ಒಂದನೇ ಅರಸು
13 ಯಾರೊಬ್ಬಾಮ ಬಲಿ ಕೊಡೋಕೆ ಯಜ್ಞವೇದಿ ಹತ್ತಿ ನಿಂತಿದ್ದಾಗ+ ಯೆಹೋವ ಆಜ್ಞೆ ಕೊಟ್ಟ ಹಾಗೆ ದೇವರ ಮನುಷ್ಯನೊಬ್ಬ+ ಯೆಹೂದದಿಂದ ಬೆತೆಲಿಗೆ ಬಂದ. 2 ಅವನು ಯೆಹೋವ ಹೇಳಿದ ತರ ಯಜ್ಞವೇದಿ ಕಡೆ ಮುಖ ಮಾಡ್ಕೊಂಡು ಜೋರಾಗಿ “ಯಜ್ಞವೇದಿಯೇ, ಯಜ್ಞವೇದಿಯೇ! ಯೆಹೋವ ಹೀಗೆ ಹೇಳ್ತಾನೆ: ‘ನೋಡು! ದಾವೀದನ ಮನೆತನದಲ್ಲಿ ಯೋಷೀಯ+ ಅನ್ನೋ ಒಬ್ಬ ಹುಡುಗ ಹುಟ್ತಾನೆ. ದೇವಸ್ಥಾನಗಳಲ್ಲಿ ಸೇವೆಮಾಡ್ತಾ ನಿನ್ನ ಮೇಲೆ ಯಜ್ಞದ ಹೊಗೆ ಏರೋ ತರ ಮಾಡ್ತಿರೋ ಈ ಪುರೋಹಿತರನ್ನ ಅವನು ನಿನ್ನ ಮೇಲೆನೇ ಬಲಿಯಾಗಿ ಅರ್ಪಿಸ್ತಾನೆ. ಮನುಷ್ಯರ ಮೂಳೆಗಳನ್ನ ಅವನು ನಿನ್ನ ಮೇಲೆ ಸುಡ್ತಾನೆ’”+ ಅಂದ. 3 ಆ ದಿನ ದೇವರ ಮನುಷ್ಯ ಒಂದು ಸೂಚನೆ ಕೊಟ್ಟ. ಅವನು ಹೀಗಂದ: “ನೋಡು! ಯಜ್ಞವೇದಿ ಎರಡು ಭಾಗ ಆಗುತ್ತೆ ಮತ್ತು ಅದ್ರ ಮೇಲಿರೋ ಬೂದಿ* ಚೆಲ್ಲಾಪಿಲ್ಲಿ ಆಗುತ್ತೆ. ಅದೇ ಯೆಹೋವ ಕೊಟ್ಟ ಸೂಚನೆ.”
4 ಬೆತೆಲಿನಲ್ಲಿದ್ದ ಯಜ್ಞವೇದಿಯ ಬಗ್ಗೆ ಸತ್ಯದೇವರ ಮನುಷ್ಯ ಹೇಳಿದ್ದನ್ನ ಕೇಳಿದ ತಕ್ಷಣ ಯಾರೊಬ್ಬಾಮ ಅವನ ಕಡೆ ಕೈಚಾಚಿ “ಅವನನ್ನ ಹಿಡಿರಿ!”+ ಅಂದ. ಹೀಗೆ ಹೇಳ್ತಾ ಇದ್ದಾಗ್ಲೇ ಯಾರೊಬ್ಬಾಮನ ಚಾಚಿದ್ದ ಕೈಗೆ ಲಕ್ವ ಹೊಡಿತು. ಅವನಿಗೆ ತನ್ನ ಕೈಯನ್ನ ಹಿಂದೆ ತಗೊಳ್ಳೋಕೆ ಆಗಲಿಲ್ಲ.+ 5 ಆಮೇಲೆ ಯೆಹೋವ ಸತ್ಯದೇವರ ಮನುಷ್ಯನಿಗೆ ಕೊಟ್ಟ ಸೂಚನೆಯಂತೆ ಯಜ್ಞವೇದಿ ಎರಡು ಭಾಗ ಆಯ್ತು. ಅದ್ರ ಮೇಲಿರೋ ಬೂದಿ ಚೆಲ್ಲಾಪಿಲ್ಲಿ ಆಯ್ತು.
6 ರಾಜ ಸತ್ಯದೇವರ ಮನುಷ್ಯನಿಗೆ “ದಯವಿಟ್ಟು ನಿನ್ನ ದೇವರಾದ ಯೆಹೋವ ನನಗೆ ಕೃಪೆ ತೋರಿಸಲಿ ಅಂತ ಬೇಡ್ಕೊ. ನನ್ನ ಕೈ ಮುಂಚಿನ ತರ ಆಗೋ ಹಾಗೆ ಪ್ರಾರ್ಥಿಸು”+ ಅಂದ. ಆಗ ಸತ್ಯದೇವರ ಮನುಷ್ಯ ಯೆಹೋವನ ಕೃಪೆಗಾಗಿ ಬೇಡ್ಕೊಂಡಾಗ ರಾಜನ ಕೈ ಮೊದಲಿನ ತರಾನೇ ಆಯ್ತು. 7 ಆಮೇಲೆ ರಾಜ ಸತ್ಯದೇವರ ಮನುಷ್ಯನಿಗೆ “ಮನೆಗೆ ಬಂದು ಸ್ವಲ್ಪ ಊಟ ಮಾಡ್ಕೊಂಡು ಹೋಗು. ನಾನು ನಿನಗೆ ಉಡುಗೊರೆ ಕೊಡ್ತೀನಿ” ಅಂದ. 8 ಆದ್ರೆ ಸತ್ಯದೇವರ ಮನುಷ್ಯ ರಾಜನಿಗೆ “ನೀನು ನನಗೆ ಅರ್ಧ ಅರಮನೆ ಕೊಟ್ರೂ ನಾನು ನಿನ್ನ ಜೊತೆ ಬರಲ್ಲ. ನಾನು ಈ ಜಾಗದಲ್ಲಿ ರೊಟ್ಟಿ ನೀರು ಏನೂ ಮುಟ್ಟಲ್ಲ. 9 ಯಾಕಂದ್ರೆ ಯೆಹೋವ ನನಗೆ ‘ನೀನು ಇಲ್ಲಿ ರೊಟ್ಟಿಯಾಗಲಿ ನೀರಾಗಲಿ ಮುಟ್ಟಬಾರದು. ನೀನು ಬಂದ ದಾರಿಯಲ್ಲೇ ವಾಪಸ್ ಹೋಗಬಾರದು’ ಅಂತ ಆಜ್ಞೆ ಕೊಟ್ಟಿದ್ದಾನೆ” ಅಂದ. 10 ಹೀಗೆ ಹೇಳಿ ದೇವರ ಮನುಷ್ಯ ಬೆತೆಲಿಗೆ ಬಂದ ದಾರಿಯಲ್ಲಿ ವಾಪಸ್ ಹೋಗದೆ ಬೇರೆ ದಾರಿಯಿಂದ ಹೊರಟು ಹೋದ.
11 ಬೆತೆಲಿನಲ್ಲಿ ವಯಸ್ಸಾಗಿರೋ ಒಬ್ಬ ಪ್ರವಾದಿ ಇದ್ದ. ಅವನ ಮಕ್ಕಳು ಮನೆಗೆ ಬಂದು ಆ ದಿನ ದೇವರ ಮನುಷ್ಯ ಬೆತೆಲಿನಲ್ಲಿ ಮಾಡಿದ ಎಲ್ಲ ವಿಷ್ಯಗಳನ್ನ, ರಾಜನಿಗೆ ಅವನು ಹೇಳಿದ ಮಾತುಗಳನ್ನ ಹೇಳಿದ್ರು. ಇದನ್ನ ಕೇಳಿದ ಅವ್ರ ಅಪ್ಪ 12 “ಅವನು ಯಾವ ದಾರಿ ಹಿಡಿದು ಹೋದ?” ಅಂತ ಕೇಳಿದ. ಆಗ ಅವರು ಯೆಹೂದದಿಂದ ಬಂದಿದ್ದ ಸತ್ಯದೇವರ ಮನುಷ್ಯ ಹೋದ ದಾರಿನ ತೋರಿಸಿದ್ರು. 13 ಆಗ ಅವನು ಅವ್ರಿಗೆ “ನಾನು ಹೋಗಬೇಕು, ಕತ್ತೆನ ಸಿದ್ಧಮಾಡಿ” ಅಂತ ಹೇಳಿದ. ಆಗ ಅವರು ಕತ್ತೆನ ಸಿದ್ಧಮಾಡಿದ್ರು. ಅವನು ಅದ್ರ ಮೇಲೆ ಹತ್ತಿ ಹೊರಟ.
14 ಅವನು ಸತ್ಯದೇವರ ಮನುಷ್ಯನನ್ನ ಹುಡುಕ್ತಾ ಹೋದಾಗ ಆ ಮನುಷ್ಯ ಒಂದು ದೊಡ್ಡ ಮರದ ಕೆಳಗೆ ಕೂತಿರೋದನ್ನ ನೋಡಿ “ನೀನು ಯೆಹೂದದಿಂದ ಬಂದಿರೋ ಸತ್ಯದೇವರ ಮನುಷ್ಯನಾ?”+ ಅಂತ ಕೇಳಿದ. ಅದಕ್ಕೆ ಆ ಮನುಷ್ಯ “ಹೌದು” ಅಂದ. 15 ಅವನು ಆ ಮನುಷ್ಯನಿಗೆ “ನನ್ನ ಜೊತೆ ಮನೆಗೆ ಬಂದು ಊಟ ಮಾಡು” ಅಂದ. 16 ಅದಕ್ಕೆ ಆ ಮನುಷ್ಯ “ಕ್ಷಮಿಸು, ನನಗೆ ಬರೋಕೆ ಆಗಲ್ಲ. ನಾನು ನಿನ್ನ ಜೊತೆ ಬಂದು ಈ ಜಾಗದಲ್ಲಿ ರೊಟ್ಟಿಯಾಗಲಿ ನೀರಾಗಲಿ ಮುಟ್ಟಬಾರದು. 17 ಯಾಕಂದ್ರೆ ಯೆಹೋವ ನನಗೆ ‘ನೀನು ಇಲ್ಲಿ ರೊಟ್ಟಿಯಾಗಲಿ ನೀರಾಗಲಿ ಮುಟ್ಟಬಾರದು. ನೀನು ಬಂದ ದಾರಿಯಲ್ಲಿ ವಾಪಸ್ ಹೋಗಬಾರದು’ ಅಂತ ಹೇಳಿದ್ದಾನೆ” ಅಂದ. 18 ಅದಕ್ಕೆ ಅವನು ಹೀಗಂದ: “ನಾನೂ ನಿನ್ನ ತರಾನೇ ಒಬ್ಬ ಪ್ರವಾದಿ. ಒಬ್ಬ ದೇವದೂತ ನನಗೆ ‘ನೀನು ಹೋಗಿ ಅವನನ್ನ ಕರ್ಕೊಂಡು ಬಾ. ಅವನು ನಿನ್ನ ಮನೆಗೆ ಬಂದು ಏನಾದ್ರೂ ತಿಂದು ಕುಡಿಲಿ’ ಅಂತ ಯೆಹೋವನ ಸಂದೇಶವನ್ನ ಹೇಳಿದ.” (ಆ ವಯಸ್ಸಾದ ಪ್ರವಾದಿ ಅವನಿಗೆ ಮೋಸ ಮಾಡಿದ.) 19 ಹಾಗಾಗಿ ಆ ಮನುಷ್ಯ ಊಟ ಮಾಡೋಕೆ ವಯಸ್ಸಾದ ಆ ಪ್ರವಾದಿ ಜೊತೆ ಅವನ ಮನೆಗೆ ವಾಪಸ್ ಹೋದ.
20 ಅವರು ಊಟಕ್ಕೆ ಕೂತಾಗ ಆ ಮನುಷ್ಯನನ್ನ ಕರ್ಕೊಂಡು ಬಂದಿದ್ದ ಪ್ರವಾದಿಗೆ ಯೆಹೋವನ ಸಂದೇಶ ಬಂತು. 21 ಆಗ ಆ ಪ್ರವಾದಿ ಯೆಹೂದದಿಂದ ಬಂದಿದ್ದ ಸತ್ಯ ದೇವರ ಮನುಷ್ಯನಿಗೆ “ನಿನಗಾಗಿ ಯೆಹೋವನ ಈ ಸಂದೇಶ ಬಂದಿದೆ: ‘ನೀನು ಯೆಹೋವನ ಆಜ್ಞೆಗೆ ವಿರುದ್ಧವಾಗಿ ದಂಗೆ ಎದ್ದಿದ್ದೀಯ. ನಿನ್ನ ದೇವರಾದ ಯೆಹೋವ ನಿನಗೆ ಕೊಟ್ಟ ಅಪ್ಪಣೆನ ನೀನು ಪಾಲಿಸಲಿಲ್ಲ. 22 “ಈ ಜಾಗದಲ್ಲಿ ರೊಟ್ಟಿಯನ್ನ ತಿನ್ನಬಾರದು ನೀರನ್ನ ಕುಡಿಬಾರದು” ಅಂತ ನಿನಗೆ ಹೇಳಿದ್ರೂ ನೀನು ಅದೇ ಜಾಗಕ್ಕೆ ಊಟ ಮಾಡೋಕೆ ವಾಪಸ್ ಬಂದಿದ್ದೀಯ. ಹಾಗಾಗಿ ನಿನ್ನ ಶವವನ್ನ ನಿನ್ನ ಪೂರ್ವಜರ ತರ ಸಮಾಧಿ ಮಾಡಲ್ಲ’”+ ಅಂದನು.
23 ಸತ್ಯದೇವರ ಮನುಷ್ಯ ಊಟ ಮಾಡಿದ ಮೇಲೆ ವಯಸ್ಸಾದ ಪ್ರವಾದಿ ಅವನನ್ನ* ಕಳಿಸ್ಕೊಡೋಕೆ ಕತ್ತೆನ ಸಿದ್ಧಮಾಡಿದ. 24 ಆಮೇಲೆ ಆ ಮನುಷ್ಯ ತನ್ನ ದಾರಿ ಹಿಡಿದು ಹೋದ. ಆದ್ರೆ ಹೋಗೋ ದಾರೀಲಿ ಒಂದು ಸಿಂಹ ಅವನ ಮುಂದೆ ಬಂದು ಅವನನ್ನ ಕೊಂದುಹಾಕಿತು.+ ಅವನ ಶವ ದಾರಿಯಲ್ಲೇ ಬಿದ್ದಿತ್ತು. ಶವದ ಪಕ್ಕದಲ್ಲಿ ಕತ್ತೆ ನಿಂತಿತ್ತು. ಸಿಂಹನೂ ಅಲ್ಲೇ ಶವದ ಹತ್ರ ನಿಂತಿತ್ತು. 25 ಅಲ್ಲಿ ಹಾದುಹೋಗೋ ಜನ ದಾರಿಯಲ್ಲಿ ಬಿದ್ದಿದ್ದ ಶವವನ್ನ, ಅದ್ರ ಹತ್ರ ನಿಂತಿದ್ದ ಸಿಂಹವನ್ನ ನೋಡಿದ್ರು. ಅವರು ಆ ವಯಸ್ಸಾದ ಪ್ರವಾದಿ ಇದ್ದ ಪಟ್ಟಣಕ್ಕೆ ಹೋಗಿ ಈ ವಿಷ್ಯ ತಿಳಿಸಿದ್ರು.
26 ಈ ವಿಷ್ಯ ಗೊತ್ತಾದ ತಕ್ಷಣ ಆ ವಯಸ್ಸಾದ ಪ್ರವಾದಿ “ಅದು ಖಂಡಿತ ಸತ್ಯದೇವರ ಮನುಷ್ಯನ ಶವ ಆಗಿರುತ್ತೆ. ಅವನು ಯೆಹೋವನ ಆಜ್ಞೆಗೆ ವಿರುದ್ಧವಾಗಿ ದಂಗೆ ಎದ್ದಿದ್ದ.+ ಹಾಗಾಗಿ ಯೆಹೋವ ಅವನನ್ನ ಸಿಂಹಕ್ಕೆ ಒಪ್ಪಿಸಿ ಅದು ಅವನ ಮೇಲೆ ಹಾರಿ ಕೊಂದುಹಾಕೋ ಹಾಗೆ ಮಾಡಿದನು. ಯೆಹೋವ ಅವನಿಗೆ ಏನು ಹೇಳಿದ್ದನೋ ಹಾಗೇ ಮಾಡಿದ”+ ಅಂದ. 27 ಆಮೇಲೆ ಅವನು ತನ್ನ ಮಕ್ಕಳಿಗೆ “ನಾನೂ ಹೋಗಬೇಕು, ಕತ್ತೆನ ಸಿದ್ಧಮಾಡಿ” ಅಂತ ಹೇಳಿದ. ಆಗ ಅವರು ಕತ್ತೆನ ಸಿದ್ಧಮಾಡಿದ್ರು. 28 ಅವನು ಅಲ್ಲಿಂದ ಹೋಗ್ತಿದ್ದಾಗ ದಾರಿಯಲ್ಲಿ ಬಿದ್ದಿದ್ದ ಆ ಮನುಷ್ಯನ ಶವನ, ಅದ್ರ ಪಕ್ಕದಲ್ಲಿ ನಿಂತಿದ್ದ ಕತ್ತೆನ ಮತ್ತು ಸಿಂಹನ ನೋಡಿದ. ಸಿಂಹ ಆ ಶವನ ತಿಂದಿರಲೂ ಇಲ್ಲ, ಕತ್ತೆಗೆ ಏನೂ ಮಾಡಿರಲೂ ಇಲ್ಲ. 29 ವಯಸ್ಸಾದ ಪ್ರವಾದಿ ಸತ್ಯದೇವರ ಮನುಷ್ಯನ ಶವವನ್ನ ಕತ್ತೆ ಮೇಲೆ ಹಾಕಿದ. ಅವನಿಗಾಗಿ ಗೋಳಾಡೋಕೆ ಮತ್ತು ಅವನನ್ನ ಸಮಾಧಿ ಮಾಡೋಕೆ ಆ ಶವವನ್ನ ತನ್ನ ಪಟ್ಟಣಕ್ಕೆ ತಗೊಂಡು ಬಂದ. 30 ಆಮೇಲೆ ಅವನು ತನಗಂತ ಮಾಡಿಸಿದ್ದ ಸಮಾಧಿಯಲ್ಲಿ ಆ ಶವನ ಹೂಣಿಟ್ಟ. ಅವರು ಅವನಿಗಾಗಿ “ನಮ್ಮ ಸಹೋದರನೇ ನಿನಗೆ ಎಂಥ ಗತಿ ಬಂತು!” ಅಂತ ಗೋಳಾಡಿದ್ರು. 31 ಆ ಶವನ ಸಮಾಧಿ ಮಾಡಿದ ಮೇಲೆ ಅವನು ತನ್ನ ಮಕ್ಕಳಿಗೆ “ನಾನು ತೀರಿ ಹೋದ ಮೇಲೆ ಸತ್ಯದೇವರ ಮನುಷ್ಯನನ್ನ ಸಮಾಧಿ ಮಾಡಿದ ಜಾಗದಲ್ಲೇ ನನ್ನನ್ನೂ ಸಮಾಧಿ ಮಾಡಬೇಕು. ನನ್ನ ಮೂಳೆಗಳನ್ನ ಅವನ ಮೂಳೆಗಳ ಪಕ್ಕದಲ್ಲೇ ಇಡಬೇಕು.+ 32 ಬೆತೆಲಿನ ಯಜ್ಞವೇದಿಯ ವಿರುದ್ಧವಾಗಿ ಮತ್ತು ಸಮಾರ್ಯದ ಪಟ್ಟಣದ ಬೆಟ್ಟಗಳಲ್ಲಿರೋ ದೇವಸ್ಥಾನಗಳ+ ವಿರುದ್ಧವಾಗಿ ಅವನು ಹೇಳಿದ್ದ ಯೆಹೋವನ ಸಂದೇಶ ನಿಜ ಆಗೇ ಆಗುತ್ತೆ”+ ಅಂದ.
33 ಇಷ್ಟೆಲ್ಲ ಆದ್ಮೇಲೂ ಯಾರೊಬ್ಬಾಮ ತನ್ನ ಕೆಟ್ಟ ದಾರಿನ ಬಿಟ್ಟುಬಿಡಲಿಲ್ಲ. ದೇವಸ್ಥಾನಗಳಲ್ಲಿ ಸೇವೆ ಮಾಡೋಕೆ ಸಾಮಾನ್ಯ ಜನ್ರನ್ನ ಪುರೋಹಿತರಾಗಿ ಮಾಡ್ತಾ ಹೋದ.+ ಪುರೋಹಿತ ಆಗಬೇಕು ಅನ್ನೋ ಆಸೆ ಇದ್ದವ್ರನ್ನೆಲ್ಲ ಅವನು ಪುರೋಹಿತನಾಗಿ ಮಾಡಿ “ಇವನಿಗೆ ದೇವಸ್ಥಾನದಲ್ಲಿ ಪುರೋಹಿತ ಆಗಬೇಕಂತೆ, ಆಗ್ಲಿ ಬಿಡಿ”+ ಅಂತ ಹೇಳ್ತಿದ್ದ. 34 ಯಾರೊಬ್ಬಾಮನ ಮನೆತನದವರು ಮಾಡಿದ ಈ ಪಾಪ+ ಅವ್ರ ನಾಶಕ್ಕೆ ಮತ್ತು ಭೂಮಿಯ ಮೇಲಿಂದ ಅವರು ಸಂಪೂರ್ಣವಾಗಿ ನಿರ್ನಾಮ ಆಗೋದಕ್ಕೆ ಕಾರಣ ಆಯ್ತು.+