1 ಕೊರಿಂಥ
1 ದೇವರ ಚಿತ್ತದಿಂದ ಯೇಸು ಕ್ರಿಸ್ತನ ಅಪೊಸ್ತಲನಾಗುವುದಕ್ಕೆ ಕರೆಯಲ್ಪಟ್ಟ ಪೌಲನಾದ ನಾನು ಮತ್ತು ನಮ್ಮ ಸಹೋದರನಾದ ಸೊಸ್ಥೆನನು 2 ಕೊರಿಂಥದಲ್ಲಿರುವ ದೇವರ ಸಭೆಗೆ ಅಂದರೆ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ಪವಿತ್ರೀಕರಿಸಲ್ಪಟ್ಟವರೂ ಪವಿತ್ರ ಜನರಾಗುವುದಕ್ಕೆ ಕರೆಯಲ್ಪಟ್ಟವರೂ ಆಗಿರುವವರಿಗೆ ಮತ್ತು ಅವರ ಹಾಗೂ ನಮ್ಮ ಕರ್ತನಾಗಿರುವ ಯೇಸು ಕ್ರಿಸ್ತನ ನಾಮದಲ್ಲಿ ಕೋರುತ್ತಿರುವವರು ಎಲ್ಲಿದ್ದರೂ ಅವರೆಲ್ಲರಿಗೂ ಬರೆಯುವುದೇನೆಂದರೆ,
3 ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಉಂಟಾಗಲಿ.
4 ಕ್ರಿಸ್ತ ಯೇಸುವಿನಲ್ಲಿ ನಿಮಗೆ ಕೊಡಲ್ಪಟ್ಟಿರುವ ದೇವರ ಅಪಾತ್ರ ದಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಯಾವಾಗಲೂ ನಿಮಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 5 ನೀವು ಎಲ್ಲ ವಿಷಯಗಳಲ್ಲಿ ಅಂದರೆ ಮಾತಾಡುವ ಪೂರ್ಣ ಸಾಮರ್ಥ್ಯದಲ್ಲಿಯೂ ಪೂರ್ಣ ಜ್ಞಾನದಲ್ಲಿಯೂ ಅವನಲ್ಲಿ ಸಮೃದ್ಧಿಹೊಂದಿದ್ದೀರಿ. 6 ಇದರಿಂದ ಕ್ರಿಸ್ತನ ಕುರಿತಾದ ಸಾಕ್ಷಿಯು ನಿಮ್ಮಲ್ಲಿ ದೃಢವಾಗಿ ನೆಲೆಗೊಂಡಿದೆ ಎಂಬುದು ವ್ಯಕ್ತವಾಗುತ್ತದೆ. 7 ಹೀಗೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಗಾಗಿ ತವಕದಿಂದ ಕಾಯುತ್ತಿರುವವರಾದ ನಿಮಗೆ ಯಾವುದೇ ವರದಲ್ಲಿ ಕೊರತೆಯಿರುವುದಿಲ್ಲ. 8 ನಮ್ಮ ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ನಿಮ್ಮ ಮೇಲೆ ಯಾವುದೇ ಆಪಾದನೆಯನ್ನು ಹೊರಿಸಲಾಗದಂತೆ ದೇವರು ನಿಮ್ಮನ್ನು ಕಡೇ ವರೆಗೂ ದೃಢಪಡಿಸುವನು. 9 ತನ್ನ ಪುತ್ರನೂ ನಮ್ಮ ಕರ್ತನೂ ಆಗಿರುವ ಯೇಸು ಕ್ರಿಸ್ತನೊಂದಿಗೆ ಪಾಲುಗಾರರಾಗಲು ನಿಮ್ಮನ್ನು ಕರೆದಾತನಾದ ದೇವರು ನಂಬಿಗಸ್ತನು.
10 ಸಹೋದರರೇ, ನೀವೆಲ್ಲರೂ ಒಮ್ಮತದಿಂದ ಮಾತಾಡಬೇಕೆಂದು, ನಿಮ್ಮಲ್ಲಿ ಭೇದಗಳಿರಬಾರದೆಂದೂ ನೀವು ಏಕಮನಸ್ಸು ಮತ್ತು ಏಕವಿಚಾರಧಾರೆಯಿಂದ ಹೊಂದಿಕೊಂಡವರಾಗಿ ಐಕ್ಯದಿಂದಿರಬೇಕೆಂದೂ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಉತ್ತೇಜಿಸುತ್ತೇನೆ. 11 ಏಕೆಂದರೆ ನನ್ನ ಸಹೋದರರೇ, ನಿಮ್ಮ ಮಧ್ಯೆ ಮನಸ್ತಾಪಗಳಿವೆ ಎಂದು ನಿಮ್ಮ ವಿಷಯವಾಗಿ ಖ್ಲೋಯೆಯ ಮನೆಯವರಿಂದ ನನಗೆ ತಿಳಿದುಬಂತು. 12 ನಾನು ಹೇಳುವುದೇನೆಂದರೆ ನಿಮ್ಮಲ್ಲಿ ಪ್ರತಿಯೊಬ್ಬನು, “ನಾನು ಪೌಲನಿಗೆ ಸೇರಿದವನು,” “ನಾನು ಅಪೊಲ್ಲೋಸನವನು,” “ನಾನು ಕೇಫನವನು,” “ಆದರೆ ನಾನು ಕ್ರಿಸ್ತನಿಗೆ ಸೇರಿದವನು” ಎಂದು ಹೇಳುತ್ತೀರಂತೆ. 13 ಕ್ರಿಸ್ತನು ವಿಭಜಿತನಾಗಿದ್ದಾನೆ. ಪೌಲನು ನಿಮಗೋಸ್ಕರ ಶೂಲಕ್ಕೇರಿಸಲ್ಪಡಲಿಲ್ಲ, ಅಲ್ಲವೆ? ಅಥವಾ ನೀವು ಪೌಲನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರೊ? 14 ನಿಮ್ಮಲ್ಲಿ ಕ್ರಿಸ್ಪನಿಗೂ ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ದೀಕ್ಷಾಸ್ನಾನ ಮಾಡಿಸದೆ ಇದ್ದುದಕ್ಕೆ ದೇವರಿಗೆ ಕೃತಜ್ಞತೆ ಹೇಳುತ್ತೇನೆ; 15 ಹೀಗೆ ನಿಮ್ಮಲ್ಲಿ ಯಾವನೂ ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೇನೆ ಎಂದು ಹೇಳುವಂತಿಲ್ಲ. 16 ಹೌದು, ನಾನು ಸ್ತೆಫನನ ಮನೆಯವರಿಗೆ ಸಹ ದೀಕ್ಷಾಸ್ನಾನ ಮಾಡಿಸಿದೆನು. ಇದನ್ನು ಬಿಟ್ಟು ಬೇರೆ ಯಾರಿಗಾದರೂ ದೀಕ್ಷಾಸ್ನಾನ ಮಾಡಿಸಿದ್ದು ನನಗೆ ನೆನಪಿಲ್ಲ. 17 ಏಕೆಂದರೆ ಕ್ರಿಸ್ತನು ನನ್ನನ್ನು ದೀಕ್ಷಾಸ್ನಾನ ಮಾಡಿಸಲಿಕ್ಕಾಗಿ ಅಲ್ಲ, ಸುವಾರ್ತೆಯನ್ನು ಸಾರುತ್ತಾ ಹೋಗಲಿಕ್ಕಾಗಿ ಕಳುಹಿಸಿದನು. ವಾಕ್ಚಾತುರ್ಯದಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಯಾತನಾ ಕಂಬವು ನಿರರ್ಥಕವಾಗುವುದು.
18 ಯಾತನಾ ಕಂಬದ ಕುರಿತಾದ ಮಾತು ನಾಶನಮಾರ್ಗದಲ್ಲಿರುವವರಿಗೆ ಹುಚ್ಚುಮಾತಾಗಿದೆ, ಆದರೆ ರಕ್ಷಣೆಯ ಮಾರ್ಗದಲ್ಲಿರುವವರಾದ ನಮಗೆ ಅದು ದೇವರ ಶಕ್ತಿಯಾಗಿದೆ. 19 ಏಕೆಂದರೆ, “ನಾನು ವಿವೇಕಿಗಳ ವಿವೇಕವನ್ನು ನಾಶಮಾಡುವೆನು ಮತ್ತು ಬುದ್ಧಿವಂತರ ಬುದ್ಧಿವಂತಿಕೆಯನ್ನು ತಳ್ಳಿಬಿಡುವೆನು” ಎಂದು ಬರೆಯಲ್ಪಟ್ಟಿದೆ. 20 ವಿವೇಕಿಯು ಎಲ್ಲಿ? ಶಾಸ್ತ್ರಿಯೆಲ್ಲಿ? ಈ ವಿಷಯಗಳ ವ್ಯವಸ್ಥೆಯ ತರ್ಕವಾದಿ ಎಲ್ಲಿ? ದೇವರು ಈ ಲೋಕದ ವಿವೇಕವನ್ನು ಹುಚ್ಚುಮಾತಾಗಿ ಮಾಡಲಿಲ್ಲವೆ? 21 ದೇವರ ವಿವೇಕದಲ್ಲಿ, ಈ ಲೋಕವು ತನ್ನ ವಿವೇಕದ ಮೂಲಕ ದೇವರನ್ನು ತಿಳಿಯದೇ ಹೋದುದರಿಂದ, ಹುಚ್ಚುಮಾತು ಎನಿಸಿಕೊಂಡಿರುವ ಸಾರುವಿಕೆಯ ಮೂಲಕ ನಂಬುವವರನ್ನು ರಕ್ಷಿಸುವುದು ಒಳ್ಳೇದೆಂದು ದೇವರಿಗೆ ತೋರಿತು.
22 ಯೆಹೂದ್ಯರು ಸೂಚಕಕಾರ್ಯಗಳಿಗಾಗಿ ಕೇಳುತ್ತಾರೆ ಮತ್ತು ಗ್ರೀಕರು ವಿವೇಕವನ್ನು ಹುಡುಕುತ್ತಾರೆ; 23 ಆದರೆ ನಾವು ಶೂಲಕ್ಕೇರಿಸಲ್ಪಟ್ಟ ಕ್ರಿಸ್ತನ ಕುರಿತು ಸಾರುತ್ತೇವೆ. ಇದು ಯೆಹೂದ್ಯರಿಗೆ ಎಡವಲು ಕಾರಣವಾಗಿಯೂ ಅನ್ಯಜನಾಂಗಗಳಿಗೆ ಹುಚ್ಚುಮಾತಾಗಿಯೂ ಇದೆ. 24 ಆದರೆ ಕರೆಯಲ್ಪಟ್ಟವರಿಗೆ, ಅವರು ಯೆಹೂದ್ಯರಾಗಲಿ ಗ್ರೀಕರಾಗಲಿ ಕ್ರಿಸ್ತನು ದೇವರ ಶಕ್ತಿಯೂ ದೇವರ ವಿವೇಕವೂ ಆಗಿದ್ದಾನೆ. 25 ದೇವರ ಅವಿವೇಕವು ಮನುಷ್ಯರ ವಿವೇಕಕ್ಕಿಂತ ಹೆಚ್ಚು ವಿವೇಕವುಳ್ಳದ್ದಾಗಿದೆ ಮತ್ತು ದೇವರಲ್ಲಿ ಯಾವುದನ್ನು ಬಲಹೀನತೆಯೆಂದು ಎಣಿಸಲಾಗುತ್ತದೋ ಅದು ಮನುಷ್ಯರಿಗಿಂತ ಹೆಚ್ಚು ಬಲವುಳ್ಳದ್ದಾಗಿದೆ.
26 ಸಹೋದರರೇ, ಆತನು ನಿಮ್ಮಲ್ಲಿ ಎಂಥವರನ್ನು ಕರೆದನು ಎಂಬುದನ್ನು ಆಲೋಚಿಸಿರಿ; ನಿಮ್ಮಲ್ಲಿ ಮಾನವ ದೃಷ್ಟಿಯಲ್ಲಿ ವಿವೇಕಿಗಳಾಗಿರುವ ಅನೇಕರಾಗಲಿ ಶಕ್ತಿಶಾಲಿಗಳಾದ ಅನೇಕರಾಗಲಿ ಕುಲೀನರಾಗಿ ಜನಿಸಿದ ಅನೇಕರಾಗಲಿ ಕರೆಯಲ್ಪಡಲಿಲ್ಲ. 27 ವಿವೇಕಿಗಳನ್ನು ನಾಚಿಕೆಪಡಿಸುವುದಕ್ಕಾಗಿ ದೇವರು ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡನು; ದೇವರು ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಲೋಕದ ಬಲಹೀನರನ್ನು ಆರಿಸಿಕೊಂಡನು. 28 ದೇವರು ಈ ಲೋಕದ ಕೀಳಾದ ಸಂಗತಿಗಳನ್ನೂ ಹೀನೈಸಲ್ಪಟ್ಟ ಸಂಗತಿಗಳನ್ನೂ ಆರಿಸಿಕೊಂಡದ್ದಲ್ಲದೆ, ಗಣ್ಯವಾದುದನ್ನು ಇಲ್ಲದಂತೆ ಮಾಡುವುದಕ್ಕಾಗಿ ಗಣನೆಗೆ ಬಾರದ್ದನ್ನು ಆರಿಸಿಕೊಂಡನು. 29 ಇದರಿಂದಾಗಿ ಯಾವನಿಗೂ ದೇವರ ಮುಂದೆ ಹೆಚ್ಚಳಪಡಲು ಆಸ್ಪದವಿಲ್ಲ. 30 ಆದರೆ ಆತನಿಂದಲೇ ನೀವು ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿದ್ದೀರಿ. ಅವನೇ ನಮಗೆ ದೇವರ ಕಡೆಯಿಂದ ವಿವೇಕವೂ ನೀತಿಯೂ ಪವಿತ್ರೀಕರಣವೂ ವಿಮೋಚನಾ ಮೌಲ್ಯದಿಂದ ಸಿಗುವ ಬಿಡುಗಡೆಯೂ ಆಗಿದ್ದಾನೆ. 31 ಆದುದರಿಂದ “ಹೆಚ್ಚಳಪಡುವವನು ಯೆಹೋವನಲ್ಲಿ ಹೆಚ್ಚಳಪಡಲಿ” ಎಂದು ಬರೆದಿರುವುದು ನೆರವೇರುವಂತಾಯಿತು.