ಪರಿಶಿಷ್ಟ
ಕರ್ತನ ಸಂಧ್ಯಾ ಭೋಜನ—ದೇವರಿಗೆ ಗೌರವ ತರುವ ಒಂದು ಆಚರಣೆ
ಕ್ರೈಸ್ತರಿಗೆ ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸುವಂತೆ ಆಜ್ಞಾಪಿಸಲಾಗಿದೆ. ಈ ಆಚರಣೆಯನ್ನು “ಕರ್ತನ ಭೋಜನ” ಎಂದೂ ಕರೆಯಲಾಗುತ್ತದೆ. (1 ಕೊರಿಂಥ 11:20) ಇದು ಅಷ್ಟು ವೈಶಿಷ್ಟ್ಯವುಳ್ಳದ್ದಾಗಿರುವುದೇಕೆ? ಅದನ್ನು ಯಾವಾಗ ಮತ್ತು ಹೇಗೆ ಆಚರಿಸಬೇಕು?
ಯೇಸು ಕ್ರಿಸ್ತನು ಸಾ.ಶ. 33ರಲ್ಲಿ ಯೆಹೂದಿ ಪಸ್ಕ ಹಬ್ಬದ ರಾತ್ರಿಯಂದು ಈ ಆಚರಣೆಯನ್ನು ಸ್ಥಾಪಿಸಿದನು. ಪಸ್ಕ ಹಬ್ಬವು ಕೇವಲ ವರ್ಷಕ್ಕೊಮ್ಮೆ, ಯೆಹೂದಿ ನೈಸಾನ್ ತಿಂಗಳ 14ನೆಯ ದಿನದಂದು ಆಚರಿಸಲ್ಪಡುತ್ತಿದ್ದ ಹಬ್ಬವಾಗಿತ್ತು. ಆ ದಿನವನ್ನು ಲೆಕ್ಕಿಸಲು ಯೆಹೂದ್ಯರು ವಿಷುವತ್ಸಂಕ್ರಾಂತಿಗಾಗಿ ಕಾಯುತ್ತಿದ್ದರೆಂದು ವ್ಯಕ್ತವಾಗುತ್ತದೆ. ಸುಮಾರು 12 ತಾಸು ಬೆಳಕು ಮತ್ತು 12 ತಾಸು ಕತ್ತಲೆ ಇರುವ ದಿನವೇ ಇದು. ವಿಷುವತ್ಸಂಕ್ರಾಂತಿಗೆ ಅತಿ ಸಮೀಪದ ಸಮಯದಲ್ಲಿ ಅಮಾವಾಸ್ಯೆಯ ಚಂದ್ರನು ಯಾವಾಗ ದೃಷ್ಟಿಗೆ ಬೀಳುತ್ತಾನೊ ಅದು ನೈಸಾನ್ ತಿಂಗಳ ಪ್ರಾರಂಭವಾಗಿತ್ತು. ಪಸ್ಕವು ಅಂದಿನಿಂದ 14 ದಿನಗಳ ತರುವಾಯ, ಸೂರ್ಯಾಸ್ತಮಾನವಾದ ಬಳಿಕ ಆರಂಭಗೊಳ್ಳುತ್ತಿತ್ತು.
ಯೇಸು ಪಸ್ಕವನ್ನು ತನ್ನ ಅಪೊಸ್ತಲರೊಂದಿಗೆ ಆಚರಿಸಿದ ಬಳಿಕ, ಯೂದನನ್ನು ಕಳುಹಿಸಿಬಿಟ್ಟು, ಅನಂತರವೇ ಕರ್ತನ ಸಂಧ್ಯಾ ಭೋಜನವನ್ನು ಆರಂಭಿಸಿದನು. ಈ ಭೋಜನವು ಯೆಹೂದಿ ಪಸ್ಕಕ್ಕೆ ಬದಲಿಯಾಗಿರುವುದರಿಂದ, ಇದನ್ನು ವರ್ಷಕ್ಕೊಮ್ಮೆ ಮಾತ್ರ ಆಚರಿಸಬೇಕಾಗಿದೆ.
ಮತ್ತಾಯನ ಸುವಾರ್ತೆ ವರದಿಸುವುದು: “ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಶಿಷ್ಯರಿಗೆ ಕೊಟ್ಟು—ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ ಅಂದನು. ಆ ಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟು—ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ . . . ಅಂದನು.”—ಮತ್ತಾಯ 26:26-29.
ಯೇಸು ಆ ರೊಟ್ಟಿಯನ್ನು ಅಕ್ಷರಶಃ ತನ್ನ ದೇಹವಾಗಿಯೂ ದ್ರಾಕ್ಷಾಮದ್ಯವನ್ನು ತನ್ನ ರಕ್ತವಾಗಿಯೂ ಮಾರ್ಪಡಿಸಿದನೆಂದು ಕೆಲವರು ನಂಬುತ್ತಾರೆ. ಆದರೆ ಈ ರೊಟ್ಟಿಯನ್ನು ಹಂಚಿದಾಗ ಯೇಸುವಿನ ಮಾಂಸಿಕ ದೇಹವು ಇನ್ನೂ ಸಂಪೂರ್ಣವಾಗಿತ್ತು, ಹಾನಿಗೊಳಗಾಗಿರಲಿಲ್ಲ. ಯೇಸುವಿನ ಅಪೊಸ್ತಲರು ಆಗ ಅಕ್ಷರಾರ್ಥವಾಗಿ ಅವನ ಮಾಂಸವನ್ನು ತಿಂದು ರಕ್ತವನ್ನು ಕುಡಿದರೊ? ಇಲ್ಲ, ಏಕೆಂದರೆ ಹಾಗಾಗುತ್ತಿದ್ದಲ್ಲಿ ಅದು ನರಭಕ್ಷಣೆಯಾಗುತ್ತಿತ್ತು, ಮತ್ತು ಹೀಗೆ ದೇವರ ಧರ್ಮಶಾಸ್ತ್ರದ ಉಲ್ಲಂಘನೆಯಾಗುತ್ತಿತ್ತು. (ಆದಿಕಾಂಡ 9:3, 4; ಯಾಜಕಕಾಂಡ 17:10) ಲೂಕ 22:20 ಕ್ಕನುಸಾರ, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ” ಎಂದು ಯೇಸು ಹೇಳಿದನು. ಆ ಪಾತ್ರೆಯೇ ಅಕ್ಷರಾರ್ಥದಲ್ಲಿ “ಹೊಸ ಒಡಂಬಡಿಕೆ” ಆಗಿ ಪರಿಣಮಿಸಿತೊ? ಅದು ಅಸಾಧ್ಯ, ಏಕೆಂದರೆ ಒಡಂಬಡಿಕೆಯು ಒಂದು ಒಪ್ಪಂದವಾಗಿದೆ, ಸ್ಪರ್ಶ್ಯ ವಸ್ತುವಲ್ಲ.
ಅದೇ ರೀತಿಯಲ್ಲಿ, ರೊಟ್ಟಿ ಮತ್ತು ದ್ರಾಕ್ಷಾಮದ್ಯ—ಇವೆರಡೂ ಕೇವಲ ಸಂಕೇತಗಳು. ರೊಟ್ಟಿಯು ಕ್ರಿಸ್ತನ ಪರಿಪೂರ್ಣ ದೇಹವನ್ನು ಸಂಕೇತಿಸುತ್ತದೆ. ಯೇಸು ಆ ಪಸ್ಕದ ಭೋಜನದಲ್ಲಿ ಉಳಿದಿದ್ದ ರೊಟ್ಟಿಯನ್ನು ಉಪಯೋಗಿಸಿದನು. ಆ ರೊಟ್ಟಿಯನ್ನು ಯಾವುದೇ ಹುಳಿ ಅಥವಾ ಕಿಣ್ವವಿಲ್ಲದೆ ತಯಾರಿಸಲಾಗಿತ್ತು. (ವಿಮೋಚನಕಾಂಡ 12:8) ಬೈಬಲು ಅನೇಕ ಬಾರಿ ಹುಳಿಯನ್ನು ಪಾಪ ಅಥವಾ ಭ್ರಷ್ಟತೆಯ ಸಂಕೇತವಾಗಿ ಉಪಯೋಗಿಸುತ್ತದೆ. ಹೀಗೆ ಆ ರೊಟ್ಟಿಯು ಯೇಸು ಯಜ್ಞಾರ್ಪಿಸಿದ ಪರಿಪೂರ್ಣ ದೇಹವನ್ನು ಪ್ರತಿನಿಧಿಸುತ್ತದೆ. ಅದು ಪಾಪವಿಲ್ಲದ್ದಾಗಿತ್ತು.—ಮತ್ತಾಯ 16:11, 12; 1 ಕೊರಿಂಥ 5:6, 7; 1 ಪೇತ್ರ 2:22; 1 ಯೋಹಾನ 2:1, 2.
ಆ ಕೆಂಪು ದ್ರಾಕ್ಷಾಮದ್ಯವು ಯೇಸುವಿನ ರಕ್ತವನ್ನು ಪ್ರತಿನಿಧಿಸುತ್ತದೆ. ಆ ರಕ್ತವು ಹೊಸ ಒಡಂಬಡಿಕೆಯನ್ನು ಊರ್ಜಿತಗೊಳಿಸುತ್ತದೆ. “ಪಾಪಗಳ ಕ್ಷಮೆಗಾಗಿ” ತನ್ನ ರಕ್ತವು ಸುರಿಸಲ್ಪಟ್ಟಿತೆಂದು ಯೇಸು ಹೇಳಿದನು. ಹೀಗೆ ಮಾನವರು ದೇವರ ದೃಷ್ಟಿಯಲ್ಲಿ ನಿರ್ಮಲರಾಗಿ ಕಂಡುಬಂದು ಯೆಹೋವನೊಂದಿಗಿನ ಹೊಸ ಒಡಂಬಡಿಕೆಯ ಭಾಗವಾಗಬಲ್ಲರು. (ಇಬ್ರಿಯ 9:14; 10:16, 17) ಈ ಒಡಂಬಡಿಕೆ ಅಥವಾ ಕರಾರು, 1,44,000 ಮಂದಿ ನಂಬಿಗಸ್ತ ಕ್ರೈಸ್ತರು ಸ್ವರ್ಗಕ್ಕೆ ಹೋಗುವುದನ್ನು ಸಾಧ್ಯಗೊಳಿಸುತ್ತದೆ. ಅಲ್ಲಿ ಅವರು ಸಕಲ ಮಾನವಕುಲದ ಆಶೀರ್ವಾದಕ್ಕಾಗಿ ರಾಜರೂ ಯಾಜಕರೂ ಆಗಿ ಸೇವೆಮಾಡುವರು.—ಆದಿಕಾಂಡ 22:18; ಯೆರೆಮೀಯ 31:31-33; 1 ಪೇತ್ರ 2:9; ಪ್ರಕಟನೆ 5:9, 10; 14:1-3.
ಈ ಜ್ಞಾಪಕದ ಕುರುಹುಗಳಲ್ಲಿ ಯಾರು ಪಾಲುತೆಗೆದುಕೊಳ್ಳಬೇಕು? ನ್ಯಾಯಸಮ್ಮತವಾಗಿ, ಹೊಸ ಒಡಂಬಡಿಕೆಯಲ್ಲಿರುವವರು ಮಾತ್ರ, ಅಂದರೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆಯಿರುವವರು ಮಾತ್ರ ರೊಟ್ಟಿ ಮತ್ತು ದ್ರಾಕ್ಷಾಮದ್ಯದಲ್ಲಿ ಪಾಲು ತೆಗೆದುಕೊಳ್ಳಬೇಕು. ಅವರು ಸ್ವರ್ಗೀಯ ಅರಸರಾಗಿರಲು ಆರಿಸಲ್ಪಟ್ಟಿದ್ದಾರೆ ಎಂಬುದನ್ನು ದೇವರ ಪವಿತ್ರಾತ್ಮವು ಅವರಿಗೆ ಮನದಟ್ಟುಮಾಡುತ್ತದೆ. (ರೋಮಾಪುರ 8:16) ಅವರು ಯೇಸುವಿನೊಂದಿಗಿನ ರಾಜ್ಯ ಒಡಂಬಡಿಕೆಯ ಭಾಗವೂ ಆಗುತ್ತಾರೆ.—ಲೂಕ 22:29.
ಹಾಗಾದರೆ, ಭೂಮಿಯ ಮೇಲಿನ ಪರದೈಸಿನಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯಿರುವವರ ವಿಷಯದಲ್ಲೇನು? ಅವರು ಯೇಸುವಿನ ಆಜ್ಞೆಗೆ ವಿಧೇಯರಾಗುತ್ತ ಕರ್ತನ ಸಂಧ್ಯಾ ಭೋಜನದಲ್ಲಿ ಉಪಸ್ಥಿತರಾಗುತ್ತಾರೆ. ಆದರೆ ಅವರು ಬರುವುದು ಪಾಲಿಗರಾಗುವ ಉದ್ದೇಶದಿಂದಲ್ಲ, ಗೌರವಯುತ ಪ್ರೇಕ್ಷಕರಾಗಲಿಕ್ಕಾಗಿಯೇ. ಯೆಹೋವನ ಸಾಕ್ಷಿಗಳು ವರ್ಷಕ್ಕೊಂದಾವರ್ತಿ, ನೈಸಾನ್ 14ರ ಸೂರ್ಯಾಸ್ತಮಾನದ ಬಳಿಕ ಕರ್ತನ ಸಂಧ್ಯಾ ಭೋಜನವನ್ನು ಆಚರಿಸುತ್ತಾರೆ. ಅವರಲ್ಲಿ ಲೋಕಾದ್ಯಂತ ಕೇವಲ ಕೆಲವೇ ಸಾವಿರ ಮಂದಿ ಮಾತ್ರ ತಮಗೆ ಸ್ವರ್ಗೀಯ ನಿರೀಕ್ಷೆಯಿದೆಯೆಂದು ಹೇಳಿಕೊಳ್ಳುತ್ತಾರಾದರೂ, ಈ ಆಚರಣೆಯು ಎಲ್ಲ ಕ್ರೈಸ್ತರಿಗೆ ಅಮೂಲ್ಯವಾದುದಾಗಿದೆ. ಎಲ್ಲರೂ ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಅತಿಶ್ರೇಷ್ಠ ಪ್ರೀತಿಯ ಕುರಿತು ಧ್ಯಾನಿಸಲು ಸಾಧ್ಯವಾಗುವ ಸಂದರ್ಭ ಇದಾಗಿರುತ್ತದೆ.—ಯೋಹಾನ 3:16.