ನಿಮ್ಮ ಸನ್ನಿವೇಶಗಳು ನಿಮ್ಮ ಜೀವನವನ್ನು ನಿಯಂತ್ರಿಸುತ್ತವೋ?
ಈ ‘ಕಠಿನಕಾಲಗಳಲ್ಲಿ’ ಸಂಕಟಕರವಾದ ಸನ್ನಿವೇಶಗಳು ಮತ್ತು ಸಮಸ್ಯೆಗಳು ಸರ್ವಸಾಮಾನ್ಯ. (2 ತಿಮೊಥೆಯ 3:1) ಕೆಲವು ಸಮಸ್ಯೆಗಳು ತಾತ್ಕಾಲಿಕವಾಗಿದ್ದು ಸಮಯಾನಂತರ ಇಲ್ಲದೆ ಹೋಗಬಹುದು. ಇನ್ನಿತರ ಸಮಸ್ಯೆಗಳು ಅನೇಕ ತಿಂಗಳುಗಳು ಅಥವಾ ವರ್ಷಗಳ ವರೆಗೂ ಉಳಿಯಬಲ್ಲವು. ಇದರ ಪರಿಣಾಮವಾಗಿ, ಕೀರ್ತನೆಗಾರನಾದ ದಾವೀದನಿಗಾದ ಅನಿಸಿಕೆ ಅನೇಕರಿಗಾಗುತ್ತದೆ. ಅವನು ಯೆಹೋವನಿಗೆ ಮೊರೆಯಿಟ್ಟದ್ದು: “ನನ್ನ ಮನೋವ್ಯಥೆಗಳನ್ನು ನಿವಾರಿಸು; ಸಂಕಟಗಳಿಂದ ನನ್ನನ್ನು ಬಿಡಿಸು.”—ಕೀರ್ತನೆ 25:17.
ನೀವು ಸಹಿಸಲಸಾಧ್ಯವಾದ ಸಮಸ್ಯೆಗಳೊಂದಿಗೆ ಸೆಣಸಾಡುತ್ತಿದ್ದೀರೋ? ಹಾಗಿರುವಲ್ಲಿ, ನೀವು ಬೈಬಲಿನಲ್ಲಿ ಸಹಾಯ ಮತ್ತು ಉತ್ತೇಜನವನ್ನು ಕಂಡುಕೊಳ್ಳಬಲ್ಲಿರಿ. ಕಷ್ಟಗಳನ್ನು ಯಶಸ್ವಿಕರವಾಗಿ ನಿಭಾಯಿಸಿದ ಯೆಹೋವನ ಇಬ್ಬರು ನಂಬಿಗಸ್ತ ಸೇವಕರ ಜೀವಿತಗಳನ್ನು ನಾವೀಗ ಪರಿಗಣಿಸೋಣ. ಅವರು ಯೋಸೇಫ ಹಾಗೂ ದಾವೀದರಾಗಿದ್ದಾರೆ. ವಿಪತ್ಕಾಲದಲ್ಲಿ ಅವರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಪರೀಕ್ಷಿಸುವ ಮೂಲಕ, ಇಂದು ತದ್ರೀತಿಯ ಪಂಥಾಹ್ವಾನಗಳನ್ನು ನಿಭಾಯಿಸಲು ನಮಗೆ ಸಹಾಯಮಾಡುವಂಥ ಪ್ರಾಯೋಗಿಕ ಪಾಠಗಳನ್ನು ನಾವು ಕಲಿಯಸಾಧ್ಯವಿದೆ.
ಗಂಭೀರವಾದ ಪಂಥಾಹ್ವಾನಗಳು ಎದುರಾಗುವಾಗ
ಯೋಸೇಫನು 17 ವರ್ಷದವನಾದಾಗ, ತನ್ನ ಸ್ವಂತ ಕುಟುಂಬದಲ್ಲಿ ಅವನಿಗೆ ಒಂದು ಗಂಭೀರವಾದ ಸಮಸ್ಯೆಯಿತ್ತು. ತಮ್ಮ ತಂದೆಯಾದ ಯಾಕೋಬನು ‘ತನ್ನ ಎಲ್ಲಾ ಮಕ್ಕಳಿಗಿಂತಲೂ ಯೋಸೇಫನನ್ನೇ ಹೆಚ್ಚು ಪ್ರೀತಿಸುತ್ತಾನೆ’ ಎಂಬುದನ್ನು ಅವನ ಸಹೋದರರು ಗಮನಿಸಿದರು. ಇದರ ಪರಿಣಾಮವಾಗಿ, ‘ಅವರು ಅವನನ್ನು ಹಗೆಮಾಡಿ, ಅವನೊಡನೆ ಸ್ನೇಹಭಾವದಿಂದ ಮಾತಾಡಲಾರದೆ ಹೋದರು.’ (ಆದಿಕಾಂಡ 37:4) ಈ ಸನ್ನಿವೇಶದಿಂದ ಯೋಸೇಫನಿಗಾದ ಕಳವಳ ಹಾಗೂ ಬೇಗುದಿಯನ್ನು ನಾವು ಊಹಿಸಿಕೊಳ್ಳಸಾಧ್ಯವಿದೆ. ಕಾಲಕ್ರಮೇಣ ಯೋಸೇಫನ ಸಹೋದರರ ಹಗೆಯು ಎಷ್ಟು ಅತ್ಯಧಿಕವಾಯಿತೆಂದರೆ, ಅವರು ಅವನನ್ನು ದಾಸತ್ವಕ್ಕೆ ಮಾರಿಬಿಟ್ಟರು.—ಆದಿಕಾಂಡ 37:26-33.
ಯೋಸೇಫನು ಐಗುಪ್ತದಲ್ಲಿ ದಾಸನಾಗಿದ್ದಾಗ, ತನ್ನ ದಣಿಯ ಹೆಂಡತಿಯ ಅನೈತಿಕ ಪ್ರಸ್ತಾಪವನ್ನು ಅವನು ಪ್ರತಿರೋಧಿಸಬೇಕಾಗಿತ್ತು. ಅವನಿಂದ ತಿರಸ್ಕೃತಳಾದುದಕ್ಕೆ ಕೋಪಗೊಂಡ ಅವಳು, ಯೋಸೇಫನು ತನ್ನನ್ನು ಮಾನಭಂಗಪಡಿಸುವುದಕ್ಕೆ ಪ್ರಯತ್ನಿಸಿದನೆಂದು ಅವನ ಮೇಲೆ ಸುಳ್ಳು ಆರೋಪವನ್ನು ಹೊರಿಸಿದಳು. ಆಗ ಅವನನ್ನು ಹಿಡಿದು ‘ಸೆರೆಮನೆಯಲ್ಲಿ ಹಾಕಿಸಲಾಯಿತು’ ಮತ್ತು ಅಲ್ಲಿ “ಅವನ ಕಾಲುಗಳು ಕೋಳದಲ್ಲಿ ನೊಂದವು; ಕಬ್ಬಿಣದ ಬೇಡಿಗಳಿಂದ ಅವನು ಬಂಧಿತನಾದನು.” (ಆದಿಕಾಂಡ 39:7-20; ಕೀರ್ತನೆ 105:17, 18) ಇದೆಂಥ ಒಂದು ಪರೀಕ್ಷೆಯಾಗಿತ್ತು! ಯೋಸೇಫನ ಸ್ವಂತ ಕುಟುಂಬದ ಸದಸ್ಯರು ಮಾತ್ರವಲ್ಲದೆ, ಇತರರು ಅವನಿಗೆ ಮಾಡಿದ ಅನ್ಯಾಯಗಳ ಕಾರಣದಿಂದ ಅವನು ಸುಮಾರು 13 ವರ್ಷಗಳ ವರೆಗೆ ಒಬ್ಬ ದಾಸನಾಗಿ ಇಲ್ಲವೆ ಒಬ್ಬ ಸೆರೆಯಾಳಾಗಿ ಕಾಲಕಳೆದನು.—ಆದಿಕಾಂಡ 37:2; 41:46.
ಪುರಾತನ ಇಸ್ರಾಯೇಲಿನ ದಾವೀದನು ಸಹ ಯುವಪ್ರಾಯದಲ್ಲಿ ಅನೇಕ ಪರೀಕ್ಷೆಗಳನ್ನು ಎದುರಿಸಿದನು. ಅನೇಕ ವರ್ಷಗಳ ವರೆಗೆ ಅವನು ರಾಜನಾದ ಸೌಲನಿಂದ ಪ್ರಾಣಿಯಂತೆ ಬೇಟೆಯಾಡಲ್ಪಟ್ಟು, ದೇಶಭ್ರಷ್ಟನೋಪಾದಿ ಬದುಕುತ್ತಿದ್ದನು. ದಾವೀದನ ಜೀವವು ಯಾವಾಗಲೂ ಅಪಾಯದಲ್ಲಿತ್ತು. ಒಂದು ಸಂದರ್ಭದಲ್ಲಿ ಅವನು ಆಹಾರವನ್ನು ಕೇಳಲಿಕ್ಕಾಗಿ ಯಾಜಕನಾದ ಅಹೀಮೆಲೆಕನ ಬಳಿಗೆ ಹೋದನು. (1 ಸಮುವೇಲ 21:1-7) ಅಹೀಮೆಲೆಕನು ದಾವೀದನಿಗೆ ಸಹಾಯಮಾಡಿದನೆಂಬ ಸುದ್ದಿಯು ಸೌಲನಿಗೆ ಮುಟ್ಟಿದಾಗ, ಅವನು ಅಹೀಮೆಲೆಕನನ್ನು ಮಾತ್ರವಲ್ಲ ಎಲ್ಲಾ ಯಾಜಕರನ್ನೂ ಅವರ ಕುಟುಂಬಗಳನ್ನೂ ಕೊಂದುಹಾಕುವಂತೆ ಅಪ್ಪಣೆಕೊಟ್ಟನು. (1 ಸಮುವೇಲ 22:12-19) ಪರೋಕ್ಷವಾಗಿ ಈ ದುರಂತಕ್ಕೆ ತಾನೇ ಕಾರಣನಾದುದಕ್ಕಾಗಿ ದಾವೀದನು ಎಷ್ಟು ಸಂಕಟಪಟ್ಟನು ಎಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರೋ?
ಯೋಸೇಫ ದಾವೀದರು ಎಷ್ಟು ವರ್ಷ ವಿಪತ್ತು ಹಾಗೂ ದುರುಪಚಾರವನ್ನು ತಾಳಿಕೊಂಡರು ಎಂಬುದರ ಕುರಿತು ತುಸು ಆಲೋಚಿಸಿರಿ. ಅವರು ತಮ್ಮ ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸಲು ಏನು ಮಾಡಿದರು ಎಂಬುದನ್ನು ಪರೀಕ್ಷಿಸುವ ಮೂಲಕ ನಾವು ಅಮೂಲ್ಯವಾದ ಪಾಠಗಳನ್ನು ಕಲಿಯಬಲ್ಲೆವು. ಈ ಪುರುಷರು ಯಾವ ಮೂರು ವಿಧಗಳಲ್ಲಿ ನಮ್ಮ ಅನುಕರಣೆಗೆ ಅರ್ಹರಾಗಿದ್ದಾರೆ ಎಂಬುದನ್ನು ನಾವೀಗ ಪರಿಗಣಿಸೋಣ.
ಅಸಮಾಧಾನ ಹಾಗೂ ಕಹಿ ಮನೋಭಾವವನ್ನು ಮನಸ್ಸಿನಿಂದ ತೆಗೆದುಹಾಕುವುದು
ಮೊದಲನೆಯದಾಗಿ, ಈ ನಂಬಿಗಸ್ತ ಪುರುಷರು ಕಹಿ ಮನೋಭಾವ ಹಾಗೂ ಅಸಮಾಧಾನದ ಬಲೆಯಲ್ಲಿ ಸಿಕ್ಕಿಬೀಳಲು ನಿರಾಕರಿಸಿದರು. ಯೋಸೇಫನು ಸೆರೆಮನೆಯಲ್ಲಿದ್ದಾಗ, ತನ್ನ ಸಹೋದರರು ಪುನಃ ಕಣ್ಣಿಗೆ ಬೀಳುವಲ್ಲಿ ತಾನು ಯಾವ ರೀತಿ ಸೇಡು ತೀರಿಸಿಕೊಳ್ಳಬಹುದು ಎಂದು ಯೋಚಿಸುತ್ತಾ, ಅವರು ತನಗೆ ಮಾಡಿದಂಥ ದ್ರೋಹದ ಕುರಿತು ಅವನು ನಕಾರಾತ್ಮಕವಾಗಿ ಆಲೋಚಿಸಸಾಧ್ಯವಿತ್ತು. ಇಂಥ ವಿನಾಶಕರ ಆಲೋಚನೆಯನ್ನು ಯೋಸೇಫನು ಪ್ರತಿರೋಧಿಸಿದನು ಎಂಬುದು ನಮಗೆ ಹೇಗೆ ಗೊತ್ತು? ದವಸಧಾನ್ಯಗಳನ್ನು ಖರೀದಿಸಲಿಕ್ಕಾಗಿ ಐಗುಪ್ತಕ್ಕೆ ಬಂದಿದ್ದ ತನ್ನ ಸಹೋದರರಿಗೆ ಮುಯ್ಯಿತೀರಿಸುವ ಅವಕಾಶವು ದೊರೆತಾಗ ಅವನು ಹೇಗೆ ಪ್ರತಿಕ್ರಿಯಿಸಿದನು ಎಂಬುದನ್ನು ಪರಿಗಣಿಸಿರಿ. ವೃತ್ತಾಂತವು ಹೇಳುವುದು: “ಯೋಸೇಫನಾದರೋ ಅವರ ಬಳಿಯಿಂದ ಒಂದು ಕಡೆಗೆ ಹೋಗಿ ಕಣ್ಣೀರು ಸುರಿಸಿದನು. . . . ಆ ಮೇಲೆ ಯೋಸೇಫನು ತನ್ನ ಆಳುಗಳಿಗೆ—ಆ ಮನುಷ್ಯರ ಚೀಲಗಳಲ್ಲಿ ಧಾನ್ಯವನ್ನು ತುಂಬಿಸಿ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರಿಗಿ ಇಟ್ಟು ಅವರ ಪ್ರಯಾಣಕ್ಕೆ ಬೇಕಾದ ಆಹಾರವನ್ನು ಕೊಡಬೇಕೆಂದು ಅಪ್ಪಣೆ”ಮಾಡಿದನು. ತದನಂತರ, ತಮ್ಮ ತಂದೆಯನ್ನು ಐಗುಪ್ತಕ್ಕೆ ಕರೆತರಲಿಕ್ಕಾಗಿ ತನ್ನ ಸಹೋದರರನ್ನು ಕಳುಹಿಸುತ್ತಿರುವಾಗಲೂ ಯೋಸೇಫನು “ನೀವು ದಾರಿಯಲ್ಲಿ ಜಗಳಮಾಡಬೇಡಿರಿ” ಎಂಬ ಮಾತುಗಳಿಂದ ಅವರನ್ನು ಉತ್ತೇಜಿಸಿದನು. ಕಹಿ ಮನೋಭಾವ ಮತ್ತು ಅಸಮಾಧಾನವು ತನ್ನ ಜೀವಿತವನ್ನು ಹಾಳುಮಾಡುವಂತೆ ತಾನು ಬಿಟ್ಟುಕೊಟ್ಟಿಲ್ಲ ಎಂಬುದನ್ನು ಯೋಸೇಫನು ತನ್ನ ನಡೆನುಡಿಗಳಲ್ಲಿ ರುಜುಪಡಿಸಿದನು.—ಆದಿಕಾಂಡ 42:24, 25; 45:24.
ತದ್ರೀತಿಯಲ್ಲಿ ದಾವೀದನು ಸಹ ರಾಜನಾದ ಸೌಲನ ಕಡೆಗೆ ಅಸಮಾಧಾನವನ್ನು ಬೆಳೆಸಿಕೊಳ್ಳಲಿಲ್ಲ. ಎರಡು ಸಂದರ್ಭಗಳಲ್ಲಿ ದಾವೀದನಿಗೆ ಸೌಲನನ್ನು ಕೊಲ್ಲುವ ಸದವಕಾಶ ಸಿಕ್ಕಿತ್ತು. ಆದರೂ, ಜೊತೆಯಲ್ಲಿದ್ದ ಸೇವಕರು ಸೌಲನನ್ನು ಕೊಲ್ಲುವಂತೆ ದಾವೀದನನ್ನು ಉತ್ತೇಜಿಸಿದಾಗ ಅವನು ಹೇಳಿದ್ದು: “ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ಒಡೆಯನೂ ಆಗಿದ್ದಾನೆ; ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿಮಾಡಲಿ.” ದಾವೀದನು ಈ ವಿಚಾರವನ್ನು ಯೆಹೋವನೇ ನೋಡಿಕೊಳ್ಳಲಿ ಎಂದು ನೆನಸುತ್ತಾ ತನ್ನ ಸೇವಕರಿಗೆ ಹೇಳಿದ್ದು: “ಯೆಹೋವನಾಣೆ, ಅವನು ಯೆಹೋವನಿಂದ ಸಾಯುವನು; ಇಲ್ಲವೆ ಕಾಲತುಂಬಿ ಮೃತಿಹೊಂದುವನು; ಅಥವಾ ಯುದ್ಧದಲ್ಲಿ ಮಡಿಯುವನು [“ಮತ್ತು ಅವನು ಖಂಡಿತವಾಗಿಯೂ ಅಳಿದುಹೋಗುವನು,” NW].” ಸಮಯಾನಂತರ, ದಾವೀದನು ಸೌಲನ ಹಾಗೂ ಸೌಲನ ಮಗನಾದ ಯೋನಾತಾನನ ಮರಣದ ಕುರಿತು ದುಃಖಿಸುತ್ತಾ ಶೋಕಗೀತೆಯನ್ನು ಸಹ ರಚಿಸಿದನು. ಯೋಸೇಫನಂತೆಯೇ ದಾವೀದನು ಸಹ ಅಸಮಾಧಾನವು ತನ್ನ ಮೇಲೆ ಜಯಸಾಧಿಸುವಂತೆ ಬಿಟ್ಟುಕೊಡಲಿಲ್ಲ.—1 ಸಮುವೇಲ 24:3-6; 26:7-13; 2 ಸಮುವೇಲ 1:17-27.
ಯಾವುದೋ ಒಂದು ಅನ್ಯಾಯವು ನಮಗೆ ನೋವನ್ನು ಉಂಟುಮಾಡುವಾಗ, ಮನಸ್ಸಿನಲ್ಲಿ ನಾವು ಅಸಮಾಧಾನ ಹಾಗೂ ಕಹಿ ಮನೋಭಾವವನ್ನು ಬೆಳೆಸಿಕೊಳ್ಳುತ್ತೇವೋ? ನಾವು ತುಂಬ ಸುಲಭವಾಗಿ ಇದಕ್ಕೆ ಬಲಿಬೀಳಬಹುದು. ನಮ್ಮ ಭಾವನೆಗಳು ನಮ್ಮನ್ನು ನಿಯಂತ್ರಿಸುವಂತೆ ನಾವು ಬಿಟ್ಟುಕೊಡುವಲ್ಲಿ, ಆಗಿರುವ ಅನ್ಯಾಯಕ್ಕಿಂತಲೂ ಇದರ ಪರಿಣಾಮವು ಹೆಚ್ಚು ಹಾನಿಕರವಾಗಿರಬಲ್ಲದು. (ಎಫೆಸ 4:26, 27) ಇತರರು ಏನು ಮಾಡುತ್ತಾರೋ ಅದನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸುವ ಅಥವಾ ಸ್ವಲ್ಪವೂ ನಿಯಂತ್ರಿಸಲಾರದ ಸ್ಥಿತಿಯಲ್ಲಿ ನಾವಿದ್ದೇವಾದರೂ, ನಮ್ಮ ಪ್ರತಿಕ್ರಿಯೆಯನ್ನು ನಾವು ನಿಯಂತ್ರಿಸಸಾಧ್ಯವಿದೆ. ಯೆಹೋವನು ತನ್ನ ತಕ್ಕ ಸಮಯದಲ್ಲಿ ವಿಷಯಗಳನ್ನು ಸರಿಪಡಿಸುತ್ತಾನೆ ಎಂಬ ನಂಬಿಕೆ ನಮಗಿರುವಲ್ಲಿ, ಅಸಮಾಧಾನ ಹಾಗೂ ಕಹಿ ಮನೋಭಾವವನ್ನು ತೊರೆಯುವುದು ಹೆಚ್ಚು ಸುಲಭವಾಗುತ್ತದೆ.—ರೋಮಾಪುರ 12:17-19.
ನಿಮ್ಮ ಸನ್ನಿವೇಶವನ್ನು ಸದುಪಯೋಗಿಸಿಕೊಳ್ಳಿರಿ
ನಾವು ಕಲಿಯಸಾಧ್ಯವಿರುವ ಎರಡನೆಯ ಪಾಠವು ಏನಾಗಿದೆಯೆಂದರೆ, ನಮ್ಮ ಸನ್ನಿವೇಶಗಳು ಸರಿಯಾದ ಹೆಜ್ಜೆಯನ್ನು ತೆಗೆದುಕೊಳ್ಳುವುದನ್ನು ತಡೆಯುವಂತೆ ನಾವು ಬಿಡಬಾರದು. ನಾವೇನು ಮಾಡಸಾಧ್ಯವಿಲ್ಲವೋ ಅದರ ವಿಷಯದಲ್ಲಿ ನಾವೆಷ್ಟು ಆಳವಾಗಿ ಚಿಂತಿಸಬಹುದೆಂದರೆ, ನಾವೇನು ಮಾಡಸಾಧ್ಯವಿದೆಯೋ ಅದರ ಮಹತ್ವವನ್ನು ಮರೆತೇ ಬಿಡಬಹುದು. ಆಗ, ಕಾರ್ಯತಃ ನಮ್ಮ ಸನ್ನಿವೇಶಗಳು ನಮ್ಮನ್ನು ನಿಯಂತ್ರಿಸತೊಡಗುತ್ತವೆ. ಯೋಸೇಫನ ವಿಷಯದಲ್ಲಿಯೂ ಇದು ಸಂಭವಿಸಸಾಧ್ಯವಿತ್ತು. ಆದುದರಿಂದಲೇ ಅವನು ತನ್ನ ಸನ್ನಿವೇಶವನ್ನು ಸದುಪಯೋಗಿಸಿಕೊಳ್ಳುವ ಆಯ್ಕೆಯನ್ನು ಮಾಡಿದನು. ಯೋಸೇಫನು ಒಬ್ಬ ದಾಸನಾಗಿ ಸೇವೆಮಾಡುತ್ತಿದ್ದಾಗ, ‘ಅವನ ದಣಿಯು ಅವನ ಮೇಲೆ ದಯೆಯಿಟ್ಟು, ಅವನಿಗೆ ತನ್ನ ಮನೆಯಲ್ಲಿ ಪಾರುಪತ್ಯವನ್ನು ಕೊಟ್ಟು ತನ್ನ ಆಸ್ತಿಯನ್ನೆಲ್ಲಾ ಅವನ ವಶಕ್ಕೆ ಒಪ್ಪಿಸಿದನು.’ ಯೋಸೇಫನು ಸೆರೆಮನೆಯಲ್ಲಿದ್ದಾಗಲೂ ತದ್ರೀತಿಯ ಹೆಜ್ಜೆಯನ್ನು ತೆಗೆದುಕೊಂಡನು. ಯೆಹೋವನ ಆಶೀರ್ವಾದ ಮತ್ತು ಯೋಸೇಫನ ಕಾರ್ಯತತ್ಪರತೆಯ ಕಾರಣದಿಂದ, “ಸೆರೆಮನೆಯ ಯಜಮಾನನು ಸೆರೆಯಲ್ಲಿದ್ದವರೆಲ್ಲರನ್ನೂ ಯೋಸೇಫನ ವಶಕ್ಕೆ ಕೊಟ್ಟುಬಿಟ್ಟನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸಿದನು.”—ಆದಿಕಾಂಡ 39:4, 21-23.
ಒಬ್ಬ ದೇಶಭ್ರಷ್ಟನೋಪಾದಿ ಜೀವಿಸುತ್ತಿದ್ದ ವರ್ಷಗಳಲ್ಲೆಲ್ಲಾ ದಾವೀದನು ತನ್ನ ಸನ್ನಿವೇಶಗಳನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡನು. ಪಾರಾನ್ ಅರಣ್ಯದಲ್ಲಿ ಉಳಿದುಕೊಂಡಿದ್ದಾಗ, ಅವನೂ ಅವನ ಸೇವಕರೂ ಸುಲಿಗೆಮಾಡುವವರಿಂದ ನಾಬಾಲನ ಮಂದೆಯನ್ನು ಕಾಪಾಡಿದರು. “ನಾವು ಕುರಿಗಳನ್ನು ಮೇಯಿಸುವವರಾಗಿ ಅವರೊಡನೆ ಇದ್ದಾಗ ಅವರು ಹಗಲಿರುಳು ನಮಗೆ ಕಾವಲುಗೋಡೆಯಂತಿದ್ದರು” ಎಂದು ನಾಬಾಲನ ಕುರುಬರಲ್ಲಿ ಒಬ್ಬನು ಹೇಳಿದನು. (1 ಸಮುವೇಲ 25:16) ಸಮಯಾನಂತರ, ದಾವೀದನು ಚಿಕ್ಲಗಿನಲ್ಲಿ ಉಳಿದುಕೊಂಡಿದ್ದಾಗ, ದಕ್ಷಿಣದಲ್ಲಿ ಇಸ್ರಾಯೇಲಿನ ಶತ್ರುಗಳು ಆಕ್ರಮಿಸಿಕೊಂಡಿದ್ದ ಪಟ್ಟಣಗಳ ಮೇಲೆ ದಾಳಿಮಾಡಿ, ಯೆಹೂದದ ಗಡಿಗಳನ್ನು ಭದ್ರಪಡಿಸಿದನು.—1 ಸಮುವೇಲ 27:8; 1 ಪೂರ್ವಕಾಲವೃತ್ತಾಂತ 12:20-22.
ನಮ್ಮ ಸನ್ನಿವೇಶಗಳನ್ನು ಸದುಪಯೋಗಿಸಿಕೊಳ್ಳಲಿಕ್ಕಾಗಿ ನಾವು ಇನ್ನೂ ಹೆಚ್ಚಿನ ಪ್ರಯತ್ನವನ್ನು ಮಾಡುವ ಆವಶ್ಯಕತೆಯಿದೆಯೋ? ಹೀಗೆ ಮಾಡುವುದು ಪಂಥಾಹ್ವಾನಕರವಾಗಿ ಇರಬಹುದಾದರೂ, ನಾವು ಸಾಫಲ್ಯವನ್ನು ಪಡೆಯಸಾಧ್ಯವಿದೆ. ತನ್ನ ಜೀವಿತದ ಕುರಿತು ಪರ್ಯಾಲೋಚಿಸುತ್ತಾ ಅಪೊಸ್ತಲ ಪೌಲನು ಬರೆದುದು: “ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ. . . . ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ.” ಜೀವನದ ಬಗ್ಗೆ ಪೌಲನು ಈ ರೀತಿಯ ಅಭಿಪ್ರಾಯವನ್ನು ಹೇಗೆ ಬೆಳೆಸಿಕೊಳ್ಳಶಕ್ತನಾದನು? ಸತತವಾಗಿ ಯೆಹೋವನ ಮೇಲೆ ಆತುಕೊಳ್ಳುವ ಮೂಲಕವೇ. ಅವನು ಒಪ್ಪಿಕೊಂಡದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:11-13.
ಯೆಹೋವನ ಮೇಲೆ ಆತುಕೊಳ್ಳಿರಿ
ಮೂರನೆಯ ಪಾಠವೇನೆಂದರೆ, ನಮ್ಮ ಸನ್ನಿವೇಶಗಳನ್ನು ಬದಲಾಯಿಸಲಿಕ್ಕಾಗಿ ಅಶಾಸ್ತ್ರೀಯವಾದ ಮಾಧ್ಯಮವನ್ನು ಉಪಯೋಗಿಸುವುದಕ್ಕೆ ಬದಲಾಗಿ ನಾವು ಯೆಹೋವನ ಮೇಲೆ ಆತುಕೊಳ್ಳಬೇಕು. ಶಿಷ್ಯನಾದ ಯಾಕೋಬನು ಬರೆದುದು: “ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.” (ಯಾಕೋಬ 1:4) ನಮ್ಮ ಪರೀಕ್ಷೆಯನ್ನು ಅತಿ ಬೇಗನೆ ಕೊನೆಗೊಳಿಸಲಿಕ್ಕಾಗಿ ಅಶಾಸ್ತ್ರೀಯವಾದ ಮಾಧ್ಯಮವನ್ನು ಅವಲಂಬಿಸದೆ, ಅದು ಕೊನೆಗೊಳ್ಳುವ ವರೆಗೂ ತಾಳಿಕೊಳ್ಳುವ ಮೂಲಕ ತಾಳ್ಮೆಯು ‘ಸಿದ್ಧಿಗೆ ಬರುವಂತೆ’ ಬಿಡಬೇಕು. ಆಗ ನಮ್ಮ ನಂಬಿಕೆಯು ಪರೀಕ್ಷಿಸಲ್ಪಡುತ್ತದೆ ಮತ್ತು ಪರಿಷ್ಕರಿಸಲ್ಪಡುತ್ತದೆ ಹಾಗೂ ಅದರ ಸಂರಕ್ಷಣಾತ್ಮಕ ಬಲವು ಸುವ್ಯಕ್ತವಾಗುತ್ತದೆ. ಯೋಸೇಫ ಹಾಗೂ ದಾವೀದರಿಗೆ ಈ ರೀತಿಯ ತಾಳ್ಮೆಯಿತ್ತು. ಅವರು ಯೆಹೋವನ ಅಪ್ರಸನ್ನತೆಗೆ ಗುರಿಪಡಿಸಬಹುದಾದಂಥ ರೀತಿಯ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಿಲ್ಲ. ಅದಕ್ಕೆ ಬದಲಾಗಿ, ತಮ್ಮ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ತಮ್ಮಿಂದಾದಷ್ಟು ಮಟ್ಟಿಗೆ ಪ್ರಯತ್ನಿಸಿದರು. ಅವರು ಯೆಹೋವನ ಮೇಲೆ ಆತುಕೊಂಡರು, ಮತ್ತು ಹೀಗೆ ಮಾಡಿದ್ದಕ್ಕಾಗಿ ಅವರಿಗೆ ಎಷ್ಟು ಆಶೀರ್ವಾದಗಳು ಸುರಿಸಲ್ಪಟ್ಟವು! ತನ್ನ ಜನರನ್ನು ಬಿಡಿಸಲಿಕ್ಕಾಗಿ ಮತ್ತು ಮುನ್ನಡೆಸಲಿಕ್ಕಾಗಿ ಯೆಹೋವನು ಅವರಿಬ್ಬರನ್ನೂ ಉಪಯೋಗಿಸಿದನು.—ಆದಿಕಾಂಡ 41:39-41; 45:5; 2 ಸಮುವೇಲ 5:4, 5.
ನಾವು ಸಹ ಅಶಾಸ್ತ್ರೀಯವಾದ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವಂತೆ ನಮ್ಮನ್ನು ಶೋಧನೆಗೊಳಪಡಿಸಸಾಧ್ಯವಿರುವ ಸನ್ನಿವೇಶಗಳನ್ನು ಎದುರಿಸಬಹುದು. ಉದಾಹರಣೆಗೆ, ಇಷ್ಟರ ತನಕ ಒಬ್ಬ ಯೋಗ್ಯ ವಿವಾಹ ಸಂಗಾತಿಯನ್ನು ಕಂಡುಕೊಳ್ಳದಿರುವ ಕಾರಣ ನೀವು ನಿರಾಶೆಗೊಂಡಿದ್ದೀರೋ? ಹಾಗಿರುವಲ್ಲಿ, “ಕರ್ತನಲ್ಲಿ ಮಾತ್ರ” ವಿವಾಹವಾಗುವಂತೆ ಯೆಹೋವನು ಕೊಟ್ಟಿರುವ ಆಜ್ಞೆಗೆ ಅವಿಧೇಯರಾಗಲು ಪ್ರಚೋದಿಸಲ್ಪಡುವ ಯಾವುದೇ ಶೋಧನೆಯಿಂದ ದೂರವಿರಿ. (1 ಕೊರಿಂಥ 7:39, NW) ನಿಮ್ಮ ವಿವಾಹದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದೀರೋ? ಪ್ರತ್ಯೇಕವಾಸ ಹಾಗೂ ವಿವಾಹ ವಿಚ್ಛೇದವನ್ನು ಅನುಮೋದಿಸುವ ಲೋಕದ ಆತ್ಮದ ಪ್ರಭಾವಕ್ಕೆ ಒಳಗಾಗುವುದಕ್ಕೆ ಬದಲಾಗಿ, ಒಂದುಗೂಡಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿರಿ. (ಮಲಾಕಿಯ 2:16; ಎಫೆಸ 5:21-33) ನಿಮ್ಮ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಕುಟುಂಬವನ್ನು ನೋಡಿಕೊಳ್ಳುವುದು ನಿಮಗೆ ಕಷ್ಟಕರವಾಗಿದೆಯೋ? ಯೆಹೋವನ ಮೇಲೆ ಆತುಕೊಳ್ಳುವುದು, ಪ್ರಶ್ನಾರ್ಥಕವಾದ ಅಥವಾ ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳ ಮೂಲಕ ಹಣವನ್ನು ಸಂಪಾದಿಸಲು ಪ್ರಯತ್ನಿಸುವುದರಿಂದ ದೂರವಿರುವುದನ್ನು ಒಳಗೂಡಿದೆ. (ಕೀರ್ತನೆ 37:25; ಇಬ್ರಿಯ 13:18) ಹೌದು, ನಮ್ಮ ಸನ್ನಿವೇಶಗಳನ್ನು ಸದುಪಯೋಗಿಸಿಕೊಳ್ಳಲು ಮತ್ತು ಯೆಹೋವನಿಂದ ಪ್ರತಿಫಲವನ್ನು ಪಡೆದುಕೊಳ್ಳಲು ನಾವೆಲ್ಲರೂ ಬಹಳಷ್ಟು ಶ್ರಮಿಸಬೇಕಾಗಿದೆ. ನಾವು ಹೀಗೆ ಮಾಡುವಾಗ, ಸಂಪೂರ್ಣ ಪರಿಹಾರಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಲು ನಿರ್ಧರಿಸೋಣ.—ಮೀಕ 7:7.
ಯೆಹೋವನು ನಿಮಗೆ ಬೆಂಬಲ ನೀಡುವನು
ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಯೋಸೇಫ ಹಾಗೂ ದಾವೀದರಂಥ ವ್ಯಕ್ತಿಗಳು ನಿರಾಶೆ ಹಾಗೂ ಕಷ್ಟಕರ ಸನ್ನಿವೇಶಗಳನ್ನು ಹೇಗೆ ಯಶಸ್ವಿಕರವಾಗಿ ನಿಭಾಯಿಸಿದರು ಎಂಬುದರ ಕುರಿತು ಧ್ಯಾನಿಸುವುದು, ನಮ್ಮ ಮೇಲೆ ಸಕಾರಾತ್ಮಕವಾದ ಪರಿಣಾಮವನ್ನು ಬೀರುವುದು. ಅವರ ಕಥೆಗಳು ಬೈಬಲಿನ ಕೆಲವೇ ಪುಟಗಳಲ್ಲಿ ವರ್ಣಿಸಲ್ಪಟ್ಟಿರುವುದಾದರೂ, ಅವರ ಪರೀಕ್ಷೆಗಳು ಮಾತ್ರ ಅನೇಕ ವರ್ಷಗಳ ವರೆಗೆ ಮುಂದುವರಿದವು. ಸ್ವತಃ ಹೀಗೆ ಕೇಳಿಕೊಳ್ಳಿ: ‘ದೇವರ ಈ ಸೇವಕರು ಇಂಥ ಸನ್ನಿವೇಶಗಳನ್ನು ಎದುರಿಸಲು ಹೇಗೆ ಶಕ್ತರಾದರು? ಅವರು ತಮ್ಮ ಸಂತೋಷವನ್ನು ಹೇಗೆ ಕಾಪಾಡಿಕೊಂಡರು? ಯಾವ ಗುಣಗಳನ್ನು ಅವರು ಬೆಳೆಸಿಕೊಳ್ಳಬೇಕಾಯಿತು?’
ಯೆಹೋವನ ಆಧುನಿಕ ದಿನದ ಸೇವಕರ ತಾಳ್ಮೆಯನ್ನು ಪರಿಗಣಿಸುವ ಮೂಲಕವೂ ನಾವು ಪ್ರಯೋಜನ ಹೊಂದಬಲ್ಲೆವು. (1 ಪೇತ್ರ 5:9) ಪ್ರತಿ ವರ್ಷ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಅನೇಕ ಜೀವನ ಕಥೆಗಳು ಬರುತ್ತವೆ. ನೀವು ಈ ನಂಬಿಗಸ್ತ ಕ್ರೈಸ್ತರ ಮಾದರಿಗಳ ಕುರಿತು ಓದಿ, ಧ್ಯಾನಿಸುತ್ತೀರೋ? ಅಷ್ಟುಮಾತ್ರವಲ್ಲ, ನಾವು ಹಾಜರಾಗುವ ಸಭೆಗಳಲ್ಲಿ ಅಹಿತಕರ ಸನ್ನಿವೇಶಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಳ್ಳುತ್ತಿರುವವರಿದ್ದಾರೆ. ನೀವು ಸಭಾ ಕೂಟಗಳಲ್ಲಿ ಕ್ರಮವಾಗಿ ಅವರೊಂದಿಗೆ ಸಹವಾಸಮಾಡುತ್ತೀರೊ ಮತ್ತು ಅವರಿಂದ ಪಾಠವನ್ನು ಕಲಿಯುತ್ತೀರೊ?—ಇಬ್ರಿಯ 10:24, 25.
ನೀವು ಪಂಥಾಹ್ವಾನಕರವಾದ ಸನ್ನಿವೇಶಗಳನ್ನು ಎದುರಿಸುವಾಗ, ಯೆಹೋವನು ನಿಮಗೋಸ್ಕರ ಚಿಂತಿಸುತ್ತಾನೆ ಹಾಗೂ ನಿಮಗೆ ಬೆಂಬಲ ನೀಡುತ್ತಾನೆ ಎಂಬ ಆಶ್ವಾಸನೆಯಿಂದಿರಿ. (1 ಪೇತ್ರ 5:6-10) ನಿಮ್ಮ ಸನ್ನಿವೇಶಗಳು ನಿಮ್ಮ ಜೀವಿತವನ್ನು ನಿಯಂತ್ರಿಸುವಂತೆ ಬಿಡದಿರಲು ಸತತವಾಗಿ ಪರಿಶ್ರಮಿಸಿರಿ. ಅಸಮಾಧಾನವನ್ನು ಬಿಟ್ಟುಬಿಡುವ ಮೂಲಕ, ನಿಮ್ಮ ಸನ್ನಿವೇಶವನ್ನು ಸದುಪಯೋಗಿಸಿಕೊಳ್ಳುವ ಮೂಲಕ, ಮತ್ತು ಸಂಪೂರ್ಣ ಪರಿಹಾರಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳುವ ಮೂಲಕ, ಯೋಸೇಫ, ದಾವೀದ, ಹಾಗೂ ಇನ್ನಿತರರ ಮಾದರಿಗಳನ್ನು ಅನುಸರಿಸಿರಿ. ಪ್ರಾರ್ಥನೆ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಆತನಿಗೆ ಸಮೀಪವಾಗಲು ಪ್ರಯತ್ನಿಸಿರಿ. ಈ ರೀತಿಯಲ್ಲಿ, ಕಷ್ಟಕರ ಸಮಯಗಳಲ್ಲಿಯೂ ಆನಂದ ಹಾಗೂ ಸಂತೋಷವು ನಿಮ್ಮದಾಗಬಲ್ಲದು ಎಂಬುದನ್ನು ನೀವೇ ಕಂಡುಕೊಳ್ಳುವಿರಿ.—ಕೀರ್ತನೆ 34:8.
[ಪುಟ 20, 21ರಲ್ಲಿರುವ ಚಿತ್ರ]
ಯೋಸೇಫನು ತನ್ನ ಸನ್ನಿವೇಶಗಳನ್ನು ಸದುಪಯೋಗಿಸಿಕೊಂಡನು
[ಪುಟ 23ರಲ್ಲಿರುವ ಚಿತ್ರ]
ದಾವೀದನು ತನ್ನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಿಕ್ಕಾಗಿ ಯೆಹೋವನ ಮೇಲೆ ಆತುಕೊಂಡನು