ಜಾಗತಿಕ ಸಮಸ್ಯೆಗೆ ಜಾಗತಿಕ ಪರಿಹಾರ
ಈ ಜಗತ್ತಿನಲ್ಲಿ ಕಷ್ಟನೋವಿಲ್ಲದ ಸ್ಥಳವಿಲ್ಲ. ಕಷ್ಟದಲ್ಲಿರುವವರಿಗೆ ದಯೆಯಿಂದ ಸಹಾಯಮಾಡುವವರೂ ಇದ್ದಾರೆ. ಉದಾಹರಣೆಗೆ ಆಸ್ಪತ್ರೆಗಳಲ್ಲಿ ಅಸ್ವಸ್ಥರ, ಅಪಘಾತಕ್ಕೀಡಾದವರ ಸೇವೆಮಾಡಲು ವೈದ್ಯಕೀಯ ಸಿಬ್ಬಂದಿ ಅವಿರತವಾಗಿ ದುಡಿಯುತ್ತಾರೆ. ಅಗ್ನಿಶಾಮಕದಳ, ಪೊಲೀಸರು, ಶಾಸಕರು, ರಕ್ಷಣಾತಂಡದವರು ಜನರನ್ನು ಕಷ್ಟಾಪತ್ತಿನಿಂದ ತಪ್ಪಿಸಲು ಇಲ್ಲವೆ ಅದನ್ನು ಕಡಿಮೆಗೊಳಿಸಲು ಶ್ರಮಿಸುತ್ತಾರೆ. ಅಂಥ ಪ್ರಯತ್ನಗಳು ಕೆಲವರಿಗೆ ಪ್ರಯೋಜನ ತಂದಿವೆಯಾದರೂ ಯಾವ ಮಾನವನಿಂದಾಗಲಿ ಸಂಘಟನೆಯಿಂದಾಗಲಿ ಭೂವ್ಯಾಪಕವಾಗಿ ಕಷ್ಟನೋವುಗಳ ಸಂಪೂರ್ಣ ನಿರ್ಮೂಲನ ಅಶಕ್ಯ. ದೇವರಾದರೋ ಜಾಗತಿಕ ಪರಿಹಾರವನ್ನು ತರಶಕ್ತನು ಮಾತ್ರವಲ್ಲ ಖಂಡಿತ ತರುವನು.
ಬೈಬಲಿನ ಕೊನೆಯ ಪುಸ್ತಕದಲ್ಲಿ ಈ ಆಶ್ವಾಸನೆಯಿದೆ: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.” (ಪ್ರಕಟನೆ 21:4) ಈ ವಾಗ್ದಾನದ ವ್ಯಾಪ್ತಿಯನ್ನು ಗಮನಿಸಿ. ಎಲ್ಲ ಕಷ್ಟಕಾರ್ಪಣ್ಯವನ್ನು ಕೊನೆಗಾಣಿಸುವ ದೇವರ ಉದ್ದೇಶವನ್ನು ಆ ವಾಗ್ದಾನ ಸಾರಾಂಶಿಸುತ್ತದೆ. ಆತನು ಅದನ್ನು ಹೇಗೆ ಕೊನೆಗಾಣಿಸುವನು? ಯುದ್ಧ, ಹಸಿವು, ಅಸ್ವಸ್ಥತೆ, ಅನ್ಯಾಯ ಮತ್ತು ದುಷ್ಟ ಜನರನ್ನು ಇಡೀ ಭೂಮಿಯಿಂದ ನಿರ್ಮೂಲಗೊಳಿಸುವ ಮೂಲಕವೇ. ಇದು ಮಾನವನಿಂದಂತೂ ಅಸಾಧ್ಯವೇ ಸರಿ.
ದೇವರ ರಾಜ್ಯ ಏನೇನು ಸಾಧಿಸಲಿದೆ?
ಮೃತಪಟ್ಟ ಯೇಸುವನ್ನು ದೇವರು ಸ್ವರ್ಗೀಯ ಜೀವನಕ್ಕೆ ಪುನರುತ್ಥಾನಗೊಳಿಸಿದನು. ಹೀಗೆ ಯೇಸು ಯೆಹೋವನ ನಂತರ ವಿಶ್ವದಲ್ಲಿ ಅತಿ ಬಲಾಢ್ಯ ವ್ಯಕ್ತಿಯ ಸ್ಥಾನ ಪಡೆದನು. ಈತನ ಮೂಲಕವೇ ದೇವರು ತನ್ನ ವಾಗ್ದಾನಗಳನ್ನು ನೆರವೇರಿಸುವನು. ಇಡೀ ಭೂಮಿಯ ಮೇಲೆ ಯೇಸು ಯಾರ ವಿರೋಧವೂ ಇಲ್ಲದೆ ರಾಜನಾಗಿ ಆಳುವ ಸಮಯ ಹತ್ತಿರವಿದೆ. ಮಾನವಕುಲದ ಮೇಲೆ ಮುಂದೆಂದೂ ರಾಜರುಗಳು, ರಾಷ್ಟ್ರಾಧ್ಯಕ್ಷರುಗಳು, ರಾಜಕಾರಣಿಗಳು ಆಳ್ವಿಕೆ ನಡೆಸುವುದಿಲ್ಲ. ಬದಲಿಗೆ ಮಾನವಕುಲದ ಮೇಲೆ ಒಬ್ಬನೇ ರಾಜ ಮತ್ತು ಒಂದೇ ಸರ್ಕಾರ ಅಂದರೆ ದೇವರ ರಾಜ್ಯ ಆಳ್ವಿಕೆ ನಡೆಸುವುದು.
ದೇವರ ಆ ರಾಜ್ಯವು ಎಲ್ಲ ಮಾನವ ಸರ್ಕಾರಗಳನ್ನು ತೆಗೆದುಹಾಕುವುದು. ಬೈಬಲ್ ಎಷ್ಟೋ ಕಾಲದ ಹಿಂದೆ ಹೀಗೆ ಮುಂತಿಳಿಸಿತ್ತು: “ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಎಲ್ಲ ದೇಶಗಳವರೂ ದೇವರ ರಾಜ್ಯವೆಂಬ ಒಂದೇ ನೀತಿಯುತ ಸರ್ಕಾರದಡಿ ಐಕ್ಯರಾಗಿರುವರು.
ಮಾನವನಾಗಿ ಯೇಸು ಭೂಮಿಯ ಮೇಲಿದ್ದಾಗ ಆ ರಾಜ್ಯದ ಕುರಿತು ಅನೇಕ ಸಲ ಮಾತಾಡಿದನು. ಅವನು ತನ್ನ ಶಿಷ್ಯರಿಗೆ ಕಲಿಸಿಕೊಟ್ಟ ಮಾದರಿ ಪ್ರಾರ್ಥನೆಯಲ್ಲೂ ಅದರ ಬಗ್ಗೆ ಹೀಗೆ ತಿಳಿಸಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:10) ಗಮನಿಸಿ, ಆ ರಾಜ್ಯವು ದೇವರ ಚಿತ್ತವನ್ನು ಭೂಮಿಯ ಮೇಲೆ ನೆರವೇರಿಸುತ್ತದೆಂದು ಯೇಸು ಸೂಚಿಸಿದನು. ದೇವರ ಚಿತ್ತವೇನು? ಕಷ್ಟನೋವನ್ನು ಭೂಮಿಯಾದ್ಯಂತ ಸಂಪೂರ್ಣವಾಗಿ ತೆಗೆದುಹಾಕುವುದೇ.
ಮಾನವ ಸರ್ಕಾರವು ಎಂದೂ ತರಲಶಕ್ಯವಾದ ಆಶೀರ್ವಾದಗಳನ್ನು ದೇವರ ನೀತಿಯುತ ಸರ್ಕಾರವು ತರಲಿದೆ. ಮಾನವರು ಶಾಶ್ವತವಾಗಿ ಜೀವಿಸುವಂತಾಗಲು ಯೆಹೋವನು ತನ್ನ ಮಗನಾದ ಯೇಸುವನ್ನು ವಿಮೋಚನಾ ಯಜ್ಞವಾಗಿ ಕೊಟ್ಟನೆಂಬುದನ್ನು ನೆನಪಿಸಿಕೊಳ್ಳಿರಿ. ಎಲ್ಲರಿಗೂ ಒಳಿತನ್ನು ಮಾಡುವ ಆ ರಾಜ್ಯದಾಳಿಕೆಯ ಕೆಳಗೆ ಜನರು ಪರಿಪೂರ್ಣತೆಗೇರುವರು. ಇದರ ಫಲಿತಾಂಶ? ಯೆಹೋವನು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:8.
ಕೆಲವರು ಹೀಗೆ ಕೇಳಬಹುದು: ‘ದೇವರು ಇದನ್ನು ಹಿಂದೆಯೇ ಏಕೆ ಮಾಡಲಿಲ್ಲ? ಆತನು ಯಾವುದಕ್ಕಾಗಿ ಕಾಯುತ್ತಿದ್ದಾನೆ?’ ಹೌದು, ಯೆಹೋವನು ಎಷ್ಟೋ ಹಿಂದೆಯೇ ಕಷ್ಟನೋವುಗಳನ್ನು ತೆಗೆದುಹಾಕಬಹುದಿತ್ತು ಅಥವಾ ತಡೆಗಟ್ಟಬಹುದಿತ್ತು. ಆದರೆ ಹಾಗೆ ಮಾಡದೆ ಅವು ಮುಂದುವರಿಯುವಂತೆ ಬಿಟ್ಟನು. ಸ್ವಾರ್ಥ ಕಾರಣದಿಂದಲ್ಲ ಬದಲಿಗೆ ಭೂಮಿಯಲ್ಲಿರುವ ತನ್ನ ಮಕ್ಕಳ ಶಾಶ್ವತ ಒಳಿತಿಗಾಗಿಯೇ. ಉದಾಹರಣೆಗೆ, ಪ್ರೀತಿಯ ಹೆತ್ತವರು ತಮ್ಮ ಮಗುವಿಗೆ ಮುಂದೆ ಹೆಚ್ಚು ಒಳಿತಾಗಬೇಕೆಂಬ ದೃಷ್ಟಿಯಿಂದ ಕೆಲವೊಂದು ಕಷ್ಟಗಳಿಗೆ ಒಳಗಾಗುವಂತೆ ಬಿಡಬಹುದು. ತದ್ರೀತಿ ಯೆಹೋವನು ಸಕಾರಣಗಳಿಂದಲೇ ಮಾನವರು ತಾತ್ಕಾಲಿಕವಾಗಿ ಕಷ್ಟವನ್ನು ಅನುಭವಿಸುವಂತೆ ಬಿಟ್ಟನು. ಆ ಕಾರಣಗಳನ್ನು ಬೈಬಲಿನಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಇಚ್ಛಾಸ್ವಾತಂತ್ರ್ಯ, ಪಾಪ, ಯೆಹೋವನ ಆಳ್ವಿಕೆಯ ಕುರಿತ ವಿವಾದಾಂಶ ಇತ್ಯಾದಿ ಒಳಗೂಡಿವೆ. ಒಬ್ಬ ದುಷ್ಟ ಆತ್ಮಜೀವಿ ನಿರ್ದಿಷ್ಟ ಸಮಯದ ವರೆಗೆ ಈ ಲೋಕವನ್ನು ಆಳುವಂತೆ ದೇವರು ಬಿಟ್ಟಿದ್ದಾನೆಂದೂ ಬೈಬಲ್ ವಿವರಿಸುತ್ತದೆ.a
ಆ ಎಲ್ಲ ಕಾರಣಗಳನ್ನು ವಿವರಿಸಲು ಇಲ್ಲಿ ಸಾಕಷ್ಟು ಸ್ಥಳವಿಲ್ಲ. ಆದರೂ ನಮಗೆ ನಿರೀಕ್ಷೆ ಮತ್ತು ಉತ್ತೇಜನ ನೀಡುವ ಎರಡು ನಿಜಾಂಶಗಳನ್ನು ನೋಡೋಣ. ಮೊದಲನೇ ನಿಜಾಂಶ: ನಮಗೀಗ ಕಷ್ಟನೋವುಗಳು ಇರುವುದಾದರೂ ಯೆಹೋವನು ಮುಂದೆ ಅಪಾರ ಆಶೀರ್ವಾದಗಳನ್ನು ಕೊಡಲಿದ್ದಾನೆ. ಅಷ್ಟುಮಾತ್ರವಲ್ಲ, ದೇವರು ನಮಗೆ ಈ ಆಶ್ವಾಸನೆ ಕೊಡುತ್ತಾನೆ: “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾಯ 65:17) ದುಷ್ಟತನವನ್ನು ತತ್ಕಾಲಕ್ಕೆ ಅನುಮತಿಸಿರುವುದರಿಂದ ಉಂಟಾಗಿರುವ ಬೇನೆ, ಕಷ್ಟನೋವುಗಳನ್ನು ದೇವರು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ತೊಡೆದುಹಾಕುವನು.
ಎರಡನೇ ನಿಜಾಂಶ: ಕಷ್ಟನೋವುಗಳನ್ನು ಕೊನೆಗಾಣಿಸಲು ದೇವರು ನಿರ್ದಿಷ್ಟ ಸಮಯವನ್ನು ಗೊತ್ತುಮಾಡಿದ್ದಾನೆ. ಹಿಂಸೆ ವ್ಯಾಜ್ಯಗಳನ್ನು ಇನ್ನೂ ಎಷ್ಟು ಕಾಲ ಬಿಡುವಿಯೆಂದು ಪ್ರವಾದಿ ಹಬಕ್ಕೂಕನು ಯೆಹೋವನಿಗೆ ಕೇಳಿದ್ದನ್ನು ನೆನಪಿಸಿಕೊಳ್ಳಿರಿ. ಆಗ ಯೆಹೋವನು ಪ್ರತ್ಯುತ್ತರ ಕೊಟ್ಟದ್ದು: “ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು . . . ತಾಮಸವಾಗದು.” (ಹಬಕ್ಕೂಕ 2:3) ನಾವು ಮುಂದಿನ ಲೇಖನದಲ್ಲಿ ನೋಡಲಿರುವಂತೆ ಆ “ಕ್ಲುಪ್ತಕಾಲ” ಅಂದರೆ ನೇಮಿತ ಸಮಯ ಹತ್ತಿರವಿದೆ. (w09-E 12/01)
[ಪಾದಟಿಪ್ಪಣಿ]
a ದೇವರು ಕಷ್ಟಸಂಕಟವನ್ನು ಅನುಮತಿಸಿರುವುದಕ್ಕೆ ಇರುವ ಕಾರಣಗಳ ಸವಿವರ ಚರ್ಚೆಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 11 ನೋಡಿ.
[ಪುಟ 7ರಲ್ಲಿರುವ ಚೌಕ]
ಭವ್ಯ ಭವಿಷ್ಯತ್ತಿಗೆ ಬೊಟ್ಟುಮಾಡುವ ಬೈಬಲ್ ವಚನಗಳು
ಯುದ್ಧವಿಲ್ಲ:
“ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು . . . ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.” —ಕೀರ್ತನೆ 46:8, 9.
ಮೃತರಾದ ನಮ್ಮ ಪ್ರಿಯರು ಪುನಃ ಜೀವಿಸುವರು:
‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’—ಅ. ಕಾರ್ಯಗಳು 24:15.
ಎಲ್ಲರಿಗೂ ಆಹಾರ:
“ಧಾನ್ಯದ ಸಮೃದ್ಧಿಯು . . . ಬೆಟ್ಟಗಳ ತುದಿಯ ವರೆಗೂ ಇರುವುದು.”—ಕೀರ್ತನೆ 72:16, NIBV.
ಅಸ್ವಸ್ಥತೆಯಿಲ್ಲ:
“ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” —ಯೆಶಾಯ 33:24.
ದುಷ್ಟರು ಕಾಣಸಿಗರು:
“ದುಷ್ಟರಾದರೋ . . . ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”—ಜ್ಞಾನೋಕ್ತಿ 2:22.
ನ್ಯಾಯ ರಾರಾಜಿಸುವುದು:
“ಇಗೋ, ಒಬ್ಬ ರಾಜನು [ಕ್ರಿಸ್ತ ಯೇಸು] ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.” —ಯೆಶಾಯ 32:1.
[ಪುಟ 7ರಲ್ಲಿರುವ ಚಿತ್ರಗಳು]
ದೇವರ ರಾಜ್ಯವು ನಮಗಿರುವ ಯಾವುದೇ ಕಷ್ಟವನ್ನು ಪರಿಹರಿಸುವುದು