ಅಪಾತ್ರ ದಯೆಯ ಸುವಾರ್ತೆಯನ್ನು ಸಾರಿರಿ
‘ದೇವರ ಅಪಾತ್ರ ದಯೆಯ ಸುವಾರ್ತೆಗೆ ಕೂಲಂಕಷ ಸಾಕ್ಷಿ ಕೊಡಿ.’ —ಅ. ಕಾ. 20:24.
1, 2. ದೇವರ ಅಪಾತ್ರ ದಯೆಗೆ ಅಪೊಸ್ತಲ ಪೌಲ ಹೇಗೆ ಕೃತಜ್ಞತೆ ತೋರಿಸಿದನು?
“ನನಗೆ [ದೇವರು] ತೋರಿಸಿದ ಅಪಾತ್ರ ದಯೆಯು ವ್ಯರ್ಥವಾಗಲಿಲ್ಲ” ಎಂದು ಅಪೊಸ್ತಲ ಪೌಲ ಮನದಾಳದಿಂದ ಹೇಳಿದನು. (1 ಕೊರಿಂಥ 15:9, 10 ಓದಿ.) ಹಿಂದೊಮ್ಮೆ ಕ್ರೈಸ್ತರನ್ನು ಹಿಂಸಿಸುತ್ತಿದ್ದ ಪೌಲನಿಗೆ ತಾನು ದೇವರ ಮಹಾ ಕರುಣೆಯನ್ನು ಸಂಪಾದಿಸಲಿಲ್ಲ, ತಾನದಕ್ಕೆ ಅರ್ಹನೂ ಅಲ್ಲ ಎಂದು ಚೆನ್ನಾಗಿ ತಿಳಿದಿತ್ತು.
2 ಪೌಲನು ತನ್ನ ಜೀವನದ ಕೊನೆಯಲ್ಲಿ ತಿಮೊಥೆಯನಿಗೆ ಹೀಗೆ ಬರೆದನು: “ನಮ್ಮ ಕರ್ತನಾದ ಕ್ರಿಸ್ತ ಯೇಸು ನನಗೆ ಬಲವನ್ನು ದಯಪಾಲಿಸಿ ನನ್ನನ್ನು ಶುಶ್ರೂಷೆಗೆ ನೇಮಿಸುವ ಮೂಲಕ ನನ್ನನ್ನು ನಂಬಿಗಸ್ತನಾಗಿ ಪರಿಗಣಿಸಿದ್ದಕ್ಕಾಗಿ ನಾನು ಅವನಿಗೆ ಕೃತಜ್ಞನಾಗಿದ್ದೇನೆ.” (1 ತಿಮೊ. 1:12-14) ಇಲ್ಲಿ ಪೌಲನು ತಿಳಿಸಿದ ಶುಶ್ರೂಷೆ ಯಾವುದಾಗಿತ್ತು? ಎಫೆಸ ಸಭೆಯ ಹಿರಿಯರಿಗೆ ಅವನು ಹೇಳಿದ ಮಾತುಗಳಲ್ಲಿ ಉತ್ತರವಿದೆ: “ನಾನು ನನ್ನ ಪ್ರಾಣವನ್ನು ಯಾವುದೇ ರೀತಿಯಲ್ಲಿ ಅಮೂಲ್ಯವೆಂದು ಎಣಿಸುವುದಿಲ್ಲ; ನಾನು ನನ್ನ ಓಟವನ್ನೂ ದೇವರ ಅಪಾತ್ರ ದಯೆಯ ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡುವಂತೆ ಕರ್ತನಾದ ಯೇಸುವಿನಿಂದ ನಾನು ಪಡೆದ ಶುಶ್ರೂಷೆಯನ್ನೂ ಪೂರ್ಣಗೊಳಿಸುವುದೇ ನನ್ನ ಅಪೇಕ್ಷೆ.”—ಅ. ಕಾ. 20:24.
3. ಪೌಲನಿಗೆ ಯಾವ ವಿಶೇಷ ಶುಶ್ರೂಷೆಯನ್ನು ಕೊಡಲಾಯಿತು? (ಲೇಖನದ ಆರಂಭದ ಚಿತ್ರ ನೋಡಿ.)
3 ಯಾವ ‘ಸುವಾರ್ತೆಯನ್ನು’ ಪೌಲ ಸಾರಿದನು? ಆ ಸುವಾರ್ತೆಯು ಯೆಹೋವನ ಅಪಾತ್ರ ದಯೆಯನ್ನು ಹೇಗೆ ತೋರಿಸಿತು? ಎಫೆಸದ ಕ್ರೈಸ್ತರಿಗೆ ಪೌಲ ಹೀಗಂದನು: ‘ನಿಮಗೋಸ್ಕರ ದೇವರು ತನ್ನ ಅಪಾತ್ರ ದಯೆಯಿಂದ ನನಗೆ ಕೊಟ್ಟಿರುವ ಮನೆವಾರ್ತೆಯ ಕೆಲಸದ ಕುರಿತು ನೀವು ಕೇಳಿಸಿಕೊಂಡಿದ್ದೀರಿ.’ (ಎಫೆ. 3:1, 2) ಅನ್ಯಜನಾಂಗದ ಜನರು ಕೂಡ ಮೆಸ್ಸೀಯನ ರಾಜ್ಯ ಸರ್ಕಾರದ ಭಾಗವಾಗಲು ಸಾಧ್ಯವಿದೆ ಎಂಬ ಸುವಾರ್ತೆಯನ್ನು ಅವರಿಗೆ ಸಾರುವಂತೆ ಯೇಸು ಪೌಲನಿಗೆ ಹೇಳಿದ್ದನು. (ಎಫೆಸ 3:5-9 ಓದಿ.) ಪೌಲನು ಹುರುಪಿನಿಂದ ಸಾರುತ್ತಾ ಇಂದಿನ ಕ್ರೈಸ್ತರಿಗೆ ಒಳ್ಳೇ ಮಾದರಿಯನ್ನಿಟ್ಟನು. ಹೀಗೆ ದೇವರು ತನಗೆ ತೋರಿಸಿದ ಅಪಾತ್ರ ದಯೆಯು “ವ್ಯರ್ಥವಾಗಲಿಲ್ಲ” ಎಂದು ತೋರಿಸಿಕೊಟ್ಟನು.
ದೇವರ ಅಪಾತ್ರ ದಯೆ ನಿಮ್ಮನ್ನು ಪ್ರಚೋದಿಸುತ್ತದಾ?
4, 5. ರಾಜ್ಯದ ಸುವಾರ್ತೆ ಮತ್ತು ‘ದೇವರ ಅಪಾತ್ರ ದಯೆಯ ಸುವಾರ್ತೆ’ ಎರಡೂ ಒಂದೇ ಆಗಿದೆ ಹೇಗೆ?
4 ಈ ಅಂತ್ಯಕಾಲದಲ್ಲಿ ದೇವರ ‘ರಾಜ್ಯದ ಸುವಾರ್ತೆಯನ್ನು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರುವ’ ನೇಮಕ ಯೆಹೋವನ ಜನರಿಗಿದೆ. (ಮತ್ತಾ. 24:14) ರಾಜ್ಯದ ಸುವಾರ್ತೆಯು ‘ದೇವರ ಅಪಾತ್ರ ದಯೆಯ ಸುವಾರ್ತೆಯೂ’ ಆಗಿದೆ. ಹೇಗೆ? ದೇವರ ರಾಜ್ಯದಿಂದ ನಮಗೆ ಸಿಗಲಿರುವ ಎಲ್ಲ ಆಶೀರ್ವಾದಗಳಿಗೆ ಯೆಹೋವನ ಅಪಾತ್ರ ದಯೆಯೇ ಕಾರಣ. (ಎಫೆ. 1:3) ಪೌಲನು ಹುರುಪಿನಿಂದ ಸಾರುವ ಮೂಲಕ ಯೆಹೋವನ ಅಪಾತ್ರ ದಯೆಗಾಗಿ ಕೃತಜ್ಞತೆ ತೋರಿಸಿದನು. ಅವನ ಮಾದರಿಯನ್ನು ನಾವು ಅನುಕರಿಸುತ್ತಿದ್ದೇವಾ?—ರೋಮನ್ನರಿಗೆ 1:14-16 ಓದಿ.
5 ಹಿಂದಿನ ಲೇಖನದಲ್ಲಿ ಕಲಿತಂತೆ, ಪಾಪಿಗಳಾದ ನಾವು ಯೆಹೋವನ ಅಪಾತ್ರ ದಯೆಯಿಂದ ಅನೇಕ ವಿಧಗಳಲ್ಲಿ ಪ್ರಯೋಜನ ಪಡೆಯುತ್ತೇವೆ. ಆದ್ದರಿಂದ ಯೆಹೋವನು ಹೇಗೆ ಪ್ರೀತಿ ತೋರಿಸುತ್ತಿದ್ದಾನೆ ಮತ್ತು ಅದರಿಂದ ಹೇಗೆ ಪ್ರಯೋಜನ ಪಡೆಯಬಹುದೆಂದು ಇತರರಿಗೆ ಕಲಿಸುವ ಜವಾಬ್ದಾರಿ ನಮಗಿದೆ. ದೇವರ ಅಪಾತ್ರ ದಯೆಗಾಗಿ ಕೃತಜ್ಞತೆ ತೋರಿಸಲು ನಾವು ಇತರರಿಗೆ ಹೇಗೆ ಸಹಾಯ ಮಾಡಬಹುದು?
ವಿಮೋಚನಾ ಮೌಲ್ಯದ ಕುರಿತ ಸುವಾರ್ತೆಯನ್ನು ಸಾರಿರಿ
6, 7. ವಿಮೋಚನಾ ಮೌಲ್ಯದ ಬಗ್ಗೆ ನಾವು ಜನರಿಗೆ ವಿವರಿಸುವಾಗ ದೇವರ ಅಪಾತ್ರ ದಯೆಯ ಸುವಾರ್ತೆಯನ್ನು ತಿಳಿಸುತ್ತಿದ್ದೇವೆ ಹೇಗೆ?
6 ಪಾಪ ಮಾಡಿದ ಮೇಲೆ ಇಂದು ಅನೇಕರಿಗೆ ಸ್ವಲ್ಪವೂ ದೋಷಿ ಭಾವನೆ ಇರುವುದಿಲ್ಲ. ಹಾಗಾಗಿ ಅವರಿಗೆ ವಿಮೋಚನಾ ಮೌಲ್ಯ ಮಾನವಕುಲಕ್ಕೆ ಏಕೆ ಬೇಕೆಂದು ಅರ್ಥವಾಗುವುದಿಲ್ಲ. ಸ್ವೇಚ್ಛೆಯಿಂದ ಜೀವನ ನಡೆಸುವವರಿಗೂ ಅಂಥ ಜೀವನಶೈಲಿಯಿಂದ ಸಂತೋಷ ಸಿಗುತ್ತಿಲ್ಲವೆಂದು ಗೊತ್ತಾಗುತ್ತಿದೆ. ಯೆಹೋವನ ಸಾಕ್ಷಿಗಳೊಂದಿಗೆ ಚರ್ಚಿಸಿದ ನಂತರವೇ ಎಷ್ಟೋ ಜನರಿಗೆ ಪಾಪ ಅಂದರೇನು, ಅದರಿಂದ ನಾವು ಹೇಗೆಲ್ಲ ಕಷ್ಟಪಡುತ್ತೇವೆ, ಪಾಪದ ದಾಸತ್ವದಿಂದ ಬಿಡುಗಡೆ ಸಿಗಬೇಕಾದರೆ ನಾವೇನು ಮಾಡಬೇಕು ಎಂದು ತಿಳಿದುಬಂದಿದೆ. ಪಾಪ ಏನೆಂದು ಯಥಾರ್ಥ ಮನಸ್ಸಿನ ಜನರಿಗೆ ಅರ್ಥವಾದಾಗ ಪಾಪಮರಣದಿಂದ ನಮ್ಮನ್ನು ಬಿಡಿಸಲಿಕ್ಕಾಗಿ ಯೆಹೋವನು ತನ್ನ ಮಗನನ್ನು ಈ ಭೂಮಿಗೆ ಕಳುಹಿಸಿದ್ದಕ್ಕಾಗಿ ಅವರಲ್ಲಿ ಕೃತಜ್ಞತೆ ಮೂಡುತ್ತದೆ. ಯೆಹೋವನ ಆ ಮಹಾ ಪ್ರೀತಿ ಮತ್ತು ಅಪಾತ್ರ ದಯೆ ಅವರಿಗೆ ಗೊತ್ತಾಗುತ್ತದೆ.—1 ಯೋಹಾ. 4:9,10.
7 ಯೆಹೋವನ ಪ್ರಿಯ ಪುತ್ರನ ಬಗ್ಗೆ ಪೌಲ ಏನು ಹೇಳಿದನೆಂದು ಗಮನಿಸಿ: “ಅವನ ಮೂಲಕ ಅಂದರೆ ಆ ಒಬ್ಬನ ರಕ್ತದ ಮೂಲಕ ದೊರೆತ ವಿಮೋಚನಾ ಮೌಲ್ಯದ ಮುಖಾಂತರ ನಮಗೆ ಬಿಡುಗಡೆಯಾಯಿತು; ಹೌದು, ದೇವರ ಅಪಾತ್ರ ದಯೆಯ ಔದಾರ್ಯದಿಂದ ನಮ್ಮ ಅಪರಾಧಗಳು ಕ್ಷಮಿಸಲ್ಪಟ್ಟವು.” (ಎಫೆ. 1:7) ಕ್ರಿಸ್ತನ ವಿಮೋಚನಾ ಯಜ್ಞವು ನಮ್ಮ ಮೇಲೆ ದೇವರಿಗಿರುವ ಪ್ರೀತಿಯ ಅತಿ ದೊಡ್ಡ ಪುರಾವೆ. ಮಾತ್ರವಲ್ಲ ಆತನ ಅಪಾತ್ರ ದಯೆಯು ಎಷ್ಟು ಅಪರಿಮಿತ ಎಂದೂ ತೋರಿಸುತ್ತದೆ. ಯೇಸುವಿನ ಯಜ್ಞದಲ್ಲಿ ನಾವು ನಂಬಿಕೆಯಿಟ್ಟರೆ ನಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತದೆ ಮತ್ತು ನಮ್ಮ ಮನಸ್ಸಾಕ್ಷಿ ಶುದ್ಧವಿರುತ್ತದೆ. ಇದನ್ನು ತಿಳಿಯುವಾಗ ಎಷ್ಟೊಂದು ನೆಮ್ಮದಿ ಸಿಗುತ್ತದೆ! (ಇಬ್ರಿ. 9:14) ಇದು ನಿಜಕ್ಕೂ ಇತರರಿಗೆ ತಿಳಿಸಲೇಬೇಕಾದ ಸುವಾರ್ತೆ!
ದೇವರ ಸ್ನೇಹಿತರಾಗಲು ಜನರಿಗೆ ಸಹಾಯಮಾಡಿ
8. ಪಾಪಿಗಳಾದ ಮಾನವರು ಏಕೆ ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರಬೇಕು?
8 ಯಾರು ಯೇಸುವಿನ ಯಜ್ಞದಲ್ಲಿ ನಂಬಿಕೆ ಇಡುವುದಿಲ್ಲವೊ ಅವರನ್ನು ದೇವರು ವೈರಿಗಳೆಂದು ನೋಡುತ್ತಾನೆ. ಆದರೆ ದೇವರ ಸ್ನೇಹಿತರಾಗಲು ಅವರಿಗೆ ಸಾಧ್ಯವಿದೆಯೆಂದು ತಿಳಿಸುವ ಜವಾಬ್ದಾರಿ ನಮಗಿದೆ. ದೇವರ ಸ್ನೇಹಿತರಾಗಲು ಏನು ಮಾಡಬೇಕು? ಅಪೊಸ್ತಲ ಯೋಹಾನ ಹೀಗೆ ಬರೆದನು: “ಮಗನಲ್ಲಿ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದಿಲ್ಲ, ಆದರೆ ದೇವರ ಕ್ರೋಧವು ಅವನ ಮೇಲೆ ನೆಲೆಗೊಳ್ಳುತ್ತದೆ.” (ಯೋಹಾ. 3:36) ಕ್ರಿಸ್ತನ ಯಜ್ಞದಿಂದಾಗಿ ನಾವು ದೇವರ ಸ್ನೇಹಿತರಾಗಲು ಸಾಧ್ಯವಿದೆ ಅನ್ನೋದು ಸಂತೋಷದ ವಿಷಯ. ಇದನ್ನು ಪೌಲನು ಹೀಗೆ ವಿವರಿಸಿದನು: “ನಿಮ್ಮ ಮನಸ್ಸುಗಳು ದುಷ್ಕೃತ್ಯಗಳ ಮೇಲಿದ್ದ ಕಾರಣ ಈ ಹಿಂದೆ ದೇವರಿಂದ ದೂರಸರಿದವರೂ ವೈರಿಗಳೂ ಆಗಿದ್ದ ನಿಮ್ಮನ್ನು ಆತನು ಈಗ ಪುನಃ ಆ ಒಬ್ಬನ ಐಹಿಕ ದೇಹದ ಮರಣದ ಮೂಲಕ ಸಮಾಧಾನ ಸಂಬಂಧಕ್ಕೆ ತಂದು . . . ನಿಲ್ಲಿಸಿದನು.”—ಕೊಲೊ. 1:21, 22.
9, 10. (ಎ) ಕ್ರಿಸ್ತನು ತನ್ನ ಅಭಿಷಿಕ್ತ ಸಹೋದರರಿಗೆ ಯಾವ ಜವಾಬ್ದಾರಿ ಕೊಟ್ಟಿದ್ದಾನೆ? (ಬಿ) ‘ಬೇರೆ ಕುರಿಗಳು’ ಅಭಿಷಿಕ್ತರಿಗೆ ಹೇಗೆ ಸಹಾಯ ಮಾಡುತ್ತಿದ್ದಾರೆ?
9 ಭೂಮಿಯಲ್ಲಿರುವ ತನ್ನ ಅಭಿಷಿಕ್ತ ಸಹೋದರರಿಗೆ ಕ್ರಿಸ್ತನು “ಸಮಾಧಾನ ಸಂಬಂಧದ ಶುಶ್ರೂಷೆಯನ್ನು” ಕೊಟ್ಟಿದ್ದಾನೆ. ಅವರಿಗೆ ಪೌಲನು ಹೀಗಂದನು: “ಎಲ್ಲವೂ ದೇವರಿಂದಲೇ ಉಂಟಾಯಿತು. ಆತನು ಕ್ರಿಸ್ತನ ಮೂಲಕ ನಮ್ಮನ್ನು ತನ್ನೊಂದಿಗೆ ಸಮಾಧಾನ ಸಂಬಂಧಕ್ಕೆ ತಂದುಕೊಂಡು, ಸಮಾಧಾನ ಸಂಬಂಧದ ಶುಶ್ರೂಷೆಯನ್ನು ನಮಗೆ ಕೊಟ್ಟಿದ್ದಾನೆ. ಅದೇನೆಂದರೆ, ದೇವರು ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ತೆಗೆದುಕೊಳ್ಳದೆ, ಕ್ರಿಸ್ತನ ಮೂಲಕ ಲೋಕವನ್ನು ತನ್ನೊಂದಿಗೆ ಸಮಾಧಾನ ಸಂಬಂಧಕ್ಕೆ ತರುತ್ತಿದ್ದಾನೆ ಮತ್ತು ಸಮಾಧಾನ ಸಂಬಂಧದ ಕುರಿತಾದ ಈ ವಾಕ್ಯವನ್ನು ನಮಗೆ ಒಪ್ಪಿಸಿದ್ದಾನೆ. ಆದುದರಿಂದ ದೇವರು ನಮ್ಮ ಮೂಲಕ ವಿನಂತಿಸುತ್ತಿದ್ದಾನೋ ಎಂಬಂತೆ ನಾವು ಕ್ರಿಸ್ತನ ಬದಲಿಯಾಗಿ ರಾಯಭಾರಿಗಳಾಗಿದ್ದೇವೆ. ಕ್ರಿಸ್ತನ ಬದಲಿಯಾಗಿರುವ ನಾವು, ‘ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬನ್ನಿರಿ’ ಎಂದು ಬೇಡಿಕೊಳ್ಳುತ್ತೇವೆ.”—2 ಕೊರಿಂ. 5:18-20.
10 ಈ ಶುಶ್ರೂಷೆಯಲ್ಲಿ ಅಭಿಷಿಕ್ತರಿಗೆ ಸಹಾಯ ನೀಡುವ ಸುಯೋಗ ‘ಬೇರೆ ಕುರಿಗಳಿಗೆ’ ಇದೆ. (ಯೋಹಾ. 10:16) ಈ ಬೇರೆ ಕುರಿಗಳು ಕ್ರಿಸ್ತನ ನಿಯೋಗಿಗಳು ಅಂದರೆ ಸಂದೇಶವಾಹಕರಾಗಿದ್ದಾರೆ. ಸಾರುವ ಕೆಲಸದಲ್ಲಿ ಅವರು ಬಹುಪಾಲನ್ನು ಮಾಡುತ್ತಿದ್ದಾರೆ. ಸತ್ಯವನ್ನು ಜನರಿಗೆ ಕಲಿಸುತ್ತಿದ್ದಾರೆ ಮತ್ತು ಯೆಹೋವನೊಂದಿಗೆ ಆಪ್ತ ಸಂಬಂಧಕ್ಕೆ ಬರಲು ನೆರವು ನೀಡುತ್ತಿದ್ದಾರೆ. ಇದು ದೇವರ ಅಪಾತ್ರ ದಯೆಯ ಸುವಾರ್ತೆಯನ್ನು ಸಾರುವುದರ ಒಂದು ಪ್ರಮುಖ ಭಾಗವಾಗಿದೆ.
ದೇವರು ಪ್ರಾರ್ಥನೆಗಳನ್ನು ಕೇಳುತ್ತಾನೆಂದು ಕಲಿಸಿ
11, 12. ಜನರು ಯೆಹೋವನಿಗೆ ಪ್ರಾರ್ಥನೆ ಮಾಡಸಾಧ್ಯವಿದೆಯೆಂಬ ವಿಷಯ ಸುವಾರ್ತೆಯಾಗಿದೆ ಏಕೆ?
11 ಮನಸ್ಸಿಗೆ ನೆಮ್ಮದಿ ಸಿಗುತ್ತದೆಂಬ ಕಾರಣಕ್ಕಾಗಿ ಅನೇಕ ಜನರು ಪ್ರಾರ್ಥನೆ ಮಾಡುತ್ತಾರೆ. ಆದರೆ ದೇವರು ಅವರ ಪ್ರಾರ್ಥನೆಗಳನ್ನು ಕೇಳುತ್ತಾನೆಂಬ ನಿಜವಾದ ನಂಬಿಕೆ ಅವರಿಗಿಲ್ಲ. ಹಾಗಾಗಿ ಯೆಹೋವನು ‘ಪ್ರಾರ್ಥನೆಯನ್ನು ಕೇಳುವವನು’ ಎಂದು ಅವರು ತಿಳಿಯಬೇಕಿದೆ. ಕೀರ್ತನೆಗಾರ ದಾವೀದ ಹೀಗೆ ಬರೆದನು: “ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು. ನನ್ನ ಪಾಪಗಳನ್ನು ನಿವಾರಿಸಲು ನನ್ನಿಂದಾಗುವದಿಲ್ಲ. ಆದರೆ ನಮ್ಮ ದೋಷಪರಿಹಾರಕನು ನೀನೇ.”—ಕೀರ್ತ. 65:2, 3.
12 ಯೇಸು ತನ್ನ ಶಿಷ್ಯರಿಗೆ, “ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ಅದನ್ನು ನೆರವೇರಿಸುವೆನು” ಎಂದು ಹೇಳಿದನು. (ಯೋಹಾ. 14:14) ಇದರರ್ಥ, ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿ ಏನನ್ನಾದರೂ ನಾವು ಬೇಡಿಕೊಳ್ಳಬಹುದು. ಈ ಬಗ್ಗೆ ಯೋಹಾನನು ಬರೆದದ್ದು: “ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ ಭರವಸೆಯು ಆತನ ವಿಷಯವಾಗಿ ನಮಗುಂಟು.” (1 ಯೋಹಾ. 5:14) ಪ್ರಾರ್ಥನೆ ಮಾಡುವುದು ಮನಸ್ಸಿಗೆ ನೆಮ್ಮದಿ ಸಿಗುತ್ತದೆಂಬ ಕಾರಣಕ್ಕಾಗಿ ಮಾತ್ರ ಅಲ್ಲ, ಬದಲಿಗೆ ಪ್ರಾರ್ಥನೆಯು ಯೆಹೋವನ “ಅಪಾತ್ರ ದಯೆಯ ಸಿಂಹಾಸನವನ್ನು” ಸಮೀಪಿಸಲಿಕ್ಕಾಗಿರುವ ಮಾರ್ಗವೆಂದು ಜನರು ತಿಳಿಯಬೇಕು. (ಇಬ್ರಿ. 4:16) ಹಾಗಾಗಿ ಸರಿಯಾದ ರೀತಿಯಲ್ಲಿ, ಸರಿಯಾದ ವ್ಯಕ್ತಿಗೆ, ಸರಿಯಾದ ವಿಷಯಗಳಿಗಾಗಿ ಪ್ರಾರ್ಥಿಸುವುದು ಹೇಗೆಂದು ನಾವು ಜನರಿಗೆ ಕಲಿಸಬೇಕು. ಹೀಗೆ ಯೆಹೋವನ ಸ್ನೇಹಿತರಾಗಲು ಮತ್ತು ಸಂಕಷ್ಟಗಳಲ್ಲಿ ಸಾಂತ್ವನ ಪಡೆದುಕೊಳ್ಳಲು ನಾವು ಅವರಿಗೆ ನೆರವಾಗುತ್ತೇವೆ.—ಕೀರ್ತ. 4:1; 145:18.
ಹೊಸ ಲೋಕದಲ್ಲಿ ದೇವರ ಅಪಾತ್ರ ದಯೆ
13, 14. (ಎ) ಅಭಿಷಿಕ್ತರಿಗೆ ಮುಂದೆ ಯಾವ ಅದ್ಭುತ ಸುಯೋಗಗಳಿವೆ? (ಬಿ) ಮಾನವಕುಲಕ್ಕಾಗಿ ಯಾವ ಆಶ್ಚರ್ಯಕರ ಕೆಲಸವನ್ನು ಅಭಿಷಿಕ್ತರು ಮಾಡಲಿದ್ದಾರೆ?
13 “ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ” ಯೆಹೋವನು ಇನ್ನೂ ಹೆಚ್ಚಾಗಿ ಅಪಾತ್ರ ದಯೆ ತೋರಿಸುವನು. ಹೇಗೆ? ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಆಳ್ವಿಕೆ ನಡೆಸುವ 1,44,000 ಮಂದಿಗೆ ಆತನು ಒಂದು ಅದ್ಭುತ ಸುಯೋಗವನ್ನು ಕೊಡುವನು. ಅದು ಯಾವುದೆಂದು ಪೌಲನು ವಿವರಿಸಿದ್ದಾನೆ: “ಕರುಣಾಭರಿತನಾಗಿರುವ ದೇವರು ತನ್ನ ಮಹಾ ಪ್ರೀತಿಯಿಂದ ನಮ್ಮನ್ನು ಪ್ರೀತಿಸಿ ನಾವು ಅಪರಾಧಗಳಲ್ಲಿ ಸತ್ತವರಾಗಿದ್ದಾಗಲೇ ಕ್ರಿಸ್ತನೊಂದಿಗೆ ನಮ್ಮನ್ನು ಬದುಕಿಸಿದನು—ದೇವರ ಅಪಾತ್ರ ದಯೆಯಿಂದಲೇ ನೀವು ರಕ್ಷಿಸಲ್ಪಟ್ಟಿದ್ದೀರಿ. ಆತನು ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ನಮ್ಮನ್ನು ಎಬ್ಬಿಸಿ ಸ್ವರ್ಗೀಯ ಸ್ಥಳಗಳಲ್ಲಿ ಅವನೊಂದಿಗೆ ಕೂರಿಸಿದ್ದಾನೆ. ಹೀಗೆ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿರುವವರಾದ ನಮ್ಮ ಕಡೆಗಿನ ಆತನ ಕೃಪೆಯಿಂದ ಕೂಡಿದ ಅಪಾತ್ರ ದಯೆಯು ಎಷ್ಟು ಅತ್ಯಧಿಕವಾಗಿದೆ ಎಂಬುದನ್ನು ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ತೋರಿಸಿಕೊಡುವಂತಾಗುವುದು.”—ಎಫೆ. 2:4-7.
14 ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವ ಅಭಿಷಿಕ್ತ ಕ್ರೈಸ್ತರಿಗಾಗಿ ಯೆಹೋವನು ಏನೆಲ್ಲ ಆಶ್ಚರ್ಯಕರ ವಿಷಯಗಳನ್ನು ಸಿದ್ಧಮಾಡಿದ್ದಾನೆಂದು ನಮ್ಮಿಂದ ಊಹಿಸುವುದು ಕಷ್ಟ. (ಲೂಕ 22:28-30; ಫಿಲಿ. 3:20, 21; 1 ಯೋಹಾ. 3:2) ಅವರ ಕಡೆಗೆ ವಿಶೇಷ ರೀತಿಯಲ್ಲಿ ಯೆಹೋವನು ‘ಕೃಪೆಯಿಂದ ಕೂಡಿದ ಅಪಾತ್ರ ದಯೆಯನ್ನು ಅತ್ಯಧಿಕವಾಗಿ’ ತೋರಿಸುವನು. ಅವರು “ಹೊಸ ಯೆರೂಸಲೇಮ್” ಅಂದರೆ ಕ್ರಿಸ್ತನ ವಧು ಆಗಿರುವರು. (ಪ್ರಕ. 3:12; 17:14; 21:2, 9, 10) ಅವರು ‘ಜನಾಂಗಗಳನ್ನು ವಾಸಿಮಾಡುವುದರಲ್ಲಿ’ ಯೇಸುವಿನ ಜೊತೆ ಕೆಲಸಮಾಡುವರು. ಪಾಪಮರಣದ ಹೊರೆಯಿಂದ ಮಾನವರನ್ನು ಬಿಡಿಸಲು ಮತ್ತು ಅವರು ಪರಿಪೂರ್ಣರಾಗಲು ಅಭಿಷಿಕ್ತರು ಸಹಾಯ ಮಾಡುವರು.—ಪ್ರಕಟನೆ 22:1, 2, 17 ಓದಿ.
15, 16. ಭವಿಷ್ಯದಲ್ಲಿ ಯೆಹೋವನು ‘ಬೇರೆ ಕುರಿಗಳಿಗೆ’ ಹೇಗೆ ಅಪಾತ್ರ ದಯೆ ತೋರಿಸುವನು?
15 “ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ” ದೇವರು ಅಪಾತ್ರ ದಯೆಯನ್ನು ತೋರಿಸುವನೆಂದು ಎಫೆಸ 2:7 ರಲ್ಲಿ ತಿಳಿಸಲಾಗಿದೆ. ಆ ಸಮಯದಲ್ಲಿ ಭೂಮಿಯಲ್ಲಿರುವ ಪ್ರತಿಯೊಬ್ಬರು ಆತನ ‘ಅತ್ಯಧಿಕ ಅಪಾತ್ರ ದಯೆಯನ್ನು’ ಖಂಡಿತ ಅನುಭವಿಸುವರು. (ಲೂಕ 18:29, 30) ಭೂಮಿಯಲ್ಲಿ ಯೆಹೋವನು ತನ್ನ ಅಪಾತ್ರ ದಯೆ ತೋರಿಸುವ ಒಂದು ಅತಿ ದೊಡ್ಡ ವಿಧಾನ ಯಾವುದೆಂದರೆ “ಸಮಾಧಿಗಳಲ್ಲಿ ಇರುವ” ಸತ್ತವರನ್ನು ಪುನರುತ್ಥಾನ ಮಾಡುವುದೇ. (ಯೋಬ 14:13-15; ಯೋಹಾ. 5:28, 29) ಯಾರಿಗೆಲ್ಲಾ ಪುನರುತ್ಥಾನವಾಗುವುದು? ಕ್ರಿಸ್ತನ ಮರಣಕ್ಕೆ ಮುಂಚೆ ಸತ್ತ ನಂಬಿಗಸ್ತ ಸ್ತ್ರೀಪುರುಷರು ಮತ್ತು ಕಡೇ ದಿವಸಗಳಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಸಾಯುವ ‘ಬೇರೆ ಕುರಿಗಳವರು’ ಪುನರುತ್ಥಾನ ಹೊಂದುವರು. ಇದರಿಂದ ಈ ನಂಬಿಗಸ್ತ ಜನರೆಲ್ಲರಿಗೆ ಯೆಹೋವನನ್ನು ಆರಾಧಿಸುವುದನ್ನು ಮುಂದುವರಿಸಲು ಆಗುವುದು.
16 ಯೆಹೋವನ ಬಗ್ಗೆ ತಿಳಿಯದೆ ಸತ್ತಿರುವ ಕೋಟ್ಯಂತರ ಜನರ ಪುನರುತ್ಥಾನವೂ ಆಗಲಿದೆ. ಯೋಹಾನನು ಬರೆದದ್ದು: “ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವುದನ್ನು ನಾನು ನೋಡಿದೆನು; ಆಗ ಸುರುಳಿಗಳು ತೆರೆಯಲ್ಪಟ್ಟವು. ಆದರೆ ಇನ್ನೊಂದು ಸುರುಳಿ ತೆರೆಯಲ್ಪಟ್ಟಿತು; ಅದು ಜೀವದ ಸುರುಳಿಯಾಗಿದೆ. ಸುರುಳಿಗಳಲ್ಲಿದ್ದ ವಿಷಯಗಳ ಆಧಾರದ ಮೇಲೆ ಅವರವರ ಕ್ರಿಯೆಗಳಿಗನುಸಾರ ಸತ್ತವರಿಗೆ ನ್ಯಾಯತೀರ್ಪಾಯಿತು. ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯು ಮತ್ತು ಹೇಡೀಸ್ [ಸಮಾಧಿ] ತಮ್ಮೊಳಗಿದ್ದ ಸತ್ತವರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬರು ತಮ್ಮತಮ್ಮ ಕ್ರಿಯೆಗಳಿಗನುಸಾರ ನ್ಯಾಯತೀರ್ಪನ್ನು ಹೊಂದಿದರು.” (ಪ್ರಕ. 20:12, 13) ಪುನರುತ್ಥಾನವಾದವರಿಗೆ ಯೆಹೋವನ ಬಗ್ಗೆ ಕಲಿಯಲು ಮತ್ತು ಆತನ ಆಳ್ವಿಕೆಯನ್ನು ಅಂಗೀಕರಿಸಲು ಒಂದು ಅವಕಾಶ ಸಿಗಲಿದೆ. ಅವರು ಬೈಬಲಿನ ತತ್ವಗಳನ್ನು ಮತ್ತು ‘ಸುರುಳಿಯಲ್ಲಿರುವ’ ಹೊಸ ನಿರ್ದೇಶನಗಳನ್ನು ಕಲಿತು ಅನ್ವಯಿಸಬೇಕು. ಈ ಹೊಸ ನಿರ್ದೇಶನಗಳು ಸಹ ಯೆಹೋವನು ಅಪಾತ್ರ ದಯೆ ತೋರಿಸುವ ಇನ್ನೊಂದು ವಿಧವಾಗಿರುವುದು.
ಸುವಾರ್ತೆಯನ್ನು ಸಾರುತ್ತಾ ಇರಿ
17. ನಾವು ಸಾರುವಾಗ ಏನನ್ನು ಮನಸ್ಸಿನಲ್ಲಿಡಬೇಕು?
17 ದೇವರ ರಾಜ್ಯದ ಸುವಾರ್ತೆಯನ್ನು ನಾವು ಸಾರುವುದು ಎಂದಿಗಿಂತಲೂ ಇಂದು ಹೆಚ್ಚು ಪ್ರಾಮುಖ್ಯ. ಏಕೆಂದರೆ ಅಂತ್ಯವು ತುಂಬ ಹತ್ತಿರವಿದೆ. (ಮಾರ್ಕ 13:10) ನಾವು ಸಾರುವುದರ ಗುರಿ ಯೆಹೋವನಿಗೆ ಮಹಿಮೆ ತರುವುದೇ ಎಂದು ಯಾವಾಗಲೂ ಮನಸ್ಸಿನಲ್ಲಿಡಬೇಕು. ಯೆಹೋವನಿಗೆ ಮಹಿಮೆ ತರುವುದು ಹೇಗೆ? ಹೊಸ ಲೋಕದಲ್ಲಿ ನಮಗೆ ಸಿಗಲಿರುವ ಎಲ್ಲ ಆಶೀರ್ವಾದಗಳು ಆತನ ಅಪಾರ ದಯೆಯಿಂದಲೇ ಎಂದು ಜನರಿಗೆ ತಿಳಿಸುವ ಮೂಲಕ.
18, 19. ಯೆಹೋವನ ಅಪಾತ್ರ ದಯೆಗಾಗಿ ನಾವು ಆತನನ್ನು ಘನಪಡಿಸುವುದು ಹೇಗೆ?
18 ಕ್ರಿಸ್ತನು ಭೂಮಿಯನ್ನು ಆಳುವಾಗ ಮಾನವರಿಗೆ ವಿಮೋಚನಾ ಮೌಲ್ಯದ ಪೂರ್ಣ ಪ್ರಯೋಜನ ಸಿಗಲಿದೆ ಮತ್ತು ಅವರು ಕ್ರಮೇಣ ಪರಿಪೂರ್ಣರಾಗುವರು ಎಂದು ನಾವು ಜನರಿಗೆ ವಿವರಿಸಬೇಕು. ಬೈಬಲ್ ಹೇಳುತ್ತದೆ: ‘ಸೃಷ್ಟಿಯು ಸಹ ನಾಶದ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು ಹೊಂದುವುದು.’ (ರೋಮ. 8:21) ಇದು ಸಾಧ್ಯವಾಗುವುದು ಯೆಹೋವನ ಅಪಾತ್ರ ದಯೆಯಿಂದ ಮಾತ್ರ.
19 ಪ್ರಕಟನೆ 21:4, 5 ರಲ್ಲಿರುವ ರೋಮಾಂಚಕ ವಾಗ್ದಾನವನ್ನು ಎಲ್ಲ ಜನರಿಗೆ ತಿಳಿಸುವ ಸುಯೋಗ ನಮಗಿದೆ. ಆ ವಚನ ಹೇಳುವುದು: ‘ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗುವವು.’ ಆಗ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದ ಯೆಹೋವನು “ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ” ಎಂದು ಹೇಳಿದನು. ಅಲ್ಲದೆ ಆತನು “ಬರೆ, ಏಕೆಂದರೆ ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ” ಎಂದೂ ಹೇಳಿದನು. ಈ ಸುವಾರ್ತೆಯನ್ನು ನಾವು ಹುರುಪಿನಿಂದ ಸಾರುವಾಗ ಯೆಹೋವನ ಅಪಾತ್ರ ದಯೆಗಾಗಿ ಆತನನ್ನು ನಿಜವಾಗಿಯೂ ಘನಪಡಿಸುತ್ತೇವೆ!