ಅಧ್ಯಾಯ 2
ಅವರ ಕಾಣಿಕೆಗಳನ್ನ “ದೇವರು ಸ್ವೀಕರಿಸಿದನು”
ಮುಖ್ಯ ವಿಷಯ: ಶುದ್ಧ ಆರಾಧನೆಗಾಗಿ ಯೆಹೋವನು ಮಾಡಿದ ಏರ್ಪಾಡು
1-3. (ಎ) ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ? (ಬಿ) ನಮ್ಮ ಆರಾಧನೆಯನ್ನ ದೇವರು ಮೆಚ್ಚಬೇಕಾದ್ರೆ ನಾವು ಮಾಡಬೇಕಾದ ನಾಲ್ಕು ಮುಖ್ಯ ವಿಷಯಗಳು ಯಾವುವು? (ಆರಂಭದ ಚಿತ್ರ ನೋಡಿ.)
ಹೇಬೆಲ ತಾನು ಮುದ್ದಿನಿಂದ ಸಾಕಿರೋ ಕುರಿಗಳ ಹತ್ರ ಹೋಗ್ತಾನೆ. ಅವುಗಳನ್ನ ಪರಿಶೀಲಿಸುತ್ತಾ ಕೆಲವನ್ನ ಆಯ್ಕೆ ಮಾಡಿ ದೇವರಿಗೆ ಬಲಿ ಕೊಡ್ತಾನೆ. ಒಬ್ಬ ಅಪರಿಪೂರ್ಣ ಮಾನವ ಮಾಡುವ ಈ ಆರಾಧನಾ ಕ್ರಿಯೆಯನ್ನ ದೇವರು ಸ್ವೀಕರಿಸ್ತಾನಾ?
2 ಹೇಬೆಲನ ಬಗ್ಗೆ ಅಪೊಸ್ತಲ ಪೌಲ ದೇವಪ್ರೇರಣೆಯಿಂದ ಹೀಗೆ ಬರೆದನು: “ಅವನ ಕಾಣಿಕೆಯನ್ನ ದೇವರು ಸ್ವೀಕರಿಸಿದನು.” ಆದರೆ ಯೆಹೋವನು ಕಾಯಿನ ಕೊಟ್ಟ ಬಲಿಯನ್ನ ಸ್ವೀಕರಿಸಲಿಲ್ಲ. (ಇಬ್ರಿಯ 11:4 ಓದಿ.) ದೇವರು ಯಾಕೆ ಕಾಯಿನ ಕೊಟ್ಟ ಕಾಣಿಕೆಯನ್ನ ಸ್ವೀಕರಿಸದೆ ಹೇಬೆಲ ಕೊಟ್ಟ ಕಾಣಿಕೆಯನ್ನ ಮಾತ್ರ ಸ್ವೀಕರಿಸಿದನು? ಕಾಯಿನ-ಹೇಬೆಲರಿಂದ ಮತ್ತು ಇಬ್ರಿಯ 11 ನೇ ಅಧ್ಯಾಯದಲ್ಲಿ ಹೇಳಿರೋ ಇತರರಿಂದ ನಾವು ಯಾವ ಪಾಠಗಳನ್ನ ಕಲಿಯಬಹುದು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ರೆ ಶುದ್ಧ ಆರಾಧನೆಯಲ್ಲಿ ಏನೆಲ್ಲಾ ಒಳಗೂಡಿದೆ ಅಂತ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಆಗುತ್ತೆ.
3 ನಾವೀಗ ಹೇಬೆಲನಿಂದ ಯೆಹೆಜ್ಕೇಲನ ಸಮಯದ ತನಕ ನಡೆದ ಘಟನೆಗಳ ಬಗ್ಗೆ ಸ್ವಲ್ಪ ನೋಡೋಣ. ಇದ್ರಿಂದ, ನಮ್ಮ ಆರಾಧನೆಯನ್ನ ದೇವರು ಮೆಚ್ಚಬೇಕಾದ್ರೆ ನಾವು ಮಾಡಬೇಕಾದ ನಾಲ್ಕು ಮುಖ್ಯ ವಿಷಯಗಳ ಬಗ್ಗೆ ತಿಳ್ಕೊಳ್ಳೋಣ. ಆ ನಾಲ್ಕು ವಿಷಯ ಯಾವುವು? (1) ಆರಾಧನೆ ಯೆಹೋವನಿಗೇ ಮಾಡಬೇಕು, (2) ಅತ್ಯುತ್ತಮ ಗುಣಮಟ್ಟದ್ದಾಗಿರಬೇಕು, (3) ದೇವರು ಮೆಚ್ಚುವ ರೀತಿಯಲ್ಲಿ ಇರಬೇಕು ಮತ್ತು (4) ಉದ್ದೇಶ ಒಳ್ಳೇದಾಗಿರಬೇಕು.
ದೇವರು ಯಾಕೆ ಕಾಯಿನನ ಆರಾಧನೆಯನ್ನ ಸ್ವೀಕರಿಸಲಿಲ್ಲ?
4, 5. ತನ್ನ ಕಾಣಿಕೆಗಳನ್ನ ಯೆಹೋವನಿಗೇ ಕೊಡಬೇಕು ಅಂತ ಕಾಯಿನನಿಗೆ ಹೇಗೆ ಗೊತ್ತಿತ್ತು?
4 ಆದಿಕಾಂಡ 4:2-5 ಓದಿ. ಯೆಹೋವನನ್ನೇ ಆರಾಧಿಸಬೇಕು ಅಂತ ಕಾಯಿನನಿಗೆ ಗೊತ್ತಿತ್ತು. ಅದಕ್ಕೇ ಅವನು ತನ್ನ ಕಾಣಿಕೆಯನ್ನ ಯೆಹೋವನಿಗೇ ಕೊಟ್ಟ. ಯೆಹೋವನ ಬಗ್ಗೆ ಕಲಿಯೋಕೆ ಅವನಿಗೆ ಸಾಕಷ್ಟು ಸಮಯ, ಸಂದರ್ಭನೂ ಸಿಕ್ಕಿತ್ತು. ಆಗ ಕಾಯಿನ ಮತ್ತು ಹೇಬೆಲನಿಗೆ ಹತ್ತಿರತ್ತಿರ ನೂರು ವರ್ಷ ಆಗಿರಬಹುದು.a ಇಬ್ಬರಿಗೂ ಚಿಕ್ಕಂದಿನಿಂದಲೇ ಏದೆನ್ ತೋಟದ ಬಗ್ಗೆ ಗೊತ್ತಿತ್ತು. ಆ ತೋಟ ಸುಂದರವಾಗಿದೆ, ಫಲವತ್ತಾಗಿದೆ ಅನ್ನೋದನ್ನ ಅವ್ರು ದೂರದಿಂದ ನೋಡಿರುತ್ತಾರೆ. ಅಲ್ಲಿ ಯಾರೂ ಹೋಗದಂತೆ ಕಾವಲು ನಿಂತ ಕೆರೂಬಿಯರನ್ನೂ ಖಂಡಿತ ನೋಡಿರುತ್ತಾರೆ. (ಆದಿ. 3:24) ಯೆಹೋವನೇ ಎಲ್ಲವನ್ನ ಸೃಷ್ಟಿಸಿದ್ದಾನೆ ಅಂತ ಆದಾಮ-ಹವ್ವ ಅವ್ರಿಗೆ ಹೇಳಿಕೊಟ್ಟಿರಬೇಕು. ಅವ್ರು ಕಷ್ಟವನ್ನ ಅನುಭವಿಸ್ತಾ ಕೊನೆಗೆ ಸಾಯೋದು ದೇವರ ಉದ್ದೇಶ ಆಗಿರಲಿಲ್ಲ ಅಂತಾನೂ ಹೇಳಿರಬೇಕು. (ಆದಿ. 1:24-28) ಆದ್ರಿಂದ ತನ್ನ ಕಾಣಿಕೆಯನ್ನ ಯೆಹೋವನಿಗೇ ಕೊಡಬೇಕು ಅಂತ ಕಾಯಿನ ತೀರ್ಮಾನಿಸಿರುತ್ತಾನೆ.
5 ಈ ಬಲಿಯನ್ನ ಕೊಡೋಕೆ ಕಾಯಿನನಿಗೆ ಇನ್ನೊಂದು ಕಾರಣನೂ ಇದ್ದಿರಬೇಕು. “ಸಂತಾನ” ಬರುತ್ತಾನೆ, ಹವ್ವಳನ್ನ ಏಮಾರಿಸಿದ ‘ಹಾವಿನ’ ತಲೆಯನ್ನ ಅವನು ಜಜ್ಜುತ್ತಾನೆ ಅಂತ ಯೆಹೋವನು ಹೇಳಿದ್ದನು. (ಆದಿ. 3:4-6, 14, 15) ಕಾಯಿನ ಮೊದಲನೇ ಮಗ ಆಗಿದ್ರಿಂದ, ತಾನೇ ಆ “ಸಂತಾನ” ಅಂತ ನೆನಸಿರಬಹುದು. (ಆದಿ. 4:1) ಅಷ್ಟೇ ಅಲ್ಲ, ಯೆಹೋವ ದೇವ್ರು ಇನ್ನೂ ಅಪರಿಪೂರ್ಣ ಮಾನವರ ಜೊತೆ ಮಾತಾಡುತ್ತಾ ಇದ್ದನು. ಆದಾಮ ಪಾಪ ಮಾಡಿದ ಮೇಲೂ ದೇವರು ತನ್ನ ದೂತನ ಮೂಲಕ ಮಾತಾಡಿದನು. (ಆದಿ. 3:8-10) ಕಾಯಿನ ಕಾಣಿಕೆ ಕೊಟ್ಟ ನಂತ್ರನೂ ಯೆಹೋವನು ಅವನ ಹತ್ರ ಮಾತಾಡಿದನು. (ಆದಿ. 4:6) ಹಾಗಾಗಿ ಯೆಹೋವನೇ ಆರಾಧನೆಗೆ ಅರ್ಹನು ಅಂತ ಕಾಯಿನನಿಗೆ ಚೆನ್ನಾಗಿ ಗೊತ್ತಿತ್ತು.
6, 7. ಕಾಯಿನ ಕೊಟ್ಟ ಕಾಣಿಕೆಯ ಗುಣಮಟ್ಟ ಅಥವಾ ಅರ್ಪಿಸಿದ ರೀತಿ ಸರಿಯಿರಲಿಲ್ವಾ? ವಿವರಿಸಿ.
6 ದೇವರು ಮತ್ತೆ ಯಾಕೆ ಕಾಯಿನನ ಕಾಣಿಕೆಯನ್ನ ಸ್ವೀಕರಿಸಲಿಲ್ಲ? ಅವನು ಕೊಟ್ಟ ಕಾಣಿಕೆ ಅತ್ಯುತ್ತಮ ಗುಣಮಟ್ಟದ್ದಾಗಿರಲಿಲ್ವಾ? ಬೈಬಲ್ ಅದ್ರ ಬಗ್ಗೆ ಏನೂ ಹೇಳಲ್ಲ. ಕಾಯಿನ “ಹೊಲದ ಬೆಳೆಯಲ್ಲಿ ಸ್ವಲ್ಪ ತಂದು” ದೇವ್ರಿಗೆ ಅರ್ಪಿಸಿದ ಅಂತ ಮಾತ್ರ ಹೇಳುತ್ತೆ. ಇಂಥ ಕಾಣಿಕೆಗಳನ್ನು ಸಹ ಯೆಹೋವನು ಸ್ವೀಕರಿಸುತ್ತಿದ್ದನು ಅಂತ ಮೋಶೆಯ ಮೂಲಕ ಕೊಟ್ಟ ನಿಯಮ ಪುಸ್ತಕದಿಂದ ಗೊತ್ತಾಗುತ್ತೆ. (ಅರ. 15:8, 9) ಆ ಕಾಲದಲ್ಲಿದ್ದ ಸನ್ನಿವೇಶದ ಬಗ್ಗೆ ಸ್ವಲ್ಪ ಯೋಚಿಸಿ. ಆಗ ಜನರೆಲ್ಲರೂ ಸಸ್ಯಾಹಾರಿಗಳಾಗಿದ್ದರು. (ಆದಿ. 1:29) ಏದೆನ್ ತೋಟದ ಹೊರಗಿದ್ದ ಭೂಮಿಯನ್ನ ದೇವರು ಶಪಿಸಿದ್ದರಿಂದ ಕಾಯಿನ ಕಷ್ಟಪಟ್ಟು, ಬೆವರು ಸುರಿಸಿ ಬೆಳೆಯನ್ನ ಬೆಳೆಸಬೇಕಾಯ್ತು. (ಆದಿ. 3:17-19) ಹೀಗೆ ಅವನು ಊಟಕ್ಕಾಗಿ ಬೆವರು ಸುರಿಸಿ ಬೆಳೆಸಿದ್ದ ಬೆಳೆಯನ್ನೇ ದೇವ್ರಿಗೆ ಕೊಟ್ಟಿದ್ದನು. ಆದ್ರೂ ಯಾಕೆ ದೇವರು ಅವನ ಕಾಣಿಕೆಯನ್ನ ಸ್ವೀಕರಿಸಲಿಲ್ಲ?
7 ಹಾಗಾದ್ರೆ ಅವನು ಕಾಣಿಕೆ ಕೊಟ್ಟ ರೀತಿ ಸರಿ ಇರಲಿಲ್ವಾ? ಅವನು ಕಾಣಿಕೆಯನ್ನ ಯೆಹೋವನು ಮೆಚ್ಚೋ ರೀತಿಯಲ್ಲಿ ಕೊಡಲಿಲ್ವಾ? ಹಾಗೇನಿಲ್ಲ ಅನಿಸುತ್ತೆ. ಯಾಕಂದ್ರೆ ಯೆಹೋವನು ಕಾಯಿನನ ಕಾಣಿಕೆಯನ್ನ ತಿರಸ್ಕರಿಸಿದಾಗ ‘ನೀನು ಕಾಣಿಕೆ ಕೊಟ್ಟ ರೀತಿ ಸರಿಯಿಲ್ಲ’ ಅಂತ ಹೇಳಲಿಲ್ಲ. ಹೇಬೆಲ ಮತ್ತು ಕಾಯಿನ ಯಾವ ರೀತಿಯಲ್ಲಿ ಕಾಣಿಕೆ ಅರ್ಪಿಸಿದ್ರು ಅಂತ ಬೈಬಲ್ ತಿಳಿಸಲ್ಲ. ಹಾಗಾದ್ರೆ ಮತ್ತೆ ಯಾಕೆ ದೇವ್ರು ಆ ಕಾಣಿಕೆ ಸ್ವೀಕರಿಸಲಿಲ್ಲ?
8, 9. (ಎ) ಯೆಹೋವನು ಯಾಕೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಇಷ್ಟಪಡ್ಲಿಲ್ಲ? (ಬಿ) ಕಾಯಿನ ಮತ್ತು ಹೇಬೆಲನ ಬಗ್ಗೆ ಬೈಬಲಲ್ಲಿರೋ ಮಾಹಿತಿಯನ್ನ ಹೋಲಿಸಿದಾಗ ನಿಮಗೇನು ಗೊತ್ತಾಗುತ್ತೆ?
8 ಕಾಯಿನ ಕಾಣಿಕೆ ಕೊಟ್ಟಾಗ ಅವನ ಉದ್ದೇಶ ಸರಿ ಇರಲಿಲ್ಲ ಅಂತ ಪೌಲನು ಇಬ್ರಿಯರಿಗೆ ಬರೆದ ಪುಸ್ತಕದಿಂದ ಗೊತ್ತಾಗುತ್ತೆ. ಕಾಯಿನನಿಗೆ ದೇವರ ಮೇಲೆ ನಂಬಿಕೆ ಇರಲಿಲ್ಲ. (ಇಬ್ರಿ. 11:4; 1 ಯೋಹಾ. 3:11, 12) ಅದಕ್ಕೇ ಯೆಹೋವನು ಕಾಯಿನನನ್ನೂ ಅವನ ಕಾಣಿಕೆಯನ್ನೂ ಇಷ್ಟಪಡಲಿಲ್ಲ. (ಆದಿ. 4:5-8) ಪ್ರೀತಿಯ ತಂದೆಯಾಗಿರೋ ಯೆಹೋವನು ಕಾಯಿನನನ್ನ ತಿದ್ದೋಕೆ ಪ್ರಯತ್ನಿಸಿದ್ರೂ ಅವನು ಕಿವಿಗೊಡಲಿಲ್ಲ. ಯೆಹೋವ ದೇವ್ರು ಸಹಾಯ ಮಾಡೋಕೆ ಕೈಚಾಚಿದ್ರೂ ಅವನು ಅದನ್ನ ತಳ್ಳಿಬಿಟ್ಟ. ಹಾಗಾಗಿ ಅವನ ಮನಸ್ಸಲ್ಲಿ “ದ್ವೇಷ, ಜಗಳ, ಹೊಟ್ಟೆಕಿಚ್ಚು” ಹೊತ್ತಿ ಉರಿಯೋಕೆ ಶುರುವಾಯ್ತು. (ಗಲಾ. 5:19, 20) ಅವನ ಉದ್ದೇಶ ಸರಿ ಇಲ್ಲದಿದ್ದ ಕಾರಣ ಅವನು ಮಾಡಿದ ಬೇರೆಲ್ಲಾ ವಿಷಯಗಳು ವ್ಯರ್ಥವಾದವು. ಕಾಯಿನನಿಂದ ನಮಗೇನು ಪಾಠ? ನಾವು ಮಾಡೋ ಆರಾಧನೆ ಶುದ್ಧವಾಗಿರಬೇಕಂದ್ರೆ ಯೆಹೋವನ ಮೇಲೆ ಭಕ್ತಿ ಇರೋ ತರ ಮುಖವಾಡ ಹಾಕಿಕೊಂಡ್ರೆ ಸಾಕಾಗಲ್ಲ, ನಮ್ಮ ಮನಸ್ಸೂ ಯೆಹೋವನು ಮೆಚ್ಚೋ ತರ ಇರಬೇಕು.
9 ಬೈಬಲಲ್ಲಿ ಕಾಯಿನನ ಬಗ್ಗೆ ತುಂಬ ವಿಷಯಗಳನ್ನ ನಾವು ಓದಬಹುದು. ಅವನ ಹತ್ರ ಯೆಹೋವನು ಮಾತಾಡಿದ್ದರ ಬಗ್ಗೆ, ಅದಕ್ಕೆ ಅವನು ಕೊಟ್ಟ ಉತ್ತರದ ಬಗ್ಗೆ, ಅವನ ಮಕ್ಕಳ ಹೆಸರುಗಳ ಬಗ್ಗೆ ಮತ್ತು ಅವರು ಮಾಡಿದ ಕೆಲಸಗಳ ಬಗ್ಗೆ ಬೈಬಲಲ್ಲಿದೆ. (ಆದಿ. 4:17-24) ಆದ್ರೆ ಹೇಬೆಲನಿಗೆ ಮಕ್ಕಳಿದ್ರಾ ಇಲ್ವಾ ಅನ್ನೋದ್ರ ಬಗ್ಗೆ ಬೈಬಲಲ್ಲಿ ಇಲ್ಲ. ಅವನು ಹೇಳಿದ ಒಂದೇ ಒಂದು ಮಾತೂ ಬೈಬಲಿನಲ್ಲಿ ದಾಖಲಾಗಿಲ್ಲ. ಆದ್ರೂ ನಾವು ಹೇಬೆಲನಿಂದ ಇವತ್ತಿಗೂ ತುಂಬ ವಿಷಯಗಳನ್ನು ಕಲಿಯಬಹುದು. ಅದು ಹೇಗೆ?
ಶುದ್ಧ ಆರಾಧನೆ ಮಾಡೋದ್ರಲ್ಲಿ ಮಾದರಿ ಇಟ್ಟ ಹೇಬೆಲ
10. ಹೇಬೆಲ ಹೇಗೆ ಶುದ್ಧ ಆರಾಧನೆ ಮಾಡೋದ್ರಲ್ಲಿ ಮಾದರಿ ಇಟ್ಟ?
10 ಹೇಬೆಲ ತನ್ನ ಕಾಣಿಕೆಯನ್ನ ಯೆಹೋವ ದೇವರಿಗೇ ಕೊಟ್ಟ. ಯಾಕಂದ್ರೆ ಯೆಹೋವ ದೇವ್ರು ಮಾತ್ರ ಆರಾಧನೆಗೆ ಅರ್ಹ ಅಂತ ಅವನಿಗೆ ಗೊತ್ತಿತ್ತು. ಅವನು ಕಾಣಿಕೆ ಕೊಡಲಿಕ್ಕಾಗಿ “ತನ್ನ ಕುರಿಗಳಿಗೆ ಹುಟ್ಟಿದ ಮೊದಲ ಮರಿಗಳಲ್ಲಿ ಕೆಲವನ್ನ” ಆರಿಸಿಕೊಂಡನು. ಇದ್ರಿಂದ ಅವನು ಕೊಟ್ಟ ಕಾಣಿಕೆಯ ಗುಣಮಟ್ಟ ಅತ್ಯುತ್ತಮವಾಗಿತ್ತು ಅಂತ ಗೊತ್ತಾಗುತ್ತೆ. ಅವನು ಆ ಮರಿಗಳನ್ನ ಯಜ್ಞವೇದಿಯ ಮೇಲೆ ಅರ್ಪಿಸಿದನಾ ಅಂತ ನಮಗೆ ಗೊತ್ತಿಲ್ಲ. ಆದ್ರೆ ಅದನ್ನ ಅರ್ಪಿಸಿದ ರೀತಿಯನ್ನ ದೇವ್ರು ಖಂಡಿತ ಮೆಚ್ಚಿದನು. ಇದೆಲ್ಲದಕ್ಕಿಂತ ಮುಖ್ಯವಾಗಿ, ಹೇಬೆಲ ಕೊಟ್ಟ ಕಾಣಿಕೆಯ ವಿಶೇಷತೆ ಏನಂದ್ರೆ ಅವನು ಅದನ್ನ ಸರಿಯಾದ ಉದ್ದೇಶದಿಂದ ಕೊಟ್ಟನು. ಹಾಗಾಗಿ, ಇದೆಲ್ಲಾ ನಡೆದು ಆರು ಸಾವಿರ ವರ್ಷಗಳು ಕಳೆದ್ರೂ ಅವನಿಂದ ನಾವು ತುಂಬ ವಿಷಯಗಳನ್ನ ಕಲಿಬಹುದು. ಹೇಬೆಲನಿಗೆ ದೇವರ ಮೇಲಿದ್ದ ನಂಬಿಕೆ ಮತ್ತು ಆತನ ನೀತಿ ನಿಯಮಗಳ ಮೇಲಿರೋ ಪ್ರೀತಿನೇ ಕಾಣಿಕೆಯನ್ನ ಕೊಡೋಕೆ ಅವನನ್ನ ಪ್ರೇರೇಪಿಸಿತು. ಇದು ನಮಗೆ ಹೇಗೆ ಗೊತ್ತು?
11. ಯೇಸು ಹೇಬೆಲನನ್ನ ನೀತಿವಂತ ಅಂತ ಯಾಕೆ ಹೇಳಿದನು?
11 ಮೊದಲನೇದಾಗಿ, ಹೇಬೆಲನ ಬಗ್ಗೆ ಚೆನ್ನಾಗಿ ಗೊತ್ತಿದ್ದ ಯೇಸು ಏನು ಹೇಳಿದನು ಅಂತ ನೋಡೋಣ. ಹೇಬೆಲ ಬದುಕಿದ್ದಾಗ ಯೇಸು ಸ್ವರ್ಗದಲ್ಲಿದ್ದನು. ಯೇಸುಗೆ ಆದಾಮನ ಈ ಮಗನ ಮೇಲೆ ತುಂಬ ಕಾಳಜಿ ಇತ್ತು. (ಜ್ಞಾನೋ. 8:22, 30, 31; ಯೋಹಾ. 8:58; ಕೊಲೊ. 1:15, 16) ಯೇಸು ಹೇಬೆಲನ ನಡೆ ನುಡಿಯನ್ನ ಕಣ್ಣಾರೆ ನೋಡಿದ್ದನು. ಆದ್ರಿಂದನೇ ಅವನನ್ನ ನೀತಿವಂತ ಅಂತ ಹೇಳಿದನು. (ಮತ್ತಾ. 23:35) ಸರಿ ಮತ್ತು ತಪ್ಪು ಯಾವುದು ಅಂತ ನಿರ್ಧರಿಸೋ ಹಕ್ಕು ಯೆಹೋವನಿಗೆ ಮಾತ್ರ ಇದೆ ಅಂತ ನೀತಿವಂತ ವ್ಯಕ್ತಿ ಒಪ್ಪಿಕೊಳ್ತಾನೆ. ಅಷ್ಟೇ ಅಲ್ಲ, ಅವನ ನಡೆ-ನುಡಿ ಸಹ ಅದ್ರ ಪ್ರಕಾರನೇ ಇರುತ್ತೆ. (ಲೂಕ 1:5, 6 ಹೋಲಿಸಿ.) ಒಬ್ಬ ವ್ಯಕ್ತಿ ನೀತಿವಂತ ಅಂತ ಹೆಸರು ಪಡಿಯೋಕೆ ತುಂಬ ಸಮಯ ಹಿಡಿಯುತ್ತೆ. ಅದರರ್ಥ ಹೇಬೆಲ ಕಾಣಿಕೆಯನ್ನ ಕೊಡೋ ಮುಂಚೆನೇ ಯೆಹೋವನನ್ನ ಮೆಚ್ಚಿಸಿದ್ದಿರಬೇಕು, ನೀತಿವಂತ ಅನ್ನೋ ಹೆಸ್ರನ್ನ ಪಡ್ಕೊಂಡಿರಬೇಕು. ಒಳ್ಳೇ ಹೆಸ್ರನ್ನ ಪಡ್ಕೊಳ್ಳೋದು ಅವನಿಗೆ ಸುಲಭ ಆಗಿರಲಿಕ್ಕಿಲ್ಲ. ಯಾಕಂದ್ರೆ ಅವನ ಕುಟುಂಬ ಅವನಿಗೆ ಒಳ್ಳೇ ಮಾದರಿ ಆಗಿರಲಿಲ್ಲ. ಅವನ ಅಣ್ಣ ತುಂಬ ಕೆಟ್ಟವನಾಗಿದ್ದ. (1 ಯೋಹಾ. 3:12) ಅವನ ಅಮ್ಮ ಸಹ ದೇವರ ಮಾತನ್ನ ಮೀರಿದ್ದಳು. ಅಪ್ಪ, ದೇವರ ವಿರುದ್ಧನೇ ತಿರುಗಿಬಿದ್ದಿದ್ದ. ಯಾವುದು ಸರಿ ಯಾವುದು ತಪ್ಪು ಅಂತ ಅವನೇ ನಿರ್ಧರಿಸಿದ್ದ. (ಆದಿ. 2:16, 17; 3:6) ಹರಿಯೋ ನೀರಿಗೆ ಎದುರಾಗಿ ಈಜೋ ತರ ಜೀವನ ಮಾಡೋಕೆ ಹೇಬೆಲನಿಗೆ ತುಂಬ ಧೈರ್ಯ ಬೇಕಿತ್ತು!!
12. ಕಾಯಿನ ಮತ್ತು ಹೇಬೆಲನ ಮಧ್ಯ ಯಾವ ಮುಖ್ಯ ವ್ಯತ್ಯಾಸವಿತ್ತು?
12 ಹೇಬೆಲನ ಬಗ್ಗೆ ಪೌಲ ಏನು ಹೇಳಿದ ಅಂತಾನೂ ಗಮನಿಸಿ: “ನಂಬಿಕೆಯಿಂದಾನೇ ಹೇಬೆಲ ಕಾಯಿನ ಕೊಟ್ಟಿದ್ದಕ್ಕಿಂತ ಶ್ರೇಷ್ಠ ಬಲಿಯನ್ನ ದೇವರಿಗೆ ಕೊಟ್ಟ. ಈ ನಂಬಿಕೆ ಇದ್ದಿದ್ರಿಂದಾನೇ ಅವನು ನೀತಿವಂತ ಅಂತ ದೇವರು ತೋರಿಸ್ಕೊಟ್ಟನು.” (ಇಬ್ರಿ. 11:4) ಈ ಮಾತುಗಳಿಂದ ನಮಗೇನು ಗೊತ್ತಾಗುತ್ತೆ? ಹೇಬೆಲನು ಕಾಯಿನನ ತರ ಇರಲಿಲ್ಲ, ಅವನಿಗೆ ಜೀವನ ಪೂರ್ತಿ ಯೆಹೋವನ ಮೇಲೆ ನಂಬಿಕೆ ಇತ್ತು. ಅವನು ಯೆಹೋವನ ನೀತಿ ನಿಯಮಗಳನ್ನು ತುಂಬ ಪ್ರೀತಿಸ್ತಿದ್ದ.
13. ಹೇಬೆಲನಿಂದ ನಾವೇನು ಕಲಿತೀವಿ?
13 ಹೇಬೆಲನಿಂದ ನಾವೇನು ಕಲಿತೀವಿ? ಶುದ್ಧ ಆರಾಧನೆ ಮಾಡಬೇಕಂದ್ರೆ ನಮ್ಮ ಉದ್ದೇಶ ಸರಿಯಾಗಿರಬೇಕು. ಯೆಹೋವನ ಮೇಲೆ ತುಂಬ ನಂಬಿಕೆ ಇರಬೇಕು ಮತ್ತು ಆತನ ನೀತಿ ನಿಯಮಗಳೇ ನಮಗೆ ಅಚ್ಚುಮೆಚ್ಚಾಗಿರಬೇಕು. ಅಷ್ಟೇ ಅಲ್ಲ, ನಾವು ಶುದ್ಧ ಆರಾಧನೆಯನ್ನ ಮಾಡಬೇಕಂದ್ರೆ ಯೆಹೋವನಿಗೆ ಒಂದು ಸಲ ಭಯಭಕ್ತಿ ತೋರಿಸಿದ್ರೆ ಸಾಕಾಗಲ್ಲ, ಜೀವನಪೂರ್ತಿ ತೋರಿಸಬೇಕು.
ಹೇಬೆಲನ ಮಾದರಿಯನ್ನ ಅನುಕರಿಸಿದವರು
14. ದೇವರು ಯಾಕೆ ನೋಹ, ಅಬ್ರಹಾಮ ಮತ್ತು ಯಾಕೋಬ ಕೊಟ್ಟ ಕಾಣಿಕೆಯನ್ನ ಸ್ವೀಕರಿಸಿದನು?
14 ಯೆಹೋವ ದೇವರಿಗೆ ಶುದ್ಧ ಆರಾಧನೆ ಮಾಡಿದ ಮೊದಲ ವ್ಯಕ್ತಿ ಹೇಬೆಲ. ನಂತ್ರನೂ ಅನೇಕರು ಅವನ ಮಾದರಿಯನ್ನ ಅನುಕರಿಸಿದರು. ಅಪೊಸ್ತಲ ಪೌಲನು ಯೆಹೋವ ದೇವರಿಗೆ ಇಷ್ಟ ಆಗೋ ರೀತಿಯಲ್ಲಿ ಆರಾಧನೆ ಮಾಡಿದವರ ಪಟ್ಟಿಯನ್ನೇ ಮಾಡಿದ್ದಾನೆ. ಅವರಲ್ಲಿ ಕೆಲವ್ರು ನೋಹ, ಅಬ್ರಹಾಮ ಮತ್ತು ಯಾಕೋಬ. (ಇಬ್ರಿಯ 11:7, 8, 17-21 ಓದಿ.) ಇವರೆಲ್ಲರೂ ಯೆಹೋವನಿಗೆ ಬಲಿಗಳನ್ನ ಅರ್ಪಿಸಿದ್ದಾರೆ ಮತ್ತು ಯೆಹೋವನು ಅದನ್ನ ಮೆಚ್ಚಿದನು. ಯಾಕಂದ್ರೆ ಅವರು ಬಲಿಗಳನ್ನ ಅರ್ಪಿಸಿದ್ದಷ್ಟೇ ಅಲ್ಲ, ಆರಾಧನೆಯನ್ನ ದೇವರು ಮೆಚ್ಚಬೇಕಾದ್ರೆ ಮಾಡಬೇಕಾದ ನಾಲ್ಕು ಮುಖ್ಯ ವಿಷಯಗಳನ್ನೂ ಮಾಡಿದ್ರು. ಅವರ ಉದಾಹರಣೆಗಳನ್ನ ನಾವೀಗ ನೋಡೋಣ.
15, 16. ನೋಹ ಶುದ್ಧ ಆರಾಧನೆಯಲ್ಲಿ ಇರಬೇಕಾದ ನಾಲ್ಕು ವಿಷಯಗಳನ್ನ ಹೇಗೆ ಪೂರೈಸಿದ?
15 ಆದಾಮ ಸತ್ತು ಬರೀ 126 ವರ್ಷ ಆದ ಮೇಲೆ ನೋಹ ಹುಟ್ಟಿದ. ಅಷ್ಟರಲ್ಲೇ ಇಡೀ ಲೋಕ ಸುಳ್ಳು ಆರಾಧನೆಯಲ್ಲಿ ಮುಳುಗಿಹೋಗಿತ್ತು.b (ಆದಿ. 6:11) ಈ ಕೆಟ್ಟ ಜನರ ಮಧ್ಯೆ ನೋಹನ ಕುಟುಂಬ ಮಾತ್ರ ಯೆಹೋವ ದೇವರಿಗೆ ಇಷ್ಟ ಆಗೋ ರೀತಿಯಲ್ಲಿ ಆರಾಧನೆ ಮಾಡ್ತಿತ್ತು. (2 ಪೇತ್ರ 2:5) ಜಲಪ್ರಳಯದಿಂದ ಪಾರಾದ ನಂತ್ರ, ಯೆಹೋವನಿಗೆ ಬಲಿ ಅರ್ಪಿಸಬೇಕು ಅಂತ ನೋಹನಿಗೆ ಅನಿಸಿತು. ಅದಕ್ಕೆ ಅವನೊಂದು ಯಜ್ಞವೇದಿಯನ್ನ ಕಟ್ಟಿದನು. ಬೈಬಲಿನಲ್ಲಿ ಯಜ್ಞವೇದಿಯ ಬಗ್ಗೆ ಹೇಳಿರೋದು ಇದೇ ಮೊದಲ ಬಾರಿ. ಮನದಾಳದಿಂದ ಬಲಿ ಅರ್ಪಿಸೋ ಮೂಲಕ ನೋಹ, ಯೆಹೋವನನ್ನು ಮಾತ್ರ ಆರಾಧಿಸಬೇಕು ಅಂತ ತನ್ನ ಕುಟುಂಬದವರಿಗೆ ತೋರಿಸಿಕೊಟ್ಟ. ನೋಹ ತನ್ನ ಹತ್ರ ಇರೋ ಪ್ರಾಣಿಗಳಲ್ಲಿ ‘ಕೆಲವು ಶುದ್ಧ ಪ್ರಾಣಿಗಳನ್ನ, ಶುದ್ಧ ಪಕ್ಷಿಗಳನ್ನ’ ಆರಿಸಿ ಅವುಗಳನ್ನ ಬಲಿಯಾಗಿ ಕೊಟ್ಟ. (ಆದಿ. 8:20) ಅವು ಅತ್ಯುತ್ತಮ ಗುಣಮಟ್ಟದ್ದಾಗಿದ್ದವು. ಯಾಕಂದ್ರೆ ಯೆಹೋವ ದೇವ್ರೇ ಅವುಗಳನ್ನ ಶುದ್ಧ ಅಂತ ಹೇಳಿದ್ದನು.—ಆದಿ. 7:2.
16 ನೋಹ ಬಲಿಗಳನ್ನ ಯಜ್ಞವೇದಿಯ ಮೇಲೆ ಅರ್ಪಿಸಿದನು. ಈ ರೀತಿಯ ಆರಾಧನೆ ಯೆಹೋವನಿಗೆ ಇಷ್ಟ ಆಯ್ತಾ? ಆಯ್ತು. ಆ ಬಲಿಯ ಪರಿಮಳದಿಂದ ಯೆಹೋವನಿಗೆ ಖುಷಿಯಾಯ್ತು ಮತ್ತು ಆತನು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿದನು ಅಂತ ಬೈಬಲ್ ಹೇಳುತ್ತೆ. (ಆದಿ. 8:21; 9:1) ಆದ್ರೆ ಯೆಹೋವನು ಆ ಬಲಿಯನ್ನ ಸ್ವೀಕರಿಸೋಕೆ ಮುಖ್ಯ ಕಾರಣ ಏನಂದ್ರೆ ನೋಹ ಅದನ್ನು ಕೊಟ್ಟ ಉದ್ದೇಶ ಸರಿಯಾಗಿತ್ತು. ನೋಹನಿಗೆ ಯೆಹೋವನ ಮೇಲೆ ತುಂಬ ನಂಬಿಕೆ ಇದ್ದಿದ್ರಿಂದ ಮತ್ತು ಯೆಹೋವ ಮಾಡೋದೆಲ್ಲಾ ಸರಿ ಅನ್ನೋ ಭರವಸೆ ಇದ್ದಿದ್ರಿಂದನೇ ಆ ಬಲಿಗಳನ್ನ ಅರ್ಪಿಸಿದನು. ನೋಹ ಯೆಹೋವನು ಹೇಳಿದ ಹಾಗೇ ಮಾಡಿದ ಮತ್ತು “ಸತ್ಯ ದೇವರಿಗೆ ಇಷ್ಟ ಆಗೋ ತರ ನಡೆದ” ಅಂತ ಬೈಬಲ್ ಹೇಳುತ್ತೆ. ಹಾಗಾಗಿ ಅವನು ನೀತಿವಂತ ಅನ್ನೋ ಹೆಸರು ಪಡೆದ.—ಆದಿ. 6:9; ಯೆಹೆ. 14:14; ಇಬ್ರಿ. 11:7.
17, 18. ಅಬ್ರಹಾಮ ಶುದ್ಧ ಆರಾಧನೆಯಲ್ಲಿ ಇರಬೇಕಾದ ನಾಲ್ಕು ವಿಷಯಗಳನ್ನ ಹೇಗೆ ಪೂರೈಸಿದ?
17 ಅಬ್ರಹಾಮ ಊರ್ ಅನ್ನೋ ಪಟ್ಟಣದಲ್ಲಿದ್ದ. ಅಲ್ಲಿರೋ ಎಲ್ರೂ ಸುಳ್ಳಾರಾಧನೆ ಮಾಡ್ತಿದ್ರು. ಅಲ್ಲಿ ‘ನಾನ’ ಅನ್ನೋ ಚಂದ್ರ ದೇವನ ದೇವಸ್ಥಾನ ಇತ್ತು.c ಒಂದು ಕಾಲದಲ್ಲಿ ಅಬ್ರಹಾಮನ ಅಪ್ಪ ಸಹ ಸುಳ್ಳು ದೇವರುಗಳನ್ನ ಆರಾಧನೆ ಮಾಡ್ತಿದ್ದ. (ಯೆಹೋ. 24:2) ಆದ್ರೆ ಅಬ್ರಹಾಮ ಮಾತ್ರ ಯೆಹೋವನನ್ನ ಆರಾಧಿಸ್ತಿದ್ದ. ಹಾಗಾದ್ರೆ ಅಬ್ರಹಾಮನಿಗೆ ಯೆಹೋವನ ಬಗ್ಗೆ ಹೇಗೆ ಗೊತ್ತಾಯ್ತು? ನೋಹನ ಮಗನಾದ ಶೇಮನಿಂದ ಗೊತ್ತಾಗಿರಬೇಕು. ಯಾಕಂದ್ರೆ ಅಬ್ರಹಾಮನಿಗೆ 150 ವರ್ಷ ಆಗೋ ವರಗೆ ಶೇಮ್ ಬದುಕಿದ್ದ.
18 ಅಬ್ರಹಾಮ ತನ್ನ ಜೀವನದಲ್ಲಿ ತುಂಬ ಬಲಿಗಳನ್ನ ಅರ್ಪಿಸಿದ. ಇವೆಲ್ಲವನ್ನ ಅವನು ಯೆಹೋವನಿಗೆ ಮಾತ್ರ ಅರ್ಪಿಸಿದ. (ಆದಿ. 12:8; 13:18; 15:8-10) ಅವನು ಯೆಹೋವನಿಗೆ ಅತ್ಯುತ್ತಮ ಗುಣಮಟ್ಟದ ಕಾಣಿಕೆಗಳನ್ನೇ ಕೊಟ್ಟನಾ? ಅದ್ರಲ್ಲಿ ಯಾವುದೇ ಸಂಶಯ ಇಲ್ಲ. ಯಾಕಂದ್ರೆ ಅವನು ತನ್ನ ಮುದ್ದಿನ ಮಗ ಇಸಾಕನನ್ನೇ ಬಲಿಯಾಗಿ ಕೊಡೋಕೆ ತಯಾರಾಗಿದ್ದ. ಆ ಸಂದರ್ಭದಲ್ಲೇ ಯೆಹೋವ ದೇವರು ಯಾವ ರೀತಿಯಲ್ಲಿ ಬಲಿಯನ್ನ ಕೊಡಬೇಕು ಅಂತನೂ ತಿಳಿಸಿದನು. (ಆದಿ. 22:1, 2) ಅಬ್ರಹಾಮ ಯೆಹೋವನು ಹೇಳಿದ ಮಾತನ್ನ ಚಾಚೂತಪ್ಪದೆ ಪಾಲಿಸಿದ. ಅವನು ತನ್ನ ಮಗನನ್ನ ಬಲಿ ಕೊಡೋಕೆ ಹೋದಾಗ ಯೆಹೋವನೇ ಅವನನ್ನ ತಡೆದನು. (ಆದಿ. 22:9-12) ಅವನು ಕೊಟ್ಟ ಬಲಿಯನ್ನ ಯೆಹೋವನು ಸ್ವೀಕರಿಸಿದನು. ಯಾಕಂದ್ರೆ ಅವನ ಉದ್ದೇಶ ಸರಿಯಾಗಿತ್ತು. “ಅಬ್ರಹಾಮ ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದ. ಹಾಗಾಗಿ ದೇವರ ದೃಷ್ಟಿಯಲ್ಲಿ ಅವನು ನೀತಿವಂತನಾಗಿದ್ದ” ಅಂತ ಪೌಲ ಬರೆದ.—ರೋಮ. 4:3.
19, 20. ಯಾಕೋಬ ಶುದ್ಧ ಆರಾಧನೆಯಲ್ಲಿ ಇರಬೇಕಾದ ನಾಲ್ಕು ವಿಷಯಗಳನ್ನ ಹೇಗೆ ಪೂರೈಸಿದ?
19 ಅಬ್ರಹಾಮನಿಗೆ ಮತ್ತು ಅವನ ಸಂತತಿಯವರಿಗೆ ಕೊಡುತ್ತೇನೆ ಅಂತ ಯೆಹೋವ ಮಾತುಕೊಟ್ಟಿದ್ದ ಕಾನಾನಲ್ಲಿ ಯಾಕೋಬ ತುಂಬ ಸಮಯ ವಾಸವಾಗಿದ್ದ. (ಆದಿ. 17:1, 8) ಆದ್ರೆ ಅಲ್ಲಿದ್ದ ಜನರು ಸುಳ್ಳು ಆರಾಧನೆ ಮಾಡೋದ್ರಲ್ಲಿ ಮುಳುಗಿ ಹೋಗಿದ್ರು. ಅದಕ್ಕೇ ಯೆಹೋವನು “ಆ ದೇಶದಿಂದ ಅವರನ್ನ ಓಡಿಸಿಬಿಡ್ತೀನಿ” ಅಂದನು. (ಯಾಜ. 18:24, 25) ಯಾಕೋಬ 77 ವರ್ಷದವನಾಗಿದ್ದಾಗ ಕಾನಾನಿಂದ ಹೋದ. ಆಮೇಲೆ ಮದುವೆಯಾಗಿ ತನ್ನ ದೊಡ್ಡ ಕುಟುಂಬ ಸಮೇತ ವಾಪಸ್ ಬಂದ. (ಆದಿ. 28:1, 2; 33:18) ಅವನ ಕುಟುಂಬದಲ್ಲಿ ಕೆಲವ್ರು ಇನ್ನೂ ವಿಗ್ರಹಾರಾಧನೆ ಮಾಡ್ತಾ ಇದ್ರು. ಆದ್ರೆ ಯೆಹೋವ ಯಾಕೋಬನಿಗೆ ಬೆತೆಲ್ಗೆ ಹೋಗಿ ಒಂದು ಯಜ್ಞವೇದಿಯನ್ನ ಕಟ್ಟಿ ತನ್ನನ್ನ ಆರಾಧಿಸೋಕೆ ಹೇಳಿದಾಗ ಅವನು ತಕ್ಷಣ ಕ್ರಿಯೆಗೈದ. ಮೊದಲು ತನ್ನ ಮನೆಯಲ್ಲಿದ್ದ ಎಲ್ರ ಹತ್ರ, ‘ನಿಮ್ಮ ಹತ್ರ ಇರೋ ಸುಳ್ಳು ದೇವರುಗಳ ಮೂರ್ತಿಗಳನ್ನೆಲ್ಲ ತೆಗೆದುಹಾಕಿ. ನಿಮ್ಮನ್ನ ಶುದ್ಧಮಾಡ್ಕೊಳ್ಳಿ’ ಅಂದ. ಆಮೇಲೆ ಅವನು ಯೆಹೋವನು ಹೇಳಿದ ಹಾಗೇ ಆತನನ್ನ ಆರಾಧಿಸಿದ.—ಆದಿ. 35:1-7.
20 ಯಾಕೋಬ ಕಾನಾನ್ ದೇಶದಲ್ಲಿ ಅನೇಕ ಯಜ್ಞವೇದಿಗಳನ್ನ ಕಟ್ಟಿದ. ಪ್ರತಿ ಸಲನೂ ಅವನು ಯೆಹೋವನನ್ನೇ ಆರಾಧಿಸಿದ. (ಆದಿ. 35:14; 46:1) ಅವನು ಅರ್ಪಿಸಿದ ಬಲಿ ಅತ್ಯುತ್ತಮ ಗುಣಮಟ್ಟದ್ದಾಗಿತ್ತು. ಅದನ್ನು ಅರ್ಪಿಸಿದ ರೀತಿ ಮತ್ತು ಅವನ ಉದ್ದೇಶ ಸಹ ಸರಿಯಾಗೇ ಇತ್ತು. ಅದಕ್ಕೇ ಬೈಬಲ್ ಅವನನ್ನ “ಸಾಧು ವ್ಯಕ್ತಿ” ಅಂದ್ರೆ ನಿರ್ದೋಷಿ ಅಂತ ಹೇಳುತ್ತೆ. ಇದ್ರಿಂದ, ಯೆಹೋವನು ಅವನನ್ನ ಮೆಚ್ಚಿದನು ಅಂತ ಗೊತ್ತಾಗುತ್ತೆ. (ಆದಿ. 25:27) ಯಾಕೋಬ ತನ್ನ ಜೀವನ ಪೂರ್ತಿ ಶುದ್ಧ ಆರಾಧನೆ ಮಾಡೋ ಮೂಲಕ ತನ್ನ ಸಂತತಿಯವರಿಗೆ ಮಾದರಿ ಇಟ್ಟ.—ಆದಿ. 35:9-12.
21. ಇವರೆಲ್ಲರ ಮಾದರಿಯಿಂದ ಶುದ್ಧ ಆರಾಧನೆಯ ಬಗ್ಗೆ ನಾವೇನು ಕಲಿಯಬಹುದು?
21 ಇವರೆಲ್ಲರ ಮಾದರಿಯಿಂದ ಶುದ್ಧ ಆರಾಧನೆ ಬಗ್ಗೆ ನಾವೇನು ಕಲಿಬಹುದು? ಅವರ ತರನೇ ನಾವು ಯೆಹೋವನನ್ನ ಆರಾಧಿಸದಿರೋ ಜನ್ರ ಮಧ್ಯ ಇದ್ದೇವೆ. ನಮ್ಮ ಕುಟುಂಬದಲ್ಲೂ ಕೆಲವ್ರು ಯೆಹೋವನನ್ನ ಆರಾಧಿಸದೇ ಇರಬಹುದು. ನಾವು ಯೆಹೋವನಿಗೆ ಸಂಪೂರ್ಣ ಭಕ್ತಿ ತೋರಿಸೋಕೆ ಅವ್ರು ಅಡ್ಡಿ ಮಾಡಬಹುದು. ಅವರ ಒತ್ತಡವನ್ನ ಎದುರಿಸಬೇಕಂದ್ರೆ ನಮಗೆ ಯೆಹೋವ ದೇವರ ಮೇಲೆ ತುಂಬ ನಂಬಿಕೆ ಇರಬೇಕು ಮತ್ತು ಆತನ ನೀತಿ ನಿಯಮಗಳು ನಮ್ಮ ಒಳ್ಳೇದಕ್ಕಾಗಿಯೇ ಇವೆ ಅಂತ ಅರ್ಥಮಾಡಿಕೊಂಡಿರಬೇಕು. ಯೆಹೋವನು ಹೇಳೋದನ್ನ ಕೇಳೋ ಮೂಲಕ, ಆತನ ಸೇವೆ ಮಾಡಲಿಕ್ಕಾಗಿ ನಮ್ಮ ಸಮಯ, ಶಕ್ತಿ ಮತ್ತು ಸಂಪತ್ತನ್ನ ಉಪಯೋಗಿಸೋ ಮೂಲಕ ಆತನ ಮೇಲೆ ನಂಬಿಕೆ ಇದೆ ಅಂತ ತೋರಿಸಿಕೊಡಬೇಕು. (ಮತ್ತಾ. 22:37-40; 1 ಕೊರಿಂ. 10:31) ನಾವು ಯೆಹೋವನನ್ನ ನಮ್ಮಿಂದಾದಷ್ಟು ಅತ್ಯುತ್ತಮವಾಗಿ, ಆತನು ಹೇಳೋ ರೀತಿಯಲ್ಲಿ, ಸರಿಯಾದ ಉದ್ದೇಶದಿಂದ ಆರಾಧಿಸಬೇಕು. ಹಾಗೆ ಮಾಡಿದ್ರೆ ಆತನು ನಮ್ಮನ್ನ ನೀತಿವಂತರು ಅಂತ ಎಣಿಸುತ್ತಾನೆ. ಯೆಹೋವನು ನಮ್ಮನ್ನು ಮೆಚ್ಚುತ್ತಾನೆ ಅಂತ ಗೊತ್ತಾಗುವಾಗ ನಮಗೆಷ್ಟು ಖುಷಿ ಆಗುತ್ತಲ್ವಾ!—ಯಾಕೋಬ 2:18-24 ಓದಿ.
ಶುದ್ಧ ಆರಾಧನೆಗಾಗಿ ಆರಿಸಲಾದ ಜನಾಂಗ
22-24. ಇಸ್ರಾಯೇಲ್ಯರು ಯೆಹೋವನಿಗೆ, ಅತ್ಯುತ್ತಮ ಗುಣಮಟ್ಟದ ಕಾಣಿಕೆಯನ್ನ ಸರಿಯಾದ ರೀತಿಯಲ್ಲಿಅರ್ಪಿಸೋದು ಪ್ರಾಮುಖ್ಯ ಅಂತ ನಿಯಮ ಪುಸ್ತಕ ಹೇಗೆ ತೋರಿಸಿಕೊಡ್ತು?
22 ಯಾಕೋಬನ ಸಂತತಿಯವರಿಗೆ ದೇವರು ನಿಯಮ ಪುಸ್ತಕವನ್ನು ಕೊಟ್ಟು ಅವರೇನೇನು ಮಾಡಬೇಕು ಅಂತ ಸ್ಪಷ್ಟವಾಗಿ ತಿಳಿಸಿದನು. ಅವರು ಯೆಹೋವನ ಮಾತನ್ನ ಕೇಳಿದ್ರೆ ಆತನ ‘ವಿಶೇಷ ಸೊತ್ತು’ ಮತ್ತು ‘ಪವಿತ್ರ ಜನರು’ ಆಗ್ತಿದ್ರು. (ವಿಮೋ. 19:5, 6) ಶುದ್ಧ ಆರಾಧನೆಗೆ ಸಂಬಂಧಪಟ್ಟ ನಾಲ್ಕು ವಿಷಯಗಳನ್ನ ನಿಯಮ ಪುಸ್ತಕದಲ್ಲಿ ಹೇಗೆ ಒತ್ತಿಹೇಳಲಾಗಿದೆ ಅಂತ ಗಮನಿಸಿ.
23 ಉದಾಹರಣೆಗೆ, ನಿಯಮ ಪುಸ್ತಕದಲ್ಲಿ, “ನನ್ನನ್ನ ಬಿಟ್ಟು ಬೇರೆ ಯಾರೂ ನಿಮಗೆ ದೇವರು ಆಗಿರಬಾರದು” ಅಂತ ಹೇಳಲಾಗಿದೆ. (ವಿಮೋ. 20:3-5) ಇದ್ರಿಂದ ಯೆಹೋವನನ್ನು ಮಾತ್ರ ಆರಾಧಿಸಬೇಕು ಅಂತ ಇಸ್ರಾಯೇಲ್ಯರಿಗೆ ಸ್ಪಷ್ಟವಾಗಿತ್ತು. ಅವರು ಕೊಡುವ ಕಾಣಿಕೆಗಳ ಗುಣಮಟ್ಟ ಸಹ ಅತ್ಯುತ್ತಮವಾಗಿರಬೇಕಿತ್ತು. ಉದಾಹರಣೆಗೆ, ಬಲಿಗಾಗಿ ಅರ್ಪಿಸುವ ಪ್ರಾಣಿಯಲ್ಲಿ ಯಾವುದೇ ದೋಷ ಇರಬಾರದಾಗಿತ್ತು. (ಯಾಜ. 1:3; ಧರ್ಮೋ. 15:21; ಮಲಾಕಿಯ 1:6-8 ಹೋಲಿಸಿ.) ಯೆಹೋವನಿಗೆ ಅರ್ಪಿಸಲಾಗುತ್ತಿದ್ದ ಕಾಣಿಕೆಗಳಲ್ಲಿ ಒಂದು ಪಾಲು ಲೇವಿಯರಿಗೆ ಸಿಗುತ್ತಿತ್ತು. ಆದರೆ ಅವರು ಸಹ ಯೆಹೋವನಿಗೆ ಕಾಣಿಕೆಗಳನ್ನ ಕೊಡಬೇಕಿತ್ತು. ಅದಕ್ಕಾಗಿ ಅವರು ತಮಗೆ ‘ಕೊಡಲಾಗಿರೋ ಪ್ರತಿಯೊಂದು ಉಡುಗೊರೆಗಳಲ್ಲಿ ತುಂಬ ಚೆನ್ನಾಗಿರೋದನ್ನೇ’ ಕೊಡಬೇಕಿತ್ತು. (ಅರ. 18:29) ಇಸ್ರಾಯೇಲ್ಯರು ಕಾಣಿಕೆಗಳನ್ನ ಯಾವ ರೀತಿಯಲ್ಲಿ ಅರ್ಪಿಸಬೇಕು ಅಂತನೂ ತಿಳಿಸಲಾಗಿತ್ತು. ಅಂದ್ರೆ ಅವರು ಯೆಹೋವನಿಗೆ ಯಾವುದನ್ನ, ಎಲ್ಲಿ ಮತ್ತು ಹೇಗೆ ಅರ್ಪಿಸಬೇಕು ಅಂತ ವಿವರಿಸಲಾಗಿತ್ತು. ಅವರಿಗೆ 600ಕ್ಕಿಂತ ಹೆಚ್ಚು ನಿಯಮಗಳನ್ನ ಕೊಡಲಾಗಿತ್ತು. “ನಿಮ್ಮ ದೇವರಾದ ಯೆಹೋವ ಹೇಳಿದ ಹಾಗೇ ಎಲ್ಲವನ್ನ ತಪ್ಪದೆ ಪಾಲಿಸಬೇಕು. ಅದನ್ನ ಬಿಟ್ಟು ಒಂದು ಆಜ್ಞೆಯನ್ನೂ ಮೀರಬಾರದು” ಅಂತ ಅವರಿಗೆ ತಿಳಿಸಲಾಗಿತ್ತು.—ಧರ್ಮೋ. 5:32.
24 ಇಸ್ರಾಯೇಲ್ಯರು ಎಲ್ಲಿ ಬಲಿಗಳನ್ನ ಅರ್ಪಿಸಬೇಕು ಅನ್ನೋದು ಪ್ರಾಮುಖ್ಯವಾಗಿತ್ತಾ? ಹೌದು. ಶುದ್ಧ ಆರಾಧನೆಯನ್ನು ಮಾಡಲಿಕ್ಕಾಗಿ ದೇವದರ್ಶನ ಡೇರೆಯನ್ನ ಕಟ್ಟಬೇಕೆಂದು ಯೆಹೋವನು ಹೇಳಿದ್ದನು. (ವಿಮೋ. 40:1-3, 29, 34) ಇಸ್ರಾಯೇಲ್ಯರು ಕೊಡುತ್ತಿದ್ದ ಅರ್ಪಣೆಗಳನ್ನ ದೇವರು ಮೆಚ್ಚಬೇಕಂದ್ರೆ ಅವುಗಳನ್ನ ದೇವದರ್ಶನ ಡೇರೆಗೆ ತಂದು ಅರ್ಪಿಸಬೇಕಿತ್ತು.d—ಧರ್ಮೋ. 12:17, 18.
25. ಬಲಿಗಳನ್ನ ಅರ್ಪಿಸೋ ವಿಷಯದಲ್ಲಿ ಯಾವುದು ಪ್ರಾಮುಖ್ಯವಾಗಿತ್ತು? ವಿವರಿಸಿ.
25 ಎಲ್ಲಕ್ಕಿಂತ ಮುಖ್ಯವಾಗಿ ಕಾಣಿಕೆಗಳನ್ನ ಅರ್ಪಿಸುವಾಗ ಇಸ್ರಾಯೇಲ್ಯರ ಉದ್ದೇಶ ಸರಿಯಾಗಿರಬೇಕಿತ್ತು. ಯೆಹೋವನ ಮೇಲೆ ಮತ್ತು ಆತನ ನೀತಿ ನಿಯಮಗಳ ಮೇಲಿರೋ ಪ್ರೀತಿಯಿಂದ ಪ್ರೇರಿತರಾಗಿ ಅವುಗಳನ್ನ ಕೊಡಬೇಕಿತ್ತು. (ಧರ್ಮೋಪದೇಶಕಾಂಡ 6:4-6 ಓದಿ.) ಇಸ್ರಾಯೇಲ್ಯರು ಕಾಟಾಚಾರಕ್ಕಾಗಿ ಯೆಹೋವನನ್ನು ಆರಾಧಿಸಿದಾಗ ಆತನು ಅವರ ಅರ್ಪಣೆಗಳನ್ನು ಸ್ವೀಕರಿಸಲಿಲ್ಲ. (ಯೆಶಾ. 1:10-13) ಭಕ್ತಿ ಇರೋ ತರ ನಾಟಕ ಆಡಿ ತನ್ನನ್ನ ಮೋಸ ಮಾಡಕ್ಕಾಗಲ್ಲ ಅನ್ನೋದನ್ನ ಯೆಹೋವನು ಯೆಶಾಯನ ಮೂಲಕ ತಿಳಿಸಿದನು. “ಈ ಜನ . . . ಕೇವಲ ತುಟಿಗಳಿಂದ ನನ್ನನ್ನ ಗೌರವಿಸ್ತಾರೆ, ಆದ್ರೆ ಅದನ್ನ ಮನಸಾರೆ ಮಾಡಲ್ಲ” ಅಂತ ಹೇಳಿದನು.—ಯೆಶಾ. 29:13.
ಆಲಯದಲ್ಲಿ ಆರಾಧನೆ
26. ಮೊದಮೊದಲು ಸೊಲೊಮೋನನು ಕಟ್ಟಿದ ದೇವಾಲಯ ಯಾವುದಕ್ಕೆ ಹೆಸರುವಾಸಿಯಾಗಿತ್ತು?
26 ಇಸ್ರಾಯೇಲ್ಯರು ಕಾನಾನ್ ದೇಶಕ್ಕೆ ಬಂದು ನೂರಾರು ವರ್ಷಗಳ ನಂತರ ರಾಜ ಸೊಲೊಮೋನ ಶುದ್ಧ ಆರಾಧನೆಗಾಗಿ ಒಂದು ಆಲಯ ಕಟ್ಟಿದ. ಅದು ದೇವದರ್ಶನದ ಡೇರೆಗಿಂತ ಎಷ್ಟೋ ಶ್ರೇಷ್ಠವಾಗಿತ್ತು. (1 ಅರ. 7:51; 2 ಪೂರ್ವ. 3:1, 6, 7) ಮೊದಮೊದಲು ಇಲ್ಲಿ ಯೆಹೋವನಿಗೆ ಮಾತ್ರ ಬಲಿಗಳನ್ನ ಅರ್ಪಿಸಲಾಗ್ತಿತ್ತು. ಸೊಲೊಮೋನ ಮತ್ತು ಅವನ ಪ್ರಜೆಗಳು ಅತ್ಯುತ್ತಮ ಗುಣಮಟ್ಟದ, ಲೆಕ್ಕವಿಲ್ಲದಷ್ಟು ಬಲಿಗಳನ್ನ ಕೊಡುತ್ತಿದ್ದರು. ಅವುಗಳನ್ನ ನಿಯಮ ಪುಸ್ತಕದಲ್ಲಿ ಹೇಳಿದ ರೀತಿಯಲ್ಲೇ ಅರ್ಪಿಸಲಾಗುತ್ತಿತ್ತು. (1 ಅರ. 8:63) ದೇವಾಲಯವನ್ನು ತುಂಬ ಬೆಲೆಬಾಳೋ ವಸ್ತುಗಳಿಂದ ಮಾಡಿದ್ರೂ, ಅಲ್ಲಿ ಲೆಕ್ಕವಿಲ್ಲದಷ್ಟು ಬಲಿಗಳನ್ನ ಅರ್ಪಿಸಿದ್ರೂ ಯೆಹೋವನಿಗೆ ಅದ್ಯಾವುದೂ ಮುಖ್ಯ ಆಗಿರಲಿಲ್ಲ. ಬಲಿಗಳನ್ನ ಅರ್ಪಿಸುತ್ತಿದ್ದವ್ರ ಉದ್ದೇಶವನ್ನು ನೋಡಿನೇ ಅವುಗಳನ್ನ ಸ್ವೀಕರಿಸುತ್ತಿದ್ದನು. ಇದ್ರ ಬಗ್ಗೆ, ದೇವಾಲಯದ ಪ್ರತಿಷ್ಠಾಪನೆ ಸಮಯದಲ್ಲಿ ಸೊಲೊಮೋನ ಹೀಗೆ ಹೇಳಿದನು: “ಇವತ್ತು ಹೇಗೆ ನಿಮ್ಮ ಹೃದಯ ಸಂಪೂರ್ಣವಾಗಿ ನಮ್ಮ ದೇವರಾದ ಯೆಹೋವನ ಕಡೆ ಇದ್ಯೋ ಅದೇ ತರ ಯಾವಾಗ್ಲೂ ಇದ್ದು ಆತನ ನಿಯಮಗಳನ್ನ ಮತ್ತು ಆತನ ಆಜ್ಞೆಗಳನ್ನ ಪಾಲಿಸ್ತಾ ಇರಿ.”—1 ಅರ. 8:57-61.
27. ಇಸ್ರಾಯೇಲಿನ ರಾಜರು ಮತ್ತು ಪ್ರಜೆಗಳು ಏನು ಮಾಡಿದ್ರು ಮತ್ತು ಆಗ ಯೆಹೋವನು ಏನು ಮಾಡಿದನು?
27 ಸೊಲೊಮೋನ ಕೊಟ್ಟ ಆ ಸಲಹೆಯನ್ನ ಇಸ್ರಾಯೇಲ್ಯರು ಪಾಲಿಸಲಿಲ್ಲ. ಅವರು ಶುದ್ಧ ಆರಾಧನೆಯಲ್ಲಿ ಇರಬೇಕಾದ ನಾಲ್ಕು ಅಂಶಗಳಲ್ಲಿ ಒಂದು ಅಥವಾ ಹೆಚ್ಚು ಅಂಶಗಳನ್ನು ಪಾಲಿಸೋಕೆ ತಪ್ಪಿಹೋದ್ರು. ಇಸ್ರಾಯೇಲಿನ ರಾಜರು ಮತ್ತು ಪ್ರಜೆಗಳು ಕೆಟ್ಟವರಾದ್ರು, ಯೆಹೋವನ ಮೇಲಿನ ನಂಬಿಕೆ ಕಳಕೊಂಡ್ರು, ಆತನ ನೀತಿ ನಿಯಮಗಳನ್ನ ಗಾಳಿಗೆ ತೂರಿದ್ರು. ಆಗ ಯೆಹೋವನು ಪ್ರವಾದಿಗಳ ಮೂಲಕ ಅವರನ್ನ ತಿದ್ದಿದನು, ತನ್ನ ಮಾತನ್ನ ಕೇಳದಿದ್ದರೆ ಏನಾಗುತ್ತೆ ಅಂತ ಪದೇಪದೇ ಎಚ್ಚರಿಸಿದನು. (ಯೆರೆ. 7:13-15, 23-26) ಆ ನಂಬಿಗಸ್ತ ಪ್ರವಾದಿಗಳಲ್ಲಿ ಒಬ್ಬನು ಯೆಹೆಜ್ಕೇಲ. ಅವನ ಸಮಯದಲ್ಲಿ ಹೆಸರಿಗೆ ಮಾತ್ರ ಶುದ್ಧ ಆರಾಧನೆ ನಡಿತಿತ್ತು.
ಶುದ್ಧ ಆರಾಧನೆ ಭ್ರಷ್ಟವಾಗೋದನ್ನ ನೋಡಿದ ಯೆಹೆಜ್ಕೇಲ
28, 29. ಯೆಹೆಜ್ಕೇಲನ ಬಗ್ಗೆ ನಿಮಗೇನು ಗೊತ್ತಿದೆ? (“ಯೆಹೆಜ್ಕೇಲನ ಜೀವನ ಮತ್ತು ಕಾಲ” ಅನ್ನೋ ಚೌಕ ನೋಡಿ.)
28 ಸೊಲೊಮೋನ ಕಟ್ಟಿದ ದೇವಾಲಯದಲ್ಲಿ ಆರಾಧನೆ ಹೇಗೆ ನಡಿತಾ ಇತ್ತು ಅಂತ ಯೆಹೆಜ್ಕೇಲನಿಗೆ ಚೆನ್ನಾಗಿ ಗೊತ್ತಿತ್ತು. ಯಾಕಂದ್ರೆ ಅವನ ತಂದೆ ದೇವಾಲಯದಲ್ಲಿ ಒಬ್ಬ ಪುರೋಹಿತನಾಗಿದ್ದ. (ಯೆಹೆ. 1:3) ಯೆಹೆಜ್ಕೇಲ ಚಿಕ್ಕವನಿದ್ದಾಗ ಖುಷಿ ಖುಷಿಯಾಗಿದ್ದಿರಬೇಕು. ಅಪ್ಪ ಅವನಿಗೆ ಯೆಹೋವನ ಬಗ್ಗೆ ಮತ್ತು ನಿಯಮ ಪುಸ್ತಕದ ಬಗ್ಗೆ ಖಂಡಿತ ಕಲಿಸಿರುತ್ತಾನೆ. ಯೆಹೆಜ್ಕೇಲ ಸುಮಾರು ಒಂದು ವರ್ಷದವನಾಗಿದ್ದಾಗ ದೇವಾಲಯದಲ್ಲಿ “ನಿಯಮ ಪುಸ್ತಕ” ಸಿಕ್ಕಿತು.e ಆಗ ರಾಜ ಯೋಷೀಯ ಆಳುತ್ತಿದ್ದ. ನಿಯಮ ಪುಸ್ತಕದಲ್ಲಿರುವ ಮಾತುಗಳನ್ನ ಕೇಳಿಸಿಕೊಂಡಾಗ ಅವನು ಶುದ್ಧ ಆರಾಧನೆಯನ್ನ ಮಾಡುವಂತೆ ಎಲ್ಲರನ್ನ ಪ್ರೇರೇಪಿಸಲು ತನ್ನಿಂದ ಆಗೋದೆಲ್ಲ ಮಾಡಿದ.—2 ಅರ. 22:8-13.
29 ತನಗಿಂತ ಮುಂಚೆ ಇದ್ದ ನಂಬಿಗಸ್ತ ಸೇವಕರಂತೆ ಯೆಹೆಜ್ಕೇಲನು ಕೂಡ ಶುದ್ಧ ಆರಾಧನೆಯನ್ನೇ ಮಾಡಿದನು. ಅವನು ಯೆಹೋವನನ್ನು ಮಾತ್ರ ಆರಾಧಿಸಿದನು, ಆತನಿಗೆ ಅತ್ಯುತ್ತಮವಾದದ್ದನ್ನ ಕೊಟ್ಟನು, ಯೆಹೋವನು ಹೇಳೋದನ್ನ ಚಾಚೂತಪ್ಪದೆ ಪಾಲಿಸಿದನು ಮತ್ತು ಆತನು ಮೆಚ್ಚೋ ರೀತಿಯಲ್ಲೇ ಆರಾಧನೆ ಮಾಡಿದನು ಅಂತ ಯೆಹೆಜ್ಕೇಲ ಪುಸ್ತಕದಿಂದ ಗೊತ್ತಾಗುತ್ತೆ. ಅವನಿಗೆ ಯೆಹೋವನ ಮೇಲೆ ತುಂಬ ನಂಬಿಕೆ ಇದ್ದಿದ್ರಿಂದನೇ ಇದನ್ನೆಲ್ಲಾ ಮಾಡಿದನು. ಆದ್ರೆ ಆ ಸಮಯದಲ್ಲಿದ್ದ ಹೆಚ್ಚಿನವ್ರು ಆ ರೀತಿ ಇರಲಿಲ್ಲ. ಯೆಹೆಜ್ಕೇಲ ಚಿಕ್ಕ ವಯಸ್ಸಿನಿಂದ ಯೆರೆಮೀಯನ ಭವಿಷ್ಯವಾಣಿಗಳನ್ನ ಕೇಳಿಸಿಕೊಂಡಿರಬೇಕು. ಯೆರೆಮೀಯನು ಕ್ರಿ.ಪೂ. 647 ರಲ್ಲಿ ಭವಿಷ್ಯವಾಣಿಗಳನ್ನ ತಿಳಿಸೋ ಕೆಲಸವನ್ನ ಶುರು ಮಾಡಿದ್ದನು. ಅವನು ಹುರುಪಿನಿಂದ ಯೆಹೋವನ ನ್ಯಾಯತೀರ್ಪಿನ ಸಂದೇಶವನ್ನ ಸಾರಿದ್ದನು.
30. (ಎ) ಯೆಹೆಜ್ಕೇಲನ ಭವಿಷ್ಯವಾಣಿಗಳಿಂದ ನಾವೇನು ತಿಳ್ಕೊಬಹುದು? (ಬಿ) ಭವಿಷ್ಯವಾಣಿ ಅಂದರೇನು? ಮತ್ತು ಅವನು ಹೇಳಿದ ಭವಿಷ್ಯವಾಣಿಗಳನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು? (“ಯೆಹೆಜ್ಕೇಲನ ಭವಿಷ್ಯವಾಣಿಗಳಲ್ಲಿ ಏನೆಲ್ಲಾ ಇದೆ?” ಚೌಕ ನೋಡಿ.)
30 ಯೆಹೆಜ್ಕೇಲನ ಕಾಲದಲ್ಲಿದ್ದ ಜನರು ಶುದ್ಧ ಆರಾಧನೆಯಿಂದ ಎಷ್ಟರ ಮಟ್ಟಿಗೆ ದೂರ ಹೋಗಿದ್ರು ಅಂತ ಅವನು ಬರೆದ ಪುಸ್ತಕದಿಂದ ಗೊತ್ತಾಗುತ್ತೆ. (ಯೆಹೆಜ್ಕೇಲ 8:6 ಓದಿ.) ಯೆಹೋವನು ಯೆಹೂದ್ಯರಿಗೆ ಶಿಕ್ಷೆ ಕೊಟ್ಟು ಬಾಬೆಲಿನ ಕೈದಿಗಳಾಗೋ ತರ ಮಾಡಿದನು. ಆಗ ಯೆಹೆಜ್ಕೇಲನೂ ಕೈದಿಯಾಗಿ ಹೋದನು. (2 ಅರ. 24:11-17) ಕೈದಿಯಾಗಿದ್ರೂ ಅಲ್ಲಿ ಅವನಿಗೆ ಶಿಕ್ಷೆ ಸಿಗಲಿಲ್ಲ. ಅವನು ಕೈದಿಗಳಾಗಿ ಹೋಗಿದ್ದ ಜನರ ಮಧ್ಯದಲ್ಲೇ ಇದ್ದು ಯೆಹೋವ ದೇವ್ರು ಕೊಟ್ಟ ಕೆಲಸವನ್ನ ಮಾಡಬೇಕಿತ್ತು. ಯೆರೂಸಲೇಮಿನಲ್ಲಿ ಶುದ್ಧ ಆರಾಧನೆ ಹೇಗೆ ಪುನಃಸ್ಥಾಪನೆ ಆಗಲಿತ್ತು ಅಂತ ಅವನು ದಾಖಲಿಸಿದ ದರ್ಶನ ಮತ್ತು ಭವಿಷ್ಯವಾಣಿಗಳು ತೋರಿಸಿಕೊಡುತ್ತವೆ. ಮುಂದೆ ಇಡೀ ಭೂಮಿಯಲ್ಲಿ ಯೆಹೋವನನ್ನ ಪ್ರೀತಿಸುವ ಎಲ್ಲರೂ ಯೆಹೋವನಿಗೆ ಶುದ್ಧ ಆರಾಧನೆ ಮಾಡ್ತಾರೆ ಅಂತಾನೂ ಇದ್ರಿಂದ ತಿಳುಕೊಳ್ಳಬಹುದು.
31. ಈ ಪುಸ್ತಕದಿಂದ ನಾವೇನು ಕಲಿತೇವೆ?
31 ಈ ಪುಸ್ತಕದಲ್ಲಿರುವ ಮುಂದಿನ ಭಾಗಗಳಲ್ಲಿ ಯೆಹೋವನು ಇರುವ ಸ್ವರ್ಗದ ನಸುನೋಟ ಸಿಗುತ್ತೆ. ಶುದ್ಧ ಆರಾಧನೆ ಹೇಗೆ ಹೇಳಹೆಸರಿಲ್ಲದಂತೆ ಆಯ್ತು, ಯೆಹೋವನು ಅದನ್ನ ಹೇಗೆ ಪುನಃಸ್ಥಾಪಿಸಿದನು, ತನ್ನ ಜನರನ್ನ ಹೇಗೆ ರಕ್ಷಿಸಿ ವಾಪಸ್ ಕರೆದುಕೊಂಡು ಬಂದನು ಅಂತ ನೋಡ್ತೇವೆ. ಜೊತೆಗೆ, ಮುಂದೆ ಇಡೀ ಭೂಮಿಯಲ್ಲಿ ಎಲ್ಲರೂ ಯೆಹೋವನನ್ನೇ ಆರಾಧಿಸುವಾಗ ಹೇಗಿರುತ್ತೆ ಅಂತಾನೂ ತಿಳಿತೇವೆ. ಮುಂದಿನ ಅಧ್ಯಾಯದಲ್ಲಿ ನಾವು ಯೆಹೆಜ್ಕೇಲ ಬರೆದ ಮೊದಲನೇ ದರ್ಶನದ ಬಗ್ಗೆ ಕಲಿತೇವೆ. ಇದ್ರಿಂದ ನಮ್ಮ ಮನಸ್ಸಲ್ಲಿ ಯೆಹೋವನ ಮತ್ತು ಆತನ ಸ್ವರ್ಗೀಯ ಸಂಘಟನೆಯ ಚಿತ್ರಣ ಅಚ್ಚೊತ್ತುತ್ತೆ. ಯೆಹೋವನು ಮಾತ್ರ ನಮ್ಮ ಶುದ್ಧ ಆರಾಧನೆಯನ್ನ ಪಡೆಯೋಕೆ ಯಾಕೆ ಅರ್ಹನಾಗಿದ್ದಾನೆ ಅಂತನೂ ಈ ದರ್ಶನ ತಿಳಿಸುತ್ತೆ.
a ಆದಾಮ ಹವ್ವ ಏದೆನ್ ತೋಟದ ಹೊರಗೆ ಬಂದ ಸ್ವಲ್ಪದರಲ್ಲೇ ಹೇಬೆಲ ಹುಟ್ಟಿದ. (ಆದಿ. 4:1, 2) ದೇವರು ‘ಹೇಬೆಲನ ಬದಲು’ ಸೇತನನ್ನು ಆರಿಸಿಕೊಂಡನು ಅಂತ ಆದಿಕಾಂಡ 4:25 ಹೇಳುತ್ತೆ. ಹೇಬೆಲ ಕೊಲ್ಲಲ್ಪಟ್ಟ ನಂತ್ರ ಸೇತ ಹುಟ್ಟಿದ. ಆಗ ಆದಾಮನಿಗೆ 130 ವರ್ಷ. (ಆದಿ. 5:3) ಹಾಗಾಗಿ ಕಾಯಿನ ಹೇಬೆಲನನ್ನ ಕೊಂದಾಗ ಹೇಬೆಲನಿಗೆ ಸುಮಾರು 100 ವರ್ಷ ಆಗಿರಬೇಕು.
b ಆದಿಕಾಂಡ 4:26ರಲ್ಲಿ ಹೇಳುವಂತೆ ಆದಾಮನ ಮೊಮ್ಮಗನಾದ ಎನೋಷನ ಕಾಲದಲ್ಲಿ “ಜನ್ರು ಯೆಹೋವನ ಹೆಸರನ್ನ ಹೇಳೋಕೆ ಶುರುಮಾಡಿದ್ರು.” ಅವ್ರು ಯೆಹೋವನನ್ನು ತಪ್ಪಾದ ರೀತಿಲಿ ಆರಾಧಿಸ್ತಿದ್ರು. ಅಂದ್ರೆ ಅವ್ರು ವಿಗ್ರಹಗಳಿಗೆ ಯೆಹೋವನ ಹೆಸರಿಟ್ಟು ಆರಾಧಿಸ್ತಿದ್ರು.
c ಊರ್ ಪಟ್ಟಣದವ್ರು ತುಂಬ ದೇವರುಗಳನ್ನು ಆರಾಧಿಸ್ತಿದ್ರು. ಆದ್ರೆ ದೇವಸ್ಥಾನಗಳಲ್ಲಿ ಮತ್ತು ಯಜ್ಞವೇದಿಗಳಲ್ಲಿ ಜನರು ‘ನಾನ’ ಅನ್ನೋ ದೇವರನ್ನು ಮುಖ್ಯ ದೇವರಾಗಿ ಆರಾಧಿಸ್ತಿದ್ರು. ಈ ದೇವರ ಇನ್ನೊಂದು ಹೆಸ್ರು ಸಿನ್.
d ಮಂಜೂಷವನ್ನು ದೇವದರ್ಶನದ ಗುಡಾರದಿಂದ ತೆಗೆದ ಮೇಲೆ ಬೇರೆ ಕಡೆಗಳಲ್ಲೂ ತನಗೆ ಬಲಿಗಳನ್ನ ಅರ್ಪಿಸಲು ಯೆಹೋವನು ಅನುಮತಿಕೊಟ್ಟನು.—1 ಸಮು. 4:3, 11; 7:7-9; 10:8; 11:14, 15; 16:4, 5; 1 ಪೂರ್ವ. 21:26-30.
e ಕ್ರಿ.ಪೂ. 613ರಲ್ಲಿ ಯೆಹೆಜ್ಕೇಲನು ಭವಿಷ್ಯವಾಣಿಯನ್ನ ತಿಳಿಸೋಕೆ ಶುರುಮಾಡಿದಾಗ ಅವನಿಗೆ 30 ವರ್ಷ ಆಗಿರಬೇಕು. ಹಾಗಾದ್ರೆ ಅವ್ನು ಕ್ರಿ.ಪೂ. 643ರಲ್ಲಿ ಹುಟ್ಟಿರಬಹುದು. (ಯೆಹೆ. 1:1) ಕ್ರಿ.ಪೂ. 659ರಲ್ಲಿ ಯೋಷೀಯ ಆಳ್ವಿಕೆ ಆರಂಭಿಸಿದ. ಅವನ ಆಳ್ವಿಕೆಯ 18ನೇ ವರ್ಷದಲ್ಲಿ ಅಂದ್ರೆ ಸುಮಾರು ಕ್ರಿ.ಪೂ. 642-641ರಲ್ಲಿ ಅವ್ನಿಗೆ ನಿಯಮ ಪುಸ್ತಕದ ಒಂದು ಪ್ರತಿ ಸಿಕ್ತು. ಬಹುಶಃ ಅದು ಅಸಲಿ ಪ್ರತಿಯಾಗಿರಬೇಕು.