ಆದಿಕಾಂಡ
34 ಯಾಕೋಬನಿಗೆ ಲೇಯಳಿಂದ ಹುಟ್ಟಿದ ದೀನ+ ಆ ದೇಶದ ಯುವತಿರ ಜೊತೆ ಸಮಯ ಕಳೆಯೋಕೆ* ಹೋಗ್ತಿದ್ದಳು.+ 2 ಆಗ ಹಿವ್ವಿಯನಾದ+ ಹಮೋರನ ಮಗ ಶೆಕೆಮನ ಕಣ್ಣು ಅವಳ ಮೇಲೆ ಬಿತ್ತು. ಅವನು ಆ ದೇಶದ ಪ್ರಧಾನನಾಗಿದ್ದ. ಒಂದಿನ ಅವನು ಅವಳನ್ನ ತಗೊಂಡು ಹೋಗಿ ಅತ್ಯಾಚಾರ ಮಾಡಿದ. 3 ಆಮೇಲೆ ದೀನಳನ್ನ ತುಂಬ ಪ್ರೀತಿಸೋಕೆ ಶುರು ಮಾಡಿದ. ಅವನ ಮನಸ್ಸೆಲ್ಲಾ ಅವಳೇ ಇದ್ದಳು. ಯಾಕೋಬನ ಮಗಳಾದ ದೀನಳ ಮನಸ್ಸು ಗೆಲ್ಲೋಕೆ ಅವನು ಪ್ರೀತಿಯ ಮಾತುಗಳನ್ನಾಡಿದ. 4 ಕೊನೆಗೆ ಶೆಕೆಮ ತನ್ನ ಅಪ್ಪ ಹಮೋರನಿಗೆ+ “ನೀನು ಹೇಗಾದ್ರೂ ಈ ಹುಡುಗಿಯನ್ನ ನನಗೆ ಮದುವೆ ಮಾಡಿಸು” ಅಂದ.
5 ಶೆಕೆಮ ದೀನಳನ್ನ ಕೆಡಿಸಿದ್ದಾನೆ ಅಂತ ಅವಳ ಅಪ್ಪ ಯಾಕೋಬನಿಗೆ ಗೊತ್ತಾಯ್ತು. ಆಗ ಅವನ ಗಂಡುಮಕ್ಕಳು ಬಯಲಲ್ಲಿ ಕುರಿ ಮೇಯಿಸ್ತಿದ್ರು. ಹಾಗಾಗಿ ಅವರು ಬರೋ ತನಕ ಯಾಕೋಬ ಸುಮ್ಮನಿದ್ದ. 6 ಆಮೇಲೆ ಶೆಕೆಮನ ಅಪ್ಪ ಹಮೋರ ಯಾಕೋಬನ ಹತ್ರ ಮಾತಾಡೋಕೆ ಬಂದ. 7 ಯಾಕೋಬನ ಗಂಡುಮಕ್ಕಳಿಗೆ ತಮ್ಮ ತಂಗಿಗೆ ಏನಾಯ್ತು ಅಂತ ಗೊತ್ತಾದ ತಕ್ಷಣ ಅವರು ಬಯಲಿಂದ ಹೊರಟು ಬಂದ್ರು. ಶೆಕೆಮ ಯಾಕೋಬನ ಮಗಳನ್ನ ಕೆಡಿಸಿ+ ಕೆಟ್ಟ ಕೆಲಸ ಮಾಡಿದ್ದ,+ ಹೀಗೆ ಇಸ್ರಾಯೇಲ್ಯರನ್ನ ಅವಮಾನ ಮಾಡಿದ್ದ. ಹಾಗಾಗಿ ಯಾಕೋಬನ ಗಂಡುಮಕ್ಕಳು ನೊಂದುಕೊಂಡ್ರು, ಅವರಿಗೆ ತುಂಬ ಕೋಪ ಬಂತು.
8 ಹಮೋರ ಅವರಿಗೆ “ನನ್ನ ಮಗ ಶೆಕೆಮನಿಗೆ ನಿಮ್ಮ ಹುಡುಗಿ ಅಂದ್ರೆ ಪ್ರಾಣ. ದಯವಿಟ್ಟು ಅವಳನ್ನ ಅವನಿಗೆ ಮದುವೆ ಮಾಡ್ಕೊಡಿ. 9 ನಿಮ್ಮ ಹೆಣ್ಣುಮಕ್ಕಳನ್ನ ನಮಗೆ ಕೊಡ್ತಾ, ನಮ್ಮ ಹೆಣ್ಣುಮಕ್ಕಳನ್ನ ನೀವು ತಗೊಳ್ತಾ ಬೀಗರಾಗಿರೋಣ.+ 10 ಈ ದೇಶವೆಲ್ಲ ನಿಮ್ಮ ಮುಂದಿದೆ. ನೀವು ನಮ್ಮ ಜೊತೆಯಲ್ಲೇ ವಾಸಿಸಬಹುದು. ಇಲ್ಲಿ ವ್ಯಾಪಾರ ಮಾಡಿ ಇಲ್ಲೇ ಇರಬಹುದು” ಅಂದ. 11 ಆಮೇಲೆ ಶೆಕೆಮ ದೀನಳ ಅಪ್ಪ ಮತ್ತು ಅಣ್ಣಂದಿರಿಗೆ “ನಿಮ್ಮ ಹುಡುಗಿಯನ್ನ ನನಗೆ ಮದುವೆ ಮಾಡಿ ಕೊಡೋಕೆ ದಯವಿಟ್ಟು ಒಪ್ಕೊಳ್ಳಿ. ನೀವೇನ್ ಕೇಳಿದ್ರೂ ನಾನು ಕೊಡ್ತೀನಿ. 12 ಎಷ್ಟು ಬೇಕಾದ್ರೂ ವಧುದಕ್ಷಿಣೆ ಕೇಳಿ, ಏನು ಬೇಕಾದ್ರೂ ಉಡುಗೊರೆ ಕೇಳಿ,+ ಕೊಡ್ತೀನಿ. ನಿಮ್ಮ ಹುಡುಗಿಯನ್ನ ನನಗೆ ಮದುವೆ ಮಾಡಿ ಕೊಟ್ರೆ ಅಷ್ಟೇ ಸಾಕು” ಅಂದ.
13 ಶೆಕೆಮ ದೀನಳನ್ನ ಕೆಡಿಸಿದ್ರಿಂದ ಅವಳ ಅಣ್ಣಂದಿರು ಶೆಕೆಮ, ಅವನ ತಂದೆ ಹಮೋರನ ವಿರುದ್ಧ ಕುತಂತ್ರ ಮಾಡಿದ್ರು. 14 ಹಾಗಾಗಿ ಅವರು “ಸುನ್ನತಿ ಆಗಿಲ್ಲದವನಿಗೆ ನಮ್ಮ ತಂಗಿಯನ್ನ ಕೊಡೋಕೆ ಆಗೋದಿಲ್ಲ.+ ಕೊಟ್ರೆ ಅದು ನಮಗೆ ಅವಮಾನ. 15 ನಿಮ್ಮಲ್ಲಿರೋ ಗಂಡಸರೆಲ್ಲ ನಮ್ಮ ಹಾಗೆ ಸುನ್ನತಿ ಮಾಡಿಸ್ಕೊಳ್ಳಬೇಕು.+ ಇದಕ್ಕೆ ಒಪ್ಪಿದ್ರೆ ಮಾತ್ರ ನಮ್ಮ ತಂಗಿಯನ್ನ ಕೊಡ್ತೀವಿ. 16 ನಮ್ಮ ಹೆಣ್ಣುಮಕ್ಕಳನ್ನ ನಿಮಗೆ ಕೊಡ್ತೀವಿ, ನಿಮ್ಮ ಹೆಣ್ಣುಮಕ್ಕಳನ್ನ ನಾವು ತಗೊಳ್ತೀವಿ. ಅಲ್ಲದೆ ನಿಮ್ಮ ಜೊತೆ ವಾಸಿಸ್ತಾ ಒಂದೇ ಕುಲವಾಗಿ ಇರ್ತಿವಿ. 17 ಆದ್ರೆ ನೀವು ನಮ್ಮ ಮಾತಿಗೆ ಒಪ್ಪದೆ ಸುನ್ನತಿ ಮಾಡ್ಕೊಳ್ಳದಿದ್ರೆ ನಾವು ನಮ್ಮ ಹುಡುಗಿಯನ್ನ ಕರ್ಕೊಂಡು ಹೊರಟು ಹೋಗ್ತೀವಿ” ಅಂದ್ರು.
18 ಅವರು ಹೇಳಿದ್ದು ಹಮೋರನಿಗೂ+ ಅವನ ಮಗ ಶೆಕೆಮನಿಗೂ+ ಸರಿ ಅಂತ ಅನಿಸ್ತು. 19 ಅವರು ಹೇಳಿದ ತರ ಮಾಡೋಕೆ ಆ ಯುವಕ ತಡಮಾಡಲಿಲ್ಲ.+ ಯಾಕಂದ್ರೆ ಅವನು ಯಾಕೋಬನ ಮಗಳನ್ನ ತುಂಬ ಇಷ್ಟಪಟ್ಟಿದ್ದ. ಅಷ್ಟೇ ಅಲ್ಲ ಅವನ ತಂದೆ ಮನೆಯಲ್ಲಿ ಅವನಿಗೆ ಎಲ್ಲರಿಗಿಂತ ಹೆಚ್ಚಾಗಿ ಗೌರವ ಇತ್ತು.
20 ಹಮೋರ ಮತ್ತು ಅವನ ಮಗ ಶೆಕೆಮ ಪಟ್ಟಣದ ಬಾಗಿಲಿಗೆ ಹೋಗಿ ಪಟ್ಟಣದವರಿಗೆ+ 21 “ಈ ಜನ್ರಿಗೆ ನಮ್ಮ ಜೊತೆ ಶಾಂತಿಯಿಂದ ಇರೋಕೆ ಇಷ್ಟ ಇದೆ. ಅವರು ನಮ್ಮ ದೇಶದಲ್ಲೇ ವಾಸಿಸ್ತಾ ವ್ಯಾಪಾರ ಮಾಡಲಿ. ಹೇಗೂ ಈ ದೇಶ ತುಂಬ ದೊಡ್ಡದಾಗಿದೆಯಲ್ಲಾ. ಅವರು ಇಲ್ಲೇ ಇದ್ರೆ ನಾವು ಅವರ ಹೆಣ್ಣುಮಕ್ಕಳನ್ನ ಮದುವೆ ಮಾಡ್ಕೊಳ್ಳಬಹುದು. ನಮ್ಮ ಹೆಣ್ಣುಮಕ್ಕಳನ್ನ ಅವರಿಗೆ ಕೊಡಬಹುದು.+ 22 ಆದ್ರೆ ನಮ್ಮಲ್ಲಿರೋ ಎಲ್ಲ ಗಂಡಸರು ಅವರ ಹಾಗೆ ಸುನ್ನತಿ ಮಾಡ್ಕೊಳ್ಳಬೇಕಂತ ಅವರು ಹೇಳ್ತಿದ್ದಾರೆ.+ ಆಗ ಮಾತ್ರ ಅವರು ನಮ್ಮ ಜೊತೆ ವಾಸಿಸ್ತಾ ಒಂದೇ ಕುಲ ಆಗಿರೋಕೆ ಒಪ್ತಾರೆ. 23 ಆಗ ಅವರ ಎಲ್ಲ ಆಸ್ತಿಪಾಸ್ತಿ ಸಂಪತ್ತು ಪ್ರಾಣಿಗಳು ನಮ್ಮದಾಗುತ್ತೆ. ಹಾಗಾಗಿ ಅವರ ಮಾತಿಗೆ ಒಪ್ಕೊಳ್ಳೋಣ. ಅವರು ನಮ್ಮ ಜೊತೆ ವಾಸ ಮಾಡಲಿ” ಅಂದ್ರು. 24 ಆ ಪಟ್ಟಣದವರೆಲ್ಲ ಅವರ ಮಾತಿಗೆ ಒಪ್ಪಿದ್ರು. ಅಲ್ಲಿನ ಗಂಡಸರೆಲ್ಲ ಸುನ್ನತಿ ಮಾಡ್ಕೊಂಡ್ರು.
25 ಆದ್ರೆ ಮೂರನೇ ದಿನ ಗಂಡಸರೆಲ್ಲ ಇನ್ನೂ ತುಂಬ ನೋವಲ್ಲಿದ್ದಾಗ ಯಾಕೋಬನ ಗಂಡುಮಕ್ಕಳಲ್ಲಿ ಇಬ್ರು ಅಂದ್ರೆ ದೀನಳ ಅಣ್ಣಂದಿರಾದ+ ಸಿಮೆಯೋನ ಮತ್ತು ಲೇವಿ ಕತ್ತಿ ಹಿಡ್ಕೊಂಡು ಪಟ್ಟಣದೊಳಗೆ ಹೋದ್ರು. ಅವರ ಮೇಲೆ ಯಾರಿಗೂ ಅನುಮಾನ ಬರಲಿಲ್ಲ. ಅವರು ಅಲ್ಲಿದ್ದ ಎಲ್ಲ ಗಂಡಸರನ್ನ ಕೊಂದು ಹಾಕಿದ್ರು.+ 26 ಅವರು ಹಮೋರನನ್ನ, ಅವನ ಮಗ ಶೆಕೆಮನನ್ನ ಕತ್ತಿಯಿಂದ ಕೊಂದು ದೀನಳನ್ನ ಶೆಕೆಮನ ಮನೆಯಿಂದ ಕರ್ಕೊಂಡು ಹೋದ್ರು. 27 ಆ ಗಂಡಸರೆಲ್ಲ ಸತ್ತ ಮೇಲೆ ಯಾಕೋಬನ ಬೇರೆ ಗಂಡುಮಕ್ಕಳು ಅಲ್ಲಿಗೆ ಬಂದು ಶೆಕೆಮ ತಮ್ಮ ತಂಗಿಯನ್ನ ಕೆಡಿಸಿದ್ದಕ್ಕಾಗಿ+ ಆ ಪಟ್ಟಣ ಲೂಟಿ ಮಾಡಿದ್ರು. 28 ಅಲ್ಲಿದ್ದ ಆಡು-ಕುರಿಗಳನ್ನ ಪ್ರಾಣಿಗಳನ್ನ ಕತ್ತೆಗಳನ್ನ ತಗೊಂಡು ಹೋದ್ರು. ಪಟ್ಟಣದಲ್ಲೂ ಬಯಲಲ್ಲೂ ಇದ್ದ ಎಲ್ಲವನ್ನ ಸೂರೆ ಮಾಡಿದ್ರು. 29 ಅಲ್ಲದೆ ಅವರ ಎಲ್ಲ ಸೊತ್ತನ್ನ ತಗೊಂಡ್ರು. ಅವರ ಹೆಂಡತಿಯರನ್ನ, ಎಲ್ಲ ಚಿಕ್ಕ ಮಕ್ಕಳನ್ನ ಹಿಡ್ಕೊಂಡು ಹೋದ್ರು. ಅವರ ಮನೆಯಲ್ಲಿದ್ದ ಎಲ್ಲವನ್ನ ದೋಚ್ಕೊಂಡ್ರು.
30 ಆಗ ಯಾಕೋಬ ಸಿಮೆಯೋನ ಮತ್ತು ಲೇವಿಗೆ+ “ನೀವು ನನ್ನನ್ನ ಎಷ್ಟು ದೊಡ್ಡ ಆಪತ್ತಿಗೆ ಸಿಕ್ಕಿಸಿದ್ದೀರ. ನೀವು ಮಾಡಿದ ಕೆಲಸದಿಂದ ಈ ದೇಶದ ನಿವಾಸಿಗಳಾದ ಕಾನಾನ್ಯರು, ಪೆರಿಜೀಯರು ನನ್ನನ್ನ ದ್ವೇಷಿಸ್ತಾರೆ. ಖಂಡಿತ ಅವರೆಲ್ಲ ಒಟ್ಟಾಗಿ ಬಂದು ನನ್ನ ಮೇಲೆ ದಾಳಿ ಮಾಡ್ತಾರೆ. ನಾವಿರೋದೇ ಸ್ವಲ್ಪ ಜನ. ನಮ್ಮಿಂದೇನೂ ಮಾಡೋಕೆ ಆಗಲ್ಲ. ನಾನೂ ನನ್ನ ಮನೆಯವರೆಲ್ಲರೂ ನಾಶ ಆಗ್ತೀವಿ” ಅಂದ. 31 ಆದ್ರೆ ಅವರು “ನಮ್ಮ ತಂಗಿಯನ್ನ ಅವರು ವೇಶ್ಯೆ ತರ ನಡೆಸ್ಕೊಂಡ್ರೆ ನಾವು ಕೈಕಟ್ಕೊಂಡು ಸುಮ್ಮನಿರಬೇಕಾ?” ಅಂದ್ರು.