ಧರ್ಮೋಪದೇಶಕಾಂಡ
23 ಯಾರಾದ್ರೂ ತನ್ನನ್ನ ನಪುಂಸಕ ಮಾಡ್ಕೊಳ್ಳೋಕೆ ಜನನಾಂಗ ಕತ್ತರಿಸಿಕೊಂಡ್ರೆ ಅಥವಾ ಬೀಜಗಳನ್ನ ಒಡೆಸಿಕೊಂಡ್ರೆ ಅಂಥವನು ಯೆಹೋವನ ಸಭೆಯ ಸದಸ್ಯ ಆಗಬಾರದು.+
2 ಅನೈತಿಕ ಸಂಬಂಧದಿಂದ ಹುಟ್ಟಿದ ಯಾವನೂ ಯೆಹೋವನ ಸಭೆಯ ಸದಸ್ಯ ಆಗಬಾರದು.+ ಅವನ ವಂಶದಲ್ಲಿ 10 ಪೀಳಿಗೆ ಕಳೆದ್ರೂ ಅವ್ರಲ್ಲಿ ಯಾರೂ ಯೆಹೋವನ ಸಭೆಯ ಸದಸ್ಯರು ಆಗಬಾರದು.
3 ಅಮ್ಮೋನಿಯರಲ್ಲಿ, ಮೋವಾಬ್ಯರಲ್ಲಿ ಯಾರೂ ಯೆಹೋವನ ಸಭೆಯ ಸದಸ್ಯರಾಗಬಾರದು.+ 10 ಪೀಳಿಗೆ ಕಳೆದ್ರೂ ಅವ್ರ ವಂಶದಲ್ಲಿ ಯಾರೂ ಯಾವತ್ತೂ ಯೆಹೋವನ ಸಭೆಯ ಸದಸ್ಯರಾಗಬಾರದು. 4 ಯಾಕಂದ್ರೆ ನೀವು ಈಜಿಪ್ಟನ್ನ ಬಿಟ್ಟು ಬರ್ತಿದ್ದಾಗ ಅವರು ಊಟ ನೀರು ಕೊಟ್ಟು ಸಹಾಯ ಮಾಡಲಿಲ್ಲ.+ ಅಷ್ಟೇ ಅಲ್ಲ ನಿಮ್ಮ ಮೇಲೆ ಶಾಪ ಹಾಕೋಕೆ* ಅವರು ಮೆಸಪಟೇಮ್ಯದ ಪೆತೋರಿನಿಂದ ಬೆಯೋರನ ಮಗ ಬಿಳಾಮನನ್ನ ಹಣಕೊಟ್ಟು ಕರೆಸಿದ್ರು.+ 5 ಆದ್ರೆ ಬಿಳಾಮನ ಮಾತನ್ನ ನಿಮ್ಮ ದೇವರಾದ ಯೆಹೋವ ಕೇಳಿಸ್ಕೊಳ್ಳಲಿಲ್ಲ.+ ಬಿಳಾಮ ಶಾಪಕ್ಕೆ ಬದ್ಲು ಆಶೀರ್ವಾದ ಹೇಳೋ ತರ ನಿಮ್ಮ ದೇವರಾದ ಯೆಹೋವ ಮಾಡಿದನು.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಪ್ರೀತಿಸೋದ್ರಿಂದ ಹಾಗೆ ಮಾಡಿದನು.+ 6 ಅಮ್ಮೋನಿಯರು, ಮೋವಾಬ್ಯರು ಚೆನ್ನಾಗಿರೋಕೆ, ಸಮಾಧಾನವಾಗಿ ಜೀವನ ಮಾಡೋಕೆ ನೀವು ಸಹಾಯ ಮಾಡಬಾರದು.+
7 ನೀವು ಎದೋಮ್ಯರನ್ನ ದ್ವೇಷಿಸಬಾರದು. ಯಾಕಂದ್ರೆ ಅವರು ನಿಮ್ಮ ಸಹೋದರರು.+
ನೀವು ಈಜಿಪ್ಟಿನ ಜನ್ರನ್ನ ದ್ವೇಷಿಸಬಾರದು. ಯಾಕಂದ್ರೆ ಅವ್ರ ದೇಶದಲ್ಲಿ ವಿದೇಶಿಗಳಾಗಿ ಇದ್ರಿ.+ 8 ಅವ್ರ ಮರಿಮಕ್ಕಳು ಯೆಹೋವನ ಸಭೆಯ ಸದಸ್ಯರಾಗಬಹುದು.
9 ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೋಗಿ ಪಾಳೆಯ ಹಾಕಿದಾಗ ಯಾವುದೇ ವಿಧದಲ್ಲೂ ಅಶುದ್ಧರಾಗಬಾರದು.+ 10 ರಾತ್ರಿ ಸಮಯದಲ್ಲಿ ಒಬ್ಬ ಪುರುಷನಿಗೆ ವೀರ್ಯ ಬಂದು ಅಶುದ್ಧನಾದ್ರೆ+ ಅವನು ಪಾಳೆಯದ ಹೊರಗೆ ಹೋಗಿ ಅಲ್ಲೇ ಇರಬೇಕು. 11 ಸಂಜೆ ಆದಾಗ ಸ್ನಾನ ಮಾಡಬೇಕು. ಸೂರ್ಯ ಮುಳುಗಿದ ಮೇಲೆ ಅವನು ಪಾಳೆಯದ ಒಳಗೆ ಬರಬಹುದು.+ 12 ಪಾಳೆಯದ ಹೊರಗೆ ಬಯಲಿಗೆ ಹೋಗೋಕೆ* ನೀವು ಒಂದು ಜಾಗ ಗೊತ್ತು ಮಾಡಿ ಅಲ್ಲೇ ಹೋಗಬೇಕು. 13 ಯುದ್ಧ ಸಾಮಾಗ್ರಿಗಳ ಜೊತೆ ಒಂದು ಗೂಟ ಇಟ್ಕೊಬೇಕು. ಬಯಲಿಗೆ ಹೋದಾಗ ಆ ಗೂಟದಿಂದ ನೆಲ ಅಗೆದು ಗುಂಡಿ ಮಾಡಿ ಮಲವನ್ನ ಮಣ್ಣಿಂದ ಮುಚ್ಚಿಬಿಡಬೇಕು. 14 ನಿಮ್ಮ ಪಾಳೆಯ ಪವಿತ್ರವಾಗಿರಬೇಕು.+ ಯಾಕಂದ್ರೆ ನಿಮ್ಮನ್ನ ಕಾಪಾಡೋಕೆ, ಶತ್ರುಗಳನ್ನ ನಿಮ್ಮ ವಶ ಮಾಡೋಕೆ ನಿಮ್ಮ ದೇವರಾದ ಯೆಹೋವ ಪಾಳೆಯದಲ್ಲಿ ನಡೆದಾಡ್ತಾ ಇರ್ತಾನೆ.+ ನಿಮ್ಮ ಮಧ್ಯ ಅಸಹ್ಯವಾದ ಏನನ್ನಾದ್ರೂ ಆತನು ನೋಡಿದ್ರೆ ನಿಮ್ಮನ್ನ ಬಿಟ್ಟು ಹೋಗ್ತಾನೆ.
15 ಒಬ್ಬ ದಾಸ ಯಜಮಾನನಿಂದ ತಪ್ಪಿಸ್ಕೊಂಡು ನಿಮ್ಮ ಹತ್ರ ಬಂದ್ರೆ ಅವನನ್ನ ಯಜಮಾನನಿಗೆ ಒಪ್ಪಿಸಬಾರದು. 16 ಅವನು ನಿಮ್ಮ ಪಟ್ಟಣದಲ್ಲಿ ಎಲ್ಲಿ ಬೇಕಾದ್ರೂ ವಾಸ ಮಾಡಬಹುದು. ನೀವು ಅವನಿಗೆ ಕಿರುಕುಳ ಕೊಡಬಾರದು.+
17 ಇಸ್ರಾಯೇಲ್ಯರಲ್ಲಿ ಯಾವ ಹೆಣ್ಣುಮಕ್ಕಳೂ ವೇಶ್ಯೆ ಆಗಬಾರದು.*+ ಇಸ್ರಾಯೇಲ್ಯರಲ್ಲಿ ಯಾವ ಗಂಡಸರೂ ವೇಶ್ಯಾವಾಟಿಕೆಗೆ* ಇಳಿಬಾರದು.+ 18 ವೇಶ್ಯಾವಾಟಿಕೆಯಲ್ಲಿ ಒಬ್ಬ ಪುರುಷ ಅಥವಾ ಸ್ತ್ರೀಗೆ ಸಿಕ್ಕಿದ* ಹಣನ ಯಾರೂ ಹರಕೆ ತೀರಿಸೋಕೆ ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬಾರದು. ಯಾಕಂದ್ರೆ ವೇಶ್ಯಾವಾಟಿಕೆ ಮಾಡೋರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.
19 ನೀವು ಹಣ, ಆಹಾರವಸ್ತುಗಳನ್ನ ಅಥವಾ ಬೇರೆ ಇನ್ನೇನಾದ್ರೂ ನಿಮ್ಮ ಸಹೋದರನಿಗೆ ಸಾಲ ಕೊಟ್ರೆ ಅವನಿಂದ ಬಡ್ಡಿ ತಗೊಬಾರದು.+ 20 ನೀವು ವಿದೇಶಿಯರಿಂದ ಬಡ್ಡಿ ತಗೊಬಹುದು,+ ಆದ್ರೆ ನಿಮ್ಮ ಸಹೋದರನಿಂದ ಬಡ್ಡಿ ತಗೊಬಾರದು.+ ಆಗ ನಿಮಗೆ ಸಿಗೋ ದೇಶದಲ್ಲಿ ನೀವು ಮಾಡೋ ಎಲ್ಲ ಕೆಲಸಗಳನ್ನ ನಿಮ್ಮ ದೇವರಾದ ಯೆಹೋವ ಆಶೀರ್ವದಿಸ್ತಾನೆ.+
21 ನಿಮ್ಮ ದೇವರಾದ ಯೆಹೋವನಿಗೆ ಒಂದು ಹರಕೆ ಮಾಡ್ಕೊಂಡ್ರೆ+ ಅದನ್ನ ತೀರಿಸೋಕೆ ತಡಮಾಡಬಾರದು.+ ಅದನ್ನ ತೀರಿಸ್ಲೇಬೇಕು ಅಂತ ನಿಮ್ಮ ದೇವರಾದ ಯೆಹೋವ ಬಯಸ್ತಾನೆ. ಹರಕೆ ತೀರಿಸದೇ ಇರೋದು ಪಾಪ.+ 22 ಹರಕೆಯನ್ನೇ ಮಾಡ್ಕೊಳ್ಳದೆ ಇದ್ರೆ ಅದು ಪಾಪ ಅಲ್ಲ.+ 23 ಮಾತುಕೊಟ್ಟ ಮೇಲೆ ಅದ್ರ ಪ್ರಕಾರ ನಡೀಬೇಕು.+ ನೀವು ಮಾಡೋ ಹರಕೆ ಸ್ವಇಷ್ಟದ ಕಾಣಿಕೆ ತರ ಇದೆ. ನಿಮ್ಮ ದೇವರಾದ ಯೆಹೋವನಿಗೆ ಮಾಡಿದ ಹರಕೆ ತೀರಿಸ್ಲೇಬೇಕು.+
24 ನೀವು ಇನ್ನೊಬ್ಬನ ದ್ರಾಕ್ಷಿತೋಟಕ್ಕೆ ಹೋದಾಗ ಹಸಿವಾದ್ರೆ ಆ ತೋಟದಲ್ಲಿ ಬೇಕಾದಷ್ಟು ದ್ರಾಕ್ಷಿ ತಿನ್ನಬಹುದು. ಆದ್ರೆ ಒಂದೇ ಒಂದು ದ್ರಾಕ್ಷಿನೂ ತಗೊಂಡು ಹೋಗಬಾರದು.+
25 ನೀವು ಇನ್ನೊಬ್ಬನ ಹೊಲಕ್ಕೆ ಹೋದಾಗ ಅಲ್ಲಿ ಪೈರು ಬೆಳೆದು ನಿಂತಿದ್ರೆ ತೆನೆಗಳನ್ನ ಕಿತ್ತು ತಿನ್ನಬಹುದು. ಆದ್ರೆ ಪೈರನ್ನ ಕುಡುಗೋಲಿಂದ* ಕೊಯ್ಯಬಾರದು.+