ಎ4
ಹೀಬ್ರು ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರು
ದೇವರ ಹೆಸ್ರು ಹೀಬ್ರು ಪವಿತ್ರ ಗ್ರಂಥದಲ್ಲಿ ಸುಮಾರು 7,000 ಬಾರಿ ಇದೆ. ಇದನ್ನ ಹೀಬ್ರು ಭಾಷೆಯ ನಾಲ್ಕು ವ್ಯಂಜನಾಕ್ಷರಗಳನ್ನ (יהוה) ಬಳಸಿ ಬರೆಯಲಾಗಿದೆ. ಇದನ್ನ ‘ಚತುರಕ್ಷರಿ’ ಅಂತ ಕರೆಯಲಾಗುತ್ತೆ. ಹೊಸ ಲೋಕ ಭಾಷಾಂತರ ಬೈಬಲಲ್ಲಿ ಈ ಚತುರಕ್ಷರಿಯನ್ನ “ಯೆಹೋವ” ಅಂತ ಅನುವಾದಿಸಲಾಗಿದೆ. ಬೈಬಲಲ್ಲಿ ಬೇರೆಲ್ಲ ಹೆಸ್ರುಗಳಿಗಿಂತನೂ ಅತಿ ಹೆಚ್ಚು ಸಲ ಬರೋ ಹೆಸರೆಂದ್ರೆ ಅದು “ಯೆಹೋವ.” ದೇವಪ್ರೇರಣೆಯಿಂದ ಬೈಬಲ್ ಲೇಖಕರು ದೇವರನ್ನ “ಸರ್ವಶಕ್ತ,” “ಸರ್ವೋನ್ನತ,” “ಒಡೆಯ” ಅನ್ನೋ ತುಂಬ ಬಿರುದು ಮತ್ತು ವರ್ಣನಾತ್ಮಕ ಪದಗಳಿಂದ ಕರೆದಿದ್ರೂ ದೇವರನ್ನ ಗುರುತಿಸೋಕೆ ಬಳಸಿರೋದು ಈ ಚತುರಕ್ಷರಿ ಒಂದನ್ನೇ.
ಯೆಹೋವ ದೇವರೇ ಬೈಬಲ್ ಲೇಖಕರಿಗೆ ತನ್ನ ಹೆಸ್ರನ್ನ ಬಳಸೋಕೆ ನಿರ್ದೇಶನ ಕೊಟ್ಟನು. ಉದಾಹರಣೆಗೆ ಆತನು ಪ್ರವಾದಿ ಯೋವೇಲನನ್ನ ಹೀಗೆ ಬರೆಯೋಕೆ ಪ್ರೇರಿಸಿದನು: “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.” (ಯೋವೇಲ 2:32) ಅದು ಮಾತ್ರ ಅಲ್ಲ ಒಬ್ಬ ಕೀರ್ತನೆಗಾರನನ್ನ ಕೂಡ ಹೀಗೆ ಬರೆಯೋಕೆ ಪ್ರೇರಿಸಿದನು: “ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು ಅಂತ ಎಲ್ರಿಗೂ ಗೊತ್ತಾಗಲಿ.” (ಕೀರ್ತನೆ 83:18) ಕಾವ್ಯರೂಪದಲ್ಲಿರೋ ಕೀರ್ತನೆ ಪುಸ್ತಕದಲ್ಲೇ ದೇವರ ಹೆಸ್ರು ಸುಮಾರು 700 ಬಾರಿ ಇದೆ. ಈ ಪುಸ್ತಕದಲ್ಲಿರೋ ಗೀತೆಗಳನ್ನ ದೇವಜನರು ಹಾಡ್ತಿದ್ರು ಮತ್ತು ಬಾಯಿಪಾಠ ಮಾಡ್ತಿದ್ರು. ಅಂದಮೇಲೆ ಅವ್ರಿಗೆ ದೇವರ ಹೆಸ್ರು ಚೆನ್ನಾಗಿ ಗೊತ್ತಿತ್ತು. ಹಾಗಿದ್ರೂ ಇವತ್ತು ತುಂಬ ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸ್ರು ಯಾಕಿಲ್ಲ? ಉತ್ತರ ನೋಡೋಣ. ಹೊಸ ಲೋಕ ಭಾಷಾಂತರ ಬೈಬಲಲ್ಲಿ ದೇವರ ಹೆಸ್ರನ್ನ “ಯೆಹೋವ” ಅಂತ ಯಾಕೆ ಅನುವಾದಿಸಲಾಗಿದೆ? ದೇವರ ಈ ಹೆಸ್ರಿನ ಅರ್ಥ ಏನು? ಅನ್ನೋದನ್ನೂ ತಿಳಿಯೋಣ.
ತುಂಬ ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸ್ರು ಯಾಕಿಲ್ಲ? ಇದಕ್ಕೆ ತುಂಬ ಕಾರಣಗಳಿವೆ. ಸರ್ವಶಕ್ತ ದೇವರನ್ನ ಗುರುತಿಸೋಕೆ ಆತನದ್ದೇ ಆದ ಒಂದು ವಿಶೇಷ ಹೆಸ್ರಿರೋ ಅಗತ್ಯ ಇಲ್ಲ ಅನ್ನೋದು ಕೆಲವರ ಅನಿಸಿಕೆ. ಇನ್ನೂ ತುಂಬ ಜನ್ರು ಯೆಹೂದಿ ಸಂಪ್ರದಾಯದಿಂದ ಪ್ರಭಾವಿತರಾಗಿದ್ದಾರೆ. ಹಾಗಾಗಿ ದೇವರ ಹೆಸ್ರನ್ನ ಉಚ್ಚರಿಸಿದ್ರೆ ಅದನ್ನ ಅಪವಿತ್ರ ಮಾಡಿದ ಹಾಗೆ ಅನ್ನೋ ಭಯ ಅವ್ರಿಗಿದೆ. ಇನ್ನೂ ಕೆಲವರು, ದೇವರ ಹೆಸ್ರಿನ ಸರಿಯಾದ ಉಚ್ಚಾರಣೆ ಯಾರಿಗೂ ಗೊತ್ತಿಲ್ಲದ ಕಾರಣ “ಕರ್ತನು” ಅಥವಾ “ದೇವರು” ಅನ್ನೋ ಬಿರುದುಗಳನ್ನ ಬಳಸಿದ್ರೆ ಸಾಕಂತ ನಂಬ್ತಾರೆ. ಆದ್ರೆ ಮುಂದೆ ಕೊಟ್ಟಿರೋ ಕಾರಣಗಳನ್ನ ಗಮನಿಸಿದ್ರೆ ಅವ್ರ ಅಭಿಪ್ರಾಯಕ್ಕೆ ಆಧಾರವಿಲ್ಲ ಅಂತ ಗೊತ್ತಾಗುತ್ತೆ.
ಸರ್ವಶಕ್ತ ದೇವ್ರಿಗೆ ಆತನದ್ದೇ ಒಂದು ವಿಶೇಷ ಹೆಸ್ರು ಅಗತ್ಯ ಇಲ್ಲ ಅಂತ ವಾದಿಸೋರು ಒಂದು ನಿಜಾಂಶವನ್ನ ನಿರ್ಲಕ್ಷಿಸ್ತಾರೆ. ಅದೇನು? ಕ್ರಿಸ್ತ ಶಕದ ಆರಂಭದಲ್ಲಿ ಮತ್ತು ಕ್ರಿಸ್ತ ಪೂರ್ವದಲ್ಲಿ ಬಳಸಿದ್ದ ದೇವರ ಪವಿತ್ರ ಗ್ರಂಥದ ನಕಲು ಪ್ರತಿಗಳಲ್ಲಿ ದೇವರ ಹೆಸ್ರು ಇತ್ತು ಅನ್ನೋ ಸತ್ಯಾಂಶನೇ. ಈಗಾಗಲೇ ಗಮನಿಸಿದ ಹಾಗೆ ಬೈಬಲಲ್ಲಿ ತನ್ನ ಹೆಸ್ರನ್ನ ಸುಮಾರು 7,000 ಸಲ ಬರೆಯೋಕೆ ದೇವರೇ ಬರಹಗಾರರನ್ನ ಪ್ರೇರಿಸಿದನು. ನಾವು ಆತನ ಹೆಸ್ರನ್ನ ತಿಳ್ಕೊಬೇಕು, ಬಳಸಬೇಕು ಅಂತ ಆತನು ಬಯಸ್ತಾನೆ ಅನ್ನೋದು ಇದ್ರಿಂದ ಗೊತ್ತಾಗುತ್ತೆ.
ಯೆಹೂದಿ ಸಂಪ್ರದಾಯದ ಕಾರಣ ದೇವರ ಹೆಸ್ರನ್ನ ಬೈಬಲ್ ಭಾಷಾಂತರಗಳಿಂದ ತೆಗೆದುಹಾಕಿರೋ ಅನುವಾದಕರು ಒಂದು ಮುಖ್ಯ ಸತ್ಯವನ್ನ ಅರ್ಥಮಾಡ್ಕೊಂಡಿಲ್ಲ. ಅದೇನೆಂದ್ರೆ ಕೆಲವು ಯೆಹೂದಿ ಪಂಡಿತರು ದೇವರ ಹೆಸ್ರನ್ನ ಉಚ್ಚರಿಸೋಕೆ ನಿರಾಕರಿಸಿದ್ರೂ ಅವರು ಆ ಹೆಸ್ರನ್ನ ಬೈಬಲಿನ ನಕಲು ಪ್ರತಿಗಳಿಂದ ತೆಗೆದುಹಾಕಲಿಲ್ಲ. ಮೃತ ಸಮುದ್ರದ ಹತ್ರ ಕುಮ್ರಾನ್ ಅನ್ನೋ ಜಾಗದಲ್ಲಿ ಸಿಕ್ಕಿದ ಹೀಬ್ರು ಪವಿತ್ರ ಗ್ರಂಥದ ಪ್ರಾಚೀನ ಸುರುಳಿಗಳಲ್ಲಿ ತುಂಬ ಕಡೆ ದೇವರ ಹೆಸ್ರು ಇದೆ. ಅಷ್ಟೇ ಅಲ್ಲ ಬೈಬಲ್ ಅನುವಾದಕರು ತಮ್ಮ ಭಾಷಾಂತರದಲ್ಲಿ ದೇವರ ಹೆಸ್ರು ಇರಬೇಕಾದ ಕಡೆಯೆಲ್ಲ “ಕರ್ತನು” (LORD) ಅಂತ ದೊಡ್ಡಕ್ಷರಗಳಲ್ಲಿ ಹಾಕೋ ಮೂಲಕ ಮೂಲ ಬರಹದಲ್ಲಿ ದೇವರ ಹೆಸ್ರು ಇತ್ತು ಅನ್ನೋದನ್ನ ತೋರಿಸ್ಕೊಟ್ಟಿದ್ದಾರೆ. ಹೀಗಿರುವಾಗ ಪ್ರಶ್ನೆ ಏನಂದ್ರೆ ಬೈಬಲಿನ ಮೂಲ ಬರಹದಲ್ಲಿ ಸಾವಿರಾರು ಸಲ ದೇವರ ಹೆಸ್ರು ಇದೆ ಅಂತ ಅನುವಾದಕರು ಒಪ್ಕೊಳ್ಳೋದಾದ್ರೂ ಆ ಹೆಸ್ರಿಗೆ ಬದಲಾಗಿ ಬಿರುದುಗಳನ್ನ ಬಳಸೋಕೆ ಅಥವಾ ಆ ಹೆಸ್ರನ್ನೇ ತೆಗೆದುಹಾಕೋಕೆ ಹೇಗೆ ಧೈರ್ಯ ಮಾಡಿದ್ರು? ಹೀಗೆ ಮಾಡೋಕೆ ಅವ್ರಿಗೆ ಯಾರು ಅಧಿಕಾರ ಕೊಟ್ರು? ಇದಕ್ಕೆ ಉತ್ತರ ಅವ್ರೇ ಕೊಡಬೇಕು.
ದೇವರ ಹೆಸ್ರಿನ ಸರಿಯಾದ ಉಚ್ಚಾರಣೆ ಗೊತ್ತಿಲ್ಲದೆ ಇರೋದ್ರಿಂದ ಅದನ್ನ ಬಳಸಬಾರದು ಅಂತ ಹೇಳುವವರು ಯೇಸುವಿನ ಹೆಸ್ರಿನ ಬಗ್ಗೆ ಮಾತ್ರ ಈ ರೀತಿ ಯೋಚಿಸಲ್ಲ. ನಿಜ ಏನಂದ್ರೆ ಒಂದನೇ ಶತಮಾನದಲ್ಲಿದ್ದ ಯೇಸುವಿನ ಶಿಷ್ಯರು ಯೇಸುವಿನ ಹೆಸ್ರನ್ನ ಉಚ್ಚರಿಸ್ತಿದ್ದ ವಿಧಕ್ಕೂ ಇವತ್ತಿನ ಹೆಚ್ಚಿನ ಕ್ರೈಸ್ತರು ಉಚ್ಚರಿಸೋ ವಿಧಕ್ಕೂ ತುಂಬ ವ್ಯತ್ಯಾಸ ಇದೆ. ಯೆಹೂದಿ ಕ್ರೈಸ್ತರು ಯೇಸುವನ್ನ ಬಹುಶಃ ಯೆಷುವ ಅಂತ ಮತ್ತು “ಕ್ರಿಸ್ತ” ಅನ್ನೋ ಬಿರುದನ್ನ ಮಶಿಅಕ್ ಅಥವಾ “ಮೆಸ್ಸೀಯ” ಅಂತ ಹೇಳ್ತಿದ್ರು. ಗ್ರೀಕ್ ಭಾಷೆಯನ್ನಾಡೋ ಕ್ರೈಸ್ತರು ಯೇಸುವನ್ನ ಯೀಸೂಸ್ ಕ್ರಿಸ್ಟೋಸ್ ಅಂತ ಮತ್ತು ಲ್ಯಾಟಿನ್ ಭಾಷೆಯನ್ನಾಡೋ ಕ್ರೈಸ್ತರು ಯೇಸಸ್ ಕ್ರಿಸ್ಟಸ್ ಅಂತ ಹೇಳ್ತಿದ್ರು. ಯಾಕಂದ್ರೆ ಆಗಿನ ಜನ್ರು ಯಾವುದೇ ಹೆಸ್ರನ್ನ ಹೇಳುವಾಗ ಅದನ್ನ ತಮ್ಮ ಭಾಷೆಯ ಉಚ್ಚಾರಣೆಯಲ್ಲಿ ಹೇಳೋದು ವಾಡಿಕೆ ಆಗಿತ್ತು. ಅದಕ್ಕೆ ದೇವಪ್ರೇರಣೆಯಿಂದ ಗ್ರೀಕ್ ಪವಿತ್ರ ಗ್ರಂಥವನ್ನ ಬರೆಯುವಾಗ ಯೇಸುವಿನ ಹೆಸ್ರನ್ನ ಆಗಿನ ಸಮಯದಲ್ಲಿ ಗ್ರೀಕ್ ಭಾಷೆಯನ್ನಾಡೋ ಜನ್ರು ಹೇಗೆ ಉಚ್ಚರಿಸ್ತಿದ್ದರೋ ಹಾಗೇ ಬರೆಯಲಾಯ್ತು. ಈ ಕಾರಣದಿಂದ ಪ್ರಾಚೀನ ಹೀಬ್ರು ಭಾಷೆಯಲ್ಲಿ ದೇವರ ಹೆಸ್ರಿನ ಸರಿಯಾದ ಉಚ್ಚಾರಣೆ ಹೇಗಿತ್ತು ಅಂತ ಗೊತ್ತಿಲ್ಲವಾದ್ರೂ ಈಗ ಸಾಮಾನ್ಯವಾಗಿ ರೂಢಿಯಲ್ಲಿರೋ ಉಚ್ಚಾರಣೆಯನ್ನೇ ಲೋಕವ್ಯಾಪಕವಾಗಿರೋ ಯೆಹೋವನ ಸಾಕ್ಷಿಗಳು ಬಳಸ್ತಾರೆ.
ಹೊಸ ಲೋಕ ಭಾಷಾಂತರದಲ್ಲಿ ದೇವರ ಹೆಸ್ರನ್ನ “ಯೆಹೋವ” ಅಂತ ಯಾಕೆ ಬಳಸಿದ್ದಾರೆ? ಹೀಬ್ರು ಚತುರಕ್ಷರಿಯನ್ನ (יהוה) ಇಂಗ್ಲಿಷ್ನಲ್ಲಿ YHWH ಅಂತ ನಾಲ್ಕು ವ್ಯಂಜನಗಳಿಂದ ಬರೆಯಲಾಗುತ್ತೆ. ಪ್ರಾಚೀನ ಹೀಬ್ರು ಭಾಷೆಯಲ್ಲಿ ಎಲ್ಲ ಪದಗಳನ್ನ ಸ್ವರಾಕ್ಷರಗಳಿಲ್ಲದೆ ಬರೀತಿದ್ರು. ದೇವರ ಹೆಸರನ್ನೂ ಹಾಗೇ ಬರೀತಿದ್ರು. ಆದ್ರೆ ಮಾತಾಡುವಾಗ ಮತ್ತು ಓದುವಾಗ ಆ ವ್ಯಂಜನಾಕ್ಷರಗಳಿಗೆ ಸ್ವರಗಳನ್ನ ಸುಲಭವಾಗಿ ಕೂಡಿಸಿ ಉಚ್ಚರಿಸ್ತಿದ್ರು.
ಹೀಬ್ರು ಪವಿತ್ರ ಗ್ರಂಥ ಬರೆದು ಮುಗಿಸಿ ಸುಮಾರು ಒಂದು ಸಾವಿರ ವರ್ಷ ಆದಮೇಲೆ ಯೆಹೂದಿ ವಿದ್ವಾಂಸರು ಹೀಬ್ರು ಬರಹವನ್ನ ಓದೋಕೆ ಉಚ್ಚರಣಾ ಚಿಹ್ನೆಗಳನ್ನ ಕಂಡುಹಿಡಿದ್ರು. ಹೀಗೆ ಎಲ್ಲೆಲ್ಲಿ ಯಾವ ಸ್ವರಾಕ್ಷರಗಳನ್ನು ಬಳಸಿ ಓದಬೇಕಂತ ಸೂಚಿಸಿದ್ರು. ಆದ್ರೆ ಆ ಸಮಯದಲ್ಲಿ ತುಂಬ ಯೆಹೂದ್ಯರಿಗೆ ದೇವರನ್ನ ಹೆಸರಿಡಿದು ಕರೆಯೋದು ತಪ್ಪು ಅನ್ನೋ ಮೂಢ ನಂಬಿಕೆಯಿತ್ತು. ಹಾಗಾಗಿ ಅವರು ದೇವರ ಹೆಸರನ್ನ ಉಚ್ಚರಿಸೋ ಬದಲು “ಅಡೋನೈ” (ಕರ್ತನು) “ಎಲೋಹಿಮ್” (ದೇವರು) ಅನ್ನೋ ಬಿರುದುಗಳನ್ನ ಹೇಳೋಕೆ ಶುರುಮಾಡಿದ್ರು. ಹಾಗಾಗಿ ದೇವರ ಹೆಸ್ರನ್ನ ಸೂಚಿಸ್ತಿದ್ದ ನಾಲ್ಕು ವ್ಯಂಜನಾಕ್ಷರಗಳನ್ನ (ಚತುರಕ್ಷರಿಯನ್ನು) ನಕಲು ಮಾಡುವಾಗ ಒಂದು ಬದಲಾವಣೆಯನ್ನ ಮಾಡಿದ್ರು. ಅದೇನಂದ್ರೆ ಆ ಚತುರಕ್ಷರಿಗೆ ಬಿರುದುಗಳಲ್ಲಿದ್ದ ಸ್ವರಾಕ್ಷರಗಳನ್ನ ಕೂಡಿಸಿ ಬರೆದ್ರು. ಹಾಗಾಗಿ ಆ ಹಸ್ತಪ್ರತಿಗಳಲ್ಲಿರೋ ಸ್ವರಾಕ್ಷರಗಳ ಚಿಹ್ನೆಗಳು ಹೀಬ್ರುನಲ್ಲಿ ದೇವರ ಹೆಸ್ರಿನ ಮೂಲ ಉಚ್ಚಾರಣೆ ಹೇಗಿತ್ತು ಅನ್ನೋದನ್ನ ಕಂಡುಹಿಡಿಯೋಕೆ ಸಹಾಯ ಮಾಡಲ್ಲ. ದೇವರ ಹೆಸ್ರನ್ನ “ಯಾಹ್ವೆ” ಅಂತ ಉಚ್ಚರಿಸ್ತಿದ್ರು ಅಂತ ಕೆಲವರು ಅಂತಾರೆ. ಇನ್ನು ಕೆಲವರು ಬೇರೆ ಬೇರೆ ಉಚ್ಚಾರಣೆಗಳನ್ನ ಹೇಳ್ತಾರೆ. ಮೃತ ಸಮುದ್ರದ ಹತ್ರ ಸಿಕ್ಕ ಒಂದು ಸುರುಳಿಯಲ್ಲಿ ಗ್ರೀಕ್ ಭಾಷೆಯಲ್ಲಿ ಯಾಜಕಕಾಂಡ ಪುಸ್ತಕದ ಒಂದು ಭಾಗ ಇದೆ. ಅದ್ರಲ್ಲಿ ದೇವರ ಹೆಸ್ರನ್ನ ಗ್ರೀಕಿಗೆ ಯಾಓ ಅಂತ ಬರೆಯಲಾಗಿದೆ. ಆರಂಭದ ಗ್ರೀಕ್ ಬರಹಗಾರರು ದೇವರ ಹೆಸ್ರನ್ನು ಯಾಎ, ಯಾಬೆ, ಮತ್ತು ಯಾಊವೆ ಅಂತ ಉಚ್ಚರಿಸಬಹುದು ಅಂತಾರೆ. ಆದ್ರೆ ಇದೇ ಸರಿಯಾದ ಉಚ್ಚಾರಣೆ ಅಂತ ಯಾವುದನ್ನೂ ಖಡಾಖಂಡಿತವಾಗಿ ಹೇಳಕ್ಕಾಗಲ್ಲ. ಪ್ರಾಚೀನ ಕಾಲದ ದೇವಜನರು ಹೀಬ್ರುನಲ್ಲಿ ದೇವರ ಹೆಸ್ರನ್ನ ಹೇಗೆ ಉಚ್ಚರಿಸ್ತಿದ್ರು ಅಂತ ನಮಗೆ ಗೊತ್ತಿಲ್ಲ. (ಆದಿಕಾಂಡ 13:4; ವಿಮೋಚನಕಾಂಡ 3:15) ಆದ್ರೆ ನಮಗೆ ಗೊತ್ತಿರೋದು ಏನಂದ್ರೆ ದೇವರು ತನ್ನ ಜನರ ಜೊತೆ ಮಾತಾಡುವಾಗ ಪದೇಪದೇ ತನ್ನ ಹೆಸ್ರನ್ನ ಬಳಸಿದನು ಮತ್ತು ದೇವಜನರೂ ಆತನನ್ನ ಆ ಹೆಸರಿಂದ ಕರೀತಿದ್ರು. ಅಷ್ಟೇ ಅಲ್ಲ ಬೇರೆಯವರ ಜೊತೆ ಮಾತಾಡುವಾಗ್ಲೂ ಆ ಹೆಸ್ರನ್ನ ಬಳಸ್ತಿದ್ರು.—ವಿಮೋಚನಕಾಂಡ 6:2; 1 ಅರಸು 8:23; ಕೀರ್ತನೆ 99:9.
ಹಾಗಾದ್ರೆ ಹೊಸ ಲೋಕ ಭಾಷಾಂತರ ಬೈಬಲಲ್ಲಿ ದೇವರ ಹೆಸ್ರನ್ನ “ಯೆಹೋವ” ಅಂತ ಯಾಕೆ ಬಳಸಿದೆ? ಯಾಕಂದ್ರೆ ಇಂಗ್ಲಿಷ್ ಭಾಷೆಯಲ್ಲಿ ದೇವರ ಹೆಸ್ರಿನ ಆ ಉಚ್ಚಾರಣೆಗೆ ಒಂದು ದೊಡ್ಡ ಇತಿಹಾಸವಿದೆ.
ದೇವರ ಹೆಸರು ಇಂಗ್ಲಿಷ್ ಬೈಬಲಲ್ಲಿ ಮೊದಲಾಗಿ ಕಾಣಿಸಿದ್ದು 1530ರಲ್ಲಿ. ಅದು ವಿಲ್ಯಮ್ ಟಿಂಡೇಲ್ ಅವರು ಭಾಷಾಂತರಿಸಿದ ಬೈಬಲಿನ ಪಂಚಗ್ರಂಥ ಭಾಗದಲ್ಲಿ. ಅವರು “Iehouah” (ಯೆಹೂವಾ) ಅನ್ನೋ ಪದವನ್ನ ಬಳಸಿದ್ರು. ಸಮಯ ಹೋದಂತೆ ಇಂಗ್ಲಿಷ್ ಭಾಷೆ ಬದಲಾಯ್ತು. ದೇವರ ಹೆಸ್ರಿನ ಅಕ್ಷರಗಳೂ ಬದಲಾದ್ವು. ಉದಾಹರಣೆಗೆ, 1612ರಲ್ಲಿ ಹೆನ್ರಿ ಏನ್ಸ್ವರ್ತ್ ಅವರು ಕೀರ್ತನೆ ಪುಸ್ತಕ ಭಾಷಾಂತರ ಮಾಡೋವಾಗ ಎಲ್ಲ ಕಡೆ “Iehovah” (ಯೆಹೋವ) ಅನ್ನೋ ಪದವನ್ನ ಬಳಸಿದ್ರು. 1639ರಲ್ಲಿ ಆ ಭಾಷಾಂತರವನ್ನ ಪರಿಷ್ಕರಿಸಿ ಟಿಂಡೇಲರ ಪಂಚಗ್ರಂಥವನ್ನೂ ಅದರ ಜೊತೆಗೆ ಮುದ್ರಿಸಿದಾಗ “Jehovah” (ಜೆಹೋವ) ಅನ್ನೋ ರೂಪವನ್ನ ಬಳಸಲಾಯ್ತು. 1901ರಲ್ಲಿ ಅಮೆರಿಕನ್ ಸ್ಟ್ಯಾಂಡರ್ಡ್ ವರ್ಷನ್ ಬೈಬಲಿನ ಅನುವಾದಕರು ಹೀಬ್ರು ಪವಿತ್ರ ಗ್ರಂಥದಲ್ಲಿ ದೇವರ ಹೆಸರಿರೋ ಕಡೆಯೆಲ್ಲ “ಜೆಹೋವ” ಅಂತ ಬಳಸಿದ್ರು.
1911ರಲ್ಲಿ ಬಿಡುಗಡೆಯಾದ ಸ್ಟಡೀಸ್ ಇನ್ ದ ಸಾಮ್ಸ್ ಪುಸ್ತಕದಲ್ಲಿ ಗೌರವಾನ್ವಿತ ಬೈಬಲ್ ವಿದ್ವಾಂಸರಾದ ಜೋಸೆಫ್ ಬ್ರಯಂಟ್ ರೊಥರ್ಹಾಮ್ “ಯಾಹ್ವೆ” ಅನ್ನೋ ಪದವನ್ನ ಬಳಸದೆ ‘ಜೆಹೋವ’ ಅಂತ ಬಳಸಿದ್ರು. ಇದಕ್ಕೆ ಕಾರಣ ವಿವರಿಸ್ತಾ ಅವರು, “ಬೈಬಲನ್ನ ಓದುವ ಸಾಮಾನ್ಯ ಜನರಿಗೆ ಗೊತ್ತಿದ್ದ (ಎಲ್ಲರೂ ಒಪ್ಪುತ್ತಿದ್ದ) ಪದವನ್ನೇ” ಬಳಸೋಕೆ ಇಷ್ಟಪಟ್ರು ಅಂತ ಹೇಳಿದ್ರು. ಅದೇ ರೀತಿ 1930ರಲ್ಲಿ ಎ.ಎಫ್. ಕಿರ್ಕ್ಪ್ಯಾಟ್ರಿಕ್ ಅನ್ನೋ ವಿದ್ವಾಂಸರು “ಜೆಹೋವ” ಅನ್ನೋ ಉಚ್ಚಾರಣೆಯ ಬಳಕೆ ಬಗ್ಗೆ ಹೀಗಂದ್ರು: “ಆಧುನಿಕ ವ್ಯಾಕರಣ ಪಂಡಿತರು ಆ ಹೆಸ್ರನ್ನ ಯಾಹ್ವೆ ಅಥವಾ ಯಾಹವ್ವೆ ಅಂತ ಉಚ್ಚರಿಸಬೇಕಂತ ವಾದಿಸ್ತಾರೆ, ಆದ್ರೆ ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚಾಗಿ ಬಳಕೆಯಲ್ಲಿ ಇರೋದು ‘ಜೆಹೋವ’ ಅನ್ನೋ ಪದಾನೇ. ಅಷ್ಟೇ ಅಲ್ಲ, ಇಲ್ಲಿ ಆ ಹೆಸ್ರಿನ ನಿಖರವಾದ ಉಚ್ಚಾರಣೆ ಮುಖ್ಯವಲ್ಲ. ಬದಲಿಗೆ ಆತನನ್ನ ಗುರುತಿಸೋ ವೈಯಕ್ತಿಕ ಹೆಸ್ರೇ ಪ್ರಾಮುಖ್ಯ. ಯಾಕಂದ್ರೆ ಅದು, ‘ಕರ್ತನು’ ಅನ್ನೋ ಬಿರುದುಗಳ ತರ ಒಂದು ಬಿರುದು ಮಾತ್ರ ಅಲ್ಲ.”
ಯೆಹೋವ ಅನ್ನೋ ಹೆಸ್ರಿನ ಅರ್ಥ ಏನು? ಹೀಬ್ರು ಭಾಷೆಯಲ್ಲಿ ಯೆಹೋವ ಅನ್ನೋ ಹೆಸ್ರು ಒಂದು ಕ್ರಿಯಾಪದದಿಂದ ಬಂದಿದೆ. ಆ ಕ್ರಿಯಾಪದದ ಅರ್ಥ “ಆಗು” ಅಂತಾಗಿದೆ. ತುಂಬ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಆ ಕ್ರಿಯಾಪದ ಒಬ್ಬ ವ್ಯಕ್ತಿ ಒಂದು ಕೆಲಸ ಮಾಡೋದನ್ನ ಸೂಚಿಸುತ್ತೆ. ಹಾಗಾಗಿ ದೇವರ ಹೆಸ್ರಿನ ಅರ್ಥ “ಆತನು ಆಗುವಂತೆ ಮಾಡ್ತಾನೆ” ಅಂತ ಹೊಸ ಲೋಕ ಭಾಷಾಂತರ ಬೈಬಲ್ ಕಮಿಟಿ ಅರ್ಥಮಾಡ್ಕೊಂಡಿದೆ. ವಿದ್ವಾಂಸರಿಗೆ ಈ ಅರ್ಥದ ವಿಷ್ಯದಲ್ಲಿ ಬೇರೆ ಬೇರೆ ಅಭಿಪ್ರಾಯ ಇರೋದ್ರಿಂದ ನಾವು ಖಡಾಖಂಡಿತವಾಗಿ ಇದೇ ಅದ್ರ ಅರ್ಥ ಅಂತ ವಾದ ಮಾಡಲ್ಲ. ಆದ್ರೆ ಎಲ್ಲದರ ಸೃಷ್ಟಿಕರ್ತನಿಗೆ ಮತ್ತು ತನ್ನ ಉದ್ದೇಶವನ್ನ ನಿಜ ಮಾಡೋ ಯೆಹೋವನಿಗೆ ಈ ಅರ್ಥ ಹೇಳಿ ಮಾಡಿಸಿದಂತಿದೆ. ಯಾಕಂದ್ರೆ ಯೆಹೋವ ದೇವರು ಈ ವಿಶ್ವವನ್ನ, ಬುದ್ಧಿಶಕ್ತಿ ಇರೋ ಜೀವಿಗಳನ್ನ ಸೃಷ್ಟಿ ಮಾಡಿದ್ದಷ್ಟೇ ಅಲ್ಲ, ಸಮಯ ಕಳೆದಂತೆ ತನ್ನ ಇಷ್ಟ ಮತ್ತು ಉದ್ದೇಶ ನೆರವೇರೋ ಹಾಗೆ ಮಾಡ್ತಿದ್ದಾನೆ.
ಹಾಗಾಗಿ ಯೆಹೋವ ಅನ್ನೋ ಹೆಸ್ರಿನ ಅರ್ಥ ವಿಮೋಚನಕಾಂಡ 3:14ರಲ್ಲಿ ಕೊಟ್ಟಿರೋ ಕ್ರಿಯಾಪದಕ್ಕೆ ಮಾತ್ರ ಸೀಮಿತವಾಗಿಲ್ಲ. ಆ ವಚನದಲ್ಲಿ ಹೀಗಿದೆ: “ನಾನು ಏನಾಗಬೇಕು ಅಂತ ಇಷ್ಟಪಡ್ತಿನೋ ಹಾಗೇ ಆಗ್ತೀನಿ.” ಈ ಪದಗಳು ದೇವರ ಹೆಸ್ರಿನ ಪೂರ್ಣ ಅರ್ಥವನ್ನ ವಿವರಿಸಲ್ಲ. ಬದಲಿಗೆ ಅವು ದೇವರ ವ್ಯಕ್ತಿತ್ವದ ಒಂದು ಅಂಶವನ್ನಷ್ಟೇ ಒತ್ತಿ ಹೇಳುತ್ತೆ. ಅದೇನಂದ್ರೆ, ಆತನು ತನ್ನ ಉದ್ದೇಶವನ್ನ ನೆರವೇರಿಸೋಕೆ ಪ್ರತಿ ಸನ್ನಿವೇಶದಲ್ಲಿ ತಾನು ಯಾವ ಪಾತ್ರ ವಹಿಸೋ ಅಗತ್ಯವಿದೆಯೋ ಅದನ್ನ ವಹಿಸ್ತಾನೆ ಅಂತ ತೋರಿಸುತ್ತೆ. ಈ ಅಂಶ ಯೆಹೋವನ ಹೆಸ್ರಿನ ಅರ್ಥದಲ್ಲಿ ಇರೋದಾದ್ರೂ ಆ ಹೆಸರಿನ ಅರ್ಥ ಅಷ್ಟೇ ಅಲ್ಲ. ಯೆಹೋವ ತನ್ನ ಉದ್ದೇಶವನ್ನ ನೆರವೇರಿಸೋಕೆ ತಾನು ಏನಾಗಬೇಕೋ ಹಾಗೆ ಆಗೋದು ಮಾತ್ರ ಅಲ್ಲ, ತನ್ನ ಸೃಷ್ಟಿಯನ್ನೂ ಕೂಡ ತಾನು ಹೇಗೆ ಬಯಸುತ್ತಾನೋ ಹಾಗೆ ಆಗುವಂತೆ ಮಾಡುತ್ತಾನೆ.