ಅಧ್ಯಾಯ 39
ಯೋಧ-ಅರಸನು ಅರ್ಮಗೆದೋನ್ನಲ್ಲಿ ವಿಜಯಿಯಾಗುತ್ತಾನೆ
ದರ್ಶನ 13—ಪ್ರಕಟನೆ 19:11-21
ವಿಷಯ: ಸೈತಾನನ ವಿಷಯಗಳ ವ್ಯವಸ್ಥೆಯನ್ನು ನಾಶಮಾಡಲು ಯೇಸುವು ಪರಲೋಕದ ಸೈನ್ಯಗಳನ್ನು ನಡಿಸುತ್ತಾನೆ
ನೆರವೇರಿಕೆಯ ಸಮಯ: ಮಹಾ ಬಾಬೆಲಿನ ನಾಶನದ ಅನಂತರ
1. ಅರ್ಮಗೆದೋನ್ ಅಂದರೇನು, ಮತ್ತು ಯಾವುದು ಅದಕ್ಕೆ ನಡಿಸುತ್ತದೆ?
ಅರ್ಮಗೆದೋನ್—ಅನೇಕರಿಗೆ ಒಂದು ಭಯಾನಕ ಪದ! ಆದರೆ ನೀತಿಯನ್ನು ಪ್ರೀತಿಸುವವರಿಗಾದರೋ, ಯೆಹೋವನು ಜನಾಂಗಗಳ ಮೇಲೆ ಅಂತಿಮ ನ್ಯಾಯತೀರ್ಪನ್ನು ವಿಧಿಸಲಿರುವಾಗ, ದೀರ್ಘಕಾಲದಿಂದಲೂ ಎದುರುನೋಡಲ್ಪಟ್ಟ ದಿನದ ಸೂಚನೆಯಾಗಿರುವುದು. ಅದು ಮನುಷ್ಯರ ಯುದ್ಧವಲ್ಲ, ಆದರೆ “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ” ವಾಗಿದೆ. ಭೂಮಿಯ ಪ್ರಭುಗಳ ವಿರುದ್ಧ ಆತನ ಮುಯ್ಯಿತೀರಿಸುವ ದಿನ. (ಪ್ರಕಟನೆ 16:14, 16; ಯೆಹೆಜ್ಕೇಲ 25:17) ಮಹಾ ಬಾಬೆಲಿನ ನಿರ್ಜನತೆಯೊಂದಿಗೆ, ಮಹಾ ಸಂಕಟವು ಆಗಲೇ ಪ್ರಾರಂಭವಾಗಿರುವುದು. ಆಗ ಸೈತಾನನಿಂದ ಹುರಿದುಂಬಿಸಲ್ಪಟ್ಟು, ಕಡುಗೆಂಪು ಬಣ್ಣದ ಮೃಗವು ಮತ್ತು ಅದರ ಹತ್ತು ಕೊಂಬುಗಳು ತಮ್ಮ ಆಕ್ರಮಣವನ್ನು ಯೆಹೋವನ ಜನರ ಮೇಲೆ ಕೇಂದ್ರೀಕರಿಸುವುವು. ಪಿಶಾಚನು, ದೇವರ ಸ್ತ್ರೀಯಂತಿರುವ ಸಂಸ್ಥೆಯ ಕಡೆಗೆ ಹಿಂದೆಂದಿಗಿಂತಲೂ ಹೆಚ್ಚು ಕೋಪಾವೇಶವುಳ್ಳವನಾಗಿ, ಆ ಸಂತಾನದ ಉಳಿದವರೊಂದಿಗೆ ಅಂತಿಮ ಘಟ್ಟದ ಯುದ್ಧಹೂಡುವುದರಲ್ಲಿ ತನ್ನಿಂದ ಮೋಸಗೊಳಿಸಲ್ಪಟ್ಟವರೆಲ್ಲರನ್ನು ಉಪಯೋಗಿಸಲು ನಿರ್ಧರಿಸಿದ್ದಾನೆ. (ಪ್ರಕಟನೆ 12:17) ಇದು ಸೈತಾನನ ಕೊನೆಯ ಅವಕಾಶವಾಗಿದೆ!
2. ಮಾಗೋಗಿನ ಗೋಗನು ಯಾರು, ಮತ್ತು ತನ್ನ ಸ್ವಂತ ಜನರನ್ನು ಆಕ್ರಮಿಸಲು ಯೆಹೋವನು ಅವನನ್ನು ಹೇಗೆ ನಡೆಸುತ್ತಾನೆ?
2 ಪಿಶಾಚನ ಭೀಕರ ಹಲ್ಲೆಯನ್ನು ಯೆಹೆಜ್ಕೇಲ 38 ನೆಯ ಅಧ್ಯಾಯದಲ್ಲಿ ವೈವಿಧ್ಯಮಯವಾಗಿ ವರ್ಣಿಸಲಾಗುತ್ತದೆ. ಅಲ್ಲಿ, ಹೀನ, ದುಷ್ಟ ಸೈತಾನನು “ಮಾಗೋಗ್ ದೇಶದ ದೊರೆಯಾದ ಗೋಗ” ನಾಗಿ ಕರೆಯಲ್ಪಟ್ಟಿದ್ದಾನೆ. ಯೆಹೋವನು ಗೋಗನ ದವಡೆಗೆ ಸಾಂಕೇತಿಕ ಕೊಕ್ಕೆ ಹಾಕುತ್ತಾನೆ, ಹೀಗೆ, ಅವನನ್ನು ಮತ್ತು ಅವನ ಅಸಂಖ್ಯ ಮಿಲಿಟರಿ ಪಡೆಯನ್ನು ಆಕ್ರಮಣಕ್ಕೆ ಎಳೆಯುತ್ತಾನೆ. ಇದನ್ನು ಆತನು ಹೇಗೆ ಮಾಡುತ್ತಾನೆ? ತನ್ನ ಸಾಕ್ಷಿಗಳನ್ನು ಅರಕ್ಷಿತ ಜನರಾಗಿ “ಜನಾಂಗಗಳೊಳಗಿಂದ ಒಟ್ಟುಗೂಡಿ ದನ ಮೊದಲಾದ ಸೊತ್ತನ್ನು ಸಂಗ್ರಹಿಸಿಕೊಂಡು ಲೋಕದ ನಟ್ಟನಡುವೆ ವಾಸಿಸು” ವವರಾಗಿ ಕಾಣುವಂತೆ ಗೋಗನನ್ನು ನಡಿಸುವುದರಿಂದಲೇ. ಇವರು ಕಾಡು ಮೃಗ ಮತ್ತು ಅದರ ವಿಗ್ರಹವನ್ನು ಆರಾಧಿಸಲು ನಿರಾಕರಿಸುವ ಒಂದೇ ಜನರೋಪಾದಿ ಭೂಮಿಯ ಕೇಂದ್ರ ರಂಗದಲ್ಲಿದ್ದಾರೆ. ಅವರ ಆತ್ಮಿಕ ಬಲ ಮತ್ತು ಅಭಿವೃದ್ಧಿಯು ಗೋಗನಿಗೆ ಸಿಟ್ಟನ್ನೆಬ್ಬಿಸುತ್ತದೆ. ಆದುದರಿಂದ ಗೋಗ ಮತ್ತು ಅವನ ಅಸಂಖ್ಯ ಮಿಲಿಟರಿ ಪಡೆ, ಸಮುದ್ರದಿಂದ ಏರಿಬಂದ ಕಾಡು ಮೃಗ ಮತ್ತು ಅದರ ಹತ್ತು ಕೊಂಬುಗಳನ್ನು ಒಳಗೂಡಿ, ಎಲ್ಲರೂ ಸಂಹಾರಕ್ಕೋಸ್ಕರ ಮುತ್ತಿಕೊಳ್ಳುತ್ತಾರೆ. ಆದಾಗ್ಯೂ, ಮಹಾ ಬಾಬೆಲಿಗೆ ಅಸದೃಶವಾಗಿ, ದೇವರ ಶುದ್ಧ ಜನರು ದೈವಿಕ ರಕ್ಷೆಯಲ್ಲಿ ಆನಂದಿಸುತ್ತಾರೆ.—ಯೆಹೆಜ್ಕೇಲ 38:1, 4, 11, 12, 15; ಪ್ರಕಟನೆ 13:1.
3. ಗೋಗನ ಮಿಲಿಟರಿ ಪಡೆಗಳನ್ನು ಯೆಹೋವನು ಹೇಗೆ ತೊಲಗಿಸುತ್ತಾನೆ?
3 ಯೆಹೋವನು ಗೋಗನನ್ನು ಮತ್ತು ಅವನ ಎಲ್ಲಾ ಸಮೂಹವನ್ನು ಹೇಗೆ ತೊಲಗಿಸುತ್ತಾನೆ? ಕೇಳಿರಿ! “ಸಾರ್ವಭೌಮ [NW] ಕರ್ತನಾದ ಯೆಹೋವನು ಇಂತೆನ್ನುತ್ತಾನೆ—ಖಡ್ಗವು ನನ್ನ ಪರ್ವತಗಳಲ್ಲಿಲ್ಲಾ ಗೋಗನವರನ್ನು ಸಂಹರಿಸಲಿ ಎಂದು ಅಪ್ಪಣೆ ಕೊಡುವೆನು; ಒಬ್ಬರಿಂದೊಬ್ಬರು ಹತರಾಗುವರು.” ಆದರೆ ಯಾವುದೇ ನ್ಯೂಕ್ಲಿಯರ್ ಯಾ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಆ ಕಲಹದಲ್ಲಿ ಉಪಯೋಗವಾಗಲಾರವು. ಕಾರಣ ಯೆಹೋವನು ಪ್ರಕಟಿಸುವುದು: “ನಾನು ಗೋಗನ ಸಂಗಡ ವ್ಯಾಜ್ಯವಾಡುತ್ತಾ ಅವನನ್ನು ವ್ಯಾಧಿಗೂ ವಧೆಗೂ ಗುರಿಮಾಡಿ ಅವನ ಮೇಲೂ ಅವನ ಗುಮ್ಮಿಗಳ ಮೇಲೂ ಅವನೊಂದಿಗಿರುವ ಬಹು ಜನಾಂಗಗಳ ಮೇಲೂ ವಿಪರೀತ ಮಳೆ, ದೊಡ್ಡ ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು. ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ ನನ್ನ ಗೌರವವನ್ನು ಕಾಪಾಡಿಕೊಂಡು ಬಹು ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತನಾಗುವೆನು.”—ಯೆಹೆಜ್ಕೇಲ 38:21-23; 39:11; ಹೋಲಿಸಿರಿ ಯೆಹೋಶುವ 10:8-14; ನ್ಯಾಯಸ್ಥಾಪಕರು 7:19-22; 2 ಪೂರ್ವಕಾಲವೃತ್ತಾಂತ 20:15, 22-24; ಯೋಬ 38:22, 23.
“ನಂಬಿಗಸ್ತನೂ ಸತ್ಯವಂತನೂ” ಎಂದು ಕರೆಯಲ್ಪಟ್ಟವನು
4. ಯುದ್ಧ ಪೋಷಾಕಿನಲ್ಲಿದ್ದ ಯೇಸು ಕ್ರಿಸ್ತನನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ?
4 ಯೆಹೋವನು ಒಂದು ಖಡ್ಗವನ್ನು ಕರೇಕಳುಹಿಸುತ್ತಾನೆ. ಈ ಖಡ್ಗವನ್ನು ಹಿಡಿಯುವವನು ಯಾರು? ಪ್ರಕಟನೆ ಪುಸ್ತಕಕ್ಕೆ ಹಿಂದಿರುಗುವಾಗ, ಇನ್ನೊಂದು ರೋಮಾಂಚಕಾರಿ ದರ್ಶನದಲ್ಲಿ ನಾವು ಉತ್ತರವನ್ನು ಕಂಡುಕೊಳ್ಳುತ್ತೇವೆ. ಯೋಹಾನನ ಕಣ್ಣಮುಂದೆ ನಿಜವಾಗಿಯೂ ಭಯಚಕಿತಗೊಳಿಸುವ ಯಾವುದೋ ವಿಷಯವನ್ನು ಪ್ರಕಟಿಸಲು ಪರಲೋಕವು ತೆರೆಯುತ್ತದೆ—ಯುದ್ಧದ ಪೋಷಾಕಿನಲ್ಲಿ ಸ್ವತಃ ಯೇಸು ಕ್ರಿಸ್ತನು! ಯೋಹಾನನು ನಮಗನ್ನುವುದು: “ಮತ್ತು ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಮತ್ತು ಇಗೋ, ಒಂದು ಬಿಳೀ ಕುದುರೆ. ಮತ್ತು ಅದರ ಮೇಲೆ ಕೂತಿದ್ದವನನ್ನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲಾಗುತ್ತದೆ, ಮತ್ತು ಅವನು ನೀತಿಯಿಂದ ನ್ಯಾಯತೀರಿಸುತ್ತಾನೆ ಮತ್ತು ಯುದ್ಧಮಾಡುತ್ತಾನೆ. ಆತನ ಕಣ್ಣುಗಳು ಬೆಂಕಿಯ ಜ್ವಾಲೆ, ಮತ್ತು ಆತನ ತಲೆಯ ಮೇಲೆ ಅನೇಕ ಮುಕುಟಗಳಿವೆ.”—ಪ್ರಕಟನೆ 19:11, 12ಎ, NW.
5, 6. ಇದರ ಸೂಚಿತಾರ್ಥವೇನಾಗಿದೆ (ಎ) “ಬಿಳೀಕುದುರೆ”? (ಬಿ) “ನಂಬಿಗಸ್ತನೂ ಸತ್ಯವಂತನೂ” ಎಂಬ ಹೆಸರು? (ಸಿ) “ಬೆಂಕಿಯ ಜ್ವಾಲೆ” ಯಂತಹ ಕಣ್ಣುಗಳು? (ಡಿ) “ಅನೇಕ ಮುಕುಟಗಳು”?
5 ನಾಲ್ಕು ರಾಹುತರ ಈ ಮುಂಚಿನ ದರ್ಶನದಲ್ಲಿದ್ದಂತೆ, ಈ “ಬಿಳೀ ಕುದುರೆಯು” ನೀತಿಯ ಸಂಗ್ರಾಮದ ಒಂದು ಸಮಂಜಸ ಚಿಹ್ನೆಯಾಗಿದೆ. (ಪ್ರಕಟನೆ 6:2) ಮತ್ತು ದೇವರ ಪುತ್ರರಲ್ಲಿ ಯಾರು ಈ ಬಲಿಷ್ಠ ಕುಶಲ ಯೋಧನಿಗಿಂತಲೂ ಹೆಚ್ಚು ನೀತಿವಂತರಾಗಲು ಸಾಧ್ಯವಾಗಬಹುದು? “ನಂಬಿಗಸ್ತನೂ ಸತ್ಯವಂತನೂ ಎಂದು ಹೆಸರು” ಇರುವುದರಿಂದ, ಆತನು “ನಂಬತಕ್ಕವನೂ ಸತ್ಯಸಾಕ್ಷಿಯೂ” ಆದ ಯೇಸು ಕ್ರಿಸ್ತನೇ ಆಗಿರಬೇಕು. (ಪ್ರಕಟನೆ 3:14) ಯೆಹೋವನ ನೀತಿಯುಳ್ಳ ತೀರ್ಪುಗಳನ್ನು ವಿಧಿಸಲಿಕ್ಕೋಸ್ಕರ ಈತನು ಯುದ್ಧವನ್ನು ಮಾಡುತ್ತಾನೆ. ಹೀಗೆ, ಆತನು ಯೆಹೋವನ ನೇಮಿತ ನ್ಯಾಯಾಧೀಶನಾಗಿ, “ಪರಾಕ್ರಮಿಯಾದ ದೇವ” ರಾಗಿರುವ ತನ್ನ ಸ್ಥಾನದಿಂದ ಕ್ರಿಯೆಗೈಯುತ್ತಿದ್ದಾನೆ. (ಯೆಶಾಯ 9:6) ಆತನ ಕಣ್ಣುಗಳು ಭಯಪ್ರೇರಕವಾಗಿ, “ಬೆಂಕಿಯ ಜ್ವಾಲೆ” ಯಂತಿವೆ, ಆತನ ವಿರೋಧಿಗಳ ಮೇಲೆ ಬರಲಿರುವ ಬೆಂಕಿಯ ನಾಶನವನ್ನು ಎದುರುನೋಡುತ್ತಿವೆ.
6 ಮುಕುಟಗಳು ಈ ಯೋಧ-ಅರಸನ ತಲೆಯನ್ನು ಶೃಂಗರಿಸುತ್ತವೆ. ಯೋಹಾನನು ನೋಡಿದ ಸಮುದ್ರದಿಂದ ಏರಿಬಂದ ಆ ಕಾಡು ಮೃಗಕ್ಕೂ ಹತ್ತು ಮುಕುಟಗಳಿದ್ದವು. ಇದು ಭೂದೃಶ್ಯದ ಮೇಲೆ ಅದರ ತಾತ್ಕಾಲಿಕ ಆಳಿಕ್ವೆಯನ್ನು ಚಿತ್ರಿಸಿತು. (ಪ್ರಕಟನೆ 13:1) ಆದಾಗ್ಯೂ, ಯೇಸುವಿಗಾದರೋ, “ಅನೇಕ ಮುಕುಟಗಳಿವೆ.” ಆತನು “ರಾಜಾಧಿರಾಜನೂ ಕರ್ತರ ಕರ್ತನೂ” ಆಗಿರುವುದರಿಂದ ಆತನ ಭವ್ಯ ಆಳಿಕ್ವೆಗೆ ಸರಿಸಾಟಿ ಇಲ್ಲ.—1 ತಿಮೊಥೆಯ 6:15.
7. ಯೇಸುವಿಗಿರುವ ಲಿಖಿತ ಹೆಸರು ಯಾವುದಾಗಿದೆ?
7 ಯೋಹಾನನ ವರ್ಣನೆಯು ಮುಂದುವರಿಯುತ್ತದೆ: “ಆತನಿಗೇ ಹೊರತು ಮತ್ತಾರಿಗೂ ತಿಳಿಯದ ಒಂದು ಲಿಖಿತ ಹೆಸರು ಆತನಿಗೆ ಇದೆ.” (ಪ್ರಕಟನೆ 19:12ಬಿ, NW) ಬೈಬಲ್ ದೇವರ ಮಗನನ್ನು ಯೇಸು, ಇಮ್ಮಾನುವೇಲ್, ಮತ್ತು ಮೀಕಾಯೇಲನೇ ಮುಂತಾದ ಹೆಸರುಗಳಿಂದ ಈಗಾಗಲೇ ಮಾತಾಡುತ್ತದೆ. ಆದರೆ ಈ ನಮೂದಿಸಲ್ಪಡದ “ಹೆಸರು” ಕರ್ತನ ದಿನದಲ್ಲಿ ಯೇಸುವು ಅನುಭವಿಸುವ ಸ್ಥಾನ ಮತ್ತು ಸುಯೋಗಗಳನ್ನು ಸೂಚಿಸುತ್ತದೆಂದು ತೋರಿಬರುತ್ತದೆ. (ಪ್ರಕಟನೆ 2:17ನ್ನು ಹೋಲಿಸಿರಿ.) ಯೇಸುವನ್ನು 1914 ರಿಂದ ವಿವರಿಸುತ್ತಾ ಯೆಶಾಯನು ಹೀಗನ್ನುತ್ತಾನೆ: “ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು.” (ಯೆಶಾಯ 9:6) ಅಪೊಸ್ತಲ ಪೌಲನು ಯೇಸುವಿನ ಹೆಸರನ್ನು ಸೇವೆಯ ಆತನ ಉಚ್ಚ ಸುಯೋಗಗಳೊಂದಿಗೆ ಜತೆಗೂಡಿಸುತ್ತಾ ಹೀಗೆ ಬರೆದನು: “ದೇವರು ಆತನನ್ನು [ಯೇಸುವನ್ನು] ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡ” ಬೀಳುವರು.—ಫಿಲಿಪ್ಪಿ 2:9, 10.
8. ಬರೆಯಲ್ಪಟ್ಟ ಹೆಸರು ಯೇಸುವಿಗೆ ಮಾತ್ರವೇ ತಿಳಿದಿರುವುದು ಏಕೆ, ಮತ್ತು ಆತನ ಪ್ರತಿಷ್ಠೆಯ ಸುಯೋಗಗಳಲ್ಲಿ ಕೆಲವನ್ನು ಆತನು ಯಾರೊಂದಿಗೆ ಹಂಚಿಕೊಳ್ಳುತ್ತಾನೆ?
8 ಯೇಸುವಿನ ಸುಯೋಗಗಳು ಅದ್ವಿತೀಯಗಳಾಗಿವೆ. ಸ್ವತಃ ಯೆಹೋವನ ಹೊರತಾಗಿ, ಇಂಥದೊಂದು ಅತ್ಯುನ್ನತ ಸ್ಥಾನವನ್ನು ಹಿಡಿಯುವುದೆಂದರೇನೆಂಬುದರ ಅರ್ಥವನ್ನು ಯೇಸುವು ಮಾತ್ರವೇ ಗ್ರಹಿಸಶಕ್ತನಾಗಿದ್ದಾನೆ. (ಹೋಲಿಸಿರಿ ಮತ್ತಾಯ 11:27.) ಆದುದರಿಂದ ದೇವರ ಎಲ್ಲಾ ಸೃಷ್ಟಿ ಜೀವಿಗಳಲ್ಲಿ, ಯೇಸುವು ಮಾತ್ರವೇ ಈ ಹೆಸರನ್ನು ಪೂರ್ಣವಾಗಿ ಗಣ್ಯಮಾಡಲು ಶಕ್ತನಾಗಿದ್ದಾನೆ. ಹಾಗಿದ್ದರೂ, ಈ ಸುಯೋಗಗಳಲ್ಲಿ ಕೆಲವದರಲ್ಲಿ ಯೇಸುವು ತನ್ನ ವಧುವನ್ನು ಒಳಗೂಡಿಸುತ್ತಾನೆ. ಆದುದರಿಂದ ಆತನು ಈ ವಾಗ್ದಾನವನ್ನು ಮಾಡುತ್ತಾನೆ: “ಯಾವನು ಜಯಹೊಂದುತ್ತಾನೋ . . . ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.”—ಪ್ರಕಟನೆ 3:12.
9. ಇದರಿಂದ ಏನು ಸೂಚಿಸಲ್ಪಟ್ಟಿದೆ (ಎ) ಯೇಸುವು “ರಕ್ತಪ್ರೋಕ್ಷಿತವಾದ ಹೊರ ಉಡುಪನ್ನು ಧರಿಸಿಕೊಂಡಿರು” ವುದು? (ಬಿ) “ದೇವರ ವಾಕ್ಯ” ಎಂದು ಯೇಸುವು ಕರೆಯಲ್ಪಟ್ಟಿರುವುದು?
9 ಯೋಹಾನನು ಕೂಡಿಸುವುದು: “ಮತ್ತು ಆತನು ರಕ್ತಪ್ರೋಕ್ಷಿತವಾದ ಹೊರ ಉಡುಪನ್ನು ಧರಿಸಿಕೊಂಡಿದ್ದಾನೆ, ಮತ್ತು ದೇವರ ವಾಕ್ಯವೆಂದೇ ಆತನು ಕರೆಯಲ್ಪಡುತ್ತಿರುವ ಹೆಸರು.” (ಪ್ರಕಟನೆ 19:13, NW) ಇದು ಯಾರ “ರಕ್ತ”? ಇದು ಮಾನವಕುಲಕ್ಕೋಸ್ಕರ ಸುರಿಸಲ್ಪಟ್ಟ ಯೇಸುವಿನ ಜೀವರಕ್ತವಾಗಿರಬಲ್ಲದು. (ಪ್ರಕಟನೆ 1:5) ಆದರೆ ಈ ಪೂರ್ವಾಪರದಲ್ಲಿ, ಯೆಹೋವನ ತೀರ್ಪುಗಳು ಆತನ ಶತ್ರುಗಳ ಮೇಲೆ ವಿಧಿಸಲ್ಪಟ್ಟಾಗ ಚೆಲ್ಲಿದ ಅವರ ರಕ್ತವನ್ನು ಸೂಚಿಸುತ್ತದೆಂಬುದು ಹೆಚ್ಚು ಸಂಭಾವ್ಯ. ನಮಗೆ ಇಲ್ಲಿ ಮುಂಚಿನ ದರ್ಶನವನ್ನು ನೆನಪಿಸಲಾಗುತ್ತದೆ. ಅಲ್ಲಿ ದೇವರ ರೌದ್ರವೆಂಬ ದೊಡ್ಡ ತೊಟ್ಟಿಯಲ್ಲಿ ಭೂಮಿಯ ಮಾಗಿದ ದ್ರಾಕ್ಷೇಬಳ್ಳಿಯಗೊಂಚಲು ತುಳಿಯಲ್ಪಟ್ಟಾಗ, “ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಎತ್ತರಕ್ಕೆ” ಬಂದ ಅದರ ರಕ್ತವು—ದೇವರ ವೈರಿಗಳ ಮೇಲೆ ಮಹಾ ವಿಜಯವನ್ನು ಸೂಚಿಸಿತ್ತು. (ಪ್ರಕಟನೆ 14:18-20) ತದ್ರೀತಿಯಲ್ಲಿ, ಆತನ ವಿಜಯವು ನಿರ್ಣಾಯಕವಾಗಿದೆ ಮತ್ತು ಪೂರ್ಣವಾಗಿದೆ ಎಂದು ಯೇಸುವಿನ ಹೊರ ಉಡುಪಿನ ಮೇಲೆ ಪ್ರೋಕ್ಷಿತವಾದ ರಕ್ತವು ದೃಢೀಕರಿಸುತ್ತದೆ. (ಹೋಲಿಸಿರಿ ಯೆಶಾಯ 63:1-6.) ಈಗ ಯೋಹಾನನು ಪುನಃ ಒಮ್ಮೆ ಒಂದು ಹೆಸರಿನಿಂದ ಯೇಸುವು ಕರೆಯಲ್ಪಡುವುದರ ಕುರಿತು ಮಾತಾಡುತ್ತಾನೆ. ಈ ಸಮಯದಲ್ಲಿ ಅದು ಬಹಳ ಜ್ಞಾತವಾಗಿರುವ ಹೆಸರು, ತನ್ಮೂಲಕ ಈ ಕುಶಲ ಯೋಧ ಅರಸನನ್ನು ಯೆಹೋವನ ಪ್ರಮುಖ ವದನಕ ಮತ್ತು ಸತ್ಯದ ಸರ್ವವಿಜೇತನೋಪಾದಿ ಗುರುತಿಸುವ “ದೇವರ ವಾಕ್ಯ” ವೆಂಬ ಹೆಸರಾಗಿದೆ.—ಯೋಹಾನ 1:1; ಪ್ರಕಟನೆ 1:1.
ಯೇಸುವಿನ ಜತೆ ಯೋಧರು
10, 11. (ಎ) ಯೇಸುವು ಯುದ್ಧದಲ್ಲಿ ಒಬ್ಬನೇ ಅಲ್ಲವೆಂಬುದನ್ನು ಯೋಹಾನನು ಹೇಗೆ ತೋರಿಸುತ್ತಾನೆ? (ಬಿ) ಕುದುರೆಗಳು ಬಿಳಿಯಾಗಿದ್ದವು ಮತ್ತು ಕುದುರೆ ಸವಾರರು “ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿ” ಯನ್ನು ಧರಿಸಿಕೊಂಡಿರುವ ನಿಜತ್ವದಿಂದ ಯಾವುದು ಸೂಚಿತವಾಗಿದೆ? (ಸಿ) ಸ್ವರ್ಗೀಯ “ಸೈನ್ಯ” ಗಳಲ್ಲಿ ಯಾರು ಒಳಗೂಡಿರುತ್ತಾರೆ?
10 ಈ ಯುದ್ಧವನ್ನು ಹೋರಾಡುವುದರಲ್ಲಿ ಯೇಸುವು ಒಬ್ಬನೇ ಇಲ್ಲ. ಯೋಹಾನನು ನಮಗನ್ನುವುದು: “ಅಲ್ಲದೆ, ಪರಲೋಕದಲ್ಲಿದ್ದ ಸೈನ್ಯಗಳು ಬಿಳೀ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದವು, ಮತ್ತು ಅವರು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು.” (ಪ್ರಕಟನೆ 19:14, NW) ಕುದುರೆಗಳು “ಬಿಳೀ” ಯಾಗಿವೆ ಎಂಬ ನಿಜತ್ವವು ನೀತಿಯುಳ್ಳ ಸಂಗ್ರಾಮವನ್ನು ತಿಳಿಯಪಡಿಸುತ್ತದೆ. “ನಯವಾದ ನಾರುಮಡಿಯು” ರಾಜನ ಕುದುರೆ ಸವಾರರಿಗೆ ತಕ್ಕದಾಗಿದೆ. ಮತ್ತು ಅದರ ಮಿರುಗುವ ನಿರ್ಮಲ ಬಿಳೀತನವು ಯೆಹೋವನ ಮುಂದೆ ಒಂದು ಶುದ್ಧ, ನೀತಿಯ ನಿಲುವನ್ನು ಸೂಚಿಸುತ್ತದೆ. ಹಾಗಾದರೆ, ಈ ‘ಸೈನ್ಯಗಳಲ್ಲಿ’ ಯಾರು ಒಳಗೂಡಿರುತ್ತಾರೆ? ನಿಸ್ಸಂದೇಹವಾಗಿ, ಅವರಲ್ಲಿ ಪವಿತ್ರ ದೇವದೂತರು ಒಳಗೂಡಿದ್ದಾರೆ. ಕರ್ತನ ದಿನದ ಆರಂಭದಲ್ಲಿ, ಮೀಕಾಯೇಲನು ಮತ್ತು ಆತನ ದೇವದೂತರು ಪರಲೋಕದಿಂದ ಸೈತಾನ ಮತ್ತು ಅವನ ದೆವ್ವಗಳನ್ನು ಹೊರದಬ್ಬಿದರು. (ಪ್ರಕಟನೆ 12:7-9) ಇನ್ನೂ ಹೆಚ್ಚಾಗಿ, “ಎಲ್ಲಾ ದೇವದೂತರು” ಯೇಸುವು ತನ್ನ ಮಹಿಮಾಭರಿತ ಸಿಂಹಾಸನದ ಮೇಲೆ ಕೂತುಕೊಂಡಾಗ ಮತ್ತು ಜನಾಂಗಗಳನ್ನು ಮತ್ತು ಭೂಮಿಯ ಜನರನ್ನು ನ್ಯಾಯತೀರಿಸಲು ಮುಂದುವರಿಯುತ್ತಿರುವಾಗ, ಆತನನ್ನು ಉಪಚರಿಸುತ್ತಾರೆ. (ಮತ್ತಾಯ 25:31, 32) ನಿಶ್ಚಯವಾಗಿಯೂ, ನಿರ್ಣಾಯಕ ಯುದ್ಧದಲ್ಲಿ, ದೇವರ ತೀರ್ಪುಗಳು ಅಂತಿಮಘಟ್ಟದಲ್ಲಿ ಜಾರಿಗೊಳಿಸಲ್ಪಡುವಾಗ, ಯೇಸುವು ಪುನಃ ಒಮ್ಮೆ ಆತನ ದೇವದೂತರೊಂದಿಗೆ ಇರುವನು.
11 ಇನ್ನಿತರರು ಕೂಡ ಒಳಗೂಡಲಿರುವರು. ಥುವತೈರದಲ್ಲಿರುವ ಸಭೆಗೆ ತನ್ನ ಸಂದೇಶವನ್ನು ಕಳುಹಿಸುವಾಗ, ಯೇಸುವು ವಾಗ್ದಾನಿಸಿದ್ದು: “ಮತ್ತು ಜಯಶಾಲಿಯಾಗುವವನಿಗೆ ಮತ್ತು ಕಡೇ ವರೆಗೂ ನನ್ನ ಕೃತ್ಯಗಳನ್ನು ಪಾಲಿಸುವವನಿಗೆ, ನನ್ನ ತಂದೆಯಿಂದ ನಾನು ಪಡೆದಿರುವಂತೆಯೇ, ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು ಮತ್ತು ಅವರು ಮಣ್ಣಿನ ಮಡಿಕೆಗಳೋಪಾದಿ ಚೂರು ಚೂರಾಗಿ ಒಡೆಯಲ್ಪಡುವಂತೆ ಅವನು ಕಬ್ಬಿಣದ ಕೋಲಿನಿಂದ ಅವರನ್ನು ಪಾಲಿಸುವನು.” (ಪ್ರಕಟನೆ 2:26, 27, NW) ಕಿಂಚಿತ್ತೂ ಸಂದೇಹವಿಲ್ಲದೆ, ಸಮಯವು ಬಂದಾಗ ಈಗಾಗಲೇ ಪರಲೋಕದಲ್ಲಿರುವ ಕ್ರಿಸ್ತನ ಸಹೋದರರಿಗೆ ಆ ಕಬ್ಬಿಣದ ಕೋಲಿನೊಂದಿಗೆ ಜನಾಂಗಗಳನ್ನು ಮತ್ತು ಜನರನ್ನು ಆಳುವುದರಲ್ಲಿ ಒಂದು ಪಾಲು ಇರುವುದು.
12. (ಎ) ಭೂಮಿಯ ಮೇಲಿನ ದೇವರ ಸೇವಕರು ಅರ್ಮಗೆದೋನಿನ ಹೋರಾಟದಲ್ಲಿ ಪಾಲು ತೆಗೆದುಕೊಳ್ಳುವರೋ? (ಬಿ) ಭೂಮಿಯ ಮೇಲಿರುವ ಯೆಹೋವನ ಜನರು ಅರ್ಮಗೆದೋನಿನಲ್ಲಿ ಹೇಗೆ ಒಳಗೂಡುತ್ತಾರೆ?
12 ಆದರೂ, ಇಲ್ಲಿ ಭೂಮಿಯ ಮೇಲಿರುವ ದೇವರ ಸೇವಕರ ಕುರಿತೇನು? ಯೋಹಾನ ವರ್ಗಕ್ಕೆ ಇಲ್ಲವೆ, ಆರಾಧನೆಗಾಗಿ ಯೆಹೋವನ ಆತ್ಮಿಕ ಆಲಯಕ್ಕೆ ಎಲ್ಲಾ ಜನಾಂಗಗಳಿಂದ ಧಾವಿಸಿಬಂದ ಅದರ ನಿಷ್ಠಾವಂತ ಜತೆ ಸಹವಾಸಿಗಳಾದ ಆ ಜನರಿಗೆ ಸಹ, ಅರ್ಮಗೆದೋನಿನಲ್ಲಿರುವ ಹೋರಾಡುವಿಕೆಯಲ್ಲಿ ಕಾರ್ಯಶೀಲ ಪಾಲು ಇರದು. ಈ ಶಾಂತಿಪ್ರಿಯ ಜನರು ಈಗಾಗಲೇ ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ ಮಾಡಿದ್ದಾರೆ. (ಯೆಶಾಯ 2:2-4) ಆದರೂ ಅವರು ಬಹಳ ಮಟ್ಟಿಗೆ ಒಳಗೂಡಿದ್ದಾರೆ! ನಾವು ಈಗಾಗಲೇ ಗಮನಿಸಿದಂತೆ, ಸಂರಕ್ಷಣೆ ಇಲ್ಲವೆಂದು ಭಾಸವಾಗುತ್ತಿರುವ, ಗೋಗ ಮತ್ತು ಅವನ ಎಲ್ಲಾ ಗುಂಪಿನಿಂದ ಕ್ರೂರವಾಗಿ ಆಕ್ರಮಿಸಲ್ಪಟ್ಟ ಯೆಹೋವನ ಜನರಾಗಿ ಅವರಿದ್ದಾರೆ. ಯೆಹೋವನ ಯೋಧ-ಅರಸನು, ಪರಲೋಕದಲ್ಲಿರುವ ಸೈನ್ಯದವರಿಂದ ಬೆಂಬಲಿಸಲ್ಪಟ್ಟವನಾಗಿ, ಆ ಜನಾಂಗಗಳ ನಿರ್ನಾಮದ ಯುದ್ಧವೊಂದನ್ನು ಹೋರಾಡಲು ಆರಂಭಿಸುವದಕ್ಕೆ ಅದು ಸಂಕೇತವಾಗಿದೆ. (ಯೆಹೆಜ್ಕೇಲ 39:6, 7, 11; ಹೋಲಿಸಿರಿ ದಾನಿಯೇಲ 11:44–12:1.) ಪ್ರೇಕ್ಷಕರೋಪಾದಿ, ಭೂಮಿಯ ಮೇಲಿನ ದೇವರ ಜನರು ಅತೀವ ಆಸಕ್ತಿಯುಳ್ಳವರಾಗಿರುವರು. ಅರ್ಮಗೆದೋನ್ ಅವರ ರಕ್ಷಣೆಯ ಅರ್ಥದಲ್ಲಿರುವುದು, ಮತ್ತು ಯೆಹೋವನ ನಿರ್ದೋಷೀಕರಣದ ಮಹಾ ಯುದ್ಧದ ಪ್ರತ್ಯಕ್ಷದರ್ಶಿಗಳಾಗಿ ಅವರು ಅನಂತಕಾಲಕ್ಕೂ ಜೀವಿಸುವರು.
13. ಯೆಹೋವನ ಸಾಕ್ಷಿಗಳು ಎಲ್ಲಾ ಸರಕಾರಗಳ ವಿರುದ್ಧ ಇಲ್ಲವೆಂಬುದನ್ನು ನಾವು ಹೇಗೆ ತಿಳಿಯುತ್ತೇವೆ?
13 ಯೆಹೋವನ ಸಾಕ್ಷಿಗಳು ಎಲ್ಲಾ ಸರಕಾರದ ವಿರುದ್ಧ ಇದ್ದಾರೆಂಬುದು ಇದರ ಅರ್ಥವೂ? ಖಂಡಿತವಾಗಿಯೂ ಅಲ್ಲ! ಅವರು ಅಪೊಸ್ತಲ ಪೌಲನ ಸಲಹೆಗೆ ವಿಧೇಯರಾಗುತ್ತಾರೆ: “ಪ್ರತಿಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ.” ಸದ್ಯದ ವ್ಯವಸ್ಥೆ ಎಷ್ಟರ ವರೆಗೆ ಬಾಳುತ್ತದೋ ಅಷ್ಟರ ವರೆಗೆ ಮಾನವ ಸಮಾಜದಲ್ಲಿ ಕ್ರಮಬದ್ಧತೆಯ ಮಟ್ಟವನ್ನು ಕಾಪಾಡುವುದಕ್ಕೆ ದೇವರ ಅನುಮತಿಯಿಂದ ಆ “ಮೇಲಿರುವ ಅಧಿಕಾರಿಗಳು” ಅಸ್ತಿತ್ವದಲ್ಲಿದ್ದಾರೆ ಎಂಬುದನ್ನು ಅವರು ಮನಗಾಣುತ್ತಾರೆ. ಹೀಗಿರುವುದರಿಂದ, ಯೆಹೋವನ ಸಾಕ್ಷಿಗಳು ತಮ್ಮ ತೆರಿಗೆಗಳನ್ನು ಕಟ್ಟುತ್ತಾರೆ, ನಿಯಮಗಳಿಗೆ ವಿಧೇಯರಾಗುತ್ತಾರೆ, ವಾಹನಸಂಚಾರ ನಿಯಮಗಳನ್ನು ಗೌರವಿಸುತ್ತಾರೆ, ನೋಂದಣಿಗಳೊಂದಿಗೆ ಸಮ್ಮತಿಸುತ್ತಾರೆ, ಮತ್ತು ಇತ್ಯಾದಿ. (ರೋಮಾಪುರ 13:1, 6, 7) ಇನ್ನೂ ಹೆಚ್ಚಾಗಿ, ಸತ್ಯವಂತರೂ, ಪ್ರಾಮಾಣಿಕರೂ ಆಗಿರುವುದರಲ್ಲಿ; ನೆರೆಯವನ ಕಡೆಗೆ ಪ್ರೀತಿಯನ್ನು ತೋರಿಸುವುದರಲ್ಲಿ; ಒಂದು ಬಲಿಷ್ಠ ನೈತಿಕ ಕುಟುಂಬ ಘಟಕವನ್ನು ಕಟ್ಟುವುದರಲ್ಲಿ; ಮತ್ತು ತಮ್ಮ ಮಕ್ಕಳನ್ನು ಆದರ್ಶಪ್ರಾಯ ಪ್ರಜೆಗಳಾಗಿ ಇರಲು ತರಬೇತಿಗೊಳಿಸುವುದರಲ್ಲಿ ಬೈಬಲ್ ತತ್ವಗಳನ್ನು ಅವರು ಅನುಸರಿಸುತ್ತಾರೆ. ಈ ರೀತಿಯಲ್ಲಿ ಅವರು ಬರೇ “ಕೈಸರನದನ್ನು ಕೈಸರನಿಗೆ” ಕೊಡುವುದು ಮಾತ್ರವಲ್ಲ, “ದೇವರದನ್ನು ದೇವರಿಗೆ” ಕೊಡುತ್ತಾರೆ. (ಲೂಕ 20:25; 1 ಪೇತ್ರ 2:13-17) ಈ ಲೋಕದ ಸರಕಾರಿ ಪ್ರಭುತ್ವಗಳು ಕೇವಲ ತಾತ್ಕಾಲಿಕವಾಗಿವೆಯೆಂದು ದೇವರ ವಾಕ್ಯವು ತೋರಿಸುವುದರಿಂದ, ಯೆಹೋವನ ಸಾಕ್ಷಿಗಳು ಬೇಗನೇ ದೇವರ ರಾಜ್ಯದ ಆಳಿಕ್ವೆಯ ಕೆಳಗೆ ಅನುಭವಿಸಲಿಕ್ಕಿರುವ ಪೂರ್ಣ ಜೀವಿತಕ್ಕಾಗಿ, ವಾಸ್ತವಿಕ ಜೀವಿತಕ್ಕಾಗಿ ಈಗ ತಮ್ಮನ್ನು ತಯಾರುಮಾಡಿಕೊಳ್ಳುತ್ತಾರೆ. (1 ತಿಮೊಥೆಯ 6:17-19) ಈ ಲೋಕದ ಶಕ್ತಿಗಳನ್ನು ಉರುಳಿಸುವುದರಲ್ಲಿ ಅವರಿಗೆ ಯಾವುದೇ ಭಾಗವಿರದಿದ್ದರೂ ಕೂಡ, ಅರ್ಮಗೆದೋನಿನಲ್ಲಿ ಜಾರಿಗೊಳಿಸಲ್ಪಡಲಿರುವ ಯೆಹೋವನ ತೀರ್ಪಿನ ಕುರಿತಾಗಿ ದೇವರ ಪ್ರೇರಿತ ವಾಕ್ಯವಾದ ಬೈಬಲ್ ಏನನ್ನು ಹೇಳುತ್ತದೋ, ಅದರಿಂದ ಭಯಭಕ್ತಿಯನ್ನು ಸಾಕ್ಷಿಗಳು ಅನುಭವಿಸುತ್ತಾರೆ.—ಯೆಶಾಯ 26:20, 21; ಇಬ್ರಿಯ 12:28, 29.
ಅಂತಿಮ ಯುದ್ಧಕ್ಕೆ!
14. ಯೇಸುವಿನ ಬಾಯಿಂದ ಬರುವ “ಹದವಾದ ಉದ್ದ ಕತ್ತಿಯಿಂದ” ಯಾವುದು ಸೂಚಿತವಾಗುತ್ತದೆ?
14 ಯೇಸುವು ತನ್ನ ವಿಜಯೀ ಹೋರಾಟವನ್ನು ಯಾವ ಅಧಿಕಾರದಿಂದ ಪೂರೈಸುತ್ತಾನೆ? ಯೋಹಾನನು ನಮಗೆ ತಿಳಿಸುವುದು: “ಮತ್ತು ಜನಾಂಗಗಳನ್ನು ಹೊಡೆಯುವುದಕ್ಕಾಗಿ ಹದವಾದ ಉದ್ದ ಕತ್ತಿಯು ಆತನ ಬಾಯಿಂದ ಚಾಚುತ್ತದೆ ಮತ್ತು ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು.” (ಪ್ರಕಟನೆ 19:15ಎ, NW) ಆ “ಹದವಾದ ಉದ್ದ ಕತ್ತಿಯು” ದೇವರ ರಾಜ್ಯವನ್ನು ಬೆಂಬಲಿಸಲು ನಿರಾಕರಿಸುವವರೆಲ್ಲರ ಹತಿಸುವಿಕೆಗೆ ಅಪ್ಪಣೆಗಳನ್ನು ಹೊರಡಿಸಲು ಯೇಸುವಿಗೆ ನೀಡಲಾದ ದೇವದತ್ತ ಅಧಿಕಾರವನ್ನು ಪ್ರತಿನಿಧಿಸುತ್ತದೆ. (ಪ್ರಕಟನೆ 1:16; 2:16) ಈ ವೈವಿಧ್ಯಮಯ ಸಂಕೇತವು ಯೆಶಾಯನ ಮಾತುಗಳಿಗೆ ಸಮಾನರೂಪದ್ದಾಗುತ್ತದೆ: “ನನ್ನ ಬಾಯನ್ನು ಹದವಾದ ಖಡ್ಗವನ್ನಾಗಿ ಮಾಡಿ ತನ್ನ [ಯೆಹೋವನ] ಕೈಯ ನೆರಳಿನಲ್ಲಿ ನನ್ನನ್ನು ಹುದುಗಿಸಿದ್ದಾನೆ; ನನ್ನನ್ನು ಚೂಪಾದ ಬಾಣವನ್ನಾಗಿ ರೂಪಿಸಿ ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.” (ಯೆಶಾಯ 49:2) ಇಲ್ಲಿ ಯೆಶಾಯನು ಗುರಿತಪ್ಪದ ಬಾಣದೋಪಾದಿ, ದೇವರ ತೀರ್ಪುಗಳನ್ನು ಪ್ರಚುರಪಡಿಸುವ ಮತ್ತು ಅವುಗಳನ್ನು ವಿಧಿಸುವ ಯೇಸುವನ್ನು ಮುನ್-ಚಿತ್ರಿಸುತ್ತಾನೆ.
15. ಸಮಯದ ಈ ಬಿಂದುವಿನಲ್ಲಿ, ಯಾವುದರ ಪ್ರಾರಂಭವನ್ನು ಗುರುತಿಸುತ್ತಾ, ಯಾರು ಈಗಾಗಲೇ ಬಯಲುಗೊಳಿಸಲ್ಪಟ್ಟಿರುವರು ಮತ್ತು ನ್ಯಾಯತೀರಿಸಲ್ಪಡುವರು?
15 ಸಮಯದ ಈ ಬಿಂದುವಿನಲ್ಲಿ, ಯೇಸುವು ಈಗಾಗಲೇ ಪೌಲನ ಮಾತುಗಳ ನೆರವೇರಿಕೆಯಲ್ಲಿ ಕ್ರಿಯೆಗೈದಿರುವನು: “ಅವನು ತೆಗೆದುಬಿಡಲ್ಪಟ್ಟ ಕೂಡಲೆ ಆ ಅಧರ್ಮಸ್ವರೂಪನು ಕಾಣಬರುವನು; ಅವನನ್ನು ಯೇಸು ಕರ್ತನು ತನ್ನ ಬಾಯ ಉಸುರಿನಿಂದ ಕೊಲ್ಲುವನು, ತನ್ನ ಪ್ರತ್ಯಕ್ಷತೆಯ ಪ್ರಕಾಶದಿಂದ ಸಂಹರಿಸುವನು.” ಹೌದು ಯೇಸುವಿನ ಸಾನ್ನಿಧ್ಯವನ್ನು (ಗ್ರೀಕ್, ಪ·ರೌಸಿ΄ಯ) 1914 ರಿಂದ ಹಿಡಿದು ಅಧರ್ಮಸ್ವರೂಪನನ್ನು, ಕ್ರೈಸ್ತಪ್ರಪಂಚದ ವೈದಿಕ ವರ್ಗವನ್ನು ಬಯಲು ಪಡಿಸುವುದರಿಂದ ಮತ್ತು ನ್ಯಾಯತೀರಿಸುವುದರಿಂದ ಪ್ರದರ್ಶಿಸಲಾಗಿತ್ತು. ಕಡುಗೆಂಪು ಬಣ್ಣದ ಕಾಡು ಮೃಗದ ಹತ್ತು ಕೊಂಬುಗಳು ಆ ತೀರ್ಪನ್ನು ಜಾರಿಗೊಳಿಸುವಾಗ ಮತ್ತು ಮಹಾ ಬಾಬೆಲಿನಲ್ಲಿ ಉಳಿದವರೊಂದಿಗೆ ಕ್ರೈಸ್ತಪ್ರಪಂಚವನ್ನು ಹಾಳು ಮಾಡಿದಾಗ, ಆ ಪ್ರತ್ಯಕ್ಷತೆಯು ಎದ್ದು ಕಾಣುವ ಹಾಗೆ ತೋರಿಸಲ್ಪಡುವುದು. (2 ಥೆಸಲೊನೀಕ 2:1-3, 8) ಅದು ಮಹಾ ಸಂಕಟದ ಪ್ರಾರಂಭವಾಗಿರುವುದು! ಅದಾದ ಮೇಲೆ ಯೇಸುವು ತನ್ನ ಗಮನವನ್ನು ಪ್ರವಾದನೆಯ ಹೊಂದಿಕೆಯಲ್ಲಿ ಸೈತಾನನ ಸಂಸ್ಥೆಯ ಉಳಿದಿರುವ ಸಂಗತಿಗಳಿಗೆ ತಿರುಗಿಸುತ್ತಾನೆ: “ಲೋಕವನ್ನು ತನ್ನ ಬಾಯ ದಂಡದಿಂದ ದಂಡಿಸುವನು. ದುಷ್ಟರನ್ನು ತನ್ನ ಬಾಯುಸುರಿನಿಂದ ಕೊಲ್ಲುವನು.”—ಯೆಶಾಯ 11:4.
16. ಯೆಹೋವನ ನೇಮಿತ ಯೋಧ-ಅರಸನ ಪಾತ್ರವನ್ನು ಕೀರ್ತನೆಗಳು ಮತ್ತು ಯೆರೆಮೀಯ ಪುಸ್ತಕ ಹೇಗೆ ವರ್ಣಿಸುತ್ತವೆ?
16 ಯೋಧ-ಅರಸನು, ಯೆಹೋವನಿಂದ ನೇಮಿಸಲ್ಪಟ್ಟವನಾಗಿ, ಪಾರಾಗಲಿರುವವರ ಮಧ್ಯೆ ಮತ್ತು ಸಾಯಲಿರುವವರ ಮಧ್ಯೆ ಒಂದು ವ್ಯತ್ಯಾಸವನ್ನು ಮಾಡಲಿರುವನು. ಯೆಹೋವನು ಈ ದೇವ ಪುತ್ರನಿಗೆ ಪ್ರವಾದನಾರೂಪವಾಗಿ ಮಾತಾಡುತ್ತಾ, ಹೀಗನ್ನುತ್ತಾನೆ: “ಕಬ್ಬಿಣದ ಗದೆಯಿಂದ ಅವರನ್ನು [ಭೂಮಿಯ ಪ್ರಭುಗಳನ್ನು] ನಾಶಮಾಡುವಿ; ಮಣ್ಣಿನ ಮಡಿಕೆಗಳನ್ನೋ ಎಂಬಂತೆ ಅವರನ್ನು ಒಡೆದುಹಾಕುವಿ.” ಮತ್ತು ಯೆರೆಮೀಯನು ಇಂಥ ಭ್ರಷ್ಟ ಸರಕಾರದ ಮುಖಂಡರನ್ನು ಮತ್ತು ಅವರ ಅಡಿಯಾಳುಗಳನ್ನು ಸಂಬೋಧಿಸುತ್ತಾ, ಹೀಗನ್ನುತ್ತಾನೆ: “ಕುರುಬರೇ, ಅರಚಿ ಗೋಳಾಡಿರಿ! ಮಂದೆಯಲ್ಲಿನ ಹಿರಿಯಮಣಿಗಳೇ, [ಬೂದಿಯಲ್ಲಿ] ಬಿದ್ದು ಹೊರಳಾಡಿರಿ! ನಿಮ್ಮನ್ನು ವಧಿಸುವ ಕಾಲವು ತುಂಬಿದೆ; ನಾನು ನಿಮ್ಮನ್ನು ಭಂಗಪಡಿಸುವೆನು; ನೀವು ಬಿದ್ದುಹೋದ ಅಂದವಾದ ಪಾತ್ರೆಯಂತೆ ಚೂರುಚೂರಾಗುವಿರಿ.” ಆ ಅಧಿಕಾರಿಗಳು ದುಷ್ಟ ಲೋಕಕ್ಕೆ ಎಷ್ಟೋ ಅಂದವಾಗಿ ತೋರಿರಬಹುದಾದರೂ, ಆಕರ್ಷಕವಾದ ಒಂದು ಪಾತ್ರೆಯ ಒಡೆಯುವಿಕೆಯೋ ಎಂಬಂತೆ, ರಾಜನ ಕಬ್ಬಿಣದ ಗದೆಯ ಒಂದು ಹೊಡೆತದಿಂದ ಅವರೆಲ್ಲರೂ ಚೆಲ್ಲಾಪಿಲ್ಲಿಯಾಗಲಿರುವರು. ಕರ್ತನಾದ ಯೇಸುವಿನ ಕುರಿತು ದಾವೀದನು ಪ್ರವಾದಿಸಿದಂತೆಯೇ, ಅದು ಇರಲಿರುವುದು: “ಯೆಹೋವನು ನಿನ್ನ ರಾಜದಂಡದ ಆಳಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನಮಾಡು. . . . ನಿನ್ನ ಬಲಗಡೆಯಲ್ಲಿರುವ ಕರ್ತನು [ಯೆಹೋವನು, NW] ತನ್ನ ಕೋಪದ ದಿನದಲ್ಲಿ ರಾಜರನ್ನು ಖಂಡಿಸುವನು. ಆತನು ಜನಾಂಗಗಳಲ್ಲಿ ನ್ಯಾಯಸ್ಥಾಪಿಸುವಾಗ ವಿಸ್ತಾರವಾದ ರಣರಂಗದಲ್ಲಿ ಶತ್ರುಗಳ ಶಿರಸ್ಸನ್ನು ಛೇದಿಸಿ ಹೆಣಗಳಿಂದ ಅದನ್ನು ತುಂಬಿಸುವನು.”—ಕೀರ್ತನೆ 2:9, 12; 83:17, 18; 110:1, 2, 5, 6; ಯೆರೆಮೀಯ 25:34.
17. (ಎ) ಯೋಧ-ಅರಸನ ಹತಿಸುವ ಕಾರ್ಯವನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ? (ಬಿ) ದೇವರ ಸಿಟ್ಟಿನ ದಿನವು ಜನಾಂಗಗಳಿಗೆ ಎಷ್ಟೊಂದು ವಿಪತ್ತಿನದ್ದಾಗಲಿರುವುದೆಂಬುದನ್ನು ತೋರಿಸುವ ಕೆಲವು ಪ್ರವಾದನೆಗಳನ್ನು ತಿಳಿಸಿರಿ.
17 ಈ ಬಲಿಷ್ಠ ಯೋಧ-ಅರಸನು ಪುನಃ ಒಮ್ಮೆ ದರ್ಶನದ ಮುಂದಿನ ದೃಶ್ಯದಲ್ಲಿ ಕಾಣಬರುತ್ತಾನೆ: “ಆತನು ಸರ್ವಶಕ್ತನಾದ ದೇವರ ಉಗ್ರಕೋಪದ ದ್ರಾಕ್ಷಿ ಗಾಣದಲ್ಲಿರುವುದನ್ನು ಸಹ ತುಳಿಯುತ್ತಾನೆ.” (ಪ್ರಕಟನೆ 19:15ಬಿ, NW) ಹಿಂದಿನ ದರ್ಶನವೊಂದರಲ್ಲಿ ಯೋಹಾನನು ಆಗಲೇ “ದೇವರ ರೋಷದ ದ್ರಾಕ್ಷೇತೊಟ್ಟಿಯ” ತುಳಿಯುವಿಕೆಯನ್ನು ನೋಡಿದ್ದನು. (ಪ್ರಕಟನೆ 14:18-20) ಯೆಶಾಯನು ಕೂಡ ಒಂದು ಹತಿಸುವಿಕೆಯ ದ್ರಾಕ್ಷೇತೊಟ್ಟಿಯನ್ನು ವರ್ಣಿಸುತ್ತಾನೆ, ಮತ್ತು ಇತರ ಪ್ರವಾದಿಗಳು ಎಲ್ಲಾ ಜನಾಂಗಗಳಿಗೆ ದೇವರ ಸಿಟ್ಟಿನ ದಿನವು ಎಷ್ಟು ವಿಪತ್ಕಾರಕವಾಗಿರುವುದೆಂಬುದನ್ನು ಹೇಳುತ್ತಾರೆ.—ಯೆಶಾಯ 24:1-6; 63:1-4; ಯೆರೆಮೀಯ 25:30-33; ದಾನಿಯೇಲ 2:44; ಚೆಫನ್ಯ 3:8; ಜೆಕರ್ಯ 14:3, 12, 13; ಪ್ರಕಟನೆ 6:15-17.
18. ಎಲ್ಲಾ ಜನಾಂಗಗಳ ಯೆಹೋವನ ತೀರ್ಪಿನ ಕುರಿತಾಗಿ ಪ್ರವಾದಿ ಯೋವೇಲನು ಯಾವುದನ್ನು ಪ್ರಕಟಿಸುತ್ತಾನೆ?
18 ಪ್ರವಾದಿ ಯೋವೇಲನು ದ್ರಾಕ್ಷೇತೊಟ್ಟಿಯನ್ನು “ಸುತ್ತಣ ಜನಾಂಗಗಳಿಗೆಲ್ಲಾ ನ್ಯಾಯ ತೀರಿಸುವುದಕ್ಕೆ” ಯೆಹೋವನ ಆಗಮನದೊಂದಿಗೆ ಜತೆಗೂಡಿಸುತ್ತಾನೆ. ಮತ್ತು ಯೆಹೋವನೇ ಆಜ್ಞೆಯನ್ನು ಹೊರಡಿಸುವವನಾಗಿದ್ದಾನೆ, ನಿಸ್ಸಂದೇಹವಾಗಿ, ಇದು ಆತನ ಜೊತೆ ನ್ಯಾಯಾಧೀಶನಾದ ಯೇಸುವಿಗೆ ಮತ್ತು ಆತನ ಸ್ವರ್ಗೀಯ ಸೈನ್ಯದವರಿಗೆ ಕೊಡುತ್ತಾನೆ: “ಕುಡುಗೋಲನ್ನು ಹಾಕಿರಿ, ಫಲವು ಪಕ್ವವಾಗಿದೆ; ಬನ್ನಿರಿ, ತುಳಿಯಿರಿ; ದ್ರಾಕ್ಷೆಯ ಅಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ಜನಾಂಗಗಳ ದುಷ್ಟತನವು ವಿಪರೀತವೇ ಸರಿ. ಆಹಾ, ತೀರ್ಪಿನ ತಗ್ಗಿನಲ್ಲಿ ಗುಂಪು ಗುಂಪು! ತೀರ್ಪಿನ ತಗ್ಗಿನಲ್ಲಿ ಯೆಹೋವನ ದಿನವು ಸಮೀಪಿಸಿದೆ. ಸೂರ್ಯಚಂದ್ರರು ಮಂಕಾಗುತ್ತಾರೆ, ನಕ್ಷತ್ರಗಳು ಕಾಂತಿಯನ್ನು ಅಡಗಿಸಿಕೊಳ್ಳುತ್ತವೆ. ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ, ಯೆರೂಸಲೇಮಿನಿಂದ ದನಿಗೈಯುತ್ತಾನೆ; ಭೂಮ್ಯಾಕಾಶಗಳು ನಡುಗುತ್ತವೆ. ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ ಇಸ್ರಾಯೇಲ್ಯರಿಗೆ ರಕ್ಷಣದುರ್ಗವೂ ಆಗುವನು. ಹೀಗೆ ನಾನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ನೆಲೆಯಾಗಿ ನಿಮ್ಮ ದೇವರಾದ ಯೆಹೋವನಾಗಿದ್ದೇನೆ ಎಂದು ನಿಮಗೆ ದೃಢವಾಗುವದು.”—ಯೋವೇಲ 3:12-17.
19. (ಎ) ಒಂದು ಪೇತ್ರ 4:17 ರಲ್ಲಿ ಕೇಳಲಾದ ಪ್ರಶ್ನೆಯು ಹೇಗೆ ಉತ್ತರಿಸಲ್ಪಡುವುದು? (ಬಿ) ಯೇಸುವಿನ ಹೊರ ಉಡುಪುಗಳ ಮೇಲೆ ಯಾವ ಹೆಸರು ಬರೆಯಲಾಗಿದೆ, ಮತ್ತು ಅದು ಏಕೆ ಯಥೋಚಿತವಾಗಿ ಪರಿಣಮಿಸುವುದು?
19 ಅವಿಧೇಯ ಜನಾಂಗಗಳಿಗೆ ಮತ್ತು ಮಾನವರಿಗೆ ಅದು ಕೇಡಿನ ದಿನವಾಗುವುದು, ಆದರೆ ಯೆಹೋವನನ್ನು ಮತ್ತು ಆತನ ಯೋಧ-ಅರಸನನ್ನು ತಮ್ಮ ಆಶ್ರಯವನ್ನಾಗಿ ಮಾಡಿದವರೆಲ್ಲರಿಗೆ ಅದು ವಿಮೋಚನೆಯ ದಿನವಾಗುವುದು! (2 ಥೆಸಲೊನೀಕ 1:6-9) ದೇವರ ಮನೆಯೊಂದಿಗೆ 1918 ರಲ್ಲಿ ಆರಂಭವಾದ ತೀರ್ಪು ಅದರ ಪರಾಕಾಷ್ಠೆಗೇರುವಿಕೆಗೆ ಧಾವಿಸುತ್ತಾ, 1 ಪೇತ್ರ 4:17ರ ಪ್ರಶ್ನೆಯನ್ನುತ್ತರಿಸುವುದು: “ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಗತಿ ಏನಾಗಬಹುದು?” ಮಹಿಮಾಭರಿತ ವಿಜೇತನು ದ್ರಾಕ್ಷೇತೊಟ್ಟಿಯನ್ನು ಮುಕ್ತಾಯದ ತನಕ ತುಳಿಯುವನು, ಈ ಮೂಲಕ ಯೋಹಾನನು ಯಾರ ಕುರಿತು ಹೀಗೆಂದನೋ ಆ ಮಹಿಮಾಭರಿತನು ತಾನೇ ಎಂದು ಪ್ರದರ್ಶಿಸುವನು: “ಮತ್ತು ಅವನ ಹೊರ ಉಡುಪಿನ ಮೇಲೆ, ಆತನ ತೊಡೆಯ ಮೇಲೂ ರಾಜಾಧಿರಾಜನೂ ಕರ್ತರ ಕರ್ತನೂ ಎಂದು ಬರೆಯಲ್ಪಟ್ಟ ಹೆಸರು ಅವನಿಗೆ ಇದೆ.” (ಪ್ರಕಟನೆ 19:16, NW) ಈತನು ಭೂಮಿಯ ಯಾವುದೇ ಅಧಿಕಾರಿ ಯಾ ಮಾನವ ರಾಜ ಅಥವಾ ಕರ್ತನಿಗಿಂತ ಹೆಚ್ಚು ಬಲಿಷ್ಠನಾಗಿ ಪರಿಣಮಿಸಿದ್ದಾನೆ. ಈತನ ಘನತೆ ಮತ್ತು ಉಚ್ಚ ವೈಭವವು ಉತ್ಕೃಷ್ಟವಾಗಿದೆ. “ಸತ್ಯತೆದೈನ್ಯನೀತಿಗಳನ್ನು ಸ್ಥಾಪಿಸುವದಕ್ಕಾಗಿ” ಅವನು ಸವಾರಿಗೈದಿದ್ದಾನೆ ಮತ್ತು ಎಲ್ಲಾ ಸಮಯಗಳಲ್ಲೂ ವಿಜೇತನಾಗಿದ್ದಾನೆ! (ಕೀರ್ತನೆ 45:4) ಆತನ ರಕ್ತಪ್ರೋಕ್ಷಿತ ವಸ್ತ್ರಗಳ ಮೇಲೆ, ಯಾರ ಸಮರ್ಥಕನು ತಾನಾಗಿದ್ದಾನೋ, ಆ ಸಾರ್ವಭೌಮ ಕರ್ತನಾದ ಯೆಹೋವನಿಂದ ಈತನ ಮೇಲೆ ಅನುಗ್ರಹಿತವಾಗಿರುವ ಹೆಸರು ಬರೆಯಲಾಗಿದೆ!
ದೇವರ ಮಹಾ ಸಂಜೆಯೂಟ
20. “ದೇವರ ಮಹಾ ಸಂಜೆಯೂಟ” ವನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ, ಇದು ಮುಂಚಿನ, ಆದರೂ ತದ್ರೀತಿಯ ಯಾವ ಪ್ರವಾದನೆಯನ್ನು ಮನಸ್ಸಿಗೆ ತರುತ್ತದೆ?
20 ಯೆಹೆಜ್ಕೇಲನ ದರ್ಶನದಲ್ಲಿ ಗೋಗನ ಸಮೂಹದ ನಾಶನದ ನಂತರ ಪಕ್ಷಿಗಳು ಮತ್ತು ಕಾಡುಪ್ರಾಣಿಗಳು ಔತಣವೊಂದಕ್ಕೆ ಆಮಂತ್ರಿಸಲ್ಪಡುತ್ತವೆ! ಯೆಹೋವನ ಶತ್ರುಗಳ ಸತ್ತ ದೇಹಗಳನ್ನು ತಿನ್ನುವುದರಿಂದ ಅವು ಭೂದೃಶ್ಯವನ್ನು ಅದರ ಹೆಣಗಳಿಂದ ಮುಕ್ತಿಗೊಳಿಸುತ್ತವೆ. (ಯೆಹೆಜ್ಕೇಲ 39:11, 17-20) ಯೋಹಾನನ ಮುಂದಿನ ಮಾತುಗಳು ಆ ಹಿಂದಿನ ಪ್ರವಾದನೆಯನ್ನು ವೈವಿಧ್ಯಮಯವಾಗಿ ಮನಸ್ಸಿಗೆ ತರುತ್ತವೆ: “ಒಬ್ಬ ದೇವದೂತನು ಸೂರ್ಯನಲ್ಲಿ ನಿಂತಿರುವುದನ್ನು ಸಹ ನಾನು ಕಂಡೆನು, ಮತ್ತು ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶಮಧ್ಯದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ ಹೇಳಿದ್ದು: ‘ಬನ್ನಿರಿ, ರಾಜರ ಮಾಂಸಲ ಭಾಗಗಳನ್ನೂ ಮಿಲಿಟರಿ ಸೇನಾಧಿಪತಿಗಳ ಮಾಂಸಲ ಭಾಗಗಳನ್ನೂ ಪರಾಕ್ರಮಶಾಲಿಗಳ ಮಾಂಸಲ ಭಾಗಗಳನ್ನೂ ಕುದುರೆಗಳ ಮತ್ತು ಅವುಗಳ ಮೇಲೆ ಕುಳಿತಿರುವವರ ಮಾಂಸಲ ಭಾಗಗಳನ್ನೂ, ಸ್ವತಂತ್ರರೂ ದಾಸರೂ ದೊಡ್ಡವರೂ ಚಿಕ್ಕವರೂ ಇವರೆಲ್ಲರ ಮಾಂಸಲ ಭಾಗಗಳನ್ನೂ ತಿನ್ನುವುದಕ್ಕೆ ದೇವರ ಮಹಾ ಸಂಜೆಯೂಟಕ್ಕೆ ಕೂಡಿಬನ್ನಿರಿ.’”—ಪ್ರಕಟನೆ 19:17, 18, NW.
21. ಇದರಿಂದ ಏನು ಸೂಚಿಸಲ್ಪಟ್ಟಿದೆ (ಎ) ದೇವದೂತನು “ಸೂರ್ಯನಲ್ಲಿ ನಿಂತಿರುವುದು”? (ಬಿ) ಭೂಮಿಯ ಮೇಲೆ ಮೃತರು ಬಿಡಲ್ಪಟ್ಟಿರುವುದರ ವಾಸ್ತವಾಂಶ? (ಸಿ) ಭೂಮಿಯ ಮೇಲೆ ಬಿಡಲ್ಪಡುವ ಹೆಣಗಳ ಪಟ್ಟಿಯಿಂದ? (ಡಿ) “ದೇವರ ಮಹಾ ಸಂಜೆಯೂಟ” ಎಂಬ ಪದಪ್ರಯೋಗದಿಂದ?
21 ದೇವದೂತನು “ಸೂರ್ಯನಲ್ಲಿ ನಿಂತಿರು” ವುದು, ಪಕ್ಷಿಗಳ ಗಮನವನ್ನು ಆಕರ್ಷಿಸುವುದಕ್ಕೆ ಒಂದು ಗಮನಾರ್ಹ ಸ್ಥಾನವಾಗಿದೆ. ಯೋಧ-ಅರಸನಿಂದ ಮತ್ತು ಆತನ ಸ್ವರ್ಗೀಯ ಸೈನ್ಯದವರಿಂದ ಹತಿಸಲ್ಪಡುವವರೆಲ್ಲರ ಮಾಂಸದಿಂದ ತಮ್ಮ ಹೊಟ್ಟೆಗಳನ್ನು ಕಂಠಪೂರ್ತಿ ತುಂಬಿಸಲು ತಯಾರಾಗಬೇಕೆಂದು ಅವನು ಅವುಗಳನ್ನು ಆಮಂತ್ರಿಸುತ್ತಾನೆ. ಸತ್ತವರು ಹೀಗೆಯೇ ಭೂಮಿಯ ಮೇಲೆ ಹೂಣಿಡುವುದರ ನಿಜತ್ವವು ಅವರು ಸಾರ್ವಜನಿಕ ಅವಮಾನದಲ್ಲಿ ಸಾಯಲಿರುವರು ಎಂದು ಸೂಚಿಸುತ್ತದೆ. ಪೂರ್ವದ ಇಸಬೆಲಳಂತೆ ಅವರಿಗೆ ಒಂದು ಗೌರವಪೂರಿತ ಹೂಳುವಿಕೆಯು ಇರಲಾರದು. (2 ಅರಸು 9:36, 37) ಅಲ್ಲೇ ಬಿದ್ದಿರುವ ಹೆಣಗಳ ಅವರ ಪಟ್ಟಿಯು ನಾಶನದ ವಿಸ್ತಾರ್ಯವನ್ನು ತೋರಿಸುತ್ತದೆ: ರಾಜರು, ಮಿಲಿಟರಿ ಸೇನಾಧಿಪತಿಗಳು, ಪರಾಕ್ರಮಶಾಲಿಗಳು, ಸ್ವತಂತ್ರರು, ಮತ್ತು ದಾಸರು. ಯಾವುದೇ ವಿನಾಯಿತಿ ಇಲ್ಲ. ಯೆಹೋವನಿಗೆ ವಿರೋಧದಲ್ಲಿರುವ ದಂಗೆಕೋರ ಲೋಕದ ಪ್ರತಿಯೊಂದು ಗುರುತು ನಿರ್ಮೂಲವಾಗುವುದು. ಇದರ ಅನಂತರ ಗಲಿಬಿಲಿಗೊಂಡ ಮಾನವರ ಅವಿಶ್ರಾಂತ ಸಮುದ್ರವು ಅಲ್ಲಿ ಇರಲಾರದು. (ಪ್ರಕಟನೆ 21:1) ಇದು “ದೇವರ ಮಹಾ ಸಂಜೆಯೂಟವಾಗಿದೆ,” ಯಾಕಂದರೆ ಅದರಲ್ಲಿ ಪಾಲು ತೆಗೆದುಕೊಳ್ಳಲು ಪಕ್ಷಿಗಳನ್ನು ಆಮಂತ್ರಿಸುವವನು ಯೆಹೋವನಾಗಿದ್ದಾನೆ.
22. ಕೊನೆಯ ಯುದ್ಧದ ಪಥವನ್ನು ಯೋಹಾನನು ಹೇಗೆ ಸಾರಾಂಶಿಸುತ್ತಾನೆ?
22 ಕಟ್ಟಕಡೆಯ ಯುದ್ಧದ ಪಥವನ್ನು ಯೋಹಾನನು ಈ ರೀತಿಯಲ್ಲಿ ಸಾರಾಂಶಿಸುತ್ತಾನೆ: “ಮತ್ತು ಆ ಕಾಡು ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದವನೊಂದಿಗೆ ಮತ್ತು ಆತನ ಸೈನ್ಯದೊಂದಿಗೆ ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ನಾನು ಕಂಡೆನು. ಮತ್ತು ಕಾಡು ಮೃಗವು ಸೆರೆಹಿಡಿಯಲ್ಪಟ್ಟಿತು, ಮತ್ತು ಕಾಡು ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಪಡೆದವರನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರನ್ನು ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಅದರ ಜೊತೆಯಲ್ಲಿ ಸೆರೆಹಿಡಿಯಲ್ಪಟ್ಟನು, ಸಜೀವವಾಗಿರುವಾಗಲೇ ಇವರಿಬ್ಬರೂ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ದೊಬ್ಬಲ್ಪಟ್ಟರು; ಮಿಕ್ಕವರನ್ನು ಆ ಕುದುರೆಯ ಮೇಲೆ ಕೂತಿದ್ದವನ ಉದ್ದ ಕತ್ತಿಯಿಂದ—ಅವನ ಬಾಯಿಂದ ಹೊರಟುಬಂದ ಕತ್ತಿಯಿಂದ—ಕೊಲಲ್ಲಾಯಿತು. ಮತ್ತು ಹಕ್ಕಿಗಳೆಲ್ಲಾ ಅವರ ಮಾಂಸಲ ಭಾಗಗಳಿಂದ ಭರ್ತಿಯಾದವು.”—ಪ್ರಕಟನೆ 19:19-21, NW.
23. (ಎ) “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ವು ಯಾವ ಅರ್ಥದಲ್ಲಿ “ಅರ್ಮಗೆದೋನಿನಲ್ಲಿ” ಹೋರಾಡಲ್ಪಡುವುದು? (ಬಿ) “ಭೂರಾಜರು” ಯಾವ ಎಚ್ಚರಿಕೆಯನ್ನು ಪಾಲಿಸಲು ತಪ್ಪಿರುತ್ತಾರೆ, ಮತ್ತು ಯಾವ ಪರಿಣಾಮದೊಂದಿಗೆ?
23 ಯೆಹೋವನ ರೋಷದ ಆರನೆಯ ಪಾತ್ರೆಯ ಹೊಯ್ಯುವಿಕೆಯ ಅನಂತರ ಯೋಹಾನನು ವರದಿಸಿದ್ದೇನಂದರೆ “ಭೂಮಿಯು ಮತ್ತು ಇಡೀ ಲೋಕದ ರಾಜರು” ಪೈಶಾಚಿಕ ಪ್ರಚಾರ ಕಾರ್ಯದಿಂದ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ” ಕೂಡಿಸಲ್ಪಟ್ಟರು. ಇದು ಹೋರಾಡಲ್ಪಡುವುದು ಅರ್ಮಗೆದೋನಿನಲ್ಲಿ. ಇದು ಒಂದು ಅಕ್ಷರಾರ್ಥಕ ಸ್ಥಳವಾಗಿರುವ ಬದಲಿಗೆ ಯೆಹೋವನ ತೀರ್ಪಿನ ನಿರ್ವಹಣೆಗೆ ಕರೆನೀಡುವ ಒಂದು ಲೋಕ ಸನ್ನಿವೇಶವಾಗಿದೆ. (ಪ್ರಕಟನೆ 16:12, 14, 16, ಕಿಂಗ್ ಜೇಮ್ಸ್ ವರ್ಷನ್) ಈಗ ಯೋಹಾನನು ಯುದ್ಧಪಂಕ್ತಿಗಳನ್ನು ನೋಡುತ್ತಾನೆ. ಅಲ್ಲಿ ದೇವರ ವಿರುದ್ಧ ಅಣಿಗೊಂಡವರಾಗಿ ಭೂರಾಜರು ಮತ್ತು ಅವರ ಸೈನ್ಯಗಳು ಇವೆ. ಇವರು ಹಠಮಾರಿತನದಿಂದ ಯೆಹೋವನ ರಾಜನಿಗೆ ತಮ್ಮನ್ನು ಅಧೀನಪಡಿಸಲು ನಿರಾಕರಿಸಿದ್ದಾರೆ. ಆತನು ಅವರಿಗೆ ಪ್ರೇರಿತ ಸಂದೇಶದಲ್ಲಿ ಉತ್ತಮ ಎಚ್ಚರಿಕೆಯನ್ನು ಕೊಟ್ಟನು: “ಆತನ ಮಗನಿಗೆ ಮುದ್ದಿಡಿರಿ; ಇಲ್ಲವಾದರೆ ಆತನ [ಯೆಹೋವನ] ಕೋಪವು ಪ್ರಜ್ವಲಿಸಲು ನೀವು ದಾರಿಯಲ್ಲೇ ನಾಶವಾದೀರಿ.” ಕ್ರಿಸ್ತನ ಆಳಿಕ್ವೆಗೆ ಅಧೀನಪಡಿಸಿಕೊಳ್ಳದೆ ಇದ್ದುದರಿಂದ ಅವರು ಸಾಯಲೇ ಬೇಕು.—ಕೀರ್ತನೆ 2:12.
24. (ಎ) ಕಾಡು ಮೃಗದ ಮತ್ತು ಸುಳ್ಳು ಪ್ರವಾದಿಯ ಮೇಲೆ ಯಾವ ತೀರ್ಪು ವಿಧಿಸಲ್ಪಟ್ಟಿದೆ, ಮತ್ತು ಅವರು ಇನ್ನೂ “ಸಜೀವ” ವಾಗಿರುವುದು ಯಾವ ಅರ್ಥದಲ್ಲಿ? (ಬಿ) “ಬೆಂಕಿಯ ಕೆರೆ”ಯು ಯಾಕೆ ಸಾಂಕೇತಿಕವಾಗಿರಲೇ ಬೇಕು?
24 ಸೈತಾನನ ರಾಜಕೀಯ ಸಂಸ್ಥೆಯನ್ನು ಪ್ರತಿನಿಧಿಸುವ, ಸಮುದ್ರದಿಂದ ಬರುವ ಏಳು ತಲೆಗಳ, ಹತ್ತು ಕೊಂಬುಗಳ ಕಾಡು ಮೃಗವು ಮತ್ತು ಇದರೊಂದಿಗೆ ಸುಳ್ಳು ಪ್ರವಾದಿಯಾದ ಏಳನೆಯ ಲೋಕ ಶಕ್ತಿಯು ವಿಸ್ಮೃತಿಯೊಳಗೆ ಮಗುಚಿಬೀಳುವುದು. (ಪ್ರಕಟನೆ 13:1, 11-13; 16:13) “ಸಜೀವವಾಗಿರುವಾಗಲೇ” ಯಾ ಭೂಮಿಯ ಮೇಲಿರುವ ದೇವರ ಜನರ ಮೇಲೆ ತಮ್ಮ ಏಕೀಕೃತ ವಿರೋಧದಲ್ಲಿ ಇನ್ನೂ ಕಾರ್ಯ ನಡಿಸುವಾಗಲೇ ಅವರು “ಬೆಂಕಿಯ ಕೆರೆ” ಯೊಳಗೆ ಬಿಸಾಡಲ್ಪಡುತ್ತಾರೆ. ಇದು ಅಕ್ಷರಾರ್ಥಕವಾದ ಒಂದು ಬೆಂಕಿಯ ಕೆರೆಯೋ? ಅಲ್ಲ, ಹೇಗೆ ಕಾಡು ಮೃಗ ಮತ್ತು ಸುಳ್ಳು ಪ್ರವಾದಿಯು ಅಕ್ಷರಾರ್ಥಕ ಪ್ರಾಣಿಗಳಾಗಿಲ್ಲವೋ ಹಾಗೆಯೇ. ಅದರ ಬದಲು ಅದು ಸಂಪೂರ್ಣ, ಅಂತಿಮ ನಾಶನದ, ಪುನಃ ಬರಲಾಗದ ಸ್ಥಳದ ಚಿಹ್ನೆಯಾಗಿದೆ. ಅನಂತರ ಇಲ್ಲಿ ಮರಣ ಮತ್ತು ಹೇಡಿಸ್ ಹಾಗೂ ಪಿಶಾಚನು ತಾನೇ ದೊಬ್ಬಲ್ಪಡಲಿದ್ದಾರೆ. (ಪ್ರಕಟನೆ 20:10, 14) ಅದು ನಿಶ್ಚಯವಾಗಿಯೂ ದುಷ್ಟರಿಗಿರುವ ನಿತ್ಯ ಯಾತನೆಯ ಇನ್ನೊಂದು ಅತಿ ಘೋರಸ್ಥಳ ಆಗಿರುವುದಿಲ್ಲ. ಯಾಕಂದರೆ ಇಂಥದೊಂದು ಸ್ಥಳದ ಕಲ್ಪನೆಯು ತಾನೇ ಯೆಹೋವನಿಗೆ ಅಸಹ್ಯವಾಗಿದೆ.—ಯೆರೆಮೀಯ 19:5; 32:35; 1 ಯೋಹಾನ 4:8, 16.
25. (ಎ) ಆ “ಕುದುರೆಯ ಮೇಲೆ ಕೂತಿದ್ದವನ ಕತ್ತಿಯಿಂದ ಕೊಲ್ಲ” ಲ್ಪಟ್ಟವರು ಯಾರು? (ಬಿ) “ಕೊಲ್ಲ” ಲ್ಪಟ್ಟವರಲ್ಲಿ ಯಾರೊಬ್ಬನಿಗಾದರೂ ಪುನರುತ್ಥಾನ ಇರುವುದು ಎಂದು ನಾವು ನಿರೀಕ್ಷಿಸಬಹುದೇ?
25 ಸರಕಾರದ ನೇರ ಭಾಗವಾಗದೆ ಇರುವ, ಆದರೆ ಮಾನವ ಕುಲದ ಈ ಭ್ರಷ್ಟ ಲೋಕದ ತಿದ್ದಲಾಗದ ಭಾಗವಾಗಿರುವ ಇತರರೆಲ್ಲರನ್ನೂ ಅಂತೆಯೇ ಆ “ಕುದುರೆಯ ಮೇಲೆ ಕೂತಿದ್ದವನ ಉದ್ದ ಕತ್ತಿಯಿಂದ . . . ಕೊಲಲ್ಲಾಯಿತು.” ಯೇಸುವು ಅವರನ್ನು ಮರಣಕ್ಕೆ ಯೋಗ್ಯರೆಂದು ತೀರ್ಪು ನೀಡುವನು. ಅವರ ವಿಷಯದಲ್ಲಾದರೋ ಬೆಂಕಿಯ ಕೆರೆ ತಿಳಿಸಲ್ಪಟ್ಟಿಲ್ಲವಾದುದರಿಂದ ಅವರಿಗೆ ಪುನರುತ್ಥಾನವಿರುವುದೆಂದು ನಾವು ನಿರೀಕ್ಷಿಸಬಹುದೋ? ಆ ಸಮಯದಲ್ಲಿ ಯೆಹೋವನ ನ್ಯಾಯಾಧೀಶನಿಂದ ಹತಿಸಲ್ಪಟ್ಟವರು ಪುನರುತ್ಥಾನಗೊಳಿಸಲ್ಪಡುವರೆಂದು ನಮಗೆ ಎಲ್ಲಿಯೂ ಹೇಳಲ್ಪಟ್ಟಿರುವುದಿಲ್ಲ. ಯೇಸುವು ಸ್ವತಃ ನುಡಿದಂತೆ, “ಕುರಿ” ಗಳಾಗಿರದ ಎಲ್ಲರೂ “ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ” ಅಂದರೆ “ನಿತ್ಯ ಶಿಕ್ಷೆಗೂ” ಹೋಗುವರು. (ಮತ್ತಾಯ 25:33, 41, 46) ಇದು “ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನ” ವನ್ನು ತುತ್ತತುದಿಗೇರಿಸಲಿರುವುದು.—2 ಪೇತ್ರ 3:7; ನಹೂಮ 1:2, 7-9; ಮಲಾಕಿಯ 4:1.
26. ಅರ್ಮಗೆದೋನಿನ ಪರಿಣಾಮವನ್ನು ಸಂಕ್ಷಿಪ್ತವಾಗಿ ತಿಳಿಸಿರಿ.
26 ಈ ರೀತಿಯಲ್ಲಿ ಸೈತಾನನ ಎಲ್ಲಾ ಐಹಿಕ ಸಂಸ್ಥೆಯು ಒಂದು ಅಂತ್ಯಕ್ಕೆ ಬರುತ್ತದೆ. ರಾಜಕೀಯ ಪ್ರಭುತ್ವದ “ಮೊದಲಿದ್ದ ಆಕಾಶಮಂಡಲವು” ಇಲ್ಲದೆ ಹೋಗಿದೆ. ಶತಮಾನಗಳಿಂದ ಸೈತಾನನು ಕಟ್ಟಿದ, ಶಾಶ್ವತವೆಂದು ಭಾಸವಾಗುವ ವ್ಯವಸ್ಥೆಯಾದ “ಭೂಮಂಡಲವು” ಈಗ ಸಂಪೂರ್ಣವಾಗಿ ನಾಶವಾಗಿ ಹೋಗಿದೆ. ಯೆಹೋವನಿಗೆ ವಿರೋಧವಾಗಿ ನಿಂತಿರುವ ದುಷ್ಟ ಮಾನವ ಕುಲದ ಸಮೂಹದ “ಸಮುದ್ರವು” ಇಲ್ಲದೆ ಹೋಗಿದೆ. (ಪ್ರಕಟನೆ 21:1; 2 ಪೇತ್ರ 3:10) ಆದರೂ, ಸೈತಾನನಿಗೆ ತಾನೇ ಯೆಹೋವನು ಏನನ್ನು ಕಾದಿರಿಸಿದ್ದಾನೆ? ಯೋಹಾನನು ನಮಗೆ ಹೇಳುತ್ತಾ ಮುಂದರಿಯುತ್ತಾನೆ.