ಯೆಹೆಜ್ಕೇಲ
21 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಯೆರೂಸಲೇಮ್ ಕಡೆ ಮುಖಮಾಡಿ ಪವಿತ್ರ ಸ್ಥಳಗಳ ವಿರುದ್ಧ ಒಂದು ಪ್ರಕಟಣೆ ಮಾಡು ಮತ್ತು ಇಸ್ರಾಯೇಲ್ ದೇಶದ ವಿರುದ್ಧ ಭವಿಷ್ಯ ಹೇಳು. 3 ಇಸ್ರಾಯೇಲ್ ದೇಶಕ್ಕೆ ಹೀಗೆ ಹೇಳು: ‘ಯೆಹೋವ ಹೇಳೋದು ಏನಂದ್ರೆ, “ನಾನು ನಿನಗೆ ವಿರುದ್ಧವಾಗಿ ಇದ್ದೀನಿ. ನಾನು ನನ್ನ ಕತ್ತಿಯನ್ನ ತೆಗೆದು+ ನಿನ್ನಲ್ಲಿರೋ ನೀತಿವಂತರನ್ನ, ದುಷ್ಟರನ್ನ ಸಾಯಿಸ್ತೀನಿ. 4 ನಾನು ನಿನ್ನಲ್ಲಿರೋ ನೀತಿವಂತರನ್ನ, ಕೆಟ್ಟವ್ರನ್ನ ಸಾಯಿಸೋದ್ರಿಂದ ನನ್ನ ಕತ್ತಿಯನ್ನ ತೆಗೆದು ದಕ್ಷಿಣದಿಂದ ಉತ್ತರದ ತನಕ ಇರೋ ಎಲ್ಲರ ಮೇಲೂ ಬೀಸ್ತೀನಿ. 5 ಯೆಹೋವನಾದ ನಾನೇ ನನ್ನ ಕತ್ತಿಯನ್ನ ತೆಗೆದಿದ್ದೀನಿ ಅಂತ ಆಗ ಎಲ್ರಿಗೂ ಗೊತ್ತಾಗುತ್ತೆ. ತೆಗೆದಿರೋ ಕತ್ತಿನ ನಾನು ವಾಪಸ್ ಇಡಲ್ಲ.”’+
6 ಮನುಷ್ಯಕುಮಾರನೇ, ನೀನು ಗಡಗಡ ನಡುಗ್ತಾ ನಿಟ್ಟುಸಿರು ಬಿಡು. ಹೌದು, ಅವರ ಮುಂದೆ ತುಂಬ ದುಃಖದಿಂದ ನಿಟ್ಟುಸಿರು ಬಿಡು.+ 7 ಆಗ ಅವರು ನಿನಗೆ, ‘ನೀನು ಯಾಕೆ ನಿಟ್ಟುಸಿರು ಬಿಡ್ತಾ ಇದ್ದೀಯಾ?’ ಅಂತ ಕೇಳಿದ್ರೆ ‘ಒಂದು ಸುದ್ದಿ ಬರ್ತಾ ಇದೆ, ಅದಕ್ಕೇ ನಿಟ್ಟುಸಿರು ಬಿಡ್ತಿದ್ದೀನಿ’ ಅಂತ ಹೇಳು. ಯಾಕಂದ್ರೆ ಅದು ಬಂದೇ ಬರುತ್ತೆ. ಆಗ ಭಯದಿಂದ ಎಲ್ಲರ ಹೃದಯ ಜೋರಾಗಿ ಬಡಕೊಳ್ಳುತ್ತೆ, ಎಲ್ಲರ ಕೈಗಳು ಬಿದ್ದುಹೋಗುತ್ತೆ. ಎಲ್ಲರೂ ಹೆದರಿಕೊಂಡು ಅವ್ರ ಮೊಣಕಾಲಿಂದ ನೀರು ಸೋರುತ್ತೆ.*+ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ, ‘ನೋಡು, ಅದು ನಿಜ ಆಗುತ್ತೆ, ನಡೆದೇ ನಡೆಯುತ್ತೆ!’”
8 ಯೆಹೋವ ಮತ್ತೆ ನನಗೆ ಹೀಗಂದನು: 9 “ಮನುಷ್ಯಕುಮಾರನೇ, ನೀನು ಹೀಗೆ ಭವಿಷ್ಯ ಹೇಳು: ‘ಯೆಹೋವ ಹೇಳೋದು ಏನಂದ್ರೆ “ಒಂದು ಕತ್ತಿ! ಒಂದು ಕತ್ತಿ+ ಚೂಪಾಗಿದೆ, ಪಳಪಳ ಅಂತ ಹೊಳೀತಿದೆ. 10 ಕ್ರೂರವಾಗಿ ಸಾಯಿಸೋಕೆ ಕತ್ತಿ ಚೂಪಾಗಿದೆ. ಉಜ್ಜಿರೋದ್ರಿಂದ ಮಿಂಚಿನ ಹಾಗೆ ಹೊಳೀತಿದೆ.”’”
ಆಗ ಜನ, “ಇದು ನಾವು ಖುಷಿಪಡಬೇಕಾದ ಸಮಯ ಅಲ್ವಾ?” ಅಂದ್ರು.
ಆದ್ರೆ ದೇವರು, “‘ನನ್ನ ಕತ್ತಿ ಎಲ್ಲ ಕೋಲುಗಳನ್ನ ತಳ್ಳಿಹಾಕೋ ತರ ನನ್ನ ಮಗನ ರಾಜದಂಡವನ್ನ ತಳ್ಳಿಹಾಕುತ್ತಾ?+
11 ಆ ಕತ್ತಿಯನ್ನ ಉಜ್ಜಿ ಪಳಪಳ ಅಂತ ಹೊಳಿಯೋ ಹಾಗೆ ಮಾಡೋಕೆ, ಜನರನ್ನ ಕೊಲ್ಲೋಕೆ ಕೊಡಲಾಗಿದೆ. ಕೊಲ್ಲುವವನ ಕೈಗೆ ಕೊಡೋಕೆ ಅದನ್ನ ಚೂಪು ಮಾಡಲಾಗಿದೆ ಮತ್ತು ಉಜ್ಜಿ ಹೊಳಿಯೋ ಹಾಗೆ ಮಾಡಲಾಗಿದೆ.+
12 ಮನುಷ್ಯಕುಮಾರನೇ, ಕೂಗು, ಗೋಳಾಡು.+ ಯಾಕಂದ್ರೆ ಕತ್ತಿ ನನ್ನ ಜನರ ವಿರುದ್ಧ ಬಂದಿದೆ. ಇಸ್ರಾಯೇಲ್ಯರ ಎಲ್ಲ ಪ್ರಧಾನರ ವಿರುದ್ಧ ಅದು ಬಂದಿದೆ.+ ಅವರು ಮತ್ತು ನನ್ನ ಜನರು ಎಲ್ಲರೂ ಕತ್ತಿಗೆ ಬಲಿ ಆಗ್ತಾರೆ. ಹಾಗಾಗಿ ನೀನು ದುಃಖದಿಂದ ತೊಡೆ ಚಚ್ಚಿಕೊ. 13 ನಾನು ಒಂದು ಪರೀಕ್ಷೆ ಮಾಡಿದ್ದೀನಿ.+ ನನ್ನ ಕತ್ತಿ ರಾಜದಂಡವನ್ನ ತಳ್ಳಿದ್ರೆ ಏನಾಗುತ್ತೆ? ರಾಜದಂಡ ಇಲ್ಲದೆ ಹೋಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
14 ಮನುಷ್ಯಕುಮಾರನೇ, ನೀನು ಭವಿಷ್ಯ ಹೇಳು ಮತ್ತು ಚಪ್ಪಾಳೆ ಹೊಡೀತಾ ‘ಕತ್ತಿ’ ಅಂತ ಮೂರು ಸಲ ಹೇಳು. ಎಲ್ಲರನ್ನೂ ಕೊಚ್ಚಿಹಾಕೋ ಕತ್ತಿ ಅದು, ಅವರ ಸುತ್ತಮುತ್ತ ಇರೋ ಜನರನ್ನ ಗುಂಪುಗುಂಪಾಗಿ ಕೊಲ್ಲೋ ಕತ್ತಿ ಅದು.+ 15 ಅವ್ರ ಹೃದಯ ಭಯದಿಂದ ನಡುಗುತ್ತೆ,+ ಅವರ ಪಟ್ಟಣದ ಬಾಗಿಲುಗಳ ಹತ್ರ ತುಂಬ ಜನ ಸತ್ತುಬೀಳ್ತಾರೆ. ನಾನು ಕತ್ತಿಯಿಂದ ಜನ್ರನ್ನ ಸಾಯಿಸ್ತೀನಿ. ಕತ್ತಿ ಮಿಂಚಿನ ಹಾಗೆ ಹೊಳೀತಿದೆ, ಉಜ್ಜಿ ಸಂಹಾರಕ್ಕಾಗಿ ಅದನ್ನ ತಯಾರು ಮಾಡಲಾಗಿದೆ! 16 ಕತ್ತಿಯೇ, ನೀನು ನಿನ್ನ ಬಲಗಡೆ ಇರೋರನ್ನ ಕಡಿದು ಹಾಕು, ನಿನ್ನ ಎಡಗಡೆ ಇರೋರನ್ನ ಬೀಸಿ ಕೊಲ್ಲು. ನಿನಗೆ ಎಲ್ಲಿ ಹೋಗೋಕೆ ಆಜ್ಞೆ ಸಿಕ್ಕಿದಿಯೋ ಅಲ್ಲೆಲ್ಲ ಹೋಗು! 17 ನಾನೂ ಚಪ್ಪಾಳೆ ಹೊಡಿತೀನಿ ಮತ್ತು ನನ್ನ ಕೋಪವನ್ನ ತೀರಿಸ್ಕೊಳ್ತೀನಿ.+ ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.”
18 ಯೆಹೋವ ಮತ್ತೆ ನನಗೆ ಹೀಗಂದನು: 19 “ಮನುಷ್ಯಕುಮಾರನೇ, ಒಂದು ದೇಶದಿಂದ ಹೋಗೋ ದಾರಿಯನ್ನ ಗುರುತಿಸು. ಆ ದಾರಿ ಒಂದು ಕಡೆ ಎರಡು ದಾರಿಗಳಾಗಿ ಕವಲು ಒಡೆಯುತ್ತೆ. ಕತ್ತಿ ಹಿಡ್ಕೊಂಡು ಬರ್ತಿರೋ ಬಾಬೆಲಿನ ರಾಜ ಯಾವ ದಾರಿಯಲ್ಲಿ ಹೋಗಬೇಕು ಅಂತ ಆರಿಸ್ಕೊಬೇಕಾಗುತ್ತೆ. ದಾರಿ ಕವಲೊಡೆಯೋ ಆ ಜಾಗದಲ್ಲಿ ನೀನು ಒಂದು ದಾರಿ ಫಲಕ ಇಡಬೇಕು. 20 ಕತ್ತಿ ಹಿಡ್ಕೊಂಡು ಬರೋ ಆ ರಾಜ ಅಮ್ಮೋನ್ಯರ ಪಟ್ಟಣವಾದ ರಬ್ಬಾಕ್ಕೆ+ ಹೋಗೋಕೆ ಯಾವ ದಾರಿ ಹಿಡೀಬೇಕಂತ, ಯೆಹೂದದ ಭದ್ರ ಕೋಟೆಗಳಿರೋ ಯೆರೂಸಲೇಮ್+ ಪಟ್ಟಣಕ್ಕೆ ಹೋಗೋಕೆ ಯಾವ ದಾರಿ ಹಿಡೀಬೇಕಂತ ನೀನು ಗುರುತು ಹಾಕಿ ತೋರಿಸಬೇಕು. 21 ಯಾಕಂದ್ರೆ ಬಾಬೆಲಿನ ರಾಜ ದಾರಿ ಕವಲೊಡೆಯೋ ಜಾಗಕ್ಕೆ ಬಂದಾಗ ಅಲ್ಲಿ ನಿಂತು ಯಾವ ದಾರಿಯಲ್ಲಿ ಹೋಗಬೇಕಂತ ಶಕುನ ನೋಡ್ತಾನೆ. ಅವನು ಬಾಣಗಳನ್ನ ಕುಲುಕ್ತಾನೆ, ತನ್ನ ಮೂರ್ತಿಗಳನ್ನ* ವಿಚಾರಿಸ್ತಾನೆ, ಒಂದು ಪ್ರಾಣಿಯ ಪಿತ್ತಜನಕಾಂಗವನ್ನ ಪರೀಕ್ಷಿಸ್ತಾನೆ. 22 ಶಕುನ ನೋಡಿದಾಗ ಅವನ ಬಲಗೈ ಯೆರೂಸಲೇಮಿಗೆ ಹೋಗೋಕೆ ಸೂಚಿಸುತ್ತೆ. ಅಷ್ಟೇ ಅಲ್ಲ, ಗೋಡೆ ಒಡೆಯೋ ಯಂತ್ರ ಇಡೋಕೆ, ಸಾಯಿಸೋಕೆ, ಯುದ್ಧಘೋಷಣೆ ಮಾಡೋಕೆ, ಬಾಗಿಲುಗಳನ್ನ ಒಡೆಯೋ ದಿಮ್ಮಿಗಳನ್ನ ಇಡೋಕೆ, ಮಣ್ಣಿನ ದಿಬ್ಬಗಳನ್ನ, ಮುತ್ತಿಗೆ ಗೋಡೆಗಳನ್ನ ಕಟ್ಟೋಕೆ ಅದು ಸೂಚಿಸುತ್ತೆ.+ 23 ಆದ್ರೆ ಅವರ ಜೊತೆ* ಪ್ರಮಾಣಗಳನ್ನ ಮಾಡಿದ್ದವರಿಗೆ* ಈ ಶಕುನ ಸುಳ್ಳು ಅಂತ ಅನಿಸುತ್ತೆ.+ ಆದ್ರೆ ಅವನು ಅವರು ಮಾಡಿದ ತಪ್ಪುಗಳನ್ನ ನೆನಪಿಸ್ಕೊಳ್ತಾನೆ ಮತ್ತು ಬಂದು ಅವರನ್ನ ಕೈದಿಗಳಾಗಿ ವಶ ಮಾಡ್ಕೋತಾನೆ.+
24 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನೀವು ನಿಮ್ಮ ಅಪರಾಧಗಳನ್ನ ಬಯಲಿಗೆ ತರೋ ಮೂಲಕ ಮತ್ತು ನಿಮ್ಮೆಲ್ಲ ಕೆಲಸಗಳಲ್ಲಿ ನಿಮ್ಮ ಪಾಪಗಳನ್ನ ತೋರಿಸೋ ಮೂಲಕ ಅಪರಾಧಿಗಳು ಅಂತ ನೆನಪಿಸಿದ್ದೀರ. ಹೀಗೆ ನೀವು ನೆನಪಿಗೆ ಬಂದಿರೋದ್ರಿಂದ ನಿಮ್ಮನ್ನ ಬಲವಂತವಾಗಿ ಹಿಡ್ಕೊಂಡು ಹೋಗಲಾಗುತ್ತೆ.’
25 ತುಂಬ ಗಾಯ ಆಗಿರೋ ಇಸ್ರಾಯೇಲಿನ ದುಷ್ಟ ಪ್ರಧಾನನೇ, ನಿನ್ನ ದಿನ ಬಂದಿದೆ,+ ನಿನಗೆ ಕೊನೆ ಶಿಕ್ಷೆ ಕೊಡೋ ಸಮಯ ಬಂದಿದೆ. 26 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ನಿನ್ನ ಪೇಟ ಮತ್ತು ಕಿರೀಟ ತೆಗೆದುಬಿಡು.+ ಇದೆಲ್ಲ ಈಗ ಇರೋ ಹಾಗೆ ಇರಲ್ಲ.+ ಕೆಳಗಿರುವ ವ್ಯಕ್ತಿನ ಮೇಲೆ ಏರಿಸು,+ ಮೇಲಿರೋ ವ್ಯಕ್ತಿನ ಕೆಳಗೆ ಇಳಿಸು.+ 27 ನಾನು ಈ ಆಳ್ವಿಕೆನ ಕೊನೆ ಮಾಡ್ತೀನಿ, ಹೌದು ಕೊನೆ ಮಾಡ್ತೀನಿ, ಇಲ್ಲಿಗೇ ಕೊನೆ ಮಾಡ್ತೀನಿ. ಆಳೋ ಹಕ್ಕಿರೋನು ಬರೋ ತನಕ ಆಳ್ವಿಕೆ ಯಾರ ಕೈಗೂ ಹೋಗಲ್ಲ.+ ಆಳೋ ಹಕ್ಕಿರೋ ವ್ಯಕ್ತಿಯನ್ನ ನಾನು ರಾಜ ಮಾಡ್ತೀನಿ.’+
28 ಮನುಷ್ಯಕುಮಾರನೇ, ನೀನು ಹೀಗೆ ಭವಿಷ್ಯ ಹೇಳು: ‘ವಿಶ್ವದ ರಾಜ ಯೆಹೋವ ಅಮ್ಮೋನ್ಯರ ಬಗ್ಗೆ ಮತ್ತು ಅವರು ಅಣಕಿಸಿ ಮಾತಾಡಿದ್ರ ಬಗ್ಗೆ ಹೀಗೆ ಹೇಳ್ತಾನೆ. ಒಂದು ಕತ್ತಿಯನ್ನ ಹೊರಗೆ ತೆಗೆಯಲಾಗಿದೆ! ಜನರನ್ನ ಕೊಲ್ಲೋಕೆ ಒಂದು ಕತ್ತಿಯನ್ನ ಹೊರಗೆ ತೆಗೆಯಲಾಗಿದೆ. ಎಲ್ಲರನ್ನ ಸಾಯಿಸೋಕೆ, ಮಿಂಚಿನ ಹಾಗೆ ಹೊಳಿಯೋ ತರ ಮಾಡೋಕೆ ಅದನ್ನ ಉಜ್ಜಲಾಗಿದೆ. 29 ನಿನ್ನ ಬಗ್ಗೆ ಸುಳ್ಳು ದರ್ಶನಗಳನ್ನ ನೋಡಿ, ಸುಳ್ಳು ಕಣಿಗಳನ್ನ ಹೇಳಲಾಗಿದೆ. ಆದ್ರೂ ಯಾರ ದಿನ ಬಂದಿದೆಯೋ, ಯಾರು ಕೊನೆ ಶಿಕ್ಷೆಯನ್ನ ಅನುಭವಿಸೋ ಸಮಯ ಬಂದಿದೆಯೋ ಆ ದುಷ್ಟರು ಸತ್ತಾಗ ಅವರ ಹೆಣಗಳ ಮೇಲೆ ನಿನ್ನನ್ನ ಗುಡ್ಡೆ ಹಾಕಲಾಗುತ್ತೆ. 30 ಕತ್ತಿಯನ್ನ ಒಳಗೆ ಇಡು. ನಿನ್ನನ್ನ ಸೃಷ್ಟಿ ಮಾಡಿದ ಜಾಗದಲ್ಲಿ, ನೀನು ಹುಟ್ಟಿದ ದೇಶದಲ್ಲಿ ನಿನಗೆ ನಾನು ತೀರ್ಪು ಕೊಡ್ತೀನಿ. 31 ನಾನು ನನ್ನ ಕ್ರೋಧವನ್ನ ನಿನ್ನ ಮೇಲೆ ಸುರಿತೀನಿ. ನನ್ನ ರೋಷದ ಜ್ವಾಲೆಯನ್ನ ನಿನ್ನ ಮೇಲೆ ಊದ್ತೀನಿ. ನಾನು ನಿನ್ನನ್ನ ಕ್ರೂರಿಗಳ ಕೈಗೆ, ನಾಶಮಾಡೋದರಲ್ಲಿ ನಿಪುಣರಾಗಿರೋ ಜನರ ಕೈಗೆ ಒಪ್ಪಿಸ್ತೀನಿ.+ 32 ನೀನು ಬೆಂಕಿ ಉರಿಸೋ ಕಟ್ಟಿಗೆ ಆಗ್ತೀಯ.+ ನಿನ್ನ ರಕ್ತ ದೇಶದಲ್ಲಿ ಹರಿಯುತ್ತೆ. ನಿನ್ನನ್ನ ಇನ್ಮುಂದೆ ಯಾರೂ ನೆನಪಿಸಿಕೊಳ್ಳಲ್ಲ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.’”