ಗಲಾತ್ಯದವರಿಗೆ ಬರೆದ ಪತ್ರ
2 ನಾನು 14 ವರ್ಷಗಳಾದ ಮೇಲೆ ಮತ್ತೆ ಯೆರೂಸಲೇಮಿಗೆ ಹೋದೆ, ಜೊತೆಗೆ ಬಾರ್ನಬ+ ಮತ್ತು ತೀತನನ್ನ ಕರ್ಕೊಂಡು ಹೋದೆ.+ 2 ಅಲ್ಲಿ ಹೋಗಬೇಕಂತ ಸ್ವರ್ಗದಿಂದ ಯೇಸು ನನಗೆ ಹೇಳಿದ್ರಿಂದ ಹೋದೆ. ಅಲ್ಲಿ ಒಳ್ಳೇ ಹೆಸ್ರಿದ್ದ ಸಹೋದರರನ್ನ ಮಾತ್ರ ಭೇಟಿಯಾಗಿ ನಾನು ಅವ್ರಿಗೆ ಬೇರೆ ಜನಾಂಗಗಳಿಗೆ ಸಾರ್ತಿದ್ದ ಸಿಹಿಸುದ್ದಿಯನ್ನ ಹೇಳ್ದೆ. ನಾನು ಮಾಡ್ತಿದ್ದ ಮತ್ತು ಮುಂಚೆ ಮಾಡಿದ್ದ ಸೇವೆ ವ್ಯರ್ಥ ಅಲ್ಲ ಅಂತ ಸಾಬೀತು ಮಾಡೋಕೆ ನಾನು ಹೀಗೆ ಮಾಡಿದೆ. 3 ನನ್ನ ಜೊತೆ ಇದ್ದ ತೀತ+ ಗ್ರೀಕನಾಗಿದ್ರೂ ಅಲ್ಲಿ ಇದ್ದವ್ರಲ್ಲಿ ಯಾರೂ ಅವನಿಗೆ ಸುನ್ನತಿ ಆಗಬೇಕು+ ಅಂತ ಒತ್ತಾಯ ಮಾಡಲಿಲ್ಲ. 4 ಆದ್ರೆ ಇದ್ರ ಬಗ್ಗೆ ಸುಳ್ಳು ಸಹೋದರರು ಸಮಸ್ಯೆ ಹುಟ್ಟಿಸಿದ್ರು. ಅವರು ನಮ್ಮನ್ನ ಗುಟ್ಟಾಗಿ ಗಮನಿಸೋಕೆ ಸಭೆ ಒಳಗೆ ಕಳ್ಳತನದಿಂದ ಸೇರ್ಕೊಂಡಿದ್ರು,+ ಕ್ರಿಸ್ತ ಯೇಸು ಜೊತೆ ಒಂದಾಗಿರೋದ್ರಿಂದ ನಮಗೆ ಸಿಕ್ಕಿದ ಸ್ವಾತಂತ್ರ್ಯವನ್ನ+ ಕಿತ್ಕೊಂಡು ನಮ್ಮನ್ನ ಪೂರ್ತಿ ದಾಸರಾಗಿ ಮಾಡಬೇಕಂತಿದ್ರು.+ 5 ಆದ್ರೆ ಸಿಹಿಸುದ್ದಿಯ ಸತ್ಯ ನಿಮ್ಮಲ್ಲಿ ದೃಢವಾಗಿ ಇರಬೇಕಂತ ನಾವು ಅವ್ರ ಮಾತನ್ನ ಕೇಳಿಸ್ಕೊಳ್ಳಲಿಲ್ಲ, ಅವ್ರಿಗೆ ಒಂಚೂರೂ ಬಗ್ಗಲಿಲ್ಲ.+
6 ಪ್ರಮುಖ ವ್ಯಕ್ತಿಗಳಾಗಿದ್ದ ಸಹೋದರರು+ ನನಗೆ ಯಾವ ಹೊಸ ವಿಷ್ಯನೂ ಹೇಳಲಿಲ್ಲ. ಅವರು ಮುಂಚೆ ಹೇಗಿದ್ರು ಅನ್ನೋದು ನನಗೆ ಮುಖ್ಯ ಅಲ್ಲ ಯಾಕಂದ್ರೆ ದೇವರು ಮನುಷ್ಯನ ಹೊರತೋರಿಕೆ ನೋಡಲ್ಲ. 7 ಯೆಹೂದ್ಯರಿಗೆ* ಸಿಹಿಸುದ್ದಿ ಸಾರೋ ಕೆಲಸವನ್ನ ಪೇತ್ರನಿಗೆ ಕೊಟ್ಟ ಹಾಗೆ ಬೇರೆ ಜನಾಂಗದವ್ರಿಗೆ*+ ಸಿಹಿಸುದ್ದಿ ಸಾರೋ ಕೆಲಸವನ್ನ ನನಗೆ ಕೊಡಲಾಗಿದೆ ಅಂತ ಅವರು ಅರ್ಥ ಮಾಡ್ಕೊಂಡ್ರು. 8 ಯೆಹೂದ್ಯರಿಗೆ ಅಪೊಸ್ತಲನಾಗಿರೋಕೆ ಪೇತ್ರನಿಗೆ ದೇವರು ಶಕ್ತಿ ಕೊಟ್ಟ ಹಾಗೆ ಬೇರೆ ಜನಾಂಗಗಳಿಗೆ ಅಪೊಸ್ತಲನಾಗಿರೋಕೆ ದೇವರು ನನಗೂ ಶಕ್ತಿ ಕೊಟ್ಟಿದ್ದಾನೆ.+ 9 ಅಷ್ಟೇ ಅಲ್ಲ ನನಗೆ ದೇವರು ಅಪಾರ ಕೃಪೆ ತೋರಿಸಿದ್ದಾನೆ+ ಅಂತ ಅವರು ತಿಳ್ಕೊಂಡ್ರು. ಸಭೆಗೆ ಕಂಬಗಳ ತರ ಇದ್ದ ಯಾಕೋಬ,+ ಕೇಫ* ಮತ್ತು ಯೋಹಾನ ತಮ್ಮ ಬಲಗೈಯಿಂದ ನನ್ನ ಮತ್ತು ಬಾರ್ನಬನ+ ಕೈಕುಲುಕಿ, “ಸರಿ, ನೀವು ಬೇರೆ ಜನಾಂಗಗಳ ಜನ್ರಿಗೆ ಸಾರಿ, ನಾವು ಯೆಹೂದ್ಯರಿಗೆ ಸಾರ್ತಿವಿ” ಅಂದ್ರು. 10 ಬಡ ಸಹೋದರರನ್ನ ಮರಿಬೇಡಿ ಅಂತ ಕೇಳ್ಕೊಂಡ್ರು. ನಾನೂ ಅದನ್ನೇ ಮಾಡೋಕೆ ತುಂಬ ಶ್ರಮ ಹಾಕಿದ್ದೀನಿ.+
11 ಆದ್ರೆ ಕೇಫ*+ ಅಂತಿಯೋಕ್ಯಕ್ಕೆ+ ಬಂದಾಗ ನಾನು ಅವನ ಮುಂದೆನೇ ಅವನ ತಪ್ಪನ್ನ ತೋರಿಸಿದೆ,* ಯಾಕಂದ್ರೆ ಅವನು ಮಾಡ್ತಿರೋದು ಸರಿ ಇರಲಿಲ್ಲ. 12 ಯಾಕೋಬನ+ ಕಡೆಯಿಂದ ಸ್ವಲ್ಪ ಜನ ಬರೋ ಮುಂಚೆ ಅವನು ಬೇರೆ ಜನಾಂಗಗಳವ್ರ ಜೊತೆ ಊಟ ಮಾಡ್ತಿದ್ದ.+ ಆದ್ರೆ ಅವರು ಬಂದಾಗ ಇವ್ರನ್ನ ಬಿಟ್ಟು ದೂರಹೋದ. ಯಾಕಂದ್ರೆ ಸುನ್ನತಿ ಆದವ್ರಿಗೆ ಅವನು ಹೆದರಿದ.+ 13 ಉಳಿದ ಯೆಹೂದ್ಯರೂ ಅವನ ಜೊತೆ ಸೇರ್ಕೊಂಡು ಈ* ತರ ನಾಟಕ ಆಡಿದ್ರು. ಬಾರ್ನಬನೂ ಅವ್ರ* ತರ ನಾಟಕ ಆಡಿದ. 14 ಅವರು ಸಿಹಿಸುದ್ದಿಯ ಸತ್ಯಕ್ಕೆ ತಕ್ಕ ಹಾಗೆ ನಡೀತಿಲ್ಲ+ ಅಂತ ನಾನು ನೋಡಿದಾಗ ಅವ್ರೆಲ್ಲರ ಮುಂದೆ ಕೇಫನಿಗೆ* “ನೀನು ಒಬ್ಬ ಯೆಹೂದ್ಯನಾಗಿದ್ರೂ ಯೆಹೂದ್ಯರ ತರ ನಡ್ಕೊಳ್ಳದೆ ಬೇರೆ ಜನಾಂಗದವ್ರ ತರ ಯಾಕೆ ನಡ್ಕೊಳ್ತಾ ಇದ್ದೀಯಾ. ಹೀಗಾದ್ರೆ ನೀನು ಆ ಜನ್ರಿಗೆ ಯೆಹೂದಿ ಪದ್ಧತಿಯನ್ನ ಪಾಲಿಸಬೇಕು ಅಂತ ಒತ್ತಾಯ ಮಾಡೋಕೆ ಹೇಗಾಗುತ್ತೆ?” ಅಂತ ಕೇಳಿದೆ.+
15 ನಾವು ಹುಟ್ಟಿದಾಗಿಂದಾನೂ ಯೆಹೂದ್ಯರು, ಪಾಪಿಗಳಾಗಿರೋ ಬೇರೆ ಜನಾಂಗಗಳ ಜನ್ರ ತರ ಅಲ್ಲ. 16 ಒಬ್ಬನು ನಿಯಮ ಪುಸ್ತಕ ಹೇಳೋದನ್ನ ಪಾಲಿಸಿದ ತಕ್ಷಣ ದೇವರು ಅವನನ್ನ ನೀತಿವಂತನಾಗಿ ನೋಡಲ್ಲ, ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ರೆ ಮಾತ್ರ ನೀತಿವಂತನಾಗಿ ನೋಡ್ತಾನೆ+ ಅಂತ ನಮಗೆ ಗೊತ್ತು. ಹಾಗಾಗಿ ನಿಯಮ ಪುಸ್ತಕ ಹೇಳೋದನ್ನ ಪಾಲಿಸೋದ್ರಿಂದ ಅಲ್ಲ, ಕ್ರಿಸ್ತನಲ್ಲಿ ನಂಬಿಕೆ ಇಡೋದ್ರಿಂದ ದೇವರು ನಮ್ಮನ್ನ ನೀತಿವಂತರಾಗಿ ನೋಡಬೇಕು ಅಂತ ನಾವು ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದೀವಿ. ಯಾಕಂದ್ರೆ ನಿಯಮ ಪುಸ್ತಕವನ್ನ ಪಾಲಿಸೋದ್ರಿಂದ ದೇವರು ಯಾರನ್ನೂ ನೀತಿವಂತ ಅಂತ ಅನ್ನಲ್ಲ.+ 17 ನಾವು ಕ್ರಿಸ್ತನ ಮೂಲಕ ನೀತಿವಂತರಾಗಿ ಇರೋಕೆ ಪ್ರಯತ್ನಿಸ್ತಿದ್ರೂ ನಮ್ಮನ್ನ ಪಾಪಿಗಳಾಗಿ ನೋಡಿದ್ರೆ ಅದ್ರರ್ಥ ಕ್ರಿಸ್ತನು ನಮ್ಮಿಂದ ಪಾಪ ಮಾಡಿಸ್ತಾ ಇದ್ದಾನೆ ಅಂತಾನಾ? ಅಲ್ವೇ ಅಲ್ಲ! 18 ನಾನು ಮುಂಚೆ ಕೆಡವಿದ್ದನ್ನೇ ಮತ್ತೆ ಕಟ್ಟಿದ್ರೆ ನಾನು ಅಪರಾಧಿ ಅಂತ ನಾನೇ ತೋರಿಸ್ಕೊಟ್ಟ ಹಾಗೆ. 19 ನಾನು ನಿಯಮ ಪುಸ್ತಕದ ಪಾಲಿಗೆ ಸತ್ತು ಹೋದೆ.+ ಆದ್ರೆ ಹಾಗೆ ಸತ್ತಿದ್ರಿಂದ ದೇವರ ಪಾಲಿಗೆ ಬದುಕಿದೆ. 20 ಕ್ರಿಸ್ತನ ಜೊತೆ ನನ್ನನ್ನೂ ಕಂಬಕ್ಕೆ ಜಡಿದ್ರು.+ ನಾನು ಇನ್ಮುಂದೆ ನನಗೋಸ್ಕರ ಅಲ್ಲ,+ ಕ್ರಿಸ್ತನ ಜೊತೆ ಒಂದಾಗಿರೋಕೆ ಜೀವನ ಮಾಡ್ತೀನಿ.* ಹಾಗಾಗಿ ನನ್ನನ್ನ ಪ್ರೀತಿಸಿ ನನಗೋಸ್ಕರ ತನ್ನ ಜೀವವನ್ನೇ ಕೊಟ್ಟ+ ದೇವರ ಮಗನಲ್ಲಿ ನನಗಿರೋ ನಂಬಿಕೆಗೆ ತಕ್ಕ ಹಾಗೆ ನಾನು ಜೀವಿಸ್ತೀನಿ.+ 21 ನಾನು ದೇವರ ಅಪಾರ ಕೃಪೆಯನ್ನ ತಳ್ಳಿಹಾಕಲ್ಲ.+ ಯಾಕಂದ್ರೆ ನಿಯಮ ಪುಸ್ತಕ ಪಾಲಿಸೋದ್ರಿಂದ ಒಬ್ಬನು ನೀತಿವಂತನಾದ್ರೆ ಕ್ರಿಸ್ತ ಸತ್ತಿದ್ದು ವ್ಯರ್ಥ ಆಗುತ್ತೆ.+