ಎರಡನೇ ಅರಸು
25 ಚಿದ್ಕೀಯ ಆಳ್ತಿದ್ದ ಒಂಬತ್ತನೇ ವರ್ಷದ ಹತ್ತನೇ ತಿಂಗಳಿನ ಹತ್ತನೇ ದಿನದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ+ ತನ್ನೆಲ್ಲ ಸೈನ್ಯದ ಜೊತೆ ಯೆರೂಸಲೇಮಿನ ಮೇಲೆ ದಾಳಿ ಮಾಡೋಕೆ ಬಂದ.+ ಅವ್ರೆಲ್ಲ ಅದ್ರ ಮುಂದೆ ಪಾಳೆಯ ಹೂಡಿ ಅದ್ರ ಸುತ್ತಲೂ ಇಳಿಜಾರು ದಿಬ್ಬ ಕಟ್ಟಿದ್ರು.+ 2 ಚಿದ್ಕೀಯ ಆಳ್ತಿದ್ದ 11ನೇ ವರ್ಷದ ತನಕ ಪಟ್ಟಣಕ್ಕೆ ಮುತ್ತಿಗೆ ಹಾಕಲಾಗಿತ್ತು. 3 ನಾಲ್ಕನೇ ತಿಂಗಳಿನ ಒಂಬತ್ತನೇ ದಿನದಲ್ಲಿ ಬರಗಾಲ ಹೆಚ್ಚಾಯ್ತು.+ ಇದ್ರಿಂದ ದೇಶದ ಜನ್ರ ಹತ್ರ ತಿನ್ನೋಕೆ ಆಹಾರ ಇರಲಿಲ್ಲ.+ 4 ಆಗ ಪಟ್ಟಣದ ಗೋಡೆಯನ್ನ ಕೆಡವಿ ಹಾಕಲಾಯ್ತು.+ ಕಸ್ದೀಯರು ಪಟ್ಟಣವನ್ನ ಸುತ್ತುವರಿಯುತ್ತಿದ್ದಾಗ ಯೆರೂಸಲೇಮಿನ ಸೈನಿಕರೆಲ್ಲ ರಾತ್ರೋರಾತ್ರಿ ರಾಜನ ತೋಟದ ಪಕ್ಕದಲ್ಲಿದ್ದ ಎರಡು ಗೋಡೆಗಳ ಮಧ್ಯದಿಂದ ಓಡಿಹೋದ್ರು. ಅರಾಬಾ ದಾರಿಯಲ್ಲಿ ರಾಜ ಓಡಿಹೋದ.+ 5 ಆದ್ರೆ ಕಸ್ದೀಯರ ಸೈನಿಕರು ರಾಜನನ್ನ ಅಟ್ಟಿಸ್ಕೊಂಡು ಹೋಗಿ ಯೆರಿಕೋವಿನ ಬಯಲು ಪ್ರದೇಶಗಳಲ್ಲಿ ಅವನನ್ನ ಹಿಡಿದ್ರು. ಆಗ ರಾಜನ ಸೈನಿಕರೆಲ್ಲ ಅವನನ್ನ ಬಿಟ್ಟು ದಿಕ್ಕುಪಾಲಾಗಿ ಓಡಿಹೋದ್ರು. 6 ಆಮೇಲೆ ಅವರು ರಾಜನನ್ನ ಬಂಧಿಸಿ+ ರಿಬ್ಲದಲ್ಲಿದ್ದ ಬಾಬೆಲಿನ ರಾಜನ ಹತ್ರ ಕರ್ಕೊಂಡು ಬಂದ್ರು. ಅಲ್ಲಿ ಅವನಿಗೆ ಶಿಕ್ಷೆ ಸಿಕ್ತು. 7 ಅವರು ಚಿದ್ಕೀಯನ ಗಂಡು ಮಕ್ಕಳನ್ನ ಅವನ ಕಣ್ಮುಂದೆನೇ ಕಡಿದುಹಾಕಿದ್ರು. ನೆಬೂಕದ್ನೆಚ್ಚರ ಚಿದ್ಕೀಯನ ಕಣ್ಣುಗಳನ್ನ ಕುರುಡು ಮಾಡಿ ಅವನಿಗೆ ತಾಮ್ರದ ಬೇಡಿಗಳನ್ನ ಹಾಕಿ ಬಾಬೆಲಿಗೆ ಕರ್ಕೊಂಡು ಬಂದ.+
8 ಬಾಬೆಲಿನ ರಾಜ ನೆಬೂಕದ್ನೆಚ್ಚರ ಆಳ್ತಿದ್ದ 19ನೇ ವರ್ಷದ ಐದನೇ ತಿಂಗಳಿನ ಏಳನೇ ದಿನದಲ್ಲಿ ಅವನ ಸೇವಕನೂ ಕಾವಲುಗಾರರ ಮುಖ್ಯಸ್ಥನೂ ಆಗಿದ್ದ ನೆಬೂಜರದಾನ+ ಯೆರೂಸಲೇಮಿಗೆ ಬಂದ.+ 9 ಅವನು ಯೆಹೋವನ ಆಲಯವನ್ನ,+ ರಾಜನ ಅರಮನೆಯನ್ನ,+ ಯೆರೂಸಲೇಮಿನಲ್ಲಿದ್ದ ಎಲ್ಲ ಮನೆಗಳನ್ನ ಸುಟ್ಟುಹಾಕಿದ.+ ಅಷ್ಟೇ ಅಲ್ಲ ಆ ಪಟ್ಟಣದಲ್ಲಿದ್ದ ಎಲ್ಲ ಮುಖ್ಯ ವ್ಯಕ್ತಿಗಳ ಮನೆಗಳನ್ನ ಸಹ ಸುಟ್ಟುಹಾಕಿದ.+ 10 ಕಾವಲುಗಾರರ ಮುಖ್ಯಸ್ಥನ ಜೊತೆ ಇದ್ದ ಕಸ್ದೀಯರ ಇಡೀ ಸೈನ್ಯ ಯೆರೂಸಲೇಮಿನ ಸುತ್ತ ಇದ್ದ ಗೋಡೆಗಳನ್ನ ಕೆಡವಿಹಾಕಿತು.+ 11 ಕಾವಲುಗಾರರ ಮುಖ್ಯಸ್ಥನಾಗಿದ್ದ ನೆಬೂಜರದಾನ ಪಟ್ಟಣದಲ್ಲಿ ಉಳಿದ ಜನ್ರನ್ನ, ಯೆಹೂದದ ರಾಜನ ಪಕ್ಷ ಬಿಟ್ಟು ಬಾಬೆಲಿನ ರಾಜನ ಪಕ್ಷಕ್ಕೆ ಸೇರಿದ್ದ ಜನ್ರನ್ನ ಮತ್ತು ದೇಶದ ಬೇರೆ ಎಲ್ಲ ಜನ್ರನ್ನ ಕೈದಿಗಳನ್ನಾಗಿ ತಗೊಂಡು ಹೋದ.+ 12 ಆದ್ರೆ ಅವನು ದೇಶದಲ್ಲಿದ್ದ ಕೆಲವು ಬಡ ಜನ್ರನ್ನ ದ್ರಾಕ್ಷಿತೋಟಗಳಲ್ಲಿ ಕಡ್ಡಾಯ ದುಡಿಮೆ ಮಾಡೋಕೆ ಬಿಟ್ಟುಬಿಟ್ಟ.+ 13 ಕಸ್ದೀಯರು ಯೆಹೋವನ ಆಲಯದ ತಾಮ್ರದ ಕಂಬಗಳನ್ನ,+ ಜೊತೆಗೆ ಯೆಹೋವನ ಆಲಯದಲ್ಲಿದ್ದ ಬಂಡಿಗಳನ್ನ,+ “ಸಮುದ್ರ” ಅಂತ ಹೆಸ್ರಿದ್ದ ತಾಮ್ರದ ಪಾತ್ರೆಯನ್ನ+ ತುಂಡುತುಂಡು ಮಾಡಿದ್ರು. ಆ ತಾಮ್ರವನ್ನೆಲ್ಲಾ ಬಾಬೆಲಿಗೆ ಹೊತ್ಕೊಂಡು ಹೋದ್ರು.+ 14 ಅಷ್ಟೇ ಅಲ್ಲ ದೇವಾಲಯದಲ್ಲಿ ಉಪಯೋಗಿಸ್ತಿದ್ದ ಹಂಡೆ, ಸಲಿಕೆ, ದೀಪಶಾಮಕ, ಲೋಟ ಮತ್ತು ತಾಮ್ರದ ಎಲ್ಲ ಪಾತ್ರೆಗಳನ್ನ ತಗೊಂಡು ಹೋದ್ರು. 15 ಕಾವಲುಗಾರರ ಮುಖ್ಯಸ್ಥ ಅಪ್ಪಟ ಚಿನ್ನ+ ಮತ್ತು ಬೆಳ್ಳಿಯಿಂದ+ ಮಾಡಿದ್ದ ಕೆಂಡ ಹಾಕೋ ಪಾತ್ರೆ, ಬೋಗುಣಿಗಳನ್ನ ತಗೊಂಡು ಹೋದ. 16 ಯೆಹೋವನ ಆಲಯಕ್ಕಾಗಿ ಸೊಲೊಮೋನ ಮಾಡಿಸಿದ್ದ ಎರಡು ಕಂಬಗಳಿಗೆ “ಸಮುದ್ರ” ಅಂತ ಹೆಸ್ರಿದ್ದ ಪಾತ್ರೆಗೆ, ಬಂಡಿಗಳಿಗೆ ತೂಕ ಹಾಕೋಕೆ ಆಗದಷ್ಟು ತಾಮ್ರವನ್ನ ಬಳಸಲಾಗಿತ್ತು.+ 17 ಪ್ರತಿಯೊಂದು ಕಂಬ 18 ಮೊಳ* ಎತ್ರ ಇತ್ತು.+ ಅದ್ರ ಮೇಲಿದ್ದ ಶಿರಸ್ಸು ತಾಮ್ರದ್ದಾಗಿತ್ತು. ಅದು ಮೂರು ಮೊಳ ಎತ್ರ ಇತ್ತು. ಶಿರಸ್ಸಿನ ಸುತ್ತ ಇದ್ದ ಜಾಲರಿ ಮತ್ತು ದಾಳಿಂಬೆಗಳನ್ನ ತಾಮ್ರದಿಂದ ಮಾಡಲಾಗಿತ್ತು.+ ಎರಡನೇ ಕಂಬ ಸಹ ಅದೇ ತರ ಇತ್ತು.
18 ಕಾವಲುಗಾರರ ಮುಖ್ಯಸ್ಥನು ಮುಖ್ಯ ಪುರೋಹಿತ ಸೆರಾಯನನ್ನ,+ ಸಹಾಯಕ ಪುರೋಹಿತ ಚೆಫನ್ಯನನ್ನ,+ ಜೊತೆಗೆ ಮೂರು ಜನ ಬಾಗಿಲು ಕಾಯುವವರನ್ನ ಕರ್ಕೊಂಡು ಹೋದ.+ 19 ಅವನು ಪಟ್ಟಣದಿಂದ ಸೈನಿಕರ ಮುಖ್ಯ ಅಧಿಕಾರಿಯಾಗಿದ್ದ ಆಸ್ಥಾನದ ಒಬ್ಬ ಅಧಿಕಾರಿಯನ್ನ, ರಾಜನ ಐದು ಜನ ಆಪ್ತರನ್ನ, ದೇಶದ ಜನ್ರನ್ನ ಸೈನ್ಯಕ್ಕೆ ಸೇರಿಸೋ ಸೇನಾಪತಿಯ ಕಾರ್ಯದರ್ಶಿಯನ್ನ ಮತ್ತು 60 ಸಾಮಾನ್ಯ ಜನ್ರನ್ನ ಹಿಡ್ಕೊಂಡು ಹೋದ. 20 ಕಾವಲುಗಾರರ ಮುಖ್ಯಸ್ಥ ನೆಬೂಜರದಾನ+ ಇವ್ರನ್ನ ಕರ್ಕೊಂಡು ರಿಬ್ಲದಲ್ಲಿದ್ದ ಬಾಬೆಲಿನ ರಾಜನ ಹತ್ರ ಬಂದ.+ 21 ಬಾಬೆಲಿನ ರಾಜ ಅವ್ರನ್ನ ಹಾಮಾತಿನ ರಿಬ್ಲದಲ್ಲಿ ಕೊಂದುಹಾಕಿದ.+ ಹೀಗೆ ಯೆಹೂದದವರು ತಮ್ಮ ದೇಶದಿಂದ ಕೈದಿಗಳಾಗಿ ಹೋದ್ರು.+
22 ಬಾಬೆಲಿನ ರಾಜ ನೆಬೂಕದ್ನೆಚ್ಚರ ಯೆಹೂದ ದೇಶದಲ್ಲಿ ತಾನು ಉಳಿಸಿದ್ದ ಜನ್ರ ಮೇಲೆ ಶಾಫಾನನ+ ಮೊಮ್ಮಗನೂ ಅಹೀಕಾಮನ+ ಮಗನೂ ಆದ ಗೆದಲ್ಯನನ್ನ+ ಅಧಿಕಾರಿಯಾಗಿ ನೇಮಿಸಿದ.+ 23 ಬಾಬೆಲಿನ ರಾಜ ಗೆದಲ್ಯನನ್ನ ಅಧಿಕಾರಿಯಾಗಿ ಮಾಡಿದ್ದಾನೆ ಅನ್ನೋ ಸುದ್ದಿ ಕೇಳಿ ನೆತನ್ಯನ ಮಗ ಇಷ್ಮಾಯೇಲ, ಕಾರೇಹನ ಮಗ ಯೋಹಾನಾನ್, ನೆಟೋಫಾತ್ಯನಾಗಿದ್ದ ತನ್ಹುಮೆತನ ಮಗ ಸೆರಾಯ ಮತ್ತು ಮಾಕಾತ್ಯನೊಬ್ಬನ ಮಗ ಯಾಜನ್ಯ ಇವ್ರೆಲ್ರೂ ಮಿಚ್ಪಾದಲ್ಲಿದ್ದ ಗೆದಲ್ಯನ ಹತ್ರ ಬಂದ್ರು.+ 24 ಗೆದಲ್ಯ ಅವ್ರಿಗೆ ಮತ್ತು ಅವ್ರ ಗಂಡಸ್ರಿಗೆ ಆಣೆ ಮಾಡಿ “ಕಸ್ದೀಯರ ಸೇವಕರಾಗೋಕೆ ಹೆದರಬೇಡಿ. ನೀವು ಇದೇ ದೇಶದಲ್ಲಿದ್ದು ಬಾಬೆಲಿನ ರಾಜನ ಸೇವೆಮಾಡಿ. ಆಗ ನೀವು ಸುಖವಾಗಿ ಇರ್ತಿರ”+ ಅಂದ.
25 ಆದ್ರೆ ಏಳನೇ ತಿಂಗಳಲ್ಲಿ ರಾಜವಂಶಕ್ಕೆ ಸೇರಿದ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲ+ ತನ್ನ ಗಂಡಸ್ರ ಜೊತೆ ಬಂದ. ಅವರು ಗೆದಲ್ಯನನ್ನ ಕೊಂದ್ರು. ಮಿಚ್ಪಾದಲ್ಲಿ ಗೆದಲ್ಯನ ಜೊತೆ ಇದ್ದ ಯೆಹೂದ್ಯರನ್ನ, ಕಸ್ದೀಯರನ್ನ ಸಹ ಕೊಂದ್ರು.+ 26 ಆಮೇಲೆ ಸೇನಾಪತಿಗಳೂ ಚಿಕ್ಕವ್ರಿಂದ ದೊಡ್ಡವ್ರ ತನಕ ಎಲ್ಲ ಜನ್ರೂ ಕಸ್ದೀಯರಿಗೆ ಹೆದರಿ+ ಈಜಿಪ್ಟಿಗೆ ಓಡಿಹೋದ್ರು.+
27 ಯೆಹೂದದ ರಾಜ ಯೆಹೋಯಾಖೀನ ಕೈದಿಯಾಗಿದ್ದ 37ನೇ ವರ್ಷದ+ 12ನೇ ತಿಂಗಳಿನ 27ನೇ ದಿನದಲ್ಲಿ ಬಾಬೆಲಿನ ರಾಜ ಎವೀಲ್ಮೆರೋದಕ ಯೆಹೋಯಾಖೀನನನ್ನ ಜೈಲಿಂದ ಬಿಡಿಸಿದ. ಎವೀಲ್ಮೆರೋದಕ ರಾಜನಾಗಿದ್ದು ಆ ವರ್ಷದಲ್ಲೇ.+ 28 ರಾಜ ಯೆಹೋಯಾಖೀನನ ಜೊತೆ ಪ್ರೀತಿಯಿಂದ ಮಾತಾಡಿ ಅವನ ಜೊತೆ ಬಾಬೆಲಿನಲ್ಲಿದ್ದ ಬೇರೆ ಎಲ್ಲ ರಾಜರಿಗಿಂತ ಅವನಿಗೆ ದೊಡ್ಡ ಸ್ಥಾನ ಕೊಟ್ಟ. 29 ಹಾಗಾಗಿ ಯೆಹೋಯಾಖೀನ ಜೈಲಿನ ಬಟ್ಟೆಗಳನ್ನ ತೆಗೆದುಹಾಕಿದ. ತನ್ನ ಜೀವನಪೂರ್ತಿ ರಾಜನ ಮೇಜಲ್ಲಿ ಕೂತು ಊಟ ಮಾಡಿದ. 30 ಯೆಹೋಯಾಖೀನ ಬದುಕಿರೋ ತನಕ ಪ್ರತಿ ದಿನ ಬಾಬೆಲಿನ ರಾಜ ಅವನಿಗೆ ಆಹಾರ ಕೊಡ್ತಿದ್ದ.