ಅಧ್ಯಾಯ 37
ಬಾಬೆಲಿನ ಅಂತ್ಯದಲ್ಲಿ ಗೋಳಾಡುವುದು ಮತ್ತು ಹರ್ಷಿಸುವುದು
1. ಮಹಾ ಬಾಬೆಲಿನ ಆಕಸ್ಮಿಕ ನಾಶಕ್ಕೆ “ಭೂರಾಜರು” ಹೇಗೆ ಪ್ರತಿಕ್ರಿಯಿಸಲಿರುವರು?
ಬಾಬೆಲಿನ ಅಂತ್ಯವು ಯೆಹೋವನ ಜನರಿಗೆ ಶುಭವಾರ್ತೆಯಾಗಿದೆ, ಆದರೆ ಜನಾಂಗಗಳವರು ಅದನ್ನು ಹೇಗೆ ದೃಷ್ಟಿಸುತ್ತಾರೆ? ಯೋಹಾನನು ನಮಗೆ ಹೇಳುವುದು: “ಮತ್ತು ಅವಳೊಂದಿಗೆ ಜಾರತ್ವಮಾಡಿದ ಮತ್ತು ಲಜ್ಜಾಹೀನ ಸುಖಭೋಗದಲ್ಲಿ ಜೀವಿಸಿದ ಭೂರಾಜರು ಅವಳ ದಹನದಿಂದೇರುವ ಹೊಗೆಯನ್ನು ನೋಡುವಾಗ, ಅವಳ ವಿಷಯದಲ್ಲಿ ಅತ್ತು ಎದೆಬಡಿದುಕೊಳ್ಳುವರು. ಆಗ ಅವರು ಅವಳ ಯಾತನೆಯ ಭಯದ ಕಾರಣ ದೂರದಲ್ಲಿ ನಿಂತು ಹೇಳುವುದು: ‘ತೀರ ವಿಷಾದನೀಯ, ತೀರ ವಿಷಾದನೀಯ, ಮಹಾ ಪಟ್ಟಣವೇ, ನೀನು ಬಲಿಷ್ಠ ನಗರವಾದ ಬಾಬೆಲೇ, ಏಕೆಂದರೆ ನಿನ್ನ ನ್ಯಾಯತೀರ್ಪು ಒಂದೇ ಗಳಿಗೆಯಲ್ಲಿ ಬಂದಿದೆ!’”—ಪ್ರಕಟನೆ 18:9, 10, NW.
2. (ಎ) ಕಡುಗೆಂಪು ಬಣ್ಣದ ಕಾಡು ಮೃಗದ ಸಾಂಕೇತಿಕ ಹತ್ತು ಕೊಂಬುಗಳು ಮಹಾ ಬಾಬೆಲನ್ನು ನಾಶಮಾಡುವುದರಿಂದ “ಭೂರಾಜರು” ಅವಳ ಅಂತ್ಯದ ವಿಷಯ ಯಾಕೆ ಗೋಳಾಡುತ್ತಾರೆ? (ಬಿ) ಶೋಕತಪ್ತ ರಾಜರು ನಾಶಗೊಂಡ ನಗರಿಯಿಂದ ದೂರದಲ್ಲೇ ಯಾಕೆ ನಿಲ್ಲುತ್ತಾರೆ?
2 ಕಡುಗೆಂಪು ಬಣ್ಣದ ಕಾಡು ಮೃಗದ ಸಾಂಕೇತಿಕ ಹತ್ತು ಕೊಂಬುಗಳಿಂದ ಬಾಬೆಲ್ ನಾಶವಾಯಿತು ಎನ್ನುವ ನಿಜತ್ವದ ದೃಷ್ಟಿಯಲ್ಲಿ ಜನಾಂಗಗಳವರ ಪ್ರತಿಕ್ರಿಯೆ ಆಶ್ಚರ್ಯಕರವಾಗಿ ತೋರಬಹುದು. (ಪ್ರಕಟನೆ 17:16) ಆದರೆ ಬಾಬೆಲ್ ಇಲ್ಲವಾಗುವಾಗ, ಜನರನ್ನು ಶಾಂತತೆಯಲ್ಲಿ ಮತ್ತು ಅಧೀನತೆಯಲ್ಲಿ ಇಡುವುದರಲ್ಲಿ ಅವರಿಗೆ ಅವಳೆಷ್ಟು ಉಪಯುಕ್ತಳಾಗಿದ್ದಳು ಎನ್ನುವುದನ್ನು “ಭೂರಾಜರು” ಸುವ್ಯಕ್ತವಾಗಿ ಮನಗಾಣಲಿರುವರು. ವೈದಿಕರು ಯುದ್ಧಗಳನ್ನು ಪವಿತ್ರವಾಗಿವೆ ಎಂದು ಪ್ರಕಟಿಸಿದ್ದಾರೆ, ಸೇನೆಗೆ ಹೊಸಬರನ್ನು ಭರ್ತಿಮಾಡುವ ನಿಯೋಗಿಗಳಾಗಿ ವರ್ತಿಸಿದ್ದಾರೆ, ಮತ್ತು ಯುದ್ಧ ರಂಗದೊಳಗೆ ಹೋಗುವಂತೆ ಯುವಕರಿಗೆ ಸಾರಿದ್ದಾರೆ. ಧರ್ಮವು ಪವಿತ್ರತೆಯ ಪರದೆಯನ್ನು ಒದಗಿಸಿದ್ದು, ಅದರ ಹಿಂದಿನಿಂದ ಭ್ರಷ್ಟ ಅಧಿಪತಿಗಳು ಸಾಮಾನ್ಯ ಜನರನ್ನು ದಬ್ಬಾಳಿಕೆಯಿಂದ ಅಧಿಕಾರ ನಡಿಸುವುದರಲ್ಲಿ ಕಾರ್ಯ ನಡಿಸಿದ್ದಾರೆ. (ಹೋಲಿಸಿರಿ ಯೆರೆಮೀಯ 5:30, 31; ಮತ್ತಾಯ 23:27, 28.) ಆದಾಗ್ಯೂ, ಈ ಶೋಕ-ತಪ್ತ ರಾಜರು ಈಗ ನಾಶವಾದ ನಗರಿಯಿಂದ ದೂರದಲ್ಲಿ ನಿಂತಿದ್ದಾರೆಂಬುದನ್ನು ಗಮನಿಸಿರಿ. ಅವಳ ಸಹಾಯಕ್ಕೆ ಬರಲು ಬೇಕಾಗುವಷ್ಟು ಹತ್ತಿರ ಅವರು ಬರುವುದಿಲ್ಲ. ಅವಳು ಹೋಗುವುದನ್ನು ನೋಡುವುದರಲ್ಲಿ ದುಃಖಪಡುತ್ತಾರೆ, ಆದರೆ ಅವಳ ಪರವಾಗಿ ಅಪಾಯ ಸಂಭವಗಳನ್ನು ತೆಗೆದುಕೊಳ್ಳುವಷ್ಟು ದುಃಖಿತರಾಗಿರುವುದಿಲ್ಲ.
ವರ್ತಕರು ಅಳುತ್ತಾರೆ ಮತ್ತು ಗೋಳಾಡುತ್ತಾರೆ
3. ಮಹಾ ಬಾಬೆಲಿನ ಗತಿಸುವಿಕೆಗಾಗಿ ಇನ್ನು ಯಾರು ವ್ಯಥೆಪಡುತ್ತಾರೆ, ಮತ್ತು ಇದಕ್ಕೆ ಯೋಹಾನನು ಯಾವ ಕಾರಣಗಳನ್ನು ಕೊಡುತ್ತಾನೆ?
3 ಮಹಾ ಬಾಬೆಲಿನ ಗತಿಸುವಿಕೆಗೆ ಭೂಮಿಯ ರಾಜರು ಮಾತ್ರವೇ ವ್ಯಥೆ ಪಡುವುದಲ್ಲ. “ಇದಲ್ಲದೆ ಭೂಮಿಯ ಸಂಚಾರಿ ವರ್ತಕರು ಅವಳ ವಿಷಯದಲ್ಲಿ ಅತ್ತು ಗೋಳಾಡುತ್ತಿದ್ದಾರೆ, ಏಕೆಂದರೆ ಅವರ ತುಂಬಿದ ಸರಕುಗಳನ್ನು ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಊದಾ ಉಡುಪು, ರೇಶ್ಮೆ, ಕಡುಗೆಂಪು ಬಣ್ಣದ ಉಡುಪುಗಳ ತುಂಬಿದ ಸರಕನ್ನು, ಮತ್ತು ಸುಗಂಧದ ಮರದಲ್ಲಿ ಪ್ರತಿಯೊಂದು, ಪ್ರತಿ ವಿಧದ ದಂತದ ವಸ್ತು, ಅತ್ಯಮೂಲ್ಯ ಮರದಿಂದ, ತಾಮ್ರದಿಂದ, ಕಬ್ಬಿಣದಿಂದ ಮತ್ತು ಚಂದ್ರಕಾಂತ ಶಿಲೆಯಿಂದ ಮಾಡಿದ ಪ್ರತಿಯೊಂದು ವಿಧದ ವಸ್ತು, ಅಲ್ಲದೆ ದಾಲ್ಚಿನ್ನಿ, ಭಾರತದ ಸಂಬಾರ, ಧೂಪ, ಸುಗಂಧತೈಲ, ಲೋಬಾನ, ದ್ರಾಕ್ಷಾಮದ್ಯ, ಆಲಿವ್ ತೈಲ, ನಯವಾದ ಹಿಟ್ಟು, ಗೋಧಿ, ಜಾನುವಾರು, ಕುರಿ, ಕುದುರೆ ಮತ್ತು ಬಂಡಿಗಳು, ಗುಲಾಮರು ಮತ್ತು ಮಾನವಾತ್ಮಗಳು—ಇವುಗಳನ್ನು ಇನ್ನುಮುಂದೆ ಖರೀದಿಸಲು ಯಾವನೂ ಇಲ್ಲ. ಹೌದು, ನಿನ್ನಾತ್ಮವು ಬಯಸಿದ ಉತ್ತಮ ಫಲವು ನಿನ್ನಿಂದ (ಮಹಾ ಬಾಬೆಲಿನಿಂದ) ಅಗಲಿ ಹೋಗಿದೆ, ಮತ್ತು ಲಲಿತವಾದ ವಸ್ತುಗಳು ಮತ್ತು ಶೋಭಾಯಮಾನವಾದ ವಸ್ತುಗಳು ನಿನ್ನಿಂದ ನಶಿಸಿಹೋಗಿವೆ, ಮತ್ತು ಜನರು ಅವನ್ನು ಇನ್ನು ಮುಂದೆ ಕೊಂಡುಕೊಳ್ಳುವುದೇ ಇಲ್ಲ.”—ಪ್ರಕಟನೆ 18:11-14, NW.
4. ಮಹಾ ಬಾಬೆಲಿನ ಅಂತ್ಯಕ್ಕಾಗಿ “ಸಂಚಾರಿ ವ್ಯಾಪಾರಿಗಳು” ಯಾಕೆ ಅಳುತ್ತಾರೆ ಮತ್ತು ಗೋಳಾಡುತ್ತಾರೆ?
4 ಹೌದು, ಮಹಾ ಬಾಬೆಲ್ ಶ್ರೀಮಂತ ವರ್ತಕರ ಆಪ್ತ ಮಿತ್ರಳೂ, ಒಳ್ಳೆಯ ಗಿರಾಕಿಯೂ ಆಗಿದ್ದಳು. ಉದಾಹರಣೆಗೆ, ಕ್ರೈಸ್ತಪ್ರಪಂಚದಲ್ಲಿನ ಸಂನ್ಯಾಸಿ ಮಠಗಳು, ಸಂನ್ಯಾಸಿನಿ ಮಠಗಳು, ಮತ್ತು ಚರ್ಚುಗಳು ಭಾರಿ ಮೊತ್ತದ ಚಿನ್ನ, ಬೆಳ್ಳಿ, ಅಮೂಲ್ಯ ರತ್ನಗಳು, ಬಹು ಬೆಲೆಯುಳ್ಳ ಮರ ಮತ್ತು ಇತರ ರೂಪಗಳ ಪ್ರಾಪಂಚಿಕ ಸಂಪತ್ತನ್ನು ಶತಮಾನಗಳಿಂದಲೂ ಸಂಪಾದಿಸಿವೆ. ಅದಲ್ಲದೆ, ಕ್ರಿಸ್ತನನ್ನು ಅಗೌರವಿಸುವ ಕ್ರಿಸ್ಮಸ್ ಮತ್ತು ಇತರ ಪವಿತ್ರ ದಿನಗಳೆಂದು ಕರೆಯಲ್ಪಡುವ ಆಚರಣೆಗಳೊಂದಿಗೆ ಜೊತೆಯಾಗಿ ಹೋಗುವ ಅಪರಿಮಿತ ಖರೀದಿಯ ಆವೇಶ, ಮತ್ತು ಕುಡಿತದ ಲೋಲುಪತೆಯ ಮೇಲೆ, ಧರ್ಮಗಳ ಆಶೀರ್ವಾದವು ಅನುಗ್ರಹಿಸಲ್ಪಟ್ಟಿದೆ. ಕ್ರೈಸ್ತಪ್ರಪಂಚದ ಮಿಷನೆರಿಗಳು ದೂರ ದೇಶಗಳನ್ನು ತೂರಿಕೊಂಡು ಹೋಗಿ, ಈ ಲೋಕದ “ಸಂಚಾರಿ ವರ್ತಕರಿಗೆ” ಹೊಸ ಮಾರುಕಟ್ಟೆಗಳನ್ನು ತೆರೆದಿದ್ದಾರೆ. ಹದಿನೇಳನೆಯ ಶತಮಾನದ ಜಪಾನಿನಲ್ಲಿ, ವ್ಯಾಪಾರಿಗಳೊಂದಿಗೆ ಬಂದಿದ್ದ ಕತಾಲಿಸಿಜಮ್ ಕೂಡ ಜಹಗೀರು ಸಂಗ್ರಾಮದಲ್ಲಿ ಒಳಗೂಡಿತ್ತು. ಓಸಾಕ ಕೋಟೆಯ ಗೋಡೆಗಳ ಕೆಳಗೆ ನಡೆದ ಒಂದು ನಿರ್ಣಾಯಕ ಯುದ್ಧದ ಮೇಲೆ ವರದಿಸುತ್ತಾ, ದಿ ಎನ್ಸೈಕ್ಲೊಪೀಡಿಯಾ ಬ್ರಿಟ್ಯಾನಿಕ ತಿಳಿಸುವುದು: “ಟೊಕುಗಾವದ ಸೈನಿಕರು ಕ್ರೂಜೆಯೊಂದಿಗೆ ಮತ್ತು ರಕ್ಷಕನ ಮತ್ತು ಸ್ಪೆಯಿನ್ನ ಪೋಷಕ ಸಂತನಾಗಿದ್ದ ಸಂತ ಜೇಮ್ಸ್ರ ಮೂರ್ತಿಗಳೊಂದಿಗೆ ಅಲಂಕರಿಸಲಾದ ಬಾವುಟಗಳುಳ್ಳ ಒಂದು ಪ್ರತಿಕಕ್ಷಿಯ ವಿರುದ್ಧ ತಾವು ಹೋರಾಡುವುದಾಗಿ ಕಂಡುಕೊಂಡರು.” ವಿಜಯ ಗಳಿಸಿದ ಪಂಗಡವು ಕತಾಲಿಸಿಜಮನ್ನು ಹಿಂಸಿಸಿತು ಮತ್ತು ಕಾರ್ಯತಃ ಆ ಪ್ರದೇಶದಲ್ಲಿ ಅದನ್ನು ಅಳಿಸಿ ಬಿಟ್ಟಿತು. ಇಂದು ಲೌಕಿಕ ಕಾರ್ಯಾದಿಗಳಲ್ಲಿ ಚರ್ಚುಗಳ ಭಾಗವಹಿಸುವಿಕೆಯು ಅವಳಿಗೆ ತದ್ರೀತಿಯಲ್ಲಿ ಯಾವುದೇ ಆಶೀರ್ವಾದವನ್ನು ತರುವುದಿಲ್ಲ.
5. (ಎ) ಪರಲೋಕದಿಂದ ಬಂದ ಶಬ್ದವು “ಸಂಚಾರಿ ವರ್ತಕರ” ಗೋಳಾಡುವಿಕೆಯನ್ನು ಇನ್ನೂ ಹೆಚ್ಚಾಗಿ ಹೇಗೆ ವಿವರಿಸುತ್ತದೆ? (ಬಿ) ವರ್ತಕರು ಕೂಡ “ದೂರ ನಿಂತಿರು” ತ್ತಾರೆ, ಯಾಕೆ?
5 ಪರಲೋಕದಿಂದ ಬಂದ ಶಬ್ದವು ಇನ್ನೂ ಹೇಳುವುದು: “ಅವಳಿಂದ ಐಶ್ವರ್ಯವಂತರಾದ ಈ ಸರಕುಗಳ ಸಂಚಾರಿ ವರ್ತಕರು ಅವಳ ಯಾತನೆಯ ಭಯದ ಕಾರಣ ದೂರದಲ್ಲಿ ನಿಲ್ಲುವರು ಮತ್ತು ಅವರು ಅಳುತ್ತಾ, ಗೋಳಾಡುತ್ತಾ ಹೇಳುವುದು—‘ನಯವಾದ ನಾರುಮಡಿಯನ್ನೂ ಊದಾ ವಸ್ತ್ರ ಮತ್ತು ಕಡುಗೆಂಪು ವಸ್ತ್ರಧಾರಿತಳಾಗಿ, ಚಿನ್ನಾಭರಣ, ರತ್ನ ಮತ್ತು ಮುತ್ತಿನಿಂದ ಶೋಭಾಯಮಾನವಾಗಿ ಅಲಂಕೃತಳಾಗಿರುವ ಮಹಾ ನಗರವೇ, ತೀರಾ ವಿಷಾದನೀಯ, ತೀರಾ ವಿಷಾದನೀಯ, ಏಕೆಂದರೆ ಒಂದೇ ಗಳಿಗೆಯಲ್ಲಿ ಇಂತಹ ಮಹಾ ಐಶ್ವರ್ಯಗಳು ಧ್ವಂಸಗೊಳಿಸಲ್ಪಟ್ಟಿವೆ!’” (ಪ್ರಕಟನೆ 18:15-17ಎ, NW) ಮಹಾ ಬಾಬೆಲಿನ ನಾಶನದೊಂದಿಗೆ “ವರ್ತಕರು” ಆ ವಾಣಿಜ್ಯ ಜೊತೆಗಾರ್ತಿಯ ನಷ್ಟಕ್ಕಾಗಿ ಗೋಳಾಡುವರು. ನಿಜವಾಗಿ, ಅವರಿಗೆ “ತೀರಾ ವಿಷಾದನೀಯ, ತೀರಾ ವಿಷಾದನೀಯ”ವೇ ಗತಿ. ಆದರೂ ಗೋಳಾಡುವಿಕೆಗೆ ಅವರ ಕಾರಣಗಳು ತೀರಾ ಸ್ವಾರ್ಥದ್ದಾಗಿವೆ ಎಂಬುದನ್ನು ಗಮನಿಸಿರಿ ಮತ್ತು ಅವರು—ರಾಜರುಗಳಂತೆ—“ದೂರದಲ್ಲಿ ನಿಂತಿ” ದ್ದಾರೆ. ಮಹಾ ಬಾಬೆಲಿಗೆ ಯಾವುದೇ ರೀತಿಯ ಸಹಾಯ ನೀಡುವಷ್ಟು ಹತ್ತಿರ ಅವರು ಬರುವುದಿಲ್ಲ.
6. ಹಡಗುಗಳ ಯಜಮಾನರ ಮತ್ತು ನಾವಿಕರ ಗೋಳಾಡುವಿಕೆಯನ್ನು ಪರಲೋಕದಿಂದ ಬಂದ ಶಬ್ದವು ಹೇಗೆ ವರ್ಣಿಸುತ್ತದೆ, ಮತ್ತು ಅವರು ಯಾಕೆ ಗೋಳಾಡುತ್ತಾರೆ?
6 ವರದಿಯು ಮುಂದುವರಿಯುತ್ತದೆ: “ಮತ್ತು ಪ್ರತಿಯೊಂದು ಹಡಗಿನ ಯಜಮಾನನು ಮತ್ತು ಎಲ್ಲಿಯೇ ಸಮುದ್ರ ಪ್ರಯಾಣಮಾಡುವ ಪ್ರತಿಯೊಬ್ಬ ಮನುಷ್ಯನು, ಮತ್ತು ನಾವಿಕರು ಮತ್ತು ಸಮುದ್ರದಿಂದ ಜೀವನೋಪಾಯ ನಡೆಸುವ ಎಲ್ಲರೂ ದೂರದಲ್ಲಿ ನಿಂತು ಅವಳ ದಹನದಿಂದೇರುವ ಹೊಗೆಯನ್ನು ನೋಡುತ್ತಾ, ಗಟ್ಟಿಯಾಗಿ ಕೂಗುತ್ತಾ ಹೇಳಿದ್ದು, ‘ಈ ಮಹಾ ನಗರಕ್ಕೆ ಸಮಾನವಾದ ನಗರವು ಯಾವದು?’ ಮತ್ತು ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಹೊಯಿದುಕೊಂಡು ಅಳುತ್ತಾ ಗೋಳಾಡುತ್ತಾ ಕೂಗಿ ಹೇಳಿದ್ದು, ‘ಸಮುದ್ರದಲ್ಲಿ ನಾವೆಗಳಿದ್ದವರೆಲ್ಲರೂ ಯಾರ ದುಬಾರಿತನದಿಂದ ಐಶ್ವರ್ಯವಂತರಾದರೋ ಆ ಮಹಾ ನಗರಕ್ಕೆ ತೀರಾ ವಿಷಾದನೀಯ, ತೀರಾ ವಿಷಾದನೀಯ, ಏಕೆಂದರೆ ಒಂದೇ ಗಳಿಗೆಯಲ್ಲಿ ಅವಳು ಧ್ವಂಸಮಾಡಲ್ಪಟ್ಟಿದ್ದಾಳೆ!’” (ಪ್ರಕಟನೆ 18:17ಬಿ-19, NW) ಪ್ರಾಚೀನ ಬಾಬೆಲ್ ಒಂದು ವಾಣಿಜ್ಯ ನಗರವಾಗಿತ್ತು ಮತ್ತು ಒಂದು ಮಹಾ ನೌಕಾಬಲವು ಅಲ್ಲಿತ್ತು. ತದ್ರೀತಿಯಲ್ಲಿ ಮಹಾ ಬಾಬೆಲ್ ತನ್ನ ಜನರ “ಬಹು ನೀರುಗಳ” ಮೂಲಕ ಬಹಳ ವ್ಯಾಪಾರವನ್ನು ಮಾಡುತ್ತಾಳೆ. ಇದು ಅವಳ ಧಾರ್ಮಿಕ ಪ್ರಜೆಗಳಲ್ಲಿ ಅನೇಕರಿಗೆ ಉದ್ಯೋಗವನ್ನು ಒದಗಿಸಿದೆ. ಮಹಾ ಬಾಬೆಲಿನ ನಾಶನವು ಇವರಿಗೆ ಎಂಥ ಒಂದು ಆರ್ಥಿಕ ಏಟು ಆಗುವುದು! ಅವಳಂಥ ಇನ್ನೊಂದು ಜೀವನೋಪಾಯದ ಮೂಲ ಇನ್ನೆಂದೂ ಇರಲಿಕ್ಕಿಲ್ಲ.
ಅವಳ ಸಂಹಾರದ ವಿಷಯದಲ್ಲಿ ಹರ್ಷಿಸುವುದು
7, 8. ಮಹಾ ಬಾಬೆಲಿನ ಕುರಿತಾಗಿ ಪರಲೋಕದಿಂದ ಬಂದ ಶಬ್ದವು ಅದರ ಸಂದೇಶವನ್ನು ಹೇಗೆ ಪರಾಕಾಷ್ಠೆಗೇರಿಸುತ್ತದೆ, ಮತ್ತು ಆ ಮಾತುಗಳಿಗೆ ಯಾರು ಪ್ರತಿಕ್ರಿಯೆ ತೋರಿಸುವರು?
7 ಪ್ರಾಚೀನ ಬಾಬೆಲ್ ಮೇದ್ಯಯರಿಂದ ಮತ್ತು ಪಾರಸಿಯರಿಂದ ಪರಾಭವಗೊಳಿಸಲ್ಪಟ್ಟಾಗ ಯೆರೆಮೀಯನು ಪ್ರವಾದನಾರೂಪದಲ್ಲಿ ನುಡಿದದ್ದು: “ಆಗ ಭೂಮ್ಯಾಕಾಶಗಳೂ ಅಲ್ಲಿನ ಸಮಸ್ತವೂ ಬಾಬೆಲಿನ ನಾಶನವನ್ನು ನೋಡಿ ಹರ್ಷಧ್ವನಿಗೈಯುವವು.” (ಯೆರೆಮೀಯ 51:48) ಮಹಾ ಬಾಬೆಲ್ ನಾಶವಾದಾಗ, ಪರಲೋಕದಿಂದ ಬಂದ ಶಬ್ದವು ಮಹಾ ಬಾಬೆಲಿನ ಕುರಿತು ಹೇಳುತ್ತಾ, ಅದರ ಸಂದೇಶವನ್ನು ತುತ್ತತುದಿಗೇರಿಸುತ್ತದೆ: “ಓ ಸ್ವರ್ಗವೇ, ಅಲ್ಲದೆ ಪವಿತ್ರಜನರೇ, ಅಪೊಸ್ತಲರೇ, ಪ್ರವಾದಿಗಳೇ ನೀವು ಅವಳ ವಿಷಯದಲ್ಲಿ ಹರ್ಷಿಸಿರಿ, ಏಕೆಂದರೆ ದೇವರು ನಿಮಗಾಗಿ ಅವಳಿಂದ ನ್ಯಾಯಾತ್ಮಕವಾಗಿ ಶಿಕ್ಷೆಯನ್ನು ವಸೂಲು ಮಾಡಿದ್ದಾನೆ!’” (ಪ್ರಕಟನೆ 18:20, NW) ಯೆಹೋವನು ಮತ್ತು ದೇವದೂತರು ಹಾಗೂ ಅಪೊಸ್ತಲರು ಮತ್ತು ಪ್ರಾಚೀನ ಕ್ರೈಸ್ತ ಪ್ರವಾದಿಗಳು, ಯಾರು ಈಗಾಗಲೇ ಪುನರುತ್ಥಾನಗೊಳಿಸಲ್ಪಟ್ಟಿದ್ದಾರೊ, ಮತ್ತು 24 ಮಂದಿ ಹಿರಿಯರ ಏರ್ಪಾಡಿನಲ್ಲಿ ತಮ್ಮ ಸ್ಥಾನವನ್ನು ತೆಗೆದುಕೊಂಡಿದ್ದಾರೊ, ಇವರೆಲ್ಲರೂ ದೇವರ ಹಳೆಯ ವೈರಿಯ ಪೂರ್ಣ ನಾಶವನ್ನು ನೋಡಲು ಹರ್ಷಗೊಳ್ಳುವರು.—ಹೋಲಿಸಿರಿ ಕೀರ್ತನೆ 97:8-12.
8 ನಿಜ, ಎಲ್ಲಾ “ಪವಿತ್ರ ಜನರು”—ಪರಲೋಕಕ್ಕೆ ಪುನರುತ್ಥಾನ ಹೊಂದಿದವರಾಗಿರಲಿ, ಭೂಮಿಯ ಮೇಲೆ ಇನ್ನೂ ಜೀವಿಸುತ್ತಿರುವವರಾಗಿರಲಿ—ಒಟ್ಟುಸೇರಿರುವ ಬೇರೆ ಕುರಿಗಳ ಮಹಾ ಸಮೂಹ ಮಾಡಲಿರುವಂತೆಯೇ, ಹರ್ಷದಿಂದ ಕೂಗುವರು. ಸಕಾಲದಲ್ಲಿ, ಪೂರ್ವಕಾಲದ ಎಲ್ಲಾ ನಂಬಿಗಸ್ತ ಜನರು ಹೊಸ ವಿಷಯಗಳ ವ್ಯವಸ್ಥೆಯೊಳಗೆ ಪುನರುತ್ಥಾನಗೊಳಿಸಲ್ಪಡಲಿರುವರು, ಮತ್ತು ಇವರು ಕೂಡ ಹರ್ಷಿಸುವಿಕೆಯಲ್ಲಿ ಜತೆಗೂಡಲಿರುವರು. ದೇವರ ಜನರು ತಮ್ಮ ಸುಳ್ಳು ಧಾರ್ಮಿಕ ಹಿಂಸಕರ ಮೇಲೆ ಪ್ರತೀಕಾರವನ್ನು ತೀರಿಸಲು ಪ್ರಯತ್ನಿಸಿಲ್ಲ. ಅವರು ಯೆಹೋವನ ಮಾತುಗಳನ್ನು ನೆನಪಿನಲ್ಲಿಟ್ಟಿದ್ದಾರೆ: “ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು.” (ರೋಮಾಪುರ 12:19; ಧರ್ಮೋಪದೇಶಕಾಂಡ 32:35, 41-43) ಒಳ್ಳೇದು, ಯೆಹೋವನು ಈಗ ಪ್ರತಿಫಲವನ್ನು ಕೊಟ್ಟಿದ್ದಾನೆ. ಮಹಾ ಬಾಬೆಲಿನಿಂದ ಸುರಿಸಲ್ಪಟ್ಟಿರುವ ಎಲ್ಲಾ ರಕ್ತಕ್ಕೆ ಮುಯ್ಯಿ ತೀರಿಸಲ್ಪಟ್ಟಿರುವುದು.
ದೊಡ್ಡ ಬೀಸುವ ಕಲ್ಲೊಂದನ್ನು ಎಸೆಯುವುದು
9, 10. (ಎ) ಬಲಿಷ್ಠನಾದ ದೇವದೂತನು ಈಗ ಏನನ್ನು ಮಾಡುತ್ತಾನೆ ಮತ್ತು ಹೇಳುತ್ತಾನೆ? (ಬಿ) ಪ್ರಕಟನೆ 18:21 ರಲ್ಲಿ ಬಲಿಷ್ಠನಾದ ದೇವದೂತನಿಂದ ನಿರ್ವಹಿಸಲ್ಪಟ್ಟ ಕ್ರಿಯೆಯ ಅನುರೂಪತೆಯಲ್ಲಿ ಯಾವ ಕ್ರಿಯೆಯು ಯೆರೆಮೀಯನ ಸಮಯದಲ್ಲಿ ಸಂಭವಿಸಿತು, ಮತ್ತು ಅದು ಏನನ್ನು ಖಾತರಿಗೊಳಿಸಿತು? (ಸಿ) ಯೋಹಾನನು ನೋಡಿದ ಬಲಿಷ್ಠನಾದ ದೇವದೂತನಿಂದ ನಿರ್ವಹಿಸಲ್ಪಟ್ಟ ಕ್ರಿಯೆಯು ಯಾವುದನ್ನು ಖಾತ್ರಿಪಡಿಸುತ್ತದೆ?
9 ಮಹಾ ಬಾಬೆಲಿನ ಮೇಲೆ ಬರುವ ಯೆಹೋವನ ತೀರ್ಪು ಅಂತಿಮವಾಗಿದೆಯೆಂದು ಯೋಹಾನನು ಮುಂದೆ ನೋಡಿದವುಗಳು ದೃಢಪಡಿಸುತ್ತವೆ: “ಮತ್ತು ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರದೊಳಗೆ ಎಸೆದು ಹೀಗಂದನು: ‘ಈ ಪ್ರಕಾರ ಮಹಾ ನಗರವಾದ ಬಾಬೆಲು ಒಂದು ಕ್ಷಿಪ್ರ ಎಸೆತದಿಂದ ಎಸೆಯಲ್ಪಡುವಳು, ಮತ್ತು ಅವಳು ಇನ್ನೆಂದಿಗೂ ಕಾಣಸಿಗಳು.’” (ಪ್ರಕಟನೆ 18:21, NW) ಯೆರೆಮೀಯನ ಸಮಯದಲ್ಲಿ, ಒಂದು ಬಲವುಳ್ಳ ಪ್ರವಾದನಾ ಅರ್ಥದೊಂದಿಗೆ ಒಳಗೂಡಿದ್ದ ತದ್ರೀತಿಯ ಕ್ರಿಯೆಯೊಂದು ನಡಿಸಲ್ಪಟ್ಟಿತ್ತು. “ಬಾಬೆಲಿಗೆ ಸಂಭವಿಸತಕ್ಕ ಎಲ್ಲಾ ಕೇಡಿನ ವಿಷಯವನ್ನು” ಒಂದು ಪುಸ್ತಕದಲ್ಲಿ ಬರೆಯಲು ಯೆರೆಮೀಯನು ಪ್ರೇರಿಸಲ್ಪಟ್ಟನು. ಅವನು ಪುಸ್ತಕವನ್ನು ಸೆರಾಯನಿಗೆ ಕೊಟ್ಟನು ಮತ್ತು ಬಾಬೆಲಿಗೆ ಪ್ರಯಾಣಿಸಲು ಅವನಿಗೆ ಹೇಳಿದನು. ಅಲ್ಲಿ ಯೆರೆಮೀಯನ ಆದೇಶವನ್ನು ಅನುಸರಿಸುತ್ತಾ, ಸೆರಾಯನು ನಗರದ ವಿರುದ್ಧ ಒಂದು ಘೋಷಣೆಯನ್ನು ಓದಿದನು: “ಯೆಹೋವನೇ, ನೀನು ಈ ಸ್ಥಳವನ್ನು ನಿರ್ಮೂಲಮಾಡಬೇಕೆಂದು ಉದ್ದೇಶಿಸಿ ಇದು ಜನರಿಗೂ ಪಶುಗಳಿಗೂ ನೆಲೆಯಾಗದೆ ಸದಾ ಹಾಳಾಗಿಯೇ ಇರಲಿ ಎಂದು ನುಡಿದಿದ್ದೀಯಲ್ಲಾ.” ಸೆರಾಯನು ಅನಂತರ ಪುಸ್ತಕಕ್ಕೆ ಒಂದು ಕಲ್ಲನ್ನು ಕಟ್ಟಿ, ಅದನ್ನು ಯೂಫ್ರೇಟೀಸ್ ನದಿಯೊಳಗೆ ಬಿಸಾಡುತ್ತಾ, ಹೀಗಂದನು: “ಯೆಹೋವನು ಬಾಬೆಲಿಗೆ ಬರಮಾಡುವ ವಿಪತ್ತಿನಿಂದ ಆ ಪಟ್ಟಣವೂ ಹೀಗೆಯೇ ಮುಣುಗುವದು, ಮತ್ತೆ ಏಳದು.”—ಯೆರೆಮೀಯ 51:59-64.
10 ಕಟ್ಟಿದ ಕಲ್ಲಿನೊಂದಿಗೆ ಪುಸ್ತಕವನ್ನು ನದಿಯೊಳಗೆ ಬಿಸಾಡುವುದು, ಬಾಬೆಲ್ ಪುನಃ ಎಂದಿಗೂ ಸುಸ್ಥಿತಿಗೆ ಬರುವುದಿಲ್ಲ, ವಿಸ್ಮೃತಿಯೊಳಗೆ ಮುಳುಗಿಸಲ್ಪಡುವುದು ಎನ್ನುವುದಕ್ಕೆ ಒಂದು ಖಾತರಿಯಾಗಿತ್ತು. ಬಲಿಷ್ಠನಾದ ದೇವದೂತನೊಬ್ಬನು ತದ್ರೀತಿಯ ಕ್ರಿಯೆಯೊಂದನ್ನು ಗೈಯುವುದನ್ನು ಅಪೊಸ್ತಲ ಯೋಹಾನನು ನೋಡುವುದು, ಮಹಾ ಬಾಬೆಲಿನ ಕಡೆಗಿನ ಯೆಹೋವನ ಉದ್ದೇಶವು ನೆರವೇರುತ್ತದೆ ಎಂಬುದಕ್ಕೆ ಹಾಗೆಯೇ ಒಂದು ಬಲವಾದ ಖಾತ್ರಿಯಾಗಿದೆ. ಇಂದು ಪ್ರಾಚೀನ ಬಾಬೆಲಿನ ಸಂಪೂರ್ಣ ಹಾಳುಗೆಡವಲ್ಪಟ್ಟ ಧ್ವಂಸಕಾರಕ ಅವ್ಯವಸ್ಥೆಯು ಸಮೀಪ ಭವಿಷ್ಯತ್ತಿನಲ್ಲಿ ಸುಳ್ಳು ಧರ್ಮಕ್ಕೆ ಏನು ಉಂಟಾಗಲಿರುವುದೋ ಅದಕ್ಕೆ ಬಲವುಳ್ಳ ಸಾಕ್ಷಿ ಹೇಳುತ್ತದೆ.
11, 12. (ಎ) ಮಹಾ ಬಾಬೆಲನ್ನು ಈಗ ಬಲಿಷ್ಠನಾದ ದೇವದೂತನು ಹೇಗೆ ಸಂಬೋಧಿಸುತ್ತಾನೆ? (ಬಿ) ಯೆರೆಮೀಯನು ಧರ್ಮಭ್ರಷ್ಟ ಯೆರೂಸಲೇಮಿನ ಕುರಿತು ಹೇಗೆ ಪ್ರವಾದಿಸಿದನು, ಮತ್ತು ಅದು ನಮ್ಮ ದಿನಗಳಿಗೆ ಏನನ್ನು ಸೂಚಿಸಿತು?
11 ಬಲಿಷ್ಠನಾದ ದೇವದೂತನು ಈಗ ಮಹಾ ಬಾಬೆಲನ್ನು ಹೀಗನ್ನುತ್ತಾ, ಸಂಬೋಧಿಸುತ್ತಾನೆ: “ವೀಣೆಯೊಂದಿಗೆ ಹಾಡುವ ಹಾಡುಗಾರರ, ಸಂಗೀತಗಾರರ, ಕೊಳಲೂದುವವರ, ಮತ್ತು ತುತೂರಿಯವರ ಧ್ವನಿಯು ಇನ್ನೆಂದಿಗೂ ಪುನಃ ಕೇಳಿಬರದು, ಮತ್ತು ಯಾವುದೇ ಕಸಬಿನ ಕುಶಲಕರ್ಮಿಯು ನಿನ್ನಲ್ಲಿ ಇನ್ನೆಂದಿಗೂ ಕಂಡುಬರನು, ಮತ್ತು ಬೀಸುವ ಕಲ್ಲಿನ ಯಾವುದೇ ಶಬ್ದವು ನಿನ್ನಲ್ಲಿ ಪುನಃ ಕೇಳಿಬರದು, ದೀಪದ ಯಾವ ಬೆಳಕೂ ಪುನಃ ನಿನ್ನಲ್ಲಿ ಪ್ರಕಾಶಿಸದು, ನಿನ್ನಲ್ಲಿ ವರನ ಮತ್ತು ವಧುವಿನ ಸರ್ವವೇ ಇನ್ನು ಮುಂದೆ ಕೇಳಿಬರದು; ಏಕೆಂದರೆ ನಿನ್ನ ಸಂಚಾರಿ ವರ್ತಕರು ಭೂಮಿಯ ಮೇಲರ್ತಗತಿಯ ಜನರಾಗಿದ್ದರು; ನಿನ್ನ ಪ್ರೇತ ವ್ಯವಹಾರಾಚರಣೆಗಳ ಮೂಲಕ ಸಕಲ ರಾಷ್ಟ್ರಗಳು ತಪ್ಪುದಾರಿಗೆಳೆಯಲ್ಪಟ್ಟವು.”—ಪ್ರಕಟನೆ 18:22, 23, NW.
12 ಸದೃಶವಾದ ಶಬ್ದಗಳಲ್ಲಿ, ಯೆರೆಮೀಯನು ಧರ್ಮಭ್ರಷ್ಟ ಯೆರೂಸಲೇಮಿನ ಕುರಿತು ಹೀಗೆ ಪ್ರವಾದಿಸಿದನು: “ಇದಲ್ಲದೆ ನಾನು ಅವುಗಳಲ್ಲಿ ಹರ್ಷಸಂಭ್ರಮಗಳ ಧ್ವನಿಯನ್ನೂ ವಧೂವರರ ಸರ್ವವನ್ನೂ ಬೀಸುವ ಕಲ್ಲಿನ ಸದ್ದನ್ನೂ ದೀಪದ ಬೆಳಕನ್ನೂ ನಿಲ್ಲಿಸಿಬಿಡುವೆನು. ಈ ದೇಶವೆಲ್ಲಾ ಹಾಳಾಗಿ ಬೆರಗಿಗೆ ಈಡಾಗುವದು.” (ಯೆರೆಮೀಯ 25:10, 11) ಸಾ. ಶ. ಪೂ. 607ರ ಅನಂತರ ಯೆರೂಸಲೇಮಿನ ಧ್ವಂಸಕಾರಕ ಅವಸ್ಥೆಯಿಂದ ಸಜೀವವಾಗಿ ಚಿತ್ರಿಸಲಾದಂತೆ ಮಹಾ ಬಾಬೆಲಿನ ಪ್ರಮುಖ ಭಾಗವಾಗಿ ಕ್ರೈಸ್ತಪ್ರಪಂಚವು ನಿರ್ಜೀವ ಅವಶೇಷವೊಂದಾಗಲಿದೆ. ಒಂದು ಸಮಯದಲ್ಲಿ ಉಲ್ಲಾಸದೊಂದಿಗೆ ನಲಿಯುತ್ತಿದ್ದ ಮತ್ತು ಪ್ರತಿದಿನದ ಗದ್ದಲದಿಂದ ಸಂಭ್ರಮ ಪಡುತ್ತಿದ್ದ ಕ್ರೈಸ್ತ ಪ್ರಪಂಚವು ತನ್ನನ್ನು ವಶಪಡಿಸಲ್ಪಟ್ಟವಳಾಗಿ ಮತ್ತು ತೊರೆಯಲ್ಪಟ್ಟವಳಾಗಿ ಕಂಡುಕೊಳ್ಳಲಿರುವಳು.
13. ಯಾವ ಶೀಘ್ರ ಬದಲಾವಣೆಯು ಮಹಾ ಬಾಬೆಲಿನ ಮೇಲೆ ಹಠಾತ್ತಾಗಿ ಬಂದು ಬಿಡುತ್ತದೆ, ಮತ್ತು ಅವಳ “ಸಂಚಾರಿ ವರ್ತಕರ” ಮೇಲೆ ಪರಿಣಾಮವೇನಾಗಿದೆ?
13 ನಿಜ, ದೇವದೂತನು ಇಲ್ಲಿ ಯೋಹಾನನಿಗೆ ಹೇಳುವಂತೆ ಮಹಾ ಬಾಬೆಲಿನ ಎಲ್ಲವೂ ಬಲವುಳ್ಳ ಅಂತಾರಾಷ್ಟ್ರೀಯ ಸಾಮ್ರಾಜ್ಯದಿಂದ ಒಂದು ನೀರಸವಾದ ನಿರ್ಜನ ಭೂಮಿಯಂತಿರುವ ಹಾಳು ಪ್ರದೇಶಕ್ಕೆ ಬದಲಾಗಲಿರುವುದು. ಅವಳ “ಸಂಚಾರಿ ವರ್ತಕರು”—ಇವರಲ್ಲಿ ಮೇಲಂತಸ್ತಿನ ಕೋಟ್ಯಾಧೀಶರುಗಳು ಒಳಗೂಡಿದ್ದಾರೆ—ವೈಯಕ್ತಿಕ ಲಾಭಕ್ಕಾಗಿ ಅಥವಾ ಮರೆಯಾಗಿ ಅವಳ ಧರ್ಮವನ್ನು ಉಪಯೋಗಿಸಿದ್ದಾರೆ. ಮತ್ತು ಅವರೊಂದಿಗೆ ರಂಗಪ್ರಕಾಶದಲ್ಲಿ ಪಾಲಿಗರಾಗುವುದು ಲಾಭದಾಯಕವಾಗಿದೆಯೆಂದು ವೈದಿಕರು ಕಂಡುಕೊಂಡಿದ್ದಾರೆ. ಆದರೆ ಆ ವರ್ತಕರು ಮಹಾ ಬಾಬೆಲನ್ನು ತಮ್ಮ ಸಹಾಯಕಳಾಗಿ ಇನ್ನೆಂದಿಗೂ ಪಡೆಯಲಾರರು. ಇನ್ನೆಂದಿಗೂ ತನ್ನ ರಹಸ್ಯಾರ್ಥವುಳ್ಳ ಧಾರ್ಮಿಕ ಆಚಾರಗಳೊಂದಿಗೆ ಭೂಮಿಯ ಜನಾಂಗದವರನ್ನು ಅವಳು ವಂಚಿಸಲಾರಳು.
ದಿಗಿಲುಗೊಳಿಸುವ ರಕ್ತಾಪರಾಧ
14. ಯೆಹೋವನ ತೀರ್ಪಿನ ತೀವ್ರತೆಗೆ ಬಲಿಷ್ಠನಾದ ದೇವದೂತನು ಯಾವ ಕಾರಣವನ್ನು ಕೊಡುತ್ತಾನೆ, ಮತ್ತು ಯೇಸುವು ಭೂಮಿಯಲ್ಲಿದ್ದಾಗ ತದ್ರೀತಿಯಲ್ಲಿ ಏನನ್ನು ಹೇಳಿದನು?
14 ಸಮಾಪ್ತಿಯಲ್ಲಿ, ಮಹಾ ಬಾಬೆಲನ್ನು ಇಷ್ಟು ಕಠಿನವಾಗಿ ಯೆಹೋವನು ಯಾಕೆ ನ್ಯಾಯ ತೀರಿಸುತ್ತಾನೆ ಎಂಬುದನ್ನು ಬಲಿಷ್ಠನಾದ ದೇವದೂತನು ಹೇಳುತ್ತಾನೆ. ದೇವದೂತನು ಹೇಳುವುದು: “ಪ್ರವಾದಿಗಳ ರಕ್ತವೂ ಪವಿತ್ರ ಜನರ ರಕ್ತವೂ ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ಅವಳಲ್ಲಿ ಸಿಕ್ಕಿತು.” (ಪ್ರಕಟನೆ 18:24, NW) ಅವರು “ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು . . . ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತ” ಕ್ಕಾಗಿ ಹೊಣೆಗಾರರಾಗಿದ್ದಾರೆ ಎಂದು ಯೇಸುವು ಭೂಮಿಯಲ್ಲಿದ್ದಾಗ ಯೆರೂಸಲೇಮಿನ ಧಾರ್ಮಿಕ ಮುಖಂಡರಿಗೆ ಹೇಳಿದನು. ಅದೇ ಪ್ರಕಾರ ಆ ವಕ್ರಬುದ್ಧಿಯ ಸಂತಾನವು ಸಾ. ಶ. 70 ರಲ್ಲಿ ನಾಶವಾಯಿತು. (ಮತ್ತಾಯ 23:35-38) ಇಂದು, ಧಾರ್ಮಿಕರ ಇನ್ನೊಂದು ಸಂತತಿಯು ದೇವರ ಸೇವಕರ ಹಿಂಸೆಯ ರಕ್ತಾಪರಾಧವನ್ನು ಹೊತ್ತಿದೆ.
15. ನಾಜಿ ಜರ್ಮನಿಯಲ್ಲಿ ಕ್ಯಾತೊಲಿಕ್ ಚರ್ಚ್ ಎರಡು ಎಣಿಕೆಗಳಲ್ಲಿ ಹೇಗೆ ರಕ್ತದೋಷಿಯಾಗಿತ್ತು?
15 ದ ಕ್ಯಾತೊಲಿಕ್ ಚರ್ಚ್ ಆ್ಯಂಡ್ ನಾಜಿ ಜರ್ಮನಿ ಎಂಬ ತನ್ನ ಪುಸ್ತಕದಲ್ಲಿ ಗ್ಯುಂಟರ್ ಲಿವಿ ಬರೆಯುವುದು: “ಯೆಹೋವನ ಸಾಕ್ಷಿಗಳು ಏಪ್ರಿಲ್ 13 [1933] ರಂದು ಬವೇರಿಯದಲ್ಲಿ ನಿಗ್ರಹಿಸಲ್ಪಟ್ಟಾಗ, ನಿಷೇಧಿತ ಧರ್ಮವನ್ನು ಇನ್ನೂ ಆಚರಿಸುವ ಯಾವುದೇ ಸದಸ್ಯನ ಕುರಿತಾಗಿ ವರದಿಸುವ ನೇಮಕವನ್ನು ಸಹ ಚರ್ಚ್, ಶಿಕ್ಷಣ ಮತ್ತು ಧಾರ್ಮಿಕ ಮಂಡಲದಿಂದ ಸ್ವೀಕರಿಸಿತು.” ಕ್ಯಾತೊಲಿಕ್ ಚರ್ಚ್ ಸಾವಿರಾರು ಸಾಕ್ಷಿಗಳನ್ನು ಕೂಟಶಿಬಿರಗಳಿಗೆ ಕಳುಹಿಸುವ ಜವಾಬ್ದಾರಿಯಲ್ಲಿ ಪಾಲನ್ನು ಹೊಂದಿದೆ; ಅದರ ಕೈಗಳು ಮರಣ ದಂಡನೆ ಹೊಂದಿದ ನೂರಾರು ಸಾಕ್ಷಿಗಳ ಜೀವರಕ್ತದಿಂದ ಕಲಂಕಿತವಾಗಿವೆ. ಉದಾಹರಣೆಗೆ ವಿಲ್ಹೆಲ್ಮ್ ಕುಸ್ಸೆರೋವ್ರಂತಹ ಯುವ ಸಾಕ್ಷಿಗಳು, ಗುಂಡುಹಾರಿಸುವ ದಳದ ಎದುರು ತಾವು ಧೈರ್ಯದಿಂದ ಸಾಯಶಕ್ತರೆಂದು ತೋರಿಸಿದಾಗ, ಗುಂಡುಹಾರಿಸುವ ದಳವು ಮನಸ್ಸಾಕ್ಷಿಯ ಆಕ್ಷೇಪಕರಿಗೆ ತೀರ ಉತ್ತಮವೆಂದು ಹಿಟ್ಲರನು ನಿರ್ಧರಿಸಿದನು; ಆದುದರಿಂದ ವಿಲ್ಹೆಲ್ಮ್ನ ಸಹೋದರ ವೊಲ್ಪ್ಗಾಂಗ್, 20 ವರ್ಷದ ವಯಸ್ಸಿನಲ್ಲಿ ಶಿರಚ್ಛೇದನೆಯ ಯಂತ್ರದಿಂದ ಮೃತಿಹೊಂದಿದನು. ಅದೇ ಸಮಯದಲ್ಲಿ, ಯುವ ಜರ್ಮನ್ ಕ್ಯಾತೊಲಿಕರು ತಮ್ಮ ಜನ್ಮ ಭೂಮಿಯ ಸೈನ್ಯದಲ್ಲಿ ಮಡಿಯಲು ಕ್ಯಾತೊಲಿಕ್ ಚರ್ಚ್ ಪ್ರೋತ್ಸಾಹಿಸಿತು. ಚರ್ಚಿನ ರಕ್ತಾಪರಾಧವು ಸ್ಪಷ್ಟವಾಗಿ ಗೋಚರಿಸುತ್ತದೆ!
16, 17. (ಎ) ಮಹಾ ಬಾಬೆಲಿನ ಮೇಲೆ ಯಾವ ರಕ್ತಾಪರಾಧವು ಆಪಾದಿಸಲ್ಪಡಬೇಕು, ಮತ್ತು ನಾಜಿ ಹತ್ಯಾಕಾಂಡಗಳಲ್ಲಿ ಮಡಿದ ಯೆಹೂದ್ಯರ ಕುರಿತು ವ್ಯಾಟಿಕನ್ ಹೇಗೆ ರಕ್ತದೋಷಿಯಾಗಿದೆ? (ಬಿ) ಈ ಶತಕದಲ್ಲಿಯೇ ನೂರಾರು ಯುದ್ಧಗಳಲ್ಲಿ ನೂರಾರು ಲಕ್ಷಗಟ್ಟಲೆ ಮಂದಿಯ ಹತಿಸುವಿಕೆಗಾಗಿ ಸುಳ್ಳು ಧರ್ಮವನ್ನು ಆಪಾದಿಸಬೇಕಾದ ಒಂದು ವಿಧ ಯಾವುದು?
16 ಆದಾಗ್ಯೂ, ಪ್ರವಾದನೆಯು ಹೇಳುತ್ತದೇನಂದರೆ “ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು” ಮಹಾ ಬಾಬೆಲಿನ ಮೇಲೆ ಆಪಾದಿಸಲ್ಪಡಲೇಬೇಕು. ಆಧುನಿಕ ಸಮಯಗಳಲ್ಲಿ ಅದು ನಿಶ್ಚಯವಾಗಿಯೂ ಸತ್ಯವಾಗಿದೆ. ಉದಾಹರಣೆಗೆ, ಜರ್ಮನಿಯಲ್ಲಿ ಹಿಟ್ಲರನನ್ನು ಅಧಿಕಾರಕ್ಕೆ ತರುವುದರಲ್ಲಿ ಕ್ಯಾತೊಲಿಕ್ ಒಳಸಂಚು ಸಹಾಯ ಮಾಡಿದ್ದರಿಂದ, ನಾಜಿಯ ಯೆಹೂದ್ಯರ ಕೊಲೆಯಲ್ಲಿ ಮಡಿದ 60 ಲಕ್ಷ ಯೆಹೂದ್ಯರ ಸಂಬಂಧದಲ್ಲಿ ವ್ಯಾಟಿಕನ್ ಭೀಕರ ರಕ್ತಾಪರಾಧದಲ್ಲಿ ಸಹಭಾಗಿಯಾಗಿದೆ. ಇನ್ನೂ ಹೆಚ್ಚಾಗಿ, ಈ 20 ನೆಯ ಶತಮಾನ ಒಂದರಲ್ಲಿಯೇ 10 ಕೋಟಿಗಳಿಗಿಂತಲೂ ಅಧಿಕ ಜನರು ನೂರಾರು ಯುದ್ಧಗಳಲ್ಲಿ ಕೊಲ್ಲಲ್ಪಟ್ಟರು. ಈ ಸಂಬಂಧದಲ್ಲಿ ಸುಳ್ಳು ಧರ್ಮವು ಆರೋಪಿಸಲ್ಪಡಬೇಕೋ? ಹೌದು, ಎರಡು ರೀತಿಗಳಲ್ಲಿ.
17 ಒಂದು ವಿಧ ಯಾವುದೆಂದರೆ ಅನೇಕ ಯುದ್ಧಗಳು ಧಾರ್ಮಿಕ ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿವೆ. ಉದಾಹರಣೆಗೆ, 1946-48 ರಲ್ಲಿ ಹಿಂದೂಗಳ ಮತ್ತು ಮುಸ್ಲಿಮರ ಮಧ್ಯೆ ಭಾರತದಲ್ಲಿ ನಡೆದ ಹಿಂಸಾಚಾರವು ಧಾರ್ಮಿಕವಾಗಿ ಪ್ರೇರಿಸಲ್ಪಟ್ಟಿತ್ತು. ನೂರಾರು ಸಾವಿರ ಜೀವಗಳ ನಷ್ಟವಾಯಿತು. ಇರಾಕ್ ಮತ್ತು ಇರಾನ್ ಮಧ್ಯೆ 1980 ಗಳಲ್ಲಿ ನಡೆದ ಘರ್ಷಣೆಯು ಭಿನ್ನವರ್ಗಾವಲಂಬಿಗಳ ವ್ಯತ್ಯಾಸಗಳಿಗೆ ಸಂಬಂಧಿಸಿದೆ. ಇದರಲ್ಲಿ ನೂರಾರು ಸಾವಿರ ವ್ಯಕ್ತಿಗಳು ಕೊಲ್ಲಲ್ಪಟ್ಟರು. ಉತ್ತರ ಆಯರ್ಲೆಂಡಿನಲ್ಲಿ ಕ್ಯಾತೊಲಿಕರ ಮತ್ತು ಪ್ರಾಟೆಸ್ಟಂಟರ ಮಧ್ಯೆ ನಡೆದ ತಿಕ್ಕಾಟವು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಲೆಬನಾನಿನಲ್ಲಿ ಮುಂದುವರಿಯುತ್ತಿರುವ ಹಿಂಸಾಚಾರವು ಧಾರ್ಮಿಕವಾಗಿ ಆಧಾರಿತವಾಗಿದೆ. ಈ ಕಾರ್ಯಕ್ಷೇತ್ರವನ್ನು ಸಮೀಕ್ಷಿಸುತ್ತಾ ವಾರ್ತಾ ಅಂಕಣಕಾರ ಸಿ. ಎಲ್. ಸಲ್ಸ್ಬರ್ಜರ್ 1976 ರಲ್ಲಿ ಹೇಳಿದ್ದು: “ಭೂಮಿಯ ಸುತ್ತಲೂ ಪ್ರಾಯಶಃ ಈಗ ಹೋರಾಡಲ್ಪಡುತ್ತಿರುವ ಅರ್ಧ ಯಾ ಅದಕ್ಕಿಂತ ಹೆಚ್ಚಿನ ಯುದ್ಧಗಳು, ಪ್ರಾಯಶಃ ಒಂದೇ ಬಹಿರಂಗವಾಗಿ ಧಾರ್ಮಿಕ ಘರ್ಷಣೆಗಳಾಗಿರುತ್ತವೆ, ಇಲ್ಲವೆ ಧಾರ್ಮಿಕ ತಿಕ್ಕಾಟಗಳೊಂದಿಗೆ ಒಳಗೂಡಿವೆಂಬುದು ದುಃಖಕರ ವಾಸ್ತವಿಕತೆಯಾಗಿದೆ.” ನಿಜವಾಗಿಯೂ, ಮಹಾ ಬಾಬೆಲಿನ ಪ್ರಕ್ಷುಬ್ಧ ಇತಿಹಾಸದ ಉದ್ದಕ್ಕೂ ವಿಷಯವು ಹಾಗೆಯೇ ಇತ್ತು.
18. ಲೋಕದ ಧರ್ಮಗಳು ರಕ್ತದೋಷಿಯಾಗುವ ಎರಡನೆಯ ರೀತಿ ಯಾವುದು?
18 ಎರಡನೆಯ ವಿಧವು ಯಾವುದಾಗಿದೆ? ಯೆಹೋವನ ದೃಷ್ಟಿಕೋನದಿಂದ ಲೋಕದ ಧರ್ಮಗಳು ರಕ್ತದೋಷಿಯಾಗಿವೆ. ಯಾಕಂದರೆ ತನ್ನ ಸೇವಕರಿಗಾಗಿರುವ ಯೆಹೋವನ ಆವಶ್ಯಕತೆಗಳ ಸತ್ಯವನ್ನು ತಮ್ಮ ಹಿಂಬಾಲಕರಿಗೆ ಅವರು ಮನದಟ್ಟಾಗುವ ರೀತಿಯಲ್ಲಿ ಕಲಿಸಿರುವುದಿಲ್ಲ. ದೇವರ ಸತ್ಯಾರಾಧಕರು ಯೇಸು ಕ್ರಿಸ್ತನನ್ನು ಅನುಕರಿಸಲೇ ಬೇಕು, ಮತ್ತು ಅವರ ರಾಷ್ಟ್ರೀಯ ಮೂಲವನ್ನು ಲಕ್ಷಿಸದೆ ಇತರರ ಕಡೆಗೆ ಪ್ರೀತಿಯನ್ನು ತೋರಿಸಬೇಕೆಂದು ಕೂಡ ಮನಗಾಣುವ ರೀತಿಯಲ್ಲಿ ಜನರಿಗೆ ಅವರು ಕಲಿಸಿರುವುದಿಲ್ಲ. (ಮೀಕ 4:3, 5; ಯೋಹಾನ 13:34, 35; ಅ. ಕೃತ್ಯಗಳು 10:34, 35; 1 ಯೋಹಾನ 3:10-12) ಮಹಾ ಬಾಬೆಲನ್ನಾಗಿ ಮಾಡುವ ಧರ್ಮಗಳು ಈ ಸಂಗತಿಗಳನ್ನು ಕಲಿಸದೆ ಇದುದ್ದರಿಂದ ಅವರ ಅನುಯಾಯಿಗಳು ಅಂತಾರಾಷ್ಟ್ರೀಯ ಸಂಗ್ರಾಮದ ಸುಳಿಯೊಳಗೆ ಸೆಳೆಯಲ್ಪಟ್ಟಿದ್ದಾರೆ. ಈ ಶತಮಾನದ ಮೊದಲಾರ್ಧದಲ್ಲಿ ಹೋರಾಡಲ್ಪಟ್ಟ ಎರಡು ಲೋಕ ಯುದ್ಧಗಳಲ್ಲಿ ಇದು ಎಷ್ಟು ಸುವ್ಯಕ್ತವಾಗಿತ್ತು, ಇವೆರಡೂ ಕ್ರೈಸ್ತ ಪ್ರಪಂಚದಲ್ಲಿ ಪ್ರಾರಂಭಿಸಲ್ಪಟ್ಟಿದ್ದವು ಮತ್ತು ಧಾರ್ಮಿಕರು ಒಬ್ಬರನ್ನೊಬ್ಬರು ಹತಿಸುವುದರಲ್ಲಿ ಇದು ಫಲಿಸಿತು. ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರೂ ಬೈಬಲ್ ಸೂತ್ರಗಳಿಗೆ ಅಂಟಿಕೊಂಡಿರುತ್ತಿದ್ದರೆ, ಆ ಯುದ್ಧಗಳು ಎಂದೂ ಸಂಭವಿಸುತ್ತಿರಲಿಲ್ಲ.
19. ಮಹಾ ಬಾಬೆಲ್ ದಿಗಿಲುಗೊಳಿಸುವ ಯಾವ ರಕ್ತಾಪರಾಧವನ್ನು ಹೊತ್ತಿದೆ?
19 ಯೆಹೋವನು ಈ ಎಲ್ಲಾ ರಕ್ತಸುರಿಯುವಿಕೆಯ ಆಪಾದನೆಯನ್ನು ಮಹಾ ಬಾಬೆಲಿನ ಪಾದಗಳಲ್ಲಿ ಇಡುತ್ತಾನೆ. ಧಾರ್ಮಿಕ ಮುಖಂಡರು, ನಿರ್ದಿಷ್ಟವಾಗಿ ಕ್ರೈಸ್ತಪ್ರಪಂಚದಲ್ಲಿದ್ದವರು ತಮ್ಮ ಜನರಿಗೆ ಬೈಬಲ್ ಸತ್ಯತೆಗಳನ್ನು ಕಲಿಸಿದ್ದರೆ ಇಂಥ ಭೀಕರ ರಕ್ತ ಸುರಿಸುವಿಕೆ ಸಂಭವಿಸುತ್ತಿರಲಿಲ್ಲ. ನಿಜವಾಗಿಯೂ, ಹಾಗಾದರೆ ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಮಹಾ ಬಾಬೆಲ್—ಮಹಾ ವೇಶ್ಯಾ ಸ್ತ್ರೀ ಮತ್ತು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವು—ತಾನು ಹಿಂಸಿಸಿದ ಮತ್ತು ಕೊಂದ “ಪ್ರವಾದಿಗಳ ಮತ್ತು ದೇವ ಜನರ ರಕ್ತಕ್ಕೆ” ಮಾತ್ರವೇ ಅಲ್ಲ, ಬದಲಿಗೆ “ಭೂಮಿಯ ಮೇಲೆ ಹತಿಸಲ್ಪಟ್ಟವರೆಲ್ಲರ” ರಕ್ತಕ್ಕಾಗಿ ಯೆಹೋವನಿಗೆ ಉತ್ತರವನ್ನು ಕೊಡಲೇ ಬೇಕು. ಮಹಾ ಬಾಬೆಲ್ ಖಂಡಿತವಾಗಿಯೂ ದಿಗಿಲುಗೊಳಿಸುವ ಒಂದು ರಕ್ತಾಪರಾಧವನ್ನು ಹೊತ್ತಿದೆ. ಅವಳ ಕೊನೆಯ ನಾಶನವು ಸಂಭವಿಸುವಾಗ ಅವಳು ತೊಲಗಿದ್ದು ಒಳ್ಳೆಯದೇ ಆಗಿರುತ್ತದೆ!
[ಪುಟ 381 ರಲ್ಲಿರುವ ಚೌಕ]
ಒಪ್ಪಂದದ ಬೆಲೆ
ಗ್ಯುಂಟರ್ ಲಿವಿ ಬರೆಯುವುದು ದ ಕ್ಯಾತೊಲಿಕ್ ಚರ್ಚ್ ಆ್ಯಂಡ್ ನಾಜಿ ಜರ್ಮನಿ ಎಂಬ ತನ್ನ ಪುಸ್ತಕದಲ್ಲಿ: “ನಾಜಿ ಪ್ರಭುತ್ವಕ್ಕೆ ದೃಢವಾದ ವಿರೋಧದ ಧೋರಣೆಗೆ ಜರ್ಮನ್ ಕತಾಲಿಸಿಜಮ್ ಆರಂಭದಿಂದಲೇ ಅಂಟಿಕೊಂಡಿದ್ದರೆ, ಲೋಕದ ಇತಿಹಾಸವು ಒಂದು ಭಿನ್ನವಾದ ಪಥವನ್ನು ತೆಗೆದುಕೊಳ್ಳಬಹುದಿತ್ತು. ಈ ಹೋರಾಟವು ಒಂದು ವೇಳೆ ಹಿಟ್ಲರನನ್ನು ಸೋಲಿಸಲು ಮತ್ತು ಅವನ ಅನೇಕ ಪಾತಕಗಳನ್ನು ತಡೆಗಟ್ಟಲು ಕಟ್ಟಕಡೆಗೆ ಸೋತುಹೋಗುತ್ತಿದ್ದರೂ, ಚರ್ಚಿನ ನೈತಿಕ ಪ್ರತಿಷ್ಠೆಯು ಈ ನೋಟದಲ್ಲಿ ಅಳೆಯಲಾಗದಷ್ಟು ಮೇಲೇರುತ್ತಿತ್ತು. ಅಂತಹ ಪ್ರತಿರೋಧದ ಮಾನವ ಬೆಲೆಯು ನಿರ್ವಿವಾದವಾಗಿ ಮಹತ್ತರದ್ದಾಗುತ್ತಿದ್ದರೂ, ಎಲ್ಲಾ ಕಾರಣಗಳಿಗಿಂತಲೂ ಅತಿ ಪ್ರಾಮುಖ್ಯವಾದುದಕ್ಕೆ ಈ ತ್ಯಾಗವನ್ನು ಮಾಡಿದಂತೆ ಆಗುತ್ತಿತ್ತು. ಸ್ವದೇಶದ ಸಂಗ್ರಾಮ ಮುಖವು ವಿಶ್ವಾಸನೀಯವಾಗಿಲ್ಲದಿರುವುದರಿಂದ, ಹಿಟ್ಲರನು ಯುದ್ಧಕ್ಕೆ ತೊಡಗಲು ಧೈರ್ಯಗೊಳ್ಳುತ್ತಿರಲಿಲ್ಲ ಮತ್ತು ಲಕ್ಷಗಟ್ಟಳೆ ಜೀವಗಳು ಅಕ್ಷರಶಃ ಉಳಿಸಲ್ಪಡುತ್ತಿದ್ದವು. . . . ಹಿಟ್ಲರನ ಕೂಟ ಶಿಬಿರದಲ್ಲಿ ಸಾವಿರಾರು ನಾಜಿ-ವಿರೋಧಿ ಜರ್ಮನರು ಮರಣಹೊಂದುವ ವರೆಗೆ ಹಿಂಸಿಸಲ್ಪಟ್ಟಾಗ, ಪೊಲೇಂಡಿನವರ ವಿದ್ಯಾವಂತ ವರ್ಗವು ಹತಿಸಲ್ಪಟ್ಟಾಗ, ರಶ್ಯದ ಸಾವಿರಾರು ಮಂದಿಗಳನ್ನು ಸ್ಲಾವಿಕ್ ಅಂಟರ್ಮನ್ಶೆನ್ [ಮನುಷ್ಯ ಜಾತಿಗಿಂತ ಕೆಳಗಿನವರು] ಎಂದು ಉಪಚರಿಸಿದ್ದರ ಫಲವಾಗಿ ಮೃತಿಹೊಂದಿದಾಗ, ಮತ್ತು ‘ಆರ್ಯೇತರರು’ ಆಗಿರುವುದಕ್ಕಾಗಿ 60,00,000 ಮಾನವರನ್ನು ಕೊಲೆಗೈದಾಗ, ಜರ್ಮನಿಯಲ್ಲಿರುವ ಕ್ಯಾತೊಲಿಕ್ ಚರ್ಚಿನ ಅಧಿಕಾರಿಗಳು ಇಂತಹ ಪಾತಕಗಳನ್ನು ಗೈಯುವಂತೆ ಪ್ರಭುತ್ವಕ್ಕೆ ಪ್ರೋತ್ಸಾಹವನ್ನಿತ್ತರು. ರೋಮನ್ ಕ್ಯಾತೊಲಿಕ್ ಚರ್ಚಿನ ಆತ್ಮಿಕ ಶಿರಸ್ಸು ಮತ್ತು ವರಿಷ್ಠ ನೈತಿಕ ಬೋಧಕ, ರೋಮಿನಲ್ಲಿರುವ ಪೋಪ್, ಮೌನವಾಗಿಯೇ ಉಳಿದರು.”—ಪುಟಗಳು 320, 341.
[ಪುಟ 379 ರಲ್ಲಿರುವ ಚಿತ್ರಗಳು]
“ತೀರಾ ವಿಷಾದನೀಯ, ತೀರಾ ವಿಷಾದನೀಯ,” ಎನ್ನುವರು ರಾಜರು
“ತೀರಾ ವಿಷಾದನೀಯ, ತೀರಾ ವಿಷಾದನೀಯ,” ಎನ್ನುವರು ವರ್ತಕರು