ಅರಣ್ಯಕಾಂಡ
12 ಮೋಶೆ ಕೂಷ್ ದೇಶದ ಸ್ತ್ರೀಯನ್ನ ಮದುವೆ ಆಗಿದ್ರಿಂದ+ ಮಿರ್ಯಾಮ ಮತ್ತೆ ಆರೋನ ಮೋಶೆ ವಿರುದ್ಧ ದೂರೋಕೆ ಶುರು ಮಾಡಿದ್ರು. 2 “ಯೆಹೋವ ಮೋಶೆ ಮೂಲಕ ಮಾತ್ರ ಮಾತಾಡಿದ್ದಾನಾ? ನಮ್ಮ ಮೂಲಕನೂ ಮಾತಾಡಿದ್ದಾನಲ್ವಾ?”+ ಅಂದ್ರು. ಯೆಹೋವ ಅವರ ಮಾತನ್ನ ಕೇಳಿಸ್ಕೊಳ್ತಾ ಇದ್ದನು.+ 3 ಮೋಶೆ ಭೂಮಿಯಲ್ಲಿದ್ದ ಎಲ್ಲ ಜನ್ರಿಗಿಂತ ತುಂಬ ದೀನ* ವ್ಯಕ್ತಿಯಾಗಿದ್ದ.+
4 ಯೆಹೋವನು ತಕ್ಷಣ ಮೋಶೆ, ಆರೋನ, ಮಿರ್ಯಾಮಗೆ “ನೀವು ಮೂವರು ದೇವದರ್ಶನ ಡೇರೆ ಹತ್ರ ಹೋಗಿ” ಅಂದನು. ಅವರು ಹೋದ್ರು. 5 ಯೆಹೋವ ಮೋಡದಲ್ಲಿ ಇಳಿದು ಬಂದು+ ದೇವದರ್ಶನ ಡೇರೆ ಬಾಗಲಲ್ಲಿ ನಿಂತು ಆರೋನನನ್ನ ಮಿರ್ಯಾಮಳನ್ನ ಕರೆದನು. ಅವರಿಬ್ರು ಮುಂದೆ ಹೋಗಿ ನಿಂತ್ರು. 6 ಆಗ ಆತನು “ದಯವಿಟ್ಟು ನಾನು ಹೇಳೋದನ್ನ ಕೇಳಿ. ನಿಮ್ಮ ಮಧ್ಯ ಯೆಹೋವನ ಪ್ರವಾದಿ ಇರ್ತಿದ್ರೆ ಅವನಿಗೆ ನನ್ನ ಬಗ್ಗೆ ದರ್ಶನದಲ್ಲಿ*+ ತಿಳಿಸ್ತಿದ್ದೆ. ಅವನ ಜೊತೆ ಕನಸಲ್ಲಿ ಮಾತಾಡ್ತಿದ್ದೆ.+ 7 ನನ್ನ ಸೇವಕನಾದ ಮೋಶೆ ಜೊತೆ ಹೀಗೆ ಮಾತಾಡಲ್ಲ. ನನ್ನ ಜನ್ರನ್ನೆಲ್ಲ ಅವನ ಕೈಗೆ ಒಪ್ಪಿಸಿದ್ದೀನಿ.*+ 8 ಅವನ ಜೊತೆ ಮುಖಾಮುಖಿಯಾಗಿ, ಮುಚ್ಚುಮರೆ ಇಲ್ಲದೆ ಮಾತಾಡ್ತೀನಿ,+ ಒಗಟೊಗಟಾಗಿ ಮಾತಾಡಲ್ಲ. ಯೆಹೋವನಾದ ನನ್ನ ರೂಪವನ್ನ ಅವನು ನೋಡ್ತಾನೆ. ಹೀಗಿರುವಾಗ ನೀವು ಮೋಶೆ ವಿರುದ್ಧ ಮಾತಾಡಿದ್ದೀರ. ಹಾಗೆ ಮಾತಾಡೋಕೆ ನಿಮಗೆ ಹೇಗೆ ಧೈರ್ಯ ಬಂತು?” ಅಂದನು.
9 ಯೆಹೋವನಿಗೆ ಅವ್ರ ಮೇಲೆ ತುಂಬ ಕೋಪ ಬಂದು ಅಲ್ಲಿಂದ ಹೋದನು. 10 ದೇವದರ್ಶನ ಡೇರೆ ಮೇಲಿದ್ದ ಮೋಡ ದೂರ ಹೋಯ್ತು. ತಕ್ಷಣ ಮಿರ್ಯಾಮಗೆ ಕುಷ್ಠರೋಗ ಬಂತು! ಅವಳು ಹಿಮದ ತರ ಬೆಳ್ಳಗಾದಳು.+ ಆರೋನ ಮಿರ್ಯಾಮಳನ್ನ ನೋಡಿದಾಗ ಕುಷ್ಠ ಬಂದಿರೋದು ಕಾಣಿಸ್ತು.+ 11 ಕೂಡ್ಲೇ ಆರೋನ ಮೋಶೆ ಹತ್ರ ಹೋಗಿ “ಸ್ವಾಮಿ, ನಾವು ಬುದ್ಧಿ ಇಲ್ಲದ ಕೆಲಸ ಮಾಡಿಬಿಟ್ವಿ. ನಿನ್ನ ಹತ್ರ ಬೇಡ್ಕೊಳ್ತೀನಿ, ದಯವಿಟ್ಟು ಈ ಪಾಪಕ್ಕೆ ನಮಗೆ ಶಿಕ್ಷೆ ಆಗೋಕೆ ಬಿಡಬೇಡ. 12 ಅವಳನ್ನ ಹೀಗೇ ಬಿಟ್ರೆ, ಗರ್ಭದಲ್ಲೇ ಸತ್ತು ಅರ್ಧ ಕೊಳೆತುಹೋಗಿ ಹುಟ್ಟಿದ ಮಗು ತರ ಆಗ್ತಾಳೆ. ದಯವಿಟ್ಟು ಹಾಗಾಗೋಕೆ ಬಿಡಬೇಡ” ಅಂದ. 13 ಆಗ ಮೋಶೆ “ದೇವರೇ, ದಯವಿಟ್ಟು, ದಯವಿಟ್ಟು ಅವಳನ್ನ ವಾಸಿಮಾಡು” ಅಂತ ಯೆಹೋವನನ್ನ ಬೇಡ್ಕೊಂಡ.+
14 ಆಗ ಯೆಹೋವ ಮೋಶೆಗೆ “ಅವಳ ಮುಖದ ಮೇಲೆ ಅಪ್ಪ ಉಗುಳಿದ್ರೆ ಅವಳು ಏಳು ದಿನ ಅವಮಾನವನ್ನ ಸಹಿಸ್ಕೊಳ್ಳಲ್ವಾ? ಹಾಗೇ ಅವಳು ಈಗ ಪಾಳೆಯದ ಹೊರಗೆ ಏಳು ದಿನ ಪ್ರತ್ಯೇಕವಾಗಿ ಇರಲಿ.+ ಆಮೇಲೆ ಕರ್ಕೊಂಡು ಬರಬಹುದು” ಅಂದನು. 15 ಹಾಗಾಗಿ ಮಿರ್ಯಾಮ ಏಳು ದಿನ ಪಾಳೆಯದ ಹೊರಗೆ ಇದ್ದಳು.+ ಅವಳನ್ನ ಪಾಳೆಯದ ಒಳಗೆ ಸೇರಿಸ್ಕೊಳ್ಳೋ ತನಕ ಜನ ಮುಂದೆ ಪ್ರಯಾಣ ಮಾಡಲಿಲ್ಲ. 16 ಆಮೇಲೆ ಜನ ಹಚೇರೋತಿನಿಂದ+ ಪಾರಾನ್ ಕಾಡಿಗೆ+ ಬಂದು ಅಲ್ಲಿ ಡೇರೆ ಹಾಕೊಂಡ್ರು.