ಪುನರುತ್ಥಾನದ ನಿರೀಕ್ಷೆ—ಇದು ನಿಮಗೆ ಯಾವ ಅರ್ಥದಲ್ಲಿದೆ?
“ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.”—ಕೀರ್ತನೆ 145:16.
ಒಂಬತ್ತು ವರ್ಷದವನಾಗಿದ್ದ ಕ್ರಿಸ್ಟಫರ್ ಮತ್ತು ಅವನ ಅಣ್ಣ, ಒಂದು ದಿನ ಬೆಳಗ್ಗೆ ತಮ್ಮ ಅಂಕಲ್, ಆಂಟಿ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ಇಂಗ್ಲೆಂಡ್ನ ಮ್ಯಾಂಚೆಸ್ಟರ್ ಬಳಿಯಲ್ಲಿ ನಡೆಸಲ್ಪಟ್ಟ ಕ್ರೈಸ್ತ ಶುಶ್ರೂಷೆಯಲ್ಲಿ ಮನೆಯಿಂದ ಮನೆಗೆ ಭೇಟಿ ನೀಡುವ ಕೆಲಸದಲ್ಲಿ ಸಮಯವನ್ನು ವ್ಯಯಿಸಿದರು. ತದನಂತರ ಏನು ಸಂಭವಿಸಿತು ಎಂಬುದನ್ನು ಎಚ್ಚರ! (ಇಂಗ್ಲಿಷ್) ಎಂಬ ನಮ್ಮ ಜೊತೆ ಪತ್ರಿಕೆಯು ವಿವರಿಸುತ್ತದೆ. “ಅದೇ ದಿನ ಮಧ್ಯಾಹ್ನ, ಸಮೀಪದಲ್ಲೇ ಇದ್ದ ಸಮುದ್ರ ತೀರದ ಪ್ರವಾಸಿಕೇಂದ್ರವಾಗಿರುವ ಬ್ಲ್ಯಾಕ್ಪೂಲ್ನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲಿಕ್ಕಾಗಿ ಅವರು ಹೊರಟರು. ಆಗ ಸಂಭವಿಸಿದ ಒಂದು ಮೋಟಾರು ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತರಾದ 12 ಮಂದಿಯಲ್ಲಿ ಈ 6 ಮಂದಿಯೂ ಸೇರಿದ್ದರು. ಪೊಲೀಸರು ಇದನ್ನು ‘ಭಾರಿ ದೊಡ್ಡ ಸರ್ವನಾಶ’ ಎಂದು ವರ್ಣಿಸಿದರು.”
2 ಈ ದುರಂತವು ಸಂಭವಿಸಿದ ಮುಂಚಿನ ರಾತ್ರಿ ಇವರ ಕುಟುಂಬವು ಸಭಾ ಪುಸ್ತಕ ಅಧ್ಯಯನಕ್ಕೆ ಹಾಜರಾಗಿತ್ತು; ಅದರಲ್ಲಿ ಮರಣದ ಕುರಿತು ಚರ್ಚೆಯು ನಡೆಸಲ್ಪಟ್ಟಿತ್ತು. ಕ್ರಿಸ್ಟಫರ್ನ ತಂದೆ ಹೀಗೆ ತಿಳಿಸುತ್ತಾರೆ: “ಕ್ರಿಸ್ಟಫರ್ ಯಾವಾಗಲೂ ಆಲೋಚನಾಪರ ಮನೋಭಾವದ ಹುಡುಗನಾಗಿದ್ದನು. ಅಂದು ರಾತ್ರಿ ಅವನು ನೂತನ ಲೋಕ ಮತ್ತು ಭವಿಷ್ಯತ್ತಿಗಾಗಿರುವ ಅವನ ನಿರೀಕ್ಷೆಯ ಕುರಿತು ತುಂಬ ಸ್ಪಷ್ಟವಾಗಿ ಮಾತಾಡಿದನು. ತದನಂತರ, ನಮ್ಮ ಚರ್ಚೆಯು ಮುಂದುವರಿಯುತ್ತಿದ್ದಾಗ ಕ್ರಿಸ್ಟಫರ್ ಇದ್ದಕ್ಕಿದ್ದಂತೆ ಹೀಗೆ ಹೇಳಿದನು: ‘ಒಬ್ಬ ಯೆಹೋವನ ಸಾಕ್ಷಿಯಾಗಿರುವುದರ ಪ್ರಯೋಜನವೇನೆಂದರೆ, ಮರಣವು ನಮಗೆ ನೋವನ್ನು ಉಂಟುಮಾಡುತ್ತದಾದರೂ, ಒಂದು ದಿನ ಇದೇ ಭೂಮಿಯಲ್ಲಿ ನಾವು ಪರಸ್ಪರ ಭೇಟಿಯಾಗಲಿದ್ದೇವೆ ಎಂಬುದು ನಮಗೆ ಗೊತ್ತಿರುತ್ತದೆ.’ ಆಗ ಅಲ್ಲಿ ಹಾಜರಿದ್ದ ನಮ್ಮಲ್ಲಿ ಯಾರಿಗೂ ಈ ಮಾತುಗಳು ಎಷ್ಟು ಸ್ಮರಣೀಯವಾಗಲಿವೆ ಎಂಬುದು ಮನವರಿಕೆಯಾಗಲಿಲ್ಲ.”a
3 ಅನೇಕ ವರ್ಷಗಳಿಗೆ ಮುಂಚೆ, ಅಂದರೆ 1940ರಲ್ಲಿ, ಫ್ರಾಂಟ್ಸ್ ಎಂಬ ಹೆಸರಿನ ಒಬ್ಬ ಆಸ್ಟ್ರಿಯನ್ ಸಾಕ್ಷಿಗೆ ತಾನು ಯೆಹೋವನಿಗೆ ನಿಷ್ಠನಾಗಿ ಉಳಿಯಲು ನಿರ್ಧರಿಸಿದ್ದಕ್ಕಾಗಿ ಶಿರಚ್ಛೇದಕ ಯಂತ್ರದಿಂದ ತನ್ನನ್ನು ವಧಿಸಲಾಗುವುದು ಎಂದು ತಿಳಿದುಬಂತು. ಬರ್ಲಿನ್ನ ಒಂದು ಬಂಧನ ಕೇಂದ್ರದಿಂದ ಫ್ರಾಂಟ್ಸ್ ತನ್ನ ತಾಯಿಗೆ ಹೀಗೆ ಬರೆದನು: “ನನಗಿರುವ ಜ್ಞಾನದೊಂದಿಗೆ ನಾನು ಆ [ಮಿಲಿಟರಿ] ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದರೆ, ಮರಣಕ್ಕೆ ಅರ್ಹವಾದ ಒಂದು ಪಾಪವನ್ನು ನಾನು ಮಾಡಿರುತ್ತಿದ್ದೆ. ಇದು ನನಗೆ ಕೆಡುಕಾಗಿರುತ್ತಿತ್ತು. ನನಗೆ ಪುನರುತ್ಥಾನ ಸಿಗಸಾಧ್ಯವಿರಲಿಲ್ಲ. . . . ಮತ್ತು ಈಗ, ನನ್ನ ಪ್ರೀತಿಯ ಅಮ್ಮ ಹಾಗೂ ನನ್ನ ಎಲ್ಲ ಸಹೋದರ ಸಹೋದರಿಯರೇ, ನನ್ನ ಶಿಕ್ಷೆ ಏನೆಂದು ಇಂದು ನನಗೆ ಹೇಳಲಾಗಿದೆ. ಕೇಳಿ ಗಾಬರಿಯಾಗಬೇಡಿ, ಅದು ಮರಣದಂಡನೆ ಆಗಿದೆ. ನಾಳೆ ಬೆಳಗ್ಗೆ ನನ್ನನ್ನು ವಧಿಸಲಾಗುವುದು. ಗತ ಸಮಯಗಳಲ್ಲಿ ಎಲ್ಲ ಸತ್ಕ್ರೈಸ್ತರಿಗೆ ದೇವರು ಶಕ್ತಿಯನ್ನು ಕೊಟ್ಟಂತೆ ನನಗೂ ಶಕ್ತಿಯನ್ನು ಕೊಟ್ಟಿದ್ದಾನೆ. . . . ನೀವು ಮರಣದ ತನಕ ಸ್ಥಿರರಾಗಿ ನಿಲ್ಲುವುದಾದರೆ, ಪುನರುತ್ಥಾನದಲ್ಲಿ ಪರಸ್ಪರ ಭೇಟಿಯಾಗೋಣ. . . . ಪುನಃ ಭೇಟಿಯಾಗೋಣ.”b
4 ಕ್ರಿಸ್ಟಫರ್ ಮತ್ತು ಫ್ರಾಂಟ್ಸ್ನ ದೃಷ್ಟಿಕೋನದಲ್ಲಿ ಪುನರುತ್ಥಾನದ ನಿರೀಕ್ಷೆಯು ಹೆಚ್ಚನ್ನು ಒಳಗೂಡಿತ್ತು. ಅದನ್ನು ಅವರು ನೈಜವಾಗಿ ಪರಿಗಣಿಸಿದರು. ನಿಶ್ಚಯವಾಗಿಯೂ ಈ ವೃತ್ತಾಂತಗಳು ನಮಗೆ ತುಂಬ ಹೃದಯಸ್ಪರ್ಶಿಯಾಗಿವೆ! ಯೆಹೋವನಿಗಾಗಿರುವ ನಮ್ಮ ಗಣ್ಯತೆಯನ್ನು ಹೆಚ್ಚಿಸಲಿಕ್ಕಾಗಿ ಮತ್ತು ಪುನರುತ್ಥಾನದಲ್ಲಿನ ನಮ್ಮ ನಿರೀಕ್ಷೆಯನ್ನು ಬಲಪಡಿಸಲಿಕ್ಕಾಗಿ, ಪುನರುತ್ಥಾನವು ಏಕೆ ನಡೆಸಲ್ಪಡುವುದು ಮತ್ತು ಇದರ ಕುರಿತಾದ ಜ್ಞಾನವು ವೈಯಕ್ತಿಕವಾಗಿ ನಮ್ಮ ಮೇಲೆ ಹೇಗೆ ಪ್ರಭಾವ ಬೀರಬೇಕು ಎಂಬುದನ್ನು ನಾವೀಗ ಪರಿಗಣಿಸೋಣ.
ಭೂಮಿಯಲ್ಲಿನ ಪುನರುತ್ಥಾನದ ದರ್ಶನ
5 ಕ್ರಿಸ್ತ ಯೇಸುವಿನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ನಡೆಯಲಿರುವ ಘಟನೆಗಳ ಒಂದು ದರ್ಶನದಲ್ಲಿ ಅಪೊಸ್ತಲ ಯೋಹಾನನು ಭೂಪುನರುತ್ಥಾನವು ನಡೆಯುತ್ತಿರುವುದನ್ನು ನೋಡಿದನು. ಅವನು ಹೀಗೆ ವರದಿಸಿದನು: “ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವದನ್ನು ಕಂಡೆನು. . . . ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ [“ಹೇಡೀಸೂ,” NW] ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು.” (ಪ್ರಕಟನೆ 20:12, 13) ಮಾನವಕುಲದ ಸಾಮಾನ್ಯ ಸಮಾಧಿಯಾಗಿರುವ ಹೇಡೀಸ್ (ಷೀಯೋಲ್)ನಲ್ಲಿ ಬಂಧಿತರಾಗಿರುವವರು “ದೊಡ್ಡವ”ರಾಗಿರಲಿ “ಚಿಕ್ಕವ”ರಾಗಿರಲಿ, ಯಾವುದೇ ಅಂತಸ್ತು ಅಥವಾ ಸ್ಥಾನಮಾನದವರಾಗಿರಲಿ, ಅವರೆಲ್ಲರು ಸಹ ಬಿಡುಗಡೆಮಾಡಲ್ಪಡುವರು. ಸಮುದ್ರದಲ್ಲಿ ಜೀವಗಳನ್ನು ಕಳೆದುಕೊಂಡಿರುವವರು ಸಹ ಆ ಸಮಯದಲ್ಲಿ ಪುನಃ ಜೀವಿತಕ್ಕೆ ಬರುವರು. ಈ ಅದ್ಭುತಕರ ಸಂಭವವು ಯೆಹೋವನ ಉದ್ದೇಶದ ಭಾಗವಾಗಿದೆ.
6 ಕ್ರಿಸ್ತನ ಸಾವಿರ ವರ್ಷದಾಳಿಕೆಯು, ಸೈತಾನನನ್ನು ಅಧೋಲೋಕದಲ್ಲಿ ಬಂಧನದಲ್ಲಿ ಇರಿಸುವುದರೊಂದಿಗೆ ಆರಂಭಗೊಳ್ಳುತ್ತದೆ. ಈ ಆಳ್ವಿಕೆಯ ಕಾಲಾವಧಿಯಲ್ಲಿ, ಪುನರುತ್ಥಾನಗೊಳಿಸಲ್ಪಟ್ಟ ಯಾರೇ ಆಗಲಿ ಅಥವಾ ಮಹಾಸಂಕಟದಿಂದ ಪಾರಾಗಿಬಂದಂಥ ಯಾರೇ ಆಗಲಿ ಸೈತಾನನಿಂದ ತಪ್ಪುದಾರಿಗೆ ಎಳೆಯಲ್ಪಡುವುದಿಲ್ಲ, ಏಕೆಂದರೆ ಈ ಸಮಯದಲ್ಲಿ ಅವನು ನಿಷ್ಕ್ರಿಯನಾಗಿರುವನು. (ಪ್ರಕಟನೆ 20:1-3) ನಿಮಗೆ ಒಂದು ಸಾವಿರ ವರ್ಷಗಳು ತುಂಬ ದೀರ್ಘಕಾಲವಾಗಿ ಕಂಡುಬರಬಹುದಾದರೂ, ವಾಸ್ತವದಲ್ಲಿ ಯೆಹೋವನ ದೃಷ್ಟಿಯಲ್ಲಿ ಅದು “ಒಂದು ದಿನದಂತೆ” ಇದೆ.—2 ಪೇತ್ರ 3:8.
7 ದರ್ಶನಕ್ಕನುಸಾರ, ಕ್ರಿಸ್ತನ ಸಹಸ್ರ ವರ್ಷದಾಳಿಕೆಯು ನ್ಯಾಯತೀರ್ಪಿನ ಸಮಯವಾಗಿರುವುದು. ಅಪೊಸ್ತಲ ಯೋಹಾನನು ಬರೆದುದು: “ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವದನ್ನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು; ಮತ್ತು ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು; ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ಸತ್ತವರಿಗೆ ನ್ಯಾಯತೀರ್ಪಾಯಿತು. . . . ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.” (ಪ್ರಕಟನೆ 20:12, 13) ಈ ನ್ಯಾಯತೀರ್ಪು, ಒಬ್ಬ ವ್ಯಕ್ತಿಯು ಸಾಯುವುದಕ್ಕೆ ಮೊದಲು ಏನು ಮಾಡಿದ್ದನು ಅಥವಾ ಏನನ್ನು ಮಾಡಿರಲಿಲ್ಲ ಎಂಬುದರ ಆಧಾರದ ಮೇಲೆ ಮಾಡಲ್ಪಡುವುದಿಲ್ಲ ಎಂಬುದನ್ನು ಗಮನಿಸಿರಿ. (ರೋಮಾಪುರ 6:7) ಅದಕ್ಕೆ ಬದಲಾಗಿ, ಅದು ಮುಂದೆ ತೆರೆಯಲ್ಪಡಲಿಕ್ಕಿರುವ ‘ಪುಸ್ತಕಗಳಿಗೆ’ ಸಂಬಂಧಿಸಿರುತ್ತದೆ. ಒಬ್ಬ ವ್ಯಕ್ತಿಯು ಈ ಪುಸ್ತಕಗಳಲ್ಲಿರುವ ವಿಷಯಗಳನ್ನು ಕಲಿತ ಬಳಿಕ ನಡೆಸುವ ಕ್ರಿಯೆಗಳು, ಅವನ ಹೆಸರು “ಜೀವಬಾಧ್ಯರ ಪಟ್ಟಿ”ಯಲ್ಲಿ ಬರೆಯಲ್ಪಡಬೇಕೊ ಇಲ್ಲವೊ ಎಂಬುದನ್ನು ನಿರ್ಧರಿಸಲು ಆಧಾರವನ್ನು ಒದಗಿಸುತ್ತವೆ.
“ಜೀವಕ್ಕಾಗಿ ಪುನರುತ್ಥಾನ” ಅಥವಾ “ತೀರ್ಪಿಗಾಗಿ ಪುನರುತ್ಥಾನ”
8 ಇದಕ್ಕೆ ಮುಂಚೆ ಯೋಹಾನನು ನೋಡಿದ ದರ್ಶನದಲ್ಲಿ, ಯೇಸುವಿನ ಬಳಿ “ಮರಣದ ಮತ್ತು ಪಾತಾಳದ [“ಹೇಡೀಸ್ನ,” NW] ಬೀಗದ ಕೈಗಳು” ಇವೆಯೆಂದು ವರ್ಣಿಸಲಾಗಿದೆ. (ಪ್ರಕಟನೆ 1:18) ಅವನು ಯೆಹೋವನ “ಜೀವನಾಯಕ”ನಾಗಿ ಕಾರ್ಯನಡಿಸುವವನಾಗಿದ್ದು, “ಜೀವಿಸುವವರಿಗೂ ಸತ್ತವರಿಗೂ” ನ್ಯಾಯತೀರಿಸುವ ಅಧಿಕಾರವು ಅವನಿಗೆ ಕೊಡಲ್ಪಟ್ಟಿದೆ. (ಅ. ಕೃತ್ಯಗಳು 3:14; 2 ತಿಮೊಥೆಯ 4:1) ಅವನು ಇದನ್ನು ಹೇಗೆ ಮಾಡುವನು? ಮರಣದಲ್ಲಿ ನಿದ್ರಿಸುತ್ತಿರುವವರನ್ನು ಪುನರುತ್ಥಾನಗೊಳಿಸುವ ಮೂಲಕವೇ. ಯೇಸು ಯಾರಿಗೆ ಸಾರಿದನೋ ಆ ಜನರ ಗುಂಪಿಗೆ ಹೇಳಿದ್ದು: “ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” ತದನಂತರ ಅವನು ಕೂಡಿಸಿದ್ದು: “ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.” (ಯೋಹಾನ 5:28-30) ಹಾಗಾದರೆ, ಪುರಾತನ ಕಾಲದ ನಂಬಿಗಸ್ತ ಸ್ತ್ರೀಪುರುಷರಿಗೆ ಯಾವ ಭವಿಷ್ಯತ್ತು ಕಾದಿದೆ?
9 ಈ ಪುರಾತನ ನಂಬಿಗಸ್ತ ಜನರು ಪುನರುತ್ಥಾನದಲ್ಲಿ ಹಿಂದಿರುಗುವಾಗ, ಅವರು ಯಾವ ವಾಗ್ದಾನಗಳಲ್ಲಿ ಭರವಸೆಯಿಟ್ಟಿದ್ದರೋ ಅವು ಈಗ ವಾಸ್ತವಿಕವಾಗಿ ಪರಿಣಮಿಸಿವೆ ಎಂಬುದನ್ನು ಬೇಗನೆ ಕಂಡುಕೊಳ್ಳುವರು. ಬೈಬಲಿನಲ್ಲಿ ಆದಿಕಾಂಡ 3:15ರಲ್ಲಿರುವ ಪ್ರಥಮ ಪ್ರವಾದನೆಯಲ್ಲಿ ತಿಳಿಸಲ್ಪಟ್ಟಿರುವ ದೇವರ ಸ್ತ್ರೀಯ ಸಂತಾನದ ಗುರುತನ್ನು ತಿಳಿದುಕೊಳ್ಳಲು ಅವರೆಷ್ಟು ಆಸಕ್ತರಾಗಿರುವರು! ಈ ವಾಗ್ದತ್ತ ಮೆಸ್ಸೀಯನಾದ ಯೇಸು ಮರಣದ ತನಕವೂ ನಂಬಿಗಸ್ತನಾಗಿ ಉಳಿದನು ಮತ್ತು ಹೀಗೆ ತನ್ನ ಜೀವವನ್ನು ವಿಮೋಚನಾ ಮೌಲ್ಯದ ಯಜ್ಞವಾಗಿ ಕೊಟ್ಟನು ಎಂಬುದನ್ನು ಕೇಳಿ ಅವರಿಗೆಷ್ಟು ಸಂತೋಷವಾಗುವುದು! (ಮತ್ತಾಯ 20:28) ಮತ್ತು ಪುನರುತ್ಥಾನವಾಗುವವರನ್ನು ಸ್ವಾಗತಿಸುವವರು, ಈ ವಿಮೋಚನಾ ಮೌಲ್ಯದ ಒದಗಿಸುವಿಕೆಯು ಯೆಹೋವನ ಅಪಾತ್ರ ಕೃಪೆ ಮತ್ತು ಕರುಣೆಯ ಅಭಿವ್ಯಕ್ತಿಯಾಗಿದೆ ಎಂಬುದನ್ನು ಗಣ್ಯಮಾಡಲು ಅವರಿಗೆ ಸಹಾಯಮಾಡುವುದರಲ್ಲಿ ಮಹತ್ತರವಾದ ಆನಂದವನ್ನು ಪಡೆದುಕೊಳ್ಳುವರು. ಭೂಮಿಗಾಗಿರುವ ಯೆಹೋವನ ಉದ್ದೇಶವನ್ನು ಪೂರೈಸುವುದರಲ್ಲಿ ದೇವರ ರಾಜ್ಯವು ಏನನ್ನು ಸಾಧಿಸುತ್ತಿದೆಯೋ ಅದನ್ನು ಪುನರುತ್ಥಿತರು ಕಂಡುಕೊಳ್ಳುವಾಗ, ಅವರ ಹೃದಯಗಳು ಯೆಹೋವನಿಗೆ ಸ್ತುತಿಯ ಅಭಿವ್ಯಕ್ತಿಗಳಿಂದ ಉಕ್ಕಿಹರಿಯುವವು ಎಂಬುದರಲ್ಲಿ ಸಂಶಯವೇ ಇಲ್ಲ. ತಮ್ಮ ಪ್ರೀತಿಯ ಸ್ವರ್ಗೀಯ ಪಿತನಿಗೆ ಮತ್ತು ಆತನ ಪುತ್ರನಿಗೆ ತಮ್ಮ ನಿಷ್ಠೆಯನ್ನು ತೋರ್ಪಡಿಸಲು ಅವರಿಗೆ ಬೇಕಾದಷ್ಟು ಸದವಕಾಶಗಳು ಇರುವವು. ಆಗ ಬದುಕಿರುವ ಪ್ರತಿಯೊಬ್ಬರೂ, ಬೃಹತ್ ಶೈಕ್ಷಣಿಕ ಕೆಲಸದಲ್ಲಿ ಪಾಲ್ಗೊಳ್ಳುವುದರಲ್ಲಿ ಹರ್ಷಿಸುವರು. ಅದು ಯಾರು ದೇವರ ವಿಮೋಚನಾ ಮೌಲ್ಯದ ಒದಗಿಸುವಿಕೆಯನ್ನು ಸಹ ಅಂಗೀಕರಿಸುವ ಅಗತ್ಯವಿದೆಯೋ ಆ ಸಮಾಧಿಯಿಂದ ಹಿಂದಿರುಗಲಿರುವ ನೂರಾರು ಕೋಟಿ ಮೃತರಿಗೆ ಕಲಿಸುವ ಕೆಲಸವೇ ಆಗಿದೆ.
10 ಅಬ್ರಹಾಮನು ಪುನರುತ್ಥಾನಗೊಳ್ಳುವಾಗ, ಅವನು ಯಾವುದಕ್ಕಾಗಿ ಎದುರುನೋಡಿದ್ದನೋ ಆ “ಪಟ್ಟಣ”ದ ಆಳ್ವಿಕೆಯ ಕೆಳಗೆ ಜೀವನವನ್ನು ವಾಸ್ತವಿಕವಾಗಿ ಅನುಭವಿಸುವುದರಲ್ಲಿ ತುಂಬ ಸಂತೋಷವನ್ನು ಕಂಡುಕೊಳ್ಳುವನು. (ಇಬ್ರಿಯ 11:10) ತನ್ನ ಜೀವನ ಮಾರ್ಗವು ಸಮಗ್ರತೆಯ ಪರೀಕ್ಷೆಗಳನ್ನು ಎದುರಿಸಿದಂಥ ಯೆಹೋವನ ಇತರ ಸೇವಕರನ್ನು ಬಲಪಡಿಸಿತು ಎಂಬುದು ಪುರಾತನ ಕಾಲದ ಯೋಬನಿಗೆ ತಿಳಿದುಬರುವಾಗ, ಅವನೆಷ್ಟು ರೋಮಾಂಚನಗೊಳ್ಳುವನು! ಮತ್ತು ತಾನು ಬರೆಯುವಂತೆ ಪ್ರೇರಿಸಲ್ಪಟ್ಟ ಪ್ರವಾದನೆಗಳ ನೆರವೇರಿಕೆಯ ಕುರಿತು ತಿಳಿದುಕೊಳ್ಳಲು ದಾನಿಯೇಲನು ಎಷ್ಟು ಕಾತುರನಾಗಿರುವನು!
11 ವಾಸ್ತವದಲ್ಲಿ, ಪುನರುತ್ಥಾನದ ಮೂಲಕವಾಗಿ ಆಗಲಿ ಅಥವಾ ಮಹಾ ಸಂಕಟವನ್ನು ಪಾರಾಗಿ ಉಳಿಯುವ ಮೂಲಕವಾಗಿ ಆಗಲಿ, ನೀತಿಯ ನೂತನ ಲೋಕದಲ್ಲಿ ಜೀವವನ್ನು ಪಡೆಯುವವರೆಲ್ಲರು, ಭೂಮಿಗಾಗಿರುವ ಮತ್ತು ಅದರ ನಿವಾಸಿಗಳಿಗಾಗಿರುವ ಯೆಹೋವನ ಉದ್ದೇಶದ ಕುರಿತು ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳುವರು. ಸದಾಕಾಲ ಜೀವಿಸುತ್ತಾ ಯುಗಯುಗಾಂತರಕ್ಕೂ ಯೆಹೋವನನ್ನು ಸುತ್ತಿಸುತ್ತಾ ಇರುವ ಪ್ರತೀಕ್ಷೆಯು, ಸಹಸ್ರ ವರ್ಷದ ಶೈಕ್ಷಣಿಕ ಕಾರ್ಯಕ್ರಮವನ್ನು ನಿಜವಾಗಿಯೂ ಹರ್ಷಭರಿತವಾದದ್ದಾಗಿ ಮಾಡುವುದು ಎಂಬುದಂತೂ ಖಂಡಿತ. ಆದರೂ, ‘ಪುಸ್ತಕಗಳಲ್ಲಿ’ ಕೊಡಲ್ಪಟ್ಟಿರುವ ವಿಷಯಗಳನ್ನು ಕಲಿತು ವೈಯಕ್ತಿಕವಾಗಿ ನಾವೇನು ಮಾಡುವೆವೋ ಅದು ಅತಿ ಪ್ರಾಮುಖ್ಯವಾದದ್ದಾಗಿದೆ. ನಾವು ಏನನ್ನು ಕಲಿಯುತ್ತೇವೋ ಅದನ್ನು ಅನ್ವಯಿಸಿಕೊಳ್ಳುವೆವೊ? ಸತ್ಯದಿಂದ ನಮ್ಮನ್ನು ಬೇರೆ ದಿಕ್ಕಿಗೆ ನಡೆಸಲಿಕ್ಕಾಗಿ ಸೈತಾನನು ಮಾಡುವ ಅಂತಿಮ ಪ್ರಯತ್ನಗಳನ್ನು ಪ್ರತಿರೋಧಿಸುವಂತೆ ನಮ್ಮನ್ನು ಬಲಪಡಿಸುವ ಅತ್ಯಾವಶ್ಯಕ ಮಾಹಿತಿಯ ಕುರಿತು ನಾವು ಧ್ಯಾನಿಸುವೆವೊ ಮತ್ತು ಅದನ್ನು ಮನಸ್ಸಿಗೆ ತೆಗೆದುಕೊಳ್ಳುವೆವೊ?
12 ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದ ಪ್ರಯೋಜನಗಳನ್ನು ಅನ್ವಯಿಸುವುದರಿಂದ ಸಿಗುವ ಅದ್ಭುತಕರ ಆಶೀರ್ವಾದಗಳನ್ನು ನಾವು ಮರೆಯಬಾರದು. ಪುನರುತ್ಥಾನದಲ್ಲಿ ಪುನಃ ಜೀವವನ್ನು ಪಡೆದುಕೊಳ್ಳುವವರಿಗೆ, ಈಗ ಇರುವಂಥ ರೀತಿಯ ದೇಹದೌರ್ಬಲ್ಯಗಳು ಅಥವಾ ಅಂಗವಿಕಲತೆಗಳು ಇರುವುದಿಲ್ಲ. (ಯೆಶಾಯ 33:24) ನೂತನ ಲೋಕದ ಎಲ್ಲ ನಿವಾಸಿಗಳಿಗಿರುವ ಸ್ವಸ್ಥ ದೇಹ ಮತ್ತು ಪರಿಪೂರ್ಣ ಆರೋಗ್ಯದ ಪ್ರತೀಕ್ಷೆಯು, ಜೀವದ ಮಾರ್ಗದಲ್ಲಿ ಪುನರುತ್ಥಾನಗೊಳಿಸಲ್ಪಡುವ ನೂರಾರು ಕೋಟಿ ಜನರಿಗೆ ಕಲಿಸುವಂಥ ಶೈಕ್ಷಣಿಕ ಕಾರ್ಯದಲ್ಲಿ ಅವರು ಪೂರ್ಣವಾಗಿ ಭಾಗವಹಿಸುವಂತೆ ಶಕ್ತಗೊಳಿಸುವುದು. ಅಷ್ಟುಮಾತ್ರವಲ್ಲ, ಭೂಮಿಯಲ್ಲಿ ಎಂದೂ ಪ್ರಯತ್ನಿಸಲ್ಪಟ್ಟಿರದಂಥ ಅತಿ ದೊಡ್ಡ ಕೆಲಸದಲ್ಲಿ, ಅಂದರೆ ಇಡೀ ಭೂಗೃಹವನ್ನು ಯೆಹೋವನ ಸ್ತುತಿಗಾಗಿ ಒಂದು ಪರದೈಸಾಗಿ ರೂಪಾಂತರಿಸುವುದರಲ್ಲಿ ಸಹ ಆ ನಿವಾಸಿಗಳು ಭಾಗವಹಿಸುವರು.
13 ಅಂತಿಮ ಪರೀಕ್ಷೆಗಾಗಿ ಸೈತಾನನು ಅಧೋಲೋಕದಿಂದ ಬಿಡುಗಡೆಮಾಡಲ್ಪಡುವಾಗ, ಮತ್ತೊಮ್ಮೆ ಅವನು ಮಾನವರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುವನು. ಪ್ರಕಟನೆ 20:7-9ಕ್ಕನುಸಾರ, ಸೈತಾನನ ದುಷ್ಟ ಪ್ರಭಾವಕ್ಕೆ ಒಳಗಾಗುವಂಥ ‘ಮರುಳುಗೊಳಿಸಲ್ಪಟ್ಟ [ಎಲ್ಲ] ಜನಾಂಗಗಳು’ ಅಥವಾ ಜನರ ಗುಂಪುಗಳು, ನಾಶನಕ್ಕೆ ಅರ್ಹರೆಂಬ ತೀರ್ಪುಪಡೆಯುವರು: ‘ಪರಲೋಕದಿಂದ ಬೆಂಕಿಯು ಇಳಿದುಬಂದು ಅವರನ್ನು ದಹಿಸಿಬಿಡುವುದು.’ ಅವರಲ್ಲಿ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ಪುನರುತ್ಥಾನವನ್ನು ಅನುಭವಿಸಿದವರೂ ಸೇರಿರುವರು; ಅಂಥವರಿಗೆ ಅವರು ಪಡೆದ ಪುನರುತ್ಥಾನವು ಖಂಡನಾತ್ಮಕ ನ್ಯಾಯತೀರ್ಪಿನ ಪುನರುತ್ಥಾನವಾಗಿ ಪರಿಣಮಿಸುವುದು. ಇದಕ್ಕೆ ವ್ಯತಿರಿಕ್ತವಾಗಿ, ಪುನರುತ್ಥಿತ ಸಮಗ್ರತೆಪಾಲಕರು ನಿತ್ಯಜೀವದ ಬಹುಮಾನವನ್ನು ಪಡೆದುಕೊಳ್ಳುವರು. ಅವರ ಪುನರುತ್ಥಾನವು ‘ಜೀವಕ್ಕಾಗಿರುವ ಪುನರುತ್ಥಾನ’ವಾಗಿರುವುದು ಎಂಬುದಂತೂ ಸತ್ಯ.—ಯೋಹಾನ 5:29.
14 ಈಗ ಸಹ ಪುನರುತ್ಥಾನದ ನಿರೀಕ್ಷೆಯು ನಮಗೆ ಹೇಗೆ ಸಾಂತ್ವನವನ್ನು ನೀಡಬಲ್ಲದು? ಅದಕ್ಕಿಂತಲೂ ಪ್ರಾಮುಖ್ಯವಾಗಿ, ಭವಿಷ್ಯತ್ತಿನಲ್ಲಿ ನಾವು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ನಾವೇನು ಮಾಡಬೇಕು?
ಈಗ ನಾವು ಕಲಿಯಸಾಧ್ಯವಿರುವ ಪಾಠಗಳು
15 ಇತ್ತೀಚಿಗೆ ನೀವು ಒಬ್ಬ ಪ್ರಿಯ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಂಡಿರಬಹುದು ಮತ್ತು ಇಂಥ ಭಾರೀ ನಷ್ಟವು ಅಗತ್ಯಪಡಿಸುವಂಥ ದೊಡ್ಡ ಹೊಂದಾಣಿಕೆಯನ್ನು ಮಾಡಲು ಹೋರಾಡುತ್ತಿರಬಹುದು. ಇಂಥ ಸಮಯದಲ್ಲಿ, ಸತ್ಯವನ್ನು ತಿಳಿದಿರದವರಿಗೆ ಇಲ್ಲದಿರುವಂಥ ಆಂತರಿಕ ನೆಮ್ಮದಿ ಮತ್ತು ಬಲವನ್ನು ಪಡೆದುಕೊಳ್ಳುವಂತೆ ಪುನರುತ್ಥಾನದ ನಿರೀಕ್ಷೆಯು ನಿಮಗೆ ಸಹಾಯಮಾಡುತ್ತದೆ. ಪೌಲನು ಥೆಸಲೊನೀಕದವರನ್ನು ಹೀಗೆ ಸಂತೈಸಿದನು: “ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವದು ನಮ್ಮ ಮನಸ್ಸಿಗೆ ಒಪ್ಪುವದಿಲ್ಲ.” (1 ಥೆಸಲೊನೀಕ 4:13) ಪುನರುತ್ಥಾನವಾಗುವುದನ್ನು ಕಣ್ಣಾರೆ ಕಾಣುತ್ತಾ, ನೂತನ ಲೋಕದಲ್ಲಿ ನೀವಿರುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುತ್ತೀರೋ? ಹಾಗಿರುವಲ್ಲಿ, ನಿಮ್ಮ ಪ್ರಿಯ ವ್ಯಕ್ತಿಗಳನ್ನು ಪುನಃ ಸಂಧಿಸುವ ಪ್ರತೀಕ್ಷೆಯ ಕುರಿತು ಧ್ಯಾನಿಸುವ ಮೂಲಕ ಈಗ ಸಾಂತ್ವನವನ್ನು ಪಡೆದುಕೊಳ್ಳಿರಿ.
16 ಸದ್ಯಕ್ಕೆ ನೀವು, ಆದಾಮನ ದಂಗೆಯ ಶಾರೀರಿಕ ಪರಿಣಾಮಗಳನ್ನು, ಅನಾರೋಗ್ಯದ ರೂಪದಲ್ಲಿ ಅನುಭವಿಸುತ್ತಿರಬಹುದು. ಇದು ಉಂಟುಮಾಡುವಂಥ ಮನೋವ್ಯಥೆಯು, ನೂತನ ಲೋಕದಲ್ಲಿ ಪುನರುತ್ಥಾನವನ್ನು ವೈಯಕ್ತಿಕವಾಗಿ ಅನುಭವಿಸುವ ಮತ್ತು ನವೀಕೃತ ಆರೋಗ್ಯ ಹಾಗೂ ಹುಮ್ಮಸ್ಸಿನೊಂದಿಗೆ ಪುನಃ ಬದುಕುವ ಹರ್ಷಭರಿತ ಪ್ರತೀಕ್ಷೆಯನ್ನು ಮರೆಯುವಂತೆ ಮಾಡಲು ಬಿಡಬೇಡಿ. ಆ ಸಮಯದಲ್ಲಿ ನಿಮ್ಮ ಕಣ್ಣುಗಳು ತೆರೆಯುವಾಗ, ಮತ್ತು ನಿಮ್ಮ ಪುನರುತ್ಥಾನದಿಂದ ತಮಗಾದ ಆನಂದವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಕಾತುರರಾಗಿ ಕಾಯುತ್ತಿರುವ ಹರ್ಷಕರ ಮುಖಗಳನ್ನು ನೀವು ನೋಡುವಾಗ, ದೇವರ ಪ್ರೀತಿ-ದಯೆಗಾಗಿ ಆತನಿಗೆ ಖಂಡಿತವಾಗಿಯೂ ಉಪಕಾರವನ್ನು ಸಲ್ಲಿಸುವಿರಿ.
17 ಈ ಮಧ್ಯೆ, ನಾವು ಹೃದಯಕ್ಕೆ ತೆಗೆದುಕೊಳ್ಳಬೇಕಾಗಿರುವ ಎರಡು ಪಾಠಗಳನ್ನು ಪರಿಗಣಿಸಿರಿ. ಒಂದು ಪಾಠವು, ಈಗಲೇ ಯೆಹೋವನಿಗೆ ಪೂರ್ಣಪ್ರಾಣದ ಸೇವೆಯನ್ನು ಸಲ್ಲಿಸುವುದರ ಪ್ರಮುಖತೆಯಾಗಿದೆ. ನಮ್ಮ ಗುರುವಾದ ಕ್ರಿಸ್ತ ಯೇಸುವನ್ನು ಅನುಕರಿಸುತ್ತಾ ನಾವು ಸ್ವತ್ಯಾಗದ ಜೀವನವನ್ನು ನಡೆಸುವುದು, ಯೆಹೋವನ ಕಡೆಗೆ ಮತ್ತು ನಮ್ಮ ನೆರೆಯವರ ಕಡೆಗೆ ನಮಗಿರುವ ಪ್ರೀತಿಯನ್ನು ರುಜುಪಡಿಸುತ್ತದೆ. ವಿರೋಧವೊ ಹಿಂಸೆಯೊ ನಮ್ಮ ಜೀವನೋಪಾಯವನ್ನು ಅಥವಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಲ್ಲಿ, ನಾವು ಯಾವುದೇ ಪರೀಕ್ಷೆಗಳನ್ನು ಎದುರಿಸಬಹುದಾದರೂ ನಂಬಿಕೆಯಲ್ಲಿ ದೃಢರಾಗಿ ನಿಲ್ಲುವ ನಿರ್ಧಾರವನ್ನು ಮಾಡುವೆವು. ವಿರೋಧಿಗಳು ನಮಗೆ ಮರಣದ ಬೆದರಿಕೆಯನ್ನು ಹಾಕುವಾಗಲೂ, ಪುನರುತ್ಥಾನದ ನಿರೀಕ್ಷೆಯು ನಮಗೆ ಸಾಂತ್ವನವನ್ನು ನೀಡುತ್ತದೆ ಹಾಗೂ ಯೆಹೋವನಿಗೆ ಮತ್ತು ಆತನ ರಾಜ್ಯಕ್ಕೆ ನಿಷ್ಠರಾಗಿ ಉಳಿಯುವಂತೆ ನಮ್ಮನ್ನು ಬಲಪಡಿಸುತ್ತದೆ. ಹೌದು, ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ತೋರಿಸುವ ಹುರುಪು, ಯೆಹೋವನು ನೀತಿವಂತರಿಗಾಗಿ ಕಾದಿರಿಸಿರುವ ನಿತ್ಯವಾದ ಆಶೀರ್ವಾದಗಳನ್ನು ಪಡೆದುಕೊಳ್ಳುವ ಪ್ರತೀಕ್ಷೆಯನ್ನು ನಮಗೆ ನೀಡುತ್ತದೆ.
18 ಎರಡನೆಯ ಪಾಠವು, ಅಪರಿಪೂರ್ಣ ಶರೀರದಿಂದ ಉಂಟಾಗುವ ಪ್ರಲೋಭನೆಗಳನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದಕ್ಕೆ ಸಂಬಂಧಿಸಿದ್ದಾಗಿದೆ. ಪುನರುತ್ಥಾನದ ನಿರೀಕ್ಷೆಯ ಕುರಿತಾದ ನಮ್ಮ ಜ್ಞಾನ ಮತ್ತು ಯೆಹೋವನ ಅಪಾತ್ರ ಕೃಪೆಗಾಗಿರುವ ನಮ್ಮ ಗಣ್ಯತೆಯು, ನಂಬಿಕೆಯಲ್ಲಿ ದೃಢರಾಗಿ ಉಳಿಯುವ ನಮ್ಮ ನಿರ್ಧಾರವನ್ನು ಇನ್ನಷ್ಟು ಬಲಪಡಿಸುವುದು. ಅಪೊಸ್ತಲ ಯೋಹಾನನು ಎಚ್ಚರಿಕೆ ನೀಡಿದ್ದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:15-17) ಪ್ರಾಪಂಚಿಕತೆಯ ರೂಪದಲ್ಲಿ ಲೋಕದ ಆಕರ್ಷಣೆಯನ್ನು ನಾವು ‘ವಾಸ್ತವವಾದ ಜೀವಕ್ಕೆ’ ಹೋಲಿಸುವಾಗ, ಅದು ನಮಗೆ ಯಾವುದೇ ರೀತಿಯ ಆಸಕ್ತಿಯನ್ನು ಉಂಟುಮಾಡದು. (1 ತಿಮೊಥೆಯ 6:17-19) ಅನೈತಿಕತೆಯಲ್ಲಿ ಒಳಗೂಡುವಂತೆ ನಾವು ಪ್ರಲೋಭಿಸಲ್ಪಡುವಾಗ, ಅದನ್ನು ಕಡಾಖಂಡಿತವಾಗಿ ನಿರಾಕರಿಸುವೆವು. ಯೆಹೋವನು ಮೆಚ್ಚದಿರುವಂಥ ನಡವಳಿಕೆಯಲ್ಲೇ ಮುಂದುವರಿದು ನಾವು ಒಂದುವೇಳೆ ಅರ್ಮಗೆದೋನಿಗೆ ಮುಂಚೆಯೇ ಸಾಯುವಲ್ಲಿ, ಯೆಹೋವನು ನಮ್ಮನ್ನು ಸಹ ಪುನರುತ್ಥಾನದ ಪ್ರತೀಕ್ಷೆಯೇ ಇಲ್ಲದವರ ಸಾಲಿನಲ್ಲಿ ಸೇರಿಸುವ ಸಾಧ್ಯತೆಯಿದೆ ಎಂಬುದು ನಮಗೆ ತಿಳಿದಿದೆ.
19 ಎಲ್ಲಕ್ಕಿಂತಲೂ ಹೆಚ್ಚಾಗಿ, ಈಗ ಮತ್ತು ಸದಾಕಾಲಕ್ಕೂ ಯೆಹೋವನ ಮನಸ್ಸನ್ನು ಸಂತೋಷಪಡಿಸುವ ವಿಶೇಷವಾದ ಸುಯೋಗವನ್ನು ನಾವೆಂದೂ ಮರೆಯಬಾರದು. (ಜ್ಞಾನೋಕ್ತಿ 27:11) ಮರಣದ ತನಕ ನಾವು ನಂಬಿಗಸ್ತರಾಗಿ ಉಳಿಯುವುದು ಅಥವಾ ಈ ದುಷ್ಟ ವ್ಯವಸ್ಥೆಯ ಅಂತ್ಯದ ತನಕ ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತಾ ಮುಂದುವರಿಯುವುದು, ವಿಶ್ವದ ಪರಮಾಧಿಕಾರದ ವಿವಾದಾಂಶದಲ್ಲಿ ನಾವು ಯಾರ ಪಕ್ಷದಲ್ಲಿದ್ದೇವೆ ಎಂಬುದನ್ನು ಯೆಹೋವನಿಗೆ ತೋರಿಸುತ್ತದೆ. ತದನಂತರ, ಮಹಾಸಂಕಟದಲ್ಲಿ ಪಾರಾಗಿ ಉಳಿಯುವ ಮೂಲಕ ಅಥವಾ ಅದ್ಭುತಕರವಾದ ಒಂದು ಪುನರುತ್ಥಾನವನ್ನು ಅನುಭವಿಸುವ ಮೂಲಕ ಭೂಪರದೈಸಿನಲ್ಲಿ ಜೀವಿಸುವುದು ಎಷ್ಟು ಆನಂದಕರವಾಗಿರುವುದು!
ನಮ್ಮ ಇಷ್ಟಗಳನ್ನು ನೆರವೇರಿಸುವುದು
20 ಪುನರುತ್ಥಾನದ ಕುರಿತಾದ ನಮ್ಮ ಚರ್ಚೆಯು, ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿಲ್ಲ. ಸಾಯುವಾಗ ವಿವಾಹಿತರಾಗಿದ್ದವರಿಗೆ ಯೆಹೋವನು ವಿಷಯಗಳನ್ನು ಹೇಗೆ ಏರ್ಪಡಿಸುವನು? (ಲೂಕ 20:34, 35) ಜನರು ಎಲ್ಲಿ ಮೃತಪಟ್ಟರೋ ಅದೇ ಸ್ಥಳದಲ್ಲಿ ಪುನರುತ್ಥಾನಗಳು ನಡೆಸಲ್ಪಡುವವೊ? ಪುನರುತ್ಥಿತರು ತಮ್ಮ ಕುಟುಂಬದ ನಿವಾಸಗಳ ಬಳಿಯೇ ಪುನಃ ಬದುಕಿ ಬರುವರೊ? ಪುನರುತ್ಥಾನಕ್ಕಾಗಿರುವ ಏರ್ಪಾಡುಗಳ ಕುರಿತಾದ ಇನ್ನೂ ಅನೇಕ ಪ್ರಶ್ನೆಗಳು ಉತ್ತರಿಸಲ್ಪಡದೆ ಉಳಿದಿವೆ. ಆದರೂ, ಯೆರೆಮೀಯನ ಈ ಮಾತುಗಳನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು: “ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಹುಡುಕುವವರಿಗೂ ಮಹೋಪಕಾರಿಯಾಗಿದ್ದಾನೆ. ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ ಕಾದುಕೊಂಡಿರುವದು ಒಳ್ಳೇದು.” (ಪ್ರಲಾಪಗಳು 3:25, 26) ಯೆಹೋವನ ತಕ್ಕ ಸಮಯದಲ್ಲಿ, ನಮಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ನಮ್ಮೆಲ್ಲ ಪ್ರಶ್ನೆಗಳು ಉತ್ತರಿಸಲ್ಪಡುವವು. ಈ ವಿಷಯದಲ್ಲಿ ನಾವೇಕೆ ಖಾತ್ರಿಯಿಂದಿರಬಲ್ಲೆವು?
21 “ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ” ಎಂದು ಕೀರ್ತನೆಗಾರನು ಯೆಹೋವನ ಕುರಿತು ಹಾಡಿದ ಆ ಪ್ರೇರಿತ ಮಾತುಗಳ ಕುರಿತು ಧ್ಯಾನಿಸಿರಿ. (ಕೀರ್ತನೆ 145:16) ನಮಗೆ ವಯಸ್ಸಾಗುತ್ತಾ ಹೋದಂತೆ ನಮ್ಮ ಇಷ್ಟಗಳು ಇಲ್ಲವೆ ಆಸೆಗಳು ಸಹ ಬದಲಾಗುತ್ತವೆ. ನಾವು ಮಕ್ಕಳಾಗಿದ್ದಾಗ ಏನನ್ನು ಬಯಸಿದ್ದೆವೋ ಅದು ಇಂದು ನಮ್ಮ ಬಯಕೆಯಾಗಿ ಉಳಿದಿರುವುದಿಲ್ಲ. ಜೀವನದ ಕುರಿತಾದ ನಮ್ಮ ದೃಷ್ಟಿಕೋನವು, ನಾವು ಏನನ್ನು ಅನುಭವಿಸುತ್ತೇವೋ ಅದರಿಂದ ಹಾಗೂ ನಮ್ಮ ನಿರೀಕ್ಷೆಗಳಿಂದ ಪ್ರಭಾವಿತವಾಗುತ್ತದೆ. ಆದರೂ, ನೂತನ ಲೋಕದಲ್ಲಿ ನಮ್ಮ ಯೋಗ್ಯ ಇಷ್ಟಗಳು ಏನೇ ಆಗಿರಲಿ, ಯೆಹೋವನು ಖಂಡಿತವಾಗಿಯೂ ಅವುಗಳನ್ನು ಪೂರೈಸುವನು.
22 ಈಗ ನಮ್ಮಲ್ಲಿ ಪ್ರತಿಯೊಬ್ಬರಿಗೂ ಪ್ರಾಮುಖ್ಯವಾಗಿರುವ ವಿಷಯವು, ನಂಬಿಗಸ್ತರಾಗಿ ಉಳಿಯುವುದೇ ಆಗಿದೆ. “ಪಾರುಪತ್ಯಗಾರನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಾಗಿರುತ್ತದೆ.” (1 ಕೊರಿಂಥ 4:2, NIBV) ನಾವು ದೇವರ ರಾಜ್ಯದ ಮಹಿಮಾಯುತ ಸುವಾರ್ತೆಯ ಪಾರುಪತ್ಯಗಾರರಾಗಿದ್ದೇವೆ. ನಾವು ಸಂಧಿಸುವವರೆಲ್ಲರಿಗೆ ಈ ಸುವಾರ್ತೆಯನ್ನು ಸಾರಿಹೇಳುವುದರಲ್ಲಿ ನಮ್ಮ ಶ್ರದ್ಧೆಯು, ಜೀವಕ್ಕೆ ನಡಿಸುವ ಹಾದಿಯಲ್ಲಿ ಉಳಿಯುವಂತೆ ನಮಗೆ ಸಹಾಯಮಾಡುವುದು. “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂಬ ವಾಸ್ತವಾಂಶವನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿರಿ. (ಪ್ರಸಂಗಿ 9:11) ಜೀವನದ ಅನಿಶ್ಚಿತ ಪರಿಸ್ಥಿತಿಗಳಿಂದ ಉಂಟುಮಾಡಲ್ಪಡುವ ಯಾವುದೇ ಅನಗತ್ಯ ಚಿಂತೆಯನ್ನು ಕಡಿಮೆಮಾಡಲಿಕ್ಕಾಗಿ, ಪುನರುತ್ಥಾನದ ಮಹಿಮಾಯುತ ನಿರೀಕ್ಷೆಗೆ ಬಲವಾಗಿ ಅಂಟಿಕೊಳ್ಳಿರಿ. ಕ್ರಿಸ್ತನ ಸಹಸ್ರ ವರ್ಷದಾಳಿಕೆಯು ಆರಂಭವಾಗುವುದಕ್ಕೆ ಮೊದಲು ನೀವು ಸಾಯಲಿದ್ದೀರಿ ಎಂಬಂತೆ ತೋರುವಲ್ಲಿ, ಖಂಡಿತವಾಗಿಯೂ ಬಿಡುಗಡೆಯು ಬರುವುದು ಎಂಬ ವಿಷಯದಲ್ಲಿ ನೀವು ಸಾಂತ್ವನವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬ ಮನವರಿಕೆ ನಿಮಗಿರಲಿ. ಯೆಹೋವನ ನೇಮಿತ ಸಮಯದಲ್ಲಿ ನೀವು, ಯೋಬನು ಸೃಷ್ಟಿಕರ್ತನನ್ನು ಸಂಬೋಧಿಸಿ ನುಡಿದ ಈ ಮಾತುಗಳನ್ನೇ ಪ್ರತಿಧ್ವನಿಸಲು ಶಕ್ತರಾಗುವಿರಿ: ‘ನೀನು ಕರೆಯುವಿ ಮತ್ತು ನಾನು ಉತ್ತರಕೊಡುವೆನು.’ ತನ್ನ ಸ್ಮರಣೆಯಲ್ಲಿರುವವರೆಲ್ಲರನ್ನು ಪುನಃ ಬದುಕಿಸಲು ಹಂಬಲಿಸುವಂಥ ಯೆಹೋವನಿಗೆ ಎಲ್ಲ ಸ್ತುತಿಯು ಸಲ್ಲಲಿ!—ಯೋಬ 14:15.
[ಪಾದಟಿಪ್ಪಣಿಗಳು]
a ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ 1988, ಜುಲೈ 8ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯ 10ನೇ ಪುಟವನ್ನು ನೋಡಿ.
b ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಎಂಬ ಪುಸ್ತಕದ 662ನೇ ಪುಟ.
ನಿಮಗೆ ನೆನಪಿದೆಯೊ?
• ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ಯಾವುದರ ಆಧಾರದ ಮೇಲೆ ಜನರಿಗೆ ನ್ಯಾಯತೀರ್ಪು ವಿಧಿಸಲ್ಪಡುವುದು?
• ಕೆಲವರಿಗೆ ಏಕೆ “ಜೀವಕ್ಕಾಗಿ ಪುನರುತ್ಥಾನ”ವಾಗುವುದು ಮತ್ತು ಇತರರಿಗೆ “ತೀರ್ಪಿಗಾಗಿ ಪುನರುತ್ಥಾನ”ವಾಗುವುದು?
• ಪುನರುತ್ಥಾನದ ನಿರೀಕ್ಷೆಯು ನಮಗೆ ಈಗ ಹೇಗೆ ಸಾಂತ್ವನ ನೀಡಬಲ್ಲದು?
• ಕೀರ್ತನೆ 145:16ರ ಮಾತುಗಳು, ಪುನರುತ್ಥಾನದ ಕುರಿತು ಉತ್ತರಿಸಲ್ಪಡದೆ ಉಳಿದಿರುವ ಪ್ರಶ್ನೆಗಳೊಂದಿಗೆ ವ್ಯವಹರಿಸುವಂತೆ ನಮಗೆ ಹೇಗೆ ಸಹಾಯಮಾಡುತ್ತವೆ?
[ಅಧ್ಯಯನ ಪ್ರಶ್ನೆಗಳು]
1-3. ಕೆಲವರಿಗೆ ಭವಿಷ್ಯತ್ತಿನ ಬಗ್ಗೆ ಯಾವ ನಿರೀಕ್ಷೆಯಿದೆ? ದೃಷ್ಟಾಂತಿಸಿರಿ.
4. ಇಲ್ಲಿ ತಿಳಿಸಲ್ಪಟ್ಟಿರುವ ಅನುಭವಗಳು ನಿಮ್ಮ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ, ಮತ್ತು ಮುಂದೆ ನಾವು ಏನನ್ನು ಪರಿಗಣಿಸಲಿರುವೆವು?
5, 6. ಪ್ರಕಟನೆ 20:12, 13ರಲ್ಲಿ ಅಪೊಸ್ತಲ ಯೋಹಾನನಿಂದ ದಾಖಲಿಸಲ್ಪಟ್ಟಿರುವ ದರ್ಶನವು ಏನನ್ನು ಪ್ರಕಟಪಡಿಸುತ್ತದೆ?
7. ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ನ್ಯಾಯತೀರ್ಪನ್ನು ವಿಧಿಸಲು ಯಾವುದು ಆಧಾರವಾಗಿರುವುದು?
8. ಪುನರುತ್ಥಿತ ಜನರಿಗೆ ಯಾವ ಎರಡು ಸಂಭವನೀಯ ಪರಿಣಾಮಗಳಿರುವವು?
9. (ಎ) ಪುನರುತ್ಥಾನದಲ್ಲಿ ಹಿಂದಿರುಗಿದ ಬಳಿಕ, ನಿಸ್ಸಂದೇಹವಾಗಿಯೂ ಅನೇಕರು ಏನನ್ನು ಕಲಿಯುವರು? (ಬಿ) ಯಾವ ಬೃಹತ್ ಶೈಕ್ಷಣಿಕ ಕೆಲಸವು ಕೈಗೊಳ್ಳಲ್ಪಡುವುದು?
10, 11. (ಎ) ಭೂಮಿಯಲ್ಲಿರುವ ಎಲ್ಲರಿಗೂ ಸಹಸ್ರ ವರ್ಷವು ಯಾವ ಅವಕಾಶಗಳನ್ನು ನೀಡುವುದು? (ಬಿ) ಇದು ನಮ್ಮ ಮೇಲೆ ಯಾವ ಪ್ರಭಾವವನ್ನು ಬೀರಬೇಕು?
12. ಶೈಕ್ಷಣಿಕ ಕೆಲಸದಲ್ಲಿ ಮತ್ತು ಭೂಮಿಯನ್ನು ಒಂದು ಪರದೈಸಾಗಿ ರೂಪಾಂತರಿಸುವುದರಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವಂತೆ ಪ್ರತಿಯೊಬ್ಬರಿಗೂ ಯಾವುದು ಸಹಾಯಮಾಡುವುದು?
13, 14. ಅಂತಿಮ ಪರೀಕ್ಷೆಯ ಸಮಯದಲ್ಲಿ ಸೈತಾನನು ಬಿಡುಗಡೆಯಾಗುವುದರ ಉದ್ದೇಶವೇನು, ಮತ್ತು ವೈಯಕ್ತಿಕವಾಗಿ ನಮಗೆ ಯಾವ ಪ್ರತಿಫಲವು ಸಿಗುವ ಸಾಧ್ಯತೆಯಿದೆ?
15. ಪುನರುತ್ಥಾನದಲ್ಲಿನ ನಂಬಿಕೆಯು ಈಗ ಹೇಗೆ ಸಹಾಯಕರವಾಗಿ ಇರಸಾಧ್ಯವಿದೆ?
16. ಪುನರುತ್ಥಾನವು ಸಂಭವಿಸುವಾಗ ನಿಮ್ಮ ಭಾವನೆಗಳೇನಾಗಿರಬಹುದು?
17, 18. ಯಾವ ಎರಡು ಪ್ರಮುಖ ಪಾಠಗಳನ್ನು ನಾವು ಹೃದಯಕ್ಕೆ ತೆಗೆದುಕೊಳ್ಳಬೇಕು?
19. ಯಾವ ವಿಶೇಷವಾದ ಸುಯೋಗವನ್ನು ನಾವೆಂದೂ ಮರೆಯಬಾರದು?
20, 21. ಪುನರುತ್ಥಾನದ ಕುರಿತು ನಮಗಿರುವ ಎಲ್ಲ ಪ್ರಶ್ನೆಗಳು ಉತ್ತರಿಸಲ್ಪಡದೆ ಉಳಿದಿರುವುದಾದರೂ, ನಂಬಿಗಸ್ತರಾಗಿ ಉಳಿಯುವಂತೆ ಯಾವುದು ನಮಗೆ ಸಹಾಯಮಾಡುವುದು? ವಿವರಿಸಿರಿ.
22. ಯೆಹೋವನನ್ನು ಸ್ತುತಿಸಲು ನಮಗೆ ಏಕೆ ಸಕಾರಣವಿದೆ?
[ಪುಟ 21ರಲ್ಲಿರುವ ಚಿತ್ರಗಳು]
ಪುನರುತ್ಥಾನದಲ್ಲಿನ ನಂಬಿಕೆಯು ನಮಗೆ ಈಗ ಹೇಗೆ ಸಹಾಯಮಾಡಬಲ್ಲದು?