ಟಿಪ್ಪಣಿಗಳು
1 ಯೆಹೋವ
ದೇವರ ಹೆಸರು ‘ಯೆಹೋವ.’ ಅದರ ಅರ್ಥ “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. ಯೆಹೋವ ದೇವರು ಸರ್ವಶಕ್ತ. ಎಲ್ಲವನ್ನು ಸೃಷ್ಟಿ ಮಾಡಿದವನು. ಏನೇ ಮಾಡಬೇಕೆಂದು ಯೋಚಿಸಿದರೂ ಅದನ್ನು ಮಾಡುವ ಶಕ್ತಿ ಆತನಿಗಿದೆ.
ಹೀಬ್ರು ಭಾಷೆಯಲ್ಲಿ ದೇವರ ಹೆಸರನ್ನು ನಾಲ್ಕು ಅಕ್ಷರಗಳಲ್ಲಿ ಬರೆಯುತ್ತಿದ್ದರು. ಆ ಅಕ್ಷರಗಳನ್ನು ಇಂಗ್ಲಿಷಿನಲ್ಲಿ ಬರೆದರೆ ಅವು ವೈ ಹೆಚ್ ಡಬ್ಲ್ಯೂ ಹೆಚ್ (YHWH) ಅಥವಾ ಜೆ ಹೆಚ್ ಡಬ್ಲ್ಯೂ ಹೆಚ್ (JHWH). ಬೈಬಲಿನ ಹೀಬ್ರು ಶಾಸ್ತ್ರಗ್ರಂಥವನ್ನು ಮೊದಲ ಬಾರಿ ಬರೆದಾಗ ಅದರಲ್ಲಿ ದೇವರ ಹೆಸರು ಸುಮಾರು 7,000 ಸಲ ಇತ್ತು. ಭೂಮಿಯ ಬೇರೆ ಬೇರೆ ಕಡೆಗಳಲ್ಲಿರುವ ಜನರು ತಮ್ಮ ತಮ್ಮ ಭಾಷೆಗನುಸಾರ ಈ ಹೆಸರನ್ನು ಉಚ್ಚರಿಸುತ್ತಾರೆ.
2 ಬೈಬಲ್ ‘ದೇವರಿಂದ ಪ್ರೇರಿತ’
ಬೈಬಲನ್ನು ಮಾನವರು ಬರೆದಿರುವುದಾದರೂ, ಅದನ್ನು ಕೊಟ್ಟವನು ದೇವರೇ ಆಗಿದ್ದಾನೆ. ಉದಾಹರಣೆಗೆ, ಒಬ್ಬ ಅಧಿಕಾರಿ ತನ್ನ ನೌಕರನ ಕೈಯಲ್ಲಿ ಒಂದು ಪತ್ರವನ್ನು ಬರೆಸುವುದಾದರೂ, ಆ ಪತ್ರದಲ್ಲಿರುವ ವಿಷಯ ಅಧಿಕಾರಿಯದ್ದೇ ಆಗಿರುತ್ತದೆ. ಅದೇರೀತಿ ದೇವರು ಪವಿತ್ರಾತ್ಮವನ್ನು ಅಂದರೆ ತನ್ನ ಶಕ್ತಿಯನ್ನು ಕೊಟ್ಟು ತನ್ನ ಆಲೋಚನೆಗಳನ್ನು ಮಾನವರ ಕೈಯಲ್ಲಿ ಬರೆಸಿದನು. ದೇವರು ಅವರನ್ನು ಕೆಲವೊಮ್ಮೆ ದರ್ಶನಗಳ ಮೂಲಕ, ಕೆಲವೊಮ್ಮೆ ಕನಸಿನ ಮೂಲಕ ಹೀಗೆ ಬೇರೆ ಬೇರೆ ರೀತಿಯಲ್ಲಿ ಮಾರ್ಗದರ್ಶಿಸಿದನು.
3 ತತ್ವಗಳು
ತತ್ವಗಳೆಂದರೆ ಬೈಬಲ್ ನಮಗೆ ಕಲಿಸುವ ಸರಳವಾದ ಪಾಠಗಳು. ಉದಾಹರಣೆಗೆ “ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ” ಎಂದು ಬೈಬಲ್ ಹೇಳುತ್ತದೆ. ನಾವು ಯಾರೊಂದಿಗೆ ಹೆಚ್ಚು ಇರುತ್ತೇವೋ, ಅವರಂತೆಯೇ ಆಗುತ್ತೇವೆ ಎಂಬ ಪಾಠವನ್ನು ನಾವು ಇದರಿಂದ ಕಲಿಯಬಹುದು. (1 ಕೊರಿಂಥ 15:33) “ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು” ಎಂಬ ವಿಷಯದಿಂದ, ನಾವು ಮಾಡುವ ಕೆಲಸದ ಪ್ರತಿಫಲವನ್ನು ನಾವು ಅನುಭವಿಸೇ ಅನುಭವಿಸುತ್ತೇವೆ ಎಂಬ ಪಾಠವನ್ನು ಕಲಿಯುತ್ತೇವೆ.—ಗಲಾತ್ಯ 6:7.
4 ಪ್ರವಾದನೆ
ಪ್ರವಾದನೆ ಅಂದರೆ ದೇವರಿಂದ ಬಂದಂಥ ಸಂದೇಶ. ಅದು ಬೋಧನೆ, ಆಜ್ಞೆ, ನ್ಯಾಯತೀರ್ಪು ಅಥವಾ ದೇವರು ಮಾಡಲು ಬಯಸುವ ವಿಷಯಗಳ ಬಗ್ಗೆ ಮಾಹಿತಿ ಆಗಿರಬಹುದು. ಕೆಲವೊಮ್ಮೆ ಮುಂದೆ ನಡೆಯಲಿರುವ ವಿಷಯಗಳ ಬಗ್ಗೆ ಮಾಹಿತಿ ಸಹ ಆಗಿರಬಹುದು. ಬೈಬಲಿನಲ್ಲಿರುವ ಅಂಥ ಅನೇಕ ಪ್ರವಾದನೆಗಳು ಈಗಾಗಲೇ ನಿಜವಾಗಿವೆ.
5 ಮೆಸ್ಸೀಯನ ಕುರಿತಾದ ಪ್ರವಾದನೆಗಳು
ಮೆಸ್ಸೀಯನ ಕುರಿತು ಬೈಬಲಿನಲ್ಲಿ ಅನೇಕ ಪ್ರವಾದನೆಗಳಿವೆ. ಆ ಪ್ರವಾದನೆಗಳು ಯೇಸುವಿನ ಜೀವನದಲ್ಲಿ ನಿಜವಾದವು. ಅವುಗಳ ಬಗ್ಗೆ ಹೆಚ್ಚನ್ನು ತಿಳಿಯಲು “ಮೆಸ್ಸೀಯನ ಕುರಿತಾದ ಪ್ರವಾದನೆಗಳು” ಎಂಬ ಚೌಕವನ್ನು ನೋಡಿ.
▸ ಅಧ್ಯಾಯ 2, ಪ್ಯಾರ 17ರ ಪಾದಟಿಪ್ಪಣಿ
6 ಭೂಮಿಯ ಬಗ್ಗೆ ಯೆಹೋವ ದೇವರ ಬಯಕೆ
ದೇವರು ಭೂಮಿಯನ್ನು ಸೃಷ್ಟಿಸಿದನು. ಈ ಭೂಮಿಯಲ್ಲಿ ತನ್ನನ್ನು ಪ್ರೀತಿಸುವ ಜನರು ಇರಬೇಕು, ಅದು ಪರದೈಸ್ ಅಂದರೆ ಸುಂದರ ತೋಟವಾಗಬೇಕು ಎಂದು ಬಯಸಿದನು. ದೇವರಿಗೆ ಈಗಲೂ ಅದೇ ಬಯಕೆಯಿದೆ. ಅತೀ ಬೇಗನೆ ದೇವರು ದುಷ್ಟತನವನ್ನು ತೆಗೆದುಹಾಕಿ ತನ್ನ ಜನರಿಗೆ ನಿತ್ಯಜೀವವನ್ನು ಕೊಡಲಿದ್ದಾನೆ.
7 ಪಿಶಾಚ ಅಥವಾ ಸೈತಾನ
ದೇವರಿಗೆ ತಿರುಗಿಬಿದ್ದ ಮೊದಲ ದೇವದೂತ ಇವನಾಗಿದ್ದನು. ಇವನನ್ನು ಸೈತಾನ ಎಂದು ಕರೆಯಲಾಗಿದೆ. ಸೈತಾನ ಅಂದರೆ “ವಿರೋಧಿಸುವವನು.” ಅವನು ಯೆಹೋವ ದೇವರನ್ನು ವಿರೋಧಿಸುವುದರಿಂದ ಅವನಿಗೆ ಈ ಹೆಸರು ಬಂತು. ಅವನನ್ನು ಪಿಶಾಚ ಎಂದು ಸಹ ಕರೆಯಲಾಗಿದೆ. ಅದರರ್ಥ, “ಸುಳ್ಳು ಆರೋಪ ಹಾಕುವವನು.” ಅವನು ದೇವರ ಬಗ್ಗೆ ಸುಳ್ಳು ಹೇಳುತ್ತಿರುವುದಕ್ಕಾಗಿ ಮತ್ತು ಮನುಷ್ಯರನ್ನು ಕೆಟ್ಟ ದಾರಿಗೆ ಎಳೆಯಲು ಪ್ರಯತ್ನಿಸುತ್ತಿರುವುದಕ್ಕಾಗಿ ಅವನಿಗೆ ಈ ಹೆಸರು ಬಂತು.
8 ದೇವದೂತರು
ಭೂಮಿಯನ್ನು ಸೃಷ್ಟಿಸುವುದಕ್ಕಿಂತ ಎಷ್ಟೋ ಮುಂಚೆ ದೇವರು ದೇವದೂತರನ್ನು ಸೃಷ್ಟಿಮಾಡಿದನು. ಸ್ವರ್ಗವೇ ಅವರ ಮನೆ. ಕೋಟಿಗಟ್ಟಲೆ ದೇವದೂತರು ಅಲ್ಲಿದ್ದಾರೆ. (ದಾನಿಯೇಲ 7:10) ಅವರಿಗೂ ಹೆಸರುಗಳಿವೆ. ಅವರ ಯೋಚನೆ, ಭಾವನೆ ಬೇರೆಬೇರೆ ಆಗಿರುತ್ತದೆ. ಅವರು ದೇವರಿಗೆ ನಿಷ್ಠೆ ತೋರಿಸುತ್ತಾರೆ ಹಾಗಾಗಿ ಮನುಷ್ಯರು ತಮ್ಮನ್ನು ಆರಾಧನೆ ಮಾಡಲು ಬಯಸುವಾಗ ದೀನತೆಯಿಂದ ಬೇಡ ಅಂತ ಹೇಳುತ್ತಾರೆ. ಅವರಿಗೂ ಬೇರೆಬೇರೆ ಸ್ಥಾನಗಳಿವೆ, ಬೇರೆಬೇರೆ ಕೆಲಸಗಳಿವೆ. ಕೆಲವರು ಯೆಹೋವನ ಸಿಂಹಾಸನದ ಮುಂದೆ ಇದ್ದು ಸೇವೆಸಲ್ಲಿಸುತ್ತಾರೆ. ಕೆಲವರು ಯೆಹೋವನ ಸಂದೇಶಗಳನ್ನು ದಾಟಿಸುತ್ತಾರೆ, ಭೂಮಿಯ ಮೇಲಿರುವ ದೇವರ ಸೇವಕರನ್ನು ಕಾಪಾಡುತ್ತಾರೆ, ಮಾರ್ಗದರ್ಶಿಸುತ್ತಾರೆ. ದೇವರು ಮಾಡಿದ ತೀರ್ಪುಗಳನ್ನು ಜಾರಿಗೆ ತರುತ್ತಾರೆ. ದೇವರ ರಾಜ್ಯದ ಸುವಾರ್ತೆ ಸಾರಲಾಗುವಂತೆ ನೋಡಿಕೊಳ್ಳುತ್ತಾರೆ. (ಕೀರ್ತನೆ 34:7; ಪ್ರಕಟನೆ 14:6; 22:8, 9) ಮುಂದೆ ಯೇಸುವಿನ ಜೊತೆಯಲ್ಲಿ ಅರ್ಮಗೆದೋನ್ ಯುದ್ಧ ಮಾಡಲಿದ್ದಾರೆ.—ಪ್ರಕಟನೆ 16:14, 16; 19:14, 15.
9 ಪಾಪ
ನಮ್ಮ ಯೋಚನೆ, ಭಾವನೆ ಅಥವಾ ಕೆಲಸ ದೇವರು ಇಷ್ಟಪಡುವಂಥ ರೀತಿಯಲ್ಲಿ ಇಲ್ಲದಿದ್ದರೆ ಅದು ಪಾಪವಾಗಿದೆ. ಯಾವಾಗ ನಾವು ಪಾಪ ಮಾಡುತ್ತೇವೋ ಆಗ ಯೆಹೋವ ದೇವರೊಟ್ಟಿಗಿರುವ ನಮ್ಮ ಸಂಬಂಧ ಹಾಳಾಗುತ್ತದೆ. ಹಾಗೆ ಆಗದಂತೆ ಯೆಹೋವ ದೇವರು ನಮಗೆ ತತ್ವಗಳನ್ನು ಮತ್ತು ನಿಯಮಗಳನ್ನು ಕೊಟ್ಟಿದ್ದಾನೆ. ಅವು ನಮಗೆ ಬೇಕುಬೇಕೆಂದು ಪಾಪ ಮಾಡದಿರಲು ಸಹಾಯಮಾಡುತ್ತವೆ. ದೇವರು ಮೊದಲ ಮನುಷ್ಯರಾದ ಆದಾಮ ಮತ್ತು ಹವ್ವಳನ್ನು ಪರಿಪೂರ್ಣರಾಗಿ ಅಂದರೆ ಯಾವುದೇ ಪಾಪ ಇಲ್ಲದವರಾಗಿ ಸೃಷ್ಟಿಮಾಡಿದ್ದನು. ಆದರೆ ಅವರು ದೇವರ ಮಾತು ಕೇಳದೆ ತಪ್ಪು ಮಾಡಿದರು. ಅದು ಅವರು ಮಾಡಿದ ಪಾಪವಾಗಿತ್ತು. ಅದರಿಂದ ಅವರು ಪರಿಪೂರ್ಣತೆಯನ್ನು ಕಳೆದುಕೊಂಡು ಅಪರಿಪೂರ್ಣರಾದರು, ಮುಂದೆ ವಯಸ್ಸಾಗಿ ಸತ್ತರು. ನಾವು ಅವರ ವಂಶದವರಾಗಿರುವುದರಿಂದ ಆ ಪಾಪ ನಮಗೂ ಬಂತು. ಹಾಗಾಗಿ ನಮಗೂ ವಯಸ್ಸಾಗುತ್ತದೆ ಮತ್ತು ನಾವೂ ಸಾಯುತ್ತೇವೆ.
10 ಅರ್ಮಗೆದೋನ್
ಸೈತಾನನ ಆಡಳಿತವನ್ನು ಮತ್ತು ದುಷ್ಟತನವನ್ನು ನಾಶಮಾಡಲು ದೇವರು ಮಾಡುವ ಯುದ್ಧವೇ ಅರ್ಮಗೆದೋನ್ ಯುದ್ಧವಾಗಿದೆ.
11 ದೇವರ ರಾಜ್ಯ
ಸ್ವರ್ಗದಲ್ಲಿರುವ ದೇವರ ಸರ್ಕಾರವೇ ದೇವರ ರಾಜ್ಯ. ಯೇಸು ಅದರ ರಾಜನಾಗಿ ಆಳುತ್ತಿದ್ದಾನೆ. ಮುಂದೆ ಯೆಹೋವ ದೇವರು ಆ ಸರ್ಕಾರದ ಮೂಲಕ ಭೂಮಿಯಲ್ಲಿರುವ ಎಲ್ಲ ದುಷ್ಟತನವನ್ನು ತೆಗೆದುಹಾಕಲಿದ್ದಾನೆ. ನಂತರ ದೇವರ ರಾಜ್ಯವು ಇಡೀ ಭೂಮಿಯನ್ನು ಆಳುತ್ತದೆ.
12 ಯೇಸು ಕ್ರಿಸ್ತ
ದೇವರು ಎಲ್ಲಕ್ಕಿಂತ ಮೊದಲು ಯೇಸುವನ್ನು ಸೃಷ್ಟಿ ಮಾಡಿದನು. ಮನುಷ್ಯರಿಗಾಗಿ ಪ್ರಾಣ ಕೊಡುವಂತೆ ಯೇಸುವನ್ನು ಭೂಮಿಗೆ ಕಳುಹಿಸಿದನು. ಯೇಸುವನ್ನು ಜನರು ಕೊಂದರು. ದೇವರು ಆತನಿಗೆ ಪುನಃ ಜೀವಕೊಟ್ಟನು. ಈಗ ಯೇಸು ಸ್ವರ್ಗದಲ್ಲಿ ದೇವರ ರಾಜ್ಯದ ರಾಜನಾಗಿ ಆಳುತ್ತಿದ್ದಾನೆ.
13 ಎಪ್ಪತ್ತು ವಾರಗಳ ಬಗ್ಗೆ ಪ್ರವಾದನೆ
ಮೆಸ್ಸೀಯನು ಯಾವಾಗ ಬರುತ್ತಾನೆ ಎಂದು ಬೈಬಲಿನಲ್ಲಿ ಮೊದಲೇ ಹೇಳಲಾಗಿತ್ತು. ಆತನು ‘69 ವಾರಗಳ’ ಕೊನೆಯಲ್ಲಿ ಬರುತ್ತಾನೆ ಎಂದು ಹೇಳಲಾಗಿತ್ತು. ಆ 69 ವಾರಗಳು ಕ್ರಿ.ಪೂ. 455ರಲ್ಲಿ ಆರಂಭವಾದವು, ಕ್ರಿ.ಶ. 29ರಲ್ಲಿ ಮುಗಿದವು.
69 ವಾರಗಳು ಕ್ರಿ.ಶ. 29ರಲ್ಲೇ ಮುಗಿದವು ಎಂದು ಹೇಗೆ ಗೊತ್ತು? ಈ ವಾರಗಳು ಆರಂಭವಾದದ್ದು ನೆಹೆಮೀಯನು ಯೆರೂಸಲೇಮಿಗೆ ಬಂದು ಆ ನಗರವನ್ನು ಕಟ್ಟಲು ಆರಂಭಿಸಿದಾಗ, ಅಂದರೆ ಕ್ರಿ.ಪೂ. 455ರಲ್ಲಿ. (ದಾನಿಯೇಲ 9:25; ನೆಹೆಮೀಯ 2:1, 5-8) ಒಂದು ವಾರ ಅಂದರೆ ಏಳು ದಿನ ತಾನೆ? ಆದರೆ ಈ ಪ್ರವಾದನೆಯಲ್ಲಿ ಒಂದು ‘ವಾರ’ ಅಂದರೆ ಏಳು ದಿನವಲ್ಲ, ಏಳು ವರ್ಷ. ಏಕೆಂದರೆ, ಪ್ರವಾದನೆಯಲ್ಲಿ ಹೇಳಿರುವ ಕಾಲವನ್ನು ಲೆಕ್ಕಿಸುವಾಗ ‘ಒಂದು ದಿನವನ್ನು ಒಂದು ವರ್ಷ’ ಎಂದು ಲೆಕ್ಕಿಸಬೇಕು ಅಂತ ಬೈಬಲಿನಲ್ಲಿ ಹೇಳಿದೆ. (ಅರಣ್ಯಕಾಂಡ 14:34; ಯೆಹೆಜ್ಕೇಲ 4:6) ಆದ್ದರಿಂದ 69 ವಾರಗಳ ಪ್ರವಾದನೆಯಲ್ಲಿ ಒಂದು ವಾರ ಅಂದರೆ 7 ವರ್ಷಗಳು. ಹಾಗಾದರೆ 69 ವಾರಗಳು ಅಂದರೆ 483 ವರ್ಷಗಳು (69 x 7). ನಾವು ಕ್ರಿ.ಪೂ. 455ರಿಂದ 483 ವರ್ಷ ಮುಂದೆ ಬಂದರೆ ಕ್ರಿ.ಶ. 29ಕ್ಕೆ ಬರುತ್ತೇವೆ. ಅದೇ ವರ್ಷದಲ್ಲಿ ಯೇಸು ದೀಕ್ಷಾಸ್ನಾನ ತಗೆದುಕೊಂಡು ಮೆಸ್ಸೀಯನಾದನು.—ಲೂಕ 3:1, 2, 21, 22.
69 ವಾರಗಳು ಮುಗಿದ ನಂತರ ಬರುವ ಇನ್ನೂ ‘ಒಂದು ವಾರದ’ ಬಗ್ಗೆ ಅಂದರೆ 7 ವರ್ಷಗಳ ಬಗ್ಗೆ ಕೂಡ ಬೈಬಲ್ನಲ್ಲಿ ಹೇಳಿತ್ತು. ಈ ಏಳು ವರ್ಷಗಳ ಸಮಯದಲ್ಲಿ (ಕ್ರಿ.ಶ. 30ರಿಂದ ಕ್ರಿ.ಶ. 36) ಏನಾಗುವುದೆಂದು ಕೂಡ ತಿಳಿಸಲಾಗಿತ್ತು. ಕ್ರಿ.ಶ. 33ರಲ್ಲಿ ಯೇಸುವನ್ನು ಕೊಲ್ಲಲಾಗುತ್ತದೆ, ಕ್ರಿ.ಶ. 36ರಿಂದ ದೇವರ ರಾಜ್ಯದ ಸುವಾರ್ತೆಯನ್ನು ಯೆಹೂದ್ಯರಿಗೆ ಮಾತ್ರ ಅಲ್ಲ, ಬೇರೆ ಜನರಿಗೂ ಸಾರಲಾಗುತ್ತದೆ ಎಂದು ಆ ಪ್ರವಾದನೆಯಿಂದ ಗೊತ್ತಾಯಿತು.—ದಾನಿಯೇಲ 9:24-27.
14 ‘ಮೂವರು ಸೇರಿ ಒಬ್ಬನೇ ದೇವರು’ ಎಂಬ ಬೋಧನೆ
ಎಲ್ಲವನ್ನು ಸೃಷ್ಟಿಸಿದವನು ಯೆಹೋವ ದೇವರು. ಯೇಸುವನ್ನು ಕೂಡ ಆತನೇ ಸೃಷ್ಟಿಸಿದನು ಎಂದು ಬೈಬಲ್ ಹೇಳುತ್ತದೆ. (ಕೊಲೊಸ್ಸೆ 1:15, 16) ಯೇಸು ಸರ್ವಶಕ್ತ ದೇವರಲ್ಲ. ತಾನು ದೇವರಿಗೆ ಸಮಾನನು ಎಂದು ಆತನು ಯಾವತ್ತೂ ಹೇಳಲಿಲ್ಲ. ಬದಲಿಗೆ “ತಂದೆಯು ನನಗಿಂತಲೂ ದೊಡ್ಡವನು” ಎಂದು ಹೇಳಿದನು. (ಯೋಹಾನ 14:28; 1 ಕೊರಿಂಥ 15:28) ಕೆಲವು ಧರ್ಮದವರು ತಂದೆ, ಮಗ, ಪವಿತ್ರಾತ್ಮ ಸೇರಿ ಒಬ್ಬನೇ ದೇವರು ಎಂದು ಕಲಿಸುತ್ತಾರೆ. ಆದರೆ ಈ ವಿಷಯ ಬೈಬಲಿನಲ್ಲಿ ಇಲ್ಲವೇ ಇಲ್ಲ. ಇದು ಸುಳ್ಳಾಗಿದೆ.
ಪವಿತ್ರಾತ್ಮ ಒಬ್ಬ ವ್ಯಕ್ತಿಯಲ್ಲ. ದೇವರು ತನ್ನ ಕೆಲಸವನ್ನು ಮಾಡಲು ಉಪಯೋಗಿಸುವ ಆತನ ಶಕ್ತಿಯಾಗಿದೆ. ಇದನ್ನು ಹೇಗೆ ಹೇಳಲು ಸಾಧ್ಯ? ಒಂದು ವೇಳೆ ಪವಿತ್ರಾತ್ಮ ವ್ಯಕ್ತಿಯಾಗಿದ್ದರೆ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ‘ಪವಿತ್ರಾತ್ಮದಿಂದ ತುಂಬಿದರು’ ಎಂದು ಮತ್ತು ಯೆಹೋವನು “ನಾನು ಎಲ್ಲ ಮನುಷ್ಯರ ಮೇಲೆ ನನ್ನ ಪವಿತ್ರಾತ್ಮವನ್ನು ಸುರಿಸುವೆನು” ಎಂದು ಹೇಗೆ ಹೇಳಲು ಸಾಧ್ಯ? ಹಾಗಾದರೆ ಪವಿತ್ರಾತ್ಮ ಶಕ್ತಿಯಾಗಿದೆ, ವ್ಯಕ್ತಿಯಲ್ಲ.—ಅಪೊಸ್ತಲರ ಕಾರ್ಯಗಳು 2:1-4, 17.
15 ಶಿಲುಬೆ
ನಿಜವಾದ ಕ್ರೈಸ್ತರು ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲ. ಯಾಕೆ?
ತುಂಬ ವರ್ಷಗಳಿಂದ ಶಿಲುಬೆಯನ್ನು ಸುಳ್ಳು ಧರ್ಮದವರು ಬಳಸುತ್ತಾ ಬಂದಿದ್ದಾರೆ. ಅದನ್ನು ಪ್ರಕೃತಿಯ ಆರಾಧನೆಯಲ್ಲಿ ಮತ್ತು ಸಂತಾನ ಉತ್ಪತ್ತಿಗೆ ಸಂಬಂಧಿಸಿದ ಸಂಪ್ರದಾಯಗಳಲ್ಲಿ ಬಳಸಲಾಗುತ್ತಿತ್ತು. ಯೇಸು ಸತ್ತ ನಂತರದ 300 ವರ್ಷಗಳಲ್ಲಿ ಜೀವಿಸಿದ ಕ್ರೈಸ್ತರು ಶಿಲುಬೆಯನ್ನು ತಮ್ಮ ಆರಾಧನೆಯಲ್ಲಿ ಬಳಸಲಿಲ್ಲ. ಆದರೆ ರೋಮಿನ ಸಾಮ್ರಾಟನಾಗಿದ್ದ ಕಾನ್ಸ್ಟೆಂಟೀನ್ ಎಂಬವನು ಶಿಲುಬೆಯನ್ನು ಕ್ರೈಸ್ತ ಧರ್ಮದ ಗುರುತಾಗಿ ಮಾಡಿದನು. ಕ್ರೈಸ್ತ ಧರ್ಮ ಹೆಚ್ಚು ಪ್ರಸಿದ್ಧ ಆಗಬೇಕೆಂಬ ಉದ್ದೇಶದಿಂದ ಶಿಲುಬೆಯನ್ನು ಬಳಸಲಾಯಿತು. ಆದರೆ ಶಿಲುಬೆಗೂ ಯೇಸು ಕ್ರಿಸ್ತನಿಗೂ ಏನೂ ಸಂಬಂಧ ಇಲ್ಲ. ಒಂದು ಕ್ಯಾಥೊಲಿಕ್ ಪುಸ್ತಕ (ನ್ಯೂ ಕ್ಯಾಥೊಲಿಕ್ ಎನ್ಸೈಕ್ಲಪೀಡಿಯ) ಹೀಗೆ ಹೇಳಿತು: “ಯೇಸು ಹುಟ್ಟುವುದಕ್ಕಿಂತ ಮುಂಚೆ ಇದ್ದ ಸಂಪ್ರದಾಯಗಳಲ್ಲಿ ಮತ್ತು ಯೇಸು ಸತ್ತ ನಂತರ ಕ್ರೈಸ್ತರಲ್ಲದವರ ಸಂಪ್ರದಾಯಗಳಲ್ಲಿ ಶಿಲುಬೆಯನ್ನು ಬಳಸಲಾಗುತ್ತಿತ್ತು.”
ಜನರು ಶಿಲುಬೆ ಅಂದರೆ ಒಂದರ ಮೇಲೆ ಒಂದು ಅಡ್ಡವಾಗಿ ಇಟ್ಟಿರುವ ಮರದ ಎರಡು ದಿಮ್ಮಿಗಳು ಎಂದು ಅರ್ಥಮಾಡಿಕೊಳ್ಳುತ್ತಾರೆ. ಆದರೆ “ಶಿಲುಬೆ” ಎಂದು ಅನುವಾದ ಮಾಡಿರುವ ಗ್ರೀಕ್ ಪದದ ಅರ್ಥ “ನೆಟ್ಟಗಿನ ಒಂದು ಕಂಬ,” “ಮರದ ಒಂದು ದಿಮ್ಮಿ” ಅಥವಾ “ಒಂದು ಮರ” ಎಂದಾಗಿದೆ. ಹಾಗಾಗಿ ಯೇಸು ಸತ್ತದ್ದು ನೆಟ್ಟಗಿನ ಒಂದು ಕಂಬದ ಮೇಲೆ. ದ ಕಂಪ್ಯಾನಿಯನ್ ಬೈಬಲ್ ಹೀಗೆ ಹೇಳುತ್ತದೆ: ‘ಮರದ ಎರಡು ಕಂಬಗಳು ಎನ್ನುವ ಅರ್ಥಬರುವ ಯಾವ ಪದವೂ ಗ್ರೀಕ್ ಭಾಷೆಯ ಹೊಸ ಒಡಂಬಡಿಕೆಯಲ್ಲಿ ಇಲ್ಲ.’
ನಾವು ವಿಗ್ರಹಗಳನ್ನು, ಗುರುತು-ಪ್ರತೀಕಗಳನ್ನು ಆರಾಧಿಸುವುದಾಗಲಿ ಆರಾಧನೆಯಲ್ಲಿ ಬಳಸುವದಾಗಲಿ ಯೆಹೋವ ದೇವರಿಗೆ ಸ್ವಲ್ಪವೂ ಇಷ್ಟ ಇಲ್ಲ.—ವಿಮೋಚನಕಾಂಡ 20:4, 5; 1 ಕೊರಿಂಥ 10:14.
16 ಸ್ಮರಣೆ
ತನ್ನ ಮರಣವನ್ನು ನೆನಪಿಸಿಕೊಳ್ಳುವಂತೆ ಯೇಸು ತನ್ನ ಶಿಷ್ಯರಿಗೆ ಆಜ್ಞೆ ಕೊಟ್ಟನು. ಅವರು ಇದನ್ನು ಪ್ರತಿವರ್ಷ ನೈಸಾನ್ ತಿಂಗಳಿನ 14ನೇ ತಾರೀಖಿನಂದು ಮಾಡುತ್ತಾರೆ. ಇದೇ ತಾರೀಖಿನಂದು ಇಸ್ರಾಯೇಲ್ಯರು ಪಸ್ಕ ಎಂಬ ಹಬ್ಬವನ್ನು ಆಚರಿಸುತ್ತಿದ್ದರು. ಯೇಸುವಿನ ದೇಹವನ್ನು ಸೂಚಿಸುವ ರೊಟ್ಟಿಯನ್ನು ಮತ್ತು ರಕ್ತವನ್ನು ಸೂಚಿಸುವ ದ್ರಾಕ್ಷಾಮದ್ಯವನ್ನು ಆ ದಿನ ಒಬ್ಬರಿಂದ ಒಬ್ಬರಿಗೆ ದಾಟಿಸುತ್ತಾರೆ. ಯಾರು ಯೇಸುವಿನೊಟ್ಟಿಗೆ ಸ್ವರ್ಗದಲ್ಲಿ ರಾಜರಾಗಿ ಆಳಲಿದ್ದಾರೋ ಅವರು ಈ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸೇವಿಸುತ್ತಾರೆ. ಆದರೆ ಭೂಮಿಯ ಮೇಲೆ ಸಾವಿಲ್ಲದ ಜೀವನವನ್ನು ಪಡೆಯಲಿರುವವರು ಅವುಗಳನ್ನು ಸೇವಿಸುವುದಿಲ್ಲ. ಅವರು ಸ್ಮರಣೆಗೆ ಹಾಜರಾಗುವ ಮೂಲಕ ಅದಕ್ಕೆ ಗೌರವವನ್ನು ತೋರಿಸುತ್ತಾರೆ.
17 ಆತ್ಮ
ಬೈಬಲನ್ನು ಮೊಟ್ಟಮೊದಲು ಬರೆದಾಗ “ಆತ್ಮ” ಎಂಬ ಪದವನ್ನು (1) ವ್ಯಕ್ತಿಗೆ (2) ಪ್ರಾಣಿಗೆ (3) ವ್ಯಕ್ತಿಯ ಅಥವಾ ಪ್ರಾಣಿಯ ಜೀವಕ್ಕೆ ಸೂಚಿಸಲು ಬಳಸಲಾಗಿದೆ. ಕೆಲವು ಉದಾಹರಣೆಗಳು ಇಲ್ಲಿವೆ:
ವ್ಯಕ್ತಿ: “ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನು ಸಲ್ಲಿಸಲೋ?” (ಮೀಕ 6:7) ಇಲ್ಲಿ ಆತ್ಮ ಎಂದು ಬಳಸಿರುವ ಪದ ವ್ಯಕ್ತಿಯನ್ನು ಸೂಚಿಸುತ್ತದೆ.
ವ್ಯಕ್ತಿಯ ಅಥವಾ ಪ್ರಾಣಿಯ ಜೀವ: “ನನ್ನ ಆತ್ಮವು ಈ ಅಸ್ಥಿಪಂಜರದಲ್ಲಿ ಉಳಿಯುವದಕ್ಕಿಂತಲೂ ಉಸಿರುಕಟ್ಟಿ ಸಾಯುವದೇ ಲೇಸೆಂದು ಇಚ್ಛೈಸುತ್ತದೆ.” (ಯೋಬ 7:15) “ಮನುಷ್ಯನ ಆತ್ಮವು ಮೇಲಕ್ಕೆ ಏರುತ್ತದೋ ಪಶುವಿನ ಆತ್ಮವು ಕೆಳಕ್ಕೆ ಇಳಿದು ಭೂಮಿಗೆ ಸೇರುತ್ತದೋ ಯಾರಿಗೆ ಗೊತ್ತು?”—ಪ್ರಸಂಗಿ 3:21.
ಇನ್ನು ಕೆಲವು ಕಡೆಗಳಲ್ಲಿ “ಆತ್ಮ” ಎಂಬ ಪದವನ್ನು ಒಬ್ಬ ವ್ಯಕ್ತಿಯ ಭಾವನೆಗಳಿಗೆ, ಆಸೆ ಆಕಾಂಕ್ಷೆಗೆ ಸೂಚಿಸಿ ಮಾತಾಡಲಾಗಿದೆ. ಕೆಲವೊಮ್ಮೆ ಸತ್ತ ಮನುಷ್ಯನ ಮೃತ ದೇಹವನ್ನು ಸಹ ಮೃತ ಆತ್ಮ ಎಂದು ಕರೆಯಲಾಗಿದೆ.—ದಾನಿಯೇಲ 7:15; ಯೆಶಾಯ 58:11; ಜ್ಞಾನೋಕ್ತಿ 25:28.
ಇನ್ನೂ ಕೆಲವು ಕಡೆಗಳಲ್ಲಿ ಆತ್ಮ ಎನ್ನುವ ಪದವನ್ನು ಕಣ್ಣಿಗೆ ಕಾಣದ ವಿಷಯಗಳಿಗೆ ಅಂದರೆ ಗಾಳಿಗೆ, ಉಸಿರಿಗೆ, ದೇವದೂತರಿಗೆ ಮತ್ತು ದೇವರ ಪವಿತ್ರ ಶಕ್ತಿಗೆ ಸೂಚಿಸಿ ಬಳಸಲಾಗಿದೆ. ಉದಾಹರಣೆಗೆ,
“ಕಡೆಯಲ್ಲಿ ಒಂದು ಆತ್ಮವು [ದೇವದೂತನು] ಯೆಹೋವನ ಮುಂದೆ ಬಂದು ನಿಂತು ಆತನಿಗೆ—ನಾನು ಹೋಗಿ ಅವನನ್ನು ಪ್ರೇರಿಸುವೆನು ಅಂದಿತು.” (2 ಪೂರ್ವಕಾಲವೃತ್ತಾಂತ 18:20)
“ಫರೋಹನು ತನ್ನ ಪರಿವಾರದವರಿಗೆ—ಈತನಲ್ಲಿ ದೇವರ ಆತ್ಮ [ಶಕ್ತಿ] ಉಂಟಲ್ಲಾ” ಎಂದನು. (ಆದಿಕಾಂಡ 41:38)
“ಮನುಷ್ಯನ ಆತ್ಮವು [ಉಸಿರು] ಯೆಹೋವನ ದೀಪವಾಗಿದೆ.” (ಜ್ಞಾನೋಕ್ತಿ 20:27)
ಈ ಎಲ್ಲ ಉದಾಹರಣೆಗಳಿಂದ ನಮಗೆ ತಿಳಿಯುವುದೇನೆಂದರೆ, ಒಬ್ಬ ಮನುಷ್ಯನು ಸತ್ತ ನಂತರ ಅವನ ಆತ್ಮ ಬದುಕಿ ಉಳಿಯುತ್ತದೆ ಎಂದು ಬೈಬಲಿನಲ್ಲಿ ಎಲ್ಲಿಯೂ ಹೇಳಿಲ್ಲ.
18 ಗೆಹೆನ್ನ
ಗೆಹೆನ್ನ ಎನ್ನುವುದು ಯೆರೂಸಲೇಮಿಗೆ ಹತ್ತಿರವಿದ್ದಂಥ ಒಂದು ಕಣಿವೆಯ ಹೆಸರು. ಅದರಲ್ಲಿ ಕಸವನ್ನು ಸುಟ್ಟು ನಾಶಮಾಡಲಾಗುತ್ತಿತ್ತು. ಆದರೆ ಯೇಸುವಿನ ಸಮಯದಲ್ಲಿ ಮನುಷ್ಯರನ್ನು, ಪ್ರಾಣಿಗಳನ್ನು ಈ ಕಣಿವೆಯಲ್ಲಿ ಹಾಕಿ ಸುಟ್ಟು ಚಿತ್ರ ಹಿಂಸೆ ಕೊಡಲಾಗುತ್ತಿತ್ತು ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಹಾಗಾಗಿ, ಮನುಷ್ಯರು ಸತ್ತ ಮೇಲೆ ಅವರಿಗೆ ನಿತ್ಯಕ್ಕೂ ಹಿಂಸೆಕೊಡುವ ಮತ್ತು ಬೆಂಕಿಗೆ ಹಾಕಿ ಸುಡುವ ಅದೃಶ್ಯ ಸ್ಥಳವೊಂದನ್ನು ಗೆಹೆನ್ನ ಸೂಚಿಸುವುದಿಲ್ಲ. ಯೇಸು ಯಾವಾಗೆಲ್ಲಾ ಗೆಹೆನ್ನದ ಬಗ್ಗೆ ಮಾತಾಡಿದನೋ, ಆಗೆಲ್ಲಾ ಆತನು ಸಂಪೂರ್ಣ ನಾಶನಕ್ಕೆ ಸೂಚಿಸುತ್ತಿದ್ದನು.—ಮತ್ತಾಯ 5:22; 10:28.
19 ಕರ್ತನ ಪ್ರಾರ್ಥನೆ
ಪ್ರಾರ್ಥನೆಯನ್ನು ಹೇಗೆ ಮಾಡಬೇಕೆಂದು ತನ್ನ ಶಿಷ್ಯರಿಗೆ ಕಲಿಸಲಿಕ್ಕಾಗಿ ಯೇಸು ಈ ಪ್ರಾರ್ಥನೆಯನ್ನು ಮಾಡಿ ತೋರಿಸಿದನು. ಇದನ್ನು ‘ಪರಲೋಕದಲ್ಲಿರುವ ನಮ್ಮ ತಂದೆಯೇ’ ಪ್ರಾರ್ಥನೆ ಮತ್ತು ‘ಮಾದರಿ ಪ್ರಾರ್ಥನೆ’ ಎಂದು ಸಹ ಕರೆಯುತ್ತಾರೆ. ಈ ಪ್ರಾರ್ಥನೆಯಲ್ಲಿ ಯೇಸು ಈ ವಿಷಯಗಳಿಗಾಗಿ ಬೇಡಿಕೊಳ್ಳುವಂತೆ ಕಲಿಸಿದನು:
“ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ”
ಯೆಹೋವನ ವಿರುದ್ಧ ಅನೇಕ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಇದರಿಂದ ಆತನ ಹೆಸರಿಗೆ ಕಳಂಕ ಬಂದಿದೆ. ಅದನ್ನು ತೆಗೆದುಹಾಕುವಂತೆ ನಾವು ಪ್ರಾರ್ಥಿಸುತ್ತೇವೆ. ಈ ಕಳಂಕ ಇಲ್ಲದೆ ಹೋದಾಗ ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರು ಯೆಹೋವ ದೇವರ ಹೆಸರಿಗೆ ಗೌರವ ಮಹಿಮೆ ಕೊಡಲು ಆಗುತ್ತದೆ.
“ನಿನ್ನ ರಾಜ್ಯವು ಬರಲಿ”
ದೇವರ ಸರ್ಕಾರವು ಸೈತಾನನ ದುಷ್ಟ ವ್ಯವಸ್ಥೆಯನ್ನು ನಾಶಮಾಡಿ ಇಡೀ ಭೂಮಿಯನ್ನು ಆಳುವಂತೆ ಮತ್ತು ಭೂಮಿಯನ್ನು ಸುಂದರ ತೋಟವನ್ನಾಗಿ ಮಾಡುವಂತೆ ನಾವು ಪ್ರಾರ್ಥಿಸುತ್ತೇವೆ.
“ನಿನ್ನ ಚಿತ್ತವು . . . ಭೂಮಿಯಲ್ಲಿಯೂ ನೆರವೇರಲಿ”
ಯೆಹೋವ ದೇವರು ಈ ಭೂಮಿಯ ಬಗ್ಗೆ ಯಾವ ಆಸೆಯನ್ನು ಇಟ್ಟುಕೊಂಡಿದ್ದನೋ ಆ ಆಸೆ ನೆರವೇರಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಆಗ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳುವ ಪರಿಪೂರ್ಣ ಮನುಷ್ಯರೆಲ್ಲರೂ ಸುಂದರ ತೋಟವಾಗಲಿರುವ ಈ ಭೂಮಿಯಲ್ಲಿ ಸಾವೇ ಇಲ್ಲದೆ ಜೀವಿಸಲು ಆಗುತ್ತದೆ.
20 ವಿಮೋಚನಾ ಮೌಲ್ಯ
ಮನುಷ್ಯರನ್ನು ಪಾಪ ಮತ್ತು ಮರಣದಿಂದ ಬಿಡಿಸಲು ಯೆಹೋವ ದೇವರು ವಿಮೋಚನಾ ಮೌಲ್ಯವನ್ನು ಕೊಟ್ಟನು. ಇದರಿಂದಾಗಿ ಮೊದಲ ಮಾನವನಾದ ಆದಾಮ ಕಳೆದುಕೊಂಡ ಪರಿಪೂರ್ಣ ಜೀವವನ್ನು ಮನುಷ್ಯರೆಲ್ಲರೂ ಪುನಃ ಪಡೆಯಲು ಮತ್ತು ಯೆಹೋವನೊಂದಿಗೆ ಕಳೆದುಹೋದ ಸಂಬಂಧವನ್ನು ಮತ್ತೆ ಬೆಸೆಯಲು ಸಾಧ್ಯವಾಗುತ್ತದೆ. ದೇವರು ಯೇಸುವನ್ನು ಪಾಪಿಗಳಾಗಿರುವ ನಮಗಾಗಿ ಪ್ರಾಣ ಕೊಡಲಿಕ್ಕಾಗಿಯೇ ಭೂಮಿಗೆ ಕಳುಹಿಸಿದನು. ಯೇಸು ತನ್ನ ಜೀವ ಕೊಟ್ಟಿದ್ದರಿಂದ ಸಾವೇ ಇಲ್ಲದೆ ಜೀವಿಸುವ ಮತ್ತು ಪರಿಪೂರ್ಣರಾಗುವ ಅವಕಾಶ ಮನುಷ್ಯರಿಗಿದೆ.
21 ಇಸವಿ 1914 ಯಾಕೆ ಪ್ರಾಮುಖ್ಯ?
ದೇವರು ತನ್ನ ರಾಜ್ಯವನ್ನು ಅಂದರೆ ಸರ್ಕಾರವನ್ನು 1914ರಲ್ಲಿ ಸ್ಥಾಪಿಸಿದನು. ಇದು ನಮಗೆ ಹೇಗೆ ಗೊತ್ತು? ದಾನಿಯೇಲ ಪುಸ್ತಕದ 4ನೇ ಅಧ್ಯಾಯದಲ್ಲಿರುವ ಪ್ರವಾದನೆಯಿಂದ ಇದು ಗೊತ್ತಾಗುತ್ತದೆ.
ಪ್ರವಾದನೆ ಏನಾಗಿತ್ತು? ರಾಜ ನೆಬೂಕದ್ನೆಚ್ಚರನಿಗೆ ಒಂದು ಕನಸು ಬೀಳುವಂತೆ ಯೆಹೋವ ದೇವರು ಮಾಡಿದನು. ಒಂದು ದೊಡ್ಡ ಮರವನ್ನು ಕಡಿದು ಹಾಕುವುದನ್ನು ರಾಜನು ಆ ಕನಸಿನಲ್ಲಿ ಕಂಡನು. ನಂತರ ಆ ಮರ ‘ಏಳು ಕಾಲಗಳ’ ವರೆಗೆ ಬೆಳೆಯದಂತೆ ಅದರ ಬುಡಕ್ಕೆ ಕಬ್ಬಿಣ ಮತ್ತು ತಾಮ್ರದ ಪಟ್ಟಿಯನ್ನು ಬಿಗಿದರು. ಏಳು ಕಾಲಗಳು ಕಳೆದ ಮೇಲೆ ಅದು ಪುನಃ ಬೆಳೆಯಿತು. ಈ ಕನಸಿನ ಮೂಲಕ ದೇವರು ಮುಂದೆ ಏನಾಗಲಿದೆ ಎನ್ನುವುದನ್ನು ತಿಳಿಸಿದನು.—ದಾನಿಯೇಲ 4:1, 10-16, ಪಾದಟಿಪ್ಪಣಿ.
ಪ್ರವಾದನೆಯ ಅರ್ಥವೇನು? ಕನಸಿನಲ್ಲಿ ಕಂಡ ‘ಮರ’ ದೇವರ ಆಳ್ವಿಕೆಯನ್ನು ಸೂಚಿಸುತ್ತದೆ. ದೇವರು ತುಂಬ ವರ್ಷಗಳ ವರೆಗೆ ಇಸ್ರಾಯೇಲ್ ಜನಾಂಗವನ್ನು ಆಳಲು ರಾಜರನ್ನು ಬಳಸಿದನು. ಆ ರಾಜರು ಯೆರೂಸಲೇಮಿನಿಂದ ಆಳುತ್ತಿದ್ದರು. (1 ಪೂರ್ವಕಾಲವೃತ್ತಾಂತ 29:23) ಆದರೆ ಆ ರಾಜರು ದೇವರ ಮಾತನ್ನು ಕೇಳದೇ ಇದ್ದದರಿಂದ ಅವರ ಆಳ್ವಿಕೆ ಕೊನೆಯಾಯಿತು. ಕ್ರಿ.ಪೂ. 607ರಲ್ಲಿ ಯೆರೂಸಲೇಮ್ ನಾಶವಾಯಿತು. ಆಗಲೇ ಕನಸಿನಲ್ಲಿ ಹೇಳಲಾದ ಆ “ಏಳು ಕಾಲಗಳು” ಆರಂಭವಾಗಿದ್ದು. (2 ಅರಸುಗಳು 25:1, 8-10; ಯೆಹೆಜ್ಕೇಲ 21:25-27) “ಅನ್ಯಜನಾಂಗಗಳ ನೇಮಿತ ಕಾಲಗಳು ತೀರುವ ತನಕ ಯೆರೂಸಲೇಮ್ ಪಟ್ಟಣವು ಅನ್ಯಜನಾಂಗಗಳಿಂದ ತುಳಿದಾಡಲ್ಪಡುವುದು” ಎಂದು ಯೇಸು ಹೇಳಿದನು. ಆತನು ಹೇಳಿದ ಈ ಮಾತು ‘ಏಳು ಕಾಲಗಳ’ ಬಗ್ಗೆಯೇ ಆಗಿತ್ತು. (ಲೂಕ 21:24) ಯೇಸು ಭೂಮಿಯಲ್ಲಿದ್ದಾಗ ಈ “ಏಳು ಕಾಲಗಳು” ಕೊನೆಗೊಂಡಿರಲಿಲ್ಲ ಎಂದು ಇದರಿಂದ ಗೊತ್ತಾಗುತ್ತದೆ. ಆ ‘ಏಳು ಕಾಲಗಳ’ ಕೊನೆಯಲ್ಲಿ ಒಬ್ಬ ರಾಜನನ್ನು ನೇಮಿಸುವೆನು ಎಂದು ಯೆಹೋವ ದೇವರು ಮಾತುಕೊಟ್ಟನು. ಈ ಹೊಸ ರಾಜ ಯೇಸು ಆಗಿದ್ದಾನೆ. ಆತನ ಆಳ್ವಿಕೆಯಿಂದ ಭೂಮಿಯಲ್ಲಿರುವ ದೇವಜನರೆಲ್ಲರೂ ನಿತ್ಯನಿರಂತರಕ್ಕೂ ಆಶೀರ್ವಾದಗಳನ್ನು ಪಡೆಯುವರು.—ಲೂಕ 1:30-33.
“ಏಳು ಕಾಲಗಳು” ಅಂದರೆ ಎಷ್ಟು ಸಮಯ? “ಏಳು ಕಾಲಗಳು” ಅಂದರೆ 2,520 ವರ್ಷಗಳು. “ಏಳು ಕಾಲಗಳು” ಆರಂಭವಾದದ್ದು ಕ್ರಿ.ಪೂ. 607ರಲ್ಲಿ ಎಂದು ನಾವು ಈಗಾಗಲೇ ತಿಳಿದುಕೊಂಡೆವು. ಅಲ್ಲಿಂದ 2,520 ವರ್ಷಗಳನ್ನು ಎಣಿಸುತ್ತಾ ಬಂದರೆ ನಾವು 1914ಕ್ಕೆ ಬಂದು ನಿಲ್ಲುತ್ತೇವೆ. ಅದೇ ವರ್ಷದಲ್ಲಿ ದೇವರು ಮೆಸ್ಸೀಯನಾದ ಯೇಸುವನ್ನು ಸ್ವರ್ಗದಲ್ಲಿ ದೇವರ ರಾಜ್ಯದ ರಾಜನಾಗಿ ಮಾಡಿದನು.
“ಏಳು ಕಾಲಗಳು” ಅಂದರೆ 2,520 ವರ್ಷಗಳು ಎಂದು ನಮಗೆ ಹೇಗೆ ಗೊತ್ತು? ‘ಮೂರುವರೆ ಕಾಲಗಳು’ ಅಂದರೆ 1,260 ದಿನಗಳು ಎಂದು ಬೈಬಲಿನಲ್ಲಿ ಹೇಳಲಾಗಿದೆ. (ಪ್ರಕಟನೆ 12:6, 14) ಹಾಗಾದರೆ “ಏಳು ಕಾಲಗಳು” ಅಂದರೆ 2,520 ದಿನಗಳು (1,260 x 2). ಪ್ರವಾದನೆಗಳಲ್ಲಿ ಕಾಲವನ್ನು ಲೆಕ್ಕಿಸುವಾಗ “ದಿನ ಒಂದಕ್ಕೆ ಒಂದು ಸಂವತ್ಸರ [ವರ್ಷ]” ಎಂದು ಲೆಕ್ಕಿಸಬೇಕೆಂದು ಬೈಬಲ್ ಹೇಳುತ್ತದೆ. ಹಾಗಾಗಿ 2,520 ದಿನಗಳು ಅಂದರೆ 2,520 ವರ್ಷಗಳು.—ಅರಣ್ಯಕಾಂಡ 14:34; ಯೆಹೆಜ್ಕೇಲ 4:6.
22 ಪ್ರಧಾನ ದೇವದೂತನಾದ ಮೀಕಾಯೇಲ
“ಪ್ರಧಾನ ದೇವದೂತ” ಅಂದರೆ ದೇವದೂತರಲ್ಲಿ ಪ್ರಮುಖನು. ಬೈಬಲಿನಲ್ಲಿ ಒಬ್ಬನೇ ಒಬ್ಬ ಪ್ರಧಾನ ದೇವದೂತನ ಬಗ್ಗೆ ಹೇಳಲಾಗಿದೆ. ಅವನ ಹೆಸರು ಮೀಕಾಯೇಲ.—ದಾನಿಯೇಲ 12:1; ಯೂದ 9.
ನಂಬಿಗಸ್ತ ದೇವದೂತರ ಸೈನ್ಯದ ನಾಯಕ ಈ ಮೀಕಾಯೇಲ. ಪ್ರಕಟನೆ 12:7ರಲ್ಲಿ ಬೈಬಲ್ ಹೀಗೆ ಹೇಳುತ್ತದೆ: ‘ಮೀಕಾಯೇಲನೂ ಅವನ ದೂತರೂ ಘಟಸರ್ಪದೊಂದಿಗೆ ಮತ್ತು ಅದರ ದೂತರೊಂದಿಗೆ ಯುದ್ಧಮಾಡಿದರು.’ ದೇವರ ಸೈನ್ಯದ ನಾಯಕ ಯೇಸುವಾಗಿದ್ದಾನೆ ಎಂದು ಪ್ರಕಟನೆ ಪುಸ್ತಕದಲ್ಲಿ ಹೇಳಲಾಗಿದೆ. ಯೇಸುವಿಗೆ ಇರುವ ಇನ್ನೊಂದು ಹೆಸರೇ ಮೀಕಾಯೇಲ ಎಂದು ಇದರಿಂದ ಗೊತ್ತಾಗುತ್ತದೆ.—ಪ್ರಕಟನೆ 19:14-16.
23 ಕಡೇ ದಿವಸಗಳು
ಈ ದುಷ್ಟ ಲೋಕವು ನಾಶವಾಗುವುದಕ್ಕಿಂತ ಮುಂಚೆ ಭೂಮಿಯ ಮೇಲೆ ಕೆಲವು ದೊಡ್ಡ ಘಟನೆಗಳು ನಡೆಯುವವು ಎಂದು ಬೈಬಲಿನಲ್ಲಿ ಹೇಳಲಾಗಿದೆ. ಆ ಘಟನೆಗಳು ನಡೆಯುವ ಕಾಲವನ್ನು ‘ಕಡೇ ದಿವಸಗಳು’ ಎಂದು ಕರೆಯಲಾಗಿದೆ. ಇದೇ ಕಾಲವನ್ನು ಬೈಬಲಿನಲ್ಲಿರುವ ಬೇರೆ ಪ್ರವಾದನೆಗಳಲ್ಲಿ “ವಿಷಯಗಳ ವ್ಯವಸ್ಥೆಯ ಸಮಾಪ್ತಿ,” “ಮನುಷ್ಯಕುಮಾರನ ಸಾನ್ನಿಧ್ಯ” ಎಂದು ಕರೆಯಲಾಗಿದೆ. (ಮತ್ತಾಯ 24:3, 27, 37) 1914ರಲ್ಲಿ ದೇವರ ರಾಜ್ಯದ ಆಳ್ವಿಕೆಯು ಸ್ವರ್ಗದಲ್ಲಿ ಆರಂಭವಾದಾಗ ‘ಕಡೇ ದಿವಸಗಳು’ ಆರಂಭವಾದವು. ಅರ್ಮಗೆದೋನ್ನಲ್ಲಿ ಸೈತಾನನ ದುಷ್ಟ ಲೋಕವು ನಾಶ ಆಗುವಾಗ ‘ಕಡೇ ದಿವಸಗಳು’ ಕೊನೆಯಾಗುತ್ತವೆ.—2 ತಿಮೊಥೆಯ 3:1; 2 ಪೇತ್ರ 3:3.
24 ಪುನರುತ್ಥಾನ
ಸತ್ತ ವ್ಯಕ್ತಿಗೆ ದೇವರು ಪುನಃ ಜೀವ ಕೊಡುವುದನ್ನು ಬೈಬಲಿನಲ್ಲಿ ‘ಪುನರುತ್ಥಾನ’ ಎಂದು ಕರೆಯಲಾಗಿದೆ. ಬೈಬಲಿನಲ್ಲಿ ಇಂಥ ಒಂಭತ್ತು ಪುನರುತ್ಥಾನಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ಎಲೀಯ, ಎಲೀಷ, ಯೇಸು, ಪೇತ್ರ, ಪೌಲ ಮಾಡಿದರು. ದೇವರು ಅವರಿಗೆ ಶಕ್ತಿ ಕೊಟ್ಟದ್ದರಿಂದಲೇ ಅವರು ಇದನ್ನು ಮಾಡಿದರು. ಮುಂದೆ ‘ನೀತಿವಂತರನ್ನೂ ಅನೀತಿವಂತರನ್ನೂ’ ಈ ಭೂಮಿಯ ಮೇಲೆ ಮತ್ತೆ ಜೀವಿಸಲಾಗುವಂತೆ ಪುನರುತ್ಥಾನ ಮಾಡುತ್ತೇನೆ ಎಂದು ಯೆಹೋವ ದೇವರು ಮಾತು ಕೊಟ್ಟಿದ್ದಾನೆ. (ಅಪೊಸ್ತಲರ ಕಾರ್ಯಗಳು 24:15) ಇನ್ನೊಂದು ರೀತಿಯ ಪುನರುತ್ಥಾನದ ಕುರಿತು ಸಹ ಬೈಬಲಿನಲ್ಲಿ ಹೇಳಿದೆ. ಅದು, ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುವುದಾಗಿದೆ. ಅಭಿಷಿಕ್ತರಿಗೆ ಅಂದರೆ ದೇವರು ಆರಿಸಿಕೊಂಡವರಿಗೆ ಇಂಥ ಪುನರುತ್ಥಾನವಾಗುತ್ತದೆ. ಅವರು ಪುನರುತ್ಥಾನವಾಗಿ ಸ್ವರ್ಗದಲ್ಲಿ ಯೇಸುವಿನೊಂದಿಗೆ ಇರುತ್ತಾರೆ.—ಯೋಹಾನ 5:28, 29; 11:25; ಫಿಲಿಪ್ಪಿ 3:11; ಪ್ರಕಟನೆ 20:5, 6.
25 ಮಾಟಮಂತ್ರ (ಪ್ರೇತಸಂಪರ್ಕ)
ಮಾಂತ್ರಿಕನ ಸಹಾಯದಿಂದ ಅಥವಾ ನೇರವಾಗಿ ದೆವ್ವಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಪ್ರಯತ್ನಿಸುವುದನ್ನು ಮಾಟಮಂತ್ರ ಅಥವಾ ಪ್ರೇತಸಂಪರ್ಕ ಎಂದು ಕರೆಯಲಾಗುತ್ತದೆ. ಇದನ್ನು ಅವರು ಯಾಕೆ ಮಾಡುತ್ತಾರೆಂದರೆ ಮನುಷ್ಯರು ಸತ್ತಮೇಲೂ ಆತ್ಮವಾಗಿ ಬದುಕಿರುತ್ತಾರೆ ಮತ್ತು ಬಲಶಾಲಿ ದೆವ್ವಗಳಾಗುತ್ತಾರೆ ಎಂಬ ಸುಳ್ಳು ನಂಬಿಕೆ ಅವರಿಗಿರುತ್ತದೆ. ಜನರು ದೇವರ ಮಾತು ಕೇಳದಂತೆ ಮಾಡಲು ದೆವ್ವಗಳು ಪ್ರಯತ್ನಿಸುತ್ತವೆ. ಪಂಚಾಂಗ, ಜಾತಕ, ನಕ್ಷತ್ರ ನೋಡುವುದು, ಮಾಟಮಂತ್ರ, ಮೂಢನಂಬಿಕೆಗಳು, ಭೂತಗಳ ಬಗ್ಗೆ ಅಧ್ಯಯನ ಮಾಡುವುದು ಇವೆಲ್ಲ ಪ್ರೇತಸಂಪರ್ಕದಲ್ಲಿ ಸೇರಿವೆ. ಅನೇಕ ಪುಸ್ತಕಗಳು, ಪತ್ರಿಕೆಗಳು, ಪಂಚಾಂಗ-ಜಾತಕಗಳು, ಚಲನಚಿತ್ರಗಳು, ಹಾಡುಗಳು, ಆಟಗಳು, ಚಿತ್ರಗಳು ಇವೆಲ್ಲ ದೆವ್ವಗಳಿಂದಾಗಲಿ, ಮಾಟಮಂತ್ರದಿಂದಾಗಲಿ ಯಾವುದೇ ಅಪಾಯವಿಲ್ಲ, ಅವು ಮಜಾ ಕೊಡುತ್ತವೆ ಎಂಬ ಭಾವನೆಯನ್ನು ತರುತ್ತವೆ. ಆದರೆ ಅಂಥವುಗಳಿಂದ ಅಪಾಯ ತಪ್ಪಿದ್ದಲ್ಲ. ಯಾರಾದರೂ ಸತ್ತಾಗ ಮಾಡುವ ಪದ್ಧತಿಗಳು ಉದಾಹರಣೆಗೆ, ಸತ್ತವರಿಗಾಗಿ ಬಲಿ ಅರ್ಪಿಸುವುದು, ಶವಸಂಸ್ಕಾರದ ಆಚರಣೆಗಳು, ತಿಥಿ ಅಥವಾ ಪೂಜೆ ಮಾಡುವುದು, ವಿಧವಾ ಸಂಸ್ಕಾರಗಳು, ಶವವನ್ನಿಟ್ಟು ಜಾಗರಣೆಮಾಡುವ ಗೋಳಾಡುವ ಆಚರಣೆಗಳು ಇವುಗಳೆಲ್ಲ ದೆವ್ವಗಳನ್ನು ಸಂಪರ್ಕಿಸುವುದಕ್ಕೆ ಸಂಬಂಧಿಸಿವೆ. ದೆವ್ವಗಳ ಶಕ್ತಿಯನ್ನು ಬಳಸುವಾಗ ಕೆಲವು ವ್ಯಕ್ತಿಗಳು ಹೆಚ್ಚಾಗಿ ಅಮಲೌಷಧವನ್ನು ಸೇವಿಸುತ್ತಾರೆ.—ಗಲಾತ್ಯ 5:20; ಪ್ರಕಟನೆ 21:8.
26 ಯೆಹೋವನ ಪರಮಾಧಿಕಾರ
ಯೆಹೋವ ಸರ್ವಶಕ್ತ ದೇವರು. ಇಡೀ ಲೋಕವನ್ನು ಸೃಷ್ಟಿ ಮಾಡಿದ ಸೃಷ್ಟಿಕರ್ತ. (ಪ್ರಕಟನೆ 15:3) ಹಾಗಾಗಿಯೇ ಆತನು ಎಲ್ಲ ವಿಷಯಗಳ ಒಡೆಯನಾಗಿದ್ದಾನೆ ಮತ್ತು ಪರಮಾಧಿಕಾರಿಯಾಗಿದ್ದಾನೆ. ಅಲ್ಲದೇ, ಪ್ರತಿಯೊಂದು ಸೃಷ್ಟಿಯ ಮೇಲೆ ಆತನಿಗೆ ಸಂಪೂರ್ಣ ಅಧಿಕಾರವಿದೆ. (ಕೀರ್ತನೆ 24:1; ಯೆಶಾಯ 40:21-23; ಪ್ರಕಟನೆ 4:11) ತಾನು ಸೃಷ್ಟಿಸಿದ ಪ್ರತಿಯೊಂದಕ್ಕೂ ನಿಯಮಗಳನ್ನು ಕೊಟ್ಟಿದ್ದಾನೆ. ಒಂದು ಕೆಲಸಕ್ಕೆ ಯಾರನ್ನು ಬೇಕಾದರೂ ನೇಮಿಸುವ ಅಧಿಕಾರ ಸಹ ಯೆಹೋವನಿಗಿದೆ. ದೇವರನ್ನು ಪ್ರೀತಿಸುವ ಮತ್ತು ಆತನು ಹೇಳಿದಂತೆ ನಡೆದುಕೊಳ್ಳುವ ಮೂಲಕ ನಾವು ಆತನ ಪರಮಾಧಿಕಾರವನ್ನು ಒಪ್ಪಿಕೊಳ್ಳುತ್ತೇವೆ.—1 ಪೂರ್ವಕಾಲವೃತ್ತಾಂತ 29:11.
27 ಭ್ರೂಣಹತ್ಯೆ
ಆಕಸ್ಮಿಕವಾಗಿಯೋ ಅಥವಾ ದೇಹದಲ್ಲಾಗುವ ಏರುಪೇರಿನಿಂದಾಗಿಯೋ ಗರ್ಭದಲ್ಲಿರುವ ಮಗು ಸತ್ತರೆ ಅದನ್ನು ಭ್ರೂಣಹತ್ಯೆ ಎಂದು ಹೇಳುವುದಿಲ್ಲ. ಗರ್ಭದಲ್ಲಿರುವ ಮಗುವನ್ನು ಕೊಲ್ಲುವ ಉದ್ದೇಶದಿಂದಲೇ ಗರ್ಭಪಾತವನ್ನು ಮಾಡುತ್ತಾರೆ. ಒಬ್ಬ ಸ್ತ್ರೀ ಗರ್ಭಿಣಿ ಆದಾಗಿನಿಂದ ಗರ್ಭದಲ್ಲಿರುವ ಮಗು ಆಕೆಯ ದೇಹದ ಒಂದು ಭಾಗವಷ್ಟೇ ಅಲ್ಲ, ಅದು ಸಹ ಒಂದು ಜೀವವಾಗಿದೆ.
28 ರಕ್ತಪೂರಣ
ರಕ್ತವನ್ನು ಅಥವಾ ರಕ್ತದ ನಾಲ್ಕು ಪ್ರಧಾನ ಅಂಶಗಳಲ್ಲಿ ಒಂದನ್ನು ಒಬ್ಬ ವ್ಯಕ್ತಿಯ ದೇಹದಿಂದ ಮತ್ತೊಬ್ಬನ ದೇಹಕ್ಕೆ ವರ್ಗಾಯಿಸುತ್ತಾರೆ. ಕೆಲವೊಮ್ಮೆ ರಕ್ತವನ್ನು ಅಥವಾ ರಕ್ತದ ನಾಲ್ಕು ಪ್ರಧಾನ ಅಂಶಗಳನ್ನು ಮೊದಲೇ ಶೇಖರಿಸಿಟ್ಟು ಒಬ್ಬ ವ್ಯಕ್ತಿಗೆ ಅಗತ್ಯವಿದ್ದಾಗ ಅದನ್ನು ಕೊಡಲಾಗುತ್ತದೆ. ಈ ವೈದ್ಯಕೀಯ ವಿಧಾನವನ್ನು ರಕ್ತಪೂರಣ ಎನ್ನುತ್ತಾರೆ. ರಕ್ತದ ನಾಲ್ಕು ಪ್ರಧಾನ ಅಂಶಗಳು ಯಾವುವೆಂದರೆ ಪ್ಲಾಸ್ಮಾ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಪ್ಲೇಟ್ಲೆಟ್ಗಳು (ಕಿರುಬಿಲ್ಲೆಗಳು).
29 ಶಿಸ್ತು
ಬೈಬಲ್ ಪ್ರಕಾರ “ಶಿಸ್ತು” ಎಂದರೆ ಶಿಕ್ಷೆ ಕೊಡುವುದು ಮಾತ್ರವಲ್ಲ. ಶಿಸ್ತು ಕೊಡುವುದರಲ್ಲಿ ಸಲಹೆ ಕೊಡುವುದು, ತರಬೇತಿ ನೀಡುವುದು ಮತ್ತು ತಪ್ಪನ್ನು ತಿದ್ದುವುದು ಸೇರಿದೆ. ಯೆಹೋವನು ಶಿಸ್ತು ಕೊಡುವಾಗ ಯಾವತ್ತೂ ಕೆಟ್ಟ ಮಾತನ್ನು ಉಪಯೋಗಿಸುವುದಿಲ್ಲ ಅಥವಾ ಕ್ರೂರವಾಗಿ ನಡೆದುಕೊಳ್ಳುವುದಿಲ್ಲ. (ಜ್ಞಾನೋಕ್ತಿ 4:1, 2) ಯೆಹೋವನು ಹೆತ್ತವರಿಗೆ ಒಂದು ಉತ್ತಮ ಮಾದರಿ. ಆತನು ಕೊಡುವ ಶಿಸ್ತು ಎಷ್ಟು ಪ್ರಯೋಜನ ತರುತ್ತದೆ ಎಂದರೆ ಅದನ್ನು ಪಡೆದುಕೊಂಡವನು ಆ ಶಿಸ್ತನ್ನು ಇಷ್ಟಪಡುತ್ತಾನೆ. (ಜ್ಞಾನೋಕ್ತಿ 12:1) ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ, ಅವರಿಗೆ ತರಬೇತಿ ಕೊಡುತ್ತಾನೆ, ಸಲಹೆಗಳನ್ನು ಕೊಡುತ್ತಾನೆ. ಅದರಿಂದ ಅವರು ತಮ್ಮ ತಪ್ಪು ಯೋಚನೆಗಳನ್ನು ಸರಿಪಡಿಸಿಕೊಳ್ಳಲು ಆಗುತ್ತದೆ. ಅಲ್ಲದೆ ಯೆಹೋವನನ್ನು ಮೆಚ್ಚಿಸುವ ರೀತಿಯಲ್ಲಿ ಯೋಚಿಸಲು ಮತ್ತು ನಡೆದುಕೊಳ್ಳಲು ಕಲಿಯುತ್ತಾರೆ. ಹೆತ್ತವರು ಮಕ್ಕಳಿಗೆ ಹೇಗೆ ಶಿಸ್ತು ಕೊಡಬೇಕು? ತಂದೆತಾಯಿಯ ಮಾತನ್ನು ಕೇಳುವುದರಿಂದ ಏನು ಪ್ರಯೋಜನವೆಂದು ಮಕ್ಕಳಿಗೆ ಅರ್ಥಮಾಡಿಸಬೇಕು. ಯೆಹೋವನನ್ನು ಮತ್ತು ಆತನ ವಾಕ್ಯವಾದ ಬೈಬಲನ್ನು ಪ್ರೀತಿಸಲು ಕಲಿಸಬೇಕು. ಜೊತೆಗೆ ಬೈಬಲಿನಲ್ಲಿರುವ ತತ್ವಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡಬೇಕು.
30 ದೆವ್ವಗಳು
ಮನುಷ್ಯರ ಕಣ್ಣಿಗೆ ಕಾಣದ, ಮನುಷ್ಯನಿಗಿಂತ ಹೆಚ್ಚು ಶಕ್ತಿಯಿರುವ ಆತ್ಮಿಕ ಜೀವಿಗಳೇ ದೆವ್ವಗಳು. ಈ ದೆವ್ವಗಳು ಮೊದಲು ದೇವದೂತರಾಗಿದ್ದರು. ನಂತರ ಸೈತಾನನ ಜೊತೆ ಸೇರಿ ದೇವರ ಮಾತಿಗೆ ವಿರೋಧವಾಗಿ ನಡೆದು ದೇವರ ವಿರೋಧಿಗಳಾದರು. (ಇಬ್ರಿಯ 10:24, 25; ಯೂದ 6) ಸೈತಾನನು ಯೆಹೋವನ ವಿರುದ್ಧವಾಗಿ ದಂಗೆಯೆದ್ದಾಗ ಅದರಲ್ಲಿ ಇವರೂ ಸೇರಿಕೊಂಡರು.—ಧರ್ಮೋಪದೇಶಕಾಂಡ 32:17; ಲೂಕ 8:30; ಅಪೊಸ್ತಲರ ಕಾರ್ಯಗಳು 16:16; ಯಾಕೋಬ 2:19.