ಅಪೊಸ್ತಲರ ಕಾರ್ಯ
15 ಯೂದಾಯದಿಂದ ಕೆಲವು ಸಹೋದರರು ಅಂತಿಯೋಕ್ಯಕ್ಕೆ ಬಂದು “ಮೋಶೆಯ ನಿಯಮ ಪುಸ್ತಕದಲ್ಲಿ ಇರೋ ಹಾಗೆ+ ಸುನ್ನತಿ ಮಾಡಿಸ್ಕೊಂಡ್ರೆ ಮಾತ್ರ ನಿಮಗೆ ರಕ್ಷಣೆ ಸಿಗುತ್ತೆ” ಅಂತ ಸಭೆಯಲ್ಲಿ ಕಲಿಸೋಕೆ ಶುರುಮಾಡಿದ್ರು. 2 ಆಗ ಅವರು ಪೌಲ ಮತ್ತು ಬಾರ್ನಬನ ಜೊತೆ ವಾದ ಮಾಡಿದ್ರು. ಆಗ ಸಹೋದರರೆಲ್ಲ ಸೇರಿ ಪೌಲ ಬಾರ್ನಬನ ಜೊತೆ ಇನ್ನು ಕೆಲವು ಸಹೋದರರನ್ನ ಯೆರೂಸಲೇಮಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಹತ್ರ ಕಳಿಸೋ ನಿರ್ಣಯ ಮಾಡಿದ್ರು.+
3 ಸಭೆಯಲ್ಲಿದ್ದ ಸಹೋದರರು ಅವ್ರ ಜೊತೆ ಸ್ವಲ್ಪ ದೂರ ಬಂದ್ರು. ಆಮೇಲೆ ಪೌಲ, ಬಾರ್ನಬ ಮತ್ತು ಕೆಲವು ಸಹೋದರರು ತಮ್ಮ ಪ್ರಯಾಣ ಮುಂದುವರಿಸಿದ್ರು. ಅವರು ಫೊಯಿನಿಕೆ ಮತ್ತು ಸಮಾರ್ಯ ಪ್ರದೇಶಗಳನ್ನ ಹಾದು ಹೋದ್ರು. ಹೀಗೆ ಹೋಗುವಾಗ ಅಲ್ಲಿದ್ದ ಸಹೋದರರಿಗೆ ಯೆಹೂದ್ಯರಲ್ಲದ ಜನ್ರು ಸಹ ಹೇಗೆ ಶಿಷ್ಯರಾಗ್ತಾ ಇದ್ದಾರೆ ಅಂತ ವಿವರಿಸಿದ್ರು. ಇದನ್ನ ಕೇಳಿ ಆ ಸಹೋದರರಿಗೆ ತುಂಬ ಖುಷಿ ಆಯ್ತು. 4 ಅವರು ಯೆರೂಸಲೇಮಿಗೆ ಬಂದಾಗ ಆ ಸಭೆಯವರು, ಅಪೊಸ್ತಲರು ಮತ್ತು ಹಿರಿಯರು ಅವ್ರನ್ನ ಸಂತೋಷದಿಂದ ಸ್ವಾಗತಿಸಿದ್ರು. ಪೌಲ ಮತ್ತು ಬಾರ್ನಬ ತಮ್ಮನ್ನ ಬಳಸಿ ದೇವರು ಮಾಡಿದ ಎಲ್ಲ ವಿಷ್ಯಗಳನ್ನ ಅವ್ರಿಗೆ ಹೇಳಿದ್ರು. 5 ಆದ್ರೆ ಈ ಮುಂಚೆ ಫರಿಸಾಯರಾಗಿದ್ದ ಕೆಲವು ಸಹೋದರರು ಎದ್ದು ನಿಂತು “ಯೆಹೂದ್ಯರಲ್ಲದ ಜನ್ರಲ್ಲಿ ಯಾರೆಲ್ಲ ಶಿಷ್ಯರಾಗಿದ್ದಾರೋ ಅವ್ರೆಲ್ಲಾ ಸುನ್ನತಿ ಮಾಡಿಸ್ಕೊಳ್ಳಬೇಕು. ಮೋಶೆಯ ನಿಯಮ ಪುಸ್ತಕದಪ್ರಕಾರ ನಡೆಯೋಕೆ ಅವ್ರಿಗೆ ಹೇಳಬೇಕು”+ ಅಂದ್ರು.
6 ಹಾಗಾಗಿ ಅಪೊಸ್ತಲರು ಮತ್ತು ಹಿರಿಯರು ಈ ವಿಷ್ಯದ ಬಗ್ಗೆ ಮಾತಾಡೋಕೆ ಸೇರಿಬಂದ್ರು. 7 ತುಂಬ ಸಮಯ ಇದ್ರ ಬಗ್ಗೆ ವಾದ ವಿವಾದ ನಡಿತು. ಆಮೇಲೆ ಪೇತ್ರ ಎದ್ದುನಿಂತು ಅವ್ರಿಗೆ “ಸಹೋದರರೇ, ಯೆಹೂದ್ಯರಲ್ಲದ ಜನ ಸಿಹಿಸುದ್ದಿ ಕೇಳಿಸ್ಕೊಳ್ಳಬೇಕು ಮತ್ತು ಶಿಷ್ಯರಾಗಬೇಕು ಅನ್ನೋ ಉದ್ದೇಶದಿಂದ ದೇವರು ತುಂಬ ಮುಂಚೆನೇ ಸಹೋದರರಲ್ಲಿ ನನ್ನನ್ನ ಆರಿಸ್ಕೊಂಡನು ಅಂತ ನಿಮಗೆ ಚೆನ್ನಾಗಿ ಗೊತ್ತು.+ 8 ಅಷ್ಟೇ ಅಲ್ಲ ಹೃದಯದಲ್ಲಿ ಏನಿದೆ ಅಂತ ದೇವ್ರಿಗೆ ಚೆನ್ನಾಗಿ ಗೊತ್ತು.+ ಆತನು ನಮಗೆ ಕೊಟ್ಟ ಹಾಗೇ ಅವ್ರಿಗೂ ಪವಿತ್ರಶಕ್ತಿ ಕೊಟ್ಟನು.+ ಆತನು ಅವ್ರನ್ನೂ ಸ್ವೀಕರಿಸಿದ ಅನ್ನೋದಕ್ಕೆ ಅದೇ ಸಾಕ್ಷಿ. 9 ಆತನು ನಮ್ಗೂ ಅವ್ರಿಗೂ ಯಾವುದೇ ಭೇದಭಾವ ಮಾಡಲಿಲ್ಲ.+ ಅವ್ರ ನಂಬಿಕೆ ನೋಡಿ ಅವ್ರ ಪಾಪಗಳನ್ನ ಕ್ಷಮಿಸಿ ಅವ್ರ ಹೃದಯಗಳನ್ನ ಶುದ್ಧಮಾಡಿದನು.+ 10 ನೀವು ದೇವ್ರ ತಾಳ್ಮೆಯನ್ನ ಪರೀಕ್ಷಿಸಬೇಕು ಅಂತ ಅಂದ್ಕೊಳ್ತಿದ್ದೀರಾ? ಅವ್ರಿಗೆ ಸುನ್ನತಿ ಮಾಡಿಸ್ಕೊಳ್ಳಬೇಕು ಅಂತ ಹೇಳಿ ಯಾಕೆ ಅವ್ರ ಮೇಲೆ ಭಾರ ಹಾಕ್ತಾ ಇದ್ದೀರಾ?+ ಆ ಭಾರ ಹೊರೋಕೆ ನಮ್ಮ ಪೂರ್ವಜರು ಮತ್ತು ನಾವೇ ಕಷ್ಟಪಟ್ವಿ.+ 11 ಯೆಹೂದ್ಯರಾಗಿರೋ ನಮಗೆ ಯೇಸು ಪ್ರಭುವಿನ ಅಪಾರ ಕೃಪೆಯ+ ಮೂಲಕ ರಕ್ಷಣೆ ಸಿಗುತ್ತೆ ಅನ್ನೋ ನಂಬಿಕೆಯಿದೆ. ಅದೇ ನಂಬಿಕೆ ಅವ್ರಿಗೂ ಇದೆ”+ ಅಂದ.
12 ಅದನ್ನ ಕೇಳಿ ಎಲ್ರೂ ಸುಮ್ಮನಾದ್ರು. ಆಮೇಲೆ ಪೌಲ ಮತ್ತು ಬಾರ್ನಬ ತಮ್ಮ ಮೂಲಕ ದೇವರು ಮಾಡಿದ ಎಲ್ಲ ವಿಷ್ಯಗಳನ್ನ, ಅದ್ಭುತಗಳನ್ನ ವಿವರಿಸಿ ಹೇಳ್ತಾ ಇದ್ರು, ಎಲ್ರೂ ಕೇಳಿಸ್ಕೊಳ್ತಾ ಇದ್ರು. 13 ಅವರು ಮಾತಾಡಿದ ಮೇಲೆ ಯಾಕೋಬ ಹೀಗೆ ಹೇಳಿದ “ಸಹೋದರರೇ, ನಾನು ಹೇಳೋದನ್ನ ಕೇಳಿಸ್ಕೊಳ್ಳಿ. 14 ಯೆಹೂದ್ಯರಲ್ಲದ ಜನ್ರಲ್ಲೂ ದೇವ್ರ ಹೆಸ್ರನ್ನ ಗೌರವಿಸೋ ಜನ್ರಿದ್ದಾರೆ. ಮೊದಲನೇ ಸಲ ದೇವರು ಅವ್ರ ಕಡೆ ಗಮನಕೊಟ್ಟು ಅವ್ರನ್ನ ತನ್ನ ಜನ್ರಾಗಿ* ಆರಿಸ್ಕೊಂಡಿದ್ದಾನೆ. ಅದನ್ನೇ ಸಿಮೆಯೋನ+ ನಮಗೆ ತುಂಬ ಚೆನ್ನಾಗಿ ವಿವರಿಸಿದ.+ 15 ಪ್ರವಾದಿಗಳು ಬರೆದಿರೋ ಮಾತಿಗೆ ಇದು ಹೊಂದಾಣಿಕೆಯಲ್ಲೂ ಇದೆ. ಪ್ರವಾದಿಗಳು ಹೀಗೆ ಬರೆದ್ರು 16 ‘ಇದೆಲ್ಲ ಆದಮೇಲೆ ನಾನು ಬಿದ್ದುಹೋಗಿರೋ ದಾವೀದನ ಡೇರೆಯನ್ನ* ಎತ್ತಿ ನಿಲ್ಲಿಸ್ತೀನಿ, ಅದ್ರ ಹಾಳಾಗಿರೋ ಭಾಗಗಳನ್ನ ಸರಿಮಾಡಿ, ಮತ್ತೆ ಕಟ್ತೀನಿ. 17 ಆಗ ಉಳಿದವರು, ಎಲ್ಲ ದೇಶಗಳಲ್ಲಿರೋ ಜನ್ರ ಜೊತೆ ಸೇರಿ ಯೆಹೋವನಾದ* ನನ್ನ ಸೇವೆಮಾಡ್ತಾರೆ. ಇದನ್ನೆಲ್ಲ ಮಾಡ್ತಿರೋ ಯೆಹೋವ* ದೇವ್ರ ಹೆಸ್ರನ್ನ ಆ ಜನ ಹಾಡಿಹೊಗಳ್ತಾರೆ.+ 18 ಈ ಎಲ್ಲ ವಿಷ್ಯಗಳನ್ನ ಮಾಡ್ಬೇಕಂತ ದೇವರು ತುಂಬ ಮುಂಚೆನೇ ನಿರ್ಣಯ ಮಾಡಿದ್ದನು.’+ 19 ಹಾಗಾಗಿ ನನ್ನ ಅಭಿಪ್ರಾಯ ಏನಂದ್ರೆ, ದೇವ್ರ ಕಡೆ ತಿರುಗಿ ಬರ್ತಿರೋ ಬೇರೆ ಜನ್ರಿಗೆ ತೊಂದ್ರೆ ಕೊಡೋದು ಬೇಡ.+ 20 ಆದ್ರೆ ನಾವು ಅವ್ರಿಗೆ ಪತ್ರ ಬರೆದು, ಮೂರ್ತಿಗಳಿಗೆ ಸಂಬಂಧ ಪಟ್ಟ ಎಲ್ಲ ವಿಷ್ಯಗಳಿಂದ ದೂರ ಇರೋಕೆ,+ ಲೈಂಗಿಕ ಅನೈತಿಕತೆಯ+ ಬಲೆಗೆ ಬೀಳದೇ ಇರೋಕೆ, ಕತ್ತು ಹಿಸುಕಿ ಕೊಂದ ಪ್ರಾಣಿಯ ಮಾಂಸ ತಿನ್ನದೇ ಇರೋಕೆ ಮತ್ತು ರಕ್ತದಿಂದ+ ದೂರ ಇರೋಕೆ ಹೇಳೋಣ. 21 ಯಾಕಂದ್ರೆ ತುಂಬ ವರ್ಷಗಳಿಂದ ಮೋಶೆ ಬರೆದ ಪುಸ್ತಕಗಳಲ್ಲಿರೋ ಈ ಆಜ್ಞೆಗಳನ್ನ ಎಲ್ಲ ಊರುಗಳಲ್ಲಿ ಹೇಳ್ತಾ ಇದ್ದಾರೆ. ಪ್ರತಿ ಸಬ್ಬತ್ ದಿನ ಆ ಪುಸ್ತಕಗಳಲ್ಲಿರೋ ಮಾತುಗಳನ್ನ ಸಭಾಮಂದಿರಗಳಲ್ಲಿ ಜೋರಾಗಿ ಓದುತ್ತಿದ್ದಾರೆ.”+
22 ಆಗ ಅಪೊಸ್ತಲರು, ಹಿರಿಯರು ಮತ್ತು ಸಭೆಯಲ್ಲಿದ್ದ ಎಲ್ಲ ಸಹೋದರರು ಸೇರಿ ಒಂದು ನಿರ್ಣಯಕ್ಕೆ ಬಂದ್ರು. ಅವರು ಇಬ್ರು ಸಹೋದರರನ್ನ ಆರಿಸ್ಕೊಂಡು ಪೌಲ ಬಾರ್ನಬನ ಜೊತೆ ಅಂತಿಯೋಕ್ಯಕ್ಕೆ ಕಳಿಸಬೇಕು ಅಂದ್ಕೊಂಡ್ರು. ಹಾಗಾಗಿ ಮೇಲ್ವಿಚಾರಕರಾಗಿದ್ದ ಯೂದ (ಬಾರ್ಸಬ) ಮತ್ತು ಸೀಲನನ್ನ+ ಆರಿಸ್ಕೊಂಡ್ರು. 23 ಅಪೊಸ್ತಲರು ಮತ್ತು ಹಿರಿಯರು ಈ ಮಾತುಗಳನ್ನ ಬರೆದು ಇವ್ರ ಜೊತೆ ಕೊಟ್ಟು ಕಳಿಸಿದ್ರು:
“ಅಂತಿಯೋಕ್ಯ,+ ಸಿರಿಯ ಮತ್ತು ಕಿಲಿಕ್ಯದಲ್ಲಿರೋ ಯೆಹೂದ್ಯರಲ್ಲದ ಸಹೋದರರಿಗೆ ನಿಮ್ಮ ಸಹೋದರರಾದ ಅಪೊಸ್ತಲರು ಮತ್ತು ಹಿರಿಯರು ಬರಿತಿರೋ ಪತ್ರ: ಪ್ರೀತಿಯ ಸಹೋದರರೇ, ನಮಸ್ಕಾರ! 24 ನಾವು ಏನೂ ಹೇಳದಿದ್ರೂ ಇಲ್ಲಿಂದ ಕೆಲವರು ನಿಮ್ಮ ಹತ್ರ ಬಂದು ನಿಮ್ಮ ನಂಬಿಕೆನ ಹಾಳುಮಾಡೋಕೆ ಪ್ರಯತ್ನಿಸಿದ್ದಾರೆ ಮತ್ತು ಅವ್ರ ಮಾತುಗಳಿಂದ ನಿಮಗೆ ತೊಂದ್ರೆ ಆಯ್ತು ಅಂತ ನಮ್ಗೆ ಗೊತ್ತು.+ 25 ಹಾಗಾಗಿ ಇಬ್ರು ಸಹೋದರರನ್ನ ಆರಿಸ್ಕೊಂಡು ಅವ್ರನ್ನ ನಮ್ಮ ಪ್ರೀತಿಯ ಸಹೋದರರಾದ ಪೌಲ ಮತ್ತು ಬಾರ್ನಬರ ಜೊತೆ ನಿಮ್ಮ ಹತ್ರ ಕಳಿಸಬೇಕು ಅಂತ ನಾವೆಲ್ರೂ ಸೇರಿ ನಿರ್ಣಯ ಮಾಡಿದ್ವಿ. 26 ಬಾರ್ನಬ ಮತ್ತು ಪೌಲ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸ್ರಿಗೋಸ್ಕರ ತಮ್ಮ ಪ್ರಾಣವನ್ನ ಪಣಕ್ಕಿಟ್ಟಿದ್ದಾರೆ.+ 27 ಅವ್ರ ಜೊತೆ ನಾವು ಯೂದ ಮತ್ತು ಸೀಲನನ್ನ ಕಳಿಸ್ತಾ ಇದ್ದೀವಿ. ಅವರು ನಿಮ್ಗೆ ಈ ಪತ್ರದಲ್ಲಿರೋ ವಿಷ್ಯಗಳನ್ನ ವಿವರಿಸ್ತಾರೆ.+ 28 ತುಂಬ ಪ್ರಾಮುಖ್ಯವಾಗಿರೋ ವಿಷ್ಯಗಳನ್ನ ಬಿಟ್ಟು ಬೇರೆ ಯಾವುದೇ ಭಾರವನ್ನ ನಾವು ನಿಮ್ಮ ಮೇಲೆ ಹಾಕಬಾರದು ಅನ್ನೋ ನಿರ್ಣಯಕ್ಕೆ ಬರೋಕೆ ನಮ್ಗೆ ಪವಿತ್ರಶಕ್ತಿ+ ಸಹಾಯ ಮಾಡಿತು. 29 ಮೂರ್ತಿಗಳಿಗೆ ಬಲಿ ಕೊಟ್ಟಿದ್ದನ್ನ,+ ಕತ್ತು ಹಿಸುಕಿ+ ಕೊಂದ ಮಾಂಸವನ್ನ ತಿನ್ನಬೇಡಿ. ರಕ್ತದಿಂದ+ ದೂರ ಇರಿ. ಲೈಂಗಿಕ ಅನೈತಿಕತೆಯ+ ಬಲೆಗೆ ಬೀಳಬೇಡಿ. ಈ ಎಲ್ಲ ವಿಷ್ಯಗಳಿಂದ ನೀವು ದೂರ ಇದ್ರೆ ನಿಮ್ಮ ಜೀವನ ಚೆನ್ನಾಗಿರುತ್ತೆ. ನಿಮಗೆ ಒಳ್ಳೇ ಆರೋಗ್ಯ ಇರಲಿ!”
30 ಆ ಪತ್ರ ತಗೊಂಡು ಅವರು ಅಂತಿಯೋಕ್ಯಕ್ಕೆ ಬಂದ್ರು. ಅಲ್ಲಿದ್ದ ಶಿಷ್ಯರನ್ನೆಲ್ಲ ಒಂದು ಜಾಗದಲ್ಲಿ ಸೇರಿಸಿ ಆ ಪತ್ರವನ್ನ ಅವ್ರಿಗೆ ಕೊಟ್ರು. 31 ಅದನ್ನ ಓದಿದ ಮೇಲೆ ಅದ್ರಲ್ಲಿದ್ದ ಪ್ರೋತ್ಸಾಹದ ಮಾತುಗಳನ್ನ ನೋಡಿ ಅವ್ರಿಗೆ ತುಂಬ ಖುಷಿ ಆಯ್ತು. 32 ಯೂದ ಮತ್ತು ಸೀಲ ಪ್ರವಾದಿಗಳಾಗಿದ್ರಿಂದ ತುಂಬ ಭಾಷಣಗಳನ್ನ ಕೊಟ್ಟು ಸಹೋದರರನ್ನ ಪ್ರೋತ್ಸಾಹಿಸಿದ್ರು, ಬಲಪಡಿಸಿದ್ರು.+ 33 ಹೀಗೆ ಸ್ವಲ್ಪ ದಿನ ಆದಮೇಲೆ ಸಹೋದರರು ಅವ್ರನ್ನ ಕಳಿಸ್ಕೊಟ್ರು. ಅವರು ಯೆರೂಸಲೇಮಿಗೆ ವಾಪಸ್ ಹೋದ್ರು. 34 *—— 35 ಆದ್ರೆ ಪೌಲ ಮತ್ತು ಬಾರ್ನಬ ತುಂಬ ಸಹೋದರರ ಜೊತೆ ಸೇರಿ ಯೆಹೋವನ* ಸಂದೇಶವನ್ನ ಅಂದ್ರೆ ಸಿಹಿಸುದ್ದಿಯನ್ನ ಸಾರ್ತಾ, ಕಲಿಸ್ತಾ ಅಂತಿಯೋಕ್ಯದಲ್ಲೇ ಇದ್ರು.
36 ಸ್ವಲ್ಪ ದಿನಗಳಾದ ಮೇಲೆ ಬಾರ್ನಬನಿಗೆ ಪೌಲ “ನಾವು ಯೆಹೋವನ* ಸಂದೇಶವನ್ನ ಸಾರಿದ ಎಲ್ಲ ಊರುಗಳಿಗೆ ಮತ್ತೆ ಹೋಗಿ ಅಲ್ಲಿನ ಸಹೋದರರನ್ನ ಭೇಟಿಮಾಡೋಣ. ಅವ್ರ ಪರಿಸ್ಥಿತಿ ಹೇಗಿದೆ ಅಂತ ನೋಡೋಣ”+ ಅಂದ. 37 ಮಾರ್ಕ ಅನ್ನೋ ಹೆಸ್ರಿದ್ದ ಯೋಹಾನನನ್ನ+ ತಮ್ಮ ಜೊತೆ ಕರ್ಕೊಂಡು ಹೋಗಬೇಕು ಅಂತ ಬಾರ್ನಬ ಪಟ್ಟುಹಿಡಿದ. 38 ಆದ್ರೆ ಅವನನ್ನ ತಮ್ಮ ಜೊತೆ ಕರ್ಕೊಂಡು ಹೋಗೋಕೆ ಪೌಲನಿಗೆ ಇಷ್ಟ ಇರ್ಲಿಲ್ಲ. ಯಾಕಂದ್ರೆ ಪಂಫುಲ್ಯದಲ್ಲಿದ್ದಾಗ ಮಾರ್ಕ ಅವ್ರ ಜೊತೆ ಸೇವೆಮಾಡದೆ ಅವ್ರನ್ನ ಬಿಟ್ಟು ಹೋಗಿದ್ದ.+ 39 ಹಾಗಾಗಿ ಈ ವಿಷ್ಯದಲ್ಲಿ ಪೌಲ ಮತ್ತು ಬಾರ್ನಬನ ನಡುವೆ ದೊಡ್ಡ ಜಗಳ ಆಗಿ ಅವ್ರಿಬ್ರೂ ಬೇರೆ ಆದ್ರು. ಬಾರ್ನಬ+ ಮಾರ್ಕನನ್ನ ಕರ್ಕೊಂಡು ಹಡಗು ಹತ್ತಿ ಸೈಪ್ರಸ್ಗೆ ಹೋದ. 40 ಪೌಲ ಸೀಲನನ್ನ ಆರಿಸ್ಕೊಂಡ. ಪೌಲನ ಮೇಲೆ ಯೆಹೋವನ* ಅಪಾರ ಕೃಪೆ+ ಇರಲಿ ಅಂತ ಸಹೋದರರು ಪ್ರಾರ್ಥಿಸಿದ ಮೇಲೆ ಅವನು ತನ್ನ ಪ್ರಯಾಣ ಮುಂದುವರಿಸಿದ. 41 ಅವನು ಸಿರಿಯ ಮತ್ತು ಕಿಲಿಕ್ಯ ಪ್ರದೇಶಗಳಲ್ಲಿ ಪ್ರಯಾಣ ಮಾಡ್ತಾ ಅಲ್ಲಿದ್ದ ಸಭೆಗಳನ್ನ ಬಲಪಡಿಸ್ತಾ ಇದ್ದ.