ವಿಮೋಚನಕಾಂಡ
33 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ “ನೀನು ಈಜಿಪ್ಟಿಂದ ಕರ್ಕೊಂಡು ಬಂದ ಜನ್ರ ಜೊತೆ ಪ್ರಯಾಣ ಮುಂದುವರಿಸು. ನಾನು ಅಬ್ರಹಾಮ, ಇಸಾಕ, ಯಾಕೋಬರಿಗೆ ಯಾವ ದೇಶವನ್ನ ಅವರ ಸಂತತಿಗೆ ಕೊಡ್ತೀನಿ ಅಂತ ಹೇಳಿದ್ದೀನೋ ಆ ದೇಶಕ್ಕೆ ಈ ಜನ್ರನ್ನ ಕರ್ಕೊಂಡು ಹೋಗು.+ 2 ನಾನು ಒಬ್ಬ ದೂತನನ್ನ ನಿಮ್ಮ ಮುಂದೆ ಕಳಿಸ್ತೀನಿ.+ ಕಾನಾನ್ಯರನ್ನ, ಅಮೋರಿಯರನ್ನ, ಹಿತ್ತಿಯರನ್ನ, ಪೆರಿಜೀಯರನ್ನ, ಹಿವ್ವಿಯರನ್ನ, ಯೆಬೂಸಿಯರನ್ನ ಆ ದೇಶದಿಂದ ಓಡಿಸಿಬಿಡ್ತೀನಿ.+ 3 ನೀವು ಹಾಲೂ ಜೇನೂ ಹರಿಯೋ ಆ ದೇಶಕ್ಕೆ ಹೋಗಿ.+ ಆದ್ರೆ ನಾನು ನಿಮ್ಮ ಜೊತೆ ಬರಲ್ಲ. ಯಾಕಂದ್ರೆ ನೀವು ಹಠಮಾರಿಗಳು.+ ನಿಮ್ಮ ಹಠಮಾರಿತನ ನೋಡಿ ನಾನು ನಿಮ್ಮನ್ನ ದಾರಿಯಲ್ಲೇ ನಾಶ ಮಾಡ್ಲೂಬಹುದು.”+
4 ಜನ್ರು ಈ ಕಟುವಾದ ಮಾತು ಕೇಳಿ ತುಂಬ ದುಃಖಪಟ್ರು. ಅವರಲ್ಲಿ ಒಬ್ರು ಕೂಡ ಒಡವೆಗಳನ್ನಾಗಲಿ ಅಂದವಾದ ಬಟ್ಟೆಗಳನ್ನಾಗಲಿ ಹಾಕಲಿಲ್ಲ. 5 ಯೆಹೋವ ಮೋಶೆಗೆ “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ಹಠಮಾರಿಗಳು.+ ನಾನು ಮನಸ್ಸು ಮಾಡಿದ್ರೆ ನಿಮ್ಮ ಮಧ್ಯ ಬಂದು ನಿಮ್ಮನ್ನೆಲ್ಲ ಒಂದೇ ಕ್ಷಣದಲ್ಲಿ ನಾಶ ಮಾಡಬಹುದು.+ ಈಗ ನೀವು ಒಡವೆಗಳನ್ನಾಗಲಿ ಅಂದವಾದ ಬಟ್ಟೆಗಳನ್ನಾಗಲಿ ಹಾಕಬೇಡಿ. ನಿಮಗೇನು ಮಾಡಬೇಕಂತ ಯೋಚಿಸ್ತೀನಿ” ಅಂದನು. 6 ಹಾಗಾಗಿ ಇಸ್ರಾಯೇಲ್ಯರು ಹೋರೇಬ್ ಬೆಟ್ಟದ ಹತ್ರ ಇದ್ದ ಸಮಯದಿಂದ ಒಡವೆಗಳನ್ನಾಗಲಿ ಅಂದವಾದ ಬಟ್ಟೆಗಳನ್ನಾಗಲಿ ಹಾಕಲಿಲ್ಲ.
7 ಮೋಶೆ ತನ್ನ ಡೇರೆ ಕಿತ್ತು ಪಾಳೆಯದ ಹೊರಗೆ ಸ್ವಲ್ಪ ದೂರ ಹೋಗಿ ಡೇರೆ ಹಾಕೊಂಡ. ಅವನು ಅದಕ್ಕೆ ದೇವದರ್ಶನ ಡೇರೆ ಅಂತ ಹೆಸರಿಟ್ಟ. ಯಾರಿಗಾದ್ರೂ ಯೆಹೋವನ ತೀರ್ಮಾನ ಏನಂತ ತಿಳ್ಕೊಳ್ಳೋಕೆ ಇಷ್ಟಪಟ್ರೆ+ ಅವರು ಪಾಳೆಯದ ಹೊರಗಿದ್ದ ದೇವದರ್ಶನ ಡೇರೆಗೆ ಹೋಗ್ತಿದ್ರು. 8 ಮೋಶೆ ಪಾಳೆಯದ ಹೊರಗಿದ್ದ ಆ ಡೇರೆ ಹತ್ರ ಹೋಗುವಾಗ ಜನ್ರೆಲ್ಲ ಕೂಡ್ಲೇ ಎದ್ದು ತಮ್ಮತಮ್ಮ ಡೇರೆಯ ಬಾಗಿಲಲ್ಲಿ ನಿಂತ್ಕೊಳ್ತಿದ್ರು. ಮೋಶೆ ಡೇರೆಯೊಳಗೆ ಹೋಗೋ ತನಕ ಅವನನ್ನೇ ನೋಡ್ತಾ ನಿಲ್ತಿದ್ರು. 9 ಮೋಶೆ ಡೇರೆಯೊಳಗೆ ಹೋದ ಕೂಡ್ಲೇ ಮೋಡ+ ಇಳಿದು ಬಂದು ಆ ಡೇರೆಯ ಬಾಗಿಲಲ್ಲಿ ನಿಲ್ತಿತ್ತು. ದೇವರು ಮೋಶೆ ಜೊತೆ ಮಾತಾಡ್ತಿರುವಾಗ+ ಅದು ಅಲ್ಲೇ ಇರ್ತಿತ್ತು. 10 ಮೋಡ ಆ ಡೇರೆಯ ಬಾಗಿಲಲ್ಲಿ ನಿಂತಿರೋದನ್ನ ಜನ್ರು ನೋಡಿದಾಗ ಅವರೆಲ್ಲ ತಮ್ಮತಮ್ಮ ಡೇರೆಯ ಬಾಗಿಲಲ್ಲೇ ಅಡ್ಡಬೀಳ್ತಿದ್ರು. 11 ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಜೊತೆ ಮಾತಾಡೋ ಹಾಗೇ ಯೆಹೋವ ಮೋಶೆ ಜೊತೆ ಮಾತಾಡ್ತಿದ್ದನು.+ ಮೋಶೆ ಪಾಳೆಯಕ್ಕೆ ವಾಪಸ್ ಬಂದಾಗೆಲ್ಲ ಯೆಹೋಶುವ+ ಆ ಡೇರೆಯಲ್ಲಿ ಇರ್ತಿದ್ದ. ನೂನನ ಮಗನಾದ ಇವನು ಮೋಶೆಯ ಸೇವಕನೂ ಸಹಾಯಕನೂ ಆಗಿದ್ದ.+
12 ಮೋಶೆ ಯೆಹೋವನಿಗೆ “‘ಈ ಜನ್ರನ್ನ ಕರ್ಕೊಂಡು ಹೋಗು’ ಅಂತ ನನಗೆ ಹೇಳ್ದೆ. ಆದ್ರೆ ನನ್ನ ಜೊತೆ ಯಾರನ್ನ ಕಳಿಸ್ತಿಯ ಅಂತ ಹೇಳಲೇ ಇಲ್ವಲ್ಲಾ? ಅಷ್ಟೇ ಅಲ್ಲ ‘ನಿನ್ನನ್ನ ಚೆನ್ನಾಗಿ ತಿಳ್ಕೊಂಡಿದ್ದೀನಿ, ನಿನ್ನನ್ನ ನಾನು ಮೆಚ್ಚಿದ್ದೀನಿ’ ಅಂತ ಹೇಳ್ದೆ. 13 ನೀನು ನನ್ನನ್ನ ಮೆಚ್ಚಿರೋದಾದ್ರೆ ನೀನೇನು ಮಾಡ್ತೀಯ ಅಂತ ದಯವಿಟ್ಟು ನನಗೆ ಹೇಳು.+ ಆಗ ನಿನ್ನನ್ನ ಚೆನ್ನಾಗಿ ತಿಳ್ಕೊಳ್ಳೋಕೆ, ಯಾವಾಗ್ಲೂ ನಿನ್ನ ಮೆಚ್ಚುಗೆ ಪಡಿಯೋಕೆ ಆಗುತ್ತೆ. ಈ ಜನ್ರು ನಿನ್ನವರಲ್ವಾ?+ ಅದನ್ನ ಮರಿಬೇಡ” ಅಂದ. 14 ಅದಕ್ಕೆ ದೇವರು “ನಾನೇ ನಿನ್ನ ಜೊತೆ ಬರ್ತಿನಿ.+ ನಿನಗೆ ಶಾಂತಿ ಕೊಡ್ತೀನಿ” ಅಂದನು.+ 15 ಆಗ ಮೋಶೆ ದೇವರಿಗೆ “ನೀನು ನಮ್ಮ ಜೊತೆ ಬರದಿದ್ರೆ ನಮ್ಮನ್ನ ಇಲ್ಲಿಂದ ಮುಂದಕ್ಕೆ ಕಳಿಸಬೇಡ. 16 ನೀನು ಬರದಿದ್ರೆ ನನ್ನನ್ನ, ನಿನ್ನ ಜನ್ರನ್ನ ನೀನು ಮೆಚ್ಚಿದ್ದಿಯ ಅಂತ ನಮಗೆ ಹೇಗೆ ಗೊತ್ತಾಗುತ್ತೆ? ನೀನು ನಮ್ಮ ಜೊತೆ ಬಂದ್ರೆ+ ಮಾತ್ರ ಭೂಮಿಯಲ್ಲಿರೋ ಬೇರೆಲ್ಲ ಜನ್ರಿಗಿಂತ ನಾನು ಮತ್ತೆ ನಿನ್ನ ಜನ್ರು ಭಿನ್ನರಾಗಿ ಇದ್ದೀವಿ ಅಂತ ಗೊತ್ತಾಗುತ್ತೆ” ಅಂದ.+
17 ಯೆಹೋವ ಮೋಶೆಗೆ “ನಾನು ನಿನ್ನನ್ನ ಮೆಚ್ಚಿರೋದ್ರಿಂದ, ನಿನ್ನನ್ನ ಚೆನ್ನಾಗಿ* ತಿಳಿದಿರೋದ್ರಿಂದ ನೀನು ಕೇಳಿರೋ ಈ ವಿಷ್ಯವನ್ನ ಮಾಡ್ತೀನಿ” ಅಂದನು. 18 ಆಗ ಮೋಶೆ “ದಯವಿಟ್ಟು ನಿನ್ನ ಮಹಿಮೆನ ನನಗೆ ತೋರಿಸು” ಅಂದ. 19 ಅದಕ್ಕೆ ದೇವರು “ನಿನ್ನ ಮುಂದೆ ದಾಟಿ ಹೋಗ್ತೀನಿ. ಆಗ ನಾನು ಎಷ್ಟು ಒಳ್ಳೆಯವನು ಅಂತ ನಿನಗೆ ಗೊತ್ತಾಗುತ್ತೆ. ಯೆಹೋವ ಅನ್ನೋ ನನ್ನ ಹೆಸರನ್ನ ನಿನಗೆ ಪ್ರಕಟಿಸ್ತೀನಿ.+ ನಾನು ಯಾರನ್ನ ಮೆಚ್ಚುತ್ತೀನೋ ಅವರಿಗೆ ಹೆಚ್ಚು ದಯೆ ತೋರಿಸ್ತೀನಿ, ಯಾರಿಗೆ ಕರುಣೆ ತೋರಿಸೋಕೆ ಇಷ್ಟಪಡ್ತೀನೋ ಅವರಿಗೆ ಕರುಣೆ ತೋರಿಸ್ತೀನಿ” ಅಂದನು.+ 20 ಅಷ್ಟೇ ಅಲ್ಲ ಆತನು ಮೋಶೆಗೆ “ನಿನಗೆ ನನ್ನ ಮುಖ ನೋಡೋಕಾಗಲ್ಲ. ಯಾಕಂದ್ರೆ ನನ್ನನ್ನ ನೋಡಿದ ಯಾವ ಮನುಷ್ಯನೂ ಬದುಕಿ ಉಳಿಯಲ್ಲ” ಅಂದನು.
21 ಆಮೇಲೆ ಯೆಹೋವ ಮೋಶೆಗೆ “ನೋಡು, ನನ್ನ ಹತ್ರ ಇರೋ ಈ ಬಂಡೆ ಮೇಲೆ ನೀನು ನಿಲ್ಲು. 22 ನನ್ನ ಮಹಿಮೆ ನಿನ್ನ ಮುಂದೆ ದಾಟಿ ಹೋಗುವಾಗ ನಿನ್ನನ್ನ ಬಂಡೆಯ ಸಂದಲ್ಲಿ ಇಡ್ತೀನಿ. ನಾನು ದಾಟಿಹೋಗೋ ತನಕ ನನ್ನ ಕೈಯಿಂದ ನಿನ್ನನ್ನ ಮುಚ್ಚುತ್ತೀನಿ. 23 ಆಮೇಲೆ ನನ್ನ ಕೈ ತೆಗಿತೀನಿ. ಆಗ ನಿನಗೆ ನನ್ನ ಬೆನ್ನು ಕಾಣಿಸುತ್ತೆ. ಆದ್ರೆ ನನ್ನ ಮುಖ ನಿನಗೆ ಕಾಣಿಸಲ್ಲ” ಅಂದನು.+