ಒಂದನೇ ಅರಸು
15 ನೆಬಾಟನ ಮಗನಾದ ರಾಜ ಯಾರೊಬ್ಬಾಮನ+ ಆಳ್ವಿಕೆಯ 18ನೇ ವರ್ಷದಲ್ಲಿ ಅಬೀಯಾಮ ಯೆಹೂದದ ರಾಜನಾದ.+ 2 ಅವನು ಯೆರೂಸಲೇಮಲ್ಲಿ ಮೂರು ವರ್ಷ ಆಳಿದ. ಅವನ ಅಮ್ಮನ ಹೆಸ್ರು ಮಾಕಾ.+ ಇವಳು ಅಬೀಷಾಲೋಮನ ಮೊಮ್ಮಗಳು. 3 ಅಬೀಯಾಮ ಅವನ ಅಪ್ಪನ ತರಾನೇ ತುಂಬ ಪಾಪಗಳನ್ನ ಮಾಡಿದ. ಅವನ ಹೃದಯ ಅವನ ಪೂರ್ವಜ ದಾವೀದನ ತರ ಸಂಪೂರ್ಣವಾಗಿ ಯೆಹೋವ ದೇವರ ಕಡೆ ಇರಲಿಲ್ಲ. 4 ಹಾಗಿದ್ರೂ ದಾವೀದನ ದೇವರಾದ ಯೆಹೋವ ದಾವೀದನ ಸಲುವಾಗಿ+ ಅಬೀಯಾಮನ ಮಗನನ್ನ ರಾಜನಾಗಿ ನೇಮಿಸಿದನು ಮತ್ತು ಯೆರೂಸಲೇಮನ್ನ ನಾಶ ಮಾಡಲಿಲ್ಲ. ಹೀಗೆ ಯೆರೂಸಲೇಮಲ್ಲಿ ಅಬೀಯಾಮನ ವಂಶದವರು ಆಳೋಕೆ ದೇವರು ಅನುಮತಿ ಕೊಟ್ಟನು.*+ 5 ದಾವೀದ ಯೆಹೋವನಿಗೆ ಇಷ್ಟ ಆಗಿರೋದನ್ನೇ ಮಾಡಿದ. ಹಿತ್ತಿಯನಾದ ಊರೀಯನ ವಿಷ್ಯ ಒಂದನ್ನ ಬಿಟ್ಟು ತನ್ನ ಜೀವನಪೂರ್ತಿ ದೇವರು ಆಜ್ಞೆ ಕೊಟ್ಟ ವಿಷ್ಯಗಳನ್ನೇ ಮಾಡಿದ.+ 6 ರೆಹಬ್ಬಾಮ ಬದುಕಿರೋ ತನಕ ಅವನಿಗೂ ಯಾರೊಬ್ಬಾಮನಿಗೂ ಯುದ್ಧ ನಡೀತಿತ್ತು.+
7 ಅಬೀಯಾಮನ ಉಳಿದ ಜೀವನಚರಿತ್ರೆ ಬಗ್ಗೆ ಮತ್ತು ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಬರೆಯಲಾಗಿದೆ.+ ಅಬೀಯಾಮ ಮತ್ತು ಯಾರೊಬ್ಬಾಮನ ಮಧ್ಯನೂ ಯುದ್ಧ ನಡಿತಿತ್ತು.+ 8 ಕೊನೆಗೆ ಅಬೀಯಾಮ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ಆಸ+ ರಾಜನಾದ.+
9 ಇಸ್ರಾಯೇಲಿನ ರಾಜ ಯಾರೊಬ್ಬಾಮನ 20ನೇ ವರ್ಷದಲ್ಲಿ ಆಸ ಯೆಹೂದವನ್ನ ಆಳೋಕೆ ಶುರುಮಾಡ್ದ. 10 ಅವನು ಯೆರೂಸಲೇಮಲ್ಲಿ 41 ವರ್ಷ ಆಳಿದ. ಅವನ ಅಜ್ಜಿ ಹೆಸ್ರು ಮಾಕಾ.+ ಅವಳು ಅಬೀಷಾಲೋಮನ ಮೊಮ್ಮಗಳು. 11 ಆಸ ತನ್ನ ಪೂರ್ವಜನಾದ ದಾವೀದನ ತರ ಯೆಹೋವನಿಗೆ ಇಷ್ಟ ಆಗಿರೋದನ್ನೇ ಮಾಡಿದ.+ 12 ದೇವಸ್ಥಾನದಲ್ಲಿ ಲೈಂಗಿಕ ಅನೈತಿಕತೆ* ಮಾಡ್ತಿದ್ದ ಗಂಡಸ್ರನ್ನ ಅವನು ದೇಶದಿಂದ ಓಡಿಸಿಬಿಟ್ಟ.+ ಅವನ ಪೂರ್ವಜರು ಮಾಡಿಸಿದ್ದ ಎಲ್ಲ ಅಸಹ್ಯ ಮೂರ್ತಿಗಳನ್ನ* ತೆಗೆದುಹಾಕಿದ.+ 13 ಅವನ ಅಜ್ಜಿ ಮಾಕಾಳನ್ನೂ+ ರಾಜಮಾತೆಯ ಸ್ಥಾನದಿಂದ ಇಳಿಸಿದ. ಯಾಕಂದ್ರೆ ಅವಳು ಪೂಜಾಕಂಬದ* ಆರಾಧನೆಗಾಗಿ ಅಸಹ್ಯ ಮೂರ್ತಿಯನ್ನ ಮಾಡಿಸಿದ್ದಳು. ಅವನು ಆ ಮೂರ್ತಿಯನ್ನ ಕಡಿದು+ ಕಿದ್ರೋನ್ ಕಣಿವೆಯಲ್ಲಿ ಸುಟ್ಟುಹಾಕಿದ.+ 14 ಆದ್ರೆ ಅವನು ದೇವಸ್ಥಾನಗಳನ್ನ ನಾಶಮಾಡಲಿಲ್ಲ.+ ಹಾಗಿದ್ರೂ ಆಸ ಜೀವಂತವಾಗಿದ್ದಷ್ಟು ಕಾಲ ಅವನ ಹೃದಯ ಸಂಪೂರ್ಣವಾಗಿ ಯೆಹೋವನ ಕಡೆ ಇತ್ತು. 15 ಅವನು ಮತ್ತು ಅವನ ಅಪ್ಪ ಚಿನ್ನ, ಬೆಳ್ಳಿ ಮತ್ತು ಬೇರೆಬೇರೆ ಪಾತ್ರೆಗಳನ್ನ ಪವಿತ್ರ ಸೇವೆಗಾಗಿ ಕೊಟ್ರು. ಅವನು ಆ ವಸ್ತುಗಳನ್ನ ತಂದು ಯೆಹೋವನ ಆಲಯದಲ್ಲಿ ಇಟ್ಟ.+
16 ಆಸ ಮತ್ತು ಇಸ್ರಾಯೇಲ್ ರಾಜ ಬಾಷನ+ ಮಧ್ಯ ಯಾವಾಗ್ಲೂ ಯುದ್ಧ ನಡೀತಿತ್ತು. 17 ಹಾಗಾಗಿ ಇಸ್ರಾಯೇಲ್ ರಾಜ ಬಾಷ ಯೆಹೂದದ ವಿರುದ್ಧ ಬಂದು ರಾಮ+ ಅನ್ನೋ ಕೋಟೆನ ಕಟ್ಟೋಕೆ* ಶುರುಮಾಡಿದ. ಯೆಹೂದದ ರಾಜ ಆಸನ ಹತ್ರ ಯಾರೂ ಹೋಗಬಾರ್ದು ಮತ್ತು ಅಲ್ಲಿಂದ ಯಾರೂ ಬರಬಾರ್ದು ಅಂತ ಅವನು ಹೀಗೆ ಮಾಡಿದ.+ 18 ಆಗ ಆಸ ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯಲ್ಲಿದ್ದ ನಿಕ್ಷೇಪಗಳಲ್ಲಿ ಉಳಿದಿದ್ದ ಚಿನ್ನಬೆಳ್ಳಿ ಎಲ್ಲ ತಗೊಂಡು ಸೇವಕರ ಮೂಲಕ ಅವುಗಳನ್ನ ದಮಸ್ಕದಲ್ಲಿದ್ದ ಅರಾಮ್ಯ ರಾಜ ಬೆನ್ಹದದನಿಗೆ ಕಳಿಸ್ಕೊಟ್ಟ.+ ಅವನು ಟಬ್ರಿಮ್ಮೋನನ ಮಗ, ಹೆಜ್ಯೋನನ ಮೊಮ್ಮಗ ಆಗಿದ್ದ. ಆಸ ಅವನಿಗೆ 19 “ನಿನ್ನ ಮತ್ತು ನನ್ನ ಮಧ್ಯ, ನಿನ್ನ ಅಪ್ಪ ಮತ್ತು ನನ್ನ ಅಪ್ಪನ ಮಧ್ಯ ಒಂದು ಒಪ್ಪಂದ ಇದೆ. ನಾನು ನಿನಗೆ ಚಿನ್ನ ಮತ್ತು ಬೆಳ್ಳಿನ ಉಡುಗೊರೆಯಾಗಿ ಕಳಿಸ್ತಿದ್ದೀನಿ. ನೀನು ಬಂದು, ಇಸ್ರಾಯೇಲ್ ರಾಜ ಬಾಷನ ಜೊತೆ ನೀನು ಮಾಡ್ಕೊಂಡ ಒಪ್ಪಂದನ ಮುರಿದುಹಾಕು. ಆಗ ಅವನು ನನ್ನನ್ನ ಬಿಟ್ಟುಹೋಗ್ತಾನೆ” ಅಂತ ಹೇಳಿ ಕಳಿಸಿದ. 20 ಅದಕ್ಕೆ ಬೆನ್ಹದದ ಆಸನ ಮಾತನ್ನ ಕೇಳಿ ಇಸ್ರಾಯೇಲಿನ ಪಟ್ಟಣಗಳ ವಿರುದ್ಧ ತನ್ನ ಅಧಿಪತಿಗಳನ್ನ ಕಳಿಸಿದ. ಅವರು ಇಯ್ಯೋನ್,+ ದಾನ್,+ ಆಬೇಲ್-ಬೇತ್-ಮಾಕಾ ಪ್ರದೇಶಗಳನ್ನ, ಕಿನ್ನೆರೆತಿನ ಎಲ್ಲ ಪ್ರದೇಶವನ್ನ ಮತ್ತು ನಫ್ತಾಲಿಯ ಎಲ್ಲ ದೇಶವನ್ನ ನಾಶಮಾಡಿದ್ರು. 21 ಇದನ್ನ ಬಾಷ ಕೇಳಿದ ತಕ್ಷಣ ರಾಮ ಕೋಟೆ ಕಟ್ಟೋದನ್ನ ನಿಲ್ಲಿಸಿ ತಿರ್ಚಕ್ಕೆ+ ಹೋಗಿ ಅಲ್ಲಿ ವಾಸಿಸೋಕೆ ಶುರುಮಾಡಿದ. 22 ಆಮೇಲೆ ರಾಜ ಆಸ ಯೆಹೂದದಲ್ಲಿದ್ದ ಎಲ್ಲರನ್ನ ಒಟ್ಟುಸೇರಿಸಿದ. ಅವರು ಹೋಗಿ ಬಾಷ ರಾಮ ಕೋಟೆ ಕಟ್ಟೋಕೆ ಬಳಸ್ತಿದ್ದ ಕಲ್ಲು ಮತ್ತು ಮರಗಳನ್ನ ತಗೊಂಡು ಬಂದ್ರು. ಅದ್ರಿಂದ ರಾಜ ಆಸ ಬೆನ್ಯಾಮೀನಿನ ಗೆಬ+ ಮತ್ತು ಮಿಚ್ಪಾ+ ಪಟ್ಟಣವನ್ನ ಕಟ್ಟಿದ.
23 ಆಸನ ಉಳಿದ ಜೀವನಚರಿತ್ರೆಯ ಬಗ್ಗೆ, ಅವನು ಮಾಡಿದ ದೊಡ್ಡದೊಡ್ಡ ಕೆಲಸಗಳ ಬಗ್ಗೆ, ಅವನು ಕಟ್ಟಿದ ಪಟ್ಟಣಗಳ ಬಗ್ಗೆ ಮತ್ತು ಅವನು ಮಾಡಿದ ಎಲ್ಲದರ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಬರೆಯಲಾಗಿದೆ. ಆದ್ರೆ ಅವನಿಗೆ ವಯಸ್ಸಾದಾಗ ಅವನ ಪಾದಗಳಿಗೆ ರೋಗ ಬಂತು.+ 24 ಕೊನೆಗೆ ಆಸ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ಯೆಹೋಷಾಫಾಟ+ ರಾಜನಾದ.
25 ಯೆಹೂದದ ರಾಜ ಆಸನ ಆಳ್ವಿಕೆಯ ಎರಡ್ನೇ ವರ್ಷದಲ್ಲಿ ಯಾರೊಬ್ಬಾಮನ ಮಗ ನಾದಾಬ+ ಇಸ್ರಾಯೇಲಿನ ರಾಜನಾದ. ಅವನು ಎರಡು ವರ್ಷ ಇಸ್ರಾಯೇಲನ್ನ ಆಳಿದ. 26 ಅವನು ಅವನ ಅಪ್ಪ ತರಾನೇ ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನೇ ಮಾಡ್ತಾ ಹೋದ.+ ಇಸ್ರಾಯೇಲ್ಯರ ಕೈಯಲ್ಲಿ ಅವನ ಅಪ್ಪ ಮಾಡಿಸಿದ ಪಾಪಗಳನ್ನೇ ಇವನೂ ಮಾಡಿಸಿದ.+ 27 ನಾದಾಬ್ ಮತ್ತು ಎಲ್ಲ ಇಸ್ರಾಯೇಲ್ಯರು ಸೇರಿ ಫಿಲಿಷ್ಟಿಯರ ಕೆಳಗಿದ್ದ ಗಿಬ್ಬೆತೋನಿಗೆ ಮುತ್ತಿಗೆ ಹಾಕ್ತಿದ್ರು. ಆಗ ಇಸ್ಸಾಕಾರ್ ಕುಲದ ಅಹೀಯನ ಮಗ ಬಾಷ, ನಾದಾಬನ ವಿರುದ್ಧ ಸಂಚು ಮಾಡಿ ಫಿಲಿಷ್ಟಿಯರ ಕೆಳಗಿದ್ದ ಗಿಬ್ಬೆತೋನಿನಲ್ಲಿ+ ನಾದಾಬನನ್ನ ಕೊಂದುಹಾಕಿದ. 28 ಹೀಗೆ ಯೆಹೂದದ ರಾಜ ಆಸನ ಆಳ್ವಿಕೆಯ ಮೂರನೇ ವರ್ಷದಲ್ಲಿ ಬಾಷ ನಾದಾಬನನ್ನ ಕೊಂದುಹಾಕಿ ಅವನ ಸ್ಥಾನದಲ್ಲಿ ರಾಜನಾದ. 29 ಅವನು ರಾಜನಾದ ತಕ್ಷಣ ಯಾರೊಬ್ಬಾಮನ ಇಡೀ ಕುಟುಂಬವನ್ನ ಕೊಂದ. ಯಾರೊಬ್ಬಾಮನ ಜನ್ರಲ್ಲಿ ಒಬ್ರನ್ನೂ ಉಳಿಸಲಿಲ್ಲ. ಹೀಗೆ ಯೆಹೋವ ತನ್ನ ಸೇವಕ ಅಹೀಯನ ಮೂಲಕ ಹೇಳಿದ ತರಾನೇ ಅವ್ರನ್ನೆಲ್ಲ ನಾಶಮಾಡಿದ.+ 30 ಯಾರೊಬ್ಬಾಮ ತಾನೂ ಪಾಪ ಮಾಡಿ, ಇಸ್ರಾಯೇಲ್ಯರ ಕೈಯಲ್ಲೂ ಪಾಪ ಮಾಡಿಸಿದ್ರಿಂದ, ಇಸ್ರಾಯೇಲ್ ದೇವರಾದ ಯೆಹೋವನನ್ನ ತುಂಬ ರೇಗಿಸಿದ್ರಿಂದ ಹೀಗಾಯ್ತು. 31 ನಾದಾಬನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 32 ಆಸ ಮತ್ತು ಇಸ್ರಾಯೇಲ್ ರಾಜ ಬಾಷನ ಮಧ್ಯ ಯಾವಾಗ್ಲೂ ಯುದ್ಧ ನಡೀತಾ ಇತ್ತು.+
33 ಯೆಹೂದದ ರಾಜ ಆಸನ ಆಳ್ವಿಕೆಯ ಮೂರನೇ ವರ್ಷದಲ್ಲಿ ಅಹೀಯನ ಮಗ ಬಾಷ ತಿರ್ಚದಲ್ಲಿ ರಾಜನಾದ. ಅವನು ಇಸ್ರಾಯೇಲನ್ನ 24 ವರ್ಷ ಆಳಿದ.+ 34 ಆದ್ರೆ ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನೇ ಮಾಡ್ತಿದ್ದ.+ ಯಾರೊಬ್ಬಾಮನ ತರಾನೇ ನಡ್ಕೊಂಡು ಅವನು ಇಸ್ರಾಯೇಲ್ಯರಿಂದ ಮಾಡಿಸಿದ ಪಾಪವನ್ನೇ ಇವನೂ ಮಾಡಿಸಿದ.+