ಇಬ್ರಿಯ
2 ಆದುದರಿಂದಲೇ ನಾವು ಎಂದಿಗೂ ನಂಬಿಕೆಯಿಂದ ದೂರ ತೇಲಿಹೋಗದಂತೆ ನಾವು ಕೇಳಿಸಿಕೊಂಡ ಸಂಗತಿಗಳಿಗೆ ಸಾಮಾನ್ಯವಾದುದಕ್ಕಿಂತ ಹೆಚ್ಚಿನ ಗಮನವನ್ನು ಕೊಡುವ ಅಗತ್ಯವಿದೆ. 2 ದೇವದೂತರ ಮುಖಾಂತರ ತಿಳಿಸಲ್ಪಟ್ಟ ವಾಕ್ಯವು ಸ್ಥಿರವಾಗಿರುವಲ್ಲಿ ಮತ್ತು ಪ್ರತಿಯೊಂದು ಅಪರಾಧಕ್ಕೂ ಅವಿಧೇಯ ಕೃತ್ಯಕ್ಕೂ ನ್ಯಾಯಕ್ಕೆ ಹೊಂದಿಕೆಯಲ್ಲಿ ಯೋಗ್ಯ ಶಿಕ್ಷೆಯು ಸಿಕ್ಕಿರುವಲ್ಲಿ, 3 ಇಂಥ ಮಹಾ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿಕೊಳ್ಳುವುದು ಹೇಗೆ? ಈ ರಕ್ಷಣೆಯು ನಮ್ಮ ಕರ್ತನ ಮುಖಾಂತರ ತಿಳಿಸಲ್ಪಟ್ಟಿತು ಮತ್ತು ಅವನ ಮಾತುಗಳನ್ನು ಕೇಳಿಸಿಕೊಂಡವರು ಇದನ್ನು ನಮಗೆ ದೃಢೀಕರಿಸಿದರು. 4 ಮಾತ್ರವಲ್ಲದೆ ದೇವರು ಸಹ ಸೂಚಕಕಾರ್ಯಗಳಿಂದಲೂ ಆಶ್ಚರ್ಯಕಾರ್ಯಗಳಿಂದಲೂ ವಿವಿಧ ರೀತಿಯ ಮಹತ್ಕಾರ್ಯಗಳಿಂದಲೂ ತನ್ನ ಚಿತ್ತಕ್ಕನುಸಾರ ಪವಿತ್ರಾತ್ಮವನ್ನು* ಹಂಚಿಕೊಡುವ ಮೂಲಕವೂ ಅದಕ್ಕೆ ಸಾಕ್ಷಿಕೊಡುತ್ತಿದ್ದನು.
5 ನಾವು ಯಾವುದರ ಕುರಿತು ಮಾತಾಡುತ್ತಿದ್ದೇವೋ ಆ ಬರಲಿರುವ ನಿವಾಸಿತ ಭೂಮಿಯನ್ನು ದೇವರು ತನ್ನ ದೂತರಿಗೆ ಅಧೀನಪಡಿಸಲಿಲ್ಲ. 6 ಆದರೆ ಒಬ್ಬ ನಿರ್ದಿಷ್ಟ ಸಾಕ್ಷಿಯು, “ಮನುಷ್ಯನು ಎಷ್ಟು ಮಾತ್ರದವನು; ಅವನನ್ನು ನೀನು ಏಕೆ ಮನಸ್ಸಿನಲ್ಲಿಟ್ಟುಕೊಳ್ಳಬೇಕು? ಅಥವಾ ಮಾನವನು ಎಷ್ಟರವನು; ಅವನ ಬಗ್ಗೆ ನೀನು ಏಕೆ ಚಿಂತಿಸಬೇಕು? 7 ನೀನು ಅವನನ್ನು ದೇವದೂತರಿಗಿಂತ ಸ್ವಲ್ಪ ಕಡಮೆಯಾಗಿ ಮಾಡಿದಿ; ಮಹಿಮೆಯನ್ನೂ ಮಾನವನ್ನೂ ಕಿರೀಟವಾಗಿ ಕೊಟ್ಟಿ ಮತ್ತು ನಿನ್ನ ಕೈಕೆಲಸಗಳ ಮೇಲೆ ಅವನನ್ನು ನೇಮಿಸಿದಿ. 8 ನೀನು ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದಿ” ಎಂದು ಪುರಾವೆ ನೀಡಿದ್ದಾನೆ. ದೇವರು ಎಲ್ಲವನ್ನೂ ಅವನಿಗೆ ಅಧೀನಮಾಡಿದಾಗ ಒಂದನ್ನೂ ಅವನಿಗೆ ಅಧೀನಮಾಡದೆ ಬಿಡಲಿಲ್ಲ. ಎಲ್ಲವೂ ಅವನಿಗೆ ಅಧೀನವಾಗಿರುವುದನ್ನು ನಾವು ಇನ್ನೂ ಕಾಣುತ್ತಿಲ್ಲವಾದರೂ 9 ದೇವದೂತರಿಗಿಂತ ಸ್ವಲ್ಪ ಕಡಮೆಯಾಗಿ ಮಾಡಲ್ಪಟ್ಟ ಯೇಸು ಮರಣವನ್ನು ಅನುಭವಿಸಿದ ಬಳಿಕ ಮಹಿಮೆಯನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವುದನ್ನು ನಾವು ಕಾಣುತ್ತೇವೆ. ದೇವರ ಅಪಾತ್ರ ದಯೆಯಿಂದ* ಅವನು ಪ್ರತಿ ಮನುಷ್ಯನಿಗಾಗಿ ಮರಣವನ್ನು ಅನುಭವಿಸಿದನು.
10 ಸಮಸ್ತ ಸಂಗತಿಗಳು ಯಾರಿಗಾಗಿ ಇವೆಯೋ ಮತ್ತು ಯಾರಿಂದ ಉಂಟಾದವೋ ಆತನು ಅನೇಕ ಪುತ್ರರನ್ನು ಮಹಿಮೆಗೆ ತರುವಲ್ಲಿ ಅವರ ರಕ್ಷಣೆಯ ಮುಖ್ಯ ನಿಯೋಗಿಯನ್ನು ಕಷ್ಟಾನುಭವಗಳ ಮೂಲಕ ಪರಿಪೂರ್ಣತೆಗೆ ತರುವುದು ಆತನಿಗೆ ಯುಕ್ತವಾಗಿತ್ತು. 11 ಪವಿತ್ರೀಕರಿಸುವವನೂ ಪವಿತ್ರೀಕರಿಸಲ್ಪಡುತ್ತಿರುವವರೂ ಒಬ್ಬನಿಂದಲೇ ಬಂದವರಾಗಿದ್ದಾರೆ; ಈ ಕಾರಣದಿಂದ ಅವನು ಅವರನ್ನು “ಸಹೋದರರು” ಎಂದು ಕರೆಯಲು ನಾಚಿಕೆಪಡುವುದಿಲ್ಲ. 12 ಏಕೆಂದರೆ, “ನಾನು ನಿನ್ನ ನಾಮವನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭೆಯ ಮಧ್ಯದಲ್ಲಿ ಗೀತೆಯೊಂದಿಗೆ ನಿನ್ನನ್ನು ಸ್ತುತಿಸುವೆನು” ಎಂದು ಅವನು ಹೇಳುತ್ತಾನೆ. 13 ಮಾತ್ರವಲ್ಲದೆ “ನಾನು ಆತನ ಮೇಲೆ ಭರವಸೆಯಿಡುವೆನು” ಎಂದೂ “ಇಗೋ, ನಾನೂ ಯೆಹೋವನು ನನಗೆ ದಯಪಾಲಿಸಿದ ಮಕ್ಕಳೂ” ಎಂದೂ ಹೇಳುತ್ತಾನೆ.
14 ಆದುದರಿಂದ ‘ಮಕ್ಕಳು’ ರಕ್ತಮಾಂಸದಲ್ಲಿ ಭಾಗಿಗಳಾಗಿರುವುದರಿಂದ ಮರಣವನ್ನು ಉಂಟುಮಾಡಶಕ್ತನಾದವನನ್ನು ಅಂದರೆ ಪಿಶಾಚನನ್ನು ತನ್ನ ಮರಣದ ಮೂಲಕ ಇಲ್ಲದಂತೆ ಮಾಡಲು ಅವನೂ ಹಾಗೆಯೇ ರಕ್ತಮಾಂಸದಲ್ಲಿ ಭಾಗಿಯಾದನು. 15 ಹೀಗೆ ಮರಣದ ಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವಕ್ಕೆ ಒಳಗಾಗಿದ್ದವರೆಲ್ಲರನ್ನು ಬಿಡಿಸಶಕ್ತನಾದನು. 16 ಅವನು ನಿಜವಾಗಿಯೂ ದೇವದೂತರಿಗೆ ನೆರವು ನೀಡುತ್ತಿಲ್ಲವಾದರೂ, ಅಬ್ರಹಾಮನ ಸಂತತಿಗೆ ನೆರವು ನೀಡುತ್ತಿದ್ದಾನೆ. 17 ಹೀಗಾಗಿ ಜನರ ಪಾಪಗಳಿಗಾಗಿ ಪಾಪನಿವಾರಣಾರ್ಥಕ ಯಜ್ಞವನ್ನು ನೀಡುವುದಕ್ಕೋಸ್ಕರ ದೇವರಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವನು ಕರುಣಾಭರಿತನೂ ನಂಬಿಗಸ್ತನಾದ ಮಹಾ ಯಾಜಕನೂ ಆಗುವಂತೆ ಎಲ್ಲ ವಿಧಗಳಲ್ಲಿ ತನ್ನ ‘ಸಹೋದರರಿಗೆ’ ಸಮಾನನಾಗಬೇಕಾಯಿತು. 18 ಪರೀಕ್ಷಿಸಲ್ಪಟ್ಟಾಗ ಅವನು ತಾನೇ ಕಷ್ಟವನ್ನು ಅನುಭವಿಸಿರುವುದರಿಂದ ಪರೀಕ್ಷಿಸಲ್ಪಡುವವರಿಗೆ ಸಹಾಯಮಾಡಲು ಅವನು ಶಕ್ತನಾಗಿದ್ದಾನೆ.