ಅಪೊಸ್ತಲರ ಕಾರ್ಯ
4 ಪೇತ್ರ ಮತ್ತು ಯೋಹಾನ ಜನ್ರ ಜೊತೆ ಮಾತಾಡ್ತಾ ಇದ್ದಾಗ ದೇವಾಲಯದ ಮುಖ್ಯಸ್ಥ, ಪುರೋಹಿತರು ಮತ್ತು ಸದ್ದುಕಾಯರು+ ಅಲ್ಲಿಗೆ ಬಂದ್ರು. 2 ಆ ಅಪೊಸ್ತಲರು ಜನ್ರಿಗೆ ಕಲಿಸೋದನ್ನ, ಯೇಸುಗೆ ಮತ್ತೆ ಜೀವ ಬಂತು ಅಂತ ಹೇಳೋದನ್ನ ಕೇಳಿ ಅವ್ರಿಗೆ ತುಂಬ ಕೋಪ ಬಂತು.+ 3 ಆದ್ರೆ ಈಗಾಗಲೇ ಸಂಜೆ ಆಗಿದ್ರಿಂದ ಅವರು ಅಪೊಸ್ತಲರನ್ನ ಹಿಡಿದು ಮಾರನೇ ದಿನದ ತನಕ ಬಂಧನದಲ್ಲಿ+ ಇಟ್ರು. 4 ಆದ್ರೂ ಅಪೊಸ್ತಲರು ಕಲಿಸಿದ್ದನ್ನ ಕೇಳಿದವ್ರಲ್ಲಿ ತುಂಬ ಜನ ಯೇಸು ಮೇಲೆ ನಂಬಿಕೆ ಇಟ್ರು. ಹೀಗೆ ಶಿಷ್ಯರಲ್ಲಿ ಗಂಡಸರ ಸಂಖ್ಯೆನೇ ಸುಮಾರು 5,000ಕ್ಕೆ ಮುಟ್ಟಿತು.+
5 ಮಾರನೇ ದಿನ ಯೆಹೂದಿ ನಾಯಕರು, ಹಿರಿಯರು, ಪಂಡಿತರು ಯೆರೂಸಲೇಮಲ್ಲಿ ಒಟ್ಟುಸೇರಿದ್ರು. 6 ಅವ್ರ ಜೊತೆ ಮುಖ್ಯ ಪುರೋಹಿತ ಅನ್ನ,+ ಕಾಯಫ,+ ಯೋಹಾನ, ಅಲೆಕ್ಸಾಂದ್ರ, ಅಷ್ಟೇ ಅಲ್ಲ ಮುಖ್ಯ ಪುರೋಹಿತನ ಸಂಬಂಧಿಕರೂ ಇದ್ರು. 7 ಅವರು ಪೇತ್ರ ಮತ್ತು ಯೋಹಾನನನ್ನ ಮಧ್ಯದಲ್ಲಿ ನಿಲ್ಲಿಸಿ “ಯಾವ ಅಧಿಕಾರದಿಂದ, ಯಾರ ಹೆಸ್ರಿನ ಮೇಲೆ ನೀವು ಇದನ್ನೆಲ್ಲಾ ಮಾಡ್ತಾ ಇದ್ದೀರಾ?” ಅಂತ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ರು. 8 ಆಗ ಪೇತ್ರ ಪವಿತ್ರಶಕ್ತಿಯ+ ಸಹಾಯದಿಂದ ಅವ್ರಿಗೆ ಹೀಗೆ ಹೇಳಿದ
“ಜನ್ರ ನಾಯಕರೇ, ಹಿರಿಯರೇ, 9 ಆ ಕುಂಟ+ ಚೆನ್ನಾಗಿ ಆಗಿದ್ದರ ಬಗ್ಗೆ ನೀವು ನಮ್ಮ ಹತ್ರ ಪ್ರಶ್ನೆ ಕೇಳ್ತಾ ಇದ್ದೀರಾ? ಅವನಿಗೆ ಹೇಗೆ ವಾಸಿ ಆಯ್ತು ಅಂತ ತಿಳ್ಕೊಬೇಕು ಅಂತ ಇದ್ಯಾ? 10 ಹಾಗಿರೋದಾದ್ರೆ ನಿಮಗೂ ಎಲ್ಲಾ ಇಸ್ರಾಯೇಲ್ ಜನ್ರಿಗೂ ಈ ವಿಷ್ಯ ಗೊತ್ತಿರಲಿ. ಅದೇನಂದ್ರೆ ನಜರೇತಿನ+ ಯೇಸು ಕ್ರಿಸ್ತನ ಹೆಸ್ರಲ್ಲೇ ನಿಮ್ಮ ಮುಂದೆ ಆ ಕುಂಟ ಆರೋಗ್ಯವಾಗಿ ನಿಂತಿದ್ದಾನೆ. ಆ ಯೇಸು ಕ್ರಿಸ್ತನನ್ನೇ ನೀವು ಕಂಬಕ್ಕೆ+ ಜಡಿದು ಕೊಂದ್ರಿ. ಆದ್ರೆ ದೇವರು ಆತನಿಗೆ ಮತ್ತೆ ಜೀವ ಕೊಟ್ಟನು.+ 11 ‘ಕಟ್ಟುವವರು ಯಾವ ಕಲ್ಲನ್ನ ಬೇಡ ಅಂತ ಬಿಟ್ರೋ ಅದೇ ಕಲ್ಲು ಮುಖ್ಯವಾದ ಮೂಲೆಗಲ್ಲಾಯ್ತು.’+ ಆ ಕಲ್ಲೇ ಯೇಸು. 12 ಅಷ್ಟೇ ಅಲ್ಲ ಬೇರೆ ಯಾರಿಂದ್ಲೂ ರಕ್ಷಣೆ ಬರಲ್ಲ. ಆತನ ಹೆಸ್ರಿಂದನೇ ನಮಗೆ ರಕ್ಷಣೆ ಸಿಗುತ್ತೆ. ಆಕಾಶದ ಕೆಳಗೆ ಮನುಷ್ಯರಿಗೆ ಕೊಟ್ಟಿರೋ ಬೇರೆ ಯಾವ ಹೆಸ್ರಿಂದನೂ+ ನಮಗೆ ರಕ್ಷಣೆ ಸಿಗಲ್ಲ.”+
13 ಪೇತ್ರ ಮತ್ತು ಯೋಹಾನನ ಧೈರ್ಯ ನೋಡಿ, ಅದ್ರಲ್ಲೂ ಅವರು ಅಷ್ಟೇನೂ ಓದಿಲ್ಲದ ಸಾಮಾನ್ಯ ಜನ+ ಅಂತ ತಿಳಿದು ಅವರು ಆಶ್ಚರ್ಯಪಟ್ರು. ಅವರಿಬ್ರು ಯೇಸು ಜೊತೆ ಇದ್ರು ಅಂತ ಅವ್ರಿಗೆ ಪಕ್ಕಾ ಗೊತ್ತಾಯ್ತು.+ 14 ಪೇತ್ರ ಮತ್ತು ಯೋಹಾನನ ಜೊತೆ ವಾಸಿಯಾದ ಆ ವ್ಯಕ್ತಿ ನಿಂತಿರೋದನ್ನ+ ನೋಡಿ ಅವ್ರಿಗೆ ಏನೂ ಮಾತಾಡೋಕೆ ಆಗಲಿಲ್ಲ.+ 15 ಹಾಗಾಗಿ ಆ ಮೂರು ಜನ್ರನ್ನ ಅವರು ಹಿರೀಸಭೆಯಿಂದ ಹೊರಗೆ ಹೋಗೋಕೆ ಹೇಳಿದ್ರು. ಆಮೇಲೆ ಅವರು ಒಬ್ಬರಿಗೊಬ್ರು ಹೀಗೆ ಮಾತಾಡ್ಕೊಂಡ್ರು 16 “ನಾವು ಇವ್ರನ್ನ ಏನು ಮಾಡೋಣ?+ ಯಾಕಂದ್ರೆ ಇವರು ನಿಜಕ್ಕೂ ಒಂದು ದೊಡ್ಡ ಅದ್ಭುತನೇ ಮಾಡಿದ್ದಾರೆ. ಆ ಅದ್ಭುತ ಯೆರೂಸಲೇಮಿನ ಎಲ್ಲ ಜನ್ರ ಕಣ್ಮುಂದೆನೇ ಇದೆ.+ ಅದನ್ನ ನಾವು ಸುಳ್ಳಂತ ಹೇಳೋಕಾಗಲ್ಲ. 17 ಆದ್ರೆ ಈ ಸುದ್ದಿ ತುಂಬ ಜನ್ರಿಗೆ ಹಬ್ಬಬಾರದು. ಹಾಗಾಗಿ ನೀವು ಯಾರ ಹತ್ರನೂ ಈ ಹೆಸ್ರನ್ನ* ಎತ್ತಲೇಬಾರದು ಅಂತ ಅವ್ರನ್ನ ಬೆದರಿಸೋಣ.”+
18 ಆಮೇಲೆ ಆ ಇಬ್ರು ಶಿಷ್ಯರನ್ನ ಒಳಗೆ ಕರೆದು, ಯೇಸುವಿನ ಹೆಸ್ರೆತ್ತಿ ಮಾತಾಡಲೇಬಾರದು, ಕಲಿಸಲೇಬಾರದು ಅಂತ ಆಜ್ಞೆ ಕೊಟ್ರು. 19 ಅದಕ್ಕೆ ಪೇತ್ರ, ಯೋಹಾನ ಅವ್ರಿಗೆ “ದೇವರ ಮಾತನ್ನ ಬಿಟ್ಟು ನಿಮ್ಮ ಮಾತು ಕೇಳೋದು ದೇವರ ದೃಷ್ಟಿಯಲ್ಲಿ ಸರಿನಾ? ನೀವೇ ಯೋಚನೆ ಮಾಡಿ. 20 ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ”+ ಅಂದ್ರು. 21 ಆಗ ಅವರು ಮತ್ತೆ ಪೇತ್ರ, ಯೋಹಾನನನ್ನ ಬೆದರಿಸಿ ಬಿಟ್ಟುಬಿಟ್ರು. ಯಾಕಂದ್ರೆ ಅವ್ರಿಗೆ ಶಿಕ್ಷೆ ಕೊಡೋಕೆ ಯಾವುದೇ ಆಧಾರ ಸಿಗಲಿಲ್ಲ. ಅಷ್ಟೇ ಅಲ್ಲ ಅವರು ಜನ್ರಿಗೆ ಭಯಪಟ್ರು.+ ಯಾಕಂದ್ರೆ ಜನ್ರೆಲ್ಲ ಆ ಅದ್ಭುತ ನೋಡಿ ದೇವರನ್ನ ಹಾಡಿಹೊಗಳ್ತಾ ಇದ್ರು. 22 ಈ ಅದ್ಭುತದಿಂದ ವಾಸಿಯಾಗಿದ್ದ ಆ ವ್ಯಕ್ತಿಗೆ 40ಕ್ಕಿಂತ ಜಾಸ್ತಿ ವಯಸ್ಸಾಗಿತ್ತು.
23 ಪೇತ್ರ ಮತ್ತು ಯೋಹಾನ ಬಿಡುಗಡೆ ಆದಮೇಲೆ ಬೇರೆ ಶಿಷ್ಯರ ಹತ್ರ ಹೋಗಿ ಮುಖ್ಯ ಪುರೋಹಿತರು, ಹಿರಿಯರು ತಮಗೆ ಹೇಳಿದ ಮಾತುಗಳನ್ನೆಲ್ಲ ಅವ್ರಿಗೆ ಹೇಳಿದ್ರು. 24 ಅದನ್ನ ಕೇಳಿ ಅವ್ರೆಲ್ಲ ಸೇರಿ ದೇವ್ರಿಗೆ ಹೀಗೆ ಪ್ರಾರ್ಥನೆ ಮಾಡಿದ್ರು:
“ವಿಶ್ವದ ರಾಜನೇ! ಭೂಮಿ, ಆಕಾಶ, ಸಮುದ್ರ, ಅದ್ರಲ್ಲಿರೋ ಎಲ್ಲವನ್ನೂ ಸೃಷ್ಟಿಮಾಡಿರೋದು ನೀನೇ.+ 25 ಪವಿತ್ರಶಕ್ತಿಯ ಸಹಾಯದಿಂದ ನಿನ್ನ ಸೇವಕನೂ ನಮ್ಮ ಪೂರ್ವಜನೂ ಆದ ದಾವೀದನ+ ಬಾಯಲ್ಲಿ ನೀನೇ ಈ ಮಾತನ್ನ ಹೇಳಿಸಿದ್ದಿಯ. ಅದೇನಂದ್ರೆ ‘ದೇಶಗಳು ಯಾಕಷ್ಟು ಕೋಪ ಮಾಡ್ಕೊಂಡಿವೆ? ಜನ ಯಾಕೆ ಪೊಳ್ಳು ವಿಷ್ಯಗಳ ಬಗ್ಗೆ ಯೋಚಿಸ್ತಿದ್ದಾರೆ? 26 ರಾಜರು ಯೆಹೋವನ* ಮತ್ತು ಆತನ ಅಭಿಷಿಕ್ತನ ವಿರುದ್ಧ ನಿಂತಿದ್ದಾರೆ, ನಾಯಕರು ಅವ್ರ ವಿರುದ್ಧ ಒಟ್ಟುಸೇರಿದ್ದಾರೆ.’+ 27 ಆ ಮಾತು ನಿಜ ಆಗಿದೆ. ಹೆರೋದ ಮತ್ತು ಪೊಂತ್ಯ ಪಿಲಾತ+ ಯೆಹೂದ್ಯರಲ್ಲದ ಜನ್ರ ಜೊತೆ, ಇಸ್ರಾಯೇಲ್ಯರ ಜೊತೆ ಸೇರಿ ನೀನು ಅಭಿಷೇಕಿಸಿದ+ ನಿನ್ನ ಪವಿತ್ರ ಸೇವಕ ಯೇಸುವಿನ ವಿರುದ್ಧ ನಿಂತಿದ್ದಾರೆ. 28 ನಿನ್ನ ಶಕ್ತಿ ಮತ್ತು ಉದ್ದೇಶಕ್ಕೆ ತಕ್ಕಂತೆ ಮೊದಲೇ ನೀನು ಏನು ಹೇಳಿದ್ದಿಯೋ ಅದನ್ನೇ ಅವರು ಮಾಡಬೇಕಂತ ಈಗ ತಯಾರಾಗಿದ್ದಾರೆ.+ 29 ಹಾಗಾಗಿ ಯೆಹೋವನೇ,* ದಯವಿಟ್ಟು ಅವ್ರ ಬೆದರಿಕೆಗಳನ್ನ ಕೇಳಿಸ್ಕೊ. ನಿನ್ನ ಸೇವಕರು ನಿನ್ನ ಮಾತನ್ನ ಧೈರ್ಯವಾಗಿ ಹೇಳ್ತಾ ಇರೋಕೆ ಸಹಾಯ ಮಾಡು. 30 ಅದೇ ಸಮಯದಲ್ಲಿ ನೀನು ನಿನ್ನ ಶಕ್ತಿಯಿಂದ ರೋಗಿಗಳನ್ನ ವಾಸಿ ಮಾಡು. ನಿನ್ನ ಪವಿತ್ರ ಸೇವಕನಾದ ಯೇಸು ಹೆಸ್ರಲ್ಲಿ ಅದ್ಭುತಗಳು ಆಗ್ತಾ+ ಇರಲಿ.”+
31 ಹೀಗೆ ಅವರು ಪಟ್ಟುಹಿಡಿದು ಪ್ರಾರ್ಥನೆ ಮಾಡಿದಾಗ ಅವರು ಸೇರಿದ್ದ ಸ್ಥಳ ನಡುಗಿತು. ಅವ್ರಲ್ಲಿ ಪ್ರತಿಯೊಬ್ಬರ ಮೇಲೆ ಪವಿತ್ರಶಕ್ತಿ+ ಬಂತು. ಹಾಗಾಗಿ ಅವರು ದೇವರ ಮಾತನ್ನ ಧೈರ್ಯದಿಂದ ಹೇಳ್ತಿದ್ರು.+
32 ಅಷ್ಟೇ ಅಲ್ಲ ಶಿಷ್ಯರಾದವರು ತುಂಬ ಜನ ಅಲ್ಲಿದ್ರು. ಅವ್ರೆಲ್ಲ ಒಂದೇ ಮನಸ್ಸಿಂದ ಒಗ್ಗಟ್ಟಾಗಿದ್ರು. ಅವ್ರಲ್ಲಿ ಯಾರೂ ತಮ್ಮ ಹತ್ರ ಇದ್ದ ಯಾವುದನ್ನೂ ‘ನನ್ನದು’ ಅಂತ ಹೇಳ್ತಿರ್ಲಿಲ್ಲ. ಎಲ್ಲವನ್ನೂ ಸರಿಸಮಾನವಾಗಿ ಹಂಚ್ಕೊಳ್ತಾ ಇದ್ರು.+ 33 ಅಪೊಸ್ತಲರು ಪ್ರಭುವಾದ ಯೇಸು ಮತ್ತೆ ಬದುಕಿದ್ರ ಬಗ್ಗೆ ಎಲ್ರಿಗೂ ಹೇಳ್ತಾ ಇದ್ರು.+ ಅವ್ರೆಲ್ಲರ ಮೇಲೆ ದೇವರು ಅಪಾರ ಕೃಪೆ ತೋರಿಸಿದನು. 34 ನಿಜ ಹೇಳಬೇಕಂದ್ರೆ ಅವ್ರಲ್ಲಿ ಯಾರಿಗೂ ಯಾವ ಕೊರತೆನೂ ಇರ್ಲಿಲ್ಲ.+ ಯಾಕಂದ್ರೆ ಹೊಲ-ಮನೆ ಇದ್ದವರು ಅದನ್ನ ಮಾರಿ ಸಿಕ್ಕಿದ ಹಣ ತಂದು 35 ಅಪೊಸ್ತಲರಿಗೆ ಕೊಡ್ತಿದ್ರು.+ ಅಪೊಸ್ತಲರು ಆ ಹಣವನ್ನ ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಹಂಚ್ತಿದ್ರು.+ 36 ಸೈಪ್ರಸ್ನಲ್ಲಿ ವಾಸಿಸ್ತಿದ್ದ ಒಬ್ಬ ಲೇವಿ ಇದ್ದ. ಅವನ ಹೆಸ್ರು ಯೋಸೇಫ. ಅಪೊಸ್ತಲರು ಅವನಿಗೆ ಬಾರ್ನಬ+ (ಅಂದ್ರೆ “ಬೇರೆಯವ್ರಿಗೆ ಧೈರ್ಯ ತುಂಬುವವನು”* ಅಂತ ಅರ್ಥ) ಅಂತ ಹೆಸ್ರಿಟ್ರು. 37 ಅವನಿಗೆ ಸ್ವಲ್ಪ ಜಮೀನಿತ್ತು. ಅವನದನ್ನ ಮಾರಿ ಬಂದ ಹಣವನ್ನ ಅಪೊಸ್ತಲರಿಗೆ ಕೊಟ್ಟ.+