ಯೆರೆಮೀಯ
34 ಯೆರೂಸಲೇಮಿನ ಮತ್ತು ಅದ್ರ ಎಲ್ಲ ಪಟ್ಟಣಗಳ ವಿರುದ್ಧ ಬಾಬೆಲಿನ ರಾಜ ನೆಬೂಕದ್ನೆಚ್ಚರ,* ಅವನ ಎಲ್ಲ ಸೈನ್ಯ, ಅವನ ಅಧಿಕಾರದ ಕೆಳಗಿದ್ದ ಎಲ್ಲ ರಾಜ್ಯಗಳು, ಎಲ್ಲ ದೇಶಗಳು ಹೋರಾಡ್ತಿದ್ದಾಗ ಯೆಹೋವ ಯೆರೆಮೀಯನಿಗೆ ಹೀಗಂದನು+
2 “ಇಸ್ರಾಯೇಲಿನ ದೇವರಾದ ಯೆಹೋವ ಏನು ಹೇಳ್ತಾನಂದ್ರೆ ‘ನೀನು ಯೆಹೂದದ ರಾಜ ಚಿದ್ಕೀಯನ+ ಹತ್ರ ಹೋಗಿ ಹೀಗೆ ಹೇಳು “ಯೆಹೋವ ಹೇಳೋದು ಏನಂದ್ರೆ ‘ನಾನು ಈ ಪಟ್ಟಣವನ್ನ ಬಾಬೆಲಿನ ರಾಜನ ಕೈಗೆ ಕೊಡ್ತೀನಿ. ಅವನು ಇದನ್ನ ಬೆಂಕಿಯಿಂದ ಸುಟ್ಟುಬಿಡ್ತಾನೆ.+ 3 ನೀನು ಅವನ ಕೈಯಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ. ನಿನ್ನನ್ನ ಹಿಡಿದು ಬಾಬೆಲಿನ ರಾಜನ ಕೈಗೆ ಕೊಟ್ಟೇ ಕೊಡ್ತೀನಿ.+ ನೀನು ಬಾಬೆಲಿನ ರಾಜನನ್ನ ನೋಡ್ತೀಯ. ಆ ರಾಜ ನೇರವಾಗಿ ನಿನ್ನ ಜೊತೆ ಮಾತಾಡ್ತಾನೆ. ನೀನು ಬಾಬೆಲಿಗೆ ಹೋಗೇ ಹೋಗ್ತೀಯ.’+ 4 ಹಾಗಿದ್ರೂ ಯೆಹೂದದ ರಾಜ ಚಿದ್ಕೀಯ, ಯೆಹೋವನ ಮಾತು ಕೇಳು. ‘ಯೆಹೋವ ನಿನ್ನ ಬಗ್ಗೆ ಹೀಗೆ ಹೇಳಿದ್ದಾನೆ “ನೀನು ಕತ್ತಿಯಿಂದ ಸಾಯಲ್ಲ. 5 ನಿಂಗೆ ಒಳ್ಳೇ ಸಾವು ಸಿಗುತ್ತೆ.+ ನಿನ್ನ ಪೂರ್ವಜರಿಗೆ ಅಂದ್ರೆ ನಿನಗಿಂತ ಮುಂಚೆ ಇದ್ದ ರಾಜರಿಗೆ ಮಾಡಿದ ಹಾಗೆ ಜನ್ರು ನಿನ್ನನ್ನ ಸಮಾಧಿ ಮಾಡುವಾಗ ಸುಗಂಧ ದ್ರವ್ಯಗಳನ್ನ ಸುಡ್ತಾರೆ. ಅವರು ಎದೆ ಬಡ್ಕೊಳ್ತಾ ‘ಅಯ್ಯೋ, ಒಡೆಯಾ!’ ಅಂತ ಗೋಳಾಡ್ತಾರೆ. ‘ನಿಜವಾಗ್ಲೂ ಹೀಗೇ ಆಗುತ್ತೆ. ಯಾಕಂದ್ರೆ ಇದನ್ನ ನಾನೇ ಹೇಳ್ತಾ ಇದ್ದೀನಿ’ ಅಂತ ಯೆಹೋವ ಹೇಳ್ತಾನೆ.”’”’”
6 ಈ ಎಲ್ಲ ಮಾತುಗಳನ್ನ ಪ್ರವಾದಿ ಯೆರೆಮೀಯ ಯೆರೂಸಲೇಮಲ್ಲಿದ್ದ ಯೆಹೂದದ ರಾಜ ಚಿದ್ಕೀಯನಿಗೆ ಹೇಳಿದ. 7 ಆ ಸಮಯದಲ್ಲಿ ಬಾಬೆಲಿನ ರಾಜನ ಸೈನ್ಯ ಯೆರೂಸಲೇಮಿನ ವಿರುದ್ಧ, ಯೆಹೂದದಲ್ಲಿದ್ದ ಲಾಕೀಷ್+ ಮತ್ತು ಅಜೇಕ+ ಅನ್ನೋ ಪಟ್ಟಣಗಳ ವಿರುದ್ಧ ಯುದ್ಧ ಮಾಡ್ತಿತ್ತು.+ ಯೆಹೂದದ ಪಟ್ಟಣಗಳಲ್ಲಿದ್ದ ಭದ್ರ ಕೋಟೆಗಳ ಪಟ್ಟಣಗಳಲ್ಲಿ ಇವೆರಡನ್ನ ಮಾತ್ರ ಅವರು ಇನ್ನೂ ವಶ ಮಾಡ್ಕೊಂಡಿರಲಿಲ್ಲ.
8 ರಾಜ ಚಿದ್ಕೀಯ ಯೆರೂಸಲೇಮಿನ ಜನ್ರ ಜೊತೆ ಒಂದು ಒಪ್ಪಂದ ಮಾಡ್ಕೊಂಡು ಅವ್ರೆಲ್ಲ ತಮ್ಮ ದಾಸರಿಗೆ ಬಿಡುಗಡೆ ಘೋಷಿಸಬೇಕು ಅಂತ ಹೇಳಿದ್ದ. ಅದಾದ್ಮೇಲೆ ಯೆಹೋವ ಯೆರೆಮೀಯನಿಗೆ ಒಂದು ಸಂದೇಶ ಕೊಟ್ಟನು.+ 9 ಆ ಒಪ್ಪಂದದ ಪ್ರಕಾರ ಪ್ರತಿಯೊಬ್ರು ತಮ್ಮ ಇಬ್ರಿಯ ದಾಸದಾಸಿಯರನ್ನ ಬಿಡುಗಡೆ ಮಾಡಬೇಕಿತ್ತು, ಯಾವ ಯೆಹೂದ್ಯನೂ ಇನ್ನೊಬ್ಬ ಯೆಹೂದ್ಯನನ್ನ ದಾಸನಾಗಿ ಇಟ್ಕೊಳ್ಳಬಾರದಿತ್ತು. 10 ಈ ಮಾತಿನ ತರಾನೇ ಎಲ್ಲ ಅಧಿಕಾರಿಗಳು, ಜನ್ರು ಮಾಡಿದ್ರು. ತಮ್ಮ ದಾಸದಾಸಿಯರನ್ನ ಬಿಡುಗಡೆ ಮಾಡ್ತೀವಿ, ಯಾರೂ ಕೂಡ ಅವ್ರನ್ನ ಇನ್ಮುಂದೆ ದಾಸರಾಗಿ ಇಟ್ಕೊಳ್ಳಲ್ಲ ಅಂತ ತಾವು ಮಾಡ್ಕೊಂಡಿದ್ದ ಒಪ್ಪಂದದ ಪ್ರಕಾರ ಅವ್ರನ್ನೆಲ್ಲ ಜನ್ರು ಕಳಿಸಿಬಿಟ್ರು. 11 ಆದ್ರೆ ಅವರು ತಾವು ಬಿಡುಗಡೆ ಮಾಡಿದ್ದ ದಾಸದಾಸಿಯರನ್ನ ವಾಪಸ್ ಕರ್ಕೊಂಡು ಬಂದ್ರು, ಅವ್ರನ್ನ ಬಲವಂತವಾಗಿ ದುಡಿಸ್ಕೊಂಡ್ರು. 12 ಹಾಗಾಗಿ ಯೆಹೋವನ ಸಂದೇಶ ಯೆರೆಮೀಯನಿಗೆ ಬಂತು. ಯೆಹೋವ ಹೀಗೆ ಹೇಳಿದನು
13 “ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಾನು ನಿಮ್ಮ ಪೂರ್ವಜರನ್ನ ಅವರು ಗುಲಾಮರಾಗಿದ್ದ ಈಜಿಪ್ಟ್ ದೇಶದಿಂದ ಹೊರಗೆ ಕರ್ಕೊಂಡು ಬಂದ ದಿನ+ ಅವ್ರ ಜೊತೆ ಒಂದು ಒಪ್ಪಂದ ಮಾಡ್ಕೊಂಡಿದ್ದೆ.+ ಅದ್ರಲ್ಲಿ 14 “ನಿಮಗೆ ಮಾರಿರೋ ನಿಮ್ಮ ಇಬ್ರಿಯ ಸಹೋದರ ಆರು ವರ್ಷ ನಿಮ್ಮ ದಾಸನಾಗಿ ದುಡಿದ ಮೇಲೆ ಏಳನೇ ವರ್ಷದಲ್ಲಿ ನೀವು ಅವನನ್ನ ಬಿಡುಗಡೆ ಮಾಡಬೇಕು”+ ಅಂತ ಹೇಳಿದ್ದೆ. ನಿಮ್ಮ ಪೂರ್ವಜರು ಆ ಮಾತು ಕೇಳಲಿಲ್ಲ, ಆ ತರ ಮಾಡಲಿಲ್ಲ. 15 ಆದ್ರೆ ಇತ್ತೀಚೆಗೆ ನಿಮ್ಮ ಮನಸ್ಸು ಬದಲಾಯಿಸಿಕೊಂಡ್ರಿ. ನಿಮ್ಮ ದಾಸರಾಗಿದ್ದ ನಿಮ್ಮ ಸಹೋದರರನ್ನ ಬಿಡುಗಡೆ ಮಾಡಿ ನನ್ನ ದೃಷ್ಟಿಯಲ್ಲಿ ಒಳ್ಳೇದು ಮಾಡಿದ್ರಿ. ನನ್ನ ಹೆಸ್ರಿಗಾಗಿರೋ ಆಲಯದಲ್ಲಿ ನನ್ನ ಮುಂದೆ ಒಂದು ಒಪ್ಪಂದ ಮಾಡಿದ್ರಿ. 16 ಆದ್ರೆ ನೀವು ಮತ್ತೆ ಮನಸ್ಸು ಬದಲಾಯಿಸಿದ್ರಿ. ನೀವು ಬಿಡುಗಡೆ ಮಾಡಿ ಇಷ್ಟಬಂದಲ್ಲಿಗೆ ಹೋಗೋಕೆ ಬಿಟ್ಟಿದ್ದ ನಿಮ್ಮ ದಾಸದಾಸಿಯರನ್ನ ವಾಪಸ್ ಕರ್ಕೊಂಡು ಬಂದ್ರಿ. ಅವ್ರನ್ನ ಬಲವಂತವಾಗಿ ದುಡಿಸ್ಕೊಂಡ್ರಿ. ಹೀಗೆ ನನ್ನ ಹೆಸ್ರನ್ನ ಅಪವಿತ್ರ ಮಾಡಿದ್ರಿ.’+
17 “ಯೆಹೋವ ಏನು ಹೇಳ್ತಾನಂದ್ರೆ ‘ನಿಮ್ಮಲ್ಲಿ ಯಾರೂ ದಾಸನಾಗಿರೋ ನಿಮ್ಮ ಸಹೋದರನನ್ನ ಬಿಡುಗಡೆ ಮಾಡಲಿಲ್ಲ.+ ಹೀಗೆ ನನ್ನ ಮಾತು ಕೇಳಲಿಲ್ಲ.’ ಹಾಗಾಗಿ ಯೆಹೋವನಾದ ನಾನು ಹೇಳೋದು ಏನಂದ್ರೆ ‘ಈಗ ನಾನು ನಿಮ್ಮನ್ನ ಬಿಡುಗಡೆ ಮಾಡ್ತೀನಿ. ನಿಮ್ಮನ್ನ ಕತ್ತಿ, ಅಂಟುರೋಗ,* ಬರಗಾಲಕ್ಕೆ+ ತುತ್ತಾಗೋ ತರ ಬಿಟ್ಟುಬಿಡ್ತೀನಿ. ನಿಮ್ಮ ಪಾಡನ್ನ ನೋಡಿ ಭೂಮಿಯ ಎಲ್ಲ ಸಾಮ್ರಾಜ್ಯಗಳಿಗೆ ಗಾಬರಿ ಆಗುತ್ತೆ.+ 18 ಈ ಜನ್ರು ಕರುವನ್ನ ಕಡಿದು ಎರಡು ಭಾಗ ಮಾಡಿ, ಆ ತುಂಡುಗಳ ಮಧ್ಯ ಹಾದು ಹೋಗಿ ನನ್ನ ಮುಂದೆ ಒಪ್ಪಂದ ಮಾಡ್ಕೊಂಡಿದ್ರು. ಆದ್ರೂ ಅದ್ರ ಪ್ರಕಾರ ನಡಿಯದೆ ನನ್ನ ಒಪ್ಪಂದ ಮೀರಿದ್ದಾರೆ.+ 19 ಆ ಕರುವಿನ ತುಂಡುಗಳ ಮಧ್ಯ ಯೆಹೂದದ ಅಧಿಕಾರಿಗಳು, ಯೆರೂಸಲೇಮಿನ ಅಧಿಕಾರಿಗಳು, ಆಸ್ಥಾನದ ಅಧಿಕಾರಿಗಳು, ಪುರೋಹಿತರು, ಈ ದೇಶದ ಎಲ್ಲ ಜನ್ರು ಹಾದು ಹೋಗಿದ್ರು. 20 ನಾನು ಅವ್ರನ್ನೆಲ್ಲ ಅವ್ರ ಶತ್ರುಗಳ, ಅವ್ರ ಜೀವ ತೆಗಿಯೋಕೆ ಕಾಯ್ತಿರೋರ ಕೈಗೆ ಒಪ್ಪಿಸ್ತೀನಿ. ಅವ್ರ ಹೆಣಗಳನ್ನ ಪ್ರಾಣಿಪಕ್ಷಿಗಳು ತಿಂದುಬಿಡುತ್ತೆ.+ 21 ಯೆಹೂದದ ರಾಜ ಚಿದ್ಕೀಯನನ್ನ, ಅವನ ಅಧಿಕಾರಿಗಳನ್ನ ನಾನು ಅವ್ರ ಶತ್ರುಗಳ ಕೈಗೆ, ಅವ್ರ ಜೀವ ತೆಗಿಯೋಕೆ ಕಾಯ್ತಿರೋರ ಕೈಗೆ, ಮುತ್ತಿಗೆ ಹಾಕಿ ಬೇಡ ಅಂತ ಹಿಂದೆ ಹೋಗ್ತಿರೋ+ ಬಾಬೆಲಿನ ರಾಜನ ಸೈನ್ಯದ ಕೈಗೆ ಒಪ್ಪಿಸ್ತೀನಿ.’+
22 “ಯೆಹೋವ ಹೇಳೋದು ಏನಂದ್ರೆ ‘ಆ ಸೈನ್ಯಗಳಿಗೆ ನಾನು ಅಪ್ಪಣೆ ಕೊಡ್ತೀನಿ, ಅವುಗಳನ್ನ ಈ ಪಟ್ಟಣಕ್ಕೆ ವಾಪಸ್ ಕರ್ಕೊಂಡು ಬರ್ತಿನಿ. ಅವರು ಈ ಪಟ್ಟಣದ ವಿರುದ್ಧ ಹೋರಾಡ್ತಾರೆ, ಇದನ್ನ ವಶ ಮಾಡ್ಕೊಳ್ತಾರೆ. ಅವರು ಇದನ್ನ ಬೆಂಕಿಯಿಂದ ಸುಟ್ಟುಬಿಡ್ತಾರೆ.+ ನಾನು ಯೆಹೂದದ ಪಟ್ಟಣಗಳನ್ನ ಯಾರೂ ವಾಸ ಮಾಡದಿರೋ ಬಂಜರುಭೂಮಿಯಾಗಿ ಮಾಡ್ತೀನಿ.’”+