“ನಾವು ನಿಮ್ಮೊಂದಿಗೆ ಬರುವೆವು”
“ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ.”—ಜೆಕ. 8:23.
1, 2. (ಎ) ನಮ್ಮ ಸಮಯದ ಕುರಿತು ಯೆಹೋವನು ಏನನ್ನು ಮುಂತಿಳಿಸಿದನು? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ? (ಲೇಖನದ ಆರಂಭದ ಚಿತ್ರ ನೋಡಿ.)
ಯೆಹೋವನು ಪ್ರವಾದಿ ಜೆಕರ್ಯನ ಮೂಲಕ ನಮ್ಮ ಸಮಯದ ಬಗ್ಗೆ ಮುಂತಿಳಿಸಿದ್ದು: “ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕ. 8:23) ಇಲ್ಲಿ ತಿಳಿಸಿರುವ ‘ಯೆಹೂದ್ಯನು’ ಯಾರನ್ನು ಸೂಚಿಸುತ್ತಾನೆ? ದೇವರು ಪವಿತ್ರಾತ್ಮದಿಂದ ಅಭಿಷೇಕಿಸಿರುವವರನ್ನು. ಇವರಿಗೆ ‘ದೇವರ ಇಸ್ರಾಯೇಲ್ಯರು’ ಎಂಬ ಹೆಸರೂ ಇದೆ. (ಗಲಾ. 6:16) ಆ “ಹತ್ತು ಜನರು” ಭೂಮಿಯ ಮೇಲೆ ಸದಾ ಜೀವಿಸುವ ನಿರೀಕ್ಷೆಯುಳ್ಳವರನ್ನು ಸೂಚಿಸುತ್ತಾರೆ. ಇವರು ಅಭಿಷಿಕ್ತರ ಗುಂಪನ್ನು ಯೆಹೋವನು ಆಶೀರ್ವದಿಸಿದ್ದಾನೆಂದು ತಿಳಿದಿದ್ದಾರೆ ಮತ್ತು ಐಕ್ಯದಿಂದ ಅಭಿಷಿಕ್ತರ ಜೊತೆ ಸೇರಿ ಯೆಹೋವನನ್ನು ಆರಾಧಿಸಲು ಹೆಮ್ಮೆಪಡುತ್ತಾರೆ.
2 ದೇವಜನರ ಈ ಐಕ್ಯದ ಕುರಿತು ಯೇಸು ಸಹ ಹೇಳಿದ್ದಾನೆ. ಸ್ವರ್ಗದಲ್ಲಿ ಜೀವಿಸಲಿರುವವರನ್ನು ‘ಚಿಕ್ಕ ಹಿಂಡು’ ಎಂದು, ಭೂಮಿ ಮೇಲೆ ಜೀವಿಸಲಿರುವವರನ್ನು ‘ಬೇರೆ ಕುರಿಗಳು’ ಎಂದು ಅವನು ಕರೆದನು. ಈ ಎರಡೂ ಗುಂಪಿನವರು ‘ಒಂದೇ ಹಿಂಡು’ ಆಗಿರುವರು ಮತ್ತು ‘ಒಬ್ಬನೇ ಕುರುಬನಾಗಿರುವ’ ತನ್ನನ್ನು ಹಿಂಬಾಲಿಸುವರು ಎಂದೂ ಯೇಸು ಹೇಳಿದನು. (ಲೂಕ 12:32; ಯೋಹಾ. 10:16) ಹೀಗೆ ಎರಡು ಗುಂಪುಗಳು ಇರುವುದರಿಂದ ಕೆಲವರ ಮನಸ್ಸಲ್ಲಿ ಈ ಪ್ರಶ್ನೆಗಳು ಏಳಬಹುದು: (1) ಬೇರೆ ಕುರಿಗಳ ಗುಂಪಿನಲ್ಲಿರುವವರಿಗೆ ಇಂದಿರುವ ಎಲ್ಲ ಅಭಿಷಿಕ್ತರ ಹೆಸರುಗಳು ಗೊತ್ತಿರಬೇಕಾ? (2) ಅಭಿಷಿಕ್ತರಿಗೆ ತಮ್ಮ ಬಗ್ಗೆ ಯಾವ ಮನೋಭಾವ ಇರಬೇಕು? (3) ನನ್ನ ಸಭೆಯಲ್ಲಿ ಯಾರಾದರೂ ಸ್ಮರಣೆಯ ಸಮಯದಲ್ಲಿ ರೊಟ್ಟಿ, ದ್ರಾಕ್ಷಾಮದ್ಯವನ್ನು ಹೊಸದಾಗಿ ಸೇವಿಸಲಾರಂಭಿಸಿದರೆ ನಾನು ಅವರನ್ನು ಹೇಗೆ ಕಾಣಬೇಕು? (4) ಸ್ಮರಣೆಯ ಸಮಯದಲ್ಲಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿ ನನಗೆ ಚಿಂತೆಯಾಗಬೇಕಾ? ಉತ್ತರ ನೋಡೋಣ.
ಇಂದಿರುವ ಎಲ್ಲ ಅಭಿಷಿಕ್ತರ ಹೆಸರುಗಳು ನಮಗೆ ಗೊತ್ತಿರಬೇಕಾ?
3. ಯಾರೆಲ್ಲ 1,44,000 ಮಂದಿಯಲ್ಲಿ ಇರುವರೆಂದು ನಾವೇಕೆ ಖಚಿತವಾಗಿ ಹೇಳಲಾರೆವು?
3 ಬೇರೆ ಕುರಿಗಳ ಗುಂಪಿಗೆ ಇಂದು ಭೂಮಿಯಲ್ಲಿರುವ ಎಲ್ಲ ಅಭಿಷಿಕ್ತರ ಹೆಸರುಗಳು ಗೊತ್ತಿರಬೇಕಾ? ಇಲ್ಲ. ಯಾಕೆ? ಯಾಕೆಂದರೆ ಅವರಿಗೆ ಸ್ವರ್ಗಕ್ಕೆ ಹೋಗುವ ಬಹುಮಾನ ಖಂಡಿತ ಸಿಗುತ್ತದೆಂದು ಯಾರಿಂದಲೂ ಹೇಳಸಾಧ್ಯವಿಲ್ಲ.[1] (ಕೊನೆ ಟಿಪ್ಪಣಿ ನೋಡಿ.) ದೇವರು ಅವರಿಗೆ ಸ್ವರ್ಗಕ್ಕೆ ಹೋಗಲು ಕರೆಕೊಟ್ಟಿದ್ದಾನೆ ನಿಜ. ಆದರೆ ಅವರಿಗೆ ಆ ಬಹುಮಾನ ಸಿಗುವುದು ನಂಬಿಗಸ್ತರಾಗಿ ಉಳಿದರೆ ಮಾತ್ರ. ಇದು ಸೈತಾನನಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವರು ಆ ಬಹುಮಾನ ಕಳಕೊಳ್ಳುವಂತೆ ಮಾಡಲಿಕ್ಕಾಗಿ ಅವನು ‘ಸುಳ್ಳು ಪ್ರವಾದಿಗಳ’ ಮೂಲಕ ‘ತಪ್ಪುದಾರಿಗೆ ಎಳೆಯಲು’ ಪ್ರಯತ್ನಿಸುತ್ತಾನೆ. (ಮತ್ತಾ. 24:24) ಅಭಿಷಿಕ್ತ ಕ್ರೈಸ್ತರು ನಂಬಿಗಸ್ತರೆಂದು ಯೆಹೋವನಿಂದ ತೀರ್ಪು ಹೊಂದುವ ವರೆಗೂ ಆ ಬಹುಮಾನ ಸಿಗುವುದೆಂದು ಅವರಿಗೇ ಖಚಿತವಾಗಿ ಗೊತ್ತಿರುವುದಿಲ್ಲ. ಈ ತೀರ್ಪನ್ನೇ ಕೊನೆಯ ಮುದ್ರೆಯೊತ್ತುವಿಕೆ ಅಂದರೆ ಕೊನೆಯ ಒಪ್ಪಿಗೆ ಎಂದು ಹೇಳಲಾಗುತ್ತದೆ. ಯೆಹೋವನು ಇದನ್ನು ಅವರಿಗೆ ಕೊಡುವುದು ಅವರು ಸಾಯುವ ಮುಂಚೆ ಇಲ್ಲವೇ “ಮಹಾ ಸಂಕಟ” ಆರಂಭವಾಗುವ ಸ್ವಲ್ಪ ಮುಂಚೆ.—ಪ್ರಕ. 2:10; 7:3, 14.
4. ಇಂದು ಭೂಮಿಯಲ್ಲಿರುವ ಎಲ್ಲ ಅಭಿಷಿಕ್ತರ ಹೆಸರುಗಳನ್ನು ತಿಳಿಯಲು ಸಾಧ್ಯವಿಲ್ಲವಾದರೆ “ನಾವು ನಿಮ್ಮೊಂದಿಗೆ ಬರುವೆವು” ಎಂದು ಹೇಗೆ ಹೇಳಬಲ್ಲೆವು?
4 ಇಂದು ಭೂಮಿಯಲ್ಲಿರುವ ಎಲ್ಲ ಅಭಿಷಿಕ್ತರ ಹೆಸರುಗಳನ್ನು ತಿಳಿಯಲು ಆಗದಿದ್ದರೆ ಬೇರೆ ಕುರಿಗಳು “ನಾವು ನಿಮ್ಮೊಂದಿಗೆ ಬರುವೆವು” ಎಂಬ ಮಾತನ್ನು ಪಾಲಿಸುವುದಾದರೂ ಹೇಗೆ? ಬೈಬಲ್ ಹೇಳುವುದನ್ನು ಇನ್ನೊಮ್ಮೆ ಗಮನಿಸಿ: “ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” ಈ ವಚನ ಒಬ್ಬ ಯೆಹೂದ್ಯನ ಬಗ್ಗೆ ತಿಳಿಸುವುದಾದರೂ, “ನಿಮ್ಮೊಂದಿಗೆ” ಮತ್ತು “ನಿಮ್ಮ” ಎಂಬ ಬಹುವಚನವನ್ನು ಬಳಸುತ್ತದೆ. ಇದು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳಿಗೆ ಸೂಚಿಸುತ್ತದೆ. ಇದರರ್ಥ ಆ ಯೆಹೂದ್ಯನು ಬರೀ ಒಬ್ಬ ವ್ಯಕ್ತಿಯನ್ನಲ್ಲ ಬದಲಾಗಿ ಅಭಿಷಿಕ್ತರ ಇಡೀ ಗುಂಪನ್ನು ಸೂಚಿಸುತ್ತಾನೆ. ಬೇರೆ ಕುರಿಗಳಿಗೆ ಇದು ತಿಳಿದಿರುವುದರಿಂದ ಆ ಗುಂಪಿನೊಂದಿಗೆ ಸೇರಿ ಯೆಹೋವನ ಸೇವೆ ಮಾಡುತ್ತಾರೆ. ಈ ಅರ್ಥದಲ್ಲಿ “ನಿಮ್ಮೊಂದಿಗೆ ಬರುವೆವು” ಎಂದು ಹೇಳುತ್ತಾರೆ. ನಮ್ಮ ನಾಯಕನು ಯೇಸು ಮಾತ್ರ. ನಾವು ಆತನೊಬ್ಬನನ್ನೇ ಹಿಂಬಾಲಿಸಬೇಕೆಂದು ಬೈಬಲ್ ಹೇಳುತ್ತದೆ. (ಮತ್ತಾ. 23:10) ಹಾಗಾಗಿ ಆ ಗುಂಪಿನಲ್ಲಿರುವ ಒಬ್ಬೊಬ್ಬನ ಹೆಸರನ್ನು ತಿಳಿದು, ಅವನನ್ನು ಹಿಂಬಾಲಿಸಬೇಕಾಗಿಲ್ಲ.
ಅಭಿಷಿಕ್ತರಿಗೆ ತಮ್ಮ ಬಗ್ಗೆ ಯಾವ ಮನೋಭಾವ ಇರಬೇಕು?
5. ಅಭಿಷಿಕ್ತ ಕ್ರೈಸ್ತರು ಯಾವ ಎಚ್ಚರಿಕೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು? ಏಕೆ?
5 ಅಭಿಷಿಕ್ತರು 1 ಕೊರಿಂಥ 11:27-29ರಲ್ಲಿ (ಓದಿ) ಕೊಡಲಾಗಿರುವ ಎಚ್ಚರಿಕೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಅಭಿಷಿಕ್ತ ವ್ಯಕ್ತಿ ಸ್ಮರಣೆಯ ಸಮಯದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು “ಅಯೋಗ್ಯವಾಗಿ” ಸೇವಿಸುವ ಬಗ್ಗೆ ಅಲ್ಲಿ ಹೇಳಲಾಗಿದೆ. ಅದು ಹೇಗೆ ಸಾಧ್ಯ? ಅವನು ಯೆಹೋವನೊಂದಿಗೆ ಒಳ್ಳೇ ಸಂಬಂಧ ಇಡದೆ, ಅಪನಂಬಿಗಸ್ತನಾಗಿದ್ದು ರೊಟ್ಟಿ ಮತ್ತು ದ್ರಾಕ್ಷಾಮದ್ಯ ಸೇವಿಸಿದರೆ ಅಯೋಗ್ಯವಾಗಿ ಸೇವಿಸುತ್ತಾನೆ ಅಂದರೆ ಅಗೌರವ ತೋರಿಸುತ್ತಿದ್ದಾನೆ ಎಂದರ್ಥ. (ಇಬ್ರಿ. 6:4-6; 10:26-29) ಈ ತೀಕ್ಷ್ಣ ಎಚ್ಚರಿಕೆಯು ಅಭಿಷಿಕ್ತರಿಗೆ ಏನು ನೆನಪುಹುಟ್ಟಿಸುತ್ತದೆ? “ಕ್ರಿಸ್ತ ಯೇಸುವಿನ ಮೂಲಕ ದೇವರು ಕೊಡುವ ಮೇಲಣ ಕರೆಯ ಬಹುಮಾನ” ಪಡೆಯಲಿಕ್ಕಾಗಿ ಅವರು ನಂಬಿಗಸ್ತರಾಗಿ ಉಳಿಯಲೇಬೇಕು.—ಫಿಲಿ. 3:13-16.
6. ಅಭಿಷಿಕ್ತರಿಗೆ ತಮ್ಮ ಬಗ್ಗೆ ಯಾವ ಮನೋಭಾವ ಇರಬೇಕು?
6 “ನಿಮಗೆ ಕೊಡಲ್ಪಟ್ಟ ಕರೆಗೆ ಯೋಗ್ಯರಾಗಿ ನಡೆದುಕೊಳ್ಳುವಂತೆ ಕರ್ತನಲ್ಲಿ ಸೆರೆಯವನಾಗಿರುವ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎಂದು ಪೌಲನು ಅಭಿಷಿಕ್ತ ಕ್ರೈಸ್ತರಿಗೆ ಅಂದನು. ಅವರು ಹೇಗೆ ಯೋಗ್ಯರಾಗಿ ನಡೆದುಕೊಳ್ಳಬೇಕಿತ್ತು? ಪೌಲನೇ ವಿವರಿಸಿದ್ದು: “ನೀವು ಪೂರ್ಣ ದೀನಮನಸ್ಸಿನಿಂದಲೂ ಸೌಮ್ಯಭಾವದಿಂದಲೂ ದೀರ್ಘ ಸಹನೆಯಿಂದಲೂ ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸುವವರಾಗಿರಿ.” (ಎಫೆ. 4:1-3) ಯೆಹೋವನ ಸೇವಕರು ಅಹಂಕಾರಿಗಳಾಗಿರದೆ ದೀನರಾಗಿರಲು ಪವಿತ್ರಾತ್ಮವು ಸಹಾಯಮಾಡುತ್ತದೆ. (ಕೊಲೊ. 3:12) ಆದ್ದರಿಂದ ಭೂಮಿ ಮೇಲೆ ಜೀವಿಸುವ ನಿರೀಕ್ಷೆಯುಳ್ಳವರಿಗಿಂತ ತಾವು ಶ್ರೇಷ್ಠರೆಂದು ಅಭಿಷಿಕ್ತರು ನೆನಸುವುದಿಲ್ಲ. ಯೆಹೋವನು ಇತರ ಸೇವಕರಿಗಿಂತ ತಮಗೆ ಹೆಚ್ಚು ಪವಿತ್ರಾತ್ಮ ಕೊಡುವುದಿಲ್ಲವೆಂದು ಅವರಿಗೆ ಗೊತ್ತು. ಬೈಬಲ್ ಸತ್ಯಗಳು ಬೇರೆಯವರಿಗಿಂತ ತಮಗೆ ಹೆಚ್ಚು ಚೆನ್ನಾಗಿ ಅರ್ಥವಾಗುತ್ತದೆಂಬ ಭಾವನೆಯೂ ಅವರಿಗೆ ಇರುವುದಿಲ್ಲ. ‘ನೀವು ಅಭಿಷಿಕ್ತರು, ಸ್ಮರಣೆಯ ಸಮಯದಲ್ಲಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸಬೇಕು’ ಅಂತ ಬೇರೆಯವರಿಗೆ ಯಾವತ್ತೂ ಹೇಳುವುದಿಲ್ಲ. ಸ್ವರ್ಗಕ್ಕೆ ಹೋಗುವಂತೆ ಕರೆಕೊಡುವವನು ಯೆಹೋವನು ಮಾತ್ರವೆಂದು ದೀನತೆಯಿಂದ ಒಪ್ಪಿಕೊಳ್ಳುತ್ತಾರೆ.
7, 8. ಅಭಿಷಿಕ್ತ ಕ್ರೈಸ್ತರು ಏನನ್ನು ಅಪೇಕ್ಷಿಸುವುದಿಲ್ಲ? ಏಕೆ?
7 ಸ್ವರ್ಗಕ್ಕೆ ಹೋಗಲು ಕರೆ ಸಿಕ್ಕಿರುವುದು ದೊಡ್ಡ ಸೌಭಾಗ್ಯವೆಂದು ಅಭಿಷಿಕ್ತರಿಗೆ ಅನಿಸುತ್ತದೆಯಾದರೂ ತಮಗೆ ವಿಶೇಷ ಮಾನಮರ್ಯಾದೆ ಸಿಗಬೇಕೆಂದು ಅವರು ಅಪೇಕ್ಷಿಸುವುದಿಲ್ಲ. (ಎಫೆ. 1:18, 19; ಫಿಲಿಪ್ಪಿ 2:2, 3 ಓದಿ.) ಯೆಹೋವನು ತಮ್ಮನ್ನು ಅಭಿಷೇಕಿಸಿದಾಗ ಅದನ್ನು ಎಲ್ಲರಿಗೂ ಗೊತ್ತಾಗುವಂಥ ರೀತಿಯಲ್ಲಿ ಮಾಡಲಿಲ್ಲವೆಂದು ಅವರಿಗೆ ಗೊತ್ತು. ಹಾಗಾಗಿ ತಾವು ಅಭಿಷಿಕ್ತರೆಂದು ಬೇರೆಯವರು ಕೂಡಲೇ ನಂಬದಿದ್ದರೆ ಅವರಿಗೆ ಆಶ್ಚರ್ಯವಾಗುವುದಿಲ್ಲ. ದೇವರು ತನಗೆ ವಿಶೇಷ ಜವಾಬ್ದಾರಿ ಕೊಟ್ಟಿದ್ದಾನೆಂದು ಯಾರಾದರೂ ಹೇಳಿಕೊಂಡರೆ ತಕ್ಷಣ ನಂಬಿಬಿಡಬಾರದೆಂದು ಬೈಬಲೇ ಹೇಳುತ್ತದೆ ಎನ್ನುವುದನ್ನು ಆ ಅಭಿಷಿಕ್ತನು ಮನಸ್ಸಿನಲ್ಲಿಡುತ್ತಾನೆ. (ಪ್ರಕ. 2:2) ಅಲ್ಲದೆ, ತನ್ನನ್ನು ಬೇರೆಯವರಿಗೆ ಪರಿಚಯಿಸಿಕೊಳ್ಳುವಾಗ ‘ನಾನು ಅಭಿಷಿಕ್ತನು’ ಎಂದು ಹೇಳುವುದಿಲ್ಲ ಏಕೆಂದರೆ ಬೇರೆಯವರು ತನಗೆ ವಿಶೇಷ ಗಮನ ಕೊಡುವಂತೆ ಅವನು ಅಪೇಕ್ಷಿಸುವುದಿಲ್ಲ. ಬಹುಶಃ ತನ್ನ ಅಭಿಷೇಕದ ಕುರಿತು ಯಾರಿಗೂ ತಿಳಿಸುವುದೂ ಇಲ್ಲ. ತಾನು ಮುಂದೆ ಸ್ವರ್ಗಕ್ಕೆ ಹೋದಾಗ ‘ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ’ ಎಂದು ಕೊಚ್ಚಿಕೊಳ್ಳುವುದೂ ಇಲ್ಲ.—1 ಕೊರಿಂ. 1:28, 29; 1 ಕೊರಿಂಥ 4:6-8 ಓದಿ.
8 ಅಭಿಷಿಕ್ತ ಕ್ರೈಸ್ತರು ಬೇರೆ ಅಭಿಷಿಕ್ತರ ಜೊತೆ ಮಾತ್ರ ಸಮಯ ಕಳೆಯುವುದಿಲ್ಲ. ತಾವೆಲ್ಲರೂ ಒಂದೇ ಕ್ಲಬ್ಗೆ ಸೇರಿದ ಸದಸ್ಯರೋ ಎಂಬಂತೆ ನಡೆದುಕೊಳ್ಳುವುದಿಲ್ಲ. ಅಭಿಷಿಕ್ತರಾಗಿರುವ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿಕ್ಕೆ ಬೇರೆ ಅಭಿಷಿಕ್ತರನ್ನು ಹುಡುಕಿಕೊಂಡು ಹೋಗುವುದಿಲ್ಲ. ಇಲ್ಲವೇ ಬೈಬಲಿನ ಅಧ್ಯಯನಮಾಡಲು ತಮ್ಮದೇ ಆದ ಗುಂಪು ಕಟ್ಟಿಕೊಳ್ಳುವುದಿಲ್ಲ. (ಗಲಾ. 1:15-17) ಅಭಿಷಿಕ್ತರು ಇದೆಲ್ಲ ಮಾಡಿದರೆ ಸಭೆಯಲ್ಲಿ ಐಕ್ಯ ಇರುವುದಿಲ್ಲ. ದೇವಜನರಿಗೆ ಶಾಂತಿ ಐಕ್ಯದಿಂದಿರಲು ಸಹಾಯಮಾಡುವ ಪವಿತ್ರಾತ್ಮದ ವಿರುದ್ಧ ನಡೆದಂತಾಗುವುದು!—ರೋಮನ್ನರಿಗೆ 16:17, 18 ಓದಿ.
ನೀವು ಅವರನ್ನು ಹೇಗೆ ಕಾಣಬೇಕು?
9. ಅಭಿಷಿಕ್ತರನ್ನು ನಾವು ಹೇಗೆ ಕಾಣುತ್ತೇವೆಂಬುದರ ಬಗ್ಗೆ ಏಕೆ ಜಾಗ್ರತೆ ವಹಿಸಬೇಕು? (“ಪ್ರೀತಿ ‘ಅಸಭ್ಯವಾಗಿ ವರ್ತಿಸುವುದಿಲ್ಲ’” ಚೌಕ ನೋಡಿ.)
9 ಅಭಿಷಿಕ್ತ ಸಹೋದರ ಸಹೋದರಿಯರನ್ನು ನೀವು ಹೇಗೆ ಕಾಣಬೇಕು? “ನೀವೆಲ್ಲರೂ ಸಹೋದರರು” ಎಂದು ಯೇಸು ಶಿಷ್ಯರಿಗೆ ಹೇಳಿದನು. ಅವನು ಮುಂದುವರಿಸಿ ಹೇಳಿದ್ದು: “ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” (ಮತ್ತಾ. 23:8-12) ಹಾಗಾಗಿ ಯಾವುದೇ ವ್ಯಕ್ತಿಯನ್ನು ತೀರ ಹೆಚ್ಚು ಅಭಿಮಾನದಿಂದ ಕಾಣುವುದು ತಪ್ಪು. ಅವರು ಕ್ರಿಸ್ತನ ಅಭಿಷಿಕ್ತ ಸಹೋದರರೇ ಆಗಿದ್ದರೂ ಹಾಗೆ ಮಾಡಬಾರದು. ಬೈಬಲು ನಮಗೆ ಹಿರಿಯರ ನಂಬಿಕೆಯನ್ನು ಅನುಕರಿಸಬೇಕೆಂದು ಹೇಳುತ್ತದೆ ನಿಜ. ಆದರೆ ಯಾವ ಮಾನವನನ್ನೂ ನಮ್ಮ ನಾಯಕನಾಗಿ ಮಾಡಿಕೊಳ್ಳಬಹುದೆಂದು ಹೇಳುವುದಿಲ್ಲ. (ಇಬ್ರಿ. 13:7) ಹಾಗಾದರೆ ಸಭೆಯಲ್ಲಿ ಕೆಲವರು “ಇಮ್ಮಡಿಯಾದ ಗೌರವಕ್ಕೆ ಯೋಗ್ಯರಾದವರೆಂದು” ಬೈಬಲ್ ಏಕೆ ಹೇಳುತ್ತದೆ? ಅವರು ಅಭಿಷಿಕ್ತರಾಗಿರುವ ಕಾರಣಕ್ಕಲ್ಲ ಬದಲಾಗಿ ಅವರು ‘ಒಳ್ಳೇ ರೀತಿಯಲ್ಲಿ ಅಧ್ಯಕ್ಷತೆ ವಹಿಸುವುದರಿಂದ, ವಾಕ್ಯದ ಕುರಿತು ಮಾತಾಡುವುದರಲ್ಲಿ ಹಾಗೂ ಬೋಧಿಸುವುದರಲ್ಲಿ ಶ್ರಮಪಟ್ಟು ಕೆಲಸಮಾಡುವುದರಿಂದ.’ (1 ತಿಮೊ. 5:17) ನಾವು ಅಭಿಷಿಕ್ತರಿಗೆ ಅತಿಯಾಗಿ ಆದರಸತ್ಕಾರ ಮಾಡುತ್ತಾ, ತುಂಬ ಹೊಗಳಿದರೆ ಅವರನ್ನು ಮುಜುಗರಕ್ಕೀಡು ಮಾಡುತ್ತೇವೆ. ಇನ್ನೂ ಕೆಟ್ಟದ್ದೇನೆಂದರೆ, ಅವರಲ್ಲಿ ಅಹಂಕಾರ ಹುಟ್ಟಲು ನಾವು ಕಾರಣರಾಗಬಹುದು. (ರೋಮ. 12:3) ಕ್ರಿಸ್ತನ ಅಭಿಷಿಕ್ತ ಸಹೋದರರಲ್ಲಿ ಯಾರಾದರೊಬ್ಬರು ಇಂಥ ಗಂಭೀರ ತಪ್ಪುಮಾಡಲು ಕಾರಣವಾಗುವ ಏನನ್ನೂ ನಾವು ಮಾಡಬಾರದು!—ಲೂಕ 17:2.
10. ಅಭಿಷಿಕ್ತರಿಗೆ ನಾವು ಹೇಗೆ ಗೌರವ ತೋರಿಸಬಹುದು?
10 ಹಾಗಾದರೆ ಅಭಿಷಿಕ್ತರಿಗೆ ನಾವು ಹೇಗೆ ಗೌರವ ತೋರಿಸಬಹುದು? ‘ನೀವು ಹೇಗೆ ಅಭಿಷಿಕ್ತರಾದಿರಿ?’ ಎಂದೆಲ್ಲ ಅವರಿಗೆ ಕೇಳಲಿಕ್ಕೆ ಹೋಗಬಾರದು. ಯಾಕೆಂದರೆ ಅದೊಂದು ವೈಯಕ್ತಿಕ ವಿಷಯ. ಅದನ್ನು ತಿಳಿಯುವ ಹಕ್ಕು ನಮಗಿಲ್ಲ. (1 ಥೆಸ. 4:11; 2 ಥೆಸ. 3:11) ಅಭಿಷಿಕ್ತ ವ್ಯಕ್ತಿಯ ಗಂಡ, ಹೆಂಡತಿ, ಹೆತ್ತವರು, ಕುಟುಂಬದವರು ಸಹ ಅಭಿಷಿಕ್ತರೆಂದು ನಾವು ನೆನಸಬಾರದು. ಒಬ್ಬ ವ್ಯಕ್ತಿಗೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆ ವಂಶಪರಂಪರೆಯಾಗಿ ಬರುವುದಿಲ್ಲ. (1 ಥೆಸ. 2:12) ಅಲ್ಲದೆ, ಅಭಿಷಿಕ್ತ ವ್ಯಕ್ತಿಯ ಗಂಡ/ಹೆಂಡತಿಗೆ ಮನನೋಯಿಸುವ ಪ್ರಶ್ನೆಗಳನ್ನೂ ಕೇಳಬಾರದು. ಉದಾಹರಣೆಗೆ, ಅಭಿಷಿಕ್ತ ಸಹೋದರನ ಹೆಂಡತಿಗೆ ‘ಹೊಸ ಲೋಕದಲ್ಲಿ ನಿಮ್ಮ ಗಂಡ ನಿಮ್ಮ ಜೊತೆ ಇರೋದಿಲ್ವಲ್ಲ, ಅವರಿಲ್ಲದೆ ಭೂಮಿ ಮೇಲೆ ಸದಾಕಾಲ ಜೀವಿಸುವುದರ ಬಗ್ಗೆ ಯೋಚಿಸುವಾಗ ಹೇಗನಿಸುತ್ತದೆ?’ ಎಂದೆಲ್ಲ ಕೇಳಬಾರದು. ಹೊಸ ಲೋಕದಲ್ಲಿ ಯೆಹೋವನು ‘ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುವನು’ ಎಂಬ ಪೂರ್ಣ ಖಾತ್ರಿ ನಮಗಿದೆ.—ಕೀರ್ತ. 145:16.
11. ನಾವು ‘ವ್ಯಕ್ತಿಗಳನ್ನು ಹೊಗಳುವುದರಿಂದ’ ದೂರವಿದ್ದರೆ ಅದು ಹೇಗೆ ನಮಗೆ ಸಂರಕ್ಷಣೆ ಆಗಿರುತ್ತದೆ?
11 ನಾವು ಅಭಿಷಿಕ್ತರನ್ನು ಬೇರೆಯವರಿಗಿಂತ ಹೆಚ್ಚು ಶ್ರೇಷ್ಠರೆಂಬಂತೆ ಕಾಣದಿದ್ದರೆ ಅದರಿಂದ ನಮಗೇ ಸಂರಕ್ಷಣೆ! ಹೇಗೆ? ಸಭೆಯಲ್ಲಿ ‘ಸುಳ್ಳು ಸಹೋದರರು’ ಇರಬಹುದು, ಅವರು ತಾವು ಅಭಿಷಿಕ್ತರೆಂದೂ ಹೇಳಿಕೊಳ್ಳಬಹುದೆಂದು ಬೈಬಲ್ ಹೇಳುತ್ತದೆ. (ಗಲಾ. 2:4, 5; 1 ಯೋಹಾ. 2:19) ಅಲ್ಲದೆ, ಅಭಿಷಿಕ್ತರಲ್ಲಿ ಕೆಲವರು ಕೊನೆ ತನಕ ನಂಬಿಗಸ್ತರಾಗಿ ಉಳಿಯಲಿಕ್ಕಿಲ್ಲ. (ಮತ್ತಾ. 25:10-12; 2 ಪೇತ್ರ 2:20, 21) ನಾವು ‘ವ್ಯಕ್ತಿಗಳನ್ನು ಹೊಗಳಬಾರದು.’ ಅವರು ಅಭಿಷಿಕ್ತರಾಗಿರಲಿ, ಸಂಘಟನೆಯಲ್ಲಿ ಹೆಸರುವಾಸಿಗಳಾಗಿರಲಿ, ತುಂಬ ಸಮಯದಿಂದ ಯೆಹೋವನ ಸೇವೆಮಾಡುವವರಾಗಿರಲಿ ನಾವು ಅವರನ್ನು ಹಿಂಬಾಲಿಸಬಾರದು. ಹೀಗೆ ಮಾಡುವುದರ ಪ್ರಯೋಜನವೇನೆಂದರೆ ಒಂದುವೇಳೆ ಇವರು ಅಪನಂಬಿಗಸ್ತರಾದರೆ, ಸಭೆಯನ್ನು ಬಿಟ್ಟುಹೋದರೆ ನಾವು ಯೆಹೋವನ ಮೇಲಿನ ನಂಬಿಕೆ ಕಳಕೊಳ್ಳುವುದಿಲ್ಲ, ಆತನ ಸೇವೆಯನ್ನೂ ನಿಲ್ಲಿಸುವುದಿಲ್ಲ.—ಯೂದ 16.
ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ನಮಗೆ ಚಿಂತೆಯಾಗಬೇಕಾ?
12, 13. ಸ್ಮರಣೆಯ ಸಮಯದಲ್ಲಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸುವವರ ಸಂಖ್ಯೆಯ ಬಗ್ಗೆ ನಮಗೇಕೆ ಚಿಂತೆಯಾಗಬಾರದು?
12 ಸ್ಮರಣೆಯ ಸಮಯದಲ್ಲಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸುವವರ ಸಂಖ್ಯೆ ಹಲವಾರು ವರ್ಷಗಳಿಂದ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಇತ್ತೀಚೆಗೆ ಆ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಾ ಇದೆ. ಇದರ ಬಗ್ಗೆ ನಮಗೆ ಚಿಂತೆಯಾಗಬೇಕಾ? ಇಲ್ಲ. ಯಾಕೆಂದು ನೋಡೋಣ.
13 “ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ.” (2 ತಿಮೊ. 2:19) ಸ್ಮರಣೆಯ ಸಮಯದಲ್ಲಿ ಎಷ್ಟು ಮಂದಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸುತ್ತಾರೆಂದು ಸಹೋದರರು ಲೆಕ್ಕಮಾಡಿ ವರದಿಸುತ್ತಾರೆ. ಆದರೆ ಯಾರು ನಿಜವಾಗಿ ಅಭಿಷಿಕ್ತರು ಎಂಬುದು ಈ ಸಹೋದರರಿಗೆ ತಿಳಿದಿಲ್ಲ. ಅದು ಯೆಹೋವನಿಗೆ ಮಾತ್ರ ಗೊತ್ತು. ಹಾಗಾಗಿ ಆ ಸಂಖ್ಯೆಯಲ್ಲಿ ತಾವು ಅಭಿಷಿಕ್ತರೆಂದು ನೆನಸುವ ಆದರೆ ನಿಜವಾಗಿ ಅಭಿಷಿಕ್ತರಲ್ಲದವರ ಸಂಖ್ಯೆಯೂ ಸೇರಿರುತ್ತದೆ. ಉದಾಹರಣೆಗೆ, ರೊಟ್ಟಿ ದ್ರಾಕ್ಷಾಮದ್ಯ ಸೇವಿಸುತ್ತಿದ್ದ ಕೆಲವರು ಸಮಯಾನಂತರ ಅದನ್ನು ನಿಲ್ಲಿಸಿ ಬಿಟ್ಟರು. ಇನ್ನೂ ಕೆಲವರಿಗೆ ಮಾನಸಿಕ ಇಲ್ಲವೇ ಭಾವನಾತ್ಮಕ ಸಮಸ್ಯೆಗಳು ಇರುವುದರಿಂದ ತಾವು ಸ್ವರ್ಗದಲ್ಲಿ ಕ್ರಿಸ್ತನೊಟ್ಟಿಗೆ ಆಳಲಿದ್ದೇವೆಂಬುದು ಅವರ ಅನಿಸಿಕೆ. ಹಾಗಾಗಿ ನಿಜವಾಗಿ ಅಭಿಷಿಕ್ತರಾಗಿರುವವರು ಈಗ ಭೂಮಿ ಮೇಲೆ ಎಷ್ಟು ಮಂದಿ ಉಳಿದಿದ್ದಾರೆಂದು ನಮಗೆ ಸರಿಯಾಗಿ ಗೊತ್ತಿಲ್ಲ.
14. ಮಹಾ ಸಂಕಟ ಆರಂಭವಾಗುವ ಸಮಯದಲ್ಲಿ ಭೂಮಿ ಮೇಲಿರುವ ಅಭಿಷಿಕ್ತರ ಸಂಖ್ಯೆಯ ಬಗ್ಗೆ ಬೈಬಲ್ ಏನು ಹೇಳುತ್ತದೆ?
14 ಯೇಸು ಅಭಿಷಿಕ್ತರನ್ನು ಸ್ವರ್ಗಕ್ಕೆ ಕೊಂಡೊಯ್ಯಲು ಬರುವಾಗ ಭೂಮಿಯ ಅನೇಕ ಭಾಗಗಳಲ್ಲಿ ಅಭಿಷಿಕ್ತರು ಇರುವರು. ಯೇಸು “ತುತೂರಿಯ ಮಹಾ ಶಬ್ದದೊಂದಿಗೆ ತನ್ನ ದೂತರನ್ನು ಕಳುಹಿಸುವನು ಮತ್ತು ಅವರು ಅವನು ಆಯ್ದುಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವರು” ಎನ್ನುತ್ತದೆ ಬೈಬಲ್. (ಮತ್ತಾ. 24:31) ಕಡೇ ದಿವಸಗಳಲ್ಲಿ ಭೂಮಿ ಮೇಲೆ ಉಳಿದಿರುವ ಅಭಿಷಿಕ್ತರ ಸಂಖ್ಯೆ ಚಿಕ್ಕದ್ದಾಗಿರುವುದೆಂದು ಸಹ ಬೈಬಲ್ ತೋರಿಸುತ್ತದೆ. (ಪ್ರಕ. 12:17) ಆದರೆ ಮಹಾ ಸಂಕಟ ಆರಂಭವಾಗುವ ಸಮಯದಲ್ಲಿ ಎಷ್ಟು ಮಂದಿ ಉಳಿದಿರುವರೆಂದು ಅದು ಹೇಳುವುದಿಲ್ಲ.
15, 16. ಯೆಹೋವನು ಆಯ್ಕೆಮಾಡಿರುವ 1,44,000 ಮಂದಿ ಬಗ್ಗೆ ನಾವೇನು ಅರ್ಥಮಾಡಿಕೊಳ್ಳಬೇಕು?
15 ಅಭಿಷಿಕ್ತರನ್ನು ಯಾವಾಗ ಆಯ್ಕೆಮಾಡಬೇಕೆಂದು ಯೆಹೋವನು ನಿರ್ಣಯಿಸುತ್ತಾನೆ. (ರೋಮ. 8:28-30) ಯೆಹೋವನು ಅಭಿಷಿಕ್ತರ ಆಯ್ಕೆಮಾಡಲಾರಂಭಿಸಿದ್ದು ಯೇಸುವಿನ ಪುನರುತ್ಥಾನದ ನಂತರವೇ. ಒಂದನೇ ಶತಮಾನದಲ್ಲಿ ನಿಜ ಕ್ರೈಸ್ತರೆಲ್ಲರೂ ಅಭಿಷಿಕ್ತರಾಗಿದ್ದರೆಂದು ತೋರುತ್ತದೆ. ಅನಂತರ ನೂರಾರು ವರ್ಷಗಳ ತನಕ ಇದ್ದ ಕ್ರೈಸ್ತರಲ್ಲಿ ಹೆಚ್ಚಿನವರು ಕೇವಲ ಹೆಸರಿಗೆ ಮಾತ್ರ ಕ್ರೈಸ್ತರಾಗಿದ್ದರು, ನಿಜವಾಗಿ ಕ್ರಿಸ್ತನ ಹಿಂಬಾಲಕರಾಗಿರಲಿಲ್ಲ. ಹಾಗಿದ್ದರೂ ಆ ವರ್ಷಗಳಲ್ಲಿ ಅವರ ಮಧ್ಯೆ ನಿಜ ಕ್ರೈಸ್ತರಾಗಿದ್ದ ಕೆಲವರು ಇದ್ದರು. ಅವರನ್ನು ಯೆಹೋವನು ಅಭಿಷಿಕ್ತರನ್ನಾಗಿ ಮಾಡಿದನು. ಇವರು ಯೇಸು ಹೇಳಿದಂತೆ ಕಳೆಗಳ ಮಧ್ಯೆ ಬೆಳೆಯುವ ಗೋದಿಯಂತಿದ್ದರು. (ಮತ್ತಾ. 13:24-30) ಈ ಕಡೇ ದಿವಸಗಳಲ್ಲಿ ಯೆಹೋವನು ಜನರನ್ನು 1,44,000 ಮಂದಿಯ ಭಾಗವಾಗಿರಲು ಆಯ್ಕೆಮಾಡುವುದನ್ನು ಮುಂದುವರಿಸಿದ್ದಾನೆ.[2] (ಕೊನೆ ಟಿಪ್ಪಣಿ ನೋಡಿ.) ಕಡೇ ದಿವಸಗಳ ಕೊನೆ ಭಾಗದಲ್ಲೂ ದೇವರು ಕೆಲವರನ್ನು ಆಯ್ಕೆಮಾಡಲು ನಿರ್ಣಯಿಸುವಲ್ಲಿ ಅದನ್ನು ಪ್ರಶ್ನಿಸಲು ನಾವ್ಯಾರು? (ಯೆಶಾ. 45:9; ದಾನಿ. 4:35; ರೋಮನ್ನರಿಗೆ 9:11, 16 ಓದಿ.)[3] (ಕೊನೆ ಟಿಪ್ಪಣಿ ನೋಡಿ.) ಯೇಸು ಹೇಳಿದ ಒಂದು ದೃಷ್ಟಾಂತದಲ್ಲಿ ದಿನದ ಕೊನೆಗೆ ಬಂದು ಕೆಲಸಮಾಡಿದವರಿಗೆ ಯಜಮಾನನು ಕೂಲಿ ಕೊಟ್ಟದ್ದರ ಬಗ್ಗೆ ಕೆಲವು ಕೆಲಸಗಾರರು ಗೊಣಗಿದಂತೆ ನಾವು ಗೊಣಗಬಾರದು.—ಮತ್ತಾಯ 20:8-15 ಓದಿ.
16 ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯಿರುವ ಎಲ್ಲರೂ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿನ’ ಭಾಗವಲ್ಲ. (ಮತ್ತಾ. 24:45-47) ಯೆಹೋವ ಮತ್ತು ಯೇಸು ಒಂದನೇ ಶತಮಾನದಲ್ಲಿ ಮಾಡಿದಂತೆ ಇಂದು ಸಹ ಅನೇಕರಿಗೆ ಉಣಿಸಲಿಕ್ಕೆ ಅಂದರೆ ಬೋಧಿಸಲಿಕ್ಕೆ ಕೆಲವೇ ಮಂದಿಯನ್ನು ಬಳಸುತ್ತಿದ್ದಾರೆ. ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವನ್ನು ಬರೆಯಲು ಒಂದನೇ ಶತಮಾನದಲ್ಲಿದ್ದ ಅಭಿಷಿಕ್ತ ಕೈಸ್ತರಲ್ಲಿ ಬೆರಳೆಣಿಕೆಯಷ್ಟೇ ಮಂದಿಯನ್ನು ಬಳಸಲಾಯಿತು. ಹಾಗೆಯೇ ಇಂದು, ದೇವಜನರಿಗೆ ‘ತಕ್ಕ ಸಮಯಕ್ಕೆ ಆಹಾರವನ್ನು ಕೊಡುವ’ ಜವಾಬ್ದಾರಿ ಅಭಿಷಿಕ್ತ ಕ್ರೈಸ್ತರಲ್ಲಿ ಕೆಲವರಿಗೆ ಮಾತ್ರ ಇದೆ.
17. ಈ ಲೇಖನದಿಂದ ನೀವೇನು ಕಲಿತಿದ್ದೀರಿ?
17 ಈ ಲೇಖನದಿಂದ ನಾವೇನು ಕಲಿತೆವು? ಯೆಹೋವನು ತನ್ನೆಲ್ಲ ಸೇವಕರಿಗೆ ಬಹುಮಾನ ಕೊಡುತ್ತಾನೆ. ‘ಹತ್ತು ಜನರಿಗೆ’ ಅಂದರೆ ಹೆಚ್ಚಿನವರಿಗೆ ಭೂಮಿಯ ಮೇಲೆ ನಿತ್ಯಜೀವ ಮತ್ತು ‘ಯೆಹೂದ್ಯನಿಗೆ’ ಅಂದರೆ ಯೇಸುವಿನೊಂದಿಗೆ ಆಳುವವರಿಗೆ ಸ್ವರ್ಗದ ಜೀವನವನ್ನು ಕೊಡುತ್ತಾನೆ. ಯೆಹೋವನು ಈ ಎರಡು ಗುಂಪಿನವರಿಗೆ ಒಂದೇ ರೀತಿಯ ಆಜ್ಞೆಗಳನ್ನು ಕೊಟ್ಟು ಅವರದನ್ನು ಪಾಲಿಸಬೇಕು ಮತ್ತು ನಂಬಿಗಸ್ತರಾಗಿರಬೇಕು ಎಂದು ಅವಶ್ಯಪಡಿಸುತ್ತಾನೆ. ಅವರೆಲ್ಲರೂ ದೀನರಾಗಿರಬೇಕು. ಎಲ್ಲರೂ ಒಟ್ಟಿಗೆ ಆತನ ಸೇವೆಮಾಡುತ್ತಾ ಐಕ್ಯರಾಗಿರಬೇಕು. ಸಭೆಯ ಶಾಂತಿಯನ್ನು ಕಾಪಾಡಲು ಎಲ್ಲರೂ ಶ್ರಮಿಸಬೇಕು. ಅಂತ್ಯ ಹತ್ತಿರ ಬರುತ್ತಾ ಇರುವಾಗ ನಾವೆಲ್ಲರೂ ಯೆಹೋವನ ಸೇವೆಮಾಡುತ್ತಾ ಒಂದೇ ಹಿಂಡಾಗಿ ಕ್ರಿಸ್ತನನ್ನು ಹಿಂಬಾಲಿಸುತ್ತಿರೋಣ.
^ [1] (ಪ್ಯಾರ 3) ಕೀರ್ತನೆ 87:5, 6ಕ್ಕನುಸಾರ ಯೇಸುವಿನೊಟ್ಟಿಗೆ ಸ್ವರ್ಗದಲ್ಲಿ ಆಳುವವರೆಲ್ಲರ ಹೆಸರುಗಳನ್ನು ದೇವರು ಭವಿಷ್ಯದಲ್ಲಿ ಪ್ರಕಟಿಸಬಹುದು.—ರೋಮ. 8:19.
^ [2] (ಪ್ಯಾರ 15) ಅಪೊಸ್ತಲರ ಕಾರ್ಯಗಳು 2:33 ಹೇಳುವಂತೆ ಪವಿತ್ರಾತ್ಮವನ್ನು ಯೇಸು ಸುರಿಸುತ್ತಾನಾದರೂ, ಪವಿತ್ರಾತ್ಮದಿಂದ ಯಾರನ್ನು ಅಭಿಷೇಕಿಸಬೇಕೆಂದು ಆಯ್ಕೆಮಾಡುವವನು ಯೆಹೋವನೇ.
^ [3] (ಪ್ಯಾರ 15) ಹೆಚ್ಚಿನ ಮಾಹಿತಿಗಾಗಿ ಮೇ 1, 2007 ಕಾವಲಿನಬುರುಜು (ಇಂಗ್ಲಿಷ್) ಪುಟ 30-31ರಲ್ಲಿರುವ “ವಾಚಕರಿಂದ ಪ್ರಶ್ನೆಗಳು” ನೋಡಿ.