ಆದಿಕಾಂಡ
15 ಇದಾದ ಮೇಲೆ ಯೆಹೋವ ಅಬ್ರಾಮನಿಗೆ ದರ್ಶನದಲ್ಲಿ* “ಅಬ್ರಾಮ ಭಯಪಡಬೇಡ.+ ನಾನು ನಿನಗೆ ಗುರಾಣಿ ಆಗಿದ್ದೀನಿ.+ ನಿನಗೆ ತುಂಬ ದೊಡ್ಡ ಬಹುಮಾನ ಕೊಡ್ತೀನಿ”+ ಅಂದನು. 2 ಅದಕ್ಕೆ ಅಬ್ರಾಮ “ವಿಶ್ವದ ರಾಜ ಯೆಹೋವ, ನೀನು ನನಗೆ ಏನೇ ಬಹುಮಾನ ಕೊಟ್ರೂ ಏನು ಪ್ರಯೋಜನ? ನನಗೆ ಮಕ್ಕಳೇ ಇಲ್ಲ. ನನ್ನ ಎಲ್ಲ ಆಸ್ತಿ ನನ್ನ ಸೇವಕ ದಮಸ್ಕದ ಎಲೀಯೆಜರನಿಗೆ ಹೋಗುತ್ತೆ”+ ಅಂದ. 3 “ನೀನು ನನಗೆ ಸಂತಾನ+ ಕೊಡದೆ ಇರೋದ್ರಿಂದ ನನ್ನ ಮನೆ ಸೇವಕನೇ ನನಗೆ ವಾರಸುದಾರ ಆಗ್ತಾನೆ” ಅಂದ. 4 ಆಗ ಯೆಹೋವ ಅಬ್ರಾಮನಿಗೆ “ಅವನು ನಿನಗೆ ವಾರಸುದಾರ ಆಗಲ್ಲ. ನಿನ್ನ ಸ್ವಂತ ಮಗನೇ ನಿನಗೆ ವಾರಸುದಾರ ಆಗ್ತಾನೆ”+ ಅಂದನು.
5 ಆಮೇಲೆ ಆತನು ಅಬ್ರಾಮನನ್ನ ಹೊರಗೆ ಕರ್ಕೊಂಡು ಬಂದು “ದಯವಿಟ್ಟು ತಲೆಯೆತ್ತಿ ಆಕಾಶ ನೋಡು, ನಿನ್ನಿಂದ ಆಗೋದಾದ್ರೆ ನಕ್ಷತ್ರಗಳನ್ನ ಲೆಕ್ಕಮಾಡು. ನಿನ್ನ ಸಂತತಿನೂ ಅಷ್ಟು ಹೆಚ್ಚಾಗುತ್ತೆ”+ ಅಂದನು. 6 ಅಬ್ರಾಮ ಯೆಹೋವನ ಮೇಲೆ ನಂಬಿಕೆಯಿಟ್ಟ.+ ಹಾಗಾಗಿ ಅಬ್ರಾಮ ದೇವರ ದೃಷ್ಟಿಯಲ್ಲಿ ನೀತಿವಂತನಾಗಿದ್ದ.+ 7 ಆತನು ಅಬ್ರಾಮನಿಗೆ “ನಾನು ಯೆಹೋವ, ಈ ದೇಶವನ್ನ ನಿನಗೆ ಕೊಡೋಕೆ, ಇದನ್ನ ನಿನ್ನ ಆಸ್ತಿಯಾಗಿ ಮಾಡೋಕೆ ನಿನ್ನನ್ನ ಕಸ್ದೀಯರ ಊರ್ ಪಟ್ಟಣದಿಂದ ಕರ್ಕೊಂಡು ಬಂದವನು ನಾನೇ”+ ಅಂದನು. 8 ಅದಕ್ಕೆ ಅಬ್ರಾಮ “ವಿಶ್ವದ ರಾಜ ಯೆಹೋವನೇ, ಈ ದೇಶ ನನಗೆ ಆಸ್ತಿಯಾಗಿ ಸಿಗುತ್ತೆ ಅಂತ ನಾನು ಹೇಗೆ ನಂಬ್ಲಿ?” ಅಂದ. 9 ಆಗ ದೇವರು ಅಬ್ರಾಮನಿಗೆ “ನೀನು ನನಗಾಗಿ ಮೂರು ವರ್ಷದ ಒಂದು ಎಳೇ ಹಸು,* ಮೂರು ವರ್ಷದ ಒಂದು ಹೆಣ್ಣು ಆಡು, ಮೂರು ವರ್ಷದ ಒಂದು ಟಗರು, ಒಂದು ಕಾಡು ಪಾರಿವಾಳ ಮತ್ತು ಪಾರಿವಾಳದ ಒಂದು ಮರಿಯನ್ನ ತಗೊ” ಅಂದನು. 10 ಅಬ್ರಾಮ ಅವನ್ನೆಲ್ಲ ತಂದು ಎರಡು ಭಾಗಗಳಾಗಿ ಕಡಿದು ಆಯಾ ಪ್ರಾಣಿ ತುಂಡುಗಳನ್ನ ಎದುರುಬದುರಾಗಿ ಇಟ್ಟ. ಆದ್ರೆ ಪಕ್ಷಿಗಳನ್ನ ಮಾತ್ರ ಕಡಿಲಿಲ್ಲ. 11 ಆಗ ಮಾಂಸ ತಿನ್ನೋ ಪಕ್ಷಿಗಳು ಆ ತುಂಡುಗಳ ಹತ್ರ ಹಾರಿಬರೋಕೆ ಶುರುಮಾಡಿದ್ವು. ಅಬ್ರಾಮ ಅವನ್ನ ಓಡಿಸ್ತಾ ಇದ್ದ.
12 ಸೂರ್ಯ ಮುಳುಗ್ತಿದ್ದಾಗ ಅಬ್ರಾಮನಿಗೆ ತುಂಬ ನಿದ್ದೆ ಬಂತು. ಕನಸಲ್ಲಿ ಅವನು ತನ್ನ ಸುತ್ತ ತುಂಬ ಕತ್ತಲಾಗಿರೋದನ್ನ ನೋಡಿ ತುಂಬ ಭಯಪಟ್ಟ. 13 ಆಗ ಅಬ್ರಾಮನಿಗೆ ದೇವರು ಹೀಗೆ ಹೇಳಿದನು: “ನಿನಗೆ ಒಂದು ವಿಷ್ಯ ಗೊತ್ತಿರಲಿ, ಇದು ಖಂಡಿತ ನಡಿಯುತ್ತೆ. ಅದೇನಂದ್ರೆ ನಿನ್ನ ಸಂತಾನದವರು ಬೇರೆ ದೇಶದಲ್ಲಿ ವಿದೇಶಿಗಳಾಗಿ ಇರ್ತಾರೆ. ಅಲ್ಲಿನ ಜನ ಅವರನ್ನ 400 ವರ್ಷ ಗುಲಾಮರಾಗಿ ಮಾಡ್ಕೊಂಡು ಅವರಿಗೆ ತುಂಬ ಕಷ್ಟಕೊಡ್ತಾರೆ.+ 14 ಆದ್ರೆ ಅವರು ದಾಸರಾಗಿರೋ ಆ ದೇಶಕ್ಕೆ ನಾನು ಶಿಕ್ಷೆ ಕೊಡ್ತೀನಿ.+ ಆಗ ಅವರು ಅಲ್ಲಿಂದ ಸಿಕ್ಕಾಪಟ್ಟೆ ಸೊತ್ತು ತಗೊಂಡು ಆ ದೇಶ ಬಿಟ್ಟು ಬರ್ತಾರೆ.+ 15 ಆದ್ರೆ ನೀನು ತುಂಬ ವರ್ಷ ಖುಷಿಯಾಗಿ ಜೀವನ ಮಾಡ್ತೀಯ. ನೆಮ್ಮದಿಯಿಂದ ಪ್ರಾಣ ಬಿಡ್ತೀಯ. ನಿನ್ನ ಪೂರ್ವಜರ ತರ ನಿನಗೂ ಸಮಾಧಿ ಆಗುತ್ತೆ.+ 16 ನಿನ್ನ ಸಂತಾನದವರ ನಾಲ್ಕನೇ ತಲೆಮಾರಿನವರು ಇಲ್ಲಿಗೆ ವಾಪಸ್ ಬರ್ತಾರೆ.+ ಯಾಕಂದ್ರೆ ಅಮೋರಿಯರನ್ನ* ಶಿಕ್ಷಿಸೋ ಸಮಯ ಇನ್ನೂ ಬಂದಿಲ್ಲ.”+
17 ಸೂರ್ಯ ಮುಳುಗಿ ಕತ್ತಲು ಕವಿದಾಗ ಹೊಗೆಯಾಡೋ ಒಂದು ಒಲೆ ಕಾಣಿಸ್ತು. ಕಡಿದು ಇಟ್ಟಿದ್ದ ಪ್ರಾಣಿ ತುಂಡುಗಳ ಮಧ್ಯ ಉರಿಯೋ ಒಂದು ಪಂಜು ಹಾದುಹೋಯ್ತು. 18 ಆ ದಿನ ಯೆಹೋವ ಅಬ್ರಾಮನ ಜೊತೆ ಒಂದು ಒಪ್ಪಂದ+ ಮಾಡಿ ಹೀಗೆ ಹೇಳಿದನು: “ಈಜಿಪ್ಟಿನ ನದಿಯಿಂದ ಹಿಡಿದು ಯೂಫ್ರೆಟಿಸ್ ಮಹಾ ನದಿ ತನಕ+ ಇರೋ ಈ ದೇಶವನ್ನ+ ನಾನು ನಿನ್ನ ಸಂತಾನಕ್ಕೆ ಕೊಡ್ತೀನಿ. 19 ಅಂದ್ರೆ ಕೇನ್ಯರು,+ ಕೆನಿಜೀಯರು, ಕದ್ಮೋನಿಯರು, 20 ಹಿತ್ತಿಯರು,+ ಪೆರಿಜೀಯರು,+ ರೆಫಾಯರು,+ 21 ಅಮೋರಿಯರು, ಕಾನಾನ್ಯರು, ಗಿರ್ಗಾಷಿಯರು, ಯೆಬೂಸಿಯರು+ ಇರೋ ದೇಶವನ್ನ ನಾನು ನಿನ್ನ ಸಂತಾನಕ್ಕೆ ಕೊಡ್ತೀನಿ.”