ಯೋಹಾನ
9 ಯೇಸು ಹೋಗ್ತಿದ್ದಾಗ ಹುಟ್ಟು ಕುರುಡನನ್ನ ನೋಡಿದನು. 2 ಶಿಷ್ಯರು ಯೇಸುಗೆ “ರಬ್ಬೀ,+ ಯಾರು ಪಾಪಮಾಡಿದ್ದಕ್ಕೆ ಇವನು ಕುರುಡನಾಗಿ ಹುಟ್ಟಿದ್ದಾನೆ? ಇವನೇ ಪಾಪ ಮಾಡಿದ್ನಾ? ಅಥವಾ ಇವನ ಅಪ್ಪಅಮ್ಮನಾ?” ಅಂತ ಕೇಳಿದ್ರು. 3 ಅದಕ್ಕೆ ಯೇಸು “ಇವನು ಪಾಪ ಮಾಡಿದ್ದಕ್ಕಾಗಲಿ, ಇವನ ಅಪ್ಪಅಮ್ಮ ಪಾಪ ಮಾಡಿದ್ದಕ್ಕಾಗಲಿ ಇವನು ಕುರುಡನಾಗಿಲ್ಲ. ದೇವ್ರಿಗೆ ಎಷ್ಟು ಶಕ್ತಿ ಇದೆ ಅಂತ ಜನ ಅರ್ಥಮಾಡ್ಕೊಳ್ಳೋಕೆ ಈ ತರ ಆಗಿದೆ ಅಷ್ಟೇ.+ 4 ನನ್ನನ್ನ ಕಳಿಸಿದ ದೇವ್ರ ಕೆಲಸಗಳನ್ನ ಬೆಳಕಿರುವಾಗಲೇ ಮಾಡ್ಬೇಕು.+ ರಾತ್ರಿ ಆದಾಗ ನಾನಿರಲ್ಲ, ಆಗ ಯಾರಿಗೂ ಕೆಲಸ ಮಾಡೋಕೂ ಆಗಲ್ಲ. 5 ನಾನು ಎಲ್ಲಿ ತನಕ ಲೋಕದಲ್ಲಿ ಇರ್ತಿನೋ ಅಲ್ಲಿ ತನಕ ನಾನೇ ಲೋಕದ ಬೆಳಕಾಗಿ ಇರ್ತಿನಿ” ಅಂದನು.+ 6 ಇದನ್ನ ಹೇಳಿದ ಮೇಲೆ ಯೇಸು ನೆಲದ ಮೇಲೆ ಉಗುಳಿ, ಮಣ್ಣನ್ನ ಕೆಸರು ಮಾಡಿ ಆ ಕುರುಡನ ಕಣ್ಣಿಗೆ ಹಚ್ಚಿದನು.+ 7 “ಹೋಗಿ ಸಿಲೋವ (ಅಂದ್ರೆ ‘ಉಕ್ಕೋ ನೀರು’ ಅಂತರ್ಥ) ಕೊಳದಲ್ಲಿ ತೊಳ್ಕೊ” ಅಂದನು. ಅವನು ಹೋಗಿ ತೊಳ್ಕೊಂಡ ತಕ್ಷಣ ಅವನಿಗೆ ದೃಷ್ಟಿ ಬಂತು.+
8 ಈ ಕುರುಡ ಮುಂಚೆ ಭಿಕ್ಷೆ ಬೇಡ್ತಿದ್ದಾಗ ಅವನನ್ನ ನೋಡಿದ್ದ ಅಕ್ಕಪಕ್ಕದ ಕೆಲವರು “ಇವನು ಭಿಕ್ಷುಕ ಅಲ್ವಾ?” ಅಂತ ಮಾತಾಡ್ಕೊಂಡ್ರು. 9 ಕೆಲವರು “ಹೌದು ಅವನೇ ಇವನು” ಅಂದ್ರೆ ಇನ್ನೂ ಕೆಲವರು “ಅಲ್ಲ, ಇವನು ಬೇರೆ ಯಾರೋ. ಅವನ ತರ ಕಾಣ್ತಾನೆ” ಅಂತ ಹೇಳ್ತಿದ್ರು. ಆ ವ್ಯಕ್ತಿ ಮಾತ್ರ “ನಾನೇ ಅವನು” ಅಂತ ಹೇಳ್ತಾ ಇದ್ದ. 10 ಜನ “ನಿನಗೆ ಕಣ್ಣು ಹೇಗೆ ಬಂತು?” ಅಂತ ಕೇಳಿದ್ರು. 11 ಅದಕ್ಕೆ ಅವನು “ಯೇಸು ಅನ್ನೋನು ಸ್ವಲ್ಪ ಕೆಸರು ಮಾಡಿ ನನ್ನ ಕಣ್ಣಿಗೆ ಹಚ್ಚಿ ‘ಸಿಲೋವದಲ್ಲಿ ತೊಳ್ಕೊ’ ಅಂದನು.+ ಹೋಗಿ ತೊಳ್ಕೊಂಡೆ. ಆಗ ನಂಗೆ ಕಣ್ಣು ಬಂತು” ಅಂದ. 12 ಅವರು “ಅವನು ಎಲ್ಲಿದ್ದಾನೆ?” ಅಂತ ಕೇಳಿದ್ರು. ಅದಕ್ಕೆ “ನಂಗೊತ್ತಿಲ್ಲ” ಅಂದ.
13 ಆಗ ಜನ್ರೆಲ್ಲ ಅವನನ್ನ ಫರಿಸಾಯರ ಹತ್ರ ಕರ್ಕೊಂಡು ಹೋದ್ರು. 14 ಅಂದಹಾಗೆ ಯೇಸು ಕೆಸರನ್ನ ಮಾಡಿ ಅವನಿಗೆ ಕಣ್ಣು+ ಬರಿಸಿದ್ದು ಸಬ್ಬತ್ ದಿನದಲ್ಲಿ.+ 15 ಹಾಗಾಗಿ ಫರಿಸಾಯರು ಸಹ ಅವನನ್ನ ಹಿಡ್ಕೊಂಡು ನಿನಗೆ ಕಣ್ಣು ಹೇಗೆ ಬಂತು ಅಂತ ವಿಚಾರಿಸೋಕೆ ಶುರುಮಾಡಿದ್ರು. ಅದಕ್ಕೆ ಅವನು “ಆತನು ನನ್ನ ಕಣ್ಣಿನ ಮೇಲೆ ಕೆಸರು ಹಚ್ಚಿದನು. ನಾನು ತೊಳ್ಕೊಂಡೆ, ನಂಗೆ ಕಣ್ಣು ಬಂತು” ಅಂದ. 16 ಆಗ ಕೆಲವು ಫರಿಸಾಯರು “ಆ ಮನುಷ್ಯ ಖಂಡಿತ ದೇವರಿಂದ ಬಂದವನಲ್ಲ. ಯಾಕಂದ್ರೆ ಅವನು ಸಬ್ಬತ್+ ನಿಯಮದ ಪ್ರಕಾರ ನಡಿತಾ ಇಲ್ಲ” ಅಂದ್ರು. ಇನ್ನು ಕೆಲವರು “ಅವನೊಬ್ಬ ಪಾಪಿಯಾಗಿದ್ರೆ ಇಂಥ ಅದ್ಭುತ ಮಾಡೋಕೆ ಅದು ಹೇಗೆ ಸಾಧ್ಯ?” ಅಂದ್ರು.+ ಈ ತರ ಅವ್ರಲ್ಲೇ ಕಿತ್ತಾಟ ಶುರು ಆಯ್ತು.+ 17 ಕುರುಡನಾಗಿದ್ದ ಆ ವ್ಯಕ್ತಿಗೆ “ನಿನಗೆ ಕಣ್ಣು ಬರೋ ಹಾಗೆ ಮಾಡಿದ್ನಲ್ಲಾ, ಅವನು ಯಾರು? ನಿನಗೇನು ಅನಿಸುತ್ತೆ?” ಅಂತ ಕೇಳಿದ್ರು. ಅವನು “ಆತನೊಬ್ಬ ಪ್ರವಾದಿ” ಅಂದ.
18 ಆದ್ರೆ ಆ ಯೆಹೂದಿ ನಾಯಕರಿಗೆ ಇವನು ನಿಜವಾಗ್ಲೂ ಕುರುಡನಾಗಿದ್ದನಾ? ಇವನಿಗೆ ಈಗ ಕಣ್ಣು ಬಂದಿದ್ಯಾ ಅನ್ನೋ ಸಂಶಯ ಬಂತು. ಅವರು ಅವನ ಅಪ್ಪಅಮ್ಮನನ್ನ ಕರೆಸಿದ್ರು. 19 ಅವ್ರಿಗೆ “ಇವನು ನಿಮ್ಮ ಮಗನೇನಾ? ಇವನು ಹುಟ್ಟಿನಿಂದಾನೇ ಕುರುಡನಾ? ಹಾಗಾದ್ರೆ ಈಗ ಇವನಿಗೆ ಹೇಗೆ ಕಣ್ಣು ಬಂತು?” ಅಂತ ಕೇಳಿದ್ರು. 20 ಅವರು “ಇವನು ನಮ್ಮ ಮಗಾನೇ, ಇವನು ಹುಟ್ಟಿನಿಂದಾನೇ ಕುರುಡ. 21 ಆದ್ರೆ ಈಗ ಹೇಗೆ ಕಣ್ಣು ಬಂತು ಅಂತ ನಮಗೂ ಗೊತ್ತಿಲ್ಲ. ಅವನಿಗೆ ಕಣ್ಣು ಬರೋ ತರ ಮಾಡಿದ್ದು ಯಾರಂತಾನೂ ನಮಗೆ ಗೊತ್ತಿಲ್ಲ. ಅವನನ್ನೇ ಕೇಳಿ. ಅವನೇನು ಚಿಕ್ಕ ಹುಡುಗ ಅಲ್ಲ. ಅವನಿಗೆ ಮಾತಾಡೋಕೆ ಬರುತ್ತೆ” ಅಂದ್ರು. 22 ಅಪ್ಪಅಮ್ಮ ಯೆಹೂದ್ಯರಿಗೆ ಹೆದ್ರಿ ಹೀಗೆ ಹೇಳಿದ್ರು.+ ಯಾಕಂದ್ರೆ ಯಾರಾದ್ರೂ ಯೇಸುವನ್ನ ಕ್ರಿಸ್ತ ಅಂತ ಒಪ್ಕೊಂಡ್ರೆ ಅವ್ರನ್ನ ಸಭಾಮಂದಿರದಿಂದ ಬಹಿಷ್ಕಾರ ಮಾಡಬೇಕು ಅಂತ ಯೆಹೂದ್ಯರು ತೀರ್ಮಾನಿಸಿದ್ರು.+ 23 ಅದಕ್ಕೇ ಅವನ ಅಪ್ಪಅಮ್ಮ “ಅವನೇನು ಚಿಕ್ಕ ಹುಡುಗ ಅಲ್ಲ. ಅವನನ್ನೇ ಕೇಳಿ” ಅಂತ ಹೇಳಿದ್ರು.
24 ಆಗ ಆ ನಾಯಕರು ಅವನನ್ನ ಎರಡನೇ ಸಲ ಕರೆದು “ದೇವರ ಮುಂದೆ ನಿಜ ಹೇಳು. ಯಾಕಂದ್ರೆ ಆತನೊಬ್ಬ ಪಾಪಿ ಅಂತ ನಮಗೆ ಚೆನ್ನಾಗಿ ಗೊತ್ತು” ಅಂದ್ರು. 25 ಅದಕ್ಕೆ “ಆತನು ಪಾಪಿನಾ ಅಲ್ವಾ ಅಂತ ನಂಗೊತ್ತಿಲ್ಲ. ನಾನು ಕುರುಡನಾಗಿದ್ದೆ, ಈಗ ನನಗೆ ಕಣ್ಣು ಕಾಣ್ತಿದೆ ಅಂತ ನಂಗೊತ್ತು” ಅಂದ. 26 ಅವರು “ಆತನು ನಿನಗೇನು ಮಾಡಿದನು? ನಿನಗೆ ಕಣ್ಣು ಕಾಣೋ ತರ ಹೇಗೆ ಮಾಡಿದನು?” ಅಂತ ಕೇಳಿದ್ರು. 27 ಅದಕ್ಕೆ “ಅದನ್ನ ನಾನು ಆಗಲೇ ಹೇಳ್ದೆ. ಆದ್ರೆ ನೀವು ಕೇಳಿಸ್ಕೊಳ್ಳಲಿಲ್ಲ. ಈಗ ಮತ್ತೆ ಯಾಕೆ ಕೇಳ್ತಿದ್ದೀರಾ? ನೀವೂ ಆತನ ಶಿಷ್ಯರಾಗಬೇಕಂತ ಇದ್ದೀರಾ?” ಅಂತ ಕೇಳಿದ. 28 ಅವನನ್ನ ಕೀಳಾಗಿ ನೋಡ್ತಾ “ನೀನು ಆ ಮನುಷ್ಯನ ಶಿಷ್ಯ, ನಾವು ಮೋಶೆಯ ಶಿಷ್ಯರು. 29 ಮೋಶೆ ಜೊತೆ ದೇವರೇ ಮಾತಾಡಿದ ಅಂತ ನಮಗೆ ಗೊತ್ತು. ಆದ್ರೆ ಈ ಮನುಷ್ಯನನ್ನ ಕಳಿಸಿದ್ದು ದೇವರಲ್ಲ” ಅಂದ್ರು. 30 ಅದಕ್ಕವನು “ಆತನನ್ನ ಕಳಿಸಿದ್ದು ದೇವರಲ್ಲ ಅಂತೀರ. ಆದ್ರೆ ಆತನು ನನಗೆ ನಿಜವಾಗ್ಲೂ ಕಣ್ಣು ಬರೋ ತರ ಮಾಡಿದ್ದಾನೆ. ನನಗೆ ಆಶ್ಚರ್ಯ ಆಗ್ತಿದೆ. 31 ಪಾಪಿಗಳ ಪ್ರಾರ್ಥನೆ ದೇವರು ಕೇಳಲ್ಲ ಅಂತ ಎಲ್ರಿಗೂ ಗೊತ್ತು.+ ಆದ್ರೆ ದೇವರಿಗೆ ಭಯಪಡ್ತಾ, ಆತನ ಇಷ್ಟದ ಹಾಗೆ ನಡಿಯೋ ಜನ್ರ ಪ್ರಾರ್ಥನೆ ಖಂಡಿತ ಕೇಳ್ತಾನೆ.+ 32 ಹುಟ್ಟು ಕುರುಡನಿಗೆ ಕಣ್ಣು ಬರೋ ತರ ಮಾಡಿದ್ದು ನಾನು ಯಾವತ್ತೂ ಕೇಳಿಸ್ಕೊಂಡಿಲ್ಲ. 33 ಆ ಮನುಷ್ಯನನ್ನ ದೇವರು ಕಳಿಸದೇ ಹೋಗಿದ್ರೆ ಆತನಿಂದ ಈ ಅದ್ಭುತ ಮಾಡೋಕೆ ಆಗ್ತಾನೇ ಇರಲಿಲ್ಲ” ಅಂದ.+ 34 ಅದಕ್ಕೆ ಅವರು “ನೀನು ಹುಟ್ಟುವಾಗಲೇ ದೊಡ್ಡ ಪಾಪಿ. ನಮಗೆ ಕಲಿಸೋಕೆ ಬಂದಿದ್ದೀಯಾ?” ಅಂತ ಹೇಳಿ ಅವನನ್ನ ಹೊರಗೆ ಹಾಕಿದ್ರು.+
35 ಈ ವಿಷ್ಯ ಯೇಸುಗೆ ಗೊತ್ತಾಯ್ತು. ಒಂದಿನ ಯೇಸುಗೆ ಅವನು ಸಿಕ್ಕಿದಾಗ “ನೀನು ಮನುಷ್ಯಕುಮಾರನ ಮೇಲೆ ನಂಬಿಕೆ ಇಡ್ತೀಯಾ?” ಅಂತ ಕೇಳಿದನು. 36 ಅದಕ್ಕೆ ಅವನು “ಸ್ವಾಮಿ, ಆತನು ಯಾರಂತ ಹೇಳು, ನಾನು ಆತನ ಮೇಲೆ ನಂಬಿಕೆ ಇಡ್ತೀನಿ” ಅಂದ. 37 ಆಗ ಯೇಸು “ನೀನು ಅವನನ್ನ ನೋಡಿದ್ದೀಯ. ನಿನ್ನ ಜೊತೆ ಮಾತಾಡ್ತಾ ಇರೋ ನಾನೇ ಅವನು” ಅಂದನು. 38 ಅದಕ್ಕೆ ಅವನು “ಪ್ರಭು, ನಾನು ನಿನ್ನ ಮೇಲೆ ನಂಬಿಕೆ ಇಡ್ತೀನಿ” ಅಂತ ಹೇಳಿ ಮಂಡಿಯೂರಿದ. 39 ಆಮೇಲೆ ಯೇಸು “ದೇವರ ಈ ತೀರ್ಪನ್ನ ಕೊಡಬೇಕಂತಾನೇ ನಾನು ಲೋಕಕ್ಕೆ ಬಂದೆ. ಆ ತೀರ್ಪು ಏನಂದ್ರೆ ಕುರುಡರಿಗೆ ಕಣ್ಣು ಬರುತ್ತೆ+ ಮತ್ತು ಕಣ್ಣು ಇರೋರು ಕುರುಡರಾಗ್ತಾರೆ” ಅಂದನು.+ 40 ಅಲ್ಲಿದ್ದ ಫರಿಸಾಯರು ಆ ಮಾತನ್ನ ಕೇಳಿ “ನಾವು ಸಹ ಕುರುಡರಾ?” ಅಂತ ಕೇಳಿದ್ರು. 41 ಅದಕ್ಕೆ ಯೇಸು “ನೀವು ಕುರುಡರಾಗಿದ್ರೆ ನಿಮ್ಮಲ್ಲಿ ಪಾಪ ಇರ್ತಿರಲಿಲ್ಲ. ಆದ್ರೆ ‘ನಮಗೆ ಕಣ್ಣು ಕಾಣುತ್ತೆ’ ಅಂತ ಹೇಳೋದ್ರಿಂದ ನಿಮ್ಮ ಪಾಪಕ್ಕೆ ಕ್ಷಮೆ ಇಲ್ಲ” ಅಂದನು.+