ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರ
5 ಸಹೋದರರೇ, ಈ ವಿಷ್ಯ ಯಾವಾಗ, ಯಾವ ಕಾಲದಲ್ಲಿ ನಡಿಯುತ್ತೆ ಅನ್ನೋದ್ರ ಬಗ್ಗೆ ನಿಮಗೆ ಏನೂ ಬರಿಬೇಕಾಗಿಲ್ಲ. 2 ಯಾಕಂದ್ರೆ ಯೆಹೋವನ* ದಿನ+ ರಾತ್ರಿಯಲ್ಲಿ ಕಳ್ಳ ಬರೋ ತರ+ ಬರುತ್ತೆ ಅಂತ ನಿಮಗೆ ಚೆನ್ನಾಗಿ ಗೊತ್ತು. 3 ಜನ್ರು “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅಂತ ಹೇಳುವಾಗ್ಲೇ ಅವ್ರಿಗೆ ನಾಶ ದಿಢೀರಂತ ಬರುತ್ತೆ.+ ಗರ್ಭಿಣಿಗೆ ಹೆರಿಗೆ ನೋವು ಇದ್ದಕ್ಕಿದ್ದ ಹಾಗೆ ಬರೋ ತರ ಅದು ಬರುತ್ತೆ. ಅವರು ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ. 4 ಆದ್ರೆ ಸಹೋದರರೇ, ಆ ದಿನ ಪಟ್ಟಂತ ನಿಮ್ಮ ಮೇಲೆ ಬರೋಕೆ ನೀವೇನು ಕಳ್ಳರ ತರ ಕತ್ತಲಲ್ಲಿ ಇಲ್ಲ. 5 ನೀವೆಲ್ಲ ಬೆಳಕಿನ ಮಕ್ಕಳು, ಹಗಲಿನ ಮಕ್ಕಳು.+ ನಾವು ರಾತ್ರಿಗೋ ಕತ್ತಲೆಗೋ ಸೇರಿದವ್ರಲ್ಲ.+
6 ಹಾಗಾಗಿ ನಾವು ಬೇರೆಯವ್ರ ತರ ನಿದ್ದೆ ಮಾಡೋದು ಬೇಡ,+ ಎಚ್ಚರವಾಗಿ ಇರೋಣ,+ ಬುದ್ಧಿ ಉಪಯೋಗಿಸಿ ನಡಿಯೋಣ.+ 7 ನಿದ್ದೆ ಮಾಡುವವರು ರಾತ್ರಿ ನಿದ್ದೆ ಮಾಡ್ತಾರೆ, ಕುಡಿದ ಅಮಲಲ್ಲಿ ಇರುವವರು ರಾತ್ರಿ ಮತ್ತಲ್ಲಿ ಇರ್ತಾರೆ.+ 8 ಆದ್ರೆ ಹಗಲಲ್ಲಿ ಇರೋ ನಾವು ಬುದ್ಧಿ ಉಪಯೋಗಿಸಿ ನಡಿಯೋಣ. ನಂಬಿಕೆ ಪ್ರೀತಿಯನ್ನ ಎದೆಕವಚದ ತರ, ರಕ್ಷಣೆಯ ನಿರೀಕ್ಷೆಯನ್ನ ಶಿರಸ್ತ್ರಾಣದ ತರ ಹಾಕೊಳ್ಳೋಣ.+ 9 ಯಾಕಂದ್ರೆ ನಾವು ಶಿಕ್ಷೆ ಅನುಭವಿಸಬಾರದು, ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ರಕ್ಷಣೆ ಪಡಿಬೇಕು+ ಅನ್ನೋದೇ ದೇವರ ಇಷ್ಟ. 10 ಯೇಸು ನಮಗೋಸ್ಕರ ಜೀವ ಕೊಟ್ಟನು.+ ಯಾಕಂದ್ರೆ ನಾವು ಬದುಕಿದ್ರೂ ಸತ್ರೂ ಯೇಸು ಜೊತೆ ನಾವು ಜೀವಿಸಬೇಕು ಅನ್ನೋದು ಆತನ ಇಷ್ಟ.+ 11 ಹಾಗಾಗಿ ನೀವು ಈಗಾಗ್ಲೇ ಮಾಡ್ತಿರೋ ಹಾಗೆ ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ,* ಬಲಪಡಿಸ್ತಾ ಇರಿ.+
12 ಸಹೋದರರೇ, ನಾವು ನಿಮ್ಮನ್ನ ಕೇಳ್ಕೊಳ್ಳೋದು ಏನಂದ್ರೆ, ನಿಮ್ಮ ಮಧ್ಯ ಶ್ರಮಪಟ್ಟು ಕೆಲಸಮಾಡ್ತಾ, ಒಡೆಯನ ಸೇವೆಯಲ್ಲಿ ನಿಮ್ಮ ಮೇಲ್ವಿಚಾರಣೆ ಮಾಡ್ತಾ ನಿಮಗೆ ಬುದ್ಧಿಹೇಳುವವ್ರಿಗೆ ಗೌರವ ಕೊಡಿ. 13 ಅವರು ಮಾಡೋ ಕೆಲಸಕ್ಕಾಗಿ ಅವ್ರಿಗೆ ಪ್ರೀತಿಯಿಂದ ವಿಶೇಷ ಗೌರವ ಕೊಡಿ.+ ಒಬ್ರಿಗೊಬ್ರು ಶಾಂತಿಯಿಂದ ಇರಿ.+ 14 ಅಷ್ಟೇ ಅಲ್ಲ ಸಹೋದರರೇ, ಮಾತು ಕೇಳದವ್ರಿಗೆ* ಎಚ್ಚರಿಕೆ ಕೊಡಿ.*+ ಮನನೊಂದವ್ರಿಗೆ* ಸಂತೈಸೋ ತರ ಮಾತಾಡಿ, ಬಲ ಇಲ್ಲದವ್ರಿಗೆ ಆಧಾರವಾಗಿರಿ, ಎಲ್ರ ಜೊತೆನೂ ತಾಳ್ಮೆಯಿಂದ ಇರಿ+ ಅಂತ ನಿಮ್ಮನ್ನ ಪ್ರೋತ್ಸಾಹಿಸ್ತೀವಿ. 15 ಜಾಗ್ರತೆ! ನಿಮಗೆ ಯಾರಾದ್ರೂ ನೋವು ಮಾಡಿದ್ರೆ ನೀವೂ ಅವ್ರಿಗೆ ನೋವು ಮಾಡಬೇಡಿ.+ ಸಹೋದರರಿಗೂ, ಬೇರೆಯವ್ರಿಗೂ ಯಾವಾಗ್ಲೂ ಒಳ್ಳೇದನ್ನೇ ಮಾಡಿ.+
16 ಯಾವಾಗ್ಲೂ ಖುಷಿಯಾಗಿರಿ.+ 17 ಯಾವಾಗ್ಲೂ ಪ್ರಾರ್ಥನೆ ಮಾಡಿ.+ 18 ಎಲ್ಲದಕ್ಕೂ ಧನ್ಯವಾದ ಹೇಳಿ.+ ಕ್ರಿಸ್ತ ಯೇಸುವಿನ ಶಿಷ್ಯರಾದ ನೀವು ಹೀಗೆ ಮಾಡಬೇಕು ಅನ್ನೋದೇ ದೇವರ ಇಷ್ಟ. 19 ಪವಿತ್ರಶಕ್ತಿ ಬೆಂಕಿ ತರ ನಿಮ್ಮಲ್ಲಿ ನಡಿಸೋ ಕೆಲಸಗಳನ್ನ ತಡಿಬೇಡಿ.+ 20 ಭವಿಷ್ಯವಾಣಿಗಳನ್ನ ತಳ್ಳಿಹಾಕಬೇಡಿ.+ 21 ಎಲ್ಲವನ್ನ ಪರೀಕ್ಷಿಸಿ+ ಯಾವುದು ಒಳ್ಳೇದು ಅಂತ ಚೆನ್ನಾಗಿ ತಿಳ್ಕೊಳ್ಳಿ, ಅದನ್ನೇ ಯಾವಾಗ್ಲೂ ಮಾಡಿ. 22 ಯಾವುದೇ ಕೆಟ್ಟ ಕೆಲಸ ಮಾಡಬೇಡಿ.+
23 ಶಾಂತಿಯ ದೇವರು ನಿಮ್ಮನ್ನ ಪೂರ್ತಿಯಾಗಿ ಪವಿತ್ರ ಮಾಡ್ಲಿ. ಸಹೋದರರೇ, ನಮ್ಮ ಪ್ರಭು ಯೇಸು ಕ್ರಿಸ್ತ ಮತ್ತೆ ಬರುವಾಗ ನಿಮ್ಮ ಮನೋಭಾವ, ಹೃದಯ, ದೇಹ ಯಾವ ರೀತಿಯಲ್ಲೂ ತಪ್ಪಿಲ್ದೇ ಇರಲಿ.+ 24 ನಿಮ್ಮನ್ನ ಆರಿಸ್ಕೊಂಡವನು ನಂಬಿಗಸ್ತ, ಆತನು ಇದನ್ನ ಮಾಡೇ ಮಾಡ್ತಾನೆ.
25 ಸಹೋದರರೇ, ನಮಗೋಸ್ಕರ ಯಾವಾಗ್ಲೂ ಪ್ರಾರ್ಥನೆ ಮಾಡಿ.+
26 ಎಲ್ರಿಗೆ ಪವಿತ್ರ ಮುತ್ತು ಕೊಟ್ಟು ವಂದಿಸಿ.
27 ಈ ಪತ್ರವನ್ನ ಎಲ್ಲ ಸಹೋದರರಿಗೆ ಓದಿ ಹೇಳಿ ಅಂತ ಒಡೆಯನ ಹೆಸ್ರಲ್ಲಿ ಕೇಳ್ಕೊಳ್ತೀನಿ.+
28 ನಮ್ಮ ಪ್ರಭು ಯೇಸು ಕ್ರಿಸ್ತ ನಿಮಗೆ ಅಪಾರ ಕೃಪೆ ತೋರಿಸ್ಲಿ.