ಕೊರಿಂಥದವರಿಗೆ ಬರೆದ ಮೊದಲನೇ ಪತ್ರ
5 ನಿಮ್ಮ ಬಗ್ಗೆ ಒಂದು ವಿಷ್ಯ ಕೇಳಿಸ್ಕೊಂಡೆ. ನಿಮ್ಮಲ್ಲಿ ಒಬ್ಬ ಅವನ ಅಪ್ಪನ ಹೆಂಡತಿಯನ್ನ ಇಟ್ಕೊಂಡಿದ್ದಾನಂತೆ.+ ಇಂಥ ಲೈಂಗಿಕ ಅನೈತಿಕತೆ*+ ಬೇರೆ ಜನಾಂಗದ ಜನ್ರಲ್ಲೂ ಇಲ್ಲ. 2 ಇಂಥ ವಿಷ್ಯಕ್ಕಾಗಿ ನೀವು ದುಃಖಪಡಬೇಕು,+ ಆದ್ರೆ ಹೆಮ್ಮೆಪಡ್ತಿದ್ದೀರಾ? ಆ ಪಾಪಮಾಡಿದ ವ್ಯಕ್ತಿಯನ್ನ ಸಭೆಯಿಂದ ತೆಗೆದುಹಾಕಬೇಕು ತಾನೇ?+ 3 ನಾನು ಅಲ್ಲಿ ಇಲ್ಲಾಂದ್ರೂ ನನ್ನ ಮನಸ್ಸೆಲ್ಲಾ ಅಲ್ಲೇ ಇದೆ. ನಾನು ಅಲ್ಲಿದ್ದೀನಿ ಅಂತ ನೆನಸಿ ಆ ಪಾಪ ಮಾಡಿದ ವ್ಯಕ್ತಿ ಬಗ್ಗೆ ಈಗಾಗ್ಲೇ ತೀರ್ಮಾನ ತಗೊಂಡಿದ್ದೀನಿ. 4 ನಮ್ಮ ಪ್ರಭು ಯೇಸು ಹೆಸ್ರಲ್ಲಿ ನೀವು ಸೇರಿಬಂದಾಗ ನಮ್ಮ ಪ್ರಭು ಯೇಸುವಿನ ಶಕ್ತಿಯಿಂದ ನನ್ನ ಮನಸ್ಸು ನಿಮ್ಮ ಜೊತೆ ಇರುತ್ತೆ. ಇದನ್ನ ಮನಸ್ಸಲ್ಲಿಟ್ಟು 5 ಅವನನ್ನ ಸೈತಾನನಿಗೆ ಒಪ್ಪಿಸಿಬಿಡಿ.+ ಆಗ ಅವನ ಪಾಪದಿಂದ ಸಭೆ ಹಾಳಾಗದೆ ಇರುತ್ತೆ. ಒಡೆಯನ ದಿನ ಬಂದಾಗ ಸಭೆಯಲ್ಲಿರೋ ಜನ್ರ ಮನಸ್ಸು ಹಾಳಾಗದೆ ಇರುತ್ತೆ.+
6 ನೀವು ಹೆಮ್ಮೆಪಡೋದು ಸರಿಯಲ್ಲ. ಸ್ವಲ್ಪ ಹುಳಿ ನಾದಿದ ಹಿಟ್ಟನ್ನೆಲ್ಲ ಹುಳಿಮಾಡುತ್ತೆ ಅಂತ ನಿಮಗೆ ಗೊತ್ತಿಲ್ವಾ?+ 7 ಹುಳಿಹಿಡಿದ ಹಳೇ ಹಿಟ್ಟನ್ನ ತೆಗೆದುಹಾಕಿ. ಆಗ ನೀವು ಹೊಸ ಹಿಟ್ಟಾಗ್ತೀರ. ಯಾಕಂದ್ರೆ ನೀವು ಹುಳಿಯಿಲ್ಲದ ನಾದಿದ ಹಿಟ್ಟಿನ ತರ ಇದ್ದೀರಲ್ವಾ? ನಿಜ ಏನಂದ್ರೆ ಕ್ರಿಸ್ತ ನಮ್ಮ ಪಸ್ಕದ ಕುರಿಯಾಗಿ+ ತನ್ನ ಜೀವವನ್ನ ಬಲಿಯಾಗಿ ಕೊಟ್ಟನು.+ 8 ಹಾಗಾಗಿ ನಾವು ಪ್ರಾಮಾಣಿಕತೆ, ಸತ್ಯ ಅನ್ನೋ ಹುಳಿಯಿಲ್ಲದ ರೊಟ್ಟಿಗಳಿಂದ ಹಬ್ಬ ಮಾಡೋಣ,+ ಹುಳಿಹಿಡಿದ ಹಳೇ ಹಿಟ್ಟಿಂದಾಗಲಿ ಕೆಟ್ಟತನ, ದುಷ್ಟತನ ಅನ್ನೋ ಹುಳಿಯಿಂದಾಗಲಿ ಆಚರಿಸೋದು ಬೇಡ.
9 ಲೈಂಗಿಕ ಅನೈತಿಕತೆ* ನಡಿಸುವವ್ರ ಜೊತೆ ಸೇರೋದನ್ನ ಬಿಟ್ಟುಬಿಡಿ ಅಂತ ನಾನು ಪತ್ರದಲ್ಲಿ ನಿಮಗೆ ಹೇಳಿದ್ದೆ. 10 ನನ್ನ ಮಾತಿನ ಅರ್ಥ ಅತಿಯಾಸೆ, ಲೈಂಗಿಕ ಅನೈತಿಕತೆ,* ಸುಲಿಗೆ, ಮೂರ್ತಿಪೂಜೆ ಮಾಡೋ ಈ ಲೋಕದ+ ಜನ್ರ ಜೊತೆ ಸೇರಬಾರದು ಅಂತಲ್ಲ. ಹಾಗೆ ಇದ್ರೆ ನೀವು ಈ ಲೋಕಾನೇ ಬಿಟ್ಟು ಹೋಗಬೇಕಾಗುತ್ತೆ.+ 11 ಆದ್ರೆ ಒಬ್ಬ ಸಹೋದರ ಲೈಂಗಿಕ ಅನೈತಿಕತೆ* ನಡಿಸಿದ್ರೆ, ಅವನಿಗೆ ಅತಿಯಾಸೆ ಇದ್ರೆ,+ ಮೂರ್ತಿಪೂಜೆ ಮಾಡಿದ್ರೆ, ಕೆಟ್ಟಕೆಟ್ಟದಾಗಿ ಬಯ್ಯೋನಾಗಿದ್ರೆ, ಕುಡುಕನಾಗಿದ್ರೆ+ ಅಥವಾ ಸುಲಿಗೆ ಮಾಡುವವನಾಗಿದ್ರೆ+ ಅವನ ಜೊತೆ ಸೇರೋದನ್ನ ಬಿಟ್ಟುಬಿಡಿ.+ ಅಷ್ಟೇ ಅಲ್ಲ ಅಂಥವನ ಜೊತೆ ಊಟನೂ ಮಾಡಬೇಡಿ ಅಂತ ನಾನೀಗ ಬರಿತಾ ಇದ್ದೀನಿ. 12 ಹೊರಗಿನವ್ರ ವಿಷ್ಯದಲ್ಲಿ ತೀರ್ಪು ಮಾಡೋಕೆ ನಾನ್ಯಾರು? ಸಭೆಯೊಳಗೆ ಇರುವವ್ರನ್ನ ತೀರ್ಪು ಮಾಡುವವರು ನೀವೇ ಅಲ್ವಾ? 13 ಹೊರಗಿನ ಜನ್ರಿಗೆ ದೇವರು ತೀರ್ಪು ಕೊಡ್ತಾನೆ.+ “ಆ ಕೆಟ್ಟವನನ್ನ ಸಭೆಯಿಂದ ಹೊರಗೆ ಹಾಕಿ.”+