ಮಾರ್ಕ
3 ಪುನಃ ಒಮ್ಮೆ ಅವನು ಸಭಾಮಂದಿರಕ್ಕೆ ಹೋದನು ಮತ್ತು ಅಲ್ಲಿ ಕೈಬತ್ತಿಹೋಗಿದ್ದ ಒಬ್ಬ ಮನುಷ್ಯನಿದ್ದನು. 2 ಸಬ್ಬತ್ ದಿನದಲ್ಲಿ ಅವನು ಆ ಮನುಷ್ಯನನ್ನು ವಾಸಿಮಾಡುವನೋ ಏನೋ ಎಂದು ಫರಿಸಾಯರು ಅವನನ್ನು ನಿಕಟವಾಗಿ ಗಮನಿಸುತ್ತಿದ್ದರು; ಅವನ ಮೇಲೆ ಆರೋಪ ಹೊರಿಸುವುದೇ ಅವರ ಉದ್ದೇಶವಾಗಿತ್ತು. 3 ಅವನು ಕೈಬತ್ತಿಹೋಗಿದ್ದ ಮನುಷ್ಯನಿಗೆ, “ಎದ್ದು ನಡುವೆ ಬಾ” ಎಂದು ಹೇಳಿದನು. 4 ಅನಂತರ ಅವರಿಗೆ, “ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮಸಮ್ಮತ? ಒಳ್ಳೆಯದನ್ನೊ, ಕೆಟ್ಟದ್ದನ್ನೊ? ಪ್ರಾಣವನ್ನು ಉಳಿಸುವುದೊ, ತೆಗೆಯುವುದೊ?” ಎಂದು ಕೇಳಿದನು. ಅದಕ್ಕೆ ಅವರು ಸುಮ್ಮನಿದ್ದರು. 5 ಆಗ ಅವನು ತನ್ನ ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ವಿಚಾರಹೀನ ಹೃದಯಗಳ ನಿಮಿತ್ತ ಬಹಳವಾಗಿ ದುಃಖಿಸಿ, ಆ ಮನುಷ್ಯನಿಗೆ “ನಿನ್ನ ಕೈಚಾಚು” ಎಂದು ಹೇಳಿದನು. ಅವನು ಕೈಯನ್ನು ಚಾಚಿದನು ಮತ್ತು ಅದು ವಾಸಿಯಾಯಿತು. 6 ಆಗ ಫರಿಸಾಯರು ಅಲ್ಲಿಂದ ಹೊರಗೆ ಹೋಗಿ ಆ ಕೂಡಲೆ ಹೆರೋದನ ಪಕ್ಷದವರೊಂದಿಗೆ ಸೇರಿಕೊಂಡು ಅವನನ್ನು ನಾಶಪಡಿಸಲಿಕ್ಕಾಗಿ ಸಮಾಲೋಚನೆ ನಡೆಸತೊಡಗಿದರು.
7 ಆದರೆ ಯೇಸು ತನ್ನ ಶಿಷ್ಯರೊಂದಿಗೆ ಸಮುದ್ರದ ಬಳಿಗೆ ಹೋದನು; ಗಲಿಲಾಯ ಮತ್ತು ಯೂದಾಯದಿಂದ ಬಂದ ಜನರ ದೊಡ್ಡ ಗುಂಪು ಅವನನ್ನು ಹಿಂಬಾಲಿಸಿತು. 8 ಅವನು ಮಾಡುತ್ತಿದ್ದ ಎಲ್ಲ ಮಹತ್ಕಾರ್ಯಗಳ ಕುರಿತು ಕೇಳಿಸಿಕೊಂಡು, ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೋರ್ದನ್ ನದಿಯ ಆಚೆ ಕಡೆಯಿಂದಲೂ ತೂರ್ ಮತ್ತು ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಜನರ ದೊಡ್ಡ ಗುಂಪು ಅವನ ಬಳಿಗೆ ಬಂತು. 9 ಜನರು ತನ್ನ ಮೈಮೇಲೆ ಬಿದ್ದು ನೂಕದಿರಲಿಕ್ಕಾಗಿ ತನಗಾಗಿ ಒಂದು ಚಿಕ್ಕ ದೋಣಿಯು ಯಾವಾಗಲೂ ಸಿದ್ಧವಾಗಿರಲಿ ಎಂದು ಅವನು ತನ್ನ ಶಿಷ್ಯರಿಗೆ ಹೇಳಿದನು. 10 ಅವನು ಅನೇಕರನ್ನು ವಾಸಿಮಾಡಿದ್ದರಿಂದ, ಗುರುತರವಾದ ರೋಗಗಳಿದ್ದವರೆಲ್ಲರೂ ಅವನನ್ನು ಮುಟ್ಟಲಿಕ್ಕಾಗಿ ಅವನ ಮೈಮೇಲೆ ಬೀಳುತ್ತಿದ್ದರು. 11 ದೆವ್ವಗಳು ಸಹ ಅವನನ್ನು ಕಂಡಾಗಲೆಲ್ಲ ಅವನ ಮುಂದೆ ಅಡ್ಡಬಿದ್ದು “ನೀನು ದೇವರ ಮಗನು” ಎಂದು ಕಿರಿಚಿ ಹೇಳುತ್ತಿದ್ದವು. 12 ಆದರೆ ತಾನು ಯಾರೆಂಬುದನ್ನು ಪ್ರಕಟಿಸಬಾರದೆಂದು ಅನೇಕ ಸಲ ಅವನು ಅವುಗಳಿಗೆ ಕಟ್ಟಪ್ಪಣೆ ಮಾಡಿದನು.
13 ಅವನು ಬೆಟ್ಟವನ್ನೇರಿ ತನಗೆ ಬೇಕಾದವರನ್ನು ತನ್ನ ಬಳಿಗೆ ಕರೆದನು ಮತ್ತು ಅವರು ಅಲ್ಲಿಗೆ ಹೋದರು. 14 ಅವನು ಹನ್ನೆರಡು ಮಂದಿಯನ್ನು ತನ್ನ ಸಂಗಡ ಇರಲಿಕ್ಕಾಗಿ ಮತ್ತು ಸಾರಲು ಕಳುಹಿಸಲಿಕ್ಕಾಗಿ ಆಯ್ಕೆಮಾಡಿ, ಅವರಿಗೆ “ಅಪೊಸ್ತಲರು” ಎಂದು ಹೆಸರಿಟ್ಟನು 15 ಮತ್ತು ದೆವ್ವಗಳನ್ನು ಬಿಡಿಸುವ ಅಧಿಕಾರವನ್ನೂ ಕೊಟ್ಟನು.
16 ಅವನು ಆಯ್ಕೆಮಾಡಿದ ಹನ್ನೆರಡು ಮಂದಿ ಯಾರೆಂದರೆ, ಸೀಮೋನ (ಇವನಿಗೆ ಯೇಸು ಪೇತ್ರ ಎಂಬ ಉಪನಾಮವನ್ನು ಕೊಟ್ಟನು), 17 ಜೆಬೆದಾಯನ ಮಗನಾದ ಯಾಕೋಬ, ಯಾಕೋಬನ ತಮ್ಮನಾದ ಯೋಹಾನ (ಇವರಿಗೆ ಅವನು ‘ಬೊವನೆರ್ಗೆಸ್’ ಎಂದರೆ ಗುಡುಗಿನ ಪುತ್ರರು ಎಂಬ ಉಪನಾಮವನ್ನೂ ಕೊಟ್ಟನು), 18 ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನ 19 ಮತ್ತು ಸಮಯಾನಂತರ ಯೇಸುವಿಗೆ ದ್ರೋಹಮಾಡಿದ ಇಸ್ಕರಿಯೋತ ಯೂದ.
ತದನಂತರ ಅವನು ಒಂದು ಮನೆಗೆ ಹೋದನು. 20 ಪುನಃ ಜನರು ಗುಂಪಾಗಿ ಕೂಡಿಬಂದದ್ದರಿಂದ ಅವರಿಗೆ ಊಟಮಾಡಲು ಸಹ ಸಾಧ್ಯವಾಗಲಿಲ್ಲ. 21 ಅವನ ಸಂಬಂಧಿಕರು ಇದನ್ನು ಕೇಳಿಸಿಕೊಂಡಾಗ, “ಇವನಿಗೆ ಹುಚ್ಚುಹಿಡಿದಿದೆ” ಎಂದು ಹೇಳುತ್ತಾ ಅವನನ್ನು ಹಿಡಿದುತರಲು ಹೋದರು. 22 ಇದಲ್ಲದೆ, ಯೆರೂಸಲೇಮಿನಿಂದ ಬಂದಿದ್ದ ಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ದೆವ್ವಗಳ ಆ ಅಧಿಪತಿಯ ಸಹಾಯದಿಂದ ಇವನು ದೆವ್ವಗಳನ್ನು ಬಿಡಿಸುತ್ತಾನೆ” ಎಂದು ಹೇಳುತ್ತಿದ್ದರು. 23 ಆಗ ಅವನು ಅವರನ್ನು ತನ್ನ ಬಳಿಗೆ ಕರೆದು ದೃಷ್ಟಾಂತಗಳ ಮೂಲಕ ಹೀಗೆ ಹೇಳಲಾರಂಭಿಸಿದನು: “ಸೈತಾನನು ಸೈತಾನನನ್ನೇ ಬಿಡಿಸುವುದು ಹೇಗೆ ತಾನೇ ಸಾಧ್ಯ? 24 ಒಂದು ರಾಜ್ಯವು ತನ್ನೊಳಗೆ ಒಡೆದು ವಿಭಾಗವಾದರೆ ಆ ರಾಜ್ಯವು ನಿಲ್ಲಲಾರದು; 25 ಒಂದು ಮನೆಯು ತನ್ನಲ್ಲಿ ವಿಭಾಗಗೊಂಡರೆ ಆ ಮನೆಯೂ ನಿಲ್ಲಲಾರದು. 26 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿಯೇ ವಿಭಾಗಿಸಲ್ಪಟ್ಟರೆ ಅವನು ನಿಲ್ಲಲಾರದೆ ಅಂತ್ಯಕ್ಕೆ ಬರುತ್ತಿದ್ದಾನೆ. 27 ವಾಸ್ತವದಲ್ಲಿ, ಯಾವನೂ ಬಲಿಷ್ಠನೊಬ್ಬನ ಮನೆಗೆ ನುಗ್ಗಿ ಮೊದಲು ಅವನನ್ನು ಕಟ್ಟಿಹಾಕದೆ ಅವನ ಚರಸೊತ್ತನ್ನು ಸೂರೆಮಾಡಲಾಗುವುದಿಲ್ಲ. ಮೊದಲು ಅವನನ್ನು ಕಟ್ಟಿಹಾಕುವನು, ಅನಂತರ ಅವನ ಮನೆಯನ್ನು ಸೂರೆಮಾಡುವನು. 28 ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಮನುಷ್ಯರು ಪಾಪಗಳನ್ನು ಮತ್ತು ದೇವದೂಷಣೆಗಳನ್ನು ಎಷ್ಟೇ ದೂಷಣಾ ರೀತಿಯಲ್ಲಿ ಮಾಡಿರಲಿ, ಅವುಗಳಿಗೆ ಕ್ಷಮಾಪಣೆ ಉಂಟು. 29 ಆದರೆ, ಪವಿತ್ರಾತ್ಮದ ವಿರುದ್ಧ ದೂಷಣೆಮಾಡುವವನಿಗೆ ಎಂದಿಗೂ ಕ್ಷಮಾಪಣೆ ದೊರಕುವುದಿಲ್ಲ; ಅವನು ಶಾಶ್ವತ ಪಾಪದ ಅಪರಾಧಿಯಾಗಿದ್ದಾನೆ.” 30 ಅವರು, “ಇವನಿಗೆ ದೆವ್ವಹಿಡಿದಿದೆ” ಎಂದು ಹೇಳುತ್ತಿದ್ದುದರಿಂದ ಅವನು ಇದನ್ನು ಹೇಳಿದನು.
31 ಆಗ ಅವನ ತಾಯಿಯೂ ತಮ್ಮಂದಿರೂ ಬಂದು ಹೊರಗೆ ನಿಂತು ಅವನನ್ನು ಕರೆಯಲು ಹೇಳಿಕಳುಹಿಸಿದರು. 32 ಅವನ ಸುತ್ತಲೂ ಕುಳಿತಿದ್ದ ಜನರು ಅವನಿಗೆ, “ಇಗೋ! ನಿನ್ನ ತಾಯಿಯೂ ತಮ್ಮಂದಿರೂ ಹೊರಗೆ ನಿನಗಾಗಿ ಕಾಯುತ್ತಿದ್ದಾರೆ” ಎಂದು ಹೇಳಿದರು. 33 ಅದಕ್ಕೆ ಪ್ರತ್ಯುತ್ತರವಾಗಿ ಅವನು, “ನನ್ನ ತಾಯಿಯೂ ತಮ್ಮಂದಿರೂ ಯಾರು?” ಎಂದು ಕೇಳಿದನು. 34 ಅನಂತರ ಅವನು ತನ್ನ ಸುತ್ತಲೂ ಕುಳಿತಿದ್ದವರನ್ನು ನೋಡಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ತಮ್ಮಂದಿರು! 35 ದೇವರ ಚಿತ್ತವನ್ನು ಮಾಡುವವನೇ ನನ್ನ ತಮ್ಮನೂ ತಂಗಿಯೂ ತಾಯಿಯೂ ಆಗಿದ್ದಾನೆ” ಎಂದು ಹೇಳಿದನು.