ಲೂಕ
18 ಯಾವಾಗ್ಲೂ ಪ್ರಾರ್ಥನೆ ಮಾಡೋದು ಮತ್ತು ಪಟ್ಟುಹಿಡಿಯೋದು+ ಯಾಕೆ ಪ್ರಾಮುಖ್ಯ ಅನ್ನೋದಕ್ಕೆ ಯೇಸು ಒಂದು ಉದಾಹರಣೆ ಹೇಳಿದನು 2 “ಒಂದು ಊರಲ್ಲಿ ಒಬ್ಬ ನ್ಯಾಯಾಧೀಶ ಇದ್ದ. ಅವನಿಗೆ ದೇವರ ಭಯ ಇರಲಿಲ್ಲ. ಮನುಷ್ಯರ ಮೇಲೆ ಗೌರವನೂ ಇರಲಿಲ್ಲ. 3 ಅದೇ ಊರಲ್ಲಿ ಒಬ್ಬ ವಿಧವೆ ಇದ್ದಳು. ಅವಳು ಅವನ ಹತ್ರ ಬಂದು ‘ಹೇಗಾದ್ರೂ ಮಾಡಿ ನನಗೆ ನ್ಯಾಯ ಕೊಡಿಸಿ, ನನ್ನ ವಿರೋಧಿಯ ಕೈಯಿಂದ ನನ್ನನ್ನ ಬಿಡಿಸಿ’ ಅಂತ ಪದೇಪದೇ ಕೇಳ್ಕೊಳ್ತಾ ಇದ್ದಳು. 4 ಸ್ವಲ್ಪ ದಿನಗಳ ತನಕ ಅವನು ಅವಳ ಬಗ್ಗೆ ತಲೆಕೆಡಿಸ್ಕೊಳ್ಳಲಿಲ್ಲ. ಆದ್ರೆ ಆಮೇಲೆ ಅವನು ‘ನನಗೆ ದೇವರ ಮೇಲೆ ಭಯ ಇಲ್ಲ, ಮನುಷ್ಯರ ಮೇಲೆ ಗೌರವನೂ ಇಲ್ಲ. 5 ಆದ್ರೂ ನಾನು ಅವಳಿಗೆ ನ್ಯಾಯ ಕೊಡಿಸ್ತೀನಿ. ಇಲ್ಲಾಂದ್ರೆ ಅವಳು ಮತ್ತೆಮತ್ತೆ ಬಂದು ಕಾಟಕೊಟ್ಟು ತಲೆ ತಿಂತಾಳೆ’+ ಅಂದ್ಕೊಂಡ.” 6 ಆಮೇಲೆ ಯೇಸು ಹೀಗಂದನು “ಆ ನ್ಯಾಯಾಧೀಶ ಕೆಟ್ಟವನಾಗಿದ್ರೂ ಏನು ಹೇಳಿದ ಅಂತ ನೋಡಿದ್ರಾ? 7 ಹಾಗಾದ್ರೆ ದೇವರು ತಾನು ಆರಿಸ್ಕೊಂಡಿರೋ ಜನ ಹಗಲು-ರಾತ್ರಿ ಬೇಡ್ಕೊಂಡ್ರೆ ನ್ಯಾಯ ಕೊಡದೇ ಇರ್ತಾನಾ?+ ಅಷ್ಟೇ ಅಲ್ಲ ದೇವರು ತಾಳ್ಮೆಯಿಂದ ಅವ್ರನ್ನ ನೋಡ್ಕೊಳ್ತಾನೆ.+ 8 ಆತನು ಖಂಡಿತ ಅವ್ರಿಗೆ ಬೇಗನೆ ನ್ಯಾಯ ಕೊಡಿಸ್ತಾನೆ. ಆದ್ರೆ ಪ್ರಶ್ನೆ ಏನಂದ್ರೆ ಮನುಷ್ಯಕುಮಾರ ಬರುವಾಗ ಭೂಮಿ ಮೇಲೆ ಇಂಥ ನಂಬಿಕೆಯನ್ನ ನೋಡ್ತಾನಾ?”
9 ಅಷ್ಟೇ ಅಲ್ಲ ತಾವೇ ನೀತಿವಂತ್ರು ಅಂದ್ಕೊಳ್ತಾ ಬೇರೆಯವ್ರನ್ನ ಕೀಳಾಗಿ ನೋಡ್ತಿದ್ದ ಜನ್ರಿಗೆ ಯೇಸು ಒಂದು ಉದಾಹರಣೆ ಹೇಳಿದನು. 10 “ಇಬ್ರು ಗಂಡಸರು ಪ್ರಾರ್ಥಿಸೋಕೆ ದೇವಾಲಯಕ್ಕೆ ಹೋದ್ರು. ಒಬ್ಬ ಫರಿಸಾಯ, ಇನ್ನೊಬ್ಬ ತೆರಿಗೆ ವಸೂಲಿಗಾರ. 11 ಫರಿಸಾಯ ನಿಂತ್ಕೊಂಡು ಮನಸ್ಸಲ್ಲೇ ‘ದೇವರೇ, ಬೇರೆಯವರ ತರ ನಾನು ದರೋಡೆ ಮಾಡಲ್ಲ, ಕೆಟ್ಟವನಲ್ಲ, ವ್ಯಭಿಚಾರಿ ಅಲ್ಲ. ಈ ತೆರಿಗೆ ವಸೂಲಿಗಾರನ ತರನೂ ಅಲ್ಲ. ಅದಕ್ಕಾಗಿ ನಿನಗೆ ಧನ್ಯವಾದ. 12 ನಾನು ವಾರಕ್ಕೆ ಎರಡು ಸಲ ಉಪವಾಸ ಮಾಡ್ತೀನಿ. ನನ್ನ ಸಂಪಾದನೆಯಲ್ಲಿ ಹತ್ರಲ್ಲಿ ಒಂದು ಭಾಗ ತಪ್ಪದೆ ಕೊಡ್ತೀನಿ’+ ಅಂತ ಪ್ರಾರ್ಥಿಸೋಕೆ ಶುರುಮಾಡಿದ. 13 ಆದ್ರೆ ತೆರಿಗೆ ವಸೂಲಿಗಾರ ದೂರದಲ್ಲೇ ನಿಂತಿದ್ದ. ಆಕಾಶದ ಕಡೆ ಕಣ್ಣೆತ್ತಿ ನೋಡೋಕೂ ಮನಸ್ಸು ಬರಲಿಲ್ಲ. ಎದೆ ಬಡ್ಕೊಳ್ಳುತ್ತಾ ‘ದೇವರೇ, ಕರುಣೆ ತೋರಿಸು. ನಾನು ಪಾಪಿ’+ ಅಂದ. 14 ನೆನಪಿಡಿ, ದೇವರ ದೃಷ್ಟಿಯಲ್ಲಿ ಆ ಫರಿಸಾಯನಿಗಿಂತ ಈ ಮನುಷ್ಯನೇ ಹೆಚ್ಚು ನೀತಿವಂತ.+ ಯಾಕಂದ್ರೆ ಹೆಚ್ಚಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ತಗ್ಗಿಸ್ತಾನೆ. ತಗ್ಗಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ಮೇಲೆ ಎತ್ತುತ್ತಾನೆ.”+
15 ಯೇಸು ಮಕ್ಕಳ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಬೇಕು ಅಂತ ಜನ ಚಿಕ್ಕ ಮಕ್ಕಳನ್ನ ಕರ್ಕೊಂಡು ಬರ್ತಾ ಇದ್ರು. ಆದ್ರೆ ಶಿಷ್ಯರು ಅವ್ರಿಗೆ ಬೈದ್ರು.+ 16 ಇದನ್ನ ನೋಡಿ ಯೇಸು “ಆ ಚಿಕ್ಕ ಮಕ್ಕಳನ್ನ ತಡಿಬೇಡಿ, ಅವರು ನನ್ನ ಹತ್ರ ಬರ್ಲಿ. ಈ ಚಿಕ್ಕ ಮಕ್ಕಳ ತರ ಇರೋರೇ ದೇವರ ಆಳ್ವಿಕೆಗೆ ಹೋಗ್ತಾರೆ.+ 17 ಮಕ್ಕಳ ಮನಸ್ಸನ್ನ ಬೆಳಿಸಿಕೊಂಡು ದೇವರ ಆಳ್ವಿಕೆಯನ್ನ ಯಾರು ಸ್ವೀಕರಿಸಲ್ವೋ ಅವರು ದೇವರ ಆಳ್ವಿಕೆಗೆ ಹೋಗಲ್ಲ ಅಂತ ನಿಮಗೆ ನಿಜ ಹೇಳ್ತೀನಿ” ಅಂದನು.+
18 ಒಬ್ಬ ಅಧಿಕಾರಿ ಆತನಿಗೆ “ಒಳ್ಳೇ ಬೋಧಕನೇ, ನನಗೆ ಶಾಶ್ವತ ಜೀವ ಸಿಗಬೇಕಾದ್ರೆ ಏನು ಮಾಡಬೇಕು?” ಅಂತ ಕೇಳಿದ.+ 19 ಅದಕ್ಕೆ ಯೇಸು “ನನ್ನನ್ನ ಯಾಕೆ ಒಳ್ಳೆಯವನು ಅಂತಿಯಾ? ದೇವರನ್ನ ಬಿಟ್ಟು ಯಾರೂ ಒಳ್ಳೆಯವರಲ್ಲ.+ 20 ‘ವ್ಯಭಿಚಾರ ಮಾಡಬಾರದು,+ ಕೊಲೆ ಮಾಡಬಾರದು,+ ಕದಿಬಾರದು,+ ಸುಳ್ಳು ಸಾಕ್ಷಿ ಹೇಳಬಾರದು,+ ಅಪ್ಪಅಮ್ಮಗೆ ಗೌರವ ಕೊಡಬೇಕು’+ ಅನ್ನೋ ಆಜ್ಞೆಗಳು ನಿನಗೆ ಗೊತ್ತಲ್ವಾ?” ಅಂತ ಕೇಳಿದನು. 21 ಅದಕ್ಕೆ ಆ ಯುವಕ “ಇದನ್ನೆಲ್ಲ ಪಾಲಿಸ್ತಾ ಇದ್ದೀನಿ” ಅಂದ. 22 ಯೇಸು “ನಿನ್ನಲ್ಲಿ ಇನ್ನೂ ಒಂದು ಕೊರತೆ ಇದೆ. ಹೋಗಿ ನಿನ್ನ ಆಸ್ತಿಯನ್ನೆಲ್ಲ ಮಾರಿ ಬಡವರಿಗೆ ಕೊಡು. ಆಗ ಸ್ವರ್ಗದಲ್ಲಿ ಆಸ್ತಿ ಸಿಗುತ್ತೆ. ಆಮೇಲೆ ಬಂದು ನನ್ನ ಶಿಷ್ಯನಾಗು” ಅಂದನು.+ 23 ಈ ಮಾತು ಕೇಳಿ ಆ ಯುವಕ ದುಃಖದಿಂದ ಹೋದ. ಯಾಕಂದ್ರೆ ಅವನ ಹತ್ರ ತುಂಬ ಆಸ್ತಿ ಇತ್ತು.+
24 ಆಗ ಯೇಸು ಶಿಷ್ಯರಿಗೆ “ನಿಮಗೆ ನಿಜ ಹೇಳ್ತೀನಿ, ಶ್ರೀಮಂತ ದೇವರ ಆಳ್ವಿಕೆಯಲ್ಲಿ ಇರೋದು ತುಂಬ ಕಷ್ಟ.+ 25 ಒಂದು ಒಂಟೆ ಸೂಜಿಯ ತೂತಲ್ಲಿ ಹೋಗೋದು ಸುಲಭ. ಆದ್ರೆ ಒಬ್ಬ ಶ್ರೀಮಂತ ದೇವರ ಆಳ್ವಿಕೆಯಲ್ಲಿ ಇರೋದು ತುಂಬ ಕಷ್ಟ” ಅಂದನು.+ 26 ಇದನ್ನ ಕೇಳಿಸ್ಕೊಂಡವರು “ಹಾಗಾದ್ರೆ ಯಾರಿಗೆ ತಾನೇ ರಕ್ಷಣೆ ಸಿಗುತ್ತೆ?”+ ಅಂತ ಕೇಳಿದ್ರು. 27 ಅದಕ್ಕೆ ಆತನು “ಮನುಷ್ಯರಿಂದ ಇದು ಅಸಾಧ್ಯ. ಆದ್ರೆ ದೇವರಿಗೆ ಎಲ್ಲಾ ಸಾಧ್ಯ”+ ಅಂದನು. 28 ಆಗ ಪೇತ್ರ “ಗುರು, ನಾವು ಎಲ್ಲ ಬಿಟ್ಟು ನಿನ್ನ ಹಿಂದೆ ಬಂದಿದ್ದೀವಿ. ನಮಗೇನು ಸಿಗುತ್ತೆ?”+ ಅಂತ ಕೇಳಿದ. 29 ಅದಕ್ಕೆ ಯೇಸು “ನಿಮಗೆ ನಿಜ ಹೇಳ್ತೀನಿ, ದೇವರ ಆಳ್ವಿಕೆ ಕಾರಣ ಮನೆ, ಹೆಂಡತಿ, ಅಣ್ಣತಮ್ಮ, ಅಪ್ಪಅಮ್ಮ, ಮಕ್ಕಳನ್ನ ಬಿಟ್ಟುಬಂದವನಿಗೆ+ 30 ಈ ಲೋಕದಲ್ಲಿ ಎಷ್ಟೋ ಪಟ್ಟು ಹೆಚ್ಚು ಸಿಗುತ್ತೆ, ಮುಂದೆ* ಶಾಶ್ವತ ಜೀವನೂ+ ಸಿಗುತ್ತೆ” ಅಂದನು.
31 ಆಮೇಲೆ ಆತನು 12 ಶಿಷ್ಯರನ್ನ ಪಕ್ಕಕ್ಕೆ ಕರ್ಕೊಂಡು ಹೋಗಿ “ನೋಡಿ, ನಾವು ಯೆರೂಸಲೇಮಿಗೆ ಹೋಗ್ತಿದ್ದೀವಿ. ಅಲ್ಲಿ ಮನುಷ್ಯಕುಮಾರನ ಬಗ್ಗೆ ಪ್ರವಾದಿಗಳು ಬರೆದಿರೋ ಎಲ್ಲ ವಿಷ್ಯಗಳು ನಡಿಯುತ್ತೆ.+ 32 ಉದಾಹರಣೆಗೆ ಆತನನ್ನ ಯೆಹೂದ್ಯರಲ್ಲದ ಜನ್ರ+ ಕೈಗೆ ಒಪ್ಪಿಸ್ತಾರೆ. ಆ ಜನ ಆತನನ್ನ ಅವಮಾನ ಮಾಡ್ತಾರೆ, ಗೇಲಿಮಾಡ್ತಾರೆ,+ ಆತನ ಮೇಲೆ ಉಗುಳ್ತಾರೆ,+ 33 ಚಾಟಿಯಿಂದ ಹೊಡಿತಾರೆ, ಸಾಯಿಸ್ತಾರೆ.+ ಆದ್ರೆ ಮೂರು ದಿನ ಆದಮೇಲೆ ಆತನು ಮತ್ತೆ ಎದ್ದು ಬರ್ತಾನೆ”+ ಅಂದನು. 34 ಆದ್ರೆ ಇದು ಯಾವುದೂ ಅವ್ರಿಗೆ ಅರ್ಥ ಆಗಲಿಲ್ಲ. ಯಾಕಂದ್ರೆ ಆ ಮಾತುಗಳ ಅರ್ಥ ಅವ್ರಿಗೆ ರಹಸ್ಯವಾಗಿತ್ತು.
35 ಆತನು ಯೆರಿಕೋ ಹತ್ರ ಬರ್ತಿದ್ದಾಗ ಒಬ್ಬ ಕುರುಡ ದಾರಿ ಬದಿಯಲ್ಲಿ ಕೂತು ಭಿಕ್ಷೆಬೇಡ್ತಿದ್ದ.+ 36 ತುಂಬ ಜನ ಆ ದಾರಿಯಲ್ಲಿ ಹೋಗ್ತಿರೋ ಸದ್ದು ಕೇಳಿಸ್ಕೊಂಡು ‘ಏನಾಗ್ತಿದೆ?’ ಅಂತ ವಿಚಾರಿಸಿದ. 37 ಜನ “ನಜರೇತಿನ ಯೇಸು ಹೋಗ್ತಿದ್ದಾನೆ” ಅಂದ್ರು. 38 ಆಗ ಅವನು “ಯೇಸುವೇ, ದಾವೀದನ ಮಗನೇ, ನನಗೆ ಕರುಣೆ ತೋರಿಸು” ಅಂತ ಕೂಗಿದ. 39 ಆಗ ಜನ ಅವನಿಗೆ ಸುಮ್ಮನೆ ಇರು ಅಂತ ಬೈದ್ರು. ಆದರೂ ಅವನು “ದಾವೀದನ ಮಗನೇ, ಕರುಣೆ ತೋರಿಸು” ಅಂತ ಕೂಗ್ತಾನೇ ಇದ್ದ. 40 ಆಗ ಯೇಸು ನಿಂತು, ಅವನನ್ನ ಹತ್ರ ಕರೆದು 41 “ನಾನು ನಿನಗೇನು ಮಾಡಲಿ?” ಅಂತ ಕೇಳಿದನು. ಅದಕ್ಕೆ ಅವನು “ಸ್ವಾಮಿ, ನನಗೆ ಕಣ್ಣು ಬರೋ ತರ ಮಾಡು” ಅಂದ. 42 ಆಗ ಯೇಸು “ನಿನಗೆ ಕಣ್ಣು ಬರಲಿ. ನಿನ್ನ ನಂಬಿಕೆನೇ ನಿನ್ನನ್ನ ವಾಸಿಮಾಡಿದೆ”+ ಅಂದನು. 43 ತಕ್ಷಣ ಅವನಿಗೆ ದೃಷ್ಟಿ ಬಂತು. ಅವನು ದೇವರನ್ನ ಹೊಗಳ್ತಾ ಆತನನ್ನ ಹಿಂಬಾಲಿಸಿದ.+ ಜನ್ರೆಲ್ಲ ಇದನ್ನ ನೋಡಿ ದೇವರನ್ನ ಹೊಗಳಿದ್ರು.+