ಯೆಹೆಜ್ಕೇಲ
32 ಹನ್ನೆರಡನೇ* ವರ್ಷದ 12ನೇ ತಿಂಗಳ ಮೊದಲನೇ ದಿನ ಯೆಹೋವ ನನಗೆ ಮತ್ತೆ ಹೀಗಂದನು: 2 “ಮನುಷ್ಯಕುಮಾರನೇ, ಈಜಿಪ್ಟಿನ ರಾಜ ಫರೋಹನ ಬಗ್ಗೆ ಒಂದು ಶೋಕಗೀತೆ ಹಾಡು. ನೀನು ಅವನಿಗೆ ಏನು ಹೇಳಬೇಕಂದ್ರೆ,
‘ನೀನು ಜನಾಂಗಗಳ ಮಧ್ಯ ಶಕ್ತಿಶಾಲಿ ಸಿಂಹದ ತರ ಇದ್ದೆ.
ಆದ್ರೆ ನಿನ್ನ ಸದ್ದು ಅಡಗಿದೆ.
ನೀನು ಸಮುದ್ರದ ದೊಡ್ಡ ಪ್ರಾಣಿ ತರ ಇದ್ದೆ,+ ನಿನ್ನ ನದಿಗಳಲ್ಲಿ ಬಾಲವನ್ನ ಜೋರಾಗಿ ಬಡೀತಿದ್ದೆ,
ಕಾಲುಗಳಿಂದ ನೀರು ಕಲಕುತ್ತಾ ನದಿಗಳನ್ನ* ಗಬ್ಬೆಬ್ಬಿಸುತ್ತಿದ್ದೆ.’
3 ವಿಶ್ವದ ರಾಜ ಯೆಹೋವ ಹೀಗಂತಾನೆ:
‘ಗುಂಪಾಗಿರೋ ಎಷ್ಟೋ ಜನಾಂಗಗಳ ಕೈಯಿಂದ ನನ್ನ ಬಲೆಯನ್ನ ನಿನ್ನ ಮೇಲೆ ಬೀಸ್ತೀನಿ,
ಅವರು ನನ್ನ ಬಲೆಯಲ್ಲಿ ನಿನ್ನನ್ನ ಹಿಡಿದು ಮೇಲೆ ಎಳೀತಾರೆ.
4 ನಾನು ನಿನ್ನನ್ನ ನೆಲದ ಮೇಲೆ ಹಾಕಿಬಿಡ್ತೀನಿ,
ಬಟ್ಟಬಯಲಲ್ಲಿ ಎಸೆದುಬಿಡ್ತೀನಿ.
ಪಕ್ಷಿಗಳೆಲ್ಲ ನಿನ್ನ ಮೇಲೆ ಬಂದು ಕೂತ್ಕೊಳ್ಳೋ ಹಾಗೆ ಮಾಡ್ತೀನಿ.
ನಿನ್ನ ಮಾಂಸದಿಂದ ಇಡೀ ಭೂಮಿಯಲ್ಲಿರೋ ಕಾಡುಪ್ರಾಣಿಗಳ ಹೊಟ್ಟೆ ತುಂಬಿಸ್ತೀನಿ.+
5 ನಿನ್ನ ಮಾಂಸವನ್ನ ಬೆಟ್ಟಗಳ ಮೇಲೆ ಬಿಸಾಕ್ತೀನಿ.
ನಿನ್ನ ದೇಹದ ಉಳಿದ ಭಾಗಗಳನ್ನ ಕಣಿವೆಗಳಲ್ಲಿ ತುಂಬಿಸ್ತೀನಿ.+
6 ನಿನ್ನ ರಕ್ತದಿಂದ ನೆಲವನ್ನ ಬೆಟ್ಟಗಳ ತುದಿ ತನಕ ಒದ್ದೆ ಮಾಡ್ತೀನಿ,
ತೊರೆಗಳಲ್ಲೆಲ್ಲಾ ನಿನ್ನ ರಕ್ತಾನೇ ತುಂಬಿರುತ್ತೆ.’*
7 ‘ನಾನು ನಿನ್ನನ್ನ ನಿರ್ನಾಮ ಮಾಡಿದ ಮೇಲೆ ಆಕಾಶವನ್ನ ಮುಚ್ತೀನಿ, ಅದ್ರಲ್ಲಿರೋ ನಕ್ಷತ್ರಗಳನ್ನ ಕಪ್ಪು ಮಾಡ್ತೀನಿ.
ಮೋಡಗಳಿಂದ ಸೂರ್ಯನನ್ನ ಮರೆ ಮಾಡ್ತೀನಿ.
ಚಂದ್ರ ಕಾಂತಿ ಕಳ್ಕೊತಾನೆ.+
8 ನಿನ್ನಿಂದಾಗಿ ಆಕಾಶದಲ್ಲಿ ಮಿನುಗೋ ಬೆಳಕುಗಳನ್ನೆಲ್ಲ ಕಪ್ಪು ಮಾಡ್ತೀನಿ,
ನಿನ್ನ ದೇಶದಲ್ಲಿ ಕತ್ತಲು ಕವಿಯೋ ಹಾಗೆ ಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
9 ‘ಬೇರೆ ಜನಾಂಗಗಳಿಗೆ ಅಂದ್ರೆ ನಿನಗೆ ಗೊತ್ತಿಲ್ಲದ ದೇಶಗಳಿಗೆ ನಿನ್ನ ಜನ್ರು ಕೈದಿಗಳಾಗಿ ಹೋಗೋ ಹಾಗೆ ಮಾಡ್ತೀನಿ,+
ಆಗ ತುಂಬ ದೇಶದ ಜನ್ರ ಮನಸ್ಸಲ್ಲಿ ಭಯ ಹುಟ್ಟಿಸ್ತೀನಿ.
10 ನಾನು ಜನಾಂಗಗಳ ರಾಜರ ಕಣ್ಮುಂದೆನೇ ನಿನ್ನ ಮೇಲೆ ನನ್ನ ಕತ್ತಿ ಬೀಸುವಾಗ
ನಿನಗೆ ಬಂದಿರೋ ಗತಿ ನೋಡಿ ಆ ರಾಜರು ಭಯದಿಂದ ನಡುಗ್ತಾರೆ,
ಅಷ್ಟೇ ಅಲ್ಲ ಎಷ್ಟೋ ಜನಾಂಗಗಳು ಬೆಚ್ಚಿ ಬೆರಗಾಗೋ ತರ ಮಾಡ್ತೀನಿ.
ನೀನು ನಾಶವಾಗೋ ದಿನ
ಆ ರಾಜರಲ್ಲಿ ಪ್ರತಿಯೊಬ್ಬರು ಜೀವಭಯದಿಂದ ಒಂದೇ ಸಮ ನಡುಗ್ತಾರೆ.’
11 ವಿಶ್ವದ ರಾಜ ಯೆಹೋವ ಹೀಗಂತಾನೆ:
‘ಬಾಬೆಲಿನ ರಾಜ ತನ್ನ ಕತ್ತಿಯನ್ನ ನಿನ್ನ ಮೇಲೆ ಬೀಸ್ತಾನೆ.+
12 ನಿನ್ನ ಜನ್ರು ರಣವೀರರ ಕತ್ತಿಗೆ ತುತ್ತಾಗಿ ಸಾಯೋ ಹಾಗೆ ಮಾಡ್ತೀನಿ.
ಆ ರಣವೀರರೆಲ್ಲ ಜನ್ರಲ್ಲೇ ತುಂಬ ಕ್ರೂರಿಗಳು.+
ಅವರು ಈಜಿಪ್ಟಿನ ಜಂಬ ಅಡಗಿಸ್ತಾರೆ, ಅದ್ರ ಜನ್ರನ್ನ ನಾಶ ಮಾಡ್ತಾರೆ.+
13 ಅದ್ರ ಸಮೃದ್ಧ ನೀರಿನ ಹತ್ರ ಇರೋ ಎಲ್ಲ ಪ್ರಾಣಿಗಳನ್ನ ನಾಶಮಾಡ್ತೀನಿ.+
ಯಾವ ಮನುಷ್ಯ ಅಥವಾ ಪ್ರಾಣಿಯ ಕಾಲೂ ಅಲ್ಲಿನ ನೀರನ್ನ ಇನ್ಮುಂದೆ ಕಲಕೋದಿಲ್ಲ.’+
14 ‘ನಾನು ಆಗ ಆ ದೇಶದ ನೀರನ್ನ ಶುದ್ಧ ಮಾಡ್ತೀನಿ,
ಅಲ್ಲಿನ ನದಿಗಳು ಎಣ್ಣೆ ತರ ಹರಿಯೋ ಹಾಗೆ ಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
15 ‘ನಾನು ಈಜಿಪ್ಟನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡಿದಾಗ, ಆ ದೇಶದಲ್ಲಿ ತುಂಬಿರೋದನ್ನೆಲ್ಲ ನಾಶಮಾಡಿದಾಗ+
ಮತ್ತು ಅಲ್ಲಿನ ಜನ್ರನ್ನೆಲ್ಲ ಕೊಂದಾಗ
ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.+
16 ಇದೊಂದು ಶೋಕಗೀತೆ. ಜನ್ರು ಇದನ್ನ ನಿಜವಾಗ್ಲೂ ಹಾಡ್ತಾರೆ,
ಹೆಂಗಸ್ರು ಹಾಡ್ತಾರೆ.
ಈಜಿಪ್ಟ್ ಮತ್ತು ಅದ್ರ ಎಲ್ಲ ಸೈನ್ಯದ ಬಗ್ಗೆ ಅವರು ಇದನ್ನ ಹಾಡ್ತಾರೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
17 ಹನ್ನೆರಡನೇ ವರ್ಷದಲ್ಲಿ, ತಿಂಗಳ* 15ನೇ ದಿನ ಯೆಹೋವ ನನಗೆ ಹೀಗಂದನು: 18 “ಮನುಷ್ಯಕುಮಾರನೇ, ನೀನು ಈಜಿಪ್ಟಿನ ಸೈನ್ಯಕ್ಕಾಗಿ ಗೋಳಾಡು. ಗುಂಡಿ* ಸೇರುವವರ ಜೊತೆ ಆ ದೇಶಾನೂ ಬಲಿಷ್ಠ ಜನಾಂಗಗಳೂ ಮಣ್ಣಿಗೆ ಸೇರುತ್ತೆ ಅಂತ ಸಾರು.
19 ‘ಈಜಿಪ್ಟೇ, ನಿನ್ನಷ್ಟು ಸೌಂದರ್ಯವತಿ ಯಾರೂ ಇಲ್ಲ ಅಂದ್ಕೊಂಡಿದ್ದೀಯಾ? ನೀನು ಸಮಾಧಿಗೆ ಹೋಗಿ ಸುನ್ನತಿ ಆಗಿಲ್ಲದವ್ರ ಜೊತೆ ಬಿದ್ಕೊ!’
20 ‘ಈಜಿಪ್ಟಿನವರು ಕತ್ತಿಯಿಂದ ಸತ್ತವ್ರ ಮಧ್ಯ ಹೆಣವಾಗಿ ಬೀಳ್ತಾರೆ.+ ಅವ್ರ ದೇಶವನ್ನ ಕತ್ತಿಯ ವಶಕ್ಕೆ ಕೊಡಲಾಗಿದೆ, ಅವ್ರ ಸೈನಿಕರ ಜೊತೆ ಅದನ್ನೂ ಎಳ್ಕೊಂಡು ಹೋಗಿ.
21 ಶೂರಾಧಿಶೂರರು ಸಮಾಧಿಯ* ಆಳದಿಂದ ಅವನ ಜೊತೆ* ಅವನ ಸಹಾಯಕರ ಜೊತೆ ಮಾತಾಡ್ತಾರೆ. ಅವ್ರೆಲ್ಲ ನಿಜವಾಗ್ಲೂ ಮಣ್ಣಿಗೆ ಸೇರ್ತಾರೆ, ಸುನ್ನತಿ ಆಗಿರದ ಜನ್ರು ಕತ್ತಿಯಿಂದ ಸತ್ತು ಬಿದ್ದಿರೋ ಹಾಗೆ ಅವರೂ ಬಿದ್ದಿರ್ತಾರೆ. 22 ಅಶ್ಶೂರ ಅನ್ನೋ ಸ್ತ್ರೀ ತನ್ನ ಇಡೀ ಸಮೂಹದ ಜೊತೆ ಅಲ್ಲಿದ್ದಾಳೆ. ಅಶ್ಶೂರ್ಯರ ಸಮಾಧಿಗಳು ಅವ್ರ ರಾಜನ ಸುತ್ತ ಇವೆ. ಅವ್ರೆಲ್ಲ ಕತ್ತಿಯಿಂದ ಸತ್ತವರು.+ 23 ಅವಳ ಸಮಾಧಿಗಳು ಗುಂಡಿಯ* ಆಳದಲ್ಲಿವೆ. ಅವಳ ಜನ್ರ ಗುಂಪು ಅವಳ ಸಮಾಧಿ ಸುತ್ತ ಇದೆ. ಅವ್ರೆಲ್ಲ ಕತ್ತಿಯಿಂದ ಸತ್ತಿದ್ದಾರೆ. ಯಾಕಂದ್ರೆ ಅವರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರು.
24 ಏಲಾಮ್+ ಅನ್ನುವವಳು ಅಲ್ಲಿದ್ದಾಳೆ. ಅವಳ ಸಮಾಧಿ ಸುತ್ತ ಅವಳ ಇಡೀ ಸೈನ್ಯದ ಸಮಾಧಿ ಇದೆ. ಅವ್ರೆಲ್ಲ ಕತ್ತಿಯಿಂದ ಸತ್ತವರು. ಸುನ್ನತಿ ಆಗದೆ ಅವರು ಮಣ್ಣಿಗೆ ಸೇರಿದ್ದಾರೆ. ಅವರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರು. ಗುಂಡಿ* ಸೇರುವವರ ಜೊತೆ ಅವರೂ ಈಗ ತಲೆ ತಗ್ಗಿಸ್ತಾರೆ. 25 ಸತ್ತವ್ರ ಮಧ್ಯ ಅವರು ಅವಳಿಗಾಗಿ ಹಾಸಿಗೆ ಹಾಸಿದ್ದಾರೆ. ಅವಳ ಸಮಾಧಿಗಳ ಸುತ್ತ ಅವಳ ಸೈನ್ಯದ ಸಮಾಧಿ ಇದೆ. ಅವ್ರೆಲ್ಲ ಸುನ್ನತಿ ಆಗಿಲ್ಲದವರು. ಅವರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರಿಂದ ಕತ್ತಿಯಿಂದ ಸತ್ರು. ಗುಂಡಿ* ಸೇರುವವರ ಜೊತೆ ಅವರೂ ತಲೆ ತಗ್ಗಿಸ್ತಾರೆ. ಅವರು ಸತ್ತವ್ರ ಮಧ್ಯ ಬಿದ್ದಿದ್ದಾರೆ.
26 ಮೇಷೆಕ್, ತೂಬಲ್+ ಮತ್ತು ಅವ್ರ* ಸೈನ್ಯ ಇರೋದು ಅಲ್ಲೇ. ರಾಜನ ಸುತ್ತ ಅವ್ರ* ಸಮಾಧಿಗಳಿವೆ. ಅವ್ರೆಲ್ಲ ಸುನ್ನತಿ ಆಗಿಲ್ಲದವರು. ಅವರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರಿಂದ ಅವ್ರನ್ನ ಕತ್ತಿಯಿಂದ ಚುಚ್ಚಿ ಕೊಲ್ಲಲಾಗಿದೆ. 27 ಸತ್ತು ಬಿದ್ದು ಅವ್ರ ಯುದ್ಧದ ಆಯುಧಗಳ ಜೊತೆ ಸಮಾಧಿ* ಸೇರಿರೋ ಸುನ್ನತಿ ಆಗಿಲ್ಲದ ರಣವೀರರ ಜೊತೆ ಅವರು ಬಿದ್ದಿರ್ತಾರೆ. ಅವ್ರ ಕತ್ತಿಗಳನ್ನ ಅವ್ರ ತಲೆ ಕೆಳಗೆ ಇಡಲಾಗುತ್ತೆ.* ಅವರು ಮಾಡಿದ ಪಾಪಗಳಿಗೆ ಶಿಕ್ಷೆಯನ್ನ ಅವ್ರ ಮೂಳೆಗಳು ಅನುಭವಿಸುತ್ತೆ. ಯಾಕಂದ್ರೆ ಈ ಯುದ್ಧ ಶೂರರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರು. 28 ಆದ್ರೆ ನಿನ್ನನ್ನ ಸುನ್ನತಿ ಆಗಿಲ್ಲದವ್ರ ಜೊತೆ ಜಜ್ಜಲಾಗುತ್ತೆ. ಕತ್ತಿಯಿಂದ ಸತ್ತವ್ರ ಜೊತೆ ನೀನು ಬಿದ್ದಿರ್ತೀಯ.
29 ಎದೋಮ್+ ಸಹ ಅಲ್ಲಿದೆ. ಅವಳ ರಾಜರು, ಅವಳ ಎಲ್ಲ ಪ್ರಧಾನರು ಶೂರರಾಗಿದ್ರೂ ಅವರೂ ಕತ್ತಿಯಿಂದ ಸತ್ತವ್ರ ಪಕ್ಕದಲ್ಲಿ ಬಿದ್ದಿದ್ದಾರೆ. ಸುನ್ನತಿ ಆಗಿಲ್ಲದೆ+ ಗುಂಡಿ* ಸೇರುವವರ ಜೊತೆ ಅವರೂ ಬಿದ್ದಿರ್ತಾರೆ.
30 ಅಲ್ಲಿ ಎಲ್ಲ ಸೀದೋನ್ಯರ+ ಜೊತೆ ಉತ್ತರದ ಅಧಿಕಾರಿಗಳೆಲ್ಲ* ಇದ್ದಾರೆ. ಅವರು ತಮ್ಮ ಶೌರ್ಯದಿಂದ ಜನ್ರಲ್ಲಿ ಭಯ ಹುಟ್ಟಿಸಿದ್ರೂ ಸತ್ತವ್ರ ಜೊತೆ ಅವಮಾನದಿಂದ ಸಮಾಧಿ ಸೇರಿದ್ದಾರೆ. ಸುನ್ನತಿ ಆಗಿಲ್ಲದೆ ಅವರು ಸತ್ತವ್ರ ಜೊತೆ ಬಿದ್ದಿರ್ತಾರೆ. ಗುಂಡಿ* ಸೇರುವವರ ಜೊತೆ ಅವರು ತಲೆ ತಗ್ಗಿಸ್ತಾರೆ.
31 ಇದನ್ನೆಲ್ಲ ಫರೋಹ ನೋಡ್ತಾನೆ. ಅವನ ಸೈನ್ಯಕ್ಕೆ ಬಂದ ಗತಿಯನ್ನ ನೋಡಿ ಅವನಿಗೆ ನೆಮ್ಮದಿ ಆಗುತ್ತೆ.+ ಫರೋಹನನ್ನ ಮತ್ತು ಅವನ ಇಡೀ ಸೈನ್ಯವನ್ನ ಕತ್ತಿಯಿಂದ ಕೊಲ್ಲಲಾಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
32 ‘ಫರೋಹ ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರಿಂದ ಅವನನ್ನ ಮತ್ತು ಅವನ ಸೈನ್ಯಗಳನ್ನ ಸುನ್ನತಿ ಆಗಿಲ್ಲದೆ ಕತ್ತಿಯಿಂದ ಸತ್ತವ್ರ ಜೊತೆ ಸಮಾಧಿ ಮಾಡಲಾಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”