್ರೇರಿತನಾದಾಗ, ಅವನ ದಿನಗಳಲ್ಲಿಯೂ ಆ ತೋರಿಬರುವಿಕೆ ಆರಂಭವಾಗಿತ್ತೆಂದು ಪೌಲನು ಹೇಳಿದನು. ಹಿಂದಿನ ಲೇಖನ ತಿಳಿಸಿರುವಂತೆ, ನಿಜಕ್ರೈಸ್ತತ್ವವನ್ನು ಭ್ರಷ್ಟಗೊಳಿಸುವುದರಲ್ಲಿ ನಾಯಕತ್ವ ವಹಿಸುವ ಒಂದು ವ್ಯಕ್ತಿವರ್ಗದ ಕುರಿತು ಅವನು ಮಾತಾಡಿದನು. ಈ ಸತ್ಯದಿಂದ ತೊಲಗುವಿಕೆಯು ಒಂದನೆಯ ಶತಕದ ಉತ್ತರಾರ್ಧದಲ್ಲಿ, ವಿಶೇಷವಾಗಿ, ಕೊನೆಯ ಅಪೊಸ್ತಲರ ಮರಣಾನಂತರ ಆರಂಭವಾಯಿತು. ಆಗ ಈ ಅಧರ್ಮಿ ವರ್ಗವು ದೇವರ ವಾಕ್ಯಕ್ಕೆ ವಿರುದ್ಧವಾದ ತತ್ವ ಮತ್ತು ಆಚರಣೆಯನ್ನು ಒಳತಂದಿತು.—2 ಥೆಸಲೊನೀಕ 2:3, 7; ಅಪೊಸ್ತಲರ ಕೃತ್ಯ 20:29, 30; 2 ತಿಮೊಥಿ 3:16, 17; 4:3, 4.
2 ಸಕಾಲದಲ್ಲಿ, ಈ ಅಧರ್ಮಿ ವರ್ಗ ಕ್ರೈಸ್ತ ಪ್ರಪಂಚದ ಪುರೋಹಿತ ವರ್ಗವಾಗಿ ವಿಕಾಸಗೊಂಡಿತು. ನಾಲ್ಕನೆಯ ಶತಮಾನದಲ್ಲಿ ರೋಮನ್ ಚಕ್ರವರ್ತಿ ಕಾನ್ಸ್ಟೆಂಟೀನನಿಂದ ಈ ಧರ್ಮಭ್ರಷ್ಟ ಚರ್ಚುಗಳು ವಿಧರ್ಮಿ ಸರಕಾರಕ್ಕೆ ಸಂಯೋಜಿಸಲ್ಪಟ್ಟಾಗ ಅದರ ಬಲ ಸ್ಥಿರವಾಯಿತು. ಮತ್ತು ಕ್ರೈಸ್ತ ಪ್ರಪಂಚವು ಬಹು ಪಂಗಡಗಳಾಗಿ ಮುರಿದಾಗ ಪುರೋಹಿತರು ತಮ್ಮನ್ನು ಲೌಕಿಕರಿಂದ ಮಾತ್ರವಲ್ಲ, ಅನೇಕ ವೇಳೆ ಐಹಿಕ ಪ್ರಭುಗಳಿಂದಲೂ ಮೇಲೇರಿಸಿಕೊಂಡರು.—2 ಥೆಸಲೊನೀಕ 2:4.
3. ಈ ನಿಯಮರಾಹಿತ್ಯ ಪುರುಷನ ಗತಿಯೇನಾಗುವುದು?
3 ಈ ನಿಯಮರಾಹಿತ್ಯ ಪುರುಷನ ಗತಿ ಏನಾಗಲಿತ್ತು? ಪೌಲನು ಮುಂತಿಳಿಸಿದ್ದು: “ಆ ಅಧರ್ಮ ಸ್ವರೂಪನು ಕಾಣ ಬರುವನು; ಅವನನ್ನು ಯೇಸು ಕರ್ತನು . . . ತನ್ನ ಪ್ರತ್ಯಕ್ಷತೆಯ ಪ್ರಭಾವದಿಂದ ಸಂಹರಿಸುವನು.” (2 ಥೆಸಲೊನೀಕ 2:8) ದೇವರು ಸೈತಾನನ ಸರ್ವ ವ್ಯವಸ್ಥೆಯನ್ನು ಅಂತ್ಯಗೊಳಿಸುವಾಗ ಈ ಪುರೋಹಿತರು ನಾಶಗೊಳ್ಳುವರೆಂದೇ ಇದರ ಅರ್ಥ. ದೇವರು ತನ್ನ ಸ್ವರ್ಗೀಯ ಅರಸು ಕ್ರಿಸ್ತ ಯೇಸುವನ್ನು ಸಂಹರಿಸುವ ದೇವದೂತ ಸೈನ್ಯದ ನಾಯಕನಾಗುವಂತೆ ಉಪಯೋಗಿಸುವನು. (2 ಥೆಸಲೊನೀಕ 1:6-9; ಪ್ರಕಟನೆ 19:11-21) ಈ ಪುರೋಹಿತರು ದೇವರನ್ನೂ ಕ್ರಿಸ್ತನನ್ನೂ ಅಗೌರವಿಸಿ ಲಕ್ಷಾಂತರ ಜನರನ್ನು ಸತ್ಯಾರಾಧನೆಯಿಂದ ದಾರಿತಪ್ಪಿಸಿದರಿಂದಲೇ ಈ ಗತಿ ಅವರಿಗಾಗಿ ಕಾದಿದೆ.
4. ಈ ನಿಯಮರಾಹಿತ್ಯ ಪುರುಷನನ್ನು ಯಾವ ಮೂಲಸೂತ್ರದಿಂದ ನ್ಯಾಯ ತೀರಿಸಲಾಗುವದು?
4 ಈ ನಿಯಮರಾಹಿತ್ಯ ಪುರುಷನ ನ್ಯಾಯ ತೀರ್ಪು ಯಾವ ಮೂಲ ತತ್ವದ ಆಧಾರದ ಮೇಲೆ ಕೊಡಲ್ಪಡುವದೆಂದು ಯೇಸು ತಿಳಿಸುತ್ತಾ ಹೇಳುವುದು: “ಸುಳ್ಳು ಪ್ರವಾದಿಗಳ ವಿಷಯ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ. ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳು ಗಿಡಗಳಲ್ಲಿ ದ್ರಾಕ್ಷೇಹಣ್ಣುಗಳನ್ನೂ ಮದ್ದುಗುಣಿಕೇ ಗಿಡಗಳಲ್ಲಿ ಅಂಜೂರಗಳನ್ನೂ ಕೊಯ್ಯುವದುಂಟೋ? ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು. ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು. ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ. . . ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರೂ ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ. ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.”—ಮತ್ತಾಯ 7:15-21; ಮತ್ತು ತೀತ 1:16; 1 ಯೋಹಾನ 2:17ನ್ನೂ ನೋಡಿ.
ಶ್ರೇಷ್ಠ ಕ್ರಿಸ್ತೀಯ ಫಲ
5. ಶ್ರೇಷ್ಠ ಕ್ರಿಸ್ತೀಯ ಫಲದ ಅಸ್ತಿವಾರ ಯಾವುದು, ಮತ್ತು ಒಂದು ಮೂಲ ಆಜ್ಞೆ ಯಾವುದು?
5 ಶ್ರೇಷ್ಠ ಕ್ರಿಸ್ತೀಯ ಫಲದ ಅಸ್ತಿವಾರವನ್ನು 1ನೇ ಯೋಹಾನ 5:3 ಹೀಗೆ ಹೇಳುತ್ತದೆ: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈ ಕೊಂಡು ನಡಿಯುವದೇ.” ಮತ್ತು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬದು ಇನ್ನೊಂದು ಮೂಲ ಆಜ್ಞೆ. (ಮತ್ತಾಯ 22:39) ಹೀಗೆ, ನಿಜ ದೇವರ ಸೇವಕರು, ತಮ್ಮ ನೆರೆಯವರ ಕುಲ ಮತ್ತು ರಾಷ್ಟ್ರೀಯತೆ ಯಾವುದೇ ಇರಲಿ, ಅವರನ್ನು ಪ್ರೀತಿಸತಕ್ಕದ್ದು.—ಮತ್ತಾಯ 5:43-48; ರೋಮಾಪುರ 12:17-21.
6. ವಿಶೇಷವಾಗಿ ಯಾರೆಡೆಗೆ ಕ್ರೈಸ್ತ ಪ್ರೀತಿಯನ್ನು ತೋರಿಸ ತಕ್ಕದ್ದು?
6 ಆದರೆ ವಿಶೇಷವಾಗಿ ದೇವರ ಸೇವಕರುಗಳಿಗೆ ತಮ್ಮ ಆತ್ಮಿಕ ಸಹೋದರರಲ್ಲಿ ಪ್ರೀತಿ ಇರತಕ್ಕದ್ದು. “ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು. ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ.” (1 ಯೋಹಾನ 4:20, 21) ಈ ಪ್ರೀತಿ, ಯೇಸು ಹೇಳಿದಂತೆ, ನಿಜ ಕ್ರೈಸ್ತರನ್ನು ಗುರುತಿಸುವ ಚಿಹ್ನೆಯಾಗಿದೆ: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35; ಮತ್ತು ರೋಮಾಪುರ 14:19; ಗಲಾತ್ಯ 6:10; 1 ಯೋಹಾನ 3:10-12 ಸಹ ನೋಡಿ.
7. ನಿಜ ಕ್ರೈಸ್ತರು ಲೋಕವ್ಯಾಪಕವಾಗಿ ಹೇಗೆ ಬಿಗಿಯಲ್ಪಟ್ಟಿದ್ದಾರೆ?
7 ಸಹೋದರ ಪ್ರೀತಿಯೇ ದೇವರ ಸೇವಕರನ್ನು ಏಕತೆಯಲ್ಲಿ ಕಟ್ಟುವ “ಅಂಟು”: “ಪ್ರೀತಿಯನ್ನು ಧರಿಸಿಕೊಳ್ಳಿರಿ. ಅದು ಸಮಸ್ತವನ್ನು ಪೂರ್ಣಮಾಡುವ ಬಂಧವಾಗಿದೆ.” (ಕೊಲೊಸ್ಸೆ 3:14) ಮತ್ತು ದೇವರ ಸೇವಕರು ತಮ್ಮ ಸಹೋದರರೊಂದಿಗೆ ಲೋಕಾದ್ಯಂತ ಐಕ್ಯತೆಯಲ್ಲಿರತಕ್ಕದ್ದು. ಏಕೆಂದರೆ ದೇವರ ವಾಕ್ಯ, “ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು. ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿ ಹೊಂದಿಕೆಯಿಂದಿರಬೇಕು” ಎಂದು ಆಜ್ಞಾಪಿಸುತ್ತದೆ. (1 ಕೊರಿಂಥ 1:10) ಈ ಪ್ರೀತಿ ಮತ್ತು ಐಕ್ಯವನ್ನು ಭೂವ್ಯಾಪಕವಾಗಿ ಇಟ್ಟುಕೊಳ್ಳಬೇಕಾದರೆ ಈ ಲೋಕದ ರಾಜಕೀಯ ವಿಚಾರಗಳಲ್ಲಿ ಅವರು ತಟಸ್ಥರಾಗಿರಬೇಕು. “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ” ಎಂದು ಯೇಸು ಹೇಳಿದ್ದಾನೆ.—ಯೋಹಾನ 17:16.
8. ಕ್ರೈಸ್ತರು ಏನು ಮಾಡಬೇಕೆಂದು ಯೇಸು ಹೇಗೆ ತೋರಿಸಿದನು?
8 ಇದು ಎಷ್ಟರ ಮಟ್ಟಿಗೆ ಯೇಸುವಿನ ಮನಸ್ಸಿನಲ್ಲಿತ್ತೆಂಬದನ್ನು, ಯೇಸುವನ್ನು ದಸ್ತಗಿರಿ ಮಾಡಲು ಬಂದಿದ್ದ ಒಬ್ಬನ ಕಿವಿಯನ್ನು ಪೇತ್ರನು ಖಡ್ಗದಿಂದ ಕತ್ತರಿಸಿದಾಗ ಯೇಸು ತೋರಿಸಿದನು. ದೇವಕುಮಾರನ್ನು ವಿರೋಧಿಗಳಿಂದ ಕಾಪಾಡಲಿಕ್ಕಾಗಿ ಯೇಸು ಈ ವರ್ತನೆಯನ್ನು ಪ್ರೋತ್ಸಾಹಿಸಿದನೋ? ಇಲ್ಲ. ಅವನು ಪೇತ್ರನಿಗೆ ಹೇಳಿದ್ದು: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು.” (ಮತ್ತಾಯ 26:52) ಹೀಗೆ ಸತ್ಯ ಕ್ರೈಸ್ತರು ರಾಷ್ಟ್ರಗಳ ಯುದ್ಧಗಳಲ್ಲಿ ಅಥವಾ ಇನ್ನಿತರ ಮಾನವ ರಕ್ತಪಾತಗಳಲ್ಲಿ ಭಾಗವಹಿಸುವದಿಲ್ಲ. ಅನೇಕರಿಗೆ ಶತಮಾನಗಳಲ್ಲಿ ಆಗಿರುವಂತೆ ಮತ್ತು ನಮ್ಮ ದಿನಗಳಲ್ಲೂ ಆಗುತ್ತಿರುವಂತೆ, ಅವರ ತಟಸ್ಥ ನೆಲೆಯ ನಿರಾಕರಣೆಯ ಕಾರಣ, ಅವರು ಹುತಾತ್ಮರಾದರೂ ಅವರು ಇವುಗಳಲ್ಲಿ ಭಾಗವಹಿಸುವದಿಲ್ಲ. ಯೇಸು ಕ್ರಿಸ್ತನ ಅಧಿಕಾರದಲ್ಲಿರುವ ದೇವರ ರಾಜ್ಯವು ಮಾತ್ರ ಯುದ್ಧ ಮತ್ತು ರಕ್ತಪಾತಗಳನ್ನು ಸಹಾ ನಿವಾರಿಸುವದೆಂದು ಅವರಿಗೆ ತಿಳಿದದೆ.—ಕೀರ್ತನೆ 46:9; ಮತ್ತಾಯ 6:9, 10; 2 ಪೇತ್ರ 3:11-13.
9. (ಎ) ಪ್ರಥಮ ಕ್ರೈಸ್ತರ ಕುರಿತು ಇತಿಹಾಸ ನಮಗೇನು ತಿಳಿಸುತ್ತದೆ? (ಬಿ) ಇದು ಕ್ರೈಸ್ತ ಪ್ರಪಂಚದ ಧರ್ಮಗಳಿಗೆ ಹೇಗೆ ಹೋಲುತ್ತದೆ?
9 ಪ್ರಥಮ ಶತಮಾನದ ಕ್ರೈಸ್ತರು ಎಂದಿಗೂ ಮಾನವ ರಕ್ತವನ್ನು ಸುರಿಸತ್ತಿರಲಿಲ್ಲವೆಂದು ಇತಿಹಾಸ ದೃಢೀಕರಿಸುತ್ತದೆ. ಇಂಗ್ಲೆಂಡಿನ ಮಾಜಿ ದೇವತಾ ಶಾಸ್ತ್ರದ ಫ್ರೊಪೆಸರ್ ಪೀಟರ್ ಡಿ ರೋಸ ಬರೆಯುವದು: “ರಕ್ತಪಾತ ಘೋರ ಪಾಪವಾಗಿತ್ತು. ಈ ಕಾರಣದಿಂದಲೇ ಕ್ರೈಸ್ತರು ಖಡ್ಗಮಲ್ಲರ ಹೋರಾಟಗಳನ್ನು ವಿರೋಧಿಸಿದ್ದರು. . . . ರೋಮ್ ನಗರವನ್ನು ಉಳಿಸಲು ಯುದ್ಧ, ಬಲಾತ್ಕಾರಗಳು ಅಗತ್ಯವಾಗಿದ್ದರೂ ಕ್ರೈಸ್ತರು ಅವುಗಳಲ್ಲಿ ಸೇರಬಾರದೆಂದು ಅಭಿಪ್ರಯಿಸಿದರು. . . ತಾವು, ಯೇಸುವಿನಂತೆ, ಶಾಂತಿದೂತರೆಂದು ಕ್ರೈಸ್ತರೆಣಿಸಿದರು. ಅವರು ಯಾವ ಪರಿಸ್ಥಿತಿಯಲ್ಲಿಯೂ ಮರಣದ ಕಾರ್ಯಭಾರಿಗಳಾಗಿರಲು ಸಾಧ್ಯವಿರಲಿಲ್ಲ.” ಆದರೆ ಇನ್ನೊಂದು ಕಡೆ, ಕ್ರೈಸ್ತ ಪ್ರಪಂಚದ ಅನೈಕ್ಯ ಧರ್ಮಗಳು ಪ್ರೀತಿಯ ಆಜ್ಞೆಯನ್ನು ಮುರಿದು ಧಾರಾಳ ರಕ್ತವನ್ನು ಸುರಿಸಿದ್ದಾರೆ. ಅವರು ಶಾಂತಿದೂತರಾಗಿರದೆ, ಪದೇಪದೇ ಮರಣದ ಕಾರ್ಯಭಾರಿಗಳಾಗಿದ್ದಾರೆ.
ರಕ್ತಪರಾಧಿಯಾದ ಮಹಾ ಬಾಬೆಲ್
10. ಮಹಾ ಬಾಬೆಲೆಂದರೇನು, ಮತ್ತು ಅದಕ್ಕೆ ಆ ಹೆಸರೇಕೆ?
10 ಸೈತಾನನು “ಇಹಲೋಕಾಧಿಪತಿ,” “ಈ ಪ್ರಪಂಚದ ದೇವರು.” (ಯೋಹಾನ 12:31; 2 ಕೊರಿಂಥ 4:4) ಶತಮಾನಗಳಲ್ಲಿ ಅವನು ಕಟ್ಟಿರುವ ಮತ್ತು ಕ್ರೈಸ್ತ ಪ್ರಪಂಚ ಮತ್ತು ಅದರ ಪುರೋಹಿತರು ಸೇರಿರುವ ಭೂವ್ಯಾಪಕವಾದ ಮಿಥ್ಯಾಧರ್ಮ ವ್ಯವಸ್ಥೆ ಸೈತಾನನ ಲೋಕದ ಭಾಗ. ಈ ಲೋಕವ್ಯಾಪಕವಾದ ಸುಳ್ಳುಧರ್ಮ ವ್ಯವಸ್ಥೆಯನ್ನು ಬೈಬಲು, “ಬಾಬೆಲೆಂಬ ಮಹಾ ನಗರಿ, ಭೂಮಿಯಲ್ಲಿರುವ [ಆತ್ಮಿಕ] ಜಾರಸ್ತ್ರೀಯರಿಗೂ ಅಸಹ್ಯವಾದ ಕಾರ್ಯಗಳಿಗೂ ತಾಯಿ” ಎಂದು ಕರೆಯುತ್ತದೆ. (ಪ್ರಕಟನೆ 17:5) ಇಂದಿನ ಸುಳ್ಳು ಧರ್ಮಗಳ ಮೂಲ ಪುರಾತನ ಬಾಬೆಲ್ ನಗರದಲ್ಲಿದೆ. ಆ ನಗರ ಸುಳ್ಳು ಧರ್ಮ ಮತ್ತು ದೇವರನ್ನು ಅಗೌರವಿಸುವ ತತ್ವ ಮತ್ತು ಆಚಾರಗಳಲ್ಲಿ ಮುಳುಗಿ ಹೋಗಿತ್ತು. ಈ ಕಾರಣದಿಂದಲೇ ಆ ಪೂರ್ವದ ಬಾಬೆಲಿನ ಪ್ರತಿರೂಪವನ್ನು ಸುಳ್ಳುಧರ್ಮದ ಲೋಕಸಾಮ್ರಾಜ್ಯವಾದ ಮಹಾ ಬಾಬೆಲ್ ಎಂದು ಕರೆಯಲಾಗುತ್ತದೆ.
11. ಮಹಾ ಬಾಬೆಲಿನ ಕುರಿತು ಬೈಬಲೇನು ತಿಳಿಸುತ್ತದೆ, ಮತ್ತು ಏಕೆ?
11 ಧಾರ್ಮಿಕ ಬಾಬೆಲಿನ ವಿಷಯದಲ್ಲಿ ದೇವರ ವಾಕ್ಯ ಹೇಳುವುದು: “ಪ್ರವಾದಿಗಳ ರಕ್ತವೂ ದೇವಜನರ ರಕ್ತವೂ ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ನಿನ್ನಲ್ಲಿ ಸಿಕ್ಕಿತು.” (ಪ್ರಕಟನೆ 18:24) ಈ ಲೋಕದ ಧರ್ಮಗಳು ಕೊಲ್ಲಲ್ಪಟ್ಟ ಎಲ್ಲರ ರಕ್ತಕ್ಕೆ ಹೇಗೆ ಹೊಣೆಗಾರರು? ಹೇಗಂದರೆ, ಎಲ್ಲಾ ಧರ್ಮಗಳು—ಕ್ರೈಸ್ತ ಪ್ರಪಂಚದ ಚರ್ಚುಗಳು ಮತ್ತು ಕ್ರೈಸ್ತೇತರ ಧರ್ಮಗಳು—ಸಮಾನವಾಗಿ ರಾಷ್ಟ್ರ ಯುದ್ಧಗಳನ್ನು ಬೆಂಬಲಿಸಿ, ಒಪ್ಪಿ, ಅವುಗಳಲ್ಲಿ ಮುಂದಾಳುತ್ವವನ್ನು ಸಹಾ ವಹಿಸಿವೆ. ಮತ್ತು ಅವರ ಮಾರ್ಗವನ್ನು ಒಪ್ಪದಿದ್ದ ದೇವಭೀರು ಜನರನ್ನು ಅವುಗಳು ಹಿಂಸೆಗೊಳಪಡಿಸಿ ಕೊಂದಿವೆ.
ದೇವರನ್ನು ಅವಮಾನ ಪಡಿಸುವ ದಾಖಲೆ
12. ಇತರ ಧರ್ಮನಾಯಕರುಗಳಿಗಿಂತ ಕ್ರೈಸ್ತ ಪ್ರಪಂಚದ ಪುರೋಹಿತರು ಏಕೆ ಹೆಚ್ಚು ನಿಂದಾರ್ಹರು?
12 ಕ್ರೈಸ್ತ ಪ್ರಪಂಚದ ಪುರೋಹಿತರು ರಕ್ತ ಸುರಿಸುವಿಕೆಯಲ್ಲಿ ಇತರ ಧರ್ಮ ನಾಯಕರುಗಳಿಗಿಂತ ಹೆಚ್ಚು ನಿಂದಾರ್ಹರು. ಇದೇಕೆ? ಏಕೆಂದರೆ, ದೇವರ ಹೆಸರನ್ನಲ್ಲದೆ, ಕ್ರಿಸ್ತನ ಹೆಸರನ್ನೂ ಅವರು ತಮಗೆ ಹಚ್ಚಿಕೊಂಡಿದ್ದಾರೆ. ಹೀಗೆ ಅವರು ಯೇಸುವಿನ ಬೋಧನೆಗಳನ್ನು ಅನುಸರಿಸಲು ಹಂಗಿನವರಾಗಿರುವರು. (ಯೋಹಾನ 15:10-14) ಆದರೆ ಆ ಉಪದೇಶಗಳನ್ನು ಅನುಸರಿಸದ ಅವರು, ಹೀಗೆ, ದೇವರ ಮತ್ತು ಕ್ರಿಸ್ತನ ಮೇಲೆ ಮಹಾ ನಿಂದೆಯನ್ನು ತಂದಿದ್ದಾರೆ. ಪುರೋಹಿತರ ಮೇಲೆ ರಕ್ತಪಾತದ ಜವಾಬ್ದಾರಿ, ಅವರು ಕ್ರುಸೇಡ್ ಮತ್ತು ಇತರ ಧಾರ್ಮಿಕ ಯುದ್ಧಗಳಲ್ಲಿ ಭಾಗವಹಿಸಿದರ್ದಿಂದ ಪ್ರತ್ಯಕ್ಷವಾಗಿಯೂ ಇತರ ದೇಶಗಳ ಜೊತೆಮಾನವರನ್ನು ತಮ್ಮ ಚರ್ಚುಗಳ ಸದಸ್ಯರು ಕೊಲ್ಲಲು ಒಪ್ಪಿದುದರಿಂದ ಪರೋಕ್ಷವಾಗಿಯೂ ಬಂದಿದೆ.
13. 11 ರಿಂದ 13ನೇ ಶತಮಾನಗಳ ತನಕ ಪುರೋಹಿತರು ಯಾವುದಕ್ಕೆ ಜವಾಬ್ದಾರರಾಗಿದ್ದರು?
13 ದೃಷ್ಟಾಂತಕ್ಕೆ, 11ರಿಂದ 13ನೇ ಶತಮಾನಗಳ ಮಧ್ಯೆ ಕ್ರೈಸ್ತ ಪ್ರಪಂಚದ ಪುರೋಹಿತರು ಕ್ರುಸೇಡ್ಗಳೆಂಬ ಧಾರ್ಮಿಕ ಯುದ್ಧಗಳನ್ನು ಆರಂಭಿಸಿದರು. ಇದರ ಫಲವಾಗಿ ದೇವರ ಮತ್ತು ಕ್ರಿಸ್ತನ ಹೆಸರಿನಲ್ಲಿ ಭಯಂಕರ ರಕ್ತಪಾತ ಮತ್ತು ಸೂರೆ ನಡೆಯಿತು. ನೂರಾರು ಸಾವಿರ ಜನರು ಕೊಲ್ಲಲ್ಪಟ್ಟರು. 1212ರ ಮಕ್ಕಳ ಧಾರ್ಮಿಕ ಯುದ್ಧದಲ್ಲಿ ಭಾಗವಹಿಸುವಂತೆ ಪ್ರೇರಿಸಲ್ಪಟ್ಟ ಸಾವಿರಾರು ಮಕ್ಕಳ ಅವಿವೇಕದ ವಧೆಯೂ ಈ ಕ್ರುಸೇಡ್ಗಳಲ್ಲಿ ಸೇರಿತ್ತು.
14, 15. 13ನೇ ಶತಕದಲ್ಲಿ ಕ್ಯಾಥ್ಲಿಕ್ ಚರ್ಚ್ ಆರಂಭಿಸಿದ ಸಂಗತಿಯ ಕುರಿತು ಒಬ್ಬ ಕ್ಯಾಥ್ಲಿಕ್ ಲೇಖಕರು ಏನು ಹೇಳುತ್ತಾರೆ?
14 ಹದಿಮೂರನೆಯ ಶತಮಾನದಲ್ಲಿ, ರೋಮನ್ ಕ್ಯಾಥ್ಲಿಕ್ ಚರ್ಚ್ ಇನ್ನೊಂದು ದೇವನಿಂದಕ ಭಯಂಕರತೆಯಾದ ಮಠೀಯ ನ್ಯಾಯಸ್ಥಾನವನ್ನು ಅಧಿಕೃತವಾಗಿ ಮಂಜೂರು ಮಾಡಿತು. ಇದು ಯುರೋಪಿನಲ್ಲಿ ಆರಂಭಗೊಂಡು ಅಮೇರಿಕಗಳಿಗೆ ಹರಡಿ ಆರು ಶತಮಾನಗಳಿಗೂ ಹೆಚ್ಚು ಕಾಲ ಉಳಿಯಿತು. ಪೋಪರ ಅಧಿಕಾರದಿಂದ ಉಗಮವಾಗಿ ಬೆಂಬಲಿಸಲ್ಪಟ್ಟ ಈ ನ್ಯಾಯಸ್ಥಾನ, ಚರ್ಚಿನೊಂದಿಗೆ ಸಹಮತವಿರದ ಸರ್ವರನ್ನು ಚಿತ್ರಹಿಂಸೆಗೊಳಪಡಿಸಿ, ನಿರ್ನಾಮಮಾಡುವ ಮಾರಕ ಪ್ರಯತ್ನವಾಗಿತ್ತು. ಚರ್ಚು ಕ್ಯಾಥ್ಲಿಕ್ಯೇತರರನ್ನು ಈ ಮೊದಲು ಹಿಂಸಿಸಿತ್ತಾದರೂ ಈ ಮಠೀಯ ನ್ಯಾಯಸ್ಥಾನ ಅದಕ್ಕೂ ಹೆಚ್ಚು ವ್ಯಾಪಕ ಅಧಿಕಾರವಿದ್ದದ್ದಾಗಿತ್ತು.
15 ತಾನು “ಶ್ರದ್ಧಾಸಕ್ತಿಯ ಕ್ಯಾಥ್ಲಿಕನು” ಎಂದು ಹೇಳುವ ಪೀಟರ್ ಡಿ ರೋಸ, ತನ್ನ ಇತ್ತೀಚಿನ ಪುಸ್ತಕವಾದ ವಿಕಾರ್ಸ್ ಆಫ್ ಕ್ರೈಸ್ಟ್—ದ ಡಾರ್ಕ್ ಸೈಡ್ ಆಫ್ ಪೇಪಸಿಯಲ್ಲಿ ಹೇಳುವುದು: “ಯೆಹೂದ್ಯರ ಹಿಂಸೆ, ಮಠೀಯ ನ್ಯಾಯಸ್ಥಾನ ಮತ್ತು ಸಾವಿರಗಳ ಲೆಕ್ಕದಲ್ಲಿ ಪಾಷಂಡಿಗಳ ಕೊಲೆಗೆ ಮತ್ತು ನ್ಯಾಯವಿಧಾನದ ಭಾಗವಾಗಿ ಚಿತ್ರಹಿಂಸೆಯನ್ನು ಯುರೋಪಿನಲ್ಲಿ ಪುನ: ತರುವುದಕ್ಕೆ ಚರ್ಚ್ ಹೊಣೆಯಾಗಿತ್ತು. . . ಪೋಪರು ಚಕ್ರವರ್ತಿಗಳನ್ನೂ ನೇಮಿಸಿದರು, ಪದಚ್ಯುತಿ ಮಾಡಿದರು. ಅವರು ತಮ್ಮ ಪ್ರಜೆಗಳ ಮೇಲೆ ಚಿತ್ರಹಿಂಸೆಯ ಮತ್ತು ಮರಣದ ಬೆದರಿಕೆಯಿಂದ ಕ್ರೈಸ್ತತ್ವವನ್ನು ಹೇರಬೇಕೆಂದು ಕೇಳಿಕೊಂಡರು. . . ಸುವಾರ್ತೆಗೆ ತಗಲಿದ ವೆಚ್ಚ ಭಯಂಕರವಾಗಿತ್ತು.” ಕೊಲೆಗೀಡಾದ ಕೆಲವರ ಒಂದೇ “ಪಾತಕ” ಅವರೊಂದಿಗೆ ಬೈಬಲ್ ಇದ್ದದ್ದೇ.
16, 17. ಮಠೀಯ ನ್ಯಾಯಸ್ಥಾನದ ಕುರಿತು ಯಾವ ಹೇಳಿಕೆಗಳು ಮಾಡಲ್ಪಟ್ಟಿವೆ?
16 13ನೇ ಶತಮಾನದ ಆರಂಭದಲ್ಲಿದ್ದ 3ನೇ ಪೋಪ್ ಇನೊಸೆಂಟ್ ಎಂಬವನ ಕುರಿತು ಡಿ ರೋಸ ಹೇಳುವದು: “[ರೋಮನ್] ಚಕ್ರವರ್ತಿ ಡಯೊಕೀಷ್ಲನ್ [3ನೇ ಶತಕ]ನ ಅಧಿಕಾರದಲ್ಲಿ ನಡೆದ ಕ್ರೂರ ಹಿಂಸೆಯಲ್ಲಿ ಲೋಕವ್ಯಾಪಕವಾಗಿ ಸುಮಾರು ಎರಡು ಸಾವಿರ ಕ್ರೈಸ್ತರು ನಾಶವಾದರೆಂದು ಲೆಕ್ಕಹಾಕಲ್ಪಟ್ಟದೆ. ಪೋಪ್ ಇನೊಸೆಂಟನು [ಫ್ರಾನ್ಸಿನ “ಪಾಷಂಡಿಗಳ” ವಿರುದ್ಧ] ಮಾಡಿದ ಧಾರ್ಮಿಕ ಯುದ್ಧದ ಮೊದಲ ಕುತ್ಸಿಕ ಘಟನೆಯಲ್ಲಿ ಆ ಸಂಖ್ಯೆಯ ಹತ್ತು ಪಾಲು ಹೆಚ್ಚು ಜನರು ಕೊಲ್ಲಲ್ಪಟ್ಟರು. . . . ಒಬ್ಬ ಪೋಪನು ಡಯೊಕೀಷ್ಲನಿಗಿಂತ ಹೆಚ್ಚು ಮಂದಿ ಕ್ರೈಸ್ತರನ್ನು ಒಂದೇ ಹತ್ಯದಲ್ಲಿ ಕೊಂದನೆಂದು ತಿಳಿಯುವದು ತಲ್ಲಣಗೊಳಿಸುವ ವಿಷಯ. . . . ಕ್ರಿಸ್ತನು ಆಕ್ಷೇಪಿಸಿದ ಕಾರ್ಯಗಳನ್ನು ಕ್ರಿಸ್ತನ ಹೆಸರಿನಲ್ಲೀ ಮಾಡುವದರಲ್ಲಿ [ಇನೊಸೆಂಟನಿಗೆ] ಯಾವ ಅಳುಕೂ ಇರಲಿಲ್ಲ.”
17 “ಪೋಪನ ಹೆಸರಿನಲ್ಲಿ [ಮಠೀಯ ನ್ಯಾಯಾಧಿಪತಿಗಳು] ಮಾನವ ಇತಿಹಾಸದಲ್ಲಿ ಮಾನವ ಸಭ್ಯತೆಯ ಮೇಲೆ ಅತ್ಯಂತ ಕ್ರೂರ ಮತ್ತು ಅವಿಶ್ರಾಂತ ಆಕ್ರಮಣಕ್ಕೆ ಕಾರಣಭೂತರಾದರು” ಎನ್ನುತ್ತಾರೆ ಡಿ ರೋಸ. ಸ್ಪೆಯ್ನಿನಲ್ಲಿ ಡೊಮಿನಿಕನ್ ಮಠೀಯ ನ್ಯಾಯಾಧೀಶ ಟೋರ್ಕಿಮೇಡ ಎಂಬವನ ಕುರಿತು ಅವರು ಹೇಳುವದು: “1483ರಲ್ಲಿ ನೇಮಿಸಲ್ಪಟ್ಟ ಅವನು ಹದಿನೈದು ವರ್ಷಕಾಲ ಕ್ರೂರವಾಗಿ ಆಳಿದನು. 1,14,000ಕ್ಕೂ ಹೆಚ್ಚು ಜನ ಅವನಿಗೆ ಬಲಿಬಿದ್ದರು, ಇವರಲ್ಲಿ 10,220 ಜನರು ಸುಡಲ್ಪಟ್ಟರು.”
18. ಒಬ್ಬ ಲೇಖಕರು ಮಠೀಯ ನ್ಯಾಯಸ್ಥಾನವನ್ನು ಹೇಗೆ ವರ್ಣಿಸುತ್ತಾರೆ, ಮತ್ತು ಅದು ಆರು ಶತಮಾನಗಳಿಗೂ ಹೆಚ್ಚುಕಾಲ ಮುಂದರಿಯಲು ಯಾವ ಕಾರಣವನ್ನು ಅವರು ಕೊಡುತ್ತಾರೆ?
18 ಲೇಖಕರು ಕೊನೆಗೊಳಿಸುತ್ತಾ ಹೇಳುವದು: “ಮಠೀಯ ನ್ಯಾಯಸ್ಥಾನದ ದಾಖಲೆ ಯಾವ ಸಂಸ್ಥೆಯನ್ನೂ ನಾಚಿಕೆಗೊಳಪಡಿಸುವುದು. ಕ್ಯಾಥ್ಲಿಕ್ ಚರ್ಚಿಗಾದರೋ ಇದು ಧ್ವಂಸಕಾರಕ. . . ಇತಿಹಾಸ ತೋರಿಸುವದೇನಂದರೆ ಆರು ಶತಮಾನಗಳಿಗೂ ಹೆಚ್ಚು ಸಮಯಗಳಲ್ಲಿ, ಬಿಡುವಿಲ್ಲದೆ, ಪೋಪರು ಪ್ರಾಥಮಿಕ ನ್ಯಾಯದ ಬದ್ಧ ವಿರೋಧಿಗಳಾಗಿದ್ದರು. ಹದಿಮೂರನೆಯ ಶತಮಾನದಿಂದ ಹಿಡಿದು ಬಂದ ಎಂಭತ್ತು ಪೋಪರುಗಳಲ್ಲಿ, ಒಬ್ಬನಾದರೂ ಈ ಮಠೀಯ ನ್ಯಾಯಸ್ಥಾನದ ದೇವತಾಶಾಸ್ತ್ರವನ್ನಾಗಲಿ ಸಾಧನವನ್ನಾಗಲಿ ಒಪ್ಪದೇ ಇದ್ದದ್ದಿಲ್ಲ. ಬದಲಿಗೆ, ಒಬ್ಬರ ಹಿಂದೊಬ್ಬರು ಈ ಮಾರಕ ಯಂತ್ರದ ಕೆಲಸಕ್ಕೆ ತಮ್ಮ ಸ್ವಂತ ಕ್ರೂರ ವಿಧಗಳನ್ನು ಕೂಡಿಸಿದರು. ರಹಸ್ಯ ಏನಂದರೆ: ಈ ಪ್ರಾಯೋಗಿಕ ಪಾಷಂಡತನದಲ್ಲಿ ಪೋಪರುಗಳು ಒಂದು ಸಂತತಿಯಿಂದ ಇನ್ನೊಂದು ಸಂತತಿಯ ತನಕ ಹೇಗೆ ಮುಂದುವರಿಯ ಸಾಧ್ಯವಾಯಿತು? ಪ್ರತಿಯೊಂದು ಹಂತದಲ್ಲಿ ಅವರು ಯೇಸುವಿನ ಸುವಾರ್ತೆಯನ್ನು ಹೇಗೆ ಅಲ್ಲಗಳೆಯ ಸಾಧ್ಯವಾಯಿತು?” ಅವರ ಉತ್ತರ: “ಪೋಪರು ತಮ್ಮ ‘ತಪ್ಪು ಮಾಡದ’ ಪೂರ್ವಜ ಪೋಪರುಗಳಿಗೆ ವ್ಯತಿರಿಕ್ತವಾಗಿ ಹೋಗುವ ಬದಲಿಗೆ ಸುವಾರ್ತೆಗೆ ವಿರುದ್ಧ ಹೋದರು. ಇಲ್ಲದಿರುವಲ್ಲಿ ಪೋಪರ ಸ್ಥಾನವೇ ಕುಸಿದು ಬೀಳ ಸಾಧ್ಯವಿತ್ತು.”
19. ಅಧಿಕಾಂಶ ಪುರೋಹಿತರು ಇನ್ನಾವ ನಿಯಮರಹಿತ ಚಟುವಟಿಕೆಯನ್ನು ಒಪ್ಪಿದರು?
19 ಇದಲ್ಲದೆ, ಗುಲಾಮಗಿರಿಯ ಹಿಂಸಾತ್ಮಕ ಪದ್ಧತಿಯಲ್ಲಿ ಪುರೋಹಿತರು ವಹಿಸಿದ್ದ ಪಾತ್ರ ನಿಯಮರಹಿತವಾಗಿತ್ತು. ಕ್ರೈಸ್ತ ಪ್ರಪಂಚದ ರಾಷ್ಟ್ರಗಳು ಅನೇಕ ಸಾವಿರ ಆಫ್ರಿಕಾನರನ್ನು ಬಲಾತ್ಕಾರ ಹರಣಮಾಡಿ ಅವರ ಸ್ವಂತ ದೇಶಗಳಿಂದ ಬಹು ದೂರ ತೆಗೆದುಕೊಂಡು ಹೋಗಿ ಶತಮಾನಗಳಲ್ಲಿ ಅವರನ್ನು ಶಾರೀರಿಕವಾಗಿಯೂ ಮಾನಸಿಕವಾಗಿಯೂ ದಾಸರಾಗುವಂತೆ ಬಲಾತ್ಕರಿಸಿದರು. ಪುರೋಹಿತ ವರ್ಗದವರಲ್ಲಿ ಕೇವಲ ಕೆಲವರು ಮಾತ್ರ ಇದನ್ನು ವಿರೋಧಿಸಿದರು. ಇದರಲ್ಲಿ ಹಲವರು ಇದು ದೇವರ ಚಿತ್ತವೆಂದೂ ವಾದಿಸಿದರು.—ಮತ್ತಾಯ 7:12 ನೋಡಿ.
20ನೇ ಶತಮಾನದಲ್ಲಿ ರಕ್ತಪರಾಧ
20. ಈ ಶತಮಾನದಲ್ಲಿ ನಿಯಮರಾಹಿತ್ಯ ಪುರುಷನ ರಕ್ತಪರಾಧ ತುತ್ತತುದಿಗೇರಿರುವುದು ಹೇಗೆ?
20 ಈ ಅಧರ್ಮ ಪುರುಷನ ರಕ್ತಪರಾಧ ನಮ್ಮ ಶತಮಾನದಲ್ಲಿ ತುತ್ತತುದಿಗೇರಿತು. ಈ ಪುರೋಹಿತರು, ಕೋಟ್ಯಾಂತರ ಜೀವಗಳನ್ನು ಆಹುತಿ ತೆಗೆದುಕೊಂಡಿರುವ ಇತಿಹಾಸದ ಅತ್ಯಂತ ಭಯಂಕರ ಯುದ್ಧಗಳನ್ನು ಬೆಂಬಲಿಸಿದರು. ಎರಡು ಜಾಗತಿಕ ಯುದ್ಧಗಳಲ್ಲಿ ಅವರು ಎರಡೂ ಪಕ್ಷಗಳನ್ನು ಬೆಂಬಲಿಸಿದರು. ಈ ಯುದ್ಧಗಳಲ್ಲಿ ಒಂದೇ ಧರ್ಮದ ಜನರಾದ “ಸಹೋದರರು” ಒಬ್ಬರನ್ನೊಬ್ಬರು ಕೊಂದರು. ಉದಾಹರಣೆಗೆ, 2ನೇ ಲೋಕ ಯುದ್ಧದಲ್ಲಿ ಫ್ರೆಂಚ್ ಮತ್ತು ಅಮೇರಿಕನ್ ಕ್ಯಾಥ್ಲಿಕರು ಜರ್ಮನ್ ಮತ್ತು ಇಟಾಲಿಯನ್ ಕ್ಯಾಥ್ಲಿಕರನ್ನು ಹತಿಸಿದರು. ಬ್ರಿಟಿಷ್ ಮತ್ತು ಅಮೇರಿಕನ್ ಪ್ರಾಟೆಸ್ಟಂಟರು ಜರ್ಮನ್ ಪ್ರಾಟೆಸ್ಟಂಟರನ್ನು ವಧಿಸಿದರು. ಹಲವು ಸಲ, ಒಂದೇ ಧರ್ಮದ ಜನರನ್ನಲ್ಲ, ಒಂದೇ ರಾಷ್ಟ್ರೀಯ ಹಿನ್ನೆಲೆಯ ಜನರನ್ನೂ ಅವರು ಕೊಂದರು. ಎರಡು ಜಾಗತಿಕ ಯುದ್ಧಗಳು, ಕ್ರೈಸ್ತ ಪ್ರಪಂಚದ ಗರ್ಭಸ್ಥಾನದಿಂದಲೇ ಹೊರಚಿಮ್ಮಿದವು. ಪ್ರೀತಿಸಬೇಕೆಂಬ ಆಜೆಗ್ಞೆ ಪಾದ್ರಿಗಳು ವಿಧೇಯರಾಗುತ್ತಿದ್ದರೆ ಮತ್ತು ಅವರ ಹಿಂಬಾಲಕರಿಗೆ ಅದನ್ನು ಕಲಿಸುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.
21.ಪುರೋಹಿತರು ಯುದ್ಧದಲ್ಲಿ ಒಳಗೂಡಿದ್ದ ವಿಷಯದಲ್ಲಿ ಐಹಿಕ ಮೂಲಗಳು ಏನು ಹೇಳುತ್ತವೆ?
21 ದ ನ್ಯೂಯಾರ್ಕ್ ಟೈಮ್ಸ್ ದೃಢೀಕರಿಸಿದ್ದು: “ಗತಕಾಲಗಳಲ್ಲಿ, ಸ್ಥಳೀಕ ಕ್ಯಾಥ್ಲಿಕ್ ಪುರೋಹಿತ ಕ್ಯಾಥ್ಲಿಕ್ ಪ್ರಭುತ್ವಗಳು ಹೆಚ್ಚುಕಡಿಮೆ ಯಾವಾಗಲೂ ತಮ್ಮ ರಾಷ್ಟ್ರಗಳ ಯುದ್ಧಗಳನ್ನು ಬೆಂಬಲಿಸಿ, ಸೈನ್ಯಗಳನ್ನು ಆಶೀರ್ವದಿಸಿ, ವಿಜಯಕ್ಕಾಗಿ ಪ್ರಾರ್ಥಿಸಿರುವಾಗ, ಇನ್ನೊಂದು ಪಕ್ಷದಲ್ಲಿ ಬಿಷಪರುಗಳ ಒಂದು ಗುಂಪು ಇದರ ವಿರುದ್ಧವಾದ ಫಲಿತಾಂಶಕ್ಕಾಗಿ ಬಹಿರಂಗವಾಗಿ ಪ್ರಾರ್ಥಿಸಿದೆ. . . . ಕ್ರೈಸ್ತ ಮನೋಭಾವ ಮತ್ತು ಯುದ್ಧಾಚರಣೆಯ ಮಧ್ಯೆ ಇರುವ ವ್ಯತಿರಿಕ್ತತೆ . . . ಆಯುಧಗಳು ಹೆಚ್ಚೆಚ್ಚು ಪಶುಪ್ರಾಯವಾಗುತ್ತಿರುವಾಗ, ಅನೇಕರಿಗೆ ಹೆಚ್ಚು ಸ್ಪಷ್ಟವಾಗುತ್ತಿದೆ.” ಮತ್ತು ಯು.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಗಮನಿಸಿದ್ದು: “ಲೋಕದಲ್ಲಿ ಕ್ರೈಸ್ತತ್ವದ ಪ್ರಶಸ್ತಿಯು, ಕ್ರೈಸ್ತರೆನಿಸುವ ರಾಷ್ಟ್ರಗಳು ಪದೆಪದೇ ಹಿಂಸಾತ್ಮಕ ಕೃತ್ಯಗಳಿಗೆ ಇಳಿದಿರುವ ಕಾರಣದಿಂದಾಗಿ ಗುರುತರವಾಗಿ ದುರ್ಬಲಗೊಂಡಿದೆ.”
22. ನಮ್ಮ ದಿನಗಳಲ್ಲಿ ಪುರೋಹಿತರು ಇನ್ನಾವದಕ್ಕೆ ಹೊಣೆಗಾರರು?
22 ಇದಲ್ಲದೆ, ಇಂದು ಅಧಿಕೃತ ಮಠೀಯ ನ್ಯಾಯಸ್ಥಾನವಿಲ್ಲದಿದ್ದರೂ ಪುರೋಹಿತರು ತಮ್ಮೊಂದಿಗೆ ಭಿನ್ನಾಭಿಪ್ರಾಯ ಪಡುವ “ಪ್ರವಾದಿ”ಗಳನ್ನೂ “ದೇವಜನ”ರನ್ನೂ ಹಿಂಸಿಸಲು ಸರಕಾರಗಳ ಅಧಿಕಾರವನ್ನು ಉಪಯೋಗಿಸಿದ್ದಾರೆ. ಅವರು ರಾಜಕೀಯ ನಾಯಕರ ಮೇಲೆ ಒತ್ತಡ ಹಾಕಿ ‘ನಿಯಮದ ನೆವನದಿಂದ ಕೇಡು ಕಲ್ಪಿಸುತ್ತಾರೆ.’ ಈ ವಿಧದಲ್ಲಿ ಅವರು ನಮ್ಮ ಈ ಶತಮಾನದಲ್ಲಿ ದೇವಭಯವುಳ್ಳ ಜನರಿಗೆ ನಿಷೇಧಾಜ್ಞೆ, ಸೆರೆವಾಸ, ಹೊಡೆತ, ಚಿತ್ರಹಿಂಸೆ ಮತ್ತು ಮರಣವನ್ನು ಸಹ ಕೊಡಿಸಿದ್ದಾರೆ ಅಥವಾ ಅವುಗಳಿಗೆ ಸಮ್ಮತಿಸಿದ್ದಾರೆ.—ಪ್ರಕಟನೆ 17:6; ಕೀರ್ತನೆ 94:20.
ಲೆಕ್ಕವೊಪ್ಪಿಸಲು ಕರೆ
23. ದೇವರು ಈ ಅಧರ್ಮ ಪುರುಷನನ್ನು ಲೆಕ್ಕವೊಪ್ಪಿಸಲು ಏಕೆ ಕರೆಯುವನು?
23 ಹೌದು, ಸುಳ್ಳು ಧರ್ಮದಲ್ಲಿ ಪ್ರವಾದಿಗಳ, ಪವಿತ್ರ ಜನರ ಮತ್ತು ಭೂಮಿಯಲ್ಲಿ ಹತಿಸಲ್ಪಟ್ಟವರೆಲ್ಲರ ರಕ್ತ ತೋರಿಬಂದಿದೆ. (ಪ್ರಕಟನೆ 18:24) ಮತ್ತು ಅತ್ಯಂತ ಭಯಂಕರವಾದ ರಕ್ತಪಾತ ಕ್ರೈಸ್ತ ಪ್ರಪಂಚದಲ್ಲಿ ತೋರಿಬಂದಿರುವುದರಿಂದ ಪುರೋಹಿತ ವರ್ಗದವರ ಅಪರಾಧ ಅತ್ಯಂತ ಘೋರವಾದದ್ದು. ಬೈಬಲು ಅವರನ್ನು “ಅಧರ್ಮ ಸ್ವರೂಪ”ನೆಂದು ಕರೆದಿರುವದು ಎಷ್ಟು ಸಮಂಜಸ! ಆದರೆ ದೇವರ ವಾಕ್ಯ, “ಮೋಸ ಹೋಗಬೇಡಿರಿ. ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯ ಬೇಕು” ಎಂದೂ ಹೇಳುತ್ತದೆ. (ಗಲಾತ್ಯ 6:7) ಆದುದರಿಂದ, ದೇವರು ನಿಯಮರಹಿತ ಪುರೋಹಿತರಿಂದ ಲೆಕ್ಕ ಕೇಳುವನು.
24. ಲೋಕ ಕಂಪಿಸುವ ಯಾವ ಘಟನೆಗಳು ಶೀಘ್ರದಲ್ಲಿ ನಡೆಯಲಿವೆ?
24 “ಧರ್ಮವನ್ನು ಮೀರಿ ನಡೆಯುವವರೇ, ನನ್ನಿಂದ ತೊಲಗಿ ಹೋಗಿರಿ” ಎಂದು ಯೇಸು ಹೇಳಿದನು. (ಮತ್ತಾಯ 7:23) “ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ” ಎಂದೂ ಅವನು ಹೇಳಿದನು. (ಮತ್ತಾಯ 7:19) ಮಿಥ್ಯಾಧರ್ಮದೊಂದಿಗೆ ಅಧರ್ಮ ಪುರುಷನ ಜ್ವಲಿಸುವ ಅಂತ್ಯ ಅತ್ಯಂತ ವೇಗವಾಗಿ ಸಮೀಪಿಸುತ್ತಿದೆ. ಆಗ ಅವರು ಯಾರೊಂದಿಗೆ ವೇಶ್ಯೆಯಂತೆ ವರ್ತಿಸಿದ್ದಾರೋ ಆ ರಾಜಕೀಯಸ್ಥರೇ ಅವರ ಮೇಲೆ ತಿರುಗಿ ಬೀಳುವರು: “[ಅವರು] ಈ ಜಾರ ಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.” (ಪ್ರಕಟನೆ 17:16) ಜಗತ್ತನ್ನು ಕಂಪಿಸುವ ಇಂಥ ಘಟನೆಗಳು ಶೀಘ್ರದಲ್ಲಿ ನಡೆಯಲಿರುವದರಿಂದ ದೇವರ ಸೇವಕರು ಇವುಗಳನ್ನು ಇತರರಿಗೆ ತಿಳಿಯಪಡಿಸತಕ್ಕದ್ದು. ಅವರು ಇದನ್ನು ಹೇಗೆ ಮಾಡುತ್ತಿದ್ದಾರೆಂಬದನ್ನು ಮುಂದಿನ ಲೇಖನ ಪರೀಕ್ಷಿಸುವದು. (w90 2/1)
ಪುನರ್ವಿಚಾರಕ್ಕೆ ಪ್ರಶ್ನೆಗಳು
◻ ಅಧರ್ಮ ಸ್ವರೂಪನೆಂದರೇನು, ಮತ್ತು ಅದು ಹೇಗೆ ವಿಕಾಸಗೊಂಡಿತು?
◻ ನಿಜ ಕ್ರೈಸ್ತರು ಯಾವ ಶ್ರೇಷ್ಠ ಫಲವನ್ನು ಬಿಡಬೇಕು?
◻ ಮಹಾ ಬಾಬೆಲ್ ಯಾರು, ಮತ್ತು ಅವಳೆಷ್ಟು ರಕ್ತಪರಾಧಿ?
◻ ಅಧರ್ಮ ಪುರುಷನು ಯಾವ ದೇವನಿಂದಕ ದಾಖಲೆಯನ್ನಿಟ್ಟಿದ್ದಾನೆ?
◻ ದೇವರು ಈ ಅಧರ್ಮ ಸ್ವರೂಪನನ್ನು ಲೆಕ್ಕವೊಪ್ಪಿಸಲು ಹೇಗೆ ಕರೆಯುವನು?
[ಪುಟ 20 ರಲ್ಲಿರುವ ಚಿತ್ರ]
ದೇವರ ಮತ್ತು ಕ್ರಿಸ್ತನ ಹೆಸರಿನಲ್ಲಿ ಭಯಂಕರ ರಕ್ತಪಾತವನ್ನು ಕ್ರುಸೇಡ್ಗಳು ಫಲಿಸಿದವು
[ಕೃಪೆ]
By courtesy of The British Library
[ಪುಟ 21 ರಲ್ಲಿರುವ ಚಿತ್ರ]
“ಸ್ಥಳೀಕ ಕ್ಯಾಥ್ಲಿಕ್ ಪುರೋಹಿತ ಪ್ರಭುತ್ವಗಳು ಹೆಚ್ಚುಕಡಿಮೆ ಯಾವಾಗಲೂ ರಾಷ್ಟ್ರಗಳ ಯುದ್ಧವನ್ನು ಬೆಂಬಲಿಸಿವೆ.”
[ಕೃಪೆ]
U.S. Army