ಯೆರೆಮೀಯ
25 ಅದು ಯೋಷೀಯನ ಮಗ ಯೆಹೂದದ ರಾಜ ಯೆಹೋಯಾಕೀಮ+ ಆಳ್ತಿದ್ದ ನಾಲ್ಕನೇ ವರ್ಷ ಆಗಿತ್ತು, ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಆಳ್ವಿಕೆಯ ಮೊದಲನೇ ವರ್ಷ ಆಗಿತ್ತು. ಆಗ ದೇವರು ಯೆಹೂದದ ಎಲ್ಲ ಜನ್ರ ಬಗ್ಗೆ ಯೆರೆಮೀಯನಿಗೆ ಒಂದು ಸಂದೇಶ ಕೊಟ್ಟನು. 2 ಪ್ರವಾದಿ ಯೆರೆಮೀಯ ಯೆಹೂದದ ಎಲ್ಲ ಜನ್ರಿಗೆ,* ಯೆರೂಸಲೇಮಿನ ಎಲ್ಲ ಜನ್ರಿಗೆ* ಹೇಳಿದ್ದೇನಂದ್ರೆ,
3 “ಆಮೋನನ ಮಗ ಯೆಹೂದದ ರಾಜ ಯೋಷೀಯನ+ ಆಳ್ವಿಕೆಯ 13ನೇ ವರ್ಷದಿಂದ ಇವತ್ತಿನ ತನಕ ಅಂದ್ರೆ 23 ವರ್ಷಗಳಿಂದ ಯೆಹೋವ ನನಗೆ ಸಂದೇಶ ಕೊಟ್ಟನು. ನಾನು ಅವುಗಳನ್ನ ನಿಮಗೆ ಪದೇಪದೇ* ಹೇಳ್ತಾ ಇದ್ದೆ. ಆದ್ರೆ ನೀವು ಅದನ್ನ ಕಿವಿಗೆ ಹಾಕೊಳ್ಳಲೇ ಇಲ್ಲ.+ 4 ಅಷ್ಟೇ ಅಲ್ಲ ಯೆಹೋವ ತನ್ನ ಸೇವಕರಾದ ಎಲ್ಲ ಪ್ರವಾದಿಗಳನ್ನ ನಿಮ್ಮ ಹತ್ರ ಪದೇಪದೇ* ಕಳಿಸ್ತಾ ಇದ್ದನು. ಆದ್ರೆ ನೀವು ಅವ್ರ ಮಾತನ್ನ ಕೇಳಲಿಲ್ಲ, ಅದನ್ನ ಕಿವಿಗೆ ಹಾಕೊಳ್ಳಲಿಲ್ಲ.+ 5 ಅವರು ನಿಮಗೆ ‘ಪ್ರತಿಯೊಬ್ರೂ ದಯವಿಟ್ಟು ಕೆಟ್ಟ ದಾರಿಯನ್ನ, ಕೆಟ್ಟ ಕೆಲಸಗಳನ್ನ ಬಿಟ್ಟು ವಾಪಸ್ ಬನ್ನಿ.+ ಆಗ ನಿಮಗೆ, ನಿಮ್ಮ ಪೂರ್ವಜರಿಗೆ ಯೆಹೋವ ತುಂಬ ಸಮಯದ ಹಿಂದೆ ಕೊಟ್ಟ ದೇಶದಲ್ಲೇ ತುಂಬ ವರ್ಷ ವಾಸ ಮಾಡ್ತಾ ಇರ್ತಿರ. 6 ಬೇರೆ ದೇವರುಗಳನ್ನ ಆರಾಧನೆ ಮಾಡಬೇಡಿ, ಅವುಗಳ ಸೇವೆ ಮಾಡಬೇಡಿ, ಅವುಗಳಿಗೆ ಅಡ್ಡಬೀಳಬೇಡಿ. ನಿಮ್ಮ ಕೈಕೆಲಸಗಳಿಂದ ನನ್ನನ್ನ ರೇಗಿಸಬೇಡಿ. ಇಲ್ಲದಿದ್ರೆ ನಾನು ನಿಮಗೆ ಶಿಕ್ಷೆ ಕೊಡ್ತೀನಿ’ ಅಂತ ಹೇಳ್ತಿದ್ರು.
7 ಯೆಹೋವ ಹೇಳೋದು ಏನಂದ್ರೆ ‘ಆದ್ರೆ ನೀವು ನನ್ನ ಮಾತು ಕೇಳದೆ ಮೂರ್ತಿಗಳನ್ನ ಮಾಡಿ ನನ್ನನ್ನ ರೇಗಿಸಿದ್ರಿ. ಹೀಗೆ ನಿಮ್ಮ ಮೇಲೆ ನೀವೇ ಕಷ್ಟ ತಂದ್ಕೊಂಡ್ರಿ.’+
8 ಹಾಗಾಗಿ ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ ‘“ನೀವು ನನ್ನ ಮಾತಿನ ಪ್ರಕಾರ ನಡಿಲಿಲ್ಲ. ಹಾಗಾಗಿ 9 ನಾನು ಉತ್ತರದ ಎಲ್ಲ ದೇಶಗಳನ್ನ,+ ಬಾಬೆಲಿನ ರಾಜನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನ* ಕರಿತಿದ್ದೀನಿ”+ ಅಂತ ಯೆಹೋವ ಹೇಳ್ತಾನೆ. ಆತನು ಹೇಳೋದು ಏನಂದ್ರೆ “ಅವರು ಈ ದೇಶದ ಮೇಲೆ,+ ಇಲ್ಲಿನ ಜನ್ರ ಮೇಲೆ, ಸುತ್ತಮುತ್ತ ಇದ್ದ ಈ ಎಲ್ಲ ಜನ್ರ ಮೇಲೆ ದಾಳಿ ಮಾಡೋ ತರ ಮಾಡ್ತೀನಿ.+ ಈ ದೇಶವನ್ನ ಸುತ್ತಮುತ್ತ ಇದ್ದ ಬೇರೆ ದೇಶದ ಜನ್ರನ್ನ ನಾಶ ಮಾಡ್ತೀನಿ. ಇವುಗಳ ಪಾಡು ನೋಡಿದ ಎಲ್ಲ ಜನ್ರ ಎದೆ ಡವಡವ ಅಂತ ಹೊಡ್ಕೊಳ್ಳುತ್ತೆ, ಸೀಟಿ ಹೊಡೆದು ಅವಮಾನಿಸ್ತಾರೆ, ಇವು ಸದಾಕಾಲ ಹಾಳುಬಿದ್ದಿರುತ್ತೆ. 10 ನಾನು ಇಲ್ಲಿನ ಸಂತೋಷ ಸಂಭ್ರಮದ ಸದ್ದನ್ನ,+ ಮದುಮಗ ಮದುಮಗಳ ಸ್ವರವನ್ನ+ ಬೀಸೋ ಕಲ್ಲಿನ ಸದ್ದನ್ನ ನಿಲ್ಲಿಸಿಬಿಡ್ತೀನಿ, ದೀಪದ ಬೆಳಕನ್ನ ಆರಿಸಿಬಿಡ್ತೀನಿ. 11 ಇಡೀ ದೇಶ ನಾಶ ಆಗಿಹೋಗುತ್ತೆ, ಅದನ್ನ ನೋಡೋರ ಎದೆ ಧಸಕ್ಕನ್ನುತ್ತೆ. ಈ ದೇಶಗಳು 70 ವರ್ಷ ಬಾಬೆಲಿನ ರಾಜನ ಸೇವೆ ಮಾಡಬೇಕಾಗುತ್ತೆ.”’+
12 ಯೆಹೋವ ಹೇಳೋದು ಏನಂದ್ರೆ ‘ಆದ್ರೆ 70 ವರ್ಷ ಮುಗಿದ ಮೇಲೆ+ ನಾನು ಬಾಬೆಲಿನ ರಾಜ, ಆ ದೇಶದವರು ಮಾಡಿದ ತಪ್ಪಿಗಾಗಿ ಅವ್ರಿಗೆ ಸೇಡು ತೀರಿಸ್ತೀನಿ.*+ ಅಷ್ಟೇ ಅಲ್ಲ ಕಸ್ದೀಯರ ದೇಶ ಯಾವಾಗ್ಲೂ ನಿರ್ಜನವಾದ ಬಂಜರು ಪ್ರದೇಶವಾಗಿ ಇರೋ ತರ ಮಾಡ್ತೀನಿ.+ 13 ನಾನು ಆ ದೇಶದ ವಿರುದ್ಧ ಹೇಳಿರೋ ನನ್ನ ಎಲ್ಲ ಮಾತುಗಳನ್ನ ನಿಜ ಮಾಡ್ತೀನಿ, ಈ ಪುಸ್ತಕದಲ್ಲಿ ಬರೆದಿರೋ ವಿಷ್ಯಗಳನ್ನ ಅಂದ್ರೆ ಎಲ್ಲ ದೇಶಗಳ ವಿರುದ್ಧ ಯೆರೆಮೀಯ ಭವಿಷ್ಯ ಹೇಳಿರೋ ಕಷ್ಟಗಳನ್ನ ಆ ದೇಶದ ಮೇಲೆ ತರ್ತಿನಿ. 14 ತುಂಬ ದೇಶಗಳು, ದೊಡ್ಡ ದೊಡ್ಡ ರಾಜರು+ ಕಸ್ದೀಯರನ್ನ ದಾಸರಾಗಿ ಮಾಡ್ಕೊಳ್ತಾರೆ.+ ಅವರು ಮಾಡೋ ಕೆಲಸಗಳಿಗೆ ತಕ್ಕ ಹಾಗೆ ಅವ್ರಿಗೆ ಸೇಡು ತೀರಿಸ್ತೀನಿ.’”+
15 ಇಸ್ರಾಯೇಲಿನ ದೇವರಾದ ಯೆಹೋವ ನನಗೆ “ಕೋಪ ಅನ್ನೋ ದ್ರಾಕ್ಷಾಮದ್ಯ ತುಂಬಿರೋ ಈ ಬಟ್ಟಲನ್ನ ನೀನು ನನ್ನ ಕೈಯಿಂದ ತಗೊ. ನಾನು ಯಾವ ದೇಶದ ಜನ್ರ ಹತ್ರ ನಿನ್ನನ್ನ ಕಳಿಸ್ತೀನೋ ಆ ಎಲ್ಲ ದೇಶದ ಜನ್ರಿಗೆ ಅದನ್ನ ಕುಡಿಸು. 16 ಅವರು ಅದನ್ನ ಕುಡಿದು ತೂರಾಡ್ತಾರೆ, ನಾನು ಅವ್ರ ಮೇಲೆ ಕತ್ತಿ ಕಳಿಸುವಾಗ ಅವರು ಹುಚ್ಚರ ತರ ನಡ್ಕೊಳ್ತಾರೆ”+ ಅಂದನು.
17 ಹಾಗಾಗಿ ನಾನು ಯೆಹೋವನ ಕೈಯಿಂದ ಆ ಬಟ್ಟಲನ್ನ ತಗೊಂಡೆ, ಯೆಹೋವ ನನ್ನನ್ನ ಯಾವ್ಯಾವ ದೇಶಗಳ ಹತ್ರ ಕಳಿಸಿದ್ನೋ ಆ ಎಲ್ಲ ದೇಶಗಳಿಗೆ ಆ ಬಟ್ಟಲಲ್ಲಿರೋದನ್ನ ಕುಡಿಸಿದೆ.+ 18 ಮೊದ್ಲು ನಾನು ಯೆರೂಸಲೇಮಿಗೆ, ಯೆಹೂದದ ಎಲ್ಲ ಪಟ್ಟಣಗಳಿಗೆ,+ ಅದ್ರ ರಾಜರಿಗೆ, ಅಧಿಕಾರಿಗಳಿಗೆ ಅದನ್ನ ಕುಡಿಸಿದೆ. ಅವ್ರಿಗೆ, ಆ ಪಟ್ಟಣಗಳಿಗೆ ನಾಶನ ಬರಬೇಕು, ಅದನ್ನ ನೋಡಿದವರ ಎದೆ ಡವಡವ ಅನ್ನಬೇಕು, ಅವರು ಸೀಟಿ ಹೊಡೆದು ಅವಮಾನ ಮಾಡಬೇಕು, ಶಾಪ ಹಾಕಬೇಕು ಅಂತಾನೇ ಹಾಗೆ ಮಾಡ್ದೆ.+ ಅದೆಲ್ಲ ಬೇಗ ನಡಿಯುತ್ತೆ. 19 ಆಮೇಲೆ ಈಜಿಪ್ಟಿನ ರಾಜ ಫರೋಹನಿಗೆ, ಅವನ ಸೇವಕರಿಗೆ, ಅಧಿಕಾರಿಗಳಿಗೆ, ಅವನ ಎಲ್ಲ ಜನ್ರಿಗೆ,+ 20 ಅವ್ರ ಮಧ್ಯ ವಾಸ ಮಾಡ್ತಿದ್ದ ಎಲ್ಲ ವಿದೇಶಿಯರಿಗೆ ಅದನ್ನ ಕುಡಿಸಿದೆ. ಆಮೇಲೆ ಊಚ್ ದೇಶದ ಎಲ್ಲ ರಾಜರಿಗೆ, ಫಿಲಿಷ್ಟಿಯರ ದೇಶದ ಎಲ್ಲ ರಾಜರಿಗೆ+ ಅಂದ್ರೆ ಅಷ್ಕೆಲೋನಿನ+ ರಾಜ, ಗಾಜಾದ ರಾಜ, ಎಕ್ರೋನಿನ ರಾಜ, ಅಷ್ಡೋದಿನಲ್ಲಿ ಉಳಿದ ಜನ್ರ ರಾಜನಿಗೆ ಅದನ್ನ ಕುಡಿಸಿದೆ. 21 ಎದೋಮಿಗೆ,+ ಮೋವಾಬಿಗೆ,+ ಅಮ್ಮೋನಿಯರಿಗೆ,+ 22 ಆಮೇಲೆ ತೂರಿನ ಎಲ್ಲ ರಾಜರಿಗೆ, ಸೀದೋನಿನ ಎಲ್ಲ ರಾಜರಿಗೆ,+ ಸಮುದ್ರದಲ್ಲಿರೋ ದ್ವೀಪದ ರಾಜರಿಗೆ ಅದನ್ನ ಕುಡಿಸಿದೆ. 23 ಆಮೇಲೆ ದೆದಾನಿಗೆ,+ ತೇಮಾಗೆ, ಬೂಜ್ಗೆ, ಹಣೆಯ ಬದಿಗಳನ್ನ ಬೋಳಿಸ್ಕೊಂಡಿರೋ ಎಲ್ರಿಗೆ ಕುಡಿಸಿದೆ.+ 24 ಆಮೇಲೆ ಅರೇಬಿಯರ ಎಲ್ಲ ರಾಜರಿಗೆ,+ ಕಾಡಲ್ಲಿ ವಾಸಿಸ್ತಿರೋ ಸಕಲ ವಿದೇಶಿಯರ ಎಲ್ಲ ರಾಜರಿಗೆ ಕುಡಿಸಿದೆ. 25 ಜಿಮ್ರಿಯ ಎಲ್ಲ ರಾಜರಿಗೆ, ಏಲಾಮಿನ ಎಲ್ಲ ರಾಜರಿಗೆ,+ ಮೇದ್ಯರ ಎಲ್ಲ ರಾಜರಿಗೆ+ ಕುಡಿಸಿದೆ. 26 ಅಷ್ಟೇ ಅಲ್ಲ ಹತ್ರದಲ್ಲಿ ದೂರದಲ್ಲಿ ಇರೋ ಉತ್ತರದ ಎಲ್ಲ ರಾಜರಿಗೆ ಒಬ್ರಾದ ಮೇಲೆ ಒಬ್ರಿಗೆ ಅದನ್ನ ಕುಡಿಸಿದೆ, ಭೂಮಿ ಮೇಲಿರೋ ಬೇರೆಲ್ಲ ಸಾಮ್ರಾಜ್ಯಗಳಿಗೆ ಕುಡಿಸಿದೆ. ಇವ್ರೆಲ್ಲ ಆದ್ಮೇಲೆ ಶೇಷಕಿನ*+ ರಾಜ ಅದನ್ನ ಕುಡಿತಾನೆ.
27 “ಆಮೇಲೆ ನೀನು ಅವ್ರಿಗೆ ‘ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಹೀಗೆ ಹೇಳ್ತಾನೆ “ಕುಡಿರಿ, ಮತ್ತರಾಗುವಷ್ಟು ಕುಡಿರಿ, ವಾಂತಿ ಮಾಡ್ಕೊಳ್ಳಿ, ಬೀಳಿ, ಏಳಬೇಡಿ.+ ಯಾಕಂದ್ರೆ ನಾನು ನಿಮ್ಮ ಮೇಲೆ ಕತ್ತಿ ಕಳಿಸ್ತಾ ಇದ್ದೀನಿ”’ ಅಂತೇಳು. 28 ಅವರು ನಿನ್ನ ಕೈಯಿಂದ ಬಟ್ಟಲನ್ನ ತಗೊಂಡು ಕುಡಿಯದಿದ್ರೆ ನೀನು ಅವ್ರಿಗೆ ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ “ನೀವು ಇದನ್ನ ಕುಡಿಲೇಬೇಕು! 29 ನೋಡಿ, ನನ್ನ ಹೆಸ್ರಿಗಾಗಿ ಇರೋ ಪಟ್ಟಣದ ಮೇಲೆನೇ ಮೊದ್ಲು ಕಷ್ಟ ತರ್ತಿನಿ+ ಅಂದ್ಮೇಲೆ ನಿಮಗೆ ಶಿಕ್ಷೆ ಕೊಡದೆ ಸುಮ್ಮನೆ ಬಿಡ್ತೀನಾ?”’+
‘ನೀವಂತೂ ಶಿಕ್ಷೆಯಿಂದ ತಪ್ಪಿಸಿಕೊಳ್ಳೋಕೆ ಆಗೋದೇ ಇಲ್ಲ. ಯಾಕಂದ್ರೆ ಭೂಮಿಯ ಎಲ್ಲ ಜನ್ರ ವಿರುದ್ಧ ನಾನು ಒಂದು ಕತ್ತಿ ಕಳಿಸ್ತೀನಿ’ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಾನೆ.
30 ನೀನು ಅವ್ರಿಗೆ ಈ ಎಲ್ಲ ಭವಿಷ್ಯವಾಣಿಗಳನ್ನ ಹೇಳಬೇಕು
‘ಯೆಹೋವ ಎತ್ತರ ಸ್ಥಳದಿಂದ ಗರ್ಜಿಸ್ತಾನೆ,
ಆತನ ಪವಿತ್ರ ನಿವಾಸದಿಂದ ಆತನ ಸ್ವರ ಜೋರಾಗಿ ಕೇಳಿಸುತ್ತೆ.
ಭೂಮಿಯಲ್ಲಿರೋ ತನ್ನ ನಿವಾಸಸ್ಥಾನದ ವಿರುದ್ಧ ಆತನು ಜೋರಾಗಿ ಗರ್ಜಿಸ್ತಾನೆ.
ದ್ರಾಕ್ಷಿತೊಟ್ಟಿಯಲ್ಲಿ ದ್ರಾಕ್ಷಿಗಳನ್ನ ತುಳಿಯೋರ ಹಾಗೆ ಧ್ವನಿಯೆತ್ತಿ ಕೂಗ್ತಾನೆ,
ಭೂಮಿಯ ಎಲ್ಲ ಜನ್ರ ಮೇಲೆ ಜಯ ಪಡೆದು ವಿಜಯೋತ್ಸವದಿಂದ ಹಾಡ್ತಾನೆ.’
31 ಯೆಹೋವ ಹೇಳೋದು ಏನಂದ್ರೆ
‘ಒಂದು ಸದ್ದು ಭೂಮಿಯ ಮೂಲೆಮೂಲೆಯಲ್ಲೂ ಪ್ರತಿಧ್ವನಿಸುತ್ತೆ.
ಯಾಕಂದ್ರೆ ದೇಶಗಳ ಮೇಲೆ ಯೆಹೋವನಿಗೆ ಒಂದು ಮೊಕದ್ದಮೆ ಇದೆ.
ಆತನೇ ಖುದ್ದಾಗಿ ಎಲ್ಲ ಮಾನವರಿಗೆ ತೀರ್ಪು ಮಾಡ್ತಾನೆ.+
ಆತನು ಕೆಟ್ಟವರನ್ನ ಕತ್ತಿಯಿಂದ ಕೊಲ್ತಾನೆ.’
ಅಷ್ಟೇ ಅಲ್ಲ ಭೂಮಿಯ ತುಂಬ ದೂರ ಇರೋ ಜಾಗಗಳಿಂದ ಒಂದು ಭಯಂಕರ ಚಂಡಮಾರುತ ಬರುತ್ತೆ.+
33 ಆ ದಿನದಲ್ಲಿ ಯೆಹೋವನಿಂದ ಸತ್ತವರು ಭೂಮಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ಬಿದ್ದಿರ್ತಾರೆ. ಅವರಿಗಾಗಿ ಯಾರೂ ಎದೆ ಬಡ್ಕೊಳ್ಳಲ್ಲ, ಅವರ ಶವಗಳನ್ನ ಯಾರೂ ಒಟ್ಟುಗೂಡಿಸಲ್ಲ, ಸಮಾಧಿನೂ ಮಾಡಲ್ಲ. ಅವರು ಭೂಮಿ ಮೇಲೆ ಗೊಬ್ಬರ ಆಗ್ತಾರೆ.’
34 ಕುರುಬರೇ, ಗೋಳಾಡಿ, ಅರಚಿ!
ಕುರಿಗಳಲ್ಲಿ ಪ್ರಧಾನರೇ, ಬೂದಿಯಲ್ಲಿ ಬಿದ್ದು ಹೊರಳಾಡಿ,
ಯಾಕಂದ್ರೆ ನಿಮ್ಮನ್ನ ಕೊಲ್ಲೋ ಕಾಲ, ನಿಮ್ಮನ್ನ ಚದರಿಸಿಬಿಡೋ ಕಾಲ ಬಂದಿದೆ.
ನೀವು ಬೆಲೆಬಾಳೋ ಮಣ್ಣಿನ ಪಾತ್ರೆ ತರ ಬಿದ್ದು ಚೂರುಚೂರಾಗ್ತೀರ!
35 ಕುರುಬರಿಗೆ ಓಡಿಹೋಗಿ ಬಚ್ಚಿಟ್ಕೊಳ್ಳೋಕೆ ಯಾವ ಜಾಗನೂ ಇಲ್ಲ,
ಕುರಿಗಳ ಪ್ರಧಾನರಿಗೆ ಜೀವ ಉಳಿಸ್ಕೊಳ್ಳೋಕೆ ಆಗೋದೇ ಇಲ್ಲ.
36 ಕುರುಬರ ಕೂಗಾಟವನ್ನ,
ಕುರಿಗಳ ಪ್ರಧಾನರ ಗೋಳಾಟವನ್ನ ಕೇಳಿ.
ಯಾಕಂದ್ರೆ ಯೆಹೋವ ಅವ್ರ ಹುಲ್ಲುಗಾವಲನ್ನ ನಾಶ ಮಾಡ್ತಿದ್ದಾನೆ.
37 ಅವರು ನೆಮ್ಮದಿಯಿಂದ ವಾಸ ಮಾಡೋ ಜಾಗಗಳಲ್ಲಿ ಯಾರೂ ವಾಸ ಇಲ್ಲ,
ಯಾಕಂದ್ರೆ ಯೆಹೋವನ ಕೋಪ ಹೊತ್ತಿ ಉರಿದಿದೆ.