ಮೆಸ್ಸೀಯನನ್ನು ಕಂಡುಕೊಂಡರು!
“ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ.”—ಯೋಹಾ. 1:41.
1. “ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ” ಎಂದು ಅಂದ್ರೆಯ ಹೇಳಲು ಕಾರಣವೇನು?
ಸ್ನಾನಿಕ ಯೋಹಾನ ತನ್ನ ಇಬ್ಬರು ಶಿಷ್ಯರೊಂದಿಗೆ ನಿಂತಿದ್ದಾನೆ. ತನ್ನೆಡೆಗೆ ಬರುತ್ತಿರುವ ಯೇಸುವನ್ನು ಕಂಡು, “ನೋಡಿ, ದೇವರ ಕುರಿಮರಿ!” ಎಂದು ಉದ್ಗರಿಸುತ್ತಾನೆ. ಕೂಡಲೇ ಅಂದ್ರೆಯ ಮತ್ತು ಇನ್ನೊಬ್ಬ ಶಿಷ್ಯ ಯೇಸುವನ್ನು ಹಿಂಬಾಲಿಸಿ ಆ ದಿನವಿಡೀ ಅವನೊಂದಿಗೆ ಕಳೆಯುತ್ತಾರೆ. ಅನಂತರ ಅಂದ್ರೆಯ ತನ್ನ ಅಣ್ಣ ಸೀಮೋನ ಪೇತ್ರನನ್ನು ಭೇಟಿಯಾಗಿ “ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ” ಎಂದು ಉದ್ವೇಗದಿಂದ ಅರುಹುತ್ತಾನೆ. ಅಲ್ಲದೆ ಯೇಸುವಿನ ಬಳಿ ಕರೆದುಕೊಂಡು ಹೋಗುತ್ತಾನೆ.—ಯೋಹಾ. 1:35-41.
2. ಮೆಸ್ಸೀಯನ ಕುರಿತ ಮತ್ತಷ್ಟು ಪ್ರವಾದನೆಗಳನ್ನು ಪರಿಗಣಿಸುವುದರಿಂದ ನಮಗೇನು ಪ್ರಯೋಜನ?
2 ಅನಂತರದ ದಿನಗಳಲ್ಲಿ ಅಂದ್ರೆಯ, ಪೇತ್ರ ಹಾಗೂ ಮತ್ತಿತರ ಶಿಷ್ಯರು ಶಾಸ್ತ್ರವಚನಗಳನ್ನು ಪರಿಶೀಲಿಸಿ ನಜರೇತಿನವನಾದ ಯೇಸುವೇ ನಿಜವಾದ ಮೆಸ್ಸೀಯನೆಂಬ ದೃಢತೀರ್ಮಾನಕ್ಕೆ ಬರುತ್ತಾರೆ. ಮೆಸ್ಸೀಯನ ಕುರಿತ ಮತ್ತಷ್ಟು ಪ್ರವಾದನೆಗಳನ್ನು ನಾವೀಗ ಪರಿಗಣಿಸುವ. ಅದು ದೇವರ ವಾಕ್ಯವಾದ ಬೈಬಲಿನಲ್ಲಿ ಹಾಗೂ ದೇವರು ನೇಮಿಸಿದ ಮೆಸ್ಸೀಯನಲ್ಲಿ ಬಲವಾದ ನಂಬಿಕೆಯನ್ನಿಡಲು ನಮಗೆ ನೆರವಾಗುವುದು.
ಇಗೋ! ನಿಮ್ಮ ಅರಸನು ಬರುತ್ತಿದ್ದಾನೆ
3. ಯೇಸು ವಿಜಯೋತ್ಸವದಿಂದ ಯೆರೂಸಲೇಮನ್ನು ಪ್ರವೇಶಿಸಿದಾಗ ಯಾವ ಪ್ರವಾದನೆ ನೆರವೇರಿತು?
3 ಮೆಸ್ಸೀಯನು ವಿಜಯೋತ್ಸವದಿಂದ ಯೆರೂಸಲೇಮನ್ನು ಪ್ರವೇಶಿಸುವನು. ಜೆಕರ್ಯನು ನುಡಿದ ಪ್ರವಾದನೆ ಹೀಗೆ ಹೇಳಿತು: “ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ.” (ಜೆಕ. 9:9) ಕೀರ್ತನೆಗಾರನು ಹೀಗೆ ಬರೆದನು: “ಯೆಹೋವನ ಹೆಸರಿನಲ್ಲಿ . . . ಬರುವವನಿಗೆ ಆಶೀರ್ವಾದ.” (ಕೀರ್ತ. 118:26) ಯೇಸು ಯೆರೂಸಲೇಮ್ ಪಟ್ಟಣವನ್ನು ಪ್ರವೇಶಿಸಿದಾಗ ಪ್ರವಾದನೆಯಲ್ಲಿ ತಿಳಿಸಲಾದಂತೆ ಜನಸ್ತೋಮ ಅವನಿಗೆ ಜಯಕಾರ ಕೂಗಿ ಉಲ್ಲಾಸಿಸಿತು. ಹಾಗೇ ಮಾಡುವಂತೆ ಯೇಸುವೇನೂ ಕೇಳಿಕೊಂಡಿರಲಿಲ್ಲ. ಈಗ ಆ ವೃತ್ತಾಂತವನ್ನು ನೀವು ಓದುವಾಗ ಆ ಜನರ ಅಪರಿಮಿತ ಆನಂದ, ಜಯಘೋಷ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ.—ಮತ್ತಾಯ 21:4-9 ಓದಿ.
4. ಕೀರ್ತನೆ 118:22, 23 ಹೇಗೆ ನಿಜವಾಯಿತು?
4 ಮೆಸ್ಸೀಯನೆಂಬ ಸಕಲ ರುಜುವಾತನ್ನು ಹೊಂದಿದ್ದ ಯೇಸುವನ್ನು ಅನೇಕ ಜನರು ತಿರಸ್ಕರಿಸಿದರೂ, ಅವನು ದೇವರಿಗೆ ಬಹುಮೂಲ್ಯನು. ಮೆಸ್ಸೀಯನೆಂಬ ರುಜುವಾತು ಕಣ್ಣ ಮುಂದಿದ್ದರೂ ನಂಬದ ಜನರು ಪ್ರವಾದನೆ ತಿಳಿಸಿದಂತೆ ಯೇಸುವನ್ನು ಧಿಕ್ಕರಿಸಿದರಲ್ಲದೆ ಲಕ್ಷ್ಯವನ್ನೂ ಕೊಡಲಿಲ್ಲ. (ಯೆಶಾ. 53:3; ಮಾರ್ಕ 9:12) ಆದರೆ ದೇವರು ಕೀರ್ತನೆಗಾರನ ಮೂಲಕ ಹೀಗೆ ಪ್ರವಾದಿಸಿದನು: “ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಯೆಹೋವನಿಂದಲೇ ಆಯಿತು.” (ಕೀರ್ತ. 118:22, 23) ಒಮ್ಮೆ ಯೇಸು ತನ್ನನ್ನು ಹಗೆಮಾಡುತ್ತಿದ್ದ ಧಾರ್ಮಿಕ ಮುಖಂಡರೊಂದಿಗೆ ಮಾತಾಡುತ್ತಿದ್ದಾಗ ಈ ಪ್ರವಾದನೆಯನ್ನು ಉಲ್ಲೇಖಿಸಿದನು. ಆಮೇಲೆ ಪೇತ್ರನು ಸಹ ಈ ಪ್ರವಾದನೆ ಕ್ರಿಸ್ತನಲ್ಲೇ ನೆರವೇರಿತೆಂದು ದೃಢಪಡಿಸಿದನು. (ಮಾರ್ಕ 12:10, 11; ಅ. ಕಾ. 4:8-11) ಹೌದು, ಯೇಸು ಕ್ರೈಸ್ತ ಸಭೆಯ ‘ಅಸ್ತಿವಾರದ ಮೂಲೆಗಲ್ಲಾದನು.’ ದೇವಭಕ್ತಿಯಿಲ್ಲದ ಜನರು ಅವನನ್ನು ತಿರಸ್ಕರಿಸಿದರು. ಆದರೆ “ದೇವರಿಂದ ಆರಿಸಲ್ಪಟ್ಟು ಅಮೂಲ್ಯವಾಗಿ” ಎಣಿಸಲ್ಪಟ್ಟನು.—1 ಪೇತ್ರ 2:4-6.
ನಂಬಿಕೆದ್ರೋಹ ಹಾಗೂ ಪಲಾಯನ!
5, 6. ಮೆಸ್ಸೀಯನಿಗೆ ದ್ರೋಹಬಗೆಯುವ ಕುರಿತು ಪ್ರವಾದನೆ ಏನು ಹೇಳಿತು ಹಾಗೂ ಅದು ಹೇಗೆ ನೆರವೇರಿತು?
5 ಆಪ್ತಸ್ನೇಹಿತನೇ ಮೆಸ್ಸೀಯನಿಗೆ ನಂಬಿಕೆದ್ರೋಹ ಎಸಗುವನು. ದಾವೀದನು ಹೀಗೆ ಪ್ರವಾದನೆ ನುಡಿದನು: “ನಾನು ಯಾವನನ್ನು ನಂಬಿದ್ದೆನೋ ಯಾವನು ನನ್ನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡನೋ ಅಂಥ ಆಪ್ತಸ್ನೇಹಿತನು ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.” (ಕೀರ್ತ. 41:9) ಒಬ್ಬನೊಂದಿಗೆ ಅನ್ನಪಾನಗಳನ್ನು ತೆಗೆದುಕೊಳ್ಳುವವನು ಅವನ ಆಪ್ತಸ್ನೇಹಿತನು. (ಆದಿ. 31:54) ಹಾಗಾದರೆ, ಯೇಸುವಿನ ಒಡನಾಡಿಯಾಗಿದ್ದ ಇಸ್ಕರಿಯೋತ ಯೂದ ಎಸಗಿದ ನಂಬಿಕೆದ್ರೋಹ ಪರಮ ನೀಚತನವಲ್ಲವೇ? ತನಗೆ ನಂಬಿಕೆದ್ರೋಹ ಮಾಡುವವನ ಕುರಿತು ಯೇಸು ಶಿಷ್ಯರೊಂದಿಗೆ ಮಾತಾಡಿದಾಗ ದಾವೀದನ ಪ್ರವಾದನೆಯನ್ನು ಉಲ್ಲೇಖಿಸಿ ಹೀಗೆ ಹೇಳಿದನು: “ನಾನು ನಿಮ್ಮೆಲ್ಲರ ಕುರಿತು ಮಾತಾಡುತ್ತಿಲ್ಲ; ನಾನು ಆರಿಸಿಕೊಂಡವರ ಬಗ್ಗೆ ನನಗೆ ತಿಳಿದಿದೆ. ಆದರೆ ‘ನನ್ನೊಂದಿಗೆ ರೊಟ್ಟಿಯನ್ನು ತಿನ್ನುತ್ತಿದ್ದವನೇ ನನಗೆ ಕಾಲನ್ನು ಅಡ್ಡಹಾಕಿದ್ದಾನೆ’ ಎಂಬ ಶಾಸ್ತ್ರವಚನವು ನೆರವೇರಬೇಕು.”—ಯೋಹಾ. 13:18.
6 ದ್ರೋಹವೆಸಗುವವನು 30 ಬೆಳ್ಳಿನಾಣ್ಯಗಳಿಗಾಗಿ ಮೆಸ್ಸೀಯನನ್ನು ಹಿಡಿದುಕೊಡುವನು—ಕೇವಲ ಒಬ್ಬ ಗುಲಾಮನ ಬೆಲೆಗೆ!! ಇಂಥ ಪುಡಿಗಾಸಿನ ಆಸೆಗಾಗಿ ಯೇಸುವಿಗೆ ದ್ರೋಹ ಬಗೆಯಲಾಯಿತೆಂದು ಹೇಳುತ್ತಾ ಮತ್ತಾಯನು ಜೆಕರ್ಯ 11:12, 13ರ ಪ್ರವಾದನೆಯನ್ನು ಉಲ್ಲೇಖಿಸಿದನು. ಆದರೆ ಮತ್ತಾಯನು ಜೆಕರ್ಯನೆಂದು ಹೇಳುವ ಬದಲಿಗೆ “ಯೆರೆಮೀಯನ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರಿತು” ಎಂದು ಹೇಳಿದನು. ಏಕೆ? ಮತ್ತಾಯನ ಸಮಯದಲ್ಲಿ ಯೆರೆಮೀಯ, ಜೆಕರ್ಯ ಮುಂತಾದ ಪುಸ್ತಕಗಳ ಗುಂಪಿನಲ್ಲಿ ಯೆರೆಮೀಯ ಪುಸ್ತಕ ಮೊದಲಿತ್ತು ಎಂದು ಕಾಣುತ್ತದೆ. ಹಾಗಾಗಿ ಮತ್ತಾಯನು ಜೆಕರ್ಯನ ಬದಲಿಗೆ ಯೆರೆಮೀಯನ ಹೆಸರನ್ನು ಉಲ್ಲೇಖಿಸಿರಬೇಕು. (ಲೂಕ 24:44 ಹೋಲಿಸಿ.) ಯೇಸುವನ್ನು ಹಿಡಿದುಕೊಟ್ಟದ್ದರಿಂದ ಸಿಕ್ಕಿದ ಆ ಹಣವನ್ನು ಯೂದ ವೆಚ್ಚಮಾಡಲಿಲ್ಲ. ದೇವಾಲಯದೊಳಗೆ ಬಿಸಾಡಿಬಿಟ್ಟು ಹೊರಟುಹೋಗಿ ನೇಣು ಹಾಕಿಕೊಂಡನು.—ಮತ್ತಾ. 26:14-16; 27:3-10.
7. ಯಾವ ರೀತಿಯಲ್ಲಿ ಜೆಕರ್ಯ 13:7 ನೆರವೇರಿತು?
7 ಮೆಸ್ಸೀಯನ ಅನುಯಾಯಿಗಳು ಚದರಿಹೋಗುವರು. “ಕುರುಬನನ್ನು ಹೊಡೆ” ಎಂದು ಜೆಕರ್ಯ ಬರೆದನು, “ಕುರಿಗಳು ಚದರಿಹೋಗುವವು.” (ಜೆಕ. 13:7) ಕ್ರಿ.ಶ. 33ರ ನೈಸಾನ್ ತಿಂಗಳ 14ರಂದು ಶಿಷ್ಯರಿಗೆ ಯೇಸು, “ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಎಡವಲ್ಪಡುವಿರಿ, ಏಕೆಂದರೆ ‘ನಾನು ಕುರುಬನನ್ನು ಹೊಡೆಯುವೆನು ಆಗ ಮಂದೆಯ ಕುರಿಗಳು ಚೆದರಿಹೋಗುವವು’ ಎಂದು ಬರೆದಿದೆ” ಎಂದು ಹೇಳಿದನು. ಹಾಗೆಯೇ ಆಯಿತು, “ಶಿಷ್ಯರೆಲ್ಲರೂ [ಯೇಸುವನ್ನು] ಬಿಟ್ಟು ಓಡಿಹೋದರು” ಎಂದು ಮತ್ತಾಯ ತದನಂತರ ವರದಿಸಿದನು.—ಮತ್ತಾ. 26:31, 56.
ಆರೋಪ ಹೊರಿಸಿ ಹೊಡೆಯಲಾಯಿತು
8. ಯಾವ ಸಂದರ್ಭದಲ್ಲಿ ಯೆಶಾಯ 53:8ರ ಪ್ರವಾದನೆ ನೆರವೇರಿತು?
8 ಮೆಸ್ಸೀಯನನ್ನು ವಿಚಾರಣೆಗೊಳಪಡಿಸಿ ದಂಡಿಸಲಾಗುವುದು. (ಯೆಶಾಯ 53:8 ಓದಿ.) ನೈಸಾನ್ 14ರ ಮುಂಜಾನೆಯೇ ಹಿರೀಸಭೆಯವರು ಸಮಾಲೋಚನೆ ನಡೆಸಿ ಯೇಸುವನ್ನು ಬಂಧಿಸಿ ರೋಮನ್ ರಾಜ್ಯಪಾಲ ಪೊಂತ್ಯ ಪಿಲಾತನ ಕೈಗೆ ಒಪ್ಪಿಸಿದರು. ಅವನು ವಿಚಾರಣೆ ನಡೆಸಿ ಯೇಸು ನಿರಪರಾಧಿಯೆಂದು ಮನಗಂಡು ಬಿಡುಗಡೆ ಮಾಡಲು ಪ್ರಯತ್ನಿಸಿದನು. ಆದರೆ, ಜನರ ಉದ್ವಿಗ್ನ ಗುಂಪು “ಅವನನ್ನು ಶೂಲಕ್ಕೇರಿಸು” ಎಂದು ಅಬ್ಬರಿಸಿ ಅಪರಾಧಿ ಬರಬ್ಬನ ಬಿಡುಗಡೆಗಾಗಿ ಬೇಡಿಕೆಯಿತ್ತಿತು. ಜನರ ಗುಂಪನ್ನು ತೃಪ್ತಿಪಡಿಸಲು ಇಷ್ಟಪಟ್ಟ ಪಿಲಾತ ಬರಬ್ಬನನ್ನು ಬಿಡುಗಡೆ ಮಾಡಿ ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶೂಲಕ್ಕೇರಿಸಲು ಒಪ್ಪಿಸಿದನು.—ಮಾರ್ಕ 15:1-15.
9. ಕೀರ್ತನೆ 35:11 ಹೇಗೆ ನೆರವೇರಿತು?
9 ಮೆಸ್ಸೀಯನ ವಿರುದ್ಧ ಸುಳ್ಳುಸಾಕ್ಷಿ ಹೇಳಲಾಗುವುದು. “ನ್ಯಾಯವಿರುದ್ಧಸಾಕ್ಷಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ; ನಾನರಿಯದ ಸಂಗತಿಗಳ ವಿಷಯದಲ್ಲಿ ನನ್ನನ್ನು ವಿಚಾರಿಸುತ್ತಾರೆ” ಎಂದು ದಾವೀದನು ಬರೆದನು. (ಕೀರ್ತ. 35:11) ಈ ಪ್ರವಾದನೆ ನುಡಿದಂತೆ, “ಮುಖ್ಯ ಯಾಜಕರೂ ಹಿರೀಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಲಿಕ್ಕಾಗಿ ಅವನ ವಿರುದ್ಧ ಸುಳ್ಳು ಸಾಕ್ಷಿಯನ್ನು ಹುಡುಕುತ್ತಿದ್ದರು.” (ಮತ್ತಾ. 26:59) “ಅನೇಕರು ಅವನ ವಿರುದ್ಧ ಸುಳ್ಳು ಸಾಕ್ಷಿಯನ್ನು ಹೇಳುತ್ತಿದ್ದರಾದರೂ ಅವರ ಸಾಕ್ಷಿಗಳು ಒಂದಕ್ಕೊಂದು ಸರಿಬೀಳುತ್ತಿರಲಿಲ್ಲ.” (ಮಾರ್ಕ 14:56) ಅದೇನೂ ವಿರೋಧಿಗಳಿಗೆ ತಪ್ಪಾಗಿ ಕಾಣುತ್ತಿರಲಿಲ್ಲ. ಏಕೆಂದರೆ ಅವರು ಯೇಸುವನ್ನು ಮುಗಿಸಿಬಿಡಲು ಹೊಂಚುಹಾಕುತ್ತಿದ್ದರು.
10. ಯೆಶಾಯ 53:7 ಹೇಗೆ ನೆರವೇರಿತೆಂದು ವಿವರಿಸಿ.
10 ಆರೋಪ ಹೊರಿಸಿದವರ ಮುಂದೆ ಮೆಸ್ಸೀಯನು ಮೌನಿಯಾಗಿರುವನು. ಯೆಶಾಯ ಹೀಗೆ ಪ್ರವಾದನೆ ನುಡಿದಿದ್ದನು: “ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ.” (ಯೆಶಾ. 53:7) “ಮುಖ್ಯ ಯಾಜಕರೂ ಹಿರೀಪುರುಷರೂ [ಯೇಸುವಿನ] ಮೇಲೆ ದೂರುಹೊರಿಸುತ್ತಿರುವಾಗ ಅವನು ಏನೂ ಉತ್ತರಕೊಡಲಿಲ್ಲ.” ಆಗ ಪಿಲಾತನು, “ಅವರು ನಿನ್ನ ವಿರುದ್ಧ ಎಷ್ಟು ಸಾಕ್ಷಿಹೇಳುತ್ತಿದ್ದಾರೆ ಎಂಬುದು ನಿನಗೆ ಕೇಳಿಸುತ್ತಿಲ್ಲವೊ?” ಎಂದು ಕೇಳಿದನು. ಆದರೂ ಯೇಸು “ಯಾವುದೇ ಉತ್ತರವನ್ನು ಕೊಡಲಿಲ್ಲ, ಒಂದು ಮಾತನ್ನೂ ಆಡಲಿಲ್ಲ; ಆದಕಾರಣ ರಾಜ್ಯಪಾಲನು ತುಂಬ ಆಶ್ಚರ್ಯಪಟ್ಟನು.” (ಮತ್ತಾ. 27:12-14) ಯೇಸು ತನ್ನ ವಿರುದ್ಧ ಆರೋಪ ಹೊರಿಸಿದವರ ಮೇಲೆ ಸೇಡು ತೀರಿಸಲೂ ಹೋಗಲಿಲ್ಲ.—ರೋಮ. 12:17-21; 1 ಪೇತ್ರ 2:23.
11. ಯಾವ ಘಟನೆಗಳು ಸಂಭವಿಸಿದಾಗ ಯೆಶಾಯ 50:6 ಹಾಗೂ ಮೀಕ 5:1 ನೆರವೇರಿತು?
11 ಮೆಸ್ಸೀಯನಿಗೆ ಹೊಡೆಯಲಾಗುವುದೆಂದು ಯೆಶಾಯ ಪ್ರವಾದನೆ ನುಡಿದಿದ್ದನು. “ಹೊಡೆಯುವವರಿಗೆ ಬೆನ್ನುಕೊಟ್ಟು ಕೂದಲುಕೀಳುವವರಿಗೆ ಗಡ್ಡವನ್ನು ಒಡ್ಡಿದೆನು; ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಲಿಲ್ಲ” ಎಂದು ಅವನು ಬರೆದನು. (ಯೆಶಾ. 50:6) ಅದೇ ರೀತಿ ಮೀಕನು ಸಹ, “ಇಸ್ರಾಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು” ಎಂದು ಪ್ರವಾದನೆ ಹೇಳಿದನು. (ಮೀಕ 5:1) ಇವೆರಡು ಪ್ರವಾದನೆಗಳು ನೆರವೇರಿದವು ಎನ್ನುವುದನ್ನು ಸಾಬೀತುಪಡಿಸುತ್ತಾ ಮಾರ್ಕನು ಹೀಗೆ ಹೇಳಿದನು: “ಕೆಲವರು ಅವನ ಮೇಲೆ ಉಗುಳಿದರು ಮತ್ತು ಅವನ ಮುಖಕ್ಕೆ ಮುಸುಕುಹಾಕಿ ತಮ್ಮ ಮುಷ್ಟಿಗಳಿಂದ ಗುದ್ದಿ, ‘ಪ್ರವಾದಿಸು!’ ಎಂದು ಹೇಳಿದರು. ನ್ಯಾಯಸಭೆಯ ಸೇವಕರು ಅವನ ಮುಖಕ್ಕೆ ಹೊಡೆದು ಅವನನ್ನು ತಮ್ಮ ವಶಕ್ಕೆ ತೆಗೆದುಕೊಂಡರು.” ಅಲ್ಲದೆ, ಸೈನಿಕರು “ಬೆತ್ತದಿಂದ ಅವನ ತಲೆಯ ಮೇಲೆ ಹೊಡೆದು ಅವನ ಮೇಲೆ ಉಗುಳಿ ಅವನ ಮುಂದೆ ಮೊಣಕಾಲೂರಿ [ಗೇಲಿಮಾಡುತ್ತಾ] ಅವನಿಗೆ ಪ್ರಣಾಮಮಾಡುತ್ತಿದ್ದರು.” (ಮಾರ್ಕ 14:65; 15:19) ಇವೆಲ್ಲ ಮಾಡುವಂತೆ ಯೇಸುವೇನೂ ಅವರುಗಳನ್ನು ಉದ್ರೇಕಿಸಿರಲಿಲ್ಲ.
ಮರಣದಲ್ಲೂ ನಂಬಿಗಸ್ತ
12. ಕೀರ್ತನೆ 22:16 ಹಾಗೂ ಯೆಶಾಯ 53:12 ಯೇಸುವಿನಲ್ಲಿ ಹೇಗೆ ನೆರವೇರಿದವು?
12 ಮೆಸ್ಸೀಯನನ್ನು ಕಂಬಕ್ಕೆ ಜಡಿಯಲಾಗುವುದು. “ದುಷ್ಟರ ಗುಂಪು ನನ್ನನ್ನು ಆವರಿಸಿಕೊಂಡಿದೆ. ನನ್ನ ಕೈಕಾಲುಗಳನ್ನು ತಿವಿದಿದ್ದಾರೆ” ಎಂದು ಕೀರ್ತನೆಗಾರ ದಾವೀದ ಹೇಳಿದನು. (ಕೀರ್ತ. 22:16) ಈ ಪ್ರವಾದನೆ ನೆರವೇರಿತೆಂದು ಮಾರ್ಕ ತಿಳಿಸುತ್ತಾನೆ. ಅವನು ತಿಳಿಸಿದ ಘಟನೆ ಬೈಬಲ್ ವಾಚಕರಿಗೆ ಬಹು ಚೆನ್ನಾಗಿ ತಿಳಿದಿರುವ ಘಟನೆಯಾಗಿದೆ. ಅವನು ಹೀಗೆ ಹೇಳಿದನು, “ಬೆಳಗ್ಗೆ ಸುಮಾರು ಒಂಬತ್ತು ಗಂಟೆಗೆ ಅವನನ್ನು ಶೂಲಕ್ಕೇರಿಸಿದರು” ಅಂದರೆ ಅವನ ಕೈಕಾಲುಗಳನ್ನು ಕಂಬಕ್ಕೆ ಜಡಿದರು. (ಮಾರ್ಕ 15:25) ಮೆಸ್ಸೀಯನನ್ನು ಅಪರಾಧಿಗಳೊಂದಿಗೆ ಜಡಿಯಲಾಗುವುದೆಂದು ಇನ್ನೊಂದು ಪ್ರವಾದನೆ ತಿಳಿಸಿತ್ತು. ಆ ಪ್ರವಾದನೆಯನ್ನು ಯೆಶಾಯ ಹೀಗೆ ನುಡಿದಿದ್ದನು, “ತನ್ನ ಪ್ರಾಣವನ್ನು ಧಾರೆಯೆರೆದು ಮರಣಹೊಂದಿ ದ್ರೋಹಿಗಳೊಂದಿಗೆ ತನ್ನನ್ನೂ” ಎಣಿಸಿಕೊಳ್ಳುವನು. (ಯೆಶಾ. 53:12) ಹೌದು, ಯೇಸುವಿನ “ಬಲಗಡೆಯಲ್ಲಿ ಮತ್ತು ಎಡಗಡೆಯಲ್ಲಿ ಇಬ್ಬರು ಕಳ್ಳರನ್ನು ಶೂಲಕ್ಕೇರಿಸಲಾಯಿತು.”—ಮತ್ತಾ. 27:38.
13. ಕೀರ್ತನೆ 22:7, 8 ಯೇಸುವಿನಲ್ಲಿ ಯಾವ ರೀತಿ ನೆರವೇರಿತು?
13 ಮೆಸ್ಸೀಯನನ್ನು ಅಪಹಾಸ್ಯ ಮಾಡುವರೆಂದು ದಾವೀದನು ಪ್ರವಾದನೆ ತಿಳಿಸಿದನು. (ಕೀರ್ತನೆ 22:7, 8 ಓದಿ.) ಯೇಸುವನ್ನು ಯಾತನಾ ಕಂಬದಲ್ಲಿ ಜಡಿದ ನಂತರ ಹಂಗಿಸಲಾಯಿತೆಂದು ಮತ್ತಾಯ ವರದಿಸುತ್ತಾನೆ: “ಹಾದುಹೋಗುತ್ತಿದ್ದವರು ತಮ್ಮ ತಲೆಗಳನ್ನು ಆಡಿಸುತ್ತಾ, ‘ಆಹಾ, ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟಲಿರುವವನೇ, ನಿನ್ನನ್ನು ರಕ್ಷಿಸಿಕೋ! ನೀನು ದೇವಕುಮಾರನಾಗಿರುವಲ್ಲಿ ಈ ಯಾತನಾ ಕಂಬದಿಂದ ಕೆಳಗಿಳಿದು ಬಾ!’ ಎಂದು ಅವನನ್ನು ಹಂಗಿಸಿದರು.” ಅಂತೆಯೇ ಮುಖ್ಯ ಯಾಜಕರೂ ಶಾಸ್ತ್ರಿಗಳೂ ಹಿರೀಪುರುಷರೂ ಸೇರಿ ಅವನನ್ನು ಅಪಹಾಸ್ಯಮಾಡುತ್ತಾ, “ಇವನು ಇತರರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ಇವನು ಇಸ್ರಾಯೇಲ್ಯರ ಅರಸನು; ಈಗ ಯಾತನಾ ಕಂಬದಿಂದ ಕೆಳಗಿಳಿದು ಬರಲಿ, ಆಗ ನಾವು ಅವನಲ್ಲಿ ನಂಬಿಕೆಯಿಡುವೆವು. ಇವನು ದೇವರಲ್ಲಿ ಭರವಸೆಯಿಟ್ಟಿದ್ದಾನೆ; ಆತನಿಗೆ ಇವನು ಬೇಕಾಗಿದ್ದರೆ ಇವನನ್ನು ಕಾಪಾಡಲಿ, ಏಕೆಂದರೆ ‘ನಾನು ದೇವರ ಮಗನು’ ಎಂದು ಇವನೇ ಹೇಳಿದ್ದಾನೆ” ಎಂದರು. (ಮತ್ತಾ. 27:39-43) ಈ ಎಲ್ಲ ಅವಮಾನವನ್ನು ಯೇಸು ಶಾಂತಚಿತ್ತದಿಂದ ಸಹಿಸಿಕೊಂಡನು. ನಮ್ಮೆಲ್ಲರಿಗೂ ಉತ್ತಮ ಮಾದರಿ.
14, 15. ಮೆಸ್ಸೀಯನ ವಸ್ತ್ರ ಹಾಗೂ ಹುಳಿತ ದ್ರಾಕ್ಷಾರಸ ಕುಡಿಸುವುದರ ಕುರಿತ ಪ್ರವಾದನೆಗಳು ಯಾವ ರೀತಿಯಲ್ಲಿ ಚಾಚೂತಪ್ಪದೆ ನೆರವೇರಿದವೆಂದು ವಿವರಿಸಿ.
14 ಮೆಸ್ಸೀಯನ ವಸ್ತ್ರಗಳಿಗಾಗಿ ಚೀಟು ಹಾಕಲಾಗುವುದು. “ನನ್ನ ಮೇಲ್ಹೊದಿಕೆಯನ್ನು ತಮ್ಮಲ್ಲಿ ಪಾಲುಮಾಡಿಕೊಳ್ಳುತ್ತಾರೆ; ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ” ಎಂದು ಕೀರ್ತನೆಗಾರ ಬರೆದನು. (ಕೀರ್ತ. 22:18) ಪ್ರವಾದನೆ ಚಾಚೂತಪ್ಪದೆ ನೆರವೇರಿತು. ರೋಮನ್ ಸೈನಿಕರು ಯೇಸುವನ್ನು “ಶೂಲಕ್ಕೇರಿಸಿದ ಬಳಿಕ ಅವನ ಮೇಲಂಗಿಗಳನ್ನು ಚೀಟಿಎತ್ತಿ ಹಂಚಿಕೊಂಡರು.”—ಮತ್ತಾ. 27:35; ಯೋಹಾನ 19:23, 24 ಓದಿ.
15 ಮೆಸ್ಸೀಯನಿಗೆ ಹುಳಿತ ದ್ರಾಕ್ಷಾರಸವನ್ನೂ ಕಹಿ ರಸವನ್ನೂ ಕುಡಿಸಲಾಗುವುದು. ಕೀರ್ತನೆಗಾರನು ಹೀಗೆ ಹೇಳಿದನು: “ನನಗೆ ಉಣ್ಣುವದಕ್ಕೆ ಕಹಿಯಾದ ವಸ್ತುವನ್ನೂ ಬಾಯಾರಿದಾಗ ಹುಳಿತ ದ್ರಾಕ್ಷಾರಸವನ್ನೂ ಕೊಟ್ಟರು.” (ಕೀರ್ತ. 69:21) ಈ ಮಾತು ನೆರವೇರಿದ್ದನ್ನು ಮತ್ತಾಯ ವಿವರಿಸುತ್ತಾನೆ: “ಕಹಿ ರಸದಿಂದ ಕೂಡಿದ ದ್ರಾಕ್ಷಾಮದ್ಯವನ್ನು [ಯೇಸುವಿಗೆ] ಕುಡಿಯಲು ಕೊಟ್ಟರು; ಆದರೆ ಅವನು ಅದನ್ನು ರುಚಿನೋಡಿದ ಬಳಿಕ ಕುಡಿಯಲು ನಿರಾಕರಿಸಿದನು.” ಆಮೇಲೆ “ಅವರಲ್ಲೊಬ್ಬನು ಓಡಿಹೋಗಿ ಒಂದು ಸ್ಪಂಜನ್ನು ತೆಗೆದುಕೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಅದನ್ನು ಜೊಂಡು ಕೋಲಿಗೆ ಸಿಕ್ಕಿಸಿ ಅವನಿಗೆ ಕುಡಿಯುವುದಕ್ಕೆ ಕೊಟ್ಟನು.”—ಮತ್ತಾ. 27:34, 48.
16. ಕೀರ್ತನೆ 22:1ರಲ್ಲಿರುವ ಪ್ರವಾದನೆ ಹೇಗೆ ನೆರವೇರಿತೆಂದು ವಿವರಿಸಿ.
16 ಮೆಸ್ಸೀಯನನ್ನು ದೇವರು ಕೈಬಿಟ್ಟಂತೆ ತೋರುವುದು. (ಕೀರ್ತನೆ 22:1 ಓದಿ.) ಈ ಪ್ರವಾದನೆಗೆ ಅನುಗುಣವಾಗಿ, ಮಧ್ಯಾಹ್ನ “ಮೂರು ಗಂಟೆಗೆ ಯೇಸು, ‘ಏಲೀ, ಏಲೀ, ಲಮಾ ಸಬಕ್ತಾನೀ?’ ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು. ಇದನ್ನು ಭಾಷಾಂತರಿಸಿದಾಗ, ‘ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?’ ಎಂದರ್ಥ.” (ಮಾರ್ಕ 15:34) ಯೇಸುವೇನೂ ಯೆಹೋವ ದೇವರ ಮೇಲಿನ ಭರವಸೆಯನ್ನು ಕಳೆದುಕೊಂಡು ಈ ಮಾತನ್ನು ಆಡಿರಲಿಲ್ಲ. ವೈರಿಗಳ ಕೈಯಿಂದ ದೇವರು ತನ್ನನ್ನು ಈ ಸಂದರ್ಭದಲ್ಲಿ ರಕ್ಷಿಸುವುದಿಲ್ಲ ಮತ್ತು ದೇವರಿಗೆ ತನ್ನ ಸಂಪೂರ್ಣ ನಿಷ್ಠೆಯನ್ನು ತೋರಿಸುವ ಒಂದು ಸುಸಂಧರ್ಭ ಇದಾಗಿದೆಯೆಂದು ಅವನಿಗೆ ಗೊತ್ತಿತ್ತು. ಯೇಸು ಜೋರಾಗಿ ಕೂಗಿದಾಗ ಕೀರ್ತನೆ 22:1 ರಲ್ಲಿನ ಪ್ರವಾದನೆ ನೆರವೇರಿತು.
17. ಯಾವ ರೀತಿಯಲ್ಲಿ ಜೆಕರ್ಯ 12:10 ಮತ್ತು ಕೀರ್ತನೆ 34:20 ನೆರವೇರಿದವು?
17 ಮೆಸ್ಸೀಯನಿಗೆ ಇರಿಯಲಾಗುವುದು, ಆದರೆ ಅವನ ಎಲುಬುಗಳು ಮುರಿದುಹೋಗುವುದಿಲ್ಲ. ಯೆರೂಸಲೇಮಿನ ಜನರು “ತಾವು ಇರಿದವನನ್ನು ದಿಟ್ಟಿಸಿ ನೋಡುವರು.” (ಜೆಕ. 12:10) ಕೀರ್ತನೆ 34:20 ಹೇಳಿದ್ದನ್ನು ಗಮನಿಸಿ, “[ದೇವರು] ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾನೆ; ಅವುಗಳಲ್ಲಿ ಒಂದಾದರೂ ಮುರಿದುಹೋಗುವದಿಲ್ಲ.” ಇವೆರಡು ಪ್ರವಾದನೆಗಳ ನೆರವೇರಿಕೆಯನ್ನು ಸಾಬೀತುಪಡಿಸುತ್ತಾ ಅಪೊಸ್ತಲ ಯೋಹಾನನು ಹೀಗೆ ಬರೆದನು: “ಸೈನಿಕರಲ್ಲಿ ಒಬ್ಬನು ಈಟಿಯಿಂದ [ಯೇಸುವಿನ] ಪಕ್ಕೆಗೆ ತಿವಿದನು ಮತ್ತು ಕೂಡಲೆ ರಕ್ತವೂ ನೀರೂ ಹೊರಬಂತು. ಅದನ್ನು ನೋಡಿದವನೇ [ಯೋಹಾನನೇ] ಸಾಕ್ಷಿಹೇಳಿದ್ದಾನೆ ಮತ್ತು ಅವನ ಸಾಕ್ಷಿಯು ಸತ್ಯವಾಗಿದೆ; . . . ವಾಸ್ತವದಲ್ಲಿ, ‘ಅವನ ಎಲುಬುಗಳಲ್ಲಿ ಒಂದೂ ಮುರಿಯಲ್ಪಡದು’ ಎಂಬ ಶಾಸ್ತ್ರವಚನವು ನೆರವೇರುವಂತೆ ಇದೆಲ್ಲ ಸಂಭವಿಸಿತು. ಮತ್ತು ಇನ್ನೊಂದು ಶಾಸ್ತ್ರವಚನವು, ‘ಅವರು ತಾವು ಇರಿದವನನ್ನು ನೋಡುವರು’ ಎಂದು ಹೇಳುತ್ತದೆ.”—ಯೋಹಾ. 19:33-37.
18. ಯೇಸುವಿನ ಶರೀರವನ್ನು ಪುಷ್ಟರ ಅಂದರೆ ಶ್ರೀಮಂತರ ನಡುವೆ ಹೂಣಿಡಲಾಗುವುದೆಂಬ ಪ್ರವಾದನೆ ಹೇಗೆ ನೆರವೇರಿತು?
18 ಮೆಸ್ಸೀಯನನ್ನು ಶ್ರೀಮಂತರ ಸಮಾಧಿಯ ನಡುವೆ ಹೂಣಿಡಲಾಗುವುದು. (ಯೆಶಾಯ 53:5, 8, 9 ಓದಿ.) ನೈಸಾನ್ 14ನೇ ತಾರೀಖಿನ ಸಂಜೆ “ಅರಿಮಥಾಯದ ಯೋಸೇಫನೆಂಬ ಐಶ್ವರ್ಯವಂತ” ಯೇಸುವಿನ ಮೃತ ಶರೀರವನ್ನು ಕೊಡಿಸುವಂತೆ ಪಿಲಾತನಲ್ಲಿ ವಿನಂತಿಸಿದನು ಮತ್ತು ಅಪ್ಪಣೆ ಸಿಕ್ಕಿತು. ಆಮೇಲೆ ಏನಾಯಿತೆಂದು ಮತ್ತಾಯ ತಿಳಿಸುತ್ತಾನೆ. “ಯೋಸೇಫನು ದೇಹವನ್ನು ತೆಗೆದುಕೊಂಡು ಶುದ್ಧವಾದ ನಾರುಮಡಿಯಲ್ಲಿ ಅದನ್ನು ಸುತ್ತಿ ಬಂಡೆಯಲ್ಲಿ ತಾನು ತೋಡಿದ್ದ ಹೊಸ ಸ್ಮರಣೆಯ ಸಮಾಧಿಯಲ್ಲಿಟ್ಟನು. ಮತ್ತು ಅದರ ಬಾಗಿಲಿಗೆ ದೊಡ್ಡ ಕಲ್ಲನ್ನು ಉರುಳಿಸಿದ ಬಳಿಕ ಅಲ್ಲಿಂದ ಹೊರಟುಹೋದನು.”—ಮತ್ತಾ. 27:57-60.
ಮೆಸ್ಸೀಯ ಅರಸನಿಗೆ ಜಯಜಯಕಾರವೆನ್ನಿ!
19. ಕೀರ್ತನೆ 16:10ರ ಮಾತಿಗನುಸಾರ ಯಾವ ಘಟನೆಗಳು ನಡೆದವು?
19 ಮೆಸ್ಸೀಯನನ್ನು ಪುನರುತ್ಥಾನಗೊಳಿಸಲಾಗುವುದು. “ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವದಿಲ್ಲ” ಎಂದು ದಾವೀದನು ಯೆಹೋವನಿಗೆ ಹೇಳಿದನು. (ಕೀರ್ತ. 16:10) ಕೆಲವು ಸ್ತ್ರೀಯರು ಯೇಸುವಿನ ಶರೀರವನ್ನು ಹೂಣಿಟ್ಟಿದ್ದ ಸಮಾಧಿಯ ಬಳಿ ಬಂದಾಗ ಅವರಿಗೆ ಅಚ್ಚರಿ ಕಾದಿತ್ತು. ಅಲ್ಲಿದ್ದ ದೇವದೂತನು “ಬೆರಗಾಗಬೇಡಿ. ಶೂಲಕ್ಕೇರಿಸಲ್ಪಟ್ಟ ನಜರೇತಿನ ಯೇಸುವನ್ನು ನೀವು ಹುಡುಕುತ್ತಿದ್ದೀರಲ್ಲವೇ. ಅವನು ಇಲ್ಲಿಲ್ಲ, ಎಬ್ಬಿಸಲ್ಪಟ್ಟಿದ್ದಾನೆ. ಅವನನ್ನು ಇಟ್ಟಿದ್ದ ಸ್ಥಳವನ್ನು ನೋಡಿ” ಎಂದು ಅವರಿಗೆ ಹೇಳಿದನು. (ಮಾರ್ಕ 16:6) ಅನಂತರ ಕ್ರಿ.ಶ. 33ರ ಪಂಚಾಶತ್ತಮ ದಿನದಂದು ಅಪೊಸ್ತಲ ಪೇತ್ರ ಯೆರೂಸಲೇಮಿನಲ್ಲಿ ಕೂಡಿದ್ದ ಜನರನ್ನು ಉದ್ದೇಶಿಸಿ, “[ದಾವೀದನು] ಕ್ರಿಸ್ತನ ಪುನರುತ್ಥಾನದ ಕುರಿತು ಮುಂಚಿತವಾಗಿಯೇ ನೋಡಿ ಅದರ ಕುರಿತು ಮಾತಾಡಿದನು; ಅದೇನೆಂದರೆ ‘ಅವನು ಹೇಡೀಸ್ನಲ್ಲಿ ಬಿಡಲ್ಪಡಲಿಲ್ಲ ಅಥವಾ ಅವನ ಶರೀರವು ಕೊಳೆತುಹೋಗಲಿಲ್ಲ.’” (ಅ. ಕಾ. 2:29-31) ಯೇಸುವಿನ ಶರೀರ ಕೊಳೆತುಹೋಗದಂತೆ ದೇವರು ನೋಡಿಕೊಂಡದ್ದಷ್ಟೇ ಅಲ್ಲ ಆತನನ್ನು ಅಮರ ಆತ್ಮಜೀವಿಯಾಗಿ ಪುನರುತ್ಥಾನಗೊಳಿಸಿದನು!—1 ಪೇತ್ರ 3:18.
20. ಮೆಸ್ಸೀಯನ ರಾಜ್ಯಾಳಿಕೆಯ ಬಗ್ಗೆ ಪ್ರವಾದನೆಗಳು ಏನು ಹೇಳುತ್ತವೆ?
20 ಯೇಸು ತನ್ನ ಮಗನೆಂದು ದೇವರು ಪ್ರಕಟಪಡಿಸುವನು. (ಕೀರ್ತನೆ 2:7; ಮತ್ತಾಯ 3:17 ಓದಿ.) ಯೇಸು ಯೆರೂಸಲೇಮನ್ನು ಪ್ರವೇಶಿಸಿದಾಗ ಜನರು ಆತನಿಗೂ ದೇವರ ರಾಜ್ಯಕ್ಕೂ ಜಯಘೋಷ ಕೂಗಿದರು. ನಾವು ಕೂಡ ಇಂದು ಯೇಸುವಿಗೂ ದೇವರ ರಾಜ್ಯಕ್ಕೂ ಜಯಘೋಷ ಮಾಡುತ್ತಿದ್ದೇವೆ. (ಮಾರ್ಕ 11:7-10) ಇನ್ನು ಸ್ವಲ್ಪವೇ ಸಮಯ, ಕ್ರಿಸ್ತನು “ಸತ್ಯತೆದೈನ್ಯನೀತಿಗಳನ್ನು ಸ್ಥಾಪಿಸುವದಕ್ಕಾಗಿ ಆಡಂಬರದಿಂದ ವಾಹನಾರೂಢನಾಗಿ ವಿಜಯೋತ್ಸವದೊಡನೆ” ಬಂದು ವೈರಿಗಳನ್ನು ನಾಶಮಾಡುವನು. (ಕೀರ್ತ. 2:8, 9; 45:1-6) ಅನಂತರ ಈ ಭೂಮಿಯನ್ನು ಆಳುವನು, ಇಲ್ಲಿ ಶಾಂತಿ ಸಮೃದ್ಧಿ ತುಂಬಿ ತುಳುಕುವುದು. (ಕೀರ್ತ. 72:1, 3, 12, 16; ಯೆಶಾ. 9:6, 7) ಈ ಸತ್ಯಗಳನ್ನು ಹಾಗೂ ಈಗಾಗಲೇ ಯೇಸು ಸ್ವರ್ಗದಲ್ಲಿ ರಾಜ್ಯಾಳಿಕೆಯನ್ನು ಆರಂಭಿಸಿರುವ ವಿಷಯವನ್ನು ಜನರಿಗೆ ಪ್ರಕಟಿಸುವುದು ಯೆಹೋವನ ಸಾಕ್ಷಿಗಳಾಗಿರುವ ನಮ್ಮ ಸುಯೋಗವಲ್ಲವೇ?
ನಿಮ್ಮ ಉತ್ತರವೇನು?
• ಯೇಸುವಿಗೆ ದ್ರೋಹವೆಸಗುವ ಮತ್ತು ಅವನನ್ನು ಬಿಟ್ಟು ಪಲಾಯನ ಮಾಡುವ ಕುರಿತ ಪ್ರವಾದನೆಗಳು ಹೇಗೆ ನೆರವೇರಿದವು?
• ಯೇಸುವಿನ ಮರಣದ ಕುರಿತ ಕೆಲವು ಪ್ರವಾದನೆಗಳಾವುವು?
• ಯೇಸು ಮೆಸ್ಸೀಯನೆಂದು ನೀವು ನಂಬುವುದೇಕೆ?
[ಪುಟ 13ರಲ್ಲಿರುವ ಚಿತ್ರ]
ಯೇಸು ವಿಜಯೋತ್ಸವದಿಂದ ಯೆರೂಸಲೇಮಿಗೆ ಆಗಮಿಸಿದಾಗ ಯಾವ ಪ್ರವಾದನೆಗಳು ನೆರವೇರಿದವು?
[ಪುಟ 15ರಲ್ಲಿರುವ ಚಿತ್ರಗಳು]
ಯೇಸು ನಮ್ಮ ಪಾಪಗಳಿಗಾಗಿ ಜೀವತೆತ್ತನು ಈಗ ಮೆಸ್ಸೀಯ ರಾಜನಾಗಿ ಆಳುತ್ತಿದ್ದಾನೆ