ಎರಡನೇ ಪೂರ್ವಕಾಲವೃತ್ತಾಂತ
28 ಆಹಾಜ+ ರಾಜನಾದಾಗ ಅವನಿಗೆ 20 ವರ್ಷ. ಅವನು ಯೆರೂಸಲೇಮಿಂದ 16 ವರ್ಷ ಆಳಿದ. ಅವನು ತನ್ನ ಪೂರ್ವಜ ದಾವೀದನ ತರ ಇರಲಿಲ್ಲ. ಯೆಹೋವನಿಗೆ ಇಷ್ಟ ಆಗೋದನ್ನ ಮಾಡಲಿಲ್ಲ.+ 2 ಬದಲಿಗೆ ಅವನು ಇಸ್ರಾಯೇಲ್ ರಾಜರ ತರ ಕೆಟ್ಟದನ್ನೇ ಮಾಡಿದ.+ ಬಾಳ್ ದೇವರುಗಳ ಲೋಹದ ಮೂರ್ತಿಗಳನ್ನ*+ ಮಾಡಿಸಿದ. 3 ಅಷ್ಟೇ ಅಲ್ಲ ಯೆಹೋವ ಇಸ್ರಾಯೇಲ್ಯರ ಮುಂದಿಂದ ಓಡಿಸಿಬಿಟ್ಟಿದ್ದ ಜನ್ರು ಮಾಡ್ತಿದ್ದ ಅಸಹ್ಯ ಪದ್ಧತಿಗಳನ್ನ ಮಾಡಿದ.+ ಹಿನ್ನೋಮ್* ಕಣಿವೆಯಲ್ಲಿ ಬಲಿಗಳನ್ನ ಕೊಟ್ಟ ಮತ್ತು ತನ್ನ ಮಕ್ಕಳನ್ನೇ ಬೆಂಕಿಯಲ್ಲಿ ಬಲಿ ಕೊಟ್ಟ.+ 4 ಜೊತೆಗೆ ದೇವಸ್ಥಾನಗಳಲ್ಲಿ,+ ಬೆಟ್ಟಗಳಲ್ಲಿ ಮತ್ತು ಚೆನ್ನಾಗಿ ಬೆಳೆದಿರೋ ಎಲ್ಲ ಮರದ ಕೆಳಗೆ+ ಬಲಿಗಳನ್ನ ಕೊಟ್ಟು ಅದ್ರ ಹೊಗೆ ಏರೋ ತರ ಮಾಡ್ತಿದ್ದ.
5 ಹಾಗಾಗಿ ಅವನ ದೇವರಾದ ಯೆಹೋವ ಅವನನ್ನ ಅರಾಮ್ಯರ ರಾಜನ ಕೈಗೆ ಒಪ್ಪಿಸಿದ.+ ಅರಾಮ್ಯರು ಅವನನ್ನ ಸೋಲಿಸಿ, ತುಂಬ ಜನ್ರನ್ನ ಕೈದಿಗಳಾಗಿ ದಮಸ್ಕಕ್ಕೆ ಕರ್ಕೊಂಡು ಹೋದ್ರು.+ ಆಹಾಜ ಇಸ್ರಾಯೇಲ್ ರಾಜನಿಗೂ ಸೋತುಹೋದ. ಆ ರಾಜ ಅವನ ವಿರುದ್ಧ ಬಂದು ತುಂಬ ಜನ್ರನ್ನ ಕೊಂದುಹಾಕಿದ. 6 ಒಂದೇ ದಿನದಲ್ಲಿ ಯೆಹೂದದ 1,20,000 ಧೀರರನ್ನ ರೆಮಲ್ಯನ ಮಗ ಪೆಕಹ+ ಕೊಂದುಹಾಕಿದ. ಯಾಕಂದ್ರೆ ಅವರು ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಬಿಟ್ಟುಬಿಟ್ಟಿದ್ರು.+ 7 ಎಫ್ರಾಯೀಮಿನ ಶೂರ ಜಿಕ್ರೀ ರಾಜ ಆಹಾಜನ ಮಗ ಮಾಸೇಯನನ್ನ, ಅರಮನೆಯನ್ನ ನೋಡ್ಕೊಳ್ತಿದ್ದ ಅಜ್ರೀಕಾಮನನ್ನ ಮತ್ತು ಮಂತ್ರಿ ಎಲ್ಕಾನನನ್ನ ಕೊಂದ. 8 ಅಷ್ಟೇ ಅಲ್ಲ ಇಸ್ರಾಯೇಲ್ಯರು ಯೆಹೂದದಿಂದ 2,00,000 ಸಹೋದರರನ್ನ ಕೈದಿಗಳಾಗಿ ಹಿಡ್ಕೊಂಡು ಹೋದ್ರು. ಅವ್ರಲ್ಲಿ ಹೆಂಗಸರು, ಮಕ್ಕಳೂ ಇದ್ರು. ಇಸ್ರಾಯೇಲ್ಯರು ಸಿಕ್ಕಾಪಟ್ಟೆ ಕೊಳ್ಳೆ ಹೊಡೆದು ಅದನ್ನ ಸಮಾರ್ಯಕ್ಕೆ+ ತಗೊಂಡು ಹೋದ್ರು.
9 ಆದ್ರೆ ಅಲ್ಲಿ ಓದೇದ್ ಅನ್ನೋ ಯೆಹೋವನ ಪ್ರವಾದಿ ಇದ್ದ. ಅವನು ಸಮಾರ್ಯಕ್ಕೆ ಬರ್ತಿದ್ದ ಸೈನ್ಯದ ಮುಂದೆ ಹೋಗಿ ಅವ್ರಿಗೆ “ನೋಡಿ! ನಿಮ್ಮ ಪೂರ್ವಜರ ದೇವರಾದ ಯೆಹೋವನಿಗೆ ಯೆಹೂದದ ಮೇಲೆ ಕೋಪ ಬಂದಿದ್ರಿಂದ ಆತನು ಅವ್ರನ್ನ ನಿಮ್ಮ ಕೈಗೆ ಒಪ್ಪಿಸಿದನು.+ ಆದ್ರೆ ನೀವು ಅವ್ರನ್ನ ಎಷ್ಟು ಕ್ರೂರವಾಗಿ ಕೊಂದುಬಿಟ್ಟಿರಿ ಅಂದ್ರೆ ಅವ್ರ ಕೂಗು ಸ್ವರ್ಗಕ್ಕೆ ಮುಟ್ಟಿದೆ. 10 ಇದೂ ಸಾಲದು ಅಂತ ಈಗ ನೀವು ಯೆಹೂದ ಮತ್ತು ಯೆರೂಸಲೇಮಿನ ಜನ್ರನ್ನ ನಿಮ್ಮ ದಾಸರನ್ನಾಗಿ ಮಾಡ್ಕೊಬೇಕು ಅಂತಿದ್ದೀರ.+ ಆದ್ರೆ ನಿಮ್ಮ ದೇವರಾದ ಯೆಹೋವನ ಮುಂದೆ ನೀವೂ ಅಪರಾಧಿಗಳಲ್ವಾ? 11 ಹಾಗಾಗಿ ನೀವು ನನ್ನ ಮಾತನ್ನ ಕೇಳಿ. ಕೈದಿಗಳಾಗಿ ತಂದ ನಿಮ್ಮ ಸಹೋದರರನ್ನ ವಾಪಸ್ ಕಳಿಸಿ. ಯಾಕಂದ್ರೆ ಯೆಹೋವನ ಕೋಪ ನಿಮ್ಮ ಮೇಲೆ ಹೊತ್ತಿ ಉರಿತಿದೆ” ಅಂದ.
12 ಆಗ ಎಫ್ರಾಯೀಮ್ಯರ ಅಧಿಕಾರಿಗಳಲ್ಲಿ ಸ್ವಲ್ಪ ಜನ ಅಂದ್ರೆ ಯೆಹೋಹಾನಾನನ ಮಗ ಅಜರ್ಯ, ಮೆಷಿಲ್ಲೇಮೋತನ ಮಗ ಬೆರೆಕ್ಯ, ಶಲ್ಲೂಮನ ಮಗ ಹಿಜ್ಕಿಯ ಮತ್ತು ಹದ್ಲೈಯ ಮಗ ಅಮಾಸ ಇವ್ರೆಲ್ಲ ಯುದ್ಧದಿಂದ ವಾಪಸ್ ಬರುತ್ತಿದ್ದವರ ಮುಂದೆ ಹೋಗಿ 13 ಅವ್ರಿಗೆ “ಕೈದಿಗಳನ್ನ ನೀವು ಇಲ್ಲಿಗೆ ಕರ್ಕೊಂಡು ಬರಬೇಡಿ. ಹಾಗೆ ಮಾಡಿದ್ರೆ ನಾವು ಯೆಹೋವನ ಮುಂದೆ ಅಪರಾಧಿಗಳಾಗ್ತೀವಿ. ನೀವು ನಮ್ಮಿಂದ ಇನ್ನೂ ಜಾಸ್ತಿ ಪಾಪ ಮಾಡಿಸಬೇಕು ಅಂತಿದ್ದೀರಾ? ಈಗಾಗಲೇ ನಾವು ತುಂಬ ತಪ್ಪು ಮಾಡಿ ದೇವರ ಕೋಪ ಇಸ್ರಾಯೇಲಿನ ಮೇಲೆ ಹೊತ್ತಿ ಉರಿಯೋ ತರ ಮಾಡಿದ್ದೀವಿ” ಅಂದ್ರು. 14 ಹಾಗಾಗಿ ಆಯುಧಗಳನ್ನ ಹಿಡ್ಕೊಂಡಿದ್ದ ಸೈನಿಕರು ಆ ಕೈದಿಗಳನ್ನ ಮತ್ತು ಕೊಳ್ಳೆ ಹೊಡೆದಿದ್ದ ವಸ್ತುಗಳನ್ನ+ ಅಧಿಕಾರಿಗಳಿಗೆ ಮತ್ತು ಇಡೀ ಸಭೆಗೆ ಒಪ್ಪಿಸಿದ್ರು. 15 ಆಮೇಲೆ, ಆರಿಸಿಕೊಂಡಿದ್ದ ಗಂಡಸರು ಬಂದು ಕೈದಿಗಳನ್ನ ಕರ್ಕೊಂಡು ಹೋಗಿ ಅವ್ರಲ್ಲಿ ಬೆತ್ತಲೆಯಾಗಿ ಇದ್ದವ್ರಿಗೆ ಕೊಳ್ಳೆಯಿಂದ ಬಟ್ಟೆ ಕೊಟ್ರು. ಹೀಗೆ ಅವ್ರಿಗೆ ಬಟ್ಟೆ, ಚಪ್ಪಲಿ, ಊಟ ನೀರು ಮತ್ತು ಹಚ್ಚಿಕೊಳ್ಳೋಕೆ ಎಣ್ಣೆ ಕೊಟ್ರು. ಆಮೇಲೆ, ಸುಸ್ತಾಗಿದ್ದವ್ರನ್ನ ಕತ್ತೆ ಮೇಲೆ ಕೂರಿಸಿ ಖರ್ಜೂರ ಮರಗಳ ಪಟ್ಟಣವಾದ ಯೆರಿಕೋ ಪಟ್ಟಣದಲ್ಲಿದ್ದ ತಮ್ಮ ಸಹೋದರರ ಹತ್ರ ಕರ್ಕೊಂಡು ಬಂದ್ರು. ಆಮೇಲೆ ಅವರು ಸಮಾರ್ಯಕ್ಕೆ ವಾಪಸ್ ಹೋದ್ರು.
16 ಆಗ ರಾಜ ಆಹಾಜ ಅಶ್ಶೂರ್ಯರ ರಾಜರ ಸಹಾಯ ಕೇಳಿದ.+ 17 ಎದೋಮ್ಯರು ಇನ್ನೊಂದು ಸಲ ಯೆಹೂದಕ್ಕೆ ನುಗ್ಗಿ ಆಕ್ರಮಣಮಾಡಿ ಕೈದಿಗಳನ್ನ ಹಿಡ್ಕೊಂಡು ಹೋದ್ರು. 18 ಆಮೇಲೆ ಫಿಲಿಷ್ಟಿಯರು+ ಬಂದು ಯೆಹೂದದ ಷೆಫೆಲಾ+ ಪಟ್ಟಣಗಳ ಮೇಲೆ ಮತ್ತು ನೆಗೆಬಿನ ಮೇಲೆ ಆಕ್ರಮಣ ಮಾಡಿದ್ರು. ಅವರು ಬೇತ್-ಷೆಮೆಷನ್ನ,+ ಅಯ್ಯಾಲೋನನ್ನ,+ ಗೆದೇರೋತನ್ನ, ಸೋಕೋ ಮತ್ತು ಅದಕ್ಕೆ ಸೇರಿದ* ಊರುಗಳನ್ನ, ತಿಮ್ನಾ+ ಮತ್ತು ಅದಕ್ಕೆ ಸೇರಿದ ಊರುಗಳನ್ನ, ಗಿಮ್ಜೋ ಮತ್ತು ಅದಕ್ಕೆ ಸೇರಿದ ಊರುಗಳನ್ನ ವಶಮಾಡ್ಕೊಂಡ್ರು. ಆಮೇಲೆ ಅವರು ಅಲ್ಲೇ ನೆಲೆಸಿದ್ರು. 19 ಯೆಹೋವ ಇಸ್ರಾಯೇಲ್ ರಾಜ ಆಹಾಜನಿಂದಾಗಿ ಯೆಹೂದವನ್ನ ತಗ್ಗಿಸಿದನು. ಯಾಕಂದ್ರೆ ಆಹಾಜ ಯೆಹೂದದ ಜನ್ರ ಕೈಯಿಂದ ಪಾಪ ಮಾಡಿಸಿದ್ದ. ಅದ್ರಿಂದ ಜನ ಯೆಹೋವನ ವಿರುದ್ಧ ದೊಡ್ಡ ಪಾಪಗಳನ್ನ ಮಾಡಿದ್ರು.
20 ಸ್ವಲ್ಪ ಸಮಯ ಆದ್ಮೇಲೆ, ಅಶ್ಶೂರ್ಯರ ರಾಜ ತಿಗ್ಲತ್-ಪಿಲೆಸೆರ್*+ ಆಹಾಜನಿಗೆ ಸಹಾಯ ಮಾಡೋದನ್ನ ಬಿಟ್ಟು ಅವನ ವಿರುದ್ಧ ಆಕ್ರಮಣಮಾಡಿ ಅವನು ಇನ್ನೂ ಕುಗ್ಗಿ ಹೋಗೋ ತರ ಮಾಡಿದ.+ 21 ಯೆಹೋವನ ಆಲಯ, ಅರಮನೆ ಮತ್ತು ಅಧಿಕಾರಿಗಳ ಮನೆಯಲ್ಲಿದ್ದ ಎಲ್ಲವನ್ನೂ ಆಹಾಜ ಅಶ್ಶೂರ್ಯರ ರಾಜನಿಗೆ ಉಡುಗೊರೆಯಾಗಿ ಕೊಟ್ಟಿದ್ದ.+ ಆದ್ರೆ ಅದ್ರಿಂದ ಅವನಿಗೆ ಏನೂ ಪ್ರಯೋಜನ ಆಗಲಿಲ್ಲ. 22 ರಾಜ ಆಹಾಜ ಅಂಥ ಕಷ್ಟದ ಪರಿಸ್ಥಿತಿಯಲ್ಲೂ ಯೆಹೋವನ ವಿರುದ್ಧ ಇನ್ನೂ ದೊಡ್ಡ ದೊಡ್ಡ ಪಾಪಗಳನ್ನ ಮಾಡಿದ. 23 “ಅರಾಮ್ಯರ ರಾಜನಿಗೆ ಅವನ ದೇವರುಗಳು ಸಹಾಯ ಮಾಡ್ತಿವೆ. ಹಾಗಾಗಿ ನಾನೂ ಆ ದೇವರುಗಳಿಗೆ ಬಲಿಗಳನ್ನ ಕೊಡ್ತೀನಿ.+ ಆಗ ಅವು ನನಗೂ ಸಹಾಯ ಮಾಡ್ತವೆ”+ ಅಂದ್ಕೊಂಡು ಅವನನ್ನ ಸೋಲಿಸಿದ+ ದಮಸ್ಕದವರ ದೇವರುಗಳಿಗೆ ಬಲಿಗಳನ್ನ ಕೊಡೋಕೆ ಶುರುಮಾಡಿದ. ಆದ್ರೆ ಆ ದೇವರುಗಳು ಅವನಿಗೆ ಮತ್ತು ಇಸ್ರಾಯೇಲ್ಯರಿಗೆ ತೊಂದ್ರೆ ಕೊಟ್ವು. 24 ಅಷ್ಟೇ ಅಲ್ಲ ಆಹಾಜ ಸತ್ಯ ದೇವರ ಆಲಯದಲ್ಲಿದ್ದ ಪಾತ್ರೆಗಳನ್ನೆಲ್ಲ ತುಂಡು ತುಂಡು ಮಾಡಿದ.+ ಯೆಹೋವನ ಆಲಯದ ಬಾಗಿಲುಗಳನ್ನ ಮುಚ್ಚಿಸಿದ.+ ಅವನಿಗಂತಾನೇ ಯೆರೂಸಲೇಮಿನ ಮೂಲೆಮೂಲೆಯಲ್ಲೂ ಯಜ್ಞವೇದಿಗಳನ್ನ ಕಟ್ಟಿಸಿದ. 25 ಯೆಹೂದದ ಎಲ್ಲ ಪಟ್ಟಣಗಳಲ್ಲೂ ದೇವಸ್ಥಾನಗಳನ್ನ ಮಾಡಿಸಿ ಬೇರೆ ದೇವರುಗಳಿಗೆ ಬಲಿಗಳನ್ನ ಕೊಟ್ಟ.+ ಹೀಗೆ ಮಾಡಿ ತನ್ನ ಪೂರ್ವಜರ ದೇವರಾದ ಯೆಹೋವನಿಗೆ ಕೋಪ ಬರಿಸಿದ.
26 ಆಹಾಜನ ಇಡೀ ಜೀವನಚರಿತ್ರೆ ಬಗ್ಗೆ ಅಂದ್ರೆ ಅವನ ಎಲ್ಲ ವ್ಯವಹಾರಗಳ ಬಗ್ಗೆ ಯೆಹೂದ ಮತ್ತು ಇಸ್ರಾಯೇಲ್ ರಾಜರ ಕಾಲದ ಪುಸ್ತಕದಲ್ಲಿ ಇದೆ.+ 27 ಆಮೇಲೆ ಆಹಾಜ ತೀರಿಹೋದ. ಅವನ ಶವವನ್ನ ಇಸ್ರಾಯೇಲ್ ರಾಜರ ಸಮಾಧಿಗೆ ತಗೊಂಡು ಬರದೆ ಯೆರೂಸಲೇಮ್ ಪಟ್ಟಣದಲ್ಲೇ ಹೂಣಿಟ್ರು.+ ಅವನಾದ್ಮೇಲೆ ಅವನ ಮಗ ಹಿಜ್ಕೀಯ ರಾಜನಾದ.