1 ಥೆಸಲೊನೀಕ
4 ಕೊನೆಯದಾಗಿ ಸಹೋದರರೇ, ನೀವು ಹೇಗೆ ನಡೆಯಬೇಕು ಮತ್ತು ದೇವರನ್ನು ಹೇಗೆ ಮೆಚ್ಚಿಸಬೇಕು ಎಂಬ ಉಪದೇಶವನ್ನು ನಮ್ಮಿಂದ ಹೊಂದಿರುವ ಪ್ರಕಾರ, ಅಂದರೆ ಈಗಾಗಲೇ ನೀವು ನಡೆಯುತ್ತಿರುವ ಪ್ರಕಾರವೇ, ಮುಂದಕ್ಕೂ ಅದನ್ನು ಹೆಚ್ಚು ಪೂರ್ಣವಾಗಿ ಮಾಡುತ್ತಾ ಇರಬೇಕೆಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ ಮತ್ತು ಕರ್ತನಾದ ಯೇಸುವಿನಲ್ಲಿ ಬುದ್ಧಿಹೇಳುತ್ತೇವೆ. 2 ಕರ್ತನಾದ ಯೇಸುವಿನ ಮೂಲಕ ನಾವು ನಿಮಗೆ ಕೊಟ್ಟ ಆಜ್ಞೆಗಳು ನಿಮಗೆ ತಿಳಿದೇ ಇವೆ.
3 ನಿಮ್ಮನ್ನು ಪವಿತ್ರಗೊಳಿಸುವುದೇ, ನೀವು ಹಾದರದಿಂದ ದೂರವಿರಬೇಕೆಂಬುದೇ ದೇವರ ಚಿತ್ತವಾಗಿದೆ; 4 ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರತೆಯಲ್ಲಿಯೂ ಗೌರವದಲ್ಲಿಯೂ ತನ್ನ ಸ್ವಂತ ದೇಹವನ್ನು * ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಹೇಗೆಂಬುದನ್ನು ತಿಳಿದವನಾಗಿರಬೇಕು, 5 ದೇವರನ್ನರಿಯದ ಅನ್ಯಜನಾಂಗಗಳವರಲ್ಲಿ ಇರುವಂತೆ ದುರಾಶೆಭರಿತ ಕಾಮಾಭಿಲಾಷೆಯನ್ನು ಹೊಂದಿರಬಾರದು. 6 ಈ ವಿಷಯದಲ್ಲಿ ಯಾವನೂ ತನ್ನ ಸಹೋದರನಿಗೆ ಹಾನಿಯನ್ನು ಉಂಟುಮಾಡಿ ಅವನ ಹಕ್ಕುಗಳನ್ನು ಅತಿಕ್ರಮಿಸುವ ಹಂತಕ್ಕೆ ಹೋಗದಿರಲಿ; ಏಕೆಂದರೆ ನಾವು ನಿಮಗೆ ಮುಂದಾಗಿಯೇ ಹೇಳಿರುವಂತೆಯೂ ಕೂಲಂಕಷವಾಗಿ ತಿಳಿಸಿರುವಂತೆಯೂ ಈ ಎಲ್ಲ ವಿಷಯಗಳಿಗೆ ಶಿಕ್ಷೆಯನ್ನು ಕೊಡುವಾತನು ಯೆಹೋವನೇ ಆಗಿದ್ದಾನೆ. 7 ದೇವರು ನಮ್ಮನ್ನು ಅಶುದ್ಧತೆಗೆ ಅನುಮತಿಯನ್ನು ನೀಡುವಾತನಾಗಿ ಅಲ್ಲ, ಪವಿತ್ರತೆಯ ಸಂಬಂಧದಲ್ಲಿ ಕರೆದನು. 8 ಆದುದರಿಂದ ತಿರಸ್ಕಾರಭಾವವನ್ನು ತೋರಿಸುವವನು ಮನುಷ್ಯನನ್ನಲ್ಲ, ನಿಮ್ಮಲ್ಲಿ ತನ್ನ ಪವಿತ್ರಾತ್ಮವನ್ನು ದಯಪಾಲಿಸುವ ದೇವರನ್ನು ತಿರಸ್ಕರಿಸುವವನಾಗಿದ್ದಾನೆ.
9 ಸಹೋದರ ಪ್ರೀತಿಯ ವಿಷಯದಲ್ಲಿ ನಾವು ನಿಮಗೆ ಬರೆಯುವ ಅಗತ್ಯವಿಲ್ಲ; ಏಕೆಂದರೆ ಒಬ್ಬರನ್ನೊಬ್ಬರು ಪ್ರೀತಿಸುವಂತೆ ನೀವೇ ದೇವರಿಂದ ಕಲಿಸಲ್ಪಟ್ಟಿದ್ದೀರಿ. 10 ವಾಸ್ತವದಲ್ಲಿ, ಮಕೆದೋನ್ಯದಾದ್ಯಂತವಿರುವ ಎಲ್ಲ ಸಹೋದರರಿಗೆ ನೀವು ಅದನ್ನು ತೋರಿಸುತ್ತಿದ್ದೀರಿ. ಆದರೆ ಸಹೋದರರೇ, ನೀವು ಅದನ್ನು ಇನ್ನೂ ಹೆಚ್ಚು ಪೂರ್ಣವಾದ ರೀತಿಯಲ್ಲಿ ತೋರಿಸುತ್ತಾ ಮುಂದುವರಿಯಬೇಕೆಂದು 11 ಮತ್ತು ನಾವು ನಿಮಗೆ ಆಜ್ಞಾಪಿಸಿದಂತೆ ನೆಮ್ಮದಿಯಿಂದ ಜೀವಿಸುವುದನ್ನು, ಮತ್ತೊಬ್ಬರ ಕಾರ್ಯದಲ್ಲಿ ತಲೆಹಾಕದೆ ಸ್ವಂತ ಕಾರ್ಯವನ್ನೇ ಮಾಡಿಕೊಂಡಿರುವುದನ್ನು ಹಾಗೂ ಕೈಯಾರೆ ಕೆಲಸಮಾಡುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ ಎಂದು ನಿಮಗೆ ಬುದ್ಧಿಹೇಳುತ್ತೇವೆ. 12 ಆಗ ನೀವು ಹೊರಗಿನವರ ಮುಂದೆ ಸಭ್ಯರಾಗಿ ನಡೆದುಕೊಳ್ಳುವಂತಾಗುವುದು ಮತ್ತು ನಿಮಗೆ ಯಾವುದೇ ಕೊರತೆಯಿರುವುದಿಲ್ಲ.
13 ಇದಲ್ಲದೆ ಸಹೋದರರೇ, ಮರಣದಲ್ಲಿ ನಿದ್ರೆಹೋಗುತ್ತಿರುವವರ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬಾರದೆಂಬುದು ನಮ್ಮ ಅಪೇಕ್ಷೆ; ನಿರೀಕ್ಷೆಯಿಲ್ಲದವರು ದುಃಖಿಸುವಂಥ ರೀತಿಯಲ್ಲಿ ನೀವು ದುಃಖಿಸಬಾರದು. 14 ಯೇಸು ಸತ್ತು ಜೀವಿತನಾಗಿ ಎದ್ದುಬಂದನು ಎಂಬುದು ನಮ್ಮ ನಂಬಿಕೆಯಾಗಿದ್ದರೆ, ಯೇಸುವಿನೊಂದಿಗೆ ಐಕ್ಯದಲ್ಲಿ ಮರಣದಲ್ಲಿ ನಿದ್ರೆಹೋದವರನ್ನು ಸಹ ದೇವರು ಅವನೊಂದಿಗೆ ಎಬ್ಬಿಸುವನು ಎಂಬುದನ್ನು ನಂಬುತ್ತೇವೆ. 15 ನಾವು ಯೆಹೋವನ ಮಾತಿನ ಆಧಾರದಿಂದ ನಿಮಗೆ ಹೇಳುವುದೇನೆಂದರೆ, ಕರ್ತನ ಸಾನ್ನಿಧ್ಯದ ವರೆಗೆ ಜೀವದಿಂದುಳಿಯುವ ನಾವು ಯಾವುದೇ ರೀತಿಯಲ್ಲಿ ಮರಣದಲ್ಲಿ ನಿದ್ರೆಹೋದವರಿಗಿಂತ ಮುಂದಾಗುವುದೇ ಇಲ್ಲ; 16 ಏಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನ ದೇವದೂತನ ಧ್ವನಿಯೊಡನೆಯೂ ದೇವರ ತುತೂರಿಯೊಡನೆಯೂ ಸ್ವರ್ಗದಿಂದ ಇಳಿದುಬರುವನು ಮತ್ತು ಕ್ರಿಸ್ತನೊಂದಿಗೆ ಐಕ್ಯದಲ್ಲಿ ಸತ್ತವರು ಮೊದಲು ಎದ್ದುಬರುವರು. 17 ಅನಂತರ ಜೀವದಿಂದುಳಿದಿರುವ ನಾವು ಆಕಾಶದಲ್ಲಿ ಕರ್ತನನ್ನು ಎದುರುಗೊಳ್ಳಲು ಅವರೊಂದಿಗೆ ಮೇಘಗಳಲ್ಲಿ ಕೊಂಡೊಯ್ಯಲ್ಪಡುವೆವು; ಹೀಗೆ ನಾವು ಯಾವಾಗಲೂ ಕರ್ತನೊಂದಿಗೆ ಇರುವಂತಾಗುವುದು. 18 ಆದುದರಿಂದ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಇರಿ.