ಎರಡನೇ ಸಮುವೇಲ
11 ವರ್ಷದ ಆರಂಭದಲ್ಲಿ* ರಾಜರು ಯುದ್ಧಕ್ಕೆ ಹೋಗ್ತಿದ್ದ ಸಮಯದಲ್ಲಿ ಅಮ್ಮೋನಿಯರನ್ನ ನಾಶ ಮಾಡೋಕೆ ದಾವೀದ ಯೋವಾಬನನ್ನ, ಅವನ ಸೇವಕರನ್ನ, ಇಡೀ ಇಸ್ರಾಯೇಲ್ ಸೈನ್ಯವನ್ನ ಕಳಿಸಿದ. ಅವರು ರಬ್ಬಾ ಪಟ್ಟಣಕ್ಕೆ ಮುತ್ತಿಗೆ ಹಾಕಿದ್ರು.+ ಆದ್ರೆ ದಾವೀದ ಯೆರೂಸಲೇಮಲ್ಲೇ ಉಳ್ಕೊಂಡ.+
2 ಒಂದಿನ ಸಂಜೆ* ದಾವೀದ ಹಾಸಿಗೆಯಿಂದ ಎದ್ದು ರಾಜನ ಅರಮನೆಯ ಮಾಳಿಗೆ ಮೇಲೆ ನಡಿತಿದ್ದಾಗ ಒಬ್ಬ ಸ್ತ್ರೀ ಸ್ನಾನ ಮಾಡೋದನ್ನ ನೋಡಿದ. ಅವಳು ನೋಡೋಕೆ ತುಂಬ ಸುಂದರವಾಗಿದ್ದಳು. 3 ಒಬ್ಬನನ್ನ ಕಳಿಸಿ ದಾವೀದ ಅವಳ ಬಗ್ಗೆ ವಿಚಾರಿಸಿದ. ಅವನು ವಾಪಸ್ ಬಂದು “ಅವಳ ಹೆಸ್ರು ಬತ್ಷೆಬೆ.+ ಎಲೀಯಾಮನ ಮಗಳು,+ ಹಿತ್ತಿಯನಾದ+ ಊರೀಯನ+ ಹೆಂಡತಿ” ಅಂತ ಹೇಳಿದ. 4 ದಾವೀದ ಸಂದೇಶವಾಹಕರನ್ನ ಕಳಿಸಿ ಅವಳನ್ನ ಕರ್ಕೊಂಡು ಬರೋಕೆ ಹೇಳಿದ.+ ಅವಳು ಬಂದಳು, ಅವಳ ಜೊತೆ ಮಲಗಿಕೊಂಡ.+ (ಇದೆಲ್ಲ ಅವಳು ತನ್ನನ್ನ ಶುದ್ಧೀಕರಿಸ್ಕೊಳ್ತಿದ್ದ ಸಮಯದಲ್ಲಿ* ನಡಿತು.)+ ಆಮೇಲೆ ಅವಳು ತನ್ನ ಮನೆಗೆ ಹೋದಳು.
5 ಅವಳು ಗರ್ಭಿಣಿ ಆದಳು. ಅವಳು ದಾವೀದನಿಗೆ “ನಾನು ಗರ್ಭಿಣಿ ಆಗಿದ್ದೀನಿ” ಅಂತ ಹೇಳಿ ಕಳಿಸಿದಳು. 6 ಆಗ ದಾವೀದ ಯೋವಾಬನಿಗೆ “ಹಿತ್ತಿಯನಾದ ಊರೀಯನನ್ನ ನನ್ನ ಹತ್ರ ಕಳಿಸ್ಕೊಡು” ಅನ್ನೋ ಸಂದೇಶವನ್ನ ಕಳಿಸಿದ. ಹಾಗಾಗಿ ಯೋವಾಬ ಊರೀಯನನ್ನ ದಾವೀದನ ಹತ್ರ ಕಳಿಸಿದ. 7 ಊರೀಯ ಬಂದಾಗ ದಾವೀದ ಅವನಿಗೆ ಯೋವಾಬ ಹೇಗಿದ್ದಾನೆ, ಸೈನ್ಯ ಹೇಗಿದೆ, ಯುದ್ಧ ಹೇಗೆ ನಡಿತಿದೆ ಅಂತ ಕೇಳಿದ. 8 ಆಮೇಲೆ ದಾವೀದ ಊರೀಯನಿಗೆ “ನೀನು ಮನೆಗೆ ಹೋಗಿ ಆರಾಮ ಮಾಡು”* ಅಂತ ಹೇಳಿದ. ಊರೀಯ ರಾಜನ ಮನೆಯಿಂದ ಹೊರಟಾಗ ಅವನ ಹಿಂದೆ ರಾಜನ ಉಡುಗೊರೆಯನ್ನ* ಕಳಿಸ್ಕೊಟ್ಟ. 9 ಆದ್ರೆ ಊರೀಯ ತನ್ನ ಒಡೆಯನ ಬೇರೆ ಸೇವಕರ ಜೊತೆ ರಾಜನ ಮನೆ ಬಾಗಿಲ ಹತ್ರ ಮಲಗಿಕೊಂಡ. ಅವನು ತನ್ನ ಮನೆಗೆ ಹೋಗಲಿಲ್ಲ. 10 “ಊರೀಯ ತನ್ನ ಮನೆಗೆ ಹೋಗಲಿಲ್ಲ” ಅಂತ ದಾವೀದನಿಗೆ ಗೊತ್ತಾಯ್ತು. ಆಗ ದಾವೀದ ಊರೀಯನಿಗೆ “ಪ್ರಯಾಣ ಮಾಡಿ ನೀನು ಈಗಷ್ಟೇ ಬಂದಿದ್ದೀಯಾ, ಯಾಕೆ ನೀನು ಮನೆಗೆ ಹೋಗಲಿಲ್ಲ?” ಅಂತ ಕೇಳಿದ. 11 ಊರೀಯ ದಾವೀದನಿಗೆ “ಮಂಜೂಷ,+ ಇಸ್ರಾಯೇಲಿನ ಮತ್ತು ಯೆಹೂದದ ಇಡೀ ಸೇನೆ ತಾತ್ಕಾಲಿಕ ಆಸರೆಯಲ್ಲಿದೆ. ನನ್ನ ಒಡೆಯನಾದ ಯೋವಾಬ, ನನ್ನ ಒಡೆಯನ ಸೇವಕರು ಬಯಲಲ್ಲಿ ಪಾಳೆಯ ಹಾಕೊಂಡಿದ್ದಾರೆ. ಹೀಗಿರುವಾಗ ನಾನು ಹೇಗೆ ಮನೆಗೆ ಹೋಗಿ ಊಟ ಮಾಡಿ ಹೆಂಡತಿ ಜೊತೆ ಮಲಗಿಕೊಳ್ಳಲಿ?+ ನಿನ್ನ ಮೇಲೆ, ನಿನ್ನ ಜೀವದ ಮೇಲೆ ಆಣೆ ಮಾಡಿ ಹೇಳ್ತೀನಿ, ನಾನು ಹಾಗೆ ಮಾಡಲ್ಲ!” ಅಂದ.
12 ಆಮೇಲೆ ದಾವೀದ ಊರೀಯನಿಗೆ “ಇವತ್ತು ಕೂಡ ನೀನು ಇಲ್ಲೇ ಉಳ್ಕೊ. ನಾಳೆ ನಿನ್ನನ್ನ ಕಳಿಸ್ಕೊಡ್ತೀನಿ” ಅಂದ. ಊರೀಯ ಆ ದಿನ, ಮಾರನೇ ದಿನ ಯೆರೂಸಲೇಮಲ್ಲೇ ಉಳ್ಕೊಂಡ. 13 ಆಮೇಲೆ ದಾವೀದ ತನ್ನ ಜೊತೆ ಊಟ ಮಾಡೋಕೆ ಊರೀಯನನ್ನ ಬರೋಕೆ ಹೇಳಿದ. ಊರೀಯನಿಗೆ ಮತ್ತೇರೋ ತನಕ ಕುಡಿಸಿದ. ಆದ್ರೆ ಆ ಸಂಜೆ ಊರೀಯ ತನ್ನ ಮನೆಗೆ ಹೋಗದೆ ತನ್ನ ಒಡೆಯನ ಸೇವಕರ ಹತ್ರ ಹೋಗಿ ಅಲ್ಲಿ ಮಲಗಿಕೊಂಡ. 14 ಬೆಳಿಗ್ಗೆ ದಾವೀದ ಯೋವಾಬನಿಗೆ ಒಂದು ಪತ್ರ ಬರೆದು ಊರೀಯನ ಕೈಯಲ್ಲಿ ಕಳಿಸ್ಕೊಟ್ಟ. 15 ಆ ಪತ್ರದಲ್ಲಿ “ಊರೀಯನ ಮೇಲೆ ಶತ್ರುಗಳು ದಾಳಿ ಮಾಡಿ ಸಾಯಿಸೋ ತರ ದೊಡ್ಡ ಯುದ್ಧ ನಡಿಯೋ ಕಡೆ ಅವನನ್ನ ಮುಂದಿನ ಸಾಲಲ್ಲಿ ನಿಲ್ಲಿಸಿ ನೀವು ಹಿಂದೆ ಹೋಗಿ”+ ಅಂತ ದಾವೀದ ಬರೆದಿದ್ದ.
16 ಯೋವಾಬ ಪಟ್ಟಣವನ್ನ ಸೂಕ್ಷ್ಮವಾಗಿ ಗಮನಿಸ್ತಾ ಇದ್ದ. ಹಾಗಾಗಿ ವೀರ ಸೈನಿಕರು ಯಾವ ಜಾಗದಲ್ಲಿ ಇರ್ತಾರೆ ಅಂತ ತಿಳ್ಕೊಂಡು ಊರೀಯನನ್ನ ಆ ಜಾಗದಲ್ಲಿ ನಿಲ್ಲಿಸಿದ. 17 ಆ ಪಟ್ಟಣದ ಗಂಡಸ್ರು ಹೊರಗೆ ಬಂದು ಯೋವಾಬನ ವಿರುದ್ಧ ಯುದ್ಧ ಮಾಡಿದಾಗ ದಾವೀದನ ಕೆಲವು ಸೇವಕರು ಸತ್ತುಹೋದ್ರು. ಅವ್ರಲ್ಲಿ ಹಿತ್ತಿಯನಾದ ಊರೀಯನೂ ಇದ್ದ.+ 18 ಯೋವಾಬ ಯುದ್ಧದ ಪೂರ್ತಿ ವರದಿಯನ್ನ ದಾವೀದನಿಗೆ ಕಳಿಸ್ಕೊಟ್ಟ. 19 ಅವನು ಸಂದೇಶವಾಹಕನಿಗೆ “ನೀನು ಯುದ್ಧದ ಪೂರ್ತಿ ವರದಿಯನ್ನ ರಾಜನಿಗೆ ಒಪ್ಪಿಸಿದ್ಮೇಲೆ, 20 ರಾಜ ನಿನ್ನ ಮೇಲೆ ಕೋಪದಿಂದ ‘ಯುದ್ಧ ಮಾಡೋಕೆ ನೀವು ಪಟ್ಟಣದ ಅಷ್ಟು ಹತ್ರ ಯಾಕೆ ಹೋದ್ರಿ? ಅವರು ಗೋಡೆ ಮೇಲಿಂದ ನಿಮ್ಮ ಮೇಲೆ ಬಾಣ ಬಿಡಬಹುದು ಅಂತ ನಿಮಗೆ ಗೊತ್ತಿಲ್ವಾ? 21 ಯೆರುಬ್ಬೆಷೆತನ ಮಗ ಅಬೀಮೆಲೆಕನನ್ನ ಸಾಯಿಸಿದವರು ಯಾರು?+ ಗೋಡೆ ಮೇಲಿಂದ ಬೀಸೋ ಕಲ್ಲು ಎತ್ತಿಹಾಕಿ ತೇಬೇಚಿನಲ್ಲಿ ಅವನನ್ನ ಸಾಯಿಸಿದ್ದು ಒಬ್ಬ ಸ್ತ್ರೀ ತಾನೇ? ಯಾಕೆ ಗೋಡೆಗೆ ಅಷ್ಟು ಹತ್ರ ಹೋದ್ರಿ?’ ಅಂತ ಕೇಳಿದ್ರೆ ‘ಹಿತ್ತಿಯನಾದ ನಿನ್ನ ಸೇವಕ ಊರೀಯನೂ ತೀರಿಹೋದ’ ಅಂತ ಹೇಳು ಅಂದ.”
22 ಸಂದೇಶವಾಹಕ ದಾವೀದನ ಹತ್ರ ಹೋಗಿ ಯೋವಾಬ ತನ್ನ ಹತ್ರ ಹೇಳಿದ್ದನ್ನೆಲ್ಲ ತಿಳಿಸಿದ. 23 ಸಂದೇಶವಾಹಕ ದಾವೀದನಿಗೆ “ಅವ್ರ ಗಂಡಸ್ರು ನಮಗಿಂತ ಬಲಶಾಲಿಗಳು. ಅವರು ಬಯಲಿಗೆ ಬಂದು ನಮ್ಮ ಮೇಲೆ ದಾಳಿ ಮಾಡಿದ್ರು. ಆದ್ರೆ ನಾವು ಅವ್ರನ್ನ ಪಟ್ಟಣದ ಬಾಗಿಲ ತನಕ ಓಡಿಸ್ಕೊಂಡು ಹೋದ್ವಿ. 24 ಗೋಡೆ ಮೇಲಿಂದ ಬಿಲ್ಲುಗಾರರು ನಿನ್ನ ಸೇವಕರ ಮೇಲೆ ಬಾಣಗಳನ್ನ ಬಿಟ್ಟಾಗ ರಾಜನ ಕೆಲವು ಸೇವಕರು ಸತ್ರು. ಹಿತ್ತಿಯನಾದ ನಿನ್ನ ಸೇವಕ ಊರೀಯನೂ ತೀರಿಹೋದ”+ ಅಂದ. 25 ಅದಕ್ಕೆ ದಾವೀದ ಸಂದೇಶವಾಹಕನಿಗೆ “ಯೋವಾಬನಿಗೆ ಹೀಗೆ ಹೇಳು: ‘ಈ ವಿಷ್ಯದ ಬಗ್ಗೆ ನೀನು ಕೊರಗಬೇಡ. ಯಾಕಂದ್ರೆ ಯುದ್ಧದಲ್ಲಿ ಯಾರು ಬೇಕಾದ್ರೂ ಸಾಯಬಹುದು. ಆ ಪಟ್ಟಣದ ವಿರುದ್ಧ ನಿನ್ನ ಯುದ್ಧವನ್ನ ಜಾಸ್ತಿ ಮಾಡಿ ಅದನ್ನ ವಶ ಮಾಡ್ಕೊ’”+ ಅಂದ.
26 ಊರೀಯನ ಹೆಂಡತಿಗೆ ತನ್ನ ಗಂಡ ತೀರಿಹೋದ ಸುದ್ದಿ ಗೊತ್ತಾದಾಗ ಶೋಕಿಸಿದಳು. 27 ಶೋಕ ಕಾಲ ಮುಗಿದ ಕೂಡ್ಲೇ ದಾವೀದ ಅವಳನ್ನ ತನ್ನ ಮನೆಗೆ ಕರ್ಕೊಂಡು ಬರೋಕೆ ಸೇವಕರನ್ನ ಕಳಿಸಿದ. ಅವಳು ಅವನ ಹೆಂಡತಿ ಆದಳು,+ ಅವಳಿಗೆ ಒಂದು ಗಂಡು ಮಗು ಹುಟ್ಟಿತು. ಆದ್ರೆ ದಾವೀದನ ಈ ಕೆಲಸ ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗಲಿಲ್ಲ.+